ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 9

ಸುವಾರ್ತೆಯನ್ನು ಸಾರುವ ವಿಧಾನಗಳು

ಸುವಾರ್ತೆಯನ್ನು ಸಾರುವ ವಿಧಾನಗಳು

ದೇವರ ರಾಜ್ಯದ ಸುವಾರ್ತೆಯನ್ನು ಸಾರಲು ಯೇಸು ತನ್ನೆಲ್ಲ ಶಕ್ತಿಯನ್ನು ಬಳಸಿದನು. ಹೀಗೆ ತನ್ನ ಹಿಂಬಾಲಕರಿಗೆ ಒಂದು ಒಳ್ಳೇ ಮಾದರಿಯನ್ನಿಟ್ಟನು. ಆತನೇ ಜನರ ಬಳಿ ಹೋಗಿ ಮಾತಾಡಿದನು. ಮನೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಜನರಿಗೆ ಕಲಿಸಿದನು. (ಮತ್ತಾ. 9:35; 13:36; ಲೂಕ 8:1) ಆತನು ಒಬ್ಬೊಬ್ಬರೊಂದಿಗೂ ಮಾತಾಡಿದನು, ಶಿಷ್ಯರು ಮಾತ್ರ ಇದ್ದಾಗಲೂ ಕಲಿಸಿದನು. ಸಾವಿರಾರು ಜನರ ಗುಂಪಿಗೆ ಸಹ ಬೋಧಿಸಿದನು. (ಮಾರ್ಕ 4:10-13; 6:35-44; ಯೋಹಾ. 3:2-21) ಪ್ರೋತ್ಸಾಹ, ನಿರೀಕ್ಷೆಯ ಮಾತುಗಳನ್ನಾಡಲು ಪ್ರತಿಯೊಂದು ಅವಕಾಶವನ್ನು ಬಳಸಿಕೊಂಡನು. (ಲೂಕ 4:16-19) ಸ್ವಲ್ಪ ವಿಶ್ರಮಿಸಬೇಕೆಂದು ಅನಿಸಿದಾಗಲೂ ಸಾರುವ ಅವಕಾಶವನ್ನು ಬಿಟ್ಟುಬಿಡಲಿಲ್ಲ. (ಮಾರ್ಕ 6:30-34; ಯೋಹಾ. 4:4-34) ಆತನ ಆ ಹುರುಪು ಅಪೊಸ್ತಲರಿಗೆ ಆತನನ್ನು ಹಿಂಬಾಲಿಸಲು ಮತ್ತು ಆತನಂತೆಯೇ ಸೇವೆ ಮಾಡಲು ಸ್ಫೂರ್ತಿ ಕೊಟ್ಟಿತು. ಯೇಸುವಿನ ಬಗ್ಗೆ ಬೈಬಲಿನಲ್ಲಿ ಓದುವಾಗ ನಮಗೂ ಆತನಂತೆ ಸೇವೆ ಮಾಡಲು ಹುರುಪು ಬರುತ್ತದೆ.—ಮತ್ತಾ. 4:19, 20; ಲೂಕ 5:27, 28; ಯೋಹಾ. 1:43-45.

2 ಸುಮಾರು 2,000 ವರ್ಷಗಳ ಹಿಂದೆ ಯೇಸು ಶುರುಮಾಡಿದ ಸಾರುವ ಕೆಲಸವನ್ನು ನಾವಿಂದು ಬೇರೆಬೇರೆ ವಿಧಾನಗಳಲ್ಲಿ ಮಾಡಬಹುದು. ಹೇಗೆ?

ಮನೆ-ಮನೆ ಸೇವೆ

3 ದೇವರ ರಾಜ್ಯದ ಕುರಿತು ಸಾರುವುದು ಎಷ್ಟು ಪ್ರಾಮುಖ್ಯವೆಂದು ನಮಗೆ ತಿಳಿದಿದೆ. ಹಾಗಾಗಿ ಅದನ್ನು ವ್ಯವಸ್ಥಿತವಾಗಿ ಮಾಡಲು ಮನೆಯಿಂದ ಮನೆಗೆ ಹೋಗಿ ಸಾರುತ್ತೇವೆ. ಈ ವಿಧಾನವನ್ನು ಎಷ್ಟು ವ್ಯಾಪಕವಾಗಿ ಬಳಸಿದ್ದೇವೆಂದರೆ ಇದು ಯೆಹೋವನ ಸಾಕ್ಷಿಗಳ ಗುರುತಾಗಿಬಿಟ್ಟಿದೆ. ಮನೆಮನೆ ಸೇವೆಯಿಂದ ಕಡಿಮೆ ಸಮಯದಲ್ಲೇ ಲಕ್ಷಾಂತರ ಜನರನ್ನು ಭೇಟಿಯಾಗಿ ಸುವಾರ್ತೆ ತಿಳಿಸಲು ಆಗುತ್ತದೆ. ಇದು ಅತ್ಯುತ್ತಮ ವಿಧಾನವೆಂದು ಸಿಕ್ಕಿರುವ ಒಳ್ಳೇ ಫಲಿತಾಂಶಗಳಿಂದ ದೃಢವಾಗಿದೆ. (ಮತ್ತಾ. 11:19; 24:14) ಯೆಹೋವನ ಮೇಲೆ ಮತ್ತು ನೆರೆಯವರ ಮೇಲೆ ನಮಗಿರುವ ಪ್ರೀತಿಯನ್ನು ಕಾರ್ಯದಲ್ಲಿ ತೋರಿಸಲು ಮನೆಮನೆ ಸೇವೆ ಅತ್ಯುತ್ತಮ ವಿಧಾನವೆಂದು ಸಾಬೀತಾಗಿದೆ.—ಮತ್ತಾ. 22:34-40.

4 ಮನೆಮನೆ ಸೇವೆಯು ಯೆಹೋವನ ಸಾಕ್ಷಿಗಳು ಕಂಡುಹಿಡಿದ ಹೊಸ ವಿಧಾನವಲ್ಲ. ಅಪೊಸ್ತಲ ಪೌಲನು ಸಹ ಮನೆಮನೆಗೆ ಹೋಗಿ ಜನರಿಗೆ ಬೋಧಿಸಿದನು. ಅದು ಅವನ ಈ ಮಾತುಗಳಿಂದ ಗೊತ್ತಾಗುತ್ತದೆ: ‘ಏಷ್ಯಾ ಪ್ರಾಂತದಲ್ಲಿ ಕಾಲಿಟ್ಟ ಮೊದಲ ದಿವಸದಿಂದ ನಾನು ನಿಮಗೆ ಪ್ರಯೋಜನಕರವಾದ ಯಾವುದೇ ವಿಷಯಗಳನ್ನು ಹೇಳಲು ಅಥವಾ ಮನೆಮನೆಯಲ್ಲಿ ನಿಮಗೆ ಬೋಧಿಸಲು ಹಿಂಜರಿಯಲಿಲ್ಲ.’ ಪೌಲನು ಈ ವಿಧಾನವನ್ನು ಮತ್ತು ಇತರ ವಿಧಾನಗಳನ್ನು ಬಳಸಿ ‘ದೇವರ ಕಡೆಗೆ ತಿರುಗಿಕೊಳ್ಳುವಂತೆ ಮತ್ತು ಕರ್ತನಾದ ಯೇಸುವಿನಲ್ಲಿ ನಂಬಿಕೆಯಿಡುವಂತೆ ಯೆಹೂದ್ಯರಿಗೂ ಗ್ರೀಕರಿಗೂ ಸಂಪೂರ್ಣವಾಗಿ ಸಾಕ್ಷಿನೀಡಿದನು.’ (ಅ. ಕಾ. 20:18, 20, 21) ರೋಮಿನ ಚಕ್ರವರ್ತಿಗಳು ವಿಗ್ರಹಾರಾಧನೆ ಮಾಡುವಂತೆ ಜನರನ್ನು ಹುರಿದುಂಬಿಸುತ್ತಿದ್ದರು. ‘ದೇವದೇವತೆಗಳ ಭಯ’ ಅನೇಕರಲ್ಲಿತ್ತು. ಆದಕಾರಣ ಆ ಕಾಲದಲ್ಲಿ ತುರ್ತಿನಿಂದ ಸುವಾರ್ತೆ ಸಾರಬೇಕಿತ್ತು. ‘ಜಗತ್ತನ್ನೂ ಅದರಲ್ಲಿರುವ ಸಕಲ ವಸ್ತುಗಳನ್ನೂ ಉಂಟುಮಾಡಿದ ಯೆಹೋವನ’ ಕುರಿತು ಜನರು ತಿಳಿಯಬೇಕಿತ್ತು. ಹಾಗಾಗಿ ಸಾರುವ ಕಾರ್ಯದ ಮೂಲಕ ಯೆಹೋವನು ‘ಎಲ್ಲ ಕಡೆಗಳಲ್ಲಿರುವ ಮಾನವರಿಗೆ ಪಶ್ಚಾತ್ತಾಪಪಡಲು’ ಅವಕಾಶ ಕೊಟ್ಟನು.—ಅ. ಕಾ. 17:22-31.

5 ಸುವಾರ್ತೆಯನ್ನು ಜನರಿಗೆ ತಿಳಿಸುವುದು ಅಂದಿಗಿಂತ ಇಂದು ಹೆಚ್ಚು ತುರ್ತಿನದ್ದಾಗಿದೆ. ಏಕೆಂದರೆ ಈ ದುಷ್ಟ ಲೋಕದ ಅಂತ್ಯ ಧಾವಿಸಿ ಬರುತ್ತಿದೆ. ಆದ್ದರಿಂದ ಸುವಾರ್ತೆ ಸಾರಲು ನಮ್ಮಿಂದ ಆಗುವುದನ್ನೆಲ್ಲ ಮಾಡಬೇಕು. ಸತ್ಯಕ್ಕೋಸ್ಕರ ಹಸಿದಿರುವ ಜನರನ್ನು ಹುಡುಕಲು ಮನೆ-ಮನೆ ಸೇವೆಯೇ ಅತ್ಯುತ್ತಮ ವಿಧಾನವೆಂದು ಅನೇಕ ವರ್ಷಗಳ ಅನುಭವದಿಂದ ತಿಳಿದುಬಂದಿದೆ. ಯೇಸು ಮತ್ತು ಅಪೊಸ್ತಲರ ದಿನಗಳಲ್ಲಿ ಇದ್ದಂತೆಯೇ ಇಂದು ಸಹ ಈ ವಿಧಾನವು ಪ್ರಭಾವಶಾಲಿಯಾಗಿದೆ.—ಮಾರ್ಕ 13:10.

6 ಮನೆಮನೆ ಸೇವೆಯನ್ನು ನಿಮ್ಮಿಂದಾದಷ್ಟು ಮಾಡುತ್ತಿದ್ದೀರಾ? ಮಾಡುತ್ತಿದ್ದರೆ ಯೆಹೋವನು ಖಂಡಿತ ನಿಮ್ಮನ್ನು ಮೆಚ್ಚುತ್ತಾನೆ. (ಯೆಹೆ. 9:11; ಅ. ಕಾ. 20:35) ಮನೆಮನೆಗೆ ಹೋಗಿ ಸಾರುವುದು ನಿಮಗೆ ಅಷ್ಟೇನೂ ಸುಲಭವಾಗಿರಲಿಕ್ಕಿಲ್ಲ. ದೇಹದೌರ್ಬಲ್ಯಗಳು ನಿಮಗಿರಬಹುದು, ನಿಮ್ಮ ಸೇವಾಕ್ಷೇತ್ರದಲ್ಲಿ ಜನರು ಸುವಾರ್ತೆಗೆ ಅಷ್ಟೇನೂ ಕಿವಿಗೊಡದಿರಬಹುದು, ಸರ್ಕಾರದಿಂದ ನಿರ್ಬಂಧ ಇರಬಹುದು ಅಥವಾ ನಿಮಗೆ ಅಪರಿಚಿತರೊಟ್ಟಿಗೆ ಮಾತಾಡಲು ನಾಚಿಕೆ, ಭಯ ಆಗಬಹುದು. ಹಾಗಾಗಿ ಪ್ರತಿ ಸಾರಿ ಮನೆಮನೆ ಸೇವೆಗೆ ಹೋದಾಗ ಒಂಥರ ತಳಮಳ, ಹಿಂಜರಿಕೆ ಆಗಬಹುದು. ಹಾಗಂತ ನಿರುತ್ತೇಜನಗೊಳ್ಳಬೇಡಿ. (ವಿಮೋ. 4:10-12) ಲೋಕವ್ಯಾಪಕವಾಗಿ ಅನೇಕ ಸಹೋದರ ಸಹೋದರಿಯರಿಗೂ ನಿಮ್ಮಂತೆಯೇ ಅನಿಸುತ್ತದೆ.

7 ಯೇಸು ತನ್ನ ಶಿಷ್ಯರಿಗೆ ಏನು ಮಾತುಕೊಟ್ಟನೆಂದು ಗಮನಿಸಿ: “ನಾನು ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ವರೆಗೂ ಎಲ್ಲ ದಿವಸ ನಿಮ್ಮ ಸಂಗಡ ಇರುತ್ತೇನೆ.” (ಮತ್ತಾ. 28:20) ಈ ಮಾತು, ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಭಾಗವಹಿಸಲು ನಮ್ಮಲ್ಲಿ ಧೈರ್ಯ ತುಂಬುತ್ತದೆ. ಅಪೊಸ್ತಲ ಪೌಲನಂತೆ ನಾವು ಕೂಡ, “ನನಗೆ ಶಕ್ತಿಯನ್ನು ಕೊಡುವಾತನ ಮೂಲಕ ನಾನು ಎಲ್ಲವನ್ನು ಮಾಡಲು ಶಕ್ತನಾಗಿದ್ದೇನೆ” ಎಂದು ಹೇಳುತ್ತೇವೆ. (ಫಿಲಿ. 4:13) ಆದ್ದರಿಂದ ಮನೆಮನೆ ಸೇವೆಗಾಗಿ ಸಭೆಯು ಮಾಡುವ ಎಲ್ಲ ಏರ್ಪಾಡುಗಳಲ್ಲಿ ಭಾಗವಹಿಸೋಣ. ಇತರರೊಂದಿಗೆ ಸೇವೆ ಮಾಡುವಾಗ ನಮಗೆ ಪ್ರೋತ್ಸಾಹ ಸಿಗುತ್ತದೆ. ಸೇವೆಯನ್ನು ಉತ್ತಮವಾಗಿ ಮಾಡಲು ಸಹಾಯ ಸಿಗುತ್ತದೆ. ಸೇವೆಯಲ್ಲಿ ಎದುರಾಗುವ ಸವಾಲುಗಳನ್ನು ಜಯಿಸಲು ಯೆಹೋವನಲ್ಲಿ ಸಹಾಯಕ್ಕಾಗಿ ಬೇಡೋಣ. ಸುವಾರ್ತೆ ಸಾರಲು ನಮ್ಮೆಲ್ಲ ಶಕ್ತಿಸಾಮರ್ಥ್ಯವನ್ನು ಬಳಸೋಣ.—1 ಯೋಹಾ. 5:14.

8 ಸುವಾರ್ತೆಯನ್ನು ಸಾರುವಾಗ ‘ನಮಗಿರುವ ನಿರೀಕ್ಷೆಗೆ ಕಾರಣವನ್ನು’ ಹೇಳಲು ಅನೇಕ ಅವಕಾಶಗಳು ಸಿಗುತ್ತವೆ. (1 ಪೇತ್ರ 3:15) ದೇವರ ರಾಜ್ಯದ ನಿರೀಕ್ಷೆ ಇರುವವರಿಗೂ ಇಲ್ಲದವರಿಗೂ ಎಷ್ಟು ವ್ಯತ್ಯಾಸವಿದೆಯೆಂದು ನಮಗೆ ಹೆಚ್ಚು ಸ್ಪಷ್ಟವಾಗುತ್ತದೆ. (ಯೆಶಾ. 65:13, 14) ‘ನಿಮ್ಮ ಬೆಳಕನ್ನು ಜನರ ಮುಂದೆ ಪ್ರಕಾಶಿಸಿರಿ’ ಎಂಬ ಯೇಸುವಿನ ಮಾತಿಗೆ ವಿಧೇಯರಾಗುತ್ತಿದ್ದೇವೆಂಬ ಸಂತೃಪ್ತಿ ಇರುತ್ತದೆ. ಅಷ್ಟೇ ಅಲ್ಲ ಯೆಹೋವನ ಬಗ್ಗೆ ಮತ್ತು ಜೀವಕೊಡುವ ಸತ್ಯದ ಬಗ್ಗೆ ಜನರಿಗೆ ಕಲಿಸುವ ಸೌಭಾಗ್ಯ ನಮ್ಮದಾಗುತ್ತದೆ.—ಮತ್ತಾ. 5:16; ಯೋಹಾ. 17:3; 1 ತಿಮೊ. 4:16.

9 ವಾರದ ದಿನಗಳಲ್ಲಿ ಮತ್ತು ಶನಿವಾರ, ಭಾನುವಾರದಂದು ಮನೆಮನೆ ಸೇವೆಗೆ ಹೋಗಲು ಸಭೆಯಲ್ಲಿ ಏರ್ಪಾಡು ಮಾಡಲಾಗುತ್ತದೆ. ಹಗಲಲ್ಲಿ ಜನರು ಮನೆಯಲ್ಲಿಲ್ಲದ ಕೆಲವು ಕ್ಷೇತ್ರಗಳಲ್ಲಿ ಸಂಜೆ ಸಾಕ್ಷಿಕಾರ್ಯವನ್ನು ಏರ್ಪಡಿಸಲಾಗುತ್ತದೆ. ಬೆಳಗ್ಗೆಗಿಂತ ಸಾಯಂಕಾಲ ಜನರು ಮಾತಾಡಲು ಹೆಚ್ಚು ಇಷ್ಟಪಡುತ್ತಾರೆ.

ಒಳ್ಳೇ ಮನಸ್ಸಿನ ವ್ಯಕ್ತಿಗಳನ್ನು ಹುಡುಕಿರಿ

10 “ಯೋಗ್ಯರು ಯಾರೆಂದು ಹುಡುಕಿರಿ” ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು. (ಮತ್ತಾ. 10:11) “ಯೋಗ್ಯರು” ಅಂದರೆ ಸುವಾರ್ತೆಯನ್ನು ಕೇಳುವ ಒಳ್ಳೇ ಮನಸ್ಸಿನ ವ್ಯಕ್ತಿಗಳು. ಅಂಥವರನ್ನು ಹುಡುಕಲು ಯೇಸು ಮನೆ ಮನೆಗೆ ಮಾತ್ರ ಹೋಗಲಿಲ್ಲ. ಆತನು ಮುಂಚಿತವಾಗಿ ಯೋಜನೆ ಮಾಡಿ ಕೆಲವು ಸ್ಥಳಗಳಿಗೆ ಹೋಗಿ ಸಾರಿದನು. ಸಂದರ್ಭ ಸಿಕ್ಕಿದಾಗೆಲ್ಲ ಸಹ ಸಾರಿದನು. (ಲೂಕ 8:1; ಯೋಹಾ. 4:7-15) ಆತನಂತೆ ಅಪೊಸ್ತಲರೂ ಬೇರೆ ಬೇರೆ ಸನ್ನಿವೇಶಗಳಲ್ಲಿ, ಸ್ಥಳಗಳಲ್ಲಿ ಸಾಕ್ಷಿಕೊಟ್ಟರು.—ಅ. ಕಾ. 17:17; 28:16, 23, 30, 31.

ಪ್ರತಿಯೊಬ್ಬರಿಗೆ ದೇವರ ರಾಜ್ಯದ ಸುವಾರ್ತೆಯನ್ನು ತಿಳಿಸುವುದೇ ನಮ್ಮ ಗುರಿ

11 ಇಂದು ಕೂಡ ಪ್ರತಿಯೊಬ್ಬರಿಗೆ ಸುವಾರ್ತೆಯನ್ನು ತಿಳಿಸುವುದೇ ನಮ್ಮ ಗುರಿ. ಯೇಸುವಿನಂತೆ ಮತ್ತು ಅಪೊಸ್ತಲರಂತೆ ಸುವಾರ್ತೆ ಸಾರಲು ಸಿಗುವ ಪ್ರತಿಯೊಂದು ಅವಕಾಶವನ್ನು ನಾವು ಬಳಸಿಕೊಳ್ಳಬೇಕು. ಕಾಲ ಬದಲಾದಂತೆ, ಜನರ ಸನ್ನಿವೇಶ ಬದಲಾದಂತೆ ಸಾರುವ ವಿಧಾನದಲ್ಲೂ ಬದಲಾವಣೆ ಮಾಡಿಕೊಳ್ಳಬೇಕು. (1 ಕೊರಿಂ. 7:31) ಹಾಗಾಗಿ ಸಭೆಯ ಕ್ಷೇತ್ರದಲ್ಲಿ ನಾವು ಸಾರ್ವಜನಿಕ ಸೇವೆಯನ್ನೂ ಮಾಡಬೇಕು. (ಅ. ಕಾ. 20:20) ಕೆಲವು ಪ್ರಚಾರಕರು ವ್ಯಾಪಾರ ಕ್ಷೇತ್ರದಲ್ಲಿ ಸೇವೆಮಾಡಿ ಅನೇಕರಿಗೆ ಸತ್ಯವನ್ನು ತಿಳಿಸಿದ್ದಾರೆ. ಬೀದಿ ಸಾಕ್ಷಿಕಾರ್ಯದಿಂದ ಕೂಡ ಅನೇಕ ದೇಶಗಳಲ್ಲಿ ಒಳ್ಳೇ ಫಲಿತಾಂಶ ಸಿಕ್ಕಿದೆ. ಪಾರ್ಕ್‌ಗಳಲ್ಲಿ, ವಾಹನಗಳನ್ನು ನಿಲ್ಲಿಸುವ ಸ್ಥಳಗಳಲ್ಲಿ ಮತ್ತು ಜನರಿರುವ ಇತರ ಕಡೆಗಳಲ್ಲಿ ಸಾರಿದ್ದರಿಂದ ಆಸಕ್ತ ಜನರು ಸಿಕ್ಕಿದ್ದಾರೆ. ಕೆಲವು ಸಭೆಗಳು ತಮ್ಮ ಕ್ಷೇತ್ರದಲ್ಲಿ ತಳ್ಳುಬಂಡಿ, ಮೇಜುಗಳನ್ನು ಬಳಸಿ ಸುವಾರ್ತೆ ಸಾರಿದ್ದಾರೆ. ಜೊತೆಗೆ, ಶಾಖೆಯು ಕೆಲವೊಮ್ಮೆ ಮಹಾನಗರಗಳಲ್ಲಿ ಸಾರ್ವಜನಿಕ ಸಾಕ್ಷಿಕಾರ್ಯವನ್ನು ಏರ್ಪಡಿಸುತ್ತದೆ. ಸಾಮಾನ್ಯವಾಗಿ ಅನೇಕ ಸಭೆಗಳವರು ಸೇರಿ ಹೆಚ್ಚು ಜನರು ಓಡಾಡುವ ಸ್ಥಳಗಳಲ್ಲಿ ಈ ಸೇವೆಯನ್ನು ಮಾಡುತ್ತಾರೆ. ಇದರಿಂದ ಮನೆಯಲ್ಲಿ ಸಿಗದ ಜನರಿಗೂ ಸುವಾರ್ತೆ ಮುಟ್ಟಿದೆ.

12 ಜನರಿಗೆ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ನೀಡುವ ಮೂಲಕ ಸಾರ್ವಜನಿಕ ಸೇವೆಯನ್ನು ಉತ್ತಮವಾಗಿ ಮಾಡಬಹುದು. ಸಮಯ-ಸನ್ನಿವೇಶಕ್ಕೆ ಸೂಕ್ತವಾದ ಒಂದು ಲೇಖನವನ್ನು ಪತ್ರಿಕೆಯಿಂದ ಆರಿಸಿ ಜನರೊಟ್ಟಿಗೆ ವಿವೇಚನೆಯಿಂದ ಸ್ನೇಹಭಾವದಿಂದ ಮಾತಾಡಬಹುದು. ಇತರ ಸಾಹಿತ್ಯವನ್ನು ಕೂಡ ನೀಡಬಹುದು. ಅವರ ವಿಳಾಸ ಪಡೆದು ಅವರನ್ನು ಪುನಃ ಭೇಟಿಮಾಡಲು ಏರ್ಪಾಡು ಮಾಡಬಹುದು. ಹೀಗೆ ಸಾರ್ವಜನಿಕ ಸಾಕ್ಷಿಕಾರ್ಯ ಮಾಡುವಲ್ಲಿ ನಮ್ಮ ಸೇವೆಯನ್ನು ಹೆಚ್ಚಿಸಲು ಮತ್ತು ಅದರಲ್ಲಿ ಆನಂದಿಸಲು ಆಗುತ್ತದೆ.

13 ಸುವಾರ್ತೆ ಸಾರಿದಷ್ಟಕ್ಕೆ ಕ್ರೈಸ್ತರ ಕೆಲಸ ಮುಗಿಯಿತು ಅಂತಲ್ಲ. ನಿತ್ಯಜೀವಕ್ಕೆ ನಡೆಸುವ ಸತ್ಯವನ್ನು ಸ್ವೀಕರಿಸುವಂತೆ ಜನರಿಗೆ ಸಹಾಯಮಾಡುವ ಜವಾಬ್ದಾರಿಯೂ ನಮಗಿದೆ. ಅದಕ್ಕಾಗಿ ಆಸಕ್ತ ಜನರನ್ನು ಮತ್ತೆ ಮತ್ತೆ ಭೇಟಿಮಾಡಿ ಅವರಿಗೆ ಕಲಿಸಬೇಕು. ಆಗಲೇ ಅವರು ಪ್ರಗತಿಮಾಡಿ ಪ್ರೌಢ ಕ್ರೈಸ್ತರಾಗಲು ಸಾಧ್ಯ.

ಪುನರ್ಭೇಟಿಗಳನ್ನು ಮಾಡಿ

14 ಯೇಸು ತನ್ನ ಹಿಂಬಾಲಕರಿಗೆ, ‘ನೀವು ಭೂಮಿಯ ಕಟ್ಟಕಡೆಯ ವರೆಗೂ ನನಗೆ ಸಾಕ್ಷಿಗಳಾಗಿರುವಿರಿ’ ಎಂದನು. (ಅ. ಕಾ. 1:8) ಮಾತ್ರವಲ್ಲ, ‘ಹೊರಟುಹೋಗಿ ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ. ನಾನು ನಿಮಗೆ ಆಜ್ಞಾಪಿಸಿದ ಎಲ್ಲ ವಿಷಯಗಳನ್ನು ಪಾಲಿಸುವಂತೆ ಅವರಿಗೆ ಬೋಧಿಸಿರಿ’ ಎಂದೂ ಹೇಳಿದನು. (ಮತ್ತಾ. 28:19, 20) ಈ ನೇಮಕ ಪೂರೈಸುವಾಗ ನಾವು ಹೆಚ್ಚು ಆನಂದಿಸಬೇಕಾದರೆ ಪುನರ್ಭೇಟಿಗಳನ್ನು ಮಾಡಬೇಕು. ಸುವಾರ್ತೆಗೆ ಆಸಕ್ತಿಯಿಂದ ಕಿವಿಗೊಟ್ಟ ಜನರನ್ನು ಮತ್ತೆ ಭೇಟಿಯಾದಾಗ ಅವರಿಗೆ ಖುಷಿಯಾಗಬಹುದು. ಬೈಬಲಿನ ಕುರಿತು ಹೆಚ್ಚು ಮಾಹಿತಿಯನ್ನು ತಿಳಿಸಿದಾಗ ದೇವರಲ್ಲಿ ಅವರ ನಂಬಿಕೆ ಹೆಚ್ಚಾಗುತ್ತದೆ ಮತ್ತು ದೇವರ ಬಗ್ಗೆ ಕಲಿಯುವುದು ಎಷ್ಟು ಅಗತ್ಯವೆಂದು ಅವರು ಮನಗಾಣುತ್ತಾರೆ. (ಮತ್ತಾ. 5:3) ಪುನರ್ಭೇಟಿಗಾಗಿ ನೀವು ಮುಂಚೆಯೇ ತಯಾರಿ ಮಾಡಿ ಅವರಿಗೆ ಅನುಕೂಲವಾದ ಸಮಯದಲ್ಲಿ ಭೇಟಿಮಾಡಿದರೆ ಬೈಬಲ್‌ ಅಧ್ಯಯನ ಶುರುಮಾಡಲು ಆಗುತ್ತದೆ. ಪುನರ್ಭೇಟಿ ಮಾಡುವ ಉದ್ದೇಶವೂ ಅದೇ. ನಾವು ಸತ್ಯದ ಬೀಜವನ್ನು ಬಿತ್ತುತ್ತೇವೆ ಅಷ್ಟೇ ಅಲ್ಲ, ಅದಕ್ಕೆ ನೀರು ಕೂಡ ಹಾಕುತ್ತೇವೆ.—1 ಕೊರಿಂ. 3:6.

15 ಪುನರ್ಭೇಟಿ ಮಾಡುವುದು ತುಂಬ ಕಷ್ಟವೆಂದು ಕೆಲವರಿಗೆ ಅನಿಸುತ್ತದೆ. ಬಹುಶಃ ನೀವು ಚಿಕ್ಕ ನಿರೂಪಣೆ ಬಳಸಿ ಸುವಾರ್ತೆ ತಿಳಿಸುವುದರಲ್ಲಿ ನಿಪುಣರಾಗಿರಬಹುದು. ಅದರಲ್ಲಿ ಆನಂದಿಸುತ್ತಿರಬಹುದು. ಆದರೆ ಆಸಕ್ತ ವ್ಯಕ್ತಿಯನ್ನು ಪುನಃ ಭೇಟಿಯಾಗಿ ಬೈಬಲ್‌ ವಿಷಯವನ್ನು ಚರ್ಚಿಸುವುದೆಂದರೆ ನಿಮಗೆ ತಳಮಳ ಗಾಬರಿ ಆಗಬಹುದು. ಹಾಗಂತ ಧೈರ್ಯ ಕಳೆದುಕೊಳ್ಳಬೇಡಿ. ಹೀಗೆ ಮಾಡಿ ನೋಡಿ: ಮೊದಲ ಭೇಟಿಯಲ್ಲಿ ಯಾವುದಾದರೂ ಬೈಬಲ್‌ ಸಾಹಿತ್ಯ ಕೊಟ್ಟಿರುತ್ತೀರಲ್ಲಾ, ಅದರಲ್ಲಿರುವ ವಿಷಯವನ್ನೇ ಆ ವ್ಯಕ್ತಿಯೊಟ್ಟಿಗೆ ಚರ್ಚಿಸಿ. ಏನು ಚರ್ಚಿಸಬೇಕು ಎನ್ನುವುದನ್ನು ಮುಂಚೆಯೇ ತಯಾರಿ ಮಾಡಿ. ಆಗಲೂ ಭಯ ಆಗುವುದಾದರೆ ಸೇವೆಯಲ್ಲಿ ಅನುಭವವಿರುವ ಪ್ರಚಾರಕರನ್ನು ನಿಮ್ಮೊಟ್ಟಿಗೆ ಕರೆದುಕೊಂಡು ಹೋಗಿ.

ಬೈಬಲ್‌ ಅಧ್ಯಯನ ನಡೆಸಿರಿ

16 ಅಪೊಸ್ತಲರ ಕಾರ್ಯಗಳು 8ನೇ ಅಧ್ಯಾಯದಲ್ಲಿರುವ ಒಂದು ಘಟನೆಯನ್ನು ಗಮನಿಸಿ. ಯೆಹೂದಿ ಮತವನ್ನು ಪಾಲಿಸುತ್ತಿದ್ದ ಒಬ್ಬ ವ್ಯಕ್ತಿ ಯೆಶಾಯ ಗ್ರಂಥವನ್ನು ಓದುತ್ತಿದ್ದನು. ಸುವಾರ್ತೆಯ ಪ್ರಚಾರಕನಾದ ಫಿಲಿಪ್ಪನು ಅವನಿಗೆ, “ನೀನು ಓದುತ್ತಿರುವುದು ನಿನಗೆ ಅರ್ಥವಾಗುತ್ತಿದೆಯೊ?” ಎಂದು ಕೇಳಿದನು. ಅದಕ್ಕವನು, “ಯಾವನಾದರೂ ಮಾರ್ಗದರ್ಶನ ನೀಡದಿದ್ದರೆ ನನಗೆ ಹೇಗೆ ಅರ್ಥವಾದೀತು?” ಎಂದನು. ಅವನು ಓದುತ್ತಿದ್ದ ಗ್ರಂಥಭಾಗವನ್ನೇ ಫಿಲಿಪ್ಪನು ವಿವರಿಸುತ್ತಾ “ಯೇಸುವಿನ ವಿಷಯವಾದ ಸುವಾರ್ತೆಯನ್ನು” ಅವನಿಗೆ ತಿಳಿಸಿದನು. (ಅ. ಕಾ. 8:26-36) ಅವನೊಂದಿಗೆ ಫಿಲಿಪ್ಪನು ಎಷ್ಟು ಹೊತ್ತು ಮಾತಾಡಿದನೆಂದು ನಮಗೆ ಗೊತ್ತಿಲ್ಲ. ಆದರೆ ಫಿಲಿಪ್ಪನು ಎಷ್ಟು ಚೆನ್ನಾಗಿ ವಿವರಿಸಿದನೆಂದರೆ ಆ ವ್ಯಕ್ತಿ ಯೇಸುವಿನಲ್ಲಿ ನಂಬಿಕೆಯಿಟ್ಟನು ಮತ್ತು ತನಗೆ ದೀಕ್ಷಾಸ್ನಾನ ಮಾಡಿಸುವಂತೆ ಕೇಳಿಕೊಂಡನು. ಹೀಗೆ ಯೇಸು ಕ್ರಿಸ್ತನ ಶಿಷ್ಯನಾದನು.

17 ಇಂದು ಸಹ ಬೈಬಲಿನ ಕುರಿತು ತಿಳಿಯದವರು ಅನೇಕರಿದ್ದಾರೆ. ಆಸಕ್ತ ಜನರು ದೇವರಲ್ಲಿ ನಂಬಿಕೆಯನ್ನಿಟ್ಟು ದೀಕ್ಷಾಸ್ನಾನಕ್ಕೆ ಅರ್ಹರಾಗಬೇಕಾದರೆ ನಾವು ಅವರಿಗೆ ಸಹಾಯ ಮಾಡಬೇಕು. ಅದಕ್ಕಾಗಿ ನಾವು ಅನೇಕ ವಾರ, ತಿಂಗಳು, ಇಡೀ ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯ ಅವರನ್ನು ಭೇಟಿಮಾಡುತ್ತಾ ಅವರಿಗೆ ಕಲಿಸಬೇಕಾಗಬಹುದು. ನಾವು ತಾಳ್ಮೆ ಮತ್ತು ಪ್ರೀತಿಯಿಂದ ಸಹಾಯ ಮಾಡಿದರೆ ಅವರು ಯೇಸುವಿನ ಶಿಷ್ಯರಾಗುತ್ತಾರೆ. ಆಗ ನಮಗಾಗುವ ಆನಂದಕ್ಕೆ ಯಾವುದೂ ಸರಿಸಾಟಿಯಲ್ಲ. ಅದಕ್ಕೇ ಯೇಸು ಹೇಳಿದನು: “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ.”—ಅ. ಕಾ. 20:35.

18 ಬೈಬಲ್‌ ಅಧ್ಯಯನ ನಡೆಸಲು ಅದಕ್ಕೆಂದೇ ಇರುವ ಸಾಹಿತ್ಯ ಬಳಸಿ. ನಿಮ್ಮೊಂದಿಗೆ ಬೈಬಲ್‌ ಅಧ್ಯಯನ ಮಾಡಿದವರ ಮಾದರಿಯನ್ನು ಅನುಸರಿಸುತ್ತಾ ನಿಮ್ಮ ವಿದ್ಯಾರ್ಥಿಯೊಂದಿಗೆ ಅಧ್ಯಯನ ಮಾಡುವಲ್ಲಿ ಅವರು ಒಳ್ಳೇ ಪ್ರಗತಿ ಮಾಡುವರು. ಹೀಗೆ ಅವರು ಯೇಸು ಕ್ರಿಸ್ತನ ಶಿಷ್ಯರಾಗಲು ನೀವು ಸಹಾಯಮಾಡುವಿರಿ.

19 ಬೈಬಲ್‌ ಅಧ್ಯಯನ ಆರಂಭಿಸಲು, ಮುಂದುವರಿಸಲು ಸಹಾಯ ಬೇಕಾದರೆ ಒಬ್ಬ ಹಿರಿಯನ ಬಳಿ ಅಥವಾ ಸೇವೆಯಲ್ಲಿ ಅನುಭವವಿರುವವರ ಬಳಿ ಕೇಳಿ. ಜೀವನ ಮತ್ತು ಸೇವೆ ಕೂಟದ ಕೈಪಿಡಿಯಲ್ಲಿ ಬರುವ ಸಲಹೆಗಳು ಮತ್ತು ಕೂಟದಲ್ಲಿ ಮಾಡುವ ಅಭಿನಯಗಳು ಕೂಡ ನಿಮಗೆ ನೆರವಾಗುವವು. ಯೆಹೋವನ ಮೇಲೆ ಆತುಕೊಳ್ಳಿ. ಬೈಬಲ್‌ ಅಧ್ಯಯನ ಬೇಕೆಂಬ ನಿಮ್ಮ ಬಯಕೆಯನ್ನು ಆತನಿಗೆ ತಿಳಿಸಿ. (1 ಯೋಹಾ. 3:22) ನಿಮ್ಮ ಕುಟುಂಬದಲ್ಲಿ ಯಾರೊಟ್ಟಿಗಾದರೂ ನೀವು ಬೈಬಲ್‌ ಅಧ್ಯಯನವನ್ನು ಮಾಡುತ್ತಿರಬಹುದು. ಹಾಗಿದ್ದರೂ ಬೇರೊಂದು ಬೈಬಲ್‌ ಅಧ್ಯಯನ ಆರಂಭಿಸಲು ಪ್ರಯತ್ನಿಸಿ. ಬೈಬಲ್‌ ಅಧ್ಯಯನಗಳು ಇದ್ದರೆ ಸೇವೆಯಲ್ಲಿ ಹೆಚ್ಚು ಆನಂದಿಸುವಿರಿ.

ಆಸಕ್ತ ಜನರನ್ನು ಯೆಹೋವನ ಸಂಘಟನೆಗೆ ನಡೆಸಿ

20 ಜನರಿಗೆ ಯೆಹೋವನ ಬಗ್ಗೆ ಕಲಿಸಿ ಯೇಸುವಿನ ಶಿಷ್ಯರಾಗಲು ಸಹಾಯಮಾಡಿದಾಗ ಅವರು ಕ್ರೈಸ್ತ ಸಭೆಯ ಭಾಗವಾಗುತ್ತಾರೆ. ನಮ್ಮ ಬೈಬಲ್‌ ವಿದ್ಯಾರ್ಥಿಯೂ ಅಷ್ಟು ಪ್ರಗತಿಮಾಡಬೇಕಾದರೆ ನಾವೇನು ಮಾಡಬೇಕು? ಯೆಹೋವನ ಸಂಘಟನೆಯನ್ನು ಗುರುತಿಸಲು ಮತ್ತು ಬೆಂಬಲಿಸಲು ಕಲಿಸಬೇಕು. ಹಾಗೆ ಕಲಿಸಲಿಕ್ಕೆಂದೇ ವಿಡಿಯೋಗಳಿವೆ, ಯೆಹೋವ ದೇವರ ಇಷ್ಟವನ್ನು ಯಾರು ಮಾಡುತ್ತಿದ್ದಾರೆ? ಎಂಬ ಕಿರುಹೊತ್ತಗೆಯಿದೆ. ಈ ಪುಸ್ತಕದ 4ನೇ ಅಧ್ಯಾಯದಲ್ಲಿರುವ ಮಾಹಿತಿಯನ್ನು ಸಹ ಉಪಯೋಗಿಸಬಹುದು.

21 ಬೈಬಲ್‌ ಕುರಿತು ಮಾತಾಡಲು ಆರಂಭಿಸಿದ ದಿನದಿಂದಲೇ ವಿದ್ಯಾರ್ಥಿಗೆ ಯೆಹೋವನ ಸಂಘಟನೆಯ ಕುರಿತು ತಿಳಿಸುತ್ತಿರಿ. ಸುವಾರ್ತೆಯನ್ನು ಭೂಮಿಯಲ್ಲೆಲ್ಲ ಸಾರಲು ಯೆಹೋವನು ಈ ಸಂಘಟನೆಯನ್ನು ಉಪಯೋಗಿಸುತ್ತಿದ್ದಾನೆ ಎಂದು ಮನಗಾಣಿಸಿ. ಬೈಬಲ್‌ ಅಧ್ಯಯನ ಮಾಡಲು ಬಳಸುವ ಸಾಹಿತ್ಯ ಎಷ್ಟು ಮೌಲ್ಯವುಳ್ಳದ್ದೆಂದು ತಿಳಿಸಿ. ದೇವರಿಗೆ ಸಮರ್ಪಿತರಾದ ಸ್ವಯಂಸೇವಕರು ಬೈಬಲ್‌ ಸಾಹಿತ್ಯವನ್ನು ಹೇಗೆ ತಯಾರಿಸುತ್ತಾರೆ, ಭೂಮಿಯ ಎಲ್ಲ ಕಡೆಗಳಲ್ಲಿ ಅದನ್ನು ಹೇಗೆ ವಿತರಿಸುತ್ತಾರೆ, ನಮ್ಮ ಕೂಟಗಳು ಹೇಗೆ ನಡೆಯುತ್ತವೆ ಅನ್ನೋದನ್ನು ವಿವರಿಸಿ. ಕೂಟಗಳಿಗೆ ಬರುವಂತೆ ಅವರನ್ನು ಆಮಂತ್ರಿಸಿ. ಸ್ನೇಹಿತರಿಗೆ ಅವರ ಪರಿಚಯ ಮಾಡಿಸಿ. ಸಮ್ಮೇಳನ, ಅಧಿವೇಶನಗಳಲ್ಲಿ ಸಹೋದರ ಸಹೋದರಿಯರನ್ನು ಪರಿಚಯಿಸಿ. ಸತ್ಯ ಕ್ರೈಸ್ತರ ಗುರುತಾಗಿರುವ ಪ್ರೀತಿಯು ನಮ್ಮ ಮಧ್ಯೆ ಇರುವುದನ್ನು ಸ್ವತಃ ಅವರೇ ಗಮನಿಸಲಿ. (ಯೋಹಾ. 13:35) ಹೀಗೆ ಯೆಹೋವನ ಸಂಘಟನೆಯ ಕಡೆಗೆ ಅವರ ಗೌರವವು ಹೆಚ್ಚಾಗುತ್ತದೆ. ಅವರು ಯೆಹೋವನಿಗೂ ಆಪ್ತರಾಗುತ್ತಾರೆ.

ಬೈಬಲ್‌ ಸಾಹಿತ್ಯ ಬಳಸಿ

22 ಒಂದನೇ ಶತಮಾನದ ಕ್ರೈಸ್ತರು ದೇವರ ವಾಕ್ಯದ ಬಗ್ಗೆ ಹುರುಪಿನಿಂದ ಸಾರಿದರು. ವೈಯಕ್ತಿಕವಾಗಿ ಓದಲಿಕ್ಕಾಗಿ ಮತ್ತು ಕೂಟಗಳಲ್ಲಿ ಅಧ್ಯಯನ ಮಾಡಲಿಕ್ಕಾಗಿ ದೇವರ ವಾಕ್ಯವನ್ನು ಅವರೇ ಕೈಯಿಂದ ನಕಲು ಮಾಡಿದರು. ಈ ಮೂಲಕ ದೇವರ ವಾಕ್ಯದಲ್ಲಿರುವ ಸತ್ಯ ಎಷ್ಟು ಪ್ರಾಮುಖ್ಯವೆಂದು ಇತರರಿಗೆ ತೋರಿಸಿಕೊಟ್ಟರು. ಅವರ ಬಳಿ ಕೆಲವೇ ನಕಲು ಪ್ರತಿಗಳಿದ್ದವು. ಅವುಗಳನ್ನು ಅವರು ತುಂಬ ಅಮೂಲ್ಯವಾಗಿ ಕಾಣುತ್ತಿದ್ದರು. (ಕೊಲೊ. 4:16; 2 ತಿಮೊ. 2:15; 3:14-17; 4:13; 1 ಪೇತ್ರ 1:1) ಇಂದು ಯೆಹೋವನ ಸಾಕ್ಷಿಗಳು ಹೊಸಹೊಸ ಮುದ್ರಣ ವಿಧಾನಗಳನ್ನು ಬಳಸಿ ಲಕ್ಷಾಂತರ ಬೈಬಲುಗಳನ್ನು ಮುದ್ರಿಸುತ್ತಿದ್ದಾರೆ. ಮಾತ್ರವಲ್ಲ ಬೈಬಲ್‌ ಅಧ್ಯಯನ ಮಾಡಲು ನೆರವಾಗುವ ಕರಪತ್ರ, ಕಿರುಹೊತ್ತಗೆ, ಪುಸ್ತಕ ಪತ್ರಿಕೆಗಳನ್ನು ನೂರಾರು ಭಾಷೆಗಳಲ್ಲಿ, ಕೋಟ್ಯಂತರ ಸಂಖ್ಯೆಯಲ್ಲಿ ಮುದ್ರಿಸುತ್ತಿದ್ದಾರೆ.

23 ಈ ಪ್ರಕಾಶನಗಳನ್ನು ನಾವು ಜನರಿಗೆ ಕೊಡಲು ಮರೆಯದಿರೋಣ. ಪ್ರತಿ ತಿಂಗಳು ನಾವು ಸೇವೆಯಲ್ಲಿ ಬೇರೆ ಬೇರೆ ಸಾಹಿತ್ಯವನ್ನು ಕೊಡುತ್ತೇವೆ. ಅದರ ಜೊತೆಗೆ ನಾವು ಪತ್ರಿಕಾ ದಿನ ಮತ್ತು ಇತರ ದಿನಗಳಲ್ಲಿ ಪತ್ರಿಕೆಗಳನ್ನು ಕೊಡಬಹುದು. ಬೈಬಲ್‌ ಪ್ರಕಾಶನಗಳನ್ನು ಓದಿ ಅಧ್ಯಯನ ಮಾಡಿ ಪ್ರಯೋಜನ ಪಡೆದುಕೊಂಡರೆ ಇತರರಿಗೂ ಅವುಗಳನ್ನು ಕೊಡಬೇಕೆಂಬ ಉತ್ಸಾಹ ನಮ್ಮಲ್ಲಿ ಬರುತ್ತದೆ.—ಇಬ್ರಿ. 13:15, 16.

24 ಇಂದು ಜನರು ಯಾವುದೇ ವಿಷಯದ ಬಗ್ಗೆ ತಿಳಿಯಲು ಇಂಟರ್‌ನೆಟ್‌ ಬಳಸುವುದು ಜಾಸ್ತಿ. ಆದ್ದರಿಂದಲೇ ಸುವಾರ್ತೆ ತಿಳಿಸಲಿಕ್ಕಾಗಿ ಬೈಬಲ್‌ ಪ್ರಕಾಶನಗಳನ್ನು ಮಾತ್ರವಲ್ಲ jw.org ಎಂಬ ನಮ್ಮ ಅಧಿಕೃತ ವೆಬ್‌ಸೈಟನ್ನು ಕೂಡ ಉಪಯೋಗಿಸುತ್ತೇವೆ. ಇದೊಂದು ಅತ್ಯುತ್ತಮ ಸಾಧನ. ಪ್ರಪಂಚದ ಯಾವುದೇ ಮೂಲೆಯಿಂದ ಯಾರು ಬೇಕಾದರೂ ನೂರಾರು ಭಾಷೆಯಲ್ಲಿರುವ ಈ ವೆಬ್‌ಸೈಟಿಗೆ ಹೋಗಿ ಬೈಬಲನ್ನು ಮತ್ತು ಬೈಬಲ್‌ ಸಾಹಿತ್ಯವನ್ನು ತಮ್ಮ ಭಾಷೆಯಲ್ಲಿ ಓದಬಹುದು ಅಥವಾ ರೆಕಾರ್ಡಿಂಗ್‌ಗಳನ್ನು ಕೇಳಿಸಿಕೊಳ್ಳಬಹುದು. ಯೆಹೋವನ ಸಾಕ್ಷಿಗಳೊಂದಿಗೆ ಮಾತಾಡಲು ಹಿಂಜರಿಯುವವರು ಅಥವಾ ಯೆಹೋವನ ಸಾಕ್ಷಿಗಳೇ ಇಲ್ಲದ ಸ್ಥಳಗಳಲ್ಲಿರುವವರು ಸಹ ಮನೆಯಲ್ಲೇ ಕೂತು ಸಾಕ್ಷಿಗಳ ನಂಬಿಕೆಗಳ ಕುರಿತು ತಿಳಿದುಕೊಳ್ಳಬಹುದು.

25 ಹಾಗಾಗಿ ನಾವು ಸೂಕ್ತವಾದ ಪ್ರತಿಯೊಂದು ಸಂದರ್ಭದಲ್ಲಿ jw.org ವೆಬ್‌ಸೈಟನ್ನು ಜನರಿಗೆ ಪರಿಚಯಿಸಬೇಕು. ಯಾರಾದರೂ ನಮ್ಮ ನಂಬಿಕೆಗಳ ಕುರಿತು ಪ್ರಶ್ನೆ ಕೇಳಿದರೆ ನಮ್ಮ ಮೊಬೈಲ್‌ ಅಥವಾ ಕಂಪ್ಯೂಟರ್‌ನಿಂದ ಕೂಡಲೆ ಉತ್ತರ ತೋರಿಸಬಹುದು. ಬೇರೆ ಭಾಷೆಯ ವ್ಯಕ್ತಿ ಅಥವಾ ಸನ್ನೆ ಭಾಷೆಯ ವ್ಯಕ್ತಿ ಸಿಕ್ಕರೆ ನಮ್ಮ ವೆಬ್‌ಸೈಟಿಗೆ ಹೋಗಿ ಬೈಬಲ್‌ ಸಾಹಿತ್ಯವನ್ನು ಅವರ ಭಾಷೆಯಲ್ಲೇ ನೋಡಲು ಸಹಾಯಮಾಡಬಹುದು. ಅನೇಕ ಪ್ರಚಾರಕರು ವೆಬ್‌ಸೈಟಿನಲ್ಲಿರುವ ವಿಡಿಯೋಗಳನ್ನೇ ತೋರಿಸಿ ಬೈಬಲ್‌ ಚರ್ಚೆಯನ್ನು ಆರಂಭಿಸಿದ್ದಾರೆ.

ಎಲ್ಲ ಸಂದರ್ಭಗಳಲ್ಲಿ ಸಾಕ್ಷಿಕೊಡಿ

26 ಯೇಸು ತನ್ನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಶಿಷ್ಯರಿಗೆ, “ನೀವು ಲೋಕದ ಬೆಳಕಾಗಿದ್ದೀರಿ . . . ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ; ಆಗ ಅವರು ನಿಮ್ಮ ಒಳ್ಳೆಯ ಕ್ರಿಯೆಗಳನ್ನು ನೋಡಿ ಸ್ವರ್ಗದಲ್ಲಿರುವ ನಿಮ್ಮ ತಂದೆಗೆ ಮಹಿಮೆಯನ್ನು ಸಲ್ಲಿಸುವರು” ಎಂದನು. (ಮತ್ತಾ. 5:14-16) ‘ಲೋಕಕ್ಕೆ ಬೆಳಕಾಗಿದ್ದ’ ಯೇಸು “ಜೀವದ ಬೆಳಕನ್ನು” ಪ್ರಕಾಶಿಸಿದನು. ಅವನಿಗೆ ಕಿವಿಗೊಟ್ಟವರೆಲ್ಲರೂ ಇದರಿಂದ ಪ್ರಯೋಜನ ಪಡೆದರು. ಯೇಸುವಿನ ಮಾದರಿಯನ್ನು ಅನುಸರಿಸುತ್ತಾ ಅವನ ಶಿಷ್ಯರೂ ಬೆಳಕನ್ನು ಪ್ರಕಾಶಿಸಿದರು ಅಂದರೆ ಯೆಹೋವನ ಗುಣಗಳನ್ನು, ಆತನ ನೀತಿಯ ಮಟ್ಟಗಳನ್ನು ತಮ್ಮ ನಡತೆಯಲ್ಲಿ ತೋರಿಸಿದರು. ನಾವು ಸಹ ಯೇಸುವನ್ನು ಅನುಕರಿಸಬೇಕು.—ಯೋಹಾ. 8:12.

27 ಇದನ್ನೇ ಅಪೊಸ್ತಲ ಪೌಲನು ಮಾಡಿದನು. (1 ಕೊರಿಂ. 4:16; 11:1) ಅವನು ಅಥೆನ್ಸ್‌ನಲ್ಲಿದ್ದಾಗ ಪ್ರತಿದಿನ ಮಾರುಕಟ್ಟೆಯಲ್ಲಿದ್ದ ಜನರಿಗೆ ಸುವಾರ್ತೆ ಸಾರಿದನು. (ಅ. ಕಾ. 17:17) ಫಿಲಿಪ್ಪಿ ಸಭೆಯ ಕ್ರೈಸ್ತರು ಅವನ ಮಾದರಿಯನ್ನು ಅನುಸರಿಸಿದರು. ಆದುದರಿಂದಲೇ ಪೌಲನು ಅವರಿಗೆ, ‘ನೀವು ವಿಕೃತವಾದ ಮತ್ತು ವಕ್ರವಾದ ಸಂತತಿಯ ಮಧ್ಯೆ ಬೆಳಕು ಕೊಡುವ ವ್ಯಕ್ತಿಗಳಂತೆ’ ಹೊಳೆಯುತ್ತಿದ್ದೀರಿ ಎಂದು ಹೇಳಿದನು. (ಫಿಲಿ. 2:15) ಹಾಗೆಯೇ ನಾವು ಸಂದರ್ಭ ಸಿಕ್ಕಾಗೆಲ್ಲ ಸುವಾರ್ತೆ ಸಾರುವ ಮೂಲಕ ನಮ್ಮ ಮಾತು ಮತ್ತು ಕಾರ್ಯದಲ್ಲಿ ಸತ್ಯದ ಬೆಳಕನ್ನು ಪ್ರಕಾಶಿಸುತ್ತೇವೆ. ನಾವು ಪ್ರಾಮಾಣಿಕರಾಗಿದ್ದು ಸದ್ಗುಣಗಳನ್ನು ತೋರಿಸುವಾಗ ಲೋಕದವರಿಗಿಂತ ಭಿನ್ನರಾಗಿ ಕಾಣುತ್ತೇವೆ ನಿಜ. ಆದರೆ ಅವರಿಗೆ ಸುವಾರ್ತೆಯನ್ನು ತಿಳಿಸಿದರೆ ಮಾತ್ರ ನಾವು ಭಿನ್ನರಾಗಿರಲು ಕಾರಣ ಏನೆಂದು ಅವರಿಗೆ ತಿಳಿಯುತ್ತದೆ.

28 ಯೆಹೋವನ ಜನರಲ್ಲಿ ಅನೇಕರು ಶಾಲೆಯಲ್ಲಿರುವಾಗ, ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣಿಸುವಾಗ ಅಥವಾ ದಿನನಿತ್ಯದ ಕೆಲಸವನ್ನು ಮಾಡುವಾಗ ಅಕ್ಕಪಕ್ಕದಲ್ಲಿರುವವರಿಗೆ ಸುವಾರ್ತೆಯನ್ನು ತಿಳಿಸುತ್ತಾರೆ. ದೂರ ಪ್ರಯಾಣ ಮಾಡುವಾಗ ಸಹ ಇತರ ಪ್ರಯಾಣಿಕರೊಂದಿಗೆ ನಾವು ಮಾತಾಡಬಹುದು. ಯಾವುದೇ ಸಂದರ್ಭದಲ್ಲಿ ನಾವು ಸಾಮಾನ್ಯ ಸಂಭಾಷಣೆಯನ್ನು ಸುವಾರ್ತೆಗೆ ತಿರುಗಿಸಲು ಎಲ್ಲಿ ಅವಕಾಶ ಸಿಗುತ್ತದೆಂದು ನೋಡುತ್ತಿರಬೇಕು. ಈ ರೀತಿ ಸಾಕ್ಷಿ ಕೊಡಲು ನಾವು ಯಾವಾಗಲೂ ಸಿದ್ಧರಿರಬೇಕು. ಅದಕ್ಕಾಗಿ ಮುಂಚೆಯೇ ತಯಾರಿ ಮಾಡಿರಬೇಕು.

29 ಸುವಾರ್ತೆ ಸಾರುವ ಮೂಲಕ ನಾವು ನಮ್ಮ ಸೃಷ್ಟಿಕರ್ತನಾದ ಯೆಹೋವನನ್ನು ಸ್ತುತಿಸುತ್ತೇವೆ ಮತ್ತು ಆತನ ಹೆಸರಿಗೆ ಗೌರವ ತರುತ್ತೇವೆ. ಮಾತ್ರವಲ್ಲ ಯಥಾರ್ಥ ಮನಸ್ಸಿನ ಜನರು ಯೆಹೋವನ ಬಗ್ಗೆ ತಿಳಿದುಕೊಂಡು ಆತನ ಸೇವೆ ಮಾಡುವಂತೆ ಮತ್ತು ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟು ನಿತ್ಯಜೀವವನ್ನು ಪಡೆಯುವಂತೆ ಸಹಾಯಮಾಡುತ್ತೇವೆ. ಇದನ್ನು ನಾವು ಯಾವಾಗಲೂ ನೆನಪಿನಲ್ಲಿಟ್ಟರೆ ಎಲ್ಲ ಸಂದರ್ಭಗಳಲ್ಲಿ ಸಾಕ್ಷಿ ಕೊಡುತ್ತೇವೆ. ಇದಕ್ಕಾಗಿ ನಾವು ಪ್ರಯತ್ನ ಮಾಡುವಾಗ ಯೆಹೋವನಿಗೆ ಸಂತೋಷವಾಗುತ್ತದೆ ಮತ್ತು ನಮ್ಮ ಈ ಸೇವೆಯನ್ನು ಆತನು ಪವಿತ್ರವಾಗಿ ಕಾಣುತ್ತಾನೆ.—ಇಬ್ರಿ. 12:28; ಪ್ರಕ. 7:9, 10.

ಸೇವಾಕ್ಷೇತ್ರ

30 ನಗರವಾಗಿರಲಿ ಹಳ್ಳಿಯಾಗಿರಲಿ ಮೂಲೆಮೂಲೆಗೂ ಸುವಾರ್ತೆ ತಲಪಬೇಕು ಅನ್ನುವುದೇ ಯೆಹೋವನ ಇಷ್ಟ. ಹಾಗಾಗಿ ಆಯಾ ದೇಶದ ಶಾಖೆಯು ಸಭೆಗಳಿಗೆ ಮತ್ತು ದೂರದ ಪ್ರದೇಶಗಳಲ್ಲಿ ಸುವಾರ್ತೆ ಸಾರುತ್ತಿರುವ ಪ್ರಚಾರಕರಿಗೆ ಸೇವಾಕ್ಷೇತ್ರವನ್ನು ನೇಮಿಸುತ್ತದೆ. (1 ಕೊರಿಂ. 14:40) ಇದು ಒಂದನೇ ಶತಮಾನದಲ್ಲಿ ದೇವರು ಮಾಡಿದ್ದ ಏರ್ಪಾಡಿನಂತೆಯೇ ಇದೆ. (2 ಕೊರಿಂ. 10:13; ಗಲಾ. 2:9) ಈ ಕಡೇ ದಿವಸಗಳಲ್ಲಿ ಸಾರುವ ಕೆಲಸವು ಅತಿ ವೇಗವಾಗಿ ಸಾಗುತ್ತಿದೆ. ಹಾಗಾಗಿ ಸಭೆಯ ಸೇವಾಕ್ಷೇತ್ರವನ್ನು ಆವರಿಸಲು ಸರಿಯಾಗಿ ಯೋಜನೆಗಳನ್ನು ಮಾಡಿದರೆ ಹೆಚ್ಚು ಸಾಧಿಸಲು ಆಗುತ್ತದೆ.

31 ಈ ಯೋಜನೆಗಳನ್ನು ಮಾಡುವ ಜವಾಬ್ದಾರಿ ಸೇವಾ ಮೇಲ್ವಿಚಾರಕನದ್ದು. ಪ್ರಚಾರಕರಿಗೆ ಸೇವಾಕ್ಷೇತ್ರವನ್ನು ನೇಮಿಸುವ ಮತ್ತು ಸರಿಯಾದ ದಾಖಲೆಗಳನ್ನಿಡುವ ಕೆಲಸವನ್ನು ಒಬ್ಬ ಸಹಾಯಕ ಸೇವಕನು ಮಾಡಬಹುದು. ಸೇವಾಕ್ಷೇತ್ರದಲ್ಲಿ ಎರಡು ವಿಧಗಳಿವೆ. 1) ಗುಂಪಿನ ಸೇವಾಕ್ಷೇತ್ರ. 2) ವೈಯಕ್ತಿಕ ಸೇವಾಕ್ಷೇತ್ರ. ಸಭೆಗೆ ನೇಮಿತವಾದ ಸೇವಾಕ್ಷೇತ್ರ ದೊಡ್ಡದಿದ್ದರೆ ಪ್ರಚಾರಕರು ವೈಯಕ್ತಿಕ ಸೇವಾಕ್ಷೇತ್ರವನ್ನು ಪಡೆದುಕೊಳ್ಳಬಹುದು. ಸೇವಾಕ್ಷೇತ್ರ ಚಿಕ್ಕದಿದ್ದರೆ ಕ್ಷೇತ್ರ ಸೇವಾ ಗುಂಪುಗಳಿಗೆ ಮಾತ್ರ ಸೇವಾಕ್ಷೇತ್ರವನ್ನು ಕೊಡಲಾಗುತ್ತದೆ. ಅದರಲ್ಲಿ ಇಡೀ ಗುಂಪಿನವರು ಸೇವೆ ಮಾಡಬಹುದು.

32 ಕೆಲವೊಮ್ಮೆ ಕ್ಷೇತ್ರ ಸೇವಾ ಕೂಟ ಇಲ್ಲದಿರುವಾಗ ಅಥವಾ ಗುಂಪಿನೊಂದಿಗೆ ಸೇವೆಗೆ ಹೋಗಲು ಆಗದಿರುವಾಗ ಪ್ರಚಾರಕನು ವೈಯಕ್ತಿಕ ಸೇವಾಕ್ಷೇತ್ರಕ್ಕೆ ಹೋಗಿ ಸೇವೆ ಮಾಡಬಹುದು. ಕೆಲವು ಪ್ರಚಾರಕರು ತಮ್ಮ ಕೆಲಸದ ಸ್ಥಳದ ಹತ್ತಿರದಲ್ಲೇ ವೈಯಕ್ತಿಕ ಸೇವಾಕ್ಷೇತ್ರವನ್ನು ತಕ್ಕೊಳ್ಳುತ್ತಾರೆ. ಇದರಿಂದ ಅವರಿಗೆ ಊಟದ ವಿರಾಮದಲ್ಲಿ ಅಥವಾ ಕೆಲಸ ಮುಗಿದ ಮೇಲೆ ಸೇವೆ ಮಾಡಲಿಕ್ಕಾಗುತ್ತದೆ. ಕೆಲವು ಕುಟುಂಬಗಳು ತಮ್ಮ ಮನೆಗೆ ಹತ್ತಿರವಿರುವ ಕ್ಷೇತ್ರವನ್ನು ಕೇಳಿ ಪಡೆಯುತ್ತಾರೆ. ಇದರಿಂದ ಅವರಿಗೆ ಸಾಯಂಕಾಲದಲ್ಲಿ ಸೇವೆ ಮಾಡಲಿಕ್ಕಾಗುತ್ತದೆ. ಈ ರೀತಿ ಹತ್ತಿರದ ಸೇವಾಕ್ಷೇತ್ರವನ್ನು ಪಡೆದುಕೊಂಡರೆ ಹೆಚ್ಚು ಸೇವೆ ಮಾಡಲು ಆಗುತ್ತದೆ. ವೈಯಕ್ತಿಕ ಸೇವಾಕ್ಷೇತ್ರಗಳಲ್ಲಿ ಕೆಲವೊಮ್ಮೆ ಕ್ಷೇತ್ರ ಸೇವಾ ಗುಂಪು ಸಹ ಸೇವೆಮಾಡಬಹುದು. ನಿಮಗೆ ವೈಯಕ್ತಿಕ ಸೇವಾಕ್ಷೇತ್ರ ಬೇಕಿರುವಲ್ಲಿ ಸೇವಾಕ್ಷೇತ್ರದ ಸೇವಕನನ್ನು ಕೇಳಿ.

33 ಗುಂಪಿನ ಸೇವಾಕ್ಷೇತ್ರವಾಗಿರಲಿ ವೈಯಕ್ತಿಕ ಸೇವಾಕ್ಷೇತ್ರವಾಗಿರಲಿ ಅದನ್ನು ಪೂರ್ತಿಯಾಗಿ ಆವರಿಸಬೇಕು. ಅದಕ್ಕಾಗಿ ಆ ಮನೆಯ ಒಬ್ಬ ವ್ಯಕ್ತಿಯನ್ನಾದರೂ ಭೇಟಿಮಾಡಲು ಆದಷ್ಟು ಪ್ರಯತ್ನಿಸಬೇಕು. ಮನೆಯಲ್ಲಿ ಸಿಗದ ವ್ಯಕ್ತಿಗಳಿಗೆ ಕೆಲವೊಮ್ಮೆ ಪತ್ರದ ಮೂಲಕ, ಟೆಲಿಫೋನ್‌ ಮೂಲಕ ಅಥವಾ ಬೀದಿ ಸಾಕ್ಷಿಕಾರ್ಯದ ಮೂಲಕ ಸುವಾರ್ತೆ ತಿಳಿಸಬಹುದು. ಕ್ಷೇತ್ರ ಸೇವಾ ಗುಂಪಿಗೆ ಇಲ್ಲವೆ ಪ್ರಚಾರಕನಿಗೆ ಕೊಟ್ಟ ಸೇವಾಕ್ಷೇತ್ರವನ್ನು ನಾಲ್ಕು ತಿಂಗಳೊಳಗೆ ಮುಗಿಸಲು ಪ್ರಯತ್ನಿಸಬೇಕು. ಮುಗಿಸಿದ ತಕ್ಷಣ ಸೇವಾಕ್ಷೇತ್ರದ ಸೇವಕನಿಗೆ ತಿಳಿಸಬೇಕು. ಆಗ ಅವನಿಗೆ ಸೇವಾಕ್ಷೇತ್ರದ ವಿವರವನ್ನು ಬರೆದಿಡಲು ಆಗುತ್ತದೆ. ಗುಂಪು ಮೇಲ್ವಿಚಾರಕನಾಗಲಿ ಪ್ರಚಾರಕನಾಗಲಿ ಆ ಸೇವಾಕ್ಷೇತ್ರದ ಕಾರ್ಡನ್ನು ತನ್ನ ಬಳಿ ಇಟ್ಟುಕೊಂಡು ಪುನಃ ಅಲ್ಲೇ ಸೇವೆಮಾಡಬಹುದು ಅಥವಾ ಆ ಕಾರ್ಡನ್ನು ಸೇವಾಕ್ಷೇತ್ರದ ಸೇವಕನಿಗೆ ವಾಪಸ್ಸು ಕೊಡಬಹುದು.

34 ಸಭೆಯಲ್ಲಿ ಎಲ್ಲರೂ ಬೆಂಬಲ ಕೊಟ್ಟರೆ ಸೇವಾಕ್ಷೇತ್ರವನ್ನು ಪೂರ್ತಿಯಾಗಿ ಆವರಿಸಲು ಆಗುತ್ತದೆ. ಒಬ್ಬರು ಹೋದ ಮನೆಗೇ ಇನ್ನೊಬ್ಬರು ಮತ್ತೆ ಹೋಗುವುದು ತಪ್ಪುತ್ತದೆ. ಮನೆಯವರಿಗೂ ಕಿರಿಕಿರಿಯಾಗುವುದಿಲ್ಲ. ಹೀಗೆ ನಮ್ಮ ಸಹೋದರರಿಗೂ ಕ್ಷೇತ್ರದಲ್ಲಿರುವ ಜನರಿಗೂ ನಾವು ಪರಿಗಣನೆ ತೋರಿಸುತ್ತೇವೆ.

ಎಲ್ಲ ಭಾಷೆಗಳ ಜನರಿಗೆ ಸುವಾರ್ತೆ ಸಾರಿ

35 ಯೆಹೋವನ ಬಗ್ಗೆ, ಯೇಸುವಿನ ಬಗ್ಗೆ ಮತ್ತು ದೇವರ ರಾಜ್ಯದ ಬಗ್ಗೆ ಎಲ್ಲ ಜನರು ತಿಳಿದುಕೊಳ್ಳಬೇಕು. (ಪ್ರಕ. 14:6, 7) ಹಾಗಾಗಿ ಎಲ್ಲ ಭಾಷೆಗಳ ಜನರು ಯೆಹೋವನನ್ನು ಆರಾಧಿಸುವಂತೆ ಮತ್ತು ಕ್ರಿಸ್ತನ ಗುಣಗಳನ್ನು ಬೆಳೆಸಿಕೊಳ್ಳುವಂತೆ ಸಹಾಯಮಾಡಲು ನಾವು ಮುಂದೆ ಬರುತ್ತೇವೆ. (ರೋಮ. 10:12, 13; ಕೊಲೊ. 3:10, 11) ಆದರೆ ಬೇರೆ ಬೇರೆ ಭಾಷೆಯ ಜನರಿರುವ ಕ್ಷೇತ್ರಗಳಲ್ಲಿ ಸಾರುವುದು ಹೇಗೆ? ಅವರು ತಮ್ಮ ಭಾಷೆಯಲ್ಲೇ ಸುವಾರ್ತೆಯನ್ನು ಕೇಳಿಸಿಕೊಳ್ಳಲು ನಾವೇನು ಮಾಡಬಹುದು?—ರೋಮ. 10:14.

36 ಪ್ರತಿಯೊಂದು ಸಭೆಗೆ ತಮ್ಮ ಸಭೆಯ ಭಾಷೆಯ ಜನರಿರುವ ಕ್ಷೇತ್ರಗಳನ್ನು ನೇಮಿಸಲಾಗುತ್ತದೆ. ಹಾಗಾಗಿ ಒಂದೇ ಕ್ಷೇತ್ರದಲ್ಲಿ ಬೇರೆ ಬೇರೆ ಭಾಷೆಯ ಜನರಿರುವಲ್ಲಿ ಬೇರೆ ಬೇರೆ ಭಾಷೆಯ ಸಭೆಗಳು ಒಂದೇ ಕ್ಷೇತ್ರದಲ್ಲಿ ಸೇವೆ ಮಾಡಬೇಕಾಗುತ್ತದೆ. ಆಗ ಪ್ರತಿ ಸಭೆಯ ಪ್ರಚಾರಕರು ಮನೆಮನೆ ಸೇವೆಯಲ್ಲಿ ತಮ್ಮ ಸಭೆಯ ಭಾಷೆಯ ಜನರನ್ನು ಮಾತ್ರ ಭೇಟಿಯಾಗಲು ಪ್ರಯತ್ನಿಸಬೇಕು ಮತ್ತು ಆ ಭಾಷೆಯ ಸಾಹಿತ್ಯ ಮಾತ್ರ ಕೊಡಬೇಕು. ಬೇರೆ ಭಾಷೆಯ ಸಭೆಗಳಿಗೆ ಸೇರಿದ ಮನೆಗಳನ್ನು ಬಿಟ್ಟುಬಿಡಬೇಕು. ಪ್ರತಿ ವರ್ಷ ಆಮಂತ್ರಣ ಪತ್ರಗಳನ್ನು ಕೊಡುವಾಗಲೂ ಹೀಗೆ ಮಾಡಬೇಕು. ಆದರೆ ಪ್ರಚಾರಕರು ಸಾರ್ವಜನಿಕ ಸಾಕ್ಷಿಕಾರ್ಯದಲ್ಲಿ ಮತ್ತು ಬೇರೆ ಸಂದರ್ಭಗಳಲ್ಲಿ ಯಾವುದೇ ಭಾಷೆಯ ಜನರೊಂದಿಗೆ ಮಾತಾಡಬಹುದು, ಯಾವುದೇ ಭಾಷೆಯ ಸಾಹಿತ್ಯವನ್ನು ಕೊಡಬಹುದು.

37 ಒಂದು ಭಾಷೆಯ ಸಭೆಯವರಿಗೆ ದೂರದಲ್ಲಿರುವ ತಮ್ಮ ಸೇವಾಕ್ಷೇತ್ರದಲ್ಲಿ ಕ್ರಮವಾಗಿ ಸೇವೆಮಾಡಲು ಆಗದಿದ್ದರೆ ಅವರು ಆ ಕ್ಷೇತ್ರದಲ್ಲಿ ಸೇವೆಮಾಡುವ ಬೇರೆ ಭಾಷೆಯ ಸಭೆಗೆ ಅದನ್ನು ಪೂರ್ಣವಾಗಿ ಆವರಿಸಲು ಹೇಳಬಹುದು. ಆಗ ಆ ಸಭೆಯವರು ತಮ್ಮ ಭಾಷೆಯನ್ನಾಡದ ಜನರಿಗೂ ಸಾರಲು ತಮ್ಮಿಂದಾದಷ್ಟು ಪ್ರಯತ್ನ ಹಾಕಬೇಕು. ಆಸಕ್ತ ವ್ಯಕ್ತಿ ಸಿಕ್ಕರೆ ಆ ಭಾಷೆಯ ಸಭೆಯವರೇ ಅವನನ್ನು ಭೇಟಿಯಾಗಿ ಆಸಕ್ತಿಯನ್ನು ಹೆಚ್ಚಿಸಲು ಪ್ರಯತ್ನಿಸುವುದು ಒಳ್ಳೇದು. ಸೇವಾಕ್ಷೇತ್ರಗಳು ಬೇರೆ ಬೇರೆ ರೀತಿಯಲ್ಲಿರುವುದರಿಂದ ಅವನ್ನು ಆವರಿಸಲು ಯಾವ ವಿಧಾನ ಉತ್ತಮವೆಂದು ಅಲ್ಲಿ ಸೇವೆಮಾಡುವ ಸಭೆಗಳ ಸೇವಾ ಮೇಲ್ವಿಚಾರಕರು ಒಟ್ಟಾಗಿ ಮಾತಾಡಿ ನಿರ್ಣಯಿಸಬೇಕು. ಹೀಗೆ ಮಾಡುವುದರಿಂದ ಎಲ್ಲ ಜನರು ಸುವಾರ್ತೆಯನ್ನು ಕೇಳಿಸಿಕೊಳ್ಳಲು ಆಗುತ್ತದೆ. ಹೋದ ಮನೆಗಳಿಗೇ ಮತ್ತೆ ಮತ್ತೆ ಹೋಗಿ ಮನೆಯವರಿಗೆ ಸಿಟ್ಟೆಬ್ಬಿಸುವುದೂ ತಪ್ಪುತ್ತದೆ.—ಜ್ಞಾನೋ. 15:22.

38 ನೀವು ಸೇವೆ ಮಾಡುತ್ತಾ ಒಂದು ಮನೆಗೆ ಹೋಗಿದ್ದೀರಿ ಎಂದು ನೆನಸಿ. ಮನೆಯವನು ಬೇರೆ ಭಾಷೆ ಮಾತಾಡುವವನು ಎಂದು ಆಗ ಗೊತ್ತಾಗುತ್ತದೆ. ಆಗೇನು ಮಾಡುತ್ತೀರಾ? ಆ ಭಾಷೆಯ ಸಭೆಯವರೇ ಬಂದು ಮಾತಾಡಲಿ ಅಂತ ನೆನಸಿ ವಾಪಸ್ಸು ಬಂದುಬಿಡುತ್ತೀರಾ? ಹಾಗೆ ಮಾಡಬೇಕಾಗಿಲ್ಲ. ಸರ್ವ ದೇಶಗಳ ಜನರಿಗಾಗಿ ಸುವಾರ್ತೆ ಎಂಬ ಕಿರುಪುಸ್ತಿಕೆ ಉಪಯೋಗಿಸಿ ಅವರಿಗೆ ಸಾಕ್ಷಿ ಕೊಡಬಹುದು. ಕೆಲವು ಪ್ರಚಾರಕರು ತಮ್ಮ ಸೇವಾಕ್ಷೇತ್ರದಲ್ಲಿ ಬೇರೆ ಭಾಷೆಯ ಜನರು ಹೆಚ್ಚಾಗಿ ಸಿಗುವುದಾದರೆ ಆ ಭಾಷೆಯಲ್ಲಿ ಒಂದು ಚಿಕ್ಕ ನಿರೂಪಣೆಯನ್ನು ಕಲಿತುಕೊಳ್ಳುತ್ತಾರೆ. ನಾವು ಕೂಡ ಹಾಗೆ ಮಾಡಬಹುದು. jw.org ವೆಬ್‌ಸೈಟಿಗೆ ಹೋಗಿ ತಮ್ಮ ಭಾಷೆಯ ಸಾಹಿತ್ಯವನ್ನು ನೋಡುವುದು ಹೇಗೆ ಮತ್ತು ಡೌನ್‌ಲೋಡ್‌ ಮಾಡುವುದು ಹೇಗೆಂದು ಮನೆಯವರಿಗೆ ತೋರಿಸಬಹುದು ಅಥವಾ ಅವರ ಭಾಷೆಯ ಸಾಹಿತ್ಯವನ್ನು ತಂದುಕೊಡುತ್ತೇವೆಂದು ಹೇಳಬಹುದು.

39 ನಾವು ಭೇಟಿಯಾದ ವ್ಯಕ್ತಿ ನಿಜವಾಗಿಯೂ ಆಸಕ್ತಿ ತೋರಿಸಿದರೆ ಅವನಿಗೆ ಅರ್ಥವಾಗುವ ಒಂದು ಭಾಷೆ ಗೊತ್ತಿರುವ ಅರ್ಹ ಪ್ರಚಾರಕನನ್ನು ಕರೆದುಕೊಂಡು ಹೋಗಬೇಕು. ಆ ಆಸಕ್ತ ವ್ಯಕ್ತಿಯ ಭಾಷೆಯಲ್ಲಿ ಹತ್ತಿರದಲ್ಲೇ ಎಲ್ಲಾದರೂ ಕೂಟಗಳು ನಡೆಯುತ್ತವಾದರೆ ಅವನಿಗೆ ಹೇಳಬಹುದು. ಅವನ ಸ್ವಂತ ಭಾಷೆಯನ್ನಾಡುವ ಒಬ್ಬರು ತನ್ನನ್ನು ಸಂಪರ್ಕಿಸಬೇಕೆಂದು ಅವನು ಬಯಸುವಲ್ಲಿ ಅವನ ವಿಳಾಸವನ್ನು jw.org ವೆಬ್‌ಸೈಟ್‌ನಲ್ಲಿ ಭರ್ತಿಮಾಡುವುದು ಹೇಗೆಂದು ತೋರಿಸಬಹುದು. ನಂತರ ಶಾಖೆಯು ಆ ವ್ಯಕ್ತಿಯ ಭಾಷೆಯ ಪ್ರಚಾರಕ, ಸಭೆ ಅಥವಾ ಗುಂಪನ್ನು ಸಂಪರ್ಕಿಸಿ ಅವನಿಗೆ ನೆರವು ಸಿಗುವಂತೆ ಏರ್ಪಡಿಸುವುದು.

40 ಒಬ್ಬ ಪ್ರಚಾರಕನು ಬಂದು ಆ ಆಸಕ್ತ ವ್ಯಕ್ತಿಯನ್ನು ಸಂಪರ್ಕಿಸುವ ವರೆಗೂ ನೀವು ಅವರನ್ನು ಭೇಟಿ ಮಾಡುತ್ತಿರಬೇಕು. ಆ ಭಾಷೆಯ ಪ್ರಚಾರಕರು ಹತ್ತಿರದಲ್ಲಿ ಇಲ್ಲವೆಂದು ಶಾಖೆಯು ಹೇಳುವಲ್ಲಿ ನೀವೇ ಆ ವ್ಯಕ್ತಿಯ ಆಸಕ್ತಿಯನ್ನು ಆದಷ್ಟು ಹೆಚ್ಚಿಸಲು ಪ್ರಯತ್ನಿಸಿ. ಅದಕ್ಕಾಗಿ ನೀವು ಅವನ ಭಾಷೆಯಲ್ಲಿರುವ ಒಂದು ಪ್ರಕಾಶನದಿಂದ ಬೈಬಲ್‌ ಅಧ್ಯಯನ ಮಾಡಬಹುದು. ಆ ಪ್ರಕಾಶನದಲ್ಲಿರುವ ಚಿತ್ರಗಳನ್ನು ಬಳಸಿರಿ, ಕೊಟ್ಟಿರುವ ವಚನಗಳನ್ನು ಓದಿಸಿ. ಇದರಿಂದ ಅವನು ಬೈಬಲಿನ ಬಗ್ಗೆ ಸ್ವಲ್ಪ ಮಟ್ಟಿಗಿನ ಜ್ಞಾನವನ್ನಾದರೂ ಪಡೆಯಲು ಆಗುತ್ತದೆ. ಆ ವ್ಯಕ್ತಿಯ ಕುಟುಂಬದಲ್ಲಿ ಯಾರಿಗಾದರೂ ಆ ಭಾಷೆಯ ಜೊತೆಗೆ ನಿಮ್ಮ ಭಾಷೆಯೂ ಗೊತ್ತಿರುವುದಾದರೆ ಅಧ್ಯಯನ ಮಾಡುವಾಗ ಅವರ ಸಹಾಯವನ್ನು ಪಡೆದುಕೊಳ್ಳಬಹುದು.

41 ಆ ಆಸಕ್ತ ವ್ಯಕ್ತಿಯನ್ನು ದೇವರ ಸಂಘಟನೆಯ ಕಡೆಗೆ ಮಾರ್ಗದರ್ಶಿಸಲು ನಾವು ಅವನನ್ನು ಕೂಟಗಳಿಗೆ ಆಮಂತ್ರಿಸಬೇಕು. ಭಾಷೆ ಬೇರೆಯಾಗಿರುವ ಕಾರಣ ಅವನಿಗೆ ಕೂಟಗಳು ಸಂಪೂರ್ಣವಾಗಿ ಅರ್ಥವಾಗಲಿಕ್ಕಿಲ್ಲ. ಆದರೆ ಅವನ ಭಾಷೆಯಲ್ಲಿ ಬೈಬಲ್‌ ಇದ್ದರೆ ಕೂಟಗಳಲ್ಲಿ ಹೇಳುವ ವಚನಗಳನ್ನು ತೆರೆದು ನೋಡಲು ಸಹಾಯ ಮಾಡಿ. ಸಭೆಯಲ್ಲಿ ಇತರರೊಂದಿಗೆ ಸಹವಾಸ ಮಾಡುವುದು ಕೂಡ ಅವನಿಗೆ ದೇವರ ಕುರಿತು ಹೆಚ್ಚು ಕಲಿಯಲು ಮತ್ತು ನಂಬಿಕೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

42 ಆದರೆ ನೆನಸಿ, ಸಭೆಯ ಸೇವಾಕ್ಷೇತ್ರದಲ್ಲಿ ಬೇರೆ ಭಾಷೆ ಮಾತಾಡುವ ಜನರು ತುಂಬ ಇದ್ದಾರಾದರೂ ಆ ಭಾಷೆಯನ್ನಾಡುವ ಹಿರಿಯನಾಗಲಿ ಸಹಾಯಕ ಸೇವಕನಾಗಲಿ ಇಲ್ಲ. ಹಾಗಾಗಿ ಆ ಭಾಷೆಯಲ್ಲಿ ಕೂಟಗಳು ನಡೆಯುವಂತೆ ಒಂದು ಗುಂಪನ್ನು ರಚಿಸಲಿಕ್ಕೂ ಆಗುವುದಿಲ್ಲ. ಇಂಥ ಸಂದರ್ಭದಲ್ಲಿ ಸಭಾ ಹಿರಿಯರು ಆ ಭಾಷೆ ಗೊತ್ತಿರುವ ಪ್ರಚಾರಕರನ್ನು ಆರಿಸಿ ಆ ಭಾಷೆಯಲ್ಲಿ ಸಾರುವುದಕ್ಕಾಗಿ ಒಂದು ಭಾಷಾ ಗುಂಪನ್ನು ರಚಿಸಬಹುದು. ಇದಕ್ಕಾಗಿ ಶಾಖೆಯ ಅನುಮತಿ ಪಡೆಯಬೇಕು. ಆ ಭಾಷೆಯಲ್ಲಿ ಕೂಟಗಳನ್ನು ನಡೆಸಿದರೆ ಎಷ್ಟು ಜನ ಬರಬಹುದೆಂದು ತಿಳಿದುಕೊಳ್ಳಲು ಆಗಾಗ ಹಿರಿಯರು ಆ ಭಾಷೆಯಲ್ಲಿ ಸಾರ್ವಜನಿಕ ಭಾಷಣ ಅಥವಾ ಕಾವಲಿನಬುರುಜು ಅಧ್ಯಯನ ನಡೆಸಲು ಏರ್ಪಾಡು ಮಾಡಬಹುದು. ಇಲ್ಲವೆ ಬೇರೆ ಪ್ರದೇಶದಲ್ಲಿ ನಡೆಯುವ ಆ ಭಾಷೆಯ ಕೂಟಗಳನ್ನು ಫೋನ್‌ ಅಥವಾ ಇಂಟರ್‌ನೆಟ್‌ ಮೂಲಕ ಕೇಳಿಸಿಕೊಳ್ಳುವಂತೆ ಏರ್ಪಡಿಸಬಹುದು.

43 ಭಾಷಾಗುಂಪು ಒಂದು ಗುಂಪಾಗಬೇಕಾದರೆ (1) ಆ ಭಾಷೆಯ ಸೇವಾಕ್ಷೇತ್ರದಲ್ಲಿ ಆಸಕ್ತ ಜನರಿರಬೇಕು ಮತ್ತು ಮುಂದೆ ಪ್ರಗತಿಯಾಗುವ ಲಕ್ಷಣಗಳು ಕಾಣುತ್ತಿರಬೇಕು. (2) ಆ ಭಾಷೆ ಮಾತಾಡುವ ಪ್ರಚಾರಕರು ಕೆಲವರಾದರೂ ಇರಬೇಕು ಅಥವಾ ಕೆಲವರಾದರೂ ಆ ಭಾಷೆ ಕಲಿಯುತ್ತಿರಬೇಕು. (3) ಆ ಭಾಷೆಯಲ್ಲಿ ವಾರಕ್ಕೆ ಕಡಿಮೆಪಕ್ಷ ಒಂದು ಕೂಟವನ್ನಾದರೂ ನಡೆಸಲು ಒಬ್ಬ ಅರ್ಹ ಹಿರಿಯ ಅಥವಾ ಸಹಾಯಕ ಸೇವಕನು ಇರಬೇಕು. (4) ಒಂದು ಸಭೆಯ ಹಿರಿಯರ ಮಂಡಲಿ ಆ ಗುಂಪಿನ ಮೇಲ್ವಿಚಾರಣೆ ಮಾಡಲು ಸಿದ್ಧವಿರಬೇಕು. ಈ ಎಲ್ಲ ಅಂಶಗಳು ತಕ್ಕಮಟ್ಟಿಗೆ ಇದ್ದರೆ ಹಿರಿಯರ ಮಂಡಲಿಯು ಶಾಖೆಗೆ ಪತ್ರ ಬರೆದು ಗುಂಪಿನ ಬಗ್ಗೆ ಸಂಪೂರ್ಣ ಮಾಹಿತಿ ಕೊಡಬೇಕು. ಹೀಗೆ ಸಭೆಯೊಟ್ಟಿಗೆ ಇನ್ನೊಂದು ಗುಂಪನ್ನು ನಡೆಸಲು ಒಪ್ಪಿಗೆ ಪಡೆಯಬೇಕು. ಆ ಗುಂಪಿನ ಮುಂದಾಳತ್ವ ವಹಿಸುತ್ತಿರುವವನು ಸಭಾ ಹಿರಿಯನಾಗಿದ್ದರೆ ಅವನು ಗುಂಪು ಮೇಲ್ವಿಚಾರಕನಾಗಿ ಕಾರ್ಯನಿರ್ವಹಿಸುತ್ತಾನೆ, ಸಹಾಯಕ ಸೇವಕನಾಗಿದ್ದರೆ ಅವನು ಗುಂಪು ಸೇವಕನಾಗಿರುತ್ತಾನೆ.

44 ಒಂದು ಗುಂಪನ್ನು ಶುರುಮಾಡಿದ ಆರಂಭದಲ್ಲಿ ಪ್ರತಿ ವಾರ ಸಭಾ ಬೈಬಲ್‌ ಅಧ್ಯಯನವನ್ನು ನಡೆಸಬಹುದು. ಇದನ್ನು ರಾಜ್ಯ ಸಭಾಗೃಹದಲ್ಲಿರುವ ಇನ್ನೊಂದು ಕೋಣೆಯಲ್ಲಿ ನಡೆಸಬಹುದು. ಆ ಭಾಷೆ ಗೊತ್ತಿರುವ ಒಬ್ಬ ಹಿರಿಯ ಅಥವಾ ಸಹಾಯಕ ಸೇವಕನು ‘ಜೀವನ ಮತ್ತು ಸೇವೆ’ ಕೂಟದ ಅಧ್ಯಕ್ಷನಾಗಿರಲು ಸಾಧ್ಯವಿದ್ದರೆ ಮುಂದಕ್ಕೆ ವಿದ್ಯಾರ್ಥಿ ನೇಮಕಗಳನ್ನು ಆ ಭಾಷೆಯಲ್ಲಿ ನಡೆಸಬಹುದು. ಸಮಯಾನಂತರ ಸಾರ್ವಜನಿಕ ಭಾಷಣ, ಕಾವಲಿನಬುರುಜು ಅಧ್ಯಯನವನ್ನು ನಡೆಸಲು ಹಿರಿಯರು ಒಪ್ಪಿಗೆ ಕೊಡಬಹುದು. ಆ ಭಾಷೆಯಲ್ಲಿ ಕ್ಷೇತ್ರ ಸೇವಾ ಕೂಟಗಳನ್ನು ಸಹ ನಡೆಸಬಹುದು. ಗುಂಪಿನಲ್ಲಿರುವ ಎಲ್ಲರೂ ಮುಖ್ಯ ಸಭೆಯ ಹಿರಿಯರ ಮಂಡಲಿಯ ನಿರ್ದೇಶನದ ಪ್ರಕಾರ ಕೆಲಸ ಮಾಡಬೇಕು. ಹಿರಿಯರು ಆ ಗುಂಪಿಗೆ ಅಗತ್ಯವಿರುವ ನಿರ್ದೇಶನವನ್ನು ಕೊಡುತ್ತಾರೆ ಮಾತ್ರವಲ್ಲ ಬೇಕಾದ ಸಹಾಯ ನೀಡಲು ಅವರೇ ಮೊದಲ ಹೆಜ್ಜೆ ತೆಗೆದುಕೊಳ್ಳುತ್ತಾರೆ. ಸಂಚರಣ ಮೇಲ್ವಿಚಾರಕರು ಮುಖ್ಯ ಸಭೆಯನ್ನು ಭೇಟಿಯಾದಾಗ ಈ ಗುಂಪಿನೊಟ್ಟಿಗೂ ಸೇವೆ ಮಾಡುತ್ತಾರೆ. ಅನಂತರ ಆ ಗುಂಪಿನ ಪ್ರಗತಿಯ ಕುರಿತು ಸಂಕ್ಷಿಪ್ತ ವರದಿಯನ್ನು ಮತ್ತು ಅದರ ಅಗತ್ಯಗಳನ್ನು ಶಾಖೆಗೆ ತಿಳಿಸುತ್ತಾರೆ. ಆ ಗುಂಪು ಸಮಯಾನಂತರ ಒಂದು ಸಭೆಯಾಗಬಹುದು. ಗುಂಪಿನಲ್ಲಿರುವ ಎಲ್ಲರು ಸಂಘಟನೆಯು ಹೇಳುವ ಪ್ರಕಾರ ಸೇವೆ ಮಾಡುತ್ತಾ ಇದ್ದರೆ ಯೆಹೋವನಿಗೂ ತುಂಬ ಖುಷಿಯಾಗುತ್ತದೆ.—1 ಕೊರಿಂ. 1:10; 3:5, 6.

ಕ್ಷೇತ್ರ ಸೇವಾ ಗುಂಪಿನೊಂದಿಗೆ ಸೇವೆ

45 ಪ್ರತಿಯೊಬ್ಬ ಸಮರ್ಪಿತ ಕ್ರೈಸ್ತನಿಗೂ ಸುವಾರ್ತೆ ಸಾರುವ ಜವಾಬ್ದಾರಿಯಿದೆ. ಇದನ್ನು ಮಾಡಲು ಅನೇಕ ವಿಧಾನಗಳಿವೆ. ಹಾಗಿದ್ದರೂ ನಮ್ಮ ಸಹೋದರರೊಂದಿಗೆ ಸೇವೆ ಮಾಡುವುದರಿಂದ ತುಂಬ ಪ್ರೋತ್ಸಾಹ ಸಿಗುತ್ತದೆ. (ಲೂಕ 10:1) ಹಾಗಾಗಿ ಸಭೆಗಳು ಶನಿವಾರ, ಭಾನುವಾರ ಮತ್ತು ಬೇರೆ ದಿನಗಳಲ್ಲಿ ಕ್ಷೇತ್ರ ಸೇವೆಗಾಗಿ ಕೂಡಿಬರುವ ಏರ್ಪಾಡು ಮಾಡುತ್ತವೆ. ರಜಾ ದಿನಗಳಲ್ಲಿ ಕೂಡ ಸಹೋದರರಿಗೆ ಗುಂಪಾಗಿ ಸೇರಿಬರಲು ಒಳ್ಳೇ ಅವಕಾಶವಿದೆ. ಸೇವಾ ಮೇಲ್ವಿಚಾರಕನು ಹಿರಿಯರ ಮಂಡಲಿಯೊಟ್ಟಿಗೆ ಮಾತಾಡಿ ಇಂಥ ಕೂಟಗಳನ್ನು ಏರ್ಪಡಿಸುವುದರಲ್ಲಿ ಮುಂದಾಳತ್ವ ವಹಿಸಬೇಕು. ಪ್ರಚಾರಕರಿಗೆ ಅನುಕೂಲವಾಗುವ ಸಮಯ ಮತ್ತು ಸ್ಥಳದಲ್ಲಿ, ಸಾಧ್ಯವಾದರೆ ಬೆಳಗ್ಗೆ ಮತ್ತು ಸಾಯಂಕಾಲ ಕೂಡಿಬರಲು ಯೋಜನೆ ಮಾಡಬಹುದು.

46 ಈ ರೀತಿ ಗುಂಪಾಗಿ ಕ್ಷೇತ್ರ ಸೇವಾ ಕೂಟಕ್ಕೆ ಸೇರಿಬರುವುದರಿಂದ ಪ್ರಚಾರಕರಿಗೆ ಕೂಡಿ ಸೇವೆ ಮಾಡಲು ಮತ್ತು “ಉತ್ತೇಜನವನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಲು” ಆಗುತ್ತದೆ. (ರೋಮ. 1:12) ಹೊಸ ಪ್ರಚಾರಕರು ಅನುಭವಸ್ಥ ಪ್ರಚಾರಕರೊಟ್ಟಿಗೆ ಸೇವೆ ಮಾಡಿ ತರಬೇತಿ ಪಡೆಯಲು ಆಗುತ್ತದೆ. ಕೆಲವೊಂದು ಕ್ಷೇತ್ರಗಳಲ್ಲಿ ಸುರಕ್ಷೆಗಾಗಿ ಇಬ್ಬರು ಅಥವಾ ಇಬ್ಬರಿಗಿಂತ ಹೆಚ್ಚು ಪ್ರಚಾರಕರು ಒಟ್ಟಿಗೆ ಸೇವೆ ಮಾಡುವುದು ಉತ್ತಮವಾಗಿರಬಹುದು. ನೀವು ಸೇವೆ ಮಾಡುತ್ತಿರುವ ಕ್ಷೇತ್ರದಲ್ಲಿ ಇತರರೂ ಸೇವೆ ಮಾಡುತ್ತಿದ್ದಾರೆ ಎಂದು ನಿಮಗೆ ಗೊತ್ತಿದ್ದರೆ ಅದು ನಿಮ್ಮಲ್ಲಿ ಧೈರ್ಯ ಮತ್ತು ಭರವಸೆಯನ್ನು ಮೂಡಿಸುತ್ತದೆ. ಒಂದುವೇಳೆ ನೀವು ಒಬ್ಬರೇ ನಿಮ್ಮ ಕ್ಷೇತ್ರದಲ್ಲಿ ಸೇವೆಮಾಡಲು ಯೋಜನೆ ಮಾಡಿರುವುದಾದರೂ ಕ್ಷೇತ್ರ ಸೇವಾ ಕೂಟಕ್ಕೆ ಬರುವುದು ಇತರರನ್ನು ಪ್ರೋತ್ಸಾಹಿಸುತ್ತದೆ. ಪ್ರತಿಯೊಂದು ಕ್ಷೇತ್ರ ಸೇವಾ ಕೂಟಕ್ಕೆ (ಮುಖ್ಯವಾಗಿ ಪ್ರತಿದಿನ ಇದ್ದಲ್ಲಿ) ಪಯನೀಯರರಾಗಲಿ ಇತರರಾಗಲಿ ತಪ್ಪದೆ ಹಾಜರಾಗಲೇಬೇಕೆಂಬ ನಿಯಮವಿಲ್ಲ. ಆದರೆ ಪ್ರತಿ ವಾರ ಕೆಲವು ದಿನಗಳಾದರೂ ಕ್ಷೇತ್ರ ಸೇವಾ ಕೂಟಕ್ಕೆ ಹಾಜರಾಗುವ ಮೂಲಕ ಅದನ್ನು ಬೆಂಬಲಿಸಬಹುದು.

47 ಸಾರುವುದರಲ್ಲಿ ಯೇಸು ಮತ್ತು ಅವನ ಅಪೊಸ್ತಲರು ಇಟ್ಟಿರುವ ಮಾದರಿಯನ್ನು ನಾವೆಲ್ಲರೂ ಅನುಕರಿಸೋಣ. ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದೇ ನಾವು ಮಾಡಬೇಕಾದ ಅತಿ ಪ್ರಾಮುಖ್ಯ ಕೆಲಸ. ಈ ಕೆಲಸದಲ್ಲಿ ಪೂರ್ಣವಾಗಿ ಭಾಗವಹಿಸಲು ನಾವು ಮಾಡುವ ಎಲ್ಲ ಪ್ರಯತ್ನಗಳನ್ನು ಯೆಹೋವನು ಖಂಡಿತ ಆಶೀರ್ವದಿಸುತ್ತಾನೆ.—ಲೂಕ 9:57-62.