ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 4

‘ನಾಲ್ಕು ಮುಖಗಳಿರೋ ಜೀವಿಗಳು’ ಏನನ್ನ ಸೂಚಿಸುತ್ತವೆ?

‘ನಾಲ್ಕು ಮುಖಗಳಿರೋ ಜೀವಿಗಳು’ ಏನನ್ನ ಸೂಚಿಸುತ್ತವೆ?

ಯೆಹೆಜ್ಕೇಲ 1:15

ಮುಖ್ಯ ವಿಷಯ: ಸ್ವರ್ಗೀಯ ಜೀವಿಗಳು ಮತ್ತು ಅವರಿಂದ ನಮಗಿರೋ ಪಾಠ

1, 2. ಯೆಹೋವ ದೇವರು ಯಾಕೆ ದೃಶ್ಯಗಳನ್ನ ಉಪಯೋಗಿಸಿದ್ದಾನೆ?

 ಒಂದು ಕುಟುಂಬ ಒಟ್ಟಿಗೆ ಕೂತು ಬೈಬಲ್‌ ಕಲಿತಾ ಇದೆ ಅಂತ ನೆನಸಿ. ಆ ಕುಟುಂಬದಲ್ಲಿ ಪುಟಾಣಿ ಮಕ್ಕಳೂ ಇದ್ದಾರೆ. ಬೈಬಲಿನಲ್ಲಿರೋ ವಿಷ್ಯಗಳನ್ನ ಅರ್ಥಮಾಡಿಸೋಕೆ ಅಪ್ಪ ಚಿತ್ರಗಳನ್ನ ತೋರಿಸ್ತಿದ್ದಾನೆ. ಮಕ್ಕಳು ಅದನ್ನ ನೋಡಿ ಖುಷಿಪಡ್ತಿದ್ದಾರೆ. ಅವರ ಹಾವ-ಭಾವ ನೋಡಿದ್ರೆ ಅವ್ರಿಗೆ ಆ ವಿಷ್ಯ ಅರ್ಥ ಆಗ್ತಿದೆ ಅಂತ ಗೊತ್ತಾಗುತ್ತೆ. ಹೀಗೆ ಚಿತ್ರಗಳನ್ನ ತೋರಿಸಿದ್ರಿಂದ ಯೆಹೋವನ ಬಗ್ಗೆ ಕಲಿಯೋಕೆ ತುಂಬ ಕಷ್ಟ ಅಂತ ಅನಿಸೋ ವಿಷಯಗಳನ್ನೂ ಮಕ್ಕಳು ಚೆನ್ನಾಗಿ ಅರ್ಥಮಾಡಿಕೊಳ್ಳೋಕೆ ಆಗ್ತಾ ಇದೆ.

2 ಯೆಹೋವನು ಸಹ ತನ್ನ ಮಕ್ಕಳು ಯಾವತ್ತೂ ನೋಡಿಲ್ಲದ ವಿಷಯಗಳನ್ನ ವಿವರಿಸೋಕೆ ದೃಶ್ಯಗಳನ್ನ ಉಪಯೋಗಿಸ್ತಾನೆ. ಇದರಿಂದ,ಅರ್ಥ ಮಾಡಿಕೊಳ್ಳೋಕೆ ಕಷ್ಟ ಅಂತ ಅನಿಸೋ ವಿಷ್ಯಗಳನ್ನೂ ಸುಲಭವಾಗಿ ಅರ್ಥಮಾಡಿಕೊಳ್ಳೋಕೆ ಆಗುತ್ತೆ. ಉದಾಹರಣೆಗೆ, ತನ್ನ ಬಗ್ಗೆ ಸುಲಭವಾಗಿ ಕಲಿಸೋಕೆ ಯೆಹೋವನು ಯೆಹೆಜ್ಕೇಲನಿಗೆ ಮನಮುಟ್ಟುವ ದೃಶ್ಯಗಳಿರೋ ದರ್ಶನವನ್ನ ತೋರಿಸಿದನು. ಹಿಂದಿನ ಅಧ್ಯಾಯದಲ್ಲಿ ಅಂಥ ಒಂದು ದೃಶ್ಯದ ಬಗ್ಗೆ ನೋಡಿದ್ವಿ. ಈಗ ಆ ದರ್ಶನದ ಒಂದು ಭಾಗವನ್ನು ಸೂಕ್ಷ್ಮವಾಗಿ ನೋಡೋಣ. ಅದರ ಅರ್ಥವನ್ನು ತಿಳಿದುಕೊಳ್ಳೋದ್ರಿಂದ ನಾವು ಹೇಗೆ ಯೆಹೋವನಿಗೆ ಆಪ್ತರಾಗ್ತೇವೆ ಅಂತನೂ ತಿಳಿಯೋಣ.

“ನಾಲ್ಕು ಜೀವಿಗಳ ಆಕಾರ ಕಾಣಿಸ್ತು”

3. (ಎ) ಯೆಹೆಜ್ಕೇಲ 1:4, 5 ರಲ್ಲಿ ಹೇಳೋ ಹಾಗೆ ಯೆಹೆಜ್ಕೇಲ ದರ್ಶನದಲ್ಲಿ ಏನು ನೋಡಿದ? (ಆರಂಭದ ಚಿತ್ರ ನೋಡಿ.) (ಬಿ) ಅವನು ದಾಖಲಿಸಿದ ರೀತಿಯಿಂದ ನಮಗೆ ಏನು ಗೊತ್ತಾಗುತ್ತೆ?

3 ಯೆಹೆಜ್ಕೇಲ 1:4, 5 ಓದಿ. “ನಾಲ್ಕು ಜೀವಿಗಳ ಆಕಾರ ಕಾಣಿಸ್ತು” ಅಂತ ಯೆಹೆಜ್ಕೇಲ ಹೇಳಿದನು. ಅವುಗಳ ರೂಪ ಸ್ವಲ್ಪ ದೇವದೂತರ ತರ, ಸ್ವಲ್ಪ ಮನುಷ್ಯರ ತರ ಇನ್ನು ಸ್ವಲ್ಪ ಪ್ರಾಣಿಗಳ ತರ ಇತ್ತು. ಅವನು ನೋಡಿದ್ದನ್ನ ನೋಡಿದ ಹಾಗೇ ನಿಖರವಾಗಿ ದಾಖಲಿಸಿದ್ದಾನೆ. ನೀವು ಯೆಹೆಜ್ಕೇಲ 1 ನೇ ಅಧ್ಯಾಯದಲ್ಲಿರೋ ಇಡೀ ದರ್ಶನವನ್ನು ಓದುವಾಗ ಯೆಹೆಜ್ಕೇಲನು ಪದೇಪದೇ “ತರ ಕಾಣ್ತಿದ್ವು,” “ಹಾಗೆ ಇತ್ತು,” ಮತ್ತು “ತರ ಇದ್ದನು” ಅನ್ನುವಂಥ ಮಾತುಗಳನ್ನ ಉಪಯೋಗಿಸಿರೋದನ್ನ ಗಮನಿಸಬಹುದು. (ಯೆಹೆ. 1:13, 24, 26) ಸ್ವರ್ಗದಲ್ಲಿರೋ ಕಣ್ಣಿಗೆ ಕಾಣದ ಜೀವಿಗಳನ್ನ ತಾನು ನೇರವಾಗಿ ನೋಡ್ತಾ ಇಲ್ಲ, ತನಗೆ ಕಾಣಿಸ್ತಿರೋದು ಅವುಗಳ ಹೋಲಿಕೆ ಅಷ್ಟೇ ಅಂತ ಯೆಹೆಜ್ಕೇಲ ಅರ್ಥ ಮಾಡ್ಕೊಂಡಿದ್ದ ಅನ್ನೋದು ಇದರಿಂದ ಗೊತ್ತಾಗುತ್ತೆ.

4. (ಎ) ದರ್ಶನವನ್ನ ನೋಡಿದಾಗ ಯೆಹೆಜ್ಕೇಲನಿಗೆ ಹೇಗನಿಸ್ತು? (ಬಿ) ಕೆರೂಬಿಯರ ಬಗ್ಗೆ ಯೆಹೆಜ್ಕೇಲನಿಗೆ ಏನು ಗೊತ್ತಿತ್ತು?

4 ಆ ದರ್ಶನದ ದೃಶ್ಯ ಮತ್ತು ಶಬ್ದಗಳನ್ನ ಕೇಳಿ ಯೆಹೆಜ್ಕೇಲ ದಂಗಾಗಿರಬೇಕು. ಆ ನಾಲ್ಕು ಜೀವಿಗಳು “ಉರೀತಿರೋ ಕೆಂಡಗಳ ತರ ಕಾಣ್ತಿದ್ವು.” ಅವು ಚಲಿಸೋ ವೇಗ ಎಷ್ಟಿತ್ತಂದ್ರೆ “ಮಿಂಚು ಬಂದು ಹೋದ ಹಾಗಿತ್ತು.” ಅವು ರೆಕ್ಕೆ ಬಡಿಯೋ ಶಬ್ದ “ಪ್ರವಾಹದ ನೀರು ಹರಿಯೋ ಶಬ್ದದ ಹಾಗೆ” ಇತ್ತು. ಅವು ಚಲಿಸುವ ಶಬ್ದ “ಸೈನ್ಯದ ಶಬ್ದದ ಹಾಗೆ” ಇತ್ತು. (ಯೆಹೆ. 1:13, 14, 24-28; “ಜೀವಿಗಳನ್ನ ನಾನು ನೋಡ್ತಾ ಇದ್ದಾಗ” ಅನ್ನೋ ಚೌಕ ನೋಡಿ.) ಆ ಜೀವಿಗಳು ‘ಕೆರೂಬಿಯರು’ ಅಥವಾ ಶಕ್ತಿಶಾಲಿ ದೇವದೂತರು ಅಂತ ಯೆಹೆಜ್ಕೇಲ ಆಮೇಲೆ ನೋಡಿದ ಒಂದು ದರ್ಶನದಲ್ಲಿ ತಿಳಿಸಿದ್ದಾನೆ. (ಯೆಹೆ. 10:2) ಯೆಹೆಜ್ಕೇಲನು ಪುರೋಹಿತರ ಕುಟುಂಬದಲ್ಲಿ ಹುಟ್ಟಿದ್ರಿಂದ ಕೆರೂಬಿಯರು ಯೆಹೋವನ ಸನ್ನಿಧಿಯಲ್ಲಿ ಸೇವೆ ಮಾಡುವ ದೇವದೂತರಾಗಿದ್ರು ಅಂತ ಅವನಿಗೆ ಗೊತ್ತಿತ್ತು.—1 ಪೂರ್ವ. 28:18; ಕೀರ್ತ. 18:10.

‘ಒಂದೊಂದಕ್ಕೂ ನಾಲ್ಕು ಮುಖ ಇತ್ತು’

5. (ಎ) ಕೆರೂಬಿಯರ ನಾಲ್ಕು ಮುಖಗಳು ಯೆಹೋವ ದೇವರ ಶಕ್ತಿ ಮತ್ತು ಮಹಿಮೆಯನ್ನ ಹೇಗೆ ಪ್ರತಿಬಿಂಬಿಸುತ್ತವೆ? (ಬಿ) ಇದು ಯೆಹೋವ ದೇವರ ಹೆಸರಿನ ಬಗ್ಗೆ ನಮಗೇನು ತಿಳಿಸುತ್ತೆ? (ಪಾದಟಿಪ್ಪಣಿ ನೋಡಿ.)

5 ಯೆಹೆಜ್ಕೇಲ 1:6, 10. ಆ ಕೆರೂಬಿಗಳಲ್ಲಿ ಪ್ರತಿಯೊಂದಕ್ಕೂ ನಾಲ್ಕು ಮುಖಗಳಿದ್ದವು. ಮನುಷ್ಯನದ್ದು, ಸಿಂಹದ್ದು, ಹೋರಿಯದ್ದು ಮತ್ತು ಹದ್ದಿನದ್ದು. ಈ ಮುಖಗಳನ್ನ ನೋಡಿದಾಗ ಯೆಹೋವನ ಶಕ್ತಿ ಮತ್ತು ಮಹಿಮೆ ಎಷ್ಟು ಅಪಾರ ಅಂತ ಯೆಹೆಜ್ಕೇಲನ ಮನಸ್ಸಿಗೆ ಇನ್ನೂ ಆಳವಾಗಿ ನಾಟಿರಬೇಕು. ಯಾಕಂದ್ರೆ ಪ್ರತಿಯೊಂದು ಮುಖ ಘನತೆ, ಬಲ, ಶಕ್ತಿಯನ್ನ ಸೂಚಿಸ್ತಿತ್ತು. ಸಿಂಹವು ತನ್ನ ಘನಗಾಂಭೀರ್ಯಕ್ಕೆ ಪ್ರಖ್ಯಾತವಾಗಿದೆ, ಹೋರಿ ತುಂಬ ಬಲಶಾಲಿ ಪ್ರಾಣಿಯಾಗಿದೆ ಮತ್ತು ಹದ್ದು ತುಂಬ ಶಕ್ತಿ ಇರೋ ಪಕ್ಷಿಯಾಗಿದೆ. ಮನುಷ್ಯನು ಭೂಮಿಯಲ್ಲಿರೋ ದೇವರ ಎಲ್ಲಾ ಸೃಷ್ಟಿಯಲ್ಲೇ ಉತ್ತಮನಾಗಿದ್ದಾನೆ ಮತ್ತು ಅವನಿಗೆ ಬೇರೆಲ್ಲಾ ಸೃಷ್ಟಿಜೀವಿಗಳ ಮೇಲೆ ಅಧಿಕಾರ ಇದೆ. (ಕೀರ್ತ. 8:4-6) ಈ ದರ್ಶನದಲ್ಲಿರೋ ಕೆರೂಬಿಯರ ನಾಲ್ಕು ಮುಖಗಳು ಶಕ್ತಿಶಾಲಿಯಾಗಿರೋ ನಾಲ್ಕು ಸೃಷ್ಟಿಜೀವಿಗಳನ್ನ ಸೂಚಿಸುತ್ತೆ. ಈ ನಾಲ್ಕು ಕೆರೂಬಿಗಳು ಯೆಹೋವನ ಸಿಂಹಾಸನದ ಕೆಳಗೆ ಇದ್ದವು. ಯೆಹೋವ ದೇವರಿಗೆ ಎಲ್ಲದರ ಮೇಲೆ ಅಧಿಕಾರ ಇದೆ ಅಂತ ಇದ್ರಿಂದ ಗೊತ್ತಾಗುತ್ತೆ. ಆತನು ತನ್ನ ಇಷ್ಟವನ್ನ ನೆರವೇರಿಸೋಕೆ ಸೃಷ್ಟಿಯನ್ನ ಬಳಸಬಲ್ಲನು ಅಂತ ಕೂಡ ಗೊತ್ತಾಗುತ್ತೆ. * ಅದಕ್ಕೇ, “ಆತನ ಗೌರವ ಭೂಮಿ ಆಕಾಶಕ್ಕಿಂತ ಎತ್ರದಲ್ಲಿದೆ” ಅಂತ ಕೀರ್ತನೆಗಾರನು ಹೇಳಿದ್ದಾನೆ.—ಕೀರ್ತ. 148:13.

ನಾಲ್ಕು ಜೀವಿಗಳು ಮತ್ತು ಅವುಗಳ ನಾಲ್ಕು ಮುಖಗಳಿಂದ ಯೆಹೋವನ ಶಕ್ತಿ, ಮಹಿಮೆ ಮತ್ತು ಗುಣಗಳ ಬಗ್ಗೆ ಏನು ಗೊತ್ತಾಗುತ್ತೆ? (ಪ್ಯಾರ 5, 13 ನೋಡಿ)

6. ನಾಲ್ಕು ಮುಖಗಳು ಮುಖ್ಯ ಗುಣಗಳನ್ನ ಸೂಚಿಸುತ್ತವೆ ಅಂತ ಯೆಹೆಜ್ಕೇಲ ಹೇಗೆ ಅರ್ಥಮಾಡಿಕೊಂಡಿರಬಹುದು?

6 ಯೆಹೆಜ್ಕೇಲ ತಾನು ನೋಡಿದ ದರ್ಶನದ ಬಗ್ಗೆ ಸ್ವಲ್ಪ ಸಮಯ ಯೋಚಿಸಿರಬೇಕು. ಮುಂಚೆ ಇದ್ದ ನಂಬಿಗಸ್ತ ದೇವಸೇವಕರು ಪ್ರಾಣಿಗಳನ್ನ ಹೋಲಿಕೆಯಾಗಿ ಬಳಸಿದ್ದನ್ನ ಅವನು ನೆನಪಿಸಿಕೊಂಡಿರಬೇಕು. ಉದಾಹರಣೆಗೆ, ಯಾಕೋಬನು ತನ್ನ ಮಗ ಯೆಹೂದನನ್ನು ಸಿಂಹಕ್ಕೆ ಮತ್ತು ಬೆನ್ಯಾಮೀನನನ್ನು ತೋಳಕ್ಕೆ ಹೋಲಿಸಿದನು. (ಆದಿ. 49:9, 27) ಯಾಕಂದ್ರೆ, ಸಿಂಹ ಮತ್ತು ತೋಳದಲ್ಲಿರೋ ಗುಣಲಕ್ಷಣಗಳೇ ಇವರಿಬ್ಬರಲ್ಲೂ ಎದ್ದುಕಾಣುತ್ತಿದ್ದವು. ಶಾಸ್ತ್ರಗ್ರಂಥದಲ್ಲಿದ್ದ ಇಂಥ ಉದಾಹರಣೆಗಳ ಬಗ್ಗೆ ಯೆಹೆಜ್ಕೇಲನಿಗೆ ಗೊತ್ತಿತ್ತು. ಹಾಗಾಗಿ ಅವನು ಕೆರೂಬಿಗಳ ಮುಖಗಳು ಸಹ ಮುಖ್ಯ ಗುಣಗಳನ್ನ ಸೂಚಿಸುತ್ತವೆ ಅಂತ ಅರ್ಥಮಾಡಿಕೊಂಡಿರಬೇಕು. ಆ ಗುಣಲಕ್ಷಣಗಳು ಯಾವುವು?

ಯೆಹೋವನ ಮತ್ತು ದೇವದೂತರ ಗುಣಗಳು

7, 8. ಕೆರೂಬಿಯರ ನಾಲ್ಕು ಮುಖಗಳು ಯಾವ ಗುಣಗಳನ್ನ ಸೂಚಿಸುತ್ತವೆ?

7 ಯೆಹೆಜ್ಕೇಲನಿಗಿಂತ ಮುಂಚೆ ಇದ್ದ ನಂಬಿಗಸ್ತ ಸೇವಕರು ಯಾವ ಗುಣಗಳನ್ನ ವರ್ಣಿಸೋಕೆ ಸಿಂಹ, ಹದ್ದು ಮತ್ತು ಹೋರಿಗಳ ಹೋಲಿಕೆಯನ್ನ ಉಪಯೋಗಿಸಿದ್ದರು? ಈ ಉದಾಹರಣೆಗಳನ್ನ ನೋಡಿ: “ನೀತಿವಂತ ಸಿಂಹದ ಹಾಗೆ ಧೈರ್ಯವಾಗಿ ಇರ್ತಾನೆ.” (ಜ್ಞಾನೋ. 28:1; 2 ಸಮು. 17:10) ‘ಹದ್ದು ಮೇಲಕ್ಕೆ ಹಾರುತ್ತೆ’ ಮತ್ತು “ಅದು . . . ತುಂಬ ದೂರ ತನಕ ದೃಷ್ಟಿ ಹಾಯಿಸುತ್ತೆ.” (ಯೋಬ 39:27, 29) “ಹೋರಿಯ ಶಕ್ತಿಯಿಂದ ಬೆಳೆ ಚೆನ್ನಾಗಿ ಬೆಳೆಯುತ್ತೆ.” (ಜ್ಞಾನೋ. 14:4) ಇಂಥ ವಚನಗಳನ್ನ ಆಧರಿಸಿ ನಮ್ಮ ಪ್ರಕಾಶನಗಳಲ್ಲಿ, ಸಿಂಹದ ಮುಖ ನ್ಯಾಯವನ್ನ, ಹದ್ದಿನ ಮುಖ ದೂರದೃಷ್ಟಿಯನ್ನ ಅಂದ್ರೆ ವಿವೇಕವನ್ನ ಮತ್ತು ಹೋರಿಯ ಮುಖ ಅಪರಿಮಿತ ಶಕ್ತಿಯನ್ನ ಸೂಚಿಸುತ್ತೆ ಅಂತ ತಿಳಿಸಲಾಗಿದೆ.

8 ಹಾಗಾದ್ರೆ “ಮನುಷ್ಯನ ಮುಖ” ಏನನ್ನ ಸೂಚಿಸುತ್ತೆ? (ಯೆಹೆ. 10:14) ಪ್ರಾಣಿಗಳಿಂದ ತೋರಿಸಲಾಗದ, ದೇವರ ಹೋಲಿಕೆಯಲ್ಲಿರೋ ಮನುಷ್ಯರಿಂದ ತೋರಿಸಲಾಗುವ ಗುಣವನ್ನು ಇದು ಸೂಚಿಸುತ್ತಿರಬೇಕು. (ಆದಿ. 1:27) ಭೂಮಿಯಲ್ಲಿ, ಮನುಷ್ಯರಿಂದ ಮಾತ್ರ ತೋರಿಸೋಕೆ ಆಗೋ ಆ ಶ್ರೇಷ್ಠ ಗುಣ ಯಾವುದು? ಅದು ಯಾವುದಂತ ದೇವರ ಈ ಆಜ್ಞೆಗಳಿಂದ ಗೊತ್ತಾಗುತ್ತೆ: “ನಿಮ್ಮ ದೇವರಾದ ಯೆಹೋವನನ್ನ ನೀವು ಪೂರ್ಣ ಹೃದಯದಿಂದ . . . ಪ್ರೀತಿಸಬೇಕು” ಮತ್ತು “ನೀವು ನಿಮ್ಮನ್ನ ಪ್ರೀತಿಸೋ ತರಾನೇ ಬೇರೆಯವರನ್ನೂ ಪ್ರೀತಿಸಬೇಕು.” (ಧರ್ಮೋ. 6:5; ಯಾಜ. 19:18) ಈ ಆಜ್ಞೆಯನ್ನ ಪಾಲಿಸಿ ನಿಸ್ವಾರ್ಥ ಪ್ರೀತಿಯನ್ನ ತೋರಿಸುವಾಗ ನಾವು ಯೆಹೋವನನ್ನ ಅನುಕರಿಸ್ತೇವೆ. ಇದ್ರ ಬಗ್ಗೆ ಅಪೊಸ್ತಲ ಯೋಹಾನ, “ದೇವರು ಮೊದ್ಲು ನಮ್ಮನ್ನ ಪ್ರೀತಿಸಿರೋದ್ರಿಂದ ನಾವು ಪ್ರೀತಿ ತೋರಿಸ್ತೀವಿ” ಅಂತ ಹೇಳಿದನು. (1 ಯೋಹಾ. 4:8, 19) ಹಾಗಾಗಿ, “ಮನುಷ್ಯನ ಮುಖ” ಪ್ರೀತಿಯನ್ನ ಸೂಚಿಸುತ್ತೆ ಅಂತ ಇದ್ರಿಂದ ಗೊತ್ತಾಗುತ್ತೆ.

9. ಕೆರೂಬಿಯರ ಮುಖಗಳು ಯಾರ ಗುಣಗಳನ್ನ ಸೂಚಿಸುತ್ತವೆ?

9 ದರ್ಶನದಲ್ಲಿ ಕಾಣಿಸಿದ ನಾಲ್ಕು ಮುಖಗಳು ಯಾರ ಗುಣಗಳನ್ನ ಸೂಚಿಸುತ್ತವೆ? ಆ ಮುಖಗಳು ಕೆರೂಬಿಯರ ಮುಖಗಳಾಗಿದ್ದವು. ಅವರು ಯೆಹೋವ ದೇವರ ಸ್ವರ್ಗೀಯ ಕುಟುಂಬವನ್ನ ಸೂಚಿಸ್ತಾರೆ. ಹಾಗಾಗಿ, ಆ ಮುಖಗಳು ಎಲ್ಲಾ ನಂಬಿಗಸ್ತ ದೇವದೂತರ ಗುಣಗಳನ್ನ ಸೂಚಿಸುತ್ತವೆ. (ಪ್ರಕ. 5:11) ಅಷ್ಟೇ ಅಲ್ಲ, ಯೆಹೋವನೇ ಕೆರೂಬಿಯರ ಜೀವದ ಮೂಲ ಆಗಿದ್ದರಿಂದ ಅವರಲ್ಲಿರೋ ಗುಣಗಳ ಮೂಲ ಸಹ ಯೆಹೋವನಾಗಿದ್ದಾನೆ. (ಕೀರ್ತ. 36:9) ಹಾಗಾಗಿ, ಕೆರೂಬಿಯರ ಮುಖಗಳು ಯೆಹೋವನ ಗುಣಗಳನ್ನೇ ಸೂಚಿಸುತ್ತವೆ. (ಯೋಬ 37:23; ಕೀರ್ತ. 99:4; ಜ್ಞಾನೋ. 2:6; ಮೀಕ 7:18) ಯೆಹೋವನು ಈ ಗುಣಗಳನ್ನ ಹೇಗೆಲ್ಲಾ ತೋರಿಸ್ತಾನೆ? ನೋಡೋಣ.

10, 11. ಯೆಹೋವ ದೇವರ ನಾಲ್ಕು ಮುಖ್ಯ ಗುಣಗಳಿಂದ ನಾವು ಹೇಗೆಲ್ಲಾ ಪ್ರಯೋಜನ ಪಡ್ಕೊಳ್ತೀವಿ?

10 ನ್ಯಾಯ. “ಯೆಹೋವ ನ್ಯಾಯವನ್ನ ಪ್ರೀತಿಸ್ತಾನೆ.” “ಆತನು ಯಾರಿಗೂ ಭೇದಭಾವ ಮಾಡಲ್ಲ.” (ಕೀರ್ತ. 37:28; ಧರ್ಮೋ. 10:17) ಆದ್ದರಿಂದ ಆತನ ಸೇವಕರಾಗುವ ಮತ್ತು ಶಾಶ್ವತ ಆಶೀರ್ವಾದಗಳನ್ನ ಪಡೆಯುವ ಅವಕಾಶವನ್ನ ನಮ್ಮೆಲ್ಲರಿಗೂ ಕೊಟ್ಟಿದ್ದಾನೆ. ನಮ್ಮ ಹಿನ್ನೆಲೆ, ಸ್ಥಾನಮಾನ ನೋಡಿ ಆತನು ಈ ಅವಕಾಶ ಕೊಡಲ್ಲ. ವಿವೇಕ. “ತುಂಬ ಬುದ್ಧಿವಂತ” ದೇವರಾಗಿರೋ ಯೆಹೋವನು ‘ವಿವೇಕದ’ ಮಾತುಗಳಿರೋ ಬೈಬಲನ್ನ ನಮಗೆ ಕೊಟ್ಟಿದ್ದಾನೆ. (ಯೋಬ 9:4; ಜ್ಞಾನೋ. 2:7) ಈ ಮಾತುಗಳ ಪ್ರಕಾರ ನಡೆದ್ರೆ ನಮ್ಮ ಜೀವನದಲ್ಲಿ ಬರೋ ಸಮಸ್ಯೆಗಳನ್ನ ಎದುರಿಸೋಕಾಗುತ್ತೆ ಮತ್ತು ನಮ್ಮ ಜೀವನಕ್ಕೆ ಉದ್ದೇಶ ಇರುತ್ತೆ. ಶಕ್ತಿ. “ಮಹಾ ಶಕ್ತಿಶಾಲಿ” ಆಗಿರೋ ಯೆಹೋವ ದೇವರು ತನ್ನ ಪವಿತ್ರ ಶಕ್ತಿಯ ಮೂಲಕ ನಮಗೆ “ಸಾಮಾನ್ಯವಾಗಿ ಇರೋ ಶಕ್ತಿಗಿಂತ ಇನ್ನೂ ಹೆಚ್ಚಿನ ಶಕ್ತಿ” ಕೊಡ್ತಾನೆ. ನಮಗೆ ಎಷ್ಟೇ ಕಷ್ಟ ಬಂದರೂ ಎಷ್ಟೇ ನೋವಾದ್ರೂ ಅದನ್ನ ತಾಳಿಕೊಳ್ಳೋಕೆ ಈ ಶಕ್ತಿ ಸಹಾಯ ಮಾಡುತ್ತೆ.—ನಹೂ. 1:3; 2 ಕೊರಿಂ. 4:7; ಕೀರ್ತ. 46:1.

11 ಪ್ರೀತಿ. ಯೆಹೋವನು ‘ಶಾಶ್ವತ ಪ್ರೀತಿಯನ್ನ ಅಪಾರವಾಗಿ ತೋರಿಸೋ’ ದೇವರಾಗಿರೋದ್ರಿಂದ ತನ್ನ ನಿಷ್ಠಾವಂತ ಆರಾಧಕರ ಕೈಯನ್ನ ಯಾವತ್ತೂ ಬಿಡಲ್ಲ. (ಕೀರ್ತ. 103:8; 2 ಸಮು. 22:26) ಕಾಯಿಲೆಯಿಂದ ಅಥವಾ ವಯಸ್ಸಾಗಿರೋದ್ರಿಂದ ನಮಗೆ ಹಿಂದೆ ಮಾಡಿದಷ್ಟು ಸೇವೆಯನ್ನ ಮಾಡೋಕೆ ಆಗ್ತಾ ಇಲ್ವಲ್ಲಾ ಅಂತ ನಾವು ಕೊರಗ್ತಾ ಇರಬಹುದು. ಆದ್ರೆ ನಾವು ಯೆಹೋವನ ಮೇಲಿರೋ ಪ್ರೀತಿಯಿಂದಾಗಿ ಮಾಡಿದ ಕೆಲಸವನ್ನ ಆತನು ಯಾವತ್ತೂ ಮರೆಯಲ್ಲ. ಇದನ್ನ ಅರ್ಥಮಾಡಿಕೊಳ್ಳುವಾಗ ನಮಗೆ ಸಾಂತ್ವನ ಸಿಗುತ್ತೆ. (ಇಬ್ರಿ. 6:10) ಯೆಹೋವನು ನ್ಯಾಯ, ವಿವೇಕ, ಶಕ್ತಿ ಮತ್ತು ಪ್ರೀತಿ ತೋರಿಸಿದ್ರಿಂದ ನಮಗೆ ಈಗಾಗಲೇ ತುಂಬ ಪ್ರಯೋಜನ ಆಗಿದೆ, ಮುಂದೆನೂ ಆಗುತ್ತೆ.

12. ಯೆಹೋವ ದೇವರ ಎಲ್ಲಾ ಗುಣಗಳನ್ನ ನಾವು ಅರ್ಥಮಾಡಿಕೊಳ್ಳೋಕೆ ಆಗುತ್ತಾ? ವಿವರಿಸಿ.

12 ಮಾನವರಾಗಿರೋ ನಾವು ಯೆಹೋವ ದೇವರ ಬಗ್ಗೆ ಎಷ್ಟೇ ಕಲಿತರೂ ‘ಬರೀ ಕೆಲವು’ ಗುಣಗಳನ್ನಷ್ಟೇ ಅರ್ಥಮಾಡಿಕೊಳ್ಳೋಕೆ ಆಗೋದು ಅನ್ನೋದನ್ನ ನೆನಪಲ್ಲಿಡಿ. (ಯೋಬ 26:14) “ಸರ್ವಶಕ್ತನನ್ನ ಅರ್ಥ ಮಾಡ್ಕೊಳ್ಳೋದು ನಮ್ಮ ಸಾಮರ್ಥ್ಯಕ್ಕೆ ಮೀರಿದ ವಿಷ್ಯ.” ಯಾಕಂದ್ರೆ “ಆತನ ಘನತೆ ಬಗ್ಗೆ ನಮ್ಮಿಂದ ಯೋಚಿಸೋಕೂ ಆಗಲ್ಲ.” (ಯೋಬ 37:23; ಕೀರ್ತ. 145:3) ಹಾಗಾಗಿ, ಯೆಹೋವನಿಗೆ ಎಷ್ಟು ಗುಣಗಳಿವೆ ಅಂತ ನಾವು ಲೆಕ್ಕ ಮಾಡೋಕಾಗಲ್ಲ. ಪ್ರತಿಯೊಂದು ಗುಣನೂ ಒಂದಕ್ಕೊಂದು ಸಂಬಂಧಿಸಿದೆ, ಹಾಗಾಗಿ ಅದನ್ನ ಬೇರೆಬೇರೆ ಗುಂಪುಗಳಾಗಿ ವಿಂಗಡಿಸೋಕಾಗಲ್ಲ. (ರೋಮನ್ನರಿಗೆ 11:33, 34 ಓದಿ.) ಯೆಹೋವ ದೇವರ ಗುಣಗಳು ಅಸಂಖ್ಯಾತ ಅಂತ ಯೆಹೆಜ್ಕೇಲ ನೋಡಿದ ದರ್ಶನದಿಂದನೂ ಗೊತ್ತಾಗುತ್ತೆ. (ಕೀರ್ತ. 139:17, 18) ಆ ದರ್ಶನದಲ್ಲಿರೋ ಯಾವ ಅಂಶದಿಂದ ಈ ವಿಷ್ಯ ನಮಗೆ ಗೊತ್ತಾಗುತ್ತೆ?

“ನಾಲ್ಕು ಮುಖ, ನಾಲ್ಕು ರೆಕ್ಕೆ . . . ನಾಲ್ಕೂ ಬದಿ”

13, 14. ಕೆರೂಬಿಗಳ ನಾಲ್ಕು ಮುಖಗಳು ಏನನ್ನ ಸೂಚಿಸುತ್ತವೆ? ಮತ್ತು ಇದು ನಮಗೆ ಹೇಗೆ ಗೊತ್ತು?

13 ಒಬ್ಬ ಕೆರೂಬಿಗೆ ಒಂದಲ್ಲ, ನಾಲ್ಕು ಮುಖಗಳಿರೋದನ್ನ ಯೆಹೆಜ್ಕೇಲ ದರ್ಶನದಲ್ಲಿ ನೋಡಿದ ಅನ್ನೋದನ್ನ ಗಮನಿಸಿ. ಇದ್ರಿಂದ ನಮಗೇನು ಗೊತ್ತಾಗುತ್ತೆ? ದೇವರ ವಾಕ್ಯದಲ್ಲಿ ನಾಲ್ಕು ಅನ್ನೋ ಸಂಖ್ಯೆಯು ಸಂಪೂರ್ಣವಾಗಿರೋದನ್ನ ಸೂಚಿಸುತ್ತೆ. (ಯೆಶಾ. 11:12; ಮತ್ತಾ. 24:31; ಪ್ರಕ. 7:1) ಯೆಹೆಜ್ಕೇಲನು ದರ್ಶನದಲ್ಲಿ ಈ ಸಂಖ್ಯೆಯನ್ನು 10ಕ್ಕಿಂತ ಹೆಚ್ಚು ಬಾರಿ ಉಪಯೋಗಿಸಿದ್ದಾನೆ. (ಯೆಹೆ. 1:5-18) ಇದ್ರಿಂದ ನಾವೇನು ಅರ್ಥಮಾಡಿಕೊಳ್ಳಬಹುದು? ನಾಲ್ಕು ಕೆರೂಬಿಗಳು ದೇವರಿಗೆ ನಂಬಿಗಸ್ತರಾಗಿರೋ ಎಲ್ಲಾ ದೇವದೂತರನ್ನ ಸೂಚಿಸೋ ಹಾಗೆಯೇ ಕೆರೂಬಿಗಳ ನಾಲ್ಕು ಮುಖಗಳು ಒಟ್ಟಾಗಿ ಯೆಹೋವ ದೇವರ ಎಲ್ಲಾ ಗುಣಗಳನ್ನ ಸೂಚಿಸುತ್ತವೆ. *

14 ಕೆರೂಬಿಗಳ ನಾಲ್ಕು ಮುಖಗಳು ಬರೀ ನಾಲ್ಕಲ್ಲ, ಹೆಚ್ಚು ಗುಣಗಳನ್ನ ಸೂಚಿಸುತ್ತವೆ ಅನ್ನೋದನ್ನ ಇನ್ನೂ ಚೆನ್ನಾಗಿ ಅರ್ಥಮಾಡಿಕೊಳ್ಳೋಕೆ ಈ ವಿಷ್ಯವನ್ನ ಗಮನಿಸಿ. ಈ ದರ್ಶನದಲ್ಲಿ ನೋಡಿದ ಚಕ್ರಗಳು ಏನನ್ನ ಸೂಚಿಸುತ್ತವೆ ಅನ್ನೋದ್ರ ಬಗ್ಗೆ ಸ್ವಲ್ಪ ಯೋಚಿಸಿ. ಆ ದೊಡ್ಡ ಚಕ್ರಗಳು ಒಟ್ಟಾಗಿ ಬರೀ ನಾಲ್ಕು ಚಕ್ರಗಳನ್ನ ಮಾತ್ರವಲ್ಲ ಯೆಹೋವನ ರಥವನ್ನ ಹೊತ್ತಿರುವ ಅಥವಾ ಬೆಂಬಲಿಸುವ ಎಲ್ಲಾ ವಿಷಯಗಳನ್ನ ಸೂಚಿಸುತ್ತವೆ. ಅದೇ ತರ ನಾಲ್ಕು ಮುಖಗಳು ಒಟ್ಟಾಗಿ ಯೆಹೋವ ದೇವರ ಎಲ್ಲಾ ಅದ್ಭುತ ಗುಣಗಳನ್ನ ಸೂಚಿಸುತ್ತವೆ.

ತನ್ನ ಎಲ್ಲಾ ನಂಬಿಗಸ್ತ ಸೇವಕರಿಗೆ ಯೆಹೋವ ಆಪ್ತನಾಗಿದ್ದಾನೆ

15. ಮೊದ್ಲ ದರ್ಶನದಿಂದ ಯೆಹೆಜ್ಕೇಲ ಯಾವ ಪ್ರಾಮುಖ್ಯ ಸತ್ಯವನ್ನ ಕಲಿತ?

15 ಯೆಹೋವ ದೇವರ ಜೊತೆ ಇರೋ ಆಪ್ತ ಸ್ನೇಹದ ಬಗ್ಗೆ ಒಂದು ಪ್ರಾಮುಖ್ಯ ಸತ್ಯವನ್ನ ಯೆಹೆಜ್ಕೇಲ ಮೊದಲನೇ ದರ್ಶನದಿಂದ ಕಲಿತ. ಅದು ಯಾವುದು? ಅದು ಏನಂತ ಯೆಹೆಜ್ಕೇಲ ಪುಸ್ತಕದ ಮೊದಲನೇ ಅಧ್ಯಾಯ ತಿಳಿಸುತ್ತೆ. ಅವನು ‘ನಾನು ಆಗ ಕಸ್ದೀಯರ ದೇಶದಲ್ಲಿದ್ದೆ’ ಅಂತ ಹೇಳಿದ ಮೇಲೆ “ಅಲ್ಲಿ ಯೆಹೋವನ ಪವಿತ್ರಶಕ್ತಿ ನನ್ನ ಮೇಲೆ ಬಂತು” ಅಂತ ಹೇಳಿದ್ದಾನೆ. * (ಯೆಹೆ. 1:3) ನೋಡಿದ್ರಾ? ಅವನಿಗೆ ದರ್ಶನ ಸಿಕ್ಕಿದ್ದು ಯೆರೂಸಲೇಮಿನಲ್ಲಲ್ಲ ಬಾಬೆಲಿನಲ್ಲಿ. ಇದ್ರಿಂದ ನಮಗೆ ಒಂದು ವಿಷಯ ಸ್ಪಷ್ಟವಾಗುತ್ತೆ. ಅದೇನಂದ್ರೆ ಯೆಹೆಜ್ಕೇಲ ಯೆರೂಸಲೇಮಿನಲ್ಲಿರೋ ಆಲಯದಿಂದ ಬಹು ದೂರದಲ್ಲಿ ಕೈದಿಯಾಗಿದ್ರೂ ಅವನು ಯೆಹೋವ ದೇವರಿಂದ ದೂರ ಇರ್ಲಿಲ್ಲ. ಯೆಹೋವ ದೇವರು ಯೆಹೆಜ್ಕೇಲನಿಗೆ ಬಾಬೆಲಿನಲ್ಲಿ ದರ್ಶನವನ್ನ ಕೊಟ್ಟಿದ್ರಿಂದ ಶುದ್ಧ ಆರಾಧನೆ ಯಾವುದೇ ಒಂದು ಸ್ಥಳಕ್ಕೆ ಅಥವಾ ಸ್ಥಾನಕ್ಕೆ ಸೀಮಿತವಾಗಿಲ್ಲ ಅಂತ ಗೊತ್ತಾಗುತ್ತೆ. ಬದಲಿಗೆ ಶುದ್ಧ ಆರಾಧನೆಯು ಯೆಹೆಜ್ಕೇಲನಿಗೆ ಯೆಹೋವನ ಮೇಲಿರೋ ಪ್ರೀತಿ ಮತ್ತು ಆತನ ಸೇವೆ ಮಾಡಬೇಕು ಅನ್ನೋ ಬಯಕೆ ಮೇಲೆ ಹೊಂದಿಕೊಂಡಿತ್ತು.

16. (ಎ) ಯೆಹೆಜ್ಕೇಲ ನೋಡಿದ ದರ್ಶನದಿಂದ ಸಾಂತ್ವನ ನೀಡೋ ಯಾವ ವಿಷಯವನ್ನ ಕಲಿತೇವೆ? (ಬಿ) ಯೆಹೋವ ದೇವರನ್ನ ಪೂರ್ಣ ಹೃದಯದಿಂದ ಆರಾಧಿಸಲು ಯಾವುದು ಪ್ರೇರಿಸುತ್ತೆ?

16 ಯೆಹೆಜ್ಕೇಲ ಕಲಿತ ಆ ಪ್ರಾಮುಖ್ಯ ಸತ್ಯದಿಂದ ನಾವು ಸಹ ಸಾಂತ್ವನ ಪಡ್ಕೊಳ್ಳಬಹುದು. ಹೇಗೆ? ನಾವು ಯೆಹೋವ ದೇವರನ್ನು ಪೂರ್ಣ ಹೃದಯದಿಂದ ಆರಾಧಿಸಿದ್ರೆ, ಎಲ್ಲೇ ಇದ್ರೂ, ಎಷ್ಟೇ ನೋವಲ್ಲಿದ್ರೂ, ಎಂಥದ್ದೇ ಪರಿಸ್ಥಿತಿಯಲ್ಲಿದ್ರೂ ಆತನು ನಮ್ಮ ಹತ್ರನೇ ಇರುತ್ತಾನೆ. (ಕೀರ್ತ. 25:14; ಅ. ಕಾ. 17:27) ಯೆಹೋವನಿಗೆ ತನ್ನ ಪ್ರತಿಯೊಬ್ಬ ಸೇವಕನ ಮೇಲೆ ಶಾಶ್ವತ ಪ್ರೀತಿ ಇದೆ. ಅದಕ್ಕೇ ಆತನು ನಮ್ಮ ಜೊತೆ ತಾಳ್ಮೆಯಿಂದ ನಡಕೊಳ್ತಾನೆ. (ವಿಮೋ. 34:6) ಹಾಗಾಗಿ, ಯಾವ ವಿಷ್ಯನೂ ನಮ್ಮನ್ನ ಯೆಹೋವನ ಶಾಶ್ವತ ಪ್ರೀತಿಯಿಂದ ದೂರ ಮಾಡಕ್ಕಾಗಲ್ಲ. (ಕೀರ್ತ. 100:5; ರೋಮ. 8:35-39) ಈ ದರ್ಶನದಿಂದ, ಯೆಹೋವನು ಎಷ್ಟು ಪರಿಶುದ್ಧನಾಗಿದ್ದಾನೆ ಮತ್ತು ಆತನಿಗೆ ಎಷ್ಟು ಶಕ್ತಿ ಇದೆ ಅಂತನೂ ತಿಳಿತೇವೆ. ಹಾಗಾಗಿ ಆತನು ಮಾತ್ರ ನಮ್ಮ ಆರಾಧನೆಯನ್ನ ಪಡೆಯೋಕೆ ಅರ್ಹನಾಗಿದ್ದಾನೆ. (ಪ್ರಕ. 4:9-11) ಯೆಹೋವನು ತನ್ನ ಬಗ್ಗೆ ಮತ್ತು ತನ್ನ ಗುಣಗಳ ಬಗ್ಗೆ ಪ್ರಾಮುಖ್ಯ ಸತ್ಯಗಳನ್ನ ನಮಗೆ ಅರ್ಥಮಾಡಿಸಲು ದರ್ಶನಗಳನ್ನ ಉಪಯೋಗಿಸಿದ್ದಕ್ಕಾಗಿ ನಾವು ಎಷ್ಟು ಕೃತಜ್ಞತೆ ಹೇಳಿದ್ರೂ ಸಾಕಾಗಲ್ಲ. ಯೆಹೋವನ ಸುಂದರ ಗುಣಗಳ ಬಗ್ಗೆ ಎಷ್ಟು ಹೆಚ್ಚು ಕಲಿತೀವೋ ಅಷ್ಟು ನಾವು ಆತನಿಗೆ ಆಪ್ತರಾಗ್ತೇವೆ. ಜೊತೆಗೆ, ನಮ್ಮ ಪೂರ್ಣ ಹೃದಯ ಮತ್ತು ಶಕ್ತಿಯಿಂದ ಆತನನ್ನ ಸ್ತುತಿಸ್ತೇವೆ, ಆತನ ಸೇವೆ ಮಾಡ್ತೇವೆ.—ಲೂಕ 10:27.

ಯಾವ ವಿಷ್ಯನೂ ನಮ್ಮನ್ನ ಯೆಹೋವನ ಶಾಶ್ವತ ಪ್ರೀತಿಯಿಂದ ದೂರ ಮಾಡಕ್ಕಾಗಲ್ಲ (ಪ್ಯಾರ 16 ನೋಡಿ)

17. ಮುಂದಿನ ಅಧ್ಯಾಯಗಳಲ್ಲಿ ನಾವು ಯಾವ ಪ್ರಶ್ನೆಗಳಿಗೆ ಉತ್ತರ ತಿಳಿಯಲಿದ್ದೇವೆ?

17 ಯೆಹೆಜ್ಕೇಲನ ಕಾಲದಲ್ಲಿ ಶುದ್ಧ ಆರಾಧನೆ ಕಲಬೆರಕೆಯಾದದ್ದು ಹೇಗೆ? ಆಗ ಯೆಹೋವ ದೇವರು ಏನು ಮಾಡಿದ್ರು? ಈ ಘಟನೆಗಳಿಂದ ನಾವು ಯಾವ ಪಾಠ ಕಲಿಬಹುದು? ಈ ಪ್ರಶ್ನೆಗಳಿಗೆ ಉತ್ತರ ಮುಂದಿನ ಅಧ್ಯಾಯಗಳಲ್ಲಿ ನೋಡಲಿದ್ದೇವೆ.

^ ಪ್ಯಾರ. 5 ಈ ಜೀವಿಗಳ ಬಗ್ಗೆ ಯೆಹೆಜ್ಕೇಲ ಬರೆದ ವಿವರಣೆಯಿಂದ ಯೆಹೋವನ ಹೆಸರಿನ ಅರ್ಥ ನಮ್ಮ ನೆನಪಿಗೆ ಬರುತ್ತೆ. “ಆಗುವಂತೆ ಮಾಡುತ್ತಾನೆ” ಅನ್ನೋದೇ ಆತನ ಹೆಸರಿನ ಅರ್ಥ. ಇದರ ಪ್ರಕಾರ ಯೆಹೋವನು ತನ್ನ ಉದ್ದೇಶವನ್ನು ನೆರವೇರಿಸಲಿಕ್ಕಾಗಿ ತನ್ನ ಸೃಷ್ಟಿ ಜೀವಿಗಳು ಏನಾಗಬೇಕೋ ಅದಾಗುವಂತೆ ಮಾಡುತ್ತಾನೆ.—ಹೊಸ ಲೋಕ ಭಾಷಾಂತರ, ಪರಿಶಿಷ್ಟ ಎ4 ನೋಡಿ.

^ ಪ್ಯಾರ. 13 ಇಲ್ಲಿ ತನಕ ನಮ್ಮ ಸಾಹಿತ್ಯಗಳಲ್ಲಿ ಯೆಹೋವನ ಸುಮಾರು 50 ಗುಣಗಳ ಬಗ್ಗೆ ತಿಳಿಸಲಾಗಿದೆ.—ವಾಚ್‌ಟವರ್‌ ಪಬ್ಲಿಕೇಶನ್‌ ಇಂಡೆಕ್ಸ್‌ನಲ್ಲಿ “ಜೆಹೋವ” ಅನ್ನೋ ವಿಷಯದ ಕೆಳಗೆ “ಕ್ವಾಲಿಟೀಸ್‌ ಬೈ ನೇಮ್‌” ನೋಡಿ.

^ ಪ್ಯಾರ. 15 “ಅಲ್ಲಿ” ಅನ್ನೋ ಪದ ಯೆಹೆಜ್ಕೇಲನಿಗಾದ ಭಾವನೆಯನ್ನು ಅರ್ಥಮಾಡಿಕೊಳ್ಳೋಕೆ ಸಹಾಯ ಮಾಡುತ್ತೆ ಅಂತ ಬೈಬಲಿನ ಒಬ್ಬ ವಿದ್ವಾಂಸ ತಿಳಿಸುತ್ತಾನೆ. ಯೆಹೋವನು ಅಲ್ಲಿ ಅಂದ್ರೆ ಬಾಬೆಲಿನಲ್ಲೂ ಇದ್ದಾನೆ ಅಂತ ಗೊತ್ತಾದಾಗ ಅವನಿಗೆ ಆಶ್ಚರ್ಯ ಆಯ್ತು, ಸಾಂತ್ವನ ಸಿಕ್ತು.