ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಮತ್ತಾಯ ಅಧ್ಯಾಯ 5-7

ಮತ್ತಾಯ ಅಧ್ಯಾಯ 5-7

5 ಯೇಸು ತುಂಬ ಜನ ಬಂದಿರೋದನ್ನ ನೋಡಿ ಒಂದು ಬೆಟ್ಟದ ಮೇಲೆ ಹೋಗಿ ಕೂತ್ಕೊಂಡನು. ಶಿಷ್ಯರು ಅಲ್ಲಿಗೆ ಬಂದ್ರು. 2 ಆತನು ಹೀಗೆ ಕಲಿಸಿದನು:

3 “ದೇವರ ಮಾರ್ಗದರ್ಶನ ಬೇಕಂತ ಅರ್ಥ ಮಾಡ್ಕೊಳ್ಳುವವರು a ಖುಷಿಯಾಗಿ ಇರ್ತಾರೆ. ಯಾಕಂದ್ರೆ ದೇವರ ಆಳ್ವಿಕೆ ಅವ್ರಿಗಂತಾನೇ ಬರುತ್ತೆ.

4 ದುಃಖಪಡುವವರು ಸಂತೋಷವಾಗಿ ಇರ್ತಾರೆ. ಯಾಕಂದ್ರೆ ಅವ್ರಿಗೆ ಸಾಂತ್ವನ ಸಿಗುತ್ತೆ.

5 ಮೃದು b ಸ್ವಭಾವದವರು ಸಂತೋಷವಾಗಿ ಇರ್ತಾರೆ. ಯಾಕಂದ್ರೆ ದೇವರು ಅವ್ರಿಗೆ ಭೂಮಿಯನ್ನ ಆಸ್ತಿಯಾಗಿ ಕೊಡ್ತಾನೆ.

6 ನೀತಿಗಾಗಿ ಹುಡುಕುವವರು ಸಂತೋಷವಾಗಿ ಇರ್ತಾರೆ. ಯಾಕಂದ್ರೆ ಅವರು ತೃಪ್ತಿಯಾಗಿ ಇರೋ ತರ ದೇವರು ನೋಡ್ಕೊಳ್ತಾನೆ.

7 ಕರುಣೆ ತೋರಿಸುವವರು ಸಂತೋಷವಾಗಿ ಇರ್ತಾರೆ. ಯಾಕಂದ್ರೆ ದೇವರು ಅವ್ರಿಗೆ ಕರುಣೆ ತೋರಿಸ್ತಾನೆ.

8 ಶುದ್ಧ ಹೃದಯದ ಜನ ಸಂತೋಷವಾಗಿ ಇರ್ತಾರೆ. ಯಾಕಂದ್ರೆ ಅವರು ದೇವರನ್ನ ನೋಡ್ತಾರೆ.

9 ಬೇರೆಯವರ ಜೊತೆ ಸಮಾಧಾನ ಮಾಡ್ಕೊಳ್ಳುವವರು ಸಂತೋಷವಾಗಿ ಇರ್ತಾರೆ. ಯಾಕಂದ್ರೆ ಅವ್ರಿಗೆ ‘ದೇವರ ಮಕ್ಕಳು’ ಅನ್ನೋ ಹೆಸ್ರು ಬರುತ್ತೆ.

10 ನೀತಿಗಾಗಿ ಹಿಂಸೆ ಅನುಭವಿಸುವವರು ಸಂತೋಷವಾಗಿ ಇರ್ತಾರೆ. ಯಾಕಂದ್ರೆ ದೇವರ ಆಳ್ವಿಕೆ ಅವ್ರಿಗಂತಾನೇ ಬರುತ್ತೆ.

11 ನನ್ನ ಶಿಷ್ಯರಾಗಿರೋ ಕಾರಣಕ್ಕೆ ಜನ ನಿಮಗೆ ಅವಮಾನ ಮಾಡಿ, ಹಿಂಸಿಸಿ, ನಿಮ್ಮ ಬಗ್ಗೆ ಇಲ್ಲಸಲ್ಲದ ಸುಳ್ಳುಗಳನ್ನ ಹೇಳಿದ್ರೆ ಖುಷಿಪಡಿ. 12 ಸ್ವರ್ಗದಲ್ಲಿ ನಿಮಗಾಗಿ ದೊಡ್ಡ ಬಹುಮಾನ ಕಾಯ್ತಿದೆ. ಹಾಗಾಗಿ ಹರ್ಷಿಸಿ, ಅತ್ಯಾನಂದಪಡಿ. ಯಾಕಂದ್ರೆ ಜನ ನಿಮಗಿಂತ ಮುಂಚೆ ಇದ್ದ ಪ್ರವಾದಿಗಳಿಗೂ ಹೀಗೇ ಹಿಂಸೆ ಕೊಟ್ರು.

13 ನೀವು ಲೋಕಕ್ಕೆ ಉಪ್ಪಿನ ತರ ಇದ್ದೀರ. ಉಪ್ಪು ಅದ್ರ ರುಚಿ ಕಳ್ಕೊಂಡ್ರೆ ಮತ್ತೆ ಆ ರುಚಿ ಬರೋ ತರ ಯಾರಿಂದಾದ್ರೂ ಮಾಡೋಕಾಗುತ್ತಾ? ಜನ ಅದನ್ನ ಹೊರಗೆ ಬಿಸಾಡ್ತಾರೆ, ತುಳಿತಾರೆ. ಆ ಉಪ್ಪಿಂದ ಏನೂ ಪ್ರಯೋಜನ ಇಲ್ಲ.

14 ನೀವು ಲೋಕಕ್ಕೆ ಬೆಳಕಿನ ತರ ಇದ್ದೀರ. ಬೆಟ್ಟದ ಮೇಲಿರೋ ಪಟ್ಟಣ ಕಾಣಿಸದೆ ಇರಲ್ಲ. 15 ಜನ ದೀಪ ಹಚ್ಚಿ ಬುಟ್ಟಿಯಿಂದ c ಮುಚ್ಚಿಡಲ್ಲ. ಬದಲಿಗೆ ದೀಪಸ್ತಂಭದ ಮೇಲೆ ಇಡ್ತಾರೆ. ಆಗ ಅದು ಮನೆಯಲ್ಲಿ ಎಲ್ರಿಗೂ ಬೆಳಕು ಕೊಡುತ್ತೆ. 16 ಅದೇ ತರ ನಿಮ್ಮ ಬೆಳಕು ಜನ್ರ ಮುಂದೆ ಬೆಳಗಬೇಕು. ಆಗ ಅವರು ನಿಮ್ಮ ಒಳ್ಳೇ ಕೆಲಸ ನೋಡಿ ಸ್ವರ್ಗದಲ್ಲಿರೋ ನಿಮ್ಮ ತಂದೆಗೆ ಗೌರವ ಕೊಡ್ತಾರೆ.

17 ನಾನು ನಿಯಮ ಪುಸ್ತಕವನ್ನಾಗಲಿ ಪ್ರವಾದಿಗಳ ಮಾತುಗಳನ್ನಾಗಲಿ ತೆಗೆದುಹಾಕೋಕೆ ಬಂದೆ ಅಂತ ನೆನಸಬೇಡಿ. ತೆಗೆದುಹಾಕೋಕಲ್ಲ, ನೆರವೇರಿಸೋಕೆ ಬಂದಿದ್ದೀನಿ. 18 ನಿಮಗೆ ನಿಜ ಹೇಳ್ತೀನಿ, ಭೂಮಿ ಆಕಾಶ ನಾಶವಾದ್ರೂ ನಿಯಮ ಪುಸ್ತಕದಲ್ಲಿರೋ ಒಂದು ಅಕ್ಷರವಾಗಲಿ ಚುಕ್ಕಿಯಾಗಲಿ ನೆರವೇರದೆ ಹೋಗಲ್ಲ. 19 ಹಾಗಾಗಿ ಒಬ್ಬ ವ್ಯಕ್ತಿ ಇದ್ರಲ್ಲಿರೋ ಚಿಕ್ಕ ಆಜ್ಞೆನ ಮುರಿದು, ಅದನ್ನೇ ಬೇರೆಯವ್ರಿಗೂ ಕಲಿಸಿದ್ರೆ ಅವನು ದೇವರ ಆಳ್ವಿಕೆಯಲ್ಲಿ ಇರೋಕೆ ಯೋಗ್ಯನಲ್ಲ. ಆದ್ರೆ ಈ ಆಜ್ಞೆಗಳನ್ನ ಪಾಲಿಸ್ತಾ ಅದನ್ನೇ ಬೇರೆಯವ್ರಿಗೂ ಕಲಿಸಿದ್ರೆ ಅವನು ದೇವರ ಆಳ್ವಿಕೆಯಲ್ಲಿ ಇರೋಕೆ ಯೋಗ್ಯನಾಗ್ತಾನೆ. 20 ನೀವು ಪಂಡಿತರಿಗಿಂತ ಫರಿಸಾಯರಿಗಿಂತ ನೀತಿವಂತರಾಗಿ ಇರಬೇಕು. ಇಲ್ಲದಿದ್ರೆ ದೇವರ ಆಳ್ವಿಕೆ ಬರುವಾಗ ನೀವು ಖಂಡಿತ ಇರಲ್ಲ ಅಂತ ನಿಮಗೆ ಹೇಳ್ತೀನಿ.

  21 ‘ಕೊಲೆ ಮಾಡಬಾರದು, ಮಾಡಿದ್ರೆ ನ್ಯಾಯಾಲಯಕ್ಕೆ ಲೆಕ್ಕಕೊಡಬೇಕು’ ಅಂತ ಹಿಂದಿನ ಕಾಲದವರು ಹೇಳಿದ್ದನ್ನ ನೀವು ಕೇಳಿರಬಹುದು. 22 ಆದ್ರೆ ನಾನು ಹೇಳೋದು, ಸಹೋದರನ ಮೇಲೆ ಕೋಪ ಇಟ್ಕೊಂಡಿರುವವನು ಸಹ ನ್ಯಾಯಾಲಯಕ್ಕೆ ಲೆಕ್ಕಕೊಡಬೇಕು. ಸಹೋದರನಿಗೆ ಕೆಟ್ಟ ಮಾತುಗಳಿಂದ ಅವಮಾನ ಮಾಡಿದ್ರೆ ಸರ್ವೋಚ್ಚ ನ್ಯಾಯಾಲಯಕ್ಕೆ ಲೆಕ್ಕಕೊಡಬೇಕು. ಸಹೋದರನನ್ನ ‘ಕೆಲಸಕ್ಕೆ ಬಾರದ ಮೂರ್ಖ!’ ಅಂತ ಹೇಳುವವನು ಸಂಪೂರ್ಣ ನಾಶನಕ್ಕೆ d ಗುರಿ ಆಗ್ತಾನೆ.

23 ಹಾಗಾಗಿ ನೀನು ಕಾಣಿಕೆನ ಯಜ್ಞವೇದಿ ಮುಂದೆ ತರ್ತಿರೋವಾಗ, ನಿನ್ನ ಸಹೋದರನಿಗೆ ನಿನ್ನ ಮೇಲೆ ಏನೋ ಬೇಜಾರು ಆಗಿದೆ ಅಂತ ನಿಂಗೆ ನೆನಪಾದ್ರೆ 24 ನಿನ್ನ ಕಾಣಿಕೆನ ಯಜ್ಞವೇದಿ ಮುಂದೆ ಬಿಟ್ಟು ಮೊದ್ಲು ಹೋಗಿ ನಿನ್ನ ಸಹೋದರನ ಜೊತೆ ಸಮಾಧಾನ ಮಾಡ್ಕೊ. ಆಮೇಲೆ ಕಾಣಿಕೆ ಕೊಡು.

25 ಯಾರಾದ್ರೂ ನಿನ್ನ ವಿರುದ್ಧ ನ್ಯಾಯಾಲಯಕ್ಕೆ ಹೋಗ್ತಿರೋದಾದ್ರೆ ದಾರಿಯಲ್ಲಿ ಇರುವಾಗಲೇ ಅವನ ಜೊತೆ ಮಾತಾಡಿ ರಾಜಿಮಾಡ್ಕೊ. ಇಲ್ಲದಿದ್ರೆ ಅವನು ಏನಾದ್ರೂ ಮಾಡಿ ನಿನ್ನನ್ನ ನ್ಯಾಯಾಧೀಶನಿಗೆ ಒಪ್ಪಿಸಬಹುದು. ಆ ನ್ಯಾಯಾಧೀಶ ನಿನ್ನನ್ನ ಕಾವಲುಗಾರನಿಗೆ ಒಪ್ಪಿಸಿ ಜೈಲಿಗೆ ಹಾಕಬಹುದು. 26 ನಾನು ನಿನಗೆ ನಿಜ ಹೇಳ್ತೀನಿ, ಒಂದು ಪೈಸೆನೂ ಬಿಡದೆ ಪೂರ್ತಿ ಸಾಲ ತೀರಿಸೋ ತನಕ ನಿನಗೆ ಅಲ್ಲಿಂದ ಹೊರಗೆ ಬರೋಕಾಗಲ್ಲ.

27 ‘ವ್ಯಭಿಚಾರ ಮಾಡಬಾರದು’ ಅಂತ ಹೇಳಿದ್ದನ್ನ ನೀವು ಕೇಳಿರಬಹುದು. 28 ಆದ್ರೆ ನಾನು ನಿಮಗೆ ಹೇಳ್ತೀನಿ, ಒಬ್ಬ ಸ್ತ್ರೀನ ಕೆಟ್ಟ ಉದ್ದೇಶದಿಂದ ನೋಡ್ತಾ ಇರೋ ಪ್ರತಿಯೊಬ್ಬ ಈಗಾಗಲೇ ಹೃದಯದಲ್ಲಿ ಅವಳ ಜೊತೆ ವ್ಯಭಿಚಾರ ಮಾಡಿದ್ದಾನೆ. 29 ಹಾಗಾಗಿ ನಿನ್ನ ಬಲಗಣ್ಣು ನಿನ್ನಿಂದ ಪಾಪ ಮಾಡಿಸಿದ್ರೆ ಅದನ್ನ ಕಿತ್ತು ಬಿಸಾಡು. ನಿನ್ನ ಇಡೀ ದೇಹ ಸಂಪೂರ್ಣವಾಗಿ ನಾಶ e ಆಗೋದಕ್ಕಿಂತ ನಿನ್ನ ಒಂದು ಅಂಗನ ಕಳ್ಕೊಳ್ಳೋದೇ ಒಳ್ಳೇದು. 30 ಅಷ್ಟೇ ಅಲ್ಲ ನಿನ್ನ ಬಲಗೈ ನಿನ್ನಿಂದ ಪಾಪ ಮಾಡಿಸಿದ್ರೆ ಅದನ್ನ ಕತ್ತರಿಸಿ ಬಿಸಾಡು. ನಿನ್ನ ಇಡೀ ದೇಹ ಸಂಪೂರ್ಣವಾಗಿ ನಾಶ f ಆಗೋದಕ್ಕಿಂತ ನಿನ್ನ ಒಂದು ಅಂಗನ ಕಳ್ಕೊಳ್ಳೋದೇ ಒಳ್ಳೇದು.

31 ‘ಹೆಂಡತಿಯನ್ನ ಬಿಟ್ಟುಬಿಡಬೇಕು ಅನ್ನುವವನು ಅವಳಿಗೆ ವಿಚ್ಛೇದನ ಪತ್ರ ಕೊಡಬೇಕು’ ಅಂತ ಹೇಳ್ತಾ ಇದ್ರು. 32 ಆದ್ರೆ ನಾನು ನಿಮಗೆ ಹೇಳ್ತೀನಿ, ಲೈಂಗಿಕ ಅನೈತಿಕತೆ g ಕಾರಣ ಅಲ್ಲದೆ ಬೇರೆ ಯಾವ ಕಾರಣಕ್ಕಾದ್ರೂ ಹೆಂಡತಿಗೆ ವಿಚ್ಛೇದನ ಕೊಟ್ರೆ ಅವನು ಅವಳನ್ನ ವ್ಯಭಿಚಾರ ಮಾಡೋ ಅಪಾಯಕ್ಕೆ ತಳ್ಳುತ್ತಾನೆ. ಅಷ್ಟೇ ಅಲ್ಲ ಈ ತರ ವಿಚ್ಛೇದನ ಆಗಿರೋ ಸ್ತ್ರೀಯನ್ನ ಮದುವೆ ಆಗುವವನು ಸಹ ವ್ಯಭಿಚಾರಿ ಆಗ್ತಾನೆ.

33 ‘ಸುಳ್ಳು ಆಣೆ ಇಡಬಾರದು. ಯೆಹೋವನಿಗೆ ಮಾಡ್ಕೊಂಡ ಹರಕೆಗಳನ್ನ ತೀರಿಸಬೇಕು’ ಅಂತ ಹಿಂದಿನ ಕಾಲದವರು ಹೇಳಿದ್ದನ್ನ ನೀವು ಕೇಳಿರಬಹುದು. 34 ಆದ್ರೆ ನಾನು ನಿಮಗೆ ಹೇಳ್ತೀನಿ, ಆಣೆ ಇಡಲೇಬೇಡಿ. ಆಕಾಶದ ಮೇಲೆ ಆಣೆ ಇಡಬೇಡಿ. ಯಾಕಂದ್ರೆ ಅದು ದೇವರ ಸಿಂಹಾಸನ. 35 ಭೂಮಿ ಮೇಲೆ ಆಣೆ ಇಡಬೇಡಿ. ಯಾಕಂದ್ರೆ ಅದು ಆತನ ಪಾದಪೀಠ. ಯೆರೂಸಲೇಮಿನ ಮೇಲೆ ಆಣೆ ಇಡಬೇಡಿ. ಯಾಕಂದ್ರೆ ಅದು ಮಹಾರಾಜನ ಪಟ್ಟಣ. 36 ನಿಮ್ಮ ತಲೆ ಮೇಲೂ ಆಣೆ ಇಡಬೇಡಿ. ಯಾಕಂದ್ರೆ ನಿಮ್ಮ ಒಂದು ಕೂದಲನ್ನೂ ಬೆಳ್ಳಗಾಗಲಿ ಕಪ್ಪಗಾಗಲಿ ಮಾಡೋಕೆ ನಿಮ್ಮಿಂದ ಆಗಲ್ಲ. 37 ನಿಮ್ಮ ಮಾತು ಹೌದು ಅಂದ್ರೆ ಹೌದು, ಇಲ್ಲ ಅಂದ್ರೆ ಇಲ್ಲ ಅಂತಿರಲಿ. ಇದಕ್ಕಿಂತ ಬೇರೆ ಏನೇ ಬಂದ್ರೂ ಅದು ಸೈತಾನನಿಂದ ಬಂದಿರುತ್ತೆ.

38 ‘ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು ಕೊಡಬೇಕು’ ಅಂತ ಹೇಳಿದ್ದನ್ನ ನೀವು ಕೇಳಿರಬಹುದು. 39 ಆದ್ರೆ ನಾನು ನಿಮಗೆ ಹೇಳ್ತೀನಿ, ಕೆಟ್ಟವನ ಜೊತೆ ಜಗಳಕ್ಕೆ ಇಳಿಬೇಡಿ. ಯಾರಾದ್ರೂ ನಿನ್ನ ಬಲಗೆನ್ನೆಗೆ ಹೊಡೆದ್ರೆ ನಿನ್ನ ಎಡಗೆನ್ನೆನೂ ತೋರಿಸು. 40 ಒಬ್ಬ ನಿನ್ನ ಅಂಗಿ ಕಿತ್ಕೊಳ್ಳೋಕೆ ನಿನ್ನನ್ನ ನ್ಯಾಯಾಲಯಕ್ಕೆ ಕರ್ಕೊಂಡು ಹೋಗಬೇಕು ಅಂದ್ಕೊಂಡ್ರೆ ನಿನ್ನ ಮೇಲಂಗಿನೂ ಅವನಿಗೆ ಕೊಟ್ಟುಬಿಡು. 41 ಒಬ್ಬ ಅಧಿಕಾರಿ ಬಂದು ಅವನ ವಸ್ತುಗಳನ್ನ ಎತ್ಕೊಂಡು ಒಂದು ಮೈಲಿ ದೂರ ಬಾ ಅಂತ ಹೇಳಿದ್ರೆ ಅವನ ಜೊತೆ ಎರಡು ಮೈಲಿ ಹೋಗು. 42 ಯಾರಾದ್ರೂ ಸಹಾಯ ಕೇಳಿದ್ರೆ ಅದನ್ನ ಮಾಡು. ಬಡ್ಡಿಯಿಲ್ಲದೆ ಸಾಲ ಕೇಳಿದ್ರೆ ಮುಖ ತಿರುಗಿಸಬೇಡ.

43 ‘ನಿನ್ನ ನೆರೆಯವನನ್ನ ಪ್ರೀತಿಸಿ ನಿನ್ನ ಶತ್ರುವನ್ನ ದ್ವೇಷಿಸು’ ಅಂತ ಹೇಳಿದ್ದನ್ನ ನೀವು ಕೇಳಿರಬಹುದು. 44 ಆದ್ರೆ ನಾನು ನಿಮಗೆ ಹೇಳ್ತೀನಿ, ನಿಮ್ಮ ಶತ್ರುಗಳನ್ನ ಪ್ರೀತಿಸ್ತಾ ಇರಿ. ನಿಮಗೆ ಹಿಂಸೆ ಕೊಡುವವರಿಗಾಗಿ ಪ್ರಾರ್ಥಿಸ್ತಾ ಇರಿ. 45 ಆಗ ನೀವು ಸ್ವರ್ಗದಲ್ಲಿರೋ ತಂದೆಯ ಮಕ್ಕಳು ಅಂತ ತೋರಿಸ್ತೀರ. ಯಾಕಂದ್ರೆ ಆತನು ಕೆಟ್ಟವರ ಮೇಲೂ ಒಳ್ಳೆಯವರ ಮೇಲೂ ಸೂರ್ಯ ಹುಟ್ಟೋ ತರ ಮಾಡ್ತಾನೆ. ನೀತಿವಂತರ ಮೇಲೂ ಅನೀತಿವಂತರ ಮೇಲೂ ಮಳೆ ಸುರಿಸ್ತಾನೆ. 46 ನಿಮ್ಮನ್ನ ಪ್ರೀತಿಸುವವರನ್ನ ಪ್ರೀತಿಸಿದ್ರೆ ನಿಮಗೆ ಏನು ಬಹುಮಾನ ಸಿಗುತ್ತೆ? ತೆರಿಗೆ ವಸೂಲಿ ಮಾಡುವವರು ಸಹ ಅದನ್ನೇ ಮಾಡ್ತಾರಲ್ವಾ? 47 ನಿಮ್ಮ ಸಹೋದರರಿಗೆ ಮಾತ್ರ ನಮಸ್ಕಾರ ಹೇಳಿದ್ರೆ ನೀವು ಬೇರೆಯವರಿಗಿಂತ ಒಳ್ಳೇ ಕೆಲಸ ಮಾಡಿದ ಹಾಗೆ ಆಗುತ್ತಾ? ಬೇರೆ ಜನ ಸಹ ಅದನ್ನೇ ಮಾಡ್ತಾರಲ್ವಾ? 48 ಹಾಗಾಗಿ ಸ್ವರ್ಗದಲ್ಲಿರೋ ನಿಮ್ಮ ತಂದೆ ಪರಿಪೂರ್ಣನಾಗಿರೋ ತರ h ನೀವೂ ಪರಿಪೂರ್ಣರಾಗಿ ಇರಬೇಕು.

6 ಜನ ನೋಡಲಿ ಅಂತ ಒಳ್ಳೇ ಕೆಲಸ ಮಾಡಬೇಡಿ. ಹಾಗೆ ಮಾಡಿದ್ರೆ ಸ್ವರ್ಗದಲ್ಲಿರೋ ನಿಮ್ಮ ತಂದೆಯಿಂದ ನಿಮಗೆ ಯಾವುದೇ ಆಶೀರ್ವಾದ ಸಿಗಲ್ಲ. 2 ಹಾಗಾಗಿ ನೀನು ಬಡವರಿಗೆ ಸಹಾಯ ಮಾಡುವಾಗ i ಜನ್ರ ಹೊಗಳಿಕೆ ಸಿಗೋಕೆ ಸಭಾಮಂದಿರಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಕಪಟಿಗಳ ತರ ಡಂಗುರ ಸಾರಬೇಡ. ನಾನು ನಿಮಗೆ ನಿಜ ಹೇಳ್ತೀನಿ, ಅವ್ರಿಗೆ ಸಿಗಬೇಕಿದ್ದ ಆಶೀರ್ವಾದ ಆಗಲೇ ಸಿಕ್ಕಿರುತ್ತೆ. 3 ನೀನು ಸಹಾಯ ಮಾಡುವಾಗ ನಿನ್ನ ಬಲಗೈ ಮಾಡೋದು ಎಡಗೈಗೆ ಗೊತ್ತಾಗಬಾರದು. 4 ನೀನು ಮಾಡೋ ಸಹಾಯ ರಹಸ್ಯವಾಗಿರಲಿ. ಆಗ ರಹಸ್ಯ ಸ್ಥಳದಿಂದ ನೋಡೋ ನಿನ್ನ ತಂದೆ ನಿನ್ನನ್ನ ಆಶೀರ್ವದಿಸ್ತಾನೆ.

5 ನೀವು ಪ್ರಾರ್ಥಿಸುವಾಗ ಕಪಟಿಗಳ ತರ ಪ್ರಾರ್ಥಿಸಬೇಡಿ. ಯಾಕಂದ್ರೆ ಜನ ನೋಡಲಿ ಅಂತ ಅವರು ಸಭಾಮಂದಿರಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ನಿಂತು ಪ್ರಾರ್ಥನೆ ಮಾಡೋಕೆ ಇಷ್ಟಪಡ್ತಾರೆ. ನಾನು ನಿಮಗೆ ನಿಜ ಹೇಳ್ತೀನಿ, ಅವ್ರಿಗೆ ಸಿಗಬೇಕಾಗಿದ್ದ ಆಶೀರ್ವಾದ ಆಗಲೇ ಸಿಕ್ಕಿರುತ್ತೆ. 6 ಆದ್ರೆ ನೀನು ಪ್ರಾರ್ಥನೆ ಮಾಡುವಾಗ ಕೋಣೆಯೊಳಗೆ ಹೋಗಿ ಬಾಗಿಲು ಮುಚ್ಚಿ ರಹಸ್ಯ ಸ್ಥಳದಲ್ಲಿರೋ ನಿನ್ನ ತಂದೆಗೆ ಪ್ರಾರ್ಥನೆ ಮಾಡು. ಆಗ ರಹಸ್ಯ ಸ್ಥಳದಿಂದ ನೋಡೋ ನಿನ್ನ ತಂದೆ ನಿನ್ನನ್ನ ಆಶೀರ್ವದಿಸ್ತಾನೆ. 7 ನೀನು ಪ್ರಾರ್ಥನೆ ಮಾಡುವಾಗ ಲೋಕದ ಜನ್ರ ತರ ಹೇಳಿದ್ದನ್ನೇ ಮತ್ತೆ ಮತ್ತೆ ಹೇಳಬೇಡ. ಯಾಕಂದ್ರೆ ತುಂಬ ಮಾತಾಡಿದ್ರೆ ದೇವರು ಪ್ರಾರ್ಥನೆ ಕೇಳ್ತಾನೆ ಅಂತ ಅವರು ನೆನಸ್ತಾರೆ. 8 ನೀವು ಅವ್ರ ತರ ಆಗಬೇಡಿ. ಯಾಕಂದ್ರೆ ನೀವು ಕೇಳೋ ಮುಂಚೆನೇ ನಿಮಗೆ ಏನು ಬೇಕಂತ ಸ್ವರ್ಗದಲ್ಲಿರೋ ನಿಮ್ಮ ತಂದೆಗೆ ಗೊತ್ತು.

9 ನೀವು ಹೇಗೆ ಪ್ರಾರ್ಥನೆ ಮಾಡಬೇಕಂದ್ರೆ:

‘ಸ್ವರ್ಗದಲ್ಲಿರೋ ಅಪ್ಪಾ, ನಿನ್ನ ಹೆಸ್ರು ಪವಿತ್ರವಾಗಲಿ. j 10 ನಿನ್ನ ಆಳ್ವಿಕೆ ಬರಲಿ. ನಿನ್ನ ಇಷ್ಟ ಸ್ವರ್ಗದಲ್ಲಿ ನೆರವೇರೋ ತರ ಭೂಮಿಯಲ್ಲೂ ನೆರವೇರಲಿ. 11 ಇವತ್ತಿಗೆ ಬೇಕಾಗಿರೋ ಊಟನ ದಯವಿಟ್ಟು ಕೊಡು. 12 ಬೇರೆಯವರ ತಪ್ಪುಗಳನ್ನ ನಾವು ಕ್ಷಮಿಸಿರೋ ತರ ನಮ್ಮ ತಪ್ಪುಗಳನ್ನೂ ಕ್ಷಮಿಸು. 13 ಕಷ್ಟ ಬಂದಾಗ ಸೋತು ಹೋಗದ ಹಾಗೆ ಕಾಪಾಡು. ಸೈತಾನನಿಂದ ನಮ್ಮನ್ನ ರಕ್ಷಿಸು.’

14 ನೀವು ಬೇರೆಯವರ ತಪ್ಪನ್ನ ಕ್ಷಮಿಸಿದ್ರೆ ಸ್ವರ್ಗದಲ್ಲಿರೋ ನಿಮ್ಮ ತಂದೆನೂ ನಿಮ್ಮನ್ನ ಕ್ಷಮಿಸ್ತಾನೆ. 15 ನೀವು ಬೇರೆಯವರ ತಪ್ಪನ್ನ ಕ್ಷಮಿಸಿಲ್ಲ ಅಂದ್ರೆ ಸ್ವರ್ಗದಲ್ಲಿರೋ ನಿಮ್ಮ ತಂದೆನೂ ನಿಮ್ಮನ್ನ ಕ್ಷಮಿಸಲ್ಲ.

16 ನೀವು ಉಪವಾಸ ಮಾಡುವಾಗ ಕಪಟಿಗಳ ತರ ಮುಖ ಸಪ್ಪಗೆ ಮಾಡ್ಕೋಬೇಡಿ. ಯಾಕಂದ್ರೆ ಅವರು ಉಪವಾಸ ಮಾಡುವಾಗ ಜನ್ರಿಗೆ ಗೊತ್ತಾಗಲಿ ಅಂತ ಮುಖ ಬಾಡಿಸ್ಕೊಳ್ತಾರೆ. ನಿಮಗೆ ನಿಜ ಹೇಳ್ತೀನಿ, ಅವ್ರಿಗೆ ಸಿಗಬೇಕಾಗಿದ್ದ ಆಶೀರ್ವಾದ ಆಗಲೇ ಸಿಕ್ಕಿರುತ್ತೆ. 17 ಆದ್ರೆ ನೀನು ಉಪವಾಸ ಮಾಡುವಾಗ ತಲೆಗೆ ಎಣ್ಣೆ ಹಚ್ಚಿ, ಮುಖ ತೊಳ್ಕೊ. 18 ಹಾಗೆ ಮಾಡಿದ್ರೆ ನೀನು ಉಪವಾಸ ಮಾಡ್ತಿರೋದು ಜನ್ರಿಗೆ ಗೊತ್ತಾಗಲ್ಲ. ರಹಸ್ಯ ಸ್ಥಳದಲ್ಲಿರೋ ನಿನ್ನ ತಂದೆಗೆ ಮಾತ್ರ ಗೊತ್ತಾಗುತ್ತೆ. ಆಗ ರಹಸ್ಯ ಸ್ಥಳದಿಂದ ನೋಡೋ ನಿನ್ನ ತಂದೆ ನಿನ್ನನ್ನ ಆಶೀರ್ವದಿಸ್ತಾನೆ.

19 ಭೂಮಿಯಲ್ಲಿ ನಿಮಗೋಸ್ಕರ ಆಸ್ತಿಪಾಸ್ತಿ ಕೂಡಿಸೋದನ್ನ ಬಿಟ್ಟುಬಿಡಿ. ಹುಳ ತಿಂದು ತುಕ್ಕು ಹಿಡಿದು ಅದು ಹಾಳಾಗಿ ಹೋಗುತ್ತೆ. ಕಳ್ಳರು ಕನ್ನಹಾಕಿ ದೋಚ್ಕೊಂಡು ಹೋಗ್ತಾರೆ. 20 ಅದ್ರ ಬದಲಿಗೆ ಸ್ವರ್ಗದಲ್ಲಿ ಆಸ್ತಿ ಕೂಡಿಸಿಡಿ. ಅಲ್ಲಿ ಹುಳ ತಿನ್ನಲ್ಲ, ತುಕ್ಕು ಹಿಡಿಯಲ್ಲ, ಕಳ್ಳರು ಕನ್ನಹಾಕಲ್ಲ. 21 ನಿನ್ನ ಆಸ್ತಿ ಎಲ್ಲಿರುತ್ತೋ ಅಲ್ಲೇ ನಿನ್ನ ಮನಸ್ಸೂ ಇರುತ್ತೆ.

22 ಕಣ್ಣು ದೇಹದ ದೀಪ. ಹಾಗಾಗಿ ಒಂದೇ ವಿಷ್ಯದ ಮೇಲೆ ಕಣ್ಣು ನೆಟ್ಟಿದ್ರೆ k ನಿನ್ನ ದೇಹವೆಲ್ಲ ಪ್ರಕಾಶಿಸುತ್ತೆ. 23 ನಿನ್ನ ಕಣ್ಣು ದುರಾಸೆಯಿಂದ ತುಂಬಿದ್ರೆ ನಿನ್ನ ದೇಹವೆಲ್ಲ ಕತ್ತಲಾಗುತ್ತೆ. ನಿನ್ನ ದೇಹಕ್ಕೆ ಬೆಳಕಾಗಿರೋ ಕಣ್ಣು ಕತ್ತಲಾದ್ರೆ ಆ ಕತ್ತಲೆ ತುಂಬ ಭಯಂಕರ ಇರುತ್ತಲ್ವಾ?

24 ಯಾವ ಮನುಷ್ಯನಿಗೂ ಇಬ್ಬರು ಯಜಮಾನರಿಗೆ ಸೇವೆಮಾಡೋಕಾಗಲ್ಲ. ಅವನು ಒಬ್ಬನನ್ನ ದ್ವೇಷಿಸಿ ಇನ್ನೊಬ್ಬನನ್ನ ಪ್ರೀತಿಸ್ತಾನೆ. ಇಲ್ಲಾಂದ್ರೆ ಒಬ್ಬನಿಗೆ ನಂಬಿಗಸ್ತನಾಗಿದ್ದು ಇನ್ನೊಬ್ಬನನ್ನ ಕೀಳಾಗಿ ನೋಡ್ತಾನೆ. ನೀವು ಒಂದೇ ಸಮಯದಲ್ಲಿ ದೇವರಿಗೂ ದುಡ್ಡಿಗೂ ದಾಸರಾಗಿ ಇರೋಕಾಗಲ್ಲ.

25 ಅದಕ್ಕೇ ನಾನು ನಿಮಗೆ ಹೀಗೆ ಹೇಳ್ತೀನಿ ಜೀವನ ಮಾಡೋಕೆ ಏನು ತಿನ್ನಬೇಕು, ಏನು ಕುಡಿಬೇಕು, ಏನು ಹಾಕಬೇಕು ಅಂತ ಯಾವತ್ತೂ ಚಿಂತೆಮಾಡಬೇಡಿ. ಊಟಕ್ಕಿಂತ ಪ್ರಾಣ, ಬಟ್ಟೆಗಿಂತ ದೇಹ ತುಂಬ ಪ್ರಾಮುಖ್ಯ ಅಲ್ವಾ? 26 ಆಕಾಶದಲ್ಲಿ ಹಾರೋ ಪಕ್ಷಿಗಳನ್ನ ಚೆನ್ನಾಗಿ ನೋಡಿ. ಅವು ಬಿತ್ತಲ್ಲ, ಕೊಯ್ಯಲ್ಲ, ಗೋಡೌನಲ್ಲಿ ತುಂಬಿಡಲ್ಲ. ಹಾಗಿದ್ರೂ ಸ್ವರ್ಗದಲ್ಲಿರೋ ನಿಮ್ಮ ತಂದೆ ಅವುಗಳನ್ನ ನೋಡ್ಕೊಳ್ತಾನೆ. ನೀವು ಪಕ್ಷಿಗಳಿಗಿಂತ ಹೆಚ್ಚು ಅಮೂಲ್ಯ ಅಲ್ವಾ? 27 ಚಿಂತೆಮಾಡಿ ನಿಮ್ಮಲ್ಲಿ ಯಾರಾದ್ರೂ ವಯಸ್ಸನ್ನ ಸ್ವಲ್ಪ ಆದ್ರೂ ಹೆಚ್ಚಿಸ್ಕೊಂಡಿದ್ದೀರಾ? 28 ಬಟ್ಟೆ ಬಗ್ಗೆ ನೀವು ಯಾಕೆ ಚಿಂತೆ ಮಾಡ್ತೀರಾ? ಹೊಲದ ಲಿಲಿ ಹೂಗಳನ್ನ ನೋಡಿ ಕಲಿರಿ. ಅವು ದುಡಿಯಲ್ಲ, ನೇಯಲ್ಲ. 29 ನಾನು ನಿಮಗೆ ಹೇಳ್ತೀನಿ, ಈ ಒಂದು ಹೂವಿಗೆ ಇರುವಷ್ಟು ಸೌಂದರ್ಯ ರಾಜ ಸೊಲೊಮೋನ ಹಾಕ್ತಿದ್ದ ದುಬಾರಿ ಬಟ್ಟೆಗೂ ಇರಲಿಲ್ಲ. 30 ನಂಬಿಕೆ ಕೊರತೆ ಇರುವವರೇ, ಇವತ್ತು ಇದ್ದು ನಾಳೆ ಇಲ್ಲದೆ ಹೋಗೋ ಗಿಡಗಳಿಗೆ ದೇವರು ಈ ರೀತಿ ಅಲಂಕರಿಸಿದ್ರೆ ನಿಮಗೆ ಬೇಕಾಗಿರೋ ಬಟ್ಟೆ ಕೊಡದೆ ಇರ್ತಾನಾ? 31 ಹಾಗಾಗಿ ಏನು ತಿನ್ನಬೇಕು, ಏನು ಕುಡಿಬೇಕು, ಏನು ಹಾಕಬೇಕು ಅಂತ ಯಾವತ್ತೂ ಚಿಂತೆಮಾಡಬೇಡಿ. 32 ಲೋಕದ ಜನ ಈ ವಿಷ್ಯಗಳ ಹಿಂದೆನೇ ಹಗಲುರಾತ್ರಿ ಓಡ್ತಿದ್ದಾರೆ. ನಿಮಗೆ ಇವೆಲ್ಲ ಬೇಕು ಅಂತ ಸ್ವರ್ಗದಲ್ಲಿರೋ ನಿಮ್ಮ ತಂದೆಗೆ ಚೆನ್ನಾಗಿ ಗೊತ್ತು.

33 ನಿಮ್ಮ ಜೀವನದಲ್ಲಿ ದೇವರ ಆಳ್ವಿಕೆಗೆ, ದೇವರ ಮಾತು ಕೇಳೋದಕ್ಕೆ ಯಾವಾಗ್ಲೂ ಮೊದಲ ಸ್ಥಾನ ಕೊಡಿ. ಆಗ ದೇವರೇ ನಿಮಗೆ ಬೇಕಾದ ಎಲ್ಲ ವಿಷ್ಯಗಳನ್ನ ಕೊಡ್ತಾನೆ. 34 ಹಾಗಾಗಿ ನಾಳೆ ಬಗ್ಗೆ ಚಿಂತೆ ಮಾಡಬೇಡಿ. ನಾಳೆಗೆ ನಾಳೆದೇ ಚಿಂತೆ ಇರುತ್ತೆ. ಇವತ್ತಿನ ಸಮಸ್ಯೆಗಳು ಇವತ್ತಿಗೇ ಸಾಕು.

7 ಬೇರೆಯವ್ರಲ್ಲಿ ತಪ್ಪು ಹುಡುಕೋದನ್ನ ನಿಲ್ಲಿಸಿ, ಯಾಕಂದ್ರೆ ದೇವರು ಯಾವಾಗ್ಲೂ ತಪ್ಪು ಹುಡುಕ್ತಾ ಇರಲ್ಲ. 2 ನೀವು ಬೇರೆಯವ್ರಲ್ಲಿ ತಪ್ಪು ಹುಡುಕಿದ್ರೆ ದೇವರೂ ನಿಮ್ಮಲ್ಲಿ ತಪ್ಪು ಹುಡುಕ್ತಾನೆ. ನೀವು ಜನ್ರ ಹತ್ರ ಹೇಗೆ ನಡ್ಕೊಳ್ತೀರೋ ಅವ್ರೂ ನಿಮ್ಮ ಹತ್ರ ಅದೇ ರೀತಿ ನಡ್ಕೊಳ್ತಾರೆ. l 3 ಹಾಗಿರುವಾಗ ನಿನ್ನ ಕಣ್ಣಲ್ಲಿರೋ ಮರದ ಕಂಬ ನೋಡದೆ ನಿನ್ನ ಸಹೋದರನ ಕಣ್ಣಲ್ಲಿರೋ ಮರದ ಚೂರನ್ನ ಯಾಕೆ ನೋಡ್ತೀಯಾ? 4 ನಿನ್ನ ಕಣ್ಣಲ್ಲೇ ಮರದ ಕಂಬ ಇಟ್ಟುಕೊಂಡು ನಿನ್ನ ಸಹೋದರನಿಗೆ ‘ಬಾ, ನಿನ್ನ ಕಣ್ಣಿಂದ ಮರದ ಚೂರನ್ನ ತೆಗಿತೀನಿ’ ಅಂತ ಹೇಗೆ ಹೇಳ್ತೀಯಾ? 5 ಕಪಟಿಯೇ, ಮೊದ್ಲು ನಿನ್ನ ಕಣ್ಣಿಂದ ಮರದ ಕಂಬ ತೆಗಿ. ಆಮೇಲೆ ನಿನ್ನ ಸಹೋದರನ ಕಣ್ಣಿಂದ ಮರದ ಚೂರನ್ನ ನೋಡಿ ತೆಗಿಯೋಕಾಗುತ್ತೆ.

6 ದೇವರಿಗೆ ಕೊಡೋದನ್ನ ನಾಯಿಗಳಿಗೆ ಹಾಕಬೇಡಿ. ನಿಮ್ಮ ಮುತ್ತುಗಳನ್ನ ಹಂದಿಗಳ ಮುಂದೆ ಚೆಲ್ಲಬೇಡಿ. ಚೆಲ್ಲಿದ್ರೆ ಅವು ಆ ಮುತ್ತುಗಳನ್ನ ತುಳಿದು ನಿಮ್ಮ ಮೇಲೆನೇ ದಾಳಿ ಮಾಡ್ತವೆ.

7 ಕೇಳ್ತಾ ಇರಿ, ದೇವರು ನಿಮಗೆ ಕೊಡ್ತಾನೆ. ಹುಡುಕ್ತಾ ಇರಿ, ನಿಮಗೆ ಸಿಗುತ್ತೆ. ತಟ್ಟುತ್ತಾ ಇರಿ, ತೆರಿಯುತ್ತೆ. 8 ಯಾಕಂದ್ರೆ ಕೇಳೋ ಪ್ರತಿಯೊಬ್ಬನೂ ಪಡ್ಕೊಳ್ತಾನೆ, ಹುಡುಕೋ ಪ್ರತಿಯೊಬ್ಬನಿಗೆ ಸಿಗುತ್ತೆ, ತಟ್ಟೋ ಪ್ರತಿಯೊಬ್ಬನಿಗೆ ಬಾಗಿಲು ತೆರೆಯುತ್ತೆ. 9 ನಿಮ್ಮ ಮಗ ರೊಟ್ಟಿ ಕೇಳಿದ್ರೆ ಕಲ್ಲು ಕೊಡ್ತೀರಾ? 10 ಮೀನು ಕೇಳಿದ್ರೆ ಹಾವು ಕೊಡ್ತೀರಾ? 11 ಪಾಪಿಗಳಾಗಿರೋ ನೀವೇ ನಿಮ್ಮ ಮಕ್ಕಳಿಗೆ ಒಳ್ಳೇ ಉಡುಗೊರೆ ಕೊಡುವಾಗ ಸ್ವರ್ಗದಲ್ಲಿರೋ ನಿಮ್ಮ ತಂದೆ ತನ್ನ ಹತ್ರ ಕೇಳೋರಿಗೆ ಅದಕ್ಕಿಂತ ಹೆಚ್ಚು ಒಳ್ಳೇ ವಿಷ್ಯಗಳನ್ನ ಕೊಡಲ್ವಾ?

12 ಹಾಗಾಗಿ ಜನ ನಿಮಗೆ ಏನು ಮಾಡಬೇಕಂತ ಇಷ್ಟಪಡ್ತೀರೋ ಅದನ್ನೇ ಅವ್ರಿಗೆ ಮಾಡಿ. ನಿಯಮ ಪುಸ್ತಕ ಮತ್ತು ಪ್ರವಾದಿಗಳು ಹೇಳಿರೋದು ಇದನ್ನೇ ಅಲ್ವಾ?

13 ಇಕ್ಕಟ್ಟಾದ ಬಾಗಿಲಿಂದ ಹೋಗಿ. ಯಾಕಂದ್ರೆ ನಾಶಕ್ಕೆ ಹೋಗೋ ಬಾಗಿಲು ಅಗಲ. ದಾರಿ ವಿಶಾಲ. ಆ ದಾರೀಲಿ ತುಂಬ ಜನ ಹೋಗ್ತಾರೆ. 14 ಜೀವಕ್ಕೆ ನಡೆಸೋ ಬಾಗಿಲು ಇಕ್ಕಟ್ಟು, ಆ ದಾರೀಲಿ ಹೋಗೋದು ತುಂಬ ಕಷ್ಟ. ಸ್ವಲ್ಪ ಜನ ಮಾತ್ರ ಆ ದಾರಿ ಕಂಡುಹಿಡಿತಾರೆ.

15 ಎಚ್ಚರವಾಗಿರಿ. ಕುರಿವೇಷ ಹಾಕಿ ನಿಮ್ಮ ಹತ್ರ ಸುಳ್ಳು ಪ್ರವಾದಿಗಳು ಬರ್ತಾರೆ. ಅವರು ತುಂಬ ಹಸಿದಿರೋ ತೋಳಗಳ ತರ ನಿಮ್ಮನ್ನ ನುಂಗೋಕೆ ಕಾಯ್ತಿದ್ದಾರೆ. 16 ಅವರು ಮಾಡೋ ಕೆಲಸಗಳಿಂದಾನೇ ನೀವು ಅವ್ರನ್ನ ಕಂಡುಹಿಡಿತೀರ. ನಿಮಗೆ ಮುಳ್ಳುಗಿಡಗಳಲ್ಲಿ ದ್ರಾಕ್ಷಿಯಾಗಲಿ ಅಂಜೂರವಾಗಲಿ ಯಾವತ್ತೂ ಸಿಗಲ್ಲ. 17 ಒಳ್ಳೇ ಮರ ಒಳ್ಳೇ ಹಣ್ಣು ಕೊಡುತ್ತೆ. ಕೆಟ್ಟ ಮರ ಕೆಟ್ಟ ಹಣ್ಣು ಕೊಡುತ್ತೆ. 18 ಒಳ್ಳೇ ಮರ ಕೆಟ್ಟ ಹಣ್ಣು ಕೊಡಲ್ಲ. ಕೆಟ್ಟ ಮರ ಒಳ್ಳೇ ಹಣ್ಣು ಕೊಡಲ್ಲ. 19 ಒಳ್ಳೇ ಹಣ್ಣು ಕೊಡದ ಎಲ್ಲ ಮರಗಳನ್ನ ಕಡಿದು ಬೆಂಕಿಗೆ ಹಾಕ್ತಾರೆ. 20 ಅದೇ ತರ ಅವರು ಮಾಡೋ ಕೆಲಸಗಳಿಂದಾನೇ ಅವ್ರನ್ನ ಕಂಡುಹಿಡಿತೀರ.

21 ನನ್ನನ್ನ ‘ಸ್ವಾಮಿ, ಸ್ವಾಮಿ’ ಅಂತ ಹೇಳೋರೆಲ್ಲ ದೇವರ ಆಳ್ವಿಕೆಯಲ್ಲಿ ಇರ್ತಾರಂತ ಅಂದ್ಕೊಬೇಡಿ. ಸ್ವರ್ಗದಲ್ಲಿರೋ ನನ್ನ ತಂದೆ ಇಷ್ಟದ ಪ್ರಕಾರ ಯಾರು ಮಾಡ್ತಾರೋ ಅವ್ರೇ ಇರ್ತಾರೆ. 22 ತುಂಬ ಜನ ನನಗೆ ‘ಸ್ವಾಮಿ, ಸ್ವಾಮಿ, ನಾವು ನಿನ್ನ ಹೆಸ್ರಲ್ಲಿ ಭವಿಷ್ಯವಾಣಿ ಹೇಳಿಲ್ವಾ? ನಿನ್ನ ಹೆಸ್ರಲ್ಲಿ ಕೆಟ್ಟದೂತರನ್ನ ಬಿಡಿಸಿಲ್ವಾ? ನಿನ್ನ ಹೆಸ್ರಲ್ಲಿ ತುಂಬ ಅದ್ಭುತಗಳನ್ನ ಮಾಡಿಲ್ವಾ?’ ಅಂತ ಹೇಳೋ ದಿನ ಬರುತ್ತೆ. 23 ಆದ್ರೆ ನಾನು ಅವ್ರಿಗೆ ‘ನೀವು ಯಾರಂತಾನೇ ನಂಗೊತ್ತಿಲ್ಲ! ಕೆಟ್ಟ ಕೆಲಸಗಳನ್ನ ಮಾಡುವವರೇ, ಇಲ್ಲಿಂದ ಹೋಗಿ’ ಅಂತ ಹೇಳ್ತೀನಿ.

24 ಹಾಗಾಗಿ ನನ್ನ ಈ ಮಾತು ಕೇಳಿ ಅದೇ ತರ ನಡೆಯುವವನು ಬಂಡೆ ಮೇಲೆ ಮನೆ ಕಟ್ಟಿದ ಬುದ್ಧಿವಂತನ ತರ ಇರ್ತಾನೆ. 25 ಮಳೆ ಸುರಿತು, ನೆರೆ ಬಂತು, ಗಾಳಿ ಜೋರಾಗಿ ಬೀಸಿತು. ಆದ್ರೆ ಅದು ಕುಸಿಲಿಲ್ಲ. ಯಾಕಂದ್ರೆ ಅಡಿಪಾಯ ಬಂಡೆ ಮೇಲಿತ್ತು. 26 ಆದ್ರೆ ನನ್ನ ಈ ಮಾತು ಕೇಳಿ ಅದ್ರ ತರ ನಡೆಯದವನು ಮರಳಿನ ಮೇಲೆ ಮನೆ ಕಟ್ಟಿದ ಮೂರ್ಖನ ತರ ಇರ್ತಾನೆ. 27 ಮಳೆ ಸುರಿತು, ನೆರೆ ಬಂತು, ಗಾಳಿ ಜೋರಾಗಿ ಬೀಸಿತು. ಆ ಮನೆ ಕುಸಿದು ನೆಲಸಮ ಆಯ್ತು.”

28 ಯೇಸು ಈ ಮಾತುಗಳನ್ನ ಹೇಳಿದ ಮೇಲೆ ಆತನು ಕಲಿಸೋ ರೀತಿ ನೋಡಿ ಜನ ತುಂಬ ಆಶ್ಚರ್ಯಪಟ್ರು. 29 ಯಾಕಂದ್ರೆ ಆತನು ಅವ್ರ ಪಂಡಿತರ ಹಾಗೆ ಕಲಿಸ್ತಿರಲಿಲ್ಲ. ದೇವರಿಂದ ಅಧಿಕಾರ ಸಿಕ್ಕವನ ತರ ಕಲಿಸ್ತಿದ್ದ.

a ಅಥವಾ “ಆಧ್ಯಾತ್ಮಿಕ ಅಗತ್ಯದ ಪ್ರಜ್ಞೆ ಇರೋರು.”

b ಅಥವಾ “ಸೌಮ್ಯ.”

c ಅಥವಾ “ಅಳತೆಮಾಡೋ ಕೊಳಗದ ಕೆಳಗೆ.”

d ಅಕ್ಷ. “ಗೆಹೆನ್ನ.” ಇದು ಹಿನ್ನೋಮ್‌ ಕಣಿವೆಯ ಗ್ರೀಕ್‌ ಹೆಸ್ರು. ಈ ಕಣಿವೆ ಆಗಿನ ಯೆರೂಸಲೇಮಿನ ದಕ್ಷಿಣಪಶ್ಚಿಮದ ಕಡೆ ಇತ್ತು. ಮನುಷ್ಯನನ್ನಾಗಲಿ ಪ್ರಾಣಿಗಳನ್ನಾಗಲಿ ಗೆಹನ್ನಗೆ ಬಿಸಾಕಿ ಜೀವಂತವಾಗಿ ಸುಟ್ಟಿರೋದಕ್ಕೆ, ಚಿತ್ರಹಿಂಸೆ ಕೊಟ್ಟಿರೋದಕ್ಕೆ ಯಾವ ಆಧಾರನೂ ಇಲ್ಲ. ಹಾಗಾಗಿ ಇದು ಮನುಷ್ಯನ ಆತ್ಮವನ್ನ ಬೆಂಕಿಯಲ್ಲಿ ಶಾಶ್ವತವಾಗಿ ಶಿಕ್ಷೆ ಕೊಡೋ ಒಂದು ಅದೃಶ್ಯ ಸ್ಥಳವನ್ನ ಸೂಚಿಸಲ್ಲ. ಯೇಸು ಮತ್ತು ಶಿಷ್ಯರು ಈ ಪದವನ್ನ ಶಾಶ್ವತ ಮರಣವಾದ “ಎರಡನೇ ಮರಣವನ್ನ” ಅಂದ್ರೆ ಸಂಪೂರ್ಣ ನಾಶವನ್ನ ಸೂಚಿಸೋಕೆ ಬಳಸಿದ್ರು.

e  5:22ರ ಪಾದಟಿಪ್ಪಣಿ ನೋಡಿ.

f  5:22ರ ಪಾದಟಿಪ್ಪಣಿ ನೋಡಿ.

g ಇದು ಪೋರ್ನಿಯ ಅನ್ನೋ ಗ್ರೀಕ್‌ ಪದದಿಂದ ಬಂದಿದೆ. ದೇವರ ನಿಯಮಗಳ ವಿರುದ್ಧವಾಗಿ ಮಾಡೋ ಕೆಲವು ಲೈಂಗಿಕ ಸಂಬಂಧಗಳನ್ನ ಸೂಚಿಸೋಕೆ ಈ ಪದ ಬಳಸಲಾಗಿದೆ. ವ್ಯಭಿಚಾರ, ವೇಶ್ಯಾವಾಟಿಕೆ, ಮದುವೆಯಾಗದ ಇಬ್ಬರ ಮಧ್ಯ ಇರೋ ಲೈಂಗಿಕ ಸಂಬಂಧ, ಸಲಿಂಗಕಾಮ, ಪ್ರಾಣಿಗಳ ಜೊತೆ ಸಂಭೋಗ ಇದರಲ್ಲಿ ಸೇರಿದೆ.

h ಅದು, ಸಂಪೂರ್ಣವಾಗಿ ಪ್ರೀತಿಸೋ ತರ.

i ಅಥವಾ “ದಾನಧರ್ಮ ಮಾಡುವಾಗ.”

j ಅಥವಾ “ಪವಿತ್ರ ಅಂತ ಎಣಿಸಲಿ, ಪರಿಶುದ್ಧವಾಗಿ ಕಾಣಲಿ.”

k ಅಕ್ಷ. “ಸರಳವಾಗಿದ್ರೆ.”

l ಅಥವಾ “ನೀವು ಅಳೆಯೋ ಅಳತೆಯಿಂದಾನೇ ನಿಮ್ಮನ್ನ ಅಳಿತಾರೆ.”