ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 3

ನಂಬಲರ್ಹವಾದ ಮಾರ್ಗದರ್ಶನವಿರುವ ಗ್ರಂಥ

ನಂಬಲರ್ಹವಾದ ಮಾರ್ಗದರ್ಶನವಿರುವ ಗ್ರಂಥ

 “ಬೈಬಲು ಮಾನವಕುಲದ ನಾಗರಿಕತೆ ಮತ್ತು ಜೀವನಾನುಭವಗಳ ಸಂಯೋಜನೆಯಿಂದ ರೂಪ ತಾಳಿದ ಒಂದು ಉತ್ಪನ್ನವಾಗಿದ್ದು ಅದ್ವಿತೀಯವಾಗಿದೆ,” ಎಂದು ಚೀನಾದ ಗ್ವಾಂಗ್‌ಜೋವಿನ ಚೋಂಗ್‌ಶಾಂಗ್‌ ವಿಶ್ವವಿದ್ಯಾನಿಲಯವು ಪ್ರಕಟಪಡಿಸಿದ ಒಂದು ಪತ್ರಿಕೆ ತಿಳಿಸುತ್ತದೆ. ಇಮ್ಮಾನುವೆಲ್‌ ಕಾಂಟ್‌ ಎಂಬ 18ನೆಯ ಶತಮಾನದ ಪ್ರಭಾವಶಾಲಿ ತತ್ವಜ್ಞಾನಿಯು ಹೀಗೆಂದನೆಂದು ಹೇಳಲಾಗಿದೆ: “ಜನರಿಗಾಗಿರುವ ಗ್ರಂಥದೋಪಾದಿ ಬೈಬಲಿನ ಅಸ್ತಿತ್ವವು ಮಾನವಕುಲವು ಅನುಭವಿಸಿರುವ ಪ್ರಯೋಜನಗಳಲ್ಲಿ ಅತಿ ಮಹತ್ತಾದ ಪ್ರಯೋಜನವಾಗಿದೆ. ಅದನ್ನು ಕಡೆಗಣಿಸಲು ಮಾಡಲಾಗುವ ಪ್ರತಿಯೊಂದು ಪ್ರಯತ್ನವು . . . ಮಾನವತ್ವದ ವಿರುದ್ಧ ಮಾಡಲ್ಪಡುವ ಒಂದು ಅಪರಾಧವಾಗಿದೆ.” ದಿ ಎನ್‌ಸೈಕ್ಲೊಪೀಡಿಯ ಅಮೆರಿಕಾನ ಹೇಳುವುದು: “ಬೈಬಲಿನ ಪ್ರಭಾವವು ಯೆಹೂದ್ಯರಿಗೆ ಮತ್ತು ಕ್ರೈಸ್ತರಿಗೆ ಮಾತ್ರ ಸೀಮಿತವಲ್ಲ. . . . ಅದನ್ನು ಈಗ ನೈತಿಕ ಮತ್ತು ಧಾರ್ಮಿಕವಾದ ಒಂದು ನಿಧಿಯಾಗಿ ವೀಕ್ಷಿಸಲಾಗುತ್ತದೆ. ಅದರ ಅಕ್ಷಯ ಬೋಧನೆಯು ಜಾಗತಿಕ ನಾಗರಿಕತೆಯ ನಿರೀಕ್ಷೆಯು ವರ್ಧಿಸುವಾಗ ಈಗ ಇನ್ನೂ ಹೆಚ್ಚು ಬೆಲೆಯುಳ್ಳದ್ದಾಗಿರುವ ಖಾತರಿಯನ್ನು ಕೊಡುತ್ತದೆ.”

2 ನೀವು ಯಾವುದೇ ಧರ್ಮಕ್ಕೆ ಸೇರಿದವರಾಗಿರಲಿ, ಇಂತಹ ಒಂದು ಗ್ರಂಥದ ಬಗ್ಗೆ ಸ್ವಲ್ಪವನ್ನಾದರೂ ತಿಳಿದುಕೊಳ್ಳಲು ನೀವು ಆಸಕ್ತರಾಗಿಲ್ಲವೋ? ಇಪ್ಪತ್ತನೆಯ ಶತಮಾನದ ಅಂತ್ಯದೊಳಗೆ ಬೈಬಲನ್ನು ಪೂರ್ತಿಯಾಗಿ ಇಲ್ಲವೆ ಆಂಶಿಕವಾಗಿ 2,200ಕ್ಕೂ ಹೆಚ್ಚು ಭಾಷೆಗಳಿಗೆ ತರ್ಜುಮೆಮಾಡಲಾಗಿತ್ತು. ಹೆಚ್ಚಿನ ಜನರು ಅದರ ಒಂದು ಪ್ರತಿಯನ್ನು ತಾವು ಓದಿ ಅರ್ಥಮಾಡಿಕೊಳ್ಳಬಲ್ಲ ಭಾಷೆಯಲ್ಲಿ ಪಡೆಯಬಲ್ಲರು. ಚಲಿಸುವ ಅಚ್ಚುಮೊಳೆಗಳ ಕಂಡುಹಿಡಿತದ ಬಳಿಕ ಲೋಕದಾದ್ಯಂತ ಸುಮಾರು ನಾನ್ನೂರು ಕೋಟಿ ಬೈಬಲುಗಳು ಚಲಾವಣೆಯಲ್ಲಿವೆ.

3 ಈಗ, ನಿಮ್ಮಲ್ಲಿ ಒಂದು ಪ್ರತಿ ಇರುವುದಾದರೆ, ನಿಮ್ಮ ಬೈಬಲನ್ನು ದಯವಿಟ್ಟು ತೆರೆದು ಅದರ ವಿಷಯಾನುಕ್ರಮಣಿಕೆಯನ್ನು ನೋಡಿರಿ. ಅಲ್ಲಿ ನೀವು ಆದಿಕಾಂಡದಿಂದ ಆರಂಭಿಸಿ ಪ್ರಕಟನೆಯಲ್ಲಿ ಅಂತ್ಯಗೊಳ್ಳುವ ಪುಸ್ತಕಗಳ ಹೆಸರುಗಳನ್ನು ನೋಡುವಿರಿ. ಬೈಬಲು ನಿಜವಾಗಿಯೂ 66 ಪುಸ್ತಕಗಳ ಒಂದು ಗ್ರಂಥಾಲಯವಾಗಿದ್ದು ಸುಮಾರು 40 ವಿವಿಧ ಜನರಿಂದ ಬರೆಯಲ್ಪಟ್ಟ ಗ್ರಂಥವಾಗಿದೆ. ಅನೇಕರು ಹಳೆಯ ಒಡಂಬಡಿಕೆಯೆಂದು ಕರೆಯುವ ಪ್ರಥಮ ವಿಭಾಗವು 39 ಪುಸ್ತಕಗಳಿಂದ ರಚಿತವಾಗಿದ್ದು, ಮುಖ್ಯವಾಗಿ ಹೀಬ್ರು ಭಾಷೆಯಲ್ಲಿ ಬರೆಯಲ್ಪಟ್ಟಿರುವುದರಿಂದ ಅದನ್ನು ಸೂಕ್ತವಾಗಿ ಹೀಬ್ರು ಶಾಸ್ತ್ರವೆಂದು ಹೆಸರಿಸಲಾಗಿದೆ. ಅನೇಕರು ಹೊಸ ಒಡಂಬಡಿಕೆಯೆಂದು ಕರೆಯುವ ದ್ವಿತೀಯ ವಿಭಾಗದಲ್ಲಿರುವ 27 ಪುಸ್ತಕಗಳನ್ನು, ಕ್ರೈಸ್ತ ಲೇಖಕರು ಗ್ರೀಕ್‌ ಭಾಷೆಯಲ್ಲಿ ಬರೆದಿರುವುದರಿಂದ ಅದನ್ನು ಸರಿಯಾಗಿಯೇ ಗ್ರೀಕ್‌ ಶಾಸ್ತ್ರವೆಂದು ಹೆಸರಿಸಲಾಗಿದೆ. ಬೈಬಲ್‌ ಬರವಣಿಗೆಯನ್ನು ಮುಗಿಸಲು, ಸಾ.ಶ.ಪೂ. 1513 ರಿಂದ ಸಾ.ಶ. 98 ರ ತನಕ 1,600 ವರುಷಗಳಿಗಿಂತಲೂ ಹೆಚ್ಚು ಸಮಯ ಹಿಡಿಯಿತು. ಈ ಲೇಖಕರಿಗೆ ಪರಸ್ಪರ ಸಮಾಲೋಚನೆ ನಡೆಸುವ ಕೂಟಗಳಿರಲಿಲ್ಲ. ಮತ್ತು ಕೆಲವು ಪುಸ್ತಕಗಳು ಏಕಕಾಲೀನವಾಗಿ ಸಾವಿರಾರು ಕಿಲೊಮೀಟರ್‌ ದೂರದ ಸ್ಥಳಗಳಲ್ಲಿ ಬರೆಯಲ್ಪಟ್ಟವು. ಹೀಗಿದ್ದರೂ, ಬೈಬಲಿಗಿರುವ ಮುಖ್ಯ ವಿಷಯ ಒಂದೇ ಆಗಿದ್ದು ಅದು ಏಕೀಕೃತವಾದ ಅಖಂಡ ಗ್ರಂಥವಾಗಿದೆ. ಅದು ಪರಸ್ಪರವಾದ ವಿರುದ್ಧ ಹೇಳಿಕೆಗಳನ್ನು ಮಾಡುವುದಿಲ್ಲ. ಹೀಗಿರುವುದರಿಂದ, ‘16 ಶತಮಾನಗಳ ಅವಧಿಯಲ್ಲಿ ಜೀವಿಸಿದ 40ಕ್ಕೂ ಹೆಚ್ಚು ಜನರು ಇಷ್ಟರ ಮಟ್ಟಿಗೆ ಹೊಂದಿಕೆಯಾಗಿರುವ ಒಂದು ಗ್ರಂಥವನ್ನು ಹೇಗೆ ಸಂಗ್ರಹಿಸಿದರು?’ ಎಂದು ನಾವು ಕೇಳದೆ ಇರಲಿಕ್ಕಾಗುವುದಿಲ್ಲ.

“[ದೇವರು] ಶೂನ್ಯದ ಮೇಲೆ ಉತ್ತರ ದಿಕ್ಕನ್ನು ವಿಸ್ತರಿಸಿ ಭೂಲೋಕವನ್ನು ಯಾವ ಆಧಾರವೂ ಇಲ್ಲದೆ ತೂಗಹಾಕಿದ್ದಾನೆ”

4 ಬೈಬಲನ್ನು 1,900ಕ್ಕೂ ಹೆಚ್ಚು ವರುಷಗಳ ಹಿಂದೆ ಬರೆದು ಮುಗಿಸಲಾಯಿತಾದರೂ, ಅದರಲ್ಲಿ ಅಡಕವಾಗಿರುವ ವಿಷಯಗಳು ಆಧುನಿಕ ದಿನಗಳ ಸ್ತ್ರೀಪುರುಷರ ಕುತೂಹಲವನ್ನೂ ಕೆರಳಿಸುತ್ತವೆ. ಉದಾಹರಣೆಗೆ, ನಿಮ್ಮ ಬೈಬಲಿನಲ್ಲಿ ಯೋಬ 26:7 ನ್ನು ತೆರೆಯಿರಿ. ಈ ವಚನವನ್ನು ಸಾ.ಶ.ಪೂ. 15ನೆಯ ಶತಮಾನದಲ್ಲಿ ಬರೆಯಲಾಗಿತ್ತೆಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಿ. ಅಲ್ಲಿ ಹೀಗೆ ಹೇಳಲಾಗಿದೆ: “ಆತನು ಶೂನ್ಯದ ಮೇಲೆ [ಆಕಾಶದ] ಉತ್ತರ ದಿಕ್ಕನ್ನು ವಿಸ್ತರಿಸಿ ಭೂಲೋಕವನ್ನು ಯಾವ ಆಧಾರವೂ ಇಲ್ಲದೆ ತೂಗಹಾಕಿದ್ದಾನೆ.” (ಓರೆ ಅಕ್ಷರಗಳು ನಮ್ಮವು.) ಈಗ, ಯೆಶಾಯ 40:22 ನ್ನು ತೆರೆಯಿರಿ. ಯೆಶಾಯ ಪುಸ್ತಕವು ಸಾ.ಶ.ಪೂ. 8ನೆಯ ಶತಮಾನದಲ್ಲಿ ಬರೆಯಲ್ಪಟ್ಟಿತ್ತೆಂಬುದನ್ನು ಗಮನದಲ್ಲಿಡಿರಿ. ಈ ವಚನ ಹೇಳುವುದು: “ಭೂಮಂಡಲನಿವಾಸಿಗಳು ಮಿಡತೆಗಳಂತೆ ಸಣ್ಣಗೆ ಕಾಣಿಸುವಷ್ಟು ಉನ್ನತವಾದ ಆಕಾಶದಲ್ಲಿ [“ಭೂಮಿಯ ವೃತ್ತದ ಮೇಲ್ಗಡೆ,” NW] ಆತನು ಆಸೀನನಾಗಿದ್ದಾನೆ; ಆಕಾಶವನ್ನು ನವರುಬಟ್ಟೆಯಂತೆ ಹರಡಿ ನಿವಾಸದ ಗುಡಾರದಂತೆ ಎತ್ತಿಕಟ್ಟಿದ್ದಾನೆ.” ಈ ಎರಡು ವರ್ಣನೆಗಳನ್ನು ಓದುವಾಗ ನಿಮ್ಮ ಮನಸ್ಸಿಗೆ ಯಾವ ಚಿತ್ರ ಬರುತ್ತದೆ? ಆಕಾಶದಲ್ಲಿ ಗೋಳಾಕಾರದಲ್ಲಿ “ತೂಗಹಾಕಿ”ರುವ ಒಂದು ವಸ್ತುವಿನ ಚಿತ್ರವೇ ಅಲ್ಲವೇ? ಇಂತಹ ಚಿತ್ರವನ್ನು ನೀವು ಆಧುನಿಕ ಆಕಾಶನೌಕೆಗಳು ಕಳುಹಿಸಿರುವ ಫೋಟೋಗಳಲ್ಲಿ ನೋಡಿರಬಹುದು. ಈಗ ನೀವು ಹೀಗೆ ಕುತೂಹಲಪಡಬಹುದು: ‘ಅಷ್ಟೊಂದು ಪ್ರಾಚೀನ ಕಾಲದಲ್ಲಿ ಜೀವಿಸಿದ ಜನರು ವೈಜ್ಞಾನಿಕವಾಗಿ ಅಷ್ಟು ನಿಷ್ಕೃಷ್ಟವಾದ ಹೇಳಿಕೆಗಳನ್ನು ಮಾಡಲು ಸಾಧ್ಯವಾಗಿರುವುದಾದರೂ ಹೇಗೆ?’

5 ಬೈಬಲಿನ ಸಂಬಂಧದಲ್ಲಿ ನಾವು ಇನ್ನೊಂದು ಪ್ರಶ್ನೆಯನ್ನು ಪರಿಗಣಿಸೋಣ. ಬೈಬಲು ಐತಿಹಾಸಿಕವಾಗಿ ನಿಷ್ಕೃಷ್ಟವಾಗಿದೆಯೆ? ಬೈಬಲು ಪುರಾಣ ಕಥೆಗಳ ಬರಿಯ ಒಂದು ಸಂಗ್ರಹವಾಗಿದ್ದು, ಐತಿಹಾಸಿಕ ಆಧಾರವು ಅದಕ್ಕಿಲ್ಲ ಎಂದು ಕೆಲವರು ಯೋಚಿಸುತ್ತಾರೆ. ಉದಾಹರಣೆಗೆ, ಪ್ರಸಿದ್ಧ ಇಸ್ರಾಯೇಲ್ಯ ಅರಸನಾದ ದಾವೀದನನ್ನು ತೆಗೆದುಕೊಳ್ಳಿರಿ. ಇತ್ತೀಚಿನ ವರೆಗೂ, ಅವನು ಅಸ್ತಿತ್ವದಲ್ಲಿದ್ದನು ಎಂಬ ತಿಳಿವಳಿಕೆಗಿದ್ದ ಏಕಮಾತ್ರ ಆಧಾರವು ಬೈಬಲಾಗಿತ್ತು. ಅನೇಕ ಮುಖ್ಯ ಇತಿಹಾಸಕಾರರು ಅವನನ್ನು ಒಬ್ಬ ಅಧಿಕೃತ ವ್ಯಕ್ತಿಯೆಂದು ಹೇಳುತ್ತಾರಾದರೂ, ಕೆಲವು ಸಂದೇಹವಾದಿಗಳು, ದಾವೀದನು ಯೆಹೂದಿ ಮತಪ್ರಚಾರಕರು ರಚಿಸಿರುವ ಪುರಾಣವ್ಯಕ್ತಿಯೆಂದು ಹೇಳಿ ಅವನ ವಿಷಯವನ್ನು ತಳ್ಳಿಹಾಕುತ್ತಾರೆ. ಆದರೆ ನಿಜತ್ವಗಳು ಏನು ತೋರಿಸುತ್ತವೆ?

“ದಾವೀದನ ಮನೆತನ”ಕ್ಕೆ ಸೂಚಿಸುವ ಸ್ಮಾರಕ ಲೇಖನ

6 ಪುರಾತನ ಕಾಲದ ಇಸ್ರಾಯೇಲ್ಯ ನಗರವಾದ ಡ್ಯಾನ್‌ನಲ್ಲಿ, 1993 ರಲ್ಲಿ, “ದಾವೀದನ ಮನೆತನ”ವನ್ನು ಸೂಚಿಸಿದ ಒಂದು ಸ್ಮಾರಕ ಲೇಖನವನ್ನು ಕಂಡುಹಿಡಿಯಲಾಯಿತು. ಈ ಸ್ಮಾರಕ ಲೇಖನವು, ಶತ್ರುಗಳು ಇಸ್ರಾಯೇಲ್ಯರ ಮೇಲೆ ಪಡೆದ ವಿಜಯದ ಸ್ಮಾರಕಾರ್ಥವಾಗಿ ಕಟ್ಟಿದ್ದ ಕಟ್ಟಡದ ಭಗ್ನಾವಶೇಷವಾಗಿತ್ತು. ಹೀಗೆ ಥಟ್ಟನೆ, ಬೈಬಲೇತರ ಮೂಲದಿಂದ ದಾವೀದನ ಕುರಿತಾದ ಪುರಾತನ ಸೂಚನೆಯು ಕಂಡುಬಂತು. ಇದು ಮಹತ್ವದ ಸಂಗತಿಯಾಗಿತ್ತೊ? ಈ ಆವಿಷ್ಕಾರದ ಕುರಿತು ಟೆಲ್‌ ಅವೀವ್‌ ವಿಶ್ವವಿದ್ಯಾನಿಲಯದ ಇಸ್ರೀಅಲ್‌ ಫಿಂಕಲ್‌ಸ್ಟೈನ್‌ ಹೇಳಿದ್ದು: “ಈ ದಾವೀದ ಸ್ಮಾರಕ ಲೇಖನವು ಕಂಡುಹಿಡಿಯಲ್ಪಟ್ಟಾಗ, ಬೈಬಲ್‌ ಸಂಬಂಧಿತವಾದ ನಿರಾಕರಣಾವಾದವು ದಿನಬೆಳಗಾಗುವುದರೊಳಗೆ ಕುಸಿದು ಬಿತ್ತು.” ಆಸಕ್ತಿಕರವಾಗಿ, ಪ್ಯಾಲೆಸ್ಟೈನ್‌ನಲ್ಲಿ ದಶಕಗಳ ಕಾಲ ಭೂಶೋಧನೆ ನಡೆಸಿದ ಭೂಸಂಶೋಧನಾ ಶಾಸ್ತ್ರಜ್ಞ, ಪ್ರೊಫೆಸರ್‌ ವಿಲ್ಯಮ್‌ ಎಫ್‌. ಆಲ್‌ಬ್ರೈಟ್‌ ಒಮ್ಮೆ ಹೇಳಿದ್ದು: “ಒಂದರ ನಂತರ ಇನ್ನೊಂದರಂತೆ ನಡೆದ ಆವಿಷ್ಕಾರಗಳು, ಅಸಂಖ್ಯಾತ ವಿವರಗಳ ನಿಷ್ಕೃಷ್ಟತೆಯನ್ನು ಸ್ಥಾಪಿಸಿ, ಬೈಬಲನ್ನು ಐತಿಹಾಸಿಕ ಮೂಲವಾಗಿ ಉಪಯೋಗಿಸುವುದರ ಮೌಲ್ಯದ ಬಗ್ಗೆ ಮಾನ್ಯತೆಯನ್ನು ವರ್ಧಿಸಿದೆ.” ನಾವು ಪುನಃ ಹೀಗೆ ಕೇಳಬಹುದು: ‘ಮಹಾಕಾವ್ಯಗಳೂ ಪುರಾಣ ಕಥೆಗಳೂ ನಿಷ್ಕೃಷ್ಟವಾಗಿಲ್ಲದಿರುವಾಗ, ಈ ಪುರಾತನ ಗ್ರಂಥವು ಐತಿಹಾಸಿಕವಾಗಿ ಹೇಗೆ ಅಷ್ಟು ನಿಷ್ಕೃಷ್ಟವಾಗಿರಬಲ್ಲದು?’ ವಿಷಯವು ಇಷ್ಟು ಮಾತ್ರವೇ ಅಲ್ಲ, ಇನ್ನೂ ಇದೆ.

ಮಹಾ ಅಲೆಕ್ಸಾಂಡರನನ್ನು ಚಿತ್ರಿಸಿರುವ ನಾಣ್ಯ

7 ಬೈಬಲು ಪ್ರವಾದನೆಯ ಗ್ರಂಥವೂ ಆಗಿದೆ. (2 ಪೇತ್ರ 1:20, 21) “ಪ್ರವಾದನೆ” ಎಂಬ ಪದವು ಕೂಡಲೆ ನಿಮ್ಮ ಮನಸ್ಸಿಗೆ, ತಾವು ಪ್ರವಾದಿಗಳೆಂದು ಹೇಳಿಕೊಂಡಿರುವ ಜನರ ನೆರವೇರದಿರುವ ಮಾತುಗಳನ್ನು ತಂದೀತು. ಆದರೆ, ಪೂರ್ವಭಾವಿ ಕಲ್ಪನೆಗಳನ್ನು ಬಿಟ್ಟುಬಿಟ್ಟು, ನಿಮ್ಮ ಬೈಬಲನ್ನು ದಾನಿಯೇಲ 8ನೆಯ ಅಧ್ಯಾಯಕ್ಕೆ ತೆರೆಯಿರಿ. ಇಲ್ಲಿ ದಾನಿಯೇಲನು, ಎರಡು ಕೊಂಬುಗಳಿದ್ದ ಟಗರು ಮತ್ತು “ವಿಶೇಷವಾದ ಒಂದು ಕೊಂಬು” ಇದ್ದ ಹೋತದ ಮಧ್ಯೆ ನಡೆಯುತ್ತಿದ್ದ ಹೋರಾಟದ ದರ್ಶನವನ್ನು ವರ್ಣಿಸುತ್ತಾನೆ. ಹೋತವು ಜಯಹೊಂದಿದರೂ ಅದರ ಮಹಾ ಕೊಂಬು ಮುರಿಯುತ್ತದೆ. ಅದರ ಸ್ಥಳದಲ್ಲಿ ನಾಲ್ಕು ಕೊಂಬುಗಳು ಎದ್ದುಬರುತ್ತವೆ. ಈ ದರ್ಶನದ ಅರ್ಥವೇನು? ದಾನಿಯೇಲನ ವೃತ್ತಾಂತವು ಮುಂದುವರಿಸುತ್ತ ಹೇಳುವುದು: “ನೀನು ನೋಡಿದ ಎರಡು ಕೊಂಬಿನ ಟಗರು ಮೇದ್ಯಯ ಮತ್ತು ಪಾರಸಿಯ ರಾಜ್ಯ. ಆ ಹೋತವು ಗ್ರೀಕ್‌ ರಾಜ್ಯ, ಅದರ ಕಣ್ಣುಗಳ ನಡುವಣ ದೊಡ್ಡ ಕೊಂಬು ಆ ರಾಜ್ಯದ ಮೊದಲನೆಯ ರಾಜ. ಆ ಕೊಂಬು ಮುರಿದ ಮೇಲೆ ಅದರ ಸ್ಥಾನದಲ್ಲಿ ನಾಲ್ಕು ಕೊಂಬುಗಳು ಎದ್ದ ವಿಷಯವೇನಂದರೆ ಆ ಜನಾಂಗದೊಳಗಿಂದ ನಾಲ್ಕು ರಾಜ್ಯಗಳು ಏಳುವವು; ಆದರೆ ಮೊದಲನೆಯ ರಾಜನಿಗೆ ಇದ್ದಷ್ಟು ಶಕ್ತಿಯು ಅವುಗಳಿಗೆ ಇರುವದಿಲ್ಲ.”—ದಾನಿಯೇಲ 8:3-22.

“ಒಂದರ ನಂತರ ಇನ್ನೊಂದರಂತೆ ನಡೆದ ಆವಿಷ್ಕಾರಗಳು, ಅಸಂಖ್ಯಾತ ವಿವರಗಳ ನಿಷ್ಕೃಷ್ಟತೆಯನ್ನು ಸ್ಥಾಪಿಸಿ, ಬೈಬಲನ್ನು ಐತಿಹಾಸಿಕ ಮೂಲವಾಗಿ ಉಪಯೋಗಿಸುವುದರ ಮೌಲ್ಯದ ಬಗ್ಗೆ ಮಾನ್ಯತೆಯನ್ನು ವರ್ಧಿಸಿವೆ.”—ಪ್ರೊಫೆಸರ್‌ ವಿಲ್ಯಮ್‌ ಎಫ್‌. ಆಲ್‌ಬ್ರೈಟ್‌

8 ಈ ಪ್ರವಾದನೆಯು ನೆರವೇರಿತೊ? ದಾನಿಯೇಲ ಪುಸ್ತಕದ ಬರೆವಣಿಗೆಯು ಸುಮಾರು ಸಾ.ಶ.ಪೂ. 536 ರಲ್ಲಿ ಮುಗಿಯಿತು. ಸಾ.ಶ.ಪೂ. 356 ರಲ್ಲಿ ಅಂದರೆ 180 ವರುಷಗಳ ಬಳಿಕ ಹುಟ್ಟಿದ ಮ್ಯಾಸಡೋನ್ಯದ ಅರಸ ಮಹಾ ಅಲೆಕ್ಸಾಂಡರನು ಪರ್ಶಿಯನ್‌ ಸಾಮ್ರಾಜ್ಯವನ್ನು ಸೋಲಿಸಿದನು. ಆ ಹೋತದ ಕಣ್ಣುಗಳ ಮಧ್ಯೆ ಇದ್ದ “ದೊಡ್ಡ ಕೊಂಬು” ಅವನೇ ಆಗಿದ್ದನು. ಯೆಹೂದಿ ಇತಿಹಾಸಕಾರ ಜೋಸೀಫಸನಿಗನುಸಾರ, ಪರ್ಶಿಯದ ಮೇಲೆ ವಿಜಯ ಗಳಿಸುವ ಮೊದಲು ಅಲೆಕ್ಸಾಂಡರನು ಯೆರೂಸಲೇಮನ್ನು ಪ್ರವೇಶಿಸಿದಾಗ, ಅವನಿಗೆ ದಾನಿಯೇಲನ ಪುಸ್ತಕವನ್ನು ತೋರಿಸಲಾಯಿತು. ಇದರಿಂದ, ಅವನಿಗೆ ತೋರಿಸಲ್ಪಟ್ಟ ದಾನಿಯೇಲನ ಪ್ರವಾದನೆಯ ಮಾತುಗಳು, ಪಾರಸಿಯವನ್ನು ಒಳಗೊಂಡಿದ್ದ ತನ್ನ ಮಿಲಿಟರಿ ದಂಡಯಾತ್ರೆಗೆ ಸೂಚಿಸುತ್ತಿದ್ದವೆಂದು ಅವನು ತೀರ್ಮಾನಿಸಿದನು. ಅಷ್ಟೇ ಏಕೆ, ಜಾಗತಿಕ ಇತಿಹಾಸದ ಪಠ್ಯಪುಸ್ತಕಗಳಲ್ಲಿ, ಅಲೆಕ್ಸಾಂಡರನು ಸಾ.ಶ.ಪೂ. 323 ರಲ್ಲಿ ಮರಣ ಹೊಂದಿದ ಬಳಿಕ ಅವನ ಸಾಮ್ರಾಜ್ಯಕ್ಕೆ ಏನಾಯಿತೆಂಬುದನ್ನು ನೀವೇ ಓದಿ ತಿಳಿಯಬಲ್ಲಿರಿ. ಕಾಲಕ್ರಮೇಣ ನಾಲ್ವರು ಸೇನಾಪತಿಗಳು ಅವನ ಸಾಮ್ರಾಜ್ಯವನ್ನು ವಶಪಡಿಸಿಕೊಂಡರು ಮತ್ತು ಸಾ.ಶ.ಪೂ. 301ರೊಳಗೆ ಆ “ದೊಡ್ಡ ಕೊಂಬು” ನಿಂತಿದ್ದ ಸ್ಥಾನದಲ್ಲಿ ನಿಂತ ‘ನಾಲ್ಕು ಕೊಂಬುಗಳು’ ಆ ಸಾಮ್ರಾಜ್ಯವನ್ನು ನಾಲ್ಕು ವಿಭಾಗಗಳನ್ನಾಗಿ ಮಾಡಿಕೊಂಡವು. ‘ಒಂದು ಪುಸ್ತಕವು 200 ವರ್ಷಗಳ ಬಳಿಕ ನೆರವೇರಲಿದ್ದ ವಿಷಯವನ್ನು ಅಷ್ಟು ಸುವ್ಯಕ್ತವಾಗಿಯೂ ನಿಷ್ಕೃಷ್ಟವಾಗಿಯೂ ಹೇಗೆ ಮುಂತಿಳಿಸಸಾಧ್ಯವಿದೆ?’ ಎಂದು ನಾವು ಪುನಃ ಆಶ್ಚರ್ಯಪಡಲು ನಮಗೆ ಪ್ರತಿಯೊಂದೂ ಕಾರಣವಿದೆ.

9 ಬೈಬಲು ತಾನೇ ಮೇಲೆ ಕೇಳಲ್ಪಟ್ಟಿರುವ ಪ್ರಶ್ನೆಗೆ ಉತ್ತರ ಕೊಡುತ್ತದೆ: “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು . . . ಉಪಯುಕ್ತವಾಗಿದೆ.” (2 ತಿಮೊಥೆಯ 3:16) “ದೈವಪ್ರೇರಿತ”ವೆಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್‌ ಪದದ ಅಕ್ಷರಾರ್ಥವು “ದೇವರು ಊದಿದ” ಎಂದಾಗಿದೆ. ನಾವು ಈಗ ಬೈಬಲ್‌ ಪುಸ್ತಕಗಳಲ್ಲಿ ಕಂಡುಕೊಳ್ಳುವ ಮಾಹಿತಿಯನ್ನು, ದೇವರು ಸುಮಾರು 40 ಮಂದಿ ಲೇಖಕರ ಮನಸ್ಸಿನೊಳಗೆ ‘ಊದಿದನು.’ ನಾವು ಚರ್ಚಿಸಿರುವ ಕೆಲವೇ ವೈಜ್ಞಾನಿಕ, ಐತಿಹಾಸಿಕ ಮತ್ತು ಪ್ರವಾದನಾತ್ಮಕ ಉದಾಹರಣೆಗಳು, ಒಂದೇ ಒಂದು ತೀರ್ಮಾನದೆಡೆಗೆ ಸ್ಪಷ್ಟವಾಗಿ ಸೂಚಿಸುತ್ತವೆ—ಈ ಅದ್ವಿತೀಯ ಪುಸ್ತಕವಾದ ಬೈಬಲು, ಮಾನವ ವಿವೇಕದ ಉತ್ಪನ್ನವಾಗಿರುವುದಿಲ್ಲ, ಬದಲಾಗಿ ದೈವಿಕ ಮೂಲದಿಂದ ಬಂದದ್ದಾಗಿದೆ. ಆದರೂ, ಇಂದು ಅನೇಕರು ಅದರ ಲೇಖಕನಾದ ದೇವರ ಅಸ್ತಿತ್ವದ ಬಗ್ಗೆ ಸಂದೇಹಿಸುವವರಾಗಿರುತ್ತಾರೆ. ನಿಮ್ಮ ಕುರಿತಾಗಿ ಏನು?