ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 2

ಸಂತೃಪ್ತಿಕರವಾದ ಜೀವನಕ್ಕಾಗಿ ಸಹಾಯಕಾರಿ ಸೂಚನೆಗಳು

ಸಂತೃಪ್ತಿಕರವಾದ ಜೀವನಕ್ಕಾಗಿ ಸಹಾಯಕಾರಿ ಸೂಚನೆಗಳು

 ನೀವು ಒಂದು ಸಮಸ್ಯೆಯನ್ನು ಎದುರಿಸುವಾಗ, ಸಲಹೆಗಾಗಿ ಎಲ್ಲಿ ಹೋಗುತ್ತೀರಿ? ನಿಮ್ಮ ನೆಚ್ಚಿನ ಮಿತ್ರನೊಬ್ಬನ ಬಳಿ ಇಲ್ಲವೆ ಅನುಭವಿಯಾದ ಸಲಹೆಗಾರನೊಬ್ಬನ ಬಳಿ ನೀವು ಹೋಗಬಹುದು. ಮಾಹಿತಿಯನ್ನು ಪಡೆಯಲಿಕ್ಕಾಗಿ, ಗ್ರಂಥಾಲಯದಂತಹ ಸ್ಥಳಗಳಿಗೆ ಹೋಗಿ ಹುಡುಕುವುದು ಸಹಾಯವನ್ನು ನೀಡಬಹುದು. ಅಥವಾ, ಕೆಲವು ಪೌರಸ್ತ್ಯರು ಹೇಳುವಂತೆ, ಅನೇಕ ವರುಷಗಳ ಅನುಭವವಿರುವ ವೃದ್ಧರ ವಿವೇಕದ ಕಡೆಗೆ ನೀವು ತಿರುಗಬಹುದು. ಇವುಗಳಲ್ಲಿ ನೀವು ಯಾವುದೇ ವಿಧಾನವನ್ನು ಆರಿಸಿಕೊಳ್ಳುವುದಾದರೂ, ಸಮಸ್ಯೆಗಳನ್ನು ಬಗೆಹರಿಸಲು ಪ್ರಯೋಜನಕರವಾದ ಸುಳಿವುಗಳನ್ನು ಕೊಡುವ ವಿವೇಕದ ಚುಟುಕಾದ ಮಾತುಗಳ ಬಗ್ಗೆ ವಿಚಾರಮಾಡಿ ನೋಡುವುದು ಒಳ್ಳೆಯದು. ಈ ಕೆಳಗೆ, ನೀವು ಪ್ರಯೋಜನಕರವಾಗಿ ಕಂಡುಕೊಳ್ಳುವಂಥ ಸ್ವಸ್ಥ ಸಲಹೆಯ ಒಂದು ಮಾದರಿಯಿದೆ.

“ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು”

2 ಕುಟುಂಬ ಜೀವನ: ಅನೇಕ ಮಂದಿ ಹೆತ್ತವರು ತಮ್ಮ ಮಕ್ಕಳನ್ನು, ಅಹಿತಕರವಾದ ಪ್ರಭಾವಗಳಿಂದ ತುಂಬಿರುವ ಈ ಜಗತ್ತಿನಲ್ಲಿ ಬೆಳೆಸುವ ವಿಷಯದಲ್ಲಿ ಚಿಂತಿತರಾಗಿದ್ದಾರೆ. ಈ ಕೆಳಗಿನ ಬುದ್ಧಿವಾದವನ್ನು ಗಣನೆಗೆ ತೆಗೆದುಕೊಳ್ಳುವುದು ಸಹಾಯಕರವಾಗಿರಬಲ್ಲದು: “ನಡೆಯಬೇಕಾದ ಮಾರ್ಗಕ್ಕೆ ತಕ್ಕಂತೆ ಹುಡುಗನನ್ನು ಶಿಕ್ಷಿಸು; ಮುಪ್ಪಿನಲ್ಲಿಯೂ ಓರೆಯಾಗನು.” 1 ಮಕ್ಕಳು ದೊಡ್ಡವರಾದಂತೆ ಅವರಿಗೆ ಒಂದು “ಮಾರ್ಗ,” ಅಂದರೆ ಪೂರೈಸಬೇಕಾಗಿರುವಂಥ ಒಂದಿಷ್ಟು ಮಟ್ಟಗಳ ಆವಶ್ಯಕತೆಯಿದೆ. ಮಕ್ಕಳಿಗೆ ಪ್ರಯೋಜನಕರವಾದ ನಿಯಮಗಳನ್ನು ಒದಗಿಸುವ ಪ್ರಾಮುಖ್ಯತೆಯನ್ನು ಹೆಚ್ಚೆಚ್ಚು ಮಂದಿ ವಿಶೇಷಜ್ಞರು ಈಗ ಗ್ರಹಿಸಿಕೊಂಡಿದ್ದಾರೆ. ಹೆತ್ತವರ ವಿವೇಕಭರಿತ ಮಟ್ಟಗಳು ಮಕ್ಕಳಿಗೆ ಭದ್ರತೆಯ ಅನಿಸಿಕೆಯನ್ನು ಕೊಡುತ್ತವೆ. ಇದಲ್ಲದೆ: “ಬೆತ್ತಬೆದರಿಕೆಗಳಿಂದ ಜ್ಞಾನವುಂಟಾಗುವದು; ಶಿಕ್ಷಿಸದೆ ಬಿಟ್ಟ ಹುಡುಗನು ತಾಯಿಯ ಮಾನವನ್ನು ಕಳೆಯುವನು.” 2 ಆ “ಬೆತ್ತ”ವು, ಮಕ್ಕಳು ದಾರಿ ತಪ್ಪಿಹೋಗದಂತೆ ಯಾವುದು ಪ್ರೀತಿಪೂರ್ವಕವಾಗಿ ಅವರನ್ನು ತಡೆದು ಹಿಡಿಯಬೇಕೊ ಆ ಹೆತ್ತವರ ಅಧಿಕಾರವನ್ನು ಸೂಚಿಸುತ್ತದೆ. ಅಂತಹ ಅಧಿಕಾರದಲ್ಲಿ ಮಗನನ್ನು ದುರುಪಚರಿಸುವ ವಿಷಯವು ಸೇರಿರುವುದಿಲ್ಲ. ಹೆತ್ತವರಿಗಿರುವ ಸಲಹೆ ಹೀಗಿದೆ: “ನಿಮ್ಮ ಮಕ್ಕಳನ್ನು ಕೆಣಕಿ ಅವರಿಗೆ ಮನಗುಂದಿಸಬೇಡಿರಿ.” 3

“ನಿಮ್ಮಲ್ಲಿ ಪ್ರತಿ ಪುರುಷನು ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಬೇಕು”

3 ಗಂಡ ಮತ್ತು ಹೆಂಡತಿಯ ಮಧ್ಯೆ ಇರುವ ಉತ್ತಮ ಸಂಬಂಧವೇ ಒಂದು ಸಂತುಷ್ಟ ಕುಟುಂಬದ ಅಸ್ತಿವಾರವಾಗಿದೆ. ಇಂತಹ ಸಂಬಂಧವಿರಬೇಕಾದರೆ ಏನು ಅಗತ್ಯ? “ನಿಮ್ಮಲ್ಲಿ ಪ್ರತಿ ಪುರುಷನು ತನ್ನನ್ನು ಪ್ರೀತಿಸಿಕೊಳ್ಳುವಂತೆಯೇ ತನ್ನ ಹೆಂಡತಿಯನ್ನೂ ಪ್ರೀತಿಸಬೇಕು; ಪ್ರತಿ ಹೆಂಡತಿಯು ತನ್ನ ಗಂಡನಿಗೆ ಭಯಭಕ್ತಿಯಿಂದ [“ಆಳವಾದ ಗೌರವದಿಂದ,” NW] ನಡೆದುಕೊಳ್ಳಬೇಕು.” 4 ಪ್ರೀತಿ ಮತ್ತು ಗೌರವಗಳು, ಕುಟುಂಬವೆಂಬ ಯಂತ್ರವು ಘರ್ಷಣೆಯಿಲ್ಲದೆ ನಯವಾಗಿ ಚಲಿಸುವಂತೆ ಮಾಡುವ ಎಣ್ಣೆಯಂತೆ ಕಾರ್ಯನಡೆಸುತ್ತವೆ. ಈ ಸಲಹೆಯನ್ನು ಕಾರ್ಯರೂಪಕ್ಕೆ ಹಾಕಬೇಕಾದರೆ ಸಂವಾದಿಸುವುದು ಪ್ರಾಮುಖ್ಯವಾಗಿದೆ, ಏಕೆಂದರೆ “ಯೋಚನೆ ಹೇಳುವವರಿಲ್ಲದೆ ಉದ್ದೇಶಗಳು ನೆರವೇರವು.” 5 ಮುಚ್ಚುಮರೆಯಿಲ್ಲದ ಮಾತುಕತೆಯನ್ನು ಪ್ರೋತ್ಸಾಹಿಸಲಿಕ್ಕಾಗಿ, ನಾವು ನಮ್ಮ ಸಂಗಾತಿಯ ಅನಿಸಿಕೆಗಳೇನೆಂಬುದನ್ನು ತಿಳಿಯಲು ಪ್ರಯತ್ನಿಸಬೇಕು, ಅಂದರೆ ಅವನಿಗೆ ಅಥವಾ ಅವಳಿಗೆ ಒಂದು ವಿಷಯದ ಬಗ್ಗೆ ನಿಜವಾಗಿಯೂ ಹೇಗನಿಸು ತ್ತದೆ ಎಂಬುದರ ಬಗ್ಗೆ ವಿಚಾರಿಸಿ ತಿಳಿದುಕೊಳ್ಳಲು ಪ್ರಯತ್ನಿಸಬೇಕು. “ಮನುಷ್ಯನ ಹೃದಯಸಂಕಲ್ಪವು ಆಳವಾದ [ಬಾವಿಯ] ನೀರು. ಆದರೆ ವಿವೇಕಿಯು ಅದನ್ನು ಸೇದಬಲ್ಲನು [ಅಥವಾ, ಬಲ್ಲಳು],” 6 ಎಂಬುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದು ವಿವೇಕಪ್ರದ.

ಸಕಾರಾತ್ಮಕ ಹೊರನೋಟವುಳ್ಳವರಾಗಿದ್ದು, ಹೃದಯೋತ್ತೇಜಕ ಸಂಬಂಧಗಳನ್ನು ಆರಂಭಿಸಲು ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳಿರಿ

4 ಅನೇಕ ಮಂದಿ ವೃದ್ಧರನ್ನು ಅವರ ಮಕ್ಕಳು ಒಂಟಿಯಾಗಿ ಬಿಟ್ಟುಬಿಟ್ಟಿರುವುದರಿಂದ, ಈ ವೃದ್ಧರು ತೀರ ಒಂಟಿತನದಿಂದ ಕೊರಗುತ್ತಿದ್ದಾರೆ. ಒಂದು ಕಾಲದಲ್ಲಿ ಮಕ್ಕಳು ತಂದೆತಾಯಿಗಳಿಗೆ ಗೌರವವನ್ನು ತೋರಿಸುವುದು ಸಾಮಾನ್ಯವಾಗಿದ್ದ ದೇಶಗಳಲ್ಲಿಯೂ ಈಗ ಇಂತಹ ಸನ್ನಿವೇಶವಿದೆ. ಆದರೂ, ಅವರ ಮಕ್ಕಳು ಈ ವಿವೇಕದ ಮಾತುಗಳನ್ನು ಪರಿಗಣಿಸುವುದು ಉತ್ತಮ: “ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು.” 7 “ಮುಪ್ಪಿನಲ್ಲಿಯೂ ತಾಯಿಯನ್ನು ಅಸಡ್ಡೆಮಾಡಬೇಡ.” 8 “ತಂದೆಯನ್ನು ಹೊಡೆದು ತಾಯಿಯನ್ನು ಓಡಿಸುವ ಮಗನು ನಾಚಿಕೆಯನ್ನೂ ಅವಮಾನವನ್ನೂ ಉಂಟುಮಾಡುವನು.” 9 ಆದರೆ ವೃದ್ಧರಾದ ಹೆತ್ತವರೂ ಸಕಾರಾತ್ಮಕ ಹೊರನೋಟವನ್ನು ಇಟ್ಟುಕೊಂಡು, ಹೃದಯೋತ್ತೇಜಕ ಸಂಬಂಧಗಳನ್ನು ಆರಂಭಿಸಲು ಮೊದಲ ಹೆಜ್ಜೆಯನ್ನು ತೆಗೆದುಕೊಳ್ಳಬೇಕು. “ಜನರಲ್ಲಿ ಸೇರದವನು ಸ್ವೇಚ್ಛಾನುಸಾರ ನಡೆಯುತ್ತಾ ಸಮಸ್ತ ಸುಜ್ಞಾನಕ್ಕೂ ರೇಗುವನು.” 10

5 ಮದ್ಯದ ಉಪಯೋಗ: “ದ್ರಾಕ್ಷಾರಸದಿಂದ ಜೀವನಕ್ಕೆ ಆನಂದವು” 11 ಎಂಬುದೂ ಮದ್ಯ ಪಾನೀಯಗಳನ್ನು ಕುಡಿಯುವುದರಿಂದ, “ಬಡತನವನ್ನು ಮರೆತು” 12 ಬಿಡಬಹುದು ಎಂಬುದೂ ನಿಜ. ಆದರೆ, “ದ್ರಾಕ್ಷಾರಸವು ಪರಿಹಾಸ್ಯ, ಮದ್ಯವು ಕೂಗಾಟ; ಇವುಗಳಿಂದ ಓಲಾಡುವವನು ಜ್ಞಾನಿಯಲ್ಲ” 13 ಎಂಬುದೂ ನೆನಪಿರಲಿ. ಮಿತಿಮೀರಿ ಕುಡಿಯುವುದರ ಪರಿಣಾಮಗಳ ಕುರಿತು ಯೋಚಿಸಿರಿ: “ಆಮೇಲೆ [ದ್ರಾಕ್ಷಾಮದ್ಯ] ಹಾವಿನಂತೆ ಕಚ್ಚುತ್ತದೆ, ಹೌದು, ನಾಗದ ಹಾಗೆ ಕಡಿಯುತ್ತದೆ. ನಿನ್ನ ಕಣ್ಣು ಇಲ್ಲದ್ದನ್ನೇ ಕಾಣುವದು, ಮನಸ್ಸು ವಿಪರೀತಗಳನ್ನು ಹೊರಪಡಿಸುವದು . . . ಯಾವಾಗ ಎಚ್ಚತ್ತೇನು? ಪುನಃ ಅದನ್ನೇ ಹುಡುಕೇನು ಎಂದುಕೊಳ್ಳುವಿ.” 14 ಮದ್ಯದ ಸೀಮಿತ ಉಪಯೋಗವು ಪ್ರಯೋಜನದಾಯಕವಾಗಿರಬಹುದು, ಆದರೆ ಅದರ ದುರುಪಯೋಗದಿಂದ ನಾವು ಸದಾ ದೂರವಿರಬೇಕು.

6 ಹಣ ನಿರ್ವಹಣೆ: ಹಣವನ್ನು ವಿವೇಕದಿಂದ ನಿರ್ವಹಿಸುವುದರಿಂದ ಕೆಲವೊಂದು ಸಂದರ್ಭಗಳಲ್ಲಿ ಹಣದ ಸಮಸ್ಯೆಗಳನ್ನು ತಪ್ಪಿಸಬಹುದು. ಈ ಸಲಹೆಯನ್ನು ಕೇಳಿರಿ: “ಕುಡುಕರಲ್ಲಿಯೂ ಅತಿ ಮಾಂಸಭಕ್ಷಕರಲ್ಲಿಯೂ ಸೇರದಿರು. ಕುಡುಕನೂ ಹೊಟ್ಟೆಬಾಕನೂ ದುರ್ಗತಿಗೆ ಬರುವರು; ನಿದ್ರಾಸಕ್ತಿಯು ಹರಕು ಬಟ್ಟೆಗಳನ್ನು ಹೊದಿಸುವದು.” 15 ಹೀಗೆ ಮದ್ಯ ಪಾನೀಯ, ಅಮಲೌಷಧದ ದುರುಪಯೋಗ ಮತ್ತು ಜೂಜಾಟದಂತಹ ದುರಭ್ಯಾಸಗಳಿಂದ ದೂರವಿರುವುದರಿಂದ ನಾವು ನಮ್ಮ ಹಣವನ್ನು ನಮ್ಮ ಕುಟುಂಬಕ್ಕೆ ಹಿತಕರವಾದ ರೀತಿಯಲ್ಲಿ ಒದಗಿಸಲಿಕ್ಕಾಗಿ ಉಪಯೋಗಿಸಬಲ್ಲೆವು. ಅನೇಕರು ತಮ್ಮ ಬಳಿಯಿರುವ ಹಣಕ್ಕಿಂತ ಹೆಚ್ಚು ಖರ್ಚನ್ನು ಮಾಡುವುದರಿಂದ, ಸಾಲವನ್ನು ಹಿಂದಿರುಗಿಸಲು ಕಠಿನ ದುಡಿಮೆಯನ್ನು ಮಾಡುವ ಸ್ಥಿತಿಗೆ ಬರುತ್ತಾರೆ. ಕೆಲವರು ತಾವು ಮಾಡಿರುವ ಒಂದು ಸಾಲದ ಬಡ್ಡಿಯನ್ನು ಮರುಪಾವತಿ ಮಾಡಲಿಕ್ಕಾಗಿ ಇನ್ನೊಂದು ಸಾಲವನ್ನು ಮಾಡುವುದೂ ಉಂಟು. ಹಾಗಿರುವಲ್ಲಿ, ಈ ಮುಂದಿನ ವಿವೇಕನುಡಿಗಳನ್ನು ಮನಸ್ಸಿಗೆ ಹಚ್ಚಿಕೊಳ್ಳುವುದು ಸಹಾಯಕರ: “ವ್ಯರ್ಥಕಾರ್ಯಾಸಕ್ತನಿಗೆ ಹೊಟ್ಟೆತುಂಬಾ ಬಡತನ.” 16 ನಾವು ಹೀಗೆ ಕೇಳಿಕೊಳ್ಳಬಹುದು: ‘ನಾನು ಕೊಳ್ಳಬಯಸುವ ವಸ್ತುಗಳು ನನಗೆ ನಿಜವಾಗಿಯೂ ಬೇಕೊ? ಕೇವಲ ಕೆಲವೇ ಸಲ ಉಪಯೋಗಿಸಿದ ಬಳಿಕ ಎಷ್ಟು ವಸ್ತುಗಳು ಕಪಾಟಿನ ಮೂಲೆಗೆ ಸೇರಿಕೊಳ್ಳುತ್ತವೆ?’ ಒಬ್ಬ ಅಂಕಣಕಾರನು ಬರೆದುದು: “ಮಾನವನ ಅಗತ್ಯಗಳು ಕೊಂಚ. ಅವನ ಬಯಕೆಗಳಾದರೊ ಅಪರಿಮಿತ.” ಈ ಮುಂದಿನ ವಿವೇಕದ ನುಡಿಗಳನ್ನು ಗಮನಿಸಿರಿ: “ನಾವು ಲೋಕದೊಳಕ್ಕೆ ಏನೂ ತಕ್ಕೊಂಡು ಬರಲಿಲ್ಲವಷ್ಟೆ; ಅದರೊಳಗಿಂದ ಏನೂ ತಕ್ಕೊಂಡು ಹೋಗಲಾರೆವು. ನಮಗೆ ಅನ್ನವಸ್ತ್ರಗಳಿದ್ದರೆ ಸಾಕು . . . ಹಣದಾಸೆಯು ಸಕಲವಿಧವಾದ ಕೆಟ್ಟತನಕ್ಕೆ ಮೂಲವಾಗಿದೆ. ಕೆಲವರು ಅದಕ್ಕಾಗಿ ಆತುರಪಟ್ಟು . . . ಅನೇಕ ವೇದನೆಗಳಿಂದ ತಮ್ಮನ್ನು ತಿವಿಸಿಕೊಳ್ಳುತ್ತಾರೆ.” 17

7 ಹಣದ ಸಮಸ್ಯೆಗಳನ್ನು ಬಗೆಹರಿಸುವುದರಲ್ಲಿ ಶ್ರಮಶೀಲತೆ ಅತಿ ಪರಿಣಾಮಕಾರಿಯಾಗಿದೆ. “ಸೋಮಾರಿಯೇ, ಇರುವೆಯ ಹತ್ತಿರ ಹೋಗಿ ಅದರ ನಡವಳಿಕೆಯನ್ನು ನೋಡಿ ಜ್ಞಾನವನ್ನು ತಂದುಕೋ . . . ಇನ್ನು ಸ್ವಲ್ಪ ನಿದ್ದೆ, ಇನ್ನು ತುಸ ತೂಕಡಿಕೆ, ಇನ್ನೂ ಕೊಂಚ ನಿದ್ದೆಗಾಗಿ ಕೈಮುದುರಿಕೊಳ್ಳುವೆ ಅಂದುಕೊಳ್ಳುವಿಯಾ? ಬಡತನವು ದಾರಿಗಳ್ಳನ ಹಾಗೂ ಕೊರತೆಯು ಪಂಜುಗಳ್ಳನಂತೆಯೂ ನಿನ್ನ ಮೇಲೆ ಬೀಳುವವು.” 18 ಜಾಗರೂಕತೆಯಿಂದ ಮಾಡಿದ ಯೋಜನೆ ಮತ್ತು ವಾಸ್ತವಿಕವಾದ ಬಡ್ಜಟ್‌ ಅನ್ನು ತಯಾರಿಸುವುದೂ ಸಹಾಯಕರವಾಗಿರಬಲ್ಲದು: “ನಿಮ್ಮಲ್ಲಿ ಯಾವನಾದರೂ ಒಂದು ಬುರುಜನ್ನು ಕಟ್ಟಿಸಬೇಕೆಂದು ಯೋಚಿಸಿದರೆ ಅವನು ಮೊದಲು ಕೂತುಕೊಂಡು—ಅದಕ್ಕೆ ಎಷ್ಟು ಖರ್ಚು ಹಿಡಿದೀತು, ಅದನ್ನು ತೀರಿಸುವುದಕ್ಕೆ ಸಾಕಾಗುವಷ್ಟು ಹಣ ನನ್ನಲ್ಲಿ ಉಂಟೋ ಎಂದು ಲೆಕ್ಕಮಾಡುವದಿಲ್ಲವೇ?” 19

“ತನ್ನ ಕೆಲಸದಲ್ಲಿ ಚಟುವಟಿಕೆಯಾಗಿರುವವನನ್ನು ನೋಡು”

8 ಆದರೆ, ನಮ್ಮ ಸ್ವಂತ ತಪ್ಪಿಲ್ಲದೆ ನಾವು ಬಡತನವನ್ನು ಅನುಭವಿಸುತ್ತಿರುವುದಾದರೆ ಏನು? ಉದಾಹರಣೆಗೆ, ನಮಗೆ ಶ್ರಮಪಟ್ಟು ಕೆಲಸ ಮಾಡುವ ಮನಸ್ಸಿದೆಯಾದರೂ ಆರ್ಥಿಕವಾಗಿ ಆಗುವ ಭಾರಿ ಬದಲಾವಣೆಯ ಕಾರಣ ನಾವು ನಿರುದ್ಯೋಗಿಗಳಾಗಬಹುದು. ಇಲ್ಲವೆ, ಹೆಚ್ಚಿನವರು ಬಡತನದ ರೇಖೆಯ ಕೆಳಗೆ ಜೀವಿಸುವ ದೇಶದಲ್ಲಿ ನಾವು ವಾಸಿಸುತ್ತಿರಬಹುದು. ಆಗ ಏನು? “ಧನವು ಹೇಗೋ ಹಾಗೆ ಜ್ಞಾನವೂ ಆಶ್ರಯ; ಜ್ಞಾನಕ್ಕೆ ವಿಶೇಷವೇನಂದರೆ ತನ್ನನ್ನು ಹೊಂದಿದವನಿಗೆ ಅದು ಜೀವದಾಯಕವೆಂಬದೇ.” 20 ಅಲ್ಲದೆ, ಈ ಬುದ್ಧಿವಾದದ ಕುರಿತು ಆಲೋಚಿಸಿರಿ: “ತನ್ನ ಕೆಲಸದಲ್ಲಿ ಚಟವಟಿಕೆಯಾಗಿರುವವನನ್ನು ನೋಡು; ಇಂಥವನು ರಾಜರನ್ನು ಸೇವಿಸುವನಲ್ಲದೆ ನೀಚರನ್ನು ಸೇವಿಸುವದಿಲ್ಲ.” 21 ಕೆಲಸ ದೊರೆಯುವಂತೆ ಸಹಾಯಮಾಡುವ ಕೌಶಲಗಳನ್ನು ನಾವು ಕಲಿಯಬಲ್ಲೆವೊ?

“ಕೊಡಿರಿ, ಆಗ ನಿಮಗೂ ಕೊಡುವರು”

9 ಈ ಕೆಳಗಿನ ಬುದ್ಧಿವಾದವು ಅಸಮಂಜಸವಾಗಿ ಕೇಳಿ ಬರಬಹುದಾದರೂ ಇದು ನಿಜವಾಗಿಯೂ ಕಾರ್ಯಸಾಧಕವಾಗಿದೆ: “ಕೊಡಿರಿ, ಆಗ ನಿಮಗೂ ಕೊಡುವರು; . . . ನೀವು ಅಳೆಯುವ ಅಳತೆಯಿಂದಲೇ ನಿಮಗೂ ಅಳೆಯುವರು.” 22 ಈ ಕೊಡುವಿಕೆಯು, ಅದು ಹಿಂದೆ ದೊರೆಯುವುದೆಂಬ ನಿರೀಕ್ಷೆಯಿಂದ ಮಾಡುವ ಕೊಡುವಿಕೆಯಲ್ಲ. ಬದಲಿಗೆ, ಉದಾರ ಮನಸ್ಸನ್ನು ಬೆಳೆಸಿಕೊಳ್ಳಬೇಕೆಂಬುದೇ ಇಲ್ಲಿರುವ ಬುದ್ಧಿವಾದ: “ಉದಾರಿಯು ಪುಷ್ಟನಾಗುವನು; ನೀರು ಹಾಯಿಸುವವನಿಗೆ ನೀರು ಸಿಕ್ಕುವದು.” 23 ಅಗತ್ಯದ ಸಮಯದಲ್ಲಿ ವಸ್ತುಗಳನ್ನು ಹಂಚಿಕೊಳ್ಳುವ ಮೂಲಕ, ನಾವು ಕೊಡುವಿಕೆಯ ಆತ್ಮವನ್ನು ಪ್ರೋತ್ಸಾಹಿಸುತ್ತೇವೆ ಮತ್ತು ಇದು ಕೊನೆಯದಾಗಿ ನಮಗೆ ಪ್ರಯೋಜನವಾಗಬಹುದಾದ ಮನೋಭಾವವನ್ನು ವರ್ಧಿಸುತ್ತದೆ.

10 ಮಾನವ ಸಂಬಂಧಗಳು: ವಿವೇಕಿಯಾದ ರಾಜನೊಬ್ಬನು ಅವಲೋಕಿಸಿದ್ದು: “ಸಮಸ್ತಪ್ರಯಾಸವನ್ನೂ ಕೈಗೂಡುವ ಸಕಲ ಕಾರ್ಯವನ್ನೂ ನೋಡಿ ಇವು ಪರಸ್ಪರ ಮತ್ಸರಕ್ಕೆ ಆಸ್ಪದವೆಂದು ಗ್ರಹಿಸಿಕೊಂಡೆನು. ಇದೂ ಗಾಳಿಯನ್ನು ಹಿಂದಟ್ಟಿದ ಹಾಗೆ ವ್ಯರ್ಥ.” 24 ಪ್ರತಿಸ್ಪರ್ಧೆಯು ಅನೇಕರು ಅವಿವೇಕತನದಿಂದ ವರ್ತಿಸುವಂತೆ ನಡೆಸಿದೆ. ಒಬ್ಬ ವ್ಯಕ್ತಿಯು, ತನ್ನ ನೆರೆಯವನು 32-ಇಂಚಿನ ಟೆಲಿವಿಷನನ್ನು ಖರೀದಿಸಿದ್ದನ್ನು ನೋಡಿ, ತನ್ನ 27-ಇಂಚಿನ ಟೆಲಿವಿಷನ್‌ ಚೆನ್ನಾಗಿ ಕೆಲಸ ಮಾಡುತ್ತಿದೆಯಾದರೂ, ಕೂಡಲೇ ಹೋಗಿ 36-ಇಂಚಿನ ಟೆಲಿವಿಷನನ್ನು ಖರೀದಿಸುತ್ತಾನೆ. ಇಂತಹ ಪ್ರತಿಸ್ಪರ್ಧೆಯು ಗಾಳಿಯನ್ನು ಹಿಂದಟ್ಟಿದಂತೆ, ಯಾವ ಗುರಿಯೂ ಇಲ್ಲದೆ ಅತ್ತಿತ್ತ ಓಡುವಂತೆ, ನಿಶ್ಚಯವಾಗಿಯೂ ವ್ಯರ್ಥವಾಗಿದೆ. ಇದನ್ನು ನೀವು ಒಪ್ಪುವುದಿಲ್ಲವೊ?

ನಾವು ಕೋಪವೆಂಬ ಬಲವಾದ ಭಾವಾವೇಶವನ್ನು ಹೇಗೆ ನಿಭಾಯಿಸಬಲ್ಲೆವು?

11 ಇತರರು ನಮಗೆ ಏನು ಹೇಳಿರುತ್ತಾರೊ ಆ ವಿಷಯದಲ್ಲಿ ನಮಗೆ ಅಸಮಾಧಾನವಾಗಿರಬಹುದು. ಹಾಗಿದ್ದರೆ ಈ ಬುದ್ಧಿವಾದವನ್ನು ಪರಿಗಣಿಸಿರಿ: “ನಿನ್ನ ಮನಸ್ಸು ಕೋಪಕ್ಕೆ ಆತುರಪಡದಿರಲಿ; ಕೋಪಕ್ಕೆ ಮೂಢರ ಎದೆಯೇ ನೆಲೆ.” 25 ನಿಜ, ಕೆಲವು ಸಂದರ್ಭಗಳಲ್ಲಿ ನಮ್ಮ ಕೋಪ ನ್ಯಾಯವಾದುದಾಗಿರಬಹುದು. ಒಬ್ಬ ಪುರಾತನಕಾಲದ ಲೇಖಕನು ಒಪ್ಪಿಕೊಂಡದ್ದು: “ಕೋಪಮಾಡಬೇಕಾದರೂ ಪಾಪ ಮಾಡಬೇಡಿರಿ; ಸೂರ್ಯನು ಮುಳುಗುವದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ.” 26 ಆದರೆ ಈ ಕೋಪವೆಂಬ ಬಲವಾದ ಭಾವಾವೇಶವನ್ನು ನಾವು ಹೇಗೆ ನಿಭಾಯಿಸಬಲ್ಲೆವು? “ಮನುಷ್ಯನ ವಿವೇಕವು [“ಒಳನೋಟವು,” NW] ಅವನ ಸಿಟ್ಟಿಗೆ ಅಡ್ಡಿ; [ಪರರ] ದೋಷವನ್ನು ಲಕ್ಷಿಸದಿರುವದು ಅವನಿಗೆ ಭೂಷಣ.” 27 ಇಲ್ಲಿ ಬೇಕಾಗಿರುವುದು ಒಳನೋಟವಾಗಿರುವುದರಿಂದ, ನಾವು ಹೀಗೆ ಕೇಳಿಕೊಳ್ಳಬಹುದು: ‘ಅವನು ಹಾಗೆ ಏಕೆ ವರ್ತಿಸಿದನು? ಅವನ ಕೃತ್ಯಗಳನ್ನು ಸ್ವಲ್ಪ ಮಟ್ಟಿಗೆ ಲಘೂಕರಿಸಬಹುದಾದ ಅಂಶಗಳು ಅದರಲ್ಲಿ ಒಳಗೂಡಿದ್ದವೊ?’ ಒಳನೋಟದೊಂದಿಗೆ, ಕೋಪವನ್ನು ನಿಭಾಯಿಸಲು ಬೆಳೆಸಿಕೊಳ್ಳಬಹುದಾದ ಇತರ ಗುಣಗಳೂ ಇವೆ. “ಕನಿಕರ ದಯೆ ದೀನಭಾವ ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ. ಮತ್ತೊಬ್ಬನ ಮೇಲೆ ತಪ್ಪುಹೊರಿಸುವದಕ್ಕೆ ಕಾರಣವಿದ್ದರೂ ತಪ್ಪುಹೊರಿಸದೆ ಒಬ್ಬರಿಗೊಬ್ಬರು ಸೈರಿಸಿಕೊಂಡು ಕ್ಷಮಿಸಿರಿ. . . . ಇದೆಲ್ಲಾದರ ಮೇಲೆ ಪ್ರೀತಿಯನ್ನು ಧರಿಸಿಕೊಳ್ಳಿರಿ; ಅದು ಸಮಸ್ತವನ್ನು ಸಂಪೂರ್ಣಮಾಡುವ ಬಂಧವಾಗಿದೆ.” 28 ಹೌದು, ಪ್ರೀತಿಯು ಮಾನವ ಸಂಬಂಧಗಳಲ್ಲಿರುವ ಅನೇಕ ಸಮಸ್ಯೆಗಳನ್ನು ಹೋಗಲಾಡಿಸುತ್ತದೆ.

12 ಆದರೆ ಶಾಂತಿಭರಿತ ಮಾನವ ಸಂಬಂಧಗಳನ್ನು ಕಾಪಾಡಿಕೊಳ್ಳಲು ತಡೆಯಾಗಿರುವ ಇನ್ನೂ ಒಂದು “ಚಿಕ್ಕ ಅಂಗ”ವಾಗಿರುವ ನಾಲಿಗೆ ಇದೆ. ಈ ಮುಂದಿನ ಮಾತುಗಳು ಎಷ್ಟು ಸತ್ಯವಾಗಿವೆ: “ನಾಲಿಗೆಯನ್ನು ಯಾವ ಮಾನವನೂ ಹತೋಟಿಗೆ ತರಲಾರನು. ಅದು ಸುಮ್ಮನಿರಲಾರದ ಕೆಡುಕಾಗಿದೆ.” 29 ಮತ್ತು ಈ ಮುಂದಿನ ಬುದ್ಧಿವಾದವು ಗಮನಾರ್ಹವೆಂಬುದು ನಿಶ್ಚಯ: “ಪ್ರತಿಯೊಬ್ಬನು ಕಿವಿಗೊಡುವದರಲ್ಲಿ ತೀವ್ರವಾಗಿಯೂ ಮಾತಾಡುವದರಲ್ಲಿ ನಿಧಾನವಾಗಿಯೂ ಇರಲಿ.” 30 ಆದರೆ ನಾವು ನಾಲಿಗೆಯನ್ನು ಉಪಯೋಗಿಸುವಾಗ ತೋರಿಕೆಯ ಶಾಂತಿಯನ್ನು ಕಾಪಾಡಿಕೊಳ್ಳಲಿಕ್ಕಾಗಿ ಅರ್ಧಸತ್ಯಗಳನ್ನು ಹೇಳದಿರುವಂತೆ ಜಾಗ್ರತೆ ವಹಿಸಬೇಕು. “ನಿಮ್ಮ ಮಾತು ಹೌದಾದರೆ ಹೌದು, ಅಲ್ಲವಾದರೆ ಅಲ್ಲ, ಎಂದಿರಲಿ; ಇದಕ್ಕಿಂತ ಹೆಚ್ಚಾದದ್ದು ಸೈತಾನನಿಂದ ಬಂದದ್ದು.” 31

13 ನಾವು ಇತರರೊಂದಿಗೆ ಹಿತಕರವಾದ ಸಂಬಂಧಗಳನ್ನು ಹೇಗೆ ಕಾಪಾಡಿಕೊಳ್ಳಬಲ್ಲೆವು? ಈ ಮಾರ್ಗದರ್ಶಕ ಮೂಲತತ್ತ್ವವನ್ನು ಗಮನಿಸಿರಿ: “ನಿಮ್ಮಲ್ಲಿ ಪ್ರತಿಯೊಬ್ಬನು ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡಲಿ.” 32 ಹೀಗೆ ನಾವು ಅನೇಕರು ಸುವರ್ಣ ನಿಯಮವೆಂದು ಕರೆಯುವ ನಿಯಮಾನುಸಾರ ಜೀವಿಸುವೆವು: “ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.” 33

14 ಮಾನಸಿಕ ಒತ್ತಡ: ಒತ್ತಡ ತುಂಬಿರುವ ಈ ಜಗತ್ತಿನಲ್ಲಿ ನಾವು ಭಾವನಾತ್ಮಕ ಸಮತೆಯನ್ನು ಹೇಗೆ ಕಾಪಾಡಿಕೊಳ್ಳಬಲ್ಲೆವು? “ಹರ್ಷಹೃದಯದಿಂದ ಹಸನ್ಮುಖ; ಮನೋವ್ಯಥೆಯಿಂದ ಆತ್ಮಭಂಗ.” 34 ನಮ್ಮ ದೃಷ್ಟಿಯಲ್ಲಿ ಸರಿಯಾಗಿದೆಯೆಂದು ತೋರುವ ವಿಷಯವನ್ನು ಇತರರು ಅಸಡ್ಡೆ ಮಾಡುವಾಗ ನಾವು ನಮ್ಮ “ಹರ್ಷಹೃದಯ”ವನ್ನು ಕಳೆದುಕೊಳ್ಳಬಹುದು. ಆದರೂ, ನಾವು ಈ ಮಾತುಗಳನ್ನು ಜ್ಞಾಪಿಸಿಕೊಳ್ಳುವುದು ಉತ್ತಮ: “ಧರ್ಮವನ್ನು ಅತಿಯಾಗಿ ಆಚರಿಸದಿರು; ಜ್ಞಾನವನ್ನು ಅಧಿಕವಾಗಿ ಅರ್ಜಿಸಬೇಡ; ನಿನ್ನನ್ನು ನೀನೇ ನಾಶನಕ್ಕೆ ಏಕೆ ಗುರಿಮಾಡಿಕೊಳ್ಳುವಿ?” 35 ಆದರೂ, ಜೀವನದ ಕಳವಳಗಳು ನಮ್ಮನ್ನು ಸತತವಾಗಿ ಪೀಡಿಸಬಹುದು. ಹಾಗಿರುವಲ್ಲಿ ಏನು? “ಕಳವಳವು ಮನಸ್ಸನ್ನು ಕುಗ್ಗಿಸುವದು; ಕನಿಕರದ ಮಾತು ಅದನ್ನು ಹಿಗ್ಗಿಸುವದು.” 36 “ಕನಿಕರದ ಮಾತು” ಅಂದರೆ ನಮ್ಮನ್ನು ಪ್ರೋತ್ಸಾಹಿಸುವಂತಹ ದಯೆಯ ಮಾತನ್ನು ನಾವು ಮನನ ಮಾಡಬಹುದು. ಖಿನ್ನ ಪರಿಸ್ಥಿತಿಗಳು ಇರುವಾಗಲೂ ಸಕಾರಾತ್ಮಕ ಮನೋಭಾವದಿಂದ ಇರುವಲ್ಲಿ ನಮಗೆ ಆರೋಗ್ಯಕರವಾದ ಪರಿಣಾಮವೂ ಫಲಿಸಬಹುದು: “ಹರ್ಷಹೃದಯವು ಒಳ್ಳೇ ಔಷಧ.” 37 ಇತರರು ನಮ್ಮನ್ನು ಲಕ್ಷಿಸುವುದಿಲ್ಲವೆಂದು ತೋರಿಬರುವುದರಿಂದ ನಾವು ಖಿನ್ನರಾಗುವಾಗ, ಈ ಸೂತ್ರವನ್ನು ಅನುಸರಿಸಲು ಪ್ರಯತ್ನಿಸಬಹುದು: “ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ.” 38 ಸಕಾರಾತ್ಮಕ ಮನೋಭಾವವಿರುವುದರ ಮೂಲಕ ನಾವು ಪ್ರತಿದಿನದ ಒತ್ತಡವನ್ನು ನಿಭಾಯಿಸಬಲ್ಲೆವು.

15 ಈ ಮೇಲೆ ಕೊಡಲ್ಪಟ್ಟಿರುವ ವಿವೇಕದ ಮಾತುಗಳು, 21ನೆಯ ಶತಮಾನದಲ್ಲಿ ಜೀವಿಸುತ್ತಿರುವ ನಿಮಗೆ ಕಾರ್ಯಸಾಧಕವಾಗಿರಬಲ್ಲವೆಂದು ನೆನಸುತ್ತೀರೊ? ವಾಸ್ತವವೇನಂದರೆ, ನಾವು ಅವನ್ನು ಒಂದು ಪ್ರಾಚೀನ ಗ್ರಂಥದಲ್ಲಿ—ಬೈಬಲಿನಲ್ಲಿ—ಕಂಡುಕೊಳ್ಳುತ್ತೇವೆ. ಆದರೆ, ವಿವೇಕದ ಬೇರೆ ಮೂಲಗಳಿಗೆ ಹೋಗುವ ಬದಲಾಗಿ ನಾವು ಬೈಬಲಿಗೇಕೆ ಹೋಗಬೇಕು? ಇದಕ್ಕೆ ಅನೇಕ ಕಾರಣಗಳಿವೆ. ಒಂದು ಕಾರಣವೇನೆಂದರೆ, ಬೈಬಲಿನಲ್ಲಿ ಕಂಡುಬರುವ ಮೂಲತತ್ತ್ವಗಳಿಗೆ ಬಹು ಕಾಲದಿಂದ ಪರೀಕ್ಷಿಸಲ್ಪಟ್ಟು ಸಾಫಲ್ಯಪಡೆದಿರುವ ಮೌಲ್ಯವಿದೆ. ಉದಾಹರಣೆಗೆ, ಸ್ತ್ರೀ ಸ್ವಾತಂತ್ರ್ಯ ಚಳವಳಿಯಲ್ಲಿ ಒಳಗೂಡಿದ್ದ ಯಾಸುಹೀರೋ ಮತ್ತು ಕಾಯೋಕೋ ಎಂಬವರನ್ನು ಪರಿಗಣಿಸಿರಿ. ಕಾಯೋಕೋ ಯಾಸುಹೀರೋವಿನ ಮಗುವಿಗೆ ಗರ್ಭಧರಿಸಿದ್ದ ಕಾರಣದಿಂದ ಮಾತ್ರ ಅವರಿಬ್ಬರು ಮದುವೆ ಮಾಡಿಕೊಂಡಿದ್ದರು. ಆದರೆ ಹಣದ ಸಮಸ್ಯೆಗಳು ಮತ್ತು ಪರಸ್ಪರ ಹೊಂದಿಕೊಳ್ಳದಿರುವಿಕೆಯ ಕಾರಣ, ಅವರು ಬೇಗನೆ ವಿವಾಹ ವಿಚ್ಛೇದ ಮಾಡಿಕೊಂಡರು. ತರುವಾಯ, ಪರಸ್ಪರರಿಗೆ ತಿಳಿಯದೆ, ಅವರಿಬ್ಬರೂ ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್‌ ಅಧ್ಯಯನದಲ್ಲಿ ತೊಡಗಿದರು. ತಮ್ಮ ಜೀವಿತದಲ್ಲಿ ಮಹತ್ವದ ಬದಲಾವಣೆಗಳಾಗಿವೆ ಎಂಬುದನ್ನು ಯಾಸುಹೀರೋ ಮತ್ತು ಕಾಯೋಕೋ ಗಮನಿಸಿದಾಗ ಅವರು ಪುನರ್ವಿವಾಹ ಮಾಡಿಕೊಳ್ಳಲು ನಿಶ್ಚಯಿಸಿದರು. ಈಗ ಅವರ ಜೀವನ ಸಮಸ್ಯೆರಹಿತವಾಗಿರದಿದ್ದರೂ, ಅವರು ಬೈಬಲ್‌ ಮೂಲತತ್ತ್ವಗಳಿಗನುಸಾರ ಜೀವಿಸುತ್ತಾರೆ ಮತ್ತು ಅವರಿಬ್ಬರೂ ತಮ್ಮ ಸಮಸ್ಯೆಗಳನ್ನು ಬಗೆಹರಿಸಲಿಕ್ಕಾಗಿ ಪರಸ್ಪರ ರಾಜಿಮಾಡಿಕೊಳ್ಳುತ್ತಾರೆ. ಯೆಹೋವನ ಸಾಕ್ಷಿಗಳ ನಡುವೆ ಬೈಬಲ್‌ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳುವುದರಿಂದ ಬರುವ ಉತ್ತಮ ಪರಿಣಾಮಗಳನ್ನು ನೋಡುವಿರಿ. ಬೈಬಲಿಗನುಸಾರ ಜೀವಿಸಲು ಪ್ರಯತ್ನಿಸುವ ಈ ಜನರ ಪರಿಚಯ ಮಾಡಿಕೊಳ್ಳಲು ಅವರ ಕೂಟಗಳಲ್ಲೊಂದಕ್ಕೆ ನೀವೇಕೆ ಹಾಜರಾಗಬಾರದು?

16 ಈ ಮೇಲೆ ಕೊಡಲ್ಪಟ್ಟಿರುವ ಬುದ್ಧಿವಾದವು, ಆ ಜ್ಞಾನೋದಯದ ಚಿನ್ನದ ಗಣಿಯಾದ ಬೈಬಲಿನಲ್ಲಿ ನೀವು ಕಂಡುಹಿಡಿಯಬಹುದಾದ ಪ್ರಾಯೋಗಿಕ ವಿವೇಕದ ಅಕ್ಷಯ ಸರಬರಾಯಿಯ ಕೇವಲ ಒಂದು ಮಾದರಿಯಾಗಿದೆ. ಯೆಹೋವನ ಸಾಕ್ಷಿಗಳು ತಮ್ಮ ಜೀವಿತಗಳಲ್ಲಿ ಬೈಬಲ್‌ ಮೂಲತತ್ತ್ವಗಳನ್ನು ಸಿದ್ಧಮನಸ್ಸಿನಿಂದ ಅನ್ವಯಿಸಿಕೊಳ್ಳುವುದಕ್ಕೆ ಸಕಾರಣಗಳಿವೆ. ಆ ಸಿದ್ಧಮನಸ್ಸಿಗೆ ಕಾರಣಗಳೇನೆಂಬುದನ್ನು ಕಂಡುಹಿಡಿದು ಬೈಬಲಿನ ಕೆಲವು ಮೂಲಭೂತ ನಿಜತ್ವಗಳನ್ನು ಏಕೆ ಕಲಿಯಬಾರದು?