ಭಾಗ 1
ಸಂತೃಪ್ತಿಕರವಾದ ಜೀವನ—ಹಗಲುಗನಸೊ?
ಅಭಿವೃದ್ಧಿಗೊಂಡಿರುವ ದೇಶವೊಂದರಲ್ಲಿ ಜೀವನಕ್ಕೆ ಅನುಕೂಲಕರವಾಗಿರುವ ಸಕಲ ಭೋಗವಸ್ತುಗಳಿಂದ ತುಂಬಿರುವ ಮನೆಯೊಂದು ಸುಖಸಮೃದ್ಧಿಯ ತೋರಿಕೆಯನ್ನು ನೀಡಬಹುದು. ಆದರೆ ಆ ಮನೆಯೊಳಗೆ ಕಾಲಿಟ್ಟಲ್ಲಿ ನಿಮಗೆ ಏನು ಕಂಡುಬಂದೀತು? ಮುಜುಗರವೂ ಅಸಂತೋಷವೂ ಉಳ್ಳ ವಾತಾವರಣ. ಹದಿಹರೆಯದ ಮಕ್ಕಳು ತಮ್ಮ ಹೆತ್ತವರೊಂದಿಗೆ ಮುಖ ಗಂಟುಹಾಕಿಕೊಂಡು “ಹೌದು,” ಅಥವಾ “ಇಲ್ಲ” ಎಂದಷ್ಟೇ ಹೇಳಿ ಉತ್ತರಕೊಡುತ್ತಾರೆ. ತಾಯಿ ತನ್ನ ಗಂಡನ ಗಮನಕ್ಕಾಗಿ ಹಂಬಲಿಸುತ್ತಾಳೆ. ಆದರೆ ತಂದೆ ತನ್ನ ಶಾಂತಿಯನ್ನು ಯಾರೂ ಭಂಗಗೊಳಿಸಬಾರದೆಂದು ಬಯಸುತ್ತಾನೆ. ಈ ದಂಪತಿಗಳ ವಯಸ್ಸಾದ ಹೆತ್ತವರು, ತಮ್ಮಷ್ಟಕ್ಕೇ ಬೇರೆಲ್ಲೊ ವಾಸಿಸುವಂತೆ ಬಿಡಲ್ಪಟ್ಟಿದ್ದು, ಎಷ್ಟೋ ತಿಂಗಳುಗಳಿಂದ ಇವರನ್ನು ಭೇಟಿಯಾಗಿರದೆ ಈ ಕುಟುಂಬದ ಸಹವಾಸಕ್ಕಾಗಿ ತವಕಿಸುತ್ತಾರೆ. ಆದರೆ ಇನ್ನೊಂದು ಕಡೆಯಲ್ಲಿ, ಬೇರೆ ಕುಟುಂಬಗಳು ಅದೇ ರೀತಿಯ ಒತ್ತಡಗಳನ್ನು ಎದುರಿಸುತ್ತಿರುವುದಾದರೂ, ತಮ್ಮ ಸಮಸ್ಯೆಗಳನ್ನು ಬಗೆಹರಿಸಶಕ್ತರಾಗಿ ನಿಜವಾಗಿಯೂ ಸಂತೋಷವುಳ್ಳವರಾಗಿದ್ದಾರೆ. ಹೀಗೇಕೆಂದು ನೀವು ಯೋಚಿಸಿದ್ದುಂಟೊ?
2 ಪ್ರಾಯಶಃ ಜಗತ್ತಿನ ಇನ್ನೊಂದು ಮೂಲೆಯಲ್ಲಿರುವ ಒಂದು ಅಭಿವೃದ್ಧಿಶೀಲ ದೇಶದಲ್ಲಿರುವ ಒಂದು ಕುಟುಂಬವನ್ನು ತೆಗೆದುಕೊಳ್ಳಿರಿ. ಆ ಕುಟುಂಬದ ಏಳು ಮಂದಿ ಸದಸ್ಯರೂ, ಇನ್ನೇನು ಕುಸಿದು ಬೀಳುವಂತಿರುವ ಒಂದು ಗುಡಿಸಿಲಿನಲ್ಲಿ ವಾಸಿಸುತ್ತಾರೆ. ಮುಂದಿನ ಊಟ ಯಾವಾಗ ಸಿಗುವುದೆಂಬ ಖಾತರಿ ಅವರಿಗಿಲ್ಲ. ಮನುಷ್ಯನು ಈ ಲೋಕದ ಬಡತನ ಮತ್ತು ಹಸಿವೆಯನ್ನು ನಿವಾರಿಸಶಕ್ತನಾಗಿಲ್ಲ ಎಂಬುದರ ದುಃಖಕರವಾದ ಮರುಜ್ಞಾಪನವಿದು. ಹೀಗಿದ್ದರೂ, ಭೂಮಿಯ ಮೇಲೆ ಇಂತಹ ದಾರಿದ್ರ್ಯವನ್ನು ಸಂತೋಷಚಿತ್ತದಿಂದ ಎದುರಿಸುವ ಅನೇಕ ಕುಟುಂಬಗಳಿವೆ. ಇದೇಕೆ?
3 ಸಂಪದ್ಭರಿತ ದೇಶಗಳಲ್ಲೂ ಆರ್ಥಿಕ ಸಮಸ್ಯೆಗಳು ಬೆಳೆಯಸಾಧ್ಯವಿದೆ. ಜಪಾನಿನ ಒಂದು ಕುಟುಂಬವು ಅಲ್ಲಿನ ಆರ್ಥಿಕ “ನೀರ್ಗುಳ್ಳೆ”ಯ ಪರಮಾವಧಿಯ ಸಮಯದಲ್ಲಿ ತಮ್ಮ ಮನೆಯನ್ನು ಖರೀದಿಸಿತು. ತಮ್ಮ ಸಂಬಳ ಹೆಚ್ಚಾಗುವುದೆಂಬ ಖಾತರಿಯಿಂದ ದೊಡ್ಡ ಮೊತ್ತದ ಅಡಮಾನಕ್ಕೆ ಆ ಕುಟುಂಬವು ಸಮ್ಮತಿಸಿತು. ಆದರೆ ಆ ಆರ್ಥಿಕ “ನೀರ್ಗುಳ್ಳೆ” ಒಡೆದಾಗ, ಅವರಿಗೆ ಆ ಹಣವನ್ನು ಹಿಂದೆ ಪಾವತಿ ಮಾಡಲಿಕ್ಕಾಗದೆ, ತಮ್ಮ ಮನೆಯನ್ನು ತಾವು ಕೊಟ್ಟ ಹಣಕ್ಕಿಂತ ತುಂಬ ಕಡಮೆ ಹಣಕ್ಕೆ ಮಾರಬೇಕಾಯಿತು. ಆ ಮನೆಯಲ್ಲಿ ಆ ಕುಟುಂಬವು ಈಗ ಜೀವಿಸುತ್ತಿಲ್ಲವಾದರೂ ಅದರ ಸಾಲವನ್ನು ಆ ಕುಟುಂಬವು ಇನ್ನೂ ತೆರುತ್ತಿದೆ. ಈ ಹೊರೆಯಷ್ಟೇ ಅಲ್ಲ, ಕ್ರೆಡಿಟ್ ಕಾರ್ಡನ್ನು ಅವಿವೇಕದಿಂದ ಉಪಯೋಗಿಸಿದ್ದರಿಂದಲೂ ಅದರ ಹಣವನ್ನು ಮರುಪಾವತಿ ಮಾಡಲು ಆ ಕುಟುಂಬವು ಕಷ್ಟಪಡುತ್ತಿದೆ. ತಂದೆಯು ಕುದುರೆ ಜೂಜಾಟದಲ್ಲಿ ತೊಡಗಿರುವುದರಿಂದ ಆ ಕುಟುಂಬವು ಸಾಲದಲ್ಲಿ ಹೆಚ್ಚು ಆಳವಾಗಿ ಮುಳುಗಿ ಹೋಗುತ್ತಾ ಇದೆ. ಆದರೆ ಬೇರೆ ಅನೇಕ ಕುಟುಂಬಗಳು ಬದಲಾವಣೆಗಳನ್ನು ಮಾಡಿ ಸಂತೋಷದ ಫಲವನ್ನು ಪಡೆದಿವೆ. ಅದು ಹೇಗೆಂದು ತಿಳಿಯಬಯಸುವಿರೊ?
4 ನೀವು ಎಲ್ಲಿ ಜೀವಿಸಿದರೂ, ಮಾನವ ಸಂಬಂಧಗಳು ಸತತವಾಗಿ ವ್ಯಥೆಯನ್ನು ತರುವ ಮತ್ತು ಹೀಗೆ, ಜೀವನವನ್ನು ಅತೃಪ್ತಿಕರವಾಗಿ ಮಾಡುವ ಕಾರಣವಾಗಿರಬಲ್ಲವು. ಕೆಲಸದ ಸ್ಥಳದಲ್ಲಿ ನೀವು ಚಾಡಿಮಾತಿಗೆ ಬಲಿಯಾಗಬಹುದು. ನಿಮ್ಮ ಸಾಧನೆಗಳಿಂದಾಗಿ ಇತರರಿಗೆ ಹೊಟ್ಟೆಕಿಚ್ಚಾಗಿ ನೀವು ಅನ್ಯಾಯದ ಟೀಕೆಗೆ ಗುರಿಯಾಗಬಹುದು. ನೀವು ದಿನಾಲೂ ವ್ಯವಹರಿಸಬೇಕಾದ ವ್ಯಕ್ತಿಯು ತನ್ನ ದರ್ಪದ ವ್ಯಕ್ತಿತ್ವದಿಂದಾಗಿ ನಿಮಗೆ ಕಿರಿಕಿರಿಯನ್ನು ಉಂಟುಮಾಡುತ್ತಿರಬಹುದು. ಶಾಲೆಯಲ್ಲಿ ನಿಮ್ಮ ಮಗನು ಪೀಡೆ ಮತ್ತು ಕಿರುಕುಳಕ್ಕೊಳಗಾಗಿ ಅಲಕ್ಷಿಸಲ್ಪಡಬಹುದು. ನೀವು ಒಂಟಿಹೆತ್ತವರಾಗಿರುವಲ್ಲಿ, ನಿಮ್ಮ ಈ ಸನ್ನಿವೇಶದಿಂದಾಗಿ ಇತರರೊಂದಿಗಿನ ಸಂಬಂಧವು ಯಾವುದೇ ರೀತಿಯಲ್ಲಿ ಉತ್ತಮಗೊಳ್ಳುವುದಿಲ್ಲವೆಂಬುದು ನಿಮಗೆ ಗೊತ್ತು. ಇಂತಹ ಸಮಸ್ಯೆಗಳು ಅನೇಕ ಮಂದಿ ಸ್ತ್ರೀಪುರುಷರ ಜೀವನಗಳಿಗೆ ಮಾನಸಿಕ ಒತ್ತಡವನ್ನು ಕೂಡಿಸುತ್ತವೆ.
5 ಈ ಮಾನಸಿಕ ಒತ್ತಡದ ಪರಿಣಾಮಗಳು ತುಂಬ ಕಾಲದ ವರೆಗೆ ಮೆಲ್ಲನೆ ಬೆಳೆಯುತ್ತಾ ಹೋಗಿ, ಕೊನೆಗೆ ಯಾವ ಎಚ್ಚರಿಕೆಯನ್ನೂ ಕೊಡದೆ ಒಡೆತದ ಬಿಂದುವನ್ನು ತಲಪುವುದು. ಆದಕಾರಣ, ಮಾನಸಿಕ ಒತ್ತಡವನ್ನು ಮೌನ ಹಂತಕನೆಂದೂ, ಬಹುಕಾಲದಿಂದಿರುವ ಮಾನಸಿಕ ಒತ್ತಡವನ್ನು ನಿಧಾನವಾಗಿ ಕಾರ್ಯನಡೆಸುವ ವಿಷವೆಂತಲೂ ಕರೆಯಲಾಗುತ್ತದೆ. ಮಿನಸೋಟ ವಿಶ್ವವಿದ್ಯಾಲಯದ ಪ್ರೊಫೆಸರ್ ರಾಬರ್ಟ್ ಎಲ್. ವನಿಂಗ ಹೇಳುವುದು: “ಇಂದು ಮಾನಸಿಕ ಒತ್ತಡ ಮತ್ತು ಅದರ ಪರಿಣಾಮವಾಗಿ ಬರುವ ಕಾಯಿಲೆಗಳು, ಬಹುಮಟ್ಟಿಗೆ ಜಗತ್ತಿನ ಪ್ರತಿಯೊಂದು ಮೂಲೆಯಲ್ಲಿಯೂ ಇರುವ ಕಾರ್ಮಿಕರ ಮೇಲೆ ಪರಿಣಾಮ ಬೀರುತ್ತವೆ.” ಒತ್ತಡ ಸಂಬಂಧಿತ ರೋಗಗಳಿಗಾಗಿ ಅಮೆರಿಕದ ಆರ್ಥಿಕ ವ್ಯವಸ್ಥೆಯು 20 ಸಾವಿರ ಕೋಟಿ ಡಾಲರುಗಳನ್ನು ಖರ್ಚು ಮಾಡುತ್ತದೆಂದು ಹೇಳಲಾಗುತ್ತದೆ. ಒತ್ತಡವನ್ನು ಅಮೆರಿಕದ ಅತಿ ನವೀನ ರಫ್ತುಸರಕು ಎಂದೂ ಕರೆಯಲಾಗುತ್ತದೆ ಮತ್ತು ಲೋಕದ ಅನೇಕ ಪ್ರಮುಖ ಭಾಷೆಗಳಲ್ಲಿ “ಮಾನಸಿಕ ಒತ್ತಡ” ಎಂಬ ಪದವು ಕೇಳಿಬರುತ್ತದೆ. ನೀವು ಮಾನಸಿಕ ಒತ್ತಡವನ್ನು ಅನುಭವಿಸುವಾಗ, ಸಮಯಕ್ಕೆ ಮುಗಿಸಬೇಕಾದ ಕೆಲಸಗಳನ್ನು ಮಾಡಿ ಮುಗಿಸದಿದ್ದರೆ ನಿಮಗೆ ಅಪರಾಧಿ ಮನೋಭಾವ ಕಾಡಬಹುದು. ಇತ್ತೀಚೆಗಿನ ಒಂದು ಅಧ್ಯಯನವು, ಸರಾಸರಿ ಒಬ್ಬ ವ್ಯಕ್ತಿಯು ದಿನಕ್ಕೆ ಎರಡು ತಾಸು ಅಪರಾಧಿ ಮನೋಭಾವದಿಂದ ನರಳುತ್ತಾನೆಂದು ವರದಿ ಮಾಡುತ್ತದೆ. ಹಾಗಿದ್ದರೂ, ಕೆಲವರು ಒತ್ತಡವನ್ನು ನಿಭಾಯಿಸಿ ತಮ್ಮ ಜೀವಿತಗಳಲ್ಲಿ ಸಾಫಲ್ಯವನ್ನು ಪಡೆದಿದ್ದಾರೆ.
6 ನೀವು ಇಂತಹ ದೈನಂದಿನ ಸಮಸ್ಯೆಗಳನ್ನು ನಿಭಾಯಿಸಿ ತೃಪ್ತಿಕರವಾದ ಜೀವನಗಳನ್ನು ಹೇಗೆ ನಡೆಸಬಲ್ಲಿರಿ? ಕೆಲವರು ಸ್ವಸಹಾಯಕ ಪುಸ್ತಕಗಳನ್ನು ಮತ್ತು ವಿಶೇಷಜ್ಞರ ಕೈಪಿಡಿಗಳನ್ನು ವಿಚಾರಿಸುತ್ತಾರೆ. ಆದರೆ ಅಂತಹ ಪುಸ್ತಕಗಳು ವಿಶ್ವಾಸಾರ್ಹವೊ? ಮಕ್ಕಳನ್ನು ಬೆಳೆಸುವ ವಿಷಯದಲ್ಲಿ 42 ಭಾಷೆಗಳಿಗೆ ಭಾಷಾಂತರವಾಗಿ ಸುಮಾರು 5 ಕೋಟಿಗಳಷ್ಟು ಪ್ರತಿಗಳು ಚಲಾವಣೆಯಲ್ಲಿರುವ ಪುಸ್ತಕವನ್ನು ಬರೆದಿರುವ ಡಾ. ಬೆಂಜಮಿನ್ ಸ್ಪಾಕ್, “ಇಂದು ಅಮೆರಿಕದ ಹೆತ್ತವರಲ್ಲಿರುವ ಸರ್ವಸಾಮಾನ್ಯವಾದ ಸಮಸ್ಯೆಯು . . . ದೃಢವಾಗಿರಲು ಇರುವ ಅಸಾಮರ್ಥ್ಯವೇ,” ಎಂದು ಒಮ್ಮೆ ಹೇಳಿದರು. ಆಮೇಲೆ ಅವರು, ತಾನೂ ಸೇರಿರುವ ವೃತ್ತಿಪರ ಜನರೇ ಇದಕ್ಕೆ ಬಹುಮಟ್ಟಿಗೆ ನಿಂದಾರ್ಹರು ಎಂದು ಹೇಳಿದರು. “ನಮಗೆ ಸರ್ವವೂ ತಿಳಿದಿದೆ ಎಂಬ ಮನೋಭಾವವು ಹೆತ್ತವರ ಆತ್ಮವಿಶ್ವಾಸವನ್ನು ಕೊರೆದುಹಾಕುತ್ತಿದೆ ಎಂಬುದನ್ನು ನಾವು ಗ್ರಹಿಸುವಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು” ಎಂದು ಅವರು ಒಪ್ಪಿಕೊಂಡರು. ಆದುದರಿಂದ ನಾವು ಹೀಗೆ ಕೇಳಿಕೊಳ್ಳುವುದು ಉತ್ತಮ: ‘ಇಂದು ಮತ್ತು ಭವಿಷ್ಯತ್ತಿನಲ್ಲಿ ಸಂತೃಪ್ತಿಕರವಾದ ಜೀವನವನ್ನು ನಡೆಸಬೇಕಾದರೆ ನಾವು ಯಾರ ಬುದ್ಧಿವಾದವನ್ನು ಅನುಸರಿಸುವುದು ಸುರಕ್ಷಿತವಾಗಿರಬಲ್ಲದು?’