ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೆಚ್ಚಿನ ಮಾಹಿತಿ

ಹೆಚ್ಚಿನ ಮಾಹಿತಿ

ಹೆಚ್ಚಿನ ಮಾಹಿತಿ

ಹೆತ್ತವರೇ, ನಿಮ್ಮ ಮುದ್ದು ಮಕ್ಕಳು ಯೆಹೋವನನ್ನು ಪ್ರೀತಿಸಬೇಕು, ಆತನಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆಯಬೇಕು ಅನ್ನೋ ಆಸೆ ಖಂಡಿತ ನಿಮಗಿದೆ. ಹಾಗಾದರೆ ನೀವು ಅವರಿಗೆ ಹೇಗೆ ಸಹಾಯಮಾಡಬಹುದು? ಅವರು ದೀಕ್ಷಾಸ್ನಾನ ಪಡೆಯಲು ಯಾವಾಗ ಸಿದ್ಧರಾಗಿರುತ್ತಾರೆ? ಯೇಸು ತನ್ನ ಹಿಂಬಾಲಕರಿಗೆ: ‘ಹೊರಟುಹೋಗಿ ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ದೀಕ್ಷಾಸ್ನಾನ ಮಾಡಿಸಿ’ ಎಂದನು. (ಮತ್ತಾ. 28:19) ಹಾಗಾದರೆ, ಒಬ್ಬ ವ್ಯಕ್ತಿ ದೀಕ್ಷಾಸ್ನಾನ ಪಡೆಯಬೇಕಾದರೆ ಮೊದಲು ಕ್ರಿಸ್ತನ ಬೋಧನೆಗಳನ್ನು ಅರ್ಥಮಾಡಿಕೊಂಡು, ನಂಬಬೇಕು ಮಾತ್ರವಲ್ಲ ಅವುಗಳನ್ನು ನಿಕಟವಾಗಿ ಅನುಸರಿಸಬೇಕು. ಇದನ್ನು ಚಿಕ್ಕ ಮಕ್ಕಳು ಸಹ ಮಾಡಲು ಸಾಧ್ಯ.

ನೀವು ಮಕ್ಕಳಿಗೆ ಒಳ್ಳೇ ಮಾದರಿಯನ್ನಿಡಿ. ಯೆಹೋವನ ಮಾತುಗಳನ್ನು ಅವರ ಹೃದಯದಲ್ಲಿ ನಾಟಿಸಿ. (ಧರ್ಮೋ. 6:6-9) ಅದಕ್ಕಾಗಿ ನೀವು ಏನು ಮಾಡಬೇಕು? ಬೈಬಲ್‌ ಬೋಧಿಸುತ್ತದೆ ಪುಸ್ತಕವನ್ನು ಬಳಸಿ ಬೈಬಲಿನ ಮುಖ್ಯ ಬೋಧನೆಗಳನ್ನು ಅವರಿಗೆ ಕಲಿಸಿ. “ದೇವರ ಪ್ರೀತಿ” ಪುಸ್ತಕದಿಂದ ಬೈಬಲ್‌ ತತ್ವಗಳನ್ನು ಅರ್ಥಮಾಡಿಕೊಳ್ಳಲು ಕಲಿಸಿ. ಅಲ್ಲದೆ ತಮ್ಮ ನಂಬಿಕೆಯನ್ನು ಇತರರಿಗೆ ಸ್ವಂತ ಮಾತುಗಳಲ್ಲಿ ವಿವರಿಸಲು ತರಬೇತಿ ಕೊಡಿ. (1 ಪೇತ್ರ 3:15) ಮಕ್ಕಳಿಗೆ ನಿಮ್ಮಿಂದ, ಅವರೇ ಮಾಡುವ ವೈಯಕ್ತಿಕ ಅಧ್ಯಯನದಿಂದ, ಕೂಟಗಳಿಂದ, ಒಳ್ಳೇ ಸ್ನೇಹಿತರಿಂದ ಸಿಗುವ ಜ್ಞಾನ ಹಾಗೂ ಪ್ರೋತ್ಸಾಹವು ತುಂಬ ನೆರವಾಗುತ್ತದೆ. ಆಗ ಅವರು ದೀಕ್ಷಾಸ್ನಾನ ಪಡೆದು ನಂತರ ಇನ್ನೂ ಪ್ರಗತಿ ಮಾಡುವರು. ಯೆಹೋವನ ಸೇವೆಯನ್ನು ಹೆಚ್ಚು ಮಾಡುವ ಗುರಿಗಳನ್ನಿಡಲು ಅವರಿಗೆ ಸಹಾಯಮಾಡಿ.

ಜ್ಞಾನೋಕ್ತಿ 20:11 ಹೇಳುತ್ತದೆ: “ಒಬ್ಬ ಹುಡುಗನಾದರೂ ಶುದ್ಧವೂ ಸತ್ಯವೂ ಆದ ನಡತೆಯಿಂದಲೇ ತನ್ನ ಗುಣವನ್ನು ತೋರ್ಪಡಿಸಿಕೊಳ್ಳುವನು.” ಹಾಗಾದರೆ ನಿಮ್ಮ ಮಗ/ಮಗಳು ಯೇಸುವಿನ ಶಿಷ್ಯರಾಗಿದ್ದಾರಾ, ದೀಕ್ಷಾಸ್ನಾನಕ್ಕೆ ಸಿದ್ಧರಾಗಿದ್ದಾರಾ ಎಂದು ಅವರ ಯಾವ ಗುಣಗಳಿಂದ ತಿಳಿಯಬಹುದು?

ದೀಕ್ಷಾಸ್ನಾನ ಪಡೆಯಲು ಬಯಸುವ ಮಗ/ಮಗಳು ತಂದೆತಾಯಿಯ ಮಾತನ್ನು ಕೇಳಬೇಕು. (ಕೊಲೊ. 3:20) ಯೇಸು 12 ವರ್ಷದವನಾಗಿದ್ದಾಗ “[ಹೆತ್ತವರಿಗೆ] ಅಧೀನನಾಗಿ ಮುಂದುವರಿದನು.” (ಲೂಕ 2:51) ಯೇಸುವಿನಂತೆಯೇ ನಿಮ್ಮ ಮಕ್ಕಳು 100 ಪ್ರತಿಶತ ವಿಧೇಯತೆ ತೋರಿಸಬೇಕೆಂದು ನೀವು ಅಪೇಕ್ಷಿಸಲು ಆಗುವುದಿಲ್ಲ ನಿಜ. ಆದರೆ ಅವರು ಯೇಸುವಿನ ಮಾದರಿಯನ್ನು ಅನುಕರಿಸಲು ಪ್ರಯತ್ನಿಸಬೇಕು, ತಂದೆತಾಯಿಗೆ ಅಧೀನರಾಗಿರುವುದರಲ್ಲಿ ಇತರರಿಗೂ ಮಾದರಿಯಾಗಿರಬೇಕು.

ಅವರಿಗೆ ಬೈಬಲ್‌ ಸತ್ಯಗಳನ್ನು ಕಲಿಯುವ ಆಸಕ್ತಿ ಇರಬೇಕು. (ಲೂಕ 2:46) ಕೂಟಗಳಿಗೆ ಹಾಜರಾಗಲು, ಅವುಗಳಲ್ಲಿ ಭಾಗವಹಿಸಲು ಮುಂದೆ ಬರಬೇಕು. (ಕೀರ್ತ. 122:1) ಬೈಬಲನ್ನು ದಿನಾಲೂ ಓದುವ, ವೈಯಕ್ತಿಕ ಅಧ್ಯಯನ ಮಾಡುವ ಹಂಬಲ, ರೂಢಿ ಅವರಲ್ಲಿರಬೇಕು.—ಮತ್ತಾ. 4:4.

ಮಾತ್ರವಲ್ಲ ಅವರು ದೇವರ ಸೇವೆಗೆ ಮೊದಲ ಸ್ಥಾನ ಕೊಡಬೇಕು. (ಮತ್ತಾ. 6:33) ಪ್ರಚಾರಕರಾಗಿ ತಮಗಿರುವ ಜವಾಬ್ದಾರಿಯನ್ನು ಸರಿಯಾಗಿ ಮಾಡಬೇಕು, ಕ್ಷೇತ್ರ ಸೇವೆಗೆ ಹೋಗುವುದರಲ್ಲಿ, ಮನೆಯವರೊಂದಿಗೆ ಮಾತಾಡುವುದರಲ್ಲಿ ಮುಂದಿರಬೇಕು. ಸೇವೆಯ ಬೇರೆ ಬೇರೆ ವಿಧಾನಗಳಲ್ಲಿ ಭಾಗವಹಿಸಬೇಕು. ತಾವು ಯೆಹೋವನ ಸಾಕ್ಷಿಯೆಂದು ಸಹಪಾಠಿಗಳಿಗೆ ಮತ್ತು ಶಿಕ್ಷಕರಿಗೆ ಹೇಳಲು ಅವರು ಹಿಂಜರಿಯಬಾರದು. ‘ಜೀವನ ಮತ್ತು ಸೇವೆ’ ಕೂಟದಲ್ಲಿ ತಮ್ಮ ನೇಮಕಗಳನ್ನು ಶ್ರದ್ಧೆಯಿಂದ ಮಾಡಬೇಕು.

ಅವರು ಕೆಟ್ಟ ಸಹವಾಸ ಮಾಡದೆ, ಶುದ್ಧ ನಡತೆ ಕಾಪಾಡಿಕೊಳ್ಳಬೇಕು. (ಜ್ಞಾನೋ. 13:20; 1 ಕೊರಿಂ. 15:33) ಸಂಗೀತ, ಸಿನಿಮಾ, ಟಿವಿ, ವಿಡಿಯೋ ಗೇಮ್ಸ್‌, ಇಂಟರನೆಟ್‌ ಬಳಕೆ ಈ ಎಲ್ಲವುಗಳಲ್ಲಿ ಅವರು ಮಾಡುವ ಆಯ್ಕೆಗಳಿಂದ ಅದು ಗೊತ್ತಾಗಬೇಕು.

ಹೆತ್ತವರು ಪ್ರಯಾಸಪಟ್ಟು ಕೊಟ್ಟ ತರಬೇತಿಯನ್ನು ಅನೇಕ ಮಕ್ಕಳು ಸ್ವೀಕರಿಸಿದ್ದಾರೆ. ಇದರಿಂದ ಸತ್ಯಕ್ಕನುಸಾರ ನಡೆದು ಚಿಕ್ಕ ಪ್ರಾಯದಲ್ಲೇ ದೀಕ್ಷಾಸ್ನಾನಕ್ಕೆ ಅರ್ಹರಾಗಿದ್ದಾರೆ. ಯೆಹೋವನೊಂದಿಗೆ ಆಪ್ತ ಸಂಬಂಧ ಬೆಳೆಸುವುದರಲ್ಲಿ ದೀಕ್ಷಾಸ್ನಾನವು ಒಂದು ಪ್ರಮುಖ ಹೆಜ್ಜೆ. ಆ ಹೆಜ್ಜೆ ತಕ್ಕೊಳ್ಳಲು ಮಕ್ಕಳಿಗೆ ಸಹಾಯಮಾಡುತ್ತಿರುವ ನಿಮ್ಮನ್ನು ಯೆಹೋವನು ಆಶೀರ್ವದಿಸಲಿ.

ದೀಕ್ಷಾಸ್ನಾನವಾಗಿರದ ಪ್ರಚಾರಕರಿಗೆ ಸಲಹೆಗಳು:

ಪ್ರಚಾರಕರಾಗಿ ಸಭೆಯಲ್ಲಿ ಸೇವೆಮಾಡುವುದು ಒಂದು ಸುಯೋಗ. ನೀವು ಇಷ್ಟರವರೆಗೆ ಮಾಡಿರುವ ಪ್ರಗತಿಯನ್ನು ನಾವು ಮೆಚ್ಚುತ್ತೇವೆ. ಬೈಬಲ್‌ ಅಧ್ಯಯನ ಮಾಡಿ ನೀವು ಯೆಹೋವ ದೇವರ ಕುರಿತು ಕಲಿತಿದ್ದೀರಿ, ಆತನ ವಾಗ್ದಾನಗಳಲ್ಲಿ ನಂಬಿಕೆಯಿಟ್ಟಿದ್ದೀರಿ.—ಯೋಹಾ. 17:3; ಇಬ್ರಿ. 11:6.

ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್‌ ಕಲಿಯುವ ಮುಂಚೆ ನೀವು ಬೇರೆ ಧರ್ಮದಲ್ಲಿ ಇದ್ದಿರಬಹುದು ಅಥವಾ ಧರ್ಮದ ಬಗ್ಗೆ ಆಸಕ್ತಿ ಇದ್ದಿರಲಿಕ್ಕಿಲ್ಲ. ಬೈಬಲ್‌ ತತ್ವಗಳಿಗೆ ವಿರುದ್ಧವಾದ ಏನನ್ನಾದರೂ ಮಾಡಿರಬಹುದು. ಆದರೆ ಈಗ ದೇವರಲ್ಲಿ ನಂಬಿಕೆಯಿಟ್ಟಿರುವ ಕಾರಣ ಪಶ್ಚಾತ್ತಾಪಪಟ್ಟಿದ್ದೀರಿ. ಅಲ್ಲದೆ ಮನತಿರುಗಿದ್ದೀರಿ ಅಂದರೆ ಆ ತಪ್ಪುಗಳನ್ನು ಬಿಟ್ಟುಬಿಟ್ಟು ದೇವರ ದೃಷ್ಟಿಯಲ್ಲಿ ಸರಿಯಾಗಿರುವುದನ್ನೇ ಮಾಡಲು ದೃಢಮನಸ್ಸು ಮಾಡಿದ್ದೀರಿ.—ಅ. ಕಾ. 3:19.

ಅಥವಾ ನೀವು ತಿಮೊಥೆಯನಂತೆ ಬಾಲ್ಯದಿಂದಲೇ ಬೈಬಲ್‌ ಸತ್ಯಗಳನ್ನು ತಿಳಿದುಕೊಂಡಿರಬಹುದು. ಹಾಗಾಗಿ ಕೆಟ್ಟ ನಡತೆಯಲ್ಲಿ, ಗಂಭೀರ ತಪ್ಪಿನಲ್ಲಿ ಕೈಹಾಕಿರಲಿಕ್ಕಿಲ್ಲ. (2 ತಿಮೊ. 3:15) ಯೆಹೋವನು ಕೆಟ್ಟದ್ದೆಂದು ಹೇಳುವುದನ್ನು ಮಾಡುವಂತೆ ನಿಮ್ಮ ಸಮವಯಸ್ಕರು ಒತ್ತಡ ಹಾಕಿದಾಗ ಅಥವಾ ಬೇರೆ ರೀತಿಯ ಪ್ರಲೋಭನೆ ಬಂದಾಗ ಅದನ್ನು ಎದುರಿಸಲು ಕಲಿತಿರಬಹುದು. ಬೈಬಲ್‌ ಸತ್ಯಗಳನ್ನು ಬೇರೆಯವರಿಗೂ ತಿಳಿಸುವ ಮೂಲಕ ನೀವು ಅವುಗಳನ್ನು ನಂಬುತ್ತೀರೆಂದು ಮತ್ತು ಸತ್ಯಾರಾಧನೆಯನ್ನು ಬೆಂಬಲಿಸುತ್ತೀರೆಂದು ತೋರಿಸಿರಬಹುದು. ಸೇವೆಯಲ್ಲಿ ಒಳ್ಳೇ ತರಬೇತಿ ಸಿಕ್ಕಿರಬಹುದು. ಹಾಗಾಗಿ ಪ್ರಚಾರಕರಾಗಿ ಯೆಹೋವನ ಸೇವೆಯನ್ನು ಮಾಡಲು ನೀವಾಗಿಯೇ ಮುಂದೆ ಬಂದಿದ್ದೀರಿ.

ನೀವು ಸತ್ಯವನ್ನು ಚಿಕ್ಕಂದಿನಿಂದಲೇ ಕಲಿತಿರಲಿ ನಂತರ ಕಲಿತಿರಲಿ ಈಗ ಸಮರ್ಪಣೆ ಮತ್ತು ದೀಕ್ಷಾಸ್ನಾನದ ಬಗ್ಗೆ ಯೋಚಿಸುತ್ತಿರಬಹುದು. ಸಮರ್ಪಣೆ ಅಂದರೆ ಸದಾಕಾಲಕ್ಕೂ ಯೆಹೋವನೊಬ್ಬನಿಗೇ ಭಕ್ತಿಯನ್ನು ಸಲ್ಲಿಸುತ್ತೇನೆಂದು ಪ್ರಾರ್ಥನೆಯಲ್ಲಿ ಆತನಿಗೆ ಮಾತುಕೊಡುವುದೇ. (ಮತ್ತಾ. 16:24) ನೀವು ಸಮರ್ಪಣೆ ಮಾಡಿದ್ದೀರೆಂದು ಇತರರಿಗೆ ತೋರಿಸಿಕೊಡುವುದು ನೀರಿನ ದೀಕ್ಷಾಸ್ನಾನದ ಮೂಲಕ. (ಮತ್ತಾ. 28:19, 20) ಹೀಗೆ ದೀಕ್ಷಾಸ್ನಾನ ಪಡೆದಾಗ ಯೆಹೋವನು ನಿಮ್ಮನ್ನು ಆತನ ಸೇವಕರನ್ನಾಗಿ ಅಂಗೀಕರಿಸುತ್ತಾನೆ. ಇದೊಂದು ಸೌಭಾಗ್ಯ!

ನೀವು ಬೈಬಲ್‌ ಅಧ್ಯಯನ ಮಾಡುವಾಗ ಕಲಿತಿರುವಂತೆ ನಿಮಗೆ ಬೇರೆ ಬೇರೆ ರೀತಿಯ ಕಷ್ಟಗಳು ಎದುರಾಗಬಹುದು. ಯೇಸು ದೀಕ್ಷಾಸ್ನಾನ ಪಡೆದ ಸ್ವಲ್ಪದರಲ್ಲೇ ‘ಪಿಶಾಚನಿಂದ ಅವನಿಗೆ ಪ್ರಲೋಭನೆ ಬಂತೆಂದು’ ನೆನಪಿಸಿಕೊಳ್ಳಿ. (ಮತ್ತಾ. 4:1) ನೀವು ದೀಕ್ಷಾಸ್ನಾನ ಪಡೆದು ಯೇಸುವಿನ ಶಿಷ್ಯರಾದ ಮೇಲೂ ಕಷ್ಟ ವಿರೋಧಗಳನ್ನು ಎದುರುನೋಡಬೇಕು. (ಯೋಹಾ. 15:20) ಅನೇಕ ವಿಧದ ಕಷ್ಟಗಳು ಬರಬಹುದು. ಕುಟುಂಬದವರೇ ನಿಮ್ಮನ್ನು ವಿರೋಧಿಸಬಹುದು. (ಮತ್ತಾ. 10:36) ನಿಮ್ಮ ಹಳೇ ಸ್ನೇಹಿತರು ಅಥವಾ ಶಾಲೆ, ಕೆಲಸದ ಸ್ಥಳದಲ್ಲಿ ನಿಮ್ಮ ಜೊತೆಗಾರರು ಗೇಲಿಮಾಡಬಹುದು. ಆದರೆ ಮಾರ್ಕ 10:29,30 ರಲ್ಲಿರುವ ಯೇಸುವಿನ ಮಾತುಗಳನ್ನು ಯಾವತ್ತೂ ಮರೆಯಬೇಡಿ: “ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ನನ್ನ ನಿಮಿತ್ತವಾಗಿಯೂ ಸುವಾರ್ತೆಯ ನಿಮಿತ್ತವಾಗಿಯೂ ಮನೆಗಳನ್ನಾಗಲಿ ಅಣ್ಣತಮ್ಮಂದಿರನ್ನಾಗಲಿ ಅಕ್ಕತಂಗಿಯರನ್ನಾಗಲಿ ತಾಯಿಯನ್ನಾಗಲಿ ತಂದೆಯನ್ನಾಗಲಿ ಮಕ್ಕಳನ್ನಾಗಲಿ ಹೊಲವನ್ನಾಗಲಿ ಬಿಟ್ಟುಬಂದ ಯಾವನಿಗೂ ಈಗಿನ ಕಾಲದಲ್ಲಿ ಹಿಂಸೆಗಳ ಸಹಿತವಾಗಿ ಮನೆಗಳೂ ಅಣ್ಣತಮ್ಮಂದಿರೂ ಅಕ್ಕತಂಗಿಯರೂ ತಾಯಂದಿರೂ ಮಕ್ಕಳೂ ಹೊಲಗಳೂ ನೂರರಷ್ಟು ಸಿಗುತ್ತವೆ ಮತ್ತು ಬರಲಿರುವ ವಿಷಯಗಳ ವ್ಯವಸ್ಥೆಯಲ್ಲಿ ನಿತ್ಯಜೀವವು ದೊರೆಯುವುದು.” ಹಾಗಾಗಿ ನೀವು ಯೆಹೋವನಿಗೆ ಆಪ್ತರಾಗಿರಲು ಮತ್ತು ಆತನ ನೀತಿಯ ಮಟ್ಟಗಳಿಗನುಸಾರ ನಡೆಯಲು ಶ್ರಮಿಸುತ್ತಾ ಇರಿ.

ನೀವು ದೀಕ್ಷಾಸ್ನಾನ ಪಡೆಯಲು ಬಯಸಿದರೆ ಸಭಾ ಹಿರಿಯರಿಗೆ ತಿಳಿಸಿ. ನೀವದಕ್ಕೆ ಅರ್ಹರಾಗಿದ್ದೀರಾ ಎಂದು ತಿಳಿಯಲು ಅವರು ಮುಂದಿನ ಪುಟಗಳಲ್ಲಿರುವ ಪ್ರಶ್ನೆಗಳನ್ನು ನಿಮ್ಮೊಂದಿಗೆ ಚರ್ಚಿಸುವರು. ನೀವು ಈಗಿನಿಂದಲೇ ನಿಮ್ಮ ವೈಯಕ್ತಿಕ ಅಧ್ಯಯನದ ಸಮಯದಲ್ಲಿ ಅವುಗಳನ್ನು ಓದಿ ತಯಾರಿ ಮಾಡಬಹುದು.

ಹಿರಿಯರು ನಿಮ್ಮೊಂದಿಗೆ ಚರ್ಚಿಸುವ ಮುಂಚೆ ನೀವು ಅಲ್ಲಿ ಕೊಟ್ಟಿರುವ ಮತ್ತು ಉಲ್ಲೇಖಿಸಿರುವ ವಚನಗಳನ್ನು ಓದಿ ಧ್ಯಾನಿಸಿ. ಅನೇಕ ಪ್ರಶ್ನೆಗಳಿಗೆ ನಿಮಗೆ ನೇರ ಉತ್ತರ ಅಲ್ಲಿ ಸಿಗಲಿಕ್ಕಿಲ್ಲ. ಆದರೆ ಆ ವಿಷಯದ ಕುರಿತು ಬೈಬಲಿನ ನೋಟ ಏನೆಂದು ವಚನಗಳು ತಿಳಿಸುತ್ತವೆ. ನಿಮಗೆ ಉತ್ತರ ಸರಿಯಾಗಿ ಗೊತ್ತಾಗದಿದ್ದರೆ ಬೈಬಲನ್ನು ಮತ್ತು ‘ನಂಬಿಗಸ್ತ ವಿವೇಚನೆಯುಳ್ಳ ಆಳು’ ಕೊಟ್ಟಿರುವ ಪ್ರಕಾಶನಗಳನ್ನು ಬಳಸಿ ಸಂಶೋಧನೆ ಮಾಡಬಹುದು. (ಮತ್ತಾ. 24:45) ಇದೇ ಪುಸ್ತಕದಲ್ಲಿ ಅಥವಾ ಬೇರೆ ಯಾವುದರಲ್ಲಾದರೂ ಟಿಪ್ಪಣಿ ಬರೆದಿಡಬಹುದು. ಹಿರಿಯರು ನಿಮ್ಮೊಂದಿಗೆ ಚರ್ಚಿಸುವಾಗ ನೀವು ಈ ಪುಸ್ತಕವನ್ನೂ ಬರೆದಿಟ್ಟ ಟಿಪ್ಪಣಿಯನ್ನೂ ಉಪಯೋಗಿಸಿ ಉತ್ತರಿಸಬಹುದು. ಯಾವುದಾದರೂ ಪ್ರಶ್ನೆಗೆ ಉತ್ತರ ಗೊತ್ತಾಗದಿದ್ದರೆ ನಿಮ್ಮೊಂದಿಗೆ ಬೈಬಲ್‌ ಅಧ್ಯಯನ ಮಾಡುತ್ತಿರುವವರ ಅಥವಾ ಹಿರಿಯರ ಸಹಾಯ ಕೇಳಬಹುದು.

ಹಿರಿಯರು ಪ್ರಶ್ನೆ ಕೇಳುವಾಗ ದೊಡ್ಡ ಉತ್ತರ ಕೊಡಬೇಕಾಗಿಲ್ಲ, ತುಂಬ ವಿವರಿಸಬೇಕಾಗಿಲ್ಲ. ಸ್ವಂತ ಮಾತಿನಲ್ಲಿ ಚುಟುಕಾಗಿ ನೇರ ಉತ್ತರ ಕೊಟ್ಟರೆ ಸಾಕು. ಒಂದೆರಡು ಬೈಬಲ್‌ ವಚನಗಳನ್ನು ಉಪಯೋಗಿಸಿದರೆ ತುಂಬ ಒಳ್ಳೇದು.

ಒಂದುವೇಳೆ ನೀವು ಬೈಬಲಿನ ಮುಖ್ಯ ಬೋಧನೆಗಳ ಕುರಿತು ಇನ್ನೂ ಕಲಿಯಬೇಕೆಂದು ಹಿರಿಯರಿಗೆ ತಿಳಿದುಬಂದರೆ ಯಾರಾದರೂ ನಿಮಗೆ ನೆರವು ನೀಡುವಂತೆ ಅವರು ಏರ್ಪಾಡು ಮಾಡುವರು. ಆಗ ನೀವು ಬೈಬಲ್‌ ವಚನಗಳ ಸರಿಯಾದ ಅರ್ಥ ತಿಳಿದುಕೊಂಡು ಅದನ್ನು ನಿಮ್ಮ ಸ್ವಂತ ಮಾತಿನಲ್ಲಿ ಹೇಳಲು ಕಲಿಯುವಿರಿ. ಸ್ವಲ್ಪ ಸಮಯದ ನಂತರ ದೀಕ್ಷಾಸ್ನಾನಕ್ಕೂ ಅರ್ಹರಾಗುವಿರಿ.

[ಸಭಾ ಹಿರಿಯರಿಗೆ ಸೂಚನೆ: ದೀಕ್ಷಾಸ್ನಾನ ಪಡೆಯಲು ಬಯಸುವವರೊಂದಿಗೆ ಮಾಡುವ ಚರ್ಚೆಗೆ ಸಂಬಂಧಿಸಿದ ನಿರ್ದೇಶನಗಳು ಪುಟ 211-214ರಲ್ಲಿವೆ.]