ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 8

ಸಂತೃಪ್ತಿಕರವಾದ ಜೀವನಕ್ಕೆ ಹಿಂದಿರುಗುವ ಮಾರ್ಗ

ಸಂತೃಪ್ತಿಕರವಾದ ಜೀವನಕ್ಕೆ ಹಿಂದಿರುಗುವ ಮಾರ್ಗ

 ದೈವಿಕ ಪ್ರಭುತ್ವದ ವಿರುದ್ಧವಾಗಿ ದಂಗೆಯೆದ್ದಿರುವ ಫಲವಾಗಿ ಮಾನವಕುಲವು ನಿರರ್ಥಕತೆಯ ಜೀವನಮಾರ್ಗಕ್ಕೆ ಇಳಿಯಿತಾದರೂ, ದೇವರು ಮನುಷ್ಯರನ್ನು ನಿರೀಕ್ಷೆಯಿಲ್ಲದವರಾಗಿ ಬಿಟ್ಟುಬಿಡಲಿಲ್ಲ. ಬೈಬಲು ವಿವರಿಸುವುದು: “ಜಗತ್ತು ವ್ಯರ್ಥತ್ವಕ್ಕೆ ಒಳಗಾಯಿತು; ಹೀಗೆ ಒಳಗಾದದ್ದು ಸ್ವೇಚ್ಛೆಯಿಂದಲ್ಲ, ಅದನ್ನು ಒಳಪಡಿಸಿದವನ ಸಂಕಲ್ಪದಿಂದಲೇ. ಆದರೂ ಅದಕ್ಕೊಂದು ನಿರೀಕ್ಷೆಯುಂಟು; ಏನಂದರೆ ಆ ಜಗತ್ತು ಕೂಡ ನಾಶದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದುವದೇ.” (ರೋಮಾಪುರ 8:20, 21) ಹೌದು, ಪ್ರಥಮ ಮಾನವ ದಂಪತಿಯ ಸಂತಾನಕ್ಕೆ ದೇವರು ನಿರೀಕ್ಷೆಯನ್ನು ಒದಗಿಸಿದನು. ಮಾನವಕುಲವು, ಬಾಧ್ಯತೆಯಾಗಿ ಬಂದಿದ್ದ ಪಾಪ ಮತ್ತು ಮರಣದಿಂದ ಬಿಡುಗಡೆ ಹೊಂದುವುದು ಎಂಬ ಖಂಡಿತವಾದ ನಿರೀಕ್ಷೆಯೇ ಅದಾಗಿತ್ತು. ಅವರು ಯೆಹೋವ ದೇವರೊಂದಿಗೆ ನಿಕಟ ಸಂಬಂಧಕ್ಕೆ ಹಿಂದಿರುಗಿ ಬರುವ ಸಾಧ್ಯತೆ ಇತ್ತು. ಆದರೆ ಹೇಗೆ?

ಮಾನವಕುಲವು ಪಾಪ ಮತ್ತು ಮರಣದ ದಾಸತ್ವದಿಂದ ಬಿಡುಗಡೆಹೊಂದಲಿಕ್ಕಾಗಿ ದೇವರು ನಿರೀಕ್ಷೆಯನ್ನು ಒದಗಿಸಿದನು

2 ಆದಾಮಹವ್ವರು ಪಾಪ ಮಾಡಿದಾಗ, ಅವರ ಸಂತಾನದವರು ಭೂಮಿಯ ಮೇಲೆ ಸಂತೃಪ್ತಿಕರವಾದ ಜೀವನವನ್ನು ಸದಾ ಅನುಭವಿಸುವ ಪ್ರತೀಕ್ಷೆಯನ್ನು ಅವರಿಂದ ಕಸಿದುಕೊಂಡರು. ಒಳ್ಳೆಯದು ಮತ್ತು ಕೆಟ್ಟದ್ದನ್ನು ತಾವೇ ನಿರ್ಣಯಿಸಿಕೊಳ್ಳುವ ಅವಕಾಶಕ್ಕೆ ಬದಲಿಯಾಗಿ, ಅವರು ತಮ್ಮ ಭಾವೀ ಕುಟುಂಬವನ್ನು ಪಾಪ ಮತ್ತು ಮರಣದ ದಾಸತ್ವಕ್ಕೆ ಮಾರಿಬಿಟ್ಟರು. ಆ ಕುಟುಂಬದಲ್ಲಿ ಹುಟ್ಟಿದ ವಂಶಸ್ಥರನ್ನು, ಕ್ರೂರ ಪ್ರಭುಗಳು ಅರಸರಾಗಿ ಆಳುತ್ತಿರುವ ಅತಿ ದೂರದ ದ್ವೀಪವೊಂದರಲ್ಲಿ ಬಂಧಿಸಲ್ಪಟ್ಟಿರುವ ಗುಲಾಮರಿಗೆ ಹೋಲಿಸಬಹುದು. ಹೌದು, ಪಾಪವೆಂಬ ಇನ್ನೊಬ್ಬ ಅರಸನು ದಾಸತ್ವಕ್ಕೊಳಪಡಿಸಿರುವ ಮಾನವಕುಲದ ಮೇಲೆ ಮರಣವು ಅರಸನಾಗಿ ಆಳಿದೆ. (ರೋಮಾಪುರ 5:14, 21) ಅವರನ್ನು ರಕ್ಷಿಸಲು ಯಾರೂ ಇಲ್ಲದಿರುವಂತೆ ಕಾಣುತ್ತದೆ. ಅವರ ಪೂರ್ವಿಕನೇ ಅವರನ್ನು ದಾಸತ್ವಕ್ಕೆ ಮಾರಿದ್ದಾನೆ! ಆದರೆ ಆಗ ಧರ್ಮಶೀಲನೊಬ್ಬನು ತನ್ನ ಪುತ್ರನನ್ನು ಕಳುಹಿಸುತ್ತಾನೆ. ಆ ಪುತ್ರನು ದಾಸತ್ವದಲ್ಲಿರುವ ಸರ್ವರಿಗಾಗಿ ಬಿಡುಗಡೆಯನ್ನು ಕೊಡಲು ಬೇಕಾಗುವ ಪೂರ್ಣ ಕ್ರಯವನ್ನು ತೆರುತ್ತಾನೆ.—ಕೀರ್ತನೆ 51:5; 146:4; ರೋಮಾಪುರ 8:2.

3 ಈ ದೃಷ್ಟಾಂತದಲ್ಲಿ, ದಾಸರನ್ನು ರಕ್ಷಿಸಿದ ಆ ಮನುಷ್ಯನು ಯೆಹೋವ ದೇವರನ್ನು ಪ್ರತಿನಿಧಿಸುತ್ತಾನೆ. ಬಿಡುಗಡೆಯ ಕ್ರಯವನ್ನು ತಂದ ಪುತ್ರನು ಯೇಸು ಕ್ರಿಸ್ತನು. ಇವನಿಗೆ ದೇವರ ಏಕಜಾತ ಪುತ್ರನಾಗಿ ಒಂದು ಮಾನವಪೂರ್ವ ಅಸ್ತಿತ್ವವಿತ್ತು. (ಯೋಹಾನ 3:16) ಇವನು ಯೆಹೋವನ ಪ್ರಪ್ರಥಮ ಸೃಷ್ಟಿಯಾಗಿದ್ದನು. ಮತ್ತು ವಿಶ್ವದ ಇತರ ಎಲ್ಲ ಜೀವಿಗಳು ಇವನ ಮೂಲಕ ಅಸ್ತಿತ್ವಕ್ಕೆ ಬಂದವು. (ಕೊಲೊಸ್ಸೆ 1:15, 16) ಈ ಆತ್ಮಿಕ ಪುತ್ರನ ಜೀವವನ್ನು ಯೆಹೋವನು ಅದ್ಭುತಕರವಾಗಿ ಒಬ್ಬಾಕೆ ಕನ್ಯೆಯ ಗರ್ಭಕ್ಕೆ ಸ್ಥಳಾಂತರಿಸಿದನು. ಹೀಗೆ, ಆ ಶಿಶು ಪರಿಪೂರ್ಣ ಮಾನವನಾಗಿ, ದೈವಿಕ ನ್ಯಾಯದ ಆವಶ್ಯಕತೆಗಳನ್ನು ಪೂರೈಸಲು ಆವಶ್ಯಕವಾದ ಬೆಲೆಯಾಗಿ ಹುಟ್ಟಲು ಸಾಧ್ಯವಾಯಿತು.—ಲೂಕ 1:26-31, 34, 35.

4 ಯೇಸು ಸುಮಾರು 30 ವಯಸ್ಸಿನವನಾದಾಗ ಯೊರ್ದನ್‌ ಹೊಳೆಯಲ್ಲಿ ದೀಕ್ಷಾಸ್ನಾನ ಹೊಂದಿದನು. ಆ ದೀಕ್ಷಾಸ್ನಾನದ ಸಮಯದಲ್ಲಿ ಅವನು ಪವಿತ್ರಾತ್ಮದಿಂದ ಅಥವಾ ದೇವರ ಕ್ರಿಯಾಶೀಲ ಶಕ್ತಿಯಿಂದ ಅಭಿಷೇಕ ಹೊಂದಿದನು. ಹೀಗೆ ಅವನು ಕ್ರಿಸ್ತನಾದನು; ಇದರರ್ಥ, “ಅಭಿಷಿಕ್ತನು.” (ಲೂಕ 3:21, 22) ಯೇಸುವಿನ ಭೂಶುಶ್ರೂಷೆಯು ಮೂರೂವರೆ ವರ್ಷಗಳ ಅವಧಿಯದ್ದಾಗಿತ್ತು. ಆ ವರ್ಷಗಳಲ್ಲಿ ಅವನು ತನ್ನ ಶಿಷ್ಯರಿಗೆ “ದೇವರ ರಾಜ್ಯದ” ಕುರಿತು, ಅಂದರೆ ಒಂದು ಸ್ವರ್ಗೀಯ ಸರಕಾರದ ಕುರಿತು ಬೋಧಿಸಿದನು. ಈ ರಾಜ್ಯದ ಆಳ್ವಿಕೆಯ ಸಮಯದಲ್ಲೇ, ಮಾನವಕುಲವು ಯೆಹೋವ ದೇವರೊಂದಿಗೆ ಶಾಂತಿಪೂರ್ಣ ಸಂಬಂಧಕ್ಕೆ ಹಿಂದಿರುಗುವುದು. (ಲೂಕ 4:43; ಮತ್ತಾಯ 4:17) ಮಾನವರು ಸಂತೋಷವುಳ್ಳ ಜೀವನವನ್ನು ನಡೆಸಲಿಕ್ಕಾಗಿರುವ ಮಾರ್ಗವು ಯೇಸುವಿಗೆ ತಿಳಿದಿತ್ತು, ಮತ್ತು ಅವನು ತನ್ನ ಹಿಂಬಾಲಕರಿಗೆ ಸಂತೋಷದ ಬಗ್ಗೆ ನಿರ್ದಿಷ್ಟ ಮಾರ್ಗದರ್ಶನವನ್ನು ಕೊಟ್ಟನು. ನಿಮ್ಮ ಬೈಬಲಿನಲ್ಲಿ ಮತ್ತಾಯ ಪುಸ್ತಕದ 5-7ನೆಯ ಅಧ್ಯಾಯಗಳನ್ನು ತೆರೆದು ಪರ್ವತ ಪ್ರಸಂಗದಲ್ಲಿ ಅವನು ನೀಡಿದ ಕೆಲವು ಬೋಧನೆಗಳನ್ನು ಏಕೆ ಓದಬಾರದು?

ನಿಮ್ಮನ್ನು ದಾಸತ್ವದೊಳಗಿಂದ ಬಿಡುಗಡೆ ಮಾಡಿದವನಿಗಾಗಿ ನಿಮ್ಮಲ್ಲಿ ಗಾಢವಾದ ಕೃತಜ್ಞತೆಯಿರುವುದಿಲ್ಲವೊ?

5 ಯೇಸು, ಆದಾಮನಂತಿರದೆ ಸರ್ವ ವಿಧದಲ್ಲಿಯೂ ದೇವರಿಗೆ ವಿಧೇಯತೆಯನ್ನು ತೋರಿಸುವ ಜೀವಿತವನ್ನು ನಡೆಸಿದನು. “ಆತನು ಯಾವ ಪಾಪವನ್ನೂ ಮಾಡಲಿಲ್ಲ.” (1 ಪೇತ್ರ 2:22; ಇಬ್ರಿಯ 7:26) ವಾಸ್ತವದಲ್ಲಿ, ಅವನಿಗೆ ಭೂಮಿಯ ಮೇಲೆ ಸದಾ ಜೀವಿಸುವ ಹಕ್ಕಿದ್ದರೂ, ಆದಾಮನು ಏನನ್ನು ಕಳೆದುಕೊಂಡಿದ್ದನೊ ಅದನ್ನು ದೇವರಿಗೆ ಮರುಪಾವತಿ ಮಾಡಲು ‘ತನ್ನ ಪ್ರಾಣವನ್ನು ಕೊಟ್ಟನು.’ ಹೀಗೆ ಯಾತನಾ ಕಂಬದ ಮೇಲೆ ಯೇಸು ತನ್ನ ಪರಿಪೂರ್ಣ ಮಾನವ ಜೀವವನ್ನು ತ್ಯಾಗಮಾಡಿದನು. (ಯೋಹಾನ 10:17; 19:17, 18, 28-30; ರೋಮಾಪುರ 5:19, 21; ಫಿಲಿಪ್ಪಿ 2:8) ಹೀಗೆ ಮಾಡುತ್ತ ಯೇಸು ಪ್ರಾಯಶ್ಚಿತ್ತವನ್ನು ಒದಗಿಸಿದನು, ಅಥವಾ ಪಾಪ ಮತ್ತು ಮರಣಗಳ ದಾಸತ್ವದಲ್ಲಿದ್ದ ಮಾನವಕುಲವನ್ನು ಪುನಃ ಕೊಂಡುಕೊಳ್ಳಲು ಬೇಕಾಗುವ ಬೆಲೆಯನ್ನು ತೆತ್ತನು. (ಮತ್ತಾಯ 20:28) ನೀವು ಬೆವರು ಸುರಿಸುತ್ತಾ, ಒಂದು ಕಾರ್ಖಾನೆಯಲ್ಲಿ ದುಡಿದು, ಅಕ್ಷರಾರ್ಥವಾಗಿ ಶ್ರಮದ ಜೀವನವನ್ನು ನಡೆಸುತ್ತಿದ್ದೀರೆಂದು ಭಾವಿಸಿರಿ. ಈ ದಾಸತ್ವದಿಂದ ನಿಮ್ಮನ್ನು ಬಿಡುಗಡೆ ಮಾಡಲು ಏರ್ಪಡಿಸಿದಾತನಿಗೆ ಮತ್ತು ನಿಮಗಾಗಿ ತನ್ನ ಜೀವವನ್ನು ತ್ಯಾಗಮಾಡಲು ಸಂತೋಷದಿಂದ ಮುಂದೆ ಬಂದವನಿಗಾಗಿ ನಿಮ್ಮಲ್ಲಿ ಆಳವಾದ ಕೃತಜ್ಞತೆಯಿರುವುದಿಲ್ಲವೊ? ಈ ಪ್ರಾಯಶ್ಚಿತ್ತದ ಏರ್ಪಾಡಿನ ಮೂಲಕ, ನೀವು ದೇವರ ಸಾರ್ವತ್ರಿಕ ಕುಟುಂಬಕ್ಕೆ ಹಿಂದಿರುಗುವ ಮತ್ತು ಪಾಪ ಹಾಗೂ ಮರಣಗಳ ದಾಸತ್ವದಿಂದ ಬಿಡುಗಡೆಹೊಂದಿ ನಿಜವಾಗಿಯೂ ಸಂತೃಪ್ತಿಕರವಾದ ಜೀವನವನ್ನು ನಡೆಸುವ ಮಾರ್ಗವು ತೆರೆಯಲ್ಪಟ್ಟಿತು.—2 ಕೊರಿಂಥ 5:14, 15.

6 ಯೆಹೋವನ ಈ ಅಪಾತ್ರ ದಯೆಯ ಕುರಿತು ತಿಳಿದುಕೊಳ್ಳುವುದು ಮತ್ತು ಅದನ್ನು ಗಣ್ಯಮಾಡುವುದು, ಬೈಬಲಿನಲ್ಲಿ ಕಂಡುಬರುವ ವಿವೇಕದ ಮಾತುಗಳನ್ನು ನಿಮ್ಮ ಸ್ವಂತ ಜೀವಿತದಲ್ಲಿ ಅನ್ವಯಿಸಿಕೊಳ್ಳಲು ಇನ್ನೂ ಹೆಚ್ಚಿನ ಕಾರಣವನ್ನು ಕೊಡುತ್ತದೆ. ಉದಾಹರಣೆಗೆ, ಅನ್ವಯಿಸಲು ಅತಿ ಕಷ್ಟಕರವಾದ ಒಂದು ಮೂಲತತ್ತ್ವವನ್ನು, ಅಂದರೆ ಇತರರು ನಿಮ್ಮ ಮನಸ್ಸನ್ನು ನೋಯಿಸಿದಾಗ ಅವರನ್ನು ಕ್ಷಮಿಸಬೇಕೆಂದು ಹೇಳುವ ಮೂಲತತ್ತ್ವವನ್ನು ತೆಗೆದುಕೊಳ್ಳಿರಿ. 2ನೆಯ ಪಾಠದಲ್ಲಿ ನಾವು, ಕೊಲೊಸ್ಸೆ 3ನೆಯ ಅಧ್ಯಾಯದ 12-14ನೆಯ ವಚನಗಳನ್ನು ಚರ್ಚಿಸಿದ್ದು ನಿಮಗೆ ಜ್ಞಾಪಕವಿದೆಯೊ? ಇತರರ ಮೇಲೆ ತಪ್ಪುಹೊರಿಸುವುದಕ್ಕೆ ಕಾರಣವಿದ್ದರೂ ಅವರನ್ನು ಕ್ಷಮಿಸಬೇಕೆಂದು ಆ ವಚನಗಳು ಪ್ರೋತ್ಸಾಹಿಸಿದವು. ಅದನ್ನು ಏಕೆ ಮಾಡಬೇಕೆಂದು ಸಹ ಅದರ ಪೂರ್ವಾಪರವು ವಿವರಿಸುತ್ತದೆ. ಅದು ಹೇಳುವುದು: “ಕರ್ತನು [“ಯೆಹೋವನು,” NW] ನಿಮ್ಮನ್ನು ಕ್ಷಮಿಸಿದಂತೆಯೇ ನೀವೂ ಕ್ಷಮಿಸಿರಿ.” ಯೆಹೋವನು ಮತ್ತು ಯೇಸು ಕ್ರಿಸ್ತನು ಮಾನವಕುಲಕ್ಕಾಗಿ ಏನೆಲ್ಲ ಮಾಡಿದ್ದಾರೆಂಬುದನ್ನು ನೀವು ಯಾವಾಗ ಗಾಢವಾಗಿ ಗಣ್ಯಮಾಡುತ್ತೀರೊ ಆಗ, ಇತರರು ಯಾವುದೇ ತಪ್ಪುಗಳನ್ನು ಮಾಡಿರಲಿ ಅವುಗಳನ್ನು, ವಿಶೇಷವಾಗಿ ಅವರು ಪಶ್ಚಾತ್ತಾಪಪಟ್ಟು ಕ್ಷಮೆಯನ್ನು ಯಾಚಿಸುವಲ್ಲಿ, ನೀವು ಕ್ಷಮಿಸುವಂತೆ ಪ್ರೇರಿಸಲ್ಪಡುವಿರಿ.