ಮಾಹಿತಿ ಇರುವಲ್ಲಿ ಹೋಗಲು

ಶಾಂತಿಭರಿತ ಹೊಸ ಲೋಕದಲ್ಲಿ ಜೀವನ

ಶಾಂತಿಭರಿತ ಹೊಸ ಲೋಕದಲ್ಲಿ ಜೀವನ

ಶಾಂತಿಭರಿತ ಹೊಸ ಲೋಕದಲ್ಲಿ ಜೀವನ

ಈ ಟ್ರ್ಯಾಕ್ಟ್‌ನಲ್ಲಿರುವ ದೃಶ್ಯವನ್ನು ನೀವು ನೋಡುವಾಗ ಯಾವ ಅನಿಸಿಕೆಗಳು ನಿಮಗಾಗುತ್ತವೆ? ಅಲ್ಲಿ ಕಂಡುಬರುವ ಶಾಂತಿ, ಸಂತೋಷ ಮತ್ತು ಸಮೃದ್ಧಿಗಾಗಿ ನಿಮ್ಮ ಹೃದಯವು ಹಂಬಲಿಸುವುದಿಲ್ಲವೇ? ನಿಶ್ಚಯವಾಗಿಯೂ ಹೌದು. ಆದರೆ, ಈ ಪರಿಸ್ಥಿತಿಗಳು ಎಂದಾದರೂ ಭೂಮಿಯಲ್ಲಿ ನೆಲೆಸುವವೆಂದು ನಂಬುವುದು ಕೇವಲ ಒಂದು ಕನಸು ಅಥವಾ ಭ್ರಮೆಯಾಗಿದೆಯೋ?

ಅಧಿಕಾಂಶ ಜನರು ಪ್ರಾಯಶಃ ಹಾಗೆ ನೆನಸ್ಯಾರು. ಯುದ್ಧ, ದುಷ್ಕರ್ಮ, ಹಸಿವು, ರೋಗ, ವೃದ್ಧಾಪ್ಯವೇ ಇಂದಿನ ನಿಜತ್ವಗಳಲ್ಲಿ ಕೇವಲ ಕೆಲವೆಂದು ಹೇಳಬಹುದು. ಆದರೂ, ನಿರೀಕ್ಷಿಯಿಡಲು ಸಕಾರಣವದೆ. ಭವಿಷ್ಯತ್ತಿನ ಮುನ್ನೋಟದಲ್ಲಿ ಬೈಬಲ್‌ ನಮಗಂದಿರುವುದು: “ನಾವು ದೇವರ ವಾಗ್ದಾನವನ್ನು ನಂಬಿ ನೂತನಾಕಾಶಮಂಡಲವನ್ನೂ ನೂತನಭೂಮಂಡಲವನ್ನೂ ಎದುರು ನೋಡುತ್ತಾ ಇದ್ದೇವೆ; ಅವುಗಳಲ್ಲಿ ನೀತಿಯು ವಾಸವಾಗಿರುವುದು.”—2 ಪೇತ್ರ 3:13; ಯೆಶಾಯ 65:17.

ಈ “ನೂತನಾಕಾಶಮಂಡಲ” ಮತ್ತು “ನೂತನಭೂಮಂಡಲ”ಗಳೆಂದು ಬೈಬಲು ಹೇಳುವಂಥವುಗಳು ಒಂದು ಹೊಸ ಭೌತಿಕ ಆಕಾಶ ಅಥವಾ ಒಂದು ಅಕ್ಷರಾರ್ಥ ಹೊಸ ಭೂಮಿಯು ಅಲ್ಲ. ನಮ್ಮೀ ಭೌತಿಕ ಭೂಮ್ಯಾಕಾಶಗಳು ಪರಿಪೂರ್ಣವಾಗಿ ರಚಿಸಲ್ಪಟ್ಟವುಗಳು ಮತ್ತು ಅವು ಸದಾಕಾಲ ಉಳಿಯುವವೆಂದು ಬೈಬಲು ಹೇಳುತ್ತದೆ. (ಕೀರ್ತನೆ 89:36, 37; 104:5) “ನೂತನಭೂಮಂಡಲ”ವೆಂದರೆ ಭೂಮಿಯಲ್ಲಿ ಜೀವಿಸಲಿರುವ ಹೊಸ ಮಾನವ ಸಮಾಜವು, ಮತ್ತು “ನೂತನಾಕಾಶಮಂಡಲ”ವು ಪರಿಪೂರ್ಣವಾದ ಒಂದು ಸ್ವರ್ಗೀಯ ರಾಜ್ಯ ಅಥವಾ ಸರ್ಕಾರವಾಗಿದ್ದು, ಭೂಮಿಯ ಮಾನವ ಸಮಾಜವನ್ನು ಆಳುವಂಥಾದ್ದು. ಆದರೆ, ಒಂದು “ನೂತನಭೂಮಂಡಲ” ಅಥವಾ ಮಹಿಮಾಯುಕ್ತ ಹೊಸ ಲೋಕ ಸಾಧ್ಯವೆಂದು ನಂಬುವುದು ವಾಸ್ತವಿಕತೆಯೋ?

ಒಳ್ಳೇದು, ಅಂಥಾ ಉತ್ತಮ ಪರಿಸ್ಥಿತಿಗಳು ಈ ಭೂಮಿಗಾಗಿ ದೇವರ ಮೂಲ ಉದ್ದೇಶದ ಭಾಗವಾಗಿದ್ದ ನಿಜತ್ವವನ್ನು ಸ್ವಲ್ಪ ಗಮನಿಸಿರಿ. ಆತನು ಮೊದಲ ಮಾನವ ದಂಪತಿಗಳನ್ನು ಏದೆನ್‌ ಭೂಪರದೈಸದಲ್ಲಿಟ್ಟು ಅವರಿಗೊಂದು ಆಶ್ಚರ್ಯಕರ ನೇಮಕವನ್ನಿತ್ತನು: “ನೀವು ಬಹುಸಂತಾನವುಳ್ಳವರಾಗಿ ಹೆಚ್ಚಿರಿ; ಭೂಮಿಯಲ್ಲಿ ತುಂಬಿಕೊಂಡು ಅದನ್ನು ವಶಮಾಡಿಕೊಳ್ಳಿರಿ.” (ಆದಿಕಾಂಡ 1:28) ಹೌದು, ಅವರು ಮಕ್ಕಳನ್ನು ಹಡೆದು ಕಟ್ಟಕಡೆಗೆ ತಮ್ಮ ಪರದೈಸವನ್ನು ಭೂಮಿಯಲ್ಲೆಲ್ಲಾ ಹಬ್ಬಿಸುವುದೇ ಅವರಿಗೆ ದೇವರ ಉದ್ದೇಶವಾಗಿತ್ತು. ತರುವಾಯ, ಅವರು ದೇವರಿಗೆ ಅವಿಧೇಯರಾಗಿ ಪರಿಣಮಿಸಿದರೂ ಮತ್ತು ಹೀಗೆ ಸದಾ ಜೀವಿಸಲು ಅಯೋಗ್ಯರಾಗಿ ಪರಿಣಮಿಸಿದರೂ, ದೇವರ ಮೂಲೋದ್ದೇಶವು ಬದಲಾಗಲಿಲ್ಲ. ಒಂದು ಹೊಸ ಲೋಕದಲ್ಲಿ ಅದು ನೆರವೇರಲೇಬೇಕು!—ಯೆಶಾಯ 55:11.

ವಾಸ್ತವದಲ್ಲಿ, ನಾವು ನಮ್ಮ ತಂದೆ ಅಥವಾ ಕರ್ತನ ಪ್ರಾರ್ಥನೆಯಲ್ಲಿ—ದೇವರ ರಾಜ್ಯ ಬರಲಿ ಎಂದು ಹೇಳುವಾಗ, ಆತನ ಸ್ವರ್ಗೀಯ ಸರ್ಕಾರವು ಭೂಮಿಯ ದುಷ್ಟತನವನ್ನು ನಿರ್ಮೂಲಗೊಳಿಸುವಂತೆ ಮತ್ತು ಈ ಹೊಸ ಲೋಕವನ್ನು ಆಳುವಂತೆ ಪ್ರಾರ್ಥಿಸುವವರಾಗಿದ್ದೇವೆ. (ಮತ್ತಾಯ 6:9, 10) ಮತ್ತು ದೇವರು ಆ ಪ್ರಾರ್ಥನೆಯನ್ನು ಉತ್ತರಿಸುವನೆಂಬ ಭರವಸವು ನಮಗಿರಸಾಧ್ಯವಿದೆ ಯಾಕಂದರೆ ಆತನ ವಾಕ್ಯವು ವಚನವಿತ್ತದ್ದು: “ನೀತಿವಂತರೋ ಭೂಮಿಯನ್ನು ಅನುಭವಿಸುವವರಾಗಿ ಅದರಲ್ಲಿ ಶಾಶ್ವತವಾಗಿ ವಾಸಿಸುವರು.”—ಕೀರ್ತನೆ 37:29, NW.

ದೇವರ ಹೊಸ ಲೋಕದಲ್ಲಿ ಜೀವನ

ದೇವರ ರಾಜ್ಯವು ತುಲನೆಗೆ ಮೀರಿದ ಭೂಪ್ರಯೋಜನಗಳನ್ನು ತರಲಿರುವುದು: ತನ್ನ ಜನರಿಗೆ ಭೂಮಿಯಲ್ಲಿ ಆನಂದಿಸಲು ದೇವರು ಮೂಲೋದ್ದೇಶಿಸಿದ ಎಲ್ಲಾ ಒಳಿತನ್ನು ಅದು ಪೂರೈಸುವುದು. ದ್ವೇಷ ಮತ್ತು ದುರಭಿಮಾನಗಳು ಇಲ್ಲದೆ ಹೋಗುವವು ಮತ್ತು ಕಟ್ಟಕಡೆಗೆ ಭೂಮಿಯಲ್ಲಿರುವ ಪ್ರತಿಯೊಬ್ಬನು ಇನ್ನೊಬ್ಬನ ನಿಜ ಮಿತ್ರನಾಗಿ ಪರಿಣಮಿಸುವನು. “ಲೋಕದ ಎಲ್ಲಾ ಭಾಗದಲ್ಲೂ ಯುದ್ದವನ್ನು ನಿಲ್ಲಿಸಿ”ಬಿಡುವನೆಂದು ದೇವರು ಬೈಬಲಿನಲ್ಲಿ ವಚನವಿತ್ತಿದ್ದಾನೆ: “ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ.”—ಕೀರ್ತನೆ 46:9; ಯೆಶಾಯ 2:4.

ಕಟ್ಟಕಡೆಗೆ ಇಡೀ ಭೂಮಿಯು ಪರದೈಸ ಪರಿಸ್ಥಿತಿಯುಳ್ಳ ಒಂದು ಉದ್ಯಾನವನವಾಗಿ ಮಾರ್ಪಡುವುದು. ಬೈಬಲನ್ನುವುದು: “ಅರಣ್ಯವೂ ಮರುಭೂಮಿಯೂ ಆನಂದಿಸುವವು; ಒಣನೆಲವು ಹರ್ಷಿಸಿ ತಾವರೆಯಂತೆ ಕಳಕಳಿಸುವದು. . . . ಅರಣ್ಯದಲ್ಲಿ ಒರತೆಗಳು ಒಡೆಯುವವು, ಒಣನೆಲದಲ್ಲಿ ನದಿಗಳು ಹುಟ್ಟಿ ಹರಿಯುವವು. ಬೆಂಗಾಡು ಸರೋವರವಾಗುವದು; ಒಣನೆಲದಲ್ಲಿ ಬುಗ್ಗೆಗಳುಕ್ಕುವವು.”—ಯೆಶಾಯ 35:1, 6, 7.

ಆ ಪರದೈಸ ಭೂಮಿಯಲ್ಲಿ ಸಂತೋಷದಿಂದಿರಲು ಸಕಾರಣವಿರುವದು. ಜನರು ಇನ್ನೆಂದೂ ಆಹಾರದ ಅಭಾವದಿಂದಾಗಿ ಹಸಿಯರು. “ಭೂಮಿಯು ಖಂಡಿತವಾಗಿಯೂ ಒಳ್ಳೇ ಬೆಳೆಯನ್ನು ಕೊಡುವದು” ಎಂದು ಬೈಬಲನ್ನುತ್ತದೆ. (ಕೀರ್ತನೆ 67:6, NW; 72:16) ಎಲ್ಲರೂ ತಮ್ಮತಮ್ಮ ದುಡಿಮೆಯ ಫಲವನ್ನು ಅನುಭವಿಸುವರೆಂದು ನಮ್ಮ ನಿರ್ಮಾಣಿಕನು ವಾಗ್ದಾನಿಸಿದ್ದಾನೆ: “ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು. . . . ಒಬ್ಬನು ಮಾಡಿದ ತೋಟದ ಫಲವು ಇನ್ನೊಬ್ಬನಿಗೆ ವಶವಾಗದು.”—ಯೆಶಾಯ 65:21, 22.

ದೇವರ ನೂತನ ಲೋಕದಲ್ಲಿ ಇನ್ನು ಮುಂದೆ ಜನರೆಂದಾದರೂ ದೊಡ್ಡ ಕಟ್ಟಡಗಳ ನಿಬಿಡ ಕೊಠಡಿಗಳಲ್ಲಿ ಯಾ ಹೊಲಸು ಕೇರಿಗಳಲ್ಲಿ ವಾಸಿಸರು ಯಾಕೆಂದರೆ ದೇವರು ಉದ್ದೇಶಿಸಿರುವುದು: “ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, . . . ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು.” ಬೈಬಲು ಈ ವಚನವನ್ನೂ ಕೊಟ್ಟಿದೆ: “ಅವರು ವ್ಯರ್ಥವಾಗಿ ದುಡಿಯರು.” (ಯೆಶಾಯ 65:21-23) ಹೀಗೆ, ಜನರಿಗೆ ಫಲದಾಯಕವಾದ ಸಂತೃಪ್ತಿಕರ ಕೆಲಸ ಇರುವದು. ನೀರಸ ಜೀವನವು ಅಲ್ಲಿರದು.

ಕಾಲಾನಂತರ, ದೇವರ ರಾಜ್ಯವು ಪಶು ಪ್ರಾಣಿಗಳ ನಡುವೆ, ಪಶು ಮತ್ತು ಮಾನವರ ನಡುವೆ ಏದೆನ್‌ ತೋಟದಲ್ಲಿ ಅಸ್ತಿತ್ವದಲ್ಲಿದ್ದಂಥಾ ಶಾಂತಿಭರಿತ ಸಂಬಂಧವನ್ನೂ ಪುನಃ ಸ್ಥಾಪಿಸುವದು. ಬೈಬಲು ಹೇಳುವುದು: “ತೋಳವು ಕುರಿಯ ಸಂಗಡ ವಾಸಿಸುವದು, ಚಿರತೆಯು ಮೇಕೆ ಮರಿಯೊಂದಿಗೆ ಮಲಗುವದು; ಕರುವೂ ಪ್ರಾಯದ ಸಿಂಹವೂ ಪುಷ್ಟ ಪಶುವೂ ಒಟ್ಟಿಗಿರುವವು; ಇವುಗಳನ್ನು ಚಿಕ್ಕ ಮಗುವು ನಡಿಸುವದು.”—ಯೆಶಾಯ 11:6-9; ಹೋಶೇಯ 2:18.

ಎಲ್ಲಾ ತರದ ರೋಗಗಳು ಮತ್ತು ಶಾರೀರಿಕ ನಿರ್ಬಲತೆಗಳೂ ಪರದೈಸ ಭೂಮಿಯಲ್ಲಿ ವಾಸಿ ಮಾಡಲ್ಪಡುವುದನ್ನು ಸ್ವಲ್ಪ ಊಹಿಸಿಕೊಳ್ಳಿರಿ! “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು” ಎಂಬ ಆಶ್ವಾಸನೆಯನ್ನು ದೇವರ ವಾಕ್ಯವು ನಮಗೆ ಕೊಟ್ಟಿದೆ. (ಯೆಶಾಯ 33:24) “[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.”—ಪ್ರಕಟನೆ 21:4.

ನಿಮಗದು ಶಕ್ಯವಾಗುವ ವಿಧ

ನೀತಿಯುಳ್ಳ ಆತನ ಹೊಸ ಲೋಕದಲ್ಲಿ ಜೀವನದ ಕುರಿತಾದ ದೇವರ ವಾಗ್ದಾನಗಳಿಂದ ನಿಮ್ಮ ಹೃದಯವು ನಿಶ್ಚಯವಾಗಿಯೂ ಪ್ರೇರಿಸಲ್ಪಟ್ಟಿರಬೇಕು. ಅಂಥಾ ಆಶೀರ್ವಾದಗಳು ನಂಬಲಾಗದಷ್ಟು ಸೊಗಸಾಗಿವೆ ಎಂದು ಕೆಲವರಿಗೆ ಅನಿಸಿದರೂ, ನಮ್ಮ ಪ್ರೀತಿಯುಳ್ಳ ನಿರ್ಮಾಣಿಕನಿಂದ ಒದಗಿಸಲ್ಪಡಲು ತೀರಾ ಸೊಗಸಾಗಿಲ್ಲ.—ಕೀರ್ತನೆ 145:16; ಮೀಕ 4:4.

ಬರಲಿರುವ ಪರದೈಸ ಭೂಮಿಯಲ್ಲಿ ನಾವು ಸದಾ ಜೀವಿಸಬೇಕಾದರೆ ಮುಟ್ಟಬೇಕಾದ ಕೆಲವು ಆವಶ್ಯಕತೆಗಳೂ ಇವೆ ಎಂಬದು ನಿಶ್ಚಯ. ದೇವರಿಗೆ ಮಾಡಿದ ಪ್ರಾರ್ಥನೆಯ ಆ ಒಂದು ಮುಖ್ಯ ಆವಶ್ಯಕತೆಯನ್ನು ಯೇಸು ಹೇಳಿದ್ದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.”—ಯೋಹಾನ 17:3.

ಹೀಗೆ, ದೇವರ ಹೊಸ ಲೋಕದಲ್ಲಿ ನಿಜವಾಗಿ ಜೀವಿಸಲು ನೀವು ಬಯಸುವುದಾದರೆ ದೇವರ ಚಿತ್ತವೇನೆಂದು ನಾವು ಮೊದಲಾಗಿ ಕಲಿಯಬೇಕು ಮತ್ತು ಅದನ್ನು ಮಾಡಬೇಕು. ಈ “ಲೋಕವೂ ಅದರ ಆಶೆಯೂ ಗತಿಸಿಹೋಗು”ವವು ನಿಶ್ಚಯ. ಆದರೆ, “ದೇವರ ಚಿತ್ತವನ್ನು ನೆರವೇರಿಸುವವನು” ನಮ್ಮ ಪ್ರಿಯ ನಿರ್ಮಾಣಿಕನಿಂದ ಸುರಿಸಲ್ಪಡುವ ಆಶೀರ್ವಾದಗಳನ್ನು ನಿತ್ಯವಾಗಿ ಆನಂದಿಸಲು “ಎಂದೆಂದಿಗೂ ಇರುವನು.”—1 ಯೋಹಾನ 2:17.

ಬೇರೆ ರೀತಿಯಲ್ಲಿ ಸೂಚಿಸಲ್ಪಡದೆ ಇರುವಲ್ಲಿ, ಇದರಲ್ಲಿರುವ ಎಲ್ಲಾ ಬೈಬಲ್‌ ಉಲ್ಲೇಖಗಳು ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಆಫ್‌ ದ ಹೋಲಿ ಸ್ಕ್ರಿಪ್ಚರ್ಸ್‌ನಿಂದ ತೆಗೆದವುಗಳು.