ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 4

ಆ ಅದ್ವಿತೀಯ ಗ್ರಂಥದ ಲೇಖಕನು

ಆ ಅದ್ವಿತೀಯ ಗ್ರಂಥದ ಲೇಖಕನು

 ಅಮೆರಿಕದ ಜನರಲ್ಲಿ ಸುಮಾರು 96 ಪ್ರತಿಶತ ಜನರು ದೇವರನ್ನು ನಂಬುತ್ತೇವೆಂದು ಹೇಳಿಕೊಳ್ಳುತ್ತಾರೆ, ಆದರೆ ಯೂರೋಪ್‌ ಮತ್ತು ಏಷ್ಯಾದ ಜನರಲ್ಲಿ ಈ ಪ್ರತಿಶತ ತೀರ ಕಡಿಮೆಯಾಗಿದೆ. ಒಂದು ರೂಪ ಮತ್ತು ವ್ಯಕ್ತಿತ್ವವುಳ್ಳ ಒಬ್ಬ ದೇವರಿದ್ದಾನೆಂದು ಹೆಚ್ಚಿನವರು ನಂಬದಿರುವ ದೇಶಗಳಲ್ಲಿಯೂ, ಯಾವುದೊ ಅಜ್ಞಾತ ಶಕ್ತಿಯೊಂದು ಭೌತಿಕ ವಿಶ್ವವು ಅಸ್ತಿತ್ವಕ್ಕೆ ಬರುವಂತೆ ಮಾಡಿದೆಯೆಂಬುದನ್ನು ಅನೇಕರು ಅಂಗೀಕರಿಸುತ್ತಾರೆ. ಯಾರ ಚಿತ್ರವು 10,000 ಯೆನ್‌ ಮೌಲ್ಯವುಳ್ಳ ನೋಟಿನ ಮೇಲೆ ಮುದ್ರಿಸಲ್ಪಟ್ಟಿದೆಯೊ ಆ ಜಪಾನಿನ ಸುಪ್ರಸಿದ್ಧ ಶಿಕ್ಷಣಶಾಸ್ತ್ರಜ್ಞರಾದ ಯುಕೀಚೀ ಫುಕುಸಾವಾ ಒಮ್ಮೆ ಬರೆದುದು: “ಸ್ವರ್ಗವು ಒಬ್ಬನನ್ನು ಇನ್ನೊಬ್ಬನಿಗಿಂತ ಮೇಲೆ ಇಲ್ಲವೇ ಕೆಳಮಟ್ಟದಲ್ಲಿರುವಂತೆ ಸೃಷ್ಟಿಸುವುದಿಲ್ಲವೆಂದು ಹೇಳಲಾಗುತ್ತದೆ.” ಇಲ್ಲಿ “ಸ್ವರ್ಗ” ಎಂಬ ಪದವನ್ನು ಉಪಯೋಗಿಸುವಾಗ, ಫುಕುಸಾವಾ ಅವರು ಯಾವುದು ಮಾನವರನ್ನು ಉತ್ಪತ್ತಿಮಾಡಿತೆಂದು ತಾವು ನೆನಸಿದರೊ ಆ ಪ್ರಕೃತಿಯ ಮೂಲತತ್ತ್ವವನ್ನು ಸೂಚಿಸಿ ಮಾತಾಡಿದರು. ಇಂತಹ ಭಾವನಾರೂಪದ “ಸ್ವರ್ಗ”ವನ್ನು, ನೋಬೆಲ್‌ ಪ್ರಶಸ್ತಿ ವಿಜೇತರಾದ ಕೆನೀಚೀ ಫೂಕೂಯೀ ಅಂಗೀಕರಿಸಿದಂತೆ, ಅನೇಕರು ಅಂಗೀಕರಿಸುತ್ತಾರೆ. ಫೂಕೂಯೀ ವಿಶ್ವದ ಒಂದು ಮಹಾ ಆಧಾರಕಟ್ಟಿನಲ್ಲಿ—ಧಾರ್ಮಿಕ ಪದಪ್ರಯೋಗದಲ್ಲಿ “ದೇವರು” ಎಂಬ ಪದಕ್ಕೆ ಸಮಾನ—ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದರೂ, ಅದನ್ನು “ಪ್ರಕೃತಿಯ ವೈಲಕ್ಷಣ್ಯ” ಎಂದು ಕರೆದರು.

ಎಡಕ್ಕೆ: ಯುಕೀಚೀ ಫುಕುಸಾವಾ; ಬಲಕ್ಕೆ: ಕೆನೀಚೀ ಫೂಕೂಯೀ

2 ಇಂತಹ ಪ್ರಜ್ಞಾಶಾಲಿಗಳು ಅನಂತವಾದ ಯಾವುದೊ ಒಂದು ವಸ್ತು ಅಥವಾ ಯಾರೊ ಒಬ್ಬನು ವಿಶ್ವದಲ್ಲಿ ಸರ್ವವನ್ನು ಚಾಲನೆಗೊಳಿಸಿದನೆಂದು ನಂಬುತ್ತಾರೆ. ಏಕೆ? ಇದನ್ನು ಪರಿಗಣಿಸಿರಿ: ಸೂರ್ಯನು ಎಷ್ಟು ವಿಸ್ತಾರವಾದ ನಕ್ಷತ್ರವಾಗಿದೆಯೆಂದರೆ ಅದರಲ್ಲಿ ಲಕ್ಷಾಂತರ ಭೂಗ್ರಹಗಳನ್ನು ತುಂಬಿಸಸಾಧ್ಯವಿದೆ. ಆದರೂ, ಅದು ಕ್ಷೀರಪಥ ಆಕಾಶಗಂಗೆಯಲ್ಲಿ ಕೇವಲ ಒಂದು ಚುಕ್ಕೆಯಾಗಿದೆ. ಸರದಿಯಾಗಿ, ಕ್ಷೀರಪಥವು ವಿಶ್ವದ ಕೋಟ್ಯಂತರ ಆಕಾಶಗಂಗೆಗಳಲ್ಲಿ ಕೇವಲ ಒಂದಾಗಿದೆ. ಆ ಆಕಾಶಗಂಗೆಗಳು ಮಹಾ ವೇಗಗತಿಯಲ್ಲಿ ಒಂದು ಇನ್ನೊಂದರಿಂದ ದೂರ ಚಲಿಸುತ್ತ ಹೋಗುತ್ತಿವೆಯೆಂದು ವೈಜ್ಞಾನಿಕ ಪರಿಶೀಲನೆಗಳು ಸೂಚಿಸುವಂತೆ ಕಂಡುಬರುತ್ತದೆ. ವಿಶ್ವವನ್ನು ಚಾಲನೆಗೊಳಿಸಲು, ಬೃಹತ್‌ ಚಾಲಕಶಕ್ತಿಯ ಅಗತ್ಯವಿದ್ದಿರಬೇಕು. ಹಾಗಾದರೆ, ಇಂತಹ ಶಕ್ತಿಯ ಉಗಮನು ಯಾರು ಅಥವಾ ಏನು? “ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿಕೊಂಡು ನೋಡಿರಿ!” ಎನ್ನುತ್ತದೆ ಬೈಬಲು. “ಈ ಸೈನ್ಯವನ್ನು ಲೆಕ್ಕಕ್ಕೆ ಸರಿಯಾಗಿ ಮುಂದರಿಸುತ್ತಾನಲ್ಲಾ; ಎಲ್ಲವನ್ನೂ ಹೆಸರೆತ್ತಿ ಕರೆಯುತ್ತಾನೆ; ಆತನು ಅತಿ ಬಲಾಢ್ಯನೂ [“ಚಾಲಕಶಕ್ತಿಯ ಸಮೃದ್ಧಿ ಉಳ್ಳವನು,” NW] ಮಹಾಶಕ್ತನೂ ಆಗಿರುವದರಿಂದ ಅವುಗಳೊಳಗೆ ಒಂದೂ ಕಡಿಮೆಯಾಗದು.” (ಯೆಶಾಯ 40:25, 26) ಈ ವಿಶ್ವವನ್ನು ಚಲಿಸುವಂತೆ ಮಾಡಿದ, “ಚಾಲಕಶಕ್ತಿಯ” ಮೂಲನಾದ ಯಾರೊ ಒಬ್ಬನು ಇದ್ದನೆಂದು ಈ ವಚನವು ಸೂಚಿಸುತ್ತದೆ.

ಸೊಂಬ್ರೆರೋ ಗ್ಯಾಲೆಕ್ಷಿ

3 ಭೂಮಿಯ ಮೇಲಿನ ಜೀವಿತದ ಕುರಿತು ಸಹ ಯೋಚಿಸಿರಿ. ವಿಕಾಸವಾದಿಗಳು ಹೇಳುವಂತೆ, ಜೀವವು ತನ್ನಷ್ಟಕ್ಕೆ ತಾನೇ ಆರಂಭಗೊಳ್ಳಲು ಸಾಧ್ಯವಿದೆಯೊ? ಜೀವ ರಸಾಯನ ವಿಜ್ಞಾನಿ ಮೈಕಲ್‌ ಬೀಹೀ ಹೇಳುವುದು: “ಜೀವದ ರಸಾಯನ ಕ್ರಿಯೆಯು ಹೇಗೆ ಕಾರ್ಯನಡೆಸುತ್ತದೆಂಬ ವಿಷಯವನ್ನು ತಿಳಿದುಕೊಳ್ಳುವುದರಲ್ಲಿ ವಿಜ್ಞಾನವು ತುಂಬ ಪ್ರಗತಿಯನ್ನು ಮಾಡಿರುತ್ತದಾದರೂ, ಆಣ್ವಿಕ ಮಟ್ಟದಲ್ಲಿ ಜೀವಶಾಸ್ತ್ರೀಯ ವ್ಯವಸ್ಥೆಗಳ ನಿಷ್ಕೃಷ್ಟತೆಯೂ ಜಟಿಲತೆಯೂ, ಅವುಗಳ ಆರಂಭಗಳನ್ನು ವಿವರಿಸಲು ವಿಜ್ಞಾನವು ಮಾಡಿರುವ ಪ್ರಯತ್ನಗಳನ್ನು ವಿಫಲಗೊಳಿಸಿದೆ. . . . ಅನೇಕ ವಿಜ್ಞಾನಿಗಳು ಹುಮ್ಮಸ್ಸಿನಿಂದ ಇದಕ್ಕೆ ವಿವರಣೆಗಳು ಆಗಲೇ ದೊರೆತಿವೆಯೆಂದೊ, ಇಂದಲ್ಲ ನಾಳೆ ದೊರೆಯುವುದೆಂದೊ, ಸಾರಿ ಹೇಳುತ್ತಾರಾದರೂ ವೃತ್ತಿಪರ ವೈಜ್ಞಾನಿಕ ಸಾಹಿತ್ಯಗಳಲ್ಲಿ ಇಂತಹ ಹೇಳಿಕೆಗಳಿಗೆ ಯಾವ ಬೆಂಬಲವೂ ಕಂಡುಬರುವುದಿಲ್ಲ. ಹೆಚ್ಚು ಪ್ರಾಮುಖ್ಯವಾಗಿ, ಆ [ಜೀವಾಣ್ವಿಕ] ವ್ಯವಸ್ಥೆಗಳ ರಚನೆಯ ಆಧಾರದ ಮೇಲೆ, ಜೀವದ ಪ್ರಕ್ರಿಯೆಗಳ ಕುರಿತು ಡಾರ್ವಿನ್‌ ಒದಗಿಸಿದ ವಿವರಣೆಯು ಸದಾಕಾಲಕ್ಕೂ ಅರ್ಥವಾಗದಂಥದ್ದು ಎಂದು ನೆನಸಲು ನಿರ್ಬಂಧಿಸುವ ಕಾರಣಗಳಿವೆ.”

“ಒಂದು ಸಾಮಾನ್ಯ ಪ್ರೋಟೀನಿನ ಬಾಗನ್ನು . . . ತ್ರಿವಿಮಿತಿಗಳುಳ್ಳ ಜಿಗ್‌ಬಂಧಕ್ಕೆ ಹೋಲಿಸಬಹುದು,” ಎನ್ನುತ್ತಾರೆ ಮೈಕಲ್‌ ಬೀಹೀ. ಆದರೂ, ಮಾನವ ದೇಹದಲ್ಲಿ ಇಂತಹ ನೂರಾರು ಸಾವಿರ ಜಿಗ್‌ಬಂಧಗಳಿರಬಹುದು. ವಿಜ್ಞಾನಿಗಳು ಈ ಜಿಗ್‌ಬಂಧಗಳನ್ನು ಬಿಡಿಸಲು ಪ್ರಯತ್ನಿಸುತ್ತಾರೆ ನಿಜ, ಆದರೆ ಅವನ್ನು ವಿನ್ಯಾಸಿಸಿದವನು ಯಾರು?

4 ಮಾನವ ಜೀವವು ಯಾವುದೇ ಬುದ್ಧಿವಂತ ಶಕ್ತಿಯ ಸಹಾಯವಿಲ್ಲದೆ ಅಸ್ತಿತ್ವಕ್ಕೆ ಬಂದಿದೆಯೆಂಬ ವಾದವು ನಿಮಗೆ ನಿಜವಾಗಿಯೂ ತೃಪ್ತಿಯನ್ನು ನೀಡಿದೆಯೆ? “ವಿಶ್ವದಲ್ಲಿಯೇ ಅತ್ಯಂತ ಜಟಿಲವಾದ ವಸ್ತು” ಎಂದು ಕೆಲವರು ಯಾವುದರ ಬಗ್ಗೆ ಹೇಳಿರುತ್ತಾರೊ ಆ ಮಾನವ ಮಿದುಳನ್ನು ಉದಾಹರಣೆಯಾಗಿ ತೆಗೆದುಕೊಂಡು, ಅದರಿಂದ ಯಾವ ತೀರ್ಮಾನಗಳಿಗೆ ನಾವು ಬರಬಲ್ಲೆವೆಂದು ನೋಡೋಣ. “ನರವ್ಯೂಹ-ಜಾಲ (ನ್ಯೂರಲ್‌ ನೆಟ್ವರ್ಕ್‌) ಕಂಪ್ಯೂಟರ್‌ಗಳಲ್ಲಿ ಅತಿ ಮುಂದುವರಿದ ಕಂಪ್ಯೂಟರಿಗೆ ಒಂದು ನೊಣಕ್ಕಿರುವ . . . ಸಾಮರ್ಥ್ಯದ ಹತ್ತು ಸಾವಿರಗಳ ಅಂಶಗಳಲ್ಲಿ ಸುಮಾರು ಒಂದಂಶ ಮಾತ್ರ ಇದೆ,” ಎಂದು ಡಾ. ರಿಚರ್ಡ್‌ ರೆಸ್ಟ್ಯಾಕ್‌ ಹೇಳುತ್ತಾರೆ. ಮಾನವ ಮಿದುಳು ನೊಣದ ಮಿದುಳಿಗಿಂತ ಎಷ್ಟೋ ಮೇಲ್ಮಟ್ಟದ್ದಾಗಿದೆ. ನಮ್ಮ ಮಿದುಳಿನಲ್ಲಿ ಭಾಷೆಗಳನ್ನು ಕಲಿಯುವ ಕಾರ್ಯಕ್ರಮವು ಸಂಯೋಜಿಸಲ್ಪಟ್ಟಿದೆ. ಅದು ತನ್ನನ್ನು ತಾನೇ ದುರಸ್ತುಪಡಿಸಿಕೊಂಡು, ಕಾರ್ಯಕ್ರಮಗಳನ್ನು ಪುನಃ ಬರೆದು, ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಶಕ್ತವಾಗಿದೆ. “ಒಂದು ನೊಣಕ್ಕಿರುವ . . . ಸಾಮರ್ಥ್ಯದ ಹತ್ತು ಸಾವಿರಗಳ ಅಂಶಗಳಲ್ಲಿ ಸುಮಾರು ಒಂದಂಶ” ಸಾಮರ್ಥ್ಯವಿರುವ ಅತಿ ಶಕ್ತಿಯುತವಾದ ಸೂಪರ್‌ಕಂಪ್ಯೂಟರಿಗೂ ಒಬ್ಬ ಬುದ್ಧಿಶಾಲಿಯಾದ ವಿನ್ಯಾಸಕನಿದ್ದಾನೆಂಬುದನ್ನು ನೀವು ನಿಸ್ಸಂದೇಹವಾಗಿಯೂ ಒಪ್ಪಿಕೊಳ್ಳುವಿರಿ. ಹಾಗಾದರೆ ಮಾನವ ಮಿದುಳಿನ ವಿಷಯದಲ್ಲೇನು? *

5 ಸುಮಾರು 3,000 ವರ್ಷಗಳ ಹಿಂದೆ, ಜನರಿಗೆ ತಮ್ಮ ಸ್ವಂತ ಶರೀರ ರಚನೆಯ ಅದ್ಭುತಗಳ ಪೂರ್ಣವಾದ ತಿಳಿವಳಿಕೆ ಇಲ್ಲದಿದ್ದ ಕಾಲದಲ್ಲಿ, ಒಬ್ಬ ಬೈಬಲ್‌ ಲೇಖಕನು ಮಾನವ ಶರೀರ ರಚನೆಯ ಕುರಿತು ಧ್ಯಾನಿಸಿ ಹೇಳಿದ್ದು: “ನೀನು ನನ್ನನ್ನು ಅದ್ಭುತವಾಗಿಯೂ ವಿಚಿತ್ರವಾಗಿಯೂ ರಚಿಸಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ. ನಿನ್ನ ಕೃತ್ಯಗಳು ಆಶ್ಚರ್ಯವಾಗಿವೆಯೆಂದು ನನ್ನ ಹೃದಯವು ಚೆನ್ನಾಗಿ ಗ್ರಹಿಸಿಕೊಂಡಿದೆ.” ಡಿಎನ್‌ಎ ಅಣುಗಳ ಜ್ಞಾನವೇ ಇಲ್ಲದಿದ್ದ ಅವನು ಬರೆದುದು: “ನಿನ್ನ ಕಣ್ಣುಗಳು ನಾನಿದ್ದ ಗರ್ಭಪಿಂಡವನ್ನೂ ನೋಡಿದವು, ಮತ್ತು ನಿನ್ನ ಪುಸ್ತಕದಲ್ಲಿ ಅದರ ಸಕಲ ಅಂಗಗಳು ಬರೆದಿಡಲ್ಪಟ್ಟವು.” (ಕೀರ್ತನೆ 139:14, 16, NW) ಅವನು ಯಾರ ವಿಷಯವಾಗಿ ಮಾತಾಡುತ್ತಿದ್ದನು? ವಿಶ್ವದಲ್ಲಿರುವ ಸರ್ವಸ್ವವನ್ನೂ “ಚಾಲಕಶಕ್ತಿಯ ಸಮೃದ್ಧಿ”ಯ ಮುಖಾಂತರ ಹುಟ್ಟಿಸಿದವನಾರು?

ಹೆಚ್ಚು ಸಾಮರ್ಥ್ಯ ಯಾವುದಕ್ಕಿದೆ, ನ್ಯೂರಲ್‌ ನೆಟ್ವರ್ಕ್‌ ಕಂಪ್ಯೂಟರ್‌ಗಳಿಗೊ, ಸಾಧಾರಣವಾದ ನೊಣಕ್ಕೊ?

6 ಬೈಬಲಿನ ಪ್ರಪ್ರಥಮ ವಚನವೇ, “ಆದಿಯಲ್ಲಿ ದೇವರು ಆಕಾಶವನ್ನೂ ಭೂಮಿಯನ್ನೂ ಉಂಟುಮಾಡಿದನು” ಎಂದು ಹೇಳುತ್ತದೆ. (ಆದಿಕಾಂಡ 1:1) ಆತನು ಬೈಬಲಿನ ಲೇಖಕನೂ ಆಗಿದ್ದಾನೆ; ಅದರಲ್ಲಿ ಅಡಕವಾಗಿರುವ ವಿಷಯಗಳನ್ನು ಪ್ರೇರಿಸಿದವನಾಗಿದ್ದಾನೆ. ಆತನು ತನ್ನನ್ನು, ಯಾರೊಂದಿಗೆ ನಾವು ಅರ್ಥವತ್ತಾದ ಒಂದು ಸಂಬಂಧವನ್ನು ಇಟ್ಟುಕೊಳ್ಳಸಾಧ್ಯವಿದೆಯೊ ಅಂತಹ ಒಬ್ಬ ವ್ಯಕ್ತಿಯಾಗಿ ಪ್ರಕಟಿಸಿಕೊಳ್ಳುತ್ತಾನೆ.

^ ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟಿರುವ, ನಿಮ್ಮ ಬಗ್ಗೆ ಚಿಂತಿಸುವ ಸೃಷ್ಟಿಕರ್ತನೊಬ್ಬನು ಇದ್ದಾನೊ? (ಇಂಗ್ಲಿಷ್‌) ಎಂಬ ಪುಸ್ತಕದ 2-4ನೆಯ ಅಧ್ಯಾಯಗಳಲ್ಲಿ ಇದರ ಬಗ್ಗೆ ಹೆಚ್ಚಿನ ವಿವರಗಳನ್ನು ಓದುವುದರಲ್ಲಿ ನೀವು ಆನಂದಿಸುವಿರಿ.