ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 18

ವಿಪತ್ತಿನ ಸಮಯದಲ್ಲಿ ನಾವು ಹೇಗೆ ಸ್ಪಂದಿಸುತ್ತೇವೆ?

ವಿಪತ್ತಿನ ಸಮಯದಲ್ಲಿ ನಾವು ಹೇಗೆ ಸ್ಪಂದಿಸುತ್ತೇವೆ?

ಡೊಮಿನಿಕನ್‌ ಗಣರಾಜ್ಯ

ಜಪಾನ್‌

ಹೈಟಿ

ವಿಪತ್ತು ಎಲ್ಲೇ ಸಂಭವಿಸಲಿ ಯೆಹೋವನ ಸಾಕ್ಷಿಗಳು ತಕ್ಷಣ ಪರಿಹಾರ ಕಾರ್ಯದಲ್ಲಿ ತೊಡಗಿ ಸಂತ್ರಸ್ತ ಸೋದರ ಸೋದರಿಯರಿಗೆ ನೆರವು ನೀಡುತ್ತಾರೆ. ನಮ್ಮಲ್ಲಿ ಪರಸ್ಪರ ನಿಜವಾದ ಪ್ರೀತಿ ಇದೆ ಎನ್ನುವುದಕ್ಕೆ ಇದು ಪ್ರತ್ಯಕ್ಷ ಸಾಕ್ಷಿ. (ಯೋಹಾನ 13:34, 35; 1 ಯೋಹಾನ 3:17, 18) ವಿಪತ್ತಿನ ಸಮಯದಲ್ಲಿ ನಾವು ಪರಸ್ಪರ ಹೇಗೆ ನೆರವಾಗುತ್ತೇವೆ?

ಹಣಕಾಸಿನ ನೆರವು ನೀಡುತ್ತೇವೆ. ಒಂದನೇ ಶತಮಾನದಲ್ಲಿ ಯೂದಾಯ ಎಂಬಲ್ಲಿ ದೊಡ್ಡ ಕ್ಷಾಮ ಉಂಟಾದಾಗ ಅಂತಿಯೋಕ್ಯದಲ್ಲಿದ್ದ ಕ್ರೈಸ್ತರು ತಮ್ಮ ಆ ಸಹೋದರರಿಗೆ ಹಣಕಾಸಿನ ನೆರವು ನೀಡಿದರು. (ಅಪೊಸ್ತಲರ ಕಾರ್ಯಗಳು 11:27-30) ಅದೇ ರೀತಿ ನಮ್ಮ ಸಹೋದರರು ಎಲ್ಲೇ ಇರಲಿ ವಿಪತ್ತಿಗೆ ಗುರಿಯಾಗಿದ್ದಾರೆ ಎಂದು ಕೇಳಿದೊಡನೆ ನಾವು ನಮ್ಮ ಸಭೆಯ ಮುಖಾಂತರ ಪರಿಹಾರ ಸಾಮಗ್ರಿ ಕಳುಹಿಸಿ ಅವರ ಕೊರತೆ ನೀಗಿಸಲು ನೆರವಾಗುತ್ತೇವೆ.—2 ಕೊರಿಂಥ 8:13-15.

ಉಪಯುಕ್ತ ನೆರವು ನೀಡುತ್ತೇವೆ. ವಿಪತ್ತು ಸಂಭವಿಸುವಲ್ಲಿ ಹಿರಿಯರು ಕೂಡಲೇ ಆ ಪ್ರದೇಶದಲ್ಲಿರುವ ಸೋದರ ಸೋದರಿಯರೆಲ್ಲ ಸುರಕ್ಷಿತರಾಗಿದ್ದಾರಾ ಎಂದು ಖಚಿತಪಡಿಸಿಕೊಳ್ಳುತ್ತಾರೆ. ವಿಪತ್ತು ಪರಿಹಾರ ಕಮಿಟಿಯು ಆಹಾರ, ಕುಡಿಯುವ ನೀರು, ಬಟ್ಟೆಬರೆ, ಸೂರು ಹಾಗೂ ವೈದ್ಯಕೀಯ ನೆರವು ಒದಗಿಸಲು ಏರ್ಪಾಡು ಮಾಡುತ್ತದೆ. ಯೆಹೋವನ ಸಾಕ್ಷಿಗಳು ಸ್ವಂತ ವೆಚ್ಚದಲ್ಲಿ ಆ ಪ್ರದೇಶಗಳಿಗೆ ಹೋಗಿ ಪರಿಹಾರ ಕಾರ್ಯದಲ್ಲಿ ತೊಡಗುತ್ತಾರೆ. ಮನೆಗಳನ್ನು ರಾಜ್ಯ ಸಭಾಗೃಹಗಳನ್ನು ದುರಸ್ತಿ ಮಾಡುತ್ತಾರೆ. ಒಗ್ಗಟ್ಟು ಸಹಕಾರದಿಂದ ಕೆಲಸ ಮಾಡುವುದು ಹೇಗೆಂದು ನಮ್ಮ ಸಂಘಟನೆ ನಮಗೆ ಕಲಿಸಿರುವುದರಿಂದ ವಿಪತ್ತಿನ ಸಮಯದಲ್ಲಿ ತಕ್ಷಣವೇ ಪರಿಹಾರ ಕಾರ್ಯಕ್ಕಿಳಿಯಲು ಸುಲಭ. “ನಂಬಿಕೆಯಲ್ಲಿ ನಮ್ಮ ಸಂಬಂಧಿಕರಂತಿರುವ” ಸಹೋದರರಿಗೆ ಮಾತ್ರವಲ್ಲ ನಾವು ಬೇರೆ ಧರ್ಮದವರಿಗೂ ಸಹಾಯಹಸ್ತ ಚಾಚುತ್ತೇವೆ.—ಗಲಾತ್ಯ 6:10.

ಆಧ್ಯಾತ್ಮ ಹಾಗೂ ಭಾವನಾತ್ಮ ನೆರವು ನೀಡುತ್ತೇವೆ. ವಿಪತ್ತಿಗೆ ತುತ್ತಾಗಿರುವವರ ಮನವು ಸಾಂತ್ವನ ನೆಮ್ಮದಿಗೆ ಹಾತೊರೆಯುತ್ತಿರುತ್ತದೆ. ಯೆಹೋವ ದೇವರು “ಸಕಲ ಸಾಂತ್ವನ” ಒದಗಿಸುವ ದೇವರಾಗಿದ್ದಾನೆ. ನಮಗೆ ಬೇಕಾದ ಮನೋಬಲವನ್ನು ಆತನು ಒದಗಿಸುತ್ತಾನೆ. (2 ಕೊರಿಂಥ 1:3, 4) ಹಾಗಾಗಿ ಸಂತ್ರಸ್ತರಿಗೆ ನಾವು ಬೈಬಲಿನಿಂದ ದೇವರ ಸಾಂತ್ವನದ ನುಡಿಗಳನ್ನು ತಿಳಿಸುತ್ತೇವೆ. ಕಷ್ಟನೋವನ್ನು ಉಂಟುಮಾಡುವ ಎಲ್ಲಾ ವಿಷಯಗಳನ್ನು ದೇವರ ರಾಜ್ಯ ಶೀಘ್ರದಲ್ಲೇ ಇಲ್ಲವಾಗಿಸುತ್ತದೆ ಎಂಬ ಸತ್ಯವನ್ನು ತಿಳಿಸುತ್ತೇವೆ.—ಪ್ರಕಟನೆ 21:4.

  • ತಕ್ಷಣವೇ ಪರಿಹಾರ ಕಾರ್ಯಕ್ಕಿಳಿಯಲು ಯೆಹೋವನ ಸಾಕ್ಷಿಗಳಿಂದ ಹೇಗೆ ಸಾಧ್ಯವಾಗಿದೆ?

  • ಸಂತ್ರಸ್ತರಿಗೆ ಹೇಗೆ ಸಾಂತ್ವನ ನೀಡುತ್ತೇವೆ?