ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಸಕ್ತ ಜನರು ಹೆಚ್ಚಾಗಿ ಕೇಳುವಂಥ ಪ್ರಶ್ನೆಗಳು

ಆಸಕ್ತ ಜನರು ಹೆಚ್ಚಾಗಿ ಕೇಳುವಂಥ ಪ್ರಶ್ನೆಗಳು

ಆಸಕ್ತ ಜನರು ಹೆಚ್ಚಾಗಿ ಕೇಳುವಂಥ ಪ್ರಶ್ನೆಗಳು

ದೇವರು ಪ್ರೀತಿಸ್ವರೂಪಿ ಆಗಿರುವಲ್ಲಿ, ಆತನು ದುಷ್ಟತನವನ್ನೇಕೆ ಅನುಮತಿಸುತ್ತಾನೆ?

ದೇವರು ದುಷ್ಟತನವನ್ನು ಅನುಮತಿಸುತ್ತಾನೆಂಬುದು ನಿಜ, ಆದರೆ ಕೋಟ್ಯಂತರ ಜನರು ಬುದ್ಧಿಪೂರ್ವಕವಾಗಿ ಅದನ್ನು ರೂಢಿಮಾಡಿಕೊಳ್ಳುತ್ತಾರೆ. ಉದಾಹರಣೆಗಾಗಿ, ಅವರು ಯುದ್ಧಗಳನ್ನು ಘೋಷಿಸುತ್ತಾರೆ, ಮಕ್ಕಳ ಮೇಲೆ ಬಾಂಬ್‌ಗಳನ್ನು ಎಸೆಯುತ್ತಾರೆ, ಭೂಮಿಯನ್ನು ಧ್ವಂಸಗೊಳಿಸುತ್ತಾರೆ, ಮತ್ತು ಬರಗಳನ್ನು ಉಂಟುಮಾಡುತ್ತಾರೆ. ಕೋಟ್ಯಂತರ ಜನರು ಧೂಮಪಾನ ಮಾಡಿ ಶ್ವಾಸಕೋಶದ ಕ್ಯಾನ್ಸರ್‌ಗೆ ತುತ್ತಾಗುತ್ತಾರೆ, ವ್ಯಭಿಚಾರವನ್ನು ನಡಿಸುತ್ತಾರೆ ಮತ್ತು ರತಿರವಾನಿತ ರೋಗಗಳಿಗೆ ಬಲಿಯಾಗುತ್ತಾರೆ, ಅತಿರೇಕ ಮದ್ಯಪಾನ ಮಾಡಿ ಪಿತ್ತಜನಕಾಂಗದ ರೋಗಕ್ಕೆ ಗುರಿಯಾಗುತ್ತಾರೆ, ಮತ್ತು ಈ ಪಟ್ಟಿ ಹೀಗೆಯೇ ಮುಂದುವರಿಯುತ್ತದೆ. ಅಂಥ ಜನರಿಗೆ ನಿಜವಾಗಿ ಎಲ್ಲಾ ದುಷ್ಟತನದ ಅಂತ್ಯವು ಬೇಡವಾಗಿದೆ. ಅದಕ್ಕಾಗಿರುವ ದಂಡನೆಗಳು ಮಾತ್ರ ಇರಬಾರದೆಂಬುದೇ ಅವರ ವಾದ. ಆದರೆ ತಾವು ಏನನ್ನು ಬಿತ್ತಿದ್ದಾರೋ ಅದನ್ನೇ ಕೊಯ್ಯುವಾಗ, “ಅಯ್ಯೊ ದೇವರೇ, ಇದು ನನಗೇ ಆಗಬೇಕೇ?” ಎಂದು ಅವರು ಹಲುಬುತ್ತಾರೆ. ಮತ್ತು ಜ್ಞಾನೋಕ್ತಿ 19:3 ಹೇಳುವಂತೆ ಅವರು ದೇವರನ್ನು ದೂಷಿಸುತ್ತಾರೆ: “ಒಬ್ಬ ಮನುಷ್ಯನು ಸ್ವಂತ ಮೂರ್ಖತನದಿಂದ ತನ್ನ ಜೀವನವನ್ನು ಕೆಡಿಸಿಕೊಳ್ಳುತ್ತಾನೆ, ಮತ್ತು ಬಳಿಕ ಅವನು ಕರ್ತನ ವಿರುದ್ಧವೇ ದೂರುತ್ತಾನೆ.” (ದ ನ್ಯೂ ಇಂಗ್ಲಿಷ್‌ ಬೈಬಲ್‌) ಮತ್ತು ಒಂದುವೇಳೆ ದೇವರು ಅವರ ಕೆಟ್ಟತನವನ್ನು ನಿಲ್ಲಿಸಿದ್ದಾದರೆ, ತಮ್ಮ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗಿದೆ ಎಂದೂ ಅವರು ಪ್ರತಿಭಟಿಸುವರು!

ಯೆಹೋವನು ದುಷ್ಟತನವನ್ನು ಅನುಮತಿಸುವುದಕ್ಕಿರುವ ಮುಖ್ಯ ಕಾರಣವು, ಸೈತಾನನ ಪಂಥಾಹ್ವಾನಕ್ಕೆ ಉತ್ತರ ಕೊಡುವುದೇ ಆಗಿದೆ. ಪರೀಕ್ಷೆಯ ಕೆಳಗೆ ದೇವರಿಗೆ ನಿಷ್ಠನಾಗಿ ಉಳಿಯುವ ಯಾವನೇ ಮನುಷ್ಯನನ್ನು ಭೂಮಿಯಲ್ಲಿರಿಸಲು ದೇವರು ಶಕ್ತನಲ್ಲವೆಂದು ಪಿಶಾಚನಾದ ಸೈತಾನನು ಸವಾಲೊಡ್ಡಿದನು. (ಯೋಬ 1:​6-12; 2:​1-10) ಸೈತಾನನು ತನ್ನ ಸವಾಲನ್ನು ರುಜುಪಡಿಸುವಂತೆ ಅವಕಾಶ ನೀಡಲಿಕ್ಕಾಗಿಯೇ ಯೆಹೋವನು ಅವನನ್ನು ಉಳಿಸಿದ್ದಾನೆ. (ವಿಮೋಚನಕಾಂಡ 9:16) ಮನುಷ್ಯರನ್ನು ದೇವರ ವಿರುದ್ಧ ತಿರುಗಿಸಲಿಕ್ಕಾಗಿ ಸೈತಾನನೀಗ ಮನುಷ್ಯರ ಮೇಲೆ ವಿಪತ್ತುಗಳನ್ನು ಬರಮಾಡುತ್ತಾ, ತನ್ನ ಸವಾಲನ್ನು ರುಜುಪಡಿಸಲು ಪ್ರಯತ್ನಿಸುತ್ತಿದ್ದಾನೆ. (ಪ್ರಕಟನೆ 12:12) ಆದರೂ, ಯೋಬನು ತನ್ನ ಸಮಗ್ರತೆಯನ್ನು ಕಾಪಾಡಿಕೊಂಡನು. ಯೇಸು ಕೂಡ ಅದನ್ನೇ ಮಾಡಿದನು. ಇಂದು ನಿಜ ಕ್ರೈಸ್ತರು ಸಹ ಹಾಗೆ ಮಾಡುತ್ತಾರೆ.​—⁠ಯೋಬ 27:5; 31:6; ಮತ್ತಾಯ 4:​1-11; 1 ಪೇತ್ರ 1:​6, 7.

ಜನರು ಸದಾ ಜೀವಿಸುವ ಒಂದು ಭೂಪರದೈಸಿನಲ್ಲಿ ನಂಬಿಕೆಯಿಡಲು ನನಗೆ ಮನಸ್ಸಿದೆ, ಆದರೆ ಅದು ನಂಬಲು ತೀರ ಕಷ್ಟಕರವಾದ ಸಂಗತಿಯಲ್ಲವೇ?

ಬೈಬಲಿಗೆ ಅನುಸಾರವಾಗಿ ಹಾಗಿಲ್ಲ. ಅದು ನಂಬಲು ಕಷ್ಟಕರವಾಗಿ ತೋರುವುದು, ಏಕೆಂದರೆ ಮನುಷ್ಯರು ಕೆಟ್ಟತನವನ್ನು ಎಷ್ಟೊ ಶತಮಾನಗಳಿಂದ ನೋಡಿದ್ದಾರೆ. ಯೆಹೋವನು ಈ ಭೂಮಿಯನ್ನು ಸೃಷ್ಟಿಸಿ, ಅದನ್ನು ನೀತಿವಂತರಾದ ಸ್ತ್ರೀಪುರುಷರಿಂದ ತುಂಬಿಸುವಂತೆ ಮಾನವರಿಗೆ ಹೇಳಿದನು. ಅವರು ಭೂಮಿಯ ಸಸ್ಯ ಹಾಗೂ ಪ್ರಾಣಿ ಜೀವಿಗಳನ್ನು ನೋಡಿಕೊಳ್ಳಬೇಕಿತ್ತು ಮತ್ತು ಅದರ ಸೌಂದರ್ಯವನ್ನು ನಾಶಮಾಡುವುದಲ್ಲ ಬದಲಾಗಿ ಸಂರಕ್ಷಿಸಬೇಕಿತ್ತು. (12 ಮತ್ತು 17ನೆಯ ಪುಟಗಳನ್ನು ನೋಡಿ.) ಆ ವಾಗ್ದತ್ತ ಪರದೈಸವು ನಂಬಲು ಕಷ್ಟಕರವಾಗಿ ತೋರುವುದಕ್ಕಿಂತಲೂ ಹೆಚ್ಚಾಗಿ, ಸದ್ಯದ ದುಃಖಮಯ ಪರಿಸ್ಥಿತಿಯ ಮುಂದುವರಿಕೆಯೇ ತೀರಾ ಕೆಟ್ಟ ವಿಷಯವಾಗಿದೆ. ಪರದೈಸವು ಅದನ್ನು ಸ್ಥಾನಪಲ್ಲಟಗೊಳಿಸುವುದು.

ಈ ವಾಗ್ದಾನಗಳಲ್ಲಿ ನಂಬಿಕೆಯು ಅವಿಚಾರಿತ ಶ್ರದ್ಧೆಯಾಗಿರುವುದಿಲ್ಲ. “ಸಾರಿದ ವಾರ್ತೆಯು ನಂಬಿಕೆಗೆ ಆಧಾರ.” ದೇವರ ವಾಕ್ಯವನ್ನು ಅಭ್ಯಾಸಿಸುವ ಮೂಲಕ ಅದರ ವಿವೇಕವು ಸುವ್ಯಕ್ತವಾಗುತ್ತದೆ ಮತ್ತು ನಂಬಿಕೆಯು ಬೆಳೆಯುತ್ತದೆ.​—⁠ರೋಮಾಪುರ 10:17; ಇಬ್ರಿಯ 11:⁠1.

ಬೈಬಲು ಒಂದು ದಂತ ಕಥೆಯಾಗಿದೆ ಮತ್ತು ಅವೈಜ್ಞಾನಿಕವಾಗಿದೆ ಎಂದು ಹೇಳುತ್ತಾ ಅಪಹಾಸ್ಯಮಾಡುವವರಿಗೆ ನಾನು ಹೇಗೆ ಉತ್ತರ ಕೊಡಬಲ್ಲೆ?

ಬೈಬಲ್‌ ಸಂಬಂಧಿತ ಪ್ರಾಕ್ತನಶೋಧನಶಾಸ್ತ್ರವು ಬೈಬಲಿನ ಚಾರಿತ್ರಿಕ ನಿಷ್ಕೃಷ್ಟತೆಯಲ್ಲಿ ಹೆಚ್ಚಿನದ್ದನ್ನು ದೃಢೀಕರಿಸುತ್ತದೆ. ನಿಜ ವಿಜ್ಞಾನವು ಬೈಬಲಿನೊಂದಿಗೆ ಹೊಂದಿಕೆಯಲ್ಲಿದೆ. ಈ ಕೆಳಗಿನ ವಾಸ್ತವಾಂಶಗಳು, ಐಹಿಕ ವಿದ್ವಾಂಸರಿಂದ ಕಂಡುಹಿಡಿಯಲ್ಪಡುವ ಎಷ್ಟೋ ಸಮಯಕ್ಕೆ ಮುಂಚೆಯೇ ಬೈಬಲಿನಲ್ಲಿದ್ದವು: ಭೂಮಿಯು ತನ್ನ ವಿಕಸನದಲ್ಲಿ ದಾಟಿಬಂದಿರುವ ಕ್ರಮಪ್ರಕಾರವಾದ ಹಂತಗಳು, ಭೂಮಿಯು ಗೋಲಾಕಾರವಾಗಿದೆ, ಅದು ಯಾವ ಆಧಾರವೂ ಇಲ್ಲದೆ ಬಾಹ್ಯಾಕಾಶದಲ್ಲಿ ತೂಗಾಡುತ್ತದೆ, ಮತ್ತು ಪಕ್ಷಿಗಳು ವಲಸೆಹೋಗುತ್ತವೆ.​—ಆದಿಕಾಂಡ, 1ನೆಯ ಅಧ್ಯಾಯ; ಯೆಶಾಯ 40:22; ಯೋಬ 26:7; ಯೆರೆಮೀಯ 8:⁠7.

ಬೈಬಲು ದೈವಪ್ರೇರಿತವೆಂಬುದು ನೆರವೇರಿದ ಪ್ರವಾದನೆಗಳಿಂದ ತೋರಿಸಲ್ಪಡುತ್ತದೆ. ಲೋಕ ಶಕ್ತಿಗಳ ಏಳುಬೀಳುಗಳನ್ನು, ಹಾಗೂ ಮೆಸ್ಸೀಯನ ಬರೋಣ ಮತ್ತು ಅವನು ಕೊಲ್ಲಲ್ಪಡುವ ಸಮಯವನ್ನು ದಾನಿಯೇಲನು ಮುಂದಾಗಿಯೇ ತಿಳಿಸಿದನು. (ದಾನಿಯೇಲ, ಅಧ್ಯಾಯ 2, 8; 9:​24-27) ಇಂದು, ಇನ್ನೂ ಬೇರೆ ಅನೇಕ ಪ್ರವಾದನೆಗಳು ನೆರವೇರುತ್ತಾ ಇದ್ದು, ಇವು “ಕಡೇ ದಿವಸಗಳು” ಎಂಬುದನ್ನು ರುಜುಪಡಿಸುತ್ತವೆ. (2 ತಿಮೊಥೆಯ 3:​1-5; ಮತ್ತಾಯ, ಅಧ್ಯಾಯ 24) ಇಂಥ ಮುನ್ನರಿವು ಮನುಷ್ಯನ ಶಕ್ತಿಗೆ ಮೀರಿದ್ದು. (ಯೆಶಾಯ 41:23) ಅಧಿಕ ದೃಢೀಕರಣಕ್ಕಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತವಾದ ಬೈಬಲ್‌​—⁠ದೇವರ ವಾಕ್ಯವೊ ಮನುಷ್ಯನದ್ದೊ? ಮತ್ತು ನಿಮ್ಮ ಕುರಿತಾಗಿ ಚಿಂತಿಸುವ ಒಬ್ಬ ಸೃಷ್ಟಿಕರ್ತನಿದ್ದಾನೊ? (ಇಂಗ್ಲಿಷ್‌) ಎಂಬ ಪುಸ್ತಕಗಳನ್ನು ನೋಡಿರಿ.

ನಾನು ಹೇಗೆ ಬೈಬಲಿನ ಕುರಿತಾದ ಪ್ರಶ್ನೆಗಳನ್ನು ಉತ್ತರಿಸಲು ಕಲಿಯಬಲ್ಲೆ?

ನೀವು ಬೈಬಲನ್ನು ಅಧ್ಯಯನ ಮಾಡಿ ಅದರ ಕುರಿತು ಮನನ ಮಾಡಬೇಕು, ಮತ್ತು ಅದೇ ಸಮಯದಲ್ಲಿ ನಿಮ್ಮನ್ನು ನಿರ್ದೇಶಿಸಲಿಕ್ಕಾಗಿ ದೇವರ ಆತ್ಮಕ್ಕಾಗಿಯೂ ಬೇಡಿಕೊಳ್ಳಬೇಕು. (ಜ್ಞಾನೋಕ್ತಿ 15:28; ಲೂಕ 11:​9-13) ಬೈಬಲನ್ನುವುದು: “ನಿಮ್ಮಲ್ಲಿ ಯಾವನಿಗಾದರೂ ಜ್ಞಾನ ಕಡಿಮೆಯಾಗಿದ್ದರೆ ಅವನು ದೇವರನ್ನು ಕೇಳಿಕೊಳ್ಳಲಿ, ಅದು ಅವನಿಗೆ ದೊರಕುವದು; ದೇವರು ಹಂಗಿಸದೆ ಎಲ್ಲರಿಗೂ ಉದಾರ ಮನಸ್ಸಿನಿಂದ ಕೊಡುವವನಾಗಿದ್ದಾನೆ.” (ಯಾಕೋಬ 1:⁠5) ಅದಲ್ಲದೆ, ಪರಾಮರ್ಶೆಗೆ ಯೋಗ್ಯವಾದ ಬೈಬಲ್‌ ಅಧ್ಯಯನ ಸಹಾಯಕಗಳೂ ಇವೆ. ಹೇಗೆ ಐಥಿಯೋಪ್ಯ ದೇಶದ ಕಂಚುಕಿಯೊಂದಿಗೆ ಫಿಲಿಪ್ಪನು ಅಧ್ಯಯನ ಮಾಡಿದನೋ ಹಾಗೆಯೇ, ಸಾಮಾನ್ಯವಾಗಿ ಇತರರಿಂದ ಸಹಾಯ ಪಡೆದುಕೊಳ್ಳುವ ಆವಶ್ಯಕತೆ ಇರುತ್ತದೆ. (ಅ. ಕೃತ್ಯಗಳು 8:​26-35) ಯೆಹೋವನ ಸಾಕ್ಷಿಗಳು ಆಸಕ್ತ ಜನರೊಂದಿಗೆ ಅವರ ಮನೆಗಳಲ್ಲಿ ಉಚಿತವಾಗಿ ಬೈಬಲ್‌ ಅಧ್ಯಯನಗಳನ್ನು ನಡಿಸುತ್ತಾರೆ. ಈ ಸೇವೆಗಾಗಿ ಹಿಂಜರಿಯದೆ ವಿನಂತಿಸಿಕೊಳ್ಳಿರಿ.

ಅನೇಕರು ಯೆಹೋವನ ಸಾಕ್ಷಿಗಳನ್ನು ಏಕೆ ವಿರೋಧಿಸುತ್ತಾರೆ ಮತ್ತು ಅವರೊಂದಿಗೆ ಅಧ್ಯಯನ ಮಾಡಬಾರದೆಂದು ನನಗೆ ಹೇಳುತ್ತಾರೆ?

ಯೇಸುವಿನ ಸಾರುವಿಕೆಯು ವಿರೋಧಿಸಲ್ಪಟ್ಟಿತ್ತು. ಮತ್ತು ತನ್ನ ಹಿಂಬಾಲಕರು ಸಹ ವಿರೋಧವನ್ನು ಎದುರಿಸುವರೆಂದು ಯೇಸು ಹೇಳಿದನು. ಯೇಸುವಿನ ಬೋಧನೆಯಿಂದ ಕೆಲವರು ಪ್ರಭಾವಿತರಾದಾಗ, ಧಾರ್ಮಿಕ ವಿರೋಧಿಗಳು ಹೀಗೆ ಎದುರುತ್ತರ ಕೊಟ್ಟರು: “ನೀವೂ ಮರುಳಾದಿರಾ? ಹಿರೀಸಭೆಯವರಲ್ಲಿಯಾಗಲಿ ಫರಿಸಾಯರಲ್ಲಿಯಾಗಲಿ ಯಾರಾದರೂ ಅವನನ್ನು ನಂಬಿದ್ದಾರೋ?” (ಯೋಹಾನ 7:​46-48; 15:20) ಯೆಹೋವನ ಸಾಕ್ಷಿಗಳೊಂದಿಗೆ ಅಧ್ಯಯನ ಮಾಡಬೇಡಿರಿ ಎಂದು ನಿಮಗೆ ಸಲಹೆ ನೀಡುವ ಹೆಚ್ಚಿನವರಿಗೆ ಸಾಕ್ಷಿಗಳ ಕುರಿತು ಒಂದೇ ಏನೂ ತಿಳಿದಿರುವುದಿಲ್ಲ ಇಲ್ಲವೆ ಅವರ ಕುರಿತು ಪೂರ್ವಕಲ್ಪಿತ ಅಭಿಪ್ರಾಯವಿದೆ. ಸಾಕ್ಷಿಗಳೊಂದಿಗೆ ಅಧ್ಯಯನ ಮಾಡಿರಿ ಮತ್ತು ನಿಮ್ಮ ಬೈಬಲ್‌ ತಿಳಿವಳಿಕೆಯು ಹೆಚ್ಚುವುದೋ ಇಲ್ಲವೋ ಎಂಬುದನ್ನು ನೀವೇ ನೋಡಿರಿ.​—⁠ಮತ್ತಾಯ 7:​17-20.

ಅವರವರ ಸ್ವಂತ ಧರ್ಮವಿರುವ ಜನರನ್ನು ಸಾಕ್ಷಿಗಳು ಏಕೆ ಸಂದರ್ಶಿಸುತ್ತಾರೆ?

ಹೀಗೆ ಮಾಡುವುದರಲ್ಲಿ ಅವರು ಯೇಸುವಿನ ಮಾದರಿಯನ್ನು ಅನುಸರಿಸುತ್ತಾರೆ. ಅವನು ಯೆಹೂದ್ಯರ ಬಳಿಗೆ ಹೋದನು. ಯೆಹೂದ್ಯರಿಗೆ ಅವರ ಸ್ವಂತ ಧರ್ಮವಿತ್ತು. ಆದರೆ ಅನೇಕ ವಿಧಗಳಲ್ಲಿ ಅದು ದೇವರ ವಾಕ್ಯದಿಂದ ದೂರ ತೊಲಗಿತ್ತು. (ಮತ್ತಾಯ 15:​1-9) ಎಲ್ಲಾ ಜನಾಂಗಗಳಿಗೆ ಒಂದಲ್ಲ ಒಂದು ರೀತಿಯ ಧರ್ಮವಿದೆ, ಕ್ರೈಸ್ತರೆನಿಸಿಕೊಳ್ಳುವವರೂ ಇದ್ದಾರೆ ಮತ್ತು ಅಕ್ರೈಸ್ತರೂ ಇದ್ದಾರೆ. ಆದರೆ ಜನರು ದೇವರ ಸ್ವಂತ ವಾಕ್ಯಕ್ಕೆ ಹೊಂದಿಕೆಯಲ್ಲಿರುವ ನಂಬಿಕೆಗಳನ್ನು ಪಾಲಿಸುವುದು ಅತ್ಯಂತ ಮಹತ್ವವುಳ್ಳದ್ದು. ಮತ್ತು ಇದನ್ನು ಮಾಡುವುದರಲ್ಲಿ ಅವರಿಗೆ ನೆರವಾಗಲು ಸಾಕ್ಷಿಗಳು ಮಾಡುವ ಪ್ರಯತ್ನಗಳು ನೆರೆಯವರಲ್ಲಿ ಅವರಿಗಿರುವ ಪ್ರೀತಿಯನ್ನು ತೋರಿಸಿ ಕೊಡುತ್ತವೆ.

ತಮ್ಮ ಧರ್ಮವು ಮಾತ್ರ ಸತ್ಯ ಧರ್ಮವೆಂದು ಸಾಕ್ಷಿಗಳು ನಂಬುತ್ತಾರೋ?

ತನ್ನ ಧರ್ಮವನ್ನು ಗಂಭೀರವಾಗಿ ತೆಗೆದುಕೊಳ್ಳುವ ಯಾವನಿಗಾದರೂ ಅದು ಸರಿಯಾದ ಧರ್ಮವಾಗಿದೆ ಎಂಬ ಖಾತ್ರಿಯಿರಬೇಕು. ಇಲ್ಲವಾದರೆ ಅವನು ಅಥವಾ ಅವಳು ಅದರಲ್ಲಿ ಒಳಗೂಡಬೇಕೇಕೆ? ಕ್ರೈಸ್ತರು ಪ್ರಬೋಧಿಸಲ್ಪಟ್ಟದ್ದು: “ಎಲ್ಲವನ್ನು ಪರಿಶೋಧಿಸಿ ಒಳ್ಳೇದನ್ನೇ ಭದ್ರವಾಗಿ ಹಿಡಿದುಕೊಳ್ಳಿರಿ.” (1 ಥೆಸಲೊನೀಕ 5:21) ತನ್ನ ನಂಬಿಕೆಗಳು ಶಾಸ್ತ್ರವಚನಗಳಿಂದ ಬೆಂಬಲಿಸಲ್ಪಡಬಹುದೆಂಬ ಖಾತ್ರಿಯು ಒಬ್ಬ ವ್ಯಕ್ತಿಗಿರಬೇಕು, ಏಕೆಂದರೆ ನಿಜ ನಂಬಿಕೆ ಇರುವುದು ಕೇವಲ ಒಂದೇ. ಎಫೆಸ 4:5 ಇದನ್ನು ದೃಢಪಡಿಸುತ್ತ ಹೇಳುವುದು: “ಕರ್ತನು ಒಬ್ಬನೇ, ಭರವಸವು [“ನಂಬಿಕೆಯು,” NW] ಒಂದೇ, ಸ್ನಾನ ದೀಕ್ಷೆ ಒಂದೇ.” ಅನೇಕ ದಾರಿಗಳೂ ಅನೇಕ ಧರ್ಮಗಳೂ ಇವೆಯಾದರೂ, ಅವೆಲ್ಲವೂ ರಕ್ಷಣೆಗೆ ನಡಿಸುತ್ತವೆ ಎಂಬ ಆಧುನಿಕ ಸಡಿಲ ದೃಷ್ಟಿಕೋನವನ್ನು ಯೇಸು ಅಂಗೀಕರಿಸಲಿಲ್ಲ. ಬದಲಿಗೆ ಅವನಂದದ್ದು: “ನಿತ್ಯಜೀವಕ್ಕೆ ಹೋಗುವ ಬಾಗಲು ಇಕ್ಕಟ್ಟು, ದಾರಿ ಬಿಕ್ಕಟ್ಟು; ಅದನ್ನು ಕಂಡುಹಿಡಿಯುವವರು ಸ್ವಲ್ಪ ಜನ.” ತಾವು ಅದನ್ನು ಕಂಡುಕೊಂಡಿದ್ದೇವೆಂದು ಯೆಹೋವನ ಸಾಕ್ಷಿಗಳು ನಂಬುತ್ತಾರೆ. ಇಲ್ಲವಾದರೆ ಅವರು ಇನ್ನೊಂದು ಧರ್ಮಕ್ಕಾಗಿ ಹುಡುಕುತ್ತಿದ್ದರು.​—⁠ಮತ್ತಾಯ 7:14.

ತಮಗೆ ಮಾತ್ರ ರಕ್ಷಣೆಯಾಗುವುದೆಂದು ಅವರು ನಂಬುತ್ತಾರೋ?

ಇಲ್ಲ. ಶತಮಾನಗಳ ಹಿಂದೆ ಜೀವಿಸಿದ್ದು, ಯೆಹೋವನ ಸಾಕ್ಷಿಗಳಾಗಿರದಿದ್ದಂಥ ಕೋಟಿಗಟ್ಟಲೆ ಜನರೂ ಪುನರುತ್ಥಾನದಲ್ಲಿ ಹಿಂದೆ ಬರುವರು ಮತ್ತು ಜೀವವನ್ನು ಪಡೆಯುವ ಸಂದರ್ಭವು ಅವರಿಗೆ ದೊರಕುವುದು. ಈಗ ಜೀವಿಸುತ್ತಿರುವ ಅನೇಕರು “ಮಹಾ ಸಂಕಟಕ್ಕೆ” ಮುಂಚೆ, ಸತ್ಯ ಮತ್ತು ನೀತಿಗಾಗಿ ದೃಢವಾದ ನಿಲುವನ್ನು ತೆಗೆದುಕೊಳ್ಳಬಹುದು ಮತ್ತು ಅವರು ರಕ್ಷಣೆಯನ್ನು ಪಡೆಯುವರು. ಅಷ್ಟುಮಾತ್ರವಲ್ಲದೆ, ನಾವು ಒಬ್ಬರಿಗೊಬ್ಬರು ತೀರ್ಪುಮಾಡಬಾರದೆಂದು ಯೇಸು ಹೇಳಿದ್ದಾನೆ. ನಾವು ಹೊರಗಣ ತೋರಿಕೆಯನ್ನು ನೋಡುತ್ತೇವೆ; ದೇವರಾದರೋ ಹೃದಯವನ್ನು ನೋಡುತ್ತಾನೆ. ಆತನು ನಿಷ್ಕೃಷ್ಟವಾಗಿ ಪರೀಕ್ಷಿಸಿ ಕರುಣೆಯಿಂದ ನ್ಯಾಯತೀರ್ಪು ನೀಡುತ್ತಾನೆ. ನ್ಯಾಯತೀರ್ಪು ನೀಡುವುದನ್ನು ಆತನು ಕ್ರಿಸ್ತನ ಹಸ್ತಕ್ಕೆ ಒಪ್ಪಿಸಿದ್ದಾನೆ, ನಮಗಲ್ಲ.​—⁠ಮತ್ತಾಯ 7:​1-5; 24:​20, 21; 25:⁠31.

ಯೆಹೋವನ ಸಾಕ್ಷಿಗಳ ಕೂಟಗಳನ್ನು ಹಾಜರಾಗುವ ಜನರಿಂದ ಯಾವ ಆರ್ಥಿಕ ಕಾಣಿಕೆಗಳನ್ನು ಅಪೇಕ್ಷಿಸಲಾಗುತ್ತದೆ?

ಹಣವನ್ನು ಕಾಣಿಕೆಯಾಗಿ ಕೊಡುವ ವಿಷಯದಲ್ಲಿ ಅಪೊಸ್ತಲ ಪೌಲನಂದದ್ದು: “ಪ್ರತಿಯೊಬ್ಬನು ತನ್ನ ತನ್ನ ಹೃದಯದಲ್ಲಿ ನಿರ್ಣಯಿಸಿಕೊಂಡ ಪ್ರಕಾರ ಕೊಡಲಿ; ದುಃಖದಿಂದಾಗಲಿ ಬಲಾತ್ಕಾರದಿಂದಾಗಲಿ ಯಾರೂ ಕೊಡಬಾರದು; ಯಾಕಂದರೆ ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು.” (2 ಕೊರಿಂಥ 9:⁠7) ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹದಲ್ಲಿ ಮತ್ತು ಅಧಿವೇಶನ ಸಭಾಂಗಣಗಳಲ್ಲಿ, ಹಣವೆತ್ತುವ ಪದ್ಧತಿಯು ಇಲ್ಲವೇ ಇಲ್ಲ. ಯಾರು ಕಾಣಿಕೆ ನೀಡಲು ಬಯಸುತ್ತಾರೋ ಅವರ ಅನುಕೂಲಕ್ಕಾಗಿ ಕಾಣಿಕೆ ಪೆಟ್ಟಿಗೆಗಳು ಇಡಲ್ಪಡುತ್ತವೆ. ಯಾರು ಎಷ್ಟು ಕೊಡುತ್ತಾರೆ ಮತ್ತು ಕೊಡುತ್ತಾರೋ ಇಲ್ಲವೋ ಎಂಬುದು ಯಾರಿಗೂ ತಿಳಿಯದು. ಕೆಲವರು ಇತರರಿಗಿಂತ ಹೆಚ್ಚು ಕೊಡಶಕ್ತರು; ಇತರರು ಏನೂ ಕೊಡಲು ಶಕ್ತರಾಗಿರಲಿಕ್ಕಿಲ್ಲ. ಯೆರೂಸಲೇಮಿನ ಆಲಯದ ಕಾಣಿಕೆ ಪೆಟ್ಟಿಗೆಯ ಕುರಿತು ಮತ್ತು ಅದರಲ್ಲಿ ಕಾಣಿಕೆ ಹಾಕುವವರ ಕುರಿತು ಯೇಸು ಮಾತಾಡಿದಾಗ, ಅವನು ಈ ಯೋಗ್ಯವಾದ ದೃಷ್ಟಿಕೋನವನ್ನು ತೋರಿಸಿದನು: ಕಾಣಿಕೆ ಕೊಡಲು ಒಬ್ಬನಿಗಿರುವ ಸಾಮರ್ಥ್ಯ ಮತ್ತು ಕೊಡಲ್ಪಡುವ ಮನೋಭಾವವು ಪರಿಗಣಿಸಲ್ಪಡುತ್ತದೆಯೇ ಹೊರತು ಅವನು ಹಾಕುವ ಹಣದ ಮೊತ್ತವಲ್ಲ.​—⁠ಲೂಕ 21:​1-4.

ನಾನು ಒಬ್ಬ ಯೆಹೋವನ ಸಾಕ್ಷಿಯಾಗುವಲ್ಲಿ, ನಾನೂ ಅವರಂತೆ ಸಾರಬೇಕೆಂದು ನನ್ನಿಂದ ನಿರೀಕ್ಷಿಸಲಾಗುವುದೊ?

ಒಬ್ಬನು ಕ್ರಿಸ್ತನ ರಾಜ್ಯದ ಕೆಳಗೆ ವಾಗ್ದಾನಿಸಲ್ಪಟ್ಟ ಭೂಪರದೈಸಿನ ಕುರಿತಾದ ಜ್ಞಾನದಿಂದ ತುಂಬಿದವನಾದಾಗ, ಅವನು ಇದನ್ನು ಇತರರೊಂದಿಗೆ ಹಂಚಿಕೊಳ್ಳಲು ಬಯಸುತ್ತಾನೆ. ನೀವು ಸಹ ಬಯಸುವಿರಿ. ಏಕೆಂದರೆ ಅದು ಸುವಾರ್ತೆಯಾಗಿದೆ!​—⁠ಅ. ಕೃತ್ಯಗಳು 5:​41, 42.

ನೀವು ಯೇಸು ಕ್ರಿಸ್ತನ ಶಿಷ್ಯರಾಗಿದ್ದೀರಿ ಎಂದು ತೋರಿಸುವ ಒಂದು ಮಹತ್ವಪೂರ್ಣ ವಿಧಾನವು ಇದನ್ನು ಮಾಡುವುದೇ ಆಗಿದೆ. ಬೈಬಲಿನಲ್ಲಿ ಯೇಸುವನ್ನು “ನಂಬತಕ್ಕ ಸತ್ಯಸಾಕ್ಷಿ” ಎಂದು ಕರೆಯಲಾಗಿದೆ. ಅವನು ಭೂಮಿಯಲ್ಲಿದ್ದಾಗ, “ಪರಲೋಕ ರಾಜ್ಯವು ಸಮೀಪವಾಯಿತು” ಎಂದು ಸಾರುತ್ತಾ ಹೋದನು ಮತ್ತು ಅದನ್ನೇ ಮಾಡಲು ತನ್ನ ಶಿಷ್ಯರನ್ನೂ ಕಳುಹಿಸಿದನು. (ಪ್ರಕಟನೆ 3:14; ಮತ್ತಾಯ 4:17; 10:⁠7) ತರುವಾಯ ಯೇಸು ತನ್ನ ಶಿಷ್ಯರಿಗೆ ಆಜ್ಞಾಪಿಸಿದ್ದು: “ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; . . . ಅವರಿಗೆ ಉಪದೇಶ ಮಾಡಿರಿ.” ಅಂತ್ಯವು ಬರುವ ಮೊದಲು, “ಪರಲೋಕ ರಾಜ್ಯದ ಈ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರಲಾಗುವದು” ಎಂದೂ ಅವನು ಮುಂತಿಳಿಸಿದನು.​—⁠ಮತ್ತಾಯ 24:14; 28:​19, 20.

ಸುವಾರ್ತೆಯನ್ನು ಸಾರುವ ಅನೇಕ ವಿಧಾನಗಳು ಇವೆ. ಮಿತ್ರರು ಮತ್ತು ಪರಿಚಿತರೊಂದಿಗಿನ ಸಂಭಾಷಣೆಯು ಅನೇಕವೇಳೆ ಅದಕ್ಕಾಗಿ ದಾರಿತೆರೆಯುತ್ತದೆ. ಕೆಲವರು ಪತ್ರ ಬರೆಯುವ ಮೂಲಕ ಅಥವಾ ಟೆಲಿಫೋನನ್ನು ಉಪಯೋಗಿಸುವ ಮೂಲಕ ಅದನ್ನು ಮಾಡುತ್ತಾರೆ. ಇತರರು ಪರಿಚಯಸ್ಥರಿಗೆ ವಿಶೇಷವಾಗಿ ಆಸಕ್ತಿಕರವಾದ ಮಾಹಿತಿಯುಳ್ಳ ಸಾಹಿತ್ಯವನ್ನು ಅಂಚೆಯ ಮೂಲಕ ಕಳುಹಿಸುತ್ತಾರೆ. ಯಾರನ್ನೂ ಬಿಟ್ಟುಬಿಡದಿರುವ ಅಪೇಕ್ಷೆಯುಳ್ಳವರಾಗಿ, ಸಾಕ್ಷಿಗಳು ಮನೆಯಿಂದ ಮನೆಗೆ ಹೋಗಿ ಆ ಸಂದೇಶವನ್ನು ಸಾರುತ್ತಾರೆ.

ಬೈಬಲಿನಲ್ಲಿ ಈ ಹಾರ್ದಿಕ ಆಮಂತ್ರಣವಿದೆ: “ಆತ್ಮನೂ ಮದಲಗಿತ್ತಿಯೂ​—⁠ಬಾ ಅನ್ನುತ್ತಾರೆ. ಕೇಳುವವನು​—⁠ಬಾ ಅನ್ನಲಿ. ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ.” (ಪ್ರಕಟನೆ 22:⁠17) ಪರದೈಸ ಭೂಮಿಯ ಕುರಿತು ಮತ್ತು ಅದರ ಆಶೀರ್ವಾದಗಳ ಕುರಿತು ಇತರರಿಗೆ ತಿಳಿಸುವುದು ಮನಃಪೂರ್ವಕವಾಗಿ, ಅಂದರೆ ಈ ಸುವಾರ್ತೆಯನ್ನು ಇತರರೊಂದಿಗೆ ಹಂಚಿಕೊಳ್ಳುವ ಅಪೇಕ್ಷೆಯಿಂದ ಕೂಡಿದ ಹೃದಯದಿಂದ ಮಾಡಲ್ಪಡಬೇಕು.

ಯೆಹೋವನ ಸಾಕ್ಷಿಗಳ ಕುರಿತು ಮತ್ತು ಅವರ ನಂಬಿಕೆಗಳ ಕುರಿತು ನಿಮಗೆ ಬೇರೆ ಪ್ರಶ್ನೆಗಳೂ ಇವೆ ಎಂಬುದು ನಿಶ್ಚಯ. ಪ್ರಾಯಶಃ ಕೆಲವು ಪ್ರಶ್ನೆಗಳು ವಿವಾದಾತ್ಮಕವಾಗಿರಲೂ ಬಹುದು. ನಿಮ್ಮ ಪ್ರಶ್ನೆಗಳನ್ನು ನಾವು ಉತ್ತರಿಸಲು ಬಯಸುತ್ತೇವೆ. ಈ ಬ್ರೋಷರಿನಲ್ಲಿ ಸ್ಥಳವು ಸೀಮಿತವಾಗಿರುವುದರಿಂದ, ಅವುಗಳ ಕುರಿತು ಸ್ಥಳಿಕ ಸಾಕ್ಷಿಗಳನ್ನೇ ಕೇಳುವಂತೆ ನಾವು ನಿಮ್ಮನ್ನು ಆಮಂತ್ರಿಸುತ್ತೇವೆ. ಅವರ ರಾಜ್ಯ ಸಭಾಗೃಹದ ಕೂಟಗಳಲ್ಲಿ ಅಥವಾ ಅವರು ನಿಮ್ಮ ಮನೆಯಲ್ಲಿ ನಿಮ್ಮನ್ನು ಭೇಟಿಮಾಡುವಾಗ ನೀವು ಪ್ರಶ್ನೆಗಳನ್ನು ಕೇಳಬಹುದು. ಅಥವಾ ಕೆಳಗೆ ತಿಳಿಸಲ್ಪಟ್ಟ ತಕ್ಕದಾದ ವಿಳಾಸವನ್ನು ಉಪಯೋಗಿಸಿ, ಯೆಹೋವನ ಸಾಕ್ಷಿಗಳಿಗೆ ನೀವು ನಿಮ್ಮ ಪ್ರಶ್ನೆಗಳನ್ನು ಕಳುಹಿಸಬಹುದು.