ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೊಸ ತಿಳುವಳಿಕೆಗಳ ಸಾರಾಂಶ

ಹೊಸ ತಿಳುವಳಿಕೆಗಳ ಸಾರಾಂಶ

ತುಂಬ ವರ್ಷಗಳಿಂದ ಯೆಹೆಜ್ಕೇಲನ ಭವಿಷ್ಯವಾಣಿಯಲ್ಲಿರೋ ಅನೇಕ ವಿಷಯಗಳ ತಿಳುವಳಿಕೆಯಲ್ಲಿ ಬದಲಾವಣೆಯಾಗಿದೆ. ಅದನ್ನ ಕಾವಲಿನಬುರುಜು ಪತ್ರಿಕೆಗಳಲ್ಲಿ ಕೊಡಲಾಗಿದೆ. ಇಡೀ ಭೂಮಿಯಲ್ಲಿ ಶುದ್ಧ ಆರಾಧನೆ! ಅನ್ನೋ ಈ ಪುಸ್ತಕದಲ್ಲಿ ಇನ್ನೂ ಹೆಚ್ಚಿನ ಹೊಸ ತಿಳುವಳಿಕೆಯನ್ನ ಕೊಡಲಾಗಿದೆ. ಈ ಪ್ರಶ್ನೆಗಳಿಗೆ ಉತ್ತರ ಕಂಡುಹಿಡಿಯಕ್ಕಾಗುತ್ತಾ ಅಂತ ನೋಡಿ.

ನಾಲ್ಕು ಜೀವಿಗಳ ಮುಖಗಳು ಏನನ್ನ ಸೂಚಿಸುತ್ತವೆ?

ಹಳೇ ತಿಳುವಳಿಕೆ: ಜೀವಿಗಳ ಅಥವಾ ಕೆರೂಬಿಯರ ನಾಲ್ಕು ಮುಖಗಳು ಯೆಹೋವನ ನಾಲ್ಕು ಮುಖ್ಯ ಗುಣಗಳನ್ನ ಸೂಚಿಸುತ್ತವೆ.

ಹೊಸ ತಿಳುವಳಿಕೆ: ನಾಲ್ಕು ಜೀವಿಗಳ ಪ್ರತಿಯೊಂದು ಮುಖ ಯೆಹೋವನ ನಾಲ್ಕು ಮುಖ್ಯ ಗುಣಗಳಲ್ಲಿ ಒಂದೊಂದನ್ನ ಸೂಚಿಸುತ್ತವೆ. ಆದ್ರೆ ನಾಲ್ಕು ಮುಖಗಳು ಒಟ್ಟಾಗಿ ಯೆಹೋವನ ಎಲ್ಲಾ ಮುಖ್ಯ ಗುಣಗಳನ್ನ ಸೂಚಿಸುತ್ತವೆ. ಅಷ್ಟೇ ಅಲ್ಲ ನಾಲ್ಕು ಮುಖಗಳು ಯೆಹೋವ ದೇವರ ಅಪಾರವಾದ ಶಕ್ತಿ ಮತ್ತು ಮಹಿಮೆಯನ್ನು ಕೂಡ ಎತ್ತಿ ಹೇಳುತ್ತವೆ.

ಬದಲಾವಣೆಗೆ ಕಾರಣ: ದೇವರ ವಾಕ್ಯದಲ್ಲಿ ನಾಲ್ಕು ಅನ್ನೋ ಸಂಖ್ಯೆಯು ಸಂಪೂರ್ಣವಾಗಿರೋದನ್ನ ಸೂಚಿಸುತ್ತೆ. ಹಾಗಾಗಿ ಕೆರೂಬಿಗಳ ನಾಲ್ಕು ಮುಖಗಳು ಒಟ್ಟಾಗಿ ಯೆಹೋವ ದೇವರ ಬರೀ ನಾಲ್ಕು ಗುಣಗಳನ್ನಲ್ಲ ಬದಲಿಗೆ ಎಲ್ಲಾ ಗುಣಗಳನ್ನ ಸೂಚಿಸುತ್ತವೆ. ಅಂದ್ರೆ ಈ ನಾಲ್ಕು ಮುಖಗಳು ಯೆಹೋವ ದೇವರ ಮಹಿಮಾಭರಿತ ವ್ಯಕ್ತಿತ್ವಕ್ಕೆ ಆಧಾರವಾಗಿರೋ ಎಲ್ಲಾ ಗುಣಗಳನ್ನ ಸೂಚಿಸುತ್ತವೆ. ಅಷ್ಟೇ ಅಲ್ಲ, ಪ್ರತಿಯೊಂದು ಮುಖ ಒಂದೊಂದು ಸೃಷ್ಟಿ ಜೀವಿಗಳದ್ದಾಗಿದ್ದವು. ಅವು ಘನತೆ, ಬಲ, ಶಕ್ತಿಯನ್ನ ಸೂಚಿಸ್ತಿದ್ದವು. ಹಾಗಿದ್ರೂ ಸಿಂಹ, ಹೋರಿ, ಹದ್ದು ಮತ್ತು ಮನುಷ್ಯನ ಮುಖಗಳಿದ್ದ ಈ ಕೆರೂಬಿಯರು ಯೆಹೋವ ದೇವರ ಸಿಂಹಾಸನದ ಕೆಳಗೆ ಇದ್ದರು ಅನ್ನೋದನ್ನ ನೆನಪುಮಾಡಿಕೊಳ್ಳಿ. ಇದ್ರಿಂದ ಯೆಹೋವನೇ ಎಲ್ಲರಿಗಿಂತ ಉನ್ನತ ಅಧಿಕಾರಿ ಅಂತ ಗೊತ್ತಾಗುತ್ತೆ.

ಕಾರ್ಯದರ್ಶಿಯ ಶಾಯಿಕೊಂಬನ್ನ ಹಿಡಿದಿರೋ ವ್ಯಕ್ತಿ ಯಾರನ್ನ ಸೂಚಿಸ್ತಾನೆ?

ಹಳೇ ತಿಳುವಳಿಕೆ: ಶಾಯಿಕೊಂಬನ್ನ ಹಿಡಿದಿರೋ ವ್ಯಕ್ತಿ ಅಭಿಷಿಕ್ತ ಉಳಿಕೆಯವ್ರನ್ನ ಸೂಚಿಸುತ್ತಾನೆ. ಸಿಹಿಸುದ್ದಿಯನ್ನ ಸಾರೋ ಮೂಲಕ ಮತ್ತು ಶಿಷ್ಯರನ್ನಾಗಿ ಮಾಡೋ ಮೂಲಕ ಅಭಿಷಿಕ್ತರು ‘ದೊಡ್ಡ ಗುಂಪಿನ’ ಭಾಗವಾಗೋ ಜನರ ಹಣೆ ಮೇಲೆ ಗುರುತನ್ನ ಹಾಕ್ತಾರೆ.—ಪ್ರಕ. 7:9.

ಹೊಸ ತಿಳುವಳಿಕೆ: ಶಾಯಿಕೊಂಬನ್ನ ಹಿಡಿದಿರೋ ವ್ಯಕ್ತಿ ಯೇಸು ಕ್ರಿಸ್ತನನ್ನ ಸೂಚಿಸುತ್ತಾನೆ. ‘ಮಹಾ ಸಂಕಟದ’ ಸಮಯದಲ್ಲಿ ಯೇಸು ದೊಡ್ಡ ಗುಂಪಿನವ್ರನ್ನ ‘ಕುರಿಗಳು’ ಅಂತ ನ್ಯಾಯತೀರಿಸುವಾಗ ಅವ್ರಿಗೆ ಗುರುತು ಹಾಕ್ತಾನೆ.—ಮತ್ತಾ. 24:21.

ಬದಲಾವಣೆಗೆ ಕಾರಣ: ನ್ಯಾಯತೀರ್ಪು ಮಾಡೋ ಜವಾಬ್ದಾರಿಯನ್ನ ಯೆಹೋವನು ತನ್ನ ಮಗನಿಗೆ ಕೊಟ್ಟಿದ್ದಾನೆ. (ಯೋಹಾ. 5:22, 23) ಮತ್ತಾಯ 25:31-33 ರ ಪ್ರಕಾರ, ಯಾರು ‘ಕುರಿ’ ಮತ್ತು ಯಾರು ‘ಆಡು’ ಅಂತ ಯೇಸು ಕೊನೆಯ ತೀರ್ಪು ಮಾಡ್ತಾನೆ.

ವೇಶ್ಯೆಯರಾದ ಅಕ್ಕ-ತಂಗಿ ಒಹೊಲ ಮತ್ತು ಒಹೊಲೀಬ ಕ್ಯಾಥೊಲಿಕ್‌ ಮತ್ತು ಪ್ರೊಟೆಸ್ಟೆಂಟ್‌ ಪಂಗಡದವ್ರನ್ನ ಸೂಚಿಸ್ತಾರಾ?

ಹಳೇ ತಿಳುವಳಿಕೆ: ಅಕ್ಕ ಒಹೊಲ (ಇಸ್ರಾಯೇಲಿನ ರಾಜಧಾನಿಯಾದ ಸಮಾರ್ಯ) ಕ್ಯಾಥೊಲಿಕ್‌ ಪಂಗಡದವ್ರನ್ನ ಸೂಚಿಸುತ್ತಾಳೆ; ತಂಗಿ ಒಹೊಲೀಬ (ಯೆಹೂದದ ರಾಜಧಾನಿಯಾದ ಯೆರೂಸಲೇಮ್‌) ಪ್ರೊಟೆಸ್ಟೆಂಟ್‌ ಪಂಗಡದವ್ರನ್ನ ಸೂಚಿಸುತ್ತಾಳೆ.

ಹೊಸ ತಿಳುವಳಿಕೆ: ಈ ವೇಶ್ಯೆಯರಾದ ಅಕ್ಕ-ತಂಗಿ ಯಾವುದೇ ಸುಳ್ಳು ಕ್ರೈಸ್ತ ಧರ್ಮದ ಪಂಗಡಗಳನ್ನ ಸೂಚಿಸೋದಿಲ್ಲ. ಒಮ್ಮೆ ಯೆಹೋವನಿಗೆ ನಂಬಿಗಸ್ತರಾಗಿದ್ದವ್ರು ಆತನಿಗೆ ನಂಬಿಕೆದ್ರೋಹ ಮಾಡಿ ಆಧ್ಯಾತ್ಮಿಕ ವೇಶ್ಯಾವಾಟಿಕೆಯನ್ನ ಮಾಡಿದಾಗ ಆತನಿಗೆ ಅವ್ರ ಬಗ್ಗೆ ಹೇಗನಿಸುತ್ತೆ ಅಂತ ತೋರಿಸೋಕೆ ಈ ಅಕ್ಕ-ತಂಗಿಯರ ಉದಾಹರಣೆಯನ್ನ ಬಳಸಲಾಗಿದೆ. ಎಲ್ಲಾ ಸುಳ್ಳು ಧರ್ಮಗಳ ಬಗ್ಗೆ ಯೆಹೋವನಿಗೆ ಹೀಗೇ ಅನಿಸುತ್ತೆ.

ಬದಲಾವಣೆಗೆ ಕಾರಣ: ಈ ವೇಶ್ಯೆಯರಾದ ಅಕ್ಕ-ತಂಗಿ ಯಾವುದೇ ಸುಳ್ಳು ಕ್ರೈಸ್ತ ಧರ್ಮದ ಪಂಗಡಗಳನ್ನ ಸೂಚಿಸುತ್ತಾರೆ ಅನ್ನೋದಕ್ಕೆ ಬೈಬಲಿನಲ್ಲಿ ಯಾವುದೇ ಆಧಾರಗಳಿಲ್ಲ. ಇಸ್ರಾಯೇಲ್‌ ಮತ್ತು ಯೆಹೂದ ಒಂದು ಕಾಲದಲ್ಲಿ ಯೆಹೋವನಿಗೆ ನಂಬಿಗಸ್ತ ಹೆಂಡತಿಯರಂತೆ ಇದ್ರು. ಕ್ಯಾಥೊಲಿಕ್‌ ಮತ್ತು ಪ್ರೊಟೆಸ್ಟೆಂಟ್‌ ಪಂಗಡದವ್ರು ಯಾವತ್ತೂ ಯೆಹೋವ ದೇವರ ಜೊತೆ ಆ ರೀತಿಯ ಸಂಬಂಧವನ್ನ ಇಟ್ಟುಕೊಂಡಿರಲಿಲ್ಲ. ಅಪನಂಬಿಗಸ್ತ ಜನರನ್ನ ವೇಶ್ಯೆಯರಿಗೆ ಹೋಲಿಸಿದ್ರೂ ಅವ್ರನ್ನ ಪುನಃಸ್ಥಾಪಿಸ್ತೇನೆ ಅಂತ ಯೆಹೆಜ್ಕೇಲ ಅಧ್ಯಾಯ 16 ಮತ್ತು 23 ರಲ್ಲಿ ಯೆಹೋವನು ನಿರೀಕ್ಷೆಯನ್ನ ಕೊಟ್ಟಿದ್ದನು. ಆದ್ರೆ ಮಹಾ ಬಾಬೆಲಿನ ಭಾಗವಾಗಿರೋ ಸುಳ್ಳು ಕ್ರೈಸ್ತರಿಗೆ ಅಂಥ ಯಾವುದೇ ನಿರೀಕ್ಷೆಯನ್ನ ಕೊಡಲಾಗಿಲ್ಲ.

ಸುಳ್ಳು ಕ್ರೈಸ್ತ ಧರ್ಮ ಹಿಂದಿನ ಕಾಲದ ಧರ್ಮಭ್ರಷ್ಟ ಯೆರೂಸಲೇಮಿನ ಸೂಚಕರೂಪವಾಗಿತ್ತಾ?

ಹಳೇ ತಿಳುವಳಿಕೆ: ಸುಳ್ಳು ಕ್ರೈಸ್ತ ಧರ್ಮ ಅಪನಂಬಿಗಸ್ತ ಯೆರೂಸಲೇಮಿನ ಸೂಚಕರೂಪವಾಗಿದೆ. ಹಾಗಾಗಿ ಯೆರೂಸಲೇಮಿನ ನಾಶನ ಸುಳ್ಳು ಕ್ರೈಸ್ತ ಧರ್ಮದ ನಾಶನವನ್ನ ಸೂಚಿಸ್ತಿತ್ತು.

ಹೊಸ ತಿಳುವಳಿಕೆ: ಅಪನಂಬಿಗಸ್ತ ಯೆರೂಸಲೇಮ್‌ ಮಾಡ್ತಿದ್ದ ವಿಗ್ರಹಾರಾಧನೆ ಮತ್ತು ಧರ್ಮಭ್ರಷ್ಟತೆ ಸುಳ್ಳು ಕ್ರೈಸ್ತ ಧರ್ಮದವ್ರು ಮಾಡ್ತಿರೋ ಕೆಲಸಗಳ ತರ ಇದೆ. ಹಾಗಂತ ಯಾವತ್ತೂ ಸುಳ್ಳು ಕ್ರೈಸ್ತ ಧರ್ಮ ಯೆರೂಸಲೇಮಿನ ಸೂಚಕರೂಪ ಅಂತ ಹೇಳಕ್ಕಾಗಲ್ಲ.

ಬದಲಾವಣೆಗೆ ಕಾರಣ: ಇದಕ್ಕೆ ಸೂಚಕ ಮತ್ತು ಸೂಚಕರೂಪ ಇದೆ ಅನ್ನಲು ಬೈಬಲಿನಲ್ಲಿ ಯಾವುದೇ ಆಧಾರಗಳಿಲ್ಲ. ಹಿಂದಿನ ಕಾಲದ ಯೆರೂಸಲೇಮ್‌ ಒಂದು ಕಾಲದಲ್ಲಿ ಶುದ್ಧ ಆರಾಧನೆಯನ್ನ ಮಾಡ್ತಿತ್ತು. ಆದ್ರೆ ಸುಳ್ಳು ಕ್ರೈಸ್ತ ಧರ್ಮ ಯಾವತ್ತೂ ಶುದ್ಧ ಆರಾಧನೆಯನ್ನ ಮಾಡ್ಲಿಲ್ಲ. ಅಷ್ಟೇ ಅಲ್ಲ ಯೆರೂಸಲೇಮ್‌ ಮಾಡಿದ ತಪ್ಪನ್ನ ಒಂದು ಸಮಯದಲ್ಲಿ ಯೆಹೋವನು ಕ್ಷಮಿಸಿದ್ದನು. ಆದ್ರೆ ಸುಳ್ಳು ಕ್ರೈಸ್ತ ಧರ್ಮದ ತಪ್ಪುಗಳನ್ನ ಯೆಹೋವನು ಕ್ಷಮಿಸ್ತಾನೆ ಅನ್ನೋದಕ್ಕೆ ಯಾವುದೇ ಆಧಾರ ಇಲ್ಲ.

ಒಣಗಿದ ಮೂಳೆಗಳು ತುಂಬಿದ್ದ ಕಣಿವೆಯ ಬಗ್ಗೆ ಇದ್ದ ದರ್ಶನ ಹೇಗೆ ನೆರವೇರಿತು?

ಹಳೇ ತಿಳುವಳಿಕೆ: 1918 ರಲ್ಲಿ ಅಭಿಷಿಕ್ತರನ್ನ ಹಿಂಸಿಸಿದಾಗ ಮಹಾ ಬಾಬೆಲಿನ ಬಂಧಿವಾಸ ಶುರುವಾಯ್ತು. ಆಗ ಅವ್ರು ಒಂಥರ ನಿಷ್ಕ್ರಿಯರಾಗಿ ಸತ್ತಂಥ ಸ್ಥಿತಿಯಲ್ಲಿದ್ರು. 1919 ರಲ್ಲಿ ಯೆಹೋವನು ಅವ್ರನ್ನ ಪುನಃಸ್ಥಾಪಿಸಿದಾಗ ಸ್ವಲ್ಪಕಾಲದ ಆ ಬಂಧಿವಾಸ ಮುಗಿಯಿತು.

ಹೊಸ ತಿಳುವಳಿಕೆ: 1918ಕ್ಕಿಂತ ತುಂಬ ವರ್ಷಗಳ ಮುಂಚಿನಿಂದನೇ ಆಧ್ಯಾತ್ಮಿಕ ಬಂಧಿವಾಸ ಶುರುವಾಗಿತ್ತು. ಅಂದ್ರೆ ಅದು ಕ್ರಿ.ಶ. ಎರಡನೇ ಶತಮಾನದಲ್ಲಿ ಶುರುವಾಗಿ ಕ್ರಿ.ಶ. 1919 ರಲ್ಲಿ ಮುಗಿಯಿತು. ಈ ಸಮಯಾವಧಿಯು ಯೇಸು ತನ್ನ ಉದಾಹರಣೆಯಲ್ಲಿ ಹೇಳಿದ ಗೋದಿ ಮತ್ತು ಕಳೆ ಬೆಳೆಯೋ ದೀರ್ಘ ಸಮಯಾವಧಿಗೆ ಹೊಂದಿಕೆಯಲ್ಲಿದೆ.

ಬದಲಾವಣೆಗೆ ಕಾರಣ: ಹಿಂದಿನ ಕಾಲದ ಇಸ್ರಾಯೇಲ್ಯರ ಬಂಧಿವಾಸ ತುಂಬ ಸಮಯದ ವರೆಗೆ ಮುಂದುವರಿಯಿತು. ಅದು ಕ್ರಿ.ಪೂ. 740 ರಲ್ಲಿ ಶುರುವಾಗಿ ಕ್ರಿ.ಪೂ. 537 ರಲ್ಲಿ ಮುಗಿಯಿತು. ಯೆಹೆಜ್ಕೇಲನ ಭವಿಷ್ಯವಾಣಿ, ಮೂಳೆಗಳು ‘ಒಣಗಿದ್ವು’ ಅಥ್ವಾ ‘ತುಂಬ ಒಣಗಿದ್ವು’ ಅಂತ ತಿಳಿಸುತ್ತೆ ಅನ್ನೋದನ್ನ ನೆನಪು ಮಾಡಿಕೊಳ್ಳಿ. ಮೂಳೆಗಳನ್ನ ಸೂಚಿಸ್ತಿದ್ದವ್ರು (ಅಭಿಷಿಕ್ತರು) ತುಂಬ ಸಮಯದ ವರೆಗೆ ಸತ್ತಂಥ ಸ್ಥಿತಿಯಲ್ಲಿದ್ರು ಅಂತ ಇದ್ರಿಂದ ಗೊತ್ತಾಗುತ್ತೆ. ಅವ್ರ ಪುನಃಸ್ಥಾಪನೆ ಹಂತ ಹಂತವಾಗಿ ಆಗಿದ್ರಿಂದ ಅದಕ್ಕೆ ಸಮಯ ಹಿಡಿತಿತ್ತು ಅಂತನೂ ಗೊತ್ತಾಗುತ್ತೆ.

ಎರಡು ಕೋಲುಗಳನ್ನ ಒಂದು ಮಾಡೋದ್ರ ಅರ್ಥವೇನು?

ಹಳೇ ತಿಳುವಳಿಕೆ: ಒಂದನೇ ಲೋಕ ಯುದ್ಧದ ಸಮಯದಲ್ಲಿ ಸ್ವಲ್ಪ ಸಮಯದ ವರೆಗೆ ದೇವಜನರ ಮಧ್ಯೆ ಐಕ್ಯತೆ ಇರಲಿಲ್ಲ. ಅದಾದ್ಮೇಲೆ 1919 ರಲ್ಲಿ ನಂಬಿಗಸ್ತ ಅಭಿಷಿಕ್ತ ಉಳಿಕೆಯವ್ರು ಮತ್ತೆ ಒಂದಾದ್ರು.

ಹೊಸ ತಿಳುವಳಿಕೆ: ಯೆಹೋವನು ತನ್ನ ಜನರನ್ನ ಒಟ್ಟಿಗೆ ಸೇರಿಸ್ತಾನೆ ಅಂತ ಆ ಭವಿಷ್ಯವಾಣಿ ತಿಳಿಸಿತ್ತು. 1919 ರ ನಂತ್ರ ಸ್ವಲ್ಪದ್ರಲ್ಲೇ ಅಭಿಷಿಕ್ತರಲ್ಲಿ ಉಳಿಕೆಯವ್ರು ಭೂಮಿಯ ಮೇಲೆ ನಿರೀಕ್ಷೆ ಇರೋ ತುಂಬ ಜನರ ಜೊತೆ ಸೇರಿ ಒಂದಾದ್ರು. ಈ ಎರಡೂ ಗುಂಪುಗಳು ಒಟ್ಟಿಗೆ ಯೆಹೋವನನ್ನ ಆರಾಧಿಸ್ತಾ ಒಂದೇ ಗುಂಪಿನ ಜನರಾದ್ರು.

ಬದಲಾವಣೆಗೆ ಕಾರಣ: ಈ ಭವಿಷ್ಯವಾಣಿ ಒಂದು ಕೋಲು ಮುರಿದು ಎರಡಾಗಿ ಮತ್ತೆ ಅದನ್ನ ಒಂದು ಮಾಡಲಾಗುತ್ತೆ ಅಂತ ತಿಳಿಸಲ್ಲ. ಅಂದ್ರೆ ಒಂದು ಗುಂಪು ಎರಡಾಗಿ ಮತ್ತೆ ಅವು ಒಂದಾಗುತ್ತೆ ಅಂತ ತಿಳಿಸಲ್ಲ. ಬದ್ಲಿಗೆ ಎರಡು ಕೋಲುಗಳು ಅಂದ್ರೆ ಎರಡು ಗುಂಪುಗಳು ಹೇಗೆ ಒಂದಾಗುತ್ತೆ ಅನ್ನೋದ್ರ ಬಗ್ಗೆ ತಿಳಿಸುತ್ತೆ.

ಮಾಗೋಗ್‌ ದೇಶದ ಗೋಗ ಯಾರು?

ಹಳೇ ತಿಳುವಳಿಕೆ: ಮಾಗೋಗ್‌ ದೇಶದ ಗೋಗ ಅನ್ನೋದು ಸೈತಾನನ ಹೆಸರು.

ಹೊಸ ತಿಳುವಳಿಕೆ: ಮಹಾ ಸಂಕಟದ ಸಮಯದಲ್ಲಿ ಶುದ್ಧ ಆರಾಧಕರ ಮೇಲೆ ಆಕ್ರಮಣ ಮಾಡೋ ಜನಾಂಗಗಳ ಗುಂಪೇ ಮಾಗೋಗ್‌ ದೇಶದ ಗೋಗ.

ಬದಲಾವಣೆಗೆ ಕಾರಣ: ಗೋಗನನ್ನ ಹಕ್ಕಿಗಳಿಗೆ ಆಹಾರವಾಗಿ ಕೊಡಲಾಗುತ್ತೆ ಮತ್ತು ಅದಕ್ಕೆ ಹೂಣಿಡಲು ಭೂಮಿಯಲ್ಲಿ ಜಾಗವನ್ನ ಕೊಡಲಾಗುತ್ತೆ ಅಂತ ಭವಿಷ್ಯವಾಣಿಗಳು ತಿಳಿಸುತ್ತವೆ. ದಾನಿಯೇಲ ಮತ್ತು ಪ್ರಕಟನೆ ಪುಸ್ತಕದಲ್ಲಿ ಭೂಮಿಯಲ್ಲಿರೋ ಜನಾಂಗಗಳು ದೇವಜನರ ವಿರುದ್ಧ ಹೋರಾಡ್ತವೆ ಅಂತ ತಿಳಿಸಲಾಗಿದೆ. ಇದು ಗೋಗನ ಆಕ್ರಮಣದ ಬಗ್ಗೆ ತಿಳಿಸೋ ಬೇರೆ ಭವಿಷ್ಯವಾಣಿಗಳಿಗೆ ಹೊಂದಿಕೆಯಲ್ಲಿದೆ. ಇದ್ರಿಂದ ಗೋಗನು ಆತ್ಮ ಜೀವಿಯಲ್ಲ ಅಂತ ಗೊತ್ತಾಗುತ್ತೆ.—ದಾನಿ. 11:40, 44, 45; ಪ್ರಕ. 17:14; 19:19.

ಯೆಹೆಜ್ಕೇಲನು ನೋಡಿದ್ದು ಅಪೊಸ್ತಲ ಪೌಲನು ತಿಳಿಸಿದ ಆಧ್ಯಾತ್ಮಿಕ ಆಲಯವನ್ನಾ?

ಹಳೇ ತಿಳುವಳಿಕೆ: ಯೆಹೆಜ್ಕೇಲನು ದರ್ಶನದಲ್ಲಿ ನೋಡಿದ ದೇವಾಲಯದ ಬಗ್ಗೆನೇ ಅಪೊಸ್ತಲ ಪೌಲ ತಿಳಿಸಿದ್ದು.

ಹೊಸ ತಿಳುವಳಿಕೆ: ಕೈದಿಗಳು ವಾಪಸ್‌ ಬಂದ ಮೇಲೆ ಶುದ್ಧ ಆರಾಧನೆಯನ್ನ ಪುನಃಸ್ಥಾಪಿಸಲಾಗುತ್ತೆ ಅನ್ನೋದನ್ನ ಸೂಚಿಸುವ ದರ್ಶನವನ್ನ ಯೆಹೆಜ್ಕೇಲನು ನೋಡಿದ್ನೇ ಹೊರತು ಕ್ರಿ.ಶ. 29 ರಲ್ಲಿ ಅಸ್ತಿತ್ವಕ್ಕೆ ಬಂದ ಆಧ್ಯಾತ್ಮಿಕ ಆಲಯವನ್ನಲ್ಲ. ಅಪೊಸ್ತಲ ಪೌಲನು ತಿಳಿಸಿದ ಆಧ್ಯಾತ್ಮಿಕ ಆಲಯ ಮಹಾಪುರೋಹಿತನಾದ ಯೇಸು ಕ್ರಿ.ಶ. 29 ರಿಂದ ಕ್ರಿ.ಶ. 33 ರವರೆಗೆ ಮಾಡಿದ ಕೆಲ್ಸಗಳನ್ನ ಸೂಚಿಸುತ್ತೆ. ಯೆಹೆಜ್ಕೇಲನ ದರ್ಶನದಲ್ಲಿ ಮಹಾ ಪುರೋಹಿತನ ಬಗ್ಗೆ ತಿಳಿಸಲಾಗಿಲ್ಲ, ಕ್ರಿ.ಶ. 1919 ರಲ್ಲಿ ಶುರುವಾದ ಆಧ್ಯಾತ್ಮಿಕ ಪುನಃಸ್ಥಾಪನೆಯ ಬಗ್ಗೆ ತಿಳಿಸಲಾಗಿದೆ. ಹಾಗಾಗಿ ನಾವು ಯೆಹೆಜ್ಕೇಲನು ದರ್ಶನದಲ್ಲಿ ನೋಡಿದ ದೇವಾಲಯದ ಅಳತೆಗಳ ಪ್ರತಿಯೊಂದು ವಿವರಣೆಗೂ ಸೂಚಕರೂಪಗಳನ್ನ ಹುಡುಕೋ ಅಗತ್ಯ ಇಲ್ಲ. ಬದ್ಲಿಗೆ ಶುದ್ಧ ಆರಾಧನೆಗಾಗಿ ಯೆಹೋವನು ಇಟ್ಟಿರೋ ಮಟ್ಟಗಳ ಬಗ್ಗೆ ಈ ದರ್ಶನದಲ್ಲಿ ನೋಡಿದ ವಿಷಯಗಳಿಂದ ನಾವು ಯಾವ ಪಾಠಗಳನ್ನ ಕಲಿಬಹುದು ಅಂತ ನೋಡಬೇಕು.

ಬದಲಾವಣೆಗೆ ಕಾರಣ: ಯೆಹೆಜ್ಕೇಲನು ದರ್ಶನದಲ್ಲಿ ನೋಡಿದ ದೇವಾಲಯಕ್ಕೂ ಆಧ್ಯಾತ್ಮಿಕ ಆಲಯಕ್ಕೂ ತುಂಬ ವ್ಯತ್ಯಾಸಗಳಿವೆ. ಉದಾಹರಣೆಗೆ, ಯೆಹೆಜ್ಕೇಲನು ನೋಡಿದ ಆಲಯದಲ್ಲಿ ತುಂಬ ಪ್ರಾಣಿಗಳನ್ನ ಬಲಿ ಅರ್ಪಿಸಲಾಗಿತ್ತು. ಆದ್ರೆ ಆಧ್ಯಾತ್ಮಿಕ ಆಲಯದಲ್ಲಿ “ಎಲ್ಲ ಕಾಲಕ್ಕೂ ಸೇರಿಸಿ ಒಂದೇ ಸಲ” ಬಲಿಯನ್ನ ಅರ್ಪಿಸಲಾಯ್ತು. (ಇಬ್ರಿ. 9:11, 12) ಯೇಸು ಕ್ರಿಸ್ತನು ಬರೋದಕ್ಕಿಂತ ನೂರಾರು ವರ್ಷಗಳ ಮುಂಚೆ ಅಂದ್ರೆ ಯೆಹೆಜ್ಕೇಲನ ಕಾಲದಲ್ಲಿ ಆಧ್ಯಾತ್ಮಿಕ ಆಲಯದ ಬಗ್ಗೆ ಇರೋ ಆಳವಾದ ಸತ್ಯಗಳನ್ನ ತಿಳಿಸೋ ಯೆಹೋವನ ಸಮಯ ಇನ್ನೂ ಬಂದಿರಲಿಲ್ಲ.