ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಈ ಗ್ರಂಥವು ವಿಜ್ಞಾನದೊಂದಿಗೆ ಒಮ್ಮತದಿಂದಿದೆಯೆ?

ಈ ಗ್ರಂಥವು ವಿಜ್ಞಾನದೊಂದಿಗೆ ಒಮ್ಮತದಿಂದಿದೆಯೆ?

ಈ ಗ್ರಂಥವು ವಿಜ್ಞಾನದೊಂದಿಗೆ ಒಮ್ಮತದಿಂದಿದೆಯೆ?

ಧರ್ಮವು ವಿಜ್ಞಾನವನ್ನು ಸದಾ ತನ್ನ ಮಿತ್ರನಾಗಿ ಕಂಡಿರುವುದಿಲ್ಲ. ಹಿಂದಣ ಶತಮಾನಗಳಲ್ಲಿ ಕೆಲವು ದೇವತಾಶಾಸ್ತ್ರಜ್ಞರು, ವೈಜ್ಞಾನಿಕ ಶೋಧಗಳು ಬೈಬಲಿನ ತಮ್ಮ ಅರ್ಥವಿವರಣೆಗೆ ಅಪಾಯವನ್ನು ತಂದವೆಂದೆಣಿಸಿದಾಗ, ಅವುಗಳನ್ನು ಪ್ರತಿಭಟಿಸಿದರು. ಆದರೆ ವಿಜ್ಞಾನವು ನಿಜವಾಗಿಯೂ ಬೈಬಲಿನ ಶತ್ರುವೊ?

ಬೈಬಲ್‌ ಲೇಖಕರು ತಮ್ಮ ದಿನಗಳ ಅತಿ ವ್ಯಾಪಕವಾಗಿ ನಂಬಲ್ಪಡುತ್ತಿದ್ದ ವೈಜ್ಞಾನಿಕ ಅಭಿಪ್ರಾಯಗಳನ್ನು ಸಮರ್ಥಿಸುತ್ತಿದ್ದಲ್ಲಿ, ಫಲಿತಾಂಶವು ಎದ್ದುಕಾಣುವ ವೈಜ್ಞಾನಿಕ ಅನಿಷ್ಕೃಷ್ಟತೆಗಳ ಒಂದು ಗ್ರಂಥವಾಗಿರುತ್ತಿತ್ತು. ಆದರೂ ಲೇಖಕರು ಅಂತಹ ಅವೈಜ್ಞಾನಿಕ ತಪ್ಪು ತಿಳಿವಳಿಕೆಗಳನ್ನು ಪ್ರವರ್ಧಿಸಲಿಲ್ಲ. ಬದಲಿಗೆ, ಅವರು ವೈಜ್ಞಾನಿಕವಾಗಿ ದೋಷರಹಿತವಾದರೂ ಆ ದಿನಗಳ ಅಂಗೀಕೃತ ಅಭಿಪ್ರಾಯಗಳನ್ನು ನೇರವಾಗಿ ವಿರೋಧಿಸಿದ ಅನೇಕ ಹೇಳಿಕೆಗಳನ್ನು ಬರೆದರು.

ಭೂಮಿಯ ಆಕಾರವು ಹೇಗಿದೆ?

ಆ ಪ್ರಶ್ನೆ ಸಾವಿರಾರು ವರ್ಷಗಳಿಂದ ಮಾನವರ ಕುತೂಹಲವನ್ನು ಕೆರಳಿಸಿದೆ. ಪುರಾತನ ಕಾಲಗಳಲ್ಲಿನ ಸಾಮಾನ್ಯ ನೋಟವು ಭೂಮಿ ಚಪ್ಪಟೆಯಾಗಿದೆ ಎಂಬುದಾಗಿತ್ತು. ದೃಷ್ಟಾಂತಕ್ಕೆ, ವಿಶ್ವವು ಒಂದು ಪೆಟ್ಟಿಗೆ ಅಥವಾ ಕೋಣೆಯೆಂದೂ, ಭೂಮಿ ಅದರ ನೆಲಗಟ್ಟೆಂದೂ ಬಾಬೆಲಿನವರು ನಂಬಿದರು. ಭಾರತದ ವೇದಕಾಲಿಕ ಪುರೋಹಿತರು ಭೂಮಿಯು ಚಪ್ಪಟೆಯೆಂದೂ ಅದರ ಒಂದು ಪಕ್ಕದಲ್ಲಿ ಮಾತ್ರ ಜನನಿವಾಸವಿದೆಯೆಂದೂ ಭಾವಿಸಿದರು. ಏಷಿಯದ ಒಂದು ಮೂಲ ಬುಡಕಟ್ಟು, ಭೂಮಿಯನ್ನು ಒಂದು ದೊಡ್ಡ ಚಹಾದ ಟ್ರೇ (ಹರಿವಾಣ)ಯಾಗಿ ಚಿತ್ರಿಸಿತು.

ಸಾ.ಶ.ಪೂ. ಆರನೆಯ ಶತಮಾನದಷ್ಟು ಆದಿಯಲ್ಲಿ, ಗ್ರೀಕ್‌ ತತ್ತ್ವಜ್ಞಾನಿ ಪೈತಾಗರಸನು, ಚಂದ್ರ ಮತ್ತು ಸೂರ್ಯರು ಗೋಳಾಕಾರವಾಗಿರುವುದರಿಂದ ಭೂಮಿಯೂ ಗೋಳಾಕಾರವಾಗಿರಬೇಕೆಂದು ವಾದ ಹೂಡಿದನು. ಅರಿಸ್ಟಾಟಲ್‌ (ಸಾ.ಶ.ಪೂ. ನಾಲ್ಕನೆಯ ಶತಮಾನ) ಆ ಬಳಿಕ ಅದಕ್ಕೆ ಸಮ್ಮತಿಸಿ, ಭೂಮಿಯ ಗೋಳಕಲ್ಪತೆಯನ್ನು ಚಂದ್ರಗ್ರಹಣಗಳು ರುಜುಪಡಿಸುತ್ತವೆಂದು ವಿವರಿಸಿದನು. ಚಂದ್ರನ ಮೇಲೆ ಭೂಮಿಯ ನೆರಳು ಬಾಗಿರುತ್ತದೆ.

ಆದರೂ, (ಕೇವಲ ಮೇಲ್ಭಾಗದಲ್ಲಿ ಜನನಿವಾಸವಿರುವ) ಚಪ್ಪಟೆ ಭೂಮಿಯ ಕಲ್ಪನೆಯು ಪೂರ್ತಿಯಾಗಿ ಅಳಿದುಹೋಗಲಿಲ್ಲ. ಕೆಲವರಿಗೆ ವೃತ್ತಾಕಾರದ ಭೂಮಿಯ ನ್ಯಾಯಸಮ್ಮತವಾದ ಸೂಚ್ಯಾರ್ಥವನ್ನು—ಆ್ಯನ್ಟಿಪಡೀಸ್‌ (ನೇರಾಚಿನ ಸ್ಥಳಗಳು, ಅಭಿಪಾದಿಗಳು) ಕಲ್ಪನೆಯನ್ನು ಅಂಗೀಕರಿಸಲು ಸಾಧ್ಯವಾಗಲಿಲ್ಲ. * ಸಾ.ಶ. ನಾಲ್ಕನೆಯ ಶತಮಾನದ ಕ್ರೈಸ್ತ ಧರ್ಮ ಸಮರ್ಥಕ ಲಾಕ್ಟಾಂಟೀಯುಸ್‌ ಆ ವಿಚಾರಕ್ಕೇ ಅಪಹಾಸ್ಯಮಾಡಿದನು. ಅವನು ತರ್ಕಿಸಿದ್ದು: “ತಮ್ಮ ತಲೆಗಳಿಗಿಂತ ಸ್ವಲ್ಪ ಎತ್ತರದಲ್ಲಿ ಹೆಜ್ಜೆಗಳಿರುವ ಜನರಿದ್ದಾರೆಂದು ನಂಬುವಷ್ಟು ಮೂರ್ಖರಾಗಿರುವ ಯಾರಾದರೂ ಇದ್ದಾರೊ? . . . ಬೆಳೆಗಳು ಮತ್ತು ಮರಗಳು ಕೆಳಮುಖವಾಗಿ ಬೆಳೆಯುತ್ತವೆಯೆ? ಮಳೆ, ಹಿಮ ಮತ್ತು ಆಲಿಕಲ್ಲು ಮೇಲ್ಮುಖವಾಗಿ ಬೀಳುತ್ತವೆಯೆ?”2

ಕೊಂಚ ಮಂದಿ ದೇವತಾಶಾಸ್ತ್ರಜ್ಞರಿಗೆ ಈ ಆ್ಯನ್ಟಿಪಡೀಸ್‌ ಕಲ್ಪನೆಯು ಉಭಯಸಂಕಟವನ್ನು ಉಂಟುಮಾಡಿತು. ಅಭಿಪಾದಿಗಳಿದ್ದಲ್ಲಿ, ಅವರಿಗೆ ಜ್ಞಾತ ಮಾನವರೊಂದಿಗೆ ಯಾವ ಸಂಬಂಧವೂ ಇರಸಾಧ್ಯವಿಲ್ಲವೆಂದು ಕೆಲವು ಕಲ್ಪನೆಗಳು ಅಭಿಪ್ರಯಿಸಿದವು. ಸಮುದ್ರವು ದಾಟಲು ತೀರ ಅಗಲವಾಗಿರುವುದು ಇದಕ್ಕೆ ಕಾರಣವಾಗಿರಬಹುದು ಅಥವಾ ಭೂಮಧ್ಯ ರೇಖೆಯನ್ನು ದುರ್ಗಮವಾದ ಉಷ್ಣವಲಯವೊಂದು ಸುತ್ತುವರಿದಿರುವುದರಿಂದ ಆಗಿರಬಹುದು. ಹಾಗಾದರೆ ಯಾವುದೇ ಅಭಿಪಾದಿಗಳು ಎಲ್ಲಿಂದ ಬರಸಾಧ್ಯವಿತ್ತು? ದಿಗ್ಭ್ರಮೆಗೊಂಡವರಾಗಿ, ಕೆಲವು ಮಂದಿ ದೇವತಾಶಾಸ್ತ್ರಜ್ಞರು, ಅಭಿಪಾದಿಗಳು ಇರಸಾಧ್ಯವಿಲ್ಲವೆಂದು ನಂಬಲು, ಅಥವಾ ಲಾಕ್ಟಾಂಟೀಯುಸ್‌ ವಾದಿಸಿದಂತೆ, ಭೂಮಿಯು ಗೋಳಾಕಾರವಾಗಿರಲು ಸಾಧ್ಯವಿಲ್ಲವೆಂದು ನಂಬಲು ಇಷ್ಟಪಟ್ಟರು!

ಆದರೂ, ಗೋಳಾಕಾರದ ಭೂಮಿಯ ಕಲ್ಪನೆಯು ಚಾಲ್ತಿಯಲ್ಲಿ ಉಳಿದು, ಕಟ್ಟಕಡೆಗೆ ವ್ಯಾಪಕವಾಗಿ ಅಂಗೀಕರಿಸಲ್ಪಟ್ಟಿತು. 20ನೆಯ ಶತಮಾನದಲ್ಲಿ, ಅಂತರಿಕ್ಷ ಯುಗದ ಆರಂಭದಲ್ಲಿ ಮಾತ್ರ, ಮಾನವರಿಗೆ ಅಂತರಿಕ್ಷದಲ್ಲಿ ಸಾಕಷ್ಟು ದೂರ ಪಯಣಿಸಿ, ಭೂಮಿಯು ಒಂದು ಗೋಳವೆಂದು ಪ್ರತ್ಯಕ್ಷ ಅವಲೋಕನದಿಂದ ಶೋಧಿಸಿ ಹೇಳಸಾಧ್ಯವಾಯಿತು. *

ಆದರೆ ಈ ವಿಷಯದಲ್ಲಿ ಬೈಬಲಿನ ಸ್ಥಾನವೇನಾಗಿತ್ತು? ಭೂಮಿ ಚಪ್ಪಟೆಯೆಂಬ ದೃಷ್ಟಿಕೋನವು ಚಾಲ್ತಿಯಲ್ಲಿದ್ದ ಸಾ.ಶ.ಪೂ. ಎಂಟನೆಯ ಶತಮಾನದಲ್ಲಿ, ಭೂಮಿಯು ಗೋಳಾಕಾರವಾಗಿರಬಹುದೆಂದು ಗ್ರೀಕ್‌ ತತ್ತ್ವಜ್ಞಾನಿಗಳು ಊಹಿಸುವುದಕ್ಕೆ ಶತಮಾನಗಳಿಗೂ ಮೊದಲು, ಮತ್ತು ಭೂಮಿಯು ಗೋಳವೆಂದು ಮಾನವರು ಅಂತರಿಕ್ಷದಿಂದ ನೋಡುವುದಕ್ಕೆ ಸಹಸ್ರಾರು ವರ್ಷಗಳಿಗೆ ಪೂರ್ವದಲ್ಲಿ, ಹೀಬ್ರು ಪ್ರವಾದಿಯಾದ ಯೆಶಾಯನು ಗಮನಾರ್ಹವಾದ ಸರಳತೆಯಲ್ಲಿ, “ಭೂಮಿಯ ವೃತ್ತದ ಮೇಲ್ಗಡೆ ಕುಳಿತಿರುವಾತನು ಒಬ್ಬನಿದ್ದಾನೆ” ಎಂದು ಹೇಳಿದನು. (ಯೆಶಾಯ 40:22, NW) ಇಲ್ಲಿ “ವೃತ್ತ”ವೆಂದು ಭಾಷಾಂತರಿಸಲಾಗಿರುವ ಚುಗ್‌ ಎಂಬ ಹೀಬ್ರು ಪದವನ್ನು “ಗೋಳ”ವೆಂದೂ ಭಾಷಾಂತರಿಸಬಹುದು.3 ಇತರ ಬೈಬಲ್‌ ಭಾಷಾಂತರಗಳು ಹೇಳುವುದು, “ಭೂಮಿಯ ಗೋಳ” (ಡೂಏ ವರ್ಷನ್‌) ಮತ್ತು “ಉರುಟಾದ ಭೂಮಿ.”—ಮಾಫಟ್‌. *

ಬೈಬಲ್‌ ಲೇಖಕ ಯೆಶಾಯನು ಭೂಮಿಯ ಕುರಿತ ಸಾಮಾನ್ಯ ಮಿಥ್ಯೆಗಳನ್ನು ವರ್ಜಿಸಿದನು. ಬದಲಿಗೆ, ವೈಜ್ಞಾನಿಕ ಶೋಧಗಳ ಪ್ರಗತಿಯಿಂದ ಅಪಾಯಕ್ಕೊಳಗಾಗದ ಒಂದು ಹೇಳಿಕೆಯನ್ನು ಅವನು ಬರೆದನು.

ಭೂಮಿಯನ್ನು ಯಾವುದು ಎತ್ತಿಹಿಡಿಯುತ್ತದೆ?

ಪುರಾತನ ಕಾಲಗಳಲ್ಲಿ, ಮಾನವರು ವಿಶ್ವದ ಕುರಿತ ಇತರ ಪ್ರಶ್ನೆಗಳಿಂದ ದಿಗ್ಭ್ರಮೆಗೊಂಡರು: ಭೂಮಿಯು ಯಾವುದರ ಮೇಲೆ ಆಧಾರಿಸಿರುತ್ತದೆ? ಸೂರ್ಯ, ಚಂದ್ರ ಮತ್ತು ನಕ್ಷತ್ರಗಳನ್ನು ಯಾವುದು ಎತ್ತಿಹಿಡಿಯುತ್ತದೆ? ಅವರಿಗೆ ಐಸಕ್‌ ನ್ಯೂಟನ್‌ ಸೂತ್ರೀಕರಿಸಿದ ಮತ್ತು 1687ರಲ್ಲಿ ಪ್ರಕಟಗೊಂಡ ಸಾರ್ವತ್ರಿಕ ಗುರುತ್ವಾಕರ್ಷಣದ ನಿಯಮದ ವಿಷಯದಲ್ಲಿ ಯಾವ ಜ್ಞಾನವೂ ಇರಲಿಲ್ಲ. ಆಕಾಶಸ್ಥಕಾಯಗಳು ಕಾರ್ಯತಃ, ಶೂನ್ಯಾಕಾಶದಲ್ಲಿ ಯಾವುದರ ಮೇಲೂ ತೂಗುಹಾಕಲ್ಪಟ್ಟಿಲ್ಲವೆಂಬ ವಿಚಾರವು ಅವರಿಗೆ ಅಜ್ಞಾತವಾಗಿತ್ತು. ಆದಕಾರಣ, ವಾಸ್ತವವಾದ ವಸ್ತುಗಳು ಅಥವಾ ಪದಾರ್ಥಗಳು ಭೂಮಿಯನ್ನೂ ಬೇರೆ ಆಕಾಶಸ್ಥಕಾಯಗಳನ್ನೂ ಎತ್ತಿಹಿಡಿದವೆಂದು ಅವರ ವಿವರಣೆಗಳು ಅನೇಕ ಬಾರಿ ಸೂಚಿಸಿದವು.

ದೃಷ್ಟಾಂತಕ್ಕೆ, ಪ್ರಾಯಶಃ ದ್ವೀಪನಿವಾಸಿಗಳಾದ ಜನರ ಮೂಲದಿಂದ ಬಂದ ಒಂದು ಪುರಾತನ ಕಲ್ಪನೆಯು, ಭೂಮಿಯು ನೀರಿನಿಂದಾವೃತವಾಗಿತ್ತು ಮತ್ತು ಈ ಜಲಸಮೂಹದ ಮೇಲೆ ಅದು ತೇಲುತ್ತಿತ್ತು ಎಂದಾಗಿತ್ತು. ಭೂಮಿಗೆ ಒಂದರ ಮೇಲೊಂದು ಹಲವಾರು ಅಸ್ತಿವಾರಗಳಿದ್ದವೆಂದು ಹಿಂದೂಗಳು ಊಹಿಸಿದರು. ಅದು ನಾಲ್ಕು ಆನೆಗಳ ಮೇಲೆ, ಆ ಆನೆಗಳು ಒಂದು ಬೃಹದಾಕಾರದ ಆಮೆಯ ಮೇಲೆ ನಿಂತಿದ್ದು, ಆ ಆಮೆ ಬಹು ದೊಡ್ಡ ಸರ್ಪದ ಮೇಲೆ ನಿಂತಿತು ಮತ್ತು ಸುರುಳಿ ಸುತ್ತಿಕೊಂಡಂತಿದ್ದ ಆ ಸರ್ಪವು ವಿಶ್ವ ಜಲಸಮೂಹದ ಮೇಲೆ ತೇಲಿತು. ಸಾ.ಶ.ಪೂ. ಐದನೆಯ ಶತಮಾನದ ಗ್ರೀಕ್‌ ತತ್ತ್ವಜ್ಞಾನಿ ಎಂಪೆಡಕ್ಲೀಸ್‌, ಭೂಮಿಯು ಒಂದು ಸುಂಟರಗಾಳಿಯ ಮೇಲೆ ಆಧಾರಿಸಿದೆ ಮತ್ತು ಆಕಾಶಸ್ಥಕಾಯಗಳ ಚಲನೆಗೆ ಕಾರಣವು ಈ ಸುಂಟರಗಾಳಿಯೇ ಎಂದು ನಂಬಿದನು.

ಅತಿ ಪ್ರಭಾವಕಾರಿ ಅಭಿಪ್ರಾಯಗಳಲ್ಲಿ ಅರಿಸ್ಟಾಟಲ್‌ನ ಅಭಿಪ್ರಾಯಗಳೂ ಸೇರಿದ್ದವು. ಭೂಮಿಯು ಒಂದು ಗೋಳವೆಂದು ಅವನು ಕಲ್ಪಿಸಿಕೊಂಡಿದ್ದರೂ, ಅದು ಶೂನ್ಯಾಕಾಶದಲ್ಲಿ ತೂಗುಹಾಕಲ್ಪಟ್ಟಿರುವ ಸಾಧ್ಯತೆಯನ್ನು ಅವನು ಅಲ್ಲಗಳೆದನು. ಆಕಾಶಮಂಡಲದ ಕುರಿತು (ಇಂಗ್ಲಿಷ್‌) ಎಂಬ ತನ್ನ ಪ್ರಕರಣ ಗ್ರಂಥದಲ್ಲಿ, ಭೂಮಿಯು ನೀರಿನ ಮೇಲೆ ಆಧಾರಿಸಿದೆ ಎಂಬ ವಿಚಾರವನ್ನು ತಪ್ಪೆಂದು ರುಜುಪಡಿಸುವಾಗ ಅವನು ಹೇಳಿದ್ದು: “ಮಧ್ಯಾಕಾಶದಲ್ಲಿ ನಿಲ್ಲುವುದು ನೀರಿನ ಸ್ವಭಾವವೂ ಅಲ್ಲ, ಭೂಮಿಯದ್ದೂ ಅಲ್ಲ: ಅದಕ್ಕೆ ಆಧಾರವಾಗಿ ಏನಾದರೂ ಇರಲೇ ಬೇಕು.”4 ಹಾಗಾದರೆ, ಭೂಮಿಯು ಯಾವುದರ ಮೇಲೆ “ಆಧಾರ”ವಾಗಿ ನಿಂತಿದೆ? ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು, ಘನಸ್ಥಿತಿಯ, ಪಾರದರ್ಶಕ ಗೋಳಗಳ ಮೇಲ್ಮೈಗೆ ಜೋಡಿಸಲ್ಪಟ್ಟಿವೆ ಎಂದು ಅರಿಸ್ಟಾಟಲ್‌ ಕಲಿಸಿದನು. ಗೋಳವು ಗೋಳದೊಳಗೆ ಹುದುಗಿಕೊಂಡಿದ್ದು, ನಿಶ್ಚಲವಾದ ಭೂಮಿಯು ಮಧ್ಯದಲ್ಲಿದೆ. ಗೋಳಗಳು ಒಂದು ಇನ್ನೊಂದರೊಳಗೆ ಸುತ್ತಿದಾಗ, ಅವುಗಳ ಮೇಲಿರುವ ವಸ್ತುಗಳು—ಸೂರ್ಯ, ಚಂದ್ರ ಮತ್ತು ಗ್ರಹಗಳು—ಆಕಾಶದಲ್ಲಿ ಚಲಿಸಿದವು.

ಅರಿಸ್ಟಾಟಲನ ವಿವರಣೆಗಳು ಸಮಂಜಸವಾದುವೆಂದು ತೋರಿದವು. ಆಕಾಶಸ್ಥಕಾಯಗಳು ಯಾವುದಕ್ಕಾದರೂ ಜೋಡಿಸಲ್ಪಡದೆ ಇರುವಲ್ಲಿ, ಅವು ಎತ್ತರದಲ್ಲಿ ನಿಲ್ಲುವುದು ಹೇಗೆ? ಪೂಜ್ಯಭಾವದಿಂದ ಕಾಣಲ್ಪಟ್ಟ ಅರಿಸ್ಟಾಟಲನ ಈ ಅಭಿಪ್ರಾಯಗಳು, ಸುಮಾರು 2,000 ವರ್ಷಗಳ ವರೆಗೆ ನಿಜತ್ವವಾಗಿ ಅಂಗೀಕರಿಸಲ್ಪಟ್ಟವು. ದ ನ್ಯೂ ಎನ್‌ಸೈಕ್ಲೊಪೀಡಿಯ ಬ್ರಿಟ್ಯಾನಿಕಕ್ಕನುಸಾರ, 16ನೆಯ ಮತ್ತು 17ನೆಯ ಶತಮಾನಗಳಲ್ಲಿ ಅವನ ಬೋಧನೆಗಳು, ಚರ್ಚಿನ ದೃಷ್ಟಿಯಲ್ಲಿ, “ಧಾರ್ಮಿಕ ಮತ ತತ್ತ್ವದ ಸ್ಥಾನಕ್ಕೇರಿದವು.”5

ದೂರದರ್ಶಕದ ಕಂಡುಹಿಡಿತದೊಂದಿಗೆ, ಖಗೋಲಶಾಸ್ತ್ರಜ್ಞರು ಅರಿಸ್ಟಾಟಲನ ಕಲ್ಪನೆಯ ವಿಷಯದಲ್ಲಿ ಆಕ್ಷೇಪಣೆಯನ್ನೆತ್ತತೊಡಗಿದರು. ಆದರೂ, ಗ್ರಹಗಳು ಶೂನ್ಯಾಕಾಶದಲ್ಲಿ ತೂಗುಹಾಕಲ್ಪಟ್ಟಿವೆ, ಅಲ್ಲಿ ಅವುಗಳು ಒಂದು ಅದೃಶ್ಯ ಶಕ್ತಿಯಾದ ಗುರುತ್ವಾಕರ್ಷಣದಿಂದ ತಮ್ಮ ಕಕ್ಷೆಗಳಲ್ಲಿ ಎತ್ತಿಹಿಡಿಯಲ್ಪಟ್ಟಿವೆಯೆಂದು ಸರ್‌ ಐಸಕ್‌ ನ್ಯೂಟನ್‌ ವಿವರಿಸುವ ತನಕ ಇದಕ್ಕೆ ಉತ್ತರವು ಅವರ ಹಿಡಿತಕ್ಕೆ ಸಿಕ್ಕಲಿಲ್ಲ. ಇದು ನಂಬಲಸಾಧ್ಯವಾದುದಾಗಿ ಕಂಡಿತು, ಮತ್ತು ನ್ಯೂಟನನ ಸಹೋದ್ಯೋಗಿಗಳಲ್ಲಿ ಕೆಲವರಿಗೆ, ಅಂತರಿಕ್ಷವು ಶೂನ್ಯವಾದ, ಬಹುಮಟ್ಟಿಗೆ ಪದಾರ್ಥವಿಲ್ಲದ ಒಂದು ಸ್ಥಳವಾಗಿರಸಾಧ್ಯವಿದೆ ಎಂಬುದನ್ನು ನಂಬುವುದು ಕಷ್ಟಕರವಾಗಿ ಕಂಡುಬಂತು. *6

ಈ ವಿವಾದಾಂಶದ ಕುರಿತು ಬೈಬಲಿಗೇನು ಹೇಳಲಿಕ್ಕಿದೆ? ಸುಮಾರು 3,500 ವರ್ಷಗಳ ಹಿಂದೆ, ಅಸಾಧಾರಣವಾದ ಸ್ಪಷ್ಟತೆಯಿಂದ, ಭೂಮಿಯು “ಶೂನ್ಯದ ಮೇಲೆ” ತೂಗುತ್ತಿದೆಯೆಂದು ಬೈಬಲು ಹೇಳಿತು. (ಯೋಬ 26:7) ಮೂಲ ಹೀಬ್ರು ಭಾಷೆಯಲ್ಲಿ “ಶೂನ್ಯ” (ಬೆಲಿಮಾ) ಎಂದು ಇಲ್ಲಿ ಉಪಯೋಗಿಸಲಾದ ಶಬ್ದವು, ಅಕ್ಷರಶಃ “ಏನೂ ಇಲ್ಲದ” ಎಂದಾಗಿದೆ.7ಕಂಟೆಂಪರೆರಿ ಇಂಗ್ಲಿಷ್‌ ವರ್ಷನ್‌, “ಶೂನ್ಯಾಕಾಶದ ಮೇಲೆ” ಎಂಬ ಪದಪ್ರಯೋಗವನ್ನು ಮಾಡುತ್ತದೆ.

ಆ ದಿನಗಳಲ್ಲಿದ್ದ ಹೆಚ್ಚಿನ ಜನರು ಭೂಮಿಯನ್ನು, ಅದು “ಶೂನ್ಯಾಕಾಶದ ಮೇಲೆ” ತೂಗುಹಾಕಲ್ಪಟ್ಟಿದೆಯೆಂದು ಚಿತ್ರಿಸಿಕೊಳ್ಳಲೇ ಇಲ್ಲ. ಆದರೂ, ಬೈಬಲ್‌ ಲೇಖಕನು, ತನ್ನ ಸಮಯಕ್ಕಿಂತ ಎಷ್ಟೋ ಮುಂದಕ್ಕೆ ಬರಲಿದ್ದ ವೈಜ್ಞಾನಿಕವಾಗಿ ದೃಢವಾಗಿದ್ದ ಒಂದು ಹೇಳಿಕೆಯನ್ನು ದಾಖಲೆಮಾಡಿದನು.

ಬೈಬಲು ಮತ್ತು ವೈದ್ಯಕೀಯ ವಿಜ್ಞಾನ —ಅವು ಒಮ್ಮತದಿಂದಿವೆಯೊ?

ರೋಗಗಳ ಹರಡುವಿಕೆ ಮತ್ತು ತಡೆಗಟ್ಟುವಿಕೆಗಳ ಕುರಿತು ಆಧುನಿಕ ವೈದ್ಯಕೀಯ ವಿಜ್ಞಾನವು ನಮಗೆ ಬಹಳಷ್ಟನ್ನು ಕಲಿಸಿದೆ. 19ನೆಯ ಶತಮಾನದ ವೈದ್ಯಕೀಯ ಪ್ರಗತಿಗಳು ಪೂತಿರೋಧ (ಆ್ಯಂಟಿಸೆಪ್ಸಿಸ್‌)—ಸೋಂಕುಗಳನ್ನು ಕಡಮೆಮಾಡಲು ಶುಚಿತ್ವ—ವನ್ನು ವೈದ್ಯಕೀಯ ಅಭ್ಯಾಸಕ್ಕೆ ಪರಿಚಯಿಸಿತು. ಪರಿಣಾಮವೊ, ಗಮನಾರ್ಹವಾಗಿತ್ತು. ಸೋಂಕುಗಳಲ್ಲಿ ಮತ್ತು ಅಕಾಲ ಮರಣಗಳಲ್ಲಿ ಗಮನಾರ್ಹವಾದ ಅವನತಿಯಾಯಿತು.

ಆದರೂ, ಪುರಾತನ ಕಾಲದ ವೈದ್ಯರಿಗೆ ರೋಗವು ಹೇಗೆ ಹರಡುತ್ತದೆ ಎಂದು ಪೂರ್ತಿಯಾಗಿ ತಿಳಿದಿರಲೂ ಇಲ್ಲ, ರೋಗವನ್ನು ತಡೆಗಟ್ಟುವುದರಲ್ಲಿ ನೈರ್ಮಲ್ಯದ ಪ್ರಮುಖತೆಯನ್ನು ಅವರು ಗ್ರಹಿಸಲೂ ಇಲ್ಲ. ಅವರ ವೈದ್ಯಕೀಯ ಪದ್ಧತಿಗಳಲ್ಲಿ ಅನೇಕ ಪದ್ಧತಿಗಳು, ಆಧುನಿಕ ಮಟ್ಟಗಳ ಪ್ರಕಾರ ಅಸಂಸ್ಕೃತವೆಂದು ಕಂಡುಬರುವುದು ಆಶ್ಚರ್ಯವಲ್ಲ.

ಅತಿ ಹಳೆಯ ವೈದ್ಯಕೀಯ ಮೂಲಗ್ರಂಥಗಳಲ್ಲಿ ಒಂದು, ಸುಮಾರು ಸಾ.ಶ.ಪೂ. 1550ಕ್ಕೆ ಹಿಂದೆ ಹೋಗುವ, ಈಜಿಪ್ಷಿಯನ್‌ ವೈದ್ಯಕೀಯ ಜ್ಞಾನ ಸಂಕಲನವಾದ ಏಬರ್ಸ್‌ ಪಪೈರಸ್‌ ಆಗಿದೆ. ಈ ಸುರುಳಿಯಲ್ಲಿ, “ಮೊಸಳೆ ಕಡಿತದಿಂದ ಹಿಡಿದು ಕಾಲ್ಬೆರಳಿನ ಉಗುರಿನ ಬೇನೆಯ ವರೆಗಿನ” ವಿವಿಧ ರೋಗಗಳಿಗೆ ಸುಮಾರು 700 ಔಷಧಿಗಳಿವೆ.8ದ ಇಂಟರ್‌ನ್ಯಾಷನಲ್‌ ಬೈಬಲ್‌ ಎನ್‌ಸೈಕ್ಲೊಪೀಡಿಯ ಹೇಳುವುದು: “ಈ ವೈದ್ಯರುಗಳ ವೈದ್ಯಕೀಯ ಜ್ಞಾನವು ಕೇವಲ ಪ್ರಯೋಗಾಧಾರಿತವಾಗಿದ್ದವು, ಅವು ಬಹುಮಟ್ಟಿಗೆ ಐಂದ್ರಜಾಲಿಕವೂ ಪೂರ್ತಿಯಾಗಿ ಅವೈಜ್ಞಾನಿಕವೂ ಆಗಿದ್ದವು.”9 ಹೆಚ್ಚಿನ ಔಷಧಗಳು ಕೇವಲ ವ್ಯರ್ಥವಾಗಿದ್ದರೂ ಅವುಗಳಲ್ಲಿ ಕೆಲವು ವಿಪರೀತ ಅಪಾಯಕರವಾಗಿದ್ದವು. ಗಾಯದ ಚಿಕಿತ್ಸೆಗಾಗಿ, ಶಿಫಾರಸ್ಸು ಮಾಡಲ್ಪಟ್ಟ ಔಷಧಗಳಲ್ಲಿ ಒಂದು, ವಿವಿಧ ವಸ್ತುಗಳು ಸೇರಿಸಿದ್ದ ಮಾನವ ಮಲದಿಂದ ಮಾಡಿದ ಒಂದು ಮಿಶ್ರಣವನ್ನು ಹಚ್ಚುವುದಾಗಿತ್ತು.10

ಈಜಿಪ್ಷಿಯನ್‌ ವೈದ್ಯಕೀಯ ಔಷಧಗಳ ಈ ಮೂಲಗ್ರಂಥವು, ಮೋಶೆಯ ಧರ್ಮಶಾಸ್ತ್ರವಿದ್ದ ಬೈಬಲಿನ ಮೊದಲನೆಯ ಐದು ಪುಸ್ತಕಗಳು ಬರೆಯಲ್ಪಟ್ಟ ಸಮಯದಲ್ಲಿಯೇ ಬರೆಯಲ್ಪಟ್ಟಿತ್ತು. ಸಾ.ಶ.ಪೂ. 1593ರಲ್ಲಿ ಹುಟ್ಟಿದ ಮೋಶೆಯು ಐಗುಪ್ತದಲ್ಲಿ ಬೆಳೆದನು. (ವಿಮೋಚನಕಾಂಡ 2:1-10) ಫರೋಹನ ಮನೆವಾರ್ತೆಯ ಸದಸ್ಯನಾಗಿದ್ದ ಅವನು, “ಐಗುಪ್ತದವರ ಸರ್ವವಿದ್ಯೆಗಳಲ್ಲಿಯೂ ಉಪದೇಶ” ಹೊಂದಿದವನಾಗಿದ್ದನು. (ಅ. ಕೃತ್ಯಗಳು 7:22) ಅವನಿಗೆ ಐಗುಪ್ತದ “ವೈದ್ಯರ” ಪರಿಚಯವಿತ್ತು. (ಆದಿಕಾಂಡ 50:1-3) ಅವರ ಪರಿಣಾಮಕರವಲ್ಲದ ಅಥವಾ ಅಪಾಯಕರವಾದ ವೈದ್ಯಕೀಯ ಪದ್ಧತಿಗಳು ಅವನ ಬರವಣಿಗೆಗಳ ಮೇಲೆ ಪ್ರಭಾವ ಬೀರಿದವೊ?

ಇಲ್ಲ. ವ್ಯತಿರಿಕ್ತವಾಗಿ, ಮೋಶೆಯ ಧರ್ಮಶಾಸ್ತ್ರದಲ್ಲಿ ಅವುಗಳ ಸಮಯಕ್ಕಿಂತ ಎಷ್ಟೋ ಮುಂದುವರಿದಿದ್ದ ನೈರ್ಮಲ್ಯ ನಿಯಮಗಳು ಸೇರಿದ್ದವು. ದೃಷ್ಟಾಂತಕ್ಕೆ, ಸೈನಿಕ ಪಾಳೆಯದ ಕುರಿತ ಒಂದು ನಿಯಮವು ಮಲವನ್ನು ಪಾಳೆಯದಿಂದ ದೂರ ಹೊರಗೆ ಹೂಳುವಂತೆ ಕೇಳಿಕೊಂಡಿತು. (ಧರ್ಮೋಪದೇಶಕಾಂಡ 23:13) ಇದು ತೀವ್ರ ಪ್ರಗತಿಪರವಾದ ವ್ಯಾಧಿ ತಡೆಗಟ್ಟುವ ಕ್ರಮವಾಗಿತ್ತು. ಇದು ನೀರು ಕಲುಷಿತಗೊಳ್ಳದಂತೆ ಸಹಾಯ ಮಾಡಿ, ಶೋಚನೀಯ ರೀತಿಯ ನೈರ್ಮಲ್ಯ ಸ್ಥಿತಿಗಳಿರುವ ದೇಶಗಳಲ್ಲಿ ಪ್ರತಿ ವರುಷ ಲಕ್ಷಗಟ್ಟಲೆ ಜೀವಗಳನ್ನು ಇನ್ನೂ ಆಹುತಿತೆಗೆದುಕೊಳ್ಳುವ ನೊಣರವಾನಿತ ಶಿಗಲೋಸಿಸ್‌ ಮತ್ತಿತರ ಭೇದಿಸಂಬಂಧಿತ ರೋಗಗಳಿಂದ ಸಂರಕ್ಷಣೆಯನ್ನೊದಗಿಸಿತು.

ಮೋಶೆಯ ಧರ್ಮಶಾಸ್ತ್ರದಲ್ಲಿ, ಸಾಂಕ್ರಾಮಿಕ ರೋಗಗಳ ಹರಡುವಿಕೆಯಿಂದ ಇಸ್ರಾಯೇಲನ್ನು ರಕ್ಷಿಸಿದ ಇನ್ನಿತರ ನೈರ್ಮಲ್ಯ ನಿಯಮಗಳೂ ಇದ್ದವು. ಅಂಟುಜಾಡ್ಯವಿರುವ ಅಥವಾ ಇದೆಯೆಂದು ಸಂದೇಹಿಸಲ್ಪಟ್ಟಿರುವ ಒಬ್ಬ ವ್ಯಕ್ತಿಯನ್ನು ಪ್ರತ್ಯೇಕವಾಗಿ ಇರಿಸಲಾಗುತ್ತಿತ್ತು. (ಯಾಜಕಕಾಂಡ 13:1-5) ತಾನಾಗಿಯೇ (ಪ್ರಾಯಶಃ ರೋಗದಿಂದ) ಸತ್ತಿದ್ದ ಪ್ರಾಣಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದ ಬಟ್ಟೆಗಳಾಗಲಿ, ಪಾತ್ರೆಗಳಾಗಲಿ, ಪುನರುಪಯೋಗಕ್ಕೆ ಮೊದಲು ತೊಳೆಯಬೇಕಾಗಿತ್ತು, ಇಲ್ಲವೆ ನಾಶಗೊಳಿಸಬೇಕಾಗಿತ್ತು. (ಯಾಜಕಕಾಂಡ 11:27, 28, 32, 33) ಹೆಣವನ್ನು ಮುಟ್ಟಿದ ಯಾವನೇ ವ್ಯಕ್ತಿಯು ಅಶುದ್ಧನೆಂದೆಣಿಸಲ್ಪಟ್ಟು, ಬಟ್ಟೆಗಳನ್ನು ಒಗೆದು ಸ್ನಾನಮಾಡುವುದನ್ನು ಒಳಗೊಂಡಿದ್ದ ಶುದ್ಧೀಕರಣ ವಿಧಾನವನ್ನು ಅನುಸರಿಸಬೇಕಿತ್ತು. ಏಳು ದಿನಗಳ ಅಶುದ್ಧಾವಧಿಯಲ್ಲಿ, ಅವನು ಇತರರೊಂದಿಗೆ ಶಾರೀರಿಕ ಸಂಪರ್ಕವನ್ನು ತಪ್ಪಿಸಬೇಕಾಗಿತ್ತು.—ಅರಣ್ಯಕಾಂಡ 19:1-13.

ಈ ನೈರ್ಮಲ್ಯ ನಿಯಮಾವಳಿ ಆ ಸಮಯದ ಸುತ್ತಮುತ್ತಲಿನ ಜನಾಂಗಗಳ ವೈದ್ಯರಲ್ಲಿ ಇದ್ದಿಲ್ಲದ ವಿವೇಕವನ್ನು ತಿಳಿಯಪಡಿಸುತ್ತದೆ. ರೋಗವು ಹೇಗೆ ಹರಡುತ್ತದೆಂದು ವೈದ್ಯಕೀಯ ವಿಜ್ಞಾನವು ತಿಳಿಯುವುದಕ್ಕೆ ಸಾವಿರಾರು ವರ್ಷಗಳಿಗೆ ಮೊದಲು, ಬೈಬಲು ರೋಗರಕ್ಷಣೆಯ ಸಲುವಾಗಿ ಸಮಂಜಸವಾದ ಪ್ರತಿರೋಧ ಕ್ರಮಗಳನ್ನು ಸೂಚಿಸಿತು. ತನ್ನ ದಿನಗಳ ಸಾಮಾನ್ಯ ಇಸ್ರಾಯೇಲ್ಯರು, 70 ಅಥವಾ 80 ವಯಸ್ಸಿನ ತನಕ ಬದುಕಿ ಉಳಿಯುತ್ತಾರೆಂದು ಮೋಶೆಯು ಹೇಳಶಕ್ತನಾದುದು ಆಶ್ಚರ್ಯಕರವಲ್ಲ. *ಕೀರ್ತನೆ 90:10.

ಮೇಲೆ ಕೊಡಲ್ಪಟ್ಟಿರುವ ಬೈಬಲ್‌ ಹೇಳಿಕೆಗಳು ವೈಜ್ಞಾನಿಕವಾಗಿ ನಿಷ್ಕೃಷ್ಟವೆಂದು ನೀವು ಒಪ್ಪಬಹುದು. ಆದರೆ ವೈಜ್ಞಾನಿಕವಾಗಿ ಪ್ರಮಾಣೀಕರಿಸಲಾಗದಿರುವ ಇತರ ಹೇಳಿಕೆಗಳು ಬೈಬಲಿನಲ್ಲಿವೆ. ಹಾಗಾದರೆ ಬೈಬಲು ವಿಜ್ಞಾನಕ್ಕೆ ವಿರುದ್ಧವಾಗಿರಬೇಕೆಂದಿದೆಯೊ?

ಪ್ರಮಾಣೀಕರಿಸಲಾಗದ್ದನ್ನು ಅಂಗೀಕರಿಸುವುದು

ಪ್ರಮಾಣೀಕರಿಸಲಾಗದ ಒಂದು ಹೇಳಿಕೆಯು ಅಸತ್ಯವಾಗಿರಬೇಕೆಂದಿಲ್ಲ. ವೈಜ್ಞಾನಿಕ ರುಜುವಾತು, ಸಾಕಷ್ಟು ಸಾಕ್ಷ್ಯವನ್ನು ಕಂಡುಹಿಡಿದು, ಆ ದತ್ತಾಂಶವನ್ನು ಸರಿಯಾಗಿ ಅರ್ಥವಿವರಣೆಮಾಡಲು ಮನುಷ್ಯನಿಗಿರುವ ಸಾಮರ್ಥ್ಯದಿಂದ ಸೀಮಿತಗೊಳ್ಳುತ್ತದೆ. ಆದರೆ ಕೆಲವು ಸತ್ಯಗಳನ್ನು, ಯಾವ ಸಾಕ್ಷ್ಯವೂ ಉಳಿಯದಿರುವುದರಿಂದ, ಸಾಕ್ಷ್ಯವು ಅಸ್ಪಷ್ಟ ಅಥವಾ ಕಂಡುಹಿಡಿಯಲ್ಪಡದೆ ಇರುವುದರಿಂದ ಅಥವಾ ನಿರ್ವಿವಾದವಿರುವ ಒಂದು ತೀರ್ಮಾನಕ್ಕೆ ಬರಲು ವೈಜ್ಞಾನಿಕ ಸಾಮರ್ಥ್ಯ ಮತ್ತು ಪರಿಣತಿಯ ಕೊರತೆ ಇರುವುದರಿಂದ ಪ್ರಮಾಣೀಕರಿಸಲಾಗುವುದಿಲ್ಲ. ಬೈಬಲಿನ ಕೆಲವು ಹೇಳಿಕೆಗಳ ಸಂಬಂಧದಲ್ಲಿ, ಯಾವುದಕ್ಕೆ ಸ್ವಾವಲಂಬಿ ಭೌತಿಕ ರುಜುವಾತಿನ ಕೊರತೆಯಿದೆಯೊ ಅಂತಹ ಹೇಳಿಕೆಗಳ ವಿಷಯದಲ್ಲಿ ಇದು ಸತ್ಯವಾಗಿರಬಹುದೊ?

ದೃಷ್ಟಾಂತಕ್ಕೆ, ಆತ್ಮಿಕ ವ್ಯಕ್ತಿಗಳು ನಿವಾಸಿಸುವ ಅದೃಶ್ಯ ಲೋಕದ ಕುರಿತ ಬೈಬಲ್‌ ಹೇಳಿಕೆಗಳನ್ನು ವೈಜ್ಞಾನಿಕವಾಗಿ ಪ್ರಮಾಣೀಕರಿಸಲೂ ಸಾಧ್ಯವಿಲ್ಲ, ಅಪ್ರಮಾಣೀಕರಿಸಲೂ ಸಾಧ್ಯವಿಲ್ಲ. ಬೈಬಲಿನಲ್ಲಿ ಹೇಳಲಾಗಿರುವ ಅದ್ಭುತ ಘಟನೆಗಳ ವಿಷಯದಲ್ಲಿಯೂ ಅದನ್ನೇ ಹೇಳಬಹುದು. ನೋಹನ ದಿನದ ಭೂಜಲಪ್ರಳಯದ ಕುರಿತು ಕೆಲವು ಜನರನ್ನು ತೃಪ್ತಿಪಡಿಸಲು ಸಾಕಾಗುವಷ್ಟು ಭೂವೈಜ್ಞಾನಿಕ ರುಜುವಾತು ದೊರಕಿರುವುದಿಲ್ಲ. (ಆದಿಕಾಂಡ, 7ನೆಯ ಅಧ್ಯಾಯ) ಹಾಗಾದರೆ, ಅದು ಸಂಭವಿಸಲಿಲ್ಲವೆಂದು ನಾವು ನಿರ್ಧರಿಸಬೇಕೊ? ಐತಿಹಾಸಿಕ ಘಟನೆಗಳು ಸಮಯ ಮತ್ತು ಬದಲಾವಣೆಗಳಿಂದಾಗಿ ಅಸ್ಪಷ್ಟವಾಗಸಾಧ್ಯವಿದೆ. ಹಾಗಾದರೆ, ಸಾವಿರಾರು ವರ್ಷಗಳ ಭೂವೈಜ್ಞಾನಿಕ ಚಟುವಟಿಕೆಯು ಜಲಪ್ರಳಯದ ಹೆಚ್ಚಿನ ಸಾಕ್ಷ್ಯವನ್ನು ಅಳಿಸಿಬಿಡಲು ಸಾಧ್ಯವಿದೆಯಲ್ಲವೊ?

ಲಭ್ಯವಿರುವ ಭೌತಿಕ ಸಾಕ್ಷ್ಯದಿಂದ ಪ್ರಮಾಣೀಕರಿಸಸಾಧ್ಯವಿರುವ ಅಥವಾ ಪ್ರಮಾಣೀಕರಿಸಲಸಾಧ್ಯವಾದ ಹೇಳಿಕೆಗಳು ಬೈಬಲಿನಲ್ಲಿ ಅಡಕವಾಗಿವೆಯೆಂಬುದನ್ನು ಒಪ್ಪಿಕೊಳ್ಳೋಣ. ಆದರೆ ಅದು ನಮ್ಮನ್ನು ಆಶ್ಚರ್ಯಗೊಳಿಸಬೇಕೊ? ಬೈಬಲು ವಿಜ್ಞಾನದ ಪಠ್ಯಪುಸ್ತಕವಲ್ಲ. ಆದರೂ, ಅದು ಸತ್ಯವಿರುವ ಒಂದು ಗ್ರಂಥ. ಅದರ ಲೇಖಕರು ಸಮಗ್ರತೆ ಮತ್ತು ಪ್ರಾಮಾಣಿಕತೆಯ ಪುರುಷರಾಗಿದ್ದರೆಂಬುದಕ್ಕೆ ಬಲವಾದ ಸಾಕ್ಷ್ಯವನ್ನು ನಾವು ಈಗಾಗಲೇ ಪರಿಗಣಿಸಿದ್ದೇವೆ. ಮತ್ತು ಅವರು ವಿಜ್ಞಾನಕ್ಕೆ ಸಂಬಂಧಪಟ್ಟ ವಿಷಯಗಳನ್ನು ಹೇಳುವಾಗ, ಅವರ ಮಾತುಗಳು ನಿಷ್ಕೃಷ್ಟವೂ, ಕೇವಲ ಮಿಥ್ಯೆಗಳಾಗಿ ಪರಿಣಮಿಸಿದ ಹಳೆಯ “ವೈಜ್ಞಾನಿಕ” ಊಹೆಗಳಿಂದ ಸಂಪೂರ್ಣವಾಗಿ ಮುಕ್ತವೂ ಆಗಿವೆ. ಹೀಗೆ, ವಿಜ್ಞಾನವು ಬೈಬಲಿನ ಶತ್ರುವಲ್ಲ. ಬೈಬಲು ಹೇಳುವ ವಿಷಯವನ್ನು ಬಿಚ್ಚುಮನದಿಂದ ತೂಗಿನೋಡಲು ಸಕಲ ಕಾರಣಗಳೂ ಇವೆ.

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 7 “ಭೂವ್ಯಾಸದ ಎರಡು ಕೊನೆಗಳಲ್ಲಿ ಎದುರುಬದುರಿಗಿರುವ ಎರಡು ಸ್ಥಳಗಳೇ . . . ಆ್ಯನ್ಟಿಪಡೀಸ್‌. ಇವುಗಳ ಮಧ್ಯೆ ನೇರವಾದ ರೇಖೆಯನ್ನು ಎಳೆಯುವಲ್ಲಿ ಅದು ಭೂಕೇಂದ್ರವನ್ನು ದಾಟಿಹೋಗುವುದು. ಆ್ಯನ್ಟಿಪಡೀಸ್‌ ಎಂಬ ಪದದ ಅರ್ಥವು ಗ್ರೀಕಿನಲ್ಲಿ ಪಾದದಿಂದ ಪಾದಕ್ಕೆ. ಆ್ಯನ್ಟಿಪಡೀಸ್‌ನಲ್ಲಿ ನಿಂತುಕೊಂಡಿರುವ ಇಬ್ಬರು ವ್ಯಕ್ತಿಗಳು ತಮ್ಮ ಪಾದತಲಗಳಲ್ಲಿ ಅತಿ ಹತ್ತಿರದಲ್ಲಿರುವರು.”1ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲೊಪೀಡಿಯ.

^ ಪ್ಯಾರ. 9 ತಾಂತ್ರಿಕವಾಗಿ ಹೇಳುವುದಾದರೆ, ಭೂಮಿಯು ಒಂದು ಗೋಳಕಲ್ಪ; ಅದು ಧ್ರುವಗಳಲ್ಲಿ ತುಸು ಚಪ್ಪಟೆಯಾಗಿದೆ.

^ ಪ್ಯಾರ. 10 ಕೂಡಿಕೆಯಾಗಿ, ಒಂದು ಗೋಳಾಕಾರದ ವಸ್ತು ಮಾತ್ರ ದೃಷ್ಟಿಯ ಪ್ರತಿಯೊಂದು ಕೋನದಿಂದಲೂ ಒಂದು ವೃತ್ತವಾಗಿ ಕಂಡುಬರುತ್ತದೆ. ಒಂದು ಚಪ್ಪಟೆ ಡಿಸ್ಕ್‌ ಹೆಚ್ಚು ಬಾರಿ, ವೃತ್ತವಾಗಿ ಅಲ್ಲ, ಅಂಡಾಕೃತಿಯಾಗಿ ತೋರಿಬರುವುದು.

^ ಪ್ಯಾರ. 17 ವಿಶ್ವವು ದ್ರವದಿಂದ—“ವಿಶ್ವ ತಿಳಿಸಾರು”—ತುಂಬಿದೆ ಮತ್ತು ಈ ದ್ರವದಲ್ಲಿನ ಸುಳಿಗಳು ಗ್ರಹಗಳನ್ನು ತಿರುಗುವಂತೆ ಮಾಡುತ್ತವೆ ಎಂಬುದು ನ್ಯೂಟನನ ದಿನಗಳ ಒಂದು ಮುಖ್ಯಾಭಿಪ್ರಾಯವಾಗಿತ್ತು.

^ ಪ್ಯಾರ. 27 1900ರಲ್ಲಿ ಅನೇಕ ಯೂರೋಪಿಯನ್‌ ದೇಶಗಳಲ್ಲಿ ಮತ್ತು ಅಮೆರಿಕದಲ್ಲಿ ಜೀವ ನಿರೀಕ್ಷಣೆಯು 50ಕ್ಕಿಂತ ಕಡಮೆಯಾಗಿತ್ತು. ಅಂದಿನಿಂದ, ಅದು ಗಮನಾರ್ಹವಾಗಿ ವೃದ್ಧಿಯಾಗಿರುವುದು ರೋಗನಿಯಂತ್ರಣದಲ್ಲಿ ವೈದ್ಯಕೀಯ ಪ್ರಗತಿಯ ಕಾರಣ ಮಾತ್ರವಲ್ಲ, ಹೆಚ್ಚು ಉತ್ತಮ ನೈರ್ಮಲ್ಯ ಮತ್ತು ಜೀವಿಸುವ ಪರಿಸ್ಥಿತಿಗಳಿಂದಾಗಿಯೂ ಆಗಿದೆ.

[ಪುಟ 21 ರಲ್ಲಿರುವ ಚಿತ್ರ]

ಪ್ರಮಾಣೀಕರಿಸಸಾಧ್ಯವಿಲ್ಲದ ಒಂದು ಹೇಳಿಕೆ ಅಸತ್ಯವಾಗಿರಬೇಕೆಂದಿಲ್ಲ

[ಪುಟ 29 ರಲ್ಲಿರುವ ಚಿತ್ರ]

ಮನುಷ್ಯರು ಭೂಮಿಯನ್ನು ಅಂತರಿಕ್ಷದಿಂದ ಅದೊಂದು ಗೋಳವಾಗಿದೆಯೆಂದು ನೋಡುವುದಕ್ಕೆ ಸಹಸ್ರಾರು ವರ್ಷಗಳ ಮೊದಲು ಬೈಬಲು, “ಭೂಮಿಯ ವೃತ್ತ”ವನ್ನು ಸೂಚಿಸಿತು

[ಪುಟ 31 ರಲ್ಲಿರುವ ಚಿತ್ರ]

ಗ್ರಹಗಳು ಗುರುತ್ವಾಕರ್ಷಣದ ಮೂಲಕ ತಮ್ಮ ಕಕ್ಷೆಗಳಲ್ಲಿ ಎತ್ತಿಹಿಡಿಯಲ್ಪಟ್ಟಿವೆಯೆಂದು ಸರ್‌ ಐಸಕ್‌ ನ್ಯೂಟನ್‌ ವಿವರಿಸಿದರು