ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಜೀವ ಭಾಷೆಗಳನ್ನು “ಆಡುವ” ಒಂದು ಗ್ರಂಥ

ಸಜೀವ ಭಾಷೆಗಳನ್ನು “ಆಡುವ” ಒಂದು ಗ್ರಂಥ

ಸಜೀವ ಭಾಷೆಗಳನ್ನು “ಆಡುವ” ಒಂದು ಗ್ರಂಥ

ಯಾವ ಭಾಷೆಯಲ್ಲಿ ಒಂದು ಗ್ರಂಥವು ಬರೆಯಲ್ಪಟ್ಟಿದೆಯೋ ಆ ಭಾಷೆಯು ಬಳಕೆಯಲ್ಲಿಲ್ಲದೆ ಹೋಗುವಲ್ಲಿ, ಕಾರ್ಯತಃ ಆ ಗ್ರಂಥವೂ ಬಳಕೆಯಲ್ಲಿಲ್ಲದೆ ಹೋಗುತ್ತದೆ. ಇಂದು ಬೈಬಲ್‌ ಬರೆಯಲ್ಪಟ್ಟಿದ್ದ ಪುರಾತನ ಭಾಷೆಗಳನ್ನು ಓದಬಲ್ಲವರು ಕೊಂಚ ಜನ. ಆದರೂ ಅದು ಸಜೀವವಾಗಿದೆ. ಅದು ಮಾನವಕುಲದ ಸಜೀವ ಭಾಷೆಗಳನ್ನು “ಆಡಲು ಕಲಿತಿ”ರುವುದರಿಂದ ಪಾರಾಗಿ ಉಳಿದಿದೆ. ಇತರ ಭಾಷೆಗಳನ್ನಾಡುವಂತೆ ಅದಕ್ಕೆ “ಕಲಿಸಿದ” ಭಾಷಾಂತರಕಾರರು ಆಗಾಗ್ಗೆ ದುಸ್ತರವೆಂದು ಕಂಡುಬಂದ ಅಡ್ಡಿತಡೆಗಳನ್ನು ಎದುರಿಸಿದರು.

ಸಾವಿರದ ನೂರಕ್ಕೂ ಹೆಚ್ಚು ಅಧ್ಯಾಯಗಳು ಮತ್ತು 31,000 ವಚನಗಳಿರುವ ಬೈಬಲನ್ನು ಭಾಷಾಂತರಿಸುವುದು ಒಂದು ಭಾವೋತ್ಪಾದಕ ಕಾರ್ಯ. ಆದರೂ, ಗತ ಶತಮಾನಗಳಲ್ಲಿ, ನಿವೇದಿತ ಭಾಷಾಂತರಕಾರರು ಈ ಪಂಥಾಹ್ವಾನವನ್ನು ಸಂತೋಷದಿಂದ ಸ್ವೀಕರಿಸಿದರು. ಅವರಲ್ಲಿ ಅನೇಕರು ತಮ್ಮ ಕೆಲಸಕ್ಕಾಗಿ ಕಷ್ಟಗಳನ್ನು ಅನುಭವಿಸಲು, ಸಾಯಲು ಸಹ ಸಿದ್ಧರಾಗಿದ್ದರು. ಬೈಬಲು ಮಾನವಕುಲದ ಭಾಷೆಗಳಿಗೆ ಹೇಗೆ ಭಾಷಾಂತರಿಸಲ್ಪಟ್ಟಿತ್ತೆಂಬುದರ ಇತಿಹಾಸವು, ಸತತ ಸಾಧನೆ ಮತ್ತು ಕಲ್ಪನಾ ಚಾತುರ್ಯದ ಗಮನಾರ್ಹವಾದ ವೃತ್ತಾಂತವಾಗಿದೆ. ಆ ಆಕರ್ಷಕ ದಾಖಲೆಯ ಒಂದು ಚಿಕ್ಕ ಭಾಗವನ್ನು ಮಾತ್ರ ಪರಿಗಣಿಸಿರಿ.

ಭಾಷಾಂತರಕಾರರಿಗೆ ಎದುರಾದ ಪಂಥಾಹ್ವಾನಗಳು

ಲಿಖಿತ ಲಿಪಿಯಿಲ್ಲದ ಒಂದು ಭಾಷೆಗೆ ನೀವು ಒಂದು ಗ್ರಂಥವನ್ನು ಹೇಗೆ ಭಾಷಾಂತರಿಸುವಿರಿ? ಇಂತಹದ್ದೇ ಸವಾಲನ್ನು ಅನೇಕ ಭಾಷಾಂತರಕಾರರು ಎದುರಿಸಿದರು. ದೃಷ್ಟಾಂತಕ್ಕೆ, ಸಾ.ಶ. ನಾಲ್ಕನೆಯ ಶತಮಾನದ ಉಲ್ಫಲಾಸ್‌, ಆಗ ಆಧುನಿಕವಾಗಿದ್ದರೂ ಲಿಖಿತ ಭಾಷೆಯಾಗಿರದಿದ್ದ ಗಾಥಿಕ್‌ಗೆ ಬೈಬಲನ್ನು ಭಾಷಾಂತರಿಸಲು ತೊಡಗಿದನು. ಪ್ರಧಾನವಾಗಿ ಗ್ರೀಕ್‌ ಮತ್ತು ಲ್ಯಾಟಿನ್‌ ಅಕ್ಷರಮಾಲೆಗಳ ಮೇಲೆ ಆಧಾರಿಸಿದ 27 ಅಕ್ಷರಗಳ ಗಾಥಿಕ್‌ ಅಕ್ಷರಮಾಲೆಯನ್ನು ಕಂಡುಹಿಡಿದು, ಈ ಪಂಥಾಹ್ವಾನವನ್ನು ಅವನು ಜಯಿಸಿದನು. ಹೆಚ್ಚುಕಡಮೆ ಇಡೀ ಬೈಬಲಿನ ಗಾಥಿಕ್‌ ಭಾಷೆಯ ಅವನ ಭಾಷಾಂತರವು, ಸಾ.ಶ. 381ಕ್ಕೆ ಮೊದಲು ಪೂರ್ಣಗೊಂಡಿತ್ತು.

ಒಂಬತ್ತನೆಯ ಶತಮಾನದಲ್ಲಿ, ಪ್ರಮುಖ ವಿದ್ವಾಂಸರೂ ಬಹುಭಾಷಾ ಪಂಡಿತರೂ ಆದ ಇಬ್ಬರು ಗ್ರೀಕ್‌ ಮಾತಾಡುವ ಸಹೋದರರಾಗಿದ್ದ ಸಿರಿಲ್‌ (ಮೂಲ ಹೆಸರು ಕಾನ್‌ಸ್ಟೆಂಟೈನ್‌) ಮತ್ತು ಮಥೋಡಿಯಸ್‌, ಸ್ಲಾವ್‌ ಭಾಷೆ ಮಾತಾಡುವ ಜನರಿಗಾಗಿ ಬೈಬಲನ್ನು ಭಾಷಾಂತರಿಸಬಯಸಿದರು. ಆದರೆ ಇಂದಿನ ಸ್ಲಾವ್‌ ಭಾಷೆಗಳ ಪೂರ್ವಿಕ ಭಾಷೆಯಾದ ಸ್ಲಾವೋನಿಕ್‌ಗೆ ಲಿಖಿತ ಲಿಪಿ ಇರಲಿಲ್ಲ. ಆದಕಾರಣ ಆ ಇಬ್ಬರು ಸಹೋದರರು ಬೈಬಲಿನ ಭಾಷಾಂತರವನ್ನು ತಯಾರಿಸಲಿಕ್ಕಾಗಿ ಒಂದು ಅಕ್ಷರಮಾಲೆಯನ್ನು ಕಂಡುಹಿಡಿದರು. ಹೀಗೆ, ಸ್ಲಾವ್‌ ಜಗತ್ತಿನ ಎಷ್ಟೋ ಹೆಚ್ಚು ಜನರಿಗೆ ಈಗ ಬೈಬಲು “ಮಾತಾಡ”ಶಕ್ತವಾಯಿತು.

ಹದಿನಾರನೆಯ ಶತಮಾನದಲ್ಲಿ, ವಿಲ್ಯಮ್‌ ಟಿಂಡೆಲ್‌ ಬೈಬಲನ್ನು ಮೂಲ ಭಾಷೆಗಳಿಂದ ಇಂಗ್ಲಿಷ್‌ಗೆ ಭಾಷಾಂತರಿಸಲು ಆರಂಭಿಸಿದನು. ಆದರೆ ಚರ್ಚು ಮತ್ತು ಸರಕಾರದಿಂದ—ಎರಡೂ ಕಡೆಯಿಂದ ಅವನು ಕಠಿನ ವಿರೋಧವನ್ನು ಎದುರಿಸಿದನು. ಆಕ್ಸ್‌ಫರ್ಡ್‌ ಶಿಕ್ಷಿತ ಟಿಂಡೆಲ್‌, “ನೇಗಿಲು ಹೊಡೆಯುವ ಹುಡುಗ”ನೂ ಅರ್ಥಮಾಡಿಕೊಳ್ಳಲು ಸಾಧ್ಯವಾಗುವ ಭಾಷಾಂತರವೊಂದನ್ನು ತಯಾರಿಸಬಯಸಿದನು.1 ಆದರೆ ಇದನ್ನು ಸಾಧಿಸಲು ಅವನು ಜರ್ಮನಿಗೆ ಪಲಾಯನ ಮಾಡಬೇಕಾಯಿತು. ಅಲ್ಲಿ, 1526ರಲ್ಲಿ ಅವನ ಇಂಗ್ಲಿಷ್‌ “ಹೊಸ ಒಡಂಬಡಿಕೆ” ಮುದ್ರಿಸಲ್ಪಟ್ಟಿತು. ಅದರ ಪ್ರತಿಗಳನ್ನು ಇಂಗ್ಲೆಂಡಿಗೆ ಗುಟ್ಟಾಗಿ ಒಯ್ದಾಗ, ಅಧಿಕಾರಿಗಳು ಎಷ್ಟು ಸಿಟ್ಟುಗೊಂಡರೆಂದರೆ, ಅವರು ಅವುಗಳನ್ನು ಬಹಿರಂಗವಾಗಿ ಸುಡಲಾರಂಭಿಸಿದರು. ತರುವಾಯ ಟಿಂಡೆಲ್‌ ವಂಚನಾತ್ಮಕವಾಗಿ ಸೆರೆಹಿಡಿಯಲ್ಪಟ್ಟನು. ಅವನ ಕುತ್ತಿಗೆ ಹಿಸುಕಿ ಕೊಲ್ಲುವ ಮತ್ತು ಅವನ ದೇಹವನ್ನು ಸುಡುವುದಕ್ಕೆ ಮೊದಲು, ಅವನು ಗಟ್ಟಿ ಸ್ವರದಿಂದ ಈ ಮಾತುಗಳನ್ನು ನುಡಿದನು: “ಕರ್ತನೇ, ಇಂಗ್ಲೆಂಡಿನ ಅರಸನ ಕಣ್ಣುಗಳನ್ನು ತೆರೆ!”2

ಬೈಬಲ್‌ ಭಾಷಾಂತರ ಮುಂದುವರಿಯಿತು; ಭಾಷಾಂತರಕಾರರನ್ನು ನಿಲ್ಲಿಸಸಾಧ್ಯವಾಗಲಿಲ್ಲ. ಕಡಮೆಪಕ್ಷ ಬೈಬಲಿನ ಕೆಲವು ಭಾಗಗಳಾದರೂ, 1800ರೊಳಗೆ 68 ಭಾಷೆಗಳನ್ನು “ಆಡಲು ಕಲಿತಿ”ದ್ದವು. ಬಳಿಕ, ಬೈಬಲ್‌ ಸೊಸೈಟಿಗಳ ಸ್ಥಾಪನೆಯಾದಾಗ, ವಿಶೇಷವಾಗಿ, ಬ್ರಿಟಿಷ್‌ ಆ್ಯಂಡ್‌ ಫಾರೀನ್‌ ಬೈಬಲ್‌ ಸೊಸೈಟಿ 1804ರಲ್ಲಿ ಸ್ಥಾಪನೆಯಾದಾಗ, ಬೈಬಲ್‌ ಬೇಗನೇ ಇನ್ನೂ ಹೆಚ್ಚು ಹೊಸ ಭಾಷೆಗಳನ್ನು “ಕಲಿಯಿತು.” ಅತ್ಯಧಿಕ ಸಂಖ್ಯೆಯಲ್ಲಿ ಯುವ ಪುರುಷರು, ಮಿಷನೆರಿಗಳಾಗಿ ವಿದೇಶಗಳಿಗೆ ಹೋಗಲು ಸ್ವಇಷ್ಟದಿಂದ ಒಪ್ಪಿಕೊಂಡರು. ಬೈಬಲನ್ನು ಭಾಷಾಂತರಿಸುವುದೇ ಅನೇಕರ ಪ್ರಧಾನ ಉದ್ದೇಶವಾಗಿತ್ತು.

ಆಫ್ರಿಕದ ಭಾಷೆಗಳನ್ನು ಕಲಿಯುವುದು

ಆಫ್ರಿಕದಲ್ಲಿ 1800ರಲ್ಲಿ, ಸುಮಾರು ಒಂದು ಡಜನ್‌ ಲಿಖಿತ ಭಾಷೆಗಳು ಮಾತ್ರ ಇದ್ದವು. ಇತರ ನೂರಾರು ಆಡು ಭಾಷೆಗಳು, ಯಾವನಾದರೂ ಒಂದು ಬರೆಯುವ ಪದ್ಧತಿಯನ್ನು ಕಂಡುಹಿಡಿಯುವ ವರೆಗೆ ಕಾಯಬೇಕಾಗಿತ್ತು. ಮಿಷನೆರಿಗಳು ಬಂದು, ಪ್ರಾಥಮಿಕ ಪುಸ್ತಕಗಳು ಅಥವಾ ನಿಘಂಟುಗಳ ಸಹಾಯವಿಲ್ಲದೆ ಭಾಷೆಗಳನ್ನು ಕಲಿತರು. ತರುವಾಯ ಒಂದು ಲಿಖಿತ ರೂಪವನ್ನು ವಿಕಸಿಸಲು ಅವರು ಶ್ರಮಪಟ್ಟರು ಮತ್ತು ತದನಂತರ ಈ ಲಿಪಿಯನ್ನು ಹೇಗೆ ಓದುವುದೆಂಬುದನ್ನು ಅವರು ಜನರಿಗೆ ಕಲಿಸಿದರು. ಯಾವುದಾದರೊಂದು ದಿನ ಜನರು ಬೈಬಲನ್ನು ತಮ್ಮ ಸ್ವಂತ ಭಾಷೆಯಲ್ಲಿ ಓದಸಾಧ್ಯವಾಗುವ ಉದ್ದೇಶದಿಂದ ಅವರು ಹಾಗೆ ಮಾಡಿದರು.3

ಅಂತಹ ಒಬ್ಬ ಮಿಷನೆರಿಯು ಸ್ಕಾಟ್ಲೆಂಡಿನ ರಾಬರ್ಟ್‌ ಮಾಫಟ್‌. 1821ರಲ್ಲಿ, ತನ್ನ 25ನೆಯ ವಯಸ್ಸಿನಲ್ಲಿ, ಅವನು ಆಫ್ರಿಕದ ದಕ್ಷಿಣಭಾಗದಲ್ಲಿ ಟ್ಸ್ವಾನ ಭಾಷೆಯನ್ನು ಆಡುವ ಜನರ ಮಧ್ಯೆ ಒಂದು ಧರ್ಮ ಪ್ರಚಾರಕ ಸಂಸ್ಥೆ (ಮಿಷನ್‌)ಯನ್ನು ಸ್ಥಾಪಿಸಿದನು. ಅವರ ಅಲಿಖಿತ ಭಾಷೆಯನ್ನು ಕಲಿಯಲಿಕ್ಕಾಗಿ, ಅವನು ಆ ಜನರೊಂದಿಗೆ ಬೆರೆತುಕೊಂಡು, ಆಗಾಗ್ಗೆ ಅವರ ಮಧ್ಯೆ ಜೀವಿಸಲು ಒಳಪ್ರದೇಶಗಳಿಗೂ ಪ್ರಯಾಣಮಾಡಿದನು. ತರುವಾಯ ಅವನು ಬರೆದುದು: “ಜನರು ದಯಾಪರರಾಗಿದ್ದರು ಮತ್ತು ನನ್ನ ಭಾಷಾ ಪ್ರಮಾದಗಳು ಅನೇಕ ಬಾರಿ ಅವರು ಗೊಳ್ಳೆಂದು ನಗುವಂತೆ ಮಾಡಿದವು. ಎಂದೂ ಅವರು ಒಂದು ಪದವನ್ನು ಅಥವಾ ವಾಕ್ಯವನ್ನು, ಅವನೊ ಅವಳೊ ನನ್ನ ಮಾತನ್ನು ಅತಿ ಪರಿಣಾಮಕಾರಿಯಾಗಿ ಅನುಕರಿಸಿ, ಇತರರಿಗೆ ಮಹಾ ವಿನೋದವನ್ನು ಕೊಡುವ ತನಕ, ಒಮ್ಮೆಯೂ ತಿದ್ದಲಿಲ್ಲ.”4 ಮಾಫಟ್‌ ಸತತ ಸಾಧನೆಮಾಡಿ, ಕೊನೆಗೆ ಆ ಭಾಷೆಯ ಪೂರ್ಣಾನುಭವಪಡೆದು, ಅದಕ್ಕೆ ಒಂದು ಲಿಖಿತ ರೂಪವನ್ನು ವಿಕಸಿಸಿದನು.

ಎಂಟು ವರ್ಷಗಳ ವರೆಗೆ ಟ್ಸ್ವಾನ ಜನರ ಮಧ್ಯೆ ಕೆಲಸಮಾಡಿದ ಬಳಿಕ, 1829ರಲ್ಲಿ, ಮಾಫಟ್‌ ಲೂಕನ ಸುವಾರ್ತೆಯ ಭಾಷಾಂತರವನ್ನು ಮುಗಿಸಿದನು. ಅದನ್ನು ಮುದ್ರಿಸುವರೆ, ಅವನು ಕರಾವಳಿ ಪ್ರದೇಶಕ್ಕೆ ಎತ್ತಿನ ಗಾಡಿಯ ಮೇಲೆ 900 ಕಿಲೊಮೀಟರ್‌ಗಳಷ್ಟು ದೂರ ಪಯಣಿಸಿ, ಅಲ್ಲಿಂದ ಕೇಪ್‌ ಟೌನಿಗೆ ಒಂದು ಹಡಗು ಹಿಡಿದನು. ಅಲ್ಲಿ ಗವರ್ನರರು ಸರಕಾರಿ ಮುದ್ರಣಾಲಯವನ್ನು ಉಪಯೋಗಿಸುವರೆ ಅವನಿಗೆ ಅನುಮತಿ ಕೊಟ್ಟರೂ ಮಾಫಟ್‌ ತಾನೇ ಅಚ್ಚುಮೊಳೆಗಳನ್ನು ಕ್ರಮಪಡಿಸಿ ಅದನ್ನು ತಾನೇ ಮುದ್ರಿಸಬೇಕಾಗಿತ್ತು. ಕೊನೆಗೆ 1830ರಲ್ಲಿ ಅವನು ಆ ಸುವಾರ್ತೆಯ ಪುಸ್ತಕವನ್ನು ಪ್ರಕಟಿಸಿದನು. ಪ್ರಥಮ ಬಾರಿ, ಟ್ಸ್ವಾನದ ಜನರು ತಮ್ಮ ಸ್ವಂತ ಭಾಷೆಯಲ್ಲಿ ಬೈಬಲಿನ ಒಂದು ಭಾಗವನ್ನು ಓದಸಾಧ್ಯವಿತ್ತು. 1857ರಲ್ಲಿ, ಮಾಫಟ್‌ ಇಡೀ ಬೈಬಲನ್ನು ಟ್ಸ್ವಾನ ಭಾಷೆಗೆ ಭಾಷಾಂತರಿಸುವ ಕೆಲಸವನ್ನು ಮಾಡಿಮುಗಿಸಿದನು.

ಲೂಕನ ಸುವಾರ್ತೆಯ ಪುಸ್ತಕವು ಮೊದಲನೆಯ ಬಾರಿ ಅವರಿಗೆ ದೊರಕಿದಾಗ ಟ್ಸ್ವಾನ ಜನರು ತೋರಿಸಿದ ಪ್ರತಿಕ್ರಿಯೆಯನ್ನು ಮಾಫಟ್‌ ತರುವಾಯ ವರ್ಣಿಸಿದನು. ಅವನು ಗಮನಿಸಿದ್ದು: “ಸಂತ ಲೂಕನ ಪ್ರತಿಗಳನ್ನು ಪಡೆದುಕೊಳ್ಳಲಿಕ್ಕಾಗಿ ನೂರಾರು ಮೈಲು ಪಯಣಿಸಿ ಬಂದ ವ್ಯಕ್ತಿಗಳ ಕುರಿತು ನನಗೆ ತಿಳಿದಿದೆ. . . . ಅವರು ಸಂತ ಲೂಕನ ಸುವಾರ್ತೆಯ ಭಾಗಗಳನ್ನು ಪಡೆದು, ಅವುಗಳಿಗಾಗಿ ಅತ್ತು, ಅವನ್ನು ತಮ್ಮ ಎದೆಗಳಿಗಪ್ಪಿ ಹಿಡಿಯುತ್ತ, ನಾನು ಅನೇಕರಿಗೆ, ‘ನಿಮ್ಮ ಪುಸ್ತಕಗಳನ್ನು ನೀವು ಕಣ್ಣೀರಿಂದ ಹಾಳುಮಾಡುವಿರಿ’ ಎಂದು ಹೇಳುವ ತನಕ, ಕೃತಜ್ಞತೆಯ ಕಣ್ಣೀರನ್ನು ಸುರಿಸುವುದನ್ನು ನಾನು ನೋಡಿದ್ದೇನೆ.”5

ಈ ರೀತಿಯಲ್ಲಿ ಮಾಫಟನಂತಹ ನಿವೇದಿತ ಭಾಷಾಂತರಕಾರರು, ಅನೇಕ ಆಫ್ರಿಕನರಿಗೆ—ಯಾರಲ್ಲಿ ಕೆಲವರು ಲಿಖಿತ ಭಾಷೆಯ ಅಗತ್ಯವನ್ನು ಆದಿಯಲ್ಲಿ ನೋಡಲಿಲ್ಲವೊ ಅಂತಹವರಿಗೆ—ಬರೆದು ಸಂವಾದ ಮಾಡುವ ಪ್ರಥಮ ಸಂದರ್ಭವನ್ನು ಕೊಟ್ಟರು. ಆದರೆ ಭಾಷಾಂತರಕಾರರು, ತಾವು ಆಫ್ರಿಕದ ಜನರಿಗೆ ಅದಕ್ಕಿಂತಲೂ ಹೆಚ್ಚು ಅಮೂಲ್ಯವಾದ ಕೊಡುಗೆಯನ್ನು—ಅವರ ಸ್ವಂತ ಭಾಷೆಯಲ್ಲಿ ಬೈಬಲನ್ನು—ಕೊಡುತ್ತಿದ್ದೇವೆಂದು ಅಭಿಪ್ರಯಿಸಿದರು. ಇಂದು ಬೈಬಲು, ಪೂರ್ತಿಯಾಗಿ ಅಥವಾ ಆಂಶಿಕವಾಗಿ ಆಫ್ರಿಕದವರ 600ಕ್ಕೂ ಹೆಚ್ಚು ಭಾಷೆಗಳನ್ನು “ಆಡುತ್ತದೆ.”

ಏಷಿಯದ ಭಾಷೆಗಳನ್ನು ಕಲಿಯುವುದು

ಭಾಷಾಂತರಕಾರರು ಆಫ್ರಿಕದಲ್ಲಿ ಆಡುಭಾಷೆಗಳಿಗೆ ಲಿಖಿತ ರೂಪಗಳನ್ನು ವಿಕಸಿಸಲು ಹೋರಾಡಿದಾಗ, ಜಗತ್ತಿನ ಇನ್ನೊಂದು ಬದಿಯಲ್ಲಿ, ಇತರ ಭಾಷಾಂತರಕಾರರು ತೀರ ಭಿನ್ನವಾದ ಒಂದು ತಡೆಯನ್ನು ಎದುರಿಸಿದರು. ಈಗಾಗಲೇ ಜಟಿಲವಾದ ಲಿಪಿಗಳಿದ್ದ ಭಾಷೆಗಳಿಗೆ ಭಾಷಾಂತರಿಸುವುದು ಆ ತಡೆಯಾಗಿತ್ತು. ಏಷಿಯದ ಭಾಷೆಗಳಿಗೆ ಬೈಬಲನ್ನು ಭಾಷಾಂತರಿಸುವವರನ್ನು ಎದುರಿಸಿದ ಪಂಥಾಹ್ವಾನವು ಈ ರೀತಿಯದ್ದಾಗಿತ್ತು.

ಹತ್ತೊಂಬತ್ತನೆಯ ಶತಮಾನದ ಆದಿಯಲ್ಲಿ, ವಿಲ್ಯಮ್‌ ಕ್ಯಾರಿ ಮತ್ತು ಜಾಷುವ ಮಾರ್ಶ್‌ಮನ್‌, ಭಾರತಕ್ಕೆ ಹೋಗಿ, ಅದರ ಅನೇಕ ಲಿಖಿತ ಭಾಷೆಗಳ ಪರಿಣತಿಯನ್ನು ಪಡೆದರು. ವಿಲ್ಯಮ್‌ ವಾರ್ಡ್‌ ಎಂಬ ಮುದ್ರಕನ ಸಹಾಯದಿಂದ, ಅವರು ಕಡಮೆಪಕ್ಷ ಬೈಬಲಿನ ಭಾಗಗಳ ಭಾಷಾಂತರಗಳನ್ನಾದರೂ ಸುಮಾರು 40 ಭಾಷೆಗಳಲ್ಲಿ ತಯಾರಿಸಿದರು.6 ವಿಲ್ಯಮ್‌ ಕ್ಯಾರಿಯ ಸಂಬಂಧದಲ್ಲಿ, ಗ್ರಂಥಕರ್ತರಾದ ಜೆ. ಹರ್ಬರ್ಟ್‌ ಕೇನ್‌ ವಿವರಿಸುವುದು: “ಅವನು [ಬಂಗಾಲಿ ಭಾಷೆಯ] ಹಳೆಯ ಸಾಹಿತ್ಯಾತ್ಮಕ ರೂಪದ ಬದಲಿಗೆ, ಸೊಗಸಾದ, ಸರಾಗವಾಗಿ ಹರಿಯುವ ಆಡುಮಾತಿನ ಶೈಲಿಯನ್ನು ಕಂಡುಹಿಡಿದು, ಈ ಮೂಲಕ ಆಧುನಿಕ ವಾಚಕರಿಗೆ ಅದು ಹೆಚ್ಚು ಗ್ರಾಹ್ಯವಾಗುವಂತೆ ಮತ್ತು ಆಕರ್ಷಕವಾಗುವಂತೆ ಮಾಡಿದನು.”7

ಅಮೆರಿಕದಲ್ಲಿ ಹುಟ್ಟಿ ಬೆಳೆದ ಆ್ಯಡನೈರಮ್‌ ಜಡ್ಸನ್‌, ಬರ್ಮಕ್ಕೆ ಪಯಣಿಸಿ, 1817ರಲ್ಲಿ ಬೈಬಲನ್ನು ಬರ್ಮೀಸ್‌ ಭಾಷೆಗೆ ಭಾಷಾಂತರಿಸತೊಡಗಿದನು. ಬೈಬಲನ್ನು ಭಾಷಾಂತರಿಸಲು ಅಗತ್ಯವಿರುವಷ್ಟರ ಮಟ್ಟಿಗೆ ಪ್ರಾಚ್ಯ ಭಾಷೆಯೊಂದರ ಪರಿಣತಿಯನ್ನು ಪಡೆಯುವ ಕಷ್ಟವನ್ನು ವಿವರಿಸುತ್ತ ಅವನು ಬರೆದುದು: ‘ಯಾರ ಯೋಚನೆಗಳು ನಮ್ಮ ಯೋಚನೆಗಳಿಗೆ ವಿಭಿನ್ನವಾದ ನಮೂನೆಯಲ್ಲಿವೆಯೊ, ಮತ್ತು ಈ ಕಾರಣದಿಂದ ಯಾರ ಭಾಷಾ ಅಭಿವ್ಯಕ್ತಿಗಳೆಲ್ಲ ಹೊಸದಾಗಿವೆಯೊ, ಮತ್ತು ಯಾವುದರ ಅಕ್ಷರಗಳೂ ಪದಗಳೂ ನಮಗೆ ಗೊತ್ತಿರುವ ಯಾವುದೇ ಭಾಷೆಗೆ ಪೂರ್ತಿ ಹೋಲಿಕೆಯಿಲ್ಲದವುಗಳಾಗಿವೆಯೊ ಅಂತಹ, ಭೂಮಿಯ ಇನ್ನೊಂದು ಪಕ್ಕದಲ್ಲಿರುವ ಜನರು ಮಾತಾಡುವ ಭಾಷೆಯನ್ನು ಕಲಿಯುವಾಗ, ನಿಘಂಟು ಅಥವಾ ಅರ್ಥನಿರೂಪಕನು ಇಲ್ಲದಿದ್ದು, ದೇಶೀ ಶಿಕ್ಷಕನ ಸಹಾಯವನ್ನು ಪಡೆದುಕೊಳ್ಳುವ ಮೊದಲು ನಾವು ಭಾಷೆಯನ್ನು ಸ್ವಲ್ಪ ಅರ್ಥಮಾಡಿಕೊಳ್ಳಬೇಕಾಗಿರುವಾಗ—ಅದು ತುಂಬ ಪರಿಶ್ರಮವನ್ನು ಕೇಳಿಕೊಳ್ಳುತ್ತದೆ!’8

ಜಡ್ಸನನ ಸಂಬಂಧದಲ್ಲಿ, ಅದು ಸುಮಾರು 18 ವರ್ಷಗಳ ಶ್ರಮದಾಯಕ ಕೆಲಸವಾಗಿತ್ತು. ಬರ್ಮೀಸ್‌ ಬೈಬಲಿನ ಕೊನೆಯ ಭಾಗವು 1835ರಲ್ಲಿ ಮುದ್ರಿಸಲ್ಪಟ್ಟಿತು. ಆದರೂ ಅವನು ಬರ್ಮದಲ್ಲಿ ಉಳಿದುಕೊಂಡದ್ದು, ಅವನಿಗೆ ತುಂಬ ಕಷ್ಟಾನುಭವಗಳನ್ನು ತಂದಿತು. ಅವನು ಭಾಷಾಂತರದ ಕೆಲಸ ಮಾಡುತ್ತಿದ್ದಾಗ, ಅವನು ಗೂಢಚಾರನ ಕೆಲಸವನ್ನು ಮಾಡುತ್ತಿದ್ದಾನೆಂಬ ಅಪವಾದ ಅವನ ಮೇಲೆ ಬಂದ ಕಾರಣ, ಅವನು ಎರಡು ವರ್ಷಗಳನ್ನು ಸೊಳ್ಳೆಪೀಡಿತ ಸೆರೆಮನೆಯಲ್ಲಿ ಕಳೆದನು. ಅವನ ಬಿಡುಗಡೆಯಾದ ಮೇಲೆ ಸ್ವಲ್ಪದರಲ್ಲಿ, ಅವನ ಹೆಂಡತಿಯೂ ಚಿಕ್ಕ ಮಗಳೂ ಜ್ವರದಿಂದ ಸತ್ತರು.

1807ರಲ್ಲಿ ಇಪ್ಪತ್ತೈದು ವರ್ಷ ಪ್ರಾಯದ ರಾಬರ್ಟ್‌ ಮಾರಿಸನ್‌ ಚೀನಕ್ಕೆ ಬಂದಾಗ, ಅತ್ಯಂತ ಜಟಿಲವಾದ ಲಿಖಿತ ಭಾಷೆಗಳಲ್ಲಿ ಒಂದಾದ ಚೈನೀಸ್‌ ಭಾಷೆಗೆ ಬೈಬಲನ್ನು ಭಾಷಾಂತರಿಸುವ ವಿಪರೀತ ಕಷ್ಟಕರವಾದ ಕೆಲಸವನ್ನು ಅವನು ವಹಿಸಿಕೊಂಡನು. ಅವನಿಗೆ ಚೈನೀಸ್‌ ಭಾಷೆಯ ಸೀಮಿತ ಜ್ಞಾನವಷ್ಟೇ ಇತ್ತು. ಅದನ್ನು ಅವನು ಎರಡೇ ವರ್ಷಗಳ ಮೊದಲು ಅಭ್ಯಸಿಸಲು ಆರಂಭಿಸಿದ್ದನು. ಚೀನದ ಪ್ರತ್ಯೇಕತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿದ ಚೀನದ ಕಾಯಿದೆಗಳ ವಿರುದ್ಧವಾಗಿಯೂ ಮಾರಿಸನ್‌ ಹೆಣಗಾಡಬೇಕಾಗಿತ್ತು. ವಿದೇಶಿಯರಿಗೆ ಭಾಷೆಯನ್ನು ಕಲಿಸುವುದು, ಚೀನೀಯರಿಗೆ ಮರಣ ದಂಡನೆ ವಿಧಿಸುವ ನಿಷೇಧಾಜ್ಞೆಯ ಕೆಳಗಿತ್ತು. ವಿದೇಶಿಯೊಬ್ಬನು ಬೈಬಲನ್ನು ಚೈನೀಸ್‌ ಭಾಷೆಗೆ ಭಾಷಾಂತರಿಸುವುದು ಮರಣದಂಡನಾರ್ಹವಾಗಿತ್ತು.

ಎದೆಗುಂದದಿದ್ದರೂ ಎಚ್ಚರಿಕೆಯಿಂದ, ಮಾರಿಸನ್‌ ಭಾಷೆಯನ್ನು ಶೀಘ್ರವಾಗಿ ಕಲಿಯುತ್ತಾ, ಅದನ್ನು ಅಭ್ಯಸಿಸುವುದನ್ನು ಮುಂದುವರಿಸಿದನು. ಎರಡು ವರ್ಷಗಳೊಳಗೆ, ಅವನು ಈಸ್ಟ್‌ ಇಂಡಿಯ ಕಂಪೆನಿಯ ಭಾಷಾಂತರಕಾರನಾಗಿ ಉದ್ಯೋಗವನ್ನು ಪಡೆದುಕೊಂಡನು. ಹಗಲಿನಲ್ಲಿ ಅವನು ಕಂಪೆನಿಯ ಕೆಲಸ ಮಾಡಿದರೂ, ಗುಟ್ಟಾಗಿ ಮತ್ತು ಸತತವಾಗಿ ಪತ್ತೆಹಚ್ಚಲ್ಪಡುವ ಬೆದರಿಕೆಯಿಂದ ಬೈಬಲ್‌ ಭಾಷಾಂತರದ ಕೆಲಸಮಾಡಿದನು. ಚೀನಕ್ಕೆ ಬಂದು ಏಳು ವರ್ಷಗಳ ಬಳಿಕ, 1814ರಲ್ಲಿ, ಕ್ರೈಸ್ತ ಗ್ರೀಕ್‌ ಬರವಣಿಗೆಗಳು ಮುದ್ರಣಕ್ಕೆ ಸಿದ್ಧವಾಗಿ ಅವನಲ್ಲಿದ್ದವು.9 ಐದು ವರ್ಷಗಳ ಬಳಿಕ, ವಿಲ್ಯಮ್‌ ಮಿಲ್ನ್‌ ಎಂಬವನ ಸಹಾಯದಿಂದ ಅವನು ಹೀಬ್ರು ಶಾಸ್ತ್ರಗಳನ್ನು ಮುಗಿಸಿದನು.

ಇದೊಂದು ಮಹತ್ತಾದ ಸಾಧನೆಯಾಗಿತ್ತು. ಜಗತ್ತಿನಲ್ಲಿ ಇನ್ನಿತರ ಯಾವುದೇ ಭಾಷೆಗಿಂತಲೂ ಹೆಚ್ಚು ಜನರಿಂದ ಉಪಯೋಗಿಸಲ್ಪಡುವ ಭಾಷೆಯನ್ನು ಈಗ ಬೈಬಲು “ಆಡ”ಸಾಧ್ಯವಿತ್ತು. ಸಮರ್ಥ ಭಾಷಾಂತರಕಾರರ ಪರಿಣಾಮವಾಗಿ, ಏಷಿಯದ ಇತರ ಭಾಷೆಗಳಲ್ಲಿ ಭಾಷಾಂತರಗಳು ಬಂದವು. ಇಂದು, ಬೈಬಲಿನ ಭಾಗಗಳು ಏಷಿಯದ 500ಕ್ಕೂ ಹೆಚ್ಚು ಭಾಷೆಗಳಲ್ಲಿ ದೊರೆಯುತ್ತವೆ.

ಟಿಂಡೆಲ್‌, ಮಾಫಟ್‌, ಜಡ್ಸನ್‌ ಮತ್ತು ಮಾರಿಸನ್‌ನಂತಹ ಪುರುಷರು, ತಮಗೆ ಪರಿಚಯವಿಲ್ಲದಿದ್ದ ಜನರಿಗಾಗಿ ಮತ್ತು ಕೆಲವು ಸಂದರ್ಭಗಳಲ್ಲಿ, ಲಿಖಿತ ಭಾಷೆಯೇ ಇಲ್ಲದಿದ್ದ ಜನರಿಗಾಗಿ ಒಂದು ಗ್ರಂಥವನ್ನು ಭಾಷಾಂತರಿಸಲು ವರ್ಷಗಟ್ಟಲೆ ಶ್ರಮವಹಿಸಿದ್ದು—ಕೆಲವರು ತಮ್ಮ ಪ್ರಾಣಗಳನ್ನೂ ಅಪಾಯಕ್ಕೊಡ್ಡಿದ್ದು—ಏಕೆ? ಘನತೆಗಾಗಿ ಅಥವಾ ಆರ್ಥಿಕ ಲಾಭಕ್ಕಾಗಿ ಅಲ್ಲ ಎಂಬುದು ನಿಶ್ಚಯ. ಬೈಬಲು ದೇವರ ವಾಕ್ಯವೆಂದು ಮತ್ತು ಅದು ಜನರಿಗೆ—ಎಲ್ಲ ಜನರಿಗೆ—ಅವರ ಸ್ವಂತ ಭಾಷೆಯಲ್ಲಿ “ಮಾತಾಡ”ಬೇಕೆಂದು ಅವರು ನಂಬಿದರು.

ಬೈಬಲು ದೇವರ ವಾಕ್ಯವೆಂದು ನಿಮಗನಿಸಲಿ, ಅನಿಸದಿರಲಿ, ಆ ನಿವೇದಿತ ಭಾಷಾಂತರಕಾರರು ತೋರಿಸಿದ ಆತ್ಮತ್ಯಾಗದ ಮನೋಭಾವವು, ಇಂದಿನ ಜಗತ್ತಿನಲ್ಲಿ ತೀರ ವಿರಳವೆಂದು ನೀವು ಒಪ್ಪುವಿರಿ. ಇಂತಹ ನಿಸ್ವಾರ್ಥತೆಯನ್ನು ಪ್ರೇರಿಸುವ ಒಂದು ಗ್ರಂಥವು ತನಿಖೆಗೆ ಯೋಗ್ಯವಾಗಿರುವುದಿಲ್ಲವೊ?

[ಪುಟ 12 ರಲ್ಲಿರುವ ಚಿತ್ರ]

(For fully formatted text, see publication)

1800ರಿಂದ ಬೈಬಲಿನ ಭಾಗಗಳು ಮುದ್ರಿಸಲ್ಪಟ್ಟಿರುವ ಭಾಷೆಗಳ ಸಂಖ್ಯೆ

68 107 171 269 367 522 729 971 1,199 1,762 2,123

1800 1900 1995

[ಪುಟ 21 ರಲ್ಲಿರುವ ಚಿತ್ರ]

ಟಿಂಡೆಲ್‌ ಬೈಬಲನ್ನು ಭಾಷಾಂತರಿಸುತ್ತಿರುವುದು

[ಪುಟ 22 ರಲ್ಲಿರುವ ಚಿತ್ರ]

ರಾಬರ್ಟ್‌ ಮಾಫಟ್‌

[ಪುಟ 23 ರಲ್ಲಿರುವ ಚಿತ್ರ]

ಆ್ಯಡನೈರಮ್‌ ಜಡ್ಸನ್‌

[ಪುಟ 24 ರಲ್ಲಿರುವ ಚಿತ್ರ]

ರಾಬರ್ಟ್‌ ಮಾರಿಸನ್‌