ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೀವಗಳನ್ನು ನಿಜವಾಗಿಯೂ ರಕ್ಷಿಸುವ ರಕ್ತ

ಜೀವಗಳನ್ನು ನಿಜವಾಗಿಯೂ ರಕ್ಷಿಸುವ ರಕ್ತ

ಜೀವಗಳನ್ನು ನಿಜವಾಗಿಯೂ ರಕ್ಷಿಸುವ ರಕ್ತ

ಈ ಮೊದಲು ಕೊಟ್ಟಿರುವ ಮಾಹಿತಿಯಿಂದ ಕೆಲವು ವಿಷಯಗಳು ಸ್ಪಷ್ಟವಾಗುತ್ತವೆ. ಅನೇಕರು ರಕ್ತ ಪೂರಣಗಳನ್ನು ಜೀವರಕ್ಷಕವೆಂಬಂತೆ ಕಂಡರೂ ಅವು ಅಪಾಯಗಳಿಂದ ತುಂಬಿವೆ. ಪ್ರತಿ ವರ್ಷ, ಪೂರಣಗಳ ಫಲವಾಗಿ ಸಾವಿರಾರು ಜನರು ಸಾಯುತ್ತಾರೆ. ಇನ್ನು ಸಹಸ್ರಾರು ಜನರು ಅತಿಯಾಗಿ ಕಾಯಿಲೆ ಬಿದ್ದು ದೀರ್ಘಾವಧಿಯ ಬಾಧೆಯನ್ನು ಅನುಭವಿಸುತ್ತಾರೆ. ಹೀಗೆ, ದೈಹಿಕ ದೃಷ್ಟಿಕೋನದಿಂದ ನೋಡುವುದಾದರೂ, ಬೈಬಲಿನ ‘ರಕ್ತವನ್ನು ವಿಸರ್ಜಿಸಿರಿ’ ಎಂಬ ಆಜ್ಞೆಯನ್ನು ಈಗ ಪಾಲಿಸುವುದರಲ್ಲಿ ವಿವೇಕವಿದೆ.—ಅಪೊಸ್ತಲರ ಕೃತ್ಯಗಳು 15:28, 29.

ರೋಗಿಗಳು ಅರಕ್ತ ವೈದ್ಯಕೀಯ ಚಿಕಿತ್ಸೆಯನ್ನು ಕೇಳಿಕೊಳ್ಳುವಲ್ಲಿ ಅನೇಕ ಅಪಾಯಗಳಿಂದ ರಕ್ಷಿಸಲ್ಪಡುತ್ತಾರೆ. ಯೆಹೋವನ ಸಾಕ್ಷಿಗಳಿಗೆ ಈ ಚಿಕಿತ್ಸೆ ಕೊಡುವ ಪಂಥಾಹ್ವಾನಕ್ಕೆ ಓಗೊಟ್ಟಿರುವ ನುರಿತ ವೈದ್ಯರು, ಅನೇಕ ವೈದ್ಯಕೀಯ ವರದಿಗಳು ರುಜುಪಡಿಸಿರುವಂತೆ, ಭದ್ರವೂ ಕಾರ್ಯಸಾಧಕವೂ ಆದ ಒಂದು ಚಿಕಿತ್ಸಾ ಮಾದರಿಯನ್ನು ವಿಕಸಿಸಿದ್ದಾರೆ. ಗುಣಮಟ್ಟದ ಆರೈಕೆಯನ್ನು ರಕ್ತವಿಲ್ಲದೆ ಕೊಡುವ ವೈದ್ಯರು ಸನ್ಮಾನ್ಯ ವೈದ್ಯಕೀಯ ಸೂತ್ರಗಳನ್ನು ಉಲ್ಲಂಘಿಸುವುದಿಲ್ಲ. ಬದಲಿಗೆ, ಅಪಾಯಗಳನ್ನು ಮತ್ತು ಪ್ರಯೋಜನಗಳನ್ನು ತಿಳಿಯುವ ಹಕ್ಕುಳ್ಳ ರೋಗಿ, ತನ್ನ ದೇಹ ಮತ್ತು ಜೀವಕ್ಕೆ ಏನು ಮಾಡಲ್ಪಡುತ್ತದೆಂಬ ವಿಷಯದಲ್ಲಿ ತಿಳುವಳಿಕೆಯ ಆಯ್ಕೆ ಮಾಡುವ ವಿಷಯಕ್ಕೆ ಅವರು ಗೌರವ ತೋರಿಸುತ್ತಾರೆ.

ಈ ವಿಷಯದಲ್ಲಿ ನಾವು ಮುಗ್ಧತೆ ತೋರಿಸುತ್ತೇವೆಂದಲ್ಲ. ಏಕಂದರೆ, ನಮ್ಮ ಈ ಮಾರ್ಗವನ್ನು ಸರ್ವರೂ ಸಮ್ಮತಿಸರೆಂದು ನಮಗೆ ತಿಳಿದದೆ. ಮನಸ್ಸಾಕ್ಷಿ, ನೈತಿಕತೆ ಮತ್ತು ವೈದ್ಯಕೀಯ ಹೊರನೋಟದಲ್ಲಿ ಜನರು ವಿಭಿನ್ನತೆ ತೋರಿಸುತ್ತಾರೆ. ಈ ಕಾರಣದಿಂದ, ರಕ್ತ ವಿಸರ್ಜಿಸುವ ರೋಗಿಯ ನಿರ್ಣಯಕ್ಕೆ ಒಪ್ಪಿಗೆ ಕೊಡಲು ವೈದ್ಯರು ಸೇರಿರುವ ಇತರರಿಗೆ ಕಷ್ಟವಾಗಬಹುದು. ನ್ಯೂ ಯೋರ್ಕಿನ ಒಬ್ಬ ಸರ್ಜನ್‌ ಬರೆದುದು: “15 ವರ್ಷಗಳ ಹಿಂದೆ ನಾನು, ಯುವ ವೈದ್ಯನಾಗಿದ್ದಾಗ ಮುಂಗರುಳಿನ ಹುಣ್ಣಿ (duodenal) ನಿಂದಾಗಿ ರಕ್ತ ಸುರಿದು ಸತ್ತ ಯೆಹೋವನ ಸಾಕ್ಷಿಯೊಬ್ಬನ ಮಂಚದ ಬಳಿ ನಿಂತದ್ದನ್ನು ನಾನೆಂದಿಗೂ ಮರೆಯಲಾರೆ. ರೋಗಿಯ ಅಪೇಕ್ಷೆಯನ್ನು ಗೌರವಿಸಿ ರಕ್ತವನ್ನು ಕೊಡಲಿಲ್ಲವಾದರೂ ವೈದ್ಯನಾಗಿದ್ದ ನನಗೆ ಆದ ಮಹತ್ತರವಾದ ಹತಾಶೆ ನನಗೆ ಇನ್ನೂ ನೆನಪಿದೆ.”

ಇವನು ರಕ್ತ ಜೀವರಕ್ಷಕವೆಂದು ನಂಬಿದ್ದನೆಂಬುದರಲ್ಲಿ ಸಂಶಯವಿಲ್ಲ. ಅವನು ಇದನ್ನು ಬರೆದ ಮರುವರ್ಷ ದ ಬ್ರಿಟಿಷ್‌ ಜರ್ನಲ್‌ ಆಪ್‌ ಸರ್ಜರಿ (ಅಕ್ಟೋಬರ್‌ 1986), ಪೂರಣ ಬರುವ ಮೊದಲು, ಜಠರಾಂತ್ರ ರಕ್ತಸ್ರಾವದಿಂದ “ಸಾಯುವವರ ಸಂಖ್ಯೆ ಕೇವಲ 2.5 ಪ್ರತಿಶತ”ವೆಂದು ವರದಿ ಮಾಡಿತು. ಆದರೆ ಪೂರಣವು ವಾಡಿಕೆಯಾಗಿ ಬಂದ ಮೇಲೆ ‘ಹೆಚ್ಚಿನ ದೊಡ್ಡ ಅಧ್ಯಯನಗಳು 10 ಪ್ರತಿಶತ ಸಾವನ್ನು ವರದಿ ಮಾಡುತ್ತವೆ.’ ಹಾಗಾದರೆ, ಸಾಯುವವರ ಸಂಖ್ಯೆ ನಾಲ್ಕು ಪಾಲಿನಷ್ಟೂ ಹೆಚ್ಚೇಕೆ? ಸಂಶೋಧಕರು ಸೂಚಿಸಿದ್ದು: “ಆರಂಭದಲ್ಲೇ ಮಾಡಲಾಗುವ ರಕ್ತ ಪೂರಣ, ರಕ್ತ ಸ್ರಾವವನ್ನು ಅತಿಯಾಗಿ ಹೆಪ್ಪುಗಟ್ಟಿಸುವ ಪ್ರತಿಕ್ರಿಯೆಯನ್ನು ವಿಪರ್ಯಸ್ತ ಮಾಡಿ, ಹೀಗೆ, ಪುನಃ ರಕ್ತ ಸ್ರಾವವನ್ನು ಉದ್ರೇಕಿಸುತ್ತದೆಂದು ತೋರುತ್ತದೆ.” ಆದುದರಿಂದ, ರಕ್ತ ಸ್ರವಿಸುತ್ತಿದ್ದ ಹುಣ್ಣಿದ್ದ ಸಾಕ್ಷಿ, ರಕ್ತವನ್ನು ನಿರಾಕರಿಸಿದಾಗ, ಅವನ ಈ ಆಯ್ಕೆ ಬದುಕಿ ಉಳಿಯುವ ಪ್ರತೀಕ್ಷೆಯನ್ನು ವಾಸ್ತವವಾಗಿ ಹೆಚ್ಚಿಸಿರಬಹುದು.

ಅದೇ ಸರ್ಜನ್‌ ಮುಂದುವರಿಸಿದ್ದು: “ಸಮಯದ ದಾಟುವಿಕೆ ಮತ್ತು ಅನೇಕ ರೋಗಿಗಳ ಆರೈಕೆ ಮಾಡುವಿಕೆ—ಇವುಗಳಿಗೆ ಒಬ್ಬನ ಕಣ್ನೆಲೆಯನ್ನು ಬದಲಾಯಿಸುವ ಪ್ರವೃತ್ತಿಯಿದೆ ಮತ್ತು ನಾನು ಇಂದು, ರೋಗಿ ಮತ್ತು ಅವನ ವೈದ್ಯನ ನಡುವೆ ನಂಬಿಕೆ ಮತ್ತು ರೋಗಿಯ ಇಚ್ಛೆಯನ್ನು ಗೌರವಿಸುವ ಕರ್ತವ್ಯ—ಇವುಗಳು, ನಮ್ಮನ್ನಾವರಿಸಿರುವ ಹೊಸ ವೈದ್ಯಕೀಯ ತಾಂತ್ರಿಕ ಜ್ಞಾನಕ್ಕಿಂತ ಎಷ್ಟೋ ಹೆಚ್ಚು ಪ್ರಾಮುಖ್ಯವೆಂದು ಕಂಡು ಕೊಂಡಿದ್ದೇನೆ. . . . ಹತಾಶೆಯ ಸ್ಥಾನದಲ್ಲಿ ಆ ರೋಗಿಯ ದೃಢ ನಂಬಿಕೆಯ ವಿಷಯವಾಗಿ ಭಯಭಕ್ತಿ ಮತ್ತು ಪೂಜ್ಯಭಾವನೆ ಬಂದು ನಿಂತಿದೆ ಎಂಬುದು ಸಾರ್ವಸ್ಯಕರ.” ಆ ವೈದ್ಯನು ಹೀಗೆ ಹೇಳಿ ಮುಗಿಸಿದನು: ‘ನಾನು ಯಾವಾಗಲೂ ರೋಗಿಯ ವೈಯಕ್ತಿಕ ಹಾಗೂ ಧಾರ್ಮಿಕ ಇಚ್ಛೆಗಳನ್ನು, ನನ್ನ ಅನಿಸಿಕೆ ಅಥವಾ ಬರುವ ಪರಿಣಾಮಗಳು ಏನೇ ಇರಲಿ, ಗೌರವಿಸಬೇಕೆಂದು ಇದನ್ನು ನನಗೆ ಜ್ಞಾಪಕ ಹುಟ್ಟಿಸುತ್ತವೆ.’

“ಸಮಯದ ದಾಟುವಿಕೆ ಮತ್ತು ಅನೇಕ ರೋಗಿಗಳ ಆರೈಕೆ” ಮಾಡಿದ ಬಳಿಕ ಅನೇಕ ವೈದ್ಯರು ಗಣ್ಯ ಮಾಡಿರುವುದನ್ನು ನೀವು ಈಗಾಗಲೇ ಗ್ರಹಿಸಿರಬಹುದು. ಅತಿ ಶ್ರೇಷ್ಠ ತರದ ಆಸ್ಪತ್ರೆಗಳಲ್ಲಿ ಅತ್ಯುತ್ತಮ ವೈದ್ಯಕೀಯ ಆರೈಕೆ ಪಡೆದಾಗಲೂ ಕೆಲವು ಸಲ ಜನರು ಸಾಯುತ್ತಾರೆ. ರಕ್ತ ಪೂರಣ ಮಾಡಲಿ, ಮಾಡದಿರಲಿ, ಅವರು ಸಾಯುತ್ತಾರೆ. ನಮಗೆಲ್ಲರಿಗೂ ವಯಸ್ಸಾಗುತ್ತಾ ಇದೆ ಮತ್ತು ಜೀವಾಂತ್ಯ ಹತ್ತರಿಸುತ್ತಿದೆ. ಇದು ಅದೃಷ್ಟವಾದವಲ್ಲ. ಇದು ವಾಸ್ತವತಾವಾದ. ಸಾಯುವುದು ಜೀವದ ವಾಸ್ತವಾಂಶ.

ರಕ್ತದ ಕುರಿತಾದ ದೇವರ ನಿಯಮವನ್ನು ಅಲಕ್ಷ್ಯ ಮಾಡುವ ಜನರು ಅನೇಕ ವೇಳೆ ಒಡನೆ ಅಥವಾ ವಿಳಂಬಿಸಿ ಬರುವ ಹಾನಿಯನ್ನು ಪಡೆಯುತ್ತಾರೆಂದು ಸಾಕ್ಷ್ಯಗಳು ತೋರಿಸುತ್ತವೆ. ಅದರಲ್ಲಿ ಬದುಕಿ ಉಳಿದವರಿಗೆ ಅನಂತ ಜೀವನ ಲಭ್ಯವಾಗಿಲ್ಲ. ಹೀಗೆ, ರಕ್ತ ಪೂರಣಗಳು ಚಿರಸ್ಥಾಯಿಯಾಗಿ ಜೀವಗಳನ್ನು ರಕ್ಷಿಸುವುದಿಲ್ಲ.

ಧಾರ್ಮಿಕ ಮತ್ತು⁄ಅಥವಾ ವೈದ್ಯಕೀಯ ಕಾರಣಗಳಿಗಾಗಿ ರಕ್ತವನ್ನು ನಿರಾಕರಿಸಿ ವೈದ್ಯಕೀಯ ಚಿಕಿತ್ಸೆಯ ಅನ್ಯ ಮಾರ್ಗಗಳನ್ನು ಅಂಗೀಕರಿಸುವವರಲ್ಲಿ ಅನೇಕರು ಆರೋಗ್ಯವಾಗಿದ್ದಾರೆ. ಅವರು ಅನೇಕ ವರ್ಷ ಬದುಕಿ ಉಳಿಯಬಹುದು. ಆದರೆ ಅನಂತವಾಗಿ ಉಳಿಯುವುದಿಲ್ಲ.

ಸಕಲ ಮಾನವರು ಅಪೂರ್ಣರು, ಕ್ರಮೇಣ ಸಾಯುತ್ತಿರುವವರು ಎಂಬ ಈ ವಿಷಯ ಬೈಬಲು ರಕ್ತದ ಕುರಿತು ಹೇಳುವ ಕೇಂದ್ರ ಸತ್ಯಕ್ಕೆ ನಮ್ಮನ್ನು ನಡಿಸುತ್ತದೆ. ಈ ಸತ್ಯವನ್ನು ನಾವು ಗ್ರಹಿಸಿ ಮಾನ್ಯ ಮಾಡುವಲ್ಲಿ, ರಕ್ತವು ನಿಜವಾಗಿಯೂ ಜೀವವನ್ನು—ನಮ್ಮ ಜೀವವನ್ನು ಸದಾ ರಕ್ಷಿಸಬಲ್ಲದೆಂದು ನೋಡುವೆವು.

ಜೀವ ರಕ್ಷಿಸುವ ಒಂದೇ ರಕ್ತ

ಈ ಮೊದಲೇ ಗಮನಿಸಿರುವಂತೆ, ರಕ್ತವನ್ನು ತಿನ್ನ ಬಾರದೆಂದು ದೇವರು ಸಕಲ ಮಾನವ ಸಂತತಿಗೆ ಹೇಳಿದನು. ಏಕೆ? ಏಕಂದರೆ ರಕ್ತ ಜೀವವನ್ನು ಪ್ರತಿನಿಧೀಕರಿಸುತ್ತದೆ. (ಆದಿಕಾಂಡ 9:3-6) ಇಸ್ರಾಯೇಲ್ಯರಿಗೆ ಕೊಟ್ಟ ನಿಯಮಗಳಲ್ಲಿ ಆತನು ಇದನ್ನು ಇನ್ನೂ ಹೆಚ್ಚು ವಿವರಿಸಿದನು. ಆ ಧರ್ಮ ಶಾಸ್ತ್ರವು ಸ್ಥಿರೀಕರಿಸಲ್ಪಟ್ಟ ಸಮಯದಲ್ಲಿ ಬಲಿಪಶುಗಳ ರಕ್ತವನ್ನು ಯಜ್ಞವೇದಿಯ ಮೇಲೆ ಉಪಯೋಗಿಸಲಾಯಿತು. (ವಿಮೋಚನಕಾಂಡ 24:3-8) ಬೈಬಲು ಹೇಳುವಂತೆ, ಸಕಲ ಮಾನವರು ಅಪೂರ್ಣರು, ಪಾಪಿಗಳು ಎಂಬ ನಿಜತ್ವವನ್ನು ಧರ್ಮ ಶಾಸ್ತ್ರದ ಆ ನಿಯಮಗಳು ಸಂಬೋಧಿಸಿದವು. ತನಗೆ ಅರ್ಪಿಸಿದ ಪ್ರಾಣಿಯಜ್ಞಗಳ ಮೂಲಕ ಇಸ್ರಾಯೇಲ್ಯರು ತಮ್ಮ ಪಾಪಗಳು ಕ್ಷಮಿಸಲ್ಪಡುವ ಆವಶ್ಯಕತೆಯನ್ನು ಒಪ್ಪಿಕೊಳ್ಳಬಹುದೆಂದು ದೇವರು ಅವರಿಗೆ ಹೇಳಿದನು. (ಯಾಜಕಕಾಂಡ 4:4-7, 13-18, 22-30) ದೇವರು ಇದನ್ನು ಅವರಿಂದ ಆ ಸಮಯದಲ್ಲಿ ಕೇಳಿಕೊಂಡನೇ ಹೊರತು ಇಂದು ತನ್ನ ಸತ್ಯಾರಾಧಕರಿಂದ ಅದನ್ನು ಕೇಳಿ ಕೊಳ್ಳುವುದಿಲ್ಲ ಎಂಬುದು ಒಪ್ಪಿಕೊಳ್ಳಬೇಕಾದ ವಿಷಯ. ಆದರೂ ಇದರಲ್ಲಿ ನಮಗೆ ಇಂದು ಜೀವದಾಯಕ ಪ್ರಾಮುಖ್ಯತೆ ಇದೆ.

ಈ ಯಜ್ಞಗಳ ತಳಪಾಯವಾಗಿರುವ ಸೂತ್ರವನ್ನು ದೇವರು ತಾನೇ ವಿವರಿಸಿದನು. “ದೇಹದ ಪ್ರಾಣ [ಅಥವಾ, ಜೀವ] ರಕ್ತದಲ್ಲಿದೆ ಮತ್ತು ನಾನೇ ನಿಮ್ಮ ಪ್ರಾಣಗಳಿಗಾಗಿ ಪ್ರಾಯಶ್ಚಿತ್ತ ಮಾಡಲು ಅದನ್ನು ನಿಮಗಾಗಿ ಯಜ್ಞವೇದಿಯ ಮೇಲೆ ಹಾಕಿದ್ದೇನೆ. ಏಕಂದರೆ ಅದರಲ್ಲಿರುವ ಪ್ರಾಣದ ಮೂಲಕ ಪ್ರಾಯಶ್ಚಿತ್ತ ಮಾಡುವುದು ರಕ್ತವೇ. ಈ ಕಾರಣದಿಂದಲೇ ನಾನು ಇಸ್ರಾಯೇಲ್‌ ಪುತ್ರರಿಗೆ, “ನಿಮ್ಮಲ್ಲಿ ಯಾವ ಪ್ರಾಣವೂ ರಕ್ತವನ್ನು ತಿನ್ನಬಾರದು” ಎಂದು ಹೇಳಿದ್ದೇನೆ.”—ಯಾಜಕಕಾಂಡ 17:11, 12.

ಪ್ರಾಯಶ್ಚಿತ್ತ ದಿನವೆಂದು ಕರೆಯಲ್ಪಟ್ಟಿರುವ ಪ್ರಾಚೀನ ಹಬ್ಬದಲ್ಲಿ ಇಸ್ರಾಯೇಲಿನ ಮಹಾ ಯಾಜಕನು ಯಜ್ಞಾರ್ಪಿತ ಪಶುಗಳ ರಕ್ತವನ್ನು, ದೇವರ ಆರಾಧನೆಯ ಕೇಂದ್ರವಾಗಿದ್ದ ದೇವಾಲಯದ ಅತಿ ಪರಿಶುದ್ಧ ಸ್ಥಳಕ್ಕೆ ತೆಗೆದು ಕೊಂಡು ಹೋಗುತ್ತಿದ್ದನು. ಇದು ಜನರ ಪಾಪಗಳನ್ನು ಕ್ಷಮಿಸಲು ದೇವರನ್ನು ಕೇಳಿಕೊಳ್ಳುವ ಸೂಚಕರೂಪವಾಗಿತ್ತು. (ಯಾಜಕಕಾಂಡ 16:3-6, 11-16) ಈ ಯಜ್ಞಗಳು ನಿಜವಾಗಿಯೂ ಸಕಲ ಪಾಪವನ್ನು ನಿವಾರಿಸದರ್ದಿಂದ ಅದನ್ನು ಪ್ರತಿ ವರ್ಷ ಪುನರಾವೃತ್ತಿ ಮಾಡಬೇಕಾಗಿತ್ತು. ಆದರೂ ರಕ್ತದ ಈ ಉಪಯೋಗ ಅರ್ಥಗರ್ಭಿತವಾದ ಒಂದು ಮಾದರಿಯನ್ನಿಟ್ಟಿತು.

ದೇವರು ಕ್ರಮೇಣ ಒಂದು ಪರಿಪೂರ್ಣ ಯಜ್ಞವನ್ನೊದಗಿಸಿ ಅದು ಸಕಲ ವಿಶ್ವಾಸಿಗಳ ಪಾಪಗಳಿಗೆ ಪೂರ್ತಿ ಪ್ರಾಯಶ್ಚಿತ್ತವನ್ನು ಕೊಡುತ್ತದೆಂಬುದು ಬೈಬಲಿನ ಒಂದು ಮುಖ್ಯ ಬೋಧನೆ. ಇದನ್ನು ಪ್ರಾಯಶ್ಚಿತ್ತವೆಂದು ಕರೆಯಲಾಗುತ್ತದೆ, ಮತ್ತು ಇದು ಮುಂತಿಳಿಸಲ್ಪಟ್ಟ ಮೆಸ್ಸೀಯ, ಅಥವಾ ಕ್ರಿಸ್ತನ ಯಜ್ಞದ ಮೇಲೆ ಕೇಂದ್ರಿಸುತ್ತದೆ.

ಬೈಬಲು ಮೆಸ್ಸೀಯನ ಪಾತ್ರವನ್ನು ಪ್ರಾಯಶ್ಚಿತ್ತ ದಿನದಲ್ಲಿ ನಡೆದ ಸಂಗತಿಗೆ ಹೋಲಿಸುತ್ತದೆ: “ಕ್ರಿಸ್ತನು, ಸಂಭವಿಸಿದ ಸುವಿಷಯಗಳ ಮಹಾ ಯಾಜಕನಾಗಿ, ಕೈಗಳಿಂದ ನಿರ್ಮಿಸಲ್ಪಟ್ಟಿರದ ಹೆಚ್ಚು ಶ್ರೇಷ್ಠವೂ ಹೆಚ್ಚು ಪೂರ್ಣವೂ ಆಗಿದ್ದ [ದೇವಾಲಯದ] ಮೂಲಕ ಬಂದಾಗ, . . . ಅವನು, ಆಡುಗಳು ಮತ್ತು ಎಳೆಯ ಹೋರಿಗಳ ರಕ್ತದೊಂದಿಗಲ್ಲ, ತನ್ನ ಸ್ವಂತ ರಕ್ತದೊಂದಿಗೆ, ಕಡೆಯದಾಗಿ, ಪವಿತ್ರ ಸ್ಥಳ [ಸ್ವರ್ಗ] ವನ್ನು ಪ್ರವೇಶಿಸಿ, ನಮಗಾಗಿ ನಿತ್ಯ ವಿಮೋಚನೆಯನ್ನು ಪಡೆದನು. ಹೌದು, ಧರ್ಮಶಾಸ್ತ್ರನುಸಾರವಾಗಿ, ಬಹುಮಟ್ಟಿಗೆ, ಸಕಲ ವಿಷಯಗಳೂ ರಕ್ತದಿಂದ ಶುದ್ಧೀಕರಿಸಲ್ಪಡುತ್ತವೆ, ಮತ್ತು ರಕ್ತ ಧಾರೆಯಾಗದಿದ್ದರೆ ಯಾವ ಕ್ಷಮೆಯೂ ಸಂಭವಿಸುವುದಿಲ್ಲ.”—ಇಬ್ರಿಯ 9:11,12, 22.

ಹೀಗೆ, ರಕ್ತದ ಸಂಬಂಧದಲ್ಲಿ ದೇವರ ವೀಕ್ಷಣ ನಮಗಿರಬೇಕೆಂಬುದು ಸ್ಪಷ್ಟವಾಗುತ್ತದೆ. ಸೃಷ್ಟಿಕರ್ತನಾಗಿ ಆತನಿಗಿರುವ ಹಕ್ಕಿಗೆ ಅನುಗುಣವಾಗಿ ಆತನು ಅದರ ಏಕಮಾತ್ರ ಉಪಯುಕ್ತತೆಯನ್ನು ನಿರ್ಧರಿಸಿದ್ದಾನೆ. ಪುರಾತನ ಕಾಲದ ಇಸ್ರಾಯೇಲ್ಯರು ಪ್ರಾಣಿ ಅಥವಾ ಮಾನವ ರಕ್ತವನ್ನು ಸೇವಿಸದಿದ್ದ ಕಾರಣ ಆರೋಗ್ಯ ಪ್ರಯೋಜನಗಳನ್ನು ಪಡೆದಿದ್ದಿರಬಹುದು. ಆದರೆ ಇದು ಅತಿ ಪ್ರಾಮುಖ್ಯ ವಿಷಯವಲ್ಲ. (ಯೆಶಾಯ 48:17) ಅವರು ತಮ್ಮ ಜೀವವನ್ನು ರಕ್ತದಿಂದ ಪೋಷಿಸಿ ಕೊಳ್ಳುವದರಿಂದ ದೂರವಿರಬೇಕಿತ್ತು. ಪೋಷಿಸಿಕೊಳ್ಳುವುದು ಅನಾರೋಗ್ಯಕರವೆಂಬುದು ಮುಖ್ಯ ಕಾರಣವಾಗಿರಲಿಲ್ಲ, ಅದು ದೇವರಿಗೆ ಅಪವಿತ್ರವಾಗಿತ್ತು ಎಂಬುದೇ ಮುಖ್ಯ ಕಾರಣ. ರಕ್ತವು ಮಲಿನ ಎಂಬ ಕಾರಣದಿಂದ ಅವರು ರಕ್ತ ವಿಸರ್ಜನೆ ಮಾಡ ಬೇಕಾಗಿದ್ದಿರಲಿಲ್ಲ. ಅದು ಕ್ಷಮಾ ಲಭ್ಯತೆಗೆ ಅಮೂಲ್ಯವಾಗಿತ್ತು ಎಂಬ ಕಾರಣದಿಂದಲೇ ಮಾಡ ಬೇಕಾಗಿತ್ತು.

ಅಪೊಸ್ತಲ ಪೌಲನು ಪ್ರಾಯಶ್ಚಿತ್ತ ಮೌಲ್ಯದ ವಿಷಯ ವಿವರಣೆ ಕೊಟ್ಟನು: “ಅವನ [ಕ್ರಿಸ್ತನ] ಮೂಲಕ ನಮಗೆ, ಅವನ ರಕ್ತದಿಂದ ಬರುವ ಪ್ರಾಯಶ್ಚಿತ್ತದಿಂದ ಬಿಡುಗಡೆ, ಹೌದು. ನಮ್ಮ ಪಾಪಗಳ ಕ್ಷಮಾಪಣೆಯು, ಅವನ ಅಪಾತ್ರ ಕೃಪಾತಿಶಯಕ್ಕನುಸಾರವಾಗಿ ಆಗುತ್ತದೆ.” (ಎಫೆಸ 1:7) ಇಲ್ಲಿ ಕಂಡು ಬರುವ ಮೂಲ ಗ್ರೀಕ್‌ ಪದವನ್ನು ಸಮರ್ಪಕವಾಗಿ “ರಕ್ತ” ವೆಂದು ಭಾಷಾಂತರಿಸಲಾಗಿರುವುದಾದರೂ ಅನೇಕ ಬೈಬಲ್‌ ಭಾಷಾಂತರಗಳು ಈ ಸ್ಥಳದಲ್ಲಿ “ಮರಣ” ವೆಂಬ ಪದವನ್ನು ಹಾಕಿ ತಪ್ಪು ಮಾಡಿವೆ. ಹೀಗೆ, ರಕ್ತದ ಸಂಬಂಧದಲ್ಲಿ ನಮ್ಮ ಸೃಷ್ಟಿಕರ್ತನ ವೀಕ್ಷಣದ ಮಹತ್ವವನ್ನು ಮತ್ತು ಆತನು ಅದಕ್ಕೆ ಕೂಡಿಸಿರುವ ಯಜ್ಞದ ಮೌಲ್ಯವನ್ನು ವಾಚಕರು ಕಂಡು ಹಿಡಿಯದೇ ಹೋಗುವ ಸಂದರ್ಭವಿರಬಹುದು.

ಕ್ರಿಸ್ತನು ಪರಿಪೂರ್ಣ ಪ್ರಾಯಶ್ಚಿತ್ತ ಯಜ್ಞವಾಗಿ ಸತ್ತನು, ಆದರೆ ಸತ್ತವನಾಗಿಯೇ ಉಳಿಯಲಿಲ್ಲವೆಂಬ ನಿಜತ್ವವನ್ನು ಬೈಬಲಿನ ಪ್ರಧಾನ ವಿಷಯವು ಆವರಿಸುತ್ತದೆ. ದೇವರು ಆ ಪ್ರಾಯಶ್ಚಿತ್ತ ದಿನದಲ್ಲಿಟ್ಟ ನಮೂನೆಯನ್ನು ಅನುಕರಿಸಿ, ಯೇಸುವನ್ನು ಸ್ವರ್ಗಕ್ಕೆ, ಅವನು “ದೇವರ ವ್ಯಕ್ತಿರೂಪದ ಮುಂದೆ ನಮಗಾಗಿ ತೋರಿ ಬರಲು” ಎಬ್ಬಿಸಿದನು. ಅಲ್ಲಿ ಅವನು ತನ್ನ ಯಜ್ಞಾರ್ಪಿತ ರಕ್ತದ ಮೌಲ್ಯವನ್ನು ಒಪ್ಪಿಸಿದನು. (ಇಬ್ರಿಯ 9:24) ಬೈಬಲು, ನಾವು ‘ದೇವಕುಮಾರನನ್ನು ತುಳಿದು ಅವನ ರಕ್ತವು ಸಾಮಾನ್ಯ ಬೆಲೆಯದ್ದು ಎಂದೆಣಿಸುವ’ ಮಾರ್ಗಕ್ಕೆ ಸಮವಾದ ಯಾವ ಮಾರ್ಗವನ್ನೂ ವಿಸರ್ಜಿಸಬೇಕೆಂದು ಒತ್ತಿ ಹೇಳುತ್ತದೆ. ಹೀಗೆ ಮಾಡುವಲ್ಲಿ ಮಾತ್ರ ನಾವು ದೇವರೊಂದಿಗೆ ಸುಸಂಬಂಧ ಮತ್ತು ಶಾಂತಿಯಿಂದ ಇರಬಹುದು.—ಇಬ್ರಿಯ 10:29; ಕೊಲೊಸ್ಸೆಯ 1:20.

ರಕ್ತದಿಂದ ರಕ್ಷಿಸಲ್ಪಟ್ಟ ಜೀವನದಲ್ಲಿ ಆನಂದಿಸಿರಿ

ದೇವರು ರಕ್ತದ ವಿಷಯ ಹೇಳಿರುವುದನ್ನು ಅರ್ಥ ಮಾಡಿ ಕೊಳ್ಳುವಾಗ ಅದರ ಜೀವ ರಕ್ಷಿಸುವ ಮೌಲ್ಯಕ್ಕೆ ನಮ್ಮಲ್ಲಿ ಅತಿ ಹೆಚ್ಚಿನ ಗೌರವ ಹುಟ್ಟುತ್ತದೆ. ಶಾಸ್ತ್ರಗಳು ಕ್ರಿಸ್ತನನ್ನು ‘ನಮ್ಮನ್ನು ಪ್ರೀತಿಸಿ ತನ್ನ ಸ್ವಂತ ರಕ್ತದ ಮುಖೇನ ನಮ್ಮ ಪಾಪಗಳಿಂದ ನಮ್ಮನ್ನು ಬಿಡಿಸಿದವನು’ ಎಂದು ವರ್ಣಿಸುತ್ತವೆ. (ಪ್ರಕಟನೆ 1:5; ಯೋಹಾನ 3:16) ಹೌದು, ಯೇಸುವಿನ ರಕ್ತದ ಮೂಲಕ ನಾವು ನಮ್ಮ ಪಾಪಗಳಿಗೆ ಪೂರ್ಣ ಮತ್ತು ಬಾಳಿಕೆ ಬರುವ ಕ್ಷಮೆಯನ್ನು ದೊರಕಿಸಿ ಕೊಳ್ಳಬಲ್ಲೆವು. ಅಪೊಸ್ತಲ ಪೌಲನು ಬರೆದುದು: “ನಾವೀಗ ಅವನ ರಕ್ತದಿಂದ ನೀತಿವಂತರೆಂದು ಘೋಷಿಸಲ್ಪಟ್ಟಿರುವುದರಿಂದ ಅವನ ಮೂಲಕ ಕೋಪದಿಂದ ಸಂರಕ್ಷಿಸಲ್ಪಡುವೆವು.”—ರೋಮಾಪುರ 5:9; ಇಬ್ರಿಯ 9:14.

ಯೆಹೋವ ದೇವರು ದೀರ್ಘಕಾಲಕ್ಕೆ ಮೊದಲು, ಕ್ರಿಸ್ತನ ಮೂಲಕ ‘ಭೂಮಿಯ ಸಕಲ ಕುಟುಂಬಗಳು ತಮ್ಮನ್ನು ಆಶೀರ್ವದಿಸಿಕೊಳ್ಳ ಬಲ್ಲವು’ ಒಂಬ ಆಶ್ವಾಸನೆಯನ್ನು ಕೊಟ್ಟನು. (ಆದಿಕಾಂಡ 22:18) ಆ ಆಶೀರ್ವಾದದಲ್ಲಿ ಭೂಮಿಯನ್ನು ಪ್ರಮೋದ ವನದ ಸ್ಥಿತಿಗೆ ಪುನಃ ತರುವುದು ಸೇರಿದೆ. ಆಗ ನಂಬುವ ಮಾನವ ವರ್ಗ ಇನ್ನು ಮುಂದೆ ಕಾಯಿಲೆ, ಮುಪ್ಪು, ಅಥವಾ ಮರಣದಿಂದ ಸಹ ಪೀಡಿತವಾಗದು. ಆಗ ಅವರು, ಈಗ ವೈದ್ಯಕೀಯ ಸಿಬ್ಬಂಧಿಗಳು ನಮಗೆ ನೀಡುವ ತಾತ್ಕಾಲಿಕ ಸಹಾಯಕ್ಕಿಂತ ಎಷ್ಟೋ ಹೆಚ್ಚಿನ ಆಶೀರ್ವಾದಗಳಲ್ಲಿ ಆನಂದಿಸುವರು. ನಮಗೆ ಈ ಅದ್ಭುತಕರವಾದ ವಾಗ್ದಾನವಿದೆ: “ಆತನು ಆವರ ಕಣ್ಣುಗಳಿಂದ ಪ್ರತಿ ಕಣ್ಣೀರನ್ನು ಒರಸಿ ಬಿಡುವನು. ಮರಣವು ಇನ್ನಿರದು. ಶೋಕ, ಪ್ರಲಾಪ ಮತ್ತು ವೇದನೆಯೂ ಅಲ್ಲಿರದು. ಗತ ಸಂಗತಿಗಳು ದಾಟಿ ಹೋಗಿವೆ.”—ಪ್ರಕಟನೆ 21:4.

ಆದುದರಿಂದ, ದೇವರ ಸಕಲ ಆವಶ್ಯಕತೆಗಳನ್ನು ಹೃದಯಕ್ಕೆ ತೆಗೆದು ಕೊಳ್ಳುವುದು ಅದೆಷ್ಟು ವಿವೇಕ! ಇದರಲ್ಲಿ, ರಕ್ತದ ಕುರಿತು ಆಜ್ಞೆಗಳಿಗೆ, ಅದನ್ನು ವೈದ್ಯಕೀಯ ಸ್ಥಿತಿ ಗತಿಯಲ್ಲಿಯೂ ದುರುಪಯೋಗಿಸಬಾರದೆಂಬುದಕ್ಕೆ ವಿಧೇಯತೆಯು ಸೇರಿದೆ. ಹೀಗೆ ಮಾಡುವಲ್ಲಿ ನಾವು ಈ ಕ್ಷಣಕ್ಕೆ ಮಾತ್ರ ಬದುಕೆವು. ಇದಕ್ಕೆ ಬದಲಾಗಿ, ಮಾನವ ಪರಿಪೂರ್ಣತೆಯಲ್ಲಿ ಅನಂತ ಜೀವನದ ಭಾವೀ ಪ್ರತೀಕ್ಷೆ ಸೇರಿರುವ ಜೀವಕ್ಕೆ ಶ್ರೇಷ್ಠ ಅಭಿಮಾನವನ್ನು ತೋರಿಸುವೆವು.

[ಪುಟ 36 ರಲ್ಲಿರುವ ಚೌಕ]

ದೇವ ಜನರು ರಕ್ತದಿಂದ ಜೀವವನ್ನು ಪೋಷಿಸಿ ಕೊಳ್ಳಲು ನಿರಾಕರಿಸಿದರು. ಹಾಗೆ ಮಾಡುವುದು ಅನಾರೋಗ್ಯಕರವಾಗಿದ್ದುದರಿಂದಲ್ಲ, ಅಪವಿತ್ರವಾಗಿದುದ್ದರಿಂದಲೇ; ರಕ್ತವು ಮಲಿನವಾಗಿದುದ್ದರಿಂದಲ್ಲ, ಅದು ಅಮೂಲ್ಯವಾಗಿದ್ದುದರಿಂದಲೇ.

[ಪುಟ 35 ರಲ್ಲಿರುವ ಚಿತ್ರ]

“ಅವನ [ಕ್ರಿಸ್ತನ] ಮೂಲಕ ನಮಗೆ ಅವನ ರಕ್ತದಿಂದ ಬರುವ ಪ್ರಾಯಶ್ಚಿತ್ತದಿಂದ ಬಿಡುಗಡೆ, ಹೌದು, ನಮ್ಮ ಪಾಪಗಳ ಕ್ಷಮಾಪಣೆ . . . ಆಗುತ್ತದೆ.”—ಎಫೆಸ 1:7.

[ಪುಟ 37 ರಲ್ಲಿರುವ ಚಿತ್ರ]

ಜೀವವನ್ನು ಯೇಸುವಿನ ರಕ್ತದಿಂದ ರಕ್ಷಿಸುವುದು ಭೂಪ್ರಮೋದವನದಲ್ಲಿ ಅನಂತ ಜೀವನಕ್ಕೆ ದಾರಿ ತೆರೆಯುತ್ತದೆ