ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮಗಾಗಿರುವ ಒಂದು ಗ್ರಂಥವೊ?

ನಿಮಗಾಗಿರುವ ಒಂದು ಗ್ರಂಥವೊ?

ನಿಮಗಾಗಿರುವ ಒಂದು ಗ್ರಂಥವೊ?

“ಬಹುಗ್ರಂಥಗಳ ರಚನೆಗೆ ಮಿತಿಯಿಲ್ಲ,” ಎಂದು ಸೊಲೊಮೋನನು 3,000 ವರ್ಷಗಳ ಹಿಂದೆ ಹೇಳಿದನು. (ಪ್ರಸಂಗಿ 12:12) ಆ ಅವಲೋಕನವು ಎಂದಿನಂತೆ ಇಂದೂ ತಕ್ಕದ್ದಾಗಿದೆ. ಉತ್ಕೃಷ್ಟ ಸಾಹಿತ್ಯಗಳಲ್ಲದೆ, ಸಾವಿರಾರು ಹೊಸ ಪುಸ್ತಕಗಳು ಪ್ರತಿ ವರ್ಷ ಮುದ್ರಿಸಲ್ಪಡುತ್ತವೆ. ಆಯ್ದುಕೊಳ್ಳಲು ಅಷ್ಟೊಂದು ಪುಸ್ತಕಗಳಿರುವಾಗ, ನೀವು ಬೈಬಲನ್ನು ಏಕೆ ಓದಬೇಕು?

ಅನೇಕರು ಪುಸ್ತಕಗಳನ್ನು ಮನೋರಂಜನೆಗಾಗಿ ಅಥವಾ ಜ್ಞಾನಾರ್ಜನೆಗಾಗಿ ಅಥವಾ ಪ್ರಾಯಶಃ ಇವೆರಡೂ ಕಾರಣಗಳಿಗಾಗಿ ಓದುತ್ತಾರೆ. ಬೈಬಲ್‌ ವಾಚನದ ವಿಷಯದಲ್ಲೂ ಇದು ನಿಜವಾಗಿರಬಲ್ಲದು. ಅದು ಆತ್ಮೋನ್ನತಿ ಮಾಡುವ, ಮನೋರಂಜನೆಯನ್ನೂ ಮಾಡುವ ವಾಚನವಾಗಿರಬಲ್ಲದು. ಆದರೆ ಬೈಬಲು ಅದಕ್ಕೂ ಹೆಚ್ಚಿನದ್ದು. ಅದು ಜ್ಞಾನದ ಅದ್ವಿತೀಯ ಮೂಲವಾಗಿದೆ.—ಪ್ರಸಂಗಿ 12:9, 10.

ಮನುಷ್ಯರು ದೀರ್ಘಕಾಲದಿಂದ ಪರ್ಯಾಲೋಚಿಸಿರುವ, ನಮ್ಮ ಭೂತ, ವರ್ತಮಾನ ಮತ್ತು ಭವಿಷ್ಯತ್ತಿನ ಕುರಿತ ಪ್ರಶ್ನೆಗಳಿಗೆ ಬೈಬಲು ಉತ್ತರ ಕೊಡುತ್ತದೆ. ಅನೇಕರು ಕುತೂಹಲಪಡುವುದು: ನಾವೆಲ್ಲಿಂದ ಬಂದೆವು? ಜೀವನದ ಉದ್ದೇಶವೇನು? ಜೀವನದಲ್ಲಿ ನಾವು ಸಂತೋಷವನ್ನು ಹೇಗೆ ಪಡೆಯಬಲ್ಲೆವು? ಭೂಮಿಯ ಮೇಲೆ ಜೀವವು ಸದಾ ಇರುವುದೊ? ಭವಿಷ್ಯವು ನಮಗೆ ಏನನ್ನು ಕಾದಿರಿಸಿದೆ?

ಇಲ್ಲಿ ನೀಡಿರುವ ಸಕಲ ಸಾಕ್ಷ್ಯದ ಒಟ್ಟುಗೂಡಿಸಿದ ಶಕ್ತಿಯು ಬೈಬಲು ನಿಷ್ಕೃಷ್ಟವೂ ಪ್ರಮಾಣಪೂರಿತವೂ ಆಗಿದೆಯೆಂಬುದನ್ನು ಸ್ಪಷ್ಟವಾಗಿ ಸ್ಥಾಪಿಸುತ್ತದೆ. ಅದರ ಪ್ರಾಯೋಗಿಕ ಸಲಹೆಯು ನಾವಿಂದು ಅರ್ಥಭರಿತವಾದ ಮತ್ತು ಸಂತೋಷದ ಜೀವಿತಗಳನ್ನು ನಡೆಸಲು ಹೇಗೆ ಸಹಾಯ ಮಾಡಬಲ್ಲದೆಂಬುದನ್ನು ನಾವು ಈಗಾಗಲೆ ಪರಿಗಣಿಸಿದ್ದೇವೆ. ಪ್ರಸ್ತುತ ಸಮಯದ ಕುರಿತು ಅದು ಕೊಡುವ ಉತ್ತರಗಳು ತೃಪ್ತಿಕರವಾಗಿರುವುದರಿಂದ, ಗತಕಾಲದ ಕುರಿತ ಅದರ ಉತ್ತರಗಳು ಮತ್ತು ಭವಿಷ್ಯತ್ತಿನ ಕುರಿತಾದ ಅದರ ಪ್ರವಾದನೆಗಳು ಜಾಗರೂಕತೆಯ ಗಮನಕ್ಕೆ ಅರ್ಹವಾಗಿವೆಯೆಂಬುದು ಖಂಡಿತ.

ಅತ್ಯಂತ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳುವ ವಿಧ

ಅನೇಕ ಜನರು ಬೈಬಲನ್ನು ಓದಲು ಪ್ರಾರಂಭಿಸಿದರೂ, ಅರ್ಥಮಾಡಿಕೊಳ್ಳಲು ಕಷ್ಟಕರವಾಗಿರುವ ಅದರ ಭಾಗಗಳಿಗೆ ಬಂದಾಗ ಓದುವುದನ್ನು ನಿಲ್ಲಿಸಿದ್ದಾರೆ. ಇದು ನಿಮ್ಮ ಅನುಭವವೂ ಆಗಿದ್ದರೆ, ಸಹಾಯ ನೀಡಬಹುದಾದ ಕೆಲವು ಸಂಗತಿಗಳಿವೆ.

ಒಂದು ಭರವಸಾರ್ಹವಾದ, ಆಧುನಿಕ ದಿನದ ಭಾಷೆಯ—ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಆಫ್‌ ದ ಹೋಲಿ ಸ್ಕ್ರಿಪ್ಚರ್ಸ್‌ನಂತಹ—ಭಾಷಾಂತರವನ್ನು ಆರಿಸಿಕೊಳ್ಳಿ. * ಕೆಲವು ಜನರು ಯೇಸುವಿನ ಜೀವನದ ಸುವಾರ್ತಾ ವೃತ್ತಾಂತಗಳನ್ನು ಓದುವುದರೊಂದಿಗೆ ಆರಂಭಿಸುತ್ತಾರೆ. ಪರ್ವತ ಪ್ರಸಂಗದಲ್ಲಿ ಕಂಡುಬರುವಂತಹ ಅವನ ವಿವೇಕಯುತ ಬೋಧನೆಗಳು ಮಾನವ ಪ್ರಕೃತಿಯ ತೀಕ್ಷ್ಣ ಪ್ರಜ್ಞೆಯನ್ನು ಪ್ರತಿಬಿಂಬಿಸಿ, ನಮ್ಮ ಜೀವನವನ್ನು ಉತ್ತಮಗೊಳಿಸುವ ವಿಧವನ್ನು ರೇಖಿಸುತ್ತವೆ.—ಮತ್ತಾಯ 5ರಿಂದ 7ರ ವರೆಗಿನ ಅಧ್ಯಾಯಗಳನ್ನು ನೋಡಿರಿ.

ಬೈಬಲನ್ನು ಓದುತ್ತ ಹೋಗುವುದಕ್ಕೆ ಕೂಡಿಸಿ, ಒಂದು ವಿಷಯಸಂಬಂಧಿತ ಅಧ್ಯಯನ ವಿಧಾನವು ತೀರ ಬೋಧಪ್ರದವಾಗಿರಬಲ್ಲದು. ಬೈಬಲು ಒಂದು ನಿರ್ದಿಷ್ಟ ವಿಷಯದ ಮೇಲೆ ಹೇಳುವುದನ್ನು ವಿಶ್ಲೇಷಿಸುವುದು ಇದರಲ್ಲಿ ಸೇರಿದೆ. ಬೈಬಲು ಪ್ರಾಣ, ಸ್ವರ್ಗ, ಭೂಮಿ, ಜೀವ, ಮತ್ತು ಮರಣ ಹಾಗೂ ದೇವರ ರಾಜ್ಯ—ಅದೇನಾಗಿದೆ ಮತ್ತು ಅದು ಏನನ್ನು ಸಾಧಿಸುವುದು—ಎಂಬಂತಹ ವಿಷಯಗಳ ಕುರಿತು ನಿಜವಾಗಿಯೂ ಏನನ್ನುತ್ತದೆಂಬುದನ್ನು ತಿಳಿದುಕೊಳ್ಳುವಾಗ ನಿಮಗೆ ಆಶ್ಚರ್ಯವಾದೀತು. * ಯೆಹೋವನ ಸಾಕ್ಷಿಗಳಲ್ಲಿ ಉಚಿತವಾಗಿ ಒದಗಿಸಲ್ಪಡುವ, ವಿಷಯಸಂಬಂಧಿತ ಬೈಬಲ್‌ ಅಭ್ಯಾಸದ ಕಾರ್ಯಕ್ರಮವೊಂದಿದೆ. ಇದರ ಕುರಿತು ನೀವು ಪ್ರಕಾಶಕರಿಗೆ, 2ನೆಯ ಪುಟದಲ್ಲಿ ಪಟ್ಟಿಮಾಡಲ್ಪಟ್ಟಿರುವ ತಕ್ಕ ವಿಳಾಸವನ್ನುಪಯೋಗಿಸಿ ಬರೆದು ವಿಚಾರಿಸಬಹುದು.

ಸಾಕ್ಷ್ಯವನ್ನು ಪರೀಕ್ಷಿಸಿದ ಮೇಲೆ, ಬೈಬಲು ದೇವರಿಂದ—ಶಾಸ್ತ್ರಗಳು ಯಾರನ್ನು “ಯೆಹೋವ” ಎಂಬುದಾಗಿ ಗುರುತಿಸುತ್ತವೊ ಆತನಿಂದ—ಬಂದಿದೆಯೆಂದು ಅನೇಕ ಜನರು ತೀರ್ಮಾನಿಸಿದ್ದಾರೆ. (ಕೀರ್ತನೆ 83:18) ಬೈಬಲು ದೈವಿಕ ಮೂಲದ್ದೆಂಬ ವಿಷಯವನ್ನು ನೀವು ಮನಗಂಡಿಲ್ಲದಿರಬಹುದು. ಆದರೆ ನೀವಾಗಿಯೇ ಏಕೆ ಪರೀಕ್ಷಿಸಬಾರದು? ಕಲಿಯುವ, ಧ್ಯಾನಿಸುವ ಮತ್ತು ಪ್ರಾಯಶಃ ಅದರ ಅನಂತಕಾಲಿಕ ವಿವೇಕದ ಪ್ರಾಯೋಗಿಕ ಮೌಲ್ಯವನ್ನು ನೀವಾಗಿಯೇ ಅನುಭವಿಸಿದ ಒಂದು ಪ್ರಕ್ರಿಯೆಯ ಬಳಿಕ, ಬೈಬಲು ನಿಶ್ಚಯವಾಗಿಯೂ ಸಕಲ ಜನರಿಗಾಗಿರುವ ಮತ್ತು ಅದಕ್ಕಿಂತಲೂ ಹೆಚ್ಚಾಗಿ ನಿಮಗಾಗಿಯೂ ಇರುವ ಒಂದು ಗ್ರಂಥವೆಂದು ನಿಮಗನಿಸುವುದೆಂಬ ಖಾತ್ರಿ ನಮಗಿದೆ.

[ಅಧ್ಯಯನ ಪ್ರಶ್ನೆಗಳು]

^ ಪ್ಯಾರ. 8 ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ ಪ್ರಕಾಶಿತ.

^ ಪ್ಯಾರ. 9 ಬೈಬಲಿನ ವಿಷಯಸಂಬಂಧಿತ ಅಭ್ಯಾಸಕ್ಕೆ ಅನೇಕರಿಗೆ ಸಹಾಯ ಮಾಡಿರುವ ಒಂದು ಪುಸ್ತಕವು, ವಾಚ್‌ ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿ ಪ್ರಕಾಶಿತ ನಿತ್ಯಜೀವಕ್ಕೆ ನಡೆಸುವ ಜ್ಞಾನ ಆಗಿದೆ.