ಅವರ ಆಧುನಿಕ ಬೆಳವಣಿಗೆ ಮತ್ತು ವೃದ್ಧಿ
ಅವರ ಆಧುನಿಕ ಬೆಳವಣಿಗೆ ಮತ್ತು ವೃದ್ಧಿ
ಯೆಹೋವನ ಸಾಕ್ಷಿಗಳ ಆಧುನಿಕ ಇತಿಹಾಸವು ನೂರು ವರ್ಷಗಳಿಗಿಂತಲೂ ಹೆಚ್ಚು ಸಮಯದ ಹಿಂದೆ ಆರಂಭಗೊಂಡಿತು. 1870ರ ದಶಕಗಳ ಆರಂಭದಲ್ಲಿ, ಅಮೆರಿಕದ ಪೆನ್ಸಿಲ್ವೇನಿಯದಲ್ಲಿದ್ದ ಆದರೆ ಈಗ ಪಿಟ್ಸ್‌ಬರ್ಗಿನ ಭಾಗವಾಗಿರುವ ಆ್ಯಲಿಗೆನಿಯಲ್ಲಿ, ಅಷ್ಟೇನೂ ಪ್ರಸಿದ್ಧವಾಗಿರದಿದ್ದ ಒಂದು ಬೈಬಲ್ ಅಧ್ಯಯನ ಗುಂಪು ಆರಂಭವಾಯಿತು. ಚಾರ್ಲ್ಸ್ ಟೇಸ್ ರಸಲ್ ಆ ಗುಂಪಿನ ಮುಖ್ಯ ಕಾರ್ಯ ಪ್ರವರ್ತಕರಾಗಿದ್ದರು. 1879ರ ಜುಲೈ ತಿಂಗಳಲ್ಲಿ, ಝಯನ್ಸ್ ವಾಚ್ ಟವರ್ ಆ್ಯಂಡ್ ಹೆರಲ್ಡ್ ಆಫ್ ಕ್ರೈಸ್ಟ್ಸ್ ಪ್ರೆಸೆನ್ಸ್ ಪತ್ರಿಕೆಯ ಮೊದಲನೆಯ ಸಂಚಿಕೆಯು ಹೊರಬಿತ್ತು. 1880ರೊಳಗೆ, ಆ ಒಂದು ಚಿಕ್ಕ ಬೈಬಲ್ ಅಧ್ಯಯನ ಗುಂಪಿನಿಂದ ಹಲವಾರು ಸಭೆಗಳು ಹತ್ತಿರದ ರಾಜ್ಯಗಳಲ್ಲಿ ಹಬ್ಬಿಕೊಂಡಿದ್ದವು. ಹೀಗೆ 1881ರಲ್ಲಿ, ಝಯನ್ಸ್ ವಾಚ್ ಟವರ್ ಟ್ರ್ಯಾಕ್ಟ್ ಸೊಸೈಟಿಯು ರೂಪುಗೊಂಡಿತು ಮತ್ತು 1884ರಲ್ಲಿ ಅದು ಒಂದು ಕಾನೂನುಬದ್ಧ ಸಂಸ್ಥೆಯಾಗಿ ಸಂಘಟಿತವಾಯಿತು. ರಸಲ್ ಅದರ ಅಧ್ಯಕ್ಷರಾದರು. ಆ ಸೊಸೈಟಿಯ ಹೆಸರು ಆಮೇಲೆ ವಾಚ್ ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಎಂದು ಬದಲಾಯಿಸಲ್ಪಟ್ಟಿತು. ಅನೇಕರು ಬೈಬಲ್ ಸಾಹಿತ್ಯವನ್ನು ನೀಡುತ್ತಾ ಮನೆಯಿಂದ ಮನೆಗೆ ಸಾಕ್ಷಿನೀಡುತ್ತಿದ್ದರು. 1888ರಲ್ಲಿ ಐವತ್ತು ಜನರು ಈ ಕೆಲಸವನ್ನು ಪೂರ್ಣ ಸಮಯ ಮಾಡುತ್ತಿದ್ದರು—ಈಗ ಲೋಕದಾದ್ಯಂತ ಇವರ ಸರಾಸರಿ ಸಂಖ್ಯೆ ಸುಮಾರು 7,00,000 ಆಗಿದೆ.
ಇಸವಿ 1909ರೊಳಗೆ ಈ ಕಾರ್ಯವು ಅಂತಾರಾಷ್ಟ್ರೀಯವಾಗಿ ಪರಿಣಮಿಸಿತ್ತು, ಮತ್ತು ಸೊಸೈಟಿಯ ಮುಖ್ಯಕಾರ್ಯಾಲಯವು ಅದರ ಸದ್ಯದ ನೆಲೆಯಾಗಿರುವ ನ್ಯೂ ಯಾರ್ಕ್‌ನ ಬ್ರೂಕ್ಲಿನ್‌ಗೆ ಸ್ಥಳಾಂತರಿಸಲ್ಪಟ್ಟಿತು. ಮುದ್ರಿತ ಪ್ರಸಂಗಗಳನ್ನು ವಾರ್ತಾಪತ್ರಿಕೆಗಳಲ್ಲಿ ಪ್ರಕಾಶಿಸಲಾಯಿತು, ಮತ್ತು 1913ರೊಳಗೆ ಅಮೆರಿಕ, ಕೆನಡ ಮತ್ತು ಯೂರೋಪಿನ ಸಾವಿರಾರು ವಾರ್ತಾಪತ್ರಗಳಲ್ಲಿ ಇವು ನಾಲ್ಕು ಭಾಷೆಗಳಲ್ಲಿ ಹೊರಡಿಸಲ್ಪಟ್ಟವು. ಕೋಟ್ಯಂತರ ಪುಸ್ತಕಗಳು, ಪುಸ್ತಿಕೆಗಳು, ಮತ್ತು ಟ್ರ್ಯಾಕ್ಟ್‌ಗಳು ಸಹ ವಿತರಿಸಲ್ಪಟ್ಟಿದ್ದವು.
ಇಸವಿ 1912ರಲ್ಲಿ “ಫೋಟೋ-ಡ್ರಾಮಾ ಆಫ್ ಕ್ರಿಯೇಶನ್” ಇದರ ಕೆಲಸವು ಆರಂಭಗೊಂಡಿತು. ಸ್ಲೈಡ್ಸ್ ಮತ್ತು ಧ್ವನಿಯಿಂದ ಕೂಡಿದ್ದ ಚಲನ ಚಿತ್ರಗಳ ಮೂಲಕ ಅದು, ಭೂಮಿಯ ಸೃಷ್ಟಿಕ್ರಿಯೆಯಿಂದ ಆರಂಭಿಸಿ ಕ್ರಿಸ್ತನ ಸಹಸ್ರ ವರ್ಷದಾಳಿಕೆಯ ಅಂತ್ಯದ ವರೆಗಿನ ಘಟನಾವಳಿಯನ್ನು ಆವರಿಸಿತು. 1914ರಲ್ಲಿ ಇದರ ಪ್ರದರ್ಶನಗಳು ಆರಂಭವಾಗಿದ್ದು, ದಿನಂಪ್ರತಿ 35,000 ಜನರು ಇದನ್ನು ನೋಡಿದರು. ಧ್ವನಿಯಿಂದ ಕೂಡಿದ್ದ ಚಲನ ಚಿತ್ರಗಳ ಆರಂಭದ ಪ್ರವರ್ತಕಗಳಲ್ಲಿ ಅದು ಒಂದಾಗಿತ್ತು.
ಇಸವಿ 1914
ಆಗ ಒಂದು ನಿರ್ಣಾಯಕ ಸಮಯವು ಹತ್ತಿರವಾಗತೊಡಗಿತ್ತು. 1876ರಲ್ಲಿ ಬೈಬಲ್ ವಿದ್ಯಾರ್ಥಿಯಾಗಿದ್ದ ಚಾರ್ಲ್ಸ್ ಟೇಸ್ ರಸಲ್‌ರು, “ಅನ್ಯಜನಾಂಗಗಳ ಕಾಲಗಳು: ಅವುಗಳ ಅಂತ್ಯ ಯಾವಾಗ?” ಎಂಬ ಲೇಖನವನ್ನು, ನ್ಯೂ ಯಾರ್ಕ್‌ನ ಬ್ರೂಕ್ಲಿನ್‌ನಲ್ಲಿ ಪ್ರಕಾಶಿಸಲ್ಪಡುತ್ತಿದ್ದ ಬೈಬಲ್ ಎಕ್ಸಾಮಿನರ್ ಪತ್ರಿಕೆಗೆ ಒದಗಿಸಿದರು. ಅದರ ಅಕ್ಟೋಬರ್ ಸಂಚಿಕೆಯು 27ನೆಯ ಪುಟದಲ್ಲಿ ಅಂದದ್ದು: “ಏಳು ಕಾಲಗಳು ಕ್ರಿ.ಶ. 1914ರಲ್ಲಿ ಅಂತ್ಯಗೊಳ್ಳುವವು.” ಇನ್ನೊಂದು ಬೈಬಲ್ ಭಾಷಾಂತರದಲ್ಲಿ ಈ ಅನ್ಯಜನಾಂಗಗಳ ಕಾಲಗಳು, ಲೂಕ 21:24, ನೂತನ ಲೋಕ ಭಾಷಾಂತರ) 1914ರಲ್ಲಿ ಸಂಭವಿಸುವವೆಂದು ನಿರೀಕ್ಷಿಸಲಾಗಿದ್ದ ಎಲ್ಲ ಘಟನೆಗಳು ಸಂಭವಿಸಲಿಲ್ಲ ನಿಜ, ಆದರೆ ಅದು ಅನ್ಯಜನಾಂಗಗಳ ಕಾಲಗಳ ಅಂತ್ಯವನ್ನು ಗುರುತಿಸಿತು ಮತ್ತು ಅದು ಒಂದು ವಿಶೇಷ ಮಹತ್ವವುಳ್ಳ ವರ್ಷವಾಗಿತ್ತು ಎಂಬುದಂತೂ ನಿಶ್ಚಯ. 1914, ಮಾನವ ಇತಿಹಾಸದಲ್ಲಿ ಒಂದು ತಿರುಗು ಬಿಂದುವಾಗಿತ್ತೆಂದು ಅನೇಕ ಇತಿಹಾಸಕಾರರು ಮತ್ತು ವಿಮರ್ಶಕರು ಒಪ್ಪಿಕೊಳ್ಳುತ್ತಾರೆ. ಕೆಳಗಿನ ಉಲ್ಲೇಖಗಳು ಅದನ್ನು ದೃಷ್ಟಾಂತಿಸುತ್ತವೆ:
“ಜನಾಂಗಗಳಿಗೆ ನೇಮಿತವಾದ ಸಮಯಗಳ” ಕಾಲಾವಧಿಯಾಗಿ ಸೂಚಿಸಲ್ಪಟ್ಟಿವೆ. (“ಇತಿಹಾಸದಲ್ಲಿ ಪೂರ್ಣ ರೀತಿಯಲ್ಲಿ ‘ಸಹಜ’ ಸ್ಥಿತಿಯಲ್ಲಿದ್ದ ಕೊನೆಯ ವರ್ಷವು 1913ನೆಯ ವರ್ಷವಾಗಿತ್ತು, ಅಂದರೆ Iನೆಯ ವಿಶ್ವ ಯುದ್ಧಕ್ಕೆ ಮುಂಚಿನ ವರುಷವೇ.”—ಟೈಮ್ಸ್-ಹೆರಲ್ಡ್ ಸಂಪಾದಕೀಯ, ವಾಷಿಂಗ್ಟನ್, ಡಿ.ಸಿ., ಮಾರ್ಚ್ 13, 1949.
“ಎರಡು ವಿಶ್ವ ಯುದ್ಧಗಳು ಮತ್ತು ಶೀತಲ ಯುದ್ಧವನ್ನು ಆವರಿಸಿದ್ದ 1914ರಿಂದ 1989ರ ವರೆಗಿನ 75 ವರ್ಷಗಳ ಕಾಲಾವಧಿಯು, ಒಂದು ಏಕೈಕ, ಪೂರಾ ಪ್ರತ್ಯೇಕವಾದ ಯುಗವಾಗಿ ಇತಿಹಾಸಕಾರರಿಂದ ವೀಕ್ಷಿಸಲ್ಪಡುತ್ತದೆ. ಲೋಕದ ಹೆಚ್ಚಿನ ಭಾಗವು ಯುದ್ಧದಲ್ಲಿ ಹೋರಾಡುತ್ತಿದ್ದ, ಯುದ್ಧದಿಂದ ಚೇತರಿಸಿಕೊಳ್ಳುತ್ತಿದ್ದ ಅಥವಾ ಯುದ್ಧದ ಸಿದ್ಧತೆಯಲ್ಲಿದ್ದ ಅಪೂರ್ವ ಕಾಲಾವಧಿಯು ಅದಾಗಿತ್ತು.”—ದ ನ್ಯೂ ಯಾರ್ಕ್ ಟೈಮ್ಸ್, ಮೇ 7, 1995.
“ಒಂದನೆಯ ವಿಶ್ವ ಯುದ್ಧದ ಸುಮಾರಿಗೆ ಇಡೀ ಜಗತ್ತೇ ವಿಸ್ಫೋಟಗೊಂಡಿತು ಮತ್ತು ಅದೇಕೆಂದು ನಮಗಿನ್ನೂ ಗೊತ್ತಿಲ್ಲ. ಅದಕ್ಕೆ ಮುಂಚೆ, ಒಂದು ಆದರ್ಶ ಜಗತ್ತು ತಮ್ಮೆದುರಿಗೆ ಇದೆಯೆಂದು ಜನರು ನೆನಸಿದ್ದರು. ಶಾಂತಿ ಮತ್ತು ಸಮೃದ್ಧಿಯು ಇತ್ತು. ನಂತರ ಎಲ್ಲವೂ ಸ್ಫೋಟಗೊಂಡಿತು. ಅಂದಿನಿಂದ ನಾವು ನಿಶ್ಚೇತ ಸ್ಥಿತಿಯಲ್ಲಿ ಬಿದ್ದಿದ್ದೇವೆ . . . ಇಡೀ ಇತಿಹಾಸದಲ್ಲೇ ಕೊಲ್ಲಲ್ಪಟ್ಟಿರುವ ಜನರಿಗಿಂತ ಈ ಶತಮಾನದಲ್ಲಿ ಹೆಚ್ಚು ಜನರು ಕೊಲ್ಲಲ್ಪಟ್ಟಿದ್ದಾರೆ.”—ಡಾ. ವಾಕರ್ ಪರ್ಸಿ, ಅಮೆರಿಕನ್ ಮೆಡಿಕಲ್ ನ್ಯೂಸ್, ನವೆಂಬರ್ 21, 1977.
ಇಸವಿ 1914ರ ಅನಂತರ 50ಕ್ಕಿಂತಲೂ ಹೆಚ್ಚು ವರುಷಗಳು ಕಳೆದ ಬಳಿಕ, ಜರ್ಮನ್ ರಾಜನೀತಿಜ್ಞ ಕಾನ್ರಾಟ್ ಆ್ಯಡನಾರ್ ಅವರು ಬರೆದದ್ದು: “1914ರಿಂದ ಸುರಕ್ಷೆ ಮತ್ತು ನೆಮ್ಮದಿಯು ಜನರ ಜೀವಿತಗಳಿಂದ ಮಾಯವಾಗಿ ಹೋಗಿದೆ.”—ದ ವೆಸ್ಟ್ ಪಾರ್ಕರ್, ಕ್ಲೀವ್ಲೆಂಡ್, ಒಹಾಯೊ, ಜನವರಿ 20, 1966.
ಸೊಸೈಟಿಯ ಮೊದಲನೆಯ ಅಧ್ಯಕ್ಷರಾದ ಸಿ. ಟಿ. ರಸಲ್ 1916ರಲ್ಲಿ ತೀರಿಕೊಂಡರು ಮತ್ತು ಮುಂದಿನ ವರ್ಷ ಜೋಸೆಫ್ ಎಫ್. ರದರ್‌ಫರ್ಡ್ ಅವರ ಸ್ಥಾನಕ್ಕೆ ಬಂದರು. ಆಗ ಅನೇಕ ಬದಲಾವಣೆಗಳಾದವು. ದ ವಾಚ್‌ಟವರ್ ಪತ್ರಿಕೆಯ ಸಂಗಾತಿ ಪತ್ರಿಕೆಯಾದ ದ ಗೋಲ್ಡನ್ ಏಜ್ ಪತ್ರಿಕೆಯು ಪರಿಚಯಿಸಲ್ಪಟ್ಟಿತು. (ಈಗ ಅದು ಅವೇಕ್! ಎಂದು ಕರೆಯಲ್ಪಟ್ಟು, 86ಕ್ಕೂ ಹೆಚ್ಚು ಭಾಷೆಗಳಲ್ಲಿ 2 ಕೋಟಿ 10 ಲಕ್ಷಕ್ಕಿಂತಲೂ ಹೆಚ್ಚು ವಿತರಣೆಯಾಗುತ್ತಿದೆ.) ಮನೆಯಿಂದ ಮನೆಯ ಸಾಕ್ಷಿಕಾರ್ಯಕ್ಕೆ ಅಧಿಕ ಒತ್ತನ್ನು ನೀಡಲಾಯಿತು. ಕ್ರೈಸ್ತಪ್ರಪಂಚದ ಧರ್ಮಪಂಗಡಗಳಿಂದ ತಮ್ಮನ್ನು ಪ್ರತ್ಯೇಕಿಸಿಕೊಳ್ಳಲಿಕ್ಕಾಗಿ, ಈ ಕ್ರೈಸ್ತರು 1931ರಲ್ಲಿ, ಯೆಹೋವನ ಸಾಕ್ಷಿಗಳು ಎಂಬ ಹೆಸರನ್ನು ಸ್ವೀಕರಿಸಿದರು. ಈ ಹೆಸರು ಯೆಶಾಯ 43:10-12ರ ಮೇಲೆ ಆಧಾರಿತವಾಗಿದೆ.
ಇಸವಿ 1920 ಮತ್ತು 1930ರ ದಶಕಗಳಲ್ಲಿ ರೇಡಿಯೊ ಸೌಕರ್ಯವು ವಿಸ್ತಾರವಾಗಿ ಉಪಯೋಗಿಸಲ್ಪಟ್ಟಿತು. 1933ರೊಳಗೆ ಸೊಸೈಟಿಯು ಬೈಬಲ್ ಭಾಷಣಗಳನ್ನು ಪ್ರಸಾರಮಾಡಲಿಕ್ಕಾಗಿ 403 ರೇಡಿಯೊ ಸ್ಟೇಷನ್‌ಗಳನ್ನು ಬಳಸುತ್ತಿತ್ತು. ತದನಂತರ, ಸಾಕ್ಷಿಗಳು ಸುಲಭವಾಗಿ ಒಯ್ಯಲಾಗುವ ಫೋನೋಗ್ರಾಫ್‌ಗಳು ಮತ್ತು ರೆಕಾರ್ಡ್ ಮಾಡಲ್ಪಟ್ಟ
ಬೈಬಲ್ ಭಾಷಣಗಳೊಂದಿಗೆ ಮನೆಯಿಂದ ಮನೆಯ ಭೇಟಿಗಳನ್ನು ಅಧಿಕಗೊಳಿಸಿದ್ದರಿಂದ, ರೇಡಿಯೊ ಬಳಕೆಯು ಬಹುಮಟ್ಟಿಗೆ ಕಡಿಮೆಯಾಯಿತು. ಬೈಬಲ್ ಸತ್ಯದಲ್ಲಿ ಆಸಕ್ತಿಯನ್ನು ತೋರಿಸಿದ ಪ್ರತಿಯೊಬ್ಬ ವ್ಯಕ್ತಿಯೊಂದಿಗೆ ಗೃಹ ಬೈಬಲ್ ಅಧ್ಯಯನವನ್ನು ಆರಂಭಿಸಲಾಯಿತು.ಕೋರ್ಟ್ ವಿಜಯಗಳು
ಈ ಕಾರ್ಯದ ನಿಮಿತ್ತ ಅನೇಕ ಸಾಕ್ಷಿಗಳು 1930 ಮತ್ತು 1940ರ ದಶಕಗಳಲ್ಲಿ ದಸ್ತಗಿರಿ ಮಾಡಲ್ಪಟ್ಟರು. ವಾಕ್ ಸ್ವಾತಂತ್ರ್ಯ, ಪ್ರಸಾರ, ಸಮ್ಮೇಳನ ಮತ್ತು ಆರಾಧನಾ ಸ್ವಾತಂತ್ರ್ಯಕ್ಕಾಗಿ ಕೋರ್ಟ್ ಮೊಕದ್ದಮೆಗಳು ನಡೆಸಲ್ಪಟ್ಟವು. ಅಮೆರಿಕದಲ್ಲಿ ಕೆಳಗಿನ ಸ್ಥಾನದಲ್ಲಿರುವ ಕೋರ್ಟ್‌ಗಳಿಂದ ಮಾಡಲ್ಪಟ್ಟ ಅಪ್ಪೀಲುಗಳ ಪರಿಣಾಮವಾಗಿ, ಸಾಕ್ಷಿಗಳು ಅಮೆರಿಕದ ಸುಪ್ರೀಮ್ ಕೋರ್ಟಿನಲ್ಲಿ 43 ಮೊಕದ್ದಮೆಗಳನ್ನು ಜಯಿಸಿದರು. ತದ್ರೀತಿಯಲ್ಲಿ ಬೇರೆ ದೇಶಗಳ ಸುಪ್ರೀಮ್ ಕೋರ್ಟ್‌ಗಳಿಂದಲೂ ಅನುಕೂಲವಾದ ತೀರ್ಪುಗಳು ದೊರೆತಿವೆ. ಈ ಕೋರ್ಟ್ ವಿಜಯಗಳ ಕುರಿತು ಪ್ರೊಫೆಸರ್ ಸಿ. ಎಸ್. ಬ್ರಾಡನ್, ಇವರೂ ನಂಬುತ್ತಾರೆ (ಇಂಗ್ಲಿಷ್) ಎಂಬ ತಮ್ಮ ಪುಸ್ತಕದಲ್ಲಿ ಸಾಕ್ಷಿಗಳ ಕುರಿತು ಹೇಳಿದ್ದು: “ಪೌರ ಹಕ್ಕುಗಳ ಸಂರಕ್ಷಣೆಗಾಗಿ ಹೋರಾಟ ನಡಿಸಿದ ಕಾರಣ ಅವರು ಪ್ರಜಾಪ್ರಭುತ್ವಕ್ಕೆ ಒಂದು ದೊಡ್ಡ ಸೇವೆಯನ್ನು ಸಲ್ಲಿಸಿದ್ದಾರೆ. ಏಕೆಂದರೆ ಅವರು ಮಾಡಿದ ಹೋರಾಟದಲ್ಲಿ ಅಮೆರಿಕದ ಪ್ರತಿಯೊಂದು ಅಲ್ಪ ಸಂಖ್ಯಾತ ಗುಂಪಿಗೆ ಆ ಹಕ್ಕುಗಳನ್ನು ಪಡೆದುಕೊಳ್ಳಲು ಬಹಳಷ್ಟು ಸಹಾಯ ಸಿಕ್ಕಿದೆ.”
ವಿಶೇಷ ತರಬೇತಿ ಕಾರ್ಯಕ್ರಮಗಳು
ಜೆ. ಎಫ್. ರದರ್‌ಫರ್ಡ್ 1942ರಲ್ಲಿ ನಿಧನರಾದರು. ಅವರ ಬಳಿಕ ಎನ್. ಏಚ್. ನಾರ್ ಅಧ್ಯಕ್ಷರಾದರು. ಒಂದು ತರಬೇತಿ ಕಾರ್ಯಕ್ರಮವು
ಆರಂಭವಾಯಿತು. 1943ರಲ್ಲಿ, ಮಿಷನೆರಿಗಳಿಗಾಗಿ ವಾಚ್‌ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್ ಎಂದು ಕರೆಯಲ್ಪಟ್ಟ ಒಂದು ವಿಶೇಷ ತರಬೇತಿ ಶಾಲೆಯು ಸ್ಥಾಪಿಸಲ್ಪಟ್ಟಿತು. ಆ ಸಮಯದಿಂದ ಹಿಡಿದು, ಈ ಶಾಲೆಯ ಪದವೀಧರರು ಭೂಮ್ಯಾದ್ಯಂತವಿರುವ ಎಲ್ಲಾ ದೇಶಗಳಿಗೆ ಕಳುಹಿಸಲ್ಪಟ್ಟಿದ್ದಾರೆ. ಎಲ್ಲಿ ಒಂದೂ ಸಭೆಯಿರಲಿಲ್ಲವೋ ಅಂಥ ದೇಶಗಳಲ್ಲಿ ಹೊಸ ಸಭೆಗಳು ಹುಟ್ಟಿಕೊಂಡಿವೆ, ಮತ್ತು ಅಂತಾರಾಷ್ಟ್ರೀಯವಾಗಿ ಸ್ಥಾಪಿತವಾದ ಬ್ರಾಂಚ್ ಆಫೀಸುಗಳ ಸಂಖ್ಯೆ ಈಗ 110ಕ್ಕಿಂತಲೂ ಹೆಚ್ಚಾಗಿದೆ. ಆಗಿಂದಾಗ್ಗೆ, ಸಭಾ ಹಿರಿಯರನ್ನು, ಬ್ರಾಂಚ್‌ಗಳಲ್ಲಿ ಕೆಲಸಮಾಡುವ ಸ್ವಯಂ ಸೇವಕರನ್ನು ಮತ್ತು ಸಾಕ್ಷಿಕಾರ್ಯದಲ್ಲಿ (ಪಯನೀಯರರಾಗಿ) ಪೂರ್ಣ ಸಮಯದ ಸೇವೆಯಲ್ಲಿರುವವರನ್ನು ತರಬೇತಿಗೊಳಿಸಲು ವಿಶೇಷ ಕ್ಲಾಸುಗಳು ಏರ್ಪಡಿಸಲ್ಪಟ್ಟಿವೆ. ನ್ಯೂ ಯಾರ್ಕಿನ ಪ್ಯಾಟರ್‌ಸನ್‌ನಲ್ಲಿ ನಡೆಸಲ್ಪಡುತ್ತಿರುವ ಶಿಕ್ಷಣಾ ಕೇಂದ್ರದಲ್ಲಿ, ಶುಶ್ರೂಷಕರಿಗಾಗಿ ಹಲವಾರು ವಿಶೇಷ ತರದ ಶಿಕ್ಷಣಗಳು ನೀಡಲ್ಪಟ್ಟಿವೆ.ಎನ್. ಏಚ್. ನಾರ್ 1977ರಲ್ಲಿ ಮೃತಪಟ್ಟರು. ತಮ್ಮ ಮರಣಕ್ಕೆ ಮುಂಚಿತವಾಗಿ ಅವರು ಕೊನೆಯದಾಗಿ ಪಾಲ್ಗೊಂಡ ಸಂಘಟನಾ ಬದಲಾವಣೆಗಳಲ್ಲಿ ಒಂದು, ಆಡಳಿತ ಮಂಡಳಿಯ ವಿಸ್ತರಣೆಯಾಗಿತ್ತು. ಈ ಆಡಳಿತ ಮಂಡಳಿಯು ಬ್ರೂಕ್ಲಿನ್‌ನಲ್ಲಿರುವ ಜಾಗತಿಕ ಮುಖ್ಯಕಾರ್ಯಾಲಯದಲ್ಲಿದೆ. 1976ರಲ್ಲಿ ಆಡಳಿತ ಜವಾಬ್ದಾರಿಗಳು ವಿಭಜಿಸಲ್ಪಟ್ಟು, ಆಡಳಿತ ಮಂಡಳಿಯ ಸದಸ್ಯರಿಂದ ರಚಿಸಲ್ಪಟ್ಟಿರುವ ವಿವಿಧ ಕಮಿಟಿಗಳಿಗೆ ನೇಮಿಸಲ್ಪಟ್ಟವು. ಇವರೆಲ್ಲರು ಶುಶ್ರೂಷಕರೋಪಾದಿ ಅನೇಕ ದಶಕಗಳ ಅನುಭವವನ್ನು ಹೊಂದಿದವರಾಗಿದ್ದಾರೆ.
ಮುದ್ರಣ ಸೌಕರ್ಯಗಳ ವಿಸ್ತರಣೆ
ಯೆಹೋವನ ಸಾಕ್ಷಿಗಳ ಆಧುನಿಕ ಇತಿಹಾಸವು ಆಸಕ್ತಿಕರವಾದ ಘಟನಾವಳಿಗಳಿಂದ ತುಂಬಿದೆ. ಹಿಂದೆ 1870ರಲ್ಲಿ, ಪೆನ್ಸಿಲ್ವೇನಿಯದ ಆ ಚಿಕ್ಕ ಬೈಬಲ್ ಅಧ್ಯಯನದಿಂದ ಆರಂಭಗೊಂಡ ಸಾಕ್ಷಿಗಳು, ಇಸವಿ 2001ದೊಳಗೆ ಲೋಕದಾದ್ಯಂತ ಸುಮಾರು 93,000 ಸಭೆಗಳಾಗಿ ಅಭಿವೃದ್ಧಿಹೊಂದಿದರು. ಆರಂಭದಲ್ಲಿ ಅವರ ಸಾಹಿತ್ಯಗಳೆಲ್ಲವು ವ್ಯಾಪಾರಿ ಉದ್ಯಮಗಳಿಂದ ಮುದ್ರಿಸಲ್ಪಡುತ್ತಿದ್ದವು. ಆಮೇಲೆ 1920ರಲ್ಲಿ, ಬಾಡಿಗೆಯ ಫ್ಯಾಕ್ಟರಿ ಕಟ್ಟಡಗಳಲ್ಲಿ ಕೆಲವು ಸಾಹಿತ್ಯಗಳನ್ನು ಸಾಕ್ಷಿಗಳು ಮುದ್ರಿಸತೊಡಗಿದರು. ಆದರೆ 1927ರಿಂದ ಮುಂದಕ್ಕೆ, ನ್ಯೂ ಯಾರ್ಕಿನ ಬ್ರೂಕ್ಲಿನ್‌ನಲ್ಲಿ, ವಾಚ್‌ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ನ್ಯೂ ಯಾರ್ಕ್ ಸಂಸ್ಥೆಯ ಸ್ವಾಮ್ಯದಲ್ಲಿದ್ದ ಎಂಟು ಮಾಳಿಗೆಯ ಫ್ಯಾಕ್ಟರಿ ಕಟ್ಟಡದಲ್ಲಿ ಅತ್ಯಧಿಕ ಪ್ರಮಾಣದ ಸಾಹಿತ್ಯವು ಉತ್ಪಾದಿಸಲ್ಪಟ್ಟಿತು. ಈಗ ಈ ಕಟ್ಟಡವಲ್ಲದೆ ಇತರ ಫ್ಯಾಕ್ಟರಿ ಕಟ್ಟಡಗಳು ಮತ್ತು ಒಂದು ಆಫೀಸ್ ಸಂಕೀರ್ಣವು ಕೂಡಿಸಲ್ಪಟ್ಟಿದೆ. ಬ್ರೂಕ್ಲಿನ್‌ನಲ್ಲಿ ಹತ್ತಿರದಲ್ಲೇ ಇನ್ನೂ ಕೆಲವು ಕಟ್ಟಡಗಳಿದ್ದು, ಅವು ಆ ಮುದ್ರಣ ಸೌಕರ್ಯಗಳಲ್ಲಿ ಕಾರ್ಯನಡಿಸಲು ಸ್ವಯಂ ಸೇವಕರಾಗಿ ಬಂದಿರುವ ಶುಶ್ರೂಷಕರಿಗಾಗಿ ವಸತಿಸೌಕರ್ಯವನ್ನು ಒದಗಿಸುತ್ತವೆ. ಇದಕ್ಕೆ ಕೂಡಿಸಿ, ಉತ್ತರ ನ್ಯೂಯಾರ್ಕ್‌ನಲ್ಲಿ ವಾಲ್ಕಿಲ್‌ನ ಬಳಿ, ಒಂದು ಫಾರ್ಮ್ ಹಾಗೂ ಮುದ್ರಣಾಲಯವು ಜೊತೆಯಲ್ಲಿರುವ ಒಂದು ಸಂಕೀರ್ಣವು ಕಾರ್ಯನಡಿಸುತ್ತಿದೆ. ಅಲ್ಲಿ ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಮುದ್ರಿಸಲಾಗುತ್ತದೆ ಮತ್ತು ವಿಭಿನ್ನ ಸ್ಥಳಗಳಲ್ಲಿ ಕೆಲಸಮಾಡುತ್ತಿರುವ ಶುಶ್ರೂಷಕರಿಗಾಗಿ ಸ್ವಲ್ಪ ಆಹಾರವನ್ನೂ ಉತ್ಪಾದಿಸಲಾಗುತ್ತದೆ. ಚಿಕ್ಕಪುಟ್ಟ ಖರ್ಚುಗಳಿಗಾಗಿ ಪ್ರತಿಯೊಬ್ಬ ಸ್ವಯಂ ಸೇವಕನಿಗೆ ಚಿಕ್ಕ ಮಾಸಿಕ ಮೊತ್ತವನ್ನು ಕೊಡಲಾಗುತ್ತದೆ.
ಅಂತಾರಾಷ್ಟ್ರೀಯ ಅಧಿವೇಶನಗಳು
ಇಸವಿ 1893ರಲ್ಲಿ ಮೊತ್ತಮೊದಲ ಪ್ರಧಾನ ಅಧಿವೇಶನವನ್ನು ಅಮೆರಿಕದ ಇಲ್ನಾಯ್ ಶಿಕಾಗೊದಲ್ಲಿ ನಡೆಸಲಾಯಿತು. ಅಲ್ಲಿ 360 ಮಂದಿ ಹಾಜರಿದ್ದರು ಮತ್ತು 70 ಮಂದಿ ಹೊಸಬರು ದೀಕ್ಷಾಸ್ನಾನ ಪಡೆದುಕೊಂಡರು. ಕೊನೆಯ ಏಕಮಾತ್ರ ದೊಡ್ಡ ಅಂತಾರಾಷ್ಟ್ರೀಯ ಅಧಿವೇಶನವು 1958ರಲ್ಲಿ ನ್ಯೂ ಯಾರ್ಕ್ ಸಿಟಿಯಲ್ಲಿ ನಡೆಸಲ್ಪಟ್ಟಿತು. ಅದಕ್ಕಾಗಿ ಯಾಂಕೀ ಸ್ಟೇಡಿಯಮ್ ಮತ್ತು ಆ ಸಮಯದಲ್ಲಿ ಅಸ್ತಿತ್ವದಲ್ಲಿದ್ದ ಪೋಲೊ ಗ್ರೌಂಡ್ಸ್ ಅನ್ನು ಉಪಯೋಗಿಸಲಾಯಿತು. ಉಚ್ಚ ಹಾಜರಿಯು 2,53,922 ಆಗಿದ್ದು, ಹೊಸದಾಗಿ ದೀಕ್ಷಾಸ್ನಾನ ಪಡೆದುಕೊಂಡವರ ಸಂಖ್ಯೆ 7,136 ಆಗಿತ್ತು. ಅಂದಿನಿಂದ ಹಿಡಿದು, ಅನೇಕ ದೇಶಗಳಲ್ಲಿ ಅಂತಾರಾಷ್ಟ್ರೀಯ ಅಧಿವೇಶನಗಳ ಸರಮಾಲೆಯನ್ನು ನಡೆಸಲಾಗಿದೆ. ಒಟ್ಟು ಸೇರಿಸಿದರೆ, ಇಂಥ ಒಂದು ಸರಮಾಲೆಯಲ್ಲಿ ಜಗತ್ತಿನಾದ್ಯಂತವಿರುವ ದೇಶಗಳಲ್ಲಿ ಸಾವಿರಾರು ಅಧಿವೇಶನಗಳು ಒಳಗೂಡಿರಬಹುದು.
[ಪುಟ 8ರಲ್ಲಿರುವ ಸಂಕ್ಷಿಪ್ತ ವಿವರಣೆ]
ಪೌರ ಸ್ವಾತಂತ್ರ್ಯಗಳಿಗೆ ಒಂದು ಮಹತ್ವದ ಸೇವೆ
[ಪುಟ 6ರಲ್ಲಿರುವ ಚಿತ್ರ]
ಆರಂಭದಲ್ಲಿ ಒಂದೇ ಭಾಷೆಯಲ್ಲಿ 6,000 ಪ್ರತಿಗಳನ್ನು ಮುದ್ರಿಸಲಾಗುತ್ತಿದ್ದ “ದ ವಾಚ್‌ಟವರ್” ಪತ್ರಿಕೆಯು, ಈಗ 143ಕ್ಕಿಂತಲೂ ಹೆಚ್ಚಿನ ಭಾಷೆಗಳಲ್ಲಿ 2,40,00,000ಕ್ಕಿಂತಲೂ ಹೆಚ್ಚಿನ ಸಂಖ್ಯೆಗೆ ಬೆಳೆದಿದೆ
[ಪುಟ 7ರಲ್ಲಿರುವ ಚಿತ್ರ]
ಮಾನವ ಇತಿಹಾಸದಲ್ಲಿ ಒಂದು ತಿರುಗು ಬಿಂದು
[ಪುಟ 10ರಲ್ಲಿ ಇಡೀ ಪುಟದ ಚಿತ್ರ]