ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 3

ಬೈಬಲ್‌ ಸತ್ಯ ಪುನಃ ಹೇಗೆ ಬೆಳಕಿಗೆ ಬಂತು?

ಬೈಬಲ್‌ ಸತ್ಯ ಪುನಃ ಹೇಗೆ ಬೆಳಕಿಗೆ ಬಂತು?

ಬೈಬಲ್‌ ವಿದ್ಯಾರ್ಥಿಗಳು, 1870ರ ದಶಕ

ಕಾವಲಿನಬುರುಜು ಪತ್ರಿಕೆಯ ಮೊದಲ ಪ್ರತಿ, 1879

ಕಾವಲಿನಬುರುಜು ಇಂದು

ಕ್ರಿಸ್ತನ ಮರಣದ ನಂತರ ಕ್ರೈಸ್ತರ ಮಧ್ಯೆ ಸುಳ್ಳು ಬೋಧಕರು ಹುಟ್ಟಿಕೊಂಡು ಬೈಬಲ್‌ ಸತ್ಯಗಳನ್ನು ತಿರುಚುವರು ಎಂದು ಬೈಬಲ್‌ ಮುಂಚೆಯೇ ತಿಳಿಸಿತ್ತು. (ಅಪೊಸ್ತಲರ ಕಾರ್ಯಗಳು 20:29, 30) ಹಾಗೆಯೇ ಆಯಿತು. ಸುಳ್ಳು ಬೋಧಕರು ಯೇಸುವಿನ ಬೋಧನೆಯೊಂದಿಗೆ ಸುಳ್ಳು ಧರ್ಮದ ತತ್ವಗಳನ್ನು ಮಿಶ್ರಗೊಳಿಸಿದರು. ಹೀಗೆ ನಕಲಿ ಕ್ರೈಸ್ತ ಧರ್ಮ ಹುಟ್ಟಿಕೊಂಡಿತು. (2 ತಿಮೊಥೆಯ 4:3, 4) ಹಾಗಿರುವಾಗ ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ ಎಂದು ನಮಗೆ ಗೊತ್ತಾಗಿದ್ದು ಹೇಗೆ?

ತಕ್ಕ ಸಮಯದಲ್ಲಿ ಯೆಹೋವನು ಸತ್ಯವನ್ನು ಬೆಳಕಿಗೆ ತಂದನು. ಅಂತ್ಯಕಾಲದಲ್ಲಿ “ತಿಳುವಳಿಕೆಯು ಹೆಚ್ಚುವುದು” ಎಂದು ಯೆಹೋವನು ಬಹಳ ಸಮಯದ ಹಿಂದೆಯೇ ತಿಳಿಸಿದ್ದನು. (ದಾನಿಯೇಲ 12:4) ಇಸವಿ 1870⁠ರ ಸಮಯದಷ್ಟಕ್ಕೆ ಅದು ನಿಜವಾಗತೊಡಗಿತು. ಚರ್ಚಿನ ಅನೇಕ ಬೋಧನೆಗಳು ಬೈಬಲಿನ ಅನುಸಾರ ಇಲ್ಲವೆಂಬ ವಿಷಯವನ್ನು ಸತ್ಯಕ್ಕಾಗಿ ಹುಡುಕುತ್ತಿದ್ದ ಜನರ ಚಿಕ್ಕ ಗುಂಪೊಂದು ಮನಗಂಡಿತು. ಹಾಗಾಗಿ, ಸತ್ಯಾಂಶಗಳನ್ನು ಬೈಬಲಿನಲ್ಲಿಯೇ ಹುಡುಕಿ ತಿಳಿದುಕೊಳ್ಳುವ ಪ್ರಯತ್ನಕ್ಕೆ ಕೈಹಾಕಿದರು. ಅವರ ಪ್ರಯತ್ನವನ್ನು ಯೆಹೋವ ದೇವರು ಆಶೀರ್ವದಿಸಿ ಬೈಬಲ್‌ ವಚನಗಳ ತಿಳುವಳಿಕೆಯನ್ನು ಕೊಟ್ಟನು.

ಸತ್ಯಕ್ಕಾಗಿ ಹುಡುಕುತ್ತಿದ್ದ ಗುಂಪು ಬೈಬಲನ್ನು ಆಳವಾಗಿ ಪರಿಶೀಲಿಸಿತು. ಬೈಬಲ್‌ ವಿದ್ಯಾರ್ಥಿಗಳು ಎಂದು ಕರೆಯಲಾಗುತ್ತಿದ್ದ ಆ ಗುಂಪು ಬಳಸಿದ ವಿಧಾನವನ್ನೇ ನಾವಿಂದು ಬಳಸುತ್ತೇವೆ. ಅವರು ಒಂದು ವಿಷಯವನ್ನು ಆರಿಸಿ ಬೈಬಲ್‌ ಆ ಕುರಿತು ಏನು ಹೇಳುತ್ತದೆಂದು ಚರ್ಚಿಸುತ್ತಿದ್ದರು. ಬೈಬಲಿನಲ್ಲಿ ಯಾವುದಾದರೂ ವಿಷಯ ಅರ್ಥವಾಗದಿದ್ದಾಗ ಅದಕ್ಕೆ ಸಂಬಂಧಿಸಿದ ಬೇರೆ ವಚನಕ್ಕಾಗಿ ಹುಡುಕುತ್ತಿದ್ದರು. ಸಂಬಂಧಪಟ್ಟ ಎಲ್ಲಾ ವಚನಗಳು ಒಂದೇ ಅರ್ಥವನ್ನು ಕೊಡುತ್ತಿದೆ ಎಂದು ಮನಗಂಡಾಗ ತಾವು ಕಂಡುಕೊಂಡ ಆ ವಿಷಯವನ್ನು ಬರೆದಿಡುತ್ತಿದ್ದರು. ಹೀಗೆ ಬೈಬಲಿನಿಂದಲೇ ಬೈಬಲ್‌ ವಚನಗಳ ಅರ್ಥವನ್ನು ಹುಡುಕಿ ತಿಳಿದುಕೊಳ್ಳುತ್ತಿದ್ದರು. ಈ ವಿಧಾನದಿಂದ ದೇವರ ಹೆಸರು, ಆತನ ರಾಜ್ಯ, ಭೂಮಿ ಮತ್ತು ಮನುಷ್ಯರನ್ನು ಆತನು ಸೃಷ್ಟಿಸಿದ ಉದ್ದೇಶ, ಸತ್ತವರ ಸ್ಥಿತಿ ಹಾಗೂ ಪುನರುತ್ಥಾನದ ಕುರಿತ ಸತ್ಯಾಂಶವನ್ನು ಕಂಡುಕೊಂಡರು. ಈ ಸತ್ಯ ಅವರನ್ನು ಸುಳ್ಳು ಆಚಾರ ವಿಚಾರಗಳಿಂದ ಬಿಡುಗಡೆಗೊಳಿಸಿತು.—ಯೋಹಾನ 8:31, 32.

ಆ ಸತ್ಯವನ್ನು ಎಲ್ಲ ಜನರಿಗೆ ತಿಳಿಸಬೇಕಾದ ಜರೂರಿಯನ್ನು ಇಸವಿ 1879⁠ರಷ್ಟಕ್ಕೆ ಬೈಬಲ್‌ ವಿದ್ಯಾರ್ಥಿಗಳು ಮನಗಂಡರು. ಹಾಗಾಗಿ ಅದೇ ವರ್ಷ ಅವರೊಂದು ಪತ್ರಿಕೆಯನ್ನು ಪ್ರಕಟಿಸಿದರು. ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು ಎಂಬ ಹೆಸರಿನಲ್ಲಿ ಅದು ಇಂದಿಗೂ ಸತತವಾಗಿ ಪ್ರಕಟಗೊಳ್ಳುತ್ತಿದೆ. ಬೈಬಲ್‌ ಸತ್ಯವನ್ನು ನಾವೀಗ 750ಕ್ಕೂ ಹೆಚ್ಚು ಭಾಷೆಗಳಲ್ಲಿ ಪ್ರಕಟಿಸುತ್ತಾ 240 ದೇಶಗಳಲ್ಲಿರುವ ಜನರೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ಬೈಬಲ್‌ ಸತ್ಯದ ತಿಳುವಳಿಕೆ ಇಷ್ಟು ಪ್ರಮಾಣದಲ್ಲಿ ಹಿಂದೆಂದೂ ಲಭ್ಯವಿರಲಿಲ್ಲ!

  • ಕ್ರಿಸ್ತನ ಮರಣದ ನಂತರ ಸುಳ್ಳು ಬೋಧಕರು ಬೈಬಲ್‌ ಸತ್ಯಗಳನ್ನು ಏನು ಮಾಡಿದರು?

  • ದೇವರ ವಾಕ್ಯದಲ್ಲಿರುವ ಸತ್ಯವನ್ನು ಹುಡುಕಿ ಕಂಡುಕೊಳ್ಳಲು ನಮ್ಮಿಂದ ಹೇಗೆ ಸಾಧ್ಯವಾಯಿತು?