ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 10

“ನಿಮಗೆ ಜೀವ ಬರುತ್ತೆ”

“ನಿಮಗೆ ಜೀವ ಬರುತ್ತೆ”

ಯೆಹೆಜ್ಕೇಲ 37:5

ಮುಖ್ಯ ವಿಷಯ: ‘ಒಣಗಿ ಹೋಗಿರೋ ಮೂಳೆಗಳಿಗೆ’ ಜೀವ ಬರೋ ದರ್ಶನ ಮತ್ತು ಅದರ ಮಹತ್ತಾದ ನೆರವೇರಿಕೆ

1-3. ಬಾಬೆಲಿನಲ್ಲಿದ್ದ ಯೆಹೂದ್ಯರ ಯೋಚನೆ ಯಾಕೆ ಬುಡಮೇಲಾಯ್ತು? (ಆರಂಭದ ಚಿತ್ರ ನೋಡಿ.)

 ಐದು ವರ್ಷಗಳಿಂದ ಯೆಹೆಜ್ಕೇಲ ಯೆರೂಸಲೇಮ್‌ ನಾಶವಾಗುತ್ತೆ ಅಂತ ಸಾರುತ್ತಾ ಬಂದಿದ್ದನು. ಆದ್ರೆ ಬಾಬೆಲಿನಲ್ಲಿ ಕೈದಿಗಳಾಗಿರೋ ಯಾರೂ ಹಾಗಾಗುತ್ತೆ ಅಂತ ನಂಬಲಿಲ್ಲ. ಯೆಹೋವ ದೇವರ ಸಂದೇಶವನ್ನ ಅವನು ಅಭಿನಯಿಸಿ ತೋರಿಸಿದ್ದನು, ಉದಾಹರಣೆಗಳನ್ನ ಕೊಟ್ಟು ಅವರನ್ನ ಎಚ್ಚರಿಸಿದ್ದನು. ಆದ್ರೂ ಯೆಹೋವ ದೇವರು ಯೆರೂಸಲೇಮ್‌ ನಾಶವಾಗೋಕೆ ಬಿಡ್ತಾನೆ ಅನ್ನೋದನ್ನ ಅವರು ನಂಬಲೇ ಇಲ್ಲ. ಬಾಬೆಲಿನ ಸೈನ್ಯದವರು ಯೆರೂಸಲೇಮ್‌ ಪಟ್ಟಣದ ಸುತ್ತಲೂ ಮುತ್ತಿಗೆ ಹಾಕಿದ್ದಾರೆ ಅಂತ ಗೊತ್ತಾದಾಗಲೂ ಕೈದಿಗಳಾಗಿದ್ದ ಯೆಹೂದ್ಯರು ಯೆರೂಸಲೇಮಲ್ಲಿರೋ ಜನರಿಗೆ ಏನೂ ಆಗಲ್ಲ ಅನ್ನೋ ಭರವಸೆ ಇಟ್ಟಿದ್ದರು. ಆದ್ರೆ ಕೊನೆಗೂ ಅವರ ಯೋಚನೆಗಳು ಬುಡಮೇಲಾದವು.

2 ಯೆರೂಸಲೇಮಿಗೆ ಮುತ್ತಿಗೆ ಹಾಕಿ ಎರಡು ವರ್ಷಗಳಾದ ಮೇಲೆ ಅಲ್ಲಿಂದ ಒಬ್ಬ ನಿರಾಶ್ರಿತ ಬಂದು, “ಪಟ್ಟಣ ಶತ್ರುಗಳ ವಶವಾಗಿದೆ!” ಅಂತ ಹೇಳಿದ. ಈ ಸುದ್ದಿ ಕೇಳಿ ಕೈದಿಗಳ ಎದೆ ಒಡೆದಂಗಾಯ್ತು. ಅವರ ಕಿವಿಗೆ ಬಿದ್ದ ಸುದ್ದಿಯನ್ನ ಅವ್ರಿಂದ ನಂಬಕ್ಕಾಗಲಿಲ್ಲ. ಅವರ ಅಚ್ಚುಮೆಚ್ಚಿನ ಪಟ್ಟಣ, ಪವಿತ್ರ ಆಲಯ ಮತ್ತು ಪ್ರೀತಿಯ ದೇಶ ಎಲ್ಲಾ ಸರ್ವನಾಶವಾಗಿತ್ತು. ಇಷ್ಟು ವರ್ಷ ಅವರಿಟ್ಟಿದ್ದ ನಿರೀಕ್ಷೆಯೆಲ್ಲಾ ಮಣ್ಣುಪಾಲಾಯ್ತು.—ಯೆಹೆ. 21:7; 33:21.

3 ಹೀಗೆ ಕುಗ್ಗಿಹೋದ ಸಮಯದಲ್ಲಿ ಯೆಹೆಜ್ಕೇಲನಿಗೆ ಪ್ರಭಾವಶಾಲಿಯಾದ ಒಂದು ದರ್ಶನ ಸಿಕ್ಕಿತು. ಕಂಗಾಲಾದ ಕೈದಿಗಳಿಗಾಗಿ ಆ ದರ್ಶನದಲ್ಲಿ ಯಾವ ಸಂದೇಶವಿತ್ತು? ಆ ದರ್ಶನಕ್ಕೂ ಇವತ್ತಿನ ದೇವಜನ್ರಿಗೂ ಏನು ಸಂಬಂಧ? ಆ ದರ್ಶನದಿಂದ ನಮಗೇನು ಪ್ರಯೋಜನ ಇದೆ? ಇದನ್ನ ಅರ್ಥಮಾಡಿಕೊಳ್ಳೋಕೆ ಯೆಹೋವ ದೇವರು ಯೆಹೆಜ್ಕೇಲನಿಗೆ ದರ್ಶನದಲ್ಲಿ ಏನೆಲ್ಲಾ ತೋರಿಸಿದನು ಅಂತ ನೊಡೋಣ.

“ಈ ಮೂಳೆಗಳ ಬಗ್ಗೆ ಭವಿಷ್ಯ ಹೇಳು” ಮತ್ತು “ಗಾಳಿಗೆ ಭವಿಷ್ಯ ಹೇಳು”

4. ಯೆಹೆಜ್ಕೇಲ ದರ್ಶನದಲ್ಲಿ ಏನನ್ನ ಗಮನಿಸಿದ?

4 ಯೆಹೆಜ್ಕೇಲ 37:1-10 ಓದಿ. ಒಂದು ದರ್ಶನದಲ್ಲಿ ಯೆಹೋವ ದೇವರು ಯೆಹೆಜ್ಕೇಲನನ್ನ ಮೂಳೆಗಳಿಂದ ತುಂಬಿದ ಕಣಿವೆ ಬಯಲಿಗೆ ಕರ್ಕೊಂಡು ಹೋದನು. ಆ ದರ್ಶನ ಇನ್ನೂ ಚೆನ್ನಾಗಿ, ಆಳವಾಗಿ ಅವನ ಹೃದಯಕ್ಕೆ ಹೋಗಬೇಕಂತ ಯೆಹೋವನು ಅವನನ್ನ ಆ ಕಣಿವೆಯಲ್ಲಿ ‘ತಿರುಗಾಡಿಸಿದನು.’ ಅವನು ಆ ಕಣಿವೆಯಲ್ಲಿ ನಡಕೊಂಡು ಹೋಗುತ್ತಿದ್ದಾಗ ಮೂಳೆಗಳ ಬಗ್ಗೆ ಎರಡು ವಿಷಯಗಳನ್ನ ಗಮನಿಸಿದನು. ಒಂದು, ಅವು ಎಷ್ಟಿದ್ದವು ಮತ್ತು ಎರಡು, ಅವು ಹೇಗಿದ್ದವು ಅಂತ ಅವನಿಗೆ ಗೊತ್ತಾಯ್ತು. ಅವು “ಲೆಕ್ಕ ಇಲ್ಲದಷ್ಟು” ಇದ್ದವು ಮತ್ತು “ತುಂಬ ಒಣಗಿಹೋಗಿದ್ವು.”

5. ಯೆಹೋವನು ಯೆಹೆಜ್ಕೇಲನಿಗೆ ಯಾವ ಎರಡು ಆಜ್ಞೆಗಳನ್ನ ಕೊಟ್ಟನು? ಮತ್ತು ಯೆಹೆಜ್ಕೇಲನು ಆ ಆಜ್ಞೆಗಳ ಪ್ರಕಾರ ಹೇಳಿದಾಗ ಏನಾಯ್ತು?

5 ಯೆಹೋವನು ಯೆಹೆಜ್ಕೇಲನಿಗೆ ಎರಡು ಆಜ್ಞೆಗಳನ್ನ ಕೊಟ್ಟನು. ಪುನಃಸ್ಥಾಪನೆಯು ಹಂತ ಹಂತವಾಗಿ ನಡೆಯುತ್ತೆ ಅಂತ ಅವುಗಳಿಂದ ಗೊತ್ತಾಗುತ್ತೆ. ಮೊದಲನೇ ಆಜ್ಞೆ ಹೀಗಿತ್ತು: “ಮೂಳೆಗಳ ಬಗ್ಗೆ ಭವಿಷ್ಯ ಹೇಳು,” ಅವುಗಳಿಗೆ “ಜೀವ ಬರುತ್ತೆ.” (ಯೆಹೆ. 37:4-6) ಯೆಹೆಜ್ಕೇಲ ಈ ಭವಿಷ್ಯವಾಣಿ ಹೇಳಿದ ತಕ್ಷಣ “ಟಕಟಕ ಅನ್ನೋ ಶಬ್ದ ಕೇಳಿಸ್ತು. ಮೂಳೆಗಳು ಒಂದ್ರ ಹತ್ರ ಒಂದು ಬಂದು ಕೂಡಿಕೊಳ್ಳೋಕೆ ಶುರು ಆಯ್ತು. ಆಮೇಲೆ ಸ್ನಾಯುಗಳು ಮತ್ತು ಮಾಂಸ ಬಂದು ಮುಚ್ಕೊಂಡಿತು. ಅದ್ರ ಮೇಲೆ ಚರ್ಮದ ಹೊದಿಕೆ ಬಂತು.” (ಯೆಹೆ. 37:7, 8) ಎರಡನೇ ಆಜ್ಞೆ ಹೀಗಿತ್ತು: “ಗಾಳಿಗೆ ಭವಿಷ್ಯ ಹೇಳು. . . . ಸತ್ತ ಈ ಜನ್ರ ಮೇಲೆ ಬೀಸು.” ಈ ಭವಿಷ್ಯವಾಣಿಯನ್ನ ಹೇಳಿದ ತಕ್ಷಣ “ಅವರೊಳಗೆ ಉಸಿರು ಸೇರಿತು. ಅವ್ರಿಗೆ ಜೀವ ಬಂದು ನಿಂತ್ಕೊಂಡ್ರು. ಅವರು ಅತಿ ದೊಡ್ಡ ಸೈನ್ಯವಾದ್ರು.”—ಯೆಹೆ. 37:9, 10.

“ನಮ್ಮ ಮೂಳೆಗಳು ಒಣಗಿಹೋಗಿವೆ. ನಮ್ಮ ನಿರೀಕ್ಷೆ ನುಚ್ಚುನೂರಾಗಿದೆ”

6. ಯೆಹೋವನು ಹೇಳಿದ ಯಾವ ಮಾತು ದರ್ಶನವನ್ನ ಅರ್ಥ ಮಾಡಿಕೊಳ್ಳೋಕೆ ಯೆಹೆಜ್ಕೇಲನಿಗೆ ಸಹಾಯ ಮಾಡ್ತು?

6 ಆಮೇಲೆ ಯೆಹೋವ ದೇವರು ಈ ದರ್ಶನದ ಅರ್ಥವನ್ನ ಯೆಹೆಜ್ಕೇಲನಿಗೆ ತಿಳಿಸಿದನು. ಆತನು ಹೀಗಂದನು: “ಮನುಷ್ಯಕುಮಾರನೇ, ಈ ಮೂಳೆಗಳು ಎಲ್ಲ ಇಸ್ರಾಯೇಲ್ಯರನ್ನ ಸೂಚಿಸುತ್ತೆ.” ಇಸ್ರಾಯೇಲ್ಯರು ಯೆರೂಸಲೇಮಿನ ನಾಶನದ ಸುದ್ದಿಯನ್ನ ಕೇಳಿಕೊಂಡ ತಕ್ಷಣ ಸತ್ತ ಹಾಗಾದ್ರು. ಹಾಗಾಗಿ ಅವ್ರು, “ನಮ್ಮ ಮೂಳೆಗಳು ಒಣಗಿಹೋಗಿವೆ. ನಮ್ಮ ನಿರೀಕ್ಷೆ ನುಚ್ಚುನೂರಾಗಿದೆ. ಎಲ್ರಿಂದ ನಮ್ಮನ್ನ ದೂರ ಮಾಡಲಾಗಿದೆ” ಅಂತ ಗೋಳಾಡಿದ್ರು. (ಯೆಹೆ. 37:11; ಯೆರೆ. 34:20) ಯೆಹೋವ ದೇವರು ಇಸ್ರಾಯೇಲ್ಯರ ಗೋಳಾಟವನ್ನ ಕೇಳಿ ಅವರಲ್ಲಿ ನಿರೀಕ್ಷೆಯನ್ನ ತುಂಬಲು ಯೆಹೆಜ್ಕೇಲನಿಗೆ ಮೂಳೆಗಳ ಬಗ್ಗೆ ಇರೋ ಒಂದು ದರ್ಶನವನ್ನ ತೋರಿಸಿದನು.

7. ಯೆಹೆಜ್ಕೇಲ 37:12-14 ರಲ್ಲಿರೋ ಹಾಗೆ ಯೆಹೋವನು ಯೆಹೆಜ್ಕೇಲನಿಗೆ ಏನು ತಿಳಿಸಿದನು? ಕೈದಿಗಳಾಗಿದ್ದವರಿಗೆ ಇದ್ರಿಂದ ಯಾವ ಆಶ್ವಾಸನೆ ಸಿಕ್ತು?

7 ಯೆಹೆಜ್ಕೇಲ 37:12-14 ಓದಿ. ಸತ್ತುಹೋದಂತೆ ಇದ್ದ ಕೈದಿಗಳನ್ನ ತಾನು ಜೀವಕ್ಕೆ ತರ್ತೀನಿ, ತನ್ನ ದೇಶಕ್ಕೆ ವಾಪಸ್ಸು ತರ್ತೀನಿ, ಅಲ್ಲಿ ವಾಸಿಸುವ ಹಾಗೆ ಆಶೀರ್ವದಿಸ್ತೀನಿ ಅಂತ ಯೆಹೋವ ದೇವರು ಈ ದರ್ಶನದ ಮೂಲಕ ಆಶ್ವಾಸನೆ ಕೊಟ್ಟನು. ಅಷ್ಟೇ ಅಲ್ಲ ಯೆಹೋವ ದೇವರು ಅವರನ್ನ “ನನ್ನ ಜನ್ರೇ” ಅಂತ ಕರೆದನು. ಇದು ನಿರಾಶೆಯಲ್ಲಿ ಕುಗ್ಗಿಹೋಗಿದ್ದ ಕೈದಿಗಳಿಗೆ ಚೈತನ್ಯ ಕೊಟ್ಟಿರಬೇಕು. ಪುನಃಸ್ಥಾಪನೆ ಬಗ್ಗೆ ಇರೋ ಈ ಭವಿಷ್ಯವಾಣಿಯನ್ನ ಅವರು ನಂಬೋಕೆ ಇನ್ನೊಂದು ಕಾರಣ ಕೂಡ ಇತ್ತು. ಅದೇನಂದ್ರೆ ಇದನ್ನ ಹೇಳಿದವನು ಯೆಹೋವ ದೇವರೇ ಆಗಿದ್ದನು. ಆತನು ಹೀಗಂದನು: “ಯೆಹೋವನಾದ ನಾನೇ ಇದನ್ನ ಹೇಳಿದ್ದೀನಿ, ನಾನೇ ಇದನ್ನ ನಿಜ ಮಾಡಿದ್ದೀನಿ.”

8. (ಎ) ‘ಎಲ್ಲ ಇಸ್ರಾಯೇಲ್ಯರು’ ಯಾವ ಅರ್ಥದಲ್ಲಿ ಸತ್ತಂತಿದ್ದರು? (ಬಿ) ಯೆಹೆಜ್ಕೇಲ 37:9 ರಲ್ಲಿ ಹೇಳಿರುವಂತೆ ಇಸ್ರಾಯೇಲ್ಯರು ಹೇಗೆ ಸತ್ತು ಹೋದ್ರು? (ಪಾದಟಿಪ್ಪಣಿ ನೋಡಿ.)

8 ಭವಿಷ್ಯವಾಣಿಯ ಈ ಭಾಗ ಹಿಂದಿನ ಕಾಲದ ಇಸ್ರಾಯೇಲ್ಯರ ವಿಷ್ಯದಲ್ಲಿ ಹೇಗೆ ನೆರವೇರಿತು? ಇಸ್ರಾಯೇಲಿನ ಹತ್ತು ಕುಲಗಳ ರಾಜ್ಯ ಕ್ರಿ.ಪೂ. 740 ರಲ್ಲಿ ನಾಶವಾಗಿ ಅಲ್ಲಿನ ಜನ್ರು ಕೈದಿಗಳಾಗಿ ಹೋಗಿದ್ರು. ಹೀಗೆ ಅವರು ಒಂದರ್ಥದಲ್ಲಿ ಸತ್ತಂತೆ ಆದ್ರು ಅಥ್ವಾ ಯೆಹೋವನ ಜೊತೆಗಿದ್ದ ಸಂಬಂಧವನ್ನ ಸಂಪೂರ್ಣವಾಗಿ ಕಳಕೊಂಡ್ರು. ಇದಾಗಿ 130 ವರ್ಷಗಳ ನಂತರ ಯೆಹೂದ ಕೂಡ ನಾಶವಾಯ್ತು. ಹೀಗೆ ‘ಎಲ್ಲಾ ಇಸ್ರಾಯೇಲ್ಯರು’ ಕೈದಿಗಳಾಗಿ ಹೋದ್ರು. (ಯೆಹೆ. 37:11) ಆ ಕೈದಿಗಳಿಗೆ ಯೆಹೋವನ ಜೊತೆ ಇದ್ದ ಸಂಬಂಧ ದರ್ಶನದಲ್ಲಿ ನೋಡಿದ ಮೂಳೆಗಳ ತರ ಆಗಿತ್ತು. * “ಮೂಳೆಗಳು ತುಂಬ ಒಣಗಿಹೋಗಿದ್ದವು” ಅನ್ನೋದನ್ನ ಗಮನಿಸಿ. ಅವರು ಯೆಹೋವನ ಜೊತೆಗಿನ ಸಂಬಂಧವನ್ನ ತುಂಬ ಸಮಯದವರೆಗೆ ಕಳಕೊಂಡಿರ್ತಾರೆ ಅನ್ನೋದನ್ನ ಇದು ಸೂಚಿಸ್ತಿತ್ತು. ಇಸ್ರಾಯೇಲ್ಯರು ಮತ್ತು ಯೆಹೂದ್ಯರು ಒಟ್ಟಾಗಿ ಕ್ರಿ.ಪೂ. 740 ರಿಂದ 537 ರವರೆಗೆ ಸುಮಾರು 200ಕ್ಕೂ ಹೆಚ್ಚು ವರ್ಷ ಕೈದಿಗಳಾಗಿದ್ರು.—ಯೆರೆ. 50:33.

9. ಹಿಂದಿನ ಕಾಲದ ಇಸ್ರಾಯೇಲ್ಯರಿಗೂ ‘ದೇವರ ಇಸ್ರಾಯೇಲ್ಯರಿಗೂ’ ಹೇಗೆ ಒಂದೇ ರೀತಿಯ ಅನುಭವ ಆಯ್ತು?

9 ಪುನಃಸ್ಥಾಪನೆಯ ಬಗ್ಗೆ ಯೆಹೆಜ್ಕೇಲನು ಹೇಳಿದ ಭವಿಷ್ಯವಾಣಿ ಇಸ್ರಾಯೇಲಿನ ಕಾಲದಲ್ಲಿ ಮಾತ್ರವಲ್ಲ ನಂತರನೂ ಮಹತ್ತಾದ ರೀತಿಯಲ್ಲಿ ನೆರವೇರಲಿತ್ತು. (ಅ. ಕಾ. 3:21) ಇಸ್ರಾಯೇಲ್ಯರು ಸಾಂಕೇತಿಕ ಅರ್ಥದಲ್ಲಿ ‘ಸತ್ತು ಹೋದ್ರು’ ಮತ್ತು ತುಂಬ ವರ್ಷಗಳ ವರೆಗೆ ಸತ್ತಂಥ ಸ್ಥಿತಿಯಲ್ಲಿದ್ದರು. ಅದೇ ರೀತಿ ‘ದೇವರ ಇಸ್ರಾಯೇಲ್‌’ ಅಂದ್ರೆ ಅಭಿಷಿಕ್ತ ಕ್ರೈಸ್ತ ಸಭೆ ಸಹ ಸತ್ತು ಹೋಯ್ತು ಮತ್ತು ತುಂಬ ವರ್ಷಗಳ ವರೆಗೆ ಸತ್ತಂಥ ಸ್ಥಿತಿಯಲ್ಲಿತ್ತು ಅಥವಾ ಕೈದಿಯಾಗಿತ್ತು. (ಗಲಾ. 6:16) ಇಸ್ರಾಯೇಲ್ಯರ ತರಾನೇ ಅಭಿಷಿಕ್ತ ಕ್ರೈಸ್ತರ ಪರಿಸ್ಥಿತಿ ಕೂಡ ‘ತುಂಬ ಒಣಗಿಹೋದ’ ಮೂಳೆಗಳ ತರ ಇತ್ತು. ಅವರು ಯೆಹೋವ ದೇವರ ಜೊತೆ ಇದ್ದ ಸಂಬಂಧವನ್ನ ಕಳಕೊಂಡಿದ್ರು. (ಯೆಹೆ. 37:2) ಹಿಂದಿನ ಅಧ್ಯಾಯದಲ್ಲಿ ನೋಡಿದಂತೆ, ಎರಡನೇ ಶತಮಾನದಿಂದ ಅಭಿಷಿಕ್ತ ಕ್ರೈಸ್ತ ಸಭೆ ಬಂಧಿವಾಸಕ್ಕೆ ಹೋಯ್ತು. ಅದು ತುಂಬ ವರ್ಷಗಳ ವರೆಗೆ ಮುಂದುವರಿಯಿತು. ಈ ರೀತಿ ಆಗುತ್ತೆ ಅಂತ ಯೇಸು ಕ್ರಿಸ್ತನು ಗೋದಿ ಮತ್ತು ಕಳೆಯ ಉದಾಹರಣೆಯಲ್ಲಿ ಮುಂತಿಳಿಸಿದ್ದನು.—ಮತ್ತಾ. 13:24-30.

ಯೆಹೆಜ್ಕೇಲನು ದರ್ಶನದಲ್ಲಿ ನೋಡಿದ “ತುಂಬ ಒಣಗಿಹೋದ” ಮೂಳೆಗಳು ಯೆಹೋವನ ಅಭಿಷಿಕ್ತ ಜನರು ತುಂಬ ವರ್ಷಗಳವರೆಗೆ ಸತ್ತ ಸ್ಥಿತಿಯಲ್ಲಿ ಇರ್ತಾರೆ ಅನ್ನೋದನ್ನ ಸೂಚಿಸಿದವು (ಪ್ಯಾರ 8, 9 ನೋಡಿ)

“ಮೂಳೆಗಳು . . . ಕೂಡಿಕೊಳ್ಳೋಕೆ ಶುರು ಆಯ್ತು”

10. (ಎ) ಯೆಹೆಜ್ಕೇಲ 37:7, 8 ರಲ್ಲಿ ದೇವಜನರ ಬಗ್ಗೆ ಯಾವ ಭವಿಷ್ಯವಾಣಿ ಹೇಳಲಾಗಿದೆ? (ಬಿ) ಕೈದಿಗಳಾಗಿದ್ದ ಯೆಹೂದ್ಯರ ನಂಬಿಕೆ ಬಲವಾಗಲು ಯಾವುದು ಸಹಾಯ ಮಾಡಿರಬೇಕು?

10 ಹಿಂದಿನ ಕಾಲದಲ್ಲಿ ಯೆಹೋವ ದೇವರು ತನ್ನ ಜನರನ್ನ ಹಂತ ಹಂತವಾಗಿ ಪುನಃಸ್ಥಾಪನೆ ಮಾಡ್ತೀನಿ ಅಂತ ಮಾತು ಕೊಟ್ಟಿದ್ದನು. (ಯೆಹೆ. 37:7, 8) ತಾವು ಇಸ್ರಾಯೇಲಿಗೆ ವಾಪಸ್‌ ಹೋಗ್ತೀವಿ ಅಂತ ನಂಬೋಕೆ ಕೈದಿಗಳಿಗೆ ಏನಾದ್ರೂ ಆಧಾರ ಇತ್ತಾ? ಖಂಡಿತ ಇತ್ತು. ಉದಾಹರಣೆಗೆ, “ಒಂದು ಪವಿತ್ರ ಮೊಳಕೆ” ಅಂದ್ರೆ ಇಸ್ರಾಯೇಲ್ಯರಲ್ಲಿ ಕೆಲವರು ತಮ್ಮ ದೇಶಕ್ಕೆ ವಾಪಸ್‌ ಹೋಗ್ತಾರೆ ಅಂತ ಯೆಶಾಯನಂಥ ಕೆಲವು ಪ್ರವಾದಿಗಳು ಹೇಳಿದ್ರು. (ಯೆಶಾ. 6:13; ಯೋಬ 14:7-9) ಪುನಃಸ್ಥಾಪನೆಯ ಬಗ್ಗೆ ಯೆಹೆಜ್ಕೇಲ ಹೇಳಿದ ಮಾತುಗಳು ಸಹ ಅವರಿಗೆ ನಿರೀಕ್ಷೆಯನ್ನ ಕಳಕೊಳ್ಳದೆ ಇರೋಕೆ ಸಹಾಯ ಮಾಡಿರುತ್ತೆ. ಬಾಬೆಲಿನಲ್ಲಿ ದಾನಿಯೇಲನಂಥ ನಂಬಿಗಸ್ತ ವ್ಯಕ್ತಿಗಳು ಇರೋದನ್ನ ನೋಡಿದಾಗೆಲ್ಲಾ ಅವರ ನಿರೀಕ್ಷೆ ಬಲವಾಗಿರುತ್ತೆ. ಅಷ್ಟೇ ಅಲ್ಲ, ಮುಂದೆ ಕ್ರಿ.ಪೂ. 539 ರಲ್ಲಿ ಬಾಬೆಲ್‌ ಸಾಮ್ರಾಜ್ಯ ನಾಶವಾಗೋದನ್ನ ನೋಡಿದಾಗ ಅವರಿಗೆ ತಾವು ವಾಪಸ್‌ ಹೋಗ್ತೇವೆ ಅಂತ ಗ್ಯಾರಂಟಿ ಆಗಿರುತ್ತೆ.

11, 12. (ಎ) ಅಭಿಷಿಕ್ತ ಕ್ರೈಸ್ತ ಸಭೆ ಹೇಗೆ ಹಂತ ಹಂತವಾಗಿ ಪುನಃಸ್ಥಾಪನೆಯಾಯ್ತು? (“ಹಂತ ಹಂತವಾಗಿ ಪುನಃಸ್ಥಾಪನೆಯಾದ ಶುದ್ಧ ಆರಾಧನೆ” ಅನ್ನೋ ಚೌಕ ನೋಡಿ.) (ಬಿ) ಯೆಹೆಜ್ಕೇಲ 37:10 ರಲ್ಲಿರೋ ವಿಷಯದ ಬಗ್ಗೆ ಯಾವ ಪ್ರಶ್ನೆ ಏಳುತ್ತೆ?

11 ಅದೇ ತರ ಅಭಿಷಿಕ್ತ ಕ್ರೈಸ್ತ ಸಭೆ ಹಂತ ಹಂತವಾಗಿ ಹೇಗೆ ಪುನಃಸ್ಥಾಪನೆ ಆಯ್ತು? ಇವರು ನೂರಾರು ವರ್ಷಗಳವರೆಗೂ ಮಹಾ ಬಾಬೆಲಿನ ಕೈದಿಗಳಾಗಿ ಸತ್ತ ಸ್ಥಿತಿಯಲ್ಲಿ ಇದ್ರು. ಆದ್ರೆ ಆಮೇಲೆ “ಟಕಟಕ ಅನ್ನೋ ಶಬ್ದ” ಕೇಳಿಸ್ತು. ಅಂದ್ರೆ ದೇವಭಯ ಇರೋ ಕೆಲವು ಜನ್ರು ಶುದ್ಧ ಆರಾಧನೆಯನ್ನ ಪುನಃಸ್ಥಾಪಿಸೋಕೆ ಶುರುಮಾಡಿದ್ರು. ಉದಾಹರಣೆಗೆ 16 ನೇ ಶತಮಾನದಲ್ಲಿ ವಿಲ್ಯಮ್‌ ಟಿಂಡೇಲ್‌ರವರು ಬೈಬಲನ್ನ ಇಂಗ್ಲಿಷ್‌ ಭಾಷೆಗೆ ಭಾಷಾಂತರಿಸಿದ್ರು. ಇದ್ರಿಂದಾಗಿ ಸಾಮಾನ್ಯ ಜನ್ರು ಸಹ ಬೈಬಲನ್ನ ಓದೋಕಾಯ್ತು. ಹಾಗಾಗಿ ರೋಮನ್‌ ಕ್ಯಾಥೊಲಿಕ್‌ ಪಾದ್ರಿಗಳಿಗೆ ಕೋಪ ಬಂದು ಟಿಂಡೇಲ್‌ರನ್ನ ಕೊಂದು ಹಾಕಿದ್ರು. ಇಷ್ಟೆಲ್ಲಾ ಆದ್ರೂ ಇನ್ನೂ ಕೆಲವು ಧೀರ ಜನ್ರು ಬೈಬಲನ್ನ ಬೇರೆಬೇರೆ ಭಾಷೆಗಳಿಗೆ ಭಾಷಾಂತರಿಸೋದನ್ನ ಮುಂದುವರಿಸಿದ್ರು. ಹೀಗೆ ಕತ್ತಲೆಯ ಲೋಕದಲ್ಲಿ ಸತ್ಯದ ಬೆಳಕು ಎಲ್ಲಾ ಕಡೆಗೆ ಹಬ್ಬೋಕೆ ಶುರುವಾಯ್ತು.

12 ಆಮೇಲೆ ಚಾರ್ಲ್ಸ್‌ ಟೇಸ್‌ ರಸಲ್‌ ಮತ್ತು ಅವರ ಸಂಗಡಿಗರು ಬೈಬಲ್‌ ಸತ್ಯಗಳನ್ನ ಕಲಿಯೋಕೆ ಶುರುಮಾಡಿದ್ರು. ಇದು ಹೇಗಿತ್ತಂದ್ರೆ “ಸ್ನಾಯುಗಳು ಮತ್ತು ಮಾಂಸ” ಮೂಳೆಗಳ ಮೇಲೆ ಮುಚ್ಚಿಕೊಳ್ಳೋ ತರ ಇತ್ತು. ಝಯನ್ಸ್‌ ವಾಚ್‌ ಟವರ್‌ ಮತ್ತು ಬೇರೆ ಪ್ರಕಾಶನಗಳು ಯಥಾರ್ಥ ಜನ್ರು ಸತ್ಯನ ಕಲಿಯೋಕೆ ಸಹಾಯ ಮಾಡಿದ್ವು. ಇದ್ರಿಂದ ಅವರು ದೇವರ ಅಭಿಷಿಕ್ತ ಸೇವಕರ ಜೊತೆ ಸೇರೋಕೆ ಸಾಧ್ಯವಾಯ್ತು. 20 ನೇ ಶತಮಾನದ ಆರಂಭದಲ್ಲಿ ದೇವರ ಅಭಿಷಿಕ್ತ ಸೇವಕರು “ಫೋಟೋ ಡ್ರಾಮ ಆಫ್‌ ಕ್ರಿಯೇಷನ್‌” ಅನ್ನೋ ವಿಡಿಯೋ ಮತ್ತು ದ ಫಿನಿಷ್ಡ್‌ ಮಿಸ್ಟ್ರಿ ಅನ್ನೋ ಪುಸ್ತಕವನ್ನ ಬಿಡುಗಡೆ ಮಾಡಿದ್ರು. ಇದಾದ ಸ್ವಲ್ಪ ಸಮಯದ ನಂತರ ಅವರಿಗೆ ಜೀವ ಬಂದು ‘ನಿಂತುಕೊಳ್ಳೋಕೆ’ ಯೆಹೋವ ದೇವರು ಸಹಾಯ ಮಾಡಿದ್ರು. (ಯೆಹೆ. 37:10) ಇದು ಯಾವಾಗ ಮತ್ತು ಹೇಗಾಯ್ತು? ಹಿಂದಿನ ಕಾಲದ ಬಾಬೆಲಿನಲ್ಲಿ ನಡೆದ ಘಟನೆಗಳು ಈ ವಿಷ್ಯವನ್ನ ತಿಳುಕೊಳ್ಳೋಕೆ ಸಹಾಯ ಮಾಡುತ್ತೆ.

“ಅವ್ರಿಗೆ ಜೀವ ಬಂದು ನಿಂತ್ಕೊಂಡ್ರು”

13. (ಎ) ಕ್ರಿ.ಪೂ. 537 ರಿಂದ ಯೆಹೆಜ್ಕೇಲ 37:10, 14 ರಲ್ಲಿರೋ ಮಾತುಗಳು ಹೇಗೆ ನೆರವೇರಿದವು? (ಬಿ) ಇಸ್ರಾಯೇಲ್ಯರ ಹತ್ತು ಕುಲಗಳ ಕೆಲವ್ರು ವಾಪಸ್‌ ಬಂದರು ಅಂತ ಯಾವ ವಚನಗಳು ತಿಳಿಸುತ್ತವೆ?

13 ಕ್ರಿ.ಪೂ. 537 ರ ಆರಂಭದಿಂದ ಬಾಬೆಲಿನಲ್ಲಿದ್ದ ಯೆಹೂದ್ಯರು ಈ ದರ್ಶನದ ನೆರವೇರಿಕೆಯನ್ನ ನೋಡಿದ್ರು. ಹೇಗೆ? ಯೆಹೋವ ದೇವರು ಅವರನ್ನ ಬಂಧಿವಾಸದಿಂದ ಬಿಡಿಸಿ, ಇಸ್ರಾಯೇಲಿಗೆ ವಾಪಸ್‌ ತಂದಾಗ ಅವರಿಗೆ ಜೀವ ಕೊಟ್ಟನು ಮತ್ತು “ನಿಂತುಕೊಳ್ಳೋ ತರ” ಮಾಡಿದನು. ಯೆರೂಸಲೇಮಿನ ದೇವಾಲಯ ಕಟ್ಟಲು 42,360 ಇಸ್ರಾಯೇಲ್ಯರು ಮತ್ತು 7,000 ಅನ್ಯಜನಾಂಗದವರು ಬಾಬೆಲಿನಿಂದ ಬಂದ್ರು. ಅವರು ಅಲ್ಲೇ ನೆಲೆಸಿದ್ರು. (ಎಜ್ರ 1:1-4; 2:64, 65; ಯೆಹೆ. 37:14) ಇದಾಗಿ ಸುಮಾರು 70 ವರ್ಷಗಳಾದ ನಂತರ ಎಜ್ರನ ಜೊತೆ ಸುಮಾರು 1,750 ಜನರು ಯೆರೂಸಲೇಮಿಗೆ ಬಂದ್ರು. (ಎಜ್ರ 8:1-20) ಹೀಗೆ 44,000ಕ್ಕಿಂತ ಹೆಚ್ಚು ಇಸ್ರಾಯೇಲ್ಯರು ಯೆರೂಸಲೇಮಿಗೆ ವಾಪಸ್‌ ಬಂದ್ರು. ಇದು ನಿಜಕ್ಕೂ ಒಂದು ಅತಿ “ದೊಡ್ಡ ಸೈನ್ಯ.” (ಯೆಹೆ. 37:10) ಅಷ್ಟೇ ಅಲ್ಲ, ಕ್ರಿ.ಪೂ. 8 ನೇ ಶತಮಾನದಲ್ಲಿ ಅಶ್ಶೂರ್ಯರು ಹಿಡಿದುಕೊಂಡು ಹೋಗಿದ್ದ ಹತ್ತು ಕುಲದವರು ಕೂಡ ಯೆರೂಸಲೇಮಿಗೆ ಬಂದ್ರು ಮತ್ತು ಅವರು ದೇವಾಲಯವನ್ನ ಕಟ್ಟೋಕೆ ಸಹಾಯ ಮಾಡಿದ್ರು ಅಂತ ಬೈಬಲ್‌ ಹೇಳುತ್ತೆ.—1 ಪೂರ್ವ. 9:3; ಎಜ್ರ 6:17; ಯೆರೆ. 33:7; ಯೆಹೆ. 36:10.

14. (ಎ) ಆ ಭವಿಷ್ಯವಾಣಿಯ ಮುಖ್ಯ ನೆರವೇರಿಕೆ ಯಾವಾಗ ಆಗಲಿತ್ತು ಅಂತ ತಿಳ್ಕೊಳ್ಳೋಕೆ ಯೆಹೆಜ್ಕೇಲ 37:24 ಹೇಗೆ ಸಹಾಯ ಮಾಡುತ್ತೆ? (ಬಿ) 1919 ರಲ್ಲಿ ಏನಾಯ್ತು? (“‘ಒಣಗಿದ ಮೂಳೆಗಳು’ ಮತ್ತು ‘ಇಬ್ರು ಸಾಕ್ಷಿಗಳಿಗೆ’ ಯಾವ ಸಂಬಂಧ ಇದೆ?” ಅನ್ನೋ ಚೌಕ ನೋಡಿ.)

14 ಯೆಹೆಜ್ಕೇಲ ಹೇಳಿದ ಭವಿಷ್ಯವಾಣಿಯ ಈ ಅಂಶ ಮಹತ್ತಾದ ರೀತಿಯಲ್ಲಿ ಹೇಗೆ ನೆರವೇರಿತು? ಇದ್ರ ಬಗ್ಗೆ ಇರೋ ಇನ್ನೊಂದು ಭವಿಷ್ಯವಾಣಿಯಿಂದ ನಮಗೆ ಒಂದು ವಿಷ್ಯ ಗೊತ್ತಾಗುತ್ತೆ. ಏನಂದ್ರೆ ಪುನಃಸ್ಥಾಪನೆಯ ಭವಿಷ್ಯವಾಣಿಯು ಮಹಾ ದಾವೀದನಾದ ಯೇಸು ಕ್ರಿಸ್ತ ರಾಜನಾಗಿ ಆಳುವ ಸ್ವಲ್ಪ ಸಮಯದ ನಂತರ ನೆರವೇರುತ್ತೆ. * (ಯೆಹೆ. 37:24) 1919 ರಲ್ಲಿ ಯೆಹೋವನು ತನ್ನ ಜನರಿಗೆ ಪವಿತ್ರಶಕ್ತಿಯನ್ನ ಕೊಟ್ಟನು. ಇದ್ರಿಂದಾಗಿ ಅವ್ರಿಗೆ “ಜೀವ” ಬಂತು ಮತ್ತು ಮಹಾ ಬಾಬೆಲಿನ ಬಂಧಿವಾಸದಿಂದ ಅವರು ಬಿಡುಗಡೆಯಾದ್ರು. (ಯೆಶಾ. 66:8) ಇದರ ನಂತರ ಯೆಹೋವನು ಅವರನ್ನ ತಮ್ಮ ‘ದೇಶದಲ್ಲಿ’ ಅಂದರೆ ಪರದೈಸಿನಂಥ ವಾತಾವರಣದಲ್ಲಿ ಇಟ್ಟನು. ಆದ್ರೆ ಅವರು ಒಂದು ಅತಿ “ದೊಡ್ಡ ಸೈನ್ಯ” ಆದದ್ದು ಹೇಗೆ?

15, 16. (ಎ) ನಮ್ಮ ಕಾಲದಲ್ಲಿರೋ ಯೆಹೋವನ ಸೇವಕರು ಹೇಗೆ “ದೊಡ್ಡ ಸೈನ್ಯ” ಆಗಿದ್ದಾರೆ? (ಬಿ) ಈ ಭವಿಷ್ಯವಾಣಿಗಳು ಜೀವನದಲ್ಲಿ ಬರೋ ಕಷ್ಟ ಪರೀಕ್ಷೆಗಳನ್ನ ಎದುರಿಸೋಕೆ ನಮಗೆ ಹೇಗೆ ಸಹಾಯ ಮಾಡುತ್ತವೆ? (“ನಮ್ಮ ಕಾಲ ಮೇಲೆ ನಿಂತುಕೊಳ್ಳಲು ಸಹಾಯ” ಅನ್ನೋ ಚೌಕ ನೋಡಿ.)

15 ಇಸವಿ 1919 ರಲ್ಲಿ ಯೇಸು ಕ್ರಿಸ್ತನು ನಂಬಿಗಸ್ತ ಆಳನ್ನ ನೇಮಿಸಿದ ಸ್ವಲ್ಪ ಸಮಯದಲ್ಲೇ ದೇವಜನರ ಜೀವನದಲ್ಲಿ ಜೆಕರ್ಯ ಹೇಳಿದ ಭವಿಷ್ಯವಾಣಿ ನೆರವೇರೋಕೆ ಶುರುವಾಯ್ತು. ಬಂಧಿವಾಸದಿಂದ ವಾಪಸ್‌ ಯೆರೂಸಲೇಮಿಗೆ ಬಂದ ಮೇಲೆ ಜೆಕರ್ಯನು ಈ ರೀತಿ ಭವಿಷ್ಯ ನುಡಿದಿದ್ದನು: ‘ಎಷ್ಟೋ ಜನಾಂಗಗಳು ಮತ್ತು ಬಲಿಷ್ಠ ದೇಶಗಳು ಯೆಹೋವನನ್ನ ಆರಾಧಿಸೋಕೆ ಬರುತ್ತವೆ.’ ಯೆಹೋವನನ್ನ ಆರಾಧಿಸೋಕೆ ಬರೋ ಈ ಜನರನ್ನ ಪ್ರವಾದಿಯು “ಎಲ್ಲ ಭಾಷೆಗಳಿಂದ ಎಲ್ಲ ದೇಶಗಳಿಂದ ಬಂದಂಥ 10 ಜನ” ಅಂತ ಹೇಳಿದ್ದಾನೆ. ಅವರು ಒಬ್ಬ ಯೆಹೂದ್ಯನ (ದೇವರ ಇಸ್ರಾಯೇಲ್‌) ಬಟ್ಟೆಯ ತುದಿಯನ್ನ ಗಟ್ಟಿಯಾಗಿ ಹಿಡ್ಕೊಂಡು “ದೇವರು ನಿಮ್ಮ ಜೊತೆ ಇದ್ದಾನೆ ಅಂತ ನಾವು ಕೇಳಿಸ್ಕೊಂಡಿದ್ದೀವಿ. ಹಾಗಾಗಿ ನಾವೂ ನಿಮ್ಮ ಜೊತೆ ಬರ್ತಿವಿ” ಅಂತಾರೆ.—ಜೆಕ. 8:20-23.

16 ಇವತ್ತು ದೇವರ ಇಸ್ರಾಯೇಲ್‌ (ಭೂಮಿಯಲ್ಲಿರುವ ಅಭಿಷಿಕ್ತರು) ಮತ್ತು “ಹತ್ತು ಜನ” (ಬೇರೆ ಕುರಿಗಳು) ಸೇರಿ ಲಕ್ಷಾಂತರ ಮಂದಿ ಭೂಮಿಯಲ್ಲಿ ಯೆಹೋವ ದೇವರನ್ನ ಆರಾಧಿಸ್ತಿದ್ದಾರೆ. ನಿಜಕ್ಕೂ ಅವರು “ಅತಿ ದೊಡ್ಡ ಸೈನ್ಯ” ಆಗಿದ್ದಾರೆ. (ಯೆಹೆ. 37:10) ಬೆಳೆಯುತ್ತಾ ಇರೋ ಈ ಸೈನ್ಯದ ಸೈನಿಕರಾಗಿ ನಾವು ನಮ್ಮ ರಾಜನಾದ ಯೇಸುವನ್ನ ಹಿಂಬಾಲಿಸುತ್ತಾ ಇರೋಣ. ಹೀಗೆ ಶಾಶ್ವತ ಆಶೀರ್ವಾದಗಳನ್ನ ಪಡೆಯೋಣ.—ಕೀರ್ತ. 37:29; ಯೆಹೆ. 37:24; ಫಿಲಿ. 2:25; 1 ಥೆಸ. 4:16, 17.

17. ಮುಂದಿನ ಅಧ್ಯಾಯದಲ್ಲಿ ಏನನ್ನ ಕಲಿಯಲಿದ್ದೇವೆ?

17 ಶುದ್ಧ ಆರಾಧನೆ ಪುನಃಸ್ಥಾಪನೆ ಆಗುವಾಗ ದೇವಜನ್ರಿಗೂ ಒಂದು ಪ್ರಾಮುಖ್ಯವಾದ ಜವಾಬ್ದಾರಿ ಇರುತ್ತೆ. ಅದೇನು? ಈ ಪ್ರಶ್ನೆಗೆ ಉತ್ತರ ತಿಳುಕೊಳ್ಳೋಕೆ ನಾವು ಯೆರೂಸಲೇಮಿನ ನಾಶನಕ್ಕೂ ಮುಂಚೆ ಯೆಹೋವ ದೇವರು ಯೆಹೆಜ್ಕೇಲನಿಗೆ ಕೊಟ್ಟ ನೇಮಕದ ಬಗ್ಗೆ ನೊಡೋಣ. ಅದನ್ನ ನಾವು ಮುಂದಿನ ಅಧ್ಯಾಯದಲ್ಲಿ ನೋಡ್ತೀವಿ.

^ ಪ್ಯಾರ. 8 ಯೆಹೆಜ್ಕೇಲನು ದರ್ಶನದಲ್ಲಿ ‘ಸತ್ತ ಜನ್ರ’ ಮೂಳೆಗಳನ್ನ ನೋಡಿದನು. (ಯೆಹೆ. 37:9) ಇವರು ವಯಸ್ಸಾಗಿ ಸತ್ತಿರಲಿಲ್ಲ ಬದ್ಲಿಗೆ ಇವರನ್ನ ಕೊಲ್ಲಲಾಗಿತ್ತು. ಅದು ಹೇಗೆ? ಇಸ್ರಾಯೇಲ್ಯರ 10 ಕುಲಗಳ ರಾಜ್ಯವನ್ನ ಅಶ್ಶೂರ್ಯರು ಮತ್ತು ಯೆಹೂದದ 2 ಕುಲಗಳ ರಾಜ್ಯವನ್ನ ಬಾಬೆಲಿನವ್ರು ನಾಶ ಮಾಡಿ ಜನ್ರನ್ನ ಕೈದಿಗಳಾಗಿ ಕರೆದುಕೊಂಡು ಹೋದ್ರು. ‘ಇಸ್ರಾಯೇಲ್ಯರಿಗೆ’ ಯೆಹೋವನ ಜೊತೆ ಇದ್ದ ಸಂಬಂಧ ಆಗ ಸಂಪೂರ್ಣವಾಗಿ ಕಡಿದು ಹೋಯ್ತು. ಈ ಅರ್ಥದಲ್ಲಿ ಅವ್ರನ್ನ ಕೊಲ್ಲಲಾಯ್ತು.

^ ಪ್ಯಾರ. 14 ಮೆಸ್ಸೀಯನ ಈ ಭವಿಷ್ಯವಾಣಿಯ ಬಗ್ಗೆ ಈ ಪುಸ್ತಕದ 8 ನೇ ಅಧ್ಯಾಯದಲ್ಲಿ ಚರ್ಚಿಸಲಾಗಿದೆ.