ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 5

ಸಭೆಯನ್ನು ಪರಿಪಾಲಿಸುವ ಮೇಲ್ವಿಚಾರಕರು

ಸಭೆಯನ್ನು ಪರಿಪಾಲಿಸುವ ಮೇಲ್ವಿಚಾರಕರು

ಯೇಸು “ಒಳ್ಳೆಯ ಕುರುಬ.” ಅದನ್ನು ಅವನು ಭೂಮಿಯಲ್ಲಿ ಮಾಡಿದ ಸೇವೆಯಿಂದ ತೋರಿಸಿಕೊಟ್ಟನು. (ಯೋಹಾ. 10:11) ತನ್ನನ್ನು ಹಿಂಬಾಲಿಸುತ್ತಿದ್ದ ಜನರನ್ನು ನೋಡಿ ಯೇಸು, “ಇವರು ಕುರುಬನಿಲ್ಲದ ಕುರಿಗಳ ಹಾಗೆ ಸುಲಿಯಲ್ಪಟ್ಟು ಚದುರಿಸಲ್ಪಟ್ಟಿದ್ದಾರಲ್ಲ ಎಂದು ಅವರ ಮೇಲೆ ಕನಿಕರಪಟ್ಟನು.” (ಮತ್ತಾ. 9:36) ಯೇಸು ಜನರಿಗೆ ತೋರಿಸಿದ ಪ್ರೀತಿ ಕಾಳಜಿಯನ್ನು ಪೇತ್ರ ಮತ್ತು ಬೇರೆ ಅಪೊಸ್ತಲರು ಕಣ್ಣಾರೆ ನೋಡಿದರು. ಯೇಸುವಿಗೂ ಧಾರ್ಮಿಕ ಮುಖಂಡರಿಗೂ ಎಷ್ಟೊಂದು ವ್ಯತ್ಯಾಸವಿದೆಯೆಂದು ಗಮನಿಸಿದರು. ಕುರುಬರಂತೆ ಪ್ರೀತಿ ಕಾಳಜಿ ತೋರಿಸಬೇಕಿದ್ದ ಆ ಮುಖಂಡರು ಮುಗ್ಧ ಜನರನ್ನು ದಾರಿತಪ್ಪುವಂತೆ ಬಿಟ್ಟುಬಿಟ್ಟಿದ್ದರು, ಯೆಹೋವನನ್ನು ಮೆಚ್ಚಿಸಲು ಏನು ಮಾಡಬೇಕು ಮತ್ತು ಆತನು ಅವರಿಗಾಗಿ ಏನು ಮಾಡಲಿದ್ದಾನೆಂದು ಅವರಿಗೆ ತಿಳಿಸಲಿಲ್ಲ. (ಯೆಹೆ. 34:7, 8) ಯೇಸುವಾದರೋ ಜನರಿಗೆ ಯೆಹೋವನ ಬಗ್ಗೆ ಕಲಿಸಿದನು, ಕುರುಬನಂತೆ ಕೋಮಲವಾಗಿ ಆರೈಕೆಮಾಡಿದನು. ಅವರಿಗೋಸ್ಕರ ತನ್ನ ಜೀವವನ್ನೇ ಕೊಟ್ಟನು. ಈ ಮಾದರಿಯು, ತಮ್ಮ “ಪ್ರಾಣಗಳನ್ನು ಕಾಯುವ ಕುರುಬನೂ ಮೇಲ್ವಿಚಾರಕನೂ” ಆದ ಯೆಹೋವನ ಬಳಿಗೆ ಹಿಂದಿರುಗಿ ಬರಲು ನಂಬಿಕೆಯಿದ್ದ ಜನರಿಗೆ ಸಹಾಯಮಾಡುವುದು ಹೇಗೆಂದು ಅಪೊಸ್ತಲರಿಗೆ ಕಲಿಸಿತು.—1 ಪೇತ್ರ 2:25.

2 ಒಮ್ಮೆ ಯೇಸು ಪೇತ್ರನೊಂದಿಗೆ ಮಾತಾಡುವಾಗ ಕುರಿಗಳಂತಿದ್ದ ತನ್ನ ಶಿಷ್ಯರನ್ನು ಮೇಯಿಸುವುದು ಮತ್ತು ಪಾಲಿಸುವುದು ಎಷ್ಟು ಪ್ರಾಮುಖ್ಯವೆಂದು ಹೇಳಿದನು. (ಯೋಹಾ. 21:15-17) ಆ ಮಾತುಗಳು ಪೇತ್ರನ ಮನಸ್ಪರ್ಶಿಸಿರಬೇಕು. ಯಾಕೆಂದರೆ ಸಮಯಾನಂತರ ಪೇತ್ರನು ಕ್ರೈಸ್ತ ಸಭೆಯ ಹಿರಿಯರಿಗೆ ಹೀಗೆ ಬುದ್ಧಿ ಹೇಳಿದನು: “ನಿಮ್ಮ ವಶಕ್ಕೆ ಕೊಡಲ್ಪಟ್ಟಿರುವ ದೇವರ ಮಂದೆಯನ್ನು ಪರಿಪಾಲಿಸಿರಿ; ನಿರ್ಬಂಧದಿಂದಲ್ಲ, ಇಚ್ಛಾಪೂರ್ವಕವಾಗಿ ಮಾಡಿರಿ; ಅಪ್ರಾಮಾಣಿಕ ಲಾಭದ ಮೇಲಣ ಪ್ರೀತಿಯಿಂದಲ್ಲ, ಸಿದ್ಧಮನಸ್ಸಿನಿಂದ ಮಾಡಿರಿ. ದೇವರ ಸೊತ್ತಾಗಿರುವವರ ಮೇಲೆ ದೊರೆತನ ಮಾಡುವವರಾಗಿರದೆ ಮಂದೆಗೆ ಮಾದರಿಗಳಾಗಿರಿ.” (1 ಪೇತ್ರ 5:1-3) ಈ ಮಾತುಗಳು ಇಂದಿರುವ ಮೇಲ್ವಿಚಾರಕರಿಗೂ ಅನ್ವಯಿಸುತ್ತವೆ. ಅವರು ಯೇಸುವಿನ ಮಾದರಿಯನ್ನು ಅನುಕರಿಸುತ್ತಾ ಸಿದ್ಧಮನಸ್ಸಿನಿಂದ ಸೇವೆಮಾಡುತ್ತಾರೆ. ಯೆಹೋವನ ಸೇವೆಯಲ್ಲಿ ಮುಂದಾಳತ್ವ ವಹಿಸಿ ಸಭೆಗೆ ಮಾದರಿಯಾಗಿರುತ್ತಾರೆ.—ಇಬ್ರಿ. 13:7.

ಮೇಲ್ವಿಚಾರಕರು ಯೇಸುವಿನಂತೆ ಸಿದ್ಧಮನಸ್ಸಿನಿಂದ ಇಷ್ಟಪಟ್ಟು ಸೇವೆ ಮಾಡುತ್ತಾರೆ. ಯೆಹೋವನ ಸೇವೆಯಲ್ಲಿ ಮುಂದಾಳತ್ವ ವಹಿಸಿ ಸಭೆಗೆ ಮಾದರಿಯಾಗಿರುತ್ತಾರೆ

3 ಪವಿತ್ರಾತ್ಮವು ನೇಮಿಸಿದ ಈ ಮೇಲ್ವಿಚಾರಕರು ನಮಗಿರುವುದಕ್ಕಾಗಿ ನಾವು ಯೆಹೋವನಿಗೆ ಕೃತಜ್ಞರು. ಅವರ ಕಾಳಜಿಯಿಂದ ನಮಗೆ ಸಿಗುವ ಪ್ರಯೋಜನಗಳು ಅನೇಕ. ಉದಾಹರಣೆಗೆ, ಅವರು ಸಭೆಯಲ್ಲಿ ಪ್ರತಿಯೊಬ್ಬರಿಗೂ ಗಮನಕೊಟ್ಟು ಪ್ರೋತ್ಸಾಹಿಸುತ್ತಾರೆ. ಪ್ರತಿವಾರ ಕೂಟಗಳನ್ನು ಶ್ರದ್ಧೆಯಿಂದ ನಡೆಸುತ್ತಾ ಎಲ್ಲರ ನಂಬಿಕೆ ಬಲಪಡಿಸುತ್ತಾರೆ. (ರೋಮ. 12:8) ದುಷ್ಟ ವ್ಯಕ್ತಿಗಳಿಂದ, ಹಾನಿಕರ ವಿಷಯಗಳಿಂದ ನಮ್ಮನ್ನು ಸಂರಕ್ಷಿಸಲು ಶ್ರಮಿಸುತ್ತಾರೆ. ಹಾಗಾಗಿ ಸುರಕ್ಷಿತ ಭಾವನೆ ನಮ್ಮಲ್ಲಿದೆ. (ಯೆಶಾ. 32:2; ತೀತ 1:9-11) ಅವರು ಸಾರುವುದರಲ್ಲಿ ಮುಂದಾಳುತ್ವ ವಹಿಸುವುದರಿಂದ ನಮಗೂ ಪ್ರತಿ ತಿಂಗಳು ಹೆಚ್ಚು ಸೇವೆ ಮಾಡಲು ಪ್ರೋತ್ಸಾಹ ಸಿಗುತ್ತದೆ. (ಇಬ್ರಿ. 13:15-17) ನಮ್ಮ ನಂಬಿಕೆಯನ್ನು ಬಲಪಡಿಸಲಿಕ್ಕಾಗಿ ಯೆಹೋವನು ‘ಮನುಷ್ಯರಲ್ಲಿ ದಾನಗಳಾಗಿರುವ’ ಈ ಮೇಲ್ವಿಚಾರಕರನ್ನು ಕೊಟ್ಟಿದ್ದಾನೆ.—ಎಫೆ. 4:8, 11, 12.

ಮೇಲ್ವಿಚಾರಕರಾಗಲು ಅರ್ಹತೆಗಳು

4 ಮೇಲ್ವಿಚಾರಕರಾಗಲು ಸಹೋದರರಲ್ಲಿ ಬೈಬಲ್‌ ತಿಳಿಸುವ ಅರ್ಹತೆಗಳು ಇರಲೇಬೇಕು. ಆಗಲೇ ಅವರನ್ನು ಪವಿತ್ರಾತ್ಮದಿಂದ ನೇಮಿಸಲಾಗಿದೆ ಎಂದು ಹೇಳಲು ಸಾಧ್ಯ ಮತ್ತು ಅವರು ಸಭೆಯನ್ನು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯ. (ಅ. ಕಾ. 20:28) ಇದು ಗಂಭೀರ ಜವಾಬ್ದಾರಿಯಾಗಿರುವ ಕಾರಣ ಅವರಲ್ಲಿರಬೇಕಾದ ಅರ್ಹತೆಗಳು ಉನ್ನತ ಮಟ್ಟದ್ದಾಗಿವೆ. ಹಾಗಂತ ಅವುಗಳನ್ನು ಮುಟ್ಟುವುದು ಅಸಾಧ್ಯವಲ್ಲ. ಯೆಹೋವನನ್ನು ಪ್ರೀತಿಸುವವರು ಮತ್ತು ಆತನ ಕೈಕೆಳಗೆ ದೀನತೆಯಿಂದ ಕೆಲಸಮಾಡಲು ಮನಸ್ಸಿರುವವರು ಖಂಡಿತ ಆ ಅರ್ಹತೆಗಳನ್ನು ಪಡೆಯುತ್ತಾರೆ. ಮೇಲ್ವಿಚಾರಕನು ಜೀವನದ ಪ್ರತಿಯೊಂದು ವಿಷಯದಲ್ಲೂ ಬೈಬಲ್‌ ಹೇಳುವ ಪ್ರಕಾರ ನಡೆಯುತ್ತಾನೆ ಎಂದು ಎಲ್ಲರಿಗೂ ಗೊತ್ತಾಗುವ ಹಾಗೆ ಇರಬೇಕು.

ಮೇಲ್ವಿಚಾರಕರಾಗಲು ಬಯಸುವ ಸಹೋದರರಲ್ಲಿ ಬೈಬಲ್‌ ತಿಳಿಸುವ ಅರ್ಹತೆಗಳು ಇರಲೇಬೇಕು. ಆಗ ಮಾತ್ರ ಅವರು ಸಭೆಯನ್ನು ಚೆನ್ನಾಗಿ ನೋಡಿಕೊಳ್ಳಲು ಆಗುತ್ತದೆ

5 ಅಪೊಸ್ತಲ ಪೌಲನು ಮೇಲ್ವಿಚಾರಕನ ಅರ್ಹತೆಗಳ ಕುರಿತು ತಿಮೊಥೆಯನಿಗೆ ಹೀಗೆ ಬರೆದನು: “ಯಾವನಾದರೂ ಮೇಲ್ವಿಚಾರಕನ ಕೆಲಸವನ್ನು ಎಟುಕಿಸಿಕೊಳ್ಳಲು ಪ್ರಯತ್ನಿಸುತ್ತಿರುವಲ್ಲಿ ಅವನು ಒಳ್ಳೇ ಕಾರ್ಯವನ್ನು ಅಪೇಕ್ಷಿಸುವವನಾಗಿದ್ದಾನೆ. ಆದುದರಿಂದ, ಮೇಲ್ವಿಚಾರಕನು ದೋಷಾರೋಪಣೆಯಿಲ್ಲದವನೂ ಏಕಪತ್ನಿಯುಳ್ಳವನೂ ಮಿತಸ್ವಭಾವದವನೂ ಸ್ವಸ್ಥಬುದ್ಧಿಯುಳ್ಳವನೂ ವ್ಯವಸ್ಥಿತನೂ ಅತಿಥಿಸತ್ಕಾರಮಾಡುವವನೂ ಬೋಧಿಸಲು ಅರ್ಹನೂ ಆಗಿರಬೇಕು. ಅವನು ಕುಡಿದು ಜಗಳಮಾಡುವವನೂ ಹೊಡೆಯುವವನೂ ಆಗಿರದೆ ನ್ಯಾಯಸಮ್ಮತನಾಗಿರಬೇಕು; ಆಕ್ರಮಣಶೀಲನೂ ಹಣದಾಸೆಯುಳ್ಳವನೂ ಆಗಿರದೆ ತನ್ನ ಸ್ವಂತ ಮನೆವಾರ್ತೆಯವರನ್ನು ಉತ್ತಮವಾದ ರೀತಿಯಲ್ಲಿ ಮೇಲ್ವಿಚಾರಣೆಮಾಡುವವನೂ ಪೂರ್ಣ ಗಂಭೀರತೆಯೊಂದಿಗೆ ಮಕ್ಕಳನ್ನು ಅಧೀನದಲ್ಲಿಟ್ಟುಕೊಂಡವನೂ ಆಗಿರಬೇಕು. (ತನ್ನ ಸ್ವಂತ ಮನೆವಾರ್ತೆಯನ್ನು ಹೇಗೆ ಮೇಲ್ವಿಚಾರಣೆಮಾಡಬೇಕೆಂದು ತಿಳಿಯದವನು ದೇವರ ಸಭೆಯನ್ನು ಹೇಗೆ ತಾನೇ ನೋಡಿಕೊಳ್ಳುವನು?) ಅವನು ನವಶಿಷ್ಯನಾಗಿರಬಾರದು, ಏಕೆಂದರೆ ಅಂಥವನು ಹೆಮ್ಮೆಯಿಂದ ಉಬ್ಬಿಕೊಂಡವನಾಗಿ ಪಿಶಾಚನಿಗೆ ಪ್ರಾಪ್ತವಾದ ನ್ಯಾಯತೀರ್ಪಿಗೆ ಒಳಗಾಗಬಹುದು. ಇದಲ್ಲದೆ, ಅವನು ನಿಂದೆಗೂ ಪಿಶಾಚನ ಉರ್ಲಿಗೂ ಬೀಳದಂತೆ ಹೊರಗಿನ ಜನರಿಂದಲೂ ಉತ್ತಮ ಸಾಕ್ಷಿಯನ್ನು ಹೊಂದಿದವನಾಗಿರಬೇಕು.”—1 ತಿಮೊ. 3:1-7.

6 ಪೌಲ ತೀತನಿಗೆ ಹೀಗೆ ಬರೆದನು: “ನಾನು ನಿನಗೆ ಆಜ್ಞಾಪಿಸಿದಂತೆ, ಕ್ರೇತದಲ್ಲಿ ಲೋಪವುಳ್ಳ ವಿಷಯಗಳನ್ನು ನೀನು ಸರಿಪಡಿಸಲು ಸಾಧ್ಯವಾಗುವಂತೆಯೂ ಪಟ್ಟಣ ಪಟ್ಟಣಗಳಲ್ಲಿ ಹಿರೀಪುರುಷರ ನೇಮಕಗಳನ್ನು ಮಾಡಲು ಸಾಧ್ಯವಾಗುವಂತೆಯೂ ನಾನು ನಿನ್ನನ್ನು ಅಲ್ಲೇ ಬಿಟ್ಟುಬಂದೆನು. ನೇಮಿಸಲ್ಪಡುವವನು ನಿಂದಾರಹಿತನೂ ಏಕಪತ್ನಿಯುಳ್ಳವನೂ ವಿಶ್ವಾಸಿಗಳಾದ ಮಕ್ಕಳನ್ನು ಹೊಂದಿರುವವನೂ ಆಗಿರಬೇಕು; ಅವರು ಅತಿಭೋಗಾಸಕ್ತಿಯ ಅಪವಾದವಿಲ್ಲದವರು ಅಥವಾ ಹತೋಟಿಯಲ್ಲಿಡಲಾಗದವರು ಎನಿಸಿಕೊಂಡವರಾಗಿರಬಾರದು. ಏಕೆಂದರೆ ಒಬ್ಬ ಮೇಲ್ವಿಚಾರಕನು ದೇವರ ಮನೆವಾರ್ತೆಯವನಾಗಿರುವುದರಿಂದ ನಿಂದಾರಹಿತನಾಗಿರಬೇಕು; ಅವನು ಸ್ವೇಚ್ಛಾಪರನೂ ಮುಂಗೋಪಿಯೂ ಕುಡಿದು ಜಗಳಮಾಡುವವನೂ ಹೊಡೆಯುವವನೂ ಅಪ್ರಾಮಾಣಿಕ ಲಾಭಕ್ಕಾಗಿ ಆಶೆಪಡುವವನೂ ಆಗಿರದೆ ಅತಿಥಿಸತ್ಕಾರಮಾಡುವವನೂ ಒಳ್ಳೇತನವನ್ನು ಪ್ರೀತಿಸುವವನೂ ಸ್ವಸ್ಥಬುದ್ಧಿಯುಳ್ಳವನೂ ನೀತಿವಂತನೂ ನಿಷ್ಠಾವಂತನೂ ಸ್ವನಿಯಂತ್ರಣವುಳ್ಳವನೂ ಸ್ವಸ್ಥಬೋಧನೆಯ ಮೂಲಕ ಬುದ್ಧಿಹೇಳಲು ಮತ್ತು ಎದುರುಮಾತಾಡುವವರನ್ನು ಖಂಡಿಸಲು ಶಕ್ತನಾಗಿರುವಂತೆ ತನ್ನ ಬೋಧನಾ ಕಲೆಯ ವಿಷಯದಲ್ಲಿ ನಂಬತಕ್ಕ ವಾಕ್ಯವನ್ನು ದೃಢವಾಗಿ ಹಿಡಿದುಕೊಂಡವನೂ ಆಗಿರಬೇಕು.”—ತೀತ 1:5-9.

7 ಈ ಪಟ್ಟಿಯನ್ನು ನೋಡಿ ಸಹೋದರರು, ‘ಅಬ್ಬಾ ಮೇಲ್ವಿಚಾರಕರಾಗಲು ಇಷ್ಟೆಲ್ಲ ಮಾಡಬೇಕಾ’ ಎಂದು ನೆನಸಿ ಹಿಂಜರಿಯಬಾರದು. ಆ ವಚನಗಳಲ್ಲಿರುವ ಗುಣಗಳನ್ನು ಅವರು ತೋರಿಸುವಾಗ ಸಭೆಯಲ್ಲಿರುವ ಇತರರೂ ಅವುಗಳನ್ನು ಬೆಳೆಸಿಕೊಳ್ಳಲು ಪ್ರೋತ್ಸಾಹ ಪಡೆಯುತ್ತಾರೆ. “ಮನುಷ್ಯರಲ್ಲಿ ದಾನಗಳನ್ನು” ದೇವರು ಕೊಟ್ಟಿರುವ ಉದ್ದೇಶ ‘ಪವಿತ್ರ ಜನರನ್ನು ಸರಿಹೊಂದಿಸಲಿಕ್ಕಾಗಿ, ಶುಶ್ರೂಷೆಯ ಕೆಲಸಕ್ಕಾಗಿ ಮತ್ತು ಕ್ರಿಸ್ತನ ದೇಹವನ್ನು ಕಟ್ಟುವುದಕ್ಕಾಗಿಯೇ. ನಾವೆಲ್ಲರೂ ನಂಬಿಕೆಯಲ್ಲಿಯೂ ದೇವಕುಮಾರನ ಕುರಿತಾದ ನಿಷ್ಕೃಷ್ಟ ಜ್ಞಾನದಲ್ಲಿಯೂ ಏಕತೆಯನ್ನು ಹೊಂದಿ ಪೂರ್ಣವಾಗಿ ಬೆಳೆದ ಮನುಷ್ಯರಾಗಿ ಕ್ರಿಸ್ತನ ಸಂಪೂರ್ಣತೆಗೆ ಸೇರಿರುವ ಪರಿಪಕ್ವತೆಯ ಪ್ರಮಾಣವನ್ನು ಮುಟ್ಟುವಂತೆ’ ಅವರು ಸಹಾಯಮಾಡುತ್ತಾರೆ.—ಎಫೆ. 4:8, 12, 13.

8 ಮೇಲ್ವಿಚಾರಕರು ನವಶಿಷ್ಯರಾಗಿರಬಾರದು ಅಂದರೆ ಹೊಸದಾಗಿ ಸತ್ಯಕ್ಕೆ ಬಂದವರು, ಎಳೆಯ ಹುಡುಗರು ಆಗಿರಬಾರದು. ಅವರು ಅನುಭವವಿರುವ ಕ್ರೈಸ್ತರಾಗಿರಬೇಕು, ಬೈಬಲಿನ ಒಳ್ಳೇ ಜ್ಞಾನವಿದ್ದು ವಚನಗಳ ಸರಿಯಾದ ಅರ್ಥ ತಿಳಿದವರಾಗಿರಬೇಕು. ಸಭೆಯ ಕಡೆಗೆ ಹೃತ್ಪೂರ್ವಕ ಪ್ರೀತಿಯಿರಬೇಕು. ಸಭೆಯಲ್ಲಿ ತಪ್ಪು ನಡೆದರೆ ಅದನ್ನು ಹೇಳುವ ಮತ್ತು ತಪ್ಪು ಮಾಡಿದವನನ್ನು ತಿದ್ದುವ ಧೈರ್ಯ ಇರಬೇಕು. ಆಗ ಯಾರಾದರೂ ಸ್ವಾರ್ಥ ಲಾಭಕ್ಕಾಗಿ ಸಭೆಯ ಸದಸ್ಯರನ್ನು ಬಳಸಿಕೊಳ್ಳುತ್ತಿದ್ದರೆ ಅವರನ್ನು ಸಂರಕ್ಷಿಸಲು ಆಗುತ್ತದೆ. (ಯೆಶಾ. 32:2) ಪ್ರೌಢ ಪುರುಷರೆಂದು ಮತ್ತು ಸಭೆಯ ಕಡೆಗೆ ನಿಜವಾದ ಕಾಳಜಿ ಇರುವವರೆಂದು ಎಲ್ಲರೂ ಗುರುತಿಸುವಂತೆ ಮೇಲ್ವಿಚಾರಕರು ಇರಬೇಕು.

9 ಮೇಲ್ವಿಚಾರಕರಾಗಲು ಬಯಸುವವರು ಬೈಬಲ್‌ ಹೇಳುವಂತೆಯೇ ಜೀವಿಸಬೇಕು. ವಿವಾಹಿತನಾಗಿರುವಲ್ಲಿ ಮದುವೆಯ ವಿಷಯದಲ್ಲಿ ಯೆಹೋವನ ಮಟ್ಟಕ್ಕನುಸಾರ ಜೀವಿಸುವವನಾಗಿರಬೇಕು ಅಂದರೆ ಏಕಪತ್ನಿಯುಳ್ಳವನು, ತನ್ನ ಸ್ವಂತ ಮನೆವಾರ್ತೆಯವರನ್ನು ಉತ್ತಮವಾಗಿ ಮೇಲ್ವಿಚಾರಣೆಮಾಡುವವನು ಆಗಿರಬೇಕು. ವಿಶ್ವಾಸಿ ಮಕ್ಕಳು ಇರುವುದಾದರೆ ಅವರು ಪೂರ್ಣ ಗಂಭೀರತೆಯೊಂದಿಗೆ ಇರಬೇಕು. ಅವರ ಮೇಲೆ ಅತಿಭೋಗಾಸಕ್ತಿಯ ಅಪವಾದ ಇರಬಾರದು ಅಥವಾ ಹತೋಟಿಯಲ್ಲಿಡಲಾಗದವರು ಆಗಿರಬಾರದು. ಆಗಲೇ ಆ ಸಹೋದರನ ಹತ್ತಿರ ಇತರರು ಕುಟುಂಬ ಜೀವನಕ್ಕೆ ಮತ್ತು ಕ್ರೈಸ್ತ ಜೀವನಕ್ಕೆ ಬೇಕಾದ ಸಲಹೆಗಳನ್ನು ಭರವಸೆಯಿಂದ ಕೇಳುವರು. ಮೇಲ್ವಿಚಾರಕನು ದೋಷಾರೋಪಣೆಯಿಲ್ಲದವನೂ ಅಪವಾದವಿಲ್ಲದವನೂ ಹೊರಗಿನ ಜನರಿಂದಲೂ ಉತ್ತಮ ಸಾಕ್ಷಿಯನ್ನು ಹೊಂದಿದವನೂ ಆಗಿರಬೇಕು. ಬೇರೆಯವರು ತಪ್ಪು ಹೊರಿಸುವಂಥ ಕೆಟ್ಟ ನಡತೆ ಅವನಲ್ಲಿರಬಾರದು. ಒಂದುವೇಳೆ ಇದ್ದರೆ ಸಭೆಯ ಹೆಸರು ಹಾಳಾಗುತ್ತದೆ. ಗಂಭೀರ ತಪ್ಪು ಮಾಡಿ ಇತ್ತೀಚಿಗೆ ತಿದ್ದುಪಾಟು ಪಡೆದ ವ್ಯಕ್ತಿ ಅವನಾಗಿರಬಾರದು. ಅವನು ಒಳ್ಳೇ ಮಾದರಿಯಾಗಿರಬೇಕು. ಆಗ ಎಲ್ಲರೂ ಅವನನ್ನು ಅನುಕರಿಸಲು ಇಷ್ಟಪಡುವರು ಮತ್ತು ಅವನು ಸರಿಯಾದ ಮಾರ್ಗದರ್ಶನವನ್ನೇ ಕೊಡುತ್ತಾನೆಂಬ ಭರವಸೆ ಅವರಿಗಿರುತ್ತದೆ.—1 ಕೊರಿಂ. 11:1; 16:15, 16.

10 ಪ್ರಾಚೀನ ಇಸ್ರಾಯೇಲಿನ ಹಿರಿಯರು “ವಿವೇಕಿಗಳು, ವಿವೇಚನೆಯುಳ್ಳವರು, ಅನುಭವಸ್ಥರು” ಆಗಿದ್ದರು. ಇಂದಿನ ಮೇಲ್ವಿಚಾರಕರು ಸಹ ಅದೇ ರೀತಿ ಇರಬೇಕು. (ಧರ್ಮೋ. 1:13, NW) ಅವರು ಪರಿಪೂರ್ಣರಾಗಿ ಇರಬೇಕೆಂದಲ್ಲ. ಆದರೆ ದೇವಭಕ್ತಿಯಿರುವ ವ್ಯಕ್ತಿ, ಪ್ರಾಮಾಣಿಕ ಎಂಬ ಹೆಸರನ್ನು ಸಭೆಯಲ್ಲೂ ಸಮಾಜದಲ್ಲೂ ಪಡೆದಿರಬೇಕು. ಬೈಬಲ್‌ ತತ್ವಗಳ ಪ್ರಕಾರ ನಡೆಯುವವರೆಂದು ತಮ್ಮ ಜೀವನದಲ್ಲಿ ತೋರಿಸಿಕೊಟ್ಟಿರಬೇಕು. ಅವರ ಮೇಲೆ ಯಾವುದೇ ನಿಂದೆ ಇಲ್ಲದಿರುವಾಗ ಸಭೆಯಲ್ಲಿ ಹಿಂಜರಿಕೆಯಿಲ್ಲದೆ ಮಾತಾಡಲು ಆಗುತ್ತದೆ.—ರೋಮ. 3:23.

11 ಮೇಲ್ವಿಚಾರಕರು ಮಿತಸ್ವಭಾವದವರು ಆಗಿರಬೇಕು ಅಂದರೆ ಅವರು ಯಾವುದನ್ನೂ ಅತಿಯಾಗಿ ಮಾಡಬಾರದು. ಬೇರೆಯವರೊಂದಿಗೆ ನಡೆದುಕೊಳ್ಳುವುದರಲ್ಲಿ ಅತಿರೇಕಕ್ಕೆ ಹೋಗಬಾರದು. ತಮ್ಮದೇ ಆಗಬೇಕೆಂದು ಒತ್ತಡ ಹೇರಬಾರದು. ಜೀವನದಲ್ಲಿ ಸಮತೋಲನ ಇರಬೇಕು. ಸ್ವನಿಯಂತ್ರಣ ಇರಬೇಕು ಅಂದರೆ ಯೋಚನೆ, ಭಾವನೆ, ಆಸೆಗಳನ್ನು ನಿಯಂತ್ರಣದಲ್ಲಿಡಲು ಶಕ್ತರಾಗಿರಬೇಕು. ತಿನ್ನುವುದರಲ್ಲಿ ಕುಡಿಯುವುದರಲ್ಲಿ ಮನರಂಜನೆ-ಹವ್ಯಾಸಗಳಲ್ಲಿ ಮಿತಿಯಲ್ಲಿರಬೇಕು. ಅತಿಯಾಗಿ ಕುಡಿಯಬಾರದು. ಕುಡುಕರು ಎಂದು ಬೇರೆಯವರು ಕರೆಯುವ ಹಾಗೆ ವರ್ತಿಸಬಾರದು. ಕುಡಿದು ಮತ್ತರಾದವರಿಗೆ ನಡೆ-ನುಡಿಯಲ್ಲಿ ನಿಯಂತ್ರಣ ಇರುವುದಿಲ್ಲ. ಹಾಗಾಗಿ ಸಭೆಯ ಆರೈಕೆ ಮಾಡಲು ಮತ್ತು ಬೋಧಿಸಲು ಅವರಿಂದ ಸಾಧ್ಯವಿಲ್ಲ.

12 ಮೇಲ್ವಿಚಾರಕನು ವ್ಯವಸ್ಥಿತನು ಆಗಿರಬೇಕು. ಇದರರ್ಥ ಅವನಲ್ಲಿ ಒಳ್ಳೇ ಅಭ್ಯಾಸಗಳು ಇರಬೇಕು. ಅವನ ತೋರಿಕೆ, ಮನೆ, ಅವನು ಪ್ರತಿದಿನ ಮಾಡುವ ಕೆಲಸಗಳಲ್ಲಿ ಅದು ತೋರಿಬರಬೇಕು. ಅವನಿಗೆ ತನ್ನ ಕರ್ತವ್ಯಗಳು ಏನೆಂದು ಗೊತ್ತಿರಬೇಕು. ಒಳ್ಳೇ ಯೋಜನೆ ಮಾಡಿ ಅವನ್ನು ಮಾಡಿಮುಗಿಸಬೇಕು, ನಾಳೆ ನಾಳೆ ಎಂದು ಮುಂದೂಡಬಾರದು. ಅವನು ಯಾವಾಗಲೂ ಬೈಬಲ್‌ ತತ್ವಗಳಿಗೆ ತಕ್ಕಂತೆ ನಡೆಯಬೇಕು.

13 ಮೇಲ್ವಿಚಾರಕನು ನ್ಯಾಯಸಮ್ಮತನಾಗಿರಬೇಕು. ಇದರರ್ಥ ಅವನು ಇತರ ಹಿರಿಯರೊಂದಿಗೆ ಸಹಕರಿಸುತ್ತಾ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ತನ್ನ ಬಗ್ಗೆ ಅತಿಯಾಗಿ ಭಾವಿಸಿಕೊಳ್ಳಬಾರದು. ಸಾಮರ್ಥ್ಯಕ್ಕೆ ಮೀರಿದ್ದನ್ನು ಮಾಡುವಂತೆ ಇತರರನ್ನು ಒತ್ತಾಯಿಸಬಾರದು. ‘ನಾನು ಹೇಳೋದೇ ಸರಿ, ನನ್ನ ಅಭಿಪ್ರಾಯವೇ ಶ್ರೇಷ್ಠ’ ಎಂದು ಭಾವಿಸಬಾರದು. ಏಕೆಂದರೆ ಕೆಲವು ಗುಣ-ಸಾಮರ್ಥ್ಯಗಳಲ್ಲಿ ಇತರರು ಅವನಿಗಿಂತ ಉತ್ತಮರಾಗಿರಬಹುದು. ನ್ಯಾಯಸಮ್ಮತ ವ್ಯಕ್ತಿ ತನ್ನ ಅಭಿಪ್ರಾಯವನ್ನು ಪೂರ್ತಿಯಾಗಿ ಬೈಬಲಿನ ಮೇಲೆ ಆಧರಿಸುತ್ತಾನೆ ಮತ್ತು ಕ್ರಿಸ್ತನ ಮಾದರಿಯನ್ನು ಅನುಕರಿಸಲು ಶ್ರಮಿಸುತ್ತಾನೆ. (ಫಿಲಿ. 2:2-8) ಹಿರಿಯನು ಜಗಳಮಾಡುವವನೂ ಹೊಡೆಯುವವನೂ ಆಕ್ರಮಣಶೀಲನೂ ಆಗಿರಬಾರದು. ಬದಲಿಗೆ ಎಲ್ಲರಿಗೆ ಗೌರವ ಕೊಡಬೇಕು, ಇತರರನ್ನು ತನಗಿಂತ ಶ್ರೇಷ್ಠರೆಂದು ಭಾವಿಸಬೇಕು. ಸ್ವೇಚ್ಛಾಪರನು ಆಗಿರಬಾರದು ಅಂದರೆ ‘ನಾನು ಹೇಳಿದ್ದೇ ಆಗಬೇಕು’ ಎಂದು ಹಟ ಹಿಡಿಯಬಾರದು. ಮುಂಗೋಪಿ ಆಗಿರಬಾರದು. ಶಾಂತಿ-ಸಮಾಧಾನದಿಂದ ವರ್ತಿಸಬೇಕು.

14 ಮೇಲ್ವಿಚಾರಕನು ಸ್ವಸ್ಥಬುದ್ಧಿಯುಳ್ಳವನು ಆಗಿರಬೇಕು. ಇದರರ್ಥ ಕಷ್ಟದ ಸನ್ನಿವೇಶದಲ್ಲೂ ಸರಿಯಾಗಿ ಯೋಚಿಸಿ ತೀರ್ಮಾನ ತಕ್ಕೊಳ್ಳುವವನು ಆಗಿರಬೇಕು. ದುಡುಕಿ ನಿರ್ಣಯ ಮಾಡಬಾರದು. ಬೈಬಲಿನ ತತ್ವಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡು ಅನ್ವಯಿಸಲು ಗೊತ್ತಿರಬೇಕು. ಇತರರ ಸಲಹೆ-ನಿರ್ದೇಶನಗಳನ್ನು ಸ್ವೀಕರಿಸಬೇಕು. ಅವನು ಹೇಳೋದೊಂದು ಮಾಡೋದು ಇನ್ನೊಂದು ಆಗಿರಬಾರದು.

15 ಮೇಲ್ವಿಚಾರಕನು ಒಳ್ಳೇತನವನ್ನು ಪ್ರೀತಿಸುವವನೂ ನೀತಿವಂತನೂ ನಿಷ್ಠಾವಂತನೂ ಆಗಿರಬೇಕು. ಈ ಗುಣಗಳು ಅವನು ಇತರರೊಂದಿಗೆ ನಡೆದುಕೊಳ್ಳುವುದರಲ್ಲಿ ಕಂಡುಬರಬೇಕು. ಸರಿ ಯಾವುದೋ ಅದರ ಪಕ್ಷದಲ್ಲಿ ಸ್ಥಿರ ನಿಲ್ಲಬೇಕು. ದೇವಭಕ್ತಿ ಅವನಲ್ಲಿ ಯಾವತ್ತೂ ಕಡಿಮೆಯಾಗಬಾರದು. ದೇವರ ನೀತಿಯ ತತ್ವಗಳನ್ನು ಯಾವಾಗಲೂ ಪಾಲಿಸಬೇಕು. ಬೇರೆಯವರು ಅವನಲ್ಲಿ ಭರವಸೆಯಿಟ್ಟು ಹೇಳಿದ್ದನ್ನು ಇತರರಿಗೆ ಹೇಳಬಾರದು. ಅವನು ಉದಾರವಾಗಿ ಅತಿಥಿಸತ್ಕಾರಮಾಡುವವನು ಆಗಿರಬೇಕು. ತನ್ನ ಸಮಯ, ಶಕ್ತಿ, ಸಂಪನ್ಮೂಲಗಳನ್ನು ಇತರರ ಪ್ರಯೋಜನಕ್ಕಾಗಿ ಧಾರಾಳವಾಗಿ ಬಳಸುವವನು ಆಗಿರಬೇಕು.—ಅ. ಕಾ. 20:33-35.

16 ಮೇಲ್ವಿಚಾರಕನು ತನ್ನ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸಬೇಕಾದರೆ ಬೋಧಿಸಲು ಅರ್ಹನಾಗಿರಬೇಕು. ಅವನು ‘ಸ್ವಸ್ಥಬೋಧನೆಯ ಮೂಲಕ ಬುದ್ಧಿಹೇಳಲು, ಎದುರುಮಾತಾಡುವವರನ್ನು ಖಂಡಿಸಲು ಶಕ್ತನಾಗಿರಬೇಕು. ಇದಕ್ಕಾಗಿ ಅವನು ತನ್ನ ಬೋಧನಾ ಕಲೆಯಲ್ಲಿ ನಂಬತಕ್ಕ ವಾಕ್ಯವನ್ನು ದೃಢವಾಗಿ ಹಿಡಿದುಕೊಂಡಿರಬೇಕು.’ (ತೀತ 1:9) ಒಂದು ವಿಷಯವನ್ನು ಚರ್ಚಿಸುವಾಗ ಕಾರಣ, ಆಧಾರಗಳನ್ನು ಕೊಟ್ಟು ಮಾತಾಡುವವನು, ಆಕ್ಷೇಪ ಬಂದರೆ ಜಯಿಸುವವನು ಅವನಾಗಿರಬೇಕು. ಮನಗಾಣಿಸುವ ಮತ್ತು ನಂಬಿಕೆಯನ್ನು ಬಲಗೊಳಿಸುವ ರೀತಿಯಲ್ಲಿ ಬೈಬಲ್‌ ವಚನಗಳ ಅನ್ವಯವನ್ನು ತಿಳಿಸಬೇಕು. ‘ಅನುಕೂಲವಾದ ಸಮಯದಲ್ಲಿ ಅಷ್ಟೇ ಅಲ್ಲ ತೊಂದರೆಯ ಸಮಯದಲ್ಲೂ’ ಆ ರೀತಿ ಬೋಧಿಸುವ ಸಾಮರ್ಥ್ಯ ಅವನಲ್ಲಿರಬೇಕು. (2 ತಿಮೊ. 4:2) ತಪ್ಪು ಮಾಡಿದವರನ್ನು ಸೌಮ್ಯವಾಗಿ ತಿದ್ದಲು ಮತ್ತು ಸಂಶಯ ಇರುವವರಿಗೆ ಸತ್ಯವನ್ನು ಮನಗಾಣಿಸುವ ಹಾಗೆ ಮಾತಾಡಲು ತಾಳ್ಮೆ ಇರಬೇಕು. ದೇವರಲ್ಲಿ ಅವರಿಗಿರುವ ನಂಬಿಕೆಯನ್ನು ಆಧಾರವಾಗಿಟ್ಟು ಒಳ್ಳೇ ಕಾರ್ಯಗಳನ್ನು ಮಾಡುವಂತೆ ಹುರಿದುಂಬಿಸಬೇಕು. ಹೀಗೆ ಒಬ್ಬೊಬ್ಬರಿಗೂ ಇಡೀ ಸಭೆಗೂ ಚೆನ್ನಾಗಿ ಬೋಧಿಸುವ ಸಹೋದರನು ಮೇಲ್ವಿಚಾರಕನಾಗಿರಲು ಅರ್ಹನು.

17 ಸಭಾ ಹಿರಿಯರು ಹುರುಪಿನಿಂದ ಸುವಾರ್ತೆ ಸಾರಬೇಕು. ಹೀಗೆ ಜೀವನದಲ್ಲಿ ಸಾರುವುದಕ್ಕೆ ಪ್ರಥಮ ಸ್ಥಾನ ಕೊಟ್ಟ ಯೇಸುವನ್ನು ಅವರು ಅನುಕರಿಸಬೇಕು. ಯೇಸು ತನ್ನ ಶಿಷ್ಯರ ಕಾಳಜಿ ವಹಿಸಿ ಅವರು ಕೂಡ ಹುರುಪಿನ ಪ್ರಚಾರಕರಾಗುವಂತೆ ಸಹಾಯಮಾಡಿದನು. (ಮಾರ್ಕ 1:38; ಲೂಕ 8:1) ಅದೇ ರೀತಿ ಹಿರಿಯರು ತಮಗೆ ಅನೇಕ ಕೆಲಸಗಳು ಇರುವುದಾದರೂ ಸುವಾರ್ತೆ ಸಾರಲು ಸಮಯ ಕೊಟ್ಟರೆ ಸಭೆಯಲ್ಲಿರುವವರೂ ಅವರಿಂದ ಸ್ಫೂರ್ತಿ ಪಡೆಯುತ್ತಾರೆ. ಹಿರಿಯರು ತಮ್ಮ ಕುಟುಂಬದೊಂದಿಗೆ ಮತ್ತು ಸಹೋದರರೊಂದಿಗೆ ಸೇರಿ ಸೇವೆ ಮಾಡುವಾಗ “ಉತ್ತೇಜನವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು” ಆಗುತ್ತದೆ.—ರೋಮ. 1:11, 12.

18 ಇಷ್ಟೆಲ್ಲ ಅರ್ಹತೆಗಳನ್ನು ನೋಡುವಾಗ ಮೇಲ್ವಿಚಾರಕನಿಂದ ತುಂಬ ಅಪೇಕ್ಷಿಸಲಾಗುತ್ತದೆ ಎಂದು ಅನಿಸಬಹುದು. ಒಬ್ಬ ಮೇಲ್ವಿಚಾರಕನಲ್ಲಿ ಆ ಎಲ್ಲ ಅರ್ಹತೆಗಳು ಪೂರ್ಣವಾಗಿ ಇರಬೇಕೆಂದಲ್ಲ. ಆದರೆ ಯಾವುದಾದರೂ ಒಂದು ಅರ್ಹತೆಯಲ್ಲಿ ತುಂಬ ಕೊರತೆಯಿದ್ದರೆ ಅವನಲ್ಲಿ ಗಂಭೀರ ಬಲಹೀನತೆಯಿದೆ ಎಂದರ್ಥ. ಕೆಲವು ಹಿರಿಯರು ಕೆಲವು ಗುಣಗಳಲ್ಲಿ ಉತ್ತಮರಾಗಿದ್ದರೆ ಇನ್ನಿತರರು ಬೇರೆ ಗುಣಗಳಲ್ಲಿ ಉತ್ತಮರಾಗಿರಬಹುದು. ಹೀಗೆ ಸಭೆಯನ್ನು ಚೆನ್ನಾಗಿ ಮೇಲ್ವಿಚಾರಣೆ ಮಾಡಲು ಬೇಕಾದ ಎಲ್ಲ ಉತ್ತಮ ಗುಣಗಳು ಹಿರಿಯರ ಮಂಡಲಿಯಲ್ಲಿ ಇರುತ್ತವೆ.

19 ಒಬ್ಬ ಸಹೋದರನನ್ನು ಹಿರಿಯನಾಗಲು ಶಿಫಾರಸ್ಸು ಮಾಡುವಾಗ ಹಿರಿಯರ ಮಂಡಲಿಯು ಪೌಲನ ಈ ಮಾತುಗಳನ್ನು ನೆನಪಿನಲ್ಲಿಡಬೇಕು: “ನಿಮ್ಮಲ್ಲಿ ಯಾವನೂ ತನ್ನ ಕುರಿತು ಅಗತ್ಯಕ್ಕಿಂತ ಹೆಚ್ಚಾಗಿ ಭಾವಿಸಿಕೊಳ್ಳಬಾರದು; ಅದಕ್ಕೆ ಬದಲಾಗಿ ಪ್ರತಿಯೊಬ್ಬನು ತನಗೆ ದೇವರು ಹಂಚಿಕೊಟ್ಟಿರುವ ನಂಬಿಕೆಯ ಪರಿಮಾಣಕ್ಕೆ ಅನುಸಾರವಾಗಿ ಸ್ವಸ್ಥಬುದ್ಧಿಯುಳ್ಳವನಾಗಿರುವಂತೆ ಭಾವಿಸಿಕೊಳ್ಳಬೇಕು.” (ರೋಮ. 12:3) ಯಾರದ್ದಾದರೂ ಅರ್ಹತೆಗಳನ್ನು ಪರೀಕ್ಷಿಸುವಾಗ ಹಿರಿಯರು ತಮ್ಮನ್ನು ಇತರರಿಗಿಂತ ಶ್ರೇಷ್ಠರೆಂದು ಭಾವಿಸಬಾರದು. ‘ಅತಿ ನೀತಿವಂತರಾಗಿ’ ವರ್ತಿಸಬಾರದು. (ಪ್ರಸಂ. 7:16, ಪವಿತ್ರ ಗ್ರಂಥ ಬೈಬಲ್‌) ಹಿರಿಯರು ತಾವು ಶಿಫಾರಸ್ಸು ಮಾಡಲು ಬಯಸುವ ಸಹೋದರನಲ್ಲಿ ಬೈಬಲ್‌ ತಿಳಿಸುವ ಅರ್ಹತೆಗಳು ತಕ್ಕಮಟ್ಟಿಗೆ ಇವೆಯಾ ಎಂದು ಪರಿಶೀಲಿಸಬೇಕು. ಅವನಲ್ಲಿರುವ ಸಹಜವಾದ ಅಪರಿಪೂರ್ಣತೆಗಳ ಮೇಲೆ ತುಂಬ ಗಮನ ಕೊಡಬಾರದು. ಪಕ್ಷಪಾತ ಮಾಡಬಾರದು. ತಾವು ಮಾಡದಿರುವುದನ್ನು ಅವರಿಂದ ಅಪೇಕ್ಷಿಸಬಾರದು. ಹಿರಿಯರು ಶಿಫಾರಸ್ಸು ಮಾಡುವಾಗ ಯೆಹೋವನ ನೀತಿಯ ಮಟ್ಟಗಳಿಗೆ ಮಹತ್ವ ಕೊಡಬೇಕು ಮತ್ತು ಅವರು ಮಾಡುವ ಶಿಫಾರಸ್ಸು ಸಭೆಗೆ ಒಳಿತಾಗುವಂತೆ ಇರಬೇಕು. ಶಿಫಾರಸ್ಸು ಮಾಡುವ ಒಬ್ಬೊಬ್ಬ ಸಹೋದರನ ಕುರಿತು ಅವರು ಪ್ರಾರ್ಥಿಸಬೇಕು ಮತ್ತು ಪವಿತ್ರಾತ್ಮದ ಮಾರ್ಗದರ್ಶನದ ಪ್ರಕಾರ ನಡೆಯಬೇಕು. ಮೇಲ್ವಿಚಾರಕರಾಗಲು ಶಿಫಾರಸ್ಸು ಮಾಡುವುದು ಒಂದು ಗಂಭೀರ ಜವಾಬ್ದಾರಿ. ಹಾಗಾಗಿ ‘ಅವಸರದಿಂದ ಯಾವ ಮನುಷ್ಯನ ಮೇಲೂ ತಮ್ಮ ಹಸ್ತವನ್ನಿಟ್ಟು ಅವನನ್ನು ಸಭೆಯಲ್ಲಿ ನೇಮಿಸಬಾರದು’ ಎಂಬ ಎಚ್ಚರಿಕೆಯನ್ನು ಹಿರಿಯರು ಮನಸ್ಸಿನಲ್ಲಿಡಬೇಕು.—1 ತಿಮೊ. 5:21, 22.

ಪವಿತ್ರಾತ್ಮದ ಫಲ

20 ಬೈಬಲಿನಲ್ಲಿರುವ ಅರ್ಹತೆಗಳನ್ನು ಪಡೆದಿರುವ ಸಹೋದರರು ತಮ್ಮನ್ನು ಪವಿತ್ರಾತ್ಮ ಮಾರ್ಗದರ್ಶಿಸುತ್ತಿದೆ ಎಂದು ತೋರಿಸಿಕೊಡುತ್ತಾರೆ. ಮಾತ್ರವಲ್ಲ ಪವಿತ್ರಾತ್ಮದ ಫಲದ ಅಂಶಗಳನ್ನು ಅಂದರೆ “ಪ್ರೀತಿ, ಆನಂದ, ಶಾಂತಿ, ದೀರ್ಘ ಸಹನೆ, ದಯೆ, ಒಳ್ಳೇತನ, ನಂಬಿಕೆ, ಸೌಮ್ಯಭಾವ, ಸ್ವನಿಯಂತ್ರಣ”ವನ್ನು ತಮ್ಮ ಜೀವನದಲ್ಲಿ ತೋರಿಸುತ್ತಾರೆ. (ಗಲಾ. 5:22, 23) ಈ ಮೇಲ್ವಿಚಾರಕರು ಎಲ್ಲರಿಗೆ ಚೈತನ್ಯ ತರುತ್ತಾರೆ ಮತ್ತು ಪವಿತ್ರ ಸೇವೆಯನ್ನು ಒಗಟ್ಟಿನಿಂದ ಮಾಡಲು ಸಹಾಯಮಾಡುತ್ತಾರೆ. ಅವರ ನಡವಳಿಕೆ ಮತ್ತು ಪ್ರಯಾಸಕ್ಕೆ ಸಿಗುವ ಫಲಿತಾಂಶವು ಅವರನ್ನು ಪವಿತ್ರಾತ್ಮವೇ ನೇಮಿಸಿದೆಯೆಂದು ತೋರಿಸುತ್ತದೆ.—ಅ. ಕಾ. 20:28.

ಒಗ್ಗಟ್ಟಿನಿಂದ ಕೆಲಸಮಾಡುವ ಹಿರಿಯರು

21 ಹಿರಿಯರೆಲ್ಲರೂ ಹೆಗಲಿಗೆ ಹೆಗಲು ಕೊಟ್ಟು ಕೆಲಸಮಾಡುವುದು ಪ್ರಾಮುಖ್ಯ. ಆಗಲೇ ಸಭೆಯಲ್ಲಿ ಒಗ್ಗಟ್ಟಿರುತ್ತದೆ. ಹಿರಿಯರಲ್ಲಿ ಒಬ್ಬೊಬ್ಬರ ವ್ಯಕ್ತಿತ್ವ ಬೇರೆಬೇರೆ ಆಗಿರುವ ಕಾರಣ ಒಂದು ವಿಷಯವನ್ನು ಚರ್ಚಿಸುವಾಗ ಒಬ್ಬರ ಅಭಿಪ್ರಾಯ ಇನ್ನೊಬ್ಬರಿಗೆ ಒಪ್ಪಿಗೆ ಆಗದಿರಬಹುದು. ಆದರೂ ಒಬ್ಬರು ಮಾತಾಡುವಾಗ ಉಳಿದವರು ಗೌರವದಿಂದ ಕೇಳುವಲ್ಲಿ ಹಿರಿಯರ ಮಂಡಲಿಯಲ್ಲಿ ಒಗ್ಗಟ್ಟಿರುತ್ತದೆ. ಹಿರಿಯರ ಮಂಡಲಿಯು ಅಂತಿಮ ನಿರ್ಣಯಕ್ಕೆ ಬಂದಾಗ ಅದು ಬೈಬಲಿನ ತತ್ವಕ್ಕೆ ವಿರುದ್ಧವಾಗಿಲ್ಲದಿದ್ದರೆ ಹಿರಿಯನು ತನ್ನ ಅಭಿಪ್ರಾಯ ಭಿನ್ನವಾಗಿದ್ದರೂ ಅದಕ್ಕೆ ಮಣಿದು ಬೆಂಬಲಿಸಬೇಕು. ಮಣಿಯುವ ಗುಣವಿದ್ದರೆ ಹಿರಿಯನನ್ನು “ಮೇಲಣಿಂದ ಬರುವ ವಿವೇಕ” ಮಾರ್ಗದರ್ಶಿಸುತ್ತಿದೆ ಎಂದು ಗೊತ್ತಾಗುತ್ತದೆ. ಆ ವಿವೇಕ “ಶಾಂತಿಶೀಲವಾದದ್ದು, ನ್ಯಾಯಸಮ್ಮತವಾದದ್ದು.” (ಯಾಕೋ. 3:17, 18) ಯಾವ ಹಿರಿಯನೂ ಇನ್ನೊಬ್ಬ ಹಿರಿಯನಿಗಿಂತ ಶ್ರೇಷ್ಠನೆಂದು ಭಾವಿಸಬಾರದು. ತಾನು ಹೇಳಿದ್ದೇ ಎಲ್ಲರೂ ಕೇಳಬೇಕು ಅನ್ನುವಂತೆ ವರ್ತಿಸಬಾರದು. ಸಭೆಯ ಒಳ್ಳೇದಕ್ಕಾಗಿ ಹಿರಿಯರು ಪರಸ್ಪರ ಸಹಕಾರ ಕೊಟ್ಟು ಕೆಲಸಮಾಡುವಾಗ ನಿಜಕ್ಕೂ ಅವರು ಯೆಹೋವನೊಂದಿಗೇ ಸಹಕರಿಸಿದಂತೆ!—1 ಕೊರಿಂ. 12ನೇ ಅಧ್ಯಾಯ; ಕೊಲೊ. 2:19.

ಅರ್ಹತೆಗಳನ್ನು ಪಡೆಯಲು ಪ್ರಯತ್ನಿಸಿ

22 ಪ್ರೌಢ ಸಹೋದರರು ಮೇಲ್ವಿಚಾರಕರಾಗಿ ಸೇವೆ ಮಾಡುವ ಅಪೇಕ್ಷೆಯನ್ನು ಬೆಳೆಸಿಕೊಳ್ಳಬೇಕು. (1 ತಿಮೊ. 3:1) ಅದೇ ಸಮಯದಲ್ಲಿ ಒಬ್ಬ ಹಿರಿಯನು ಸಹೋದರರ ಆರೈಕೆ ಮಾಡಬೇಕು, ಸ್ವತ್ಯಾಗ ಮಾಡಬೇಕು ಅಂದರೆ ಸಹೋದರರ ಆಧ್ಯಾತ್ಮಿಕ ಮತ್ತು ಇತರ ಅವಶ್ಯಕತೆಗಳನ್ನು ಪೂರೈಸಲು ತಮ್ಮನ್ನೇ ಅರ್ಪಿಸಿಕೊಳ್ಳಬೇಕು ಎಂದು ನೆನಪಿನಲ್ಲಿಡಬೇಕು. ಬೈಬಲ್‌ ಹೇಳುವ ಅರ್ಹತೆಗಳನ್ನು ಪಡೆಯಲು ಸಹ ಪ್ರಯಾಸಪಡಬೇಕು.

ಸನ್ನಿವೇಶ ಬದಲಾದಾಗ . . .

23 ಅನೇಕ ವರ್ಷಗಳಿಂದ ಸಭಾ ಹಿರಿಯನಾಗಿ ನಂಬಿಗಸ್ತಿಕೆಯಿಂದ ಸೇವೆಮಾಡುತ್ತಿರುವ ಸಹೋದರನಿಗೆ ಅನಾರೋಗ್ಯ ಅಥವಾ ವೃದ್ಧಾಪ್ಯದ ಕಾರಣ ಮುಂಚಿನಷ್ಟು ಮಾಡಲು ಆಗದಿರಬಹುದು. ಆದರೂ ಅವನನ್ನು ಹಿರಿಯನನ್ನಾಗಿಯೇ ವೀಕ್ಷಿಸಿ ಇತರ ಹಿರಿಯರಿಗೆ ಕೊಡುವ ಗೌರವವನ್ನು ಅವನಿಗೂ ಕೊಡಬೇಕು. ದೇಹದೌರ್ಬಲ್ಯವಿದೆ ಎಂದ ಮಾತ್ರಕ್ಕೆ ಅವನು ಹಿರಿಯನ ಸ್ಥಾನ ಬಿಟ್ಟುಬಿಡಬೇಕೆಂದಿಲ್ಲ. ಸಭೆಯ ಪರಿಪಾಲನೆ ಮಾಡಲು ತಮ್ಮಿಂದಾದಷ್ಟು ಶ್ರಮಿಸುತ್ತಿರುವ ಇಂಥ ಹಿರಿಯರು ಹೆಚ್ಚು ಗೌರವಕ್ಕೆ ಅರ್ಹರು.

24 ಹೆಚ್ಚು ಸೇವೆಮಾಡಲು ಆಗದ ಕಾರಣ ಒಬ್ಬ ಹಿರಿಯನು ತನ್ನ ಸ್ಥಾನವನ್ನು ಬಿಡಲು ಬಯಸುವಲ್ಲಿ ಅವನು ಹಾಗೆ ಮಾಡಬಹುದು. (1 ಪೇತ್ರ 5:2) ಆಗಲೂ ಅವನಿಗೆ ಗೌರವ ಕೊಡಬೇಕು. ಅವನಿಗೆ ಮೊದಲಿದ್ದ ನೇಮಕ-ಜವಾಬ್ದಾರಿಗಳು ಇಲ್ಲದಿದ್ದರೂ ಸಭೆಗೆ ಪ್ರಯೋಜನವಾಗುವ ಬೇರೆ ಅನೇಕ ಕೆಲಸಗಳನ್ನು ಅವನು ಮಾಡಬಹುದು.

ಸಭೆಯಲ್ಲಿ ಹಿರಿಯರಿಗಿರುವ ಜವಾಬ್ದಾರಿಗಳು

25 ಸಭಾ ಹಿರಿಯರಿಗೆ ಬೇರೆಬೇರೆ ಜವಾಬ್ದಾರಿಗಳಿರುತ್ತವೆ. ಹಿರಿಯರ ಮಂಡಲಿಯ ಸಂಯೋಜಕ, ಕಾರ್ಯದರ್ಶಿ, ಸೇವಾ ಮೇಲ್ವಿಚಾರಕ, ಕಾವಲಿನಬುರುಜು ಅಧ್ಯಯನ ನಿರ್ವಾಹಕ, ಜೀವನ ಮತ್ತು ಸೇವೆ ಕೂಟದ ಮೇಲ್ವಿಚಾರಕ, ಗುಂಪು ಮೇಲ್ವಿಚಾರಕ ಹೀಗೆ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಈ ಎಲ್ಲ ಜವಾಬ್ದಾರಿಗಳನ್ನು ಇಂತಿಷ್ಟೇ ವರ್ಷ ನಿರ್ವಹಿಸಬೇಕು ಎಂದೇನಿಲ್ಲ. ಆದರೆ ಒಬ್ಬ ಹಿರಿಯನು ಬೇರೆ ಸಭೆಗೆ ಹೋದರೆ ಅಥವಾ ಆರೋಗ್ಯ ಸಮಸ್ಯೆ ಬಂದರೆ ಇಲ್ಲವೆ ಅರ್ಹತೆಗಳನ್ನು ಕಳೆದುಕೊಂಡರೆ ಅವನಿಗಿದ್ದ ಜವಾಬ್ದಾರಿಯನ್ನು ಇನ್ನೊಬ್ಬ ಹಿರಿಯನಿಗೆ ವಹಿಸಲಾಗುತ್ತದೆ. ಒಂದುವೇಳೆ ಸಾಕಷ್ಟು ಹಿರಿಯರು ಇಲ್ಲದಿರುವಲ್ಲಿ ಒಬ್ಬ ಹಿರಿಯನೇ ಅನೇಕ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಮುಂದೆ ಯಾರಾದರೂ ಹಿರಿಯರಾದಾಗ ಅವರಿಗೆ ಜವಾಬ್ದಾರಿಗಳನ್ನು ಕೊಡಬಹುದು.

26ಹಿರಿಯರ ಮಂಡಲಿಯ ಸಂಯೋಜಕನು ಹಿರಿಯರ ಮಂಡಲಿಯ ಕೂಟದ ಅಧ್ಯಕ್ಷತೆ ವಹಿಸುತ್ತಾನೆ. ಅವನು ದೀನನಾಗಿದ್ದು, ಸಭೆಯನ್ನು ನೋಡಿಕೊಳ್ಳುವುದರಲ್ಲಿ ಇತರ ಹಿರಿಯರ ಜೊತೆಸೇರಿ ಕೆಲಸಮಾಡುತ್ತಾನೆ. (ರೋಮ. 12:10; 1 ಪೇತ್ರ 5:2,3) ಅವನು ಎಲ್ಲವನ್ನೂ ವ್ಯವಸ್ಥಿತವಾಗಿ ಮಾಡಲು ಮತ್ತು ಶ್ರದ್ಧೆಯಿಂದ ಮೇಲ್ವಿಚಾರಣೆ ಮಾಡಲು ಸಮರ್ಥನಾಗಿರಬೇಕು. (ರೋಮ. 12:8) ಸಾರ್ವಜನಿಕ ಭಾಷಣಗಳನ್ನು ಏರ್ಪಡಿಸುವುದೂ ಅವನ ಜವಾಬ್ದಾರಿ. ಈ ಕೆಲಸಕ್ಕಾಗಿ ಇನ್ನೊಬ್ಬ ಹಿರಿಯ ಅಥವಾ ಸಹಾಯಕ ಸೇವಕನ ನೆರವನ್ನು ಪಡಕೊಳ್ಳಬಹುದು.

27ಕಾರ್ಯದರ್ಶಿಯು ಸಭೆಯ ವರದಿಗಳನ್ನೆಲ್ಲ ಪಕ್ಕಾ ಇಡುತ್ತಾನೆ. ಪ್ರಮುಖ ಪತ್ರ ವ್ಯವಹಾರಗಳನ್ನು ಎಲ್ಲ ಹಿರಿಯರಿಗೆ ತಿಳಿಸುತ್ತಾನೆ. ನಿಯತವಾಗಿ ಮಾಡುವ ಕೆಲಸಗಳಲ್ಲಿ ಕಾರ್ಯದರ್ಶಿಗೆ ನೆರವಾಗಲು ಇನ್ನೊಬ್ಬ ಹಿರಿಯ ಅಥವಾ ಅರ್ಹ ಸಹಾಯಕ ಸೇವಕನನ್ನು ಹಿರಿಯರ ಮಂಡಲಿ ನೇಮಿಸಬಹುದು.

28ಸೇವಾ ಮೇಲ್ವಿಚಾರಕನು ಕ್ಷೇತ್ರ ಸೇವೆಗಾಗಿ ಏರ್ಪಾಡುಗಳನ್ನು ಮಾಡುತ್ತಾನೆ ಮತ್ತು ಸೇವೆಗೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ನಿರ್ದೇಶಿಸುತ್ತಾನೆ. ಕ್ಷೇತ್ರ ಸೇವಾ ಗುಂಪುಗಳ ಮೇಲ್ವಿಚಾರಣೆಯನ್ನೂ ಮಾಡುತ್ತಾನೆ. ಎಲ್ಲ ಕ್ಷೇತ್ರ ಸೇವಾ ಗುಂಪುಗಳನ್ನು ನಿಯತವಾಗಿ ಭೇಟಿಮಾಡುತ್ತಾನೆ. ಪ್ರತಿ ತಿಂಗಳು ಒಂದು ಶನಿವಾರ-ಭಾನುವಾರ ಅವನು ಒಂದು ಗುಂಪನ್ನು ಭೇಟಿಮಾಡುತ್ತಾನೆ. ಕ್ಷೇತ್ರ ಸೇವಾ ಗುಂಪುಗಳು ಕೆಲವೇ ಇದ್ದಲ್ಲಿ ವರ್ಷಕ್ಕೆ ಎರಡಾವರ್ತಿ ಪ್ರತಿ ಗುಂಪನ್ನು ಭೇಟಿಮಾಡಬಹುದು. ಭೇಟಿಮಾಡಿದಾಗ ಅವನೇ ಕ್ಷೇತ್ರ ಸೇವಾ ಕೂಟವನ್ನು ನಡೆಸುತ್ತಾನೆ, ಗುಂಪಿನೊಂದಿಗೆ ಸೇವೆಗೆ ಹೋಗುತ್ತಾನೆ, ಪುನರ್ಭೇಟಿ ಹಾಗೂ ಬೈಬಲ್‌ ಅಧ್ಯಯನಗಳನ್ನು ಮಾಡಲು ಗುಂಪಿನ ಸದಸ್ಯರಿಗೆ ನೆರವು ನೀಡುತ್ತಾನೆ.

ಗುಂಪು ಮೇಲ್ವಿಚಾರಕರು

29ಗುಂಪು ಮೇಲ್ವಿಚಾರಕರಾಗಿ ಇರುವುದು ಒಂದು ಪ್ರಾಮುಖ್ಯ ಸುಯೋಗ. ಈ ಜವಾಬ್ದಾರಿ ವಹಿಸಲು ಯಾರು ಸಮರ್ಥರೆಂದು ಹಿರಿಯರ ಮಂಡಲಿ ನಿರ್ಣಯಿಸುತ್ತದೆ. ಗುಂಪು ಮೇಲ್ವಿಚಾರಕನಿಗೆ ಏನೆಲ್ಲ ಜವಾಬ್ದಾರಿಗಳಿವೆ? (1) ಗುಂಪಿನಲ್ಲಿರುವ ಪ್ರತಿಯೊಬ್ಬರಲ್ಲಿ ಆಸಕ್ತಿವಹಿಸಿ ದೇವರೊಂದಿಗೆ ಸುಸಂಬಂಧ ಇಟ್ಟುಕೊಳ್ಳಲು ಸಹಾಯಮಾಡುವುದು. (2) ಪ್ರತಿಯೊಬ್ಬರು ಸೇವೆಗೆ ತಪ್ಪದೆ ಬರುವಂತೆ ಮತ್ತು ಸೇವೆಯನ್ನು ಉತ್ತಮವಾಗಿ ಖುಷಿಯಾಗಿ ಮಾಡುವಂತೆ ಸಹಾಯಮಾಡುವುದು. (3) ಗುಂಪಿನಲ್ಲಿರುವ ಸಹಾಯಕ ಸೇವಕರು ಹೆಚ್ಚು ಜವಾಬ್ದಾರಿಗಳನ್ನು ವಹಿಸಲು ಅರ್ಹರಾಗುವಂತೆ ನೆರವು, ತರಬೇತಿ ನೀಡುವುದು.

30 ಇದು ಜವಾಬ್ದಾರಿಯುತ ಕೆಲಸ. ಹಾಗಾಗಿ ಗುಂಪು ಮೇಲ್ವಿಚಾರಕನು ಹಿರಿಯನಾಗಿದ್ದರೆ ಒಳ್ಳೇದು. ಹಿರಿಯರು ಇಲ್ಲದಿದ್ದರೆ ಅರ್ಹ ಸಹಾಯಕ ಸೇವಕನು ಈ ಜವಾಬ್ದಾರಿಯನ್ನು ನಿರ್ವಹಿಸಬಹುದು. ಆದರೆ ಅವನನ್ನು ‘ಗುಂಪು ಸೇವಕ’ ಎಂದು ಕರೆಯಲಾಗುತ್ತದೆ. ಏಕೆಂದರೆ ಅವನು ಸಭೆಯಲ್ಲಿ ಮೇಲ್ವಿಚಾರಕನಾಗಿರುವುದಿಲ್ಲ. ಬದಲಿಗೆ ಹಿರಿಯರ ಮಾರ್ಗದರ್ಶನದ ಪ್ರಕಾರ ತನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತಾನೆ. ಆ ಜವಾಬ್ದಾರಿಯನ್ನು ಒಬ್ಬ ಹಿರಿಯನು ತಕ್ಕೊಳ್ಳುವ ವರೆಗೆ ಸಹಾಯಕ ಸೇವಕನು ಗುಂಪು ಸೇವಕನಾಗಿರುತ್ತಾನೆ.

31 ಗುಂಪು ಮೇಲ್ವಿಚಾರಕನ ಮುಖ್ಯ ಕೆಲಸ ಸುವಾರ್ತೆ ಸಾರುವುದರಲ್ಲಿ ಮುಂದಾಳತ್ವ ವಹಿಸುವುದೇ. ಅವನು ಹುರುಪಿನಿಂದ, ಆಸಕ್ತಿಯಿಂದ, ತಪ್ಪದೆ ಸೇವೆಯಲ್ಲಿ ಭಾಗವಹಿಸಿದರೆ ಗುಂಪಿನಲ್ಲಿರುವ ಇತರರಿಗೂ ಹಾಗೆ ಮಾಡಲು ಹುಮ್ಮಸ್ಸು ಬರುತ್ತದೆ. ಎಲ್ಲರೂ ಒಂದುಕಡೆ ಸೇರಿ ಪ್ರೋತ್ಸಾಹ, ನಿರ್ದೇಶನ ಪಡೆಯುವುದೆಂದರೆ ಪ್ರಚಾರಕರಿಗೆ ಇಷ್ಟ. ಹಾಗಾಗಿ ಕ್ಷೇತ್ರ ಸೇವಾ ಕೂಟವನ್ನು ಹೆಚ್ಚಿನವರಿಗೆ ಅನುಕೂಲವಾಗುವ ಸಮಯದಲ್ಲಿ ಇಡುವುದು ಒಳ್ಳೇದು. (ಲೂಕ 10:1-16) ಎಲ್ಲರಿಗೂ ಸಾಕಾಗುವಷ್ಟು ಸೇವಾ ಕ್ಷೇತ್ರ ಇರುವಂತೆ ಗುಂಪು ಮೇಲ್ವಿಚಾರಕನು ನೋಡಿಕೊಳ್ಳುತ್ತಾನೆ. ಕ್ಷೇತ್ರ ಸೇವಾ ಕೂಟವನ್ನು ನಡೆಸಿ ಪ್ರಚಾರಕರು ಸೇವೆಗೆ ಹೋಗಲು ಏರ್ಪಾಡು ಮಾಡುತ್ತಾನೆ. ಕ್ಷೇತ್ರ ಸೇವಾ ಕೂಟವನ್ನು ನಡೆಸಲು ಅವನಿಗೆ ಆಗದಿದ್ದರೆ ಇನ್ನೊಬ್ಬ ಹಿರಿಯ ಅಥವಾ ಸಹಾಯಕ ಸೇವಕನನ್ನು ನೇಮಿಸುತ್ತಾನೆ. ಅವರೂ ಇಲ್ಲದಿದ್ದರೆ ಅರ್ಹ ಸಹೋದರನನ್ನು ನೇಮಿಸಬಹುದು. ಹೀಗೆ ಪ್ರಚಾರಕರಿಗೆ ಸೇವೆಗೆ ಹೋಗಲು ಬೇಕಾದ ನಿರ್ದೇಶನ ಸಿಗುತ್ತದೆ.

32 ಸೇವಾ ಮೇಲ್ವಿಚಾರಕರ ಭೇಟಿಯ ಕುರಿತು ಗುಂಪು ಮೇಲ್ವಿಚಾರಕನು ತನ್ನ ಗುಂಪಿಗೆ ಆದಷ್ಟು ಮುಂಚೆ ತಿಳಿಸಬೇಕು. ಹೀಗೆ ಎಲ್ಲರೂ ಆ ಭೇಟಿಯಿಂದ ಪ್ರಯೋಜನ ಪಡೆಯಲು ಮತ್ತು ಸೇವೆಯಲ್ಲಿ ಹುರುಪಿನಿಂದ ಭಾಗವಹಿಸಲು ಆಗುತ್ತದೆ.

33 ಸಾಮಾನ್ಯವಾಗಿ ಕ್ಷೇತ್ರ ಸೇವಾ ಗುಂಪುಗಳನ್ನು ಚಿಕ್ಕ ಚಿಕ್ಕದಾಗಿ ಇಡಲಾಗಿರುತ್ತದೆ. ಆಗ ಗುಂಪು ಮೇಲ್ವಿಚಾರಕನಿಗೆ ತನ್ನ ಗುಂಪಿನಲ್ಲಿರುವ ಪ್ರತಿಯೊಬ್ಬರನ್ನು ಚೆನ್ನಾಗಿ ತಿಳಿದುಕೊಳ್ಳಲು, ಅವರಿಗೆ ಕಾಳಜಿ-ಆಸಕ್ತಿ ತೋರಿಸಲು ಆಗುತ್ತದೆ. ಸೇವೆಯನ್ನು ಚೆನ್ನಾಗಿ ಮಾಡಲು ಮತ್ತು ಕೂಟಗಳಿಂದ ಪ್ರಯೋಜನ ಪಡೆಯಲು ಪ್ರತಿಯೊಬ್ಬರಿಗೆ ನೆರವು ಪ್ರೋತ್ಸಾಹ ಕೊಡಲು ಆಗುತ್ತದೆ. ಯೆಹೋವನಿಗೆ ಹೆಚ್ಚು ಆಪ್ತರಾಗಲು ಒಬ್ಬೊಬ್ಬರಿಗೂ ಏನು ಅವಶ್ಯಕತೆಯಿದೆ ಎಂದು ಅವನು ತಿಳಿದುಕೊಂಡು ಬೇಕಾದ ನೆರವು ನೀಡುತ್ತಾನೆ. ಅನಾರೋಗ್ಯ ಅಥವಾ ಖಿನ್ನತೆ ಇರುವವರನ್ನು ಭೇಟಿಮಾಡಿ ಸಹಾಯಮಾಡುತ್ತಾನೆ. ಮೇಲ್ವಿಚಾರಕನ ಅರ್ಹತೆಗಳನ್ನು ಪಡೆಯಲು ಸಹೋದರರಿಗೆ ಪ್ರೋತ್ಸಾಹ, ಸಲಹೆಗಳನ್ನು ಸಹ ಕೊಡುತ್ತಾನೆ. ಅದರಿಂದ ಸಭೆಗೆ ಒಳಿತಾಗುತ್ತದೆ. ಗುಂಪು ಮೇಲ್ವಿಚಾರಕನು ತನ್ನ ಗುಂಪಿಗೆಂದೇ ಹೆಚ್ಚು ಪ್ರಯಾಸಪಟ್ಟು ಕೆಲಸಮಾಡುತ್ತಾನೆ. ಹಾಗಿದ್ದರೂ ಹಿರಿಯನಾಗಿ ಸಭೆಯಲ್ಲಿರುವ ಎಲ್ಲರ ಕಾಳಜಿ ವಹಿಸುತ್ತಾ ಅವರಿಗೆ ಸಹಾಯಮಾಡಲು ಸಹ ಸಿದ್ಧನಿರುತ್ತಾನೆ.—ಅ. ಕಾ. 20:17, 28.

34 ಗುಂಪಿನಲ್ಲಿರುವ ಎಲ್ಲರ ಸೇವಾ ವರದಿಗಳನ್ನು ಸಂಗ್ರಹಿಸಿ ಅವುಗಳನ್ನು ಕಾರ್ಯದರ್ಶಿಗೆ ಕೊಡುವ ಜವಾಬ್ದಾರಿಯೂ ಗುಂಪು ಮೇಲ್ವಿಚಾರಕನಿಗಿದೆ. ಎಲ್ಲರೂ ತಿಂಗಳು ಮುಗಿದ ಕೂಡಲೆ ವರದಿಗಳನ್ನು ಕೊಡುವ ಮೂಲಕ ಗುಂಪು ಮೇಲ್ವಿಚಾರಕನಿಗೆ ಸಹಾಯಮಾಡಬಹುದು. ವರದಿಯನ್ನು ನೇರವಾಗಿ ಗುಂಪು ಮೇಲ್ವಿಚಾರಕನಿಗೆ ಕೊಡಬಹುದು ಅಥವಾ ಸಭೆಯಲ್ಲಿ ಅದಕ್ಕೆಂದೇ ಪೆಟ್ಟಿಗೆ ಇದ್ದಲ್ಲಿ ಅದರಲ್ಲಿ ಹಾಕಬಹುದು.

ಸಭೆಯ ಸೇವಾ ಸಮಿತಿ

35 ‘ಸಭೆಯ ಸೇವಾ ಸಮಿತಿ’ಯಲ್ಲಿ ಹಿರಿಯರ ಮಂಡಲಿಯ ಸಂಯೋಜಕ, ಕಾರ್ಯದರ್ಶಿ ಮತ್ತು ಸೇವಾ ಮೇಲ್ವಿಚಾರಕ ಇರುತ್ತಾರೆ. ಈ ಸಮಿತಿಯು ಹಿರಿಯರ ಮಂಡಲಿಯ ನಿರ್ದೇಶನಕ್ಕೆ ಅನುಸಾರ ಕೆಲಸಮಾಡುತ್ತದೆ. ಇದರ ಜವಾಬ್ದಾರಿಗಳು: ಸಾಹಿತ್ಯ ವಿನಂತಿಗಳನ್ನು, ಕ್ಷೇತ್ರ ಸೇವಾ ವರದಿಗಳನ್ನು ನೋಡಿಕೊಳ್ಳುವುದು, ಹಿರಿಯರನ್ನು ಮತ್ತು ಸಹಾಯಕ ಸೇವಕರನ್ನು ನೇಮಿಸಲು ಅಥವಾ ತೆಗೆದುಹಾಕಲು ಇರುವ ಅರ್ಜಿಗಳನ್ನು ಭರ್ತಿಮಾಡುವುದು. ಮದುವೆಯ ಭಾಷಣಕ್ಕೆ ಅಥವಾ ಶವಸಂಸ್ಕಾರದ ಭಾಷಣಕ್ಕೆ ರಾಜ್ಯ ಸಭಾಗೃಹವನ್ನು ಬಳಸಲು ಒಪ್ಪಿಗೆ ಕೊಡುವುದು. ಪ್ರಚಾರಕರನ್ನು ಕ್ಷೇತ್ರ ಸೇವಾ ಗುಂಪುಗಳಿಗೆ ನೇಮಿಸುವುದು. ಪಯನೀಯರ್‌ ಸೇವೆ, ಸಹಾಯಕ ಪಯನೀಯರ್‌ ಸೇವೆ ಹಾಗೂ ಇನ್ನಿತರ ಸೇವಾ ಸುಯೋಗಗಳಿಗಾಗಿ ಸಲ್ಲಿಸಲಾಗುವ ಅರ್ಜಿಗಳನ್ನು ಪರೀಕ್ಷಿಸಿ ಒಪ್ಪಿಗೆ ಕೊಡುವುದು. ಕೆಲವೊಮ್ಮೆ ಸೇವಾ ಸಮಿತಿಗೆ ಶಾಖೆಯು ಕೆಲವು ಕೆಲಸಗಳನ್ನು ನೀಡುತ್ತದೆ.

36 ಸೇವಾ ಸಮಿತಿಯಲ್ಲಿರುವ ಸಹೋದರರಿಗೆ, ಕಾವಲಿನಬುರುಜು ಅಧ್ಯಯನ ನಿರ್ವಾಹಕನಿಗೆ, ಜೀವನ ಮತ್ತು ಸೇವೆ ಕೂಟದ ಮೇಲ್ವಿಚಾರಕನಿಗೆ ಹಾಗೂ ಇತರ ಹಿರಿಯರಿಗೆ ಶಾಖೆಯು ಪತ್ರಗಳ ಮೂಲಕ ಆಗಾಗ ನಿರ್ದೇಶನಗಳನ್ನು ಕೊಡುತ್ತದೆ.

37 ಹಿರಿಯರ ಮಂಡಲಿಯು ಆಗಾಗ ಕೂಡಿಬಂದು ಸಹೋದರರ ನಂಬಿಕೆಯನ್ನು ಹೆಚ್ಚಿಸುವ ಮತ್ತು ಸೇವೆಯನ್ನು ಹೆಚ್ಚು ಮಾಡುವುದರ ಕುರಿತು ಚರ್ಚಿಸುತ್ತದೆ. ವರ್ಷದಲ್ಲಿ ಇಂಥ ಎರಡು ಕೂಟಗಳನ್ನು ಸಂಚರಣ ಮೇಲ್ವಿಚಾರಕರ ಭೇಟಿಯ ಸಮಯದಲ್ಲಿ ಮಾಡಲಾಗುತ್ತದೆ. ಇಂಥದ್ದೇ ಕೂಟವನ್ನು ಸಂಚರಣ ಮೇಲ್ವಿಚಾರಕರ ಭೇಟಿಯಾಗಿ ಮೂರು ತಿಂಗಳ ನಂತರ ಇಟ್ಟುಕೊಳ್ಳಬೇಕು. ಹೀಗೆ ಪ್ರಾಮುಖ್ಯ ವಿಷಯಗಳನ್ನು ಹಿರಿಯರ ಮಂಡಲಿಯ ಗಮನಕ್ಕೆ ತಂದು ಇತ್ಯರ್ಥ ಮಾಡಲು ವರ್ಷಕ್ಕೆ ನಾಲ್ಕು ಕೂಟಗಳು ಸಾಕಾಗಬಹುದು. ಇದಲ್ಲದೆ ಇನ್ನೊಂದು ಕೂಟವನ್ನು ನಡೆಸಬೇಕಾದ ಸನ್ನಿವೇಶ ಬಂದರೆ ಅದಕ್ಕಾಗಿ ಯೋಜಿಸಬಹುದು. ಪ್ರತಿಯೊಬ್ಬ ಹಿರಿಯನು ತನ್ನ ಜವಾಬ್ದಾರಿಗಳನ್ನು ಚೆನ್ನಾಗಿ ನಿರ್ವಹಿಸುತ್ತಿರುವಲ್ಲಿ ಮತ್ತು ಸಂಯೋಜಕನು ಎಲ್ಲ ಹಿರಿಯರ ಕೆಲಸಗಳನ್ನು ಸರಿಯಾಗಿ ಮಾರ್ಗದರ್ಶಿಸುತ್ತಿರುವಲ್ಲಿ ಇಂಥ ಕೂಟಗಳನ್ನು ಆದಷ್ಟು ಕಡಿಮೆ ಮಾಡಬಹುದು.

ಅಧೀನರಾಗಿರಿ

38 ಮೇಲ್ವಿಚಾರಕರೂ ಅಪರಿಪೂರ್ಣರೇ. ಹಾಗಿದ್ದರೂ ಯೆಹೋವನು ಅವರನ್ನು ನೇಮಿಸಿರುವುದರಿಂದ ಎಲ್ಲರೂ ಅವರಿಗೆ ಅಧೀನರಾಗಿರಬೇಕು. ಮೇಲ್ವಿಚಾರಕರು ತಾವು ಮಾಡುವ ಪ್ರತಿಯೊಂದು ಕಾರ್ಯಕ್ಕೂ ಯೆಹೋವನಿಗೆ ಲೆಕ್ಕ ಒಪ್ಪಿಸಲಿಕ್ಕಿದೆ. ಅವರು ಯೆಹೋವನನ್ನೂ ಆತನ ಆಳ್ವಿಕೆಯನ್ನೂ ಪ್ರತಿನಿಧಿಸುತ್ತಾರೆ. ಆದುದರಿಂದ ಇಬ್ರಿಯ 13:17 ಹೀಗೆ ಹೇಳುತ್ತದೆ: “ನಿಮ್ಮ ಮಧ್ಯೆ ಮುಂದಾಳುತ್ವ ವಹಿಸುತ್ತಿರುವವರಿಗೆ ವಿಧೇಯರಾಗಿರಿ ಮತ್ತು ಅವರಿಗೆ ಅಧೀನರಾಗಿರಿ; ಅವರು ಲೆಕ್ಕ ಒಪ್ಪಿಸಬೇಕಾದವರಾಗಿ ನಿಮ್ಮ ಪ್ರಾಣಗಳನ್ನು ಕಾಯುವವರಾಗಿದ್ದಾರೆ. ಅವರು ವ್ಯಸನದಿಂದಲ್ಲ ಆನಂದದಿಂದ ಇದನ್ನು ಮಾಡಲಿ, ಏಕೆಂದರೆ ಅವರು ವ್ಯಸನಪಡುವುದು ನಿಮಗೆ ಹಾನಿಕರವಾಗಿರುವುದು.” ಒಂದುವೇಳೆ ಒಬ್ಬ ಹಿರಿಯನು ಬೈಬಲಿನಲ್ಲಿರುವ ಅರ್ಹತೆಗಳಿಗನುಸಾರ ನಡೆಯದಿದ್ದರೆ ಮತ್ತು ಪವಿತ್ರಾತ್ಮದ ಫಲವನ್ನು ತೋರಿಸದಿದ್ದರೆ? ಯೆಹೋವನು ಹೇಗೆ ಪವಿತ್ರಾತ್ಮದ ಮೂಲಕ ಅವನನ್ನು ಮೇಲ್ವಿಚಾರಕನಾಗಿ ನೇಮಿಸಿದನೋ ಅದೇ ರೀತಿ ಪವಿತ್ರಾತ್ಮದ ಮೂಲಕ ಅವನನ್ನು ಆ ಜವಾಬ್ದಾರಿಯಿಂದ ತೆಗೆಯುತ್ತಾನೆ.

39 ಮೇಲ್ವಿಚಾರಕರ ಶ್ರಮದ ಕೆಲಸಕ್ಕೆ ಮತ್ತು ಒಳ್ಳೇ ಮಾದರಿಗೆ ನಾವು ನಿಜಕ್ಕೂ ಕೃತಜ್ಞರಾಗಿರಬೇಕು. ಅವರ ಕಡೆಗೆ ನಮಗಿರಬೇಕಾದ ಮನೋಭಾವದ ಬಗ್ಗೆ ಪೌಲ ಹೀಗಂದನು: “ನಿಮ್ಮ ಮಧ್ಯೆ ಪ್ರಯಾಸಪಟ್ಟು ಕೆಲಸಮಾಡುತ್ತಾ ಕರ್ತನಲ್ಲಿ ನಿಮ್ಮ ಮೇಲ್ವಿಚಾರಣೆ ಮಾಡುತ್ತಾ ನಿಮಗೆ ಬುದ್ಧಿಹೇಳುವವರನ್ನು ಮಾನ್ಯಮಾಡಿರಿ ಮತ್ತು ಅವರ ಕೆಲಸದ ನಿಮಿತ್ತ ಅವರಿಗೆ ಪ್ರೀತಿಯಿಂದ ಅತ್ಯಧಿಕವಾಗಿರುವುದಕ್ಕಿಂತ ಹೆಚ್ಚಿನ ಪರಿಗಣನೆಯನ್ನು ತೋರಿಸಿರಿ.” (1 ಥೆಸ. 5:12, 13) ಮೇಲ್ವಿಚಾರಕರ ಪರಿಶ್ರಮದಿಂದಾಗಿ ನಾವು ಯೆಹೋವನ ಸೇವೆಯನ್ನು ಸುಲಭವಾಗಿ ಖುಷಿಯಾಗಿ ಮಾಡಲು ಆಗುತ್ತಿದೆ. ಪೌಲನು ತಿಮೊಥೆಯನಿಗೆ ಹೀಗೆ ಬರೆದನು: “ಒಳ್ಳೇ ರೀತಿಯಲ್ಲಿ ಅಧ್ಯಕ್ಷತೆ ವಹಿಸುವ ಹಿರೀಪುರುಷರು, ವಿಶೇಷವಾಗಿ ವಾಕ್ಯದ ಕುರಿತು ಮಾತಾಡುವುದರಲ್ಲಿಯೂ ಬೋಧಿಸುವುದರಲ್ಲಿಯೂ ಶ್ರಮಪಟ್ಟು ಕೆಲಸಮಾಡುವವರು, ಇಮ್ಮಡಿಯಾದ ಗೌರವಕ್ಕೆ ಯೋಗ್ಯರಾದವರೆಂದು ಎಣಿಸಲ್ಪಡಲಿ.”—1 ತಿಮೊ. 5:17.

ಸಂಘಟನೆಯಲ್ಲಿರುವ ಇನ್ನಿತರ ಜವಾಬ್ದಾರಿಗಳು

40 ಅಸ್ವಸ್ಥ ಸಹೋದರರ ಸಹಾಯಕ್ಕಾಗಿ ‘ರೋಗಿಗಳನ್ನು ಭೇಟಿಮಾಡುವ ಗುಂಪು’ಗಳು (PVG) ಇವೆ. ಕೆಲವು ಸಭಾ ಹಿರಿಯರನ್ನು ಆ ಗುಂಪಿನಲ್ಲಿ ಸೇವೆಮಾಡಲು ನೇಮಿಸಲಾಗುತ್ತದೆ. ಇನ್ನು ಕೆಲವರನ್ನು ‘ಆಸ್ಪತ್ರೆ ಸಂಪರ್ಕ ಸಮಿತಿ’ಯಲ್ಲಿ (HLC) ನೇಮಿಸಲಾಗುತ್ತದೆ. ಇವರು ಆಸ್ಪತ್ರೆಗಳಿಗೆ ಭೇಟಿನೀಡಿ ವೈದ್ಯರೊಂದಿಗೆ ಮಾತಾಡಿ ಯೆಹೋವನ ಸಾಕ್ಷಿಗಳಿಗೆ ರಕ್ತ ಕೊಡದೆ ಶಸ್ತ್ರಚಿಕಿತ್ಸೆ ಮಾಡಲು ಸಹಕರಿಸುವಂತೆ ಪ್ರೋತ್ಸಾಹಿಸುತ್ತಾರೆ. ಇನ್ನು ಕೆಲವು ಮೇಲ್ವಿಚಾರಕರು ರಾಜ್ಯ ಸಭಾಗೃಹಗಳನ್ನೂ ಸಮ್ಮೇಳನ ಸಭಾಂಗಣಗಳನ್ನೂ ಕಟ್ಟುವುದರಲ್ಲಿ ಮತ್ತು ದುರಸ್ತಿ ಮಾಡುವುದರಲ್ಲಿ ಸಹಾಯ ಮಾಡುತ್ತಾರೆ. ಇನ್ನಿತರರು ‘ಅಧಿವೇಶನ ಸಮಿತಿ’ಗಳಲ್ಲಿ ಸೇವೆ ಸಲ್ಲಿಸುತ್ತಾರೆ. ಹೀಗೆ ಮೇಲ್ವಿಚಾರಕರು ಯೆಹೋವನ ಸೇವೆಯ ಅಭಿವೃದ್ಧಿಗೆ ನೆರವಾಗುತ್ತಾರೆ. ಈ ಸಹೋದರರು ಸಿದ್ಧಮನಸ್ಸಿನಿಂದ ಸೇವೆಗೆ ತಮ್ಮನ್ನೇ ಅರ್ಪಿಸಿಕೊಳ್ಳುವುದನ್ನು ನಾವೆಲ್ಲರೂ ತುಂಬ ಮಾನ್ಯಮಾಡುತ್ತೇವೆ ಮತ್ತು ಅವರನ್ನು “ಪ್ರಿಯರೆಂದು” ಎಣಿಸುತ್ತೇವೆ.—ಫಿಲಿ. 2:29.

ಸಂಚರಣ ಮೇಲ್ವಿಚಾರಕರು

41 ಅರ್ಹ ಹಿರಿಯರನ್ನು ಆಡಳಿತ ಮಂಡಲಿಯು ಸಂಚರಣ ಮೇಲ್ವಿಚಾರಕರನ್ನಾಗಿ ನೇಮಿಸುತ್ತದೆ. ಇವರು ಇಂತಿಷ್ಟು ಸಭೆಗಳನ್ನು ಭೇಟಿಯಾಗುವಂತೆ ಶಾಖೆಯು ನೇಮಿಸುತ್ತದೆ. ಆ ಸಭೆಗಳನ್ನು ವರ್ಷಕ್ಕೆ ಎರಡು ಸಲ ಅವರು ಭೇಟಿಮಾಡುತ್ತಾರೆ. ದೂರದ ಪ್ರದೇಶದಲ್ಲಿರುವ ಪಯನೀಯರರನ್ನು ಸಹ ಭೇಟಿಯಾಗುತ್ತಾರೆ. ಯಾವಾಗ ಯಾವ ಸಭೆಗೆ ಭೇಟಿಮಾಡುತ್ತಾರೆಂದು ಯೋಜಿಸಿ ಅದನ್ನು ಎಷ್ಟೋ ಮುಂಚಿತವಾಗಿ ಸಭೆಗೆ ತಿಳಿಸುತ್ತಾರೆ. ಇದರಿಂದ ಸಭೆಯಲ್ಲಿರುವವರು ಮುಂಚಿತವಾಗಿಯೇ ಏರ್ಪಾಡು ಮಾಡಲು ಮತ್ತು ಸಂಚರಣ ಮೇಲ್ವಿಚಾರಕರ ಭೇಟಿಯಿಂದ ಒಳ್ಳೇ ಪ್ರಯೋಜನ ಪಡೆಯಲು ಆಗುತ್ತದೆ.

42 ಈ ಭೇಟಿಯಿಂದ ಎಲ್ಲರೂ ನಂಬಿಕೆಯಲ್ಲಿ ಬಲಗೊಳ್ಳಲು ಮತ್ತು ಹೊಸ ಬಲ ಪಡೆಯಲು ಹಿರಿಯರ ಮಂಡಲಿಯ ಸಂಯೋಜಕನು ಎಲ್ಲ ವಿಷಯಗಳನ್ನು ಚೆನ್ನಾಗಿ ಯೋಜಿಸುತ್ತಾನೆ. (ರೋಮ. 1:11, 12) ಭೇಟಿಯ ತಾರೀಖು ಮತ್ತು ಸಂಚರಣ ಮೇಲ್ವಿಚಾರಕನ (ಅವನ ಪತ್ನಿಯ) ಅಗತ್ಯಗಳ ಬಗ್ಗೆ ತಿಳಿದ ತಕ್ಷಣ ಅವರಿಗೆ ಉಳಿದುಕೊಳ್ಳಲು ಸ್ಥಳ ಹಾಗೂ ಇತರ ಏರ್ಪಾಡುಗಳನ್ನು ಮಾಡುತ್ತಾನೆ. ಇದಕ್ಕಾಗಿ ಸಂಯೋಜಕನು ಇತರ ಸಹೋದರರ ಸಹಾಯ ಪಡೆದುಕೊಳ್ಳಬಹುದು. ಮಾಡಿದ ಏರ್ಪಾಡುಗಳ ಬಗ್ಗೆ ಸಂಚರಣ ಮೇಲ್ವಿಚಾರಕನಿಗೆ ಮತ್ತು ಎಲ್ಲರಿಗೆ ಮುಂಚೆಯೇ ತಿಳಿಸಿರುತ್ತಾನೆ.

43 ಸಂಚರಣ ಮೇಲ್ವಿಚಾರಕನು ಸಂಯೋಜಕನನ್ನು ಸಂಪರ್ಕಿಸಿ ಸಭಾ ಕೂಟಗಳ, ಕ್ಷೇತ್ರ ಸೇವಾ ಕೂಟಗಳ ಏರ್ಪಾಡಿನ ಬಗ್ಗೆ ಮಾತಾಡುತ್ತಾನೆ. ಎಲ್ಲ ಏರ್ಪಾಡುಗಳನ್ನು ಸಂಚರಣ ಮೇಲ್ವಿಚಾರಕನ ಸಲಹೆಯಂತೆ ಮತ್ತು ಶಾಖೆಯಿಂದ ಬಂದ ನಿರ್ದೇಶನಗಳ ಮೇರೆಗೆ ಮಾಡಲಾಗುತ್ತದೆ. ಕೂಟಗಳ ಸಮಯ ಮತ್ತು ಸ್ಥಳವನ್ನು ಮುಂಚಿತವಾಗಿ ಎಲ್ಲರಿಗೆ ತಿಳಿಸಬೇಕು. ಕ್ಷೇತ್ರ ಸೇವಾ ಕೂಟಗಳು, ಪಯನೀಯರರೊಂದಿಗೆ, ಹಿರಿಯರೊಂದಿಗೆ ಮತ್ತು ಸಹಾಯಕ ಸೇವಕರೊಂದಿಗೆ ಕೂಟ ಎಲ್ಲಿ ಮತ್ತು ಯಾವಾಗ ನಡೆಯುತ್ತದೆಂದು ಸಹ ಎಲ್ಲರಿಗೆ ಮುಂಚಿತವಾಗಿ ತಿಳಿಸಬೇಕು.

44 ಸಂಚರಣ ಮೇಲ್ವಿಚಾರಕನು ಮಂಗಳವಾರ ಮಧ್ಯಾಹ್ನ ಸಭೆಯ ಪ್ರಚಾರಕನ ದಾಖಲೆಗಳನ್ನು, ಕೂಟಗಳ ಹಾಜರಿಯ ದಾಖಲೆ, ಸೇವಾ ಕ್ಷೇತ್ರದ ದಾಖಲೆ, ಲೆಕ್ಕಾಚಾರದ ವರದಿಗಳನ್ನು ಪರಿಶೀಲಿಸುತ್ತಾನೆ. ಇದರಿಂದ ಸಭೆಯು ಯಾವುದರಲ್ಲಿ ಪ್ರಗತಿ ಮಾಡಬೇಕೆಂದು ತಿಳಿಯುತ್ತದೆ. ಜೊತೆಗೆ ಎಲ್ಲ ದಾಖಲೆಗಳನ್ನು ನೋಡಿಕೊಳ್ಳುವ ಸಹೋದರರಿಗೆ ಹೇಗೆ ನೆರವು ನೀಡಬಹುದೆಂದು ಅವನಿಗೆ ಗೊತ್ತಾಗುತ್ತದೆ. ಸಂಚರಣ ಮೇಲ್ವಿಚಾರಕನಿಗೆ ಮುಂಚಿತವಾಗಿಯೇ ಎಲ್ಲ ದಾಖಲೆಗಳು ಸಿಗುವಂತೆ ಸಂಯೋಜಕನು ನೋಡಿಕೊಳ್ಳಬೇಕು. ಕೆಲವು ಸಲ ಮಂಗಳವಾರ ಸಂಜೆ ಕೂಟಕ್ಕಿಂತ ಮುಂಚೆ ಸಂಚರಣ ಮೇಲ್ವಿಚಾರಕನು ಸಂಯೋಜಕನನ್ನು ಅಥವಾ ಒಬ್ಬ ಹಿರಿಯನನ್ನು ಭೇಟಿಮಾಡಿ ವರದಿ-ದಾಖಲೆಗಳ ಬಗ್ಗೆ ಏನಾದರೂ ಕೇಳುವುದಿದ್ದರೆ ಕೇಳುತ್ತಾನೆ.

45 ಸಂಚರಣ ಮೇಲ್ವಿಚಾರಕನು ಸಮಯ ಮಾಡಿಕೊಂಡು ಪ್ರತಿಯೊಬ್ಬರ ಬಳಿ ಮಾತಾಡುತ್ತಾನೆ. ಕೂಟಗಳಲ್ಲಿ, ಸೇವೆಯಲ್ಲಿ, ಊಟದ ಸಮಯದಲ್ಲಿ ಅಥವಾ ಇತರ ಸಮಯಗಳಲ್ಲೂ ಮಾತಾಡುತ್ತಾನೆ. ಅಷ್ಟೇ ಅಲ್ಲ, ಹಿರಿಯರ ಮತ್ತು ಸಹಾಯಕ ಸೇವಕರ ಕೂಟದಲ್ಲಿ ಅವರಿಗೆ ಸೂಕ್ತ ಬೈಬಲ್‌ ಸಲಹೆ, ತಿದ್ದುಪಾಟು, ಪ್ರೋತ್ಸಾಹ ಕೊಡುತ್ತಾನೆ. ಇದು ಅವರೆಲ್ಲರಿಗೆ ದೇವರ ಮಂದೆಯನ್ನು ಚೆನ್ನಾಗಿ ಪರಿಪಾಲಿಸಲು ಸಹಾಯಮಾಡುತ್ತದೆ. (ಜ್ಞಾನೋ. 27:23; ಅ. ಕಾ. 20:26-32; 1 ತಿಮೊ. 4:11-16) ಪಯನೀಯರರ ಕೂಟದಲ್ಲಿ ಅವರಿಗೆ ಸೇವೆಯನ್ನು ಮುಂದುವರಿಸುವಂತೆ ಪ್ರೋತ್ಸಾಹಿಸುತ್ತಾ ಸಾರುವ ಕೆಲಸದಲ್ಲಿ ಅವರಿಗಿರುವ ಸಮಸ್ಯೆಗಳನ್ನು ನಿಭಾಯಿಸಲು ನೆರವು ನೀಡುತ್ತಾನೆ.

46 ಹಿರಿಯರಿಗೆ ಯಾವ ವಿಷಯದಲ್ಲಾದರೂ ಸಹಾಯ ಬೇಕಿದ್ದರೆ ಸಂಚರಣ ಮೇಲ್ವಿಚಾರಕನು ಆ ವಾರ ಸಾಧ್ಯವಾದಷ್ಟು ನೆರವು ನೀಡುತ್ತಾನೆ. ಉದಾಹರಣೆಗೆ, ಯಾರೋ ಒಬ್ಬರು ಗಂಭೀರ ತಪ್ಪನ್ನು ಮಾಡಿದ್ದು ಹಿರಿಯರಿಗೆ ಅದನ್ನು ನಿರ್ವಹಿಸಲು ಸಹಾಯ ಬೇಕಿದ್ದರೆ ಅದಕ್ಕಾಗಿ ಅವನು ಸಮಯ ಮಾಡಿಕೊಳ್ಳುತ್ತಾನೆ. ಸಮಸ್ಯೆಯನ್ನು ಅದೇ ವಾರ ಬಗೆಹರಿಸಲು ಆಗದಿದ್ದರೆ, ಹಿರಿಯರಿಗೆ ಮತ್ತು ತಪ್ಪು ಮಾಡಿದವನಿಗೆ ನೆರವಾಗುವ ಬೈಬಲ್‌ ಸಲಹೆಗಳ ಕುರಿತು ಸಂಶೋಧನೆ ಮಾಡಲು ತಿಳಿಸುತ್ತಾನೆ. ಈ ವಿಷಯವನ್ನು ಶಾಖೆಗೆ ತಿಳಿಸಬೇಕಾಗಿದ್ದಲ್ಲಿ, ಸಂಚರಣ ಮೇಲ್ವಿಚಾರಕನು ಮತ್ತು ಹಿರಿಯರು ಸಂಪೂರ್ಣ ವರದಿಯನ್ನು ಬರೆದು ಶಾಖೆಗೆ ಕಳುಹಿಸುತ್ತಾರೆ.

47 ಸಂಚರಣ ಮೇಲ್ವಿಚಾರಕನು ಸಭೆಯನ್ನು ಭೇಟಿಯಾಗುವಾಗ ಆ ವಾರದ ಕೂಟಗಳಿಗೂ ಹಾಜರಾಗುತ್ತಾನೆ. ಶಾಖೆಯಿಂದ ಬರುವ ನಿರ್ದೇಶನಗಳಿಗೆ ಅನುಸಾರ ಅವನು ಸಭಾ ಕೂಟಗಳಲ್ಲಿ ಹೊಂದಾಣಿಕೆಗಳನ್ನು ಮಾಡಬಹುದು. ಆ ವಾರ ಅವನು ಎಲ್ಲರನ್ನು ಪ್ರೋತ್ಸಾಹಿಸಲು, ಪ್ರಚೋದಿಸಲು, ಮಾರ್ಗದರ್ಶಿಸಲು, ನಂಬಿಕೆ ಬಲಪಡಿಸಲು ಅನೇಕ ಭಾಷಣಗಳನ್ನು ಕೊಡುತ್ತಾನೆ. ಯೆಹೋವನ ಮೇಲೆ, ಯೇಸುವಿನ ಮೇಲೆ, ಸಂಘಟನೆಯ ಮೇಲೆ ಅವರಲ್ಲಿ ಪ್ರೀತಿಯನ್ನು ಬೆಳೆಸಲು ಪ್ರಯಾಸಪಡುತ್ತಾನೆ.

48 ಸಂಚರಣ ಮೇಲ್ವಿಚಾರಕರ ಭೇಟಿಯ ಒಂದು ಉದ್ದೇಶ ಸಾರುವ ಕಾರ್ಯದಲ್ಲಿ ಹುರುಪಿನಿಂದ ಭಾಗವಹಿಸುವಂತೆ ಎಲ್ಲರನ್ನು ಪ್ರೋತ್ಸಾಹಿಸಿ ಸಹಾಯವಾಗುವ ಸಲಹೆಗಳನ್ನು ಕೊಡುವುದಾಗಿದೆ. ಆ ಇಡೀ ವಾರ ಸೇವೆಯಲ್ಲಿ ಭಾಗವಹಿಸಲಿಕ್ಕಾಗಿ ಅನೇಕರು ತಮ್ಮ ಕೆಲಸಕಾರ್ಯಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಕೆಲವರು ಆ ತಿಂಗಳು ಸಹಾಯಕ ಪಯನೀಯರ್‌ ಸೇವೆ ಮಾಡಲು ಯೋಜನೆ ಮಾಡುತ್ತಾರೆ. ಸಂಚರಣ ಮೇಲ್ವಿಚಾರಕ ಅಥವಾ ಅವನ ಪತ್ನಿಯೊಟ್ಟಿಗೆ ಸೇವೆಮಾಡಲು ಬಯಸುವವರು ಮುಂಚಿತವಾಗಿ ಅವರೊಟ್ಟಿಗೆ ಮಾತಾಡಿ ಯೋಜನೆಗಳನ್ನು ಮಾಡಬಹುದು. ಅವರನ್ನು ಪುನರ್ಭೇಟಿ, ಬೈಬಲ್‌ ಅಧ್ಯಯನಗಳಿಗೆ ಕರೆದುಕೊಂಡು ಹೋಗುವುದರಿಂದ ತುಂಬ ಪ್ರಯೋಜನವಾಗುತ್ತದೆ. ಆ ಇಡೀ ವಾರ ನೀವು ಸೇವೆಗೆ ನೀಡುವ ಬೆಂಬಲ ಮತ್ತು ನಿಮ್ಮ ಪ್ರಯಾಸವನ್ನು ನಾವು ನಿಜಕ್ಕೂ ಶ್ಲಾಘಿಸುತ್ತೇವೆ!—ಜ್ಞಾನೋ. 27:17.

49 ಪ್ರತಿ ಸಂಚರಣ ವಿಭಾಗದಲ್ಲಿ ವರ್ಷಕ್ಕೆ ಎರಡು ಸಮ್ಮೇಳನಗಳು ಇರುತ್ತವೆ. ಈ ಸಮ್ಮೇಳನಗಳಲ್ಲಿ ಎಲ್ಲವನ್ನೂ ಕ್ರಮಬದ್ಧವಾಗಿ ಏರ್ಪಡಿಸುವ ಜವಾಬ್ದಾರಿ ಸಂಚರಣ ಮೇಲ್ವಿಚಾರಕನದ್ದು. ಅವನು ಒಬ್ಬ ಸಹೋದರನನ್ನು ಸಮ್ಮೇಳನ ಮೇಲ್ವಿಚಾರಕನನ್ನಾಗಿ, ಇನ್ನೊಬ್ಬನನ್ನು ಆ ಸಹೋದರನಿಗೆ ಸಹಾಯಕನನ್ನಾಗಿ ನೇಮಿಸುತ್ತಾನೆ. ಇವರು ಸಮ್ಮೇಳನಗಳನ್ನು ಆಯೋಜಿಸುವುದರಲ್ಲಿ ಸಂಚರಣ ಮೇಲ್ವಿಚಾರಕನಿಗೆ ಸಹಾಯ ಮಾಡುವುದರಿಂದ ಅವನು ಸಮ್ಮೇಳನದ ಕಾರ್ಯಕ್ರಮವನ್ನು ಯೋಜಿಸುವುದರ ಮೇಲೆ ಹೆಚ್ಚು ಗಮನ ನೀಡಲು ಆಗುತ್ತದೆ. ಇತರ ಇಲಾಖೆಗಳಲ್ಲಿ ಸೇವೆಸಲ್ಲಿಸಲು ಅರ್ಹ ಸಹೋದರರನ್ನು ಸಂಚರಣ ಮೇಲ್ವಿಚಾರಕನು ನೇಮಿಸುತ್ತಾನೆ. ಪ್ರತಿ ಸಮ್ಮೇಳನದ ನಂತರ ಲೆಕ್ಕಾಚಾರಗಳನ್ನು ಪರಿಶೀಲಿಸುವಂತೆ ಸಹ ಅವನು ಏರ್ಪಾಡಿಸುತ್ತಾನೆ. ವರ್ಷದಲ್ಲಿ ಒಂದು ಸಮ್ಮೇಳನಕ್ಕೆ ಶಾಖೆಯಿಂದ ಸಂದರ್ಶಕ ಭಾಷಣಕಾರನು ಬರುತ್ತಾನೆ. ಯಾವುದಾದರೂ ಸಭೆಗಳಿಗೆ ಸಮ್ಮೇಳನಕ್ಕಾಗಿ ತುಂಬ ದೂರ ಪ್ರಯಾಣ ಮಾಡಬೇಕಾಗುವಲ್ಲಿ ಅಥವಾ ಸಮ್ಮೇಳನದ ಸಭಾಂಗಣ ಚಿಕ್ಕದಿರುವಲ್ಲಿ ಒಂದೇ ಸಂಚರಣ ವಿಭಾಗದಲ್ಲಿ ಒಂದಕ್ಕಿಂತ ಹೆಚ್ಚು ಸಮ್ಮೇಳನಗಳನ್ನು ನಡೆಸಲಾಗುತ್ತದೆ.

50 ಸಂಚರಣ ಮೇಲ್ವಿಚಾರಕನು ತನ್ನ ಕ್ಷೇತ್ರ ಸೇವಾ ವರದಿಯನ್ನು ತಿಂಗಳ ಕೊನೆಯಲ್ಲಿ ನೇರವಾಗಿ ಶಾಖೆಗೆ ಕಳುಹಿಸುತ್ತಾನೆ. ಅವರ ಪ್ರಯಾಣ, ಊಟ, ವಸತಿ, ಇತರ ಅಗತ್ಯಗಳಿಗೆ ತಗಲುವ ಮಿತವಾದ ಖರ್ಚುಗಳನ್ನು ಅವರು ಭೇಟಿಮಾಡಿದ ಸಭೆಯು ಪೂರ್ತಿಯಾಗಿ ಭರಿಸದಿದ್ದರೆ ಅದನ್ನು ಶಾಖೆಯಿಂದ ವಿನಂತಿಸಬಹುದು. ದೇವರ ಸೇವೆಗೆ ಮೊದಲ ಸ್ಥಾನ ಕೊಡುವಾಗ ತಮಗೆ ಅಗತ್ಯವಿರುವುದನ್ನು ಯೆಹೋವನು ಖಂಡಿತ ಒದಗಿಸುತ್ತಾನೆ ಎಂಬ ಭರವಸೆ ಅವರಿಗಿದೆ. (ಲೂಕ 12:31) ಸಭಾ ಸದಸ್ಯರು ಈ ದೇವಭಕ್ತ ಹಿರಿಯರಿಗೆ ಅತಿಥಿಸತ್ಕಾರ ಮಾಡುವುದನ್ನು ಸುಯೋಗವಾಗಿ ಕಾಣಬೇಕು.—3 ಯೋಹಾ. 5-8.

ಶಾಖಾ ಸಮಿತಿ

51 ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿಗಳ ಪ್ರತಿಯೊಂದು ಶಾಖೆಯಲ್ಲಿ ಶಾಖಾ ಸಮಿತಿ ಇರುತ್ತದೆ. ಮೂವರು ಅಥವಾ ಅದಕ್ಕಿಂತ ಹೆಚ್ಚು ಪ್ರೌಢ ಸಹೋದರರು ಆ ಸಮಿತಿಯಲ್ಲಿರುತ್ತಾರೆ. ಅವರಲ್ಲಿ ಒಬ್ಬರು ಆ ಸಮಿತಿಯ ಸಂಯೋಜಕರಾಗಿರುತ್ತಾರೆ. ಶಾಖಾ ಸಮಿತಿಯು ಆ ದೇಶದಲ್ಲಿನ ಅಥವಾ ಆ ಶಾಖೆಯ ವ್ಯಾಪ್ತಿಯಲ್ಲಿ ಬರುವ ಬೇರೆ ದೇಶಗಳಲ್ಲಿನ ಸಾರುವ ಕೆಲಸವನ್ನು ನೋಡಿಕೊಳ್ಳುತ್ತದೆ.

52 ಅಷ್ಟೇ ಅಲ್ಲ ಅದು ಶಾಖೆಯ ವ್ಯಾಪ್ತಿಯಲ್ಲಿ ಬರುವ ಎಲ್ಲ ಸಭೆಗಳ ಕೆಲಸದ ಉಸ್ತುವಾರಿ ಮಾಡುತ್ತದೆ. ಯೆಹೋವನ ಸಂಘಟನೆ ನೀಡುವ ಪ್ರಕಾಶನಗಳನ್ನು ಸಭೆಗಳಿಗೆ ವಿತರಿಸಲು ಏರ್ಪಾಡು ಮಾಡುತ್ತದೆ. ಸಾರುವ ಕೆಲಸವನ್ನು ಚೆನ್ನಾಗಿ ಮೇಲ್ವಿಚಾರಣೆ ಮಾಡಲು ಸಭೆಗಳನ್ನು, ಸಂಚರಣ ವಿಭಾಗಗಳನ್ನು ಸ್ಥಾಪಿಸುತ್ತದೆ. ವಿಶೇಷ ಪಯನೀಯರ್‌, ಪಯನೀಯರ್‌ ಹಾಗೂ ಸಹಾಯಕ ಪಯನೀಯರರ ನಿರ್ದಿಷ್ಟ ಅಗತ್ಯಗಳಿಗೆ ಹಾಗೂ ಮಿಷನರಿ ಸೇವೆಗೆ ಗಮನ ಕೊಡುತ್ತದೆ. ಸಮ್ಮೇಳನ, ಅಧಿವೇಶನಗಳು ‘ಸಭ್ಯವಾಗಿಯೂ ಕ್ರಮವಾಗಿಯೂ ನಡೆಯುವಂತೆ’ ಏರ್ಪಾಡುಗಳನ್ನು ಮತ್ತು ನೇಮಕಗಳನ್ನು ಮಾಡುತ್ತದೆ.—1 ಕೊರಿಂ. 14:40.

53 ಶಾಖೆಯ ವ್ಯಾಪ್ತಿಯಲ್ಲಿ ಇನ್ನೊಂದು ದೇಶವಿದ್ದರೆ ಕೆಲವೊಮ್ಮೆ ಅಲ್ಲಿ ‘ದೇಶೀಯ ಸಮಿತಿ’ಯನ್ನು ನೇಮಿಸಲಾಗುತ್ತದೆ. ಈ ಸಮಿತಿಯು ಆ ದೇಶದ ಯೆಹೋವನ ಸಾಕ್ಷಿಗಳ ಕೆಲಸವನ್ನು ಮೇಲ್ವಿಚಾರಣೆ ಮಾಡುತ್ತದೆ. ಮಾತ್ರವಲ್ಲ ಬೆತೆಲ್‌ ಗೃಹ ಮತ್ತು ಕಛೇರಿಯ ಅಗತ್ಯಗಳನ್ನು ನೋಡಿಕೊಳ್ಳುತ್ತದೆ, ವರದಿಗಳನ್ನು ದಾಖಲಿಸುತ್ತದೆ, ಪತ್ರವ್ಯವಹಾರವನ್ನು ನೋಡಿಕೊಳ್ಳುತ್ತದೆ. ಹೆಚ್ಚಾಗಿ ಸುವಾರ್ತೆ ಸಾರುವ ಕೆಲಸದ ಮೇಲ್ವಿಚಾರಣೆ ಮಾಡುತ್ತದೆ. ಹೀಗೆ ದೇಶೀಯ ಸಮಿತಿಯು ಸಾರುವ ಕೆಲಸದ ಅಭಿವೃದ್ಧಿಗೆ ಶಾಖಾ ಸಮಿತಿಯೊಂದಿಗೆ ಸಹಕರಿಸುತ್ತದೆ.

54 ಶಾಖಾ ಸಮಿತಿ ಮತ್ತು ದೇಶೀಯ ಸಮಿತಿಯಲ್ಲಿ ಸೇವೆ ಸಲ್ಲಿಸಲು ಸಹೋದರರನ್ನು ಆಡಳಿತ ಮಂಡಲಿಯು ನೇಮಿಸುತ್ತದೆ.

ಮುಖ್ಯಕಾರ್ಯಾಲಯದ ಪ್ರತಿನಿಧಿಗಳು

55 ಆಡಳಿತ ಮಂಡಲಿಯು ಲೋಕವ್ಯಾಪಕವಾಗಿರುವ ಶಾಖೆಗಳನ್ನು ಭೇಟಿಮಾಡಲು ಅರ್ಹ ಸಹೋದರರನ್ನು ಕಳುಹಿಸುತ್ತದೆ. ಈ ಸಹೋದರರನ್ನು ‘ಮುಖ್ಯಕಾರ್ಯಾಲಯದ ಪ್ರತಿನಿಧಿ’ ಎಂದು ಕರೆಯಲಾಗುತ್ತದೆ. ಬೆತೆಲ್‌ ಕುಟುಂಬದ ಸದಸ್ಯರನ್ನು ಪ್ರೋತ್ಸಾಹಿಸುವುದು, ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಶಾಖಾ ಸಮಿತಿಗಿರುವ ಸಮಸ್ಯೆಗಳನ್ನು ಬಗೆಹರಿಸುವುದೇ ಅವನ ಮುಖ್ಯ ಕೆಲಸ. ಸಾಧ್ಯವಾದರೆ ಅಲ್ಲಿನ ಕೆಲವು ಸಂಚರಣ ಮೇಲ್ವಿಚಾರಕರನ್ನು, ಮಿಷನರಿಗಳನ್ನು ಭೇಟಿಯಾಗಿ ಮಾತಾಡುತ್ತಾನೆ. ಅವರಿಗಿರುವ ಸಮಸ್ಯೆ ಮತ್ತು ಅಗತ್ಯಗಳನ್ನು ತಿಳಿದುಕೊಳ್ಳುತ್ತಾನೆ. ಸಾರುವ ಮತ್ತು ಶಿಷ್ಯರನ್ನಾಗಿ ಮಾಡುವ ಪ್ರಾಮುಖ್ಯ ಕೆಲಸವನ್ನು ಮುಂದುವರಿಸಲು ಅವರಿಗೆ ಪ್ರೋತ್ಸಾಹ ಕೊಡುತ್ತಾನೆ.

56 ಅಷ್ಟೇ ಅಲ್ಲ ಶಾಖೆಯ ವ್ಯಾಪ್ತಿಯಲ್ಲಿ ಸಾರುವ ಕಾರ್ಯ ಮತ್ತು ಸಭೆಯ ಚಟುವಟಿಕೆಗಳು ಹೇಗೆ ನಡೆಯುತ್ತಿವೆಯೆಂದು ಆಸಕ್ತಿಯಿಂದ ತಿಳಿದುಕೊಳ್ಳುತ್ತಾನೆ. ಸಮಯವಿದ್ದರೆ ಪ್ರಾದೇಶಿಕ ಭಾಷಾಂತರ ಕಛೇರಿಗಳಿಗೂ ಭೇಟಿಮಾಡುತ್ತಾನೆ. ಸಾರುವ ಕೆಲಸದಲ್ಲೂ ಆದಷ್ಟು ಭಾಗವಹಿಸುತ್ತಾನೆ.

ಕುರುಬರಂತಿರುವ ಮೇಲ್ವಿಚಾರಕರಿಗೆ ನಾವು ಅಧೀನರಾಗುವಾಗ ಸಭೆಗಳ ಯಜಮಾನನಾದ ಕ್ರಿಸ್ತ ಯೇಸುವಿಗೆ ಅಧೀನರಾಗುತ್ತೇವೆ ಮತ್ತು ಆತನಿಗೆ ಇನ್ನಷ್ಟು ಆಪ್ತರಾಗುತ್ತೇವೆ

ಪ್ರೀತಿಯ ಮೇಲ್ವಿಚಾರಣೆ

57 ಪ್ರೌಢ ಕ್ರೈಸ್ತ ಪುರುಷರು ತೋರಿಸುವ ಪ್ರೀತಿಯ ಕಾಳಜಿ ಮತ್ತು ಅವರ ಪ್ರಯಾಸದ ಕೆಲಸದಿಂದ ನಮಗೆ ಅನೇಕ ಪ್ರಯೋಜನಗಳಿವೆ. ಕುರುಬರಂತಿರುವ ಈ ಮೇಲ್ವಿಚಾರಕರಿಗೆ ನಾವು ಅಧೀನರಾಗುವಾಗ ಸಭೆಯ ನಾಯಕನಾದ ಕ್ರಿಸ್ತ ಯೇಸುವಿಗೆ ಅಧೀನರಾಗುತ್ತೇವೆ ಮತ್ತು ಆತನಿಗೆ ಇನ್ನಷ್ಟು ಆಪ್ತರಾಗುತ್ತೇವೆ. (1 ಕೊರಿಂ. 16:15-18; ಎಫೆ. 1:22, 23) ಆಗ ಲೋಕವ್ಯಾಪಕವಾಗಿರುವ ಎಲ್ಲ ಸಭೆಗಳಲ್ಲಿ ದೇವರ ಪವಿತ್ರಾತ್ಮವು ಕೆಲಸಮಾಡುತ್ತದೆ ಮತ್ತು ಲೋಕದೆಲ್ಲೆಡೆ ನಡೆಯುತ್ತಿರುವ ಸಾರುವ ಕೆಲಸವನ್ನು ದೇವರ ವಾಕ್ಯವು ಮಾರ್ಗದರ್ಶಿಸುತ್ತದೆ.—ಕೀರ್ತ. 119:105.