ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 10

ಸೇವೆ ಹೆಚ್ಚಿಸಲು ನಮಗಿರುವ ಅವಕಾಶಗಳು

ಸೇವೆ ಹೆಚ್ಚಿಸಲು ನಮಗಿರುವ ಅವಕಾಶಗಳು

ಯೇಸು ತನ್ನ ಶಿಷ್ಯರನ್ನು ಸಾರಲು ಕಳುಹಿಸುವಾಗ “ಕೊಯ್ಲು ಬಹಳವಿದೆ; ಆದರೆ ಕೆಲಸಗಾರರು ಕೊಂಚ. ಆದುದರಿಂದ ತನ್ನ ಕೊಯ್ಲಿಗೆ ಕೆಲಸದವರನ್ನು ಕಳುಹಿಸಿಕೊಡುವಂತೆ ಕೊಯ್ಲಿನ ಯಜಮಾನನನ್ನು ಬೇಡಿಕೊಳ್ಳಿರಿ” ಎಂದು ಹೇಳಿದನು. (ಮತ್ತಾ. 9:37, 38) ಅವರು ಹೇಗೆ ಸಾರಬೇಕೆಂದೂ ಕಲಿಸಿದನು. “ಮನುಷ್ಯಕುಮಾರನು ಬರುವ ತನಕ ನೀವು ಇಸ್ರಾಯೇಲಿನ ಊರುಗಳ ಸಂಚಾರವನ್ನು ಪೂರ್ಣಗೊಳಿಸಿರುವುದಿಲ್ಲ” ಎಂದು ಯೇಸು ಹೇಳುವ ಮೂಲಕ ಸಾರುವ ಕೆಲಸ ತುಂಬ ಮಾಡಲಿಕ್ಕಿದೆ, ಆದರೆ ಸಮಯ ತುಂಬ ಕಡಿಮೆಯಿದೆ ಎಂದು ಒತ್ತಿಹೇಳಿದನು.—ಮತ್ತಾ. 10:23.

2 ಈಗಲೂ ನಾವು ತುಂಬ ಜನರಿಗೆ ಸಾರಲಿಕ್ಕಿದೆ. ಅಂತ್ಯ ಬರುವ ಮುಂಚೆಯೇ ಇದನ್ನು ಮಾಡಿಮುಗಿಸಬೇಕು. ಆದರೆ ಸಮಯ ತುಂಬ ಕಡಿಮೆಯಿದೆ. (ಮಾರ್ಕ 13:10) ಇಡೀ ಭೂಮಿಯಲ್ಲಿ ಸುವಾರ್ತೆ ಸಾರಬೇಕಾದ್ದರಿಂದ ಯೇಸು ಮತ್ತು ಅವನ ಅಪೊಸ್ತಲರಿದ್ದ ಪರಿಸ್ಥಿತಿಯಲ್ಲೇ ನಾವಿದ್ದೇವೆ. ನಿಜವೇನೆಂದರೆ ಅಂದಿಗಿಂತ ಇಂದು ಕೆಲಸ ಜಾಸ್ತಿ. ಭೂಮಿಯಲ್ಲಿರುವ ಕೋಟ್ಯಂತರ ಜನರಿಗೆ ಹೋಲಿಸಿದರೆ ನಾವಿರುವುದು ಕೆಲವೇ ಮಂದಿ. ಆದರೂ ಯೆಹೋವನ ಸಹಾಯದಿಂದ ಭೂಮಿಯಲ್ಲೆಲ್ಲ ಸುವಾರ್ತೆ ಸಾರಲು ನಮ್ಮಿಂದ ಸಾಧ್ಯ. ಯೆಹೋವನು ನಿಶ್ಚಯಿಸಿರುವ ಸಮಯದಲ್ಲಿ ಅಂತ್ಯ ಬಂದೇ ಬರುತ್ತದೆ. ಆದರೆ ಪ್ರಶ್ನೆ ಏನೆಂದರೆ ನಾವು ದೇವರ ಸೇವೆಯನ್ನು ಪೂರ್ಣವಾಗಿ ಮಾಡಲಾಗುವಂತೆ ಅದಕ್ಕೆ ಜೀವನದಲ್ಲಿ ಮೊದಲ ಸ್ಥಾನ ಕೊಡುತ್ತೇವಾ? ಅದಕ್ಕಾಗಿ ನಾವು ಯಾವ ಗುರಿಗಳನ್ನು ಇಡಬಹುದು?

3 ಯೆಹೋವನು ತನ್ನ ಸಮರ್ಪಿತ ಸೇವಕರಿಂದ ಏನನ್ನು ಬಯಸುತ್ತಾನೆಂದು ತಿಳಿಸುತ್ತಾ ಯೇಸು ಹೀಗಂದನು: “ನಿನ್ನ ದೇವರಾದ ಯೆಹೋವನನ್ನು ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಮನಸ್ಸಿನಿಂದಲೂ ನಿನ್ನ ಪೂರ್ಣ ಬಲದಿಂದಲೂ ಪ್ರೀತಿಸಬೇಕು.” (ಮಾರ್ಕ 12:30) ಯೇಸು ಹೇಳಿದಂತೆ ನಾವು ಪೂರ್ಣ ಪ್ರಾಣದಿಂದ ಯೆಹೋವನ ಸೇವೆಮಾಡಬೇಕು. ಅಂದರೆ ಯೆಹೋವನ ಮೇಲೆ ನಮಗೆಷ್ಟು ಭಕ್ತಿಯಿದೆ, ಎಂಥ ಮನಸ್ಸಿನಿಂದ ಆತನಿಗೆ ಸಮರ್ಪಣೆ ಮಾಡಿಕೊಂಡಿದ್ದೇವೆಂದು ನಮ್ಮಿಂದಾದಷ್ಟು ಹೆಚ್ಚು ಸೇವೆಮಾಡುವ ಮೂಲಕ ತೋರಿಸಬೇಕು. (2 ತಿಮೊ. 2:15) ಹಾಗೆ ಮಾಡಲು ನಮಗೆ ತುಂಬ ಅವಕಾಶಗಳಿವೆ. ನಮ್ಮ ಪರಿಸ್ಥಿತಿ, ಸಾಮರ್ಥ್ಯಕ್ಕೆ ತಕ್ಕಂತೆ ಆ ಅವಕಾಶಗಳನ್ನು ಬಳಸಿಕೊಳ್ಳಬಹುದು. ಅಂಥ ಯಾವೆಲ್ಲ ಅವಕಾಶಗಳಿವೆಯೆಂದು ಈಗ ನೋಡೋಣ. ಅನಂತರ ಯಾವ ಗುರಿಗಳನ್ನು ಇಡಬೇಕೆಂದು ನೀವೇ ನಿರ್ಧರಿಸಿ.

ಸಭೆಯಲ್ಲಿ ಪ್ರಚಾರಕರಾಗಿ ಸೇವೆ

4 ಸತ್ಯ ಕಲಿತವರೆಲ್ಲರಿಗೂ ಸುವಾರ್ತೆ ಸಾರುವ ಸುಯೋಗವಿದೆ. ಇದು ಯೇಸು ಎಲ್ಲ ಶಿಷ್ಯರಿಗೆ ಕೊಟ್ಟ ಅತಿ ಪ್ರಾಮುಖ್ಯ ಕೆಲಸ. (ಮತ್ತಾ. 24:14; 28:19, 20) ಕ್ರಿಸ್ತನ ಶಿಷ್ಯನು ಸುವಾರ್ತೆಯನ್ನು ಕೇಳಿಸಿಕೊಂಡ ಕೂಡಲೆ ಅದನ್ನು ಬೇರೆಯವರಿಗೆ ಹೇಳಲು ಶುರುಮಾಡುತ್ತಾನೆ. ಅಂದ್ರೆಯ, ಫಿಲಿಪ್ಪ, ಕೊರ್ನೇಲ್ಯ, ಇನ್ನಿತರರು ಹೀಗೆಯೇ ಮಾಡಿದರು. (ಯೋಹಾ. 1:40, 41, 43-45; ಅ. ಕಾ. 10:1, 2, 24; 16:14, 15, 25-34) ಹಾಗಾದರೆ ನೀವು ದೀಕ್ಷಾಸ್ನಾನ ಪಡೆಯುವ ಮುಂಚೆಯೇ ಬೇರೆಯವರಿಗೆ ದೇವರ ರಾಜ್ಯದ ಬಗ್ಗೆ ತಿಳಿಸಬಹುದಾ? ಖಂಡಿತ ತಿಳಿಸಬಹುದು. ಪ್ರಚಾರಕರಾದ ಕೂಡಲೆ ಸಭೆಯೊಂದಿಗೆ ಸೇರಿ ಮನೆಮನೆ ಸೇವೆಯನ್ನು ಮಾಡಬಹುದು. ನಿಮ್ಮ ಸಾಮರ್ಥ್ಯ, ಪರಿಸ್ಥಿತಿಗೆ ತಕ್ಕಂತೆ ಬೇರೆ ವಿಧಾನಗಳಲ್ಲೂ ಸಾರಬಹುದು.

5 ದೀಕ್ಷಾಸ್ನಾನವಾದ ಮೇಲೆ ಸತ್ಯದ ಕುರಿತು ಬೇರೆಯವರಿಗೆ ಕಲಿಸಲು ನಿಮ್ಮಿಂದಾಗುವುದೆಲ್ಲ ಮಾಡಿರಿ. ಹೆಚ್ಚು ಸೇವೆಮಾಡಲು ನಿಮ್ಮ ಮುಂದಿರುವ ಅವಕಾಶಗಳನ್ನು ಬಳಸಿಕೊಳ್ಳುವಾಗ ನಿಜಕ್ಕೂ ಸಂತೋಷ ನಿಮ್ಮದಾಗುತ್ತದೆ. ಒಂದುವೇಳೆ ನಿಮ್ಮಿಂದ ಹೆಚ್ಚು ಮಾಡಲು ಆಗದಿದ್ದರೆ ಬೇಸರಪಡಬೇಡಿ. ನಿಮ್ಮಿಂದ ಆಗುವಷ್ಟನ್ನು ಮಾಡುವುದೇ ದೊಡ್ಡ ಸೌಭಾಗ್ಯ!

ಸಹಾಯದ ಅಗತ್ಯವಿರುವಲ್ಲಿ ಸೇವೆ

6 ನಿಮ್ಮ ಸಭೆಯ ಸೇವಾಕ್ಷೇತ್ರವನ್ನು ಅನೇಕ ಬಾರಿ ಆವರಿಸಲಾಗಿದೆಯಾ? ಹೌದಾದರೆ ಪ್ರಚಾರಕರು ಕಡಿಮೆಯಿರುವ ಸ್ಥಳಕ್ಕೆ ಹೋಗಿ ಸೇವೆಮಾಡುವ ಬಗ್ಗೆ ನೀವು ಯೋಚಿಸಬಹುದು. (ಅ. ಕಾ. 16:9) ಕೆಲವು ಸಭೆಗಳಲ್ಲಿ ಹಿರಿಯರು, ಸಹಾಯಕ ಸೇವಕರು ಕಡಿಮೆ ಇರುತ್ತಾರೆ ಅಥವಾ ಇರುವುದೇ ಇಲ್ಲ. ನೀವು ಹಿರಿಯರು ಅಥವಾ ಸಹಾಯಕ ಸೇವಕರಾಗಿದ್ದರೆ ಅಂಥ ಸಭೆಗಳಿಗೆ ಹೋಗಿ ಸೇವೆಮಾಡಬಹುದು. ನಿಮ್ಮ ಸಂಚರಣ ವಿಭಾಗದಲ್ಲಿ ಯಾವ ಸಭೆಗೆ ಸಹಾಯ ಬೇಕೆಂದು ತಿಳಿಯಲು ಸಂಚರಣ ಮೇಲ್ವಿಚಾರಕರನ್ನು ಕೇಳಿ. ನಿಮ್ಮ ದೇಶದಲ್ಲಿ ಬೇರೆ ಎಲ್ಲಾದರೂ ಸಹಾಯದ ಅಗತ್ಯವಿದೆಯಾ ಎಂದು ತಿಳಿಯಲು ಶಾಖೆಯನ್ನು ಸಂಪರ್ಕಿಸಿ.

7 ನಿಮಗೆ ಬೇರೆ ದೇಶಕ್ಕೆ ಹೋಗಿ ಸೇವೆಮಾಡಲು ಮನಸ್ಸಿದೆಯಾ? ಮನಸ್ಸಿದ್ದರೆ ಅಲ್ಲಿಗೆ ಹೋಗುವ ಮುಂಚೆಯೇ ಜಾಗ್ರತೆಯಿಂದ ಯೋಜನೆ ಮಾಡಿ. ಸಭೆಯ ಹಿರಿಯರೊಂದಿಗೆ ಈ ಬಗ್ಗೆ ಮಾತಾಡಿ. ಏಕೆಂದರೆ, ಸ್ಥಳಾಂತರಿಸುವುದರಿಂದ ನಿಮಗೆ ಕೆಲವು ಸಮಸ್ಯೆಗಳು ಬರಬಹುದು, ಹೊಂದಾಣಿಕೆಗಳನ್ನು ಮಾಡಬೇಕಾಗಬಹುದು. (ಲೂಕ 14:28) ಒಂದುವೇಳೆ ಬೇರೆ ದೇಶದಲ್ಲಿ ಹೆಚ್ಚು ಸಮಯ ಉಳಿಯುವ ಯೋಜನೆ ನಿಮಗಿಲ್ಲವಾದರೆ ನಿಮ್ಮ ದೇಶದಲ್ಲೇ ಅಗತ್ಯವಿರುವ ಸ್ಥಳದಲ್ಲಿ ಸೇವೆಮಾಡುವುದು ಒಳ್ಳೇದು.

8 ಕೆಲವು ಸ್ಥಳಗಳಲ್ಲಿ ಅಷ್ಟೇನೂ ಅನುಭವವಿಲ್ಲದ ಸಹೋದರರೇ ಸಭೆಯನ್ನು ನೋಡಿಕೊಳ್ಳುತ್ತಾರೆ. ಅಂಥ ಸಭೆಗಳಿಗೆ ಅನುಭವಸ್ಥ ಹಿರಿಯರು ಬಂದರೆ ಅವರೇ ಜವಾಬ್ದಾರಿ ವಹಿಸುವಂತೆ ಆ ದೀನಭಾವದ ಸಹೋದರರು ಖುಷಿಯಿಂದ ಬಿಟ್ಟುಕೊಡುತ್ತಾರೆ. ನೀವೊಬ್ಬ ಹಿರಿಯರಾಗಿದ್ದು ಇಂಥ ಸಭೆಗೆ ಹೋಗಿ ಸಹಾಯಮಾಡಲು ಬಯಸುತ್ತೀರಾ? ಹೌದಾದರೆ ನೆನಪಿಡಿ, ಅಲ್ಲಿಗೆ ಹೋಗುವ ಉದ್ದೇಶ ಆ ಸಹೋದರರಿಗಿದ್ದ ಸ್ಥಾನವನ್ನು ತೆಗೆದುಕೊಳ್ಳುವುದಲ್ಲ, ಬದಲಿಗೆ ಅವರ ಜೊತೆಸೇರಿ ಸೇವೆಮಾಡುವುದೇ. ಹಾಗಾಗಿ ಆ ಸಭೆಯ ಸಹೋದರರಿಗೆ ಜವಾಬ್ದಾರಿ ತಕ್ಕೊಳ್ಳಲು ಅರ್ಹರಾಗುವಂತೆ ಪ್ರೋತ್ಸಾಹಿಸಿ. (1 ತಿಮೊ. 3:1) ಅಲ್ಲಿ ಎಲ್ಲವು ನಿಮ್ಮ ಸಭೆಯಲ್ಲಿ ನಡೆಯುವಂತೆ ನಡೆಯಲಿಕ್ಕಿಲ್ಲ. ತಾಳ್ಮೆಯಿಂದಿರಿ. ನಿಮಗಿರುವ ಅನುಭವದಿಂದ ಅಲ್ಲಿನ ಸಹೋದರರಿಗೆ ಸಹಾಯಮಾಡಿ. ಆಗ ನೀವು ವಾಪಸ್ಸು ಬರಬೇಕಾಗಿದ್ದರೆ ಅಲ್ಲಿನ ಹಿರಿಯರೇ ಸಭೆಯ ಕೆಲಸಗಳನ್ನು ನೋಡಿಕೊಳ್ಳಲು ಆಗುತ್ತದೆ.

9 ನೀವು ಬೇರೆ ದೇಶಕ್ಕೆ ಹೋಗಿ ಅಲ್ಲಿನ ಸಭೆಯೊಂದರಲ್ಲಿ ಸೇವೆಮಾಡಲು ಬಯಸುವಲ್ಲಿ ಮೊದಲು ನಿಮ್ಮ ಸಭೆಯ ಸೇವಾ ಸಮಿತಿಗೆ ತಿಳಿಸಿ. ಅನಂತರ ಸೇವಾ ಸಮಿತಿಯು ನಿಮ್ಮನ್ನು ಶಿಫಾರಸ್ಸು ಮಾಡಿ ಒಂದು ಪತ್ರವನ್ನು ನೀವು ಸೇವೆ ಮಾಡಲಿಚ್ಛಿಸುವ ದೇಶದ ಶಾಖೆಗೆ ಕಳುಹಿಸುತ್ತದೆ. ನೀವು ಹಿರಿಯರಾಗಿರಲಿ, ಸಹಾಯಕ ಸೇವಕರಾಗಿರಲಿ, ಪಯನೀಯರ್‌ ಅಥವಾ ಪ್ರಚಾರಕರಾಗಿರಲಿ ಈ ಶಿಫಾರಸ್ಸು ಪತ್ರವನ್ನು ಕಳುಹಿಸಲೇಬೇಕು. ಉತ್ತರವಾಗಿ ಆ ವಿದೇಶದ ಶಾಖೆಯು ಸಹಾಯದ ಅಗತ್ಯವಿರುವ ಸಭೆಗಳ ಹೆಸರುಗಳನ್ನು ನಿಮಗೆ ಕಳುಹಿಸುತ್ತದೆ.

ಬೇರೆ ಭಾಷೆ ಕಲಿಯಿರಿ

10 ಬೇರೆ ಭಾಷೆ ಅಥವಾ ಸನ್ನೆ ಭಾಷೆ ಕಲಿತು ಸಾರುವ ಮೂಲಕವೂ ಸೇವೆಯನ್ನು ಹೆಚ್ಚು ಮಾಡಬಹುದು. ಈ ಗುರಿ ನಿಮಗಿದ್ದರೆ ನಿಮ್ಮ ಸಭಾ ಹಿರಿಯರ ಹಾಗೂ ಸಂಚರಣ ಮೇಲ್ವಿಚಾರಕನ ಹತ್ತಿರ ಮಾತಾಡಿ. ಅವರು ನಿಮಗೆ ಸಲಹೆಗಳನ್ನು ಕೊಡುವರು, ಪ್ರೋತ್ಸಾಹಿಸುವರು. ಕೆಲವು ಪ್ರದೇಶಗಳಲ್ಲಿ ಶಾಖೆಯ ಮಾರ್ಗದರ್ಶನೆಯ ಮೇರೆಗೆ ಭಾಷಾ ತರಗತಿಗಳನ್ನು ನಡೆಸಲಾಗುತ್ತದೆ. ನುರಿತ ಪ್ರಚಾರಕರಿಗೆ ಮತ್ತು ಪಯನೀಯರರಿಗೆ ಬೇರೆ ಭಾಷೆಯಲ್ಲಿ ಸಾರಲು ಕಲಿಸಲಾಗುತ್ತದೆ.

ಪಯನೀಯರ್‌ ಸೇವೆ

11 ಸಹಾಯಕ ಪಯನೀಯರ್‌, ಪಯನೀಯರ್‌, ವಿಶೇಷ ಪಯನೀಯರ್‌ ಆಗಲು, ಇತರ ಪೂರ್ಣ ಸಮಯದ ಸೇವೆಮಾಡಲು ಯಾವ ಅರ್ಹತೆಗಳಿರಬೇಕೆಂದು ಎಲ್ಲ ಪ್ರಚಾರಕರಿಗೆ ತಿಳಿದಿರಬೇಕು. ಪಯನೀಯರ್‌ ಸೇವೆ ಮಾಡುವವರು ದೀಕ್ಷಾಸ್ನಾನ ಪಡೆದಿರಬೇಕು, ಸಭೆಯಲ್ಲಿ ಮಾದರಿಯಾಗಿರಬೇಕು. ಪ್ರತಿ ತಿಂಗಳು ನಿಗದಿತ ತಾಸು ಸೇವೆಮಾಡಲು ಅವರಿಂದಾಗಬೇಕು. ಪಯನೀಯರ್‌ ಅಥವಾ ಸಹಾಯಕ ಪಯನೀಯರರಾಗಲು ಬಯಸುವವರು ಅದಕ್ಕಾಗಿರುವ ಅರ್ಜಿಯನ್ನು ತುಂಬಿಸಬೇಕು. ಸೇವಾ ಸಮಿತಿ ಅದಕ್ಕೆ ಒಪ್ಪಿಗೆ ಕೊಡುತ್ತದೆ. ವಿಶೇಷ ಪಯನೀಯರರನ್ನು ಶಾಖೆಯೇ ನೇಮಿಸುತ್ತದೆ.

12ಸಹಾಯಕ ಪಯನೀಯರ್‌ ಸೇವೆಯನ್ನು ಒಂದು ತಿಂಗಳು ಅಥವಾ ಕೆಲವು ತಿಂಗಳು ಅಥವಾ ಬಿಡದೆ ಪ್ರತಿ ತಿಂಗಳು ಮಾಡಬಹುದು. ನೀವೆಷ್ಟು ತಿಂಗಳು ಆ ಸೇವೆ ಮಾಡುತ್ತೀರೆನ್ನುವುದು ನಿಮ್ಮ ಪರಿಸ್ಥಿತಿಯ ಮೇಲೆ ಹೊಂದಿಕೊಂಡಿದೆ. ಕ್ರಿಸ್ತನ ಮರಣದ ಸ್ಮರಣೆ, ಸಂಚರಣ ಮೇಲ್ವಿಚಾರಕರ ಭೇಟಿ ಇಂಥ ವಿಶೇಷ ಸಂದರ್ಭಗಳಲ್ಲಿ ಕೆಲವರು ಸಹಾಯಕ ಪಯನೀಯರ್‌ ಸೇವೆಮಾಡುತ್ತಾರೆ. ಕೆಲವರು ರಜೆಯ ಸಮಯದಲ್ಲಿ ಮಾಡುತ್ತಾರೆ. ಮಕ್ಕಳು ಶಾಲೆಗೆ ರಜೆಯಿರುವ ತಿಂಗಳುಗಳಲ್ಲಿ ಮಾಡಬಹುದು. ಮಾರ್ಚ್‌, ಏಪ್ರಿಲ್‌ ತಿಂಗಳುಗಳಲ್ಲಿ, ಸಂಚರಣ ಮೇಲ್ವಿಚಾರಕರ ಭೇಟಿಯ ತಿಂಗಳಿನಲ್ಲಿ ಕಡಿಮೆ ತಾಸುಗಳ ಸಹಾಯಕ ಪಯನೀಯರ್‌ ಸೇವೆ ಮಾಡಬಹುದು. ಉತ್ತಮ ನೈತಿಕತೆ ಹಾಗೂ ರೂಢಿಗಳು ನಿಮಗಿದ್ದರೆ ಮತ್ತು ಸಹಾಯಕ ಪಯನೀಯರ್‌ ಸೇವೆಯ ತಾಸುಗಳನ್ನು ಪೂರ್ಣಗೊಳಿಸಲು ಆಗುತ್ತದೆಂದರೆ ಈ ಸೇವೆಗೆ ನೀವು ಹಾಕುವ ಅರ್ಜಿಯನ್ನು ಸ್ವೀಕರಿಸಲು ಹಿರಿಯರು ತುಂಬ ಸಂತೋಷಪಡುತ್ತಾರೆ.

13ಪಯನೀಯರ್‌ ಸೇವೆ ಮಾಡುವವರಿಗೆ ಒಂದು ವರ್ಷಕ್ಕೆ ಇಂತಿಷ್ಟು ತಾಸು ಸೇವೆ ಮಾಡಬೇಕಾಗುತ್ತದೆ. ಅಷ್ಟು ತಾಸು ಮಾಡಲು ಆಗುವಲ್ಲಿ ನೀವು ಪಯನೀಯರರಾಗಲು ಯೋಚಿಸಬಹುದು. ಈ ಸೇವೆಮಾಡುವವರು ಹಿರಿಯರೊಂದಿಗೆ, ಪ್ರಚಾರಕರೊಂದಿಗೆ ಸಹಕರಿಸುತ್ತಾ ಅವರ ಜೊತೆಗೂಡಿ ಸೇವೆಮಾಡಬೇಕು. ಹುರುಪಿನಿಂದ ಸೇವೆಮಾಡುವ ಪಯನೀಯರರಿಂದ ಸಭೆಗೆ ಅನೇಕ ಪ್ರಯೋಜನಗಳಿವೆ. ಇವರು ಇತರರ ಹುರುಪನ್ನು ಹೆಚ್ಚಿಸಿ ಅವರೂ ಪಯನೀಯರರಾಗುವಂತೆ ಪ್ರೋತ್ಸಾಹಿಸುತ್ತಾರೆ. ನೀವು ಪಯನೀಯರ್‌ ಆಗಲು ಬಯಸುವಲ್ಲಿ, ಸಭೆಗೆ ಒಳ್ಳೇ ಮಾದರಿಯಾಗಿರಬೇಕು ಮತ್ತು ದೀಕ್ಷಾಸ್ನಾನವಾಗಿ ಕಡಿಮೆಪಕ್ಷ ಆರು ತಿಂಗಳಾಗಿರಬೇಕು.

14 ಸೇವೆಯಲ್ಲಿ ನಿಪುಣರಾಗಿರುವ ಕೆಲವು ಪಯನೀಯರರನ್ನು ಶಾಖೆಯು ವಿಶೇಷ ಪಯನೀಯರ್‌ ಸೇವೆ ಮಾಡಲು ನೇಮಿಸುತ್ತದೆ. ಇವರು ಯಾವ ಸ್ಥಳಕ್ಕೆ ನೇಮಿಸಿದರೂ ಹೋಗಲು ತಯಾರಿರಬೇಕು. ಅನೇಕರನ್ನು ದೂರದಲ್ಲಿರುವ ಚಿಕ್ಕ ಊರುಗಳಿಗೆ ನೇಮಿಸಲಾಗುತ್ತದೆ. ಅಲ್ಲಿ ಅವರು ಆಸಕ್ತ ಜನರನ್ನು ಕಂಡುಹಿಡಿದು ಸತ್ಯ ಕಲಿಸಿ ಹೊಸ ಸಭೆಗಳನ್ನು ಆರಂಭಿಸುತ್ತಾರೆ. ಇನ್ನು ಕೆಲವರನ್ನು ಸೇವಾಕ್ಷೇತ್ರ ದೊಡ್ಡದಿದ್ದು ಪ್ರಚಾರಕರು ಕಡಿಮೆಯಿರುವ ಸ್ಥಳಗಳಿಗೆ ನೇಮಿಸಲಾಗುತ್ತದೆ. ಕೆಲವು ಚಿಕ್ಕ ಸಭೆಗಳಲ್ಲಿ ಪ್ರಚಾರಕರ ಅಗತ್ಯವಿರುವುದಿಲ್ಲ, ಆದರೆ ಮೇಲ್ವಿಚಾರಕರ ಅಗತ್ಯವಿರುತ್ತದೆ. ಅಂಥ ಸಭೆಗಳಿಗೆ ಹಿರಿಯರಾಗಿರುವ ವಿಶೇಷ ಪಯನೀಯರರನ್ನು ನೇಮಿಸಲಾಗುತ್ತದೆ. ವಿಶೇಷ ಪಯನೀಯರರಿಗೆ ತಮ್ಮ ಖರ್ಚುಗಳನ್ನು ನೋಡಿಕೊಳ್ಳಲು ಸ್ವಲ್ಪ ಹಣವನ್ನು ಕೊಡಲಾಗುತ್ತದೆ. ಕೆಲವರನ್ನು ತಾತ್ಕಾಲಿಕ ವಿಶೇಷ ಪಯನೀಯರರಾಗಿ ನೇಮಿಸಲಾಗುತ್ತದೆ.

ಮಿಷನರಿ ಸೇವೆ

15 ಆಡಳಿತ ಮಂಡಲಿಯ ಸೇವಾ ಸಮಿತಿಯು ಮಿಷನರಿಗಳನ್ನು ಬೇರೆ ಬೇರೆ ದೇಶಗಳಿಗೆ ನೇಮಿಸುತ್ತದೆ. ನಂತರ ಆಯಾ ದೇಶದ ಶಾಖಾ ಸಮಿತಿಯು ಅವರನ್ನು ಆ ದೇಶದಲ್ಲಿ ತುಂಬ ಜನರಿರುವ ಕ್ಷೇತ್ರಕ್ಕೆ ನೇಮಿಸುತ್ತದೆ. ಅಲ್ಲಿನ ಸಭೆಯವರ ನಂಬಿಕೆಯನ್ನು ಬಲಪಡಿಸಲು ಹಾಗೂ ಪರಿಣಾಮಕಾರಿಯಾಗಿ ಸಾರುವಂತೆ ಅವರಿಗೆ ನೆರವಾಗಲು ಮಿಷನರಿಗಳು ಶ್ರಮಿಸುತ್ತಾರೆ. ಹೆಚ್ಚಾಗಿ ಇವರು ‘ರಾಜ್ಯ ಪ್ರಚಾರಕರ ಶಾಲೆ’ ಅಥವಾ ‘ಗಿಲ್ಯಡ್‌ ಶಾಲೆ’ಯಲ್ಲಿ ತರಬೇತಿ ಪಡೆದಿರುತ್ತಾರೆ. ಅವರಿಗೆ ಉಳಿದುಕೊಳ್ಳಲು ಮನೆ, ಖರ್ಚಿಗೆ ಸ್ವಲ್ಪ ಹಣ ಕೊಡಲಾಗುತ್ತದೆ.

ಸಂಚರಣ ಸೇವೆ

16 ಆಡಳಿತ ಮಂಡಲಿಯು ಸಂಚರಣ ಮೇಲ್ವಿಚಾರಕರನ್ನು ನೇಮಿಸುತ್ತದೆ. ಇವರಿಗೆ ವಿಶೇಷ ತರಬೇತಿ ಕೊಡಲಾಗುತ್ತದೆ. ಆರಂಭದಲ್ಲಿ ಇವರು ಬದಲಿ ಸಂಚರಣ ಮೇಲ್ವಿಚಾರಕರಾಗಿ ಸೇವೆಮಾಡಿ ಅನುಭವ ಪಡೆಯುತ್ತಾರೆ. ಬದಲಿ ಸಂಚರಣ ಮೇಲ್ವಿಚಾರಕರಾಗುವವರು ಹುರುಪಿನ ಪಯನೀಯರರೂ ಸಹೋದರರನ್ನು ತುಂಬ ಪ್ರೀತಿಸುವವರೂ ಆಗಿರಬೇಕು. ಬೈಬಲನ್ನು ಶ್ರದ್ಧೆಯಿಂದ ಅಧ್ಯಯನ ಮಾಡುವವರು, ಮನಮುಟ್ಟುವಂತೆ ಭಾಷಣ ಕೊಡುವವರು ಮತ್ತು ಬೋಧಿಸುವವರು ಆಗಿರಬೇಕು. ಪವಿತ್ರಾತ್ಮದಿಂದ ಉಂಟಾಗುವ ಗುಣಗಳು ಅವರಲ್ಲಿ ಎದ್ದುಕಾಣಬೇಕು. ಯಾವುದರಲ್ಲೂ ಅತಿರೇಕಕ್ಕೂ ಹೋಗಬಾರದು, ನಿರ್ಲಕ್ಷಿಸಲೂಬಾರದು. ಯಾರಿಂದಲೂ ಸಾಮರ್ಥ್ಯಕ್ಕೆ ಮೀರಿದ್ದನ್ನು ಕೇಳಿಕೊಳ್ಳಬಾರದು. ಏನೇ ಮಾಡಿದರೂ ಜಾಗ್ರತೆಯಿಂದ ಯೋಚಿಸಿ ಮಾಡುವವರು ಆಗಿರಬೇಕು. ವಿವಾಹಿತರಾಗಿದ್ದಲ್ಲಿ ಅವರ ಪತ್ನಿ ಸಹ ಪಯನೀಯರಳಾಗಿರಬೇಕು. ಆಕೆಯ ನಡತೆ, ಬೇರೆಯವರೊಟ್ಟಿಗೆ ನಡೆದುಕೊಳ್ಳುವ ರೀತಿ ಆದರ್ಶವಾಗಿರಬೇಕು. ಮನಸ್ಪರ್ಶಿಸುವಂತೆ ಸುವಾರ್ತೆ ಸಾರುವವರಾಗಿರಬೇಕು. ಗಂಡನಿಗೆ ಅಧೀನಳಾಗಿರಬೇಕು. ಗಂಡನ ಸ್ಥಾನವಹಿಸಿ ಮಾತಾಡುವುದು, ಅವನಿಗೆ ಮಾತಾಡಲು ಬಿಡದೆ ತಾನೇ ಎಲ್ಲ ಮಾತಾಡುವುದು ಮಾಡಬಾರದು. ಬೆಳಗ್ಗೆಯಿಂದ ಸಂಜೆ ವರೆಗೆ ಒಂದರ ನಂತರ ಒಂದು ಕೆಲಸ ಮಾಡಲಿಕ್ಕಿರುವುದರಿಂದ ಇಬ್ಬರಿಗೂ ಒಳ್ಳೇ ಆರೋಗ್ಯ ಇರಬೇಕು. ಈ ಸೇವೆಮಾಡಲು ಬಯಸುವ ಪಯನೀಯರರು ನೇರವಾಗಿ ಅರ್ಜಿ ಸಲ್ಲಿಸುವಂತಿಲ್ಲ. ಈ ಬಗ್ಗೆ ಸಂಚರಣ ಮೇಲ್ವಿಚಾರಕರೊಂದಿಗೆ ಮಾತಾಡಬೇಕು. ಅವರು ಮಾರ್ಗದರ್ಶನ ಕೊಡುವರು.

ಬೈಬಲ್‌ ಶಾಲೆಗಳು

17ರಾಜ್ಯ ಪ್ರಚಾರಕರ ಶಾಲೆ: ಹೆಚ್ಚು ಬಾರಿ ಆವರಿಸಿರದ ಕ್ಷೇತ್ರಗಳಲ್ಲಿ ಸೇವೆಮಾಡಲು ಮತ್ತು ಅಲ್ಲಿನ ಸಭೆಗಳಿಗೆ ಸಹಾಯ ಮಾಡಲು ಪ್ರಚಾರಕರ ಅಗತ್ಯವಿದೆ. ಹಾಗಾಗಿ ರಾಜ್ಯ ಪ್ರಚಾರಕರ ಶಾಲೆಯು ಅರ್ಹ ಅವಿವಾಹಿತ ಸಹೋದರ-ಸಹೋದರಿಯರಿಗೆ, ದಂಪತಿಗಳಿಗೆ ತರಬೇತಿ ನೀಡುತ್ತದೆ. ನಂತರ ಅವರನ್ನು ಅದೇ ದೇಶದಲ್ಲಿ ಹೆಚ್ಚು ಪ್ರಚಾರಕರ ಅಗತ್ಯವಿರುವ ಸ್ಥಳಗಳಿಗೆ ಪಯನೀಯರರಾಗಿ ಕಳುಹಿಸಲಾಗುತ್ತದೆ. ಕೆಲವೊಮ್ಮೆ ಅದೇ ದೇಶದಲ್ಲಿ ಅಥವಾ ವಿದೇಶದಲ್ಲಿ ಬೇರೆ ನೇಮಕಗಳನ್ನೂ ಕೊಡಬಹುದು. ಕೆಲವರನ್ನು ತಾತ್ಕಾಲಿಕ ಅಥವಾ ಖಾಯಂ ವಿಶೇಷ ಪಯನೀಯರರಾಗಿ ನೇಮಿಸಲಾಗುತ್ತದೆ. ಈ ಶಾಲೆಗೆ ಹೋಗಲು ಬಯಸುವ ಪಯನೀಯರರು ತಮಗೆ ಯಾವ ಅರ್ಹತೆಗಳಿರಬೇಕೆಂದು ತಿಳಿಯಲು ಪ್ರಾದೇಶಿಕ ಅಧಿವೇಶನದಲ್ಲಿ ಇದಕ್ಕಾಗಿ ನಡೆಯುವ ಕೂಟಕ್ಕೆ ಹಾಜರಾಗಬಹುದು.

18ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌: ವಿಶೇಷ ಪಯನೀಯರರು, ಮಿಷನರಿಗಳು, ಸಂಚರಣ ಮೇಲ್ವಿಚಾರಕರು ಮತ್ತು ಬೆತೆಲಿನಲ್ಲಿ ಸೇವೆ ಮಾಡುತ್ತಿರುವವರನ್ನು ಈ ಶಾಲೆಗೆ ಆಯ್ಕೆ ಮಾಡಲಾಗುತ್ತದೆ. ಅವಿವಾಹಿತ ಸಹೋದರ-ಸಹೋದರಿಯರು, ದಂಪತಿಗಳು ಈ ಶಾಲೆಗೆ ಹೋಗಬಹುದು. ಅವರಿಗೆ ಇಂಗ್ಲಿಷ್‌ ಗೊತ್ತಿರಬೇಕು. ಸಭೆಗಳಿಗೆ ಅಥವಾ ಬೆತೆಲ್‌ ಕೆಲಸಕ್ಕೆ ಸಹಾಯವಾಗುವ ಗುಣಗಳು, ಸಾಮರ್ಥ್ಯಗಳು ಅವರಲ್ಲಿರಬೇಕು. ಸಂತೋಷದಿಂದ ಸಹೋದರರ ಸೇವೆ ಮಾಡುವವರೆಂದು, ಬೈಬಲ್‌ ಮತ್ತು ಸಂಘಟನೆ ಕೊಡುವ ಮಾರ್ಗದರ್ಶನವನ್ನು ಪಾಲಿಸುವಂತೆ ಇತರರಿಗೆ ಪ್ರೀತಿಯಿಂದ ಸಹಾಯ ಮಾಡುವವರೆಂದು ತೋರಿಸಿಕೊಟ್ಟಿರಬೇಕು. ಈ ಶಾಲೆಗೆ ಹಾಜರಾಗುವ ಅರ್ಹತೆಗಳಿರುವವರನ್ನು ಶಾಖಾ ಸಮಿತಿಯು ಗುರುತಿಸಿ ಅರ್ಜಿ ಸಲ್ಲಿಸುವಂತೆ ಕೇಳಿಕೊಳ್ಳುತ್ತದೆ. ಈ ಶಾಲೆಯಲ್ಲಿ ಪದವಿ ಪಡೆದವರನ್ನು ವಿದೇಶದಲ್ಲಿ ಅಥವಾ ಅವರ ದೇಶದಲ್ಲೇ ಸಾರುವ ಕೆಲಸ ಹೆಚ್ಚಿಸಲು ಅಥವಾ ಬೆತೆಲ್‌ ಸೇವೆಗೆ ನೇಮಿಸಲಾಗುತ್ತದೆ.

ಬೆತೆಲ್‌ ಸೇವೆ

19 ಬೆತೆಲಿನಲ್ಲಿ ಸೇವೆಮಾಡುವುದು ಒಂದು ವಿಶೇಷ ಸುಯೋಗ. “ಬೆತೆಲ್‌” ಅದರರ್ಥ “ದೇವರ ಮನೆ.” ಈ ಕೇಂದ್ರಗಳ ಮೂಲಕ ಯೆಹೋವನು ತನ್ನ ಜನರನ್ನು ಮಾರ್ಗದರ್ಶಿಸುವುದರಿಂದ ಈ ಹೆಸರು ಸೂಕ್ತ. ಬೆತೆಲಿನಲ್ಲಿರುವವರು ಬೈಬಲ್‌ ಆಧರಿತ ಸಾಹಿತ್ಯದ ತಯಾರಿ, ಭಾಷಾಂತರ ಮತ್ತು ವಿತರಣೆಗೆ ಸಂಬಂಧಿಸಿ ಅನೇಕ ಪ್ರಮುಖ ಕೆಲಸಗಳನ್ನು ಮಾಡುತ್ತಾರೆ. ಭೂಮಿಯಲ್ಲೆಲ್ಲ ಇರುವ ಸಭೆಗಳನ್ನು ಮೇಲ್ವಿಚಾರಣೆ ಮಾಡುತ್ತಾ ಮಾರ್ಗದರ್ಶಿಸುತ್ತಿರುವ ಆಡಳಿತ ಮಂಡಲಿಗೆ ಇವರ ಕೆಲಸ ತುಂಬ ಸಹಾಯಕಾರಿ. ಭಾಷಾಂತರ ಮಾಡುವ ಅನೇಕ ಬೆತೆಲಿಗರು ಅವರು ಅನುವಾದಿಸುವ ಭಾಷೆಯ ಜನರಿರುವ ಸ್ಥಳದಲ್ಲಿದ್ದೇ ಕೆಲಸಮಾಡುತ್ತಾರೆ. ಇದರಿಂದ ಜನರು ದಿನನಿತ್ಯ ಸಾಮಾನ್ಯವಾಗಿ ಬಳಸುವ ಪದಗಳನ್ನು ಕೇಳಿಸಿಕೊಂಡು ಅದನ್ನೇ ಭಾಷಾಂತರದಲ್ಲಿ ಬಳಸಲು ಆಗುತ್ತದೆ. ಮಾತ್ರವಲ್ಲ, ಅವರು ಭಾಷಾಂತರಿಸಿದ್ದು ಜನರಿಗೆ ಅರ್ಥವಾಗುತ್ತದಾ ಎಂದು ಅವರೇ ತಿಳಿದುಕೊಳ್ಳಲು ಆಗುತ್ತದೆ.

20 ಬೆತೆಲ್‌ ಕೆಲಸ ಶ್ರಮದ ಕೆಲಸ. ಹಾಗಾಗಿ ಒಳ್ಳೇ ಆರೋಗ್ಯವಿದ್ದು ದೈಹಿಕವಾಗಿ ಸುದೃಢರಾಗಿರುವ ದೀಕ್ಷಾಸ್ನಾನ ಪಡೆದ ಯುವ ಸಹೋದರರನ್ನೇ ಹೆಚ್ಚಾಗಿ ಬೆತೆಲಿಗೆ ಕರೆಯಲಾಗುತ್ತದೆ. ನಿಮ್ಮ ದೇಶದ ಬೆತೆಲಿನಲ್ಲಿ ಸಹಾಯದ ಅಗತ್ಯವಿದ್ದರೆ ಮತ್ತು ಅಲ್ಲಿ ಸೇವೆಮಾಡುವ ಇಚ್ಛೆ ನಿಮಗಿದ್ದರೆ ಪ್ರಾದೇಶಿಕ ಅಧಿವೇಶನದಲ್ಲಿ ಇದಕ್ಕೆ ಸಂಬಂಧಿಸಿ ನಡೆಯುವ ಕೂಟಕ್ಕೆ ಹಾಜರಾಗಿ ಯಾವೆಲ್ಲ ಅರ್ಹತೆಗಳಿರಬೇಕೆಂದು ತಿಳಿದುಕೊಳ್ಳಿ. ನಿಮ್ಮ ಸಂಚರಣ ಮೇಲ್ವಿಚಾರಕನ ಹತ್ತಿರವೂ ಈ ಬಗ್ಗೆ ಕೇಳಬಹುದು.

ನಿರ್ಮಾಣ ಕಾರ್ಯ

21 ಸೊಲೊಮೋನನ ಕಾಲದಲ್ಲಿ ಯೆಹೋವನಿಗಾಗಿ ದೇವಾಲಯವನ್ನು ಕಟ್ಟುವುದು ಪವಿತ್ರ ಸೇವೆಯಾಗಿತ್ತು. ಇಂದು ಸಹ ದೇವರ ಆರಾಧನೆ ಮತ್ತು ಸೇವೆಗೆ ಸಂಬಂಧಿಸಿದ ಕಟ್ಟಡಗಳನ್ನು ನಿರ್ಮಿಸುವುದು ಪವಿತ್ರ ಸೇವೆಯಾಗಿದೆ. (1 ಅರ. 8:13-18) ಅನೇಕರು ಇಂಥ ನಿರ್ಮಾಣ ಕೆಲಸದಲ್ಲಿ ಹುರುಪಿನಿಂದ ಭಾಗವಹಿಸಿದ್ದಾರೆ. ತಮ್ಮ ಸಮಯ, ಸ್ವತ್ತುಗಳನ್ನು ಧಾರಾಳವಾಗಿ ಕೊಟ್ಟಿದ್ದಾರೆ.

22 ನೀವು ದೀಕ್ಷಾಸ್ನಾನ ಪಡೆದಿದ್ದು ಈ ಸೇವೆಯಲ್ಲಿ ಭಾಗವಹಿಸಲು ಇಚ್ಛಿಸಿದರೆ ನಿಮ್ಮ ಪ್ರದೇಶದಲ್ಲಿ ನಿರ್ಮಾಣ ಕೆಲಸಕ್ಕೆ ಸಹಾಯ ಮಾಡಬಹುದು. ಈ ಬಗ್ಗೆ ನಿಮ್ಮ ಸಭಾ ಹಿರಿಯರಿಗೆ ತಿಳಿಸಿ. ಅವರು ಮಾರ್ಗದರ್ಶನ ಕೊಡುವರು. ಹೆಚ್ಚು ಕೌಶಲವಿಲ್ಲದಿದ್ದರೆ ನಿರ್ಮಾಣ ಕೆಲಸದ ಮೇಲ್ವಿಚಾರಕರು ನಿಮಗೆ ತರಬೇತಿ ಕೊಡುವರು. ಕೆಲವರು ವಿದೇಶಕ್ಕೂ ಹೋಗಿ ಇಂಥ ನಿರ್ಮಾಣ ಕೆಲಸದಲ್ಲಿ ನೆರವಾಗುತ್ತಿದ್ದಾರೆ.

23 ದೀಕ್ಷಾಸ್ನಾನ ಪಡೆದ, ಸ್ವಲ್ಪ ಮಟ್ಟಿಗಿನ ಕೌಶಲವಿರುವ ಆದರ್ಶ ಪ್ರಚಾರಕರು ಅನೇಕ ವಿಧಗಳಲ್ಲಿ ನಿರ್ಮಾಣ ಸೇವೆಮಾಡಬಹುದು. ತಮ್ಮ ಊರಲ್ಲೇ ಇದ್ದು ಕಟ್ಟಡ ವಿನ್ಯಾಸ/ನಿರ್ಮಾಣದ ಸ್ಥಳೀಯ ಸ್ವಯಂಸೇವಕರಾಗಿ ಸೇವೆ ಮಾಡಬಹುದು. ಸ್ವಲ್ಪ ಸಮಯಕ್ಕೆ ದೂರದ ಊರುಗಳಿಗೆ ಹೋಗಿ ಸೇವೆಮಾಡಲು ಆಗುವವರನ್ನು ಶಾಖೆಯು ಎರಡು ವಾರದಿಂದ ಮೂರು ತಿಂಗಳಿಗೆ ನಿರ್ಮಾಣ ಸ್ವಯಂಸೇವಕರಾಗಿ ನೇಮಿಸುತ್ತದೆ. ಈ ಕೆಲಸವನ್ನು ದೀರ್ಘ ಸಮಯದ ವರೆಗೆ ಮಾಡುವ ನೇಮಕ ಪಡೆದವರಿಗೆ ನಿರ್ಮಾಣ ಸೇವಕರು ಎಂದು ಹೆಸರು. ಇವರಲ್ಲಿ ಕೆಲವರನ್ನು ವಿದೇಶಕ್ಕೆ ಹೋಗಿ ನಿರ್ಮಾಣ ಕೆಲಸ ಮಾಡಲು ನೇಮಿಸಲಾಗುತ್ತದೆ. ಒಂದು ನಿರ್ಮಾಣ ಕೆಲಸಗಾರರ ಗುಂಪು ನಿರ್ಮಾಣಕಾರ್ಯದ ನೇತೃತ್ವ ವಹಿಸುತ್ತದೆ. ಈ ಗುಂಪಿನಲ್ಲಿ ನಿರ್ಮಾಣ ಸೇವಕರು ಮತ್ತು ನಿರ್ಮಾಣ ಸ್ವಯಂಸೇವಕರು ಇರುತ್ತಾರೆ. ಕಟ್ಟಡ ವಿನ್ಯಾಸ/ನಿರ್ಮಾಣದ ಸ್ಥಳೀಯ ಸ್ವಯಂಸೇವಕರು ಮತ್ತು ಸ್ಥಳೀಯ ಸಭೆಗಳ ಸ್ವಯಂಸೇವಕರು ಈ ಕೆಲಸದಲ್ಲಿ ಸಹಾಯಮಾಡುತ್ತಾರೆ. ನಿರ್ಮಾಣ ಗುಂಪುಗಳು ಶಾಖೆಯ ವ್ಯಾಪ್ತಿಯಲ್ಲಿ ಒಂದರಿಂದ ಇನ್ನೊಂದು ಸ್ಥಳಕ್ಕೆ ಹೋಗಿ ಸೇವೆ ಮಾಡುತ್ತವೆ.

ನಿಮ್ಮ ಗುರಿಗಳೇನು?

24 ನೀವು ಸಮರ್ಪಣೆ ಮಾಡಿಕೊಂಡಿರುವಲ್ಲಿ ಯೆಹೋವನ ಸೇವೆಯನ್ನು ನಿರಂತರಕ್ಕೂ ಮಾಡುವುದೇ ನಿಮ್ಮ ಬಯಕೆ ಎಂಬುದು ಖಂಡಿತ. ಆದರೆ ಅದು ನಿಜವಾಗಬೇಕಾದರೆ ನಿಮ್ಮ ಸೇವೆಯನ್ನು ಹೆಚ್ಚಿಸಲು ಗುರಿಗಳನ್ನಿಡಬೇಕು. ಆಗ ನಿಮ್ಮ ಶಕ್ತಿ, ಸಮಯ, ಸಂಪತ್ತನ್ನು ಸರಿಯಾದ ವಿಧದಲ್ಲಿ ಬಳಸಲು ಆಗುತ್ತದೆ. (1 ಕೊರಿಂ. 9:26) ಯೆಹೋವನಿಗೂ ಇನ್ನಷ್ಟು ಆಪ್ತರಾಗುವಿರಿ ಮತ್ತು ಹೆಚ್ಚು ಪ್ರಮುಖವಾದ ವಿಷಯಗಳ ಮೇಲೆ ಗಮನವಿಡಲು ಆಗುತ್ತದೆ. ಹೆಚ್ಚಿನ ಸೇವಾ ಜವಾಬ್ದಾರಿಗಳಿಗೂ ನೀವು ಅರ್ಹರಾಗುವಿರಿ.—ಫಿಲಿ. 1:10; 1 ತಿಮೊ. 4:15, 16.

25 ಪೌಲನು ನಮಗೆ ಒಳ್ಳೇ ಮಾದರಿ. (1 ಕೊರಿಂ. 11:1) ಅವನು ತನ್ನೆಲ್ಲ ಶಕ್ತಿ ಬಳಸಿ ಹುರುಪಿನಿಂದ ದೇವರ ಸೇವೆಮಾಡಿದನು. ತನಗೆ ಸೇವೆಮಾಡಲು ಅನೇಕ ಅವಕಾಶಗಳನ್ನು ಯೆಹೋವನು ಕೊಟ್ಟಿದ್ದಾನೆಂದು ತಿಳಿದುಕೊಂಡನು. ಹಾಗಾಗಿಯೇ “ಚಟುವಟಿಕೆಗೆ ನಡೆಸುವಂಥ ಮಹಾ ದ್ವಾರವು ನನಗಾಗಿ ತೆರೆದಿದೆ” ಎಂದು ಬರೆದನು. ಇಂದು ಸಹ ನಮಗೆ ಸಭೆಯೊಟ್ಟಿಗೆ ಸೇರಿ ಹೆಚ್ಚು ಸೇವೆಮಾಡಲು ಅನೇಕ ಅವಕಾಶಗಳಿವೆ. ಆದರೆ ಹಾಗೆ ಮಾಡುವಾಗ ಪೌಲನಿಗಿದ್ದಂತೆ ‘ವಿರೋಧಿಗಳೂ ಬಹಳ ಮಂದಿ ಇರುತ್ತಾರೆ.’ (1 ಕೊರಿಂ. 16:9) ಪೌಲನು ತನ್ನನ್ನೇ ಶಿಸ್ತುಗೊಳಿಸಿಕೊಳ್ಳುವುದರಲ್ಲೂ ನಮಗೆ ಮಾದರಿ. “ನನ್ನ ದೇಹವನ್ನು ಜಜ್ಜಿ ಅದನ್ನು ದಾಸನಂತೆ ನಡೆಸಿಕೊಳ್ಳುತ್ತೇನೆ” ಎಂದವನು ಹೇಳಿದನು. (1 ಕೊರಿಂ. 9:24-27) ನಾವು ಸಹ ಪೌಲನಂತೆ ಹೆಚ್ಚು ಸೇವೆಮಾಡಲು ನಮ್ಮನ್ನೇ ಶಿಸ್ತುಗೊಳಿಸಿಕೊಳ್ಳುತ್ತಿದ್ದೇವಾ?

ದೇವರ ಸೇವೆಯನ್ನು ಹೆಚ್ಚಿಸಲು ಗುರಿಗಳನ್ನಿಡಿ. ಆಗ ನಿಮ್ಮ ಶಕ್ತಿ, ಸಮಯ, ಸಂಪತ್ತನ್ನು ಸರಿಯಾದ ವಿಧದಲ್ಲಿ ಬಳಸಲು ಆಗುತ್ತದೆ

26 ಪ್ರತಿಯೊಬ್ಬರು ತಮ್ಮ ಪರಿಸ್ಥಿತಿಗೆ ತಕ್ಕಂತೆ ಗುರಿಗಳನ್ನಿಡಬೇಕು. ಅವುಗಳನ್ನು ಮುಟ್ಟಲು ಶ್ರಮಿಸಬೇಕು. ಹೆತ್ತವರ ಮತ್ತು ಇತರರ ಪ್ರೋತ್ಸಾಹದಿಂದ ಅನೇಕರು ಚಿಕ್ಕಂದಿನಿಂದಲೇ ಗುರಿಗಳನ್ನಿಟ್ಟು ಅವನ್ನು ಮುಟ್ಟಲು ಶ್ರಮಿಸಿದ್ದಾರೆ. ಹಾಗಾಗಿ ಈಗ ಪೂರ್ಣ ಸಮಯದ ಸೇವೆಯಲ್ಲಿ ಆನಂದಿಸುತ್ತಿದ್ದಾರೆ. ಆ ಬಗ್ಗೆ ಅವರಿಗೆ ಸ್ವಲ್ಪವೂ ವಿಷಾದವಿಲ್ಲ. ಸಂತೋಷ, ಸಂತೃಪ್ತಿ ಅವರಿಗಿದೆ. (ಜ್ಞಾನೋ. 10:22) ನೀವು ಇಡಬಹುದಾದ ಇನ್ನು ಕೆಲವು ಗುರಿಗಳೆಂದರೆ ಪ್ರತಿವಾರ ಸೇವೆಗೆ ಹೋಗುವುದು, ಒಂದು ಬೈಬಲ್‌ ಅಧ್ಯಯನವನ್ನಾದರೂ ನಡೆಸುವುದು, ಕೂಟಗಳಿಗೆ ಚೆನ್ನಾಗಿ ತಯಾರಿ ಮಾಡುವುದು ಇತ್ಯಾದಿ. ಅಂತೂ, ನಾವೆಲ್ಲರೂ ನಂಬಿಕೆಯಲ್ಲಿ ದೃಢರಾಗಿದ್ದು ನಮಗೆ ನೇಮಿಸಿರುವ ಸೇವೆಯನ್ನು ಪೂರ್ಣವಾಗಿ ಮಾಡಬೇಕು. ಹೀಗೆ ಮಾಡಿದರೆ ಯೆಹೋವನಿಗೆ ಮಹಿಮೆ ತರುತ್ತೇವೆ ಮತ್ತು ಆತನ ಸೇವೆಯನ್ನು ನಿರಂತರಕ್ಕೂ ಮಾಡುವ ನಮ್ಮ ಮುಖ್ಯ ಗುರಿಯನ್ನು ಮುಟ್ಟುತ್ತೇವೆ.—ಲೂಕ 13:24; 1 ತಿಮೊ. 4:7ಬಿ, 8.