ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 5

“ಅವರು ಮಾಡ್ತಿರೋ ಅಸಹ್ಯವಾದ ಕೆಟ್ಟ ಕೆಲಸಗಳನ್ನ ನೋಡು”

“ಅವರು ಮಾಡ್ತಿರೋ ಅಸಹ್ಯವಾದ ಕೆಟ್ಟ ಕೆಲಸಗಳನ್ನ ನೋಡು”

ಯೆಹೆಜ್ಕೇಲ 8:9

ಮುಖ್ಯ ವಿಷಯ: ಧರ್ಮಭ್ರಷ್ಟ ಯೆಹೂದ್ಯರ ಆಧ್ಯಾತ್ಮಿಕ ಮತ್ತು ನೈತಿಕ ಪತನ

1-3. ಯೆರೂಸಲೇಮಿನ ದೇವಾಲಯದಲ್ಲಿ ಯೆಹೆಜ್ಕೇಲ ಏನನ್ನ ನೋಡಬೇಕು ಅಂತ ಯೆಹೋವ ಬಯಸಿದನು? ಮತ್ತು ಯಾಕೆ? (ಭಾಗ 2 ರ ಆರಂಭದಲ್ಲಿರೋ ಮಾಹಿತಿ ನೋಡಿ.)

 ಪುರೋಹಿತನ ಮಗನಾಗಿದ್ದ ಯೆಹೆಜ್ಕೇಲನಿಗೆ ನಿಯಮ ಪುಸ್ತಕದಲ್ಲಿರೋ ವಿಷಯಗಳ ಬಗ್ಗೆ ಚೆನ್ನಾಗಿ ಗೊತ್ತಿತ್ತು. ಹಾಗಾಗಿ ಯೆರೂಸಲೇಮಿನ ಆಲಯದಲ್ಲಿ ಯೆಹೋವನ ಶುದ್ಧ ಆರಾಧನೆಗಾಗಿ ಏನೆಲ್ಲಾ ಮಾಡಬೇಕಿತ್ತು ಅನ್ನೋದು ಅವನಿಗೆ ಗೊತ್ತಿತ್ತು. (ಯೆಹೆ. 1:3; ಮಲಾ. 2:7) ಆದ್ರೆ ಕ್ರಿ.ಪೂ. 612 ರಲ್ಲಿ ಯೆಹೆಜ್ಕೇಲನಿಗೂ ಮತ್ತು ಅವನಂತಿರೋ ನಂಬಿಗಸ್ತ ಸೇವಕರಿಗೂ ಆಘಾತವಾಗೋ ವಿಷಯಗಳು ಯೆಹೋವನ ಆಲಯದಲ್ಲಿ ನಡೆದವು.

2 ಯೆರೂಸಲೇಮಿನಲ್ಲಿದ್ದ ದೇವಾಲಯದ ಸ್ಥಿತಿ ತುಂಬ ಹೀನಾಯವಾಗಿತ್ತು. ಅದನ್ನ ಯೆಹೆಜ್ಕೇಲ ನೋಡಿ ‘ಯೆಹೂದದ ಹಿರಿಯರಿಗೆ’ ತಿಳಿಸಬೇಕು ಅಂತ ಯೆಹೋವ ಬಯಸಿದನು. (ಯೆಹೆಜ್ಕೇಲ 8:1-4 ಓದಿ; ಯೆಹೆ. 11:24, 25; 20:1-3) ಯೆಹೆಜ್ಕೇಲನ ಜೊತೆಕೈದಿಗಳಾಗಿದ್ದ ಆ ಯೆಹೂದದ ಹಿರಿಯರು ಅವನ ಮನೆಗೆ ಬಂದಿದ್ರು. ಯೆಹೆಜ್ಕೇಲ ಬಾಬೆಲಿನ ತೆಲ್‌-ಅಬೀಬ್‌ನ ಕೆಬಾರ್‌ ನದಿ ತೀರದಲ್ಲಿ ವಾಸವಾಗಿದ್ದ. ಯೆಹೋವನು ತನ್ನ ಪವಿತ್ರ ಶಕ್ತಿ ಮೂಲಕ ದರ್ಶನದಲ್ಲಿ ಯೆಹೆಜ್ಕೇಲನನ್ನ ಅಲ್ಲಿಂದ ನೂರಾರು ಕಿಲೋಮೀಟರ್‌ ದೂರದಲ್ಲಿದ್ದ ಯೆರೂಸಲೇಮಿನ ದೇವಾಲಯಕ್ಕೆ ಕರ್ಕೊಂಡು ಹೋದನು. ಅದರ ಒಳಾಂಗಣಕ್ಕೆ ಹೋಗುವ ಉತ್ತರದ ಕಡೆಗಿನ ಬಾಗಿಲಿನ ಹತ್ರ ಅವನನ್ನ ನಿಲ್ಲಿಸಿದನು. ಅಲ್ಲಿಂದ ಯೆಹೋವನು ಇಡೀ ದೇವಾಲಯದಲ್ಲಿ ಏನೆಲ್ಲಾ ನಡೀತಿದೆ ಅಂತ ತೋರಿಸಿದನು.

3 ಇಸ್ರಾಯೇಲ್ಯರು ಆಧ್ಯಾತ್ಮಿಕವಾಗಿ ಎಷ್ಟು ಕೀಳ್ಮಟ್ಟಕ್ಕೆ ಹೋದ್ರು ಅಂತ ತೋರಿಸುವ ನಾಲ್ಕು ದೃಶ್ಯಗಳನ್ನ ಯೆಹೆಜ್ಕೇಲ ನೋಡ್ದ. ಯೆಹೋವನ ಶುದ್ಧ ಆರಾಧನೆಗೆ ಏನಾಯ್ತು? ಇದ್ರಿಂದ ನಮಗೆ ಯಾವ ಎಚ್ಚರಿಕೆಯ ಪಾಠವಿದೆ? ಈಗ ನಾವು ಯೆಹೆಜ್ಕೇಲನ ಜೊತೆ ಹೋಗಿ ಆ ದೃಶ್ಯಗಳನ್ನ ನೋಡೋಣ. ಯೆಹೋವ ದೇವರು ತನ್ನ ಆರಾಧಕರಿಂದ ಏನನ್ನ ಕೇಳಿಕೊಳ್ತಿದ್ದಾನೆ ಅಂತ ಮೊದ್ಲು ತಿಳುಕೊಳ್ಳೋಣ.

“ನೀವು ನನ್ನನ್ನ ಮಾತ್ರ ಆರಾಧಿಸಬೇಕು ಅಂತ ಬಯಸೋ ದೇವರು ನಾನು.”

4. ತನ್ನ ಆರಾಧಕರು ಏನು ಮಾಡಬೇಕು ಅಂತ ಯೆಹೋವ ಬಯಸ್ತಾನೆ?

4 ಯೆಹೆಜ್ಕೇಲನ ಸಮಯಕ್ಕಿಂತ ಸುಮಾರು 900 ವರ್ಷಗಳ ಹಿಂದೆ, ತಾನು ಯಾವ ರೀತಿಯ ಆರಾಧನೆಯನ್ನ ಸ್ವೀಕರಿಸ್ತೇನೆ ಅಂತ ಯೆಹೋವನು ತನ್ನ ಜನರಿಗೆ ಹೇಳಿದ್ದನು. ಯೆಹೋವನು ಕೊಟ್ಟ ಹತ್ತು ಆಜ್ಞೆಗಳಲ್ಲಿ ಎರಡನೇ ಆಜ್ಞೆ ಹೀಗಿತ್ತು: * “ನೀವು ನನ್ನನ್ನ ಮಾತ್ರ ಆರಾಧಿಸಬೇಕು ಅಂತ ಬಯಸೋ ದೇವರು ನಾನು.” (ವಿಮೋ. 20:5) ಹೀಗೆ ಹೇಳೋ ಮೂಲಕ ಬೇರೆ ಯಾವ ದೇವರನ್ನ ಆರಾಧಿಸಿದರೂ ತನಗೆ ಸಹಿಸೋಕೆ ಆಗಲ್ಲ ಅಂತ ಯೆಹೋವನು ಸ್ಪಷ್ಟಪಡಿಸಿದನು. ನಾವು ಶುದ್ಧ ಆರಾಧನೆಯನ್ನ ಮಾಡಬೇಕಾದ್ರೆ ಯೆಹೋವ ದೇವರನ್ನ ಮಾತ್ರ ಆರಾಧಿಸಬೇಕು ಅಂತ ಎರಡನೇ ಅಧ್ಯಾಯದಲ್ಲಿ ಕಲಿತ್ವಿ. ಆತನ ಆರಾಧಕರು ತಮ್ಮ ಜೀವನದಲ್ಲಿ ಮೊದಲ ಸ್ಥಾನ ಯೆಹೋವನಿಗೇ ಕೊಡಬೇಕಿತ್ತು. (ವಿಮೋ. 20:3) ಚುಟುಕಾಗಿ ಹೇಳೋದಾದ್ರೆ ಯೆಹೋವ ದೇವರ ಆರಾಧನೆಯ ಜೊತೆಗೆ ಸುಳ್ಳು ಆರಾಧನೆಯನ್ನ ಬೆರೆಸಬಾರದು ಅಂತ ಆತನು ಬಯಸ್ತಾನೆ. ಕ್ರಿ.ಪೂ. 1513 ರಲ್ಲಿ ಇಸ್ರಾಯೇಲ್ಯರು ಮನಸಾರೆ ಯೆಹೋವ ದೇವರೊಟ್ಟಿಗೆ ಒಂದು ಒಪ್ಪಂದವನ್ನ ಮಾಡಿಕೊಂಡರು. ಆಗ ಅವ್ರು ಯೆಹೋವನನ್ನ ಮಾತ್ರ ಆರಾಧಿಸ್ತೀವಿ ಅಂತ ಮಾತು ಕೊಟ್ಟಿದ್ರು. (ವಿಮೋ. 24:3-8) ಯೆಹೋವನು ಈ ಒಪ್ಪಂದದ ಪ್ರಕಾರ ನಡಕೊಂಡನು. ಹಾಗೆನೇ ತನ್ನ ಸೇವಕರು ಸಹ ಈ ಒಪ್ಪಂದದ ಪ್ರಕಾರ ನಡ್ಕೊಳ್ಳಬೇಕು ಅಂತ ಬಯಸಿದನು.—ಧರ್ಮೋ. 7:9, 10; 2 ಸಮು. 22:26.

5, 6. ಯೆಹೋವ ದೇವರು ಇಸ್ರಾಯೇಲ್ಯರ ಹತ್ರ ತನ್ನನ್ನು ಮಾತ್ರ ಆರಾಧಿಸಬೇಕು ಅಂತ ಹೇಳಿದ್ದು ಸರಿಯಾಗಿತ್ತಾ? ಯಾಕೆ?

5 ಯೆಹೋವ ದೇವರು ಇಸ್ರಾಯೇಲ್ಯರ ಹತ್ರ ತನ್ನನ್ನು ಮಾತ್ರ ಆರಾಧಿಸಬೇಕು ಅಂತ ಹೇಳಿದ್ದು ಸರಿಯಾಗಿತ್ತಾ? ಹೌದು ಸರಿಯಾಗಿತ್ತು, ಯಾಕಂದ್ರೆ ಆತನೇ ಸರ್ವಶಕ್ತ ದೇವರು, ವಿಶ್ವದ ರಾಜ ಆಗಿದ್ದಾನೆ. ಜೊತೆಗೆ ಎಲ್ಲರಿಗೆ ಜೀವಕೊಟ್ಟವನೂ ಸಾಕುವವನೂ ಆತನೇ ಆಗಿದ್ದಾನೆ. (ಕೀರ್ತ. 36:9; ಅ. ಕಾ. 17:28) ಯೆಹೋವ ಇಸ್ರಾಯೇಲ್ಯರನ್ನ ಶತ್ರುಗಳಿಂದ ಕಾಪಾಡಿದ್ದನು. ಹತ್ತು ಆಜ್ಞೆಗಳನ್ನು ಕೊಡುವಾಗ ಆತನು ಹೀಗೆ ಹೇಳಿದ್ದನು: “ನಾನು ನಿಮ್ಮ ದೇವರಾದ ಯೆಹೋವ. ನೀವು ಗುಲಾಮರಾಗಿದ್ದ ಈಜಿಪ್ಟ್‌ ದೇಶದಿಂದ ನಿಮ್ಮನ್ನ ಬಿಡಿಸ್ಕೊಂಡು ಬಂದವನು ನಾನೇ.” (ವಿಮೋ. 20:2) ಇಷ್ಟೆಲ್ಲಾ ಮಾಡಿರೋ ಯೆಹೋವ ದೇವರು ಅವರ ಆರಾಧನೆ ಪಡೆಯೋಕೆ ಅರ್ಹನಾಗಿದ್ದ ಅಲ್ವಾ? ಹೌದು, ಇಸ್ರಾಯೇಲ್ಯರು ಯೆಹೋವ ದೇವರನ್ನು ಮಾತ್ರ ಆರಾಧಿಸಬೇಕಿತ್ತು ಮತ್ತು ಆತನಿಗೇ ಮೊದಲ ಸ್ಥಾನ ಕೊಡಬೇಕಿತ್ತು.

6 ಯೆಹೋವ ದೇವರು ಯಾವತ್ತೂ ಬದಲಾಗಲ್ಲ. (ಮಲಾ. 3:6) ತನ್ನನ್ನ ಮಾತ್ರ ಆರಾಧಿಸಬೇಕು ಅಂತ ಆತನು ಯಾವಾಗ್ಲೂ ಬಯಸ್ತಾನೆ. ಹಾಗಾಗಿ ಯೆಹೆಜ್ಕೇಲನಿಗೆ ತೋರಿಸಲಿದ್ದ ನಾಲ್ಕು ಮನಕಲಕುವ ದೃಶ್ಯಗಳನ್ನ ಯೆಹೋವನು ಮೊದ್ಲು ನೋಡಿದಾಗ ಆತನಿಗೆ ಎಷ್ಟು ನೋವಾಗಿರಬೇಕಲ್ವಾ?

ಮೊದಲ ದೃಶ್ಯ: ಯೆಹೋವನಿಗೆ ಸಿಟ್ಟು ಬರಿಸೋ ಮೂರ್ತಿ

7. (ಎ) ದೇವಾಲಯದ ಉತ್ತರದ ಬಾಗಿಲಿನಲ್ಲಿ ಇಸ್ರಾಯೇಲ್ಯರು ಏನು ಮಾಡ್ತಿದ್ರು? ಅದನ್ನ ನೋಡಿ ಯೆಹೋವನಿಗೆ ಹೇಗನಿಸಿತು? (ಆರಂಭದ ಚಿತ್ರ ನೋಡಿ.) (ಬಿ) ಯೆಹೋವನಿಗೆ ಸಿಟ್ಟು ಬಂತು ಅನ್ನೋ ಮಾತಿನ ಅರ್ಥವೇನು? (ಪಾದಟಿಪ್ಪಣಿ 2 ನೋಡಿ.)

7 ಯೆಹೆಜ್ಕೇಲ 8:5, 6 ಓದಿ. ದೇವಾಲಯದ ಉತ್ತರ ಬಾಗಿಲಿನಲ್ಲಿ ಇಸ್ರಾಯೇಲ್ಯರು ಮಾಡ್ತಿದ್ದ ಅಸಹ್ಯ ಕೆಲಸಗಳನ್ನ ನೋಡಿ ಯೆಹೆಜ್ಕೇಲ ದಂಗಾದನು! ಧರ್ಮಭ್ರಷ್ಟ ಯೆಹೂದ್ಯರು ಅಲ್ಲಿ ಮೂರ್ತಿಯನ್ನ ಆರಾಧಿಸ್ತಿದ್ರು. ಅದು ಅಶೇರ ಸ್ತಂಭ ಆಗಿದ್ದಿರಬಹುದು. ಅಶೇರಳು ಬಾಳನ ಹೆಂಡತಿ ಅಂತ ಕಾನಾನ್ಯರು ನಂಬ್ತಿದ್ರು. ಇಸ್ರಾಯೇಲ್ಯರು ವಿಗ್ರಹಾರಾಧನೆ ಮಾಡಿ ಯೆಹೋವ ದೇವರ ಜೊತೆ ಮಾಡಿಕೊಂಡಿದ್ದ ಒಪ್ಪಂದವನ್ನ ಮುರಿದ್ರು. ಅವ್ರು ಯೆಹೋವ ದೇವರಿಗೆ ಮಾತ್ರ ಕೊಡಬೇಕಾಗಿದ್ದ ಪೂರ್ಣ ಭಕ್ತಿಯನ್ನ ವಿಗ್ರಹಕ್ಕೆ ಕೊಟ್ರು. ಹೀಗೆ ಅವ್ರು ಯೆಹೋವನಿಗೆ ಸಿಟ್ಟು ಬರಿಸಿದ್ರು. * (ಧರ್ಮೋ. 32:16; ಯೆಹೆ. 5:13) ಸ್ವಲ್ಪ ಊಹಿಸಿ: 400ಕ್ಕಿಂತ ಹೆಚ್ಚು ವರ್ಷಗಳಿಂದ ದೇವಾಲಯದಲ್ಲಿ ಯೆಹೋವನನ್ನ ಆರಾಧಿಸಲಾಗ್ತಿತ್ತು. (1 ಅರ. 8:10-13) ಆದ್ರೆ ಈಗ ಅಲ್ಲಿ ವಿಗ್ರಹಾರಾಧನೆ ನಡೀತಿತ್ತು. ಹೀಗೆ ಅವ್ರು ಯೆಹೋವನು ತನ್ನ “ಆಲಯವನ್ನ ಬಿಟ್ಟು ದೂರ ಹೋಗೋ ಹಾಗೆ” ಮಾಡಿದ್ರು.

8. ಇವತ್ತು ಸಹ ಯಾರಾದ್ರೂ ಯೆಹೋವನಿಗೆ ಸಿಟ್ಟು ಬರಿಸೋ ತರ ಆರಾಧನೆ ಮಾಡ್ತಿದ್ದಾರಾ?

8 ಯೆಹೆಜ್ಕೇಲನು ದರ್ಶನದಲ್ಲಿ ನೋಡಿದ ಹಾಗೆ ಇವತ್ತು ಕೂಡ ಯಾರಾದ್ರೂ ಯೆಹೋವನಿಗೆ ಸಿಟ್ಟು ಬರಿಸೋ ತರ ಆರಾಧನೆ ಮಾಡ್ತಿದ್ದಾರಾ? ಇವತ್ತಿರೋ ಸುಳ್ಳು ಕ್ರೈಸ್ತರು ಧರ್ಮಭ್ರಷ್ಟ ಯೆಹೂದ್ಯರ ತರ ಮಾಡ್ತಿದ್ದಾರೆ. ದೇವರನ್ನ ಆರಾಧಿಸ್ತೀವಿ ಅಂತ ಹೇಳೋದಾದ್ರೂ ಇವ್ರ ಚರ್ಚುಗಳಲ್ಲಿ ವಿಗ್ರಹಾರಾಧನೆ ರಾರಾಜಿಸ್ತಾ ಇದೆ. ಧರ್ಮಭ್ರಷ್ಟ ಯೆಹೂದ್ಯರ ತರನೇ ಸುಳ್ಳು ಕ್ರೈಸ್ತರು ಯೆಹೋವನಿಗೆ ಸಿಟ್ಟು ಬರಿಸಿದ್ದಾರೆ. ಹಾಗಾಗಿ ದೇವರು ಅವ್ರ ಆರಾಧನೆಯನ್ನ ಸ್ವೀಕರಿಸಲ್ಲ. ಯೆಹೋವ ದೇವರು ಯಾವತ್ತೂ ಬದ್ಲಾಗಲ್ಲ. (ಯಾಕೋ. 1:17) ಯೆಹೋವ ದೇವರು ಸುಳ್ಳು ಕ್ರೈಸ್ತರಿಂದ ದೂರ ಹೋಗಿದ್ದಾನೆ ಅನ್ನೋದ್ರಲ್ಲಿ ಯಾವುದೇ ಸಂಶಯವಿಲ್ಲ!

9, 10. ದೇವಾಲಯದಲ್ಲಿ ಮೂರ್ತಿಯನ್ನ ಆರಾಧಿಸ್ತಿದ್ದ ಯೆಹೂದ್ಯರಿಂದ ನಮಗೆ ಯಾವ ಎಚ್ಚರಿಕೆಯ ಪಾಠವಿದೆ?

9 ದೇವಾಲಯದಲ್ಲಿ ಮೂರ್ತಿಯನ್ನ ಆರಾಧಿಸ್ತಿದ್ದ ಯೆಹೂದ್ಯರಿಂದ ನಮಗೆ ಯಾವ ಎಚ್ಚರಿಕೆಯ ಪಾಠವಿದೆ? ನಾವು ಯೆಹೋವನಿಗೆ ಸಂಪೂರ್ಣ ಆರಾಧನೆಯನ್ನ ಕೊಡಬೇಕಂದ್ರೆ ‘ಮೂರ್ತಿಪೂಜೆ ಬಿಟ್ಟು ದೂರ ಓಡಿಹೋಗಬೇಕು.’ (1 ಕೊರಿಂ. 10:14) ‘ನಾನು ಯೆಹೋವನನ್ನ ಆರಾಧಿಸುವಾಗ ಯಾವತ್ತೂ ಮೂರ್ತಿಗಳನ್ನ ಉಪಯೋಗಿಸಲ್ಲ!’ ಅಂತ ನಮಗನಿಸಬಹುದು. ವಿಗ್ರಹಾರಾಧನೆ ಅಂದ್ರೆ ಬರೀ ಮೂರ್ತಿ ಪೂಜೆ ಅಲ್ಲ. ಇದ್ರಲ್ಲಿ, ವಿಗ್ರಹಾರಾಧನೆ ತರ ಕಾಣಿಸದೇ ಇರೋ ವಿಷಯಗಳೂ ಸೇರಿವೆ. ಬೈಬಲ್‌ ಬಗ್ಗೆ ವಿವರಿಸೋ ಒಂದು ಪುಸ್ತಕ ಹೇಳೋ ಪ್ರಕಾರ, ನಾವು ಯಾವುದೇ ಒಂದು ವಿಷಯಕ್ಕೆ ಅಥವಾ ವಸ್ತುವಿಗೆ ಯೆಹೋವ ದೇವರಿಗಿಂತ ಹೆಚ್ಚು ಪ್ರಾಮುಖ್ಯತೆ ಕೊಡೋದಾದ್ರೆ ವಿಗ್ರಹಾರಾಧನೆ ಮಾಡಿದಂತಾಗುತ್ತೆ. ಹಣ-ಆಸ್ತಿ, ಲೈಂಗಿಕತೆ, ಮನರಂಜನೆ ಮುಂತಾದವುಗಳಿಗೆ ನಮ್ಮ ಜೀವನದಲ್ಲಿ ಮೊದ್ಲ ಸ್ಥಾನ ಕೊಡೋದಾದ್ರೆ ಯೆಹೋವ ದೇವರಿಗೆ ಕೊಡಬೇಕಾದ ಭಕ್ತಿಯನ್ನ ನಾವು ಅವುಗಳಿಗೆ ಕೊಟ್ಟ ಹಾಗಾಗುತ್ತೆ. (ಮತ್ತಾ. 6:19-21, 24; ಎಫೆ. 5:5; ಕೊಲೊ. 3:5) ನಾವು ಎಲ್ಲಾ ರೀತಿಯ ವಿಗ್ರಹಾರಾಧನೆಯಿಂದ ದೂರ ಇರಬೇಕು. ಯಾಕಂದ್ರೆ ಯೆಹೋವನು ಮಾತ್ರ ಆರಾಧನೆಯನ್ನ ಪಡೆಯೋಕೆ ಅರ್ಹನಾಗಿದ್ದಾನೆ ಮತ್ತು ಆತನಿಗೆ ಮಾತ್ರ ನಮ್ಮ ಜೀವನದಲ್ಲಿ ಮೊದ್ಲ ಸ್ಥಾನ ಕೊಡ್ಬೇಕು.—1 ಯೋಹಾ. 5:21.

10 ಯೆಹೆಜ್ಕೇಲನು ಮೊದ್ಲ ದೃಶ್ಯದಲ್ಲಿ, “ಅಸಹ್ಯ ಕೆಲಸಗಳನ್ನ” ನೋಡಿದನು. ಆದ್ರೆ ಯೆಹೋವ ದೇವರು, “ಇದಕ್ಕಿಂತ ಅಸಹ್ಯ ಕೆಲಸಗಳು ನಡಿಯೋದನ್ನ ನೀನು ನೋಡ್ತೀಯ” ಅಂತ ಹೇಳಿದನು. ದೇವಾಲಯದಲ್ಲೇ ಯೆಹೋವ ದೇವರಿಗೆ ಸಿಟ್ಟು ಬರಿಸೋ ಮೂರ್ತಿಯನ್ನ ಆರಾಧಿಸೋದಕ್ಕಿಂತ ಅಸಹ್ಯವಾಗಿರೋ ಕೆಲ್ಸ ಇನ್ನೇನಿದೆ?

ಎರಡನೇ ದೃಶ್ಯ: 70 ಹಿರಿಯರು ಸುಳ್ಳು ದೇವರುಗಳಿಗೆ ಧೂಪವನ್ನ ಅರ್ಪಿಸ್ತಿದ್ರು

11. ದೇವಾಲಯದ ಒಳಾಂಗಣದಲ್ಲಿ ಯೆಹೆಜ್ಕೇಲ ಏನೆಲ್ಲಾ ನೋಡಿದ?

11 ಯೆಹೆಜ್ಕೇಲ 8:7-12 ಓದಿ. ಯೆಹೆಜ್ಕೇಲನು ದೇವಾಲಯದ ಗೋಡೆಯನ್ನ ಕೊರೆದು ಒಳಾಂಗಣಕ್ಕೆ ಹೋದ. ಅಲ್ಲಿ ಯಜ್ಞವೇದಿಯ ಹತ್ತಿರವಿರೋ ಗೋಡೆಯ ಮೇಲೆಲ್ಲಾ “ಎಲ್ಲ ತರದ ಹರಿದಾಡೋ ಜೀವಿಗಳ, ಹೇಸಿಗೆ ಹುಟ್ಟಿಸೋ ಪ್ರಾಣಿಗಳ ಮತ್ತು . . . ಅಸಹ್ಯ ಮೂರ್ತಿಗಳ ಚಿತ್ರಗಳನ್ನ ಕೆತ್ತಲಾಗಿತ್ತು.” * ಗೋಡೆಯ ಮೇಲಿದ್ದ ಕೆತ್ತನೆಗಳೆಲ್ಲಾ ಸುಳ್ಳು ದೇವರುಗಳನ್ನ ಸೂಚಿಸ್ತಿದ್ವು. ಆಮೇಲೆ ಅವನು ಇದಕ್ಕಿಂತ ಹೇವರಿಕೆ ಹುಟ್ಟಿಸೋ ವಿಷ್ಯವನ್ನ ನೋಡಿದನು. “ಇಸ್ರಾಯೇಲ್ಯರ 70 ಹಿರಿಯರು . . . ಕತ್ತಲೆಯಲ್ಲಿ” ನಿಂತು ಸುಳ್ಳು ದೇವರುಗಳಿಗೆ ಧೂಪವನ್ನ ಅರ್ಪಿಸ್ತಿದ್ರು. ನಿಯಮ ಪುಸ್ತಕದ ಪ್ರಕಾರ ಧೂಪವನ್ನ ಅರ್ಪಿಸಿದಾಗ ಅದು ನಂಬಿಗಸ್ತರ ಪ್ರಾರ್ಥನೆಯನ್ನ ಸೂಚಿಸ್ತಿತ್ತು ಮತ್ತು ಯೆಹೋವನು ಅವರ ಪ್ರಾರ್ಥನೆಯನ್ನ ಕೇಳ್ತಿದ್ದನು. (ಕೀರ್ತ. 141:2) ಆದ್ರೆ 70 ಮಂದಿ ಹಿರಿಯರು ಅರ್ಪಿಸಿದ ಧೂಪ ಯೆಹೋವನಿಗೆ ದುರ್ವಾಸನೆ ತರ ಇತ್ತು. ಅವ್ರು ಸುಳ್ಳು ದೇವರಿಗೆ ಮಾಡಿದ ಪ್ರಾರ್ಥನೆಗಳು ಯೆಹೋವನಿಗೆ ಕೊಳೆತು ನಾರೋ ವಾಸನೆ ತರ ಇದ್ವು. (ಜ್ಞಾನೋ. 15:8) ಅವ್ರು “ಯೆಹೋವ ನಮ್ಮನ್ನ ನೋಡ್ತಿಲ್ಲ” ಅಂತ ಅಂದ್ಕೊಂಡು ತಮಗೆ ತಾವೇ ಮೋಸ ಮಾಡ್ಕೊಂಡ್ರು. ಆದ್ರೆ ಯೆಹೋವನು ಅವ್ರನ್ನ ನೋಡ್ತಿದ್ದನು ಮತ್ತು ದೇವಾಲಯದಲ್ಲಿ ಅವ್ರು ಮಾಡ್ತಿದ್ದ ಅಸಹ್ಯ ಕೆಲ್ಸಗಳನ್ನ ಯೆಹೆಜ್ಕೇಲನಿಗೆ ತೋರಿಸಿದನು.

“ಕತ್ತಲೆಯಲ್ಲಿ” ಮಾಡುವ ಪ್ರತಿಯೊಂದು ಅಸಹ್ಯ ಕೆಲ್ಸಗಳನ್ನೂ ಯೆಹೋವನು ನೋಡ್ತಾನೆ (ಪ್ಯಾರ 11 ನೋಡಿ)

12. ನಾವು ಯಾಕೆ “ಕತ್ತಲೆಯಲ್ಲಿ” ಸಹ ನಂಬಿಗಸ್ತರಾಗಿರಬೇಕು? ಮತ್ತು ಇಂಥ ವಿಷಯದಲ್ಲಿ ಯಾರು ಮಾದರಿಯಾಗಿರಬೇಕು?

12 ಇಸ್ರಾಯೇಲಿನ 70 ಹಿರಿಯರು ಸುಳ್ಳು ದೇವರಿಗೆ ಧೂಪವನ್ನ ಅರ್ಪಿಸಿರೋ ಘಟನೆಯಿಂದ ನಾವೇನು ಕಲಿಯಬಹುದು? ನಾವು ಮಾಡುವ ಪ್ರಾರ್ಥನೆಗಳನ್ನ ದೇವರು ಕೇಳಬೇಕಂದ್ರೆ ಮತ್ತು ನಮ್ಮ ಆರಾಧನೆ ದೇವರ ದೃಷ್ಟಿಯಲ್ಲಿ ಶುದ್ಧವಾಗಿರಬೇಕಂದ್ರೆ ನಾವು “ಕತ್ತಲೆಯಲ್ಲಿ” ಸಹ ನಂಬಿಗಸ್ತರಾಗಿ ಇರಬೇಕು. (ಜ್ಞಾನೋ. 15:29) ಯೆಹೋವನ ಕಣ್ಣುಗಳು ಯಾವಾಗ್ಲೂ ಎಲ್ಲವನ್ನ ನೋಡ್ತವೆ. ಆತನು ನಮ್ಮನ್ನು ಸಹ ನೋಡ್ತಾನೆ. ಯೆಹೋವ ದೇವರು ನಿಜವಾಗ್ಲೂ ಇದ್ದಾನೆ ಅನ್ನೋ ಭರವಸೆ ನಮಗಿದ್ರೆ ನಾವು ಒಬ್ಬರೇ ಇರುವಾಗ್ಲೂ ಆತನಿಗೆ ಇಷ್ಟವಾಗದ ಯಾವ ಕೆಲ್ಸವನ್ನೂ ಮಾಡಲ್ಲ. (ಇಬ್ರಿ. 4:13) ಇಂಥ ವಿಷಯದಲ್ಲಿ ಹಿರಿಯರು ಒಳ್ಳೇ ಮಾದರಿಯಾಗಿರಬೇಕು. (1 ಪೇತ್ರ 5:2, 3) ಸಭೆಯನ್ನ ನಡೆಸ್ತಿರೋ ಹಿರಿಯರು ಬೈಬಲಿನಲ್ಲಿರೋ ನೀತಿ ನಿಯಮಗಳಿಗನುಸಾರ ನಡೆಯಬೇಕು ಅಂತ ಸಭೆಯವ್ರು ನಿರೀಕ್ಷಿಸ್ತಾರೆ. ಅವ್ರು “ಕತ್ತಲೆಯಲ್ಲೂ” ಅಂದ್ರೆ ಯಾರೂ ಅವರನ್ನ ನೋಡದೇ ಇದ್ದಾಗಲೂ ನಂಬಿಗಸ್ತರಾಗಿರಬೇಕು.—ಕೀರ್ತ. 101:2, 3.

ಮೂರನೇ ದೃಶ್ಯ: ‘ಹೆಂಗಸರು ತಮ್ಮೂಜ್‌ ದೇವನಿಗಾಗಿ ಅಳ್ತಿದ್ರು’

13. ದೇವಾಲಯದ ಬಾಗಿಲ ಹತ್ರ ಇಸ್ರಾಯೇಲ್ಯ ಸ್ತ್ರೀಯರು ಏನು ಮಾಡ್ತಿರೋದನ್ನ ಯೆಹೆಜ್ಕೇಲ ನೋಡಿದ?

13 ಯೆಹೆಜ್ಕೇಲ 8:13, 14 ಓದಿ. ಯೆಹೋವನು ಯೆಹೆಜ್ಕೇಲನಿಗೆ ಮೊದಲ ಎರಡು ಅಸಹ್ಯ ದೃಶ್ಯಗಳನ್ನ ತೋರಿಸಿದ ಮೇಲೆ, “ಇದಕ್ಕಿಂತ ಅಸಹ್ಯ ಕೆಲಸಗಳನ್ನ ಅವರು ಮಾಡೋದನ್ನ ನೀನು ನೋಡ್ತೀಯ” ಅಂತ ಹೇಳಿದನು. ಹಾಗಾದ್ರೆ ಅವನು ಏನು ನೋಡಿದ? ‘ಯೆಹೋವನ ಆಲಯದ ಉತ್ತರಕ್ಕಿದ್ದ ಬಾಗಿಲ ಹತ್ರ ಹೆಂಗಸರು ಕೂತು ತಮ್ಮೂಜ್‌ ದೇವನಿಗಾಗಿ ಅಳೋದನ್ನ’ ನೋಡಿದ. ತಮ್ಮೂಜ್‌ ಅನ್ನೋದು ಮೆಸಪೊಟೇಮಿಯದ ಒಂದು ದೇವತೆ. ಸುಮೇರಿಯನ್‌ ದಾಖಲೆಯಲ್ಲಿ ಈ ದೇವತೆಯನ್ನ ದುಮುಜಿ ಅಂತ ಕರೆಯಲಾಗಿದೆ. ತಮ್ಮೂಜ್‌, ಸಂತಾನೋತ್ಪತ್ತಿಯ ದೇವಿ ಇಷ್ಟಾರಳ ಗಂಡ ಅಂತ ನೆನಸಲಾಗ್ತಿತ್ತು. * ಇಸ್ರಾಯೇಲ್ಯ ಸ್ತ್ರೀಯರು ತಮ್ಮೂಜ್‌ನ ಸಾವಿಗೆ ಸಂಬಂಧಿಸಿದ ಧಾರ್ಮಿಕ ಆಚರಣೆಯ ಭಾಗವಾಗಿ ಅತ್ತು ಗೋಳಾಡ್ತಿದ್ರು. ಈ ಆಚರಣೆ ಯೆಹೋವನ ಆಲಯದಲ್ಲೇ ಮಾಡ್ತಿದ್ರು ಅನ್ನೋ ಕಾರಣಕ್ಕೆ ಅದು ಯೆಹೋವನಿಗೆ ಇಷ್ಟವಾಗಿ ಬಿಡ್ತಾ? ಇಲ್ಲ. ಅದು ಆತನಿಗೆ ‘ಅಸಹ್ಯವಾಗಿತ್ತು.’

14. ಮೂರನೇ ದೃಶ್ಯದಿಂದ ನಾವೇನು ಕಲಿಬಹುದು?

14 ಇದ್ರಿಂದ ನಾವೇನು ಕಲಿಬಹುದು? ನಮ್ಮ ಆರಾಧನೆ ಶುದ್ಧವಾಗಿರಬೇಕಾದ್ರೆ ಅದರ ಜೊತೆಗೆ ಯಾವತ್ತೂ ಸುಳ್ಳು ಆಚರಣೆಗಳನ್ನ ಮಾಡ್ಲೇಬಾರದು. ಸುಳ್ಳು ಧರ್ಮದಿಂದ ಬಂದಿರೋ ಎಲ್ಲಾ ಆಚರಣೆಗಳಿಂದ ದೂರವಿರಬೇಕು. ಒಂದು ಆಚರಣೆಯ ಮೂಲ ಯಾವುದು ಅನ್ನೋದು ಪ್ರಾಮುಖ್ಯನಾ? ಹೌದು, ಕ್ರಿಸ್ಮಸ್‌ ಈಸ್ಟರ್‌ಗಳಂಥ ಆಚರಣೆಯಲ್ಲಿ ಮಾಡುವ ಕೆಲವು ಪದ್ಧತಿಗಳು ತಪ್ಪೇನಲ್ಲ ಅಂತ ಅನಿಸಬಹುದು. ಆದ್ರೆ ಅವುಗಳು ಸುಳ್ಳು ಧರ್ಮದಿಂದ ಬಂದಿರೋದನ್ನ ಯೆಹೋವ ಕಣ್ಣಾರೆ ನೋಡಿದ್ದಾನೆ. ಸುಳ್ಳು ಆಚರಣೆಗಳನ್ನ ಎಷ್ಟೇ ವರ್ಷಗಳಿಂದ ಮಾಡ್ತಾ ಬಂದಿದ್ರೂ ಅವುಗಳನ್ನ ಶುದ್ಧ ಆರಾಧನೆಯ ಜೊತೆ ಬೆರೆಸಿದ್ರೂ ಯೆಹೋವನಿಗೆ ಅದು ಅಸಹ್ಯನೇ.—2 ಕೊರಿಂ. 6:17; ಪ್ರಕ. 18:2, 4.

ನಾಲ್ಕನೇ ದೃಶ್ಯ: ‘25 ಗಂಡಸ್ರು ಸೂರ್ಯನಿಗೆ ಅಡ್ಡ ಬೀಳ್ತಿದ್ರು’

15, 16. ದೇವಾಲಯದ ಒಳಾಂಗಣದಲ್ಲಿ 25 ಗಂಡಸ್ರು ಏನು ಮಾಡ್ತಿದ್ರು? ಮತ್ತು ಅವ್ರು ಮಾಡ್ತಿರೋದನ್ನ ನೋಡಿ ಯೆಹೋವನಿಗೆ ಯಾಕೆ ತುಂಬಾ ಸಿಟ್ಟು ಬಂತು?

15 ಯೆಹೆಜ್ಕೇಲ 8:15-18 ಓದಿ. ಯೆಹೋವ ದೇವರು ಯೆಹೆಜ್ಕೇಲನಿಗೆ ನಾಲ್ಕನೇ ದೃಶ್ಯವನ್ನ ತೋರಿಸೋ ಮುಂಚೆ ಹೀಗೆ ಹೇಳಿದನು: “ಇದಕ್ಕಿಂತ ಅಸಹ್ಯ ಕೆಲಸಗಳನ್ನ ನೀನು ನೋಡ್ತೀಯ.” ಆಗ ಯೆಹೆಜ್ಕೇಲ, ‘ಯೆಹೋವ ದೇವರು ನನಗೆ ಇಷ್ಟರವರೆಗೆ ತೋರಿಸಿದ್ದಕ್ಕಿಂತ ಇನ್ನೂ ಕೆಟ್ಟದ್ದು ಏನಿದೆ?’ ಅಂತ ಯೋಚಿಸಿರಬೇಕು. ಆಮೇಲೆ ಅವನು ದೇವಾಲಯದ ಒಳಾಂಗಣಕ್ಕೆ ಹೋದನು. ಅಲ್ಲಿರೋ ಬಾಗಿಲಿನ ಮುಂದೆ 25 ಗಂಡಸ್ರು ‘ಪೂರ್ವಕ್ಕೆ ಮುಖಮಾಡಿ ಸೂರ್ಯನಿಗೆ ಅಡ್ಡ ಬೀಳ್ತಿರೋದನ್ನ’ ನೋಡಿದನು. ಅವ್ರು ಮಾಡ್ತಿರೋದನ್ನ ನೋಡಿ ಯೆಹೋವನಿಗೆ ತುಂಬಾ ಸಿಟ್ಟು ಬಂತು. ಯಾಕೆ?

16 ದೇವಾಲಯದ ಮುಖ್ಯ ಬಾಗಿಲು ಪೂರ್ವ ದಿಕ್ಕಿನ ಕಡೆಗೆ ಇತ್ತು. ಜನರು ದೇವಾಲಯಕ್ಕೆ ಬರುವಾಗ ಅವ್ರ ಮುಖ ಪಶ್ಚಿಮದ ಕಡೆಗೆ ಇರ್ತಿತ್ತು, ಪೂರ್ವಕ್ಕೆ ಬೆನ್ನು ಹಾಕಿರುತ್ತಿದ್ರು. ಆದ್ರೆ ಈ 25 ಗಂಡಸ್ರು ಸೂರ್ಯನನ್ನ ಆರಾಧಿಸಲಿಕ್ಕಾಗಿ “ಯೆಹೋವನ ಆಲಯಕ್ಕೆ ಬೆನ್ನು ಹಾಕಿ” ಪೂರ್ವಕ್ಕೆ ಮುಖ ಮಾಡಿದ್ರು. ನೋಡಿದ್ರಾ, ಅವ್ರು ‘ಯೆಹೋವನ ಆಲಯದ’ ಮುಂದೆ ನಿಂತು ಯೆಹೋವನಿಗೇ ಬೆನ್ನು ಹಾಕಿದ್ರು. (1 ಅರ. 8:10-13) ಆ 25 ಗಂಡಸ್ರು ಧರ್ಮಭ್ರಷ್ಟರಾಗಿದ್ರು. ಅವ್ರು ಯೆಹೋವ ದೇವರನ್ನ ತಿರಸ್ಕರಿಸಿದ್ರು ಮತ್ತು ಧರ್ಮೋಪದೇಶಕಾಂಡ 4:15-19 ರಲ್ಲಿರೋ ಯೆಹೋವನ ಆಜ್ಞೆಯನ್ನ ಮೀರಿದ್ರು. ಎಲ್ಲರ ಆರಾಧನೆಗೆ ಅರ್ಹನಾದ ಯೆಹೋವನಿಗೆ ಅವ್ರು ಎಂಥ ದ್ರೋಹ ಮಾಡಿದ್ರ ಅಲ್ವಾ!

ತನ್ನ ಆರಾಧಕರ ಸಂಪೂರ್ಣ ಭಕ್ತಿಗೆ ಯೆಹೋವನು ಮಾತ್ರ ಅರ್ಹನಾಗಿದ್ದಾನೆ

17, 18. (ಎ) ನಾಲ್ಕನೇ ದೃಶ್ಯದಿಂದ ನಾವೇನು ಕಲಿಬಹುದು? (ಬಿ) ಇಸ್ರಾಯೇಲ್ಯರು ಯಾರೆಲ್ಲರ ಜೊತೆಗಿನ ಸಂಬಂಧವನ್ನ ಹಾಳು ಮಾಡಿಕೊಂಡ್ರು? ಹೇಗೆ?

17 ಸೂರ್ಯನನ್ನ ಆರಾಧಿಸ್ತಿದ್ದ ಆ ಗಂಡಸ್ರಿಂದ ನಾವು ಯಾವ ಪಾಠ ಕಲಿಬಹುದು? ನಮ್ಮ ಆರಾಧನೆ ಶುದ್ಧವಾಗಿರಬೇಕಂದ್ರೆ ನಾವು ವಿವೇಕ ಮತ್ತು ತಿಳುವಳಿಕೆಗಾಗಿ ಯೆಹೋವನ ಕಡೆಗೇ ನೋಡಬೇಕು. “ಯೆಹೋವ ದೇವರು ನಮ್ಮ ಸೂರ್ಯ” ಮತ್ತು ಆತನ ವಾಕ್ಯ ನಮ್ಮ “ದಾರಿಗೆ ಬೆಳಕು” ಅನ್ನೋದನ್ನ ಮರೆಯಬಾರದು. (ಕೀರ್ತ 84:11; 119:105) ಯೆಹೋವನು ಬೈಬಲಿನ ಮೂಲಕ ಮತ್ತು ತನ್ನ ಸಂಘಟನೆಯ ಸಾಹಿತ್ಯಗಳ ಮೂಲಕ ನಮಗೆ ವಿವೇಕವನ್ನ ಕೊಡ್ತಾನೆ. ಇದು ನಮಗೆ ಒಳ್ಳೇ ನಿರ್ಣಯಗಳನ್ನ ಮಾಡೋಕೆ ಸಹಾಯ ಮಾಡುತ್ತೆ. ಇದ್ರಿಂದ ಈಗ ನಮ್ಮ ಜೀವನ ಖುಷಿ ಖುಷಿಯಾಗಿರುತ್ತೆ ಮತ್ತು ಮುಂದೆ ನಮಗೆ ಶಾಶ್ವತ ಜೀವನನೂ ಸಿಗುತ್ತೆ. ಯೆಹೋವನ ಮಾರ್ಗದರ್ಶನವನ್ನ ಪಾಲಿಸೋದನ್ನ ಬಿಟ್ಟು ಈ ಲೋಕ ಕೊಡೋ ಜ್ಞಾನದ ಪ್ರಕಾರ ಬದುಕಿದ್ರೆ ನಾವು ಯೆಹೋವನಿಗೆ ಬೆನ್ನು ಹಾಕಿದಂತಾಗುತ್ತೆ. ನಾವು ಹಾಗೆ ಮಾಡಿದ್ರೆ ಯೆಹೋವ ದೇವರಿಗೆ ತುಂಬ ಕೋಪ ಬರಿಸ್ತೀವಿ ಮತ್ತು ಆತನ ಮನಸ್ಸಿಗೆ ತುಂಬ ನೋವು ಮಾಡ್ತೀವಿ. ನಾವು ಕನಸುಮನಸ್ಸಲ್ಲೂ ಹಾಗೆ ಮಾಡೋಕೆ ಇಷ್ಟಪಡಲ್ಲ ಅಲ್ವಾ? ಈ ದರ್ಶನದಿಂದ ಯೆಹೋವನಿಗೆ ಬೆನ್ನುಹಾಕಿದವ್ರ ಅಂದ್ರೆ ಧರ್ಮಭ್ರಷ್ಟರ ಸಹವಾಸವನ್ನ ನಾವು ಯಾವತ್ತೂ ಮಾಡಬಾರದು ಅಂತನೂ ಕಲಿತೇವೆ.—ಜ್ಞಾನೋ. 11:9.

18 ಯೆಹೆಜ್ಕೇಲ ನೋಡಿದ ಈ ನಾಲ್ಕು ದೃಶ್ಯಗಳಿಂದ ಇಸ್ರಾಯೇಲ್ಯರ ಆರಾಧನೆ ಎಷ್ಟರ ಮಟ್ಟಿಗೆ ಹದಗೆಟ್ಟು ಹೋಗಿತ್ತು ಅಂತ ಗೊತ್ತಾಗುತ್ತೆ. ಹೀಗೆ ಅವ್ರು ದೇವರ ಜೊತೆ ಇರೋ ಅಮೂಲ್ಯ ಸಂಬಂಧವನ್ನ ಹಾಳುಮಾಡಿಕೊಂಡ್ರು. ಒಬ್ಬ ವ್ಯಕ್ತಿಯ ಆರಾಧನೆ ಅಶುದ್ಧವಾದ್ರೆ ಅವನ ನೈತಿಕತೆನೂ ಹಾಳಾಗುತ್ತೆ. ಇದು ಇಸ್ರಾಯೇಲ್ಯರ ವಿಷಯದಲ್ಲೂ ನಿಜ ಆಯ್ತು. ಇಸ್ರಾಯೇಲ್ಯರು ಯಾವಾಗ ಸುಳ್ಳಾರಾಧನೆ ಮಾಡಿದ್ರೋ ಆಗ ಕೆಟ್ಟ ಕೆಲ್ಸಗಳನ್ನೂ ಮಾಡೋಕೆ ಶುರು ಮಾಡಿದ್ರು. ಹೀಗೆ ಯೆಹೋವ ದೇವರ ಜೊತೆ ಅವ್ರಿಗೆ ಇದ್ದ ಸಂಬಂಧ ಹಾಳಾಗಿದ್ದು ಮಾತ್ರವಲ್ಲ ಒಬ್ರಿಗೊಬ್ಬರ ಜೊತೆ ಇದ್ದ ಸಂಬಂಧನೂ ಹಾಳಾಯ್ತು. ಈಗ ಯೆಹೆಜ್ಕೇಲ ಇಸ್ರಾಯೇಲ್ಯರ ನೈತಿಕ ಪತನದ ಬಗ್ಗೆ ಏನು ಹೇಳ್ತಾನೆ ಅನ್ನೋದನ್ನ ನೋಡೋಣ.

ನೈತಿಕ ಪತನ—“ಅಶ್ಲೀಲವಾಗಿ ನಡ್ಕೊತಿದ್ದಾರೆ”

19. ಯೆಹೋವನ ಜನರು ಯಾವೆಲ್ಲಾ ಕೆಟ್ಟ ಕೆಲ್ಸಗಳನ್ನ ಮಾಡ್ತಿದ್ರು?

19 ಯೆಹೆಜ್ಕೇಲ 22:3-12 ಓದಿ. ಇಸ್ರಾಯೇಲಿನ ರಾಜರಿಂದ ಹಿಡಿದು ಸಾಮಾನ್ಯ ಪ್ರಜೆಯವರೆಗೆ ಪ್ರತಿಯೊಬ್ರೂ ನೈತಿಕವಾಗಿ ಕೀಳ್ಮಟ್ಟಕ್ಕೆ ಇಳಿದಿದ್ರು. “ಪ್ರತಿಯೊಬ್ಬ ಪ್ರಧಾನ” ಅಥವಾ ಅಧಿಕಾರಿ ತನ್ನ ಅಧಿಕಾರವನ್ನ ತಪ್ಪಾಗಿ ಬಳಸಿಕೊಂಡು ಬಡಪಾಯಿಗಳನ್ನ ಕೊಲ್ತಿದ್ದನು. ಯಥಾ ರಾಜ ತಥಾ ಪ್ರಜಾ ಅನ್ನೋ ತರ ಇಸ್ರಾಯೇಲ್ಯರು ಅವ್ರ ಅಧಿಕಾರಿಗಳಂತೆ ದೇವರ ನಿಯಮವನ್ನ ಗಾಳಿಗೆ ತೂರುತ್ತಿದ್ರು. ಅಪ್ಪ ಅಮ್ಮಂದಿರನ್ನ ಮಕ್ಕಳು ‘ಕೀಳಾಗಿ ನೋಡ್ತಿದ್ರು.’ ಅಲ್ಲಿ ಸ್ವಂತ ಕುಟುಂಬದವ್ರ ಜೊತೆ ಲೈಂಗಿಕ ಸಂಬಂಧ ಇಟ್ಕೊಳ್ಳೋದು ಸರ್ವೇಸಾಮಾನ್ಯವಾಗಿತ್ತು. ವಿದೇಶಿಯರಿಗೆ ಮೋಸ ಮಾಡ್ತಿದ್ರು, ಅನಾಥರಿಗೆ, ವಿಧವೆಯರಿಗೆ ಕಾಟ ಕೊಡ್ತಿದ್ರು. ಬೇರೆಯವರ ಹೆಂಡತಿ ಜೊತೆ ಅಸಹ್ಯವಾಗಿ ನಡ್ಕೊಳ್ತಿದ್ರು. ಜನ್ರು ದುರಾಶೆಯಿಂದ ಲಂಚ ತಗೊಳ್ತಿದ್ರು, ಸುಲಿಗೆ ಮಾಡ್ತಿದ್ರು, ಅನ್ಯಾಯವಾಗಿ ಬಡ್ಡಿ ತಗೊಳ್ತಿದ್ರು. ತನ್ನ ಜೊತೆ ಒಪ್ಪಂದ ಮಾಡಿಕೊಂಡ ಜನರೇ ತನ್ನ ನಿಯಮಗಳನ್ನ ಕಸದ ತರ ತುಳಿದು ಹಾಕೋದನ್ನ ನೋಡಿದಾಗ ಯೆಹೋವನ ಮನಸ್ಸಿಗೆ ತುಂಬ ನೋವಾಯ್ತು. ಯೆಹೋವನಿಗೆ ತಮ್ಮ ಮೇಲೆ ಪ್ರೀತಿ ಇರೋದ್ರಿಂದನೇ ಆತನು ಈ ನಿಯಮಗಳನ್ನ ಕೊಟ್ಟಿದ್ದಾನೆ ಅನ್ನೋದನ್ನ ಅವ್ರು ಅರ್ಥಮಾಡ್ಕೊಳ್ಳಲಿಲ್ಲ. ಅವ್ರು ಯೆಹೋವನಿಗೆ ತುಂಬ ಬೇಸರ ಮಾಡಿದ್ರಿಂದ ಯೆಹೆಜ್ಕೇಲನ ಮೂಲಕ ಆತನು ಅವ್ರಿಗೆ, “ನೀನು ನನ್ನನ್ನ ಪೂರ್ತಿ ಮರೆತುಬಿಟ್ಟಿದ್ದೀಯ” ಅಂತ ಹೇಳಿದನು.

ಸುಳ್ಳು ಕ್ರೈಸ್ತರಿಂದಾಗಿ ಲೋಕದಲ್ಲಿ ಹಿಂಸೆ ಮತ್ತು ಅನೈತಿಕತೆ ಹೆಚ್ಚಾಗ್ತಾ ಇದೆ (ಪ್ಯಾರ 20 ನೋಡಿ)

20. ಈಗಿನ ಲೋಕದ ನೈತಿಕ ಸ್ಥಿತಿ ಹೇಗೆ ಯೆಹೆಜ್ಕೇಲನ ಕಾಲದ ಇಸ್ರಾಯೇಲ್ಯರ ತರನೇ ಇದೆ?

20 ಈಗಿನ ಲೋಕದ ನೈತಿಕ ಸ್ಥಿತಿ ಯೆಹೆಜ್ಕೇಲನ ಕಾಲದ ಇಸ್ರಾಯೇಲ್ಯರ ತರನೇ ಇದೆ. ಅಧಿಕಾರಿಗಳು ತಮ್ಮ ಅಧಿಕಾರವನ್ನ ದುರುಪಯೋಗಿಸ್ತಿದ್ದಾರೆ ಮತ್ತು ಜನರ ಮೇಲೆ ದಬ್ಬಾಳಿಕೆ ಮಾಡ್ತಿದ್ದಾರೆ. ಧಾರ್ಮಿಕ ಮುಖಂಡರು ಅದ್ರಲ್ಲೂ ಕ್ರೈಸ್ತ ಪಾದ್ರಿಗಳು ಸೈನಿಕರನ್ನ ಆಶೀರ್ವದಿಸಿ ಯುದ್ಧಕ್ಕೆ ಕಳುಹಿಸ್ತಿದ್ದಾರೆ. ಹೀಗೆ ಲಕ್ಷಾಂತರ ಜನರ ಸಾವಿಗೆ ಕಾರಣರಾಗ್ತಿದ್ದಾರೆ. ಲೈಂಗಿಕತೆಯ ಬಗ್ಗೆ ಬೈಬಲ್‌ ಹೇಳೋ ನಿಯಮಗಳಿಗೆ ಪಾದ್ರಿಗಳು ಒಂಚೂರೂ ಬೆಲೆ ಕೊಡ್ತಿಲ್ಲ. ಹಾಗಾಗಿ ಲೋಕದಲ್ಲಿ ಅನೈತಿಕ ವಿಷಯಗಳು ಹೆಚ್ಚಾಗ್ತಾ ಇವೆ. ಧರ್ಮಭ್ರಷ್ಟ ಯೆಹೂದ್ಯರಿಗೆ ಹೇಳಿದಂತೆ ಯೆಹೋವನು ಸುಳ್ಳು ಕ್ರೈಸ್ತರಿಗೂ, “ನೀನು ನನ್ನನ್ನ ಪೂರ್ತಿ ಮರೆತುಬಿಟ್ಟಿದ್ದೀಯ” ಅಂತ ಹೇಳ್ತಾನೆ.

21. ಇಸ್ರಾಯೇಲ್ಯರಿಂದ ನಾವು ಯಾವ ಪಾಠ ಕಲಿತೇವೆ?

21 ಆ ಇಸ್ರಾಯೇಲ್ಯರಿಂದ ನಮಗೇನು ಪಾಠ? ನಾವು ಮಾಡುವ ಆರಾಧನೆ ಯೆಹೋವನಿಗೆ ಇಷ್ಟವಾಗಬೇಕಂದ್ರೆ ನಾವು ಎಲ್ಲಾ ವಿಷಯಗಳಲ್ಲೂ ಶುದ್ಧರಾಗಿರಬೇಕು. ಆದ್ರೆ ಈ ಕೆಟ್ಟ ಲೋಕದಲ್ಲಿ ನೈತಿಕವಾಗಿ ಶುದ್ಧರಾಗಿರೋದು ಅಷ್ಟು ಸುಲಭ ಅಲ್ಲ. (2 ತಿಮೊ. 3:1-5) ಆದ್ರೆ ಈ ಲೋಕದಲ್ಲಿ ತುಂಬಿತುಳುಕುತ್ತಿರೋ ಅನೈತಿಕತೆಯನ್ನ ನೋಡಿದ್ರೆ ಯೆಹೋವ ದೇವರಿಗೆ ಹೇಗನಿಸುತ್ತೆ ಅಂತ ನಮಗೆ ಚೆನ್ನಾಗಿ ಗೊತ್ತಿದೆ. (1 ಕೊರಿಂ. 6:9, 10) ನಾವು ಯೆಹೋವ ದೇವರನ್ನ ಮತ್ತು ಆತನ ನಿಯಮಗಳನ್ನ ಪ್ರೀತಿಸೋದ್ರಿಂದ ಆತನಿಗೆ ಬೇಸರ ತರೋ ಯಾವ ಕೆಲ್ಸವನ್ನೂ ಮಾಡಲ್ಲ. (ಕೀರ್ತ. 119:97; 1 ಯೋಹಾ. 5:3) ಒಂದು ವೇಳೆ ನಾವು ಕೆಟ್ಟ ಕೆಲ್ಸಗಳನ್ನ ಮಾಡಿದ್ರೆ ನಮ್ಮ ಪರಿಶುದ್ಧ ದೇವರಾದ ಯೆಹೋವನನ್ನ ಪ್ರೀತಿಸಲ್ಲ ಅಂತ ತೋರಿಸಿದಂತಾಗುತ್ತೆ. ನಮ್ಮನ್ನ ನೋಡಿ, “ನೀನು ನನ್ನನ್ನ ಪೂರ್ತಿ ಮರೆತುಬಿಟ್ಟಿದ್ದೀಯ” ಅಂತ ಯೆಹೋವನು ಹೇಳೋ ತರ ನಾವು ಯಾವತ್ತೂ ನಡ್ಕೊಳ್ಳಬಾರದು.

22. (ಎ) ಈ ಅಧ್ಯಾಯವನ್ನ ಓದಿದ ನಂತ್ರ ನೀವು ಯಾವ ದೃಢ ನಿರ್ಧಾರ ಮಾಡಿದ್ದೀರಾ? (ಬಿ) ಮುಂದಿನ ಅಧ್ಯಾಯದಲ್ಲಿ ಏನು ಕಲಿತೇವೆ?

22 ಧರ್ಮಭ್ರಷ್ಟ ಇಸ್ರಾಯೇಲ್ಯರಿಂದ ನಾವು ತುಂಬ ಎಚ್ಚರಿಕೆಯ ಪಾಠಗಳನ್ನ ಕಲಿತ್ವಿ. ಯೆಹೋವ ದೇವರನ್ನ ಮಾತ್ರ ಆರಾಧಿಸೋ ನಮ್ಮ ದೃಢ ನಿರ್ಧಾರ ಇನ್ನೂ ಬಲವಾಗಿದೆ. ಆ ನಿರ್ಧಾರದಂತೆ ನಡೀಬೇಕಂದ್ರೆ ನಾವು ವಿಗ್ರಹಾರಾಧನೆ ಮತ್ತು ಅನೈತಿಕತೆಯಿಂದ ದೂರ ಇರಬೇಕು. ಕೊಟ್ಟ ಮಾತಿನಂತೆ ನಡೆಯದ ಇಸ್ರಾಯೇಲ್ಯರಿಗೆ ಯೆಹೋವ ಏನು ಮಾಡಿದನು? ದೇವಾಲಯವನ್ನ ಸುತ್ತಿ ನೋಡಿದ ನಂತ್ರ ಯೆಹೆಜ್ಕೇಲನಿಗೆ ಯೆಹೋವನು, “ನಾನು ಅವ್ರಿಗೆ ನನ್ನ ಕೋಪ ತೋರಿಸ್ತೀನಿ” ಅಂದನು. (ಯೆಹೆ. 8:17, 18) ಯೆಹೋವ ದೇವರು ಧರ್ಮಭ್ರಷ್ಟ ಇಸ್ರಾಯೇಲ್ಯರಿಗೆ ಕೊಟ್ಟ ಶಿಕ್ಷೆ ಏನು ಅಂತ ನಾವು ತಿಳ್ಕೊಳ್ಳಬೇಕು ಯಾಕಂದ್ರೆ ಯೆಹೋವ ದೇವರು ಈಗಿರೋ ಕೆಟ್ಟ ಲೋಕಕ್ಕೂ ಅದೇ ರೀತಿಯ ಶಿಕ್ಷೆಯನ್ನ ಕೊಡಲಿದ್ದಾನೆ. ಮುಂದಿನ ಅಧ್ಯಾಯದಲ್ಲಿ ಯೆಹೋವನು ಹೇಳಿದ ಹಾಗೆ ಇಸ್ರಾಯೇಲ್ಯರಿಗೆ ಯಾವ ಶಿಕ್ಷೆ ಸಿಕ್ತು ಅಂತ ನೋಡಲಿದ್ದೇವೆ.

^ ಪ್ಯಾರ. 4 ಯೆಹೆಜ್ಕೇಲ ಪುಸ್ತಕದಲ್ಲಿ “ಇಸ್ರಾಯೇಲ್‌” ಅನ್ನೋ ಪದ ಹೆಚ್ಚಾಗಿ ಯೆಹೂದ ಮತ್ತು ಯೆರೂಸಲೇಮಿನ ಜನರನ್ನ ಸೂಚಿಸುತ್ತೆ.—ಯೆಹೆ. 12:19, 22; 18:2; 21:2, 3.

^ ಪ್ಯಾರ. 7 ಯೆಹೋವ ದೇವರು ತನ್ನ ಜನರು ನಿಷ್ಠೆಯಿಂದ ಇರೋದನ್ನ ಎಷ್ಟು ಗಂಭೀರವಾಗಿ ನೋಡ್ತಾನೆ ಅಂತ “ಸಿಟ್ಟು” ಅನ್ನೋ ಪದದಿಂದ ಗೊತ್ತಾಗುತ್ತೆ. ಈ ಪದ ಹೆಂಡತಿ ನಂಬಿಕೆದ್ರೋಹ ಮಾಡಿದ್ರೆ ನಿಯತ್ತಾಗಿರೋ ಗಂಡನಿಗೆ ಬರೋ ಸಿಟ್ಟನ್ನ ಸೂಚಿಸುತ್ತೆ. (ಜ್ಞಾನೋ. 6:34) ಅಂಥ ಗಂಡನ ತರನೇ ಯೆಹೋವ ದೇವರಿಗೆ ತನ್ನ ಜನರು ವಿಗ್ರಹಗಳನ್ನ ಆರಾಧನೆ ಮಾಡಿ ನಂಬಿಕೆದ್ರೋಹ ಮಾಡಿದಾಗ ಸಿಟ್ಟು ಬಂತು. ಬೈಬಲ್‌ ಬಗ್ಗೆ ವಿವರಣೆ ಕೊಡೋ ಒಂದು ಪುಸ್ತಕದಲ್ಲಿ ಹೀಗಿದೆ: “ಯೆಹೋವ ದೇವರು ಪವಿತ್ರನಾಗಿರೋದ್ರಿಂದ . . . ಆತನಿಗೆ ಸಿಟ್ಟು ಬರುತ್ತೆ. ಆತನೊಬ್ಬನೇ ಪವಿತ್ರನಾಗಿದ್ದಾನೆ . . . ಅದಕ್ಕೇ ತನ್ನ ಸ್ಥಾನವನ್ನ ಬೇರೆ ಯಾರಿಗಾದ್ರೂ ಕೊಡೋದು ಆತನಿಗೆ ಇಷ್ಟವಾಗಲ್ಲ.”—ವಿಮೋ. 34:14.

^ ಪ್ಯಾರ. 11 “ಅಸಹ್ಯ ಮೂರ್ತಿಗಳು” ಅನ್ನಲು ಹೀಬ್ರು ಭಾಷೆಯಲ್ಲಿ ಉಪಯೋಗಿಸಲಾದ ಪದಕ್ಕೂ “ಸಗಣಿ” ಅನ್ನೋ ಅರ್ಥ ಕೊಡೋ ಹೀಬ್ರು ಪದಕ್ಕೂ ಸಂಬಂಧವಿದೆ. ತುಂಬ ಗಲೀಜಾಗಿರೋ ವಿಷಯಗಳನ್ನ ವಿವರಿಸೋಕೆ ಈ ಪದ ಬಳಸಲಾಗುತ್ತೆ.

^ ಪ್ಯಾರ. 13 ತಮ್ಮೂಜ್‌ ಅನ್ನೋದು ನಿಮ್ರೋದನ ಇನ್ನೊಂದು ಹೆಸರು ಅಂತ ಕೆಲವ್ರು ಹೇಳ್ತಾರೆ. ಆದ್ರೆ ಇದಕ್ಕೆ ಯಾವುದೇ ಆಧಾರ ಇಲ್ಲ.