ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 9

“ನಾನು ಅವ್ರಿಗೆ ಒಂದೇ ಮನಸ್ಸನ್ನ ಕೊಡ್ತೀನಿ”

“ನಾನು ಅವ್ರಿಗೆ ಒಂದೇ ಮನಸ್ಸನ್ನ ಕೊಡ್ತೀನಿ”

ಯೆಹೆಜ್ಕೇಲ 11:19

ಮುಖ್ಯ ವಿಷಯ: ಶುದ್ಧ ಆರಾಧನೆಯ ಪುನಃಸ್ಥಾಪನೆಯ ಬಗ್ಗೆ ಯೆಹೆಜ್ಕೇಲ ತಿಳಿಸಿದ ಭವಿಷ್ಯವಾಣಿಗಳ ವಿವರಣೆ

1-3. ಬಾಬೆಲಿನವರು ಯೆಹೋವನ ಆರಾಧಕರನ್ನ ಏನಂತ ಗೇಲಿ ಮಾಡ್ತಿದ್ರು? ಮತ್ತು ಯಾಕೆ?

 ಬಾಬೆಲ್‌ ಪಟ್ಟಣದಲ್ಲಿ ಕೈದಿಗಳಾಗಿದ್ದ ನಂಬಿಗಸ್ತ ಸೇವಕರಲ್ಲಿ ನೀವೂ ಒಬ್ಬರು ಅಂತ ನೆನಸಿ. ನೀವು ಬಾಬೆಲಿಗೆ ಬಂದು 50 ವರ್ಷ ಕಳೆದಿವೆ. ಇವತ್ತು ಸಬ್ಬತ್‌ ದಿನ, ಹಾಗಾಗಿ ನಿಮ್ಮ ಆಚಾರದ ಪ್ರಕಾರ ಯೆಹೋವನನ್ನ ಆರಾಧಿಸೋಕಾಗಿ ಬೇರೆ ನಂಬಿಗಸ್ತರನ್ನ ಭೇಟಿ ಮಾಡೋಕಾಗಿ ಹೋಗ್ತಿದ್ದೀರ. ಜನಸಂದಣಿ ಇರೋ ರಸ್ತೆಯಲ್ಲಿ ನೀವು ದಾರಿ ಮಾಡ್ಕೊಂಡು ಹೋಗ್ತಾ ಇದ್ದೀರ. ದಾರಿಯಲ್ಲಿ ಲೆಕ್ಕವಿಲ್ಲದಷ್ಟು ದೇವಸ್ಥಾನಗಳನ್ನ, ಆರಾಧನಾ ಸ್ಥಳಗಳನ್ನ ಹಾದು ಹೋಗ್ತಾ ಇದ್ದೀರ. ಇಲ್ಲಿ ತುಂಬ ಜನ್ರು ಬಂದು ಅವ್ರ ದೇವರಾದ ಮಾರ್ದೂಕನಿಗೆ ಯಜ್ಞಗಳನ್ನ ಅರ್ಪಿಸ್ತಿದ್ದಾರೆ ಮತ್ತು ಸ್ತುತಿಗಳನ್ನ ಹಾಡ್ತಿದ್ದಾರೆ.

2 ಜನಸಂದಣಿಯಿಂದ ಸ್ವಲ್ಪ ದೂರ ಒಂದು ಚಿಕ್ಕ ಗುಂಪು ಸೇರಿದೆ. * ಅವರೇ ಯೆಹೋವ ದೇವರ ನಂಬಿಗಸ್ತ ಸೇವಕರು. ನೀವು ಅವರ ಜೊತೆ ಸೇರುತ್ತೀರಿ. ಒಟ್ಟಿಗೆ ಪ್ರಾರ್ಥನೆ ಮಾಡೋಕೆ, ದೇವರಿಗೆ ಕೀರ್ತನೆಗಳನ್ನ ಹಾಡೋಕೆ ಮತ್ತು ದೇವರ ವಾಕ್ಯವನ್ನ ಚರ್ಚಿಸೋಕೆ ನೀವೆಲ್ಲ ಒಂದು ನದಿ ತೀರದ ಪ್ರಶಾಂತವಾದ ಸ್ಥಳಕ್ಕೆ ಹೋಗ್ತೀರ. ಆ ಶಾಂತ ವಾತಾವರಣದಲ್ಲಿ ನೀವೆಲ್ಲ ಪ್ರಾರ್ಥನೆ ಮಾಡ್ತಾ ಇರುವಾಗ ತೀರಕ್ಕೆ ಕಟ್ಟಿರೋ ದೋಣಿ ದಡಕ್ಕೆ ಬಡಿತಾ ಇರೋ ಶಬ್ದ ಕೇಳಿಸುತ್ತಿರುತ್ತೆ. ಒಟ್ಟಾಗಿ ಯೆಹೋವನ ಆರಾಧನೆ ಮಾಡೋಕೆ ಯಾವುದೇ ಗಲಭೆ ಇಲ್ಲದೆ ಶಾಂತವಾಗಿರೋ ಸ್ಥಳ ಸಿಕ್ಕಿರೋದಕ್ಕೆ ನೀವು ಖುಷಿ ಪಡ್ತೀರ. ಇದ್ರ ಜೊತೆಗೆ, ಹಿಂದಿನಂತೆ ಯಾರಾದ್ರೂ ನಿಮ್ಮ ಆರಾಧನೆಗೆ ಅಡ್ಡಿ ಮಾಡಬಹುದಾ ಅನ್ನೋ ಭಯನೂ ಆಗುತ್ತೆ. ಜನ ಯಾಕೆ ನಿಮ್ಮ ಆರಾಧನೆಗೆ ಅಡ್ಡಿ ಮಾಡ್ತಾರೆ?

3 ಬಾಬೆಲಿನವ್ರು ತುಂಬ ವರ್ಷಗಳಿಂದ ಅನೇಕ ಯುದ್ಧಗಳನ್ನ ಗೆಲ್ತಾ ಬಂದಿದ್ರಿಂದ ಹೀಗೆ ಮಾಡ್ತಿದ್ದಾರೆ. ಅವರ ಪಟ್ಟಣ ಸುರಕ್ಷಿತವಾಗಿರೋಕೆ ಕಾರಣ ಅವರ ದೇವರುಗಳೇ ಅಂತ ಅವರು ಭರವಸೆಯಿಟ್ಟಿದ್ದಾರೆ. ಯೆರೂಸಲೇಮ್‌ ಸಂಪೂರ್ಣವಾಗಿ ನಾಶವಾಗಿರೋದು ತಾನೇ ಅವರ ದೇವರಾದ ಮಾರ್ದೂಕ್‌ ಯೆಹೋವನಿಗಿಂತ ಶಕ್ತಿಶಾಲಿ ಅಂತ ಅವರು ಅಂದುಕೊಳ್ಳೋ ತರ ಮಾಡಿರಬೇಕು. ಅದಕ್ಕೇ ಅವ್ರು ಯೆಹೋವನನ್ನ, ಆತನ ಜನರನ್ನ ಗೇಲಿ ಮಾಡ್ತಾ ಇದ್ರು. ಅವ್ರು ಕೆಲವೊಮ್ಮೆ “ಚೀಯೋನಿನ ಒಂದು ಹಾಡನ್ನ ನಮಗೋಸ್ಕರ ಹಾಡಿ” ಅಂತ ಹೀಯಾಳಿಸ್ತಾ ಇದ್ರು. (ಕೀರ್ತ. 137:3) ಇಸ್ರಾಯೇಲ್ಯರ ಅನೇಕ ಕೀರ್ತನೆಗಳಲ್ಲಿ ಯೆಹೋವ ದೇವರ ಶತ್ರುಗಳ ವಿರುದ್ಧ ಚೀಯೋನಿನವರು ಜಯ ಗಳಿಸಿದ್ದರ ಬಗ್ಗೆ ಇತ್ತು. ಬಹುಶಃ ಬಾಬೆಲಿನವರು ಅಂಥ ಕೀರ್ತನೆಗಳನ್ನ ಅವ್ರತ್ರ ಹಾಡೋಕೆ ಹೇಳಿ ಅವ್ರನ್ನ ಹೀಯಾಳಿಸುತ್ತಿದ್ದರು. ಇನ್ನು ಕೆಲವು ಕೀರ್ತನೆಗಳಲ್ಲಿ ಬಾಬೆಲಿನವರ ಬಗ್ಗೆನೇ ಇತ್ತು. ಉದಾಹರಣೆಗೆ, ಒಂದು ಕೀರ್ತನೆಯಲ್ಲಿ, ಅವ್ರು “ಯೆರೂಸಲೇಮನ್ನ ಪಾಳುಬಿದ್ದ ಪಟ್ಟಣವಾಗಿ ಮಾಡಿದ್ರು . . . ನಮ್ಮ ಸುತ್ತ ಇರೋರು ನಮ್ಮನ್ನ ನೋಡಿ ನಗ್ತಾರೆ, ಅಣಕಿಸ್ತಾರೆ” ಅಂತ ಇತ್ತು.—ಕೀರ್ತ. 79:1, 3, 4.

4, 5. ಯೆಹೆಜ್ಕೇಲನ ಭವಿಷ್ಯವಾಣಿಯಿಂದ ಯೆಹೂದ್ಯರಿಗೆ ಯಾವ ನಿರೀಕ್ಷೆ ಸಿಕ್ತು? ಮತ್ತು ಈ ಅಧ್ಯಾಯದಲ್ಲಿ ಏನನ್ನ ಕಲಿತೇವೆ? (ಆರಂಭದ ಚಿತ್ರ ನೋಡಿ.)

4 ನೀವು ಯೆಹೋವನ ಮೇಲೆ, ಆತನ ಪ್ರವಾದಿಗಳ ಮೇಲೆ ನಂಬಿಕೆ ಇಟ್ಟಿರೋದನ್ನ ನೋಡಿ ಧರ್ಮಭ್ರಷ್ಟ ಯೆಹೂದ್ಯರು ಕೂಡ ನಿಮ್ಮನ್ನ ಗೇಲಿ ಮಾಡ್ತಿರಬಹುದು. ಅವ್ರು ಹೀಗೆ ಮಾಡಿದ್ರೂ ನೀವು ಕುಟುಂಬ ಸಮೇತವಾಗಿ ಸಂತೋಷದಿಂದ ಶುದ್ಧ ಆರಾಧನೆ ಮಾಡ್ತಿದ್ದೀರ. ಒಟ್ಟಿಗೆ ಪ್ರಾರ್ಥನೆ ಮಾಡೋದು, ಹಾಡುಗಳನ್ನ ಹಾಡೋದು ಮತ್ತು ದೇವರ ವಾಕ್ಯವನ್ನು ಓದೋದು ನಿಮಗೆ ತುಂಬನೇ ಸಂತೋಷ ಕೊಡುತ್ತೆ. (ಕೀರ್ತ. 94:19; ರೋಮ. 15:4) ನಿಮ್ಮ ಜೊತೆಯಲ್ಲಿ ಸೇರಿಬಂದವ್ರು ವಿಶೇಷವಾದ ಏನೋ ಒಂದನ್ನ ತಂದಿದ್ದಾರೆ. ಅದೇ ಯೆಹೆಜ್ಕೇಲನ ಭವಿಷ್ಯವಾಣಿಗಳಿರೋ ಸುರುಳಿ! ಆ ಭವಿಷ್ಯವಾಣಿಗಳಲ್ಲಿ ಯೆಹೋವ ದೇವರು ತನ್ನ ಜನರನ್ನ ಯೆರೂಸಲೇಮಿಗೆ ವಾಪಸ್‌ ಕರಕೊಂಡು ಬರ್ತಾನೆ ಅಂತ ಮಾತು ಕೊಟ್ಟಿರೋದನ್ನ ಕೇಳಿ ನಿಮಗೆ ತುಂಬ ಖುಷಿ ಆಗುತ್ತೆ. ನಿಮ್ಮ ಸಂತೋಷಕ್ಕೆ ಪಾರನೇ ಇರಲ್ಲ. ಒಂದಲ್ಲ ಒಂದು ದಿನ ನಿಮ್ಮ ಕುಟುಂಬ ಇಡೀ ಯೆರೂಸಲೇಮಿಗೆ ಹೋಗಿ ಅಲ್ಲಿ ಶುದ್ಧ ಆರಾಧನೆಯನ್ನ ಪುನಃಸ್ಥಾಪಿಸೋದ್ರ ಬಗ್ಗೆ ಯೋಚಿಸೋವಾಗ ನಿಮ್ಮ ಮುಖ ಸಂತೋಷದಿಂದ ಅರಳುತ್ತೆ.

5 ಶುದ್ಧ ಆರಾಧನೆಯ ಪುನಃಸ್ಥಾಪನೆಯ ಬಗ್ಗೆ ಯೆಹೆಜ್ಕೇಲನ ಭವಿಷ್ಯವಾಣಿಯಲ್ಲಿ ಆಗಿಂದಾಗ್ಗೆ ನೋಡಬಹುದು. ಈ ಪುನಃಸ್ಥಾಪನೆ ಯೆಹೆಜ್ಕೇಲನ ಭವಿಷ್ಯವಾಣಿಯ ಮುಖ್ಯ ವಿಷ್ಯ ಆಗಿದೆ. ಆ ಭವಿಷ್ಯವಾಣಿ ಹಿಂದಿನ ಕಾಲದಲ್ಲಿ ಹೇಗೆ ನೆರವೇರಿತು? ಆ ಭವಿಷ್ಯವಾಣಿ ನಮ್ಮ ಕಾಲದಲ್ಲಿ ಹೇಗೆ ನೆರವೇರಿತು? ಮತ್ತು ಅದರಲ್ಲಿರುವ ಕೆಲವು ವಿಷ್ಯಗಳು ಮುಂದೆ ಹೇಗೆ ನೇರವೇರಲಿವೆ?

“ಅವರು ಬೇರೆ ದೇಶಕ್ಕೆ ಕೈದಿಗಳಾಗಿ ಹೋಗ್ತಾರೆ”

6. ದಂಗೆಯೆದ್ದ ತನ್ನ ಜನರಿಗೆ ಯೆಹೋವನು ಹೇಗೆ ಪದೇಪದೇ ಎಚ್ಚರಿಕೆ ಕೊಟ್ಟನು?

6 ತನ್ನ ಜನರು ದಂಗೆ ಎದ್ದಿದ್ದರಿಂದ ಯೆಹೋವನು ಯಾವ ಶಿಕ್ಷೆ ಕೊಡ್ತೀನಿ ಅಂತ ಯೆಹೆಜ್ಕೇಲನ ಮೂಲಕ ಸ್ಪಷ್ಟವಾಗಿ ತಿಳಿಸಿದ್ದನು. ಅವ್ರು ಬೇರೆ ದೇಶಕ್ಕೆ ಕೈದಿಗಳಾಗಿ ಹೋಗ್ತಾರೆ ಅಂತ ಯೆಹೋವನು ಹೇಳಿದ್ದನು. (ಯೆಹೆ. 12:11) ಈ ಪುಸ್ತಕದ 6 ನೇ ಅಧ್ಯಾಯದಲ್ಲಿ ನೋಡಿದ ಹಾಗೆ ಅವ್ರಿಗೆ ಯಾವ ಶಿಕ್ಷೆ ಸಿಗುತ್ತೆ ಅಂತ ಯೆಹೆಜ್ಕೇಲ ಅಭಿನಯಿಸಿ ತೋರಿಸಿದನು. ಆದ್ರೆ ಈ ರೀತಿ ಎಚ್ಚರಿಕೆನ ಕೊಟ್ಟಿರೋದು ಯೆಹೆಜ್ಕೇಲ ಮಾತ್ರ ಅಲ್ಲ. ಇದಕ್ಕೂ ಮುಂಚೆ ಬೇರೆಯವ್ರೂ ಕೊಟ್ಟಿದ್ರು. ಸುಮಾರು 1,000 ವರ್ಷಗಳ ಹಿಂದೆ ಅಂದ್ರೆ ಮೋಶೆಯ ಸಮಯದಿಂದಲೂ, ತನ್ನ ಜನ್ರು ಪದೇ ಪದೇ ದಂಗೆ ಏಳೋದಾದ್ರೆ ಕೈದಿಗಳಾಗಿ ಬೇರೆ ದೇಶಕ್ಕೆ ಹೋಗ್ತಾರೆ ಅಂತ ಯೆಹೋವನು ಎಚ್ಚರಿಸಿದ್ದನು. (ಧರ್ಮೋ. 28:36, 37) ಯೆಶಾಯ, ಯೆರೆಮೀಯರಂಥ ಪ್ರವಾದಿಗಳು ಸಹ ಇಂಥ ಎಚ್ಚರಿಕೆ ಕೊಟ್ಟಿದ್ರು.—ಯೆಶಾ. 39:5-7; ಯೆರೆ. 20:3-6.

7. ಯೆಹೋವನು ತನ್ನ ಜನರಿಗೆ ಹೇಗೆ ಶಿಕ್ಷೆ ಕೊಟ್ಟನು?

7 ಆದ್ರೆ ಈ ಎಲ್ಲಾ ಎಚ್ಚರಿಕೆಗಳಿಗೆ ಹೆಚ್ಚಿನ ಜನ್ರು ಕಿವಿಗೊಡಲೇ ಇಲ್ಲ. ಅವ್ರು ನಡ್ಕೊಳ್ತಿದ್ದ ರೀತಿ ನೋಡಿ ಯೆಹೋವನ ಹೃದಯ ಒಡೆದೇ ಹೋಯ್ತು. ಆ ಜನ್ರು ಯೆಹೋವನಿಗೆ ದಂಗೆ ಎದ್ರು. ವಿಗ್ರಹಾರಾಧನೆ ಮಾಡಿದ್ರು, ಯೆಹೋವನಿಗೆ ನಂಬಿಗಸ್ತರಾಗಿರಲಿಲ್ಲ. ಅವ್ರು ಇಷ್ಟು ಭ್ರಷ್ಟರಾಗೋಕೆ ಕಾರಣ ಅವ್ರ ಮೇಲೆ ಅಧಿಕಾರ ನಡೆಸ್ತಿದ್ದವ್ರೇ ಆಗಿದ್ರು. ಅದಕ್ಕೆ ಯೆಹೋವನು ಆ ಪ್ರದೇಶದಲ್ಲಿ ಬರಗಾಲ ಬರೋ ತರ ಮಾಡಿದನು. ಅವ್ರಿದ್ದದ್ದು ಹಾಲು ಜೇನು ಹರಿಯೋ ದೇಶದಲ್ಲಿ. ಅಲ್ಲೇ ಬರಗಾಲ ಬಂತಂದ್ರೆ ಅದಕ್ಕಿಂತ ದೊಡ್ಡ ಅವಮಾನ ಬೇರೊಂದಿರಲಿಲ್ಲ. (ಯೆಹೆ. 20:6, 7) ನಂತ್ರ ಯೆಹೋವನು ಈಗಾಗಲೇ ಹೇಳಿದ ಹಾಗೆ ಆ ಹಠಮಾರಿ ಜನ ಕೈದಿಗಳಾಗಿ ಹೋಗೋ ತರ ಮಾಡಿದನು. ಕ್ರಿ.ಪೂ. 607 ರಲ್ಲಿ ಬಾಬೆಲಿನ ರಾಜ ನೆಬೂಕದ್ನೆಚ್ಚರ ಯೆರೂಸಲೇಮನ್ನು, ಅಲ್ಲಿನ ದೇವಾಲಯವನ್ನು ಸಂಪೂರ್ಣವಾಗಿ ನಾಶಮಾಡಿದ. ಅವನು ಅಲ್ಲಿನ ಸಾವಿರಾರು ಯೆಹೂದ್ಯರನ್ನ ಬಾಬೆಲಿಗೆ ಕೈದಿಗಳಾಗಿ ಕರಕೊಂಡು ಹೋದ. ಈ ಅಧ್ಯಾಯದ ಆರಂಭದಲ್ಲಿ ತಿಳಿಸಲಾದಂತೆ ಬಾಬೆಲಿನಲ್ಲಿ ಅವ್ರು ಜನರಿಂದ ಗೇಲಿ ಮತ್ತು ಅವಮಾನವನ್ನು ಅನುಭವಿಸಬೇಕಾಯ್ತು.

8, 9. ಧರ್ಮಭ್ರಷ್ಟತೆಯ ಬಗ್ಗೆ ಕ್ರೈಸ್ತ ಸಭೆಗೆ ಯೆಹೋವನು ಯಾವೆಲ್ಲಾ ಎಚ್ಚರಿಕೆ ಕೊಟ್ಟನು?

8 ಯೆಹೂದಿಗಳು ಕೈದಿಗಳಾಗಿ ಹೋದ ಹಾಗೆನೇ ಒಂದರ್ಥದಲ್ಲಿ ಒಂದನೇ ಶತಮಾನದಲ್ಲಿದ್ದ ಕ್ರೈಸ್ತ ಸಭೆ ಕೂಡ ಕೈದಿಯಾಗಿ ಹೋಯ್ತು. ಹಿಂದಿನ ಕಾಲದ ಯೆಹೂದ್ಯರಿಗೆ ಇದ್ರ ಬಗ್ಗೆ ಮೊದಲೇ ಎಚ್ಚರಿಕೆ ಕೊಟ್ಟ ಹಾಗೆನೇ ಯೇಸುವಿನ ಹಿಂಬಾಲಕರಿಗೂ ಇದ್ರ ಬಗ್ಗೆ ಎಚ್ಚರಿಕೆ ಕೊಡಲಾಗಿತ್ತು. ಯೇಸು ಸುವಾರ್ತೆ ಸಾರೋಕೆ ಶುರು ಮಾಡಿ ಸ್ವಲ್ಪದ್ರಲ್ಲೇ ಈ ರೀತಿ ಹೇಳಿದನು: “ಎಚ್ಚರವಾಗಿರಿ. ಕುರಿವೇಷ ಹಾಕಿ ನಿಮ್ಮ ಹತ್ರ ಸುಳ್ಳು ಪ್ರವಾದಿಗಳು ಬರ್ತಾರೆ. ಅವರು ತುಂಬ ಹಸಿದಿರೋ ತೋಳಗಳ ತರ ನಿಮ್ಮನ್ನ ನುಂಗೋಕೆ ಕಾಯ್ತಿದ್ದಾರೆ.” (ಮತ್ತಾ. 7:15) ಇದಾಗಿ ಕೆಲವು ವರ್ಷಗಳ ನಂತ್ರ ಅಪೊಸ್ತಲ ಪೌಲನು ದೇವರ ಪ್ರೇರಣೆಯಿಂದ ಈ ಎಚ್ಚರಿಕೆ ಕೊಟ್ಟನು: “ನಾನು ಹೋದ ಮೇಲೆ ಕ್ರೂರ ತೋಳಗಳ ತರ ಇರೋ ಜನ ನಿಮ್ಮ ಹತ್ರ ಬರ್ತಾರೆ. ಅವರು ಸಭೆ ಜೊತೆ ತುಂಬ ಒರಟಾಗಿ ನಡ್ಕೊಳ್ತಾರೆ. ಅಷ್ಟೇ ಅಲ್ಲ ನಿಮ್ಮಲ್ಲೇ ಕೆಲವರು ಶಿಷ್ಯರನ್ನ ತಮ್ಮ ಕಡೆ ಎಳ್ಕೊಳ್ಳೋಕೆ ತಪ್ಪು ತಪ್ಪಾಗಿ ಏನೇನೋ ಕಲಿಸ್ತಾರೆ.”—ಅ. ಕಾ. 20:29, 30.

9 ಇಂಥ ಧರ್ಮಭ್ರಷ್ಟ ಜನರನ್ನು ಗುರುತಿಸೋದು ಹೇಗೆ? ಅವ್ರಿಂದ ದೂರ ಇರೋಕೆ ಏನು ಮಾಡಬೇಕು ಅಂತ ಕ್ರೈಸ್ತರಿಗೆ ಕಲಿಸಲಾಗಿದೆ. ಸಭೆಯಲ್ಲಿ ಧರ್ಮಭ್ರಷ್ಟರು ಇರೋದಾದ್ರೆ ಅವ್ರನ್ನ ಸಭೆಯಿಂದ ತೆಗೆದುಹಾಕಬೇಕು ಅಂತ ಸಭೆಯ ಹಿರಿಯರಿಗೆ ತಿಳಿಸಲಾಗಿತ್ತು. (1 ತಿಮೊ. 1:19; 2 ತಿಮೊ. 2:16-19; 2 ಪೇತ್ರ. 2:1-3; 2 ಯೋಹಾ. 10) ಆದ್ರೂ ಹಿಂದಿನ ಕಾಲದ ಇಸ್ರಾಯೇಲ್ಯರು ಮತ್ತು ಯೆಹೂದಿಗಳ ಹಾಗೆ ಅನೇಕ ಕ್ರೈಸ್ತರು ನಿಧಾನವಾಗಿ ಇಂಥ ಎಚ್ಚರಿಕೆಗೆ ಕಿವಿಗೊಡೋದನ್ನ ನಿಲ್ಲಿಸಿಬಿಟ್ಟರು. ಹಾಗಾಗಿ ಒಂದನೇ ಶತಮಾನ ಕೊನೆಯಾಗೋಷ್ಟರಲ್ಲಿ ಕ್ರೈಸ್ತ ಸಭೆಯಲ್ಲಿ ಧರ್ಮಭ್ರಷ್ಟತೆ ಬೇರೂರಿಬಿಟ್ಟಿತ್ತು. ಆ ಸಮಯದಲ್ಲಿ ಅಪೊಸ್ತಲರಲ್ಲಿ ಯೋಹಾನ ಮಾತ್ರ ಬದುಕಿದ್ದನು. ಅವನು ಸಭೆಯಲ್ಲಿ ಧರ್ಮಭ್ರಷ್ಟತೆ ಮತ್ತು ದಂಗೆ ಏಳೋ ಸ್ವಭಾವ ಇರೋದನ್ನ ನೋಡಿದನು. ಇದೆಲ್ಲದರ ವಿರುದ್ಧ ಹೋರಾಡೋಕೆ ಆಗ ಇದ್ದದ್ದು ಅವನು ಮಾತ್ರ. (2 ಥೆಸ. 2:6-8; 1 ಯೋಹಾ. 2:18) ಹಾಗಾದ್ರೆ ಯೋಹಾನ ತೀರಿ ಹೋದ ಮೇಲೆ ಏನಾಯ್ತು?

10, 11. ಗೋದಿ ಮತ್ತು ಕಳೆಯ ಬಗ್ಗೆ ಯೇಸು ಹೇಳಿದ ಉದಾಹರಣೆಯು ಕ್ರಿ.ಶ. 2 ನೇ ಶತಮಾನದಿಂದ ಹೇಗೆ ನೆರವೇರೋಕೆ ಶುರುವಾಯ್ತು?

10 ಯೇಸು ಹೇಳಿದ ಗೋದಿ ಮತ್ತು ಕಳೆಯ ಉದಾಹರಣೆಯು ಯೋಹಾನ ತೀರಿ ಹೋದ ನಂತ್ರ ನೆರವೇರೋಕೆ ಶುರು ಆಯ್ತು. (ಮತ್ತಾಯ 13:24-30 ಓದಿ.) ಯೇಸು ಹೇಳಿದ ಹಾಗೆ ಸೈತಾನ ಸಭೆಯಲ್ಲಿ ಕಳೆಗಳನ್ನು ಬಿತ್ತಿದನು ಅಥ್ವಾ ನಕಲಿ ಕ್ರೈಸ್ತರನ್ನು ಕಳುಹಿಸಿದನು. ಇದ್ರಿಂದ ಧರ್ಮಭ್ರಷ್ಟತೆ ತುಂಬಾ ಬೇಗ ಕಾಡ್ಗಿಚ್ಚಿನಂತೆ ಹಬ್ಬೋಕೆ ಶುರು ಆಯ್ತು. ಕ್ರೈಸ್ತರು ವಿಗ್ರಹಾರಾಧನೆಯನ್ನ, ಸುಳ್ಳು ಧರ್ಮದ ಹಬ್ಬಗಳನ್ನ, ಆಚಾರಗಳನ್ನು ಮಾಡೋಕೆ ಶುರು ಮಾಡಿದ್ರು. ನಾಸ್ತಿಕ ತತ್ವಜ್ಞಾನಿಗಳ ಮತ್ತು ಸೈತಾನನಿಂದ ಬಂದ ಧರ್ಮಗಳ ಸುಳ್ಳು ಬೋಧನೆಗಳನ್ನ ಅನುಸರಿಸೋಕೆ ಶುರು ಮಾಡಿದ್ರು. ತನ್ನ ಮಗನು ಸ್ಥಾಪಿಸಿದ ಸಭೆಯಲ್ಲಿ ಇಷ್ಟೆಲ್ಲಾ ಭ್ರಷ್ಟಾಚಾರ ನಡಿತಿರೋದನ್ನ ನೋಡ್ದಾಗ ಯೆಹೋವನಿಗೆ ಹೇಗಾಗಿರಬೇಕು? ಆಗ ಯೆಹೋವನು ಏನು ಮಾಡಿದನು? ಆತನು ಅಪನಂಬಿಗಸ್ತ ಇಸ್ರಾಯೇಲ್ಯರಿಗೆ ಮಾಡಿದ ಹಾಗೆನೇ ಈ ಜನ್ರು ಕೂಡ ಒಂದರ್ಥದಲ್ಲಿ ಕೈದಿಗಳಾಗಿ ಹೋಗೋ ತರ ಮಾಡಿದನು. ಕ್ರಿ.ಶ. 2 ನೇ ಶತಮಾನದಿಂದ ನಕಲಿ ಕ್ರೈಸ್ತರು ಎಷ್ಟು ಜಾಸ್ತಿ ಆದ್ರೂ ಅಂದ್ರೆ ನಿಜ ಕ್ರೈಸ್ತರು ಮರೆಯಾಗಿ ಹೋದ್ರು. ಹೀಗೆ ಸತ್ಯ ಕ್ರೈಸ್ತ ಸಭೆಯು ಸುಳ್ಳು ಧರ್ಮದ ಸಾಮ್ರಾಜ್ಯವಾಗಿರೋ ಮಹಾ ಬಾಬೆಲಿಗೆ ಕೈದಿಯಾಗಿ ಹೋಯ್ತು. ಆದ್ರೆ ನಕಲಿ ಕ್ರೈಸ್ತರು ಈ ಸಾಮ್ರಾಜ್ಯದ ಭಾಗವಾದ್ರು. ನಕಲಿ ಕ್ರೈಸ್ತರು ಹೆಚ್ಚಾಗ್ತಾ ಹೋದಂತೆ ಸುಳ್ಳು ಕ್ರೈಸ್ತರ ಸಾಮ್ರಾಜ್ಯನೇ ತಲೆ ಎತ್ತಿತು.

11 ಮುಂದಿನ ಕೆಲವು ಶತಮಾನಗಳವರೆಗೆ ಸುಳ್ಳು ಕ್ರೈಸ್ತ ಸಾಮ್ರಾಜ್ಯನೇ ರಾರಾಜಿಸ್ತಾ ಇತ್ತು. ಆ ಸಮಯದಲ್ಲೂ ಕೆಲವು ನಿಜ ಕ್ರೈಸ್ತರು ಅಂದ್ರೆ ಯೇಸುವಿನ ಉದಾಹರಣೆಯಲ್ಲಿ ತಿಳಿಸಿದ ಗೋದಿಯಂಥ ಜನರು ಇದ್ರು. ಯೆಹೆಜ್ಕೇಲ 6:9 ರಲ್ಲಿ ಹೇಳಿರೋ ಯೆಹೂದಿ ಕೈದಿಗಳ ತರನೇ ಇವ್ರು ಸಹ ಸತ್ಯ ದೇವರನ್ನ ನೆನಪಿಸಿಕೊಂಡರು. ಕೆಲವರು ಧೈರ್ಯದಿಂದ ಆ ಕ್ರೈಸ್ತ ಧರ್ಮ ಕಲಿಸುತ್ತಿದ್ದ ಸುಳ್ಳು ಬೋಧನೆಗಳನ್ನು ವಿರೋಧಿಸಿದ್ರು. ಇದ್ರಿಂದ ಅವ್ರು ಗೇಲಿಯನ್ನು, ಹಿಂಸೆಯನ್ನು ಅನುಭವಿಸಿದ್ರು. ಹಾಗಾದ್ರೆ ಯೆಹೋವನು ತನ್ನ ಜನರನ್ನ ಶಾಶ್ವತವಾಗಿ ಸುಳ್ಳು ಧರ್ಮದ ಕೈದಿಗಳಾಗಿರೋಕೆ ಬಿಟ್ಟನಾ? ಇಲ್ಲ. ಯೆಹೋವನು ಇಸ್ರಾಯೇಲ್ಯರಿಗೆ ಶಿಕ್ಷೆ ಕೊಟ್ಟ ಹಾಗೆ ಇವ್ರಿಗೂ ನ್ಯಾಯವಾಗೇ ಶಿಕ್ಷೆ ಕೊಟ್ಟನು. ಅವ್ರಿಗೆ ಎಷ್ಟು ಶಿಕ್ಷೆ ಕೊಡಬೇಕಿತ್ತೋ ಅಷ್ಟನ್ನೇ ಕೊಟ್ಟನು ಮತ್ತು ಎಷ್ಟು ಸಮಯದವರೆಗೂ ಕೊಡಬೇಕಿತ್ತೋ ಅಷ್ಟು ಸಮಯದವರೆಗೆ ಮಾತ್ರ ಕೊಟ್ಟನು. (ಯೆರೆ. 46:28) ಅಷ್ಟೇ ಅಲ್ಲ ಯೆಹೋವನು ತನ್ನ ಜನರಿಗೆ ಒಂದು ನಿರೀಕ್ಷೆಯನ್ನು ಸಹ ಕೊಟ್ಟನು. ಈಗ ನಾವು ಹಿಂದಿನ ಕಾಲದ ಬಾಬೆಲಿನಲ್ಲಿರೋ ಯೆಹೂದಿ ಕೈದಿಗಳ ಸಮಯಕ್ಕೆ ವಾಪಸ್‌ ಹೋಗೋಣ ಮತ್ತು ಯೆಹೋವನು ಅವ್ರಿಗೆ ಬಿಡುಗಡೆ ಮಾಡ್ತೀನಿ ಅನ್ನೋ ನಿರೀಕ್ಷೆಯ ಮಾತನ್ನು ಹೇಗೆ ಕೊಟ್ಟನು ಅಂತ ನೋಡೋಣ.

ನೂರಾರು ವರ್ಷ ನಿಜ ಕ್ರೈಸ್ತರು ಮಹಾ ಬಾಬೆಲಿನಿಂದ ಹಿಂಸೆಯನ್ನ ಅನುಭವಿಸಿದ್ರು (ಪ್ಯಾರ 10, 11 ನೋಡಿ)

“ನನ್ನ ಕೋಪ ತಣ್ಣಗಾಗುತ್ತೆ”

12, 13. ಯೆಹೋವ ದೇವರ ಕೋಪ ಸ್ವಲ್ಪ ಸಮಯದ ನಂತ್ರ ಯಾಕೆ ಕಮ್ಮಿಯಾಯ್ತು?

12 ತನ್ನ ಜನರ ಮೇಲೆ ರೋಷಾಗ್ನಿಯನ್ನು ಸುರಿಸ್ತೀನಿ ಅಂತ ಯೆಹೋವನು ಹೇಳಿದ್ದನು. ಆದ್ರೆ ಈ ರೋಷಾಗ್ನಿ ಶಾಶ್ವತವಾಗಿ ಇರೋದಿಲ್ಲ ಅನ್ನೋ ಆಶ್ವಾಸನೆಯನ್ನೂ ಕೊಟ್ಟಿದ್ದನು. ಉದಾಹರಣೆಗೆ, ಆತನು ಹೇಳಿದ ಈ ಮಾತುಗಳನ್ನ ಗಮನಿಸಿ: “ನನ್ನ ಸಿಟ್ಟು ಕಮ್ಮಿ ಆಗುತ್ತೆ, ಅವ್ರ ಮೇಲಿದ್ದ ಕೋಪ ತಣ್ಣಗಾಗುತ್ತೆ, ತೃಪ್ತಿ ಆಗುತ್ತೆ. ನನ್ನ ರೋಷಾಗ್ನಿಯನ್ನ ಅವ್ರ ಮೇಲೆ ಸುರಿದ ಮೇಲೆ ಅವ್ರಿಗೆ ಒಂದು ವಿಷ್ಯ ಚೆನ್ನಾಗಿ ಅರ್ಥ ಆಗುತ್ತೆ. ಯೆಹೋವನಾದ ನಾನು, ನನ್ನನ್ನ ಮಾತ್ರ ಆರಾಧಿಸಬೇಕು ಅಂತ ಬಯಸೋ ದೇವರಾಗಿದ್ದೀನಿ, ಅದಕ್ಕೇ ಇದನ್ನೆಲ್ಲ ಅವ್ರಿಗೆ ಹೇಳಿದ್ದೀನಿ ಅನ್ನೋದನ್ನ ಅವರು ತಿಳ್ಕೊಬೇಕಾಗುತ್ತೆ.” (ಯೆಹೆ. 5:13) ಆದ್ರೆ ಯೆಹೋವನ ಕೋಪ ಸ್ವಲ್ಪ ಸಮಯದ ನಂತ್ರ ಯಾಕೆ ಕಮ್ಮಿಯಾಗಲಿತ್ತು?

13 ಅಪನಂಬಿಗಸ್ತ ಯೆಹೂದ್ಯರ ಜೊತೆಯಲ್ಲಿ ನಂಬಿಗಸ್ತ ಯೆಹೂದ್ಯರನ್ನ ಸಹ ಬಾಬೆಲಿನವರು ಕೈದಿಗಳಾಗಿ ಕರಕೊಂಡು ಹೋಗಿದ್ರು. ತನ್ನ ಜನ್ರಲ್ಲಿ ಕೆಲವ್ರು ಕೈದಿಗಳಾಗಿ ಹೋದ ಮೇಲೆ ಪಶ್ಚಾತ್ತಾಪಪಟ್ಟು ಬದಲಾಗ್ತಾರೆ ಅಂತ ಯೆಹೋವ ದೇವರು ಯೆಹೆಜ್ಕೇಲನ ಮೂಲಕ ಹೇಳಿದ್ನು. ಅವ್ರು ದೇವರ ವಿರುದ್ಧ ದಂಗೆ ಎದ್ದು, ಮಾಡಿದ ನಾಚಿಕೆಗೇಡಿ ಕೆಲಸಗಳ ಬಗ್ಗೆ ಯೋಚಿಸಿ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುತ್ತಾರೆ ಮತ್ತು ಯೆಹೋವ ದೇವ್ರ ಹತ್ರ ಕ್ಷಮೆ ಕೇಳ್ತಾರೆ ಅಂತ ಯೆಹೋವನು ಹೇಳಿದ್ನು. (ಯೆಹೆ. 6:8-10; 12:16) ಯೆಹೆಜ್ಕೇಲನ ತರನೇ ದಾನಿಯೇಲ ಮತ್ತು ಅವನ ಮೂವರು ಸಂಗಡಿಗರು ಕೈದಿಯಾಗಿ ಹೋಗಿದ್ದ ನಂಬಿಗಸ್ತ ಜನರಾಗಿದ್ದರು. ದಾನಿಯೇಲನು ತುಂಬಾ ಸಮಯ ಬದುಕಿದ್ದನು. ಹಾಗಾಗಿ, ಯೆಹೂದ್ಯರು ಕೈದಿಗಳಾಗಿ ಬಾಬೆಲಿಗೆ ಹೋಗಿದ್ದನ್ನ ಮತ್ತು ಅಲ್ಲಿಂದ ಬಿಡುಗಡೆಯಾಗಿ ಬಂದದ್ದನ್ನ ಅವನು ನೋಡಿದನು. ದಾನಿಯೇಲ ಪುಸ್ತಕದ 9 ನೇ ಅಧ್ಯಾಯದಲ್ಲಿ ಇಸ್ರಾಯೇಲ್ಯರ ಪಾಪಗಳಿಗೆ ಪಶ್ಚಾತ್ತಾಪಪಟ್ಟು ಅವನು ಮಾಡಿದ ಪ್ರಾರ್ಥನೆಯು ದಾಖಲಾಗಿದೆ. ಪಶ್ಚಾತ್ತಾಪಪಟ್ಟ ಯೆಹೂದಿ ಕೈದಿಗಳಿಗೆ ಹೇಗನಿಸ್ತಿತ್ತು ಅಂತ ದಾನಿಯೇಲನ ಈ ಪ್ರಾರ್ಥನೆಯಿಂದ ಗೊತ್ತಾಗುತ್ತೆ. ಆ ಸಾವಿರಾರು ಕೈದಿಗಳು ಕ್ಷಮೆಗಾಗಿ ಮತ್ತು ಆತನ ಆಶೀರ್ವಾದಕ್ಕಾಗಿ ಹಾತೊರಿತಾ ಇದ್ದರು. ಇವ್ರೆಲ್ಲರೂ ಬಿಡುಗಡೆ ಮತ್ತು ಶುದ್ಧ ಆರಾಧನೆಯ ಪುನಃಸ್ಥಾಪನೆಯ ಬಗ್ಗೆ ಯೆಹೋವನು ಕೊಟ್ಟ ಮಾತನ್ನು ಯೆಹೆಜ್ಕೇಲನ ಮೂಲಕ ತಿಳ್ಕೊಂಡಾಗ ತುಂಬಾ ಖುಷಿ ಪಟ್ಟಿರಬೇಕಲ್ವಾ?

14. ಯೆಹೋವ ತನ್ನ ಜನರನ್ನ ಬಿಡುಗಡೆ ಮಾಡೋಕೆ ಮುಖ್ಯ ಕಾರಣ ಏನು?

14 ಯೆಹೋವನು ತನ್ನ ಜನರನ್ನು ಬಿಡುಗಡೆಗೊಳಿಸೋಕೆ ಮುಖ್ಯ ಕಾರಣ ಏನು? ಅವ್ರು ಅದನ್ನ ಪಡೆಯೋಕೆ ಅರ್ಹರಾಗಿದ್ರು ಅಂತಲ್ಲ, ಬದಲಿಗೆ ಎಲ್ಲಾ ದೇಶಗಳ ನಡುವೆ ಯೆಹೋವನ ಹೆಸ್ರನ್ನ ಇನ್ನೊಮ್ಮೆ ಪವಿತ್ರಗೊಳಿಸೋದೇ ಆಗಿತ್ತು. (ಯೆಹೆ. 36:22) ಆಗ ವಿಶ್ವದ ರಾಜನಾಗಿರೋ ಯೆಹೋವ ದೇವರ ಮುಂದೆ ಮಾರ್ದೂಕನಾಗಲಿ ಬೇರೆ ಯಾವುದೇ ದುಷ್ಟ ದೇವರುಗಳಾಗಲಿ ಏನೇನೂ ಅಲ್ಲ ಅಂತ ಬಾಬೆಲಿನಲ್ಲಿರೋ ಎಲ್ಲರಿಗೂ ಗೊತ್ತಾಗಲಿತ್ತು. ನಾವೀಗ ಯೆಹೋವನು ಯೆಹೆಜ್ಕೇಲನ ಮೂಲಕ ಕೈದಿಗಳಿಗೆ ಕೊಟ್ಟ 5 ಮಾತುಗಳ ಬಗ್ಗೆ ನೋಡೋಣ. ಮೊದಲು ನಾವು ಯೆಹೋವನು ಕೊಟ್ಟ ಪ್ರತಿಯೊಂದು ಮಾತಿಂದ ನಂಬಿಗಸ್ತ ಜನ್ರಿಗೆ ಏನು ಪ್ರಯೋಜ್ನ ಆಯ್ತು ಅಂತ ನೋಡೋಣ. ಆಮೇಲೆ ನಮ್ಮ ಕಾಲದಲ್ಲಿ ಈ ಭವಿಷ್ಯವಾಣಿಗಳು ಸಂಪೂರ್ಣವಾಗಿ ಹೇಗೆ ನೆರವೇರಿದವು ಅಂತ ತಿಳಿಯೋಣ.

15. ಯೆರೂಸಲೇಮಿಗೆ ವಾಪಸ್‌ ಬಂದವ್ರ ಆರಾಧನೆಯಲ್ಲಿ ಯಾವ ಬದಲಾವಣೆ ಆಗಲಿತ್ತು?

15 ಮೊದಲನೇ ಮಾತು. ವಿಗ್ರಹಾರಾಧನೆಯಾಗಲಿ ಸುಳ್ಳುಧರ್ಮಕ್ಕೆ ಸಂಬಂಧಪಟ್ಟ ಯಾವುದೇ ಆಚರಣೆಯಾಗಲಿ ಇರುವುದಿಲ್ಲ. (ಯೆಹೆಜ್ಕೇಲ 11:18; 12:24 ಓದಿ.) 5 ನೇ ಅಧ್ಯಾಯದಲ್ಲಿ ನೋಡಿದಂತೆ ಯೆರೂಸಲೇಮ್‌ ಮತ್ತು ಅದ್ರ ದೇವಾಲಯ ಭ್ರಷ್ಟವಾಗಿತ್ತು. ಯಾಕಂದ್ರೆ ಅಲ್ಲಿ ಸುಳ್ಳು ಧರ್ಮದ ಆಚರಣೆಗಳು ಮತ್ತು ವಿಗ್ರಹಾರಾಧನೆ ತುಂಬಿ ತುಳುಕ್ತಿತ್ತು. ಹಾಗಾಗಿ ಅಲ್ಲಿನ ಜನ್ರೆಲ್ಲ ಭ್ರಷ್ಟರಾಗಿ ಯೆಹೋವನ ಆರಾಧನೆಯನ್ನೇ ಬಿಟ್ಟುಬಿಟ್ಟಿದ್ರು. ಯೆಹೂದಿ ಕೈದಿಗಳು ಮುಂದೊಂದು ದಿನ ಮತ್ತೆ ಶುದ್ಧ ಆರಾಧನೆಯನ್ನು ಮಾಡ್ತಾರೆ ಅಂತ ಯೆಹೋವನು ಯೆಹೆಜ್ಕೇಲನ ಮೂಲಕ ಮುಂತಿಳಿಸಿದನು. ಹೀಗೆ ಶುದ್ಧ ಆರಾಧನೆ ಪುನಃಸ್ಥಾಪನೆಯಾದಾಗಲೇ ಬೇರೆಲ್ಲಾ ಆಶೀರ್ವಾದಗಳೂ ಸಿಗಲಿದ್ದವು.

16. ತನ್ನ ಜನರ ದೇಶದ ಬಗ್ಗೆ ಯೆಹೋವನು ಯಾವ ಮಾತನ್ನ ಕೊಟ್ಟನು?

16 ಎರಡನೇ ಮಾತು. ಇಸ್ರಾಯೇಲ್ಯರು ತಮ್ಮ ಸ್ವಂತ ದೇಶಕ್ಕೆ ವಾಪಸ್ಸು ಹೋಗ್ತಾರೆ. “ನಿಮಗೆ ಇಸ್ರಾಯೇಲ್‌ ದೇಶವನ್ನ ಕೊಡ್ತೀನಿ” ಅಂತ ಯೆಹೋವನು ಕೈದಿಗಳಿಗೆ ಹೇಳಿದ್ದನು. (ಯೆಹೆ. 11:17) ಈ ಮಾತು ಯೆಹೂದ್ಯರಿಗೆ ತುಂಬಾ ಪ್ರಾಮುಖ್ಯವಾಗಿತ್ತು. ಯಾಕಂದ್ರೆ ಬಾಬೆಲಿನವ್ರು ಅವ್ರನ್ನು ತುಂಬಾ ಗೇಲಿ ಮಾಡ್ತಿದ್ರು. ಮಾತ್ರವಲ್ಲ ತಮ್ಮ ಸ್ವಂತ ಊರಿಗೆ ಮರಳಿ ಹೋಗ್ತಾರೆ ಅನ್ನೋ ಭರವಸೆಯನ್ನ ಯಾವತ್ತೂ ಕೊಡ್ತಿರಲಿಲ್ಲ. (ಯೆಶಾ. 14:4, 17) ಆದ್ರೆ ಯೆಹೋವ ದೇವರು ಇನ್ನೂ ಕೆಲವು ಒಳ್ಳೇ ವಿಷ್ಯಗಳ ಬಗ್ಗೆ ತಿಳಿಸಿದ್ದನು. ಇಸ್ರಾಯೇಲ್ಯರು ಯೆಹೋವ ದೇವ್ರಿಗೆ ಎಷ್ಟರವರೆಗೆ ನಂಬಿಗಸ್ತರಾಗಿ ಇರುತ್ತಾರೋ ಅಲ್ಲಿಯವರೆಗೂ ಅವ್ರಿಗೆ ಒಳ್ಳೇ ಫಸಲು, ಬೆಳೆ ಸಿಗಲಿತ್ತು. ಹೀಗೆ ಅವ್ರಿಗೆ ಯಾವುದಕ್ಕೂ ಕೊರತೆ ಆಗ್ತಿರಲಿಲ್ಲ. ಅವ್ರಿಗೆ ಮುಂದೆಂದೂ ಬರಗಾಲದ ಅವಮಾನ ಆಗ್ತಿರಲಿಲ್ಲ.—ಯೆಹೆಜ್ಕೇಲ 36:30 ಓದಿ.

17. ಯೆಹೋವನಿಗೆ ಕೊಡಲಾಗೋ ಅರ್ಪಣೆಗಳ ಬಗ್ಗೆ ಏನು ಹೇಳಲಾಯ್ತು?

17 ಮೂರನೇ ಮಾತು. ಯೆಹೋವನ ಯಜ್ಞವೇದಿಯ ಮೇಲೆ ಪುನಃ ಬಲಿಗಳನ್ನು ಅರ್ಪಿಸಲಾಗುತ್ತೆ. ನಾವು ಈ ಪುಸ್ತಕದ 2 ನೇ ಅಧ್ಯಾಯದಲ್ಲಿ ನೋಡಿದ ಹಾಗೆ ಯೆಹೋವನು ಕೊಟ್ಟ ನಿಯಮದ ಪ್ರಕಾರ ಬಲಿಗಳನ್ನು ಮತ್ತು ಅರ್ಪಣೆಗಳನ್ನ ಕೊಡೋದು ಶುದ್ಧ ಆರಾಧನೆಯ ಮುಖ್ಯ ಭಾಗವಾಗಿತ್ತು. ಬಿಡುಗಡೆಯಾಗಿ ವಾಪಸ್‌ ಬಂದ ಯೆಹೂದ್ಯರು ಎಲ್ಲಿವರೆಗೆ ಯೆಹೋವನ ಮಾತನ್ನ ಕೇಳಿ ಆತನೊಬ್ಬನನ್ನೇ ಆರಾಧಿಸ್ತಾರೋ ಅಲ್ಲಿವರೆಗೆ ಯೆಹೋವನು ಅವರ ಅರ್ಪಣೆಗಳನ್ನು ಸ್ವೀಕರಿಸಲಿದ್ದನು. ಹೀಗೆ ಜನ್ರು ತಮ್ಮ ಪಾಪಗಳಿಗೆ ಪ್ರಾಯಶ್ಚಿತ್ತ ಪಡಿಬಹುದಿತ್ತು ಮತ್ತು ದೇವರಿಗೆ ಆಪ್ತರಾಗಿ ಇರಬಹುದಿತ್ತು. ಯೆಹೋವನು ಅವರಿಗೆ ಹೀಗೆ ಮಾತು ಕೊಟ್ಟನು: “ಇಸ್ರಾಯೇಲ್‌ ದೇಶದ ದೊಡ್ಡ ಬೆಟ್ಟದ ಮೇಲೆ ಇಸ್ರಾಯೇಲ್ಯರೆಲ್ಲ ನನ್ನ ಸೇವೆ ಮಾಡ್ತಾರೆ. ಅಲ್ಲಿ ನಿಮ್ಮಿಂದ ನನಗೆ ಖುಷಿ ಆಗುತ್ತೆ. ನಾನು ಕಾಣಿಕೆಗಳನ್ನ, ಒಳ್ಳೇ ಅರ್ಪಣೆಗಳನ್ನ, ಎಲ್ಲ ಪವಿತ್ರ ಅರ್ಪಣೆಗಳನ್ನ ನಿಮ್ಮಿಂದ ತಗೊತೀನಿ.” (ಯೆಹೆ. 20:40) ನಿಜವಾಗಲೂ ಶುದ್ಧ ಆರಾಧನೆ ಪುನಃಸ್ಥಾಪನೆಯಾಗಲಿತ್ತು ಮತ್ತು ಇದ್ರಿಂದ ದೇವಜನರಿಗೆ ಅನೇಕ ಆಶೀರ್ವಾದಗಳು ಸಿಗಲಿದ್ದವು.

18. ಯೆಹೋವನು ತನ್ನ ಜನರನ್ನ ಹೇಗೆ ನೋಡಿಕೊಳ್ಳಲಿದ್ದನು?

18 ನಾಲ್ಕನೇ ಮಾತು. ಕೆಟ್ಟ ಕುರುಬರನ್ನ ತೆಗೆದುಹಾಕಲಾಗುತ್ತೆ. ದೇವಜನರು ತಪ್ಪು ಮಾಡಲಿಕ್ಕೆ ಕಾರಣ ಅವ್ರ ಮೇಲೆ ಅಧಿಕಾರ ಮಾಡ್ತಿದ್ದವರು ಭ್ರಷ್ಟರಾಗಿದ್ದೇ ಆಗಿತ್ತು. ಆದ್ರೆ ಇನ್ಮುಂದೆ ಆ ತರ ಆಗಲ್ಲ ಅಂತ ಯೆಹೋವನು ಮಾತು ಕೊಟ್ಟಿದ್ದನು. ಯೆಹೋವನು ಅಂಥ ಕೆಟ್ಟ ಕುರುಬರ ಬಗ್ಗೆ ಹೀಗೆ ಹೇಳಿದನು: “ನನ್ನ ಕುರಿಗಳನ್ನ ಮೇಯಿಸೋ ಕೆಲಸದಿಂದ ಅವ್ರನ್ನ ತೆಗೆದುಹಾಕ್ತೀನಿ. . . . ನನ್ನ ಕುರಿಗಳು ಅವ್ರ ಬಾಯಿಗೆ ತುತ್ತಾಗದ ಹಾಗೆ ಕಾಪಾಡ್ತೀನಿ.” ಆದ್ರೆ ನಂಬಿಗಸ್ತ ಸೇವಕರ ಬಗ್ಗೆ ಆತನು ಹೀಗೆ ಹೇಳಿದನು: “ನಾನು ನನ್ನ ಕುರಿಗಳ ಆರೈಕೆ ಮಾಡ್ತೀನಿ.” (ಯೆಹೆ. 34:10, 12) ಆತನು ಅದನ್ನು ಹೇಗೆ ಮಾಡಲಿದ್ದನು? ತನ್ನ ನಿಷ್ಠಾವಂತ ನಂಬಿಗಸ್ತ ಪುರುಷರನ್ನ ಕುರುಬರನ್ನಾಗಿ ನೇಮಿಸುವ ಮೂಲಕ.

19. ಐಕ್ಯತೆ ಬಗ್ಗೆ ಯೆಹೋವನು ಏನಂತ ಮಾತು ಕೊಟ್ಟನು?

19 ಐದನೇ ಮಾತು. ಯೆಹೋವನ ಆರಾಧಕರು ಐಕ್ಯರಾಗಿರುತ್ತಾರೆ. ಇಸ್ರಾಯೇಲ್ಯರು ಬಂಧಿಗಳಾಗಿ ಹೋಗೋದಕ್ಕೆ ಮುಂಚೆ ಅವ್ರ ಮಧ್ಯೆ ಒಗ್ಗಟ್ಟು ಇರಲಿಲ್ಲ. ಇದನ್ನ ನೋಡಿದಾಗ ಯೆಹೋವನ ಶುದ್ಧ ಆರಾಧಕರಿಗೆ ತುಂಬಾ ಬೇಸರವಾಗ್ತಿತ್ತು. ಕೆಟ್ಟ ಪ್ರವಾದಿಗಳ ಮತ್ತು ಭ್ರಷ್ಟ ಅಧಿಕಾರಿಗಳ ಮಾತಿಗೆ ಮರುಳಾಗಿ ಯೆಹೋವನನ್ನು ಪ್ರತಿನಿಧಿಸುವ ಪ್ರವಾದಿಗಳ ವಿರುದ್ಧ ಜನ ದಂಗೆ ಏಳ್ತಿದ್ರು. ಹೀಗೆ ಅವ್ರ ಮಧ್ಯೆ ಒಡಕುಗಳು ಹುಟ್ಟಿ ಅವ್ರು ಬೇರೆ ಬೇರೆ ಗುಂಪುಗಳಾದ್ರು. ಆದ್ದರಿಂದ ಯೆಹೆಜ್ಕೇಲ ಶುದ್ಧ ಆರಾಧನೆಯ ಬಗ್ಗೆ ಹೇಳಿದ ಈ ಮಾತನ್ನ ಕೇಳಿ ಜನ್ರಿಗೆ ತುಂಬ ಖುಷಿಯಾಗಿರಬೇಕು: “ನಾನು ಅವ್ರಿಗೆ ಒಂದೇ ಮನಸ್ಸನ್ನ ಕೊಡ್ತೀನಿ. ಅವ್ರಿಗೆ ಹೊಸ ಸ್ವಭಾವವನ್ನ ಕೊಡ್ತೀನಿ.” (ಯೆಹೆ. 11:19) ಇಸ್ರಾಯೇಲಿಗೆ ವಾಪಸ್‌ ಹೋಗುವ ಯೆಹೂದ್ಯರು ಯೆಹೋವ ದೇವರಿಗೆ ಆಪ್ತರಾಗಿದ್ದು ಒಬ್ಬರಿಗೊಬ್ಬರು ಐಕ್ಯವಾಗಿದ್ದರೆ ಯಾರಿಗೂ ಅವ್ರನ್ನ ಸೋಲಿಸೋಕೆ ಆಗ್ತಿರಲಿಲ್ಲ. ಹೀಗೆ ಅವ್ರು ಐಕ್ಯರಾಗಿದ್ದರೆ ಯೆಹೋವ ದೇವ್ರ ಹೆಸ್ರಿಗೆ ಕಳಂಕವನ್ನಲ್ಲ, ಮಹಿಮೆಯನ್ನ ತರಲಿದ್ದರು.

20, 21. ಯೆಹೋವನು ಕೊಟ್ಟ ಮಾತು ಯೆಹೂದ್ಯರು ವಾಪಸ್‌ ಬಂದಾಗ ಹೇಗೆ ನೆರವೇರಿತು?

20 ಯೆಹೋವನು ಕೊಟ್ಟ ಆ ಐದು ಮಾತುಗಳು ಯೆಹೂದ್ಯರು ಬಾಬೆಲಿನಿಂದ ವಾಪಸ್‌ ಬಂದಾಗ ನೆರವೇರಿದ್ವಾ? ಖಂಡಿತ. ಹಿಂದೆ ಯೆಹೋಶುವನು ಯೆಹೋವನು ಕೊಟ್ಟ ಮಾತಿನ ಬಗ್ಗೆ ಹೇಳಿದ್ದನ್ನ ನೆನಪು ಮಾಡ್ಕೊಳ್ಳಿ. “ನಿಮ್ಮ ದೇವರಾದ ಯೆಹೋವ ನಿಮಗೆ ಕೊಟ್ಟ ಮಾತಲ್ಲಿ ಒಂದೂ ಸುಳ್ಳಾಗಲಿಲ್ಲ . . . ಅದೆಲ್ಲ ನಿಮಗೋಸ್ಕರನೇ ನಿಜ ಆದ್ವು. ಅದ್ರಲ್ಲಿ ಒಂದೂ ತಪ್ಪಲಿಲ್ಲ” ಅಂತ ಅವನು ಹೇಳಿದನು. (ಯೆಹೋ. 23:14) ಯೆಹೋವನು ಯೆಹೋಶುವನ ಸಮಯದಲ್ಲಿ ತನ್ನ ಮಾತನ್ನ ನೆರವೇರಿಸಿದ ತರನೇ ಯೆಹೂದ್ಯರು ಬಾಬೆಲಿನಿಂದ ವಾಪಸ್‌ ಬಂದಾಗಲೂ ತನ್ನ ಮಾತನ್ನು ಚಾಚೂತಪ್ಪದೇ ನೆರವೇರಿಸಲಿದ್ದನು.

21 ಯೆಹೂದ್ಯರು ವಿಗ್ರಹಾರಾಧನೆಯನ್ನ, ಸುಳ್ಳುಧರ್ಮದ ಎಲ್ಲಾ ಆಚರಣೆಗಳನ್ನ ಬಿಟ್ಟುಬಿಟ್ಟರು, ಯೆಹೋವ ದೇವರಿಗೆ ಆಪ್ತರಾದ್ರು. ಇಸ್ರಾಯೇಲ್ಯರು ತಿರುಗಿ ತಮ್ಮ ಸ್ವಂತ ದೇಶಕ್ಕೆ ಹೋದ್ರು. ಅಲ್ಲಿ ಅವ್ರು ಬೆಳೆಗಳನ್ನ ಬೆಳೆದು ತುಂಬಾ ಖುಷಿ ಖುಷಿಯಾಗಿ ಜೀವನ ಮಾಡಿದ್ರು. ಅವ್ರು ಮಾಡಿದ ಮೊದಲ ಕೆಲ್ಸ ಏನಂದ್ರೆ ಯೆಹೋವ ದೇವ್ರಿಗಾಗಿ ಒಂದು ಯಜ್ಞವೇದಿಯನ್ನು ಕಟ್ಟಿ ಆತನು ಇಷ್ಟಪಡೋ ರೀತಿಯಲ್ಲಿ ಬಲಿಗಳನ್ನು ಅರ್ಪಿಸಿದ್ರು. (ಎಜ್ರ 3:2-6) ಯೆಹೋವ ದೇವರು ನಂಬಿಗಸ್ತ ಪುರುಷರನ್ನ ಕುರುಬರಾಗಿ ನೇಮಿಸಿದ್ರು. ಪುರೋಹಿತ, ನಕಲುಗಾರ ಆಗಿದ್ದ ಎಜ್ರ, ರಾಜ್ಯಪಾಲ ನೆಹೆಮೀಯ ಮತ್ತು ಜೆರುಬ್ಬಾಬೆಲ, ಮಹಾ ಪುರೋಹಿತ ಯೆಹೋಶುವ ಮತ್ತು ಧೀರ ಪ್ರವಾದಿಗಳಾದ ಹಗ್ಗಾಯ, ಜೆಕರ್ಯ ಮತ್ತು ಮಲಾಕಿ ಇವ್ರಲ್ಲಿ ಕೆಲವ್ರು. ಜನರು ಯೆಹೋವನ ಮಾತನ್ನ ಎಲ್ಲಿವರೆಗೆ ಕೇಳಿದ್ರೋ, ಆತನ ಮಾರ್ಗದರ್ಶನದ ಪ್ರಕಾರ ನಡೆದ್ರೋ ಅಲ್ಲಿ ತನಕ ಅವ್ರು ಐಕ್ಯರಾಗಿ ಇದ್ರು. ಇಂಥ ಒಂದು ಐಕ್ಯತೆನ ಅವ್ರು ತಮ್ಮ ಜೀವಮಾನದಲ್ಲೇ ಅನುಭವಿಸಿರಲಿಲ್ಲ.—ಯೆಶಾ. 61:1-4; ಯೆರೆಮೀಯ 3:15 ಓದಿ.

22. ಪುನಃಸ್ಥಾಪನೆಯ ಭವಿಷ್ಯವಾಣಿಗಳ ಆರಂಭದ ನೆರವೇರಿಕೆಯು ಮುಂದೆ ನಡೆಯಲಿದ್ದ ಮಹತ್ತಾದ ವಿಷಯಗಳ ಕಿರುನೋಟ ಅಂತ ಹೇಗೆ ಹೇಳಬಹುದು?

22 ಪುನಃಸ್ಥಾಪನೆಯ ಬಗ್ಗೆ ಯೆಹೋವ ದೇವರು ಹೇಳಿದ ಮಾತು ನೆರವೇರಿದ್ದನ್ನ ಕಂಡಾಗ ಯೆಹೂದ್ಯರಿಗೆ ತುಂಬಾ ಉತ್ತೇಜನ ಸಿಕ್ಕಿತು ಅನ್ನೋದ್ರಲ್ಲಿ ಸಂಶಯನೇ ಇಲ್ಲ. ಆದ್ರೆ ಆ ನೆರವೇರಿಕೆ ಮುಂದೆ ನಡೆಯಲಿಕ್ಕಿರುವ ಒಂದು ಮಹತ್ತಾದ ನೆರವೇರಿಕೆಯ ಕಿರುನೋಟವಾಗಿತ್ತು. ಅದು ನಮಗೆ ಹೇಗೆ ಗೊತ್ತು? ಯೆಹೂದ್ಯರು ದೇವರಿಗೆ ಎಲ್ಲಿ ವರೆಗೆ ನಂಬಿಗಸ್ತರಾಗಿ ಇರ್ತಾರೋ ಅಲ್ಲಿವರೆಗೆ ಮಾತ್ರ ಯೆಹೋವ ದೇವರು ತನ್ನ ಮಾತನ್ನು ನೆರವೇರಿಸಲಿದ್ದನು ಅನ್ನೋದನ್ನ ಮರೆಯಬೇಡಿ. ಯೆಹೂದ್ಯರು ಸ್ವಲ್ಪ ಸಮಯದಲ್ಲೇ ಯೆಹೋವ ದೇವರಿಗೆ ಅವಿಧೇಯರಾದ್ರು, ದೇವ್ರ ವಿರುದ್ಧ ದಂಗೆ ಎದ್ರು. ಆದರೆ ಯೆಹೋಶುವ ಹೇಳಿದ ಹಾಗೆ ಯೆಹೋವ ದೇವರ ಮಾತು ಯಾವಾಗಲೂ ತಪ್ಪದೇ ನೆರವೇರಬೇಕಲ್ವಾ? ಹಾಗಾದ್ರೆ ಯೆಹೋವ ದೇವರ ಈ ಮಾತುಗಳ ಮಹತ್ತಾದ ನೆರವೇರಿಕೆ ಮುಂದೆ ಬರಲಿದೆ ಅಂತ ನಂಬಬಹುದು. ನಾವೀಗ ಆ ಮಹತ್ತಾದ ನೆರವೇರಿಕೆ ಬಗ್ಗೆ ನೋಡೋಣ.

‘ನಿಮ್ಮಿಂದ ನನಗೆ ಖುಷಿ ಆಗುತ್ತೆ’

23, 24. “ಎಲ್ಲವನ್ನ ಸರಿಮಾಡೋ ಸಮಯ” ಯಾವಾಗ ಮತ್ತು ಹೇಗೆ ಶುರುವಾಯ್ತು?

23 ಇಸವಿ 1914 ರಿಂದ ಈ ದುಷ್ಟ ಲೋಕದ ಕೊನೆ ದಿನಗಳು ಶುರು ಆಗಿವೆ ಅಂತ ನಾವು ಬೈಬಲಿನಿಂದ ತಿಳ್ಕೊಂಡಿದ್ದೇವೆ. ಆದ್ರೆ ಈ ಲೋಕ ನಾಶ ಆಗುತ್ತೆ ಅಂತ ನಮ್ಗೇನು ದುಃಖ ಇಲ್ಲ. ಬೈಬಲ್‌ ಹೇಳೋ ಪ್ರಕಾರ 1914 ರಿಂದ ಒಂದು ರೋಮಾಂಚಕ ಸಮಯ ಅಂದ್ರೆ “ಎಲ್ಲವನ್ನ ಸರಿಮಾಡೋ ಸಮಯ” ಶುರು ಆಗಿದೆ. (ಅ. ಕಾ. 3:21) ಇದು ನಮಗೆ ಹೇಗೆ ಗೊತ್ತು? 1914 ರಲ್ಲಿ ಸ್ವರ್ಗದಲ್ಲಿ ಏನಾಯ್ತು ಅಂತ ಸ್ವಲ್ಪ ಯೋಚಿಸಿ. ಯೆಹೋವ ದೇವ್ರು ಯೇಸುವನ್ನು ರಾಜನಾಗಿ ನೇಮಿಸಿದ್ರು. ಇದ್ರಿಂದಾಗಿ ಪುನಃಸ್ಥಾಪನೆಯ ಕೆಲ್ಸ ಶುರು ಆಯ್ತು. ಅದು ಹೇಗೆ? ಒಂದು ವಿಷ್ಯ ನೆನಪು ಮಾಡ್ಕೊಳ್ಳಿ. ಶಾಶ್ವತವಾಗಿ ಆಳುವ ಹಕ್ಕನ್ನ ದಾವೀದನ ವಂಶದಲ್ಲಿ ಬರೋರಿಗೆ ಕೊಡಲಾಗುತ್ತೆ ಅಂತ ಯೆಹೋವ ದೇವ್ರು ದಾವೀದನಿಗೆ ಮಾತು ಕೊಟ್ಟಿದ್ದನು. (1 ಪೂರ್ವ. 17:11-14) ಆದ್ರೆ ಕ್ರಿ.ಪೂ. 607 ರಲ್ಲಿ ಯೆರೂಸಲೇಮ್‌ ನಾಶ ಆದಾಗ ದಾವೀದನ ವಂಶದವರು ಆಳ್ವಿಕೆ ಮಾಡೋದು ನಿಂತು ಹೋಗಿತ್ತು.

24 ದಾವೀದನ ವಂಶದಲ್ಲಿ ‘ಮನುಷ್ಯಕುಮಾರನಾದ’ ಯೇಸು ಹುಟ್ಟಿದ. ಹಾಗಾಗಿ ಅವನಿಗೆ ದಾವೀದನ ಸಿಂಹಾಸನದಲ್ಲಿ ಕೂತುಕೊಳ್ಳುವ ಹಕ್ಕಿತ್ತು. (ಮತ್ತಾ. 1:1; 16:13-16; ಲೂಕ 1:32, 33) 1914 ರಲ್ಲಿ ಯೆಹೋವ ದೇವರು ಯೇಸುವನ್ನು “ಸ್ವರ್ಗೀಯ ಸಿಂಹಾಸನದಲ್ಲಿ ಕೂರಿಸಿದಾಗ” ಎಲ್ಲವನ್ನು ಸರಿ ಮಾಡೋ ಸಮಯ ಅಥವಾ ಪುನಃಸ್ಥಾಪನೆಯ ಸಮಯ ಶುರು ಆಯ್ತು. ಹೀಗೆ ಪುನಃಸ್ಥಾಪನೆ ಮಾಡೋಕೆ ಈ ಪರಿಪೂರ್ಣನಾದ ರಾಜನನ್ನ ಯೆಹೋವ ದೇವ್ರು ಉಪಯೋಗಿಸಿದನು.

25, 26. (ಎ) ಯೆಹೋವನ ಜನರಿಗೆ ಮಹಾ ಬಾಬೆಲಿನಿಂದ ಯಾವಾಗ ಬಿಡುಗಡೆ ಸಿಕ್ತು? ಇದು ನಮಗೆ ಹೇಗೆ ಗೊತ್ತು? (“1919 ರಲ್ಲೇ ಯಾಕೆ?” ಅನ್ನೋ ಚೌಕ ಸಹ ನೋಡಿ.) (ಬಿ) 1919 ರಿಂದ ಏನಾಗೋಕೆ ಶುರುವಾಯ್ತು?

25 ರಾಜನಾಗಿ ಅಧಿಕಾರಕ್ಕೆ ಬಂದ ಯೇಸು ತನ್ನ ತಂದೆ ಜೊತೆ ಸೇರಿ ಭೂಮಿಯಲ್ಲಿರುವ ಶುದ್ಧ ಆರಾಧನೆಯ ಏರ್ಪಾಡುಗಳನ್ನು ಪರೀಕ್ಷಿಸಿದನು. (ಮಲಾ. 3:1-5) ಗೋದಿ ಮತ್ತು ಕಳೆಯ ಉದಾಹರಣೆಯಲ್ಲಿ ಯೇಸು ಹೇಳಿದ ಹಾಗೆ, ಅಲ್ಲಿವರೆಗೆ ಅಭಿಷಿಕ್ತರು ಯಾರು, ಸುಳ್ಳು ಕ್ರೈಸ್ತರು ಯಾರು ಅಂತ ಗುರುತಿಸುವುದು ಸುಲಭವಾಗಿರಲಿಲ್ಲ. * ಆದ್ರೆ 1914 ರಲ್ಲಿ ಸುಗ್ಗಿ ಕಾಲ ಶುರು ಆಯ್ತು. ಆಗ ಅವ್ರ ಮಧ್ಯೆ ಇರೋ ವ್ಯತ್ಯಾಸ ತುಂಬ ಸ್ಪಷ್ಟವಾಗಿ ಕಾಣಿಸ್ತು. ಯಾಕಂದ್ರೆ 1914ಕ್ಕೂ ಹತ್ತಾರು ವರ್ಷಗಳ ಮುಂಚಿನಿಂದ ನಂಬಿಗಸ್ತರಾದ ಬೈಬಲ್‌ ವಿದ್ಯಾರ್ಥಿಗಳು ಸುಳ್ಳು ಕ್ರೈಸ್ತ ಧರ್ಮದ ತಪ್ಪುಗಳನ್ನ ಒಂದೊಂದಾಗಿ ಬಯಲುಪಡಿಸಿದ್ರು ಮತ್ತು ಅವ್ರು ಸುಳ್ಳು ಧರ್ಮದ ಆಚಾರವಿಚಾರಗಳನ್ನ ಒಂದೊಂದಾಗಿ ಬಿಟ್ಟುಬಿಡೋಕೆ ಶುರು ಮಾಡಿದ್ರು. ಹೀಗೆ ಅವ್ರು ಸುಳ್ಳು ಧರ್ಮದಿಂದ ಹೊರಗೆ ಬರೋಕೆ ಶುರು ಮಾಡಿದ್ರು. ಕೊನೆಗೂ ಸಂಪೂರ್ಣವಾಗಿ ಶುದ್ಧ ಆರಾಧನೆಯನ್ನ ಪುನಃಸ್ಥಾಪಿಸುವ ಯೆಹೋವನ ಸಮಯ ಬಂತು. 1914 ರ ಸುಗ್ಗಿ ಕಾಲ ಶುರು ಆಗಿ ಸ್ವಲ್ಪನೇ ಸಮಯದಲ್ಲಿ ಅಂದ್ರೆ 1919 ರ ಆರಂಭದಲ್ಲಿ ದೇವ್ರ ಜನರು ಮಹಾ ಬಾಬೆಲಿನ ದಾಸತ್ವದಿಂದ ಪೂರ್ಣವಾಗಿ ಹೊರಗೆ ಬಂದ್ರು. (ಮತ್ತಾ. 13:30) ಈ ರೀತಿ ಅವ್ರ ಬಂಧಿವಾಸ ಕೊನೆಯಾಯ್ತು.

26 ಪುನಃಸ್ಥಾಪನೆಯ ಬಗ್ಗೆ ಯೆಹೆಜ್ಕೇಲನು ಹೇಳಿದ ಭವಿಷ್ಯವಾಣಿ ಹಿಂದೆಂದಿಗಿಂತಲೂ ಮಹತ್ವದ ಪ್ರಮಾಣದಲ್ಲಿ ನೆರವೇರಲಿತ್ತು. ನಾವೀಗ ಯೆಹೋವ ದೇವ್ರು ಕೊಟ್ಟ ಐದು ಭವಿಷ್ಯವಾಣಿಗಳು ಹೇಗೆ ಮಹತ್ತಾದ ರೀತಿಯಲ್ಲಿ ನೆರವೇರಿವೆ ಅನ್ನೋದನ್ನ ನೋಡೋಣ.

27. ದೇವರು ತನ್ನ ಜನರನ್ನ ಹೇಗೆ ಶುದ್ಧ ಮಾಡಿದನು?

27 ಮೊದಲನೇ ಮಾತು. ವಿಗ್ರಹಾರಾಧನೆ ಮತ್ತು ಸುಳ್ಳು ಆರಾಧನೆಗೆ ಸಂಬಂಧಪಟ್ಟ ಎಲ್ಲಾ ಕೆಟ್ಟ ಆಚಾರಗಳು ನಿಂತು ಹೋಗುತ್ತವೆ. 19 ನೇ ಶತಮಾನದ ಕೊನೆಯಲ್ಲಿ ಮತ್ತು 20 ನೇ ಶತಮಾನದ ಆರಂಭದಲ್ಲಿ ಕೆಲವು ನಂಬಿಗಸ್ತ ಕ್ರೈಸ್ತರು ಒಟ್ಟಾಗಿ ಬೈಬಲನ್ನ ಕಲಿಯೋಕೆ ಶುರು ಮಾಡಿದ್ರು. ಬೈಬಲಿಂದ ಕಲಿತ ಸತ್ಯಗಳಿಗನುಸಾರ ಅವ್ರು ಸುಳ್ಳು ಧರ್ಮಕ್ಕೆ ಸಂಬಂಧಿಸಿದ ಆಚಾರಗಳನ್ನು ಬಿಟ್ಟುಬಿಟ್ಟರು. ಒಬ್ಬ ವ್ಯಕ್ತಿ ಸತ್ತು ಹೋದ ಮೇಲೆ ಅವನ ಆತ್ಮ ಅಮರವಾಗಿ ಉಳಿಯುತ್ತೆ ಅನ್ನೋ ನಂಬಿಕೆ, ತ್ರಿಯೇಕದ ನಂಬಿಕೆ, ನರಕದ ಬೋಧನೆಗಳು ಇವೆಲ್ಲಾ ಬೈಬಲಿನಲ್ಲಿ ಇಲ್ಲದಂಥ ವಿಷ್ಯಗಳು, ಸುಳ್ಳುಧರ್ಮದಿಂದ ಬಂದವುಗಳು ಅಂತ ಕಂಡುಹಿಡಿದ್ರು. ಆರಾಧನೆಯಲ್ಲಿ ಮೂರ್ತಿಗಳನ್ನು ಉಪಯೋಗಿಸೋದು ವಿಗ್ರಹಾರಾಧನೆ ಅಂತ ಅವ್ರಿಗೆ ಗೊತ್ತಾಯ್ತು. ತದನಂತ್ರ ಆರಾಧನೆಯಲ್ಲಿ ಶಿಲುಬೆಯನ್ನು ಉಪಯೋಗಿಸೋದು ಸಹ ವಿಗ್ರಹಾರಾಧನೆ ಅಂತ ಗೊತ್ತಾಯ್ತು.—ಯೆಹೆ. 14:6.

28. ಯೆಹೋವನ ಜನರು ಯಾವ ಅರ್ಥದಲ್ಲಿ ಸ್ವಂತ ದೇಶಕ್ಕೆ ವಾಪಸ್‌ ಬಂದ್ರು?

28 ಎರಡನೇ ಮಾತು. ದೇವಜನರನ್ನ ಸಾಂಕೇತಿಕ ಪರದೈಸಿಗೆ ವಾಪಸ್‌ ಕರಕೊಂಡು ಬರಲಾಗುತ್ತೆ. ಸುಳ್ಳು ಧರ್ಮದಿಂದ ಹೊರಗೆ ಬಂದಾಗ ನಂಬಿಗಸ್ತ ಕ್ರೈಸ್ತರು ಒಂದು ಸಾಂಕೇತಿಕ ಪರದೈಸಿಗೆ ಬಂದ ಹಾಗಾಯ್ತು. ಈ ಸಾಂಕೇತಿಕ ಪರದೈಸ್‌ ಅಂದ್ರೇನು? ಅದು ಯೆಹೋವ ದೇವರ ಆಶೀರ್ವಾದ ಇರುವ, ದೇವರೊಟ್ಟಿಗೆ ಒಂದು ಒಳ್ಳೇ ನಿಲುವಿರುವ ಪರಿಸ್ಥಿತಿಯಾಗಿದೆ. ಅವ್ರಿಗೆ ಮುಂದೆ ಎಂದಿಗೂ ಆಧ್ಯಾತ್ಮಿಕ ವಿಷಯಗಳಿಗೆ ಯಾವುದೇ ಕೊರತೆ ಇರಲ್ಲ. (ಯೆಹೆಜ್ಕೇಲ 34:13, 14 ಓದಿ.) ಯೆಹೋವ ದೇವರ ಆಶೀರ್ವಾದದಿಂದ ಈ ಪರದೈಸಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಆಧ್ಯಾತ್ಮಿಕ ಆಹಾರ ಉಕ್ಕಿ ಹರಿಯುತ್ತಿದೆ. ಅದ್ರ ಬಗ್ಗೆ ನಾವು ಈ ಪುಸ್ತಕದ 19 ನೇ ಅಧ್ಯಾಯದಲ್ಲಿ ನೋಡಲಿದ್ದೇವೆ.—ಯೆಹೆ. 11:17.

29. 1919 ರಿಂದ ಸಾರೋ ಕೆಲಸ ಹೇಗೆ ಹೆಚ್ಚಾಯ್ತು?

29 ಮೂರನೇ ಮಾತು. ಯೆಹೋವನ ಯಜ್ಞವೇದಿಯ ಮೇಲೆ ಪುನಃ ಬಲಿಗಳನ್ನು ಅರ್ಪಿಸಲಾಗುತ್ತೆ. ಯೆಹೋವನಿಗೆ ಪ್ರಾಣಿ ಬಲಿಗಳನ್ನಲ್ಲ, ಸ್ತುತಿ ಅನ್ನೋ ಬಲಿಗಳನ್ನ ಕೊಡಬೇಕು ಅಂತ ಆರಂಭದಲ್ಲಿದ್ದ ಕ್ರೈಸ್ತರಿಗೆ ಕಲಿಸಲಾಗಿತ್ತು. ಅವ್ರು ಯೆಹೋವನನ್ನ ಮಹಿಮೆ ಪಡಿಸಬೇಕಿತ್ತು ಮತ್ತು ಆತನ ಬಗ್ಗೆ ಬೇರೆವ್ರಿಗೆ ಸಾರಬೇಕಿತ್ತು. (ಇಬ್ರಿ. 13:15) ಈ ರೀತಿ ಸ್ತುತಿ ಕೊಡೋದನ್ನ ಯೆಹೋವನು ಪ್ರಾಣಿ ಯಜ್ಞಗಳಿಗಿಂತ ಅಮೂಲ್ಯವಾಗಿ ನೋಡ್ತಿದ್ದನು. ಕ್ರೈಸ್ತರು ಮಹಾ ಬಾಬೆಲಿನ ಬಂಧಿಗಳಾಗಿದ್ದ ಸಮಯದಲ್ಲಿ ಒಂದು ವ್ಯವಸ್ಥಿತ ರೀತಿಯಲ್ಲಿ ಇಂಥ ಬಲಿಗಳನ್ನ ಕೊಡೋಕೆ ಆಗ್ತಿರಲಿಲ್ಲ. ಆದ್ರೆ ಬಿಡುಗಡೆಯಾದ ಸಮಯದಷ್ಟಕ್ಕೆ ದೇವಜನರು ಸ್ತುತಿ ಅನ್ನೋ ಬಲಿಯನ್ನ ಕೊಡೋಕೆ ಶುರು ಮಾಡಿದ್ರು. ಅವ್ರು ಸಾರೋ ಕೆಲ್ಸದಲ್ಲಿ ಬಿಝಿಯಾದ್ರು ಮತ್ತು ಕೂಟಗಳನ್ನು ನಡೆಸ್ತಾ ದೇವರನ್ನ ಸಂತೋಷದಿಂದ ಸ್ತುತಿಸ್ತಾ ಇದ್ರು. 1919 ರಿಂದ “ನಂಬಿಗಸ್ತ ವಿವೇಕಿ ಆದ ಆಳು” ಸಾರೋ ಕೆಲಸಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟು ಅದನ್ನ ವ್ಯವಸ್ಥಿತವಾಗಿ ಮಾಡೋಕೆ ಶುರು ಮಾಡಿತು. (ಮತ್ತಾ. 24:45-47) ಇದ್ರಿಂದ ಯೆಹೋವನ ಜನರ ಸಂಖ್ಯೆ ಹೆಚ್ಚಾಯ್ತು. ಹೀಗೆ ಯೆಹೋವನ ಯಜ್ಞವೇದಿಯ ಮೇಲೆ ಸ್ತುತಿ ಅನ್ನೋ ಬಲಿಗಳು ತುಂಬಿ ತುಳುಕೋಕೆ ಶುರು ಆಯ್ತು.

30. ತನ್ನ ಜನರಿಗೆ ಒಳ್ಳೇ ಕುರುಬರನ್ನ ಕೊಡಲಿಕ್ಕಾಗಿ ಯೇಸು ಏನೆಲ್ಲಾ ಮಾಡಿದನು?

30 ನಾಲ್ಕನೇ ಮಾತು. ಕೆಟ್ಟ ಕುರುಬರನ್ನ ತೆಗೆದು ಹಾಕಲಾಗುತ್ತೆ. ಕ್ರಿಸ್ತನು ದೇವ ಜನರನ್ನ ಸುಳ್ಳು ಕ್ರೈಸ್ತ ಧರ್ಮದ ಕುರುಬರ ಬಿಗಿಮುಷ್ಟಿಯಿಂದ ಪಾರು ಮಾಡಿದನು. ನಿಜ ಕ್ರೈಸ್ತ ಸಭೆಯಲ್ಲೂ ಕೆಟ್ಟ ಕುರುಬರಿದ್ರು. ಅವ್ರನ್ನ ಆ ಸ್ಥಾನದಿಂದ ಕೆಳಗಿಳಿಸಲಾಯ್ತು. (ಯೆಹೆ. 20:38) ಯೇಸು ಕ್ರಿಸ್ತ ಒಳ್ಳೇ ಕುರುಬ, ಅವನು ಕುರಿಗಳನ್ನ ಪ್ರೀತಿ ಕಾಳಜಿಯಿಂದ ನೋಡ್ಕೊಂಡನು. 1919 ರಲ್ಲಿ ತನ್ನ ಕುರಿಗಳನ್ನ ಪರಿಪಾಲಿಸಲಿಕ್ಕೆ ಅಂತ ನಂಬಿಗಸ್ತ, ವಿವೇಕಿ ಆದ ಆಳನ್ನ ನೇಮಿಸಿದನು. ನಿಷ್ಠಾವಂತ ಅಭಿಷಿಕ್ತರ ಆ ಚಿಕ್ಕ ಗುಂಪು ದೇವಜನರಿಗೆ ಆಧ್ಯಾತ್ಮಿಕ ಆಹಾರವನ್ನು ಕೊಡಲಿಕ್ಕೆ ಮುಂದಾಳತ್ವ ವಹಿಸಿತು. ಹೀಗೆ ಅವ್ರು ದೇವಜನರನ್ನ ಒಳ್ಳೇ ರೀತಿಲಿ ಪರಿಪಾಲನೆ ಮಾಡಿದ್ರು. ‘ದೇವರ ಮಂದೆಯನ್ನ’ ಪರಿಪಾಲಿಸೋಕೆ ಹಿರಿಯರಿಗೆ ತರಬೇತಿ ಕೊಡಲಾಯ್ತು. (1 ಪೇತ್ರ 5:1, 2) ಹಿರಿಯರಿಂದ ಯೆಹೋವನು ಮತ್ತು ಯೇಸು ಏನನ್ನ ಬಯಸ್ತಾರೆ ಮತ್ತು ಅವರು ಕುರಿಗಳನ್ನ ಯಾವ ರೀತಿ ನೋಡ್ಕೊಬೇಕು ಅನ್ನೋದನ್ನ ನೆನಪಿಸಲಿಕ್ಕಾಗಿ ಯೆಹೆಜ್ಕೇಲ 34:15, 16ನ್ನ ಹೆಚ್ಚಾಗಿ ಉಪಯೋಗಿಸಲಾಗುತ್ತೆ.

31. ಯೆಹೆಜ್ಕೇಲ 11:19 ರಲ್ಲಿರೋ ಭವಿಷ್ಯವಾಣಿಯನ್ನ ಯೆಹೋವನು ಹೇಗೆ ನೆರವೇರಿಸಿದನು?

31 ಐದನೇ ಮಾತು. ಯೆಹೋವ ದೇವರ ಆರಾಧಕರ ಮಧ್ಯೆ ಐಕ್ಯತೆ ಇರುತ್ತೆ. ನೂರಾರು ವರ್ಷಗಳಿಂದ ಸುಳ್ಳು ಕ್ರೈಸ್ತ ಧರ್ಮ ಸಾವಿರಾರು ಪಂಗಡಗಳಾಗಿ, ಉಪಪಂಗಡಗಳಾಗಿ ವಿಭಾಗಗೊಂಡಿದೆ. ಆದ್ರೆ ಇವುಗಳ ಮಧ್ಯೆ ಒಂದು ಸ್ವಲ್ಪನೂ ಐಕ್ಯತೆ ಇಲ್ಲ. ಒಬ್ಬರು ಇನ್ನೊಬ್ರ ಜೊತೆ ಕಚ್ಚಾಡ್ತಾ ಇದ್ದಾರೆ. ಆದ್ರೆ ಯೆಹೋವನು, ಪುನಃಸ್ಥಾಪಿಸಿದ ತನ್ನ ಜನರ ಮಧ್ಯೆ ಒಂದು ಅದ್ಭುತನೇ ಮಾಡಿದ್ದಾನೆ. ಯೆಹೆಜ್ಕೇಲ ಅದ್ರ ಬಗ್ಗೆ ಹೀಗೆ ಹೇಳಿದ್ದಾನೆ: “ನಾನು ಅವ್ರಿಗೆ ಒಂದೇ ಮನಸ್ಸನ್ನ ಕೊಡ್ತೀನಿ.” (ಯೆಹೆ. 11:19) ಈ ಮಾತು ಅದ್ಭುತ ರೀತಿಯಲ್ಲಿ ನೆರವೇರ್ತಾ ಇದೆ. ಇಡೀ ಭೂಮಿಯಲ್ಲಿ ಬೇರೆ ಬೇರೆ ಧರ್ಮದ, ದೇಶದ, ಆರ್ಥಿಕ ಮತ್ತು ಸಾಮಾಜಿಕ ಹಿನ್ನಲೆಯ, ಸಂಸ್ಕೃತಿಯ ಲಕ್ಷಾಂತರ ಜನರು ಯೇಸುವಿನ ಹಿಂಬಾಲಕರಾಗಿದ್ದಾರೆ. ಆದ್ರೆ ಅವ್ರೆಲ್ಲರಿಗೂ ಒಂದೇ ರೀತಿಯ ಸತ್ಯವನ್ನು ಕಲಿಸಲಾಗುತ್ತಿದೆ. ಅವ್ರೆಲ್ಲರೂ ಒಟ್ಟಾಗಿ ಒಂದೇ ರೀತಿಯ ಕೆಲ್ಸ ಮಾಡ್ತಿದ್ದಾರೆ. ಯೇಸು ಸಾಯೋದಕ್ಕೂ ಮುಂಚಿನ ರಾತ್ರಿ ತನ್ನ ಹಿಂಬಾಲಕರೆಲ್ಲರೂ ಒಗ್ಗಟ್ಟಾಗಿ ಇರಲಿಕ್ಕಾಗಿ ತುಂಬಾ ಪ್ರಾರ್ಥಿಸಿದನು. (ಯೋಹಾನ 17:11, 20-23 ಓದಿ.) ನಮ್ಮ ಕಾಲದಲ್ಲಿ ಯೆಹೋವನು ಆ ಪ್ರಾರ್ಥನೆಗೆ ವಿಶೇಷ ರೀತಿಯಲ್ಲಿ ಉತ್ರ ಕೊಟ್ಟಿದ್ದಾನೆ.

32. ಪುನಃಸ್ಥಾಪನೆಯ ಭವಿಷ್ಯವಾಣಿಗಳ ನೆರವೇರಿಕೆಯ ಬಗ್ಗೆ ನಿಮಗೆ ಹೇಗನಿಸುತ್ತೆ? (“ಬಂಧಿವಾಸ ಮತ್ತು ಪುನಃಸ್ಥಾಪನೆ ಬಗ್ಗೆ ಇರೋ ಭವಿಷ್ಯವಾಣಿಗಳು” ಚೌಕ ಸಹ ನೋಡಿ.)

32 ಶುದ್ಧ ಆರಾಧನೆ ಪುನಃಸ್ಥಾಪನೆ ಆಗ್ತಿರೋ ಈ ಸುಂದರವಾದ ಸಮಯದಲ್ಲಿ ನಾವಿರೋದ್ರಿಂದ ನಮಗೆ ತುಂಬಾ ಖುಷಿ ಆಗುತ್ತೆ ಅಲ್ವಾ? ಆರಾಧನೆ ಬಗ್ಗೆ ಇರೋ ಯೆಹೆಜ್ಕೇಲನ ಭವಿಷ್ಯವಾಣಿಯ ಪ್ರತಿಯೊಂದು ವಿಷ್ಯನೂ ನಮ್ಮ ಜೀವನದಲ್ಲಿ ನೆರವೇರುತ್ತಾ ಇರೋದನ್ನ ನಾವು ನೋಡ್ತಾ ಇದ್ದೇವೆ. ಯೆಹೋವನು ತನ್ನ ಜನರನ್ನ ಮೆಚ್ಚುತ್ತಿದ್ದಾನೆ ಅಂತ ಯೆಹೆಜ್ಕೇಲನ ಮೂಲಕ ಆತನು ಹೇಳಿದ ಈ ಮಾತಿಂದ ಗೊತ್ತಾಗುತ್ತೆ: ನಿಮ್ಮಿಂದ “ನನಗೆ ಖುಷಿ ಆಗುತ್ತೆ.” (ಯೆಹೆ. 20:41) ಅನೇಕ ವರ್ಷಗಳ ತನಕ ಸುಳ್ಳು ಧರ್ಮದ ಕೈದಿಗಳಾಗಿದ್ದ ಯೆಹೋವನ ಜನರು ಈಗ ಸ್ವತಂತ್ರರಾಗಿದ್ದಾರೆ. ಅವರೆಲ್ಲರಿಗೂ ಒಂದೇ ರೀತಿಯ ಸತ್ಯದ ಜ್ಞಾನ ಸಿಗ್ತಾ ಇದೆ ಮತ್ತು ಇಡೀ ಭೂಮಿಯಲ್ಲಿ ಯೆಹೋವನನ್ನ ಸ್ತುತಿಸುತ್ತಿದ್ದಾರೆ. ಇವರಲ್ಲಿ ಒಬ್ಬರಾಗಿರೋಕೆ ನಿಮಗೆ ಹೆಮ್ಮೆ ಅನಿಸುತ್ತಾ? ಪುನಃಸ್ಥಾಪನೆ ಬಗ್ಗೆ ಯೆಹೆಜ್ಕೇಲ ಹೇಳಿದ ಕೆಲವು ಭವಿಷ್ಯವಾಣಿಗಳು ಮುಂದೆ ಸಹ ಮಹತ್ತಾದ ರೀತಿಯಲ್ಲಿ ನೆರವೇರಲಿವೆ.

“ಏದೆನ್‌ ತೋಟದ ತರ”

33-35. (ಎ) ಕೈದಿಗಳಾಗಿದ್ದ ಯೆಹೂದ್ಯರು ಯೆಹೆಜ್ಕೇಲ 36:35 ರಲ್ಲಿರೋ ಭವಿಷ್ಯವಾಣಿಯನ್ನ ಹೇಗೆ ಅರ್ಥಮಾಡಿಕೊಂಡಿರುತ್ತಾರೆ? (ಬಿ) ನಾವದನ್ನ ಹೇಗೆ ಅರ್ಥ ಮಾಡಿಕೊಳ್ಳಬೇಕು? (“ಎಲ್ಲವನ್ನ ಸರಿಮಾಡೋ ಸಮಯ” ಅನ್ನೋ ಚೌಕ ಸಹ ನೋಡಿ.)

33 ನಾವು ಈಗಾಗಲೇ ನೋಡಿದ ಹಾಗೆ 1914 ರಲ್ಲಿ ಯೇಸು ರಾಜನಾದನು. ಹೀಗೆ ದಾವೀದನ ವಂಶದವನ ಆಳ್ವಿಕೆ ಮತ್ತೆ ಶುರುವಾಯ್ತು. ಆಗಿನಿಂದ “ಎಲ್ಲವನ್ನ ಸರಿಮಾಡೋ ಸಮಯ” ಶುರುವಾಯ್ತು. (ಯೆಹೆ. 37:24) ಆಮೇಲೆ, ಯೆಹೋವನು ಸುಳ್ಳುಧರ್ಮದ ಕೈದಿಗಳಾಗಿದ್ದ ತನ್ನ ಜನರನ್ನು ಯೇಸುವಿನ ಮೂಲಕ ಬಿಡಿಸಿ ಶುದ್ಧ ಆರಾಧನೆಯನ್ನ ಪುನಃಸ್ಥಾಪಿಸಿದನು. ಹಾಗಾದ್ರೆ, ಪುನಃಸ್ಥಾಪನೆಯ ಕೆಲಸ ಅಲ್ಲಿಗೇ ಮುಗಿದು ಹೋಯ್ತಾ? ಖಂಡಿತ ಇಲ್ಲ. ಭವಿಷ್ಯದಲ್ಲಿ ಈ ಕೆಲಸವನ್ನ ಇನ್ನೂ ಅದ್ಭುತ ರೀತಿಯಲ್ಲಿ ಮಾಡಲಾಗುತ್ತೆ. ಇದರ ಬಗ್ಗೆ ರೋಮಾಂಚನಗೊಳಿಸೋ ಮಾಹಿತಿ ನಮಗೆ ಯೆಹೆಜ್ಕೇಲನ ಭವಿಷ್ಯವಾಣಿಯಲ್ಲಿ ಸಿಗುತ್ತೆ.

34 ಉದಾಹರಣೆಗೆ, ಈ ಮಾತುಗಳನ್ನ ಗಮನಿಸಿ: “ಆಗ ಜನ ‘ಹಾಳುಬಿದ್ದಿದ್ದ ದೇಶ ಈಗ ಏದೆನ್‌ ತೋಟದ ತರ ಕಂಗೊಳಿಸ್ತಿದೆ. . . . ’ ಅಂತ ಹೇಳ್ತಾರೆ.” (ಯೆಹೆ. 36:35) ಈ ಮಾತನ್ನ ಯೆಹೆಜ್ಕೇಲ ಮತ್ತು ಬೇರೆ ಯೆಹೂದ್ಯರು ಹೇಗೆ ಅರ್ಥಮಾಡಿಕೊಂಡಿರುತ್ತಾರೆ? ಅವರು ವಾಪಸ್‌ ಯೆರೂಸಲೇಮಿಗೆ ಹೋದಾಗ ಈ ಮಾತು ಪೂರ್ತಿಯಾಗಿ, ಅಕ್ಷರಾರ್ಥವಾಗಿ ನೆರವೇರುತ್ತೆ ಅಂತ ಅವರು ಅಂದುಕೊಂಡಿರಲಿಕ್ಕಿಲ್ಲ. ಅಂದ್ರೆ ದೇವರು ಮಾಡಿದ ಏದೆನ್‌ ತೋಟದ ತರ ಅವರ ದೇಶ ಆಗುತ್ತೆ ಅಂತ ಅವರು ನೆನಸಿರಲಿಕ್ಕಿಲ್ಲ. (ಆದಿ. 2:8) ಬದಲಿಗೆ, ಅವರು ವಾಪಸ್‌ ಹೋದ ಮೇಲೆ ಅವರ ದೇಶದಲ್ಲಿ ಚೆನ್ನಾಗಿ ಬೆಳೆ ಬೆಳೆಯುತ್ತೆ ಮತ್ತು ಅದು ಸುಂದರವಾಗಿರುತ್ತೆ ಅಂತ ಯೆಹೋವ ಹೇಳ್ತಿದ್ದಾನೆ ಅಂತ ಅವರು ಅರ್ಥ ಮಾಡಿಕೊಂಡಿರುತ್ತಾರೆ.

35 ಯೆಹೋವನು ಕೊಟ್ಟ ಆ ಮಾತನ್ನ ನಾವು ಹೇಗೆ ಅರ್ಥಮಾಡಿಕೊಳ್ಳಬೇಕು? ನಾವು ಸಹ ಈ ಅಂತ್ಯ ಕಾಲದಲ್ಲಿ ಆ ಮಾತು ಅಕ್ಷರಾರ್ಥವಾಗಿ ನೆರವೇರುತ್ತೆ ಅಂತ ನಿರೀಕ್ಷಿಸಲ್ಲ. ಯಾಕಂದ್ರೆ ಈಗ ಲೋಕ ಸೈತಾನನ ಕೈಯಲ್ಲಿದೆ. ಆದ್ರೆ ಆ ಮಾತು ಇವತ್ತು ಸಾಂಕೇತಿಕ ರೀತಿಯಲ್ಲಿ ನೆರವೇರುತ್ತಿದೆ ಅಂತ ತಿಳುಕೊಂಡಿದ್ದೇವೆ. ಯೆಹೋವನ ಸೇವಕರಾಗಿರೋ ನಾವು ಸಹೋದರ ಸಹೋದರಿಯರ ಜೊತೆ ಸೇರಿ ಪರದೈಸಿನಂಥ ವಾತಾವರಣದಲ್ಲಿ ಜೀವಿಸುತ್ತಿದ್ದೇವೆ. ಈ ಆಧ್ಯಾತ್ಮಿಕ ಪರದೈಸಿನಲ್ಲಿ ನಾವು ಖುಷಿಖುಷಿಯಾಗಿ ಆತನ ಸೇವೆಯನ್ನ ನಮ್ಮಿಂದಾದಷ್ಟು ಹೆಚ್ಚು ಮಾಡ್ತೇವೆ ಮತ್ತು ಅದಕ್ಕೆ ನಮ್ಮ ಜೀವನದಲ್ಲಿ ಮೊದಲನೇ ಸ್ಥಾನ ಕೊಡ್ತೇವೆ. ಅಷ್ಟೇ ಅಲ್ಲ, ಈ ಪರದೈಸ್‌ ದಿನದಿಂದ ದಿನಕ್ಕೆ ಹೆಚ್ಚೆಚ್ಚು ಸುಂದರವಾಗ್ತಾ ಇದೆ. ಹಾಗಾದ್ರೆ ಮುಂದೇನಾಗುತ್ತೆ?

36, 37. ಯೆಹೋವ ಕೊಟ್ಟ ಯಾವೆಲ್ಲಾ ಮಾತುಗಳು ಮುಂದೆ ಬರಲಿರೋ ಪರದೈಸಿನಲ್ಲಿ ನೆರವೇರುತ್ತವೆ?

36 ಹರ್ಮಗೆದ್ದೋನ್‌ ಯುದ್ಧದ ನಂತರ ಯೇಸು ಇಡೀ ಭೂಮಿಯಲ್ಲಿ ಪುನಃಸ್ಥಾಪನೆಯ ಕೆಲಸವನ್ನ ಮಾಡ್ತಾನೆ. ಸಾವಿರ ವರ್ಷದ ಆಳ್ವಿಕೆಯಲ್ಲಿ ಮಾನವರಿಗೆ ಮಾರ್ಗದರ್ಶನ ನೀಡಿ ಇಡೀ ಭೂಮಿಯನ್ನ ಏದೆನ್‌ ತೋಟದಂತೆ ಮಾಡ್ತಾನೆ. ಇದೇ ಯೆಹೋವ ದೇವರ ಉದ್ದೇಶವಾಗಿತ್ತು. (ಲೂಕ 23:43) ಆಗ ಎಲ್ಲಾ ಮನುಷ್ಯರು ಪ್ರೀತಿಯಿಂದ ಐಕ್ಯರಾಗಿ ಇರ್ತಾರೆ. ಭೂಮಿಯನ್ನ ಚೆನ್ನಾಗಿ ನೋಡಿಕೊಳ್ತಾರೆ ಮತ್ತು ಭೂಮಿ ಒಳ್ಳೇ ಫಲ ಕೊಡುತ್ತೆ. ಆಗ ಯಾವುದೇ ಭಯ, ಅಪಾಯ ಇರಲ್ಲ. ಯೆಹೋವನು ಕೊಟ್ಟ ಈ ಮಾತು ನೆರವೇರುವಾಗ ಹೇಗಿರುತ್ತೆ ಅಂತ ಸ್ವಲ್ಪ ಯೋಚಿಸಿ: “ನಾನು ಅವುಗಳ ಜೊತೆ ಶಾಂತಿಯ ಒಪ್ಪಂದ ಮಾಡ್ಕೊತೀನಿ. ಕ್ರೂರ ಕಾಡುಪ್ರಾಣಿಗಳನ್ನ ದೇಶದಿಂದ ಓಡಿಸಿಬಿಡ್ತೀನಿ. ಆಗ ನನ್ನ ಕುರಿಗಳು ಕಾಡಲ್ಲಿ ಸುರಕ್ಷಿತವಾಗಿ ಇರುತ್ತೆ. ಕಾಡುಗಳಲ್ಲಿ ನೆಮ್ಮದಿಯಿಂದ ನಿದ್ದೆ ಮಾಡುತ್ತೆ.”—ಯೆಹೆ. 34:25.

37 ಆ ಪರಿಸ್ಥಿತಿಯನ್ನ ಚಿತ್ರಿಸಿಕೊಳ್ಳೋಕೆ ಆಯ್ತಾ? ಯಾವುದೇ ಭಯ ಇಲ್ಲದೆ ಇಡೀ ಭೂಮಿಯಲ್ಲಿ ಎಲ್ಲಿಗೆ ಬೇಕಾದ್ರೂ ಹೋಗಬಹುದು. ಯಾವ ಪ್ರಾಣಿನೂ ನಿಮಗೆ ಹಾನಿ ಮಾಡಲ್ಲ. ಯಾವುದೇ ಅಪಾಯ ಇರಲ್ಲ. ನೀವು ಒಬ್ರೇ ದಟ್ಟ ಕಾಡಿಗೆ ಹೋಗಿ ಅದರ ಅಮೋಘ ಸೊಬಗನ್ನ ನೋಡಿ ಆನಂದಿಸಬಹುದು. ಅಲ್ಲಿ ನೀವು ಹಾಯಾಗಿ ಮಲಗಬಹುದು ಮತ್ತು ಬೆಳಿಗ್ಗೆ ಸುರಕ್ಷಿತವಾಗಿ ಏಳಬಹುದು. ಆಗ ನೀವು ಹೊಸ ಚೈತನ್ಯದಿಂದ ತುಂಬಿರುತ್ತೀರ.

ಯಾವುದೇ ಭಯ ಇಲ್ಲದೆ ಹಾಯಾಗಿ ‘ಕಾಡಿನಲ್ಲಿ ನಿದ್ದೆ’ ಮಾಡೋದನ್ನ ಸ್ವಲ್ಪ ಊಹಿಸಿ! (ಪ್ಯಾರ 36, 37 ನೋಡಿ)

38. ಯೆಹೆಜ್ಕೇಲ 28:26 ರಲ್ಲಿರೋ ಮಾತುಗಳ ಬಗ್ಗೆ ನಿಮಗೆ ಹೇಗನಿಸುತ್ತೆ?

38 ಈ ಮಾತುಗಳು ಸಹ ನೆರವೇರಿರೋದನ್ನ ನೀವು ನೋಡ್ತೀರ: “ಅಲ್ಲಿ ಅವರು ಸುರಕ್ಷಿತವಾಗಿ ವಾಸಿಸ್ತಾರೆ, ಮನೆಗಳನ್ನ ಕಟ್ಕೊಂಡು ದ್ರಾಕ್ಷಿ ತೋಟಗಳನ್ನ ಮಾಡ್ಕೊಳ್ತಾರೆ. ಅವ್ರನ್ನ ಕೀಳಾಗಿ ನೋಡಿದ ಎಲ್ಲ ಜನ್ರಿಗೆ ನಾನು ಶಿಕ್ಷೆ ಕೊಟ್ಟಾಗ ಅವರು ಸುರಕ್ಷಿತವಾಗಿ ವಾಸಿಸ್ತಾರೆ. ಆಗ, ನಾನೇ ಅವ್ರ ದೇವರಾದ ಯೆಹೋವ ಅಂತ ಅವ್ರಿಗೆ ಗೊತ್ತಾಗುತ್ತೆ.” (ಯೆಹೆ. 28:26) ಆಗ ಇಡೀ ಭೂಮಿಯಲ್ಲಿ ಯೆಹೋವನ ಶತ್ರುಗಳೇ ಇರಲ್ಲ. ಎಲ್ಲಾ ಕಡೆ ಶಾಂತಿ, ಭದ್ರತೆ ಇರುತ್ತೆ. ನಾವು ಭೂಮಿಯನ್ನ ಚೆನ್ನಾಗಿ ನೋಡಿಕೊಳ್ತೇವೆ. ನಾವು ಒಳ್ಳೇ ಮನೆಗಳನ್ನ ಕಟ್ಟಿಕೊಳ್ತೇವೆ, ದ್ರಾಕ್ಷಿ ತೋಟ ಮಾಡ್ತೇವೆ. ನಮ್ಮನ್ನ, ನಮ್ಮ ಪ್ರಿಯರನ್ನ ಚೆನ್ನಾಗಿ ನೋಡಿಕೊಳ್ತೇವೆ. ಹೀಗೆ ನಾವು ಖುಷಿಖುಷಿಯಾಗಿ ಇರ್ತೇವೆ.

39. ಯೆಹೆಜ್ಕೇಲ ಪುಸ್ತಕದಲ್ಲಿರೋ ಭವಿಷ್ಯವಾಣಿಗಳು ಖಂಡಿತ ನೆರವೇರುತ್ತವೆ ಅನ್ನೋದಕ್ಕೆ ಯಾವ ಪುರಾವೆ ಇದೆ?

39 ದೇವರ ಈ ಮಾತುಗಳೆಲ್ಲಾ ಬರೀ ಕನಸು ಅಂತ ನಿಮಗನಿಸುತ್ತಾ? ಹಾಗಾದ್ರೆ, ‘ಎಲ್ಲವನ್ನ ಸರಿಮಾಡೋ ಈ ಸಮಯದಲ್ಲಿ’ ದೇವರು ಏನೆಲ್ಲಾ ಮಾಡಿದ್ದಾರೆ ಅಂತ ಸ್ವಲ್ಪ ಯೋಚಿಸಿ. ಸೈತಾನ ಮತ್ತು ಅವನ ಈ ಲೋಕ ಎಷ್ಟೇ ವಿರೋಧ ತಂದ್ರೂ ಯೇಸು ಶುದ್ಧ ಆರಾಧನೆಯನ್ನ ಪುನಃಸ್ಥಾಪಿಸಿದ್ದಾನೆ. ಯೆಹೋವನು ಯೆಹೆಜ್ಕೇಲನ ಮೂಲಕ ಹೇಳಿದ ಎಲ್ಲ ಭವಿಷ್ಯವಾಣಿಗಳು ಖಂಡಿತ ನೆರವೇರುತ್ತವೆ ಅನ್ನೋದಕ್ಕೆ ಇದೇ ಪುರಾವೆ ಅಲ್ವಾ?

^ ಪ್ಯಾರ. 2 ಯೆಹೂದಿ ಕೈದಿಗಳಲ್ಲಿ ಹೆಚ್ಚಿನವ್ರು ಬಾಬೆಲ್‌ ಪಟ್ಟಣದಿಂದ ಸ್ವಲ್ಪ ದೂರದಲ್ಲಿ ವಾಸಿಸಿದ್ರು. ಉದಾಹರಣೆಗೆ ಯೆಹೆಜ್ಕೇಲನು ಕೆಬಾರ್‌ ನದಿ ತೀರದಲ್ಲಿ ಕೆಲವು ಯೆಹೂದ್ಯರ ಜೊತೆ ವಾಸಿಸಿದ್ದನು. (ಯೆಹೆ. 3:15) ಆದ್ರೆ ಕೆಲವು ಯೆಹೂದಿ ಕೈದಿಗಳು ಪಟ್ಟಣದಲ್ಲೇ ವಾಸಿಸಿದ್ರು. ಇವ್ರಲ್ಲಿ ಹೆಚ್ಚಿನವ್ರು “ರಾಜವಂಶಕ್ಕೆ, ಶ್ರೀಮಂತ ಮನೆತನಕ್ಕೆ” ಸೇರಿದವರಾಗಿದ್ರು.—ದಾನಿ. 1:3, 6; 2 ಅರ. 24:15.

^ ಪ್ಯಾರ. 25 ಉದಾಹರಣೆಗೆ 16 ನೇ ಶತಮಾನದ ಸುಧಾರಕರಲ್ಲಿ ಯಾರೆಲ್ಲಾ ಅಭಿಷಿಕ್ತ ಕ್ರೈಸ್ತರಾಗಿದ್ರು ಅಂತ ಗ್ಯಾರಂಟಿ ಹೇಳೋಕಾಗಲ್ಲ.