ತಪ್ಪಾಗಿ ಪ್ರತಿನಿಧಿಸಲ್ಪಟ್ಟಿರುವ ಒಂದು ಗ್ರಂಥ
ತಪ್ಪಾಗಿ ಪ್ರತಿನಿಧಿಸಲ್ಪಟ್ಟಿರುವ ಒಂದು ಗ್ರಂಥ
“ತನ್ನ ಅಕ್ಷದ ಮತ್ತು ಸೂರ್ಯನ ಸುತ್ತಲೂ ಭೂಮಿಯ ದ್ವಯಾವರ್ತದ ಸಿದ್ಧಾಂತವು ತಪ್ಪಾಗಿದ್ದು, ಪವಿತ್ರ ಶಾಸ್ತ್ರಕ್ಕೆ ಪೂರ್ತಿ ವಿರುದ್ಧವಾಗಿದೆ.” ಹೀಗೆಂದು 1616ರಲ್ಲಿ ರೋಮನ್ ಕ್ಯಾಥೊಲಿಕ್ ಚರ್ಚಿನ ಗ್ರಂಥಪಟ್ಟಿ ಮಂಡಳಿಯ ಶಾಸನವೊಂದು ಹೇಳಿತು.1 ವೈಜ್ಞಾನಿಕ ನಿಜತ್ವಗಳೊಂದಿಗೆ ಬೈಬಲು ನಿಜವಾಗಿಯೂ ಅಸಮ್ಮತಿಸುತ್ತದೆಯೆ? ಅಥವಾ ಅದನ್ನು ತಪ್ಪಾಗಿ ಪ್ರತಿನಿಧಿಸಲಾಗಿದೆಯೆ?
ಗಾಲೀಲೇಯೋ ಗ್ಯಾಲಲೇಯೀ, 1609/10ರ ಚಳಿಗಾಲದಲ್ಲಿ, ತನ್ನ ಹೊಸದಾಗಿ ನಿರ್ಮಿಸಿದ ದೂರದರ್ಶಕವನ್ನು ಆಕಾಶಮಂಡಲದ ಕಡೆಗೆ ತಿರುಗಿಸಲಾಗಿ, ಜ್ಯೂಪಿಟರ್ (ಗುರು) ಗ್ರಹವನ್ನು ನಾಲ್ಕು ಚಂದ್ರರು ಸುತ್ತುವರಿಯುತ್ತಿರುವುದನ್ನು ಕಂಡುಹಿಡಿದನು. ಅವನು ನೋಡಿದ ವಿಷಯವು, ಸಕಲ ಆಕಾಶಸ್ಥ ಕಾಯಗಳು, ತಮ್ಮ ಕಕ್ಷೆಯಲ್ಲಿ ಭೂಮಿಯ ಸುತ್ತಲೂ ಸುತ್ತಬೇಕೆಂಬ ಆಗಿನ ಸಾಮಾನ್ಯ ಭಾವನೆಯನ್ನು ಧ್ವಂಸಗೊಳಿಸಿತು. ಅದಕ್ಕೆ ಮೊದಲು, 1543ರಲ್ಲಿ ಪೋಲೆಂಡಿನ ಖಗೋಲಜ್ಞ ನೀಕೋಲಾವ್ಸ್ ಕೋಪರ್ನಿಕಸ್, ಗ್ರಹಗಳು ಸೂರ್ಯನ ಸುತ್ತಲೂ ತಿರುಗುತ್ತವೆಂದು ವಾದ ಹೂಡಿದ್ದನು. ಇದು ವೈಜ್ಞಾನಿಕ ಸತ್ಯವಾಗಿತ್ತೆಂಬುದನ್ನು ಗಾಲೀಲೇಯೋ ಸಮರ್ಥಿಸಿದನು.
ಆದರೆ ಕ್ಯಾಥೊಲಿಕ್ ದೇವತಾಶಾಸ್ತ್ರಜ್ಞರಿಗೊ, ಇದು ಪಾಷಂಡ ವಾದವಾಗಿತ್ತು. ಭೂಮಿಯೇ ವಿಶ್ವದ ಕೇಂದ್ರವೆಂದು ಚರ್ಚು ದೀರ್ಘಕಾಲದಿಂದ ನಂಬಿತ್ತು.2 ಈ ದೃಷ್ಟಿಕೋನವು, ಭೂಮಿಯನ್ನು “ಯುಗಯುಗಾಂತರಕ್ಕೂ ಕದಲದ ಹಾಗೆ . . . ದೃಢವಾದ ಅಸ್ತಿವಾರದ ಮೇಲೆ” ಸ್ಥಾಪಿಸಲ್ಪಟ್ಟಂತೆ ಚಿತ್ರಿಸಿದ ಶಾಸ್ತ್ರದ ಅಕ್ಷರಾರ್ಥ ವಿವರಣೆಯ ಮೇಲೆ ಆಧಾರಗೊಂಡಿತ್ತು. (ಕೀರ್ತನೆ 104:5) ಗಾಲೀಲೇಯೋ ರೋಮಿಗೆ ಆಹ್ವಾನಿಸಲ್ಪಟ್ಟು ಮಠೀಯ ನ್ಯಾಯಸ್ಥಾನದ ಮುಂದೆ ಹಾಜರಾದನು. ಉಗ್ರವಾದ ಪರೀಕ್ಷಣೆಗೆ ಒಳಪಡಿಸಲ್ಪಟ್ಟವನಾಗಿ, ಅವನು ತನ್ನ ಕಂಡುಹಿಡಿತಗಳನ್ನು ಬಹಿರಂಗವಾಗಿ ಹಿಂದಕ್ಕೆ ತೆಗೆದುಕೊಳ್ಳುವಂತೆ ಒತ್ತಾಯಿಸಲ್ಪಟ್ಟನು, ಮತ್ತು ತನ್ನ ಉಳಿದ ಜೀವಮಾನವನ್ನು ಗೃಹ ಬಂಧನದಲ್ಲಿ ಕಳೆದನು.
ಗಾಲೀಲೇಯೋ ಮರಣಹೊಂದಿದ ಸುಮಾರು 350 ವರ್ಷಗಳ ಬಳಿಕ, 1992ರಲ್ಲಿ, ಕ್ಯಾಥೊಲಿಕ್ ಚರ್ಚು ಕೊನೆಗೆ ಹೇಗೂ ಅವನ ಹೇಳಿಕೆ ಸತ್ಯವೆಂದು ಒಪ್ಪಿಕೊಂಡಿತು.3 ಆದರೆ ಗಾಲೀಲೇಯೋ ಹೇಳಿದ್ದು ಸರಿಯಾಗಿದ್ದರೆ, ಬೈಬಲು ತಪ್ಪಾಗಿತ್ತೊ?
ಬೈಬಲಿನ ಉದ್ಧೃತ ಭಾಗಗಳ ನಿಜಾರ್ಥವನ್ನು ಕಂಡುಹಿಡಿಯುವುದು
ಬೈಬಲು ಸತ್ಯವೆಂದು ಗಾಲೀಲೇಯೋ ನಂಬಿದ್ದನು. ಅವನ ವೈಜ್ಞಾನಿಕ ಕಂಡುಹಿಡಿತಗಳು, ನಿರ್ದಿಷ್ಟ ಬೈಬಲ್ ವಚನಗಳ ಪ್ರಚಲಿತ ಅರ್ಥವಿವರಣೆಗೆ ವ್ಯತಿರಿಕ್ತವಾಗಿದ್ದಾಗ, ದೇವತಾಶಾಸ್ತ್ರಜ್ಞರು ಆ ಉದ್ಧೃತ ಭಾಗಗಳ ನಿಜಾರ್ಥವನ್ನು ಅರ್ಥಮಾಡಿಕೊಳ್ಳುವುದರಲ್ಲಿ ತಪ್ಪಿಹೋಗಿದ್ದರೆಂದು ಅವನು ತರ್ಕಿಸಿದನು. ಎಷ್ಟೆಂದರೂ “ಎರಡು ಸತ್ಯಗಳು ಒಂದನ್ನೊಂದು ಎಂದಿಗೂ ವಿರೋಧಿಸವು” ಎಂದು ಅವನು ಬರೆದನು.4 ವಿಜ್ಞಾನದ ನಿಷ್ಕೃಷ್ಟ ಪದಗಳು ಬೈಬಲಿನ ದಿನನಿತ್ಯದ ಮಾತುಗಳನ್ನು ವಿರೋಧಿಸುವುದಿಲ್ಲವೆಂದು ಅವನು ಸೂಚಿಸಿದನು. ಆದರೆ ದೇವತಾಶಾಸ್ತ್ರಜ್ಞರು ಇದು ಅವರನ್ನು ಮನಗಾಣಿಸುವಂತೆ ಬಿಡಲಿಲ್ಲ. ಬೈಬಲಿನಲ್ಲಿ ಭೂಮಿಯ ಕುರಿತ ಕೊಡಲ್ಪಟ್ಟಿರುವ ಸಕಲ ಹೇಳಿಕೆಗಳನ್ನು ಅಕ್ಷರಾರ್ಥವಾಗಿ ತೆಗೆದುಕೊಳ್ಳಬೇಕೆಂದು ಅವರು ಪಟ್ಟುಹಿಡಿದರು. ಪರಿಣಾಮವಾಗಿ, ಅವರು ಗಾಲೀಲೇಯೋವಿನ ಕಂಡುಹಿಡಿತಗಳನ್ನು ತಳ್ಳಿಹಾಕಿದ್ದಷ್ಟೇಯಲ್ಲ, ಅಂತಹ ಶಾಸ್ತ್ರೀಯ ಅಭಿವ್ಯಕ್ತಿಗಳ ನಿಜಾರ್ಥವನ್ನೂ ಅವರು ಅರ್ಥಮಾಡಿಕೊಳ್ಳದೆ ಹೋದರು.
“ಭೂಮಿಯ ನಾಲ್ಕು ದಿಕ್ಕುಗಳ”ನ್ನು ಬೈಬಲು ಸೂಚಿಸುವಾಗ, ಬೈಬಲ್ ಲೇಖಕರು, ಭೂಮಿಯು ಅಕ್ಷರಾರ್ಥದಲ್ಲಿ ಚಚ್ಚೌಕವಾಗಿತ್ತೆಂದು ಅರ್ಥಮಾಡಿರಲಿಲ್ಲವೆಂಬುದನ್ನು ನಿಜವಾಗಿಯೂ ನಮಗೆ ಸಾಮಾನ್ಯ ಜ್ಞಾನವು ಹೇಳಬೇಕು. (ಪ್ರಕಟನೆ 7:1) ಬೈಬಲು ಸಾಮಾನ್ಯ ಜನರ ಭಾಷೆಯಲ್ಲಿ, ಅನೇಕ ವೇಳೆ ಎದ್ದುಕಾಣುವ ರೂಪಕಗಳನ್ನು ಉಪಯೋಗಿಸುತ್ತ ಬರೆಯಲ್ಪಟ್ಟಿದೆ. ಆದಕಾರಣ, ಭೂಮಿಗೆ ‘ನಾಲ್ಕು ದಿಕ್ಕುಗಳು,’ ಬಾಳಿಕೆ ಬರುವ “ಅಸ್ತಿವಾರ,” “ಸುಣ್ಣಪಾದಗಳು,” ಮತ್ತು “ಮೂಲೆಗಲ್ಲು” ಇದೆಯೆಂದು ಹೇಳುವಾಗ ಬೈಬಲು ಭೂಮಿಯ ವೈಜ್ಞಾನಿಕ ವರ್ಣನೆಯನ್ನು ನೀಡುತ್ತಿಲ್ಲ; ಅದು ರೂಪಕಾಲಂಕಾರದಲ್ಲಿ, ನಾವು ಅನೇಕ ವೇಳೆ ದೈನಂದಿನ ಮಾತುಕತೆಯಲ್ಲಿ ಸಂಭಾಷಿಸುವ ಹಾಗೆ ಮಾತಾಡುತ್ತದೆಂಬುದು ವ್ಯಕ್ತ. *—ಯೆಶಾಯ 51:13, NW; ಯೋಬ 38:6, NW.
ಗಾಲೀಲೇಯೋ ಗ್ಯಾಲಲೇಯೀ, ಎಂಬ ತನ್ನ ಪುಸ್ತಕದಲ್ಲಿ ಜೀವನ ಚರಿತ್ರೆಗಾರನಾದ ಎಲ್. ಗೇಮೋನಾಟ್ ಗಮನಿಸಿದ್ದು: “ಬೈಬಲ್ ಸಂಬಂಧದ ತರ್ಕಸರಣಿಯ ಆಧಾರದ ಮೇರೆಗೆ ವಿಜ್ಞಾನವನ್ನು ಪರಿಮಿತಗೊಳಿಸಬಯಸಿದ ಸಂಕುಚಿತ ಮನಸ್ಸಿನ ದೇವತಾಶಾಸ್ತ್ರಜ್ಞರು, ಬೈಬಲಿನ ಮೇಲೆ ಅಪಮಾನವನ್ನಲ್ಲದೆ ಇನ್ನೇನನ್ನೂ ತರುವುದಿಲ್ಲ.”5 ಅವರು ಹಾಗೆ ಮಾಡಿದ್ದು ನಿಶ್ಚಯ. ವಾಸ್ತವವಾಗಿ, ಸ್ವತಃ ಬೈಬಲಲ್ಲ, ಬದಲಾಗಿ ದೇವತಾಶಾಸ್ತ್ರಜ್ಞರ ಬೈಬಲ್ ಅರ್ಥವಿವರಣೆಯೇ ವಿಜ್ಞಾನದ ಮೇಲೆ ನ್ಯಾಯಸಮ್ಮತವಲ್ಲದ ನಿರ್ಬಂಧಗಳನ್ನು ಹಾಕಿತು.
ಅದೇ ರೀತಿ, ಇಂದು ಧಾರ್ಮಿಕ ಸಂಪ್ರದಾಯವಾದಿಗಳು, ಭೂಮಿಯು 24 ತಾಸುಗಳ ಆರು ದಿವಸಗಳಲ್ಲಿ ಸೃಷ್ಟಿಸಲ್ಪಟ್ಟಿತ್ತೆಂದು ಪಟ್ಟುಹಿಡಿದು ಹೇಳುವಾಗ ಬೈಬಲಿಗೆ ಅಪಾರ್ಥವನ್ನು ಕೊಡುತ್ತಾರೆ. (ಆದಿಕಾಂಡ 1:3-31) ಇಂಥ ದೃಷ್ಟಿಕೋನವು ವಿಜ್ಞಾನದೊಂದಿಗೆ ಅಥವಾ ಬೈಬಲಿನೊಂದಿಗೆ ಸಮ್ಮತಿಸುವುದಿಲ್ಲ. ಪ್ರತಿನಿತ್ಯದ ಮಾತುಕತೆಯಲ್ಲಿ ಹೇಗೊ ಹಾಗೆಯೇ, ಬೈಬಲಿನಲ್ಲಿ “ದಿನ” ಎಂಬ ಪದವು, ನಾನಾ ಕಾಲಾವಧಿಯ ಉದ್ದಗಳನ್ನು ವ್ಯಕ್ತಪಡಿಸುವ ನಮ್ಯ ಪದವಾಗಿದೆ. ಆದಿಕಾಂಡ 2:4 (NW)ರಲ್ಲಿ, ಎಲ್ಲ ಆರು ಸೃಷ್ಟಿಕಾರಕ ದಿನಗಳನ್ನು ಒಂದು ಸರ್ವಾವರಿತ “ದಿನ”ವಾಗಿ ಸೂಚಿಸಲಾಗಿದೆ. ಬೈಬಲಿನಲ್ಲಿ “ದಿನ”ವೆಂದು ಭಾಷಾಂತರಿಸಲ್ಪಟ್ಟಿರುವ ಹೀಬ್ರು ಪದವು “ಒಂದು ದೀರ್ಘ ಸಮಯ” ಎಂಬ ಸರಳಾರ್ಥವನ್ನು ಕೊಡಬಲ್ಲದು.6 ಆದಕಾರಣ, ಸೃಷ್ಟಿಯ ದಿನಗಳಲ್ಲಿ ಪ್ರತಿಯೊಂದರ ಉದ್ದವು 24 ತಾಸುಗಳಾಗಿದ್ದವೆಂದು ಪಟ್ಟುಹಿಡಿಯಲು ಯಾವುದೇ ಬೈಬಲ್ಸಂಬಂಧಿತ ಕಾರಣವಿರುವುದಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ಕಲಿಸುವ ಮೂಲಕ ಸಂಪ್ರದಾಯವಾದಿಗಳು ಬೈಬಲನ್ನು ತಪ್ಪಾಗಿ ಪ್ರತಿನಿಧಿಸುತ್ತಾರೆ.—2 ಪೇತ್ರ 3:8ನ್ನೂ ನೋಡಿರಿ.
ಇತಿಹಾಸದಾದ್ಯಂತ, ದೇವತಾಶಾಸ್ತ್ರಜ್ಞರು ಪದೇ ಪದೇ ಬೈಬಲಿಗೆ ಅಪಾರ್ಥವನ್ನು ಕೊಟ್ಟಿದ್ದಾರೆ. ಬೈಬಲು ಹೇಳುವುದನ್ನು ಕ್ರೈಸ್ತ ಪ್ರಪಂಚದ ಧರ್ಮಗಳು ತಪ್ಪಾಗಿ ಪ್ರತಿನಿಧಿಸಿರುವ ಇನ್ನಿತರ ವಿಧಗಳನ್ನು ಪರಿಗಣಿಸಿರಿ.
ಧರ್ಮದಿಂದ ತಪ್ಪಾಗಿ ಪ್ರತಿನಿಧಿಸಲ್ಪಟ್ಟದ್ದು
ತಾವು ಬೈಬಲನ್ನು ಅನುಸರಿಸುತ್ತಿದ್ದೇವೆಂದು ಹೇಳುವವರ ಕಾರ್ಯಗಳು ಅನೇಕ ವೇಳೆ ಅವರು ಪೂಜ್ಯಭಾವದಿಂದ ಕಾಣುತ್ತೇವೆಂದು ಹೇಳಿಕೊಳ್ಳುವ ಗ್ರಂಥದ ಖ್ಯಾತಿಯನ್ನು ಮಬ್ಬುಗೊಳಿಸುತ್ತವೆ. ಕ್ರೈಸ್ತರೆನಿಸಿಕೊಳ್ಳುವವರು ದೇವರ ಹೆಸರಿನಲ್ಲಿ ಒಬ್ಬರು ಇನ್ನೊಬ್ಬರ ರಕ್ತವನ್ನು ಸುರಿಸಿದ್ದಾರೆ. ಆದರೂ, ಬೈಬಲು ಕ್ರಿಸ್ತನ ಹಿಂಬಾಲಕರಿಗೆ, ಅವರು “ಒಬ್ಬರನ್ನೊಬ್ಬರು ಪ್ರೀತಿಸಬೇಕು” ಎಂದು ಬುದ್ಧಿಹೇಳುತ್ತದೆ.—ಯೋಹಾನ 13:34, 35; ಮತ್ತಾಯ 26:52.
ಕೆಲವು ಪಾದ್ರಿಗಳು ತಮ್ಮ ಹಿಂಡನ್ನು ಪುಸಲಾಯಿಸಿ, ಅವರು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸುಲಿಗೆಮಾಡುತ್ತಾರೆ. ಇದು, “ಉಚಿತವಾಗಿ ಹೊಂದಿದ್ದೀರಿ, ಉಚಿತವಾಗಿ ಕೊಡಿರಿ,” ಎಂಬ ಶಾಸ್ತ್ರೀಯ ಉಪದೇಶಕ್ಕೆ ತೀರ ವ್ಯತಿರಿಕ್ತವಾಗಿದೆ.—ಮತ್ತಾಯ 10:8; 1 ಪೇತ್ರ 5:2, 3.
ಬೈಬಲನ್ನು ಕೇವಲ ಉಲ್ಲೇಖಿಸುವವರ ಅಥವಾ ಅದಕ್ಕನುಸಾರ ಜೀವಿಸುತ್ತೇವೆಂದು ವಾದಿಸುವವರ ಮಾತುಗಳು ಮತ್ತು ಕಾರ್ಯಗಳಿಗನುಸಾರವಾಗಿ ಬೈಬಲಿನ ಕುರಿತು ನಿರ್ಣಯಕ್ಕೆ ಬರಸಾಧ್ಯವಿಲ್ಲ ಎಂಬುದು ಸ್ಪಷ್ಟ. ಆದುದರಿಂದ, ಬಿಚ್ಚುಮನಸ್ಸಿನ ವ್ಯಕ್ತಿಯೊಬ್ಬನು, ಬೈಬಲೆಂದರೇನು ಮತ್ತು ಅದೇಕೆ ಅಷ್ಟು ಗಮನಾರ್ಹವಾದ ಗ್ರಂಥವಾಗಿದೆಯೆಂಬುದನ್ನು ತಾನಾಗಿಯೇ ಕಂಡುಹಿಡಿಯಲು ಬಯಸಬಹುದು.
[ಅಧ್ಯಯನ ಪ್ರಶ್ನೆಗಳು]
^ ಪ್ಯಾರ. 8 ಉದಾಹರಣೆಗಾಗಿ, ಇಂದಿನ ಅತ್ಯಂತ ಅಕ್ಷರಾರ್ಥ ಮನಸ್ಸುಳ್ಳ ಖಗೋಳಜ್ಞರು ಸಹ, ಸೂರ್ಯ, ನಕ್ಷತ್ರಗಳು, ಹಾಗೂ ನಕ್ಷತ್ರಪುಂಜಗಳ “ಉದಯಿಸುವಿಕೆ” ಮತ್ತು “ಅಸ್ತಮಿಸುವಿಕೆ”ಯ ಕುರಿತಾಗಿ ಮಾತಾಡುತ್ತಾರೆ—ವಾಸ್ತವದಲ್ಲಿಯಾದರೊ, ಭೂಮಿಯು ಸುತ್ತುವ ಕಾರಣದಿಂದ ಇವು ಕೇವಲ ಚಲಿಸುತ್ತಿರುವಂತೆ ಕಂಡುಬರುತ್ತವೆ.
[ಪುಟ 5 ರಲ್ಲಿರುವ ಚಿತ್ರ]
ಗಾಲೀಲೇಯೋವಿನ ದೂರದರ್ಶಕಗಳಲ್ಲಿ ಎರಡು
[ಪುಟ 6 ರಲ್ಲಿರುವ ಚಿತ್ರ]
ತನ್ನ ಮಠೀಯ ನ್ಯಾಯಾಧೀಶರುಗಳೆದುರಿನಲ್ಲಿ ಗಾಲೀಲೇಯೋ