ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 12

“ದೇವರಲ್ಲಿ ಅನ್ಯಾಯ ಉಂಟೋ?”

“ದೇವರಲ್ಲಿ ಅನ್ಯಾಯ ಉಂಟೋ?”

1. ಅನ್ಯಾಯದ ಘಟನೆಗಳು ನಮ್ಮನ್ನು ಹೇಗೆ ಪ್ರಭಾವಿಸಬಹುದು?

ಒಬ್ಬ ವೃದ್ಧ ವಿಧವೆಯು ಜೀವನವಿಡೀ ಉಳಿತಾಯಮಾಡಿದ್ದ ಹಣವನ್ನು ಮೋಸದಿಂದ ಲಪಟಾಯಿಸಲಾಗುತ್ತದೆ. ಕಲ್ಲೆದೆಯ ತಾಯಿಯೊಬ್ಬಳು ತನ್ನ ನಿಸ್ಸಹಾಯಕ ಕಂದನನ್ನು ತೊರೆದುಬಿಡುತ್ತಾಳೆ. ತಾನು ಮಾಡದೆ ಇದ್ದ ಅಪರಾಧಕ್ಕಾಗಿ ಒಬ್ಬ ವ್ಯಕ್ತಿಯನ್ನು ಜೈಲಿಗೆ ಹಾಕಲಾಗುತ್ತದೆ. ಇದೆಲ್ಲವನ್ನೂ ಕೇಳಿ, ನೀವು ಹೇಗೆ ಪ್ರತಿಕ್ರಿಯಿಸುತ್ತೀರಿ? ಇದರಲ್ಲಿ ಪ್ರತಿಯೊಂದು ಘಟನೆಯೂ ನಿಮ್ಮ ಮನಸ್ಸನ್ನು ಕಲಕಿರಬಹುದು, ಮತ್ತು ಹಾಗಾಗುವುದು ಸಹಜವೇ. ಏಕೆಂದರೆ ಸರಿ ಮತ್ತು ತಪ್ಪಿನ ಕುರಿತಾದ ಬಲವಾದ ಪ್ರಜ್ಞೆ ಮಾನವರಾದ ನಮಗಿದೆ. ಯಾವುದಾದರೂ ಅನ್ಯಾಯವಾದಾಗ ನಾವು ಕೆರಳಿಬಿಡುತ್ತೇವೆ. ಅನ್ಯಾಯವಾದ ವ್ಯಕ್ತಿಗೆ ನಷ್ಟಭರ್ತಿಯಾಗಬೇಕು ಮತ್ತು ಅನ್ಯಾಯಮಾಡಿದವನಿಗೆ ಶಿಕ್ಷೆಯಾಗಬೇಕೆಂದೂ ನಾವು ಬಯಸುತ್ತೇವೆ. ಹಾಗಾಗದಿರುವಾಗ, ‘ದೇವರಿಗೆ ಇದೆಲ್ಲ ಕಾಣುವುದಿಲ್ಲವೆ? ಆತನೇಕೆ ಏನೂ ಮಾಡುವುದಿಲ್ಲ?’ ಎಂದು ನಾವು ಯೋಚಿಸುತ್ತೇವೆ.

2. ಹಬಕ್ಕೂಕನು ಅನ್ಯಾಯಕ್ಕೆ ಹೇಗೆ ಪ್ರತಿವರ್ತಿಸಿದನು, ಮತ್ತು ಅದಕ್ಕಾಗಿ ಯೆಹೋವನು ಅವನನ್ನು ಟೀಕಿಸಲಿಲ್ಲವೇಕೆ?

2 ಇದೇ ರೀತಿಯ ಪ್ರಶ್ನೆಗಳನ್ನು ಇತಿಹಾಸದಾದ್ಯಂತ ಯೆಹೋವನ ನಂಬಿಗಸ್ತ ಸೇವಕರು ಕೇಳಿದ್ದಾರೆ. ದೃಷ್ಟಾಂತಕ್ಕಾಗಿ, ಪ್ರವಾದಿ ಹಬಕ್ಕೂಕನು ದೇವರಿಗೆ ಪ್ರಾರ್ಥಿಸಿದ್ದು: “ಇಂಥ ಭಯಂಕರ ಅನ್ಯಾಯವು ನನ್ನ ಕಣ್ಣಿಗೆ ಬೀಳುವಂತೆ ಏಕೆ ಮಾಡುತ್ತೀ? ಹಿಂಸಾಚಾರ, ನಿಯಮರಾಹಿತ್ಯ, ಅಪರಾಧ ಮತ್ತು ಕ್ರೂರತನವು ಎಲ್ಲೆಡೆಯೂ ಹಬ್ಬುವಂತೆ ಏಕೆ ಅನುಮತಿಸುತ್ತೀ?” (ಹಬಕ್ಕೂಕ 1:​3, ಕಂಟೆಂಪರರಿ ಇಂಗ್ಲಿಷ್‌ ವರ್ಷನ್‌) ಹಬಕ್ಕೂಕನ ಈ ನೇರವಾದ ಪ್ರಶ್ನೆಗಳನ್ನು ಯೆಹೋವನು ಟೀಕಿಸಲಿಲ್ಲ, ಯಾಕಂದರೆ ನ್ಯಾಯದ ಪರಿಕಲ್ಪನೆಯನ್ನು ಮಾನವರಲ್ಲಿ ಬೇರೂರಿಸಿದವನು ಆತನೇ. ಹೌದು, ಯೆಹೋವನಿಗಿರುವ ನ್ಯಾಯದ ಗಾಢವಾದ ಪ್ರಜ್ಞೆಯಲ್ಲಿ ಆತನು ಸ್ವಲ್ಪಾಂಶವನ್ನು ನಮಗೂ ದಯಪಾಲಿಸಿರುತ್ತಾನೆ.

ಯೆಹೋವನು ಅನ್ಯಾಯವನ್ನು ಹಗೆಮಾಡುತ್ತಾನೆ

3. ನಮಗಿಂತಲೂ ಹೆಚ್ಚಾಗಿ ಯೆಹೋವನಿಗೆ, ನಡೆಯುತ್ತಿರುವ ಅನ್ಯಾಯದ ಬಗ್ಗೆ ಅರಿವಿದೆಯೆಂದು ಹೇಳಸಾಧ್ಯವಿದೆ ಏಕೆ?

3 ನಡೆಯುತ್ತಿರುವ ಅನ್ಯಾಯದ ಬಗ್ಗೆ ಯೆಹೋವನಿಗೆ ತಿಳಿದಿಲ್ಲವೆಂದೇನಿಲ್ಲ. ಏನೇನು ನಡೆಯುತ್ತಿದೆಯೊ ಅದೆಲ್ಲವೂ ಆತನಿಗೆ ಕಾಣುತ್ತಿದೆ. ನೋಹನ ದಿನಗಳ ಕುರಿತು ಬೈಬಲು ನಮಗನ್ನುವದು: “ಮನುಷ್ಯರ ಕೆಟ್ಟತನವು ಭೂಮಿಯ ಮೇಲೆ ಹೆಚ್ಚಾಗಿರುವದನ್ನೂ ಅವರು ಹೃದಯದಲ್ಲಿ ಯೋಚಿಸುವದೆಲ್ಲವು ಯಾವಾಗಲೂ ಬರೀ ಕೆಟ್ಟದ್ದಾಗಿರುವದನ್ನೂ ಯೆಹೋವನು ನೋಡಿ”ದನು. (ಆದಿಕಾಂಡ 6:5) ಆ ಹೇಳಿಕೆಯ ತಾತ್ಪರ್ಯವನ್ನು ತುಸು ಗಮನಿಸಿರಿ. ಅನೇಕವೇಳೆ, ಅನ್ಯಾಯದ ಕುರಿತ ನಮ್ಮ ಕಲ್ಪನೆಯು ನಾವು ಕೇಳಿತಿಳಿದ ಅಥವಾ ವೈಯಕ್ತಿಕವಾಗಿ ಅನುಭವಿಸಿದ ಕೆಲವೇ ಘಟನೆಗಳ ಮೇಲೆ ಆಧಾರಿಸಿರುತ್ತದೆ. ಇದಕ್ಕೆ ತೀರ ವ್ಯತಿರಿಕ್ತವಾಗಿ, ಯೆಹೋವನಿಗೆ ಭೌಗೋಳಿಕ ಪ್ರಮಾಣದಲ್ಲಿ ನಡೆಯುತ್ತಿರುವ ಅನ್ಯಾಯದ ಬಗ್ಗೆ ತಿಳಿದಿದೆ. ಅದೆಲ್ಲವೂ ಆತನ ಕಣ್ಮುಂದೆಯೇ ನಡೆಯುತ್ತಿದೆ! ಅದಲ್ಲದೆ, ಅನ್ಯಾಯಭರಿತ ಕೃತ್ಯಗಳ ಹಿಂದಿರುವ ಭ್ರಷ್ಟ ಯೋಚನಾರೀತಿಯನ್ನೂ​—ಹೃದಯದ ಪ್ರವೃತ್ತಿಗಳನ್ನೂ​—ಆತನು ವಿವೇಚಿಸಬಲ್ಲನು.​—ಯೆರೆಮೀಯ 17:10.

4, 5. (ಎ) ಅನ್ಯಾಯಕ್ಕೆ ಒಳಗಾದವರ ಬಗ್ಗೆ ಯೆಹೋವನಿಗೆ ಕಾಳಜಿಯಿದೆಯೆಂದು ಬೈಬಲು ಹೇಗೆ ತೋರಿಸುತ್ತದೆ? (ಬಿ) ಸ್ವತಃ ಯೆಹೋವನಿಗೆ ಅನ್ಯಾಯವು ತಟ್ಟಿರುವುದು ಹೇಗೆ?

4 ಆದರೆ ಯೆಹೋವನು ಅನ್ಯಾಯವನ್ನು ಸುಮ್ಮನೆ ಗಮನಿಸುತ್ತಾ ಇರುವುದಿಲ್ಲ. ಆತನು ಅದಕ್ಕಿಂತಲೂ ಹೆಚ್ಚನ್ನು ಮಾಡುತ್ತಾನೆ. ಯಾರಿಗೆ ಅನ್ಯಾಯವಾಗಿದೆಯೊ ಅವರ ಬಗ್ಗೆ ಆತನಿಗೆ ಕಾಳಜಿಯೂ ಇದೆ. ಶತ್ರು ಜನಾಂಗಗಳು ಆತನ ಜನರನ್ನು ಕ್ರೂರವಾಗಿ ಉಪಚರಿಸಿದಾಗ, “ವೈರಿಗಳ ಹಿಂಸೆಯನ್ನು ತಾಳಲಾರದ ಇಸ್ರಾಯೇಲ್ಯರ ಗೋಳಾಟವನ್ನು ಕೇಳಿ” ಯೆಹೋವನು ವ್ಯಥೆಪಟ್ಟನು. (ನ್ಯಾಯಸ್ಥಾಪಕರು 2:18) ಅನ್ಯಾಯವನ್ನು ನೋಡಿ ನೋಡಿ ಕೆಲವರ ಹೃದಯವು ಕಲ್ಲಾಗಿಬಿಟ್ಟಿರುವುದನ್ನು ನೀವು ಗಮನಿಸಿರಬಹುದು. ಆದರೆ ಯೆಹೋವನ ವಿಷಯದಲ್ಲಿ ಹಾಗಲ್ಲ! ಸುಮಾರು 6,000 ವರ್ಷಗಳಿಂದ ಆತನು ಅನ್ಯಾಯದ ಸಂಪೂರ್ಣ ವ್ಯಾಪ್ತಿಯನ್ನು ಕಂಡಾಗ್ಯೂ, ಅದಕ್ಕಾಗಿರುವ ಆತನ ದ್ವೇಷವು ಸ್ವಲ್ಪವೂ ಕಡಿಮೆಯಾಗಿಲ್ಲ. “ಸುಳ್ಳಿನ ನಾಲಿಗೆ,” “ನಿರ್ದೋಷ ರಕ್ತವನ್ನು ಸುರಿಸುವ ಕೈ,” ಮತ್ತು “ಅಸತ್ಯವಾಡುವ ಸುಳ್ಳು ಸಾಕ್ಷಿ” ಮುಂತಾದವುಗಳು ಆತನಿಗೆ ಅಸಹ್ಯವಾಗಿವೆಯೆಂದು ಬೈಬಲು ನಮಗೆ ಭರವಸೆ ಕೊಡುತ್ತದೆ.​—ಜ್ಞಾನೋಕ್ತಿ 6:​16-19.

5 ಅನ್ಯಾಯಿಗಳಾಗಿದ್ದ ಇಸ್ರಾಯೇಲಿನ ಮುಖಂಡರನ್ನು ಯೆಹೋವನು ಕಟುವಾಗಿ ಟೀಕಿಸಿದ್ದನೆಂಬುದನ್ನೂ ಗಮನಿಸಿರಿ. “ನ್ಯಾಯವನ್ನು ಮಂದಟ್ಟುಮಾಡಿಕೊಳ್ಳುವದು ನಿಮ್ಮ ಧರ್ಮವಲ್ಲವೆ”? ಎಂದು ಅವರನ್ನು ಕೇಳಲು ಆತನು ತನ್ನ ಪ್ರವಾದಿಯನ್ನು ಪ್ರೇರಿಸಿದನು. ಅವರ ಅಧಿಕಾರದ ದುರುಪಯೋಗದ ಕುರಿತಾಗಿ ಕಣ್ಣಿಗೆ ಕಟ್ಟುವಂಥ ರೀತಿಯಲ್ಲಿ ವರ್ಣಿಸಿದ ನಂತರ, ಆ ಭ್ರಷ್ಟ ಜನರಿಗೆ ದೊರಕುವ ಫಲವನ್ನು ಯೆಹೋವನು ಮುಂತಿಳಿಸಿದನು: “ಇವರು ಯೆಹೋವನಿಗೆ ಮೊರೆಯಿಡಲು ಆತನು ಇವರಿಗೆ ಉತ್ತರಕೊಡನು; ಇವರ ನಡತೆಯ ದುಷ್ಕೃತ್ಯಗಳಿಗೆ ತಕ್ಕಹಾಗೆ ಆ ಕಾಲದಲ್ಲಿ ಇವರಿಗೆ ವಿಮುಖನಾಗುವನು.” (ಮೀಕ 3:​1-4) ಅನ್ಯಾಯದ ಬಗ್ಗೆ ಯೆಹೋವನಿಗೆ ಎಷ್ಟು ಹೇವರಿಕೆ! ಅಲ್ಲದೆ, ಆತನು ಸ್ವತಃ ಅದನ್ನು ಅನುಭವಿಸಿದ್ದಾನಲ್ಲಾ! ಸಾವಿರಾರು ವರ್ಷಗಳಿಂದ ಸೈತಾನನು ಆತನನ್ನು ಅನ್ಯಾಯವಾಗಿ ಮೂದಲಿಸುತ್ತಾ ಬಂದಿದ್ದಾನೆ. (ಜ್ಞಾನೋಕ್ತಿ 27:11) ಅಷ್ಟಲ್ಲದೆ, ‘ಯಾವ ಪಾಪವನ್ನೂ ಮಾಡದ’ ಆತನ ಕುಮಾರನು ದುಷ್ಕರ್ಮಿಯೋಪಾದಿ ಹತಿಸಲ್ಪಟ್ಟಾಗ, ಎಲ್ಲಕ್ಕಿಂತಲೂ ಅತ್ಯಂತ ಘೋರವಾದ ಆ ಅನ್ಯಾಯವು ಯೆಹೋವನಿಗೂ ತಟ್ಟಿತು. (1 ಪೇತ್ರ 2:22; ಯೆಶಾಯ 53:9) ಸ್ಪಷ್ಟವಾಗಿಯೇ, ಅನ್ಯಾಯವನ್ನು ಅನುಭವಿಸುವವರ ಪಾಡಿನ ಬಗ್ಗೆ ಯೆಹೋವನು ಅರಿವಿಲ್ಲದವನೂ ಅಲ್ಲ, ನಿರಾಸಕ್ತನೂ ಅಲ್ಲ ಎಂಬುದಂತೂ ನಿಜ.

6. ಅನ್ಯಾಯವು ಎದುರಾಗುವಾಗ ನಮ್ಮ ಪ್ರತಿಕ್ರಿಯೆ ಏನಾಗಿರಬಹುದು, ಮತ್ತು ಏಕೆ?

6 ಹೀಗಿದ್ದರೂ, ಅನ್ಯಾಯವಾಗುವುದನ್ನು ನಾವು ಸ್ವತಃ ನೋಡುವಾಗ ಅಥವಾ ನಾವೇ ಅನ್ಯಾಯಕ್ಕೆ ಗುರಿಯಾಗುವಾಗ, ತೀಕ್ಷ್ಣ ಪ್ರತಿಕ್ರಿಯೆಯನ್ನು ತೋರಿಸುವುದು ಸ್ವಾಭಾವಿಕವೇ. ನಾವು ದೇವರ ಸ್ವರೂಪದಲ್ಲಿ ಉಂಟುಮಾಡಲ್ಪಟ್ಟವರು, ಮತ್ತು ಅನ್ಯಾಯವು ಯೆಹೋವನು ಪ್ರತಿನಿಧಿಸುವಂಥ ಎಲ್ಲಾ ವಿಷಯಗಳಿಗೆ ಸಂಪೂರ್ಣ ವಿರುದ್ಧವಾಗಿದೆ. (ಆದಿಕಾಂಡ 1:27) ಹೀಗಿರುವಾಗ ದೇವರು ಅನ್ಯಾಯಕ್ಕೆ ಅನುಮತಿಕೊಟ್ಟಿರುವುದು ಏಕೆ?

ದೇವರ ಪರಮಾಧಿಕಾರದ ವಾದಾಂಶ

7. ಯೆಹೋವನ ಪರಮಾಧಿಕಾರಕ್ಕೆ ಸವಾಲೆಸೆಯಲ್ಪಟ್ಟದ್ದು ಹೇಗೆಂಬುದನ್ನು ವರ್ಣಿಸಿರಿ.

7 ಈ ಪ್ರಶ್ನೆಯ ಉತ್ತರವು ಪರಮಾಧಿಕಾರದ ವಾದಾಂಶಕ್ಕೆ ಸಂಬಂಧಿಸಿರುತ್ತದೆ. ನಾವು ನೋಡಿರುವ ಪ್ರಕಾರ, ಸೃಷ್ಟಿಕರ್ತನಿಗೆ ಭೂಮಿಯ ಮೇಲೆ ಮತ್ತು ಅದರಲ್ಲಿ ವಾಸಿಸುವವರೆಲ್ಲರ ಮೇಲೆ ಆಳುವ ಹಕ್ಕಿದೆ. (ಕೀರ್ತನೆ 24:1; ಪ್ರಕಟನೆ 4:11) ಆದರೂ ಮಾನವ ಇತಿಹಾಸದ ಆರಂಭದಲ್ಲಿ, ಯೆಹೋವನ ಪರಮಾಧಿಕಾರಕ್ಕೆ ಸವಾಲೆಸೆಯಲಾಯಿತು. ಇದು ಸಂಭವಿಸಿದ್ದು ಹೇಗೆ? ಮೊದಲನೆಯ ಮನುಷ್ಯನಾದ ಆದಾಮನು ತನ್ನ ಪರದೈಸ್‌ ಮನೆಯಲ್ಲಿನ ಒಂದು ನಿರ್ದಿಷ್ಟ ಮರದ ಹಣ್ಣನ್ನು ತಿನ್ನಬಾರದೆಂದು ಯೆಹೋವನು ಅವನಿಗೆ ಆಜ್ಞೆಯಿತ್ತನು. ಅವನು ಅವಿಧೇಯನಾದಲ್ಲಿ ಏನು? “ತಿಂದ ದಿನ ಸತ್ತೇ ಹೋಗುವಿ” ಎಂದನು ದೇವರು ಅವನಿಗೆ. (ಆದಿಕಾಂಡ 2:17) ದೇವರ ಈ ಆಜ್ಞೆಯನ್ನು ಪಾಲಿಸುವುದು, ಆದಾಮನಿಗಾಗಲಿ ಅವನ ಹೆಂಡತಿಯಾದ ಹವ್ವಳಿಗಾಗಲಿ ತುಂಬ ಕಷ್ಟಕರವಾದ ಸಂಗತಿಯಾಗಿರಲಿಲ್ಲ. ಹಾಗಿದ್ದರೂ ಈ ಆಜ್ಞೆಯ ಮೂಲಕ ದೇವರು ಅವರನ್ನು ಅನಾವಶ್ಯಕವಾಗಿ ನಿರ್ಬಂಧಿಸುತ್ತಿದ್ದಾನೆಂದು ಸೈತಾನನು ಹವ್ವಳಿಗೆ ಮನಗಾಣಿಸಿದನು. ಒಂದುವೇಳೆ ಅವಳು ಹಣ್ಣನ್ನು ತಿಂದಲ್ಲಿ ಏನಾಗಲಿತ್ತು? ಸೈತಾನನು ಹವ್ವಳಿಗೆ ನೇರವಾಗಿ ನುಡಿದದ್ದು: “ನೀವು ಹೇಗೂ ಸಾಯುವದಿಲ್ಲ; ನೀವು ಇದರ ಹಣ್ಣನ್ನು ತಿಂದಾಗಲೇ ನಿಮ್ಮ ಕಣ್ಣುಗಳು ತೆರೆಯುವವು; ನೀವು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವರಾಗುವಿರಿ.” (ಓರೆ ಅಕ್ಷರಗಳು ನಮ್ಮವು.)​—ಆದಿಕಾಂಡ 3:​1-5.

8. (ಎ) ಹವ್ವಳಿಗೆ ನುಡಿದ ಮಾತುಗಳಲ್ಲಿ ಸೈತಾನನು ಸೂಚ್ಯವಾಗಿ ತಿಳಿಸಿದ್ದೇನು? (ಬಿ) ದೇವರ ಪರಮಾಧಿಕಾರದ ಸಂಬಂಧದಲ್ಲಿ ಸೈತಾನನು ಯಾವ ಸವಾಲನ್ನೆಸೆದನು?

8 ಈ ಹೇಳಿಕೆಯಲ್ಲಿ ಸೈತಾನನು ಸೂಚ್ಯವಾಗಿ ತಿಳಿಸುತ್ತಿದ್ದದ್ದೇನಂದರೆ, ಯೆಹೋವನು ಹವ್ವಳಿಂದ ಅತ್ಯಾವಶ್ಯಕ ಮಾಹಿತಿಯನ್ನು ಬಚ್ಚಿಟ್ಟಿದ್ದಾನೆ ಮಾತ್ರವಲ್ಲ, ಅವಳಿಗೆ ಸುಳ್ಳನ್ನೂ ಹೇಳಿದ್ದಾನೆಂದೇ. ಸೈತಾನನು ತುಂಬ ಜಾಗ್ರತೆ ವಹಿಸಿ, ದೇವರು ಪರಮಾಧಿಕಾರಿಯಾಗಿದ್ದಾನೆ ಎಂಬುದರ ಬಗ್ಗೆ ಸವಾಲು ಹಾಕಲಿಲ್ಲ, ಏಕೆಂದರೆ ಅದೊಂದು ವಾಸ್ತವಾಂಶ ಆಗಿತ್ತು. ಬದಲಿಗೆ, ಆ ಪರಮಾಧಿಕಾರವು ಎಷ್ಟು ನ್ಯಾಯವಾದದ್ದಾಗಿದೆ, ಎಷ್ಟು ತಕ್ಕದ್ದಾಗಿದೆ, ಮತ್ತು ಅದೆಷ್ಟು ನೀತಿಯುತವಾಗಿದೆ ಎಂಬುದರ ಬಗ್ಗೆ ಅವನು ಸವಾಲೆಸೆದನು. ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ಯೆಹೋವನು ತನ್ನ ಪರಮಾಧಿಕಾರವನ್ನು ನೀತಿಯುತವಾಗಿ ಮತ್ತು ತನ್ನ ಪ್ರಜೆಗಳ ಹಿತಚಿಂತನೆಗಾಗಿ ಉಪಯೋಗಿಸುವುದಿಲ್ಲವೆಂದು ಅವನು ಪ್ರತಿಪಾದಿಸಿದನು.

9. (ಎ) ಆದಾಮಹವ್ವರಿಗೆ, ಅವಿಧೇಯತೆಯ ಪರಿಣಾಮವು ಏನಾಗಿತ್ತು, ಮತ್ತು ಇದು ಯಾವ ಮುಖ್ಯ ಪ್ರಶ್ನೆಗಳನ್ನು ಎಬ್ಬಿಸಿತು? (ಬಿ) ಆ ದಂಗೆಕೋರರನ್ನು ಯೆಹೋವನು ಆ ಕೂಡಲೆ ಏಕೆ ಹತಿಸಿಬಿಡಲಿಲ್ಲ?

9 ತರುವಾಯ ಆದಾಮಹವ್ವರಿಬ್ಬರೂ ನಿಷೇಧಿಸಲ್ಪಟ್ಟ ಮರದ ಹಣ್ಣನ್ನು ತಿನ್ನುವ ಮೂಲಕ ದೇವರಿಗೆ ಅವಿಧೇಯರಾದರು. ದೇವರು ವಿಧಿಸಿದ್ದ ಪ್ರಕಾರವೇ ತಮ್ಮ ಅವಿಧೇಯತೆಯಿಂದಾಗಿ ಅವರು ಮರಣ ಶಿಕ್ಷೆಯನ್ನು ಪಡೆಯಬೇಕಾಯಿತು. ಸೈತಾನನ ಸುಳ್ಳು ಕೆಲವು ಪ್ರಾಮುಖ್ಯ ಪ್ರಶ್ನೆಗಳನ್ನು ಎಬ್ಬಿಸಿತು. ಮಾನವಕುಲವನ್ನು ಆಳಲು ನಿಜವಾಗಿಯೂ ಯೆಹೋವನಿಗೆ ಹಕ್ಕಿದೆಯೆ, ಅಥವಾ ಮನುಷ್ಯನು ತನ್ನನ್ನು ತಾನೇ ಆಳಿಕೊಳ್ಳಬೇಕೋ? ಯೆಹೋವನು ತನ್ನ ಪರಮಾಧಿಕಾರವನ್ನು ಸಂಭಾವ್ಯವಾದ ಅತ್ಯುತ್ತಮ ರೀತಿಯಲ್ಲಿ ಚಲಾಯಿಸುತ್ತಾನೋ? ಯೆಹೋವನು ತನ್ನ ಸರ್ವಶಕ್ತ ಶಕ್ತಿಯನ್ನುಪಯೋಗಿಸಿ ಅಲ್ಲೇ ಆ ಕ್ಷಣದಲ್ಲೇ ಆ ದಂಗೆಕೋರರನ್ನು ಹತಿಸಬಹುದಿತ್ತು. ಆದರೆ ಸವಾಲೆಬ್ಬಿಸಲ್ಪಟ್ಟಿರುವುದು ಆತನ ಆಳಿಕೆಯ ವಿಷಯದಲ್ಲೇ ಹೊರತು ಆತನ ಶಕ್ತಿಯ ವಿಷಯದಲ್ಲಲ್ಲ. ಆದುದರಿಂದ ಆದಾಮಹವ್ವರನ್ನು ಮತ್ತು ಸೈತಾನನನ್ನು ನಾಶಗೊಳಿಸುವುದರಿಂದ ದೇವರ ಆಳಿಕೆಯ ನೀತಿಯುತತೆಯು ರುಜುವಾಗುತ್ತಿರಲಿಲ್ಲ. ಪ್ರತಿಯಾಗಿ ಅದು, ಆತನ ಆಳಿಕೆಯ ಕುರಿತು ಇನ್ನಷ್ಟು ಹೆಚ್ಚು ಪ್ರಶ್ನೆಗಳನ್ನು ಎಬ್ಬಿಸುತ್ತಿತ್ತು. ದೇವರಿಂದ ಸ್ವತಂತ್ರರಾಗಿ ಮಾನವರು ತಮ್ಮನ್ನು ಯಶಸ್ವಿಯಾಗಿ ಆಳಶಕ್ತರೋ ಇಲ್ಲವೋ ಎಂಬುದನ್ನು ತೀರ್ಮಾನಿಸುವ ಒಂದೇ ಒಂದು ಮಾರ್ಗವು, ಹೆಚ್ಚು ಸಮಯವನ್ನು ಕೊಡುವುದೇ ಆಗಿತ್ತು.

10. ಮಾನವನಾಳಿಕೆಯ ಸಂಬಂಧದಲ್ಲಿ ಇತಿಹಾಸವು ಏನನ್ನು ಪ್ರಕಟಪಡಿಸಿಯದೆ?

10 ದಾಟಿಹೋಗಿರುವ ಸಮಯವು ಏನನ್ನು ಪ್ರಕಟಪಡಿಸಿಯದೆ? ಕಳೆದ ಸಹಸ್ರ ವರ್ಷಾವಧಿಗಳಲ್ಲಿ ಜನರು ಸ್ವಯಂ ಪ್ರಭುತ್ವ, ಪ್ರಜಾಪ್ರಭುತ್ವ, ಸಮಾಜವಾದ, ಮತ್ತು ಸಮತಾವಾದ ಮುಂತಾದ ಅನೇಕ ರೀತಿಯ ಸರಕಾರಗಳನ್ನು ಪ್ರಯೋಗಿಸಿ ನೋಡಿದ್ದಾರೆ. ಅವೆಲ್ಲವುಗಳ ಒಟ್ಟು ಪರಿಣಾಮವನ್ನು ಬೈಬಲಿನ ಈ ಮುಚ್ಚುಮರೆಯಿಲ್ಲದ ಹೇಳಿಕೆಯಲ್ಲಿ ಸಾರಾಂಶಿಸಬಹುದು: “ಒಬ್ಬನು ಮತ್ತೊಬ್ಬನ ಮೇಲೆ ಅಧಿಕಾರನಡಿಸಿ ಅವನಿಗೆ ಹಾನಿಯನ್ನು” ಮಾಡಿದ್ದಾನೆ. (ಪ್ರಸಂಗಿ 8:9) ಸಕಾರಣದಿಂದಲೇ ಪ್ರವಾದಿಯಾದ ಯೆರೆಮೀಯನು ಹೇಳಿದ್ದು: “ಯೆಹೋವನೇ, ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.”​—ಯೆರೆಮೀಯ 10:23.

11. ಮಾನವಕುಲವು ಕಷ್ಟಾಪತ್ತಿಗೆ ಗುರಿಯಾಗುವಂತೆ ಯೆಹೋವನು ಬಿಟ್ಟದ್ದೇಕೆ?

11 ಮಾನವರ ಸ್ವಾತಂತ್ರ್ಯ ಇಲ್ಲವೆ ಸ್ವಯಂ ಆಡಳಿತವು ಬಹಳಷ್ಟು ಕಷ್ಟಾಪತ್ತನ್ನು ತರಲಿದೆಯೆಂದು ಯೆಹೋವನಿಗೆ ಆರಂಭದಿಂದಲೇ ಗೊತ್ತಿತ್ತು. ಹೀಗಿರಲಾಗಿ, ಈ ಅನಿವಾರ್ಯ ಪರಿಸ್ಥಿತಿಯನ್ನು ಮುಂದುವರಿಯುವಂತೆ ಬಿಟ್ಟು, ದೇವರು ಅನ್ಯಾಯ ಮಾಡಿದ್ದಾನೆಯೆ? ಖಂಡಿತವಾಗಿಯೂ ಇಲ್ಲ! ದೃಷ್ಟಾಂತಕ್ಕಾಗಿ: ಪ್ರಾಣಾಪಾಯವನ್ನು ತಂದೊಡ್ಡಿರುವ ರೋಗವೊಂದನ್ನು ಗುಣಪಡಿಸಲು ನಿಮ್ಮ ಮಗುವಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆಯೆಂದು ನೆನಸಿರಿ. ಆ ಶಸ್ತ್ರಚಿಕಿತ್ಸೆಯಿಂದಾಗಿ ನಿಮ್ಮ ಮಗುವಿಗೆ ಸ್ವಲ್ಪ ಕಷ್ಟಪಡಬೇಕಾದೀತೆಂದು ನಿಮಗೆ ಗೊತ್ತಿದೆ, ಮತ್ತು ಇದರಿಂದಾಗಿ ನಿಮ್ಮ ಎದೆ ದುಃಖದಿಂದ ಭಾರವಾಗುತ್ತದೆ. ಆದರೆ ಅದೇ ಸಮಯದಲ್ಲಿ, ನಿಮ್ಮ ಮಗು ಮುಂದಕ್ಕೆ ಉತ್ತಮ ಆರೋಗ್ಯದಿಂದಿರಲು ಆ ಚಿಕಿತ್ಸೆಯು ಸಹಾಯಮಾಡುವದೆಂದೂ ನಿಮಗೆ ತಿಳಿದಿದೆ. ತದ್ರೀತಿಯಲ್ಲಿ, ಮಾನವಾಳಿಕೆಗೆ ದೇವರು ಕೊಟ್ಟಿರುವ ಪರವಾನಗಿಯು ಸ್ಪಲ್ಪ ಸಮಯದ ತನಕ ನೋವು ಮತ್ತು ಕಷ್ಟಾನುಭವವನ್ನು ತರುವುದೆಂದು ಆತನಿಗೆ ಗೊತ್ತಿತ್ತು ಮತ್ತು ಆತನು ಅದನ್ನು ಮುಂತಿಳಿಸಿದ್ದನು ಸಹ. (ಆದಿಕಾಂಡ 3:​16-19) ಆದರೆ ಇಡೀ ಮಾನವಕುಲವು, ದಂಗೆಕೋರತನವು ಉತ್ಪಾದಿಸುವ ಕೆಟ್ಟ ಫಲದ ರುಚಿನೋಡುವಂತೆ ತಾನು ಅನುಮತಿಸಿದರೆ ಮಾತ್ರವೇ, ಬಾಳುವ ಮತ್ತು ಅರ್ಥಭರಿತವಾದ ಉಪಶಮನವು ಶಕ್ಯವೆಂದೂ ಆತನಿಗೆ ಗೊತ್ತಿತ್ತು. ಈ ರೀತಿಯಲ್ಲಿ ದೇವರ ಪರಮಾಧಿಕಾರದ ವಾದಾಂಶವು ಕಾಯಂ ಆಗಿ, ಸದಾ ಸರ್ವಕಾಲಕ್ಕೂ ಇತ್ಯರ್ಥವಾಗಸಾಧ್ಯವಿತ್ತು.

ಮನುಷ್ಯನ ಸಮಗ್ರತೆಯ ಪ್ರಶ್ನೆ

12. ಯೋಬನ ವಿಷಯದಲ್ಲಿ ದೃಷ್ಟಾಂತಿಸಲ್ಪಟ್ಟಂತೆ, ಸೈತಾನನು ಮಾನವರ ವಿರುದ್ಧವಾಗಿ ಯಾವ ಆರೋಪವನ್ನು ಒಡ್ಡಿದ್ದಾನೆ?

12 ಈ ವಿಷಯದ ಇನ್ನೊಂದು ಮುಖವೂ ಇದೆ. ದೇವರ ಆಳಿಕೆಯ ನ್ಯಾಯಪರತೆ ಮತ್ತು ನೀತಿಯುತತೆಯ ಬಗ್ಗೆ ಸವಾಲೆಸೆಯುವ ಮೂಲಕ, ಸೈತಾನನು ಯೆಹೋವನ ಪರಮಾಧಿಕಾರದ ಸಂಬಂಧದಲ್ಲಿ ಆತನನ್ನು ಮಾತ್ರ ನಿಂದಿಸಿಲ್ಲ; ಅವನು ದೇವರ ಸೇವಕರನ್ನೂ ಅವರ ಸಮಗ್ರತೆಯ ಬಗ್ಗೆ ನಿಂದಿಸಿದ್ದಾನೆ. ದೃಷ್ಟಾಂತಕ್ಕಾಗಿ ನೀತಿವಂತನಾಗಿದ್ದ ಯೋಬನ ಕುರಿತು ಸೈತಾನನು ಏನಂದನೆಂಬುದನ್ನು ಗಮನಿಸಿರಿ: “ನೀನು ಅವನಿಗೂ ಅವನ ಮನೆಗೂ ಅವನ ಎಲ್ಲಾ ಸ್ವಾಸ್ತ್ಯಕ್ಕೂ ಸುತ್ತುಮುತ್ತಲು ಬೇಲಿಯನ್ನು ಹಾಕಿದ್ದೀಯಲ್ಲಾ. ಅವನು ಕೈಹಾಕಿದ ಕೆಲಸವನ್ನು ನೀನು ಸಫಲಪಡಿಸುತ್ತಿರುವದರಿಂದ ಅವನ ಸಂಪತ್ತು ದೇಶದಲ್ಲಿ ವೃದ್ಧಿಯಾಗುತ್ತಾ ಬಂದಿದೆ. ಆದರೆ ನಿನ್ನ ಕೈನೀಡಿ ಅವನ ಸೊತ್ತನ್ನೆಲ್ಲಾ ಅಳಿಸಿಬಿಡು. ಆಗ ಅವನು ನಿನ್ನ ಎದುರಿಗೆ ನಿನ್ನನ್ನು ದೂಷಿಸಲೇ ದೂಷಿಸುವನು.”​—ಯೋಬ 1:​10, 11.

13. ಯೋಬನ ವಿಷಯವಾದ ಆರೋಪಗಳ ಮೂಲಕ ಸೈತಾನನು ಸೂಚ್ಯವಾಗಿ ಏನು ಹೇಳುತ್ತಿದ್ದನು, ಮತ್ತು ಇದು ಸಕಲ ಮಾನವರನ್ನು ಹೇಗೆ ಒಳಗೂಡಿಸುತ್ತದೆ?

13 ಯೆಹೋವನು ತನ್ನ ಸಂರಕ್ಷಣಾತ್ಮಕ ಶಕ್ತಿಯನ್ನು, ಯೋಬನ ಭಕ್ತಿಯನ್ನು ಖರೀದಿಸಲಿಕ್ಕಾಗಿ ಲಂಚದಂತೆ ಉಪಯೋಗಿಸುತ್ತಿದ್ದಾನೆಂಬುದು ಸೈತಾನನ ವಾದವಾಗಿತ್ತು. ಹೀಗಿರುವಾಗ ಇದರ ಸೂಚ್ಯಾರ್ಥ, ಯೋಬನ ಸಮಗ್ರತೆಯು ಬರಿಯ ನಾಟಕ, ದೇವರಿಂದ ಅವನಿಗೆ ಸಿಗುತ್ತಿರುವ ಲಾಭಕ್ಕೋಸ್ಕರವೇ ಅವನು ದೇವರನ್ನು ಆರಾಧಿಸುತ್ತಾನೆಂದಾಯಿತು. ದೇವರು ಯೋಬನಿಂದ ತನ್ನ ಆಶೀರ್ವಾದವನ್ನು ಹಿಂದೆಗೆಯುವಲ್ಲಿ, ಅವನು ಸಹ ತನ್ನ ಸೃಷ್ಟಿಕರ್ತನನ್ನು ಶಪಿಸಿಯೆ ಶಪಿಸುವನೆಂಬುದು ಸೈತಾನನ ಪ್ರತಿಪಾದನೆಯಾಗಿತ್ತು. ಯೋಬನು “ದೇವರಲ್ಲಿ ಭಯಭಕ್ತಿಯುಳ್ಳವನಾಗಿ ಕೆಟ್ಟದ್ದನ್ನು ನಿರಾಕರಿಸುತ್ತಾ ನಿರ್ದೋಷಿಯೂ ಯಥಾರ್ಥಚಿತ್ತನೂ” ಆಗಿದ್ದವರಲ್ಲಿ ಎದ್ದುಕಾಣುತ್ತಿದ್ದನು ಎಂದು ಸೈತಾನನಿಗೆ ಗೊತ್ತಿತ್ತು. * ಆದ್ದರಿಂದ ಒಂದುವೇಳೆ ಯೋಬನ ಸಮಗ್ರತೆಯನ್ನು ಸೈತಾನನು ಮುರಿಯಲು ಶಕ್ತನಾಗುತ್ತಿದ್ದಲ್ಲಿ, ಉಳಿದ ಮಾನವರ ಸಮಗ್ರತೆಯನ್ನೂ ಅವನು ಸುಲಭವಾಗಿ ಮುರಿದುಹಾಕಸಾಧ್ಯವಿತ್ತು. ಹೀಗೆ ಸೈತಾನನು ವಾಸ್ತವದಲ್ಲಿ, ದೇವರನ್ನು ಸೇವಿಸಲು ಬಯಸುವವರೆಲ್ಲರ ನಿಷ್ಠೆಯ ಬಗ್ಗೆ ಶಂಕೆಯನ್ನೆಬ್ಬಿಸಿದನು. ಹೌದು, ಆ ವಾದಾಂಶವನ್ನು ಹೆಚ್ಚು ವಿಸ್ತಾರಗೊಳಿಸುತ್ತಾ, ಸೈತಾನನು ಯೆಹೋವನಿಗಂದದ್ದು: “ಒಬ್ಬ ಮನುಷ್ಯನು [ಯೋಬನು ಮಾತ್ರವಲ್ಲ] ಪ್ರಾಣವನ್ನು ಉಳಿಸಿಕೊಳ್ಳುವದಕ್ಕೋಸ್ಕರ ತನ್ನ ಸರ್ವಸ್ವವನ್ನೂ ಕೊಡುವನು.” (ಓರೆ ಅಕ್ಷರಗಳು ನಮ್ಮವು.)​—ಯೋಬ 1:​8; 2:4.

14. ಮಾನವರ ವಿರುದ್ಧವಾಗಿ ಸೈತಾನನ ದೋಷಾರೋಪದ ಸಂಬಂಧದಲ್ಲಿ ಇತಿಹಾಸವು ಏನನ್ನು ತೋರಿಸಿಯದೆ?

14 ಸೈತಾನನ ವಾದಕ್ಕೆ ತದ್ವಿರುದ್ಧವಾಗಿ, ಯೋಬನಂತೆ ಅನೇಕರು ಸಂಕಷ್ಟದ ಎದುರಲ್ಲೂ ಯೆಹೋವನಿಗೆ ನಿಷ್ಠಾವಂತರಾಗಿ ಉಳಿದಿದ್ದಾರೆಂದು ಇತಿಹಾಸವು ತೋರಿಸಿದೆ. ಅವರು ತಮ್ಮ ನಂಬಿಗಸ್ತಿಕೆಯ ಜೀವನಕ್ರಮದಿಂದಾಗಿ ಯೆಹೋವನ ಹೃದಯವನ್ನು ಸಂತೋಷಪಡಿಸಿದ್ದಾರೆ, ಮತ್ತು ಇದು, ಕಷ್ಟಕ್ಕೆ ಗುರಿಪಡಿಸಲ್ಪಡುವಾಗ ಮಾನವರು ದೇವರನ್ನು ಸೇವಿಸುವುದನ್ನು ನಿಲ್ಲಿಸುವರೆಂಬ ಸೈತಾನನ ಜಂಬದ ಅಣಕಕ್ಕೆ ಯೆಹೋವನು ತಕ್ಕದಾದ ಉತ್ತರ ಕೊಡುವುದನ್ನು ಸಾಧ್ಯಗೊಳಿಸಿದೆ. (ಇಬ್ರಿಯ 11:​4-38) ಹೌದು, ಸಹೃದಯಿಗಳಾದ ಜನರು ದೇವರನ್ನು ತಿರಸ್ಕರಿಸಲು ಎಂದೂ ಒಪ್ಪಿಕೊಳ್ಳಲಿಲ್ಲ. ಅತ್ಯಂತ ವ್ಯಥೆಭರಿತ ಪರಿಸ್ಥಿತಿಗಳಿಂದಾಗಿ ದಿಕ್ಕು ತೋಚದಂತಾದರೂ, ತಾಳಿಕೊಳ್ಳಲು ಬೇಕಾದ ಬಲವನ್ನು ತಮಗೆ ಕೊಡುವಂತೆ ಅವರು ಇನ್ನೂ ಹೆಚ್ಚಾಗಿ ಯೆಹೋವನ ಮೇಲೆ ಆತುಕೊಂಡಿರುತ್ತಾರೆ.​—2 ಕೊರಿಂಥ 4:​7-10.

15. ದೇವರ ಗತಕಾಲದ ಮತ್ತು ಭವಿಷ್ಯತ್ತಿನ ನ್ಯಾಯನಿರ್ಣಯಗಳ ವಿಷಯದಲ್ಲಿ ಯಾವ ಪ್ರಶ್ನೆಯು ಏಳಬಹುದು?

15 ಆದರೆ ಯೆಹೋವನು ಆತನ ಪರಮಾಧಿಕಾರ ಮತ್ತು ಮನುಷ್ಯನ ಸಮಗ್ರತೆಯ ಕುರಿತಾದ ವಾದಾಂಶಗಳಲ್ಲದೆ ಇನ್ನೂ ಹೆಚ್ಚಿನ ಸಂಗತಿಗಳಲ್ಲಿ ತನ್ನ ನ್ಯಾಯವನ್ನು ತೋರಿಸುತ್ತಾನೆ. ಬೈಬಲು ನಮಗೆ, ಒಬ್ಬೊಬ್ಬ ವ್ಯಕ್ತಿಯ ಸಂಬಂಧದಲ್ಲಿ ಮತ್ತು ಇಡೀ ರಾಷ್ಟ್ರಗಳ ಸಂಬಂಧದಲ್ಲಿ ಯೆಹೋವನ ನ್ಯಾಯನಿರ್ಣಯಗಳ ಒಂದು ದಾಖಲೆಯನ್ನೇ ಒದಗಿಸುತ್ತದೆ. ಭವಿಷ್ಯತ್ತಿನಲ್ಲಿ ಆತನು ವಿಧಿಸಲಿರುವ ನ್ಯಾಯನಿರ್ಣಯಗಳ ಪ್ರವಾದನೆಗಳೂ ಅದರಲ್ಲಿ ಅಡಕವಾಗಿವೆ. ಯೆಹೋವನು ತನ್ನ ನ್ಯಾಯನಿರ್ಣಯಗಳಲ್ಲಿ ನೀತಿವಂತನಾಗಿದ್ದನು ಮತ್ತು ನೀತಿವಂತನಾಗಿಯೇ ಇರುವನೆಂಬ ಭರವಸೆಯು ನಮಗಿರಬಲ್ಲದೇಕೆ?

ದೇವರ ನ್ಯಾಯವೇಕೆ ಶ್ರೇಷ್ಠವಾದದ್ದು?

ಯೆಹೋವನು ಎಂದಿಗೂ “ದುಷ್ಟರ ಸಂಗಡ ನೀತಿವಂತರನ್ನು ನಾಶಮಾಡು”ವದಿಲ್ಲ

16, 17. ನಿಜ ನ್ಯಾಯವನ್ನು ತೋರಿಸುವ ಸಂಬಂಧದಲ್ಲಿ ಮಾನವನ ದೃಷ್ಟಿಕೋನವು ಸೀಮಿತವೆಂದು ಯಾವ ಉದಾಹರಣೆಗಳು ತೋರಿಸುತ್ತವೆ?

16 ಯೆಹೋವನ ಕುರಿತು “ಆತನು ನಡಿಸುವದೆಲ್ಲಾ ನ್ಯಾಯ” ಎಂದು ಸತ್ಯವಾಗಿ ಹೇಳಬಹುದು. (ಧರ್ಮೋಪದೇಶಕಾಂಡ 32:4) ನಮ್ಮಲ್ಲಿ ಯಾವನೂ ತನ್ನ ಕುರಿತು ಹೀಗೆ ಹೇಳಸಾಧ್ಯವಿಲ್ಲ, ಯಾಕಂದರೆ ಎಷ್ಟೋ ಬಾರಿ ನಮಗಿರುವ ಸೀಮಿತ ದೃಷ್ಟಿಕೋನವು, ಯಾವುದು ಸರಿಯೋ ಅದರ ಬಗ್ಗೆ ನಮ್ಮ ಗ್ರಹಣಶಕ್ತಿಯನ್ನು ಮಬ್ಬುಗೊಳಿಸುತ್ತದೆ. ದೃಷ್ಟಾಂತಕ್ಕಾಗಿ, ಅಬ್ರಹಾಮನನ್ನು ಪರಿಗಣಿಸಿರಿ. ಸೊದೋಮಿನಲ್ಲಿ ದುಷ್ಟತನವು ಅತಿಯಾಗಿ ಹಬ್ಬಿಕೊಂಡಿದ್ದರೂ ಅದನ್ನು ನಾಶಗೊಳಿಸುವ ವಿರುದ್ಧವಾಗಿ ಅವನು ಯೆಹೋವನ ಮುಂದೆ ಅಂಗಲಾಚಿದನು. ಅವನು ಯೆಹೋವನಲ್ಲಿ ಕೇಳಿದ್ದು: “ನೀನು ದುಷ್ಟರ ಸಂಗಡ ನೀತಿವಂತರನ್ನೂ ನಾಶಮಾಡುವಿಯಾ?” (ಆದಿಕಾಂಡ 18:​23-33) ನಿಶ್ಚಯವಾಗಿಯೂ ಇದಕ್ಕೆ ಉತ್ತರವು ಇಲ್ಲ ಎಂದಾಗಿತ್ತು. ನೀತಿವಂತನಾದ ಲೋಟನು ಮತ್ತು ಅವನ ಹೆಣ್ಣುಮಕ್ಕಳು ಚೋಗರ್‌ ಊರನ್ನು ಸುರಕ್ಷಿತವಾಗಿ ಮುಟ್ಟಿದ ಮೇಲೆಯೇ ಯೆಹೋವನು ಸೊದೋಮಿನ ಮೇಲೆ “ಆಕಾಶದಿಂದ ಅಗ್ನಿಗಂಧಕಗಳನ್ನು ಸುರಿಸಿ”ದನು. (ಆದಿಕಾಂಡ 19:​22-25) ಇದಕ್ಕೆ ವೈದೃಶ್ಯದಲ್ಲಿ, ನಿನೆವೆಯ ಜನರಿಗೆ ದೇವರು ಕರುಣೆಯನ್ನು ತೋರಿಸಿದಾಗ ಯೋನನಾದರೋ ‘ಸಿಟ್ಟುಗೊಂಡನು.’ ಯೋನನು ಈ ಮೊದಲೆ ಅವರ ನಾಶನವನ್ನು ಘೋಷಿಸಿದ್ದರಿಂದ, ಅವರು ಮನಃಪೂರ್ವಕವಾಗಿ ಪಶ್ಚಾತ್ತಾಪಪಟ್ಟರೂ ಏನಂತೆ, ಅವರು ನಾಶವಾಗುವುದನ್ನು ನೋಡಿದರೆ ಮಾತ್ರ ಅವನ ಮನಸ್ಸಿಗೆ ತೃಪ್ತಿಸಿಗುತ್ತಿತ್ತು.​—ಯೋನ 3:​10–4:2.

17 ತಾನು ನ್ಯಾಯವನ್ನು ವಿಧಿಸುವಾಗ ಅದರಲ್ಲಿ ದುಷ್ಟರ ನಾಶನವು ಮಾತ್ರವೇ ಅಲ್ಲ ನೀತಿವಂತರಾದ ಜನರ ರಕ್ಷಣೆಯೂ ಸೇರಿರುತ್ತದೆಂಬ ಪುನರಾಶ್ವಾಸನೆಯನ್ನು ಯೆಹೋವನು ಅಬ್ರಹಾಮನಿಗೆ ಕೊಟ್ಟನು. ಇನ್ನೊಂದು ಕಡೆ ಯೋನನಿಗಾದರೋ, ಯೆಹೋವನು ಕರುಣಾಳು ಎಂಬುದನ್ನು ಕಲಿಯಬೇಕಾಯಿತು. ದುಷ್ಟರು ತಮ್ಮ ಮಾರ್ಗಗಳನ್ನು ಬದಲಾಯಿಸಿಕೊಂಡಲ್ಲಿ, ಆತನು “ಕ್ಷಮಿಸಲು ಸಿದ್ಧ”ನಾಗಿರುತ್ತಾನೆ. (ಕೀರ್ತನೆ 86:5, NW) ತಮ್ಮ ಅಂತಸ್ತನ್ನು ಕಳೆದುಕೊಳ್ಳುವೆವು ಎಂಬ ಭಯವಿರುವ ಮಾನವರಂತೆ, ಯೆಹೋವನು ಕೇವಲ ತನ್ನ ಶಕ್ತಿಯನ್ನು ತೋರಿಸಲಿಕ್ಕಾಗಿ ಒಂದು ಪ್ರತಿಕೂಲ ನ್ಯಾಯತೀರ್ಪನ್ನು ವಿಧಿಸುವುದಿಲ್ಲ, ಇಲ್ಲವೆ ತಾನು ನಿರ್ಬಲನೆಂದು ನೆನಸಾರೋ ಎಂಬ ಭಯದಿಂದ ಆತನು ಕರುಣೆಯನ್ನು ತಡೆದುಹಿಡಿಯುವುದಿಲ್ಲ. ಎಲ್ಲಿ ಕರುಣೆ ತೋರಿಸಲು ಆಧಾರವಿದೆಯೋ ಅಲ್ಲಿ ಅದನ್ನು ತೋರಿಸುವುದೇ ಆತನ ರೀತಿಯಾಗಿದೆ.​—ಯೆಶಾಯ 55:7; ಯೆಹೆಜ್ಕೇಲ 18:23.

18. ಯೆಹೋವನು ಭಾವುಕನಾಗಿ ಕ್ರಿಯೆಗೈಯುವುದಿಲ್ಲ ಎಂಬುದನ್ನು ಬೈಬಲಿನಿಂದ ತೋರಿಸಿರಿ.

18 ಆದರೂ, ಯೆಹೋವನು ಭಾವುಕನಾಗಿ ತನ್ನ ನ್ಯಾಯಶಕ್ತಿಯನ್ನು ತಡೆದುಹಿಡಿಯುವವನಲ್ಲ. ತನ್ನ ಸ್ವಂತ ಜನರು ವಿಗ್ರಹಾರಾಧನೆಯಲ್ಲಿ ಪೂರ್ತಿಯಾಗಿ ಮುಳುಗಿದ್ದಾಗ, ಯೆಹೋವನು ದೃಢತೆಯಿಂದ ಘೋಷಿಸಿದ್ದು: “ನಾನು ನನ್ನ ಕೋಪವನ್ನು ನಿನ್ನ ಮೇಲೆ ಬರಮಾಡಿ ನಿನ್ನ ನಡತೆಗೆ ತಕ್ಕಂತೆ ನ್ಯಾಯತೀರಿಸಿ ನಿನ್ನ ಸಮಸ್ತ ಅಸಹ್ಯಕಾರ್ಯಗಳ ಫಲವನ್ನು ನಿನಗೆ ಉಣ್ಣಿಸುವೆನು. ನಿನ್ನನ್ನು ಕಟಾಕ್ಷಿಸೆನು, ಉಳಿಸೆನು; ನಿನ್ನ ದುರ್ಮಾರ್ಗಗಳ ಫಲವನ್ನು ನಿನಗೆ ತಿನ್ನಿಸುವೆನು.” (ಯೆಹೆಜ್ಕೇಲ 7:3, 4) ಹೀಗೆ ಜನರು ತಮ್ಮ ದುರ್ಮಾರ್ಗವನ್ನು ಬಿಡದೆ ಅದರಲ್ಲೇ ಮುಂದುವರಿಯುವಾಗ, ಯೆಹೋವನು ಅದಕ್ಕನುಸಾರ ಅವರಿಗೆ ನ್ಯಾಯತೀರಿಸುತ್ತಾನೆ. ಆದರೆ ಅವನ ನ್ಯಾಯತೀರ್ಪು ದೃಢವಾದ ಪುರಾವೆಯ ಮೇಲೆ ಆಧಾರಿಸಿರುತ್ತದೆ. ಹೀಗಿರುವುದರಿಂದಲೇ, ಸೊದೋಮ್‌ ಗೊಮೋರಗಳ ಕುರಿತ “ಎಷ್ಟೋ ದೊಡ್ಡ ಮೊರೆಯು” ಯೆಹೋವನನ್ನು ತಲಪಿದಾಗ, ಆತನಂದದ್ದು: “ಆ ಊರಿನವರ ಮೇಲೆ ಹೊರಿಸಿರುವ ಪಾಪವು ಎಷ್ಟೋ ಘೋರವಾದದ್ದು; ನಾನು ಇಳಿದು ಹೋಗಿ ನನಗೆ ಮುಟ್ಟಿದ ಮೊರೆಯಂತೆಯೇ ಅವರು ಮಾಡಿದರೋ ಇಲ್ಲವೋ ಎಂದು ನೋಡಿ ತಿಳುಕೊಳ್ಳುತ್ತೇನೆ.” (ಆದಿಕಾಂಡ 18:​20, 21) ಸತ್ಯ ಸಂಗತಿಯೇನೆಂಬುದನ್ನು ತಿಳಿದುಕೊಳ್ಳುವ ಮುಂಚೆಯೇ ದುಡುಕಿ ನ್ಯಾಯತೀರಿಸುವ ಜನರಂತೆ ಯೆಹೋವನಲ್ಲ ಎಂಬುದಕ್ಕಾಗಿ ನಾವೆಷ್ಟು ಕೃತಜ್ಞರಾಗಿರಬಲ್ಲೆವು! ನಿಜವಾಗಿಯೂ ಯೆಹೋವನು ಬೈಬಲು ತಿಳಿಸುವಂತೆಯೇ, “ಯಾವುದೇ ಅನ್ಯಾಯವಿಲ್ಲದ, ನಂಬಿಗಸ್ತ ದೇವರು” ಆಗಿದ್ದಾನೆ.​—ಧರ್ಮೋಪದೇಶಕಾಂಡ 32:4, NW.

ಯೆಹೋವನ ನ್ಯಾಯದಲ್ಲಿ ಭರವಸೆಯಿಡಿರಿ

19. ಯೆಹೋವನು ನ್ಯಾಯ ವಿಧಿಸುವ ವಿಷಯದಲ್ಲಿ ಗಲಿಬಿಲಿಗೊಳಿಸುವಂಥ ಪ್ರಶ್ನೆಗಳು ನಮಗಿದ್ದಲ್ಲಿ ನಾವೇನು ಮಾಡಬಲ್ಲೆವು?

19 ಯೆಹೋವನ ಗತಕಾಲದ ಕೃತ್ಯಗಳ ಕುರಿತ ಪ್ರತಿಯೊಂದು ಪ್ರಶ್ನೆಯನ್ನೂ ಬೈಬಲು ಸಂಬೋಧಿಸುವುದಿಲ್ಲ. ಭವಿಷ್ಯದಲ್ಲಿ ಜನರಿಗೆ ಮತ್ತು ಜನಾಂಗಗಳಿಗೆ ಯೆಹೋವನು ಹೇಗೆ ನ್ಯಾಯತೀರಿಸುವನೆಂಬ ಸವಿಸ್ತಾರ ವಿವರವನ್ನೂ ಅದು ನೀಡುವುದಿಲ್ಲ. ಎಲ್ಲಿ ಅಂಥ ವಿವರಗಳಿಲ್ಲವೋ ಆ ಬೈಬಲ್‌ ವೃತ್ತಾಂತಗಳಿಂದ ಅಥವಾ ಪ್ರವಾದನೆಗಳಿಂದ ನಾವು ಗಲಿಬಿಲಿಗೊಳ್ಳುವಾಗ, ಪ್ರವಾದಿಯಾದ ಮೀಕನು ತೋರಿಸಿದಂಥ ಅದೇ ರೀತಿಯ ನಿಷ್ಠೆಯನ್ನು ನಾವು ತೋರಿಸಬಲ್ಲೆವು: “ನನ್ನ ರಕ್ಷಕನಾದ ದೇವರನ್ನು ಕಾದುಕೊಳ್ಳುವೆನು.”​—ಮೀಕ 7:7.

20, 21. ಯೆಹೋವನು ಯಾವಾಗಲೂ ಯಾವುದು ಯೋಗ್ಯವೋ ಅದನ್ನೇ ಮಾಡುವನೆಂಬ ಭರವಸೆಯು ನಮಗಿರಬಲ್ಲದ್ದೇಕೆ?

20 ಪ್ರತಿಯೊಂದು ಸನ್ನಿವೇಶದಲ್ಲೂ ಯಾವುದು ಯೋಗ್ಯವೋ ಅದನ್ನೇ ಯೆಹೋವನು ಮಾಡುವನೆಂಬ ಭರವಸೆಯು ನಮಗಿರಬಲ್ಲದು. ಮನುಷ್ಯನು ಅನ್ಯಾಯಗಳನ್ನು ದುರ್ಲಕ್ಷಿಸುತ್ತಿರುವಂತೆ ತೋರುವಾಗಲೂ ಕೂಡ ಯೆಹೋವನು ವಚನವಿತ್ತಿರುವುದು: “ಮುಯ್ಯಿಗೆ ಮುಯ್ಯಿ ತೀರಿಸುವದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು.” (ರೋಮಾಪುರ 12:19) ಕಾದುಕೊಳ್ಳುವ ಮನೋಭಾವವನ್ನು ನಾವು ತೋರಿಸುವುದಾದರೆ, ಅಪೊಸ್ತಲ ಪೌಲನಿಂದ ವ್ಯಕ್ತಪಡಿಸಲ್ಪಟ್ಟ ದೃಢ ಭರವಸೆಯನ್ನು ಪ್ರತಿಧ್ವನಿಸುವೆವು: “ದೇವರಲ್ಲಿ ಅನ್ಯಾಯ ಉಂಟೋ? ಎಂದಿಗೂ ಇಲ್ಲ.”​—ರೋಮಾಪುರ 9:14.

21 ಈ ನಡುವೆ, ನಾವು ‘ಕಠಿನಕಾಲಗಳಲ್ಲಿ’ ಜೀವಿಸುತ್ತಿದ್ದೇವೆ. (2 ತಿಮೊಥೆಯ 3:1) ಅನ್ಯಾಯ ಮತ್ತು ‘ಹಿಂಸೆಗಳು’ ಅನೇಕಾನೇಕ ಕ್ರೂರವಾದ ದುಷ್ಕೃತ್ಯಗಳಲ್ಲಿ ಪರಿಣಮಿಸಿವೆ. (ಪ್ರಸಂಗಿ 4:1) ಆದರೂ, ಯೆಹೋವನು ಬದಲಾಗಿರುವುದಿಲ್ಲ. ಆತನಿನ್ನೂ ಅನ್ಯಾಯವನ್ನು ಹಗೆಮಾಡುತ್ತಾನೆ, ಮತ್ತು ಅದಕ್ಕೆ ಬಲಿಯಾಗಿರುವವರ ಕಡೆಗೆ ಆತನಿಗೆ ಆಳವಾದ ಅನುತಾಪವಿದೆ. ನಾವು ಯೆಹೋವನಿಗೆ ಮತ್ತು ಆತನ ಪರಮಾಧಿಕಾರಕ್ಕೆ ನಿಷ್ಠಾವಂತರಾಗಿ ಉಳಿಯುವಲ್ಲಿ, ಆತನ ರಾಜ್ಯದಾಳಿಕೆಯ ಕೆಳಗೆ ಸಕಲ ಅನ್ಯಾಯಗಳು ಸರಿಪಡಿಸಲ್ಪಡುವ ಕ್ಲುಪ್ತಕಾಲದ ತನಕ ನಾವು ತಾಳ್ಮೆಯಿಂದಿರಲು ಬೇಕಾದ ಬಲವನ್ನು ಆತನು ನಮಗೆ ಕೊಡುವನು.​—1 ಪೇತ್ರ 5:​6, 7.

^ ಪ್ಯಾರ. 13 ಯೋಬನ ಕುರಿತು ಯೆಹೋವನು ಅಂದದ್ದು: “ಅವನಿಗೆ ಸಮಾನನು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವದಿಲ್ಲ.” (ಯೋಬ 1:8) ಹೀಗೆ ಯೋಬನು ಯೋಸೇಫನ ಮರಣಾನಂತರ ಹಾಗೂ ಮೋಶೆ ಇಸ್ರಾಯೇಲಿನ ನೇಮಿತ ನಾಯಕನಾಗುವ ಮುಂಚಿನ ಅವಧಿಯಲ್ಲಿ ಬದುಕಿದ್ದಿರುವ ಸಂಭಾವ್ಯತೆ ಇದೆ. ಹೀಗೆ ಆ ಸಮಯದಲ್ಲಿ ಯೋಬನಿಗೆ ಸಮಾನವಾದ ಸಮಗ್ರತೆಯನ್ನು ತೋರಿಸುವವರು ಯಾರೂ ಇರಲಿಲ್ಲವೆಂದು ಹೇಳಸಾಧ್ಯವಿತ್ತು.