ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 17

ಯೆಹೋವನ ಸಂಘಟನೆಯನ್ನು ಎಂದಿಗೂ ಬಿಟ್ಟುಹೋಗಬೇಡಿ

ಯೆಹೋವನ ಸಂಘಟನೆಯನ್ನು ಎಂದಿಗೂ ಬಿಟ್ಟುಹೋಗಬೇಡಿ

“ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.” (ಯಾಕೋ. 4:8) ನಿಜ, ಯೆಹೋವನು ಮಹೋನ್ನತನಾಗಿದ್ದರೂ ನಮಗೆ ಹತ್ತಿರವಾಗಿಯೇ ಇದ್ದಾನೆ, ನಾವು ಅಪರಿಪೂರ್ಣರಾಗಿದ್ದರೂ ನಮ್ಮ ಮೊರೆಯನ್ನು ಕೇಳುತ್ತಾನೆ. (ಅ. ಕಾ. 17:27) ನಾವು ಆತನ ಸಮೀಪಕ್ಕೆ ಹೋಗುವುದೆಂದರೆ ಆತನೊಂದಿಗೆ ವೈಯಕ್ತಿಕವಾಗಿ ಆಪ್ತ ಸಂಬಂಧ ಬೆಳೆಸಿಕೊಳ್ಳುವುದು. ಇದಕ್ಕಾಗಿ ಶ್ರದ್ಧೆಯಿಂದ ಪ್ರಾರ್ಥಿಸಬೇಕು. (ಕೀರ್ತ. 39:12) ಬೈಬಲನ್ನು ಕ್ರಮವಾಗಿ ಅಧ್ಯಯನ ಮಾಡಬೇಕು. ಆಗಲೇ ನಾವು ಆತನ ಬಗ್ಗೆ, ಆತನ ಉದ್ದೇಶಗಳ ಬಗ್ಗೆ ಮತ್ತು ಆತನ ಇಷ್ಟದಂತೆ ಆರಾಧನೆಯನ್ನೂ ಸೇವೆಯನ್ನೂ ಮಾಡುವುದರ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳುತ್ತೇವೆ. (2 ತಿಮೊ. 3:16, 17) ಈ ಮೂಲಕ ನಾವು ಆತನನ್ನು ಪ್ರೀತಿಸಲು ಕಲಿಯುತ್ತೇವೆ ಮತ್ತು ಆತನ ಮನಸ್ಸನ್ನು ನೋಯಿಸುವ ಯಾವುದನ್ನೂ ಮಾಡುವುದಿಲ್ಲ.—ಕೀರ್ತ. 25:14.

2 ಯೇಸುವಿನ ಮೂಲಕ ಮಾತ್ರ ನಾವು ಯೆಹೋವನಿಗೆ ಆಪ್ತರಾಗಲು ಸಾಧ್ಯ. (ಯೋಹಾ. 17:3; ರೋಮ. 5:10) ಯೇಸುವಷ್ಟು ಚೆನ್ನಾಗಿ ಬೇರೆ ಯಾರೂ ಯೆಹೋವನ ಕುರಿತು ತಿಳಿಸಲು ಸಾಧ್ಯವಿಲ್ಲ. ಏಕೆಂದರೆ ಯೇಸು ತನ್ನ ತಂದೆಯಾದ ಯೆಹೋವನೊಂದಿಗೆ ಹೆಚ್ಚು ಆಪ್ತನಾಗಿದ್ದನು. ಆತನ ಬಗ್ಗೆ ಸಂಪೂರ್ಣವಾಗಿ ತಿಳಿದಿದ್ದನು. ಹಾಗಾಗಿ ಅವನು ಹೇಳಿದ್ದು: ‘ಮಗನು ಯಾರೆಂಬುದು ತಂದೆಯ ಹೊರತು ಯಾರಿಗೂ ತಿಳಿದಿಲ್ಲ; ತಂದೆಯು ಯಾರೆಂಬುದು ಮಗನ ಹೊರತು ಬೇರೆ ಯಾರಿಗೂ ತಿಳಿದಿಲ್ಲ. ಮಗನು ಯಾರಿಗೆ ತಂದೆಯನ್ನು ತಿಳಿಯಪಡಿಸಲು ಇಷ್ಟಪಡುತ್ತಾನೊ ಅವನು ತಂದೆಯನ್ನು ತಿಳಿದಿರುತ್ತಾನೆ.’ (ಲೂಕ 10:22) ಹಾಗಾಗಿ ನಾವು ಸುವಾರ್ತಾ ಪುಸ್ತಕಗಳನ್ನು ಓದಿ ಅಧ್ಯಯನ ಮಾಡಿ ಯೇಸು ಯೋಚಿಸುವ ರೀತಿ, ಅವನ ಭಾವನೆಗಳ ಬಗ್ಗೆ ತಿಳಿದುಕೊಂಡರೆ ಯೆಹೋವನು ಯೋಚಿಸುವ ರೀತಿ ಮತ್ತು ಭಾವನೆಗಳ ಬಗ್ಗೆ ತಿಳಿದುಕೊಂಡಂತೆ. ಆಗ ಯೆಹೋವನಿಗೆ ಇನ್ನಷ್ಟು ಆಪ್ತರಾಗುತ್ತೇವೆ.

3 ಇಂದು ನಮ್ಮನ್ನು ಮಾರ್ಗದರ್ಶಿಸಲು ಮತ್ತು ನಾವು ಯೆಹೋವನೊಂದಿಗೆ ಆಪ್ತ ಸಂಬಂಧವನ್ನು ಬೆಳೆಸಿಕೊಳ್ಳುವಂತೆ ನೆರವಾಗಲು ಯೇಸು ‘ನಂಬಿಗಸ್ತನೂ ವಿವೇಚನೆಯುಳ್ಳವನೂ ಆದಂಥ ಆಳನ್ನು’ ಬಳಸುತ್ತಿದ್ದಾನೆ. (ಮತ್ತಾ. 24:45-47) ಇವರು ಬೈಬಲ್‌ ಆಧರಿತ ಸಾಹಿತ್ಯದ ಮೂಲಕ, ಸಮ್ಮೇಳನ-ಅಧಿವೇಶನಗಳ ಮೂಲಕ ನಮಗೆ ಬೇಕಾದ ಆಧ್ಯಾತ್ಮಿಕ ಆಹಾರವನ್ನು ತಕ್ಕ ಸಮಯಕ್ಕೆ ಸಮೃದ್ಧವಾಗಿ ಕೊಡುತ್ತಿದ್ದಾರೆ. ಯೆಹೋವನ ಇಷ್ಟದಂತೆ ನಡೆಯುವುದು ಹೇಗೆಂದು ಕಲಿಸುತ್ತಿದ್ದಾರೆ. ಈ ನಂಬಿಗಸ್ತ ಆಳು ನಮಗೆ ಬೈಬಲನ್ನು ದಿನಾಲೂ ಓದುವಂತೆ, ಕ್ರೈಸ್ತ ಕೂಟಗಳಿಗೆ ತಪ್ಪದೆ ಹಾಜರಾಗುವಂತೆ, ಸೇವೆಯನ್ನು ಹೆಚ್ಚು ಮಾಡುವಂತೆ ಮತ್ತು ಉತ್ತಮವಾಗಿ ಮಾಡುವಂತೆ ಪ್ರೋತ್ಸಾಹಿಸುತ್ತಿದೆ. (ಮತ್ತಾ. 24:14; 28:19, 20; ಯೆಹೋ. 1:8; ಕೀರ್ತ. 1:1-3) ಈ ಆಳನ್ನು ಯೆಹೋವನೇ ಯೇಸುವಿನ ಮೂಲಕ ಬಳಸುತ್ತಿದ್ದಾನೆಂದು ನಾವು ಮನಸ್ಸಿನಲ್ಲಿಡಬೇಕು ಮತ್ತು ಈ ಆಳನ್ನು ಗೌರವದಿಂದ ಕಾಣಬೇಕು. ಹೀಗೆ ಯೆಹೋವನ ಸಂಘಟನೆಯ ಭೂಭಾಗಕ್ಕೆ ಅಂಟಿಕೊಂಡು ಅದರ ಮಾರ್ಗದರ್ಶನಕ್ಕೆ ವಿಧೇಯರಾಗುವಾಗ ನಾವು ಯೆಹೋವನಿಗೆ ಇನ್ನಷ್ಟು ಆಪ್ತರಾಗುತ್ತೇವೆ. ಅಲ್ಲದೆ ಸಂಕಷ್ಟಗಳ ಮಧ್ಯೆಯೂ ನಂಬಿಕೆಯಲ್ಲಿ ಧೃಢರಾಗಿ ಉಳಿಯುತ್ತೇವೆ.

ದೇವಜನರಿಗೆ ಹೆಚ್ಚು ಕಷ್ಟಗಳು ಯಾಕೆ ಬರುತ್ತಿವೆ?

4 ನೀವು ಸತ್ಯಕ್ಕೆ ಬಂದು ತುಂಬ ವರ್ಷ ಆಗಿರುವಲ್ಲಿ ಅನೇಕ ಕಷ್ಟಪರೀಕ್ಷೆಗಳನ್ನು ತಾಳಿಕೊಂಡಿರಬಹುದು. ಸತ್ಯಕ್ಕೆ ಬಂದು ಸ್ವಲ್ಪ ಸಮಯವಾಗಿದ್ದರೂ, ಯೆಹೋವನೇ ವಿಶ್ವದ ರಾಜ ಎಂದು ಒಪ್ಪಿಕೊಳ್ಳುವವರಿಗೆ ಸೈತಾನನು ಖಂಡಿತ ವಿರೋಧ ತರುತ್ತಾನೆಂದು ನಿಮಗೂ ಗೊತ್ತಾಗಿರುತ್ತದೆ. (2 ತಿಮೊ. 3:12) ನೀವು ಎದುರಿಸುತ್ತಿರುವ ಪರೀಕ್ಷೆಗಳು ಕೆಲವೇ ಆಗಿರಲಿ ಹೆಚ್ಚೇ ಆಗಿರಲಿ ಹೆದರಬೇಕಾಗಿಲ್ಲ, ನಿರುತ್ತೇಜನಗೊಳ್ಳಬೇಕಾಗಿಲ್ಲ. ಏಕೆಂದರೆ ಯೆಹೋವನು ನಿಮ್ಮನ್ನು ಕಾಪಾಡುತ್ತಾನೆಂದು ಮಾತುಕೊಟ್ಟಿದ್ದಾನೆ. ಮುಂದೆ ಆತನು ನಿಮಗೆ ಉತ್ತಮ ಜೀವನವನ್ನೂ ಕೊಡಲಿದ್ದಾನೆ.—ಇಬ್ರಿ. 13:5, 6; ಪ್ರಕ. 2:10.

5 ದೇವರ ರಾಜ್ಯವು 1914ರಲ್ಲಿ ಸ್ವರ್ಗದಲ್ಲಿ ಆಳ್ವಿಕೆ ಶುರುಮಾಡಿದಾಗ ಸೈತಾನನನ್ನು ಭೂಮಿಗೆ ದೊಬ್ಬಲಾಯಿತು. ಅಂದಿನಿಂದ ಸೈತಾನ ಮತ್ತು ಅವನ ದುಷ್ಟ ದೂತರಿಗೆ ಸ್ವರ್ಗಕ್ಕೆ ತಿರುಗಿ ಹೋಗಲು ಅನುಮತಿಯಿಲ್ಲ. ಇದರಿಂದಾಗಿ ಕೋಪದಿಂದ ಕುದಿಯುತ್ತಿರುವ ಸೈತಾನನು ಇಡೀ ಭೂಮಿಯನ್ನು ಹಾಳು ಮಾಡುತ್ತಾ ದೇವಜನರಿಗೆ ಹೆಚ್ಚು ವಿರೋಧ ಹಿಂಸೆಗಳನ್ನು ತರುತ್ತಿದ್ದಾನೆ. ಇದು ನಾವೀಗ ಸೈತಾನನ ದುಷ್ಟ ಆಳ್ವಿಕೆಯ ಕಡೇ ದಿವಸಗಳಲ್ಲಿ ಜೀವಿಸುತ್ತಿರುವುದಕ್ಕೆ ರುಜುವಾತು. ಹಾಗಾಗಿ ಅವನ ಕೈಯಲ್ಲಿರುವ ಈ ದುಷ್ಟ ಲೋಕದಲ್ಲಿ ನಾವು ಇನ್ನಷ್ಟು ಸಂಕಷ್ಟಗಳನ್ನು ಎದುರುನೋಡಬೇಕು.—ಪ್ರಕ. 12:1-12.

6 ಸೈತಾನನು ತನ್ನ ದುಸ್ಥಿತಿಯಿಂದಾಗಿ ಮತ್ತು ತನಗಿರುವ ಸಮಯ ಸ್ವಲ್ಪವೇ ಎಂದು ತಿಳಿದಿರುವುದರಿಂದ ಕೆಂಡ ಕಾರುತ್ತಿದ್ದಾನೆ. ದೆವ್ವಗಳನ್ನು ಸೇರಿಸಿಕೊಂಡು ಸಾರುವ ಕೆಲಸವನ್ನು ನಿಲ್ಲಿಸಲು ಮತ್ತು ಯೆಹೋವನ ಸೇವಕರ ಐಕ್ಯವನ್ನು ಮುರಿಯಲು ಶತಪ್ರಯತ್ನ ಮಾಡುತ್ತಿದ್ದಾನೆ. ಹಾಗಾಗಿ ನಾವು ನಮ್ಮ ನಂಬಿಕೆಯನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕು. “ನಮಗಿರುವ ಹೋರಾಟವು ರಕ್ತಮಾಂಸಗಳ ವಿರುದ್ಧವಾಗಿ ಅಲ್ಲ; ಸರಕಾರಗಳ ವಿರುದ್ಧವಾಗಿಯೂ ಅಧಿಕಾರಗಳ ವಿರುದ್ಧವಾಗಿಯೂ ಈ ಅಂಧಕಾರದ ಲೋಕಾಧಿಪತಿಗಳ ವಿರುದ್ಧವಾಗಿಯೂ ಸ್ವರ್ಗೀಯ ಸ್ಥಳಗಳಲ್ಲಿ ಇರುವ ದುಷ್ಟಾತ್ಮ ಸೇನೆಗಳ ವಿರುದ್ಧವಾಗಿಯೂ ಇದೆ.” ಈ ಹೋರಾಟದಲ್ಲಿ ನಾವು ಯೆಹೋವನ ಪಕ್ಷನಿಂತು ಗೆಲ್ಲಲು ಎಲ್ಲ ಕ್ರೈಸ್ತ ಗುಣಗಳನ್ನು ಸದಾ ತೋರಿಸಬೇಕು. ಅವು ನಮಗೆ ರಕ್ಷಾಕವಚದಂತಿವೆ. ‘ಪಿಶಾಚನ ತಂತ್ರೋಪಾಯಗಳ ವಿರುದ್ಧ ಸಹ ನಾವು ದೃಢರಾಗಿ ನಿಲ್ಲಬೇಕು.’ (ಎಫೆ. 6:10-17) ಅದಕ್ಕೆ ನಮ್ಮಲ್ಲಿ ಸಹನೆ ಇರಬೇಕು.

ಸಹನೆ ಬೇಕೇ ಬೇಕು

7 ಕಷ್ಟ ತೊಂದರೆಗಳನ್ನು ತಾಳಿಕೊಳ್ಳುವ ಸಾಮರ್ಥ್ಯವೇ ಸಹನೆ. ಬೈಬಲಿನ ಪ್ರಕಾರ ಸಹನೆ ಅಂದರೆ ದೇವರಿಗೆ ನಾವು ತೋರಿಸುವ ನಿಷ್ಠೆಯನ್ನು ಮುರಿಯಲು ಸೈತಾನನು ತರುವ ಹಿಂಸೆ, ವಿರೋಧ, ಸಂಕಷ್ಟಗಳ ಮಧ್ಯೆಯೂ ನಂಬಿಕೆಯಲ್ಲಿ ದೃಢರಾಗಿದ್ದು ಸರಿಯಾದದ್ದನ್ನೇ ಮಾಡುವುದಾಗಿದೆ. ಈ ಗುಣ ತನ್ನಿಂತಾನೆ ಬರುವುದಿಲ್ಲ, ಅದನ್ನು ಬೆಳೆಸಿಕೊಳ್ಳಬೇಕು. ಅದಕ್ಕೆ ಸಮಯ ಹಿಡಿಯುತ್ತದೆ. ದೇವರಲ್ಲಿ ನಮ್ಮ ನಂಬಿಕೆ ಹೆಚ್ಚಿದಂತೆ ನಮ್ಮ ಸಹನೆಯೂ ಹೆಚ್ಚುತ್ತದೆ. ಸತ್ಯಕ್ಕೆ ಬಂದ ಹೊಸತರಲ್ಲಿ ಬರುವ ಚಿಕ್ಕ ಚಿಕ್ಕ ಪರೀಕ್ಷೆಗಳನ್ನು ನಾವು ಸಹಿಸಿಕೊಂಡರೆ ಮುಂದೆ ಬರುವ ದೊಡ್ಡ ಪರೀಕ್ಷೆಗಳನ್ನೂ ತಾಳಿಕೊಳ್ಳಲು ಬಲ ಸಿಗುತ್ತದೆ. (ಲೂಕ 16:10) ‘ದೊಡ್ಡ ಪರೀಕ್ಷೆ ಬರಲಿ, ಆಗ ನಾನು ನಂಬಿಕೆಯಲ್ಲಿ ದೃಢವಾಗಿರುತ್ತೇನೆ’ ಅಂತ ಯೋಚಿಸಬಾರದು. ಪರೀಕ್ಷೆ ಬರುವ ಮುಂಚೆಯೇ ನಂಬಿಕೆಯಲ್ಲಿ ದೃಢರಾಗಿರಬೇಕು. ಸಹನೆ ಹಾಗೂ ಇತರ ಕ್ರೈಸ್ತ ಗುಣಗಳನ್ನು ನಾವು ಬೆಳೆಸಿಕೊಳ್ಳುವ ಬಗ್ಗೆ ಪೇತ್ರ ಹೀಗಂದನು: “ಶ್ರದ್ಧಾಪೂರ್ವಕ ಪ್ರಯತ್ನದಿಂದ ನಿಮ್ಮ ನಂಬಿಕೆಗೆ ಸದ್ಗುಣವನ್ನೂ ನಿಮ್ಮ ಸದ್ಗುಣಕ್ಕೆ ಜ್ಞಾನವನ್ನೂ ನಿಮ್ಮ ಜ್ಞಾನಕ್ಕೆ ಸ್ವನಿಯಂತ್ರಣವನ್ನೂ ನಿಮ್ಮ ಸ್ವನಿಯಂತ್ರಣಕ್ಕೆ ತಾಳ್ಮೆಯನ್ನೂ [ಸಹನೆಯನ್ನೂ] ನಿಮ್ಮ ತಾಳ್ಮೆಗೆ [ಸಹನೆಗೆ] ದೇವಭಕ್ತಿಯನ್ನೂ ನಿಮ್ಮ ದೇವಭಕ್ತಿಗೆ ಸಹೋದರ ಮಮತೆಯನ್ನೂ ನಿಮ್ಮ ಸಹೋದರ ಮಮತೆಗೆ ಪ್ರೀತಿಯನ್ನೂ ಕೂಡಿಸಿರಿ.”—2 ಪೇತ್ರ 1:5-7; 1 ತಿಮೊ. 6:11.

ಪ್ರತಿ ದಿನ ನಮ್ಮ ನಂಬಿಕೆಗೆ ಬರುವ ಪರೀಕ್ಷೆಗಳನ್ನು ಜಯಿಸುತ್ತಿರುವಲ್ಲಿ ನಮ್ಮ ಸಹನೆಯು ಹೆಚ್ಚುತ್ತಾ ಹೋಗುತ್ತದೆ

8 ಸಹನೆಯನ್ನು ಬೆಳೆಸಿಕೊಳ್ಳುವುದು ಎಷ್ಟು ಪ್ರಾಮುಖ್ಯವೆಂದು ಯಾಕೋಬನು ಬರೆದನು: “ನನ್ನ ಸಹೋದರರೇ, ನೀವು ನಾನಾವಿಧವಾದ ಪರೀಕ್ಷೆಗಳನ್ನು ಎದುರಿಸುವಾಗ ನಿಮ್ಮ ನಂಬಿಕೆಯ ಪರೀಕ್ಷಿತ ಗುಣಮಟ್ಟವು ತಾಳ್ಮೆಯನ್ನು [ಸಹನೆಯನ್ನು] ಉಂಟುಮಾಡುತ್ತದೆಂದು ತಿಳಿದವರಾಗಿದ್ದು ಅವೆಲ್ಲವುಗಳನ್ನು ಆನಂದಕರವಾದದ್ದಾಗಿ ಪರಿಗಣಿಸಿರಿ. ತಾಳ್ಮೆಯು [ಸಹನೆಯು] ತನ್ನ ಕೆಲಸವನ್ನು ಸಂಪೂರ್ಣಗೊಳಿಸಲಿ; ಆಗ ನೀವು ಯಾವುದೇ ವಿಷಯದಲ್ಲಿ ಕೊರತೆಯುಳ್ಳವರಾಗಿರದೆ ಎಲ್ಲ ವಿಧಗಳಲ್ಲಿ ಸಂಪೂರ್ಣರೂ ಸ್ವಸ್ಥರೂ ಆಗಿರುವಿರಿ.” (ಯಾಕೋ. 1:2-4) ಇಲ್ಲಿ ಹೇಳಿರುವಂತೆ ಕಷ್ಟಪರೀಕ್ಷೆಗಳು ಬಂದಾಗ ನಾವು ಬೇಸರಪಡಬಾರದು, ಆನಂದಪಡಬೇಕು. ಏಕೆಂದರೆ ಕಷ್ಟಪರೀಕ್ಷೆ ಬಂದಾಗಲೇ ಸಹನೆಯನ್ನು ಬೆಳೆಸಿಕೊಳ್ಳಲು ಆಗುತ್ತದೆ. ಸಹನೆಯು ನಮಗೆ ಯೇಸುವಿನಲ್ಲಿದ್ದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಮತ್ತು ಎಲ್ಲಾ ವಿಷಯಗಳಲ್ಲಿ ದೇವರಿಗೆ ಮೆಚ್ಚಿಗೆಯಾಗುವಂತೆ ಜೀವಿಸಲು ಕಲಿಸುತ್ತದೆ. ಅಲ್ಲದೆ ಇತರ ಕ್ರೈಸ್ತ ಗುಣಗಳನ್ನೂ ನಮ್ಮಲ್ಲಿ ಬೆಳೆಸುತ್ತದೆ. ಪ್ರತಿ ದಿನ ನಮ್ಮ ನಂಬಿಕೆಗೆ ಬರುವ ಪರೀಕ್ಷೆಗಳನ್ನು ಜಯಿಸುತ್ತಿರುವಲ್ಲಿ ಸಹನೆಯು ಹೆಚ್ಚುತ್ತಾ ಹೋಗುತ್ತದೆ.

9 ನಾವು ಸಹನೆ ತೋರಿಸುವಾಗ ಯೆಹೋವನಿಗೆ ತುಂಬ ಖುಷಿಯಾಗುತ್ತದೆ. ಆತನು ನಮಗೆ ನಿತ್ಯಜೀವವೆಂಬ ಬಹುಮಾನ ಕೊಡುತ್ತಾನೆ. ಈ ಬಗ್ಗೆ ಯಾಕೋಬನು ಹೇಳಿದ್ದು: “ಪರೀಕ್ಷೆಗಳನ್ನು ತಾಳಿಕೊಳ್ಳುತ್ತಾ ಇರುವ ಮನುಷ್ಯನು ಸಂತೋಷಿತನು, ಏಕೆಂದರೆ ಅವನು ದೇವರಿಂದ ಅಂಗೀಕೃತನಾದಾಗ ಯೆಹೋವನು ತನ್ನನ್ನು ಪ್ರೀತಿಸುತ್ತಾ ಮುಂದುವರಿಯುವವರಿಗೆ ವಾಗ್ದಾನಮಾಡಿದ ಜೀವದ ಕಿರೀಟವನ್ನು ಹೊಂದುವನು.” (ಯಾಕೋ. 1:12) ಈ ಬಹುಮಾನವನ್ನು ಮನಸ್ಸಿನಲ್ಲಿಟ್ಟು ನಾವು ಸಹನೆ ತೋರಿಸುತ್ತೇವೆ. ನಮ್ಮಲ್ಲಿ ಸಹನೆ ಇಲ್ಲದಿದ್ದರೆ ಸತ್ಯದಲ್ಲಿ ಉಳಿಯಲು ಆಗುವುದಿಲ್ಲ. ಲೋಕದ ಒತ್ತಡಕ್ಕೆ ನಾವು ಮಣಿದರೆ ತಿರುಗಿ ಲೋಕಕ್ಕೆ ಹೋಗುವ ಅಪಾಯವಿದೆ. ಪವಿತ್ರಾತ್ಮವನ್ನು ಸಹ ನಾವು ಕಳೆದುಕೊಳ್ಳುತ್ತೇವೆ. ಆಗ ಪವಿತ್ರಾತ್ಮದಿಂದ ಉಂಟಾಗುವ ಗುಣಗಳೂ ನಮ್ಮಲ್ಲಿ ಇಲ್ಲದೆ ಹೋಗುತ್ತವೆ.

10 ಕಷ್ಟ ಬಂದಾಗ ನಾವು ಸಹನೆ ತೋರಿಸುತ್ತೇವಾ ಇಲ್ಲವಾ ಎಂಬುದು ಕಷ್ಟಗಳ ಬಗ್ಗೆ ನಾವು ಯಾವ ರೀತಿ ಯೋಚಿಸುತ್ತೇವೆ ಅನ್ನುವುದರ ಮೇಲೆ ಹೊಂದಿಕೊಂಡಿದೆ. ‘ಕಷ್ಟಪರೀಕ್ಷೆಗಳನ್ನು ಆನಂದಕರವಾದದ್ದಾಗಿ ಪರಿಗಣಿಸಿರಿ’ ಎಂದು ಯಾಕೋಬನು ಹೇಳಿದ್ದನ್ನು ಮರೆಯಬೇಡಿ. ಕೆಲವೊಮ್ಮೆ ದೈಹಿಕವಾಗಿ, ಮಾನಸಿಕವಾಗಿ ನಮಗೆ ತುಂಬ ನೋವು ತರುವ ಪರೀಕ್ಷೆಗಳನ್ನು ತಾಳಿಕೊಳ್ಳುತ್ತಾ ಆನಂದದಿಂದಿರುವುದು ಅಷ್ಟು ಸುಲಭವಲ್ಲ. ಆದರೆ ತಾಳಿಕೊಂಡದ್ದಕ್ಕೆ ಪ್ರತಿಫಲವಾಗಿ ಯೆಹೋವನು ಶಾಶ್ವತ ಜೀವನವನ್ನು ಕೊಡುತ್ತಾನೆ. ಅಪೊಸ್ತಲರು ಕಷ್ಟದಲ್ಲಿದ್ದಾಗಲೂ ಹೇಗೆ ಆನಂದದಿಂದಿದ್ದರೆಂದು ಗಮನಿಸಿ. “ಅವರು . . . ಅಪೊಸ್ತಲರನ್ನು ಕರೆಸಿ ಚಡಿಗಳಿಂದ ಹೊಡೆಸಿ ಯೇಸುವಿನ ಹೆಸರನ್ನು ಎತ್ತಿ ಮಾತಾಡುವುದನ್ನು ನಿಲ್ಲಿಸುವಂತೆ ಅಪ್ಪಣೆಕೊಟ್ಟು ಅವರನ್ನು ಕಳುಹಿಸಿಬಿಟ್ಟರು. ಆದರೆ ಅವನ ಹೆಸರಿನ ನಿಮಿತ್ತ ತಾವು ಅವಮಾನಪಡಲು ಯೋಗ್ಯರೆನಿಸಿಕೊಂಡದ್ದಕ್ಕಾಗಿ ಸಂತೋಷಿಸುತ್ತಾ ಅವರು ಹಿರೀಸಭೆಯಿಂದ ಹೊರಟುಹೋದರು.” (ಅ. ಕಾ. 5:40, 41) ಯೇಸುವಿನ ಆಜ್ಞೆಯನ್ನು ಪಾಲಿಸುತ್ತಿರುವುದಕ್ಕೇ ತಮಗೆ ಕಷ್ಟ ಬರುತ್ತಿದೆ ಮತ್ತು ಇವೆಲ್ಲ ಯೆಹೋವನು ತಮ್ಮನ್ನು ಮೆಚ್ಚಿದ್ದಾನೆಂಬುದಕ್ಕೆ ಪುರಾವೆ ಎಂದು ಅಪೊಸ್ತಲರಿಗೆ ಗೊತ್ತಿತ್ತು. ಹಾಗಾಗಿಯೇ ಸಮಯಾನಂತರ ಪೇತ್ರನು ನೀತಿಯ ನಿಮಿತ್ತ ಪರೀಕ್ಷೆಗಳನ್ನು ಎದುರಿಸುವುದು ಸಾರ್ಥಕ ಎಂದು ಬರೆದನು.—1 ಪೇತ್ರ 4:12-16.

11 ಇನ್ನೊಂದು ಉದಾಹರಣೆ ಪೌಲ ಮತ್ತು ಸೀಲರದ್ದು. ಅವರು ಫಿಲಿಪ್ಪಿಯಲ್ಲಿ ಸುವಾರ್ತೆ ಸಾರುವುದನ್ನು ವಿರೋಧಿಗಳು ಗಮನಿಸಿ ‘ಇವರು ಜನರಲ್ಲಿ ಗಲಿಬಿಲಿ ಹುಟ್ಟಿಸುತ್ತಿದ್ದಾರೆ, ಕಾನೂನುಬದ್ಧವಲ್ಲದ ಪದ್ಧತಿಗಳನ್ನು ಬೋಧಿಸುತ್ತಿದ್ದಾರೆಂದು’ ಅಪವಾದ ಹೊರಿಸಿದರು. ಹಾಗಾಗಿ ಅವರನ್ನು ತುಂಬ ಹೊಡೆದು ಸೆರೆಮನೆಗೆ ಹಾಕಲಾಯಿತು. ಅಲ್ಲಿ ಅವರ ಗಾಯಗಳಿಗೆ ಏನೂ ಔಷಧಿ ಸಿಕ್ಕಲಿಲ್ಲ. ಅಂಥ ನೋವಲ್ಲೂ ‘ಪೌಲ ಸೀಲರು ಮಧ್ಯರಾತ್ರಿಯಷ್ಟಕ್ಕೆ ಪ್ರಾರ್ಥನೆ ಮಾಡುತ್ತಾ ಗೀತೆಯನ್ನು ಹಾಡುವ ಮೂಲಕ ದೇವರನ್ನು ಸ್ತುತಿಸುತ್ತಾ ಇದ್ದರು. ಇತರ ಸೆರೆಯಾಳುಗಳು ಅದನ್ನು ಕೇಳಿಸಿಕೊಳ್ಳುತ್ತಾ ಇದ್ದರು.’ (ಅ. ಕಾ. 16:16-25) ಕ್ರಿಸ್ತನ ನಿಮಿತ್ತ ಎದುರಿಸಿದ ಕಷ್ಟಗಳನ್ನು ಪೌಲಸೀಲರು ದೇವರಿಗೆ ನಿಷ್ಠೆ ತೋರಿಸುವ ಅವಕಾಶವಾಗಿ ವೀಕ್ಷಿಸಿದರು. ಅಷ್ಟೇ ಅಲ್ಲ, ಅವರ ಆ ನಿಷ್ಠೆ ಜನರ ಗಮನಕ್ಕೂ ಬಂದದ್ದರಿಂದ ಒಳ್ಳೇ ಹೃದಯದ ವ್ಯಕ್ತಿಗಳಿಗೆ ಸುವಾರ್ತೆ ಸಾರಲು ಸಹ ಅವಕಾಶ ಸಿಕ್ಕಿತು. ಉದಾಹರಣೆಗೆ ಅದೇ ರಾತ್ರಿ ಸೆರೆಮನೆಯ ಯಜಮಾನ ಮತ್ತವನ ಕುಟುಂಬಕ್ಕೆ ಸುವಾರ್ತೆ ಸಾರಿದಾಗ ಅವರು ಯೇಸುವಿನ ಶಿಷ್ಯರಾದರು. (ಅ. ಕಾ. 16:26-34) ಕಷ್ಟಪರೀಕ್ಷೆಗಳ ಸಮಯದಲ್ಲಿ ಪೌಲಸೀಲರು ಯೆಹೋವನಲ್ಲಿ ಮತ್ತು ಆತನ ಶಕ್ತಿಯಲ್ಲಿ ಭರವಸೆಯಿಟ್ಟರು. ಯೆಹೋವನೇ ತಮ್ಮನ್ನು ಬಲಪಡಿಸುವನೆಂದು ನಂಬಿದರು. ಆ ನಂಬಿಕೆ ಸುಳ್ಳಾಗಲಿಲ್ಲ.

12 ನಾವು ಕಷ್ಟಗಳನ್ನು ಸಹಿಸಿಕೊಂಡು ಜಯಿಸಬೇಕೆಂಬುದು ಯೆಹೋವನ ಬಯಕೆ. ಸಂಕಷ್ಟಗಳಲ್ಲಿರುವಾಗ ನಮ್ಮನ್ನು ಬಲಪಡಿಸಲು ಬೇಕಾಗಿರುವುದನ್ನೆಲ್ಲ ಆತನು ಇಂದು ಸಹ ಒದಗಿಸಿದ್ದಾನೆ. ನಮಗೆ ಬೈಬಲನ್ನು ಕೊಟ್ಟಿದ್ದಾನೆ. ಅದರ ಮೂಲಕ ದೇವರ ಉದ್ದೇಶದ ಕುರಿತು ನಾವು ಪಡೆಯುವ ಸ್ಪಷ್ಟ ಜ್ಞಾನವು ನಮ್ಮ ನಂಬಿಕೆಯನ್ನು ಬಲಪಡಿಸುತ್ತದೆ. ದೇವಜನರೊಂದಿಗೆ ಒಡನಾಟ ಮಾಡುವ, ಬೈಬಲನ್ನು ಅಧ್ಯಯನ ಮಾಡುವ, ದೇವರಿಗೆ ಪವಿತ್ರ ಸೇವೆಸಲ್ಲಿಸುವ ಸದವಕಾಶಗಳು ನಮಗಿವೆ. ಸ್ವತಃ ಯೆಹೋವನೊಂದಿಗೆ ಪ್ರಾರ್ಥನೆಯ ಮೂಲಕ ಆಪ್ತ ಸ್ನೇಹ ಬೆಳೆಸಿಕೊಳ್ಳುವ ಸೌಭಾಗ್ಯವೂ ನಮಗಿದೆ. ಆತನು ಒಪ್ಪುವಂಥ ರೀತಿಯಲ್ಲಿ ಆರಾಧಿಸಲು ಸಹಾಯಕ್ಕಾಗಿ ಅಂಗಲಾಚುವಾಗ ಆತನು ಉತ್ತರಿಸುತ್ತಾನೆ. ಆತನನ್ನು ಸ್ತುತಿಸುವಾಗ ಆಲಿಸುತ್ತಾನೆ. (ಫಿಲಿ. 4:13) ಅಷ್ಟೇ ಅಲ್ಲ ನಮ್ಮ ಮುಂದಿರುವ ಭವ್ಯ ನಿರೀಕ್ಷೆಯ ಕುರಿತು ಯೋಚಿಸುವುದರಿಂದಲೂ ನಮಗೆ ತುಂಬ ಬಲ ಸಿಗುತ್ತದೆ.—ಮತ್ತಾ. 24:13; ಇಬ್ರಿ. 6:18; ಪ್ರಕ. 21:1-4.

ಬೇರೆಬೇರೆ ರೀತಿಯ ಕಷ್ಟಪರೀಕ್ಷೆಗಳಲ್ಲೂ ಸಹನೆ

13 ಯೇಸು ಕ್ರಿಸ್ತನ ಆರಂಭದ ಶಿಷ್ಯರು ಮತ್ತು ನಾವಿಂದು ಅನುಭವಿಸುತ್ತಿರುವ ಕಷ್ಟಸಂಕಟಗಳು ಸಾಧಾರಣ ಒಂದೇ ರೀತಿಯದ್ದಾಗಿವೆ. ಇಂದು ಕೆಲವು ವಿರೋಧಿಗಳು ಯೆಹೋವನ ಸೇವಕರನ್ನು ತಪ್ಪರ್ಥಮಾಡಿಕೊಂಡು ನಿಂದಿಸಿದ್ದಾರೆ ಮತ್ತು ಹೊಡೆದಿದ್ದಾರೆ. ಅಪೊಸ್ತಲರ ದಿನದಲ್ಲಿದ್ದಂತೆ ಇಂದು ಸಹ ಹೆಚ್ಚಿನ ವಿರೋಧಗಳು ಧರ್ಮದ ಮೇಲೆ ತುಂಬ ಒಲವಿರುವ ಜನರಿಂದ ಬರುತ್ತಿವೆ. ಈ ಧರ್ಮಾಂಧರ ಬೋಧನೆಗಳು ಮತ್ತು ಕೆಲಸಗಳು ಸುಳ್ಳೆಂದು ಬೈಬಲ್‌ ಸ್ಪಷ್ಟವಾಗಿ ಹೇಳುತ್ತದೆ. (ಅ. ಕಾ. 17:5-9, 13) ಕೆಲವೊಂದು ಸಾರಿ ಯೆಹೋವನ ಜನರು ತಮಗಿರುವ ಕಾನೂನುಬದ್ಧ ಹಕ್ಕುಗಳನ್ನು ಬಳಸಿಕೊಂಡು ಈ ಸಮಸ್ಯೆಗಳಿಂದ ಹೊರಬಂದಿದ್ದಾರೆ. (ಅ. ಕಾ. 22:25; 25:11) ಕೆಲವು ಕಡೆಗಳಲ್ಲಿ ಸರ್ಕಾರಗಳು ಸಹ ನಮ್ಮ ಸಾರುವ ಕಾರ್ಯವನ್ನು ನಿಲ್ಲಿಸಲು ನಮ್ಮ ಕೆಲಸದ ಮೇಲೆ ನಿಷೇಧ ಹೇರಿವೆ. (ಕೀರ್ತ. 2:1-3) ಇಂಥ ಸನ್ನಿವೇಶಗಳಲ್ಲೂ ನಾವು ಅಪೊಸ್ತಲರಂತೆ ಧೈರ್ಯದಿಂದ ಸುವಾರ್ತೆ ಸಾರುತ್ತೇವೆ. ಏಕೆಂದರೆ ‘ನಾವು ಮನುಷ್ಯರಿಗಿಂತ ಹೆಚ್ಚಾಗಿ ಪ್ರಭುವಾಗಿರುವ ದೇವರಿಗೆ ವಿಧೇಯರಾಗುತ್ತೇವೆ.’—ಅ. ಕಾ. 5:29.

14 ಲೋಕದೆಲ್ಲೆಡೆ ಜನರಲ್ಲಿ ದೇಶಾಭಿಮಾನ ಹೆಚ್ಚುತ್ತಿದೆ. ಇದರಿಂದಾಗಿ ಸುವಾರ್ತೆ ಸಾರುವುದನ್ನು ಬಿಟ್ಟುಬಿಡುವಂತೆ ದೇವಜನರ ಮೇಲೆ ಒತ್ತಡ ವಿರೋಧ ತರಲಾಗುತ್ತಿದೆ. ಆದರೆ ದೇವಜನರು ಪ್ರಕಟನೆ 14:9-12 ರಲ್ಲಿ ‘ಮೃಗ ಮತ್ತು ಅದರ ವಿಗ್ರಹವನ್ನು’ ಆರಾಧಿಸುವುದರ ಬಗ್ಗೆ ಇರುವ ಎಚ್ಚರಿಕೆಯನ್ನು ಮನಸ್ಸಿನಲ್ಲಿಡುತ್ತಾರೆ. ತಮ್ಮಲ್ಲಿ ದೇಶಾಭಿಮಾನ ಬಾರದಂತೆ ನೋಡಿಕೊಳ್ಳುತ್ತಾರೆ. “ದೇವರ ಆಜ್ಞೆಗಳನ್ನೂ ಯೇಸುವಿನ ನಂಬಿಕೆಯನ್ನೂ ಅನುಸರಿಸಿ ನಡೆಯುವವರಾದ ಪವಿತ್ರ ಜನರಿಗೆ ತಾಳ್ಮೆಯು [ಸಹನೆ] ಅಗತ್ಯವಿರುವುದು ಇಲ್ಲಿಯೇ.”

15 ಯುದ್ಧ, ರಾಜಕೀಯ ಕ್ರಾಂತಿ, ವಿಪರೀತ ಹಿಂಸೆ ಅಥವಾ ನಮ್ಮ ಕೆಲಸದ ಮೇಲೆ ಸರ್ಕಾರದ ನಿಷೇಧ ಇವುಗಳಿಂದಾಗಿ ನಿಮಗೆ ಸ್ವತಂತ್ರವಾಗಿ ಯೆಹೋವನ ಆರಾಧನೆ ಮಾಡಲು ಆಗದಿರಬಹುದು. ಕೂಟಗಳಿಗೆ ಸೇರಿ ಬರಲು, ಶಾಖೆಯನ್ನು ಸಂಪರ್ಕಿಸಲು ಆಗದಿರಬಹುದು. ಸಂಚರಣ ಮೇಲ್ವಿಚಾರಕರ ಭೇಟಿ ಸಹ ಇರಲಿಕ್ಕಿಲ್ಲ. ಹೊಸ ಪತ್ರಿಕೆ, ಪುಸ್ತಕ ಯಾವುದೂ ನಿಮಗೆ ಸಿಗದಿರಬಹುದು. ಇದು ನಿಮ್ಮ ನಂಬಿಕೆಗೆ ಪರೀಕ್ಷೆಯಾಗಿದೆ. ಇಂಥ ಸನ್ನಿವೇಶದಲ್ಲಿ ನೀವೇನು ಮಾಡಬೇಕು?

16 ದೇವರ ಆರಾಧನೆಗಾಗಿ ನಿಮ್ಮಿಂದ ಏನೆಲ್ಲ ಮಾಡಲಿಕ್ಕಾಗುತ್ತದೋ, ಎಷ್ಟೆಲ್ಲ ಮಾಡಲಿಕ್ಕಾಗುತ್ತದೋ ಅದನ್ನು ಮಾಡಿ. ವೈಯಕ್ತಿಕವಾಗಿ ಬೈಬಲನ್ನು ಅಧ್ಯಯನ ಮಾಡಲು ನಿಮ್ಮಿಂದ ಖಂಡಿತ ಆಗುತ್ತದೆ. ಸಹೋದರರ ಮನೆಗಳಲ್ಲಿ ಸ್ವಲ್ಪ ಸ್ವಲ್ಪ ಮಂದಿ ಕೂಡಿ ಕೂಟಗಳನ್ನು ನಡೆಸಬಹುದು. ಕೂಟ ನಡೆಸಲು ಹಳೆ ಪುಸ್ತಕ ಪತ್ರಿಕೆಗಳನ್ನು ಬಳಸಬಹುದು. ಅವು ಇಲ್ಲವಾದರೆ ಬೈಬಲನ್ನೇ ಬಳಸಬಹುದು. ಹೆಚ್ಚು ಚಿಂತೆಮಾಡಬೇಡಿ, ಭಯಭೀತರಾಗಬೇಡಿ. ಆಡಳಿತ ಮಂಡಲಿಯು ಆದಷ್ಟು ಬೇಗ ಜವಾಬ್ದಾರಿಯುತ ಸಹೋದರರನ್ನು ಸಂಪರ್ಕಿಸಲು ಏನಾದರೂ ಏರ್ಪಾಡು ಮಾಡುವುದು.

17 ಒಂದುವೇಳೆ ನಿಮಗೆ ಸಹೋದರ ಸಹೋದರಿಯರೊಟ್ಟಿಗೆ ಸಂಪರ್ಕವೇ ಕಡಿದುಹೋಗಿ ಒಬ್ಬರೇ ಇದ್ದರೆ ಆಗೇನು? ಭಯಪಡಬೇಡಿ. ಏಕೆಂದರೆ ಯೆಹೋವನು ಮತ್ತು ಆತನ ಮಗನಾದ ಯೇಸು ಕ್ರಿಸ್ತನು ಯಾವಾಗಲೂ ನಿಮ್ಮೊಟ್ಟಿಗೆ ಇರುತ್ತಾರೆ. ಆದ್ದರಿಂದ ನಿರಾಶರಾಗಿ ಕುಗ್ಗಿಹೋಗಬೇಡಿ. ಯೆಹೋವನಿಗೆ ಪ್ರಾರ್ಥನೆ ಮಾಡಿ ನಿಮ್ಮನ್ನು ಮಾರ್ಗದರ್ಶಿಸುವಂತೆ ಕೇಳಿಕೊಳ್ಳಿ. ಆಗಲೂ ಆತನು ನಿಮಗೆ ಉತ್ತರ ಕೊಡುತ್ತಾನೆ ಮತ್ತು ಪವಿತ್ರಾತ್ಮ ಕೊಟ್ಟು ನಿಮ್ಮನ್ನು ಬಲಪಡಿಸುತ್ತಾನೆ. ನೀವು ಯೆಹೋವನ ಸೇವಕರಾಗಿದ್ದೀರಿ ಮತ್ತು ಯೇಸುವಿನ ಶಿಷ್ಯರಾಗಿದ್ದೀರಿ ಎಂದು ಯಾವಾಗಲೂ ನೆನಪಿಡಿ. ಇತರರಿಗೆ ಸಾಕ್ಷಿಕೊಡಲು ಸಿಗುವ ಎಲ್ಲ ಅವಕಾಶಗಳನ್ನು ಉಪಯೋಗಿಸಿಕೊಳ್ಳಿ. ನಿಮ್ಮ ಪ್ರಯಾಸಗಳನ್ನೆಲ್ಲ ಯೆಹೋವನು ಆಶೀರ್ವದಿಸುವನು. ಸ್ವಲ್ಪ ಸಮಯದಲ್ಲೇ ದೇವರನ್ನು ಆರಾಧಿಸಲು ಇತರರು ನಿಮ್ಮ ಜೊತೆ ಸೇರಬಹುದು.—ಅ. ಕಾ. 4:13-31; 5:27-42; ಫಿಲಿ. 1:27-30; 4:6, 7; 2 ತಿಮೊ. 4:16-18.

18 ಒಂದುವೇಳೆ ಅಪೊಸ್ತಲರಂತೆ ನಿಮಗೂ ಪ್ರಾಣ ಕಳೆದುಕೊಳ್ಳುವಂಥ ಪರಿಸ್ಥಿತಿ ಬಂದರೆ ಏನು ಮಾಡಬಹುದು? “ಸತ್ತವರನ್ನು ಎಬ್ಬಿಸುವಂಥ ದೇವರ ಮೇಲೆ ಭರವಸೆ” ಇಡಿ. (2 ಕೊರಿಂ. 1:8-10) ಪುನರುತ್ಥಾನದಲ್ಲಿ ನಂಬಿಕೆಯಿಡಿ. ನಿಮಗೆ ಎಂತಹದ್ದೇ ವಿರೋಧ ಬಂದರೂ ತಾಳಿಕೊಳ್ಳಲು ಆ ನಿರೀಕ್ಷೆಯು ಸಹಾಯ ಮಾಡುವುದು. (ಲೂಕ 21:19) ಯೇಸು ಕ್ರಿಸ್ತನು ಕಷ್ಟಪರೀಕ್ಷೆಗಳ ಸಮಯದಲ್ಲಿ ನಂಬಿಗಸ್ತನಾಗಿ ಉಳಿದದ್ದು ಇತರರಿಗೂ ಕಷ್ಟಗಳನ್ನು ತಾಳಿಕೊಳ್ಳಲು ಬಲಕೊಟ್ಟಿತು. ಅದೇರೀತಿ ನಿಮ್ಮ ಸಹನೆಯು ಜೊತೆ ಕ್ರೈಸ್ತರಿಗೆ ಸ್ಫೂರ್ತಿಯಾಗಿರುವುದು.—ಯೋಹಾ. 16:33; ಇಬ್ರಿ. 12:2, 3; 1 ಪೇತ್ರ 2:21.

19 ಹಿಂಸೆ, ವಿರೋಧಗಳಲ್ಲದೆ ಇತರ ಕಷ್ಟಗಳನ್ನು ನಾವು ಸಹಿಸಬೇಕಾಗಬಹುದು. ಉದಾಹರಣೆಗೆ, ಕ್ಷೇತ್ರದಲ್ಲಿ ಜನರು ಆಸಕ್ತಿ ತೋರಿಸದಿದ್ದಾಗ ಆಗುವ ನಿರಾಶೆ, ನಮ್ಮ ಸ್ವಂತ ಶಾರೀರಿಕ ಹಾಗೂ ಮಾನಸಿಕ ಅಸ್ವಸ್ಥತೆ, ಅಪರಿಪೂರ್ಣತೆಯಿಂದಾಗಿ ನಾವು ಅನುಭವಿಸುವ ಕಷ್ಟಗಳು ಇತ್ಯಾದಿ. ಅಪೊಸ್ತಲ ಪೌಲನಿಗಿದ್ದ ಒಂದು ಕಷ್ಟವು ದೇವರ ಸೇವೆಯನ್ನು ಮಾಡಲು ಕೆಲವೊಮ್ಮೆ ಅಡ್ಡಿಯನ್ನು ಉಂಟುಮಾಡಿತು. ಅದನ್ನು ಅವನು ತಾಳಿಕೊಳ್ಳಬೇಕಿತ್ತು. (2 ಕೊರಿಂ. 12:7) ಫಿಲಿಪ್ಪಿ ಸಭೆಯಲ್ಲಿದ್ದ ಎಪಫ್ರೊದೀತನು ತಾನು ಅಸ್ವಸ್ಥನಾಗಿದ್ದರ ಬಗ್ಗೆ ತನ್ನ ಸ್ನೇಹಿತರಿಗೆ ತಿಳಿದುಬಂದದ್ದರಿಂದ ಕುಗ್ಗಿಹೋದನು. (ಫಿಲಿ. 2:25-27) ಸಹಿಸಿಕೊಳ್ಳಲು ತುಂಬ ಕಷ್ಟವೆನಿಸಬಹುದಾದ ಇನ್ನೊಂದು ವಿಷಯವು, ನಮ್ಮ ಹಾಗೂ ಇತರರ ಅಪರಿಪೂರ್ಣತೆಗಳು. ಜೊತೆ ಕ್ರೈಸ್ತರೊಂದಿಗೆ ಅಥವಾ ನಮ್ಮ ಕುಟುಂಬದವರೊಂದಿಗೇ ಆಗುವ ಮನಸ್ತಾಪ ಕೂಡ ಒಂದು ರೀತಿಯ ಕಷ್ಟ. ಆದರೆ ಬೈಬಲಿನ ಸಲಹೆಗಳನ್ನು ಅನ್ವಯಿಸುವ ಮೂಲಕ ಆ ಕಷ್ಟಗಳನ್ನು ಸಹಿಸಿಕೊಳ್ಳಲು ಮತ್ತು ನಿಭಾಯಿಸಲು ಖಂಡಿತ ಸಾಧ್ಯ.—ಯೆಹೆ. 2:3-5; 1 ಕೊರಿಂ. 9:27; 13:8; ಕೊಲೊ. 3:12-14; 1 ಪೇತ್ರ 4:8.

ಸದಾ ನಂಬಿಗಸ್ತರಾಗಿರುವ ದೃಢಸಂಕಲ್ಪ ನಮ್ಮದಾಗಿರಲಿ

20 ಯೆಹೋವನು ಸಭೆಯ ಮೇಲೆ ನಾಯಕನಾಗಿ ನೇಮಿಸಿರುವ ಯೇಸು ಕ್ರಿಸ್ತನನ್ನು ನಾವು ಯಾವಾಗಲೂ ನಿಕಟವಾಗಿ ಅನುಸರಿಸಬೇಕು. (ಕೊಲೊ. 2:18, 19) ನಂಬಿಗಸ್ತನೂ ವಿವೇಚನೆಯುಳ್ಳವನೂ ಆದ ಆಳಿಗೆ ಮತ್ತು ಸಭೆಯಲ್ಲಿರುವ ಮೇಲ್ವಿಚಾರಕರಿಗೆ ಪೂರ್ಣ ಸಹಕಾರ ಕೊಡಬೇಕು. (ಇಬ್ರಿ. 13:7, 17) ಸಂಘಟನೆ ಮಾಡುವ ಏರ್ಪಾಡುಗಳಿಗೆ ಅಧೀನರಾಗಬೇಕು. ಆಗ ನಾವು ಯೆಹೋವನ ಕೆಲಸವನ್ನು ಸಂಘಟಿತರಾಗಿ ಮಾಡಲು ಆಗುತ್ತದೆ. ನಮ್ಮ ತಂದೆಯಾದ ಯೆಹೋವನೊಂದಿಗೆ ಪ್ರಾರ್ಥನೆಯಲ್ಲಿ ಮಾತಾಡುವ ದೊಡ್ಡ ಸುಯೋಗ ನಮಗಿದೆ. ಹಾಗಾಗಿ ಯಾವಾಗಲೂ ಪ್ರಾರ್ಥನೆ ಮಾಡುತ್ತಿರೋಣ. ಸೆರೆಮನೆಯ ಗೋಡೆಗಳಾಗಲಿ ಏಕಾಂತ ಸೆರೆವಾಸವಾಗಲಿ ಅದನ್ನು ತಡೆಯಲಾರವು. ನಮ್ಮ ಸಹೋದರರ ಮಧ್ಯೆಯಿರುವ ಐಕ್ಯವನ್ನೂ ಮುರಿಯಲಾರವು.

21 ಯೇಸು ಪುನರುತ್ಥಾನವಾದ ನಂತರ ತನ್ನ ಹಿಂಬಾಲಕರಿಗೆ ಈ ಆಜ್ಞೆ ಕೊಟ್ಟನು: “ಹೊರಟುಹೋಗಿ ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ ಮತ್ತು ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ, ನಾನು ನಿಮಗೆ ಆಜ್ಞಾಪಿಸಿದ ಎಲ್ಲ ವಿಷಯಗಳನ್ನು ಪಾಲಿಸುವಂತೆ ಅವರಿಗೆ ಬೋಧಿಸಿರಿ. ನೋಡಿರಿ, ನಾನು ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ವರೆಗೂ ಎಲ್ಲ ದಿವಸ ನಿಮ್ಮ ಸಂಗಡ ಇರುತ್ತೇನೆ.” (ಮತ್ತಾ. 28:19, 20) ಈ ನೇಮಕವನ್ನು ಪೂರೈಸಲು ನಮ್ಮಿಂದಾಗುವ ಎಲ್ಲವನ್ನು ಮಾಡೋಣ. ಏನೇ ಕಷ್ಟ ಬಂದರೂ ತಾಳಿಕೊಂಡು ಆ ಕೆಲಸವನ್ನು ಮುಂದುವರಿಸೋಣ. ಯೇಸುವಿನಂತೆ ಸಹನೆಯನ್ನು ತೋರಿಸೋಣ. ದೇವರ ರಾಜ್ಯದ ನಿರೀಕ್ಷೆ ಮತ್ತು ನಿತ್ಯಜೀವದ ಬಹುಮಾನವನ್ನು ನಮ್ಮ ಮನಸ್ಸಿನಲ್ಲಿ ಹಚ್ಚಹಸಿರಾಗಿ ಇಡೋಣ. (ಇಬ್ರಿ. 12:2) ಕಡೇ ದಿವಸಗಳ ಕುರಿತ ಪ್ರವಾದನೆಯಲ್ಲಿ ಯೇಸು ಹೀಗಂದನು: “ರಾಜ್ಯದ ಈ ಸುವಾರ್ತೆಯು ನಿವಾಸಿತ ಭೂಮಿಯಾದ್ಯಂತ ಎಲ್ಲ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲ್ಪಡುವುದು; ಮತ್ತು ಆಗ ಅಂತ್ಯವು ಬರುವುದು.” (ಮತ್ತಾ. 24:3, 14) ದೀಕ್ಷಾಸ್ನಾನ ಪಡೆದ ಕ್ರಿಸ್ತನ ಶಿಷ್ಯರಿಗೆ ಆ ಪ್ರವಾದನೆಯ ನೆರವೇರಿಕೆಯಲ್ಲಿ ಒಂದು ಪಾಲಿದೆ. ನಾವು ಆ ಕೆಲಸವನ್ನು ಪೂರ್ಣ ಹೃದಯದಿಂದ ಮಾಡಿದರೆ ಯೆಹೋವನ ನೀತಿಯ ಹೊಸ ಲೋಕದಲ್ಲಿ ನಿತ್ಯ ನಿರಂತರ ಆನಂದದಿಂದ ಬದುಕುವ ಆಶೀರ್ವಾದ ನಮ್ಮದಾಗುತ್ತದೆ!