ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 6

ಸಹಾಯಕ ಸೇವಕರು ಮಾಡುವ ಅಮೂಲ್ಯ ಸೇವೆ

ಸಹಾಯಕ ಸೇವಕರು ಮಾಡುವ ಅಮೂಲ್ಯ ಸೇವೆ

“ಕ್ರಿಸ್ತ ಯೇಸುವಿನ ದಾಸರಾಗಿರುವ ಪೌಲನೂ ತಿಮೊಥೆಯನೂ ಫಿಲಿಪ್ಪಿಯಲ್ಲಿ ಕ್ರಿಸ್ತ ಯೇಸುವಿನೊಂದಿಗೆ ಐಕ್ಯದಲ್ಲಿರುವ ಎಲ್ಲ ಪವಿತ್ರ ಜನರಿಗೂ ಅವರಲ್ಲಿರುವ ಮೇಲ್ವಿಚಾರಕರಿಗೂ ಶುಶ್ರೂಷಾ ಸೇವಕರಿಗೂ ಬರೆಯುವುದೇನೆಂದರೆ” ಎಂದು ಹೇಳುತ್ತಾ ಅಪೊಸ್ತಲ ಪೌಲನು ಫಿಲಿಪ್ಪಿ ಸಭೆಗೆ ಪತ್ರವನ್ನು ಆರಂಭಿಸಿದನು. (ಫಿಲಿ. 1:1) ಗಮನಿಸಿ, ಪೌಲನು ಶುಶ್ರೂಷಾ ಸೇವಕರಿಗೆ ಅಂದರೆ ಸಹಾಯಕ ಸೇವಕರಿಗೆ ವಂದನೆ ತಿಳಿಸಿದ್ದಾನೆ. ಅವರು ಸಭಾ ಹಿರಿಯರಿಗೆ ಸಹಾಯಕರಾಗಿ ಕೆಲಸಮಾಡುತ್ತಿದ್ದರು. ಇಂದು ಕೂಡ ಸಹಾಯಕ ಸೇವಕರು ಮಾಡುವ ಕೆಲಸಗಳಿಂದ ಹಿರಿಯರಿಗೆ ಸಹಾಯವಾಗುತ್ತದೆ ಮತ್ತು ಸಭೆಯು ಸುವ್ಯವಸ್ಥಿತವಾಗಿ ನಡೆಯಲು ನೆರವಾಗುತ್ತದೆ.

2 ನಿಮ್ಮ ಸಭೆಯಲ್ಲಿ ಸಹಾಯಕ ಸೇವಕರಾಗಿ ಸೇವೆ ಮಾಡುವವರು ಯಾರೆಂದು ನಿಮಗೆ ಗೊತ್ತಾ? ನಿಮ್ಮ ಮತ್ತು ಇಡೀ ಸಭೆಯ ಪ್ರಯೋಜನಕ್ಕಾಗಿ ಅವರು ಏನೆಲ್ಲಾ ಕೆಲಸಗಳನ್ನು ಮಾಡುತ್ತಾರೆಂದು ತಿಳಿದಿದೆಯಾ? ಈ ಸಹೋದರರ ಪರಿಶ್ರಮವನ್ನು ಯೆಹೋವನು ತುಂಬ ಮೆಚ್ಚುತ್ತಾನೆ. ‘ಒಳ್ಳೇ ರೀತಿಯಲ್ಲಿ ಶುಶ್ರೂಷೆ ಮಾಡುತ್ತಿರುವ ಈ ಪುರುಷರು ತಮಗಾಗಿ ದೇವರ ಮುಂದೆ ಒಳ್ಳೇ ನಿಲುವನ್ನೂ ಕ್ರಿಸ್ತ ಯೇಸುವಿನ ಸಂಬಂಧವಾದ ನಂಬಿಕೆಯಲ್ಲಿ ಬಹಳ ವಾಕ್ಸರಳತೆಯನ್ನೂ ಪಡೆದುಕೊಳ್ಳುತ್ತಾರೆ.’—1 ತಿಮೊ. 3:13.

ಸಹಾಯಕ ಸೇವಕರ ಅರ್ಹತೆಗಳು

3 ಸಹಾಯಕ ಸೇವಕರಲ್ಲಿ ಇರಬೇಕಾದ ಅರ್ಹತೆಗಳನ್ನು ಬೈಬಲ್‌ ತಿಳಿಸುತ್ತದೆ. ಸಹಾಯಕ ಸೇವಕನು ನೈತಿಕವಾಗಿ ಉತ್ತಮ ಜೀವನ ನಡೆಸುತ್ತಿರಬೇಕು, ಜವಾಬ್ದಾರಿಗಳನ್ನು ಚೆನ್ನಾಗಿ ನಿರ್ವಹಿಸಬೇಕು, ನೇಮಕಗಳನ್ನು ಶ್ರದ್ಧೆಯಿಂದ ಮಾಡಬೇಕು. ಇದನ್ನೇ ಪೌಲನು ತಿಮೊಥೆಯನಿಗೆ ಬರೆದನು: “[ಸಹಾಯಕ] ಸೇವಕರು ಸಹ ಗಂಭೀರ ವ್ಯಕ್ತಿಗಳಾಗಿರಬೇಕು, ಎರಡು ಮಾತಿನವರೂ ಅತಿಯಾಗಿ ದ್ರಾಕ್ಷಾಮದ್ಯವನ್ನು ಸೇವಿಸುವವರೂ ಅಪ್ರಾಮಾಣಿಕ ಲಾಭಕ್ಕಾಗಿ ಆಶೆಪಡುವವರೂ ಆಗಿರದೆ ಶುದ್ಧ ಮನಸ್ಸಾಕ್ಷಿಯೊಂದಿಗೆ ನಂಬಿಕೆಯ ಪವಿತ್ರ ರಹಸ್ಯವನ್ನು ಬಿಗಿಯಾಗಿ ಹಿಡಿದುಕೊಂಡವರೂ ಆಗಿರಬೇಕು. ಇದಲ್ಲದೆ, ಇವರು ಮೊದಲಾಗಿ ಯೋಗ್ಯರಾಗಿದ್ದಾರೋ ಎಂದು ಪರೀಕ್ಷಿಸಲ್ಪಡಲಿ, ತರುವಾಯ ಅವರು ನಿಂದಾರಹಿತರಾಗಿರುವುದರಿಂದ ಶುಶ್ರೂಷಕರಾಗಿ ಸೇವೆಮಾಡಲಿ. [ಸಹಾಯಕ] ಸೇವಕರು ಏಕಪತ್ನಿಯುಳ್ಳವರೂ ತಮ್ಮ ಮಕ್ಕಳನ್ನು ಮತ್ತು ಸ್ವಂತ ಮನೆವಾರ್ತೆಯನ್ನು ಒಳ್ಳೇ ರೀತಿಯಲ್ಲಿ ಮೇಲ್ವಿಚಾರಣೆಮಾಡುವವರೂ ಆಗಿರಲಿ.” (1 ತಿಮೊ. 3:8-10, 12) ಈ ಉನ್ನತ ನೀತಿಯ ಮಟ್ಟಗಳಿಗೆ ಅನುಸಾರ ಸಹಾಯಕ ಸೇವಕರು ನಡೆಯುತ್ತಿರುವಲ್ಲಿ ಯಾರೂ ಕೂಡ ಅವರನ್ನು ಬೆರಳುತೋರಿಸಿ ಮಾತಾಡಲು ಅವಕಾಶ ಇರುವುದಿಲ್ಲ. ಹೀಗೆ, ಸಭೆಗೆ ಕೆಟ್ಟ ಹೆಸರು ಬರುವುದಿಲ್ಲ.

4 ಸಹಾಯಕ ಸೇವಕರು ವಯಸ್ಸಿನಲ್ಲಿ ದೊಡ್ಡವರಾಗಿರಲಿ ಚಿಕ್ಕವರಾಗಿರಲಿ ಪ್ರತಿ ತಿಂಗಳು ಸೇವೆಯಲ್ಲಿ ಭಾಗವಹಿಸಬೇಕು. ಯೇಸುವಿನಂತೆ ಸೇವೆಯಲ್ಲಿ ಹುರುಪು ತೋರಿಸಬೇಕು. ಹೀಗೆ ಮಾಡುವಾಗ ಮಾನವಕುಲವನ್ನು ರಕ್ಷಿಸಲು ಯೆಹೋವನಿಗೆ ಎಷ್ಟೊಂದು ಆಸಕ್ತಿಯಿದೆಯೆಂದು ಅವರು ತೋರಿಸುತ್ತಾರೆ.—1 ತಿಮೊ 2:4.

5 ಸಹಾಯಕ ಸೇವಕರು ತಮ್ಮ ಗುಣ, ಮಾತು, ನಡತೆ, ಬಟ್ಟೆ, ಅಲಂಕಾರ ಎಲ್ಲದರಲ್ಲೂ ಮಾದರಿಯಾಗಿರುತ್ತಾರೆ. ಸ್ವಸ್ಥಮನಸ್ಸುಳ್ಳವರೂ ಆಗಿರುತ್ತಾರೆ. ಇದರಿಂದ ಇತರರ ಗೌರವ ಸಂಪಾದಿಸುತ್ತಾರೆ. ಯೆಹೋವನೊಂದಿಗೆ ತಮಗಿರುವ ಸಂಬಂಧಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳುತ್ತಾರೆ. ತಮ್ಮ ಸೇವಾ ಸುಯೋಗಗಳನ್ನು ಗಂಭೀರವಾಗಿ ತಕ್ಕೊಳ್ಳುತ್ತಾರೆ.—ತೀತ 2:2, 6-8.

6 ಈ ಪುರುಷರು ‘ಯೋಗ್ಯರಾಗಿದ್ದಾರೋ ಎಂದು ಪರೀಕ್ಷಿಸಲ್ಪಟ್ಟಿರುತ್ತಾರೆ.’ ಅಂದರೆ ಸಹಾಯಕ ಸೇವಕರಾಗುವ ಮುಂಚೆಯೇ ದೇವರ ಸೇವೆಗೆ ಜೀವನದಲ್ಲಿ ಮೊದಲ ಸ್ಥಾನ ಕೊಟ್ಟಿರುವುದಕ್ಕೆ ರುಜುವಾತು ಕೊಟ್ಟಿರುತ್ತಾರೆ ಮತ್ತು ಅವರ ಮುಂದಿರುವ ಯಾವುದೇ ಸೇವಾ ಸುಯೋಗಗಳಿಗೆ ಅರ್ಹರಾಗಲು ಪ್ರಯತ್ನಿಸುತ್ತಾರೆ. ಹೀಗೆ ಸಭೆಯಲ್ಲಿ ಎಲ್ಲರಿಗೆ ಒಳ್ಳೇ ಮಾದರಿಯಾಗಿ ಇರುತ್ತಾರೆ.—1 ತಿಮೊ. 3:10.

ಸಹಾಯಕ ಸೇವಕರು ಮಾಡುವ ಸೇವೆ

7 ಸಹಾಯಕ ಸೇವಕರು ಸಹೋದರರಿಗೆ ಸಹಾಯವಾಗುವ ಬೇರೆ ಬೇರೆ ಕೆಲಸಗಳನ್ನು ಮಾಡುತ್ತಾರೆ. ಇದರಿಂದ ಬೋಧಿಸಲು, ಪರಿಪಾಲನೆ ಮಾಡಲು ಸಭಾ ಹಿರಿಯರಿಗೆ ಹೆಚ್ಚು ಸಮಯ ಸಿಗುತ್ತದೆ. ಸಹಾಯಕ ಸೇವಕರಿಗೆ ನೇಮಕಗಳನ್ನು ಹಿರಿಯರ ಮಂಡಲಿಯು ಕೊಡುತ್ತದೆ. ಹೀಗೆ ನೇಮಿಸುವಾಗ ಪ್ರತಿಯೊಬ್ಬನ ಸಾಮರ್ಥ್ಯವನ್ನು ಮತ್ತು ಸಭೆಗೆ ಯಾವ ಸಹಾಯ ಬೇಕಿದೆ ಎನ್ನುವುದನ್ನು ಅದು ಗಮನದಲ್ಲಿಡುತ್ತದೆ.

ಸಹಾಯಕ ಸೇವಕರು ಬೇರೆ ಬೇರೆ ಕೆಲಸಗಳನ್ನು ನಿರ್ವಹಿಸುತ್ತಾರೆ. ಇದರಿಂದ ಸಭಾ ಹಿರಿಯರಿಗೆ ಬೋಧಿಸಲು ಮತ್ತು ಪರಿಪಾಲನೆ ಮಾಡಲು ಹೆಚ್ಚು ಸಮಯ ಸಿಗುತ್ತದೆ

8 ನಮಗೆ ಓದಲು, ಸೇವೆಯಲ್ಲಿ ಬಳಸಲು ಬೇಕಾದ ಪುಸ್ತಕ ಮುಂತಾದವು ಸಿಗುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಹಿರಿಯರು ಒಬ್ಬ ಸಹಾಯಕ ಸೇವಕನಿಗೆ ವಹಿಸುತ್ತಾರೆ. ಪತ್ರಿಕೆಗಳನ್ನು ನೋಡಿಕೊಳ್ಳಲು ಇನ್ನೊಬ್ಬ ಸಹಾಯಕ ಸೇವಕನನ್ನು ನೇಮಿಸುತ್ತಾರೆ. ಸಭೆಯ ಲೆಕ್ಕಾಚಾರ ಮತ್ತು ಸೇವಾ ಕ್ಷೇತ್ರದ ದಾಖಲೆಗಳನ್ನು ನೋಡಿಕೊಳ್ಳಲು ಕೆಲವು ಸಹಾಯಕ ಸೇವಕರನ್ನು ನೇಮಿಸಲಾಗುತ್ತದೆ. ಇನ್ನೂ ಕೆಲವರನ್ನು ಧ್ವನಿ ಉಪಕರಣಗಳನ್ನು ನೋಡಿಕೊಳ್ಳಲು, ಹಿರಿಯರಿಗೆ ಇತರ ಕೆಲಸಗಳಲ್ಲಿ ಸಹಾಯಮಾಡಲು ಮತ್ತು ಸಹಾಯಕರಾಗಿ (ಅಟೆಂಡೆಂಟರಾಗಿ) ನೇಮಿಸಲಾಗುತ್ತದೆ. ರಾಜ್ಯ ಸಭಾಗೃಹವನ್ನು ಶುಚಿಯಾಗಿ ಮತ್ತು ಸುಸ್ಥಿತಿಯಲ್ಲಿ ಇಡಲು ತುಂಬ ಕೆಲಸ ಮಾಡಲಿಕ್ಕಿರುತ್ತದೆ. ಇದಕ್ಕೆ ಸಹಾಯ ಮಾಡುವ ಜವಾಬ್ದಾರಿಯನ್ನು ಕೂಡ ಸಹಾಯಕ ಸೇವಕರಿಗೆ ಕೊಡಲಾಗುತ್ತದೆ.

9 ಹೆಚ್ಚು ಮಂದಿ ಸಹಾಯಕ ಸೇವಕರು ಇರುವಲ್ಲಿ ಒಬ್ಬೊಬ್ಬರಿಗೆ ಒಂದೊಂದು ಕೆಲಸವನ್ನು ಅಥವಾ ಒಂದೇ ಕೆಲಸಕ್ಕೆ ಒಬ್ಬರಿಗಿಂತ ಹೆಚ್ಚು ಮಂದಿಯನ್ನು ನೇಮಿಸಲಾಗುತ್ತದೆ. ಕೆಲವೇ ಮಂದಿ ಸಹಾಯಕ ಸೇವಕರಿರುವಲ್ಲಿ ಒಬ್ಬನಿಗೇ ಅನೇಕ ನೇಮಕಗಳನ್ನು ಕೊಡಲಾಗುತ್ತದೆ ಅಥವಾ ಕೆಲವು ಕೆಲಸಗಳನ್ನು ಒಳ್ಳೇ ಮಾದರಿಯಾಗಿರುವ ಸಹೋದರರಿಗೆ ವಹಿಸಲಾಗುತ್ತದೆ. ಇದರಿಂದ ಆ ಸಹೋದರರು ಮುಂದೆ ಸಹಾಯಕ ಸೇವಕರಾಗಲು ಬೇಕಾದ ಅನುಭವ ಪಡೆಯುತ್ತಾರೆ. ಸಹೋದರರು ಇಲ್ಲದಿದ್ದಲ್ಲಿ ನಡತೆ ಮತ್ತು ಆರಾಧನೆಯಲ್ಲಿ ಒಳ್ಳೇ ಮಾದರಿಯಾಗಿರುವ ಸಹೋದರಿಯರನ್ನು ನೇಮಿಸಲಾಗುತ್ತದೆ. ಅವರನ್ನು ಸಹಾಯಕ ಸೇವಕರಾಗಿ ನೇಮಿಸುವುದಿಲ್ಲವಾದರೂ ಕೆಲವು ಕೆಲಸಗಳಲ್ಲಿ ಅವರು ಸಹಾಯ ಮಾಡಬಹುದು. ಸಹೋದರನಾಗಿರಲಿ ಸಹೋದರಿಯಾಗಿರಲಿ ಕೂಟಗಳ ಹಾಜರಿ, ಸೇವೆ, ಕುಟುಂಬ ಜೀವನ, ಮನೋರಂಜನೆ ಆಯ್ಕೆ, ಬಟ್ಟೆ, ಅಲಂಕಾರ ಹೀಗೆ ಎಲ್ಲದರಲ್ಲೂ ಇತರರಿಗೆ ಒಳ್ಳೇ ಮಾದರಿಯಾಗಿರಬೇಕು.

10 ಕೆಲವೇ ಹಿರಿಯರಿರುವ ಸಭೆಯಲ್ಲಿ ಪ್ರಚಾರಕರೊಂದಿಗೆ ದೀಕ್ಷಾಸ್ನಾನದ ಪ್ರಶ್ನೆಗಳನ್ನು ಚರ್ಚಿಸಲು ಸಮರ್ಥರಾದ ಸಹಾಯಕ ಸೇವಕರಿಗೆ ಹೇಳಲಾಗುತ್ತದೆ. ಇವರು ಬೈಬಲಿನ ಮುಖ್ಯ ಬೋಧನೆಗಳಿಗೆ ಸಂಬಂಧಪಟ್ಟ ಪ್ರಶ್ನೆಗಳನ್ನು ಮಾತ್ರ ಚರ್ಚಿಸುತ್ತಾರೆ. ಈ ಪ್ರಶ್ನೆಗಳನ್ನು ಇದೇ ಪುಸ್ತಕದ “ಹೆಚ್ಚಿನ ಮಾಹಿತಿ” ಭಾಗ 1ರಲ್ಲಿ (“ಬೈಬಲಿನ ಮುಖ್ಯ ಬೋಧನೆಗಳು”) ಮತ್ತು ಭಾಗ 3ರಲ್ಲಿ (“ಯೆಹೋವನ ಏರ್ಪಾಡುಗಳಿಗೆ ವಿಧೇಯತೆ”) ಕೊಡಲಾಗಿದೆ. ಆದರೆ ಭಾಗ 2ರಲ್ಲಿ (“ಯೆಹೋವನ ನೀತಿಯ ಮಟ್ಟಗಳು”) ಗಂಭೀರ ವಿಷಯಗಳಿರುವುದರಿಂದ ಅದನ್ನು ಹಿರಿಯರೇ ಪ್ರಚಾರಕರೊಂದಿಗೆ ಚರ್ಚಿಸಬೇಕು.

11 ಸರಿಯಾದ ಕಾರಣ ಇರುವಲ್ಲಿ ಹಿರಿಯರ ಮಂಡಲಿಯು ಸಹಾಯಕ ಸೇವಕರ ಕೆಲವು ನೇಮಕಗಳನ್ನು ಬದಲಾಯಿಸಬಹುದು. ಆದರೆ ಅವರು ಒಂದು ನಿರ್ದಿಷ್ಟ ಸಮಯದ ವರೆಗೆ ಒಂದೇ ನೇಮಕದಲ್ಲಿರುವಂತೆ ಬಿಡುವುದು ಒಳ್ಳೇದು. ಆಗ ಅವರು ಆ ಕೆಲಸದಲ್ಲಿ ಅನುಭವ ಮತ್ತು ಕೌಶಲ ಪಡೆಯುತ್ತಾರೆ.

12 ಹೆಚ್ಚು ಹಿರಿಯರು ಇಲ್ಲದಿರುವ ಸಭೆಗಳಲ್ಲಿ ಯಾರ ‘ಅಭಿವೃದ್ಧಿಯು ಎಲ್ಲರಿಗೆ ಪ್ರಕಟವಾಗಿದೆಯೋ’ ಅಂಥ ಸಹಾಯಕ ಸೇವಕನಿಗೆ ಬೇರೆ ಜವಾಬ್ದಾರಿಗಳನ್ನೂ ಕೊಡಬಹುದು. (1 ತಿಮೊ. 4:15) ಉದಾಹರಣೆಗೆ, ಅವನನ್ನು ಗುಂಪು ಮೇಲ್ವಿಚಾರಕನಿಗೆ ಸಹಾಯಕನಾಗಿರಲು ಅಥವಾ ಹಿರಿಯರ ಮೇಲ್ವಿಚಾರಣೆಯ ಕೆಳಗೆ ಗುಂಪು ಸೇವಕನಾಗಿರಲು ನೇಮಿಸಬಹುದು. ‘ಜೀವನ ಮತ್ತು ಸೇವೆ ಕೂಟ’ದಲ್ಲಿ ಸಭಾ ಬೈಬಲ್‌ ಅಧ್ಯಯನವನ್ನು ಮತ್ತು ಇನ್ನು ಕೆಲವು ಭಾಗಗಳನ್ನು ನಡೆಸಲು ಕೊಡಬಹುದು. ಸಾರ್ವಜನಿಕ ಭಾಷಣ ಕೊಡಲು ಸಹ ನೇಮಿಸಬಹುದು. ಅಗತ್ಯ ಇರುವಲ್ಲಿ ಮತ್ತು ಅರ್ಹರಾಗಿರುವಲ್ಲಿ ಬೇರೆ ಸುಯೋಗಗಳನ್ನೂ ಕೊಡಬಹುದು. (1 ಪೇತ್ರ 4:10) ಸಹಾಯಕ ಸೇವಕರು ಮನಸಾರೆ ಮುಂದೆ ಬಂದು ಸಂತೋಷದಿಂದ ಹಿರಿಯರಿಗೆ ಸಹಾಯ ಮಾಡಬೇಕು.

13 ಸಹಾಯಕ ಸೇವಕರ ಕೆಲಸವು ಹಿರಿಯರ ಕೆಲಸಕ್ಕಿಂತ ಭಿನ್ನವಾಗಿದೆ ನಿಜ. ಆದರೆ ದೇವರಿಗೆ ಸಲ್ಲಿಸುವ ಪವಿತ್ರ ಸೇವೆಯಲ್ಲಿ ಅದು ಅಲ್ಪವೇನಲ್ಲ. ಸಭೆಯು ಸುಗಮವಾಗಿ ನಡೆಯಲು ಸಹಾಯಕ ಸೇವಕರ ಸೇವೆ ತುಂಬ ಪ್ರಾಮುಖ್ಯ. ಅವರು ತಮ್ಮ ಜವಾಬ್ದಾರಿಗಳನ್ನು ಚೆನ್ನಾಗಿ ನಿರ್ವಹಿಸುತ್ತಿದ್ದರೆ ಮತ್ತು ಸಭೆಯ ಕಾಳಜಿವಹಿಸುವ, ಬೋಧಕರಾಗಿ ಸೇವೆಮಾಡುವ ಅರ್ಹತೆ ಪಡೆದರೆ ಹಿರಿಯರ ಮಂಡಲಿ ಅವರನ್ನು ಸಭಾ ಹಿರಿಯರಾಗಲು ಶಿಫಾರಸ್ಸು ಮಾಡುತ್ತದೆ.

14 ನೀವು ಹದಿವಯಸ್ಸಿನ ಅಥವಾ ಇತ್ತೀಚೆಗೆ ದೀಕ್ಷಾಸ್ನಾನ ಪಡೆದ ಸಹೋದರರಾಗಿದ್ದರೆ ಸಹಾಯಕ ಸೇವಕರಾಗುವ ಅರ್ಹತೆ ಪಡೆಯಲು ಪ್ರಯತ್ನಿಸಿ. (1 ತಿಮೊ. 3:1) ಪ್ರತಿ ವರ್ಷ ಸಾವಿರಾರು ಜನರು ಸತ್ಯಕ್ಕೆ ಬರುತ್ತಿದ್ದಾರೆ. ಸಭೆಗಳೂ ಹೆಚ್ಚುತ್ತಿವೆ. ಸಭೆಗಳಲ್ಲಿ ಜವಾಬ್ದಾರಿಗಳನ್ನು ನೋಡಿಕೊಳ್ಳಲು ಪ್ರೌಢ ಪುರುಷರು ಬೇಕಾಗಿದ್ದಾರೆ. ಹಾಗಾಗಿ ನೀವು ಅರ್ಹರಾಗಲು ಪ್ರಯತ್ನಿಸಿ. ಇದಕ್ಕಾಗಿ ನೀವು ಸಹೋದರರಿಗೆ ಸಹಾಯ ಮಾಡುವ ಇಚ್ಛೆಯನ್ನು ಬೆಳೆಸಿಕೊಳ್ಳಿ. ಈ ಇಚ್ಛೆಯನ್ನು ಬೆಳೆಸಿಕೊಳ್ಳುವ ಒಂದು ವಿಧ ಯೇಸುವಿನ ಉತ್ತಮ ಮಾದರಿಯನ್ನು ಧ್ಯಾನಿಸುವುದೇ. (ಮತ್ತಾ. 20:28; ಯೋಹಾ. 4:6, 7; 13:4, 5) ಇತರರಿಗೆ ಕೊಡುವುದರಿಂದ ಸಿಗುವ ಸಂತೋಷವನ್ನು ಅನುಭವಿಸಿದಾಗ ಸಹಾಯ ಮಾಡುವ ಇಚ್ಛೆ ಇನ್ನೂ ಹೆಚ್ಚಾಗುವುದು. (ಅ. ಕಾ. 20:35) ಆದ್ದರಿಂದ ಇತರರಿಗೆ ನೆರವಾಗಲು, ರಾಜ್ಯ ಸಭಾಗೃಹವನ್ನು ದುರಸ್ತಿ ಮತ್ತು ಸ್ವಚ್ಛ ಮಾಡುವುದರಲ್ಲಿ ಸಹಾಯಮಾಡಲು ಮುಂದೆ ಬನ್ನಿ. ‘ಜೀವನ ಮತ್ತು ಸೇವೆ ಕೂಟ’ದಲ್ಲಿ ನೇಮಕವಿದ್ದವರು ಬರದಿದ್ದಾಗ ಅದನ್ನು ಸಾದರಪಡಿಸಲು ತಯಾರಿರಿ. ಯೆಹೋವನಲ್ಲಿರುವ ಗುಣಗಳನ್ನು ಬೆಳೆಸಿಕೊಳ್ಳುವುದು ಕೂಡ ತುಂಬ ಪ್ರಾಮುಖ್ಯ. ಇದಕ್ಕಾಗಿ ವೈಯಕ್ತಿಕ ಅಧ್ಯಯನದ ಒಳ್ಳೇ ರೂಢಿ ಇರಬೇಕು. (ಕೀರ್ತ. 1:1, 2; ಗಲಾ. 5:22, 23) ಮಾತ್ರವಲ್ಲ ಸಭೆಯಲ್ಲಿ ನೇಮಕಗಳನ್ನು ಕೊಟ್ಟರೆ ಅದನ್ನು ಶ್ರದ್ಧೆಯಿಂದ ಮಾಡಿ ಮುಗಿಸುತ್ತೀರೆಂಬ ಭರವಸೆ ಸಂಪಾದಿಸಬೇಕು.—1 ಕೊರಿಂ. 4:2.

15 ಸಹಾಯಕ ಸೇವಕರು ಪವಿತ್ರಾತ್ಮದ ಮಾರ್ಗದರ್ಶನದ ಮೂಲಕ ನೇಮಿಸಲ್ಪಡುತ್ತಾರೆ. ಅವರಿಂದ ಸಭೆಗೆ ತುಂಬ ಒಳಿತಾಗುತ್ತದೆ. ಅವರ ಪರಿಶ್ರಮದ ಕೆಲಸಕ್ಕೆ ನಾವು ಹೇಗೆ ಕೃತಜ್ಞತೆಯನ್ನು ತೋರಿಸಬಹುದು? ಸಹಾಯಕ ಸೇವಕರು ಕೆಲಸಗಳನ್ನು ಮಾಡುವಾಗ ಅವರೊಂದಿಗೆ ಸಹಕರಿಸುವ ಮೂಲಕವೇ. ಹೀಗೆ ಮಾಡುವಲ್ಲಿ ಸಭೆಯು ಸುವ್ಯವಸ್ಥಿತವಾಗಿ ನಡೆಯಲು ಯೆಹೋವನು ಮಾಡಿರುವ ಏರ್ಪಾಡುಗಳಿಗಾಗಿ ನಾವು ಆತನಿಗೆ ಕೃತಜ್ಞತೆ ತೋರಿಸುತ್ತೇವೆ.—ಗಲಾ. 6:10.