ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 5

ದೇವರನ್ನು ತಿಳಿದುಕೊಳ್ಳಲು ಆರಂಭಿಸುವುದು

ದೇವರನ್ನು ತಿಳಿದುಕೊಳ್ಳಲು ಆರಂಭಿಸುವುದು

 ನೀವು ಸಲಹೆ ಪಡೆಯಲು ಬಯಸುವಾಗ, ಒಬ್ಬ ಭರವಸಾರ್ಹ ವ್ಯಕ್ತಿಯ ಬಳಿ ನೀವು ಹೋಗುವುದಿಲ್ಲವೆ? ಏಕೆಂದರೆ, ನಿಮಗೆ ದೊರೆಯುವ ಸಲಹೆಯ ಮೂಲವು ಭರವಸಾರ್ಹವಾಗಿರುವಲ್ಲಿ, ನಿಮಗೆ ಪ್ರಯೋಜನಗಳು ಇಂದು ಬರಲಿ, ನಾಳೆ ಬರಲಿ, ಅದನ್ನು ಅನುಸರಿಸಲು ನಿಮಗೆ ಹೆಚ್ಚಿನ ಮನಸ್ಸಿರುವುದು. ಬೈಬಲಿನಲ್ಲಿರುವ ಪ್ರಾಯೋಗಿಕ ಸಲಹೆಯಿಂದ ನಿಮಗೆ ನಿಜವಾಗಿ ಪ್ರಯೋಜನವಾಗಬೇಕಾದರೆ, ನಿಮಗೆ ಅದರ ಗ್ರಂಥಕರ್ತನ ಪರಿಚಯವಾಗಲೇಬೇಕು. ಆಗ ನೀವು ಆತನ “ಸ್ನೇಹಿತ”ರಾಗುವ ಸಾಧ್ಯತೆಯೂ ಇದೆ!—ಯೆಶಾಯ 41:8.

ಯೆಶಾಯ ಪುಸ್ತಕದ ಹೀಬ್ರು ಗ್ರಂಥಪಾಠದಲ್ಲಿ ಕಂಡುಬರುವ ದೈವಿಕ ನಾಮ

2 ನೀವು ಒಬ್ಬನ ಸ್ನೇಹವನ್ನು ಬಯಸುವಲ್ಲಿ, ಖಂಡಿತವಾಗಿಯೂ ಆತನ ಹೆಸರನ್ನು ತಿಳಿಯಬಯಸುವಿರಿ. ಬೈಬಲಿನ ದೇವರಿಗೆ ಹೆಸರಿದೆಯೆ? ಆತನು ಪ್ರಕಟಪಡಿಸಿದ್ದು: “ನಾನೇ ಯೆಹೋವನು; ಇದೇ ನನ್ನ ನಾಮವು; ನನ್ನ ಮಹಿಮೆಯನ್ನು ಮತ್ತೊಬ್ಬನಿಗೆ ಸಲ್ಲಗೊಡಿಸೆನು, ನನ್ನ ಸ್ತೋತ್ರವನ್ನು ವಿಗ್ರಹಗಳ ಪಾಲು ಮಾಡೆನು.” (ಯೆಶಾಯ 42:8) ಹೀಬ್ರು ಭಾಷೆಯಲ್ಲಿ ಬಲದಿಂದ ಎಡಕ್ಕೆ יהוה ಈ ರೀತಿಯಲ್ಲಿ ಬರೆಯಲಾಗಿರುವ “ಯೆಹೋವ” ಎಂಬುದು ಆತನ ಹೆಸರು. ಬೈಬಲಿನ ಹೀಬ್ರು ಶಾಸ್ತ್ರದಲ್ಲಿ ಈ ಹೆಸರು ಸುಮಾರು 7,000 ಬಾರಿ ತೋರಿಬರುತ್ತದೆ. ಈ ದೈವಿಕ ಹೆಸರಿನ ಅರ್ಥವು “ಆತನು ಆಗುವಂತೆ ಮಾಡುತ್ತಾನೆ” ಎಂದು ತಿಳಿಯಲಾಗಿದೆ. ಅಂದರೆ, ತನ್ನ ಉದ್ದೇಶಗಳನ್ನು ನೆರವೇರಿಸಲು ಆತನು ಏನಾಗಿ ಆಗಬೇಕೊ ಅದರಂತೆ ತನ್ನನ್ನು ಆಗಿಸಿಕೊಳ್ಳುತ್ತಾನೆ. ಅಷ್ಟೇ ಅಲ್ಲ, ಹೀಬ್ರುವಿನಲ್ಲಿ ಆತನ ನಾಮವು ನೆರವೇರುತ್ತಾ ಇರುವ ಒಂದು ಕ್ರಿಯೆಯನ್ನು ಸೂಚಿಸುವ ವ್ಯಾಕರಣರೂಪದಲ್ಲಿದೆ. ಅದೇನನ್ನು ಸೂಚಿಸುತ್ತದೆ? ಯೆಹೋವನು ತನ್ನ ಉದ್ದೇಶಗಳನ್ನು ನೆರವೇರಿಸಲು ಏನಾಗಿ ಆಗುವ ಅಗತ್ಯವಿದೆಯೊ ಹಾಗೆಯೇ ತನ್ನನ್ನು ಆಗಿಸಿಕೊಂಡಿದ್ದಾನೆ ಮಾತ್ರವಲ್ಲ ಈಗಲೂ ಆಗಿಸಿಕೊಳ್ಳುತ್ತಿದ್ದಾನೆಂದು ಅದು ತಿಳಿಸುತ್ತದೆ. ಆತನು ಜೀವಸ್ವರೂಪನಾದ ದೇವರಾಗಿದ್ದಾನೆಯೇ ಹೊರತು ಯಾವುದೇ ವ್ಯಕ್ತಿತ್ವವಿಲ್ಲದ ಒಂದು ಶಕ್ತಿಯಲ್ಲ!

3 ಯೆಹೋವನು ಸೃಷ್ಟಿಕರ್ತನಾಗಿ ಆಗಿಸಿಕೊಂಡನು. (ಆದಿಕಾಂಡ 1:1) ಆತನು, “ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಅವುಗಳಲ್ಲಿರುವ ಸಮಸ್ತವನ್ನೂ ನಿರ್ಮಾಣಮಾಡಿದ ಜೀವಸ್ವರೂಪನಾದ ದೇವರು.” (ಅ. ಕೃತ್ಯಗಳು 14:15) ಯೆಹೋವನು ಆದಿ ಮಾನವ ದಂಪತಿಯಾದ ಆದಾಮಹವ್ವರ ಸಮೇತ, ಸಮಸ್ತವನ್ನೂ ಸೃಷ್ಟಿಸಿದನು. ಹೀಗೆ, ದೇವರು “ಜೀವದ ಬುಗ್ಗೆ” ಆಗಿದ್ದಾನೆ. (ಕೀರ್ತನೆ 36:9) ಆತನು ಜೀವಪೋಷಕನೂ ಆದನು. “ಆತನು ತನ್ನ ವಿಷಯದಲ್ಲಿ ಸಾಕ್ಷಿಕೊಡದೆ ಇರಲಿಲ್ಲ; ನಿಮಗೆ ಆಕಾಶದಿಂದ ಮಳೆಯನ್ನೂ ಸುಗ್ಗೀಕಾಲಗಳನ್ನೂ ದಯಪಾಲಿಸಿ ಆಹಾರಕೊಟ್ಟು ನಿಮ್ಮ ಮನಸ್ಸುಗಳನ್ನು ಆನಂದದಿಂದ ತುಂಬಿಸಿ ಉಪಕಾರಮಾಡುತ್ತಾ ಬಂದವನು ಆತನೇ.” (ಅ. ಕೃತ್ಯಗಳು 14:17) ಆಫ್ರಿಕ ಮತ್ತು ಏಷ್ಯಾದಲ್ಲಿ ಅನೇಕರು, ತಾವು ತಮ್ಮ ಪೂರ್ವಜರಿಂದ ಜೀವವನ್ನು ಪಡೆದಿರುವ ಕಾರಣಕ್ಕಾಗಿ ಆ ಪೂರ್ವಜರನ್ನೇ ಆರಾಧಿಸುತ್ತಾರೆ. ಆದರೆ, ಪ್ರಥಮ ದಂಪತಿಗಳನ್ನು ಸೃಷ್ಟಿಸಿ ಅವರಿಗೆ ಸಂತಾನ ಪಡೆಯುವ ಸಾಮರ್ಥ್ಯವನ್ನು ಕೊಟ್ಟಾತನಿಗೆ, ಅಂದರೆ ತಮ್ಮ ಸೃಷ್ಟಿಕರ್ತನಿಗೆ ಮತ್ತು ಜೀವಪೋಷಕನಿಗೆ ಅವರು ಅದಕ್ಕಿಂತ ಹೆಚ್ಚು ಋಣಿಗಳಾಗಿರಬಾರದೊ? ಈ ನಿಜತ್ವವನ್ನು ಮನನಮಾಡುವಾಗ, ನೀವು ಹೀಗೆ ಉದ್ಗರಿಸುವಂತೆ ಪ್ರೇರಿಸಲ್ಪಡಬಹುದು: “ಕರ್ತನೇ, ನಮ್ಮ ದೇವರೇ, ನೀನು ಪ್ರಭಾವ ಮಾನ ಬಲಗಳನ್ನು ಹೊಂದುವದಕ್ಕೆ ಯೋಗ್ಯನಾಗಿದ್ದೀ; ಸಮಸ್ತವನ್ನು ಸೃಷ್ಟಿಸಿದಾತನು ನೀನೇ; ಎಲ್ಲವು ನಿನ್ನ ಚಿತ್ತದಿಂದಲೇ ಇದ್ದವು, ನಿನ್ನ ಚಿತ್ತದಿಂದಲೇ ನಿರ್ಮಿತವಾದವು.”—ಪ್ರಕಟನೆ 4:11.

4 ಬೈಬಲಿನ ಪುಟಗಳಿಂದ ನೀವು ಸೃಷ್ಟಿಕರ್ತನಾದ ಯೆಹೋವನ ಬಗ್ಗೆ ತಿಳಿದು ಆತನು ಯಾವ ವಿಧದ ದೇವರೆಂಬುದನ್ನು ಕಲಿಯಬಲ್ಲಿರಿ. “ದೇವರು ಪ್ರೀತಿಸ್ವರೂಪಿ” ಎಂದು ಅದು ತಿಳಿಯಪಡಿಸುತ್ತದೆ. (1 ಯೋಹಾನ 4:16; ವಿಮೋಚನಕಾಂಡ 34:6, 7) ನೀವು ಬೈಬಲನ್ನು ಆದಿಕಾಂಡದಿಂದ ಪ್ರಕಟನೆಯ ತನಕ ಓದುವಾಗ, ಆತನು ನಿಶ್ಚಯವಾಗಿಯೂ ಪ್ರೀತಿಸ್ವರೂಪನಾದ ದೇವರು ಎಂಬುದನ್ನು ತೋರಿಸುವ ಅನೇಕ ವೃತ್ತಾಂತಗಳನ್ನು ಕಂಡುಹಿಡಿಯುವಿರಿ. ಆದಕಾರಣ, ನಿಮ್ಮ ಸೃಷ್ಟಿಕರ್ತನನ್ನು ತಿಳಿದುಕೊಳ್ಳುವ ಉದ್ದೇಶದಿಂದ ಪ್ರತಿದಿನ ದೇವರ ವಾಕ್ಯವನ್ನು ಓದುವುದನ್ನು ನೀವು ಏಕೆ ರೂಢಿಮಾಡಿಕೊಳ್ಳಬಾರದು? ಅದರಲ್ಲಿ ಅಡಕವಾಗಿರುವ ವಿಷಯಗಳ ಪರಿಚಯ ಇರುವವರೊಂದಿಗೆ ಬೈಬಲನ್ನು ಜಾಗರೂಕತೆಯಿಂದ ಅಧ್ಯಯನಮಾಡಿರಿ. (ಅ. ಕೃತ್ಯಗಳು 8:26-35) ಹಾಗೆ ಮಾಡುವಾಗ, ಆತನು ದುಷ್ಟತ್ವವನ್ನು ಸದಾಕಾಲಕ್ಕೂ ಅನುಮತಿಸದ ನ್ಯಾಯದ ದೇವರೂ ಆಗಿದ್ದಾನೆ ಎಂಬದನ್ನು ನೀವು ನೋಡುವಿರಿ. (ಧರ್ಮೋಪದೇಶಕಾಂಡ 32:4) ಪ್ರೀತಿ ಮತ್ತು ನ್ಯಾಯದ ಮಧ್ಯೆ ಸಮತೂಕವನ್ನಿಟ್ಟುಕೊಳ್ಳುವುದು ಮನುಷ್ಯನಿಗೆ ಸುಲಭವಾಗಿರದಿದ್ದರೂ, ಯೆಹೋವನು ತನ್ನ ವಿವೇಕದಿಂದ ಅವುಗಳನ್ನು ಪರಿಪೂರ್ಣ ಸಮತೂಕದಲ್ಲಿರಿಸುತ್ತಾನೆ. (ರೋಮಾಪುರ 11:33; 16:27) ಆತನು ಸರ್ವಶಕ್ತನಾದ ದೇವರಾಗಿರುವುದರಿಂದ, ತನ್ನ ಉದ್ದೇಶಗಳನ್ನು ನೆರವೇರಿಸಲು ಏನು ಬೇಕೊ ಅದೆಲ್ಲವನ್ನು ಮಾಡುವ ಶಕ್ತಿ ಆತನಿಗಿದೆ. (ಆದಿಕಾಂಡ 17:1) ನೀವು ಬೈಬಲಿನಲ್ಲಿ ಕಂಡುಕೊಳ್ಳುವ ವಿವೇಕದ ಸಲಹೆಯನ್ನು ಅನ್ವಯಿಸಿಕೊಳ್ಳಲು ಪ್ರಯತ್ನಿಸುವಾಗ, ನಿಮ್ಮ ಸೃಷ್ಟಿಕರ್ತನನ್ನು ಇನ್ನೂ ಹೆಚ್ಚಾಗಿ ಗಣ್ಯಮಾಡುವಿರಿ. ಏಕೆಂದರೆ ಆತನ ಸಲಹೆಯು ಸದಾ ನಮ್ಮ ಪ್ರಯೋಜನಾರ್ಥವಾಗಿ ಕಾರ್ಯನಡೆಸುತ್ತದೆಂಬುದನ್ನು ನೀವು ಗ್ರಹಿಸುವಿರಿ.

ಯೆಹೋವನನ್ನು ಪ್ರಾರ್ಥನೆಯಲ್ಲಿ ಏಕೆ ಸಮೀಪಿಸಬಾರದು?

5 ದೇವರನ್ನು ಸಮೀಪಿಸಲು ಇನ್ನೂ ಒಂದು ಮಾರ್ಗವಿದೆ. ಅದು ಪ್ರಾರ್ಥನೆಯೇ ಆಗಿದೆ. ಯೆಹೋವನು “ಪ್ರಾರ್ಥನೆಯನ್ನು ಕೇಳುವವ”ನಾಗಿದ್ದಾನೆ. (ಕೀರ್ತನೆ 65:2) ಆತನು “ತನ್ನ ಶಕ್ತಿಯ ಪ್ರಕಾರ ನಾವು ಬೇಡುವದಕ್ಕಿಂತಲೂ ಯೋಚಿಸುವದಕ್ಕಿಂತಲೂ ಅತ್ಯಧಿಕವಾದದ್ದನ್ನು ಮಾಡಲು ಶಕ್ತ”ನಾಗಿದ್ದಾನೆ. (ಎಫೆಸ 3:20, 21) ಆದರೂ, ತನಗೆ ಸಹಾಯ ಬೇಕಾಗುವಾಗ ಮಾತ್ರ ನಿಮ್ಮ ಬಳಿ ಬರುವ ಒಬ್ಬ ‘ಸ್ನೇಹಿತನ’ ವಿಷಯದಲ್ಲಿ ನೀವು ಏನು ಎಣಿಸುವಿರಿ? ಅವನನ್ನು ನೀವು ಪ್ರಾಯಶಃ ಹೆಚ್ಚು ಗೌರವಿಸಲಾರಿರಿ. ಹಾಗೆಯೇ, ಪ್ರಾರ್ಥನೆಯ ಸದವಕಾಶವನ್ನು ಸಹ, ನಿಮಗೆ ಅಗತ್ಯವಾಗಿರುವ ಸಂಗತಿಗಳನ್ನು ದೇವರಿಂದ ಕೇಳಲಿಕ್ಕಾಗಿ ಮಾತ್ರವಲ್ಲ, ಆತನಿಗೆ ಉಪಕಾರಸ್ಮರಣೆಯನ್ನು ಮಾಡಲು ಮತ್ತು ಸ್ತುತಿಸಲು ಸಹ ನೀವು ಉಪಯೋಗಿಸಲು ಬಯಸುವಿರೆಂಬುದರಲ್ಲಿ ಸಂಶಯವಿಲ್ಲ.—ಫಿಲಿಪ್ಪಿ 4:6, 7; 1 ಥೆಸಲೊನೀಕ 5:17, 18.