ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 11

ಯೆಹೋವನ ಆರಾಧನೆಗಾಗಿ ಇರುವ ಸ್ಥಳಗಳು

ಯೆಹೋವನ ಆರಾಧನೆಗಾಗಿ ಇರುವ ಸ್ಥಳಗಳು

ಯೆಹೋವನು ತನ್ನೆಲ್ಲ ಸೇವಕರಿಗೆ ತನ್ನನ್ನು ಆರಾಧಿಸಲು ಕೂಡಿಬರಬೇಕೆಂದು ಆಜ್ಞೆ ಕೊಟ್ಟಿದ್ದಾನೆ. ಹೀಗೆ ಕೂಡಿಬಂದಾಗ ಯೆಹೋವನ ಬೋಧನೆಯನ್ನು ಕೇಳಿಸಿಕೊಳ್ಳಲು ಮತ್ತು ಒಬ್ಬರನ್ನೊಬ್ಬರು ಪ್ರೋತ್ಸಾಹಿಸಲು ನಮಗೆ ಅವಕಾಶ ಸಿಗುತ್ತದೆ. (ಇಬ್ರಿ. 10:23-25) ಇಸ್ರಾಯೇಲ್ಯರು ಆರಾಧನೆಗಾಗಿ ಬಳಸಿದ ಮೊತ್ತಮೊದಲ ಸ್ಥಳ “ದೇವದರ್ಶನದ ಗುಡಾರ.” (ವಿಮೋ. 39:32, 40) ರಾಜ ಸೊಲೊಮೋನನು ದೇವರ ಮಹಿಮೆಗಾಗಿ ಆಲಯವನ್ನು ಕಟ್ಟಿಸಿದ ಬಳಿಕ ಅದು ಆರಾಧನಾ ಸ್ಥಳವಾಯಿತು. (1 ಅರ. 9:3) ಕ್ರಿ.ಪೂ. 607ರಲ್ಲಿ ಆ ದೇವಾಲಯ ನಾಶವಾದ ಮೇಲೆ ಯೆಹೂದ್ಯರು ಸಭಾಮಂದಿರಗಳಲ್ಲಿ ಕೂಡಿಬರಲು ಆರಂಭಿಸಿದರು. ಅನಂತರ ದೇವಾಲಯವನ್ನು ಪುನಃ ಕಟ್ಟಿದಾಗ ಅದು ಮತ್ತೆ ಸತ್ಯಾರಾಧನೆಯ ಕೇಂದ್ರವಾಯಿತು. ಯೇಸು ಭೂಮಿಯಲ್ಲಿದ್ದಾಗ ಸಭಾಮಂದಿರಗಳಲ್ಲಿ, ದೇವಾಲಯದಲ್ಲಿ, ಬೆಟ್ಟದ ಮೇಲೆ ಜನಸಮೂಹ ನೆರೆದು ಬಂದಾಗ ಬೋಧಿಸಿದನು.—ಮತ್ತಾ. 5:1–7:29; ಲೂಕ 4:16; ಯೋಹಾ. 18:20.

2 ಯೇಸುವಿನ ಮರಣದ ನಂತರ ಕ್ರೈಸ್ತರು ಆರಾಧನೆಗಾಗಿ ಸಾರ್ವಜನಿಕ ಕಟ್ಟಡಗಳಲ್ಲಿ, ಜೊತೆವಿಶ್ವಾಸಿಗಳ ಮನೆಗಳಲ್ಲಿ ಕೂಡಿಬರುತ್ತಿದ್ದರು. ಅಲ್ಲಿ ಶಾಸ್ತ್ರಗ್ರಂಥವನ್ನು ಬಳಸಿ ಬೋಧಿಸಲಾಗುತ್ತಿತ್ತು ಹಾಗೂ ಪರಸ್ಪರ ಸಹವಾಸದಲ್ಲಿ ಆನಂದಿಸುತ್ತಿದ್ದರು. (ಅ. ಕಾ. 19:8, 9; ರೋಮ. 16:3, 5; ಕೊಲೊ. 4:15; ಫಿಲೆ. 2) ಕೆಲವೊಮ್ಮೆ ವಿರೋಧಿಗಳ ಕೈಗೆ ಸಿಕ್ಕಿಬೀಳದಿರಲು ಯಾರಿಗೂ ಗೊತ್ತಾಗದ, ಹೆಚ್ಚು ಜನರಿರದ ಸ್ಥಳಗಳಲ್ಲಿ ಕೂಡಿಬರುತ್ತಿದ್ದರು. ನಂಬಿಗಸ್ತ ದೇವಜನರೆಲ್ಲರಿಗೆ ‘ಯೆಹೋವನಿಂದ ಶಿಕ್ಷಣ ಪಡೆಯುವ’ ನಿಜವಾದ ಆಸೆಯಿತ್ತು ಎನ್ನುವುದು ಇದರಿಂದ ಸ್ಪಷ್ಟ.—ಯೆಶಾ. 54:13.

3 ಇಂದು ಸಹ ಕ್ರೈಸ್ತ ಕೂಟಗಳನ್ನು ನಡೆಸಲು ಸಾರ್ವಜನಿಕ ಕಟ್ಟಡಗಳನ್ನು, ಸಹೋದರರ ಮನೆಗಳನ್ನು ಬಳಸಲಾಗುತ್ತದೆ. ಹೆಚ್ಚಾಗಿ ಕ್ಷೇತ್ರ ಸೇವಾ ಕೂಟವನ್ನು ಸಹೋದರರ ಮನೆಗಳಲ್ಲಿ ನಡೆಸಲಾಗುತ್ತದೆ. ತಮ್ಮ ಮನೆಗಳಲ್ಲಿ ಕೂಟಗಳನ್ನು ನಡೆಸಲು ಅನುಮತಿಸಿರುವವರು ಅದನ್ನು ಸೌಭಾಗ್ಯವಾಗಿ ನೆನಸುತ್ತಾರೆ. ಇದರಿಂದ ತಮ್ಮ ನಂಬಿಕೆ ಬಲಗೊಂಡಿದೆಯೆಂದು ಅನೇಕರು ಹೇಳಿದ್ದಾರೆ.

ರಾಜ್ಯ ಸಭಾಗೃಹ

4 ಯೆಹೋವನ ಸಾಕ್ಷಿಗಳು ಆರಾಧನೆಗೋಸ್ಕರ ಬಳಸುವ ಮುಖ್ಯ ಸ್ಥಳ “ರಾಜ್ಯ ಸಭಾಗೃಹ.” ಹೆಚ್ಚಿನ ಕಡೆಗಳಲ್ಲಿ ಜಾಗ ಖರೀದಿಸಿ ಸಭಾಗೃಹವನ್ನು ಕಟ್ಟಲಾಗುತ್ತದೆ. ಇನ್ನೂ ಕೆಲವೆಡೆ ಕಟ್ಟಡವನ್ನೇ ಖರೀದಿಸಿ ನವೀಕರಿಸಲಾಗುತ್ತದೆ. ಖರ್ಚು ಕಡಿಮೆಮಾಡಲು ಮತ್ತು ಇರುವ ಸಭಾಗೃಹವನ್ನೇ ಚೆನ್ನಾಗಿ ಬಳಸಿಕೊಳ್ಳಲು ಅನೇಕ ಸಭೆಗಳು ಕೂಟಗಳಿಗಾಗಿ ಒಂದೇ ಸಭಾಗೃಹವನ್ನು ಬಳಸಬಹುದು. ಕೆಲವು ಸ್ಥಳಗಳಲ್ಲಿ ಒಂದು ಸಭಾಂಗಣವನ್ನು ಬಾಡಿಗೆಗೆ ತೆಗೆದುಕೊಳ್ಳಬೇಕಾಗುತ್ತದೆ. ರಾಜ್ಯ ಸಭಾಗೃಹವನ್ನು ಹೊಸದಾಗಿ ಕಟ್ಟಿದರೆ ಅಥವಾ ಇದ್ದ ಕಟ್ಟಡವನ್ನು ತುಂಬ ನವೀಕರಿಸಿದರೆ ಸಮರ್ಪಣೆಯ ಕಾರ್ಯಕ್ರಮವನ್ನು ಏರ್ಪಡಿಸುವುದು ಯೋಗ್ಯ. ಆದರೆ ಇರುವ ಸಭಾಗೃಹದಲ್ಲೇ ಚಿಕ್ಕಪುಟ್ಟ ಬದಲಾವಣೆ ಮಾಡಿದರೆ ಅದರ ಅಗತ್ಯವಿಲ್ಲ.

5 ರಾಜ್ಯ ಸಭಾಗೃಹವು ಜನರು ನೋಡಿ ಆಶ್ಚರ್ಯಪಡುವಂತೆ ಆಲಂಕಾರಿಕವಾಗಿ ಇರಬಾರದು. ಅದರ ವಿನ್ಯಾಸವು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಆಗಿರಬಹುದು. ಆದರೆ ಉದ್ದೇಶ ಒಂದೇ. ಅದು ಆರಾಧನೆಗಾಗಿ ಕೂಡಿಬರುವುದೇ. (ಅ. ಕಾ. 17:24) ಆಯಾ ಪ್ರದೇಶಕ್ಕೆ ತಕ್ಕಂತೆ ರಾಜ್ಯ ಸಭಾಗೃಹವು ಕ್ರೈಸ್ತ ಕೂಟಗಳನ್ನು ನಡೆಸಲು ಯೋಗ್ಯವಾದ ಸ್ಥಳವಾಗಿರಬೇಕು. ಎಲ್ಲರೂ ಹಾಜರಾಗಲು ಸೂಕ್ತ ಸ್ಥಳದಲ್ಲಿರಬೇಕು, ಎಲ್ಲರೂ ಕೂತು ಆನಂದಿಸುವಂತಿರಬೇಕು.

6 ಸಭಾಗೃಹವನ್ನು ಉಪಯೋಗಿಸಲು, ಸುಸ್ಥಿತಿಯಲ್ಲಿಡಲು ತಗಲುವ ಖರ್ಚುವೆಚ್ಚಗಳಿಗಾಗಿ ಎಲ್ಲ ಸಭೆಗಳ ಸದಸ್ಯರು ಕಾಣಿಕೆಗಳನ್ನು ಕೊಡುತ್ತಾರೆ. ರಾಜ್ಯ ಸಭಾಗೃಹದಲ್ಲಿ ಹಣ ವಸೂಲಿ ಮಾಡುವುದಿಲ್ಲ, ಚಂದಾ ಎತ್ತುವುದಿಲ್ಲ. ಕೂಟಗಳಿಗೆ ಬಂದವರು ಕಾಣಿಕೆಯನ್ನು ಸ್ವಇಷ್ಟದಿಂದ ಕೊಡಲು ಬಯಸುವಲ್ಲಿ ಅಲ್ಲಿಟ್ಟಿರುವ ಕಾಣಿಕೆ ಪೆಟ್ಟಿಗೆಗಳಲ್ಲಿ ಅದನ್ನು ಹಾಕಬಹುದು. ಮನಃಪೂರ್ವಕವಾಗಿ ಕೊಡಬೇಕೇ ಹೊರತು ಬಲವಂತದಿಂದಲ್ಲ.—2 ಕೊರಿಂ. 9:7.

7 ಸಭಾಗೃಹಕ್ಕೆ ಹಣಸಹಾಯ ಮಾಡುವುದು ಮತ್ತು ಅದನ್ನು ಸ್ವಚ್ಛವಾಗಿ, ಸುಸ್ಥಿತಿಯಲ್ಲಿ ಇಡುವುದು ನಮಗಿರುವ ಒಂದು ಸುಯೋಗ. ಒಬ್ಬ ಹಿರಿಯ ಅಥವಾ ಸಹಾಯಕ ಸೇವಕನು ಸ್ವಚ್ಛತೆ ಮತ್ತು ದುರಸ್ತಿಕಾರ್ಯ ಕ್ರಮಬದ್ಧವಾಗಿ ನಡೆಯುವಂತೆ ಸರಿಯಾದ ಯೋಜನೆ ಮಾಡುತ್ತಾನೆ. ಸಾಮಾನ್ಯವಾಗಿ ಸ್ವಚ್ಛಮಾಡುವ ಕೆಲಸವನ್ನು ಒಂದೊಂದು ಕ್ಷೇತ್ರ ಸೇವಾ ಗುಂಪಿಗೆ ವಹಿಸಲಾಗುತ್ತದೆ. ಗುಂಪು ಮೇಲ್ವಿಚಾರಕ ಅಥವಾ ಅವನ ಸಹಾಯಕನು ಇದರ ಮುಂದಾಳತ್ವ ವಹಿಸುತ್ತಾನೆ. ರಾಜ್ಯ ಸಭಾಗೃಹದ ಒಳಗೂ ಹೊರಗೂ ಎಷ್ಟು ಸ್ವಚ್ಛವಾಗಿರಬೇಕೆಂದರೆ ಯೆಹೋವನು ಎಂಥ ದೇವರು, ಆತನ ಸಂಘಟನೆ ಎಂಥದ್ದು ಎಂದು ತೋರಿಸುವಂತಿರಬೇಕು.

ರಾಜ್ಯ ಸಭಾಗೃಹಕ್ಕೆ ಹಣಸಹಾಯ ಮಾಡುವುದು ಮತ್ತು ಅದನ್ನು ಸ್ವಚ್ಛವಾಗಿ, ಸುಸ್ಥಿತಿಯಲ್ಲಿ ಇಡುವುದು ನಮಗಿರುವ ಒಂದು ಸುಯೋಗ

8 ಒಂದೇ ರಾಜ್ಯ ಸಭಾಗೃಹವನ್ನು ಅನೇಕ ಸಭೆಗಳು ಉಪಯೋಗಿಸುತ್ತಿರುವಲ್ಲಿ ಆ ಎಲ್ಲ ಸಭೆಗಳ ಹಿರಿಯರು ಒಟ್ಟಾಗಿ ಒಂದು ಸಮಿತಿಯನ್ನು ರಚಿಸಬೇಕು. ಅದರ ಹೆಸರು, ‘ರಾಜ್ಯ ಸಭಾಗೃಹ ನಿರ್ವಹಣಾ ಸಮಿತಿ’ (ಕಿಂಗ್‌ಡಮ್‌ ಹಾಲ್‌ ಆಪರೇಟಿಂಗ್‌ ಕಮಿಟಿ). ಆ ಹಿರಿಯರೆಲ್ಲರೂ ತಮ್ಮಲ್ಲಿ ಒಬ್ಬನನ್ನು ಸಮಿತಿಯ ಅಧ್ಯಕ್ಷನಾಗಿ ನೇಮಿಸಬೇಕು. ಈ ಸಮಿತಿಯು ಎಲ್ಲ ಹಿರಿಯರ ಮಂಡಲಿಗಳ ನಿರ್ದೇಶನಕ್ಕನುಸಾರ ಕೆಲಸಮಾಡುತ್ತದೆ. ಇದರ ಕೆಲಸಗಳೇನು? ಸಭಾಗೃಹ ಕಟ್ಟಡಕ್ಕೆ ಮತ್ತು ಇಡೀ ಆಸ್ತಿಗೆ ಸಂಬಂಧಿಸಿದ ಕೆಲಸಗಳನ್ನೆಲ್ಲ ನೋಡಿಕೊಳ್ಳುವುದು, ಸಭಾಗೃಹ ಯಾವಾಗಲೂ ಸ್ವಚ್ಛವಾಗಿ ಸುಸ್ಥಿತಿಯಲ್ಲಿ ಇರುವಂತೆ ನೋಡಿಕೊಳ್ಳುವುದು, ಸ್ವಚ್ಛಗೊಳಿಸಲು ಬೇಕಾದ ವಸ್ತುಗಳನ್ನು ಲಭ್ಯಗೊಳಿಸುವುದು ಇತ್ಯಾದಿ. ಈ ಕೆಲಸಗಳು ಸರಿಯಾಗಿ ನಡೆಯಲು ಸಭಾಗೃಹವನ್ನು ಉಪಯೋಗಿಸುವ ಎಲ್ಲ ಸಭೆಗಳವರು ಸಹಕಾರ ಕೊಡಬೇಕು.

9 ಸಭಾಗೃಹವನ್ನು ಉಪಯೋಗಿಸುವ ಸಭೆಗಳು ಕೂಟಗಳ ಸಮಯವನ್ನು ಅವಶ್ಯವಿದ್ದರೆ ಸರದಿ ಪ್ರಕಾರ ಬದಲಾಯಿಸಬಹುದು. ಇದಕ್ಕೆ ಸಂಬಂಧಿಸಿದ ಶೆಡ್ಯೂಲನ್ನು ಎಲ್ಲ ಸಭೆಗಳ ಹಿರಿಯರು ಸೇರಿ ಮಾಡಬೇಕು. ಹೀಗೆ ಮಾಡುವಾಗ ಒಬ್ಬರಿಗೊಬ್ಬರು ಪರಿಗಣನೆ, ಸಹೋದರ ಪ್ರೀತಿ ತೋರಿಸಬೇಕು. (ಫಿಲಿ. 2:2-4; 1 ಪೇತ್ರ 3:8) ಕಾನೂನಿಗೆ ಸಂಬಂಧಿಸಿದ ಎಲ್ಲ ಕಾಗದಪತ್ರಗಳು ಒಂದು ಸಭೆಯ ಹೆಸರಿನಲ್ಲಿದ್ದರೂ ಆ ಸಭೆಯು ಇತರ ಸಭೆಗಳ ಪರವಾಗಿ ನಿರ್ಣಯ ಮಾಡಬಾರದು. ಒಂದು ಸಭೆಗೆ ಸಂಚರಣ ಮೇಲ್ವಿಚಾರಕರ ಭೇಟಿ ಇರುವಾಗ ಬೇರೆ ಸಭೆಗಳು ಆ ವಾರದ ಕೂಟಗಳ ಸಮಯದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಳ್ಳಬೇಕು.

10 ಮದುವೆಯ ಭಾಷಣಕ್ಕಾಗಿ ಅಥವಾ ಶವಸಂಸ್ಕಾರದ ಭಾಷಣಕ್ಕಾಗಿ ಸಭಾಗೃಹವನ್ನು ಬಳಸಬೇಕಾದರೆ ಸಭೆಯ ಸೇವಾ ಸಮಿತಿಗೆ ವಿನಂತಿ ಸಲ್ಲಿಸಬೇಕು. ಆ ಸಮಿತಿಯಲ್ಲಿರುವ ಹಿರಿಯರು ಏನೆಲ್ಲ ವಿನಂತಿಸಲಾಗಿದೆ ಎಂದು ಜಾಗ್ರತೆಯಿಂದ ಪರಿಗಣಿಸಿ ಶಾಖೆಯ ನಿರ್ದೇಶನಕ್ಕನುಸಾರ ನಿರ್ಣಯ ತಕ್ಕೊಳ್ಳುವರು.

11 ಸಭಾಗೃಹವನ್ನು ಬಳಸಲು ಅನುಮತಿ ಪಡೆದವರು ನಿಜ ಕ್ರೈಸ್ತರಿಗೆ ಯೋಗ್ಯವಾದ ರೀತಿಯಲ್ಲಿ ವರ್ತಿಸಬೇಕು. ಇತರರನ್ನು ಎಡವಿಸುವ ಅಥವಾ ಯೆಹೋವನ ಹೆಸರಿಗೂ ಸಭೆಯ ಹೆಸರಿಗೂ ಮಸಿಬಳಿಯುವ ಏನನ್ನೂ ಸಭಾಗೃಹದಲ್ಲಿ ಮಾಡಬಾರದು. (ಫಿಲಿ. 2:14, 15) ಶಾಖೆಯ ನಿರ್ದೇಶನದ ಪ್ರಕಾರ ಸಭಾಗೃಹವನ್ನು ‘ನೇಮಿತ ಸಹೋದರರಿಗಾಗಿ ಶಾಲೆ,’ ‘ಪಯನೀಯರ್‌ ಸೇವಾ ಶಾಲೆ’ ಹಾಗೂ ಇತರ ಆಧ್ಯಾತ್ಮಿಕ ಕಾರ್ಯಕ್ರಮಗಳಿಗೂ ಬಳಸಬಹುದು.

12 ಎಲ್ಲರೂ ಕೂಟದ ಸ್ಥಳವನ್ನು ಗೌರವದಿಂದ ಕಾಣಬೇಕು. ನಮ್ಮ ಬಟ್ಟೆ, ಅಲಂಕಾರ, ನಡತೆಯು ಯೆಹೋವನ ಆರಾಧನೆ ಎಷ್ಟು ಘನಮಾನವುಳ್ಳದ್ದು ಎಂದು ತೋರಿಸಬೇಕು. (ಪ್ರಸಂ. 5:1; 1 ತಿಮೊ. 2:9, 10) ಈ ಬಗ್ಗೆ ಬೈಬಲಿನ ಬುದ್ಧಿವಾದವನ್ನು ನಾವು ಪಾಲಿಸುವ ಮೂಲಕ ಕೂಟಗಳಿಗಾಗಿ ಯೆಹೋವನಿಗೆ ಕೃತಜ್ಞತೆ ಸಲ್ಲಿಸುತ್ತೇವೆ.

13 ಕೂಟಗಳು ನಡೆಯುವಾಗ ಮಕ್ಕಳು ಶಿಸ್ತಿನಿಂದ ಇರಬೇಕು. ಅವರು ಹೆತ್ತವರೊಂದಿಗೇ ಕೂತುಕೊಳ್ಳುವುದು ಒಳ್ಳೇದು. ಮಕ್ಕಳು ತುಂಬ ಚಿಕ್ಕವರಾಗಿದ್ದರೆ ಅವರನ್ನು ಹೊರಗೆ ಕರೆದುಕೊಂಡು ಹೋಗಲು ಸುಲಭವಾಗುವ ಸ್ಥಳದಲ್ಲಿ ಹೆತ್ತವರು ಕೂತುಕೊಳ್ಳಬಹುದು. ಇದರಿಂದ ಬೇರೆಯವರಿಗೆ ಅಡಚಣೆಯಾಗದಂತೆ ನೋಡಿಕೊಳ್ಳಬಹುದು. ಮಾತ್ರವಲ್ಲ ಮಕ್ಕಳನ್ನು ಶಿಸ್ತುಗೊಳಿಸಲು ಮತ್ತು ಅವರ ಅಗತ್ಯಗಳನ್ನು ನೋಡಿಕೊಳ್ಳಲು ಸುಲಭವಾಗುತ್ತದೆ.

14 ಕೂಟಗಳ ಸಂದರ್ಭದಲ್ಲಿ ಸಹಾಯಕರಾಗಿ (ಅಟೆಂಡೆಂಟ್‌) ಸೇವೆಸಲ್ಲಿಸಲು ಅರ್ಹ ಸಹೋದರರನ್ನು ನೇಮಿಸಲಾಗುತ್ತದೆ. ಅವರು ಯಾವಾಗಲೂ ಚುರುಕಾಗಿರಬೇಕು, ಸ್ನೇಹಪರರಾಗಿ ಮಾತಾಡಬೇಕು, ವಿವೇಚನೆಯಿಂದ ನಡೆದುಕೊಳ್ಳಬೇಕು. ಇವರ ಜವಾಬ್ದಾರಿಗಳೇನು? ಹೊಸಬರನ್ನು ವಂದಿಸಿ ಸ್ವಾಗತಿಸುವುದು, ತಡವಾಗಿ ಬಂದವರಿಗೆ ಆಸನಗಳನ್ನು ತೋರಿಸುವುದು, ಹಾಜರಿ ತೆಗೆದುಕೊಳ್ಳುವುದು, ರಾಜ್ಯ ಸಭಾಗೃಹದಲ್ಲಿ ಸಾಕಷ್ಟು ಬೆಳಕು ಗಾಳಿ ಇರುವಂತೆ ನೋಡಿಕೊಳ್ಳುವುದು. ಕೂಟಕ್ಕೆ ಮುಂಚೆ ಅಥವಾ ನಂತರ ಮಕ್ಕಳು ತುಂಬ ಓಡಾಡುತ್ತಿದ್ದರೆ, ವೇದಿಕೆಯ ಮೇಲೆ ಆಟ ಆಡುತ್ತಿದ್ದರೆ ಅವರ ನಿಗಾ ವಹಿಸುವಂತೆ ಹೆತ್ತವರಿಗೆ ನೆನಪಿಸುವುದು. ಕೂಟ ನಡೆಯುವಾಗ ಮಕ್ಕಳ ಗಲಾಟೆಯಿಂದ ಸಭಿಕರಿಗೆ ಅಡಚಣೆಯಾಗುತ್ತಿದ್ದರೆ ಮಗುವನ್ನು ಸ್ವಲ್ಪ ಹೊರಗೆ ಕರೆದುಕೊಂಡು ಹೋಗುವಂತೆ ಹೆತ್ತವರಿಗೆ ಮೃದುವಾಗಿ ಹೇಳುವುದು. ಪ್ರತಿಯೊಬ್ಬರೂ ಕೂಟಗಳನ್ನು ಆನಂದಿಸಬೇಕಾದರೆ ಈ ಸಹಾಯಕರ ನೆರವು ತುಂಬ ಅಗತ್ಯ. ಇದನ್ನು ಸಹಾಯಕ ಸೇವಕರು ಮಾಡಿದರೆ ಉತ್ತಮ. ಅದರಲ್ಲೂ ಕುಟುಂಬಗಳ ಕಡೆಗೆ ಕಾಳಜಿಯಿರುವ ಸಹೋದರರಿದ್ದರೆ ಇನ್ನೂ ಒಳ್ಳೇದು.—1 ತಿಮೊ. 3:12.

ರಾಜ್ಯ ಸಭಾಗೃಹದ ನಿರ್ಮಾಣ

15 ಒಂದನೇ ಶತಮಾನದ ಕ್ರೈಸ್ತರಲ್ಲಿ ಕೆಲವರು ಶ್ರೀಮಂತರಿದ್ದರು. ಆದ್ದರಿಂದ ಪೌಲ ಹೀಗಂದನು: “ಸಮಾನತೆಯ ಮೂಲಕ ಸದ್ಯಕ್ಕೆ ನಿಮ್ಮ ಸಮೃದ್ಧಿಯು ಅವರ ಕೊರತೆಯನ್ನು ನೀಗಿಸಬಹುದು, ಮುಂದೆ ಅವರ ಸಮೃದ್ಧಿಯು ನಿಮ್ಮ ಕೊರತೆಯನ್ನು ನೀಗಿಸಲು ಸಹಾಯವಾಗಬಹುದು; ಆಗ ಸಮಾನತೆಯು ಉಂಟಾಗುವುದು.” (2 ಕೊರಿಂ. 8:14) ಈ “ಸಮಾನತೆಯ” ತತ್ವವನ್ನು ಇಂದು ಸಹ ಅನ್ವಯಿಸಲಾಗುತ್ತಿದೆ. ಲೋಕವ್ಯಾಪಕ ಸಭೆಗಳು ಕೊಡುವ ಕಾಣಿಕೆಗಳನ್ನು ಸಂಗ್ರಹಿಸಿ ಸಭಾಗೃಹದ ನಿರ್ಮಾಣ ಮತ್ತು ನವೀಕರಣದ ಅಗತ್ಯವಿರುವ ಸಭೆಗಳಿಗೆ ಸಹಾಯಮಾಡಲಾಗುತ್ತದೆ. ಈ ಕಾಣಿಕೆಯನ್ನು ಸಂಘಟನೆ ಮತ್ತು ಅದರಿಂದ ಪ್ರಯೋಜನ ಪಡೆಯುವ ಸಭೆಗಳು ಅಮೂಲ್ಯವಾಗಿ ಕಾಣುತ್ತವೆ.

16 ಸಭೆಯ ಭಾಷೆಯನ್ನಾಡುವ ಜನರು ಹೆಚ್ಚಾಗಿ ಎಲ್ಲಿದ್ದಾರೆ, ಎಲ್ಲಿ ಪ್ರಗತಿಯಾಗುವ ಸಾಧ್ಯತೆಯಿದೆ ಇತ್ಯಾದಿ ವಿಷಯವನ್ನು ಪರಿಗಣಿಸಿ ಶಾಖೆಯು ಸಭೆಗಳಿಗೆ ಯಾವ ಸಭಾಗೃಹಕ್ಕೆ ಹೋಗಬೇಕೆಂದು ಹೇಳುತ್ತದೆ. ಶಾಖೆಯ ವ್ಯಾಪ್ತಿಯಲ್ಲಿ ಎಲ್ಲಿ, ಯಾವಾಗ ಸಭಾಗೃಹ ಕಟ್ಟಬೇಕು, ಯಾವ ಸಭಾಗೃಹವನ್ನು ನವೀಕರಿಸಬೇಕೆಂದು ಸಹ ಶಾಖೆ ನಿರ್ಧರಿಸುತ್ತದೆ. ವಿಪತ್ತು ಸಂಭವಿಸಿದಾಗ ಹಾನಿಗೊಳಗಾದ ಸಭಾಗೃಹಗಳನ್ನು, ಕೆಲವೊಮ್ಮೆ ಸಹೋದರರ ಮನೆಗಳನ್ನು ರಿಪೇರಿಮಾಡಲು ಶಾಖೆ ಏರ್ಪಾಡು ಮಾಡುತ್ತದೆ.

17 ರಾಜ್ಯ ಸಭಾಗೃಹಕ್ಕಾಗಿ ಸ್ಥಳ ಖರೀದಿಸಲು, ವಿನ್ಯಾಸದ ನಕ್ಷೆ ತಯಾರಿಸಲು, ನಿರ್ಮಾಣ ಕೆಲಸಕ್ಕೆ ಸರ್ಕಾರದ ಅನುಮತಿ ಪಡೆಯಲು, ಕಟ್ಟಡ ಕಟ್ಟಲು ಮತ್ತು ಅದನ್ನು ಸುಸ್ಥಿತಿಯಲ್ಲಿಡಲು ಶಾಖೆಯು ಸ್ವಯಂಸೇವಕರನ್ನು ನೇಮಿಸುತ್ತದೆ. ಅನೇಕ ದೇಶಗಳಲ್ಲಿ ಹೆಚ್ಚು ರಾಜ್ಯ ಸಭಾಗೃಹಗಳು ಬೇಕಿರುವುದರಿಂದ ಅನೇಕ ಸ್ವಯಂಸೇವಕರ ಅಗತ್ಯವಿದೆ. ದೀಕ್ಷಾಸ್ನಾನ ಪಡೆದ ಅರ್ಹ ಪ್ರಚಾರಕರಲ್ಲಿ ಈ ಕೆಲಸಕ್ಕೆ ಸಹಾಯಮಾಡಲು ಬಯಸುವವರು ಇದಕ್ಕಾಗಿರುವ ಅರ್ಜಿಯನ್ನು ಭರ್ತಿಮಾಡಿ ತಮ್ಮ ಸಭೆಯ ಸೇವಾ ಸಮಿತಿಗೆ ಕೊಡಬೇಕು. ದೀಕ್ಷಾಸ್ನಾನವಾಗಿರದ ಪ್ರಚಾರಕರು ಸಹ ತಮ್ಮ ರಾಜ್ಯ ಸಭಾಗೃಹವನ್ನು ಕಟ್ಟಲು ಅಥವಾ ನವೀಕರಿಸಲು ಸಹಾಯಮಾಡಬಹುದು.

ಸಮ್ಮೇಳನ ಸಭಾಂಗಣಗಳು

18 ಆರಂಭದ ಕ್ರೈಸ್ತರು ಸಾಮಾನ್ಯವಾಗಿ ಚಿಕ್ಕ ಗುಂಪುಗಳಾಗಿ ಸೇರಿಬರುತ್ತಿದ್ದರು. ಕೆಲವೊಮ್ಮೆ ‘ದೊಡ್ಡ ಗುಂಪಾಗಿಯೂ’ ಕೂಡಿಬರುತ್ತಿದ್ದರು. (ಅ. ಕಾ. 11:26) ಅದೇ ರೀತಿ ಇಂದು ನಾವು ಸಮ್ಮೇಳನ, ಅಧಿವೇಶನಗಳಿಗೆ ದೊಡ್ಡ ಗುಂಪಾಗಿ ಕೂಡಿಬರುತ್ತೇವೆ. ಇದಕ್ಕಾಗಿ ಸಭಾಂಗಣಗಳನ್ನು ಬಾಡಿಗೆಗೆ ತಕ್ಕೊಳ್ಳಲಾಗುತ್ತದೆ. ಆದರೆ ಕೆಲವು ಪ್ರದೇಶಗಳಲ್ಲಿ ಸಭಾಂಗಣಗಳು ಇರುವುದಿಲ್ಲ, ಇದ್ದರೂ ನಮಗೆ ಸೂಕ್ತವಾಗಿರುವುದಿಲ್ಲ. ಅಂಥ ಸಂದರ್ಭದಲ್ಲಿ ಸ್ವಂತ ಸಭಾಂಗಣ ಕಟ್ಟಬೇಕಾಗಬಹುದು.

19 ಕೆಲವು ಕಡೆಗಳಲ್ಲಿ ಕಟ್ಟಡವನ್ನು ಖರೀದಿಸಿ ಅದನ್ನು ನವೀಕರಿಸಿ ಸಮ್ಮೇಳನ ಸಭಾಂಗಣವಾಗಿ ಉಪಯೋಗಿಸಲಾಗುತ್ತದೆ. ಆದರೆ ಹೆಚ್ಚಾಗಿ ಸ್ಥಳ ಖರೀದಿಸಿ ಹೊಸ ಸಭಾಂಗಣವನ್ನು ಕಟ್ಟಲಾಗುತ್ತದೆ. ಸಮ್ಮೇಳನಕ್ಕೆ ಎಷ್ಟು ಜನರು ಹಾಜರಾಗುತ್ತಾರೆ ಎನ್ನುವುದನ್ನು ಆಧರಿಸಿ ಸಭಾಂಗಣ ಎಷ್ಟು ದೊಡ್ಡದಿರಬೇಕೆಂದು ನಿರ್ಧರಿಸಲಾಗುತ್ತದೆ. ಸಭಾಂಗಣ ಕಟ್ಟಲು ಅಥವಾ ಖರೀದಿಸಲು ಎಷ್ಟು ಹಣ ಬೇಕಾಗುತ್ತದೆ, ಆ ಸಭಾಂಗಣದ ಆವಶ್ಯಕತೆ ಎಷ್ಟಿದೆ ಎನ್ನುವುದನ್ನು ಶಾಖೆ ಜಾಗ್ರತೆಯಿಂದ ಪರಿಗಣಿಸಿದ ಬಳಿಕವೇ ಕೆಲಸಕ್ಕೆ ಕೈಹಾಕುತ್ತದೆ.

20 ಕೆಲವು ಸಮ್ಮೇಳನ ಸಭಾಂಗಣಗಳು ದೊಡ್ಡದಿರುವುದರಿಂದ ಅವುಗಳನ್ನು ನೋಡಿಕೊಳ್ಳಲು, ಸುಸ್ಥಿತಿಯಲ್ಲಿಡಲು ಶಾಖೆಯು ಕೆಲವು ಪೂರ್ಣ ಸಮಯದ ಸೇವಕರನ್ನು ನೇಮಿಸುತ್ತದೆ. ಪ್ರತಿ ಸಮ್ಮೇಳನದ ನಂತರ ಸ್ವಚ್ಛಮಾಡುವ ಮತ್ತು ವರ್ಷಕ್ಕೆ ಎರಡು ಬಾರಿ ಪೂರ್ತಿ ಸ್ವಚ್ಛಮಾಡುವ ಹಾಗೂ ಎಲ್ಲವೂ ಸರಿಯಾಗಿ ಕೆಲಸಮಾಡುತ್ತಿದೆಯಾ ಎಂದು ಕ್ರಮವಾಗಿ ಪರೀಕ್ಷಿಸುವ ಕೆಲಸವನ್ನು ಸಂಚರಣ ವಿಭಾಗದಲ್ಲಿರುವ ಸಭೆಗಳಿಗೆ ವಹಿಸಲಾಗುತ್ತದೆ. ಸಹೋದರರು ತಾವೇ ಮುಂದೆಬಂದು ಕೆಲಸ ಮಾಡುವುದರಿಂದ ಇದನ್ನೆಲ್ಲ ಚೆನ್ನಾಗಿ ಮಾಡಿಮುಗಿಸಲು ಆಗುತ್ತದೆ. ಹಾಗಾಗಿ ಸಭೆಗಳು ಮನಃಪೂರ್ವಕ ಬೆಂಬಲ ಕೊಡಬೇಕು.—ಕೀರ್ತ. 110:3; ಮಲಾ. 1:10.

21 ಸಮ್ಮೇಳನ ಸಭಾಂಗಣಗಳನ್ನು ಬೈಬಲ್‌ ಶಾಲೆಗಳು, ಸಂಚರಣ ಮೇಲ್ವಿಚಾರಕರಿಗಾಗಿರುವ ಕೂಟಗಳು ಇತ್ಯಾದಿ ವಿಶೇಷ ಕಾರ್ಯಕ್ರಮಗಳಿಗೂ ಉಪಯೋಗಿಸಬಹುದು. ರಾಜ್ಯ ಸಭಾಗೃಹದಂತೆ ಸಮ್ಮೇಳನ ಸಭಾಂಗಣ ಕೂಡ ಆರಾಧನೆಗೆ ಸಮರ್ಪಿತವಾದ ಸ್ಥಳ. ಆದುದರಿಂದ ರಾಜ್ಯ ಸಭಾಗೃಹದಲ್ಲಿ ಹೇಗೋ ಹಾಗೇ ಇಲ್ಲಿ ಕೂಡ ನಮ್ಮ ನಡತೆ, ಬಟ್ಟೆ, ಅಲಂಕಾರ ಎಲ್ಲವೂ ಗೌರವಯುತವಾಗಿರಬೇಕು.

22 ಈ ಕಡೇ ದಿವಸಗಳ ಕೊನೆ ಹಂತದಲ್ಲಿ ಅನೇಕ ಹೊಸಬರು ದೇವರ ಸಂಘಟನೆಗೆ ಓಡೋಡಿ ಬರುತ್ತಿದ್ದಾರೆ. ಇದು ಈ ಸಂಘಟನೆಯ ಮೇಲೆ ಯೆಹೋವನ ಆಶೀರ್ವಾದವಿದೆ ಎಂಬುದಕ್ಕೆ ಸಾಕ್ಷಿ. (ಯೆಶಾ. 60:8, 10, 11, 22) ಯೆಹೋವನ ದಿನ ಹತ್ತಿರವಾಗುತ್ತಿರುವ ಈ ಸಮಯದಲ್ಲಿ ನಾವು ಒಬ್ಬರನ್ನೊಬ್ಬರು ಪ್ರೋತ್ಸಾಹಿಸಲು ಆಗುವುದು ಆರಾಧನಾ ಸ್ಥಳಗಳಲ್ಲಿ ಮಾತ್ರ. ಹಾಗಾಗಿ ಈ ಸ್ಥಳಗಳನ್ನು ಕಟ್ಟುವ, ಸ್ವಚ್ಛವಾಗಿಡುವ ಕೆಲಸಗಳನ್ನು ನಾವು ಬೆಂಬಲಿಸಬೇಕು. ಈ ಮೂಲಕ ನಾವು ಕೂಟಗಳನ್ನು ಏರ್ಪಾಡಿಸಿದ್ದಕ್ಕಾಗಿ ಯೆಹೋವನಿಗೆ ಕೃತಜ್ಞತೆ ಸಲ್ಲಿಸುತ್ತೇವೆ.