ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ರಕ್ತ ಪೂರಣದ ಬದಲಿಗಿರುವ ಗುಣಮಟ್ಟದ ಅನ್ಯಮಾರ್ಗಗಳು

ರಕ್ತ ಪೂರಣದ ಬದಲಿಗಿರುವ ಗುಣಮಟ್ಟದ ಅನ್ಯಮಾರ್ಗಗಳು

ರಕ್ತ ಪೂರಣದ ಬದಲಿಗಿರುವ ಗುಣಮಟ್ಟದ ಅನ್ಯಮಾರ್ಗಗಳು

‘ಪೂರಣಗಳು ಹಾನಿಕರ. ಆದರೆ ಶ್ರೇಷ್ಠ ಗುಣ ಮಟ್ಟದ ಅನ್ಯಮಾರ್ಗಗಳಿವೆಯೇ?’ ಎಂದು ನೀವು ಪ್ರಶ್ನಿಸಬಹುದು. ಪ್ರಶ್ನೆ ಉತ್ತಮವೇ, ಮತ್ತು “ಗುಣಮಟ್ಟ” ವೆಂಬ ಪದವನ್ನು ಗಮನಿಸಿರಿ.

ಯೆಹೋವನ ಸಾಕ್ಷಿಗಳು ಸೇರಿ, ಪ್ರತಿಯೊಬ್ಬನಿಗೂ ತಮಗೆ ಶ್ರೇಷ್ಠ ಮಟ್ಟದ ಕಾರ್ಯಸಾಧಕವಾದ ವೈದ್ಯಕೀಯ ಆರೈಕೆ ದೊರೆಯಬೇಕೆಂಬ ಅಪೇಕ್ಷೆ ಇದೆ. ಡಾ. ಗ್ರ್ಯಾಂಟ್‌ ಇ. ಸೆಫ್ಟನ್‌, ಎರಡು ಮುಖ್ಯ ವಿಷಯಗಳನ್ನು ಗಮನಿಸಿದರು: “ಗುಣಮಟ್ಟದ ವೈದ್ಯಕೀಯ ಆರೈಕೆಯೆಂದರೆ ನ್ಯಾಯಬದ್ಧವಾದ ವೈದ್ಯಕೀಯ ಹಾಗೂ ಅವೈದ್ಯಕೀಯ ಗುರಿಗಳನ್ನು ಸಾಧಿಸಲು, ಆರೈಕೆ ಕೊಡುವವರಿಗಿರುವ ಸಾಮರ್ಥ್ಯವೆಂದರ್ಥ.” (ದ ಜರ್ನಲ್‌ ಆಫ್‌ ದಿ ಅಮೆರಿಕನ್‌ ಮೆಡಿಕಲ್‌ ಎಸೋಸಿಯೇನ್‌, ಜುಲೈ 1, 1988) ಈ “ಅವೈದ್ಯಕೀಯ ಗುರಿ”ಗಳಲ್ಲಿ ರೋಗಿಗಳ ನೈತಿಕ ಅಥವಾ ಬೈಬಲಾಧರಿತ ಶುದ್ಧಾಂತಕರಣವನ್ನು ಉಲ್ಲಂಘಿಸದಿರುವುದು ಸೇರಿರುತ್ತದೆ.—ಅಪೊಸ್ತಲರ ಕೃತ್ಯಗಳು 15:28, 29.

ಹಾಗಾದರೆ, ಗಂಭೀರವಾದ ವೈದ್ಯಕೀಯ ಸಮಸ್ಯೆಗಳನ್ನು ರಕ್ತವಿಲ್ಲದೆ ನಿಯಂತ್ರಿಸಲು ನ್ಯಾಯಬದ್ಧವಾದ ಹಾಗೂ ಕಾರ್ಯಸಾಧಕವಾದ ಮಾರ್ಗಗಳಿವೆಯೇ? ಹೌದು, ಎಂಬುದೇ ಇದಕ್ಕಿರುವ ಸಂತೋಷಕರವಾದ ಉತ್ತರ.

ಸರ್ಜನ್‌ ವೈದ್ಯರುಗಳಲ್ಲಿ ಅನೇಕರು, ಅನಿವಾರ್ಯವಾಗಿರುವಾಗ ಮಾತ್ರ ತಾವು ರಕ್ತ ಕೊಟ್ಟಿದ್ದೇವೆಂದು ವಾದಿಸಿದರೂ, ಏಯ್ಡ್ಸ್‌ ವ್ಯಾಧಿ ಎದ್ದು ಬಂದ ಮೇಲೆ ಅವರ ರಕ್ತೋಪಯೋಗ ಶೀಘ್ರ ಕಡಿಮೆಯಾಯಿತು. ಮೇಯೋ ಕಿನ್ಲಿಕ್‌ ಪ್ರೊಸೀಡಿಂಗ್ಸ್‌ (ಸಪ್ಟಂಬರ 1988) ನಲ್ಲಿ ಒಂದು ಸಂಪಾದಕೀಯವು ಹೇಳಿದ್ದು: “ಈ ವ್ಯಾಧಿಯಿಂದಾಗಿ ಬಂದ ಕೇವಲ ಕೆಲವೇ ಪ್ರಯೋಜನಗಳಲ್ಲಿ ಒಂದು, ರೋಗಿ ಮತ್ತು ವೈದ್ಯರುಗಳು ರಕ್ತ ಪೂರಣವನ್ನು ತಪ್ಪಿಸಲು ವಿವಿಧ ರೀತಿಯ ಉಪಾಯಗಳನ್ನು ಮಾಡಿದ್ದೇ.” ರಕ್ತ ನಿಧಿಯ ಒಬ್ಬ ಅಧಿಕಾರಿ ವಿವರಿಸಿದ್ದು: “ಆದರೆ ಸಂದೇಶದ ತೀವ್ರತೆ, (ಅಪಾಯಗಳ ಕುರಿತು ಹೆಚ್ಚು ತಿಳುವಳಿಕೆಯ ಕಾರಣ) ವೈದ್ಯರು ಈ ಸುದ್ದಿಗೆ ತೋರಿಸುವ ಅನುಕೂಲ ಪ್ರತಿಕ್ರಿಯೆ ಮತ್ತು ಅನ್ಯಮಾರ್ಗಗಳ ಕುರಿತು ಆಲೋಚಿಸಲು ಇರುವ ಹಕ್ಕು ಕೇಳಿಕೆಗಳಲ್ಲಿ ಬದಲಾವಣೆಯಿದೆ.”—ಟ್ರಾನ್ಸ್‌ಫ್ಯೂನ್‌ ಮೆಡಿಸಿನ್‌ ರಿವ್ಯೂಸ್‌, ಅಕ್ಟೋಬರ 1989.

ಇಲ್ಲಿ, ಅನ್ಯಮಾರ್ಗಗಳಿವೆಯೆಂಬುದನ್ನು ಗಮನಿಸಿರಿ! ಮತ್ತು ರಕ್ತವನ್ನು ಯಾಕೆ ಸಂಯೋಜಿಸಲಾಗುತ್ತದೆ ಎಂಬುದನ್ನು ನಾವು ಪುನರ್ವಿಮರ್ಶಿಸುವಾಗ ಇದು ಗ್ರಹಿಸಸಾಧ್ಯವಾದ ವಿಚಾರವಾಗುತ್ತದೆ.

ಕೆಂಪು ಕಣಗಳಲ್ಲಿರುವ ರಕ್ತ ವರ್ಣಜನಕವಾದ ಹೀಮೊಗ್ಲೋಬಿನ್‌ ಉತ್ತಮ ಆರೋಗ್ಯ ಮತ್ತು ಜೀವಕ್ಕೆ ಬೇಕಾಗುವ ಆಮ್ಲಜನಕವನ್ನು ಸಾಗಿಸುತ್ತದೆ. ಆದುದರಿಂದ, ಒಬ್ಬನು ತುಂಬ ರಕ್ತ ನಷ್ಟ ಪಡೆದಿರುವುದಾದರೆ ಅದನ್ನು ಪುನಃ ಭರ್ತಿ ಮಾಡುವುದು ನ್ಯಾಯವೆಂದು ಕಂಡೀತು. ಸಾಧಾರಣವಾಗಿ, ನಿಮ್ಮಲ್ಲಿ ಪ್ರತಿ 100 ಕ್ಯೂಬಿಕ್‌ ಸೆಂಟಿಮೀಟರ್‌ ರಕ್ತಕ್ಕೆ 14 ಅಥವಾ 15 ಗ್ರ್ಯಾಮ್‌ ಹೀಮೊಗ್ಲೋಬಿನ್‌ ಇರುತ್ತದೆ. (ಇದರ ಸಾಂದ್ರತೆಗಿರುವ ಇನ್ನೊಂದು ಅಳತೆ, ಸಾಮಾನ್ಯವಾಗಿ ಸುಮಾರು 45 ಪ್ರತಿಶತ ಇರುವ ಹೀಮ್ಯಾಟೊಕ್ರಿಟ್‌). ಸ್ವಿಸ್‌ ಪತ್ರಿಕೆ ವೊಕ್ಸ್‌ ಸಾಂಗಿನ್ವಿಸ್‌ (ಮಾರ್ಚ್‌ 1987) ಹೀಗೆ ವರದಿ ಮಾಡಿತು: “[ಇಂದ್ರಿಯ ಸುಪ್ತಿವೈದ್ಯರಲ್ಲಿ] 65% ಮಂದಿ, ಚುನಾಯಿತ ಶಸ್ತ್ರಚಿಕಿತ್ಸೆಗೆ ಮೊದಲು ರೋಗಿಗಳಲ್ಲಿ ಮಿಲಿಲಿಟರಿಗೆ 10 ಗ್ರಾಮ್‌ ಹೀಮೊಗ್ಲೋಬಿನ್‌ ಇರಬೇಕೆಂದು ಕೇಳಿಕೊಂಡರು.”

ಆದರೆ ರಕ್ತ ಪೂರಣದ 1988ರ ಸಮ್ಮೇಳನದಲ್ಲಿ, ಫ್ರೊಫೆಸರ್‌ ಹವರ್ಡ್‌ ಎಲ್‌. ಸಾಡರ್‌ ಕೇಳಿದ್ದು: “ಆ ‘ಮ್ಯಾಜಿಕ್‌ ಅಂಕ’ವನ್ನು ನಾವು ಹೇಗೆ ಪಡೆದೆವು?” ಅವರು ಸ್ಪಷ್ಟವಾಗಿ “ರೋಗಿಯು ಇಂದ್ರಿಯ ಸುಪ್ತಿ ಪಡೆಯುವ ಮೊದಲು ಅವನ ಹಿಮೋಗ್ಲೋಬಿನ್‌ (Hgb) 10 ಗ್ಯಾಮ್‌ ಇರಬೇಕೆಂಬ ವ್ಯಾಧಿಕಾರಣ ಶಾಸ್ತ್ರದ ಆವಶ್ಯಕತೆ, ಸಂಪ್ರದಾಯದ ಸೋಗಿನಿಂದ, ಅಸ್ಪಷ್ಟತೆಯ ಹೊದಿಕೆಯಿಂದ ಮತ್ತು ವೈದ್ಯಕೀಯ ಹಾಗೂ ಪ್ರಯೋಗ ರುಜುವಾತುಗಳಿಂದ ಅಸಮರ್ಥಿಸಲ್ಪಟ್ಟಿರುತ್ತದೆ.” ಹಾಗಾದರೆ. ಸಾವಿರಾರು ರೋಗಿಗಳಿಗಾಗಿರುವ ರಕ್ತ ಪೂರಣ ‘ಅಸ್ಪಷ್ಟತೆ, ಅಸಮರ್ಥನ’ಗಳಿಂದ ಕೊಡಲ್ಪಟ್ಟಿರುವುದರ ಕುರಿತು ಭಾವಿಸಿರಿ!

ಕೆಲವರು, ‘ಎಷ್ಟೋ ಕಡಿಮೆ ಮಟ್ಟದಲ್ಲಿ ಜೀವಿಸಲು ಸಾಧ್ಯವಾಗುವಲ್ಲಿ ಹೀಮೊಗ್ಲೋಬಿನ್‌ನ ಮಟ್ಟ 14 ಸಾಮಾನ್ಯವಾಗಿರುವುದೇಕೆ?’ ಎಂದು ಪ್ರಶ್ನಿಸಬಹುದು. ಏಕಂದರೆ, ಆಗ ನಿಮಗೆ ಮೀಸಲಾಗಿರುವ ಹೆಚ್ಚು ಆಮ್ಲಜನಕವಾಹಕ ಸಾಮರ್ಥ್ಯವಿರುತ್ತದೆ. ಇದರಿಂದಾಗಿ ನೀವು ವ್ಯಾಯಾಮ ಅಥವಾ ಶ್ರಮದ ಕೆಲಸಕ್ಕೆ ಸಿದ್ಧರಾಗಿರುತ್ತೀರಿ. ರಕ್ತಹೀನತೆಯ ರೋಗಿಗಳ ಅಧ್ಯಯನವು, “ಹೀಮೊಗ್ಲೋಬಿನ್‌ನ ಸಾಂದ್ರತೆ ಲೀಟರಿಗೆ 7 ಗ್ರಾಮ್‌ನಷ್ಟು ಕಡಿಮೆಯಾಗಿದ್ದರೂ ಕೆಲಸ ಸಾಮರ್ಥ್ಯದಲ್ಲಿ ಕಮ್ಮಿಯನ್ನು ಕಂಡು ಹಿಡಿಯುವುದು ಕಷ್ಟ. ಇತರರು ಕೇವಲ ಮಿತವಾದ ಸಾಮರ್ಥ್ಯ ನಷ್ಟಕ್ಕೆ ರುಜುವಾತನ್ನು ಕಂಡುಹಿಡಿದಿದ್ದಾರೆ” ಎಂದೂ ತೋರಿಸಿದೆ.—ಕಂಟೆಂಪರರಿ ಟ್ರಾನ್ಸ್‌ಫ್ಯೂನ್‌ ಪ್ರಾಕ್ಟಿಸ್‌, 1987.

ವಯಸ್ಕರು ಹಿಮೋಗ್ಲೋಬಿನ್‌ನ ತಗ್ಗಿದ ಮಟ್ಟವನ್ನು ಹೊಂದಿಸಿಕೊಳ್ಳುವುದಾದರೆ, ಮಕ್ಕಳ ವಿಷಯವೇನು? ಡಾ. ಜೇಮ್ಸ್‌ ಎ. ಸಾಕ್ಟ್‌ಮೆನ್‌ III ಹೇಳುವುದು: “ಅಪಕ್ವಸ್ಥಿತಿಯಲ್ಲಿ ಹುಟ್ಟಿದ ಶಿಶುಗಳು, ಕೇವಲ ಕೆಲವನ್ನೇ ಬಿಟ್ಟು, ತಮ್ಮ ಮೊದಲಿನ ಒಂದರಿಂದ ಮೂರು ತಿಂಗಳುಗಳ ವರೆಗೆ ಹೀಮೊಗ್ಲೋಬಿನ್‌ನಲ್ಲಿ ಅವನತಿಯನ್ನು ಅನುಭವಿಸುತ್ತವೆ. . . . ಶಿಶು ಸನ್ನಿವೇಶದಲ್ಲಿ ಪೂರಣದ ಚಿಕಿತ್ಸಾ ಸೂಚನೆಗಳು ಉತ್ತಮವಾಗಿ ನಿರೂಪಿಸಲ್ಪಟ್ಟಿರುವುದಿಲ್ಲ. ಅನೇಕ ಶಿಶುಗಳು ಹೀಮೊಗ್ಲೋಬಿನ್‌ ಸಾಂದ್ರತೆಯ ಗಮನಾರ್ಹ ಕೆಳಗಿನ ಮಟ್ಟವನ್ನು, ಯಾವ ವೈದ್ಯಕೀಯ ಉಪದ್ರವಗಳೂ ಇರದೆ ತಾಳಿಕೊಳ್ಳುತ್ತವೆಂದು ಕಾಣುತ್ತದೆ.”—ಪೀಡಿಯಾಟ್ರಿಕ್‌ ಕಿನ್ಲಿಕ್‌ ಆಫ್‌ ನಾರ್ತ್‌ ಅಮೆರಿಕ, ಫೆಬ್ರವರಿ 1986.

ಒಬ್ಬ ವ್ಯಕ್ತಿಗೆ ಅಪಘಾತವಾದಾಗ ಅಥವಾ ಶಸ್ತ್ರಕ್ರಿಯೆಯಲ್ಲಿ ತುಂಬಾ ರಕ್ತ ನಷ್ಟವಾದಾಗ ಅವನಿಗೆ ಏನೂ ಮಾಡ ಬೇಕಾಗಿಲ್ಲ ಎಂದು ಈ ಮಾಹಿತಿಯ ಅರ್ಥವಲ್ಲ. ರಕ್ತನಷ್ಟವು ಶೀಘ್ರವಾಗಿ ಮತ್ತು ದೊಡ್ಡ ಪ್ರಮಾಣದಲ್ಲಿ ಆಗುವಾಗ ಅವನ ರಕ್ತದೊತಡ್ತ ಕೆಳಗಿಳಿದು ಅವನು ಅಕರ್ಮಣ್ಯತೆ (shock) ಗೊಳಗಾಗಬಹುದು. ಆಗ ಮುಖ್ಯವಾಗಿ ಬೇಕಾಗಿರುವುದೇನಂದರೆ ಅವನ ರಕ್ತ ಸುರಿತವನ್ನು ನಿಲ್ಲಿಸಿ ಅವನ ಶರೀರದಲ್ಲಿ ದ್ರವದ ಗಾತ್ರವನ್ನು ಭರ್ತಿ ಮಾಡುವುದೇ. ಇದರಿಂದ ಷಾಕ್‌ನ್ನು ತಡೆ ಹಿಡಿದಂತಾಗಿ, ಉಳಿದಿರುವ ಕೆಂಪು ಕಣ ಮತ್ತು ಇತರ ಅಂಗಾಂಶಗಳು ಪರಿಚಲನೆಯಲ್ಲಿರುವಂತೆ ಸಹಾಯವಾಗುವುದು.

ಈ ರಕ್ತ ಗಾತ್ರ ಭರ್ತಿಯನ್ನು ಪೂರ್ಣ ರಕ್ತದಿಂದ ಅಥವಾ ರಕ್ತರಸ * (blood plasma) ವನ್ನು ಉಪಯೋಗಿಸದೇ ಮಾಡಬಹುದು. ಅನೇಕ ರಕ್ತದ್ರವಗಳು ಕಾರ್ಯ ಸಾಧಕವಾದ ಗಾತ್ರ ವಿಕಾಸಕಗಳು. ಇದರಲ್ಲಿ ಸೆಲೈನ್‌ (ಉಪ್ಪು) ತೀರಾ ಸರಳ ದ್ರಾವಣ. ಇದು ಅಗವ್ಗೂ ನಮ್ಮ ರಕ್ತಕ್ಕೆ ಹೊಂದಿಕೆಯಾದದ್ದೂ ಆಗಿದೆ. ಇದಲ್ಲದೆ, ವಿಶೇಷ ಘಟಕಗಳುಳ್ಳ ಡೆಕ್ಸ್‌ಟ್ರನ್‌, ಹೀಮಸ್ಸೆಲ್‌ ಮತ್ತು ಕ್ಷೀರಾಮ್ಲೀಕೃತ ರಿಂಗರ್ಸ್‌ ಸೊಲ್ಯುಷನ್‌ನಂಥ ದ್ರವಗಳೂ ಇವೆ. ಹೆಟಸಾರ್ಚ್ಟ್‌ (HES) ಎಂಬುದು ಹೊಸ ಗಾತ್ರ ವಿಕಾಸಕ ಮತ್ತು “ರಕ್ತ ಉತ್ಪನ್ನಗಳಿಗೆ ಆಕ್ಷೇಪವನ್ನೆತ್ತುವ [ಸುಟ್ಟಗಾಯದ] ರೋಗಿಗಳಿಗೆ ಅಪಾಯರಹಿತವಾಗಿ ಇದನ್ನು ಶಿಫಾರಸು ಮಾಡಬಹುದು.” (ಜರ್ನಲ್‌ ಆಫ್‌ ಬರ್ನ್‌ ಕ್ಯಾರ್‌ ಆ್ಯಂಡ್‌ ರಿಹೆಬಿಲಿಟೇನ್‌ ಜನವರಿ⁄ಫೆಬ್ರವರಿ 1989) ಇಂಥ ದ್ರವಗಳಲ್ಲಿ ನಿರ್ದಿಷ್ಟ ಪ್ರಯೋಜನಗಳಿವೆ. “[ಸಾಮಾನ್ಯ ಸೆಲೈನ್‌ ಮತ್ತು ಕ್ಷೀರಾಮ್ಲೀಕೃತ ರಿಂಗರ್ಸ್‌ ಸೊಲ್ಯುಷನ್‌ನಂಥ] ಸ್ಫಟಿಕ ರಚನೆಯ ದ್ರಾವಣಗಳು ಡೆಕ್ಸ್‌ಟ್ರನ್‌ ಮತ್ತು HES, ಸಂಬಂಧಸೂಚಕವಾಗಿ ವಿಷರಹಿತವೂ ಅಗವ್ಗೂ ಆಗಿದ್ದು ಅವು ಸದಾ ದೊರೆಯುತ್ತವೆ. ಅವನ್ನು ಕೋಣೆಯ ಮಟ್ಟದ ಶಾಖದಲ್ಲಿ ಶೇಖರಿಸಿಡಬಹುದು ಮತ್ತು ಅವಕ್ಕೆ ಸಾಮ್ಯತೆಯ ಪರೀಕ್ಷೆಯ ಅಗತ್ಯವಿಲ್ಲ ಮಾತ್ರವಲ್ಲ ಅವು ಪೂರಣ-ರವಾನಿತ ರೋಗದ ಅಪಾಯದಿಂದ ವಿಮುಕ್ತವಾಗಿವೆ.”—ಬ್ಲಡ್‌ ಟ್ರಾನ್ಸ್‌ಫ್ಯೂನ್‌ ಥೆರಪಿ—ಎ ಫಿಸಿಶಿಯನ್ಸ್‌ ಹ್ಯಾಂಡ್‌ಬುಕ್‌, 1989.

ಆದರೆ ನೀವು ಹೀಗೆ ಪ್ರಶ್ನಿಸಬಹುದು: ‘ದೇಹವ್ಯಾಪಕವಾಗಿ ಆಮ್ಲಜನಕ ಪಡೆಯಲು ನನಗೆ ಕೆಂಪು ಕಣಗಳು ಬೇಕಾಗಿರುವಾಗ ಈ ಅರಕ್ತ ಭರ್ತಿ ದ್ರವಗಳು ಅಷ್ಟು ಚೆನ್ನಾಗಿ ಕಾರ್ಯ ನಡಿಸುವುದೇಕೆ?’ ಈ ಮೊದಲೇ ಹೇಳಿರುವಂತೆ, ನಿಮ್ಮಲ್ಲಿ ಮೀಸಲಾಗಿಟ್ಟಿರುವ ಆಮ್ಲಜನಕ ವಾಹಕಗಳಿವೆ. ನೀವು ರಕ್ತ ನಷ್ಟ ಪಟ್ಟರೆ, ಅದ್ಭುತಕರವಾದ ಪರಿಹಾರಾತ್ಮಕ ಯಾಂತ್ರಿಕತೆ ಆರಂಭವಾಗುತ್ತದೆ. ಪ್ರತಿ ಬಡಿತದಲ್ಲಿ, ನಿಮ್ಮ ಹೃದಯ ಹೆಚ್ಚು ರಕ್ತವನ್ನು ರವಾನಿಸುತ್ತದೆ. ನಷ್ಟವಾದ ರಕ್ತವನ್ನು ಈಗ ಯೋಗ್ಯ ದ್ರವದಿಂದ ಭರ್ತಿಮಾಡಿರುವುದರಿಂದ, ಈಗ ತೆಳ್ಳಗಾಗಿರುವ ರಕ್ತವು ಸುಗಮವಾಗಿ, ಚಿಕ್ಕ ನಾಳಗಳಲ್ಲಿಯೂ ಹರಿಯುತ್ತದೆ. ಆಗುವ ರಾಸಾಯನಿಕ ಬದಲಾವಣೆಯಿಂದಾಗಿ ಹೆಚ್ಚು ಆಮ್ಲಜನಕ ಅಂಗಕಟ್ಟುಗಳಿಗೆ ಬಿಡುಗಡೆಯಾಗುತ್ತದೆ. ಈ ಹೊಂದಿಸಿಕೊಳ್ಳುವಿಕೆಗಳು ಎಷ್ಟು ಕಾರ್ಯಸಾಧಕವೆಂದರೆ ನಿಮ್ಮ ಕೆಂಪು ಕಣಗಳಲ್ಲಿ ಕೇವಲ ಅರ್ಧಾಂಶವೇ ಉಳಿಯುವುದಾದರೂ ಆಮ್ಲಜನಕ ವಿತರಣೆಯು ಸಾಮಾನ್ಯ ವಿತರಣೆಯ ಸುಮಾರು 75 ಪ್ರತಿಶತವಿರುತ್ತದೆ. ವಿಶ್ರಾಂತಿ ಪಡೆಯುತ್ತಿರುವ ರೋಗಿ ಅವನ ರಕ್ತದಲ್ಲಿ ದೊರೆಯುವ ಆಮ್ಲಜನಕದಲ್ಲಿ ಕೇವಲ 25 ಪ್ರತಿಶತವನ್ನು ಮಾತ್ರ ಉಪಯೋಗಿಸುತ್ತಾನೆ. ಮತ್ತು ಸಾಮಾನ್ಯ ಇಂದ್ರಿಯ ಸುಪ್ತಿ ಪದಾರ್ಥಗಳು ದೇಹದ ಆಮ್ಲಜನಕದ ಆವಶ್ಯಕತೆಯನ್ನು ಕಡಿಮೆ ಮಾಡುತ್ತವೆ.

ವೈದ್ಯರು ಹೇಗೆ ಸಹಾಯ ಮಾಡಬಲ್ಲರು?

ನಿಪುಣ ವೈದ್ಯರು, ರಕ್ತ ನಷ್ಟವಾಗಿರುವ ಮತ್ತು ಹೀಗೆ, ಕಡಿಮೆ ಕೆಂಪು ಕಣಗಳಿರುವ ಒಬ್ಬನಿಗೆ ಸಹಾಯ ಮಾಡಬಲ್ಲರು. ಗಾತ್ರ ಭರ್ತಿ ಮಾಡಲ್ಪಟ್ಟ ಮೇಲೆ, ಹೆಚ್ಚು ಸಾಂದ್ರತೆಯ ಆಮ್ಲಜನಕವನ್ನು ಕೊಡಬಹುದು. ಇದರಿಂದಾಗಿ ಅದು ದೇಹಕ್ಕೆ ಹೆಚ್ಚು ಪರಿಮಾಣದಲ್ಲಿ ದೊರಕುತ್ತದೆ ಮತ್ತು ಅನೇಕ ವೇಳೆ, ಇದರಿಂದ ಗಮನಾರ್ಹವಾದ ಫಲಿತಾಂಶ ಬಂದಿದೆ. ಬ್ರಿಟಿಷ್‌ ವೈದ್ಯರು ಈ ಚಿಕಿತ್ಸೆಯನ್ನು ಒಬ್ಬ ಮಹಿಳೆಗೆ ಕೊಟ್ಟರು. ಆಕೆಗೆ ಎಷ್ಟು ರಕ್ತ ನಷ್ಟವಾಗಿತ್ತೆಂದರೆ, “ಆಕೆಯ ಹೀಮೊಗ್ಲೋಬಿನ್‌ ಮಿಲಿಲಿಟರಿಗೆ 1.8 ಗ್ರ್ಯಾಮ್‌ಗೆ ಒಮ್ಮೆಲೆ ಇಳಿಯಿತು. ಆಕೆಗೆ . . . ಸಾಂದ್ರೀಕರಿಸಲ್ಪಟ್ಟ ಉಚ್ಛ ಆಮ್ಲಜನಕ ಮತ್ತು ದೊಡ್ಡ ಪರಿಮಾಣದಲ್ಲಿ ಜೆಲಟಿನ್‌ ದ್ರಾವಣ [ಹೀಮಸ್ಸೆಲ್‌] ದಿಂದ ಯಶಸ್ವಿಯಾಗಿ ಚಿಕಿತ್ಸೆ ನಡೆಯಿತು.” (ಆ್ಯನಸ್ತೀಸಿಯ, ಜನವರಿ 1987) ತೀರಾ ರಕ್ತ ನಷ್ಟ ಪಡೆದಿದ್ದ ಇತರರಿಗೂ ದೇಹಕ್ಕಿಂತ ಹೆಚ್ಚಿನ ಒತ್ತಡವಿರುವ ಆಮ್ಲಜನಕದ ಕೋಣೆಗಳಲ್ಲಿ ಯಶಸ್ವಿಯಾಗಿ ಚಿಕಿತ್ಸೆ ನಡೆಯಿತೆಂದು ಆ ವರದಿ ತಿಳಿಸಿತು.

ರೋಗಿಗಳು ಹೆಚ್ಚು ಕೆಂಪು ರಕ್ತ ಕಣಗಳನ್ನು ಉತ್ಪಾದಿಸುವಂತೆ ಸಹ ವೈದ್ಯರು ಸಹಾಯ ಮಾಡ ಬಲ್ಲರು. ಹೇಗೆ? ಕಬ್ಬಿಣ ಸ್ವತ ಸೇರಿರುವ ಔಷಧಗಳನ್ನು (ಸ್ನಾಯು ಅಥವಾ ಅಭಿದಮನಿಗಳಿಗೆ) ಕೊಡುವುದರ ಮೂಲಕವೇ. ಇದು ದೇಹವು ಸಾಧಾರಣಕ್ಕಿಂತ ಮೂರು ಅಥವಾ ನಾಲ್ಕು ಪಾಲು ಹೆಚ್ಚು ವೇಗದಲ್ಲಿ ಕೆಂಪು ಕಣಗಳನ್ನು ತಯಾರಿಸುವಂತೆ ಸಹಾಯ ಮಾಡ ಬಲ್ಲದು. ಇತ್ತೀಚೆಗೆ ಇನ್ನೊಂದು ಸಹಾಯ ದೊರಕಿದೆ. ನಿಮ್ಮ ಮೂತ್ರಪಿಂಡಗಳು ಇರಿತ್ರೊಪೊಯಿಟಿನ್‌ (EPO) ಎಂಬ ಚೋದಕ ಸ್ರಾವವನ್ನು ಉತ್ಪನ್ನಮಾಡುತ್ತವೆ. ಮತ್ತು ಇದು ಎಲುಬಿನ ಮಜ್ಜೆ ಕೆಂಪು ಕಣಗಳನ್ನು ಉತ್ಪಾದಿಸುವಂತೆ ಪ್ರೋತ್ಸಾಹಿಸುತ್ತದೆ. ಈಗ ಸಿಂತೆಟಿಕ್‌ (ಪುನಃ ಸಂಯೋಜಿಸಲ್ಪಟ್ಟ) ಇಪಿಓ ದೊರೆಯುತ್ತದೆ. ಇದನ್ನು ವೈದ್ಯರು ರಕ್ತಹೀನತೆಯ ರೋಗಿಗಳಿಗೆ ಕೊಡಬಹುದು ಮತ್ತು ಹೀಗೆ ಅವರು ಭರ್ತಿ ಮಾಡಬೇಕಾದ ಕೆಂಪು ಕಣಗಳನ್ನು ಬೇಗನೇ ಉತ್ಪಾದಿಸಲು ಸಹಾಯ ಮಾಡಬಹುದು.

ಶಸ್ತ್ರಚಿಕಿತ್ಸೆಯ ಸಮಯದಲ್ಲೂ ನುರಿತ ಮತ್ತು ಶುದ್ಧಾಂತಕರಣದ ವೈದ್ಯರೂ ಇಂದ್ರಿಯ ಸುಪ್ತಿ ವೈದ್ಯರೂ ಮುಂದುವರಿದ ರಕ್ತ ಉಳಿತಾಯದ ವಿಧಾನಗಳನ್ನು ಉಪಯೋಗಿಸಿ ಸಹಾಯ ಮಾಡಬಲ್ಲರು. ರಕ್ತ ಸುರಿತವನ್ನು ಕಡಿಮೆ ಮಾಡಲು, ಇಲೆಕ್ಟ್ರೋಕಾಟೆರಿ (ವಿದ್ಯುತ್‌ನಿಂದ ಅಂಗಭಾಗ ಸುಡುವ ಆಯುಧ)ಯಂಥ ಸೂಕ್ಷ್ಮ ಶಸ್ತ್ರಚಿಕಿತ್ಸಾ ವಿಧಾನಗಳ ಮಹತ್ವವನ್ನೂ ಒತ್ತಿ ಹೇಳ ಬೇಕಾದ ಆವಶ್ಯವಿಲ್ಲ. ಕೆಲವು ಸಲ ಗಾಯಕ್ಕೆ ಹರಿಯುವ ರಕ್ತವನ್ನು ಮೇಲೆತ್ತಿ, ಸೋಸಿ, ಪುನಃ ಅದನ್ನು ಚಲಾವಣೆಗೆ ತಿರುಗಿಸಬಹುದು. *

ಅರಕ್ತ ದ್ರವಗಳಿಂದ ತೋಯಿಸಿದ ಹಾರ್ಟ್‌-ಲಂಗ್‌ ಮೆಷೀನ್‌ಗಳನ್ನುಪಯೋಗಿಸುವ ರೋಗಿಗಳು ಹೀಗೆ ತೆಳ್ಳಗಾಗಿರುವ ರಕ್ತದಿಂದ ಪ್ರಯೋಜನ ಪಡೆಯಬಹುದು. ಏಕಂದರೆ ನಷ್ಟವಾಗುವ ಕೆಂಪು ಕಣಗಳು ಕೊಂಚ.

ಸಹಾಯ ನೀಡುವ ಇತರ ವಿಧಗಳೂ ಇವೆ. ಒಬ್ಬ ರೋಗಿಗೆ ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಕಡಿಮೆ ಆಮ್ಲಜನಕ ಅಗತ್ಯ ಬೀಳುವಂತೆ ಅವನನ್ನು ತಣ್ಣಗಾಗಿರಿಸಬಹುದು. ಅತಿಕರ್ಷಣ ಇಂದ್ರಿಯ ಸುಪ್ತಿ (hypotensive anesthesia) ಇನ್ನೊಂದು ವಿಧ. ಹೆಪ್ಪುಗಟ್ಟುವಿಕೆಯನ್ನು ಉತ್ತಮಗೊಳಿಸಲು ಇರುವ ಚಿಕಿತ್ಸೆ ಮತ್ತೊಂದು ವಿಧ. ರಕ್ತ ಸುರಿತದ ಸಮಯವನ್ನು ಕಡಿಮೆ ಮಾಡಲು ಡೆಸ್ಮೊಪ್ರೆಸಿನ್‌ (DDAVP) ಚಿಕಿತ್ಸೆ. ಲೇಸರ್‌ “ಸ್ಕಾಲ್‌ಪೆಲ್‌” ಚೂರಿಗಳು. ವೈದ್ಯರೂ ಚಿಂತಿಸುವ ರೋಗಿಗಳೂ ರಕ್ತ ಪೂರಣವನ್ನು ತಪ್ಪಿಸಲು ಪ್ರಯತ್ನಿಸುವಾಗ ಈ ಪಟ್ಟಿ ಉದ್ದವಾಗುವುದನ್ನು ನೀವು ನೋಡುವಿರಿ. ನಿಮಗೆ ತುಂಬ ರಕ್ತ ನಷ್ಟವಾಗಬಾರದೆಂದು ನಮ್ಮ ಹಾರೈಕೆ. ಆದರೆ, ಒಂದು ವೇಳೆ ಹಾಗಾಗುವಲ್ಲಿ, ನುರಿತ ವೈದ್ಯರು ಅನೇಕ ಅಪಾಯಗಳಿರುವ ರಕ್ತ ಪೂರಣದ ಉಪಯೋಗವಿಲ್ಲದೆನೇ ನಿಮ್ಮ ಆರೈಕೆಗೆ ಬರುವುದು ಅತಿ ಸಂಭವನೀಯ.

ಶಸ್ತ್ರಚಿಕಿತ್ಸೆ ಬೇಕು—ಆದರೆ ಪೂರಣಗಳಿಲ್ಲದೆ

ಇಂದು ಅನೇಕರು ರಕ್ತವನ್ನು ಅಂಗೀಕರಿಸುವುದಿಲ್ಲ. ಯಾವುದನ್ನು ಸಾಕ್ಷಿಗಳು ಧಾರ್ಮಿಕ ಆಧಾರದಿಂದ ಕೇಳಿಕೊಳ್ಳುತ್ತಾರೋ ಅದನ್ನು ಇತರ ಜನರು ಆರೋಗ್ಯದ ಕಾರಣದಿಂದ ಕೇಳಿಕೊಳ್ಳುತ್ತಾರೆ. ಅದೇನಂದರೆ, ಅನ್ಯ ರೀತಿಯ ಅರಕ್ತ ಚಿಕಿತ್ಸೆಯನ್ನು ಉಪಯೋಗಿಸಿ ಗುಣಮಟ್ಟದ ವೈದ್ಯಕೀಯ ಆರೈಕೆ. ನಾವು ಆಗಲೇ ನೋಡಿರುವಂತೆ ದೊಡ್ಡ ರೀತಿಯ ಶಸ್ತ್ರಚಿಕಿತ್ಸೆ ಸಾಧ್ಯವಿದೆ. ಆದರೆ ನಿಮ್ಮಲ್ಲಿ ಇನ್ನೂ ಸಂಶಯ ನಿಂತಿರುವಲ್ಲಿ, ವೈದ್ಯಕೀಯ ಸಾಹಿತ್ಯಗಳಿಂದ ಇನ್ನೂ ಕೆಲವು ಸಾಕ್ಷ್ಯಗಳು ಅವನ್ನು ತೊಲಗಿಸಬಹುದು.

“ಯೆಹೋವನ ಸಾಕ್ಷಿಗಳ ಸದಸ್ಯನಲ್ಲಿ ನಾಲ್ಮಡಿ ದೊಡ್ಡ ಮೂಳೆ ಕೀಲು ಭರ್ತಿ” ಎಂಬ ಲೇಖನವು (ಆರ್ಥೊಪೀಡಿಕ್‌ ರಿವ್ಯೂ, ಆಗಸ್ಟ್‌ 1986), “ಮೊಣಕಾಲು ಮತ್ತು ಟೊಂಕ ಇವೆರಡರಲ್ಲಿಯೂ ಮುಂಬರಿದ ಧ್ವಂಸ” ಕಂಡು ಬಂದಿದ್ದ ಒಬ್ಬ ರಕ್ತಹೀನ ರೋಗಿಯ ವಿಷಯ ತಿಳಿಸಿತು. ಶಸ್ತ್ರಚಿಕಿತ್ಸೆಯ ಮೊದಲೂ ಅನಂತರವೂ ಐಯರ್ನ್‌ ಡೆಕ್ಸ್‌ಟ್ರನ್‌ ಕೊಡಲಾಗಿ ಶಸ್ತ್ರಚಿಕಿತ್ಸೆ ಯಶಸ್ವಿಯಾಯಿತು. ಬ್ರಿಟಿಷ್‌ ಜರ್ನಲ್‌ ಆಫ್‌ ಆ್ಯನಸ್ತೀಸಿಯ (1982) 10ಕ್ಕೂ ಕಡಿಮೆ ಹೀಮೊಗ್ಲೋಬಿನ್‌ ಮಟ್ಟವಿದ್ದ 52 ವಯಸ್ಸಿನ ಒಬ್ಬ ಸಾಕ್ಷಿಯ ಕುರಿತು ವರದಿ ಮಾಡಿತು. ರಕ್ತ ನಷ್ಟ ಕಡಿಮೆ ಮಾಡಲಿಕ್ಕಾಗಿ ಭಾರೀ ಒತ್ತಡದ ಆ್ಯನಸ್ತೀಸಿಯವನ್ನು ಉಪಯೋಗಿಸಿ, ಆಕೆಗೆ ಪೂರ್ತಿ ಟೊಂಕ ಮತ್ತು ಭುಜ ಭರ್ತಿಯನ್ನು ಮಾಡಲಾಯಿತು. ಆರ್ಕನ್‌ಸಾ (ಯು. ಎಸ್‌. ಎ.) ವಿಶ್ವ ವಿದ್ಯಾಲಯದ ಒಂದು ಶಸ್ತ್ರಚಿಕಿತ್ಸಾ ತಂಡವು ಸಹ, ಸಾಕ್ಷಿಗಳ ಒಂದು ನೂರು ಟೊಂಕ ಭರ್ತಿ ಶಸ್ತ್ರಚಿಕಿತ್ಸೆಗಳಲ್ಲಿ ಇದೇ ವಿಧಾನವನ್ನು ಉಪಯೋಗಿಸಿತು ಮತ್ತು ಎಲ್ಲಾ ಚಿಕಿತ್ಸಾರ್ಥಿಗಳು ಚೇತರಿಸಿಕೊಂಡರು. ಈ ಇಲಾಖೆಯ ನಾಯಕರಾದ ಫ್ರೊಫೆಸರ್‌ ಹೇಳುವುದು: “ಆ ಸಾಕ್ಷಿ ರೋಗಿಗಳಿಂದ ನಾವು ಕಲಿತದ್ದನ್ನು ನಾವೀಗ ಪೂರ್ಣ ಟೊಂಕ ಭರ್ತಿಗಾಗಿ ಬರುವ ಎಲ್ಲಾ ರೋಗಿಗಳಲ್ಲಿ ಉಪಯೋಗಿಸುತ್ತೇವೆ.”

ಹಲವು ಸಾಕ್ಷಿಗಳ ಮನಸ್ಸಾಕ್ಷಿ, ರಕ್ತವಿಲ್ಲದೆ ಮಾಡುವ ಅಂಗ ಸ್ಥಲಾಂತರವನ್ನು ಅವರು ಅಂಗೀಕರಿಸುವಂತೆ ಅನುಮತಿಸುತ್ತದೆ. 13 ಮೂತ್ರ ಪಿಂಡ ಸ್ಧಲಾಂತರಗಳ ಒಂದು ವರದಿ ಹೀಗೆ ತೀರ್ಮಾನಿಸಿತು: “ಮೂತ್ರಪಿಂಡ ಸ್ಥಲಾಂತರಗಳನ್ನು ಹೆಚ್ಚಿನ ಯೆಹೋವನ ಸಾಕ್ಷಿಗಳ ಮೇಲೆ ಅಪಾಯರಹಿತವಾಗಿಯೂ ಗುಣಕಾರಿಯಾಗಿಯೂ ಮಾಡಸಾಧ್ಯವಿದೆಯೆಂದು ಒಟ್ಟು ಫಲಿತಾಂಶಗಳು ತಿಳಿಸುತ್ತವೆ.” (ಟ್ರಾನ್ಸ್‌ಪ್ಲಾಂಟೇಶನ್‌, ಜೂನ್‌ 1988) ಯಶಸ್ವಿಯಾದ ಹೃದಯ ಸ್ಥಲಾಂತರಗಳು ನಡೆದಾಗಲೂ, ರಕ್ತ ನಿರಾಕರಣೆ ಅವುಗಳಿಗೆ ಅಡ್ಡಿಯಾಗಿ ನಿಲ್ಲಲಿಲ್ಲ.

‘ಹಾಗಾದರೆ, ಇತರ ವಿಧಗಳ ರಕ್ತರಹಿತ ಶಸ್ತ್ರಚಿಕಿತ್ಸೆಯ ಕುರಿತೇನು?’ ಎಂದು ನೀವು ಕೇಳಬಹುದು “[ವೆಯ್ನ್‌ ಸ್ಟೇಟ್‌ ಯೂನಿವರ್ಸಿಟಿ, ಯು. ಎಸ್‌. ಎ.] ಯಲ್ಲಿ ರಕ್ತವಿಲ್ಲದೆ, ಸ್ತ್ರೀರೋಗ ಮತ್ತು ಪ್ರಸವ ಶಾಸ್ತ್ರಸಂಬಂಧದಲ್ಲಿ ಚಿಕಿತ್ಸೆಯಾದ ಯೆಹೋವನ ಸಾಕ್ಷಿಗಳ” ವಿಷಯದಲ್ಲಿ ಮೆಡಿಕಲ್‌ ಹಾಟ್‌ಲೈನ್‌ (ಏಪ್ರಿಲ್‌⁄ಮೇ 1983) ಹೀಗೆ ವರದಿ ಮಾಡಿತು: “ರಕ್ತ ಪೂರಣ ಮಾಡಿ ಇದೇ ರೀತಿಯ ಶಸ್ತ್ರಚಿಕಿತ್ಸೆಯಾದ ಸ್ತ್ರೀಯರಿಗಿಂತ ಹೆಚ್ಚು ಮರಣ ಮತ್ತು ಜಟಿಲ ಸಮಸ್ಯೆಗಳು ಇಲ್ಲಿ ಸಂಭವಿಸಲಿಲ್ಲ.” ಆ ಬಳಿಕ ಆ ಪತ್ರಿಕೆ ಹೇಳಿದ್ದು: “ಈ ಅಧ್ಯಯನದ ಫಲಿತಾಂಶಗಳಿಂದಾಗಿ ಪ್ರಸವ ಮತ್ತು ಸ್ತ್ರೀರೋಗಗಳಿಗೆ ಶಸ್ತ್ರಚಿಕಿತ್ಸೆಗೊಳಗಾಗುವ ಸ್ತ್ರೀಯರೆಲ್ಲರಿಗೆ ರಕ್ತವನ್ನುಪಯೋಗಿಸುವ ವಿಷಯವನ್ನು ಹೊಸ ದೃಷ್ಟಿಯಲ್ಲಿ ನೋಡಬೇಕಾಗಿ ಬಂದೀತು.”

ಗಾಟಿಂಗೆನ್‌ ವಿಶ್ವ ವಿದ್ಯಾಲಯ (ಜರ್ಮನಿ)ಯ ಆಸ್ಪತ್ರೆಯಲ್ಲಿ ರಕ್ತ ನಿರಾಕರಿಸಿದ 30 ರೋಗಿಗಳು ಸಾಮಾನ್ಯ ಶಸ್ತ್ರಚಿಕಿತ್ಸೆ ಪಡೆದರು. “ರಕ್ತ ಪೂರಣ ಪಡೆಯುವ ರೋಗಿಗೆ ಬರಬಹುದಾಗಿದ್ದ ಸಮಸ್ಯೆಗಳಲ್ಲದೆ ಇನ್ನಾವುದೂ ಇವರಿಗೆ ಬರಲಿಲ್ಲ. . . . ರಕ್ತ ಪೂರಣವಲ್ಲದೆ ಇನ್ನಾವ ಮಾರ್ಗವೂ ಇಲ್ಲವೆಂಬುದನ್ನು ಮಿತಿಮೀರಿ ಒತ್ತಿ ಹೇಳಬಾರದು. ಮತ್ತು ಇದು [ನಮ್ಮನ್ನು] ಅಗತ್ಯವೂ ನ್ಯಾಯವೂ ಆದ ಶಸ್ತ್ರಚಿಕಿತ್ಸೆ ಮಾಡದಿರುವಂತೆ ನಡೆಸಬಾರದು.”—ರಿಸಿಕೊ ಇನ್‌ ಡರ್‌ ಕಿರುರ್ಗಿ, 1987.

ಉದಾಹರಣೆಗೆ, ನ್ಯೂ ಯೋರ್ಕ್‌ ಯೂನಿವರ್ಸಿಟಿ ಮೆಡಿಕಲ್‌ ಸೆಂಟರ್‌ನಲ್ಲಿ ವಯಸ್ಕರಿಗೆ ಮತ್ತು ಮಕ್ಕಳಿಗೆ ರಕ್ತ ಕೊಡದೆ ಮಿದುಳಿನ ಶಸ್ತ್ರಚಿಕಿತ್ಸೆಯನ್ನೂ ಮಾಡಲಾಗಿದೆ. 1989 ರಲ್ಲಿ, ನ್ಯೂರೋ ಸರ್ಜರಿ ವಿಭಾಗದ ಮುಖ್ಯಸ್ಥ ಡಾ. ಜೋಸೆಫ್‌ ರ್ಯಾನ್‌ಸೊಹಾಫ್‌ ಬರೆದುದು: “ಅನೇಕ ಸಂದರ್ಭಗಳಲ್ಲಿ ರಕ್ತ ಉತ್ಪನ್ನಗಳ ವಿರುದ್ಧ ಧಾರ್ಮಿಕ ಕಟ್ಟಳೆಗಳಿರುವ ರೋಗಿಗಳಿಗೆ, ವಿಶೇಷವಾಗಿ, ಶಸ್ತ್ರಚಿಕಿತ್ಸೆಯನ್ನು ತ್ವರಿತಗತಿಯಿಂದ ಮತ್ತು ಕಡಿಮೆ ಅವಧಿಯೊಳಗೆ ಮಾಡಿ ಮುಗಿಸುವುದಾದರೆ ರಕ್ತ ಉತ್ಪನ್ನಗಳಿಂದ ದೂರವಿರುವುದನ್ನು ಅತಿ ಕಡಿಮೆ ಅಪಾಯದಿಂದ ಸಾಧಿಸಸಾಧ್ಯವಿದೆಯೆಂಬದು ಅತಿ ಸ್ಪಷ್ಟ. ಹೆಚ್ಚು ಆಸಕ್ತಿಯ ವಿಷಯವೇನಂದರೆ, ತಮ್ಮ ಧಾರ್ಮಿಕ ನಂಬಿಕೆಗಳನ್ನು ಗೌರವಿಸಿದ್ದಕ್ಕಾಗಿ ಉಪಕಾರ ಎಂದು ಅವರು ಆಸ್ಪತ್ರೆ ಬಿಟ್ಟು ಹೋಗುವಾಗ ಹೇಳುವ ತನಕ ರೋಗಿಯು ಸಾಕ್ಷಿ ಎಂಬುದನ್ನು ನಾನು ಅನೇಕ ವೇಳೆ ಮರೆತು ಬಿಡುತ್ತೇನೆ.”

ಅಂತಿಮವಾಗಿ, ಹೃದಯ ಮತ್ತು ನಾಳಗಳ ಜಟಿಲವಾದ ಶಸ್ತ್ರಚಿಕಿತ್ಸೆಯನ್ನು ವಯಸ್ಕರೂ ಮಕ್ಕಳೂ ಪಡೆಯಸಾಧ್ಯವಿದೆಯೇ? ಇದನ್ನು ಮಾಡುವುದರಲ್ಲಿ ಡಾ. ಡೆಂಟನ್‌ ಎಂ. ಕೂಲೀ ಮೊದಲಿಗರು. ಪುಟ 27-9ರ ಪರಿಶಿಷ್ಟದಲ್ಲಿ ಪುನರ್ಮುದ್ರಿತ ಲೇಖನದಲ್ಲಿ ನೀವು ನೋಡುವಂತೆ, ಮೊದಲನೆಯ ಇನ್ನೊಂದು ವಿಶ್ಲೇಷಣೆಯ ಆಧಾರದ ಮೇರೆಗೆ ಡಾ. ಕೂಲೀ ಅವರ ತೀರ್ಮಾನ ಹೀಗಿದೆ: “ಯೆಹೋವನ ಸಾಕ್ಷಿಗಳ ಗುಂಪಿಗೆ ಸೇರಿದ ರೋಗಿಗಳಿಗೆ ಶಸ್ತ್ರಚಿಕಿತ್ಸೆಯಲ್ಲಿ ಅಪಾಯವು ಇತರರಿಗಿಂತ ವಸ್ತುತಃ ಹೆಚ್ಚಾಗಿರುವುದಿಲ್ಲ.” ಈಗ, ಇಂಥ 1,106 ಆಪರೇಷನ್‌ಗಳನ್ನು ಮಾಡಿದ ಬಳಿಕ ಅವರು ಬರೆಯುವುದು: “ಪ್ರತಿ ಸಂಬಂಧದಲ್ಲಿಯೂ ನಾನು ರೋಗಿಯೊಂದಿಗೆ ಮಾಡಿದ ಒಡಂಬಡಿಕೆ ಅಥವಾ ಕರಾರನ್ನು” ಅಂದರೆ, ರಕ್ತವನ್ನು ಉಪಯೋಗಿಸದಿರುವ ಕರಾರನ್ನು, “ತಪ್ಪದೇ ನೆರವೇರಿಸಿದ್ದೇನೆ.”

ಯೆಹೋವನ ಸಾಕ್ಷಿಗಳಿಗಿರುವ ಒಳ್ಳೆಯ ಮನೋಭಾವ ಇನ್ನೊಂದು ಸಂಗತಿಯಾಗಿದೆ ಎಂದು ಸರ್ಜನರು ಗಮನಿಸಿದ್ದಾರೆ. ಅಕ್ಟೋಬರ್‌ 1989 ರಲ್ಲಿ ಡಾ. ಕೂಲೀ ಬರೆದುದು: “ಈ ರೋಗಿಗಳ ಮನೋಭಾವ ಆದರ್ಶಪ್ರಾಯ. ಅವರಿಗೆ, ಅನೇಕ ರೋಗಿಗಳಿಗಿರುವಂತೆ, ಜಟಿಲ ರೋಗ ಸಮಸ್ಯೆಗಳ ಮತ್ತು ಮರಣದ ಭಯವೂ ಇಲ್ಲ. ಅವರಿಗೆ ತಮ್ಮ ನಂಬಿಕೆ ಮತ್ತು ತಮ್ಮ ದೇವರ ಮೇಲೆ, ಆಳವಾದ ಹಾಗೂ ಶಾಶ್ವತವಾದ ವಿಶ್ವಾಸವಿದೆ.”

ಅವರು ಸಾಯುವ ಹಕ್ಕನ್ನು ಪ್ರತಿಪಾದಿಸುತ್ತಾರೆ ಎಂದು ಇದರ ಅರ್ಥವಲ್ಲ. ಗುಣವಾಗುವ ಅಪೇಕ್ಷೆ ಅವರಿಗಿರುವುದರಿಂದ, ಅವರು ಕ್ರಿಯಾಶೀಲವಾಗಿ ಗುಣಮಟ್ಟದ ಆರೈಕೆಯನ್ನು ಹುಡುಕುತ್ತಾರೆ. ರಕ್ತದ ವಿಷಯದಲ್ಲಿ ದೇವರ ನಿಯಮಕ್ಕೆ ವಿಧೇಯತೆಯು ವಿವೇಕ ಮಾರ್ಗವೆಂದು ಅವರು ಮನಗಂಡಿದ್ದಾರೆ ಮತ್ತು ಈ ವೀಕ್ಷಣವು ರಕ್ತರಹಿತ ಶಸ್ತ್ರಚಿಕಿತ್ಸೆಯ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರುತ್ತದೆ.

ಫ್ರೀಬರ್ಗ್‌ ವಿಶ್ವ ವಿದ್ಯಾನಿಲಯ (ಜರ್ಮನಿ)ದ ಸರ್ಜಿಕಲ್‌ ಆಸ್ಪತ್ರೆಯ ಫ್ರೊಫೆಸರ್‌ ಡಾ. ವಿ. ಶಾಸ್ಲರ್‌ ಗಮನಿಸಿದ್ದು: “ರೋಗಿಗಳ ಈ ಗುಂಪಿನಲ್ಲಿ ಶಸ್ತ್ರಚಿಕಿತ್ಸೆಯನ್ನು ಆವರಿಸುವ ಸಮಯದಲ್ಲಿ ನಡೆಯುವ ರಕ್ತ ಸುರಿತ ಹೆಚ್ಚಾಗಿರಲಿಲ್ಲ. ಶಸ್ತ್ರಚಿಕಿತ್ಸಾ ಸಮಸ್ಯೆಗಳು ಇದ್ದುವಾದರೆ, ಅವು ಕಡಿಮೆಯಾಗಿದ್ದವು. ಯೆಹೋವನ ಸಾಕ್ಷಿಗಳಿಗೆ ಪ್ರತಿನಿಧಿರೂಪವಾದ, ಅಸ್ವಸ್ಥತೆಯ ವಿಶೇಷ ವೀಕ್ಷಣವು ಈ ಶಸ್ತ್ರಚಿಕಿತ್ಸೆಯನ್ನಾವರಿಸಿದ ಸಮಯದಲ್ಲಿ ಸಕಾರಾತ್ಮಕ ಪ್ರಭಾವವನ್ನು ಬೀರಿತು.”—ಹರ್ಸ್‌ ಕ್ರೈಸಾಫ್ಲ್‌, ಆಗಸ್ಟ್‌ 1987.

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 12 ಸಾಕ್ಷಿಗಳು ಪೂರ್ಣ ರಕ್ತ, ಕೆಂಪು ಕಣಗಳು, ಬಿಳಿ ಕಣಗಳು, ಕಿರುಫಲಕ (ರಕ್ತ ಹೆಪ್ಪುಗಟ್ಟುವಿಕೆಗೆ ರಕ್ತದಲ್ಲಿರುವ ಒಂದು ಅಂಶ), ಮತ್ತು ರಕ್ತ ದ್ರವ ಇರುವ ಪೂರಣವನ್ನು ಸ್ವೀಕರಿಸುವುದಿಲ್ಲ. ರೋಗರಕ್ಷೆಯ ಹನಿ (ಗೊಬ್ಲ್ಯುಲಿನ್‌) ಯ ಚಿಕ್ಕ ವಿಭಜಿತ ಘಟಕಗಳ ಕುರಿತಾಗಿ, ಜೂನ್‌ 1, 1990ರ ದ ವಾಚ್‌ಟವರ್‌ನ ಪುಟ 30-1ನ್ನು ನೋಡಿರಿ.

^ ಪ್ಯಾರ. 17 ಮಾರ್ಚ್‌ 1, 1989ರ ದ ವಾಚ್‌ಟವರ್‌ನ 30-1 ಪುಟಗಳು, ರಕ್ತ ಸಂರಕ್ಷಿಸುವ ಮತ್ತು ರಕ್ತ ಸಂಚರಣೆ ಜ್ಯಾರಿಯಲ್ಲಿಡುವ (ಎಕ್ಸ್‌ಟ್ರಾಕೊರ್ಪೊರಿಯಲ್‌—ದೇಹದ ಹೊರಗಿನಿಂದ) ಸಲಕರಣೆಗಳ ವಿಧಾನಗಳಲ್ಲಿರುವ ಬೈಬಲ್‌ ಸೂತ್ರಗಳನ್ನು ಪರಿಗಣಿಸುತ್ತವೆ.

[ಪುಟ 24 ರಲ್ಲಿರುವ ಚೌಕ]

ಪ್ರಚಲಿತವಾಗಿ, ಪೂರಣದಿಂದ ಪ್ರಯೋಜನದ ಸಂದರ್ಭವೇ ಇಲ್ಲದ (ರಕ್ತ ಅವಶ್ಯವಿಲ್ಲದ) ಆದರೂ ಅನಪೇಕ್ಷಿತ ಪರಿಣಾಮದ ಗಮನಾರ್ಹ ಅಪಾಯವಿರುವ, ರಕ್ತದ ಅಂಗಾಂಶಗಳನ್ನು ಪಡೆಯುವ ಅನೇಕ ರೋಗಿಗಳಿದ್ದಾರೆಂದು ನಾವು ತೀರ್ಮಾನಿಸತಕ್ಕದ್ದು. ಜ್ಞಾತವಾಗಿ ಯಾವ ವೈದ್ಯನೂ ರೋಗಿಯನ್ನು ಸಹಾಯ ಸಾಧ್ಯವಿಲ್ಲದ, ಆದರೆ ಹಾನಿ ತರ ಬಹುದಾದ ಚಿಕಿತ್ಸೆಗೊಳಪಡಿಸನು. ಆದರೆ ಅನಾವಶ್ಯಕವಾಗಿ ರಕ್ತ ಪೂರಣ ಮಾಡುವಾಗ ಸಂಭವಿಸುವುದು ಇದೇ.”—“ಟ್ರಾನ್ಸ್‌ಫ್ಯೂಷನ್‌-ಟ್ರಾನ್ಸ್‌ಮಿಟೆಡ್‌ ವೈರಲ್‌ ಡಿಸೀಸೆಸ್‌,” 1987.

[ಪುಟ 25 ರಲ್ಲಿರುವ ಚೌಕ]

ಹಲವು ಲೇಖಕರು 100 ಮಿಲಿಲಿಟರ್‌ಗೆ 2ರಿಂದ 2.5 ಗ್ರ್ಯಾಮ್‌ ಹೀಮೊಗ್ಲೋಬಿನ್‌ ಮಟ್ಟವು ಹಿತಕರವಾಗಿರಬಹುದೆಂದು ಹೇಳಿದ್ದಾರೆ. . . . ಆರೋಗ್ಯವುಳ್ಳ ಒಬ್ಬ ವ್ಯಕ್ತಿ, ಕೆಂಪು ಕಣಗಳಲ್ಲಿ 50 ಪ್ರತಿಶತವನ್ನು ಕಳೆದು ಕೊಂಡರೂ ಅದನ್ನು ಸಹಿಸಿ ಕೊಳ್ಳ ಬಹುದು ಮತ್ತು ಇಂಥ ರಕ್ತ ನಷ್ಟ ಸಮಯಾವಧಿಯಲ್ಲಿ ಆಗಿರುವುದಾದರೆ ಅವನಲ್ಲಿ ಪ್ರಾಯಶಃ ಯಾವ ರೋಗ ಸೂಚನೆಯೂ ಕಂಡು ಬರಲಿಕ್ಕಿಲ್ಲ.”—ಟೆಕ್ನೀಕ್ಸ್‌ ಆಫ್‌ ಬ್ಲಡ್‌ ಟ್ರಾನ್ಸ್‌ಫ್ಯೂಷನ್‌,” 1982.

[ಪುಟ 26 ರಲ್ಲಿರುವ ಚೌಕ]

ಅಂಗಕಟುಗ್ಟಳಿಗೆ ಆಮ್ಲಜನಕದ ರವಾನೆ, ಗಾಯವಾಸಿಯಾಗುವಿಕೆ ಮತ್ತು ರಕ್ತ ‘ಪೋಷಕ ಮೌಲ್ಯ’-ಈ ಹಳೆಯ ಭಾವನೆಗಳು ಈಗ ತ್ಯಜಿಸಲಾಗುತ್ತಿವೆ. ಯೆಹೋವನ ಸಾಕ್ಷಿಗಳಾದ ರೋಗಿಗಳ ಅನುಭವ, ಕಠಿಣ ರಕ್ತಹೀನತೆಯೂ ಉತ್ತಮವಾಗಿ ತಾಳಿಕೊಳ್ಳಲ್ಪಡುತ್ತದೆಂದು ತೋರಿಸುತ್ತದೆ.”—“ದಿ ಆ್ಯನಲ್ಸ್‌ ಆಫ್‌ ಥೊರ್ಯಾಸಿಕ್‌ ಸರ್ಜರಿ,” ಮಾರ್ಚ್‌ 1989.

[ಪುಟ 27 ರಲ್ಲಿರುವ ಚೌಕ]

ಚಿಕ್ಕ ಮಕ್ಕಳಿಗೂ? “ಶಸ್ತ್ರಚಿಕಿತ್ಸೆಯ ಜಟಿಲತೆಯನ್ನು ಲಕ್ಷಿಸದೆ ರಕ್ತರಹಿತ ವಿಧಾನದಲ್ಲಿ ನಲ್ವತ್ತೆಂಟು ಒಪನ್‌ ಹಾರ್ಟ್‌ ಸರ್ಜರಿ (ತೆರೆದ ಹೃದಯದ ಶಸ್ತ್ರಚಿಕಿತ್ಸೆ) ಗಳನ್ನು ಮಾಡಲಾಯಿತು.” ಮಕ್ಕಳಲ್ಲಿ 10.3 ಪೌಂಡ್‌ (4.7 ಕಿಲೊ) ನಷ್ಟು ಚಿಕ್ಕಭಾರದವರೂ ಇದ್ದರು. “ಯೆಹೋವನ ಸಾಕ್ಷಿಗಳಲ್ಲಿ ನಾವು ಸ್ಥಿರತೆಯ ಸಾಫಲ್ಯ ಪಡೆದಿರುವುದರಿಂದ ನಾವೀಗ ಮಕ್ಕಳ ಹೆಚ್ಚಿನ ಹೃದಯ ಶಸ್ತ್ರಚಿಕಿತ್ಸೆಯನ್ನು ರಕ್ತವಿಲ್ಲದೆ ನಡೆಸುತ್ತೇವೆ.”—“ಸರ್ಕ್ಯುಲೇಷನ್‌,” ಸಪ್ಟಂಬರ 1984.

[ಪುಟ 26 ರಲ್ಲಿರುವ ಚಿತ್ರ]

ರಕ್ತ ಬೇಡವೆಂದು ಹೇಳುವ ರೋಗಿಗಳಿಗೆ ಹಾರ್ಟ್‌-ಲಂಗ್‌ ಮೆಷೀನ್‌ ಹೃದಯ ಶಸ್ತ್ರಚಿಕಿತ್ಸೆಯಲ್ಲಿ ದೊಡ್ಡ ಸಹಾಯವಾಗಿ ಪರಿಣಮಿಸಿದೆ