ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಡಳಿತ ಮಂಡಲಿಯಿಂದ ಪತ್ರ

ಆಡಳಿತ ಮಂಡಲಿಯಿಂದ ಪತ್ರ

ಯೆಹೋವನನ್ನ ಪ್ರೀತಿಸುವ ಪ್ರಿಯರೇ,

ಇಸವಿ 1971 ರಂದು ನಡೆದ “ದೈವಿಕ ಹೆಸರು” (ಇಂಗ್ಲಿಷ್‌) ಅಧಿವೇಶನದಲ್ಲಿ ಅನೇಕ ಹೊಸ ಪ್ರಕಾಶನಗಳು ಬಿಡುಗಡೆಯಾದ್ವು. ಅದಕ್ಕೆ ಎಲ್ಲರೂ ತುಂಬ ಖುಷಿಯಿಂದ ಇದ್ರು. ಯಾಕಂದ್ರೆ ಎಲ್ರ ಊಹೆ ಮೀರುವಷ್ಟು ಸಾಹಿತ್ಯಗಳು ಅವತ್ತು ಬಿಡುಗಡೆಯಾದ್ವು. ಆ ಸಾಹಿತ್ಯಗಳಲ್ಲಿ ಒಂದರ ಬಗ್ಗೆ ಒಬ್ಬ ಸಹೋದರ ಹೀಗೆ ಹೇಳಿದ್ರು: “ಭವಿಷ್ಯದಲ್ಲಿ ನಡೆಯಲಿಕ್ಕಿರುವ ವಿಷಯಗಳ ಬಗ್ಗೆ ಇಷ್ಟು ಚೆನ್ನಾಗಿ ಬಿಡಿಸಿ ತೋರಿಸುವ ಪುಸ್ತಕ ನಾನು ಇಲ್ಲಿವರೆಗೂ ನೋಡಿಲ್ಲ.” ಅವ್ರು ಯಾವ ಪುಸ್ತಕದ ಬಗ್ಗೆ ಮಾತಾಡ್ತಿದ್ರು? “ನಾನು ಯೆಹೋವನೆಂದು ಜನಾಂಗಗಳಿಗೆ ಗೊತ್ತಾಗುವುದು—ಹೇಗೆ?” (ಇಂಗ್ಲಿಷ್‌) ಅನ್ನೋ ಪುಸ್ತಕದ ಬಗ್ಗೆ. ಈ ಪುಸ್ತಕ ಸಿಕ್ಕಿದ್ದಕ್ಕೆ ಜನ ಯಾಕೆ ಅಷ್ಟೊಂದು ಖುಷಿಯಾಗಿದ್ರು? ಯಾಕಂದ್ರೆ ಅದರಲ್ಲಿ ಯೆಹೆಜ್ಕೇಲ ಪುಸ್ತಕದ ಭವಿಷ್ಯವಾಣಿಗಳ ಬಗ್ಗೆ ಹೊಸ ತಿಳುವಳಿಕೆ ಇತ್ತು. ಆ ಭವಿಷ್ಯವಾಣಿಗಳು ಮುಂದೆ ನಮ್ಮೆಲ್ಲರ ಭವಿಷ್ಯದಲ್ಲಿ ನಡೆಯೋ ವಿಷಯಗಳಾಗಿದ್ವು.

ಈ ಪುಸ್ತಕ ಬಿಡುಗಡೆಯಾದ ಸಮಯದಲ್ಲಿ ಇಡೀ ಭೂಮಿಯಲ್ಲಿ 15 ಲಕ್ಷ ಯೆಹೋವನ ಸೇವಕರು ಇದ್ರು. ಆದ್ರೆ ಈಗ 80 ಲಕ್ಷಕ್ಕಿಂತ ಹೆಚ್ಚು ಯೆಹೋವನ ಸೇವಕರಿದ್ದಾರೆ. (ಯೆಶಾ. 60:22) ಈ ಲಕ್ಷಾಂತರ ಸಹೋದರ ಸಹೋದರಿಯರು 900ಕ್ಕಿಂತ ಹೆಚ್ಚು ಭಾಷೆಗಳನ್ನ ಮಾತಾಡ್ತಾರೆ. (ಜೆಕ. 8:23) ಅವ್ರಲ್ಲಿ ಅನೇಕರಿಗೆ ಯೆಹೆಜ್ಕೇಲ ಪುಸ್ತಕದ ಭವಿಷ್ಯವಾಣಿಗಳ ಬಗ್ಗೆ ತಿಳಿಸೋ ಪುಸ್ತಕವನ್ನ ಓದೋ ಅವಕಾಶನೇ ಸಿಕ್ಕಿಲ್ಲ.

ಜೊತೆಗೆ 1971 ರಿಂದ ಬೈಬಲ್‌ ವಿಷಯಗಳ ಬಗ್ಗೆ ನಮಗಿರೋ ತಿಳುವಳಿಕೆ ಹೆಚ್ಚಾಗ್ತಾ ಬಂತು. (ಜ್ಞಾನೋ. 4:18) 1985 ರಲ್ಲಿ ನಮ್ಗೆ ಒಂದು ಹೊಸ ತಿಳುವಳಿಕೆ ಸಿಕ್ತು. “ಬೇರೆ ಕುರಿಗಳು” ಅಪರಿಪೂರ್ಣರಾದ್ರೂ ದೇವರ ಸ್ನೇಹಿತರಾಗಬಹುದು ಅಂತ ಗೊತ್ತಾಯ್ತು. (ಯೋಹಾ. 10:16; ರೋಮ. 5:18; ಯಾಕೋ. 2:23) 1995 ರಲ್ಲಿ ನಮಗೆ ಸಿಕ್ಕ ಇನ್ನೊಂದು ಹೊಸ ತಿಳುವಳಿಕೆಯಿಂದ ‘ಆಡುಗಳ’ ಮತ್ತು ‘ಕುರಿಗಳ’ ಬಗ್ಗೆ ಇರೋ ನ್ಯಾಯತೀರ್ಪು ‘ಮಹಾಸಂಕಟದ’ ಸಮಯದಲ್ಲಿ ಆಗುತ್ತೆ ಅಂತ ಗೊತ್ತಾಯ್ತು. (ಮತ್ತಾ. 24:21; 25:31, 32) ಈ ಎಲ್ಲಾ ತಿಳುವಳಿಕೆಯಿಂದ ನಮಗೆ ಯೆಹೆಜ್ಕೇಲ ಪುಸ್ತಕದಲ್ಲಿರೋ ಭವಿಷ್ಯವಾಣಿಗಳನ್ನ ಚೆನ್ನಾಗಿ ಅರ್ಥಮಾಡಿಕೊಳ್ಳೋಕೆ ಆಯ್ತು.

“ಮನುಷ್ಯಕುಮಾರನೇ, ನಾನು ನಿನಗೆ ತೋರಿಸೋದನ್ನೆಲ್ಲ ಗಮನಕೊಟ್ಟು ನೋಡು, ನಾನು ಹೇಳೋದನ್ನ ಕೇಳಿಸ್ಕೊ. ನಿನ್ನನ್ನ ಇಲ್ಲಿ ಕರ್ಕೊಂಡು ಬಂದಿರೋದು ಅದಕ್ಕೇ.”—ಯೆಹೆಜ್ಕೇಲ 40:4

ಇತ್ತೀಚಿನ ವರ್ಷಗಳಲ್ಲಿ ಬೈಬಲ್‌ ವಿಷಯಗಳ ಬಗ್ಗೆ ಇರೋ ತಿಳುವಳಿಕೆ ಇನ್ನೂ ಜಾಸ್ತಿಯಾಗ್ತಾ ಇದೆ. ಉದಾಹರಣೆಗೆ, ಯೇಸು ಕ್ರಿಸ್ತನು ಹೇಳಿದಂಥ ದೃಷ್ಟಾಂತಗಳು. ಅವನು ಹೇಳಿದ ದೃಷ್ಟಾಂತಗಳ ಅರ್ಥ ಏನು ಅಂತ ನಮಗೀಗ ಚೆನ್ನಾಗಿ ಗೊತ್ತಾಗಿದೆ. ಆ ದೃಷ್ಟಾಂತದಲ್ಲಿ ತಿಳಿಸಿರೋ ವಿಷಯಗಳು ಇನ್ನೇನು ಮಹಾ ಸಂಕಟದಲ್ಲಿ ಆಗಲಿಕ್ಕಿರೋ ಘಟನೆಗಳು ಅಂತನೂ ಅರ್ಥಮಾಡಿಕೊಂಡ್ವಿ ಮತ್ತು ಯೆಹೆಜ್ಕೇಲ ಪುಸ್ತಕದಲ್ಲಿರೋ ಭವಿಷ್ಯವಾಣಿಗಳ ಅರ್ಥ ಕೂಡ ನಮಗೀಗ ಚೆನ್ನಾಗಿ ಗೊತ್ತಾಗಿದೆ. ಇದ್ರಲ್ಲಿ ಮಾಗೋಗಿನ ಗೋಗ (ಅಧ್ಯಾಯ 38 ಮತ್ತು 39), ಕಾರ್ಯದರ್ಶಿಯ ಒಂದು ಶಾಯಿಕೊಂಬು (ಅಧ್ಯಾಯ 9), ಒಣಗಿ ಹೋದ ಮೂಳೆಗಳು ಮತ್ತು ಎರಡು ಕೋಲುಗಳು ಒಂದಾಗುವುದು (ಅಧ್ಯಾಯ 37) ಈ ಎಲ್ಲಾ ಭವಿಷ್ಯವಾಣಿಗಳು ಸೇರಿದ್ದವು. ಈ ಹೊಸ ತಿಳುವಳಿಕೆಗಳು ಹಿಂದೆ ಬಿಡುಗಡೆಯಾಗಿದ್ದ ‘ಯೆಹೋವನೆಂದು ಗೊತ್ತಾಗುವುದು’ ಅನ್ನೋ ಇಂಗ್ಲಿಷ್‌ ಪುಸ್ತಕದಲ್ಲಿ ಇರಲಿಲ್ಲ.

ಅನೇಕ ಯೆಹೋವನ ಸೇವಕರು ಯೆಹೆಜ್ಕೇಲ ಪುಸ್ತಕದಲ್ಲಿರೋ ಭವಿಷ್ಯವಾಣಿಗಳ ಹೊಸ ತಿಳುವಳಿಕೆಯಿರೋ ಪುಸ್ತಕ ನಮಗೆ ಯಾವಾಗ ಸಿಗುತ್ತೆ ಅಂತ ಕೇಳಿದ್ದಾರೆ. ಇಡೀ ಭೂಮಿಯಲ್ಲಿ ಶುದ್ಧ ಆರಾಧನೆ! ಅನ್ನೋ ಈ ಪುಸ್ತಕ ಅವ್ರ ಪ್ರಾರ್ಥನೆಗಳಿಗೆ ಉತ್ತರ. ಈ ಪುಸ್ತಕದಲ್ಲಿ 22 ಅಧ್ಯಾಯಗಳಿವೆ. ಈ ಪುಸ್ತಕವನ್ನ ಓದಿ ಧ್ಯಾನಿಸುವಾಗ ಇದರಲ್ಲಿರೋ ಭವಿಷ್ಯವಾಣಿಗಳ ತಿಳುವಳಿಕೆಯನ್ನ ಅರ್ಥಮಾಡಿಕೊಳ್ಳೋಕೆ ಎಷ್ಟೊಂದು ಶ್ರಮ ಹಾಕಲಾಗಿದೆ ಅಂತ ಗೊತ್ತಾಗುತ್ತೆ. ಯೆಹೆಜ್ಕೇಲ ಪುಸ್ತಕವನ್ನ ಯೆಹೋವ ದೇವರು ಬರೆಸಿರೋದಕ್ಕೆ ಏನು ಕಾರಣ? ಇದನ್ನ ಅರ್ಥಮಾಡಿಕೊಳ್ಳೋಕೆ ನಾವು ತುಂಬ ಪ್ರಾರ್ಥನೆ ಮತ್ತು ಸಂಶೋಧನೆಯನ್ನ ಮಾಡಿದ್ವಿ. ಆಗ ನಾವು ಕೆಲವೊಂದು ಪ್ರಶ್ನೆಗಳನ್ನ ಕೇಳಿಕೊಂಡ್ವಿ: ಯೆಹೆಜ್ಕೇಲ ಪುಸ್ತಕದಲ್ಲಿರೋ ಭವಿಷ್ಯವಾಣಿಯಿಂದ ಆಗಿನ ಕಾಲದ ಜನ್ರು ಯಾವ ಪಾಠ ಕಲಿತ್ರು? ಅದ್ರಿಂದ ನಾವೇನು ಪಾಠ ಕಲಿಬಹುದು? ಯಾವ ಭವಿಷ್ಯವಾಣಿಗಳು ಮುಂದೆ ಭವಿಷ್ಯದಲ್ಲಾಗುವ ಘಟನೆಗಳ ಬಗ್ಗೆ ತಿಳಿಸುತ್ತೆ? ಯೆಹೆಜ್ಕೇಲ ಪುಸ್ತಕದಲ್ಲಿರೋ ಪ್ರತಿಯೊಂದು ಭವಿಷ್ಯವಾಣಿಗೂ ಸೂಚಕ ಮತ್ತು ಸೂಚಕರೂಪವನ್ನ ಹುಡುಕಬೇಕಾ? ಈ ಪ್ರಶ್ನೆಗಳ ಉತ್ತರ ಬೈಬಲಿನ ಯೆಹೆಜ್ಕೇಲ ಪುಸ್ತಕದ ತಿಳುವಳಿಕೆಯನ್ನ ಇನ್ನೂ ಜಾಸ್ತಿ ಮಾಡುತ್ತೆ.

ನೀವು ಯೆಹೆಜ್ಕೇಲ ಪುಸ್ತಕವನ್ನ ಮೊದ್ಲಿನಿಂದ ಕೊನೆವರೆಗೆ ಓದಿ ಮುಗಿಸುವಷ್ಟರಲ್ಲಿ ಯೆಹೋವ ದೇವರ ಸ್ವರ್ಗೀಯ ಸಂಘಟನೆಯ ಬಗ್ಗೆ ಹೆಚ್ಚು ವಿಷಯ ತಿಳ್ಕೊಳ್ತೀರ. ಅದು ನಿಮ್ಮಲ್ಲಿ ಆಶ್ಚರ್ಯ ಹುಟ್ಟಿಸುತ್ತೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಸ್ವರ್ಗದಲ್ಲಿರೋರು ಮತ್ತು ಭೂಮಿಯಲ್ಲಿರೋರು ಯೆಹೋವ ದೇವರನ್ನ ಹೇಗೆ ಆರಾಧಿಸಬೇಕು ಅಂತ ಆತ ಬಯಸ್ತಾನೆ ಅನ್ನೋದನ್ನೂ ತಿಳ್ಕೊಳ್ಳಬಹುದು. ಶುದ್ಧ ಆರಾಧನೆ ಪುಸ್ತಕವನ್ನ ಓದುವಾಗ, ದೇವರು ನಮಗಾಗಿ ಈಗಾಗ್ಲೇ ಏನೆಲ್ಲಾ ಮಾಡಿದ್ದಾನೆ ಮತ್ತು ಮುಂದೆ ಏನೆಲ್ಲಾ ಮಾಡಲಿದ್ದಾನೆ ಅನ್ನೋದನ್ನ ನೋಡುವಾಗ ಆತನ ಮೇಲಿರೋ ಗಣ್ಯತೆ ಇನ್ನೂ ಹೆಚ್ಚಾಗುತ್ತೆ. ಈ ಪುಸ್ತಕದಲ್ಲಿ ಎರಡು ಮುಖ್ಯ ವಿಷ್ಯಗಳನ್ನ ಪದೇ ಪದೇ ಹೇಳಲಾಗಿದೆ. ಮೊದಲನೇದು, ಯೆಹೋವ ದೇವರನ್ನ ಮೆಚ್ಚಿಸಬೇಕಾದ್ರೆ ಆತನು ವಿಶ್ವದ ರಾಜ ಅನ್ನೋದನ್ನ ನಾವು ಒಪ್ಪಿಕೊಳ್ಳಬೇಕು. ಎರಡನೇದು, ನಾವು ದೇವರ ಮೆಚ್ಚಿಕೆಯನ್ನ ಪಡೀಬೇಕಾದ್ರೆ ಆತನು ಇಷ್ಟಪಡುವ ರೀತಿಯಲ್ಲೇ ಆತನನ್ನ ಆರಾಧಿಸಬೇಕು ಮತ್ತು ಆತನು ಬಯಸುವಂಥ ರೀತಿಯಲ್ಲೇ ನಾವು ಜೀವನ ನಡೆಸಬೇಕು.

ಈ ಪುಸ್ತಕ ಯೆಹೋವ ದೇವರ ಪವಿತ್ರ ಹೆಸರಿಗೆ ಘನತೆ, ಮಹಿಮೆ ತರೋ ರೀತಿಯಲ್ಲಿ ಆತನ ಆರಾಧನೆ ಮಾಡೋಕೆ ನಿಮ್ಮನ್ನು ಪ್ರೇರಿಸಲಿ. ಅಷ್ಟೇ ಅಲ್ಲ ಎಲ್ಲಾ ಜನರು ಯೆಹೋವನೇ ದೇವರು ಅಂತ ಅರ್ಥಮಾಡಿಕೊಳ್ಳೋ ಸಮಯಕ್ಕಾಗಿ ತಾಳ್ಮೆಯಿಂದ ಕಾಯೋಕೆ ನಿಮಗೆ ಪ್ರೋತ್ಸಾಹ ಕೊಡಲಿ.—ಯೆಹೆ. 36:23; 38:23.

ಯೆಹೋವನು ಯೆಹೆಜ್ಕೇಲನನ್ನ ಪ್ರೇರಿಸಿ ಬರೆಸಿದ ಈ ಪುಸ್ತಕವನ್ನ ಓದಿ ಅರ್ಥಮಾಡಿಕೊಳ್ಳೋಕೆ ನೀವು ಹಾಕುವ ಎಲ್ಲ ಪ್ರಯತ್ನವನ್ನ ಯೆಹೋವ ದೇವರು ಆಶೀರ್ವದಿಸಲಿ ಅಂತ ನಾವು ಹಾರೈಸುತ್ತೇವೆ.

ನಿಮ್ಮ ಸಹೋದರರು,

ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿ