ಅಧ್ಯಾಯ 20
‘ದೇಶವನ್ನ ಆಸ್ತಿಯಾಗಿ ಹಂಚಿಕೊಡು’
ಮುಖ್ಯ ವಿಷಯ: ದೇಶವನ್ನ ಹಂಚಿಕೊಡೋದ್ರ ಅರ್ಥ
1, 2. (ಎ) ಯೆಹೋವನು ಯೆಹೆಜ್ಕೇಲನಿಗೆ ಏನು ಮಾಡೋಕೆ ಹೇಳಿದನು? (ಬಿ) ಯಾವ ಪ್ರಶ್ನೆಗಳಿಗೆ ಉತ್ತರ ತಿಳಿಯಲಿದ್ದೇವೆ?
ಯೆಹೆಜ್ಕೇಲನಿಗೆ ತಾನು ನೋಡಿದ ದರ್ಶನದಿಂದ ಸುಮಾರು 900 ವರ್ಷಗಳ ಹಿಂದೆ ಮೋಶೆ ಮತ್ತು ಯೆಹೋಶುವನ ಕಾಲದಲ್ಲಿ ನಡೆದ ಘಟನೆ ನೆನಪಾಗಿರಬಹುದು. ಆಗ ಯೆಹೋವ ದೇವ್ರು ತಾನು ಮಾತು ಕೊಟ್ಟಿದ್ದ ದೇಶದ ಗಡಿ ಎಲ್ಲಿಂದ ಎಲ್ಲಿವರೆಗೆ ಇದೆ ಅನ್ನೋದನ್ನ ಮೋಶೆಗೆ ವಿವರಿಸಿದನು. ಆಮೇಲೆ ಯೆಹೋಶುವನಿಗೆ ದೇಶವನ್ನ ಯಾವ ತರ ಇಸ್ರಾಯೇಲ್ಯರ ಕುಲಗಳಿಗೆ ಹಂಚಿಕೊಡಬೇಕು ಅಂತ ಹೇಳಿದನು. (ಅರ. 34:1-15; ಯೆಹೋ. 13:7; 22:4, 9) ಆದ್ರೆ ಈಗ ಅಂದ್ರೆ ಕ್ರಿ.ಪೂ. 593 ರಲ್ಲಿ ಯೆಹೋವ ದೇವ್ರು ತಾನು ಮಾತು ಕೊಟ್ಟ ದೇಶವನ್ನ ಇಸ್ರಾಯೇಲಿನ ಎಲ್ಲಾ ಕುಲಗಳಿಗೆ ಪುನಃ ಹಂಚಿಕೊಡುವಂತೆ ಯೆಹೆಜ್ಕೇಲನಿಗೆ ಮತ್ತು ಅವನ ಜೊತೆ ಇದ್ದ ಕೈದಿಗಳಿಗೆ ಹೇಳಿದನು.—ಯೆಹೆ. 45:1; 47:14; 48:29.
2 ಈ ದರ್ಶನದಿಂದ ಯೆಹೆಜ್ಕೇಲ ಮತ್ತು ಅವನ ಜೊತೆ ಇದ್ದ ಕೈದಿಗಳು ಏನನ್ನ ತಿಳ್ಕೊಂಡ್ರು? ಇವತ್ತಿರೋ ದೇವಜನ್ರಿಗೆ ಈ ದರ್ಶನದಿಂದ ಹೇಗೆ ಪ್ರೋತ್ಸಾಹ ಸಿಗುತ್ತೆ? ಈ ದರ್ಶನ ಮುಂದೆ ಮಹತ್ತಾದ ರೀತಿಯಲ್ಲಿ ನೆರವೇರಲಿದೆಯಾ?
ನಾಲ್ಕು ಆಶೀರ್ವಾದಗಳಿರೋ ದರ್ಶನ
3, 4. (ಎ) ಕೈದಿಗಳಿಗೆ ಸಿಗಲಿರುವ ಯಾವ ನಾಲ್ಕು ಆಶೀರ್ವಾದಗಳ ಬಗ್ಗೆ ಕೊನೇ ದರ್ಶನದಲ್ಲಿ ತಿಳಿಸಲಾಗಿದೆ? (ಬಿ) ಈ ಅಧ್ಯಾಯದಲ್ಲಿ ಯಾವ ಆಶೀರ್ವಾದದ ಬಗ್ಗೆ ಕಲಿಯಲಿದ್ದೇವೆ?
3 ಯೆಹೆಜ್ಕೇಲ ಪುಸ್ತಕದ ಕೊನೇ ಒಂಭತ್ತು ಅಧ್ಯಾಯಗಳಲ್ಲಿ ಅವನು ಕಂಡ ಕೊನೇ ದರ್ಶನದ ವಿವರಣೆಗಳಿವೆ. (ಯೆಹೆ. 40:1–48:35) ಅದ್ರಲ್ಲಿ ಕೈದಿಗಳಾಗಿದ್ದ ಜನ್ರಿಗೆ ಪುನಃಸ್ಥಾಪಿಸಲಾದ ದೇಶದಲ್ಲಿ ಸಿಗಲಿದ್ದ 4 ಆಶೀರ್ವಾದಗಳ ಬಗ್ಗೆ ಇದೆ. ಆ ಆಶೀರ್ವಾದಗಳು ಯಾವುವು? (1) ದೇವರ ಆಲಯದಲ್ಲಿ ಶುದ್ಧಾರಾಧನೆ ಪುನಃಸ್ಥಾಪನೆಯಾಗುತ್ತೆ. (2) ನೀತಿವಂತ ಪುರೋಹಿತರು ಮತ್ತು ಕುರುಬರು ದೇಶದಲ್ಲಿ ಮುಂದಾಳತ್ವ ವಹಿಸ್ತಾರೆ. (3) ಬಂಧಿವಾಸದಿಂದ ವಾಪಸ್ ಬಂದ ಎಲ್ಲಾ ಇಸ್ರಾಯೇಲ್ಯರಿಗೆ ದೇಶವನ್ನ ಹಂಚಿಕೊಡಲಾಗುತ್ತೆ. (4) ಯೆಹೋವ ದೇವ್ರು ಮತ್ತೆ ಅವ್ರ ಜೊತೆ ಇರ್ತಾನೆ.
4 ಮೊದಲ ಎರಡು ಆಶೀರ್ವಾದಗಳು ಹೇಗೆ ನೆರವೇರುತ್ತೆ ಅನ್ನೋದ್ರ ಬಗ್ಗೆ ಈ ಪುಸ್ತಕದ 13 ಮತ್ತು 14 ನೇ ಅಧ್ಯಾಯದಲ್ಲಿ ಕಲಿತ್ವಿ. ಈ ಅಧ್ಯಾಯದಲ್ಲಿ, ದೇಶವನ್ನು ಎಲ್ರಿಗೆ ಹೇಗೆ ಹಂಚಿ ಕೊಡಲಾಗುತ್ತೆ ಅನ್ನೋದ್ರ ಬಗ್ಗೆ ನೋಡ್ತೇವೆ. ಮುಂದಿನ ಅಧ್ಯಾಯದಲ್ಲಿ ಯೆಹೋವನು ತನ್ನ ಜನ್ರ ಜೊತೆ ಇರ್ತಾನೆ ಅನ್ನೋ ಮಾತು ಹೇಗೆ ನೆರವೇರುತ್ತೆ ಅಂತ ಕಲಿಯಲಿದ್ದೇವೆ.—ಯೆಹೆ. 47:13-21; 48:1-7, 23-29.
“ಈ ಪ್ರದೇಶವನ್ನ . . . ನಿಮಗೆ ಆಸ್ತಿಯಾಗಿ ಕೊಟ್ಟಿದ್ದೀನಿ”
5, 6. (ಎ) ಯೆಹೆಜ್ಕೇಲನ ದರ್ಶನದಲ್ಲಿ ಯಾವ ಪ್ರದೇಶವನ್ನ ಹಂಚೋದ್ರ ಬಗ್ಗೆ ತಿಳಿಸಲಾಗಿತ್ತು? (ಆರಂಭದ ಚಿತ್ರ ನೋಡಿ.) (ಬಿ) ದೇಶವನ್ನ ಹಂಚೋದ್ರ ಬಗ್ಗೆ ಇದ್ದ ದರ್ಶನದ ಉದ್ದೇಶ ಏನಾಗಿತ್ತು?
5 ಯೆಹೆಜ್ಕೇಲ 47:14 ಓದಿ. “ಏದೆನ್ ತೋಟದ ತರ” ಆಗಲಿದ್ದ ಒಂದು ದೇಶವನ್ನ ಯೆಹೋವ ದೇವ್ರು ಆ ದರ್ಶನದಲ್ಲಿ ಯೆಹೆಜ್ಕೇಲನಿಗೆ ತೋರಿಸಿದನು. (ಯೆಹೆ. 36:35) ಆಮೇಲೆ ಯೆಹೋವನು ಹೀಗೆ ಹೇಳಿದನು: “ನೀವು ಈ ಪ್ರದೇಶವನ್ನ ಇಸ್ರಾಯೇಲಿನ 12 ಕುಲಗಳಿಗೆ ಆಸ್ತಿಯಾಗಿ ಹಂಚ್ಕೊಡ್ತೀರ.” (ಯೆಹೆ. 47:13) ಯೆಹೋವನು “ಈ ಪ್ರದೇಶ” ಅಂತ ಹೇಳಿರೋದು ಕೈದಿಗಳು ವಾಪಸ್ ಹೋಗಲಿದ್ದ ಇಸ್ರಾಯೇಲ್ ದೇಶದ ಬಗ್ಗೆನೇ. ಆಮೇಲೆ ಯೆಹೆಜ್ಕೇಲ 47:15-21 ರಲ್ಲಿ ನೋಡೋ ಹಾಗೆ ಯೆಹೋವ ದೇವ್ರು ಆ ದೇಶದ ಗಡಿಗಳ ಬಗ್ಗೆ ಸ್ಪಷ್ಟವಾಗಿ ವಿವರಿಸಿದನು.
6 ದೇಶವನ್ನು ಹಂಚಿಕೊಡೋದ್ರ ಬಗ್ಗೆ ಇದ್ದ ಈ ದರ್ಶನದ ಉದ್ದೇಶ ಏನಾಗಿತ್ತು? ಆ ದೇಶದ ಗಡಿಗಳ ಬಗ್ಗೆ ಕೊಡಲಾದ ಪಕ್ಕಾ ಅಳತೆಯ ವಿವರಣೆಯಿಂದಾಗಿ ಯೆಹೆಜ್ಕೇಲ ಮತ್ತು ಅವನ ಜೊತೆ ಇದ್ದ ಕೈದಿಗಳಿಗೆ ತಮ್ಮ ದೇಶ ಖಂಡಿತ ಪುನಃಸ್ಥಾಪನೆ ಆಗುತ್ತೆ ಅನ್ನೋ ಆಶ್ವಾಸನೆ ಸಿಕ್ಕಿರುತ್ತೆ. ಹಾಗಾಗಿ, ಈ ಅಳತೆಗಳ ಬಗ್ಗೆ ಯೆಹೋವನು ಕೊಟ್ಟ ಸ್ಪಷ್ಟ ವಿವರಣೆಯನ್ನ ಕೇಳಿಸಿಕೊಂಡಾಗ ಅವರಿಗೆ ತುಂಬ ಖುಷಿಯಾಗಿರಬೇಕಲ್ವಾ! ಆದ್ರೆ ಆಗಿನ ಕಾಲದಲ್ಲಿದ್ದ ದೇವಜನರಿಗೆ ಯೆಹೋವನು ಹೇಳಿದ ಹಾಗೆನೇ ನಿಜವಾಗಿಯೂ ಆ ದೇಶ ಸಿಕ್ತಾ? ಹೌದು ಸಿಕ್ತು.
7. (ಎ) ಕ್ರಿ.ಪೂ. 537 ರಲ್ಲಿ ಯಾವ ಘಟನೆಗಳು ನಡೆದವು? ಮತ್ತು ಅವುಗಳಿಂದ ನಮಗೆ ಏನು ನೆನಪಾಗುತ್ತೆ? (ಬಿ) ಯಾವ ಪ್ರಶ್ನೆಗೆ ಉತ್ತರ ತಿಳಿಯಲಿದ್ದೇವೆ?
7 ಕ್ರಿ.ಪೂ. 537 ರಲ್ಲಿ ಅಂದ್ರೆ ಯೆಹೆಜ್ಕೇಲನಿಗೆ ದರ್ಶನ ಸಿಕ್ಕಿ ಸುಮಾರು 56 ವರ್ಷಗಳಾದ ನಂತ್ರ ಸಾವಿರಾರು ಕೈದಿಗಳು ಇಸ್ರಾಯೇಲಿಗೆ ವಾಪಸ್ ಹೋದ್ರು ಮತ್ತು ಅಲ್ಲಿ ವಾಸಿಸೋಕೆ ಶುರುಮಾಡಿದ್ರು. ಇದು ಈಗಿನ ಕಾಲದಲ್ಲಿ ದೇವಜನರ ಮಧ್ಯೆ ನಡೀತಾ ಇರೋ ಒಂದು ಪ್ರಾಮುಖ್ಯ ಘಟನೆಯನ್ನ ಸೂಚಿಸುತ್ತೆ. ಒಂದರ್ಥದಲ್ಲಿ ಅವ್ರಿಗೂ ಒಂದು ದೇಶವನ್ನ ಹಂಚಿಕೊಡಲಾಗಿದೆ. ಅದು ಹೇಗೆ? ಯೆಹೋವನು ತನ್ನ ಸೇವಕರಿಗೆ ಆಧ್ಯಾತ್ಮಿಕ ದೇಶಕ್ಕೆ ಹೋಗಲು ಮತ್ತು ಅಲ್ಲಿ ವಾಸಿಸಲು ಅನುಮತಿ ಕೊಟ್ಟನು. ಹಿಂದಿನ ಕಾಲದಲ್ಲಿ ಆದ ಪುನಃಸ್ಥಾಪನೆಯಿಂದ ಈಗಿನ ಕಾಲದ ಆಧ್ಯಾತ್ಮಿಕ ದೇಶದ ಪುನಃಸ್ಥಾಪನೆಯ ಬಗ್ಗೆ ಹೆಚ್ಚಿನ ವಿಷಯಗಳನ್ನ ಕಲಿಬಹುದು. ಈ ವಿಷಯದ ಬಗ್ಗೆ ಹೆಚ್ಚನ್ನ ತಿಳ್ಕೊಳ್ಳೋ ಮುಂಚೆ, “ನಮ್ಮ ಕಾಲದಲ್ಲಿ ಆಧ್ಯಾತ್ಮಿಕ ದೇಶ ಅಸ್ತಿತ್ವದಲ್ಲಿದೆ ಅಂತ ಹೇಗೆ ಹೇಳಬಹುದು?” ಅನ್ನೋ ಪ್ರಶ್ನೆಗೆ ಉತ್ತರ ತಿಳಿಯೋಣ.
8. (ಎ) ಯೆಹೋವನು ಇಸ್ರಾಯೇಲ್ ದೇಶದ ಬದಲು ಯಾವ ದೇಶವನ್ನ ಆರಿಸಿಕೊಂಡನು? (ಬಿ) ಆಧ್ಯಾತ್ಮಿಕ ದೇಶ ಅಥವಾ ಪರದೈಸ್ ಅಂದ್ರೇನು? (ಸಿ) ಅದು ಯಾವಾಗ ಅಸ್ತಿತ್ವಕ್ಕೆ ಬಂತು? ಮತ್ತು ಅದ್ರಲ್ಲಿ ಯಾರು ವಾಸವಾಗಿದ್ದಾರೆ?
8 ಪುನಃಸ್ಥಾಪನೆಯ ಭವಿಷ್ಯವಾಣಿಗಳು ಯಾವಾಗ ಮಹತ್ತಾದ ರೀತಿಯಲ್ಲಿ ನೆರವೇರುತ್ತವೆ? ತನ್ನ “ಸೇವಕ ದಾವೀದ” ಅಂದ್ರೆ ಯೇಸು ರಾಜನಾಗಿ ಆಳೋಕೆ ಶುರು ಮಾಡಿದ ಮೇಲೆನೇ ಅವು ನೆರವೇರುತ್ತವೆ ಅಂತ ಯೆಹೋವನು ಹೇಳಿದ್ದನು. (ಯೆಹೆ. ) ಯೇಸುವಿನ ಆಳ್ವಿಕೆ 1914 ರಲ್ಲಿ ಶುರು ಆಯ್ತು. ಅದಕ್ಕೂ ತುಂಬಾ ವರ್ಷಗಳ ಹಿಂದೆನೇ ಯೆಹೋವನು ಇಸ್ರಾಯೇಲ್ಯರಿಗೆ ಬದಲಾಗಿ ದೇವರ ಇಸ್ರಾಯೇಲ್ಯರನ್ನ ಅಂದ್ರೆ ಅಭಿಷಿಕ್ತರನ್ನ ತನ್ನ ಸ್ವಂತ ಜನ್ರಾಗಿ ಆಯ್ಕೆ ಮಾಡಿದ್ದನು. ( 37:24ಮತ್ತಾಯ 21:43; 1 ಪೇತ್ರ 2:9 ಓದಿ.) ಅಷ್ಟೇ ಅಲ್ಲ, ಇಸ್ರಾಯೇಲ್ ದೇಶಕ್ಕೆ ಬದಲಾಗಿ ಒಂದು ಹೊಸ ಆಧ್ಯಾತ್ಮಿಕ ದೇಶವನ್ನ (ಆಧ್ಯಾತ್ಮಿಕ ಪರದೈಸ್) ಸ್ಥಾಪಿಸಿದ್ದನು. (ಯೆಶಾ. 66:8) ಆ ಆಧ್ಯಾತ್ಮಿಕ ದೇಶ ಏನು ಅಂತ ಈ ಪುಸ್ತಕದ 17 ನೇ ಅಧ್ಯಾಯದಲ್ಲಿ ನಾವು ಈಗಾಗ್ಲೇ ನೋಡಿದ್ದೇವೆ. ಯೆಹೋವನ ಜನ್ರು ಆಧ್ಯಾತ್ಮಿಕವಾಗಿ ಸುರಕ್ಷಿತವಾಗಿರೋ ಅಥವಾ ಎಲ್ಲಾ ಆಧ್ಯಾತ್ಮಿಕ ಚಟುವಟಿಕೆಗಳನ್ನ ಮಾಡೋಕೆ ಆಗೋ ವಾತಾವರಣನೇ ಅದು. ಅಲ್ಲಿ 1919 ರಿಂದ ಅಭಿಷಿಕ್ತ ಉಳಿಕೆಯವ್ರು ಯೆಹೋವ ದೇವ್ರನ್ನ ಆರಾಧಿಸ್ತಾ ಇದ್ದಾರೆ. (“1919 ರಲ್ಲೇ ಯಾಕೆ?” 9ಬಿ ಚೌಕವನ್ನ ನೋಡಿ.) ಸಮಯ ಹೋದಂತೆ ಭೂಮಿಯಲ್ಲಿ ಜೀವಿಸಲಿಕ್ಕೆ ನಿರೀಕ್ಷೆ ಇರೋ ‘ಬೇರೆ ಕುರಿಗಳು’ ಸಹ ಈ ಆಧ್ಯಾತ್ಮಿಕ ದೇಶದಲ್ಲಿ ವಾಸಿಸೋಕೆ ಶುರು ಮಾಡಿದ್ರು. (ಯೋಹಾ. 10:16) ಈ ಆಧ್ಯಾತ್ಮಿಕ ದೇಶ ಈಗಲೂ ಬೆಳವಣಿಗೆ ಆಗ್ತಾ ಇದೆ ಮತ್ತು ವಿಸ್ತಾರ ಆಗ್ತಾ ಇದೆ. ಆದ್ರೂ ಅದ್ರ ಆಶೀರ್ವಾದಗಳು ಸಂಪೂರ್ಣವಾಗಿ ಸಿಗೋದು ಹರ್ಮಗೆದ್ದೋನ್ ನಂತ್ರನೇ.
ದೇಶವನ್ನ ಸರಿಸಮವಾಗಿ ಹಂಚಲಾಯ್ತು
9. ದೇಶವನ್ನ ಹೇಗೆ ಹಂಚಬೇಕು ಅಂತ ಯೆಹೋವನು ಹೇಳಿದನು?
9 ಯೆಹೆಜ್ಕೇಲ 48:1, 28 ಓದಿ. ಯೆಹೋವನು ದೇಶದ ಗಡಿಗಳ ಬಗ್ಗೆ ವಿವರಿಸಿದ ನಂತ್ರ ಆ ದೇಶವನ್ನ ಹೇಗೆ ಹಂಚಿಕೊಡಬೇಕು ಅಂತನೂ ವಿವರಿಸಿದನು. ಆತನು 12 ಕುಲಗಳಿಗೆ ಉತ್ತರದಿಂದ ದಕ್ಷಿಣಕ್ಕೆ ಸಮಾನವಾಗಿ ಹಂಚಿ ಕೊಡಬೇಕು ಅಂತ ಹೇಳಿದನು. ಮೊದಲು ಉತ್ತರದ ದಾನ್ ಕುಲಕ್ಕೆ ಆಸ್ತಿಯನ್ನ ಕೊಟ್ಟು ನಂತ್ರ ಉಳಿದ ಎಲ್ಲಾ ಕುಲಗಳಿಗೂ ಆಸ್ತಿ ಕೊಡುತ್ತಾ, ಕೊನೇಲಿ ದಕ್ಷಿಣದಲ್ಲಿ ಗಾದ್ ಕುಲಕ್ಕೆ ಆಸ್ತಿಯನ್ನ ಕೊಡಬೇಕು ಅಂತ ಯೆಹೋವನು ಹೇಳಿದನು. ಪ್ರತಿಯೊಂದು ಕುಲಕ್ಕೆ ಕೊಡಲಾದ ಆಸ್ತಿ ಪೂರ್ವದ ಗಡಿ ಪ್ರದೇಶದಿಂದ ಶುರುವಾಗಿ ಪಶ್ಚಿಮದ ಗಡಿಪ್ರದೇಶದ ವರೆಗೆ ಅಂದ್ರೆ ಮಹಾ ಸಮುದ್ರ ಅಥ್ವಾ ಮೆಡಿಟರೇನಿಯನ್ ಸಮುದ್ರದ ವರೆಗೆ ಇತ್ತು.—ಯೆಹೆ. 47:20.
10. ದರ್ಶನದಲ್ಲಿದ್ದ ಈ ವಿಷಯದಿಂದ ಕೈದಿಗಳಿಗೆ ಯಾವ ಆಶ್ವಾಸನೆ ಸಿಕ್ಕಿರಬೇಕು?
10 ದರ್ಶನದಲ್ಲಿರೋ ಈ ವಿಷ್ಯವನ್ನ ಕೇಳಿಸಿಕೊಂಡಾಗ ಕೈದಿಗಳಿಗೆ ಯಾವ ಆಶ್ವಾಸನೆ ಸಿಕ್ಕಿರಬೇಕು? ದೇಶದ ಹಂಚಿಕೆಯ ಬಗ್ಗೆ ಯೆಹೆಜ್ಕೇಲನು ಕೊಟ್ಟ ವಿವರಣೆಯಿಂದ ಅವ್ರಿಗೆ ತಮ್ಮ ದೇಶವನ್ನ ಸುವ್ಯವಸ್ಥಿತವಾಗಿ ಹಂಚಲಾಗುತ್ತೆ ಅಂತ ಗೊತ್ತಾಗಿರುತ್ತೆ. ಆಗ ಅವ್ರಿಗೆ ತುಂಬಾ ಖುಷಿ ಆಗಿದ್ದಿರಬೇಕು. ಅಷ್ಟೇ ಅಲ್ಲ, ಇಸ್ರಾಯೇಲಿನ 12 ಕುಲದಲ್ಲಿರೋ ಎಲ್ರಿಗೆ ಜಾಗವನ್ನ ಹಂಚಲಾಗುತ್ತೆ ಅಂತ ಆ ದರ್ಶನದಲ್ಲಿ ಇತ್ತು. ಇದ್ರಿಂದ ಬಂಧಿವಾಸದಿಂದ ವಾಪಸ್ ಬಂದವರೆಲ್ಲರಿಗೂ ಆಸ್ತಿ, ಮನೆ ಸಿಗುತ್ತೆ ಅನ್ನೋ ಆಶ್ವಾಸನೆ ಸಿಕ್ಕಿರಬೇಕು.
11. ದೇಶದ ಹಂಚಿಕೆಯ ಬಗ್ಗೆ ಇರೋ ದರ್ಶನದಿಂದ ನಾವೇನು ಕಲಿಬಹುದು? (“ದೇಶವನ್ನ ಹಂಚಿ ಕೊಡಲಾಗುತ್ತೆ” ಅನ್ನೋ ಚೌಕ ನೋಡಿ.)
11 ಈ ದರ್ಶನದಿಂದ ನಮ್ಮ ನಂಬಿಕೆಯನ್ನ ಕಟ್ಟುವಂಥ ಯಾವ ಪಾಠವನ್ನ ಕಲಿಬಹುದು? ಪುನಃಸ್ಥಾಪಿಸಿದ ಆ ದೇಶದಲ್ಲಿ ಬರೀ ಪುರೋಹಿತರಿಗೆ ಲೇವಿಯರಿಗೆ ಮತ್ತು ಪ್ರಧಾನರಿಗೆ ಮಾತ್ರವಲ್ಲ 12 ಕುಲದಲ್ಲಿರೋ ಪ್ರತಿಯೊಬ್ಬರಿಗೂ ತಮ್ಮ ಪಾಲು ಸಿಕ್ತು. (ಯೆಹೆ. 45:4, 5, 7, 8) ನಾವಿರೋ ಆಧ್ಯಾತ್ಮಿಕ ದೇಶದಲ್ಲಿ ಬರೀ ಅಭಿಷಿಕ್ತರಿಗೆ ಮತ್ತು ದೊಡ್ಡ ಗುಂಪಿನಲ್ಲಿರೋ ಜವಾಬ್ದಾರಿಯುತ ಸಹೋದರರಿಗೆ ಮಾತ್ರವಲ್ಲ, ‘ದೊಡ್ಡ ಗುಂಪಿನಲ್ಲಿರೋ‘ ಪ್ರತಿಯೊಬ್ಬರಿಗೂ ತಮ್ಮದೇ ಆದ ಜಾಗ ಇದೆ. * (ಪ್ರಕ. 7:9) ಸಂಘಟನೆಯಲ್ಲಿ ನಮಗಿರೋ ಪಾತ್ರ ಎಷ್ಟೇ ಚಿಕ್ಕದಾಗಿದ್ರೂ ನಮ್ಮೆಲ್ಲರ ಸೇವೆ ತುಂಬ ಅಮೂಲ್ಯವಾಗಿದೆ ಮತ್ತು ಆಧ್ಯಾತ್ಮಿಕ ದೇಶದಲ್ಲಿ ನಮಗೆ ಪ್ರಾಮುಖ್ಯವಾದ ಒಂದು ಜಾಗ ಇದೆ. ಇದನ್ನ ಕೇಳುವಾಗ ನಮ್ಗೆ ಎಷ್ಟು ಖುಷಿ ಆಗುತ್ತೆ ಅಲ್ವಾ?
ಎರಡು ಮುಖ್ಯ ವ್ಯತ್ಯಾಸಗಳು ಮತ್ತು ಅವುಗಳಿಂದ ಕಲಿಯೋ ಪಾಠ
12, 13. ದೇಶವನ್ನ ಹಂಚುವ ವಿಷಯದಲ್ಲಿ ಯೆಹೋವನು ಯಾವ ನಿರ್ದೇಶನಗಳನ್ನ ಕೊಟ್ಟನು?
12 ಯೆಹೋವನು ದೇಶವನ್ನು ಹಂಚಿಕೊಡೋದ್ರ ಬಗ್ಗೆ ಕೊಟ್ಟ ಕೆಲವು ನಿರ್ದೇಶನಗಳನ್ನ ಕೇಳಿಸಿಕೊಂಡಾಗ ಯೆಹೆಜ್ಕೇಲನಿಗೆ ಆಶ್ಚರ್ಯ ಆಗಿರಬಹುದು. ಯಾಕಂದ್ರೆ ಅವು ಮೋಶೆಗೆ ಕೊಟ್ಟ ನಿರ್ದೇಶನಕ್ಕಿಂತ ಭಿನ್ನವಾಗಿದ್ದವು. ಅಂಥ ಎರಡು ವ್ಯತ್ಯಾಸಗಳನ್ನ ನಾವೀಗ ನೋಡೋಣ. (1) ದೇಶವನ್ನ ಹಂಚೋದ್ರ ಬಗ್ಗೆ, (2) ಅದ್ರಲ್ಲಿ ವಾಸಿಸೋ ಜನ್ರ ಬಗ್ಗೆ.
13 ಮೊದಲನೇದು ದೇಶವನ್ನ ಹಂಚೋದ್ರ ಬಗ್ಗೆ. ಯೆಹೋವ ದೇವ್ರು ದೊಡ್ಡ ಕುಲಗಳಿಗೆ ಹೆಚ್ಚು ಜಾಗ, ಚಿಕ್ಕ ಕುಲಗಳಿಗೆ ಕಡಿಮೆ ಜಾಗವನ್ನ ಹಂಚಬೇಕು ಅಂತ ಮೋಶೆಗೆ ಹೇಳಿದ್ದನು. (ಅರ. 26:52-54) ಆದ್ರೆ ಯೆಹೆಜ್ಕೇಲನಿಗೆ ಕೊಟ್ಟ ದರ್ಶನದಲ್ಲಿ ಯೆಹೋವ ದೇವ್ರು ಸ್ಪಷ್ಟವಾಗಿ ‘ಎಲ್ಲಾ ಕುಲಗಳಿಗೂ ಸಮಪಾಲು’ ಸಿಗುವಂತೆ ದೇಶವನ್ನ ಹಂಚೋಕೆ ಹೇಳಿದನು. (ಯೆಹೆ. 47:14) ಹೀಗೆ ಉತ್ತರದ ಗಡಿ ಭಾಗದಿಂದ ದಕ್ಷಿಣದ ಗಡಿಯ ವರೆಗೆ 12 ಕುಲಗಳಿಗೂ ಸಮವಾಗಿ ಜಾಗವನ್ನ ಹಂಚಬೇಕಾಗಿತ್ತು. ಪ್ರತಿಯೊಬ್ಬ ಇಸ್ರಾಯೇಲ್ಯನಿಗೆ ಅವನ ಕುಲ ಚಿಕ್ಕದಾಗಿರಲಿ ದೊಡ್ಡದಾಗಿರಲಿ ಫಲವತ್ತಾದ ನೀರಾವರಿಯಿರೋ ಸುಂದರ ದೇಶದ ಸಮಪಾಲು ಸಿಗ್ತಿತ್ತು.
14. ಇಸ್ರಾಯೇಲಿನಲ್ಲಿದ್ದ ವಿದೇಶಿಯರ ಬಗ್ಗೆ ಮೋಶೆಯ ನಿಯಮ ಪುಸ್ತಕದಲ್ಲಿದ್ದ ನಿರ್ದೇಶನಕ್ಕೂ ಯೆಹೆಜ್ಕೇಲನಿಗೆ ಕೊಟ್ಟ ನಿರ್ದೇಶನಕ್ಕೂ ಯಾವ ವ್ಯತ್ಯಾಸ ಇತ್ತು?
14 ಎರಡನೇದು, ಅದ್ರಲ್ಲಿ ವಾಸಿಸೋ ಜನ್ರ ಬಗ್ಗೆ. ಮೋಶೆ ಮೂಲಕ ಕೊಟ್ಟ ನಿಯಮ ಪುಸ್ತಕದಲ್ಲಿ ವಿದೇಶಿಯರನ್ನ ಸಂರಕ್ಷಿಸೋಕೆ ಕೆಲವು ನಿಯಮಗಳಿದ್ದವು. ಅವ್ರಿಗೆ ಯೆಹೋವ ದೇವರನ್ನ ಆರಾಧಿಸೋ ಅವಕಾಶ ಇತ್ತು. ಆದ್ರೆ ಅವ್ರಿಗೆ ಆ ದೇಶದಲ್ಲಿ ಪಾಲು ಸಿಕ್ಕಿರಲಿಲ್ಲ. (ಯಾಜ. 19:33, 34) ಅದಕ್ಕೆ ಭಿನ್ನವಾದ ಒಂದು ವಿಷ್ಯನ ಯೆಹೋವನು ಯೆಹೆಜ್ಕೇಲನಿಗೆ ಹೇಳಿದನು. ಆತನು ಹೀಗಂದನು: ‘ಈ ದೇಶವನ್ನ ನಿಮ್ಮ ದೇಶದಲ್ಲಿ ವಾಸಿಸ್ತಾ ಇರೋ ವಿದೇಶಿಯರಿಗೂ ಆಸ್ತಿಯಾಗಿ ಹಂಚಿ ಕೊಡಬೇಕು.’ ಈ ಒಂದೇ ಒಂದು ಆಜ್ಞೆಯ ಮೂಲಕ ‘ಇಸ್ರಾಯೇಲ್ಯರಿಗೂ’ ಮತ್ತು ವಿದೇಶಿಯರಿಗೂ ಮಧ್ಯೆ ಇರೋ ವ್ಯತ್ಯಾಸವನ್ನ ಯೆಹೋವನು ತೆಗೆದುಹಾಕಿದನು. (ಯೆಹೆ. 47:22, 23) ಹೀಗೆ ಪುನಃಸ್ಥಾಪಿಸಲಾದ ಆ ದೇಶದಲ್ಲಿ ಎಲ್ಲರೂ ಸಮಾನತೆಯಿಂದ ಇರ್ತಾರೆ, ಐಕ್ಯರಾಗಿ ಯೆಹೋವನನ್ನ ಆರಾಧಿಸ್ತಾರೆ ಅಂತ ತೋರಿಸಿಕೊಟ್ಟನು.—ಯಾಜ. 25:23.
15. ದೇಶದ ಮತ್ತು ಅಲ್ಲಿರೋ ಜನರ ಬಗ್ಗೆ ಯೆಹೋವನು ಕೊಟ್ಟ ನಿರ್ದೇಶನದಿಂದ ಆತನ ಬಗ್ಗೆ ನಮಗೇನು ಗೊತ್ತಾಗುತ್ತೆ?
15 ದೇಶ ಮತ್ತು ಅಲ್ಲಿರೋ ಜನ್ರ ಬಗ್ಗೆ ಯೆಹೋವನು ಯೆಹೆಜ್ಕೇಲನಿಗೆ ಕೊಟ್ಟ ಎರಡು ದರ್ಶನಗಳನ್ನ ಕೇಳಿಸಿಕೊಂಡಾಗ ಕೈದಿಗಳಿಗೆ ತುಂಬಾ ಖುಷಿ ಆಗಿರಬೇಕು. ತಾವು ಇಸ್ರಾಯೇಲ್ಯರಾಗಿರಲಿ ಅಥ್ವಾ ಯೆಹೋವನನ್ನ ಆರಾಧಿಸ್ತಿದ್ದ ವಿದೇಶಿಯರೇ ಆಗಿರಲಿ ಯೆಹೋವನು ತಮಗೆಲ್ಲರಿಗೂ ಸಮಪಾಲು ಕೊಡ್ತಾನೆ ಅಂತ ಅವ್ರಿಗೆ ಗೊತ್ತಿತ್ತು. (ಎಜ್ರ 8:20; ನೆಹೆ. 3:26; 7:6, 25; ಯೆಶಾ. 56:3, 8) ಈ ನಿರ್ದೇಶನಗಳಿಂದ ಯೆಹೋವ ದೇವ್ರ ಬಗ್ಗೆ ಒಂದು ಪ್ರಾಮುಖ್ಯ ಸತ್ಯ ಗೊತ್ತಾಗುತ್ತೆ. ಅದೇನಂದ್ರೆ ಆತನ ದೃಷ್ಟಿಲಿ ಆತನ ಸೇವಕರೆಲ್ಲಾ ಅಮೂಲ್ಯರಾಗಿದ್ದಾರೆ ಮತ್ತು ಸಮಾನರಾಗಿದ್ದಾರೆ. (ಹಗ್ಗಾಯ 2:7 ಓದಿ.) ನಮ್ಗೆ ಸ್ವರ್ಗಕ್ಕೆ ಹೋಗೋ ನಿರೀಕ್ಷೆ ಇರಲಿ, ಭೂಮಿಯ ಮೇಲೆ ಸದಾಕಾಲ ಜೀವಿಸೋ ನಿರೀಕ್ಷೆ ಇರಲಿ ಯೆಹೋವನು ನಮ್ಮನ್ನ ಸಮಾನವಾಗಿ ನೋಡ್ತಾನೆ ಅಂತ ಯೋಚಿಸುವಾಗ ತುಂಬಾ ಖುಷಿ ಆಗುತ್ತೆ ಅಲ್ವಾ?
16, 17. (ಎ) ಯೆಹೋವ ದೇವರು ಕೊಟ್ಟ ಎರಡು ನಿರ್ದೇಶನಗಳಿಂದ ನಮಗೇನು ಪ್ರಯೋಜನ? (ಬಿ) ಮುಂದಿನ ಅಧ್ಯಾಯದಲ್ಲಿ ನಾವೇನು ಕಲಿಯಲಿದ್ದೇವೆ?
16 ಯೆಹೋವನು ಕೊಟ್ಟ ಈ ಎರಡು ನಿರ್ದೇಶನಗಳಿಂದ ನಮ್ಗೇನು ಪ್ರಯೋಜ್ನ ಇದೆ? ನಮ್ಮ ಲೋಕವ್ಯಾಪಕ ಸಹೋದರರ ಮಧ್ಯೆ ಸಮಾನತೆ ಮತ್ತು ಐಕ್ಯತೆ ಎದ್ದುಕಾಣಬೇಕು ಅನ್ನೋದನ್ನ ಇದು ನೆನಪಿಸುತ್ತೆ. ಯೆಹೋವನು ಭೇದಭಾವ ಮಾಡಲ್ಲ. ಹಾಗಾಗಿ ನಾವು ಈ ಪ್ರಶ್ನೆಗಳನ್ನ ಕೇಳ್ಕೋಬೇಕು: ‘ನಾನೂ ಯೆಹೋವ ದೇವ್ರ ತರಾನೇ ಭೇದಭಾವ ಮಾಡದೇ ಇರ್ತೀನಾ? ನಮ್ಮ ಸಹೋದರ ಸಹೋದರಿಯರು ಯಾವುದೇ ಹಿನ್ನಲೆಯಿಂದ, ಜಾತಿಯಿಂದ, ಸಂಸ್ಕೃತಿಯಿಂದ ಬಂದಿರಲಿ ನಾನು ಅವ್ರನ್ನ ಗೌರವಿಸ್ತೀನಾ?’ (ರೋಮ. 12:10) ಯೆಹೋವನು ನಮ್ಮೆಲ್ಲರಿಗೆ ಆಧ್ಯಾತ್ಮಿಕ ಪರದೈಸ್‌ನಲ್ಲಿ ಇರೋಕೆ ಸಮಾನವಾದ ಅವಕಾಶವನ್ನ ಕೊಟ್ಟಿದ್ದಾನೆ. ಅಲ್ಲಿ ನಾವು ನಮ್ಮ ಪ್ರೀತಿಯ ತಂದೆಯಾದ ಯೆಹೋವನಿಗೆ ಪೂರ್ಣ ಹೃದಯದ ಸೇವೆ ಮಾಡ್ತೇವೆ ಮತ್ತು ಆತನ ಆಶೀರ್ವಾದಗಳನ್ನ ಆನಂದಿಸ್ತೇವೆ.—ಗಲಾ. 3:26-29; ಪ್ರಕ. 7:9.
17 ಯೆಹೆಜ್ಕೇಲ ನೋಡಿದ ಕೊನೇ ದರ್ಶನದ ಕೊನೇ ಭಾಗದಲ್ಲಿ ಯೆಹೋವ ದೇವ್ರು ಕೈದಿಗಳ ಜೊತೆ ಇರ್ತೀನಿ ಅಂತ ಮಾತು ಕೊಟ್ಟಿದ್ದರ ಬಗ್ಗೆ ಇತ್ತು. ಅದ್ರಿಂದ ನಾವೇನು ಕಲಿಬಹುದು? ಅದನ್ನೇ ಮುಂದಿನ ಅಧ್ಯಾಯದಲ್ಲಿ ನೋಡೋಣ.
^ ಪ್ಯಾರ. 11 ಆಧ್ಯಾತ್ಮಿಕ ದೇಶದಲ್ಲಿ ಪುರೋಹಿತರಿಗೆ ಮತ್ತು ಪ್ರಧಾನರಿಗಾಗಿ ಯೆಹೋವನು ಪ್ರತ್ಯೇಕವಾಗಿಟ್ಟ ಜಾಗದ ಬಗ್ಗೆ ಮತ್ತು ಕೊಟ್ಟ ನೇಮಕದ ಬಗ್ಗೆ ತಿಳ್ಕೊಳ್ಳೋಕೆ ಈ ಪುಸ್ತಕದ ಅಧ್ಯಾಯ 14ನ್ನ ನೋಡಿ.