ಮಾಹಿತಿ ಇರುವಲ್ಲಿ ಹೋಗಲು

ಯೇಸು ಕ್ರಿಸ್ತ—ಅವನು ಯಾರು?

ಯೇಸು ಕ್ರಿಸ್ತ—ಅವನು ಯಾರು?

ಯೇಸು ಕ್ರಿಸ್ತ—ಅವನು ಯಾರು?

“ಕ್ರೈಸ್ತರಲ್ಲದ ಅನೇಕರು ಸಹ ಅವನು ಒಬ್ಬ ಮಹಾನ್‌ ಹಾಗೂ ಬುದ್ಧಿವಂತ ಬೋಧಕನಾಗಿದ್ದನು ಎಂದು ನಂಬುತ್ತಾರೆ. ಜೀವಿಸಿರುವವರಲ್ಲೇ ಅತ್ಯಂತ ಪ್ರಭಾವಶಾಲಿ ಜನರಲ್ಲಿ ಅವನು ಒಬ್ಬನಾಗಿದ್ದನು ಎಂಬುದಂತೂ ಖಂಡಿತ.” (ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲಪೀಡೀಯ) ‘ಯಾರ’ ಕುರಿತು ನಾವು ಮಾತಾಡುತ್ತಿದ್ದೇವೆ? ಕ್ರೈಸೈಧರ್ಮದ ಸ್ಥಾಪಕನಾಗಿರುವ ಯೇಸು ಕ್ರಿಸ್ತನ ಕುರಿತಾಗಿಯೇ. ಅವನು ಯಾರೆಂಬುದು ನಿಮಗೆ ತಿಳಿದಿದೆಯೋ? ಅವನು ನಿಮ್ಮ ಜೀವಿತದ ಮೇಲೆ ಯಾವ ರೀತಿಯಲ್ಲಾದರೂ ಪ್ರಭಾವ ಬೀರಬಲ್ಲನೋ?

ಬೈಬಲಿನಲ್ಲಿ, ಸುವಾರ್ತೆಗಳು ಎಂದು ಕರೆಯಲ್ಪಡುವ ನಾಲ್ಕು ಐತಿಹಾಸಿಕ ಪುಸ್ತಕಗಳಲ್ಲಿ ಯೇಸುವಿನ ಶುಶ್ರೂಷೆಯ ಕುರಿತಾದ ಘಟನೆಗಳು ದಾಖಲಿಸಲ್ಪಟ್ಟಿವೆ. ಈ ವೃತ್ತಾಂತಗಳು ಎಷ್ಟು ಯಥಾರ್ಥವಾದವುಗಳಾಗಿವೆ? ಇವುಗಳನ್ನು ಆಳವಾಗಿ ಪರಿಶೀಲಿಸಿದ ಬಳಿಕ ಪ್ರಸಿದ್ಧ ಇತಿಹಾಸಕಾರ ವಿಲ್‌ ಡ್ಯೂರಾಂಟ್‌ ಬರೆದುದು: “ಒಂದು ಸಂತತಿಯಲ್ಲಿ ಬದುಕಿದ ಕೆಲವೇ ಮಂದಿ ಸಾಧಾರಣ ಜನರು ಅಷ್ಟೊಂದು ಪ್ರಭಾವಶಾಲಿಯೂ ಆಕರ್ಷಕವೂ ಆದ ವ್ಯಕ್ತಿತ್ವವನ್ನು, ಮಾನವ ಸಹೋದರತ್ವದ ಅಷ್ಟೊಂದು ಉನ್ನತವಾದ ನೀತಿತತ್ತ್ವವನ್ನು, ಅಷ್ಟೊಂದು ಪ್ರೇರಕವಾದ ದರ್ಶನವನ್ನು ಕಲ್ಪಿಸಿಕೊಂಡರು ಎಂದು ಹೇಳುವುದು, ಸುವಾರ್ತೆಗಳಲ್ಲಿ ದಾಖಲಿಸಲ್ಪಟ್ಟಿರುವ ಯಾವುದೇ ಅದ್ಭುತಕ್ಕಿಂತಲೂ ಎಷ್ಟೋ ಹೆಚ್ಚು ಅವಿಶ್ವಸನೀಯವಾಗಿರುವುದು.”

ಆದರೂ, ಪೂರ್ವ ದೇಶಗಳಲ್ಲೂ ಬೇರೆ ಕಡೆಗಳಲ್ಲೂ ಇರುವ ಲಕ್ಷಾಂತರ ಜನರಿಗೆ ಯೇಸು ಕ್ರಿಸ್ತನು ಅಪರಿಚಿತನಾಗಿದ್ದಾನೆ. ಅವನು ಅಸ್ತಿತ್ವದಲ್ಲಿದ್ದನು ಎಂದು ಅವರು ನಂಬಬಹುದಾದರೂ, ತಮ್ಮ ಜೀವಿತಗಳ ಮೇಲೆ ಅವನು ಯಾವುದೇ ಪ್ರಭಾವವನ್ನು ಬೀರಬಹುದು ಎಂಬುದರ ಬಗ್ಗೆ ಅವರು ಆಲೋಚಿಸುವುದಿಲ್ಲ. ಯೇಸುವಿನ ಹಿಂಬಾಲಕರೆಂದು ಹೇಳಿಕೊಳ್ಳುವವರು ಮಾಡಿರುವ ಕೃತ್ಯಗಳ ಕಾರಣದಿಂದಾಗಿ, ಇತರರು ಅವನು ತಮ್ಮ ಪರಿಗಣನೆಗೆ ಅನರ್ಹನಾದ ವ್ಯಕ್ತಿಯೆಂದು ನೆನಸಿ ಅವನನ್ನು ಅಲ್ಲಗಳೆಯುತ್ತಾರೆ. ಜಪಾನಿನಲ್ಲಿ ಕೆಲವರು ಹೀಗೆ ಹೇಳಬಹುದು: ‘ಜಪಾನಿನ ಬೇರೆಲ್ಲಾ ನಗರಗಳಿಗಿಂತಲೂ ಅತಿ ಹೆಚ್ಚು ಕ್ರೈಸ್ತರಿದ್ದಂತಹ ನಗರವಾದ ನಾಗಸಾಕಿಯ ಮೇಲೇ ಅವರು ಅಣು ಬಾಂಬನ್ನು ಎಸೆದರು.’

ಆದರೂ, ರೋಗಿಯು ವೈದ್ಯನೊಬ್ಬನು ಸೂಚಿಸಿದ ಸಲಹೆಗಳಿಗೆ ಅನುಸಾರವಾಗಿ ನಡೆಯಲು ತಪ್ಪಿಹೋಗುವಲ್ಲಿ, ಆ ರೋಗಿಯ ಅಸ್ವಸ್ಥತೆಗಾಗಿ ನೀವು ವೈದ್ಯನನ್ನು ದೂಷಿಸುವಿರೋ? ಇಲ್ಲ ಎಂಬುದು ಸುಸ್ಪಷ್ಟ. ತಮ್ಮ ದೈನಂದಿನ ಸಮಸ್ಯೆಗಳನ್ನು ಜಯಿಸಲಿಕ್ಕಾಗಿ ಯೇಸುವಿನ ಲಿಖಿತ ಸಲಹೆಗಳನ್ನು ದೀರ್ಘಸಮಯದಿಂದಲೂ ಕ್ರೈಸ್ತಪ್ರಪಂಚದ ಜನರು ಅಲಕ್ಷಿಸಿದ್ದಾರೆ. ಆದುದರಿಂದ, ಯಾರು ಯೇಸುವಿನ ಬೋಧನೆಗಳನ್ನು ಅನುಸರಿಸದೆ ಕೇವಲ ಕ್ರೈಸ್ತರೆಂದು ಹೇಳಿಕೊಳ್ಳುತ್ತಾರೋ ಅವರ ಕಾರಣದಿಂದಾಗಿ ಯೇಸುವನ್ನು ನಿರಾಕರಿಸುವುದಕ್ಕೆ ಬದಲಾಗಿ, ಸ್ವತಃ ನೀವೇ ಅವನ ಕುರಿತು ಏಕೆ ತಿಳಿದುಕೊಳ್ಳಬಾರದು? ಬೈಬಲನ್ನು ಪರಿಶೀಲಿಸಿ ನೋಡಿರಿ ಮತ್ತು ಯೇಸು ನಿಜವಾಗಿಯೂ ಯಾರಾಗಿದ್ದಾನೆ ಹಾಗೂ ನಿಮ್ಮ ಜೀವನವನ್ನೂ ಅವನು ಹೇಗೆ ಬದಲಾಯಿಸಬಲ್ಲನು ಎಂಬುದನ್ನು ನೋಡಿರಿ.

ಪ್ರೀತಿ​—⁠ಅವನು ಕೊಟ್ಟ ಸಲಹೆ

ಯೇಸು ಕ್ರಿಸ್ತನು ಒಬ್ಬ ಮಹಾ ಬೋಧಕನಾಗಿದ್ದು, ಸುಮಾರು 2,000 ವರ್ಷಗಳ ಹಿಂದೆ ಪ್ಯಾಲೆಸ್ಟೀನ್‌ನಲ್ಲಿ ವಾಸಿಸುತ್ತಿದ್ದನು. ಅವನ ಬಾಲ್ಯಾವಸ್ಥೆಯ ಕುರಿತು ಹೆಚ್ಚು ವಿವರಗಳು ತಿಳಿದಿಲ್ಲ. (ಮತ್ತಾಯ, 1 ಮತ್ತು 2ನೆಯ ಅಧ್ಯಾಯಗಳು; ಲೂಕ, 1 ಮತ್ತು 2ನೆಯ ಅಧ್ಯಾಯಗಳು) ಯೇಸು 30 ವರ್ಷ ಪ್ರಾಯದವನಾದಾಗ, ಅವನು “ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವದಕ್ಕೋಸ್ಕರ” ಶುಶ್ರೂಷೆಯನ್ನು ಆರಂಭಿಸಿದನು. (ಯೋಹಾನ 18:37; ಲೂಕ 3:21-23) ಯೇಸುವಿನ ಜೀವನದ ಕುರಿತು ದಾಖಲಿಸಿದ ನಾಲ್ಕು ಐತಿಹಾಸಿಕ ವರದಿಗಾರರು, ಅವನ ಸಾರ್ವಜನಿಕ ಶುಶ್ರೂಷೆಯ ಮೇಲೆ ಅಂದರೆ ಅವನು ಭೂಮಿಯಲ್ಲಿ ತಾತ್ಕಾಲಿಕವಾಗಿ ತಂಗಿದ್ದರ ಕೊನೆಯ ಮೂರೂವರೆ ವರ್ಷಗಳ ಮೇಲೆ ಗಮನವನ್ನು ಕೇಂದ್ರೀಕರಿಸಿದರು.

ತನ್ನ ಶುಶ್ರೂಷೆಯ ಸಮಯದಲ್ಲಿ ಯೇಸು, ತನ್ನ ಶಿಷ್ಯರಿಗೆ ಅವರು ಜೀವಿತಗಳಲ್ಲಿ ಎದುರಿಸುವ ಬೇರೆ ಬೇರೆ ಸಮಸ್ಯೆಗಳೊಂದಿಗೆ ವ್ಯವಹರಿಸಲಿಕ್ಕಾಗಿರುವ ಕೀಲಿ ಕೈಯನ್ನು ನೀಡಿದನು. ಆ ಕೀಲಿ ಕೈ ಏನಾಗಿತ್ತು? ಅದು ಪ್ರೀತಿಯೇ ಆಗಿತ್ತು. ಪರ್ವತ ಪ್ರಸಂಗ ಎಂದು ಕರೆಯಲ್ಪಟ್ಟಿದ್ದು, ಇತಿಹಾಸದಲ್ಲೇ ಅತ್ಯಂತ ಪ್ರಸಿದ್ಧವಾಗಿರುವ ಪ್ರಸಂಗದಲ್ಲಿ ಯೇಸು, ಜೊತೆ ಮಾನವರಿಗೆ ಪ್ರೀತಿಯನ್ನು ತೋರಿಸುವ ವಿಧವನ್ನು ತನ್ನ ಶಿಷ್ಯರಿಗೆ ಕಲಿಸಿದನು. ಅವನು ಹೇಳಿದ್ದು: “ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.” (ಮತ್ತಾಯ 7:12) ಈ ಮೂಲತತ್ತ್ವವನ್ನು ಸುವರ್ಣ ನಿಯಮ ಎಂದು ಕರೆಯಲಾಗುತ್ತದೆ. ಇಲ್ಲಿ ಯೇಸು ಸೂಚಿಸಿರುವ ‘ಜನರಲ್ಲಿ’ ಒಬ್ಬನ ವೈರಿಗಳು ಸಹ ಒಳಗೂಡಿದ್ದಾರೆ. ಅದೇ ಪ್ರಸಂಗದಲ್ಲಿ ಯೇಸು ಹೇಳಿದ್ದು: “ನಿಮ್ಮ ವೈರಿಗಳನ್ನು ಪ್ರೀತಿಸಿರಿ; ನಿಮ್ಮನ್ನು ಹಿಂಸೆ ಪಡಿಸುವವರಿಗೋಸ್ಕರ ದೇವರನ್ನು ಪ್ರಾರ್ಥಿಸಿರಿ.” (ಮತ್ತಾಯ 5:44) ಅಂಥ ಪ್ರೀತಿಯು, ನಾವು ಇಂದು ಎದುರಿಸುತ್ತಿರುವಂಥ ಸಮಸ್ಯೆಗಳಲ್ಲಿ ಹೆಚ್ಚಿನವುಗಳನ್ನು ಬಗೆಹರಿಸಲಾರದೋ? ಹಿಂದೂ ನಾಯಕರಾಗಿದ್ದ ಮೋಹನ್‌ದಾಸ್‌ ಗಾಂಧಿಯವರಿಗೂ ಹೀಗನಿಸಿತು. ಅವರು ಒಮ್ಮೆ ಹೀಗೆ ಹೇಳಿದರಂತೆ: “ಈ ಪರ್ವತ ಪ್ರಸಂಗದಲ್ಲಿ ಕ್ರಿಸ್ತನು ಕೊಟ್ಟಂತಹ ಬೋಧನೆಗಳಲ್ಲಿ [ನಾವು] ಒಟ್ಟುಗೂಡುವುದಾದರೆ, ನಾವು . . . ಇಡಿಯ ಜಗತ್ತಿನ ಸಮಸ್ಯೆಗಳನ್ನು ಬಗೆಹರಿಸಿರುತ್ತಿದ್ದೆವು.” ಪ್ರೀತಿಯ ಕುರಿತಾದ ಯೇಸುವಿನ ಬೋಧನೆಗಳನ್ನು ಅನ್ವಯಿಸುವಲ್ಲಿ, ಅವು ಮಾನವಕುಲದ ಕೆಟ್ಟತನವನ್ನು ಸರಿಪಡಿಸಬಲ್ಲವು.

ಅವನ ಕ್ರಿಯಾತ್ಮಕ ಪ್ರೀತಿ

ಯೇಸು ಏನನ್ನು ಬೋಧಿಸಿದನೋ ಅದಕ್ಕನುಸಾರ ಜೀವಿಸಿದನು. ತನ್ನ ಸ್ವಂತ ಅಭಿರುಚಿಗಳಿಗಿಂತಲೂ ಹೆಚ್ಚಾಗಿ ಅವನು ಇತರರ ಅಭಿರುಚಿಗಳಿಗೆ ಪ್ರಮುಖತೆ ನೀಡಿದನು ಮತ್ತು ಪ್ರೀತಿಯನ್ನು ಕ್ರಿಯೆಯಲ್ಲಿ ತೋರ್ಪಡಿಸಿದನು. ಒಂದು ದಿನ, ಯೇಸು ಹಾಗೂ ಅವನ ಶಿಷ್ಯರು ಅನೇಕ ಜನರಿಗೆ ಉಪದೇಶಿಸುತ್ತಾ ಇದ್ದರು; ಅವರು ಊಟಮಾಡುವುದಕ್ಕೂ ಸಮಯವನ್ನು ತೆಗೆದುಕೊಂಡಿರಲಿಲ್ಲ. ತನ್ನ ಶಿಷ್ಯರು ‘ದಣುವಾರಿಸಿಕೊಳ್ಳುವ’ ಅಗತ್ಯವಿದೆ ಎಂಬುದನ್ನು ಯೇಸು ಮನಗಂಡನು ಮತ್ತು ಅವರೆಲ್ಲರೂ ಏಕಾಂತವಾಗಿರುವ ಸ್ಥಳಕ್ಕೆ ಹೊರಟರು. ಆದರೆ ಅವರು ಹೋಗುವುದನ್ನು ಕಂಡ ಬಹು ಜನರ ಒಂದು ಗುಂಪು ಅವರಿಗಿಂತ ಮುಂಚೆ ಹೋಗಿ, ಅವರ ಬರುವಿಕೆಗಾಗಿ ಕಾಯುತ್ತಾ ಇತ್ತು. ಒಂದುವೇಳೆ ನೀವು ಯೇಸುವಿನ ಸ್ಥಾನದಲ್ಲಿರುತ್ತಿದ್ದಲ್ಲಿ ಹೇಗೆ ಪ್ರತಿಕ್ರಿಯಿಸುತ್ತಿದ್ದಿರಿ? ಯೇಸುವಾದರೋ ಅವರ ಬಗ್ಗೆ “ಕನಿಕರಪಟ್ಟು,” ಅವರಿಗೆ ಅನೇಕ ವಿಷಯಗಳ ಕುರಿತು “ಉಪದೇಶ”ಮಾಡತೊಡಗಿದನು. (ಮಾರ್ಕ 6:30-34) ಕರುಣೆಯ ಈ ಬಲವಾದ ಭಾವನೆಯು, ಇತರರಿಗೆ ಸಹಾಯಮಾಡುವಂತೆ ಅವನನ್ನು ಪ್ರಚೋದಿಸಿತು.

ಇತರರ ಪ್ರಯೋಜನಕ್ಕಾಗಿ ಯೇಸು ಏನು ಮಾಡಿದನೋ ಅದು ಕೇವಲ ಆತ್ಮಿಕ ಬೋಧನೆಗೆ ಮಾತ್ರ ಸೀಮಿತವಾಗಿರಲಿಲ್ಲ. ಅವನು ಪ್ರಾಯೋಗಿಕ ಸಹಾಯವನ್ನು ಸಹ ನೀಡಿದನು. ಉದಾಹರಣೆಗೆ, ಒಂದು ದಿನ ಸಂಜೆಯ ತನಕ ತನಗೆ ಕಿವಿಗೊಡುತ್ತಾ ಕುಳಿತಿದ್ದ 5,000 ಗಂಡಸರಿಗೆ (ಇದರ ಜೊತೆಗೆ ಹೆಂಗಸರು ಹಾಗೂ ಮಕ್ಕಳಿಗೆ) ಉಣಬಡಿಸಿದನು. ಇನ್ನೊಂದು ಸಲ ಅವನು ಇನ್ನೂ 4,000 ಮಂದಿಗೆ ಆಹಾರವನ್ನು ನೀಡಿದನು. ಮೊದಲ ಬಾರಿ ಅವನು ಐದು ರೊಟ್ಟಿಗಳು ಹಾಗೂ ಎರಡು ಮೀನುಗಳನ್ನು ಮತ್ತು ಎರಡನೆಯ ಬಾರಿ ಏಳು ರೊಟ್ಟಿಗಳು ಹಾಗೂ ಕೆಲವು ಸಣ್ಣ ಮೀನುಗಳನ್ನು ಉಪಯೋಗಿಸಿದನು. (ಮತ್ತಾಯ 14:14-21; 15:32-38; ಮಾರ್ಕ 6:35-44; 8:1-9) ಅದ್ಭುತಕೃತ್ಯಗಳಲ್ಲವೇ? ಹೌದು, ಅವನು ಅದ್ಭುತಗಳನ್ನು ನಡೆಸುವಾತನಾಗಿದ್ದನು.

ಯೇಸು ಅಸ್ವಸ್ಥರನ್ನು ಸಹ ಗುಣಪಡಿಸಿದನು. ಅವನು ಕುರುಡರನ್ನು, ಕುಂಟರನ್ನು, ಕುಷ್ಠರೋಗಿಗಳನ್ನು ಮತ್ತು ಕಿವುಡರನ್ನು ವಾಸಿಮಾಡಿದನು. ಅಷ್ಟೇಕೆ, ಮೃತರನ್ನು ಸಹ ಪುನರುತ್ಥಾನಗೊಳಿಸಿದನು! (ಲೂಕ 7:22; ಯೋಹಾನ 11:30-45) ಒಮ್ಮೆ ಕುಷ್ಠರೋಗಿಯೊಬ್ಬನು ಅವನ ಬಳಿ ಬೇಡಿಕೊಂಡದ್ದು: “ನಿನಗೆ ಮನಸ್ಸಿದ್ದರೆ ನನ್ನನ್ನು ಶುದ್ಧಮಾಡಬಲ್ಲೆ.” ಇದಕ್ಕೆ ಯೇಸು ಹೇಗೆ ಪ್ರತಿಕ್ರಿಯಿಸಿದನು? ಅವನು “ಕೈನೀಡಿ ಅವನನ್ನು ಮುಟ್ಟಿ​—⁠ನನಗೆ ಮನಸ್ಸುಂಟು; ಶುದ್ಧವಾಗು ಅಂದನು.” (ಮಾರ್ಕ 1:40, 41) ಅವರಿಗೆ ಸಹಾಯಮಾಡುವ ಉತ್ಕಟ ಬಯಕೆಯಿಂದ ಯೇಸು ಪ್ರಚೋದಿತನಾದನು. ಅಂಥ ಅದ್ಭುತಕಾರ್ಯಗಳ ಮೂಲಕ ಅವನು ಸಂಕಟದಲ್ಲಿ ಬಿದ್ದಿರುವವರಿಗಾಗಿ ತನ್ನ ಪ್ರೀತಿಯನ್ನು ತೋರಿಸಿದನು.

ಇದನ್ನು ನಂಬಲು ತುಂಬ ಕಷ್ಟಕರವಾಗುತ್ತದೆ ಅಲ್ಲವೆ? ಆದರೆ ಯೇಸು ತನ್ನ ಅದ್ಭುತಕಾರ್ಯಗಳಲ್ಲಿ ಹೆಚ್ಚಿನವುಗಳನ್ನು ಸಾರ್ವಜನಿಕರ ಮುಂದೆ ಮಾಡಿದನು. ಪ್ರತಿಯೊಂದು ಸಂದರ್ಭದಲ್ಲಿ ಅವನ ತಪ್ಪನ್ನು ಹುಡುಕಲು ಪ್ರಯತ್ನಿಸಿದಂಥ ಅವನ ವಿರೋಧಿಗಳು ಸಹ, ಅವನು ಅದ್ಭುತಕಾರ್ಯಗಳನ್ನು ನಡೆಸಿದನು ಎಂಬ ವಾಸ್ತವಾಂಶವನ್ನು ಅಲ್ಲಗಳೆಯಲು ಅಸಮರ್ಥರಾದರು. (ಯೋಹಾನ 9:1-34) ಅಷ್ಟುಮಾತ್ರವಲ್ಲದೆ, ಅವನ ಅದ್ಭುತಕಾರ್ಯಗಳಿಗೆ ಒಂದು ಉದ್ದೇಶವಿತ್ತು. ಯೇಸು ದೇವರಿಂದಲೇ ಕಳುಹಿಸಲ್ಪಟ್ಟಿದ್ದನು ಎಂಬುದನ್ನು ಗುರುತಿಸುವಂತೆ ಅವು ಜನರಿಗೆ ಸಹಾಯಮಾಡಿದವು.​—⁠ಯೋಹಾನ 6:⁠14.

ಯೇಸುವಿನ ಬೋಧನೆಗಳು ಹಾಗೂ ಅವನ ಜೀವಿತದ ಕುರಿತಾದ ಸಂಕ್ಷಿಪ್ತ ಪರಿಗಣನೆಯು ಅವನನ್ನು ನಮ್ಮ ಪ್ರೀತಿಪಾತ್ರನನ್ನಾಗಿ ಮಾಡುತ್ತದೆ ಮತ್ತು ಅವನ ಪ್ರೀತಿಯನ್ನು ಅನುಕರಿಸಲು ಬಯಸುವಂತೆ ನಮ್ಮನ್ನು ಪ್ರಚೋದಿಸುತ್ತದೆ. ಆದರೂ, ಯೇಸು ನಿಮ್ಮ ಜೀವಿತವನ್ನು ಪ್ರಭಾವಿಸಸಾಧ್ಯವಿರುವುದು ಕೇವಲ ಅದೊಂದೇ ರೀತಿಯಲ್ಲಲ್ಲ. ಅವನು ಪ್ರೀತಿಯನ್ನು ಕಲಿಸಿದಂಥ ಒಬ್ಬ ಮಹಾ ಬೋಧಕನು ಮಾತ್ರವೇ ಆಗಿರಲಿಲ್ಲ. ದೇವರ ಏಕಜಾತ ಪುತ್ರನೋಪಾದಿ ತನಗೆ ಒಂದು ಮಾನವಪೂರ್ವ ಅಸ್ತಿತ್ವವಿತ್ತು ಎಂಬುದನ್ನು ಸಹ ಅವನು ಸೂಚಿಸಿದನು. (ಯೋಹಾನ 1:14; 3:16; 8:58; 17:5; 1 ಯೋಹಾನ 4:9) ಅವನಿಗೆ ಮಾನವಾನಂತರದ ಅಸ್ತಿತ್ವವೂ ಇದೆ; ಇದು ಅವನನ್ನು ನಿಮಗೆ ಇನ್ನೂ ಹೆಚ್ಚು ಗಮನಾರ್ಹ ವ್ಯಕ್ತಿಯನ್ನಾಗಿ ಮಾಡುತ್ತದೆ. ಯೇಸು ಪುನರುತ್ಥಾನಗೊಳಿಸಲ್ಪಟ್ಟು, ಈಗ ದೇವರ ರಾಜ್ಯದ ಸಿಂಹಾಸನಾರೂಢ ಅರಸನಾಗಿದ್ದಾನೆ ಎಂದು ಬೈಬಲು ಸೂಚಿಸುತ್ತದೆ. (ಪ್ರಕಟನೆ 11:15) ಯೇಸು ಹೇಳಿದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ [“ಜ್ಞಾನವನ್ನು ಪಡೆದುಕೊಳ್ಳುವುದೇ,” NW] ನಿತ್ಯಜೀವವು.” (ಯೋಹಾನ 17:3; 20:31) ವಾಸ್ತವದಲ್ಲಿ, ಯೇಸು ಕ್ರಿಸ್ತನ ಕುರಿತಾದ ಜ್ಞಾನವನ್ನು ಪಡೆದುಕೊಳ್ಳುವುದು, ಪರದೈಸಿನಲ್ಲಿ ಅನಂತಕಾಲದ ಜೀವನವನ್ನು ಪಡೆದುಕೊಳ್ಳುವ ಅರ್ಥದಲ್ಲಿದೆ! ಅದು ಹೇಗೆ ಸಾಧ್ಯ? ಯೇಸುವಿನ ಕುರಿತು ಇನ್ನೂ ಹೆಚ್ಚಿನ ವಿಷಯಗಳನ್ನು ತಿಳಿದುಕೊಂಡು, ಅವನನ್ನು ಅನುಕರಿಸುವಂತೆ “ಕ್ರಿಸ್ತನ ಪ್ರೀತಿಯು ನಮಗೆ” ಹೇಗೆ “ಒತ್ತಾಯಮಾಡುತ್ತದೆ” ಎಂಬುದನ್ನು ಏಕೆ ಕಲಿತುಕೊಳ್ಳಬಾರದು? (2 ಕೊರಿಂಥ 5:14) ಯೆಹೋವನ ಸಾಕ್ಷಿಗಳು ನಿಮಗೆ ಸಹಾಯಮಾಡಲು ಸಂತೋಷಿಸುವರು.​—⁠ಯೋಹಾನ 13:​34, 35.

ಬೇರೆ ರೀತಿಯಲ್ಲಿ ಸೂಚಿಸಲ್ಪಡದಿರುವಲ್ಲಿ, ಉಪಯೋಗಿಸಲ್ಪಟ್ಟ ಬೈಬಲ್‌ ಭಾಷಾಂತರವು ‘ಸತ್ಯವೇದವು’ ಆಗಿದೆ. NW ಎಂದು ಬರೆದಿರುವಲ್ಲಿ, ಆ ಭಾಷಾಂತರವು ಪವಿತ್ರ ಶಾಸ್ತ್ರಗಳ ನೂತನ ಲೋಕ ಭಾಷಾಂತರ​—⁠ರೆಫರೆನ್ಸ್‌ಗಳೊಂದಿಗೆ (ಇಂಗ್ಲಿಷ್‌) ಬೈಬಲ್‌ನಿಂದ ತೆಗೆಯಲ್ಪಟ್ಟಿದೆ.