ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 6

ಯೆಹೋವನು ನಮ್ಮನ್ನು ಸೃಷ್ಟಿಸಿದ್ದೇಕೆ?

ಯೆಹೋವನು ನಮ್ಮನ್ನು ಸೃಷ್ಟಿಸಿದ್ದೇಕೆ?

ರಾಜನಾದ ಸೊಲೊಮೋನನು ಜೀವನದ ಅರ್ಥವೇನು ಎಂಬ ಪ್ರಶ್ನೆಯನ್ನು ಪರಿಶೀಲಿಸಿದನು

 ಯೆಹೋವನ ಬಗ್ಗೆ ತಿಳಿದುಕೊಳ್ಳುವುದು ನಿಮಗೆ ಯಾವ ಅರ್ಥದಲ್ಲಿರುವುದು? ಬೇರೆ ವಿಷಯಗಳೊಂದಿಗೆ, ಅದು ನಿಮಗೆ ಕೋಟ್ಯಂತರ ಜನರನ್ನು ತೊಡಕಿನಲ್ಲಿ ಸಿಕ್ಕಿಸಿರುವಂತಹ, ‘ನಾನು ಏಕೆ ಇಲ್ಲಿದ್ದೇನೆ?’ ಎಂಬ ಪ್ರಶ್ನೆಗೆ ಉತ್ತರವನ್ನು ದೊರಕಿಸಿಕೊಡುವುದು. ಒಂದಲ್ಲ ಒಂದು ಸಮಯದಲ್ಲಿ ನೀವು ಆ ವಿಷಯದ ಬಗ್ಗೆ ಕುತೂಹಲಪಟ್ಟಿರಬಹುದು. ಜೀವನದ ಅರ್ಥದ ಕುರಿತು ಎದ್ದಿದ್ದ ಆ ಪ್ರಶ್ನೆಯನ್ನು ತನ್ನ ದಿನದಲ್ಲಿ, ಐಶ್ವರ್ಯದಲ್ಲಿ “ಎಲ್ಲಾ ಅರಸರಿಗಿಂತ ಮಿಗಿಲಾಗಿದ್ದ” ಒಬ್ಬ ವಿವೇಕಿ ರಾಜನು ಪರೀಕ್ಷಿಸಿದನು. (2 ಪೂರ್ವಕಾಲವೃತ್ತಾಂತ 9:22; ಪ್ರಸಂಗಿ 2:1-13) ಈ ಅರಸನಾದ ಸೊಲೊಮೋನನ ಬಳಿ ಮಹಾ ಅಧಿಕಾರವೂ, ಹೇರಳವಾದ ಐಶ್ವರ್ಯವೂ ಸರಿಸಾಟಿಯಿಲ್ಲದ ವಿವೇಕವೂ ಇದ್ದವು. ಹಾಗಾದರೆ ಅವನು ಮಾಡಿದ ಸಂಶೋಧನೆಯ ಫಲವೇನು? “ವಿಷಯವು ತೀರಿತು; ಎಲ್ಲವೂ ಕೇಳಿ ಮುಗಿಯಿತು; ದೇವರಿಗೆ ಭಯಪಟ್ಟು ಆತನ ಆಜ್ಞೆಗಳನ್ನು ಕೈಕೊಳ್ಳು; ಮನುಷ್ಯರೆಲ್ಲರ [ಕರ್ತವ್ಯವು] ಇದೇ.” (ಪ್ರಸಂಗಿ 12:13) ಸೊಲೊಮೋನನ ಅನುಭವವು ಹೆಚ್ಚಿನ ಜನರ ಅನುಭವಕ್ಕಿಂತ ಮಿಗಿಲಾಗಿರುವುದರಿಂದ, ಅವನು ಮಾಡಿದ ಈ ತೀರ್ಮಾನವನ್ನು ನಾವು, ಕಡಿಮೆಪಕ್ಷ ಪರ್ಯಾಲೋಚಿಸಿ ನೋಡಲಿಕ್ಕಾದರೂ ಅರ್ಹವಾಗಿದೆ.—ಪ್ರಸಂಗಿ 2:12.

2 ಸೊಲೊಮೋನನು ಸೂಚಿಸಿದ ದೇವರ ಭಯವು ಯಾವುದೊ ಒಂದು ಅಜ್ಞಾತ ಆತ್ಮಶಕ್ತಿಯ ವಿಕಾರವಾದ ಭಯವಲ್ಲ. ಬದಲಿಗೆ, ನೀವು ಬಹಳವಾಗಿ ಪ್ರೀತಿಸುವ ಒಬ್ಬನನ್ನು ಅಸಂತೋಷಪಡಿಸುವುದರ ಕುರಿತಾದ ಹಿತಕರವಾದ ಭಯವು ಇದಾಗಿದೆ. ನೀವು ಒಬ್ಬ ವ್ಯಕ್ತಿಯನ್ನು ಬಹಳವಾಗಿ ಪ್ರೀತಿಸುವಲ್ಲಿ, ನೀವು ಖಂಡಿತವಾಗಿಯೂ ಅವನನ್ನು ಸದಾ ಮೆಚ್ಚಿಸಲು ಬಯಸಿ, ಅವನನ್ನು ಬೇಸರಗೊಳಿಸುವ ಯಾವುದೇ ವಿಷಯವನ್ನು ಮಾಡುವುದರಿಂದ ದೂರವಿರುವಿರಿ. ನೀವು ಯೆಹೋವನನ್ನು ಪ್ರೀತಿಸಲಾರಂಭಿಸುವಾಗ, ಆತನ ವಿಷಯದಲ್ಲಿ ನಿಮಗೂ ಅದೇ ರೀತಿಯ ಅನಿಸಿಕೆಯಾಗುವುದು.

3 ಬೈಬಲನ್ನು ಓದುವ ಮೂಲಕ ನೀವು ಸೃಷ್ಟಿಕರ್ತನ ಇಷ್ಟ ಅನಿಷ್ಟಗಳನ್ನೂ ಆತನು ಭೂಮಿಯನ್ನು ಯಾವ ಉದ್ದೇಶದಿಂದ ಸೃಷ್ಟಿಸಿದ್ದಾನೆಂಬುದನ್ನೂ ಕಲಿಯಬಲ್ಲಿರಿ. ಯೆಹೋವನು ಭೂಮಿಯನ್ನು “ನಿರ್ಮಿಸಿ ರೂಪಿಸಿ”ದ ವ್ಯಕ್ತಿಯೆಂದು ವರ್ಣಿಸುತ್ತ, “ಅದನ್ನು ಶೂನ್ಯಸ್ಥಾನವಾಗಿರಲೆಂದು ಸೃಷ್ಟಿಸದೆ ಜನನಿವಾಸಕ್ಕಾಗಿಯೇ ರೂಪಿಸಿದನು” ಎಂದೂ ಬೈಬಲು ಆತನ ಕುರಿತು ಹೇಳುತ್ತದೆ. (ಯೆಶಾಯ 45:18) ಯೆಹೋವನು ಜನರ ನಿವಾಸಕ್ಕಾಗಿ ಭೂಮಿಯನ್ನು ಸಿದ್ಧಗೊಳಿಸಿದನು. ಅವರು ಭೂಮಿಯ ಮತ್ತು ಅದರಲ್ಲಿರುವ ಸಕಲ ಜೀವಿಗಳ ಆರೈಕೆ ಮಾಡಬೇಕಾಗಿತ್ತು. (ಆದಿಕಾಂಡ 1:28) ಆದರೆ ಯೆಹೋವನು ಮಾನವರನ್ನು ಸೃಷ್ಟಿಸಿದ ಏಕಮಾತ್ರ ಉದ್ದೇಶವು, ಮಾನವರು ಕೇವಲ ಭೂಪಾಲಕರಾಗಿ ಇರಬೇಕೆಂಬುದಾಗಿತ್ತೊ?

ಆದಾಮಹವ್ವರಿಗೆ ದೇವರೊಂದಿಗೆ ಅರ್ಥವತ್ತಾದ ಸಂಬಂಧವಿತ್ತು

4 ಇಲ್ಲ, ಹೆಚ್ಚು ಉದಾತ್ತವಾದ ಉದ್ದೇಶವೊಂದಿತ್ತು. ಪ್ರಥಮ ಪುರುಷನಾಗಿದ್ದ ಆದಾಮನಿಗೆ ಯೆಹೋವನೊಂದಿಗೆ ಅರ್ಥವತ್ತಾದ ಒಂದು ಸಂಬಂಧವಿತ್ತು. ಆದಾಮನು ಸೃಷ್ಟಿಕರ್ತನೊಂದಿಗೆ ನೇರವಾಗಿ ಮಾತಾಡಬಹುದಿತ್ತು. ಆತನಿಗೆ ದೇವರು ಹೇಳುವುದನ್ನು ಆಲಿಸುವ ಮತ್ತು ತಾನು ಯೋಚಿಸುತ್ತಿರುವ ವಿಷಯಗಳನ್ನು ಯೆಹೋವನಿಗೆ ವ್ಯಕ್ತಪಡಿಸುವ ಸಾಧ್ಯತೆಯೂ ಇತ್ತು. (ಆದಿಕಾಂಡ 1:28-30; 3:8-13, 16-19; ಅ. ಕೃತ್ಯಗಳು 17:26-28) ಆದಕಾರಣ, ಆದಾಮನಿಗೂ ಅವನ ಹೆಂಡತಿಯಾದ ಹವ್ವಳಿಗೂ ಯೆಹೋವನನ್ನು ಇನ್ನೂ ಚೆನ್ನಾಗಿ ತಿಳಿದುಕೊಳ್ಳುವ ಮತ್ತು ಆತನೊಂದಿಗಿನ ಸಂಬಂಧವನ್ನು ಇನ್ನೂ ಹೆಚ್ಚು ಗಾಢಗೊಳಿಸುವ ಮಹಾ ಅವಕಾಶವಿತ್ತು. ಯೆಹೋವನನ್ನು ತಿಳಿದುಕೊಂಡು ಆತನನ್ನು ಅನುಕರಿಸುವುದರಿಂದ ಅವರ ಜೀವನವು ಸಂತೃಪ್ತಿದಾಯಕವಾಗುತ್ತಿತ್ತು, ಏಕೆಂದರೆ ಆತನು “ಸಂತೋಷಭರಿತ ದೇವರು” ಆಗಿದ್ದಾನೆ. (1 ತಿಮೊಥೆಯ 1:11, NW) “ನಮ್ಮ ಅನುಭೋಗಕ್ಕೋಸ್ಕರ ನಮಗೆ ಎಲ್ಲವನ್ನೂ ಹೇರಳವಾಗಿ ದಯಪಾಲಿಸುವ” ದೇವರೋಪಾದಿ, ಯೆಹೋವನು ಪ್ರಥಮ ಮಾನವನನ್ನು ಅನಂತ ಜೀವನದ ಪ್ರತೀಕ್ಷೆಯುಳ್ಳವನಾಗಿ ಸೃಷ್ಟಿಸಿ, ಏದೆನ್‌ ತೋಟವೆಂದು ಕರೆಯಲ್ಪಟ್ಟ ಪರದೈಸಿನಲ್ಲಿಟ್ಟನು.—1 ತಿಮೊಥೆಯ 6:17; ಆದಿಕಾಂಡ 2:8, 9, 16, 17.

ಮಾನವ ಜೀವಕಣದ ಬಗ್ಗೆ ಇತ್ತೀಚೆಗಿನ ಆವಿಷ್ಕಾರಗಳು ಏನನ್ನು ಸೂಚಿಸುತ್ತವೆ?

5 ಅನಂತ ಜೀವನವೊ? ಅನಂತ ಜೀವನದ ವಿಚಾರವನ್ನು ಹುಚ್ಚುತನವೆಂದು ಹೇಳಿ ನೀವು ತಳ್ಳಿಹಾಕಬಹುದು. ಆದರೆ ಅದು ಹುಚ್ಚುತನವೊ? ಜೀವಕಣಗಳನ್ನು ಯಾವುದು ಮುದಿಯಾಗಿಸುತ್ತದೆಂಬ ವಿಷಯದಲ್ಲಿ ತಮಗೆ ಈಗ ಒಳನೋಟವಿದೆಯೆಂದು ವಿಜ್ಞಾನಿಗಳು ನಂಬುತ್ತಾರೆ. ಕ್ರೋಮಸೋಮ್‌ ವರ್ಣತಂತುಗಳ ಕೊನೆಗಳನ್ನು ಮುಚ್ಚುವ, ಟೆಲಮಿರ್‌ಗಳು ಎಂದು ಕರೆಯಲ್ಪಡುವ ಆನುವಂಶಿಕ ಪದಾರ್ಥದ ಚೂರುಗಳು, ಪ್ರತಿ ಬಾರಿ ಒಂದು ಜೀವಕಣ ವಿಭಾಗಗೊಳ್ಳುವಾಗ ಗಿಡ್ಡವಾಗುತ್ತವೆ. ಸುಮಾರು 50-100 ಬಾರಿ ಜೀವಕಣವು ವಿಭಾಗಗೊಂಡ ಬಳಿಕ ಈ ಟೆಲಮಿರ್‌ಗಳು ಸವೆದು ಹೋಗುತ್ತವೆ ಮತ್ತು ಹೆಚ್ಚಿನ ಜೀವಕಣಗಳು ವಿಭಾಗಗೊಳ್ಳುವುದನ್ನು ನಿಲ್ಲಿಸುತ್ತವೆ. ಆದರೆ ಇತ್ತೀಚೆಗಿನ ವೈಜ್ಞಾನಿಕ ಆವಿಷ್ಕಾರಗಳು ಸೂಚಿಸುವುದೇನಂದರೆ, ಟೆಲಮಿರೇಸ್‌ ಎಂಬ ಎನ್‌ಸೈಮ್‌ ಕಿಣ್ವದ ಸಹಾಯದಿಂದ ಮಾನವ ಜೀವಕಣಗಳು ಅನಿಶ್ಚಿತಕಾಲದ ವರೆಗೆ ವಿಭಾಗಹೊಂದುತ್ತ ಮುಂದುವರಿಯಬಲ್ಲವು. ಈ ಆವಿಷ್ಕಾರದ ಅರ್ಥವು, ಯೆಹೋವನು ಈ ಪ್ರತ್ಯೇಕ ಕಿಣ್ವದ ಮೂಲಕವೇ ಅನಂತ ಜೀವನವನ್ನು ಸಾಧ್ಯಗೊಳಿಸುತ್ತಾನೆಂಬುದು ಆಗಿರದಿದ್ದರೂ, ಇದು ಒಂದು ಸಂಗತಿಯನ್ನಂತೂ ಖಂಡಿತವಾಗಿಯೂ ತಿಳಿಯಪಡಿಸುತ್ತದೆ. ಅದೇನಂದರೆ, ನಿತ್ಯಜೀವದ ವಿಚಾರವು ಹುಚ್ಚುತನವಲ್ಲ!

6 ಹೌದು, ಪ್ರಥಮ ಮಾನವ ದಂಪತಿಯು ಅನಂತ ಜೀವನಕ್ಕಾಗಿ ಸೃಷ್ಟಿಸಲ್ಪಟ್ಟರು ಎಂದು ಹೇಳುವ ಬೈಬಲ್‌ ವೃತ್ತಾಂತವು ನಂಬಲರ್ಹವಾಗಿದೆ. ಮಾನವರು ಯೆಹೋವನೊಂದಿಗಿನ ತಮ್ಮ ಸಂಬಂಧದಲ್ಲಿ ಅನಿಶ್ಚಿತಕಾಲದ ವರೆಗೆ ಬೆಳೆಯಬೇಕಾಗಿತ್ತು. ಅವರು, ಭೂಮಿಯ ಮೇಲೆ ಮಾನವರಿಗಿರುವ ದೇವರ ಉದ್ದೇಶದ ಪೂರ್ಣ ಅರಿವಿನೊಂದಿಗೆ, ಅದನ್ನು ಪೂರೈಸುತ್ತ ತಮ್ಮ ಸ್ವರ್ಗೀಯ ಪಿತನೊಂದಿಗೆ ಬಲವಾದ ಬಂಧವನ್ನು ಕಟ್ಟಬೇಕಾಗಿತ್ತು. ಅವರ ಜೀವನಗಳು ಗುಲಾಮಚಾಕರಿಯಾಗಿ ಪರಿಣಮಿಸಬಾರದಿತ್ತು. ಈ ಭೂಮಿಯನ್ನು ಸಂತೋಷವೂ ಪರಿಪೂರ್ಣವೂ ಆದ ಸಂತತಿಯಿಂದ ತುಂಬಿಸುವ ಅದ್ಭುತಕರವಾದ ಪ್ರತೀಕ್ಷೆ ಆದಾಮಹವ್ವರಿಗಿತ್ತು. ಅವರಿಗೆ ಸದಾಕಾಲ ಮಾಡಲು, ಸಂತೃಪ್ತಿದಾಯಕ ಮತ್ತು ಅರ್ಥವತ್ತಾದ ಕೆಲಸವು ಇರುತ್ತಿತ್ತು. ಆ ಜೀವನವು ನಿಶ್ಚಯವಾಗಿಯೂ ಸಂತೃಪ್ತಿಕರ ಜೀವನವಾಗಿರುತ್ತಿತ್ತು!—ಆದಿಕಾಂಡ 1:28.