ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 15

ಯೇಸು ‘ಲೋಕದಲ್ಲಿ ನ್ಯಾಯವನ್ನು ಸ್ಥಾಪಿಸುತ್ತಾನೆ’

ಯೇಸು ‘ಲೋಕದಲ್ಲಿ ನ್ಯಾಯವನ್ನು ಸ್ಥಾಪಿಸುತ್ತಾನೆ’

1, 2. ಯಾವ ಸಂದರ್ಭದಲ್ಲಿ ಯೇಸು ಕೋಪಗೊಂಡನು, ಮತ್ತು ಏಕೆ?

ಯೇಸು ಕೋಪಗೊಂಡಿದ್ದನೆಂಬುದು ಸ್ಪಷ್ಟವಾಗಿ ತೋರುತ್ತಿತ್ತು. ಇದಕ್ಕೆ ಒಳ್ಳೆಯ ಕಾರಣವೂ ಇತ್ತು. ಅವನನ್ನು ಆ ರೀತಿಯಲ್ಲಿ ಚಿತ್ರಿಸಿಕೊಳ್ಳಲು ಒಂದುವೇಳೆ ನಿಮಗೆ ಕಷ್ಟವಾದೀತು ಯಾಕಂದರೆ ಅವನು ಬಹು ಶಾಂತ ಸ್ವಭಾವದ ಮನುಷ್ಯನು. (ಮತ್ತಾಯ 21:5) ಆದರೆ ಈಗಲೂ ಅವನ ಸಿಟ್ಟು ಪರಿಪೂರ್ಣ ಅಂಕೆಯಲ್ಲಿತ್ತೆಂಬುದು ನಿಶ್ಚಯ, ಯಾಕಂದರೆ ಅದು ಧರ್ಮಕ್ರೋಧವಾಗಿತ್ತು. * ಆದರೆ ಈ ಶಾಂತಿಪ್ರಿಯ ಪುರುಷನನ್ನು ಅಷ್ಟು ಸಿಟ್ಟಿಗೆ ಉದ್ರೇಕಿಸಿದ್ದಾದರೂ ಯಾವುದು? ಘೋರ ಅನ್ಯಾಯದ ಒಂದು ಸಂಗತಿಯೇ.

2 ಯೆರೂಸಲೇಮಿನಲ್ಲಿದ್ದ ದೇವಾಲಯವು ಯೇಸುವಿಗೆ ಅತಿ ಪ್ರಿಯವಾದ ಸ್ಥಳವಾಗಿತ್ತು. ಇಡೀ ಭೂಲೋಕದಲ್ಲಿ, ಅವನ ಸ್ವರ್ಗೀಯ ತಂದೆಯ ಆರಾಧನೆಗಾಗಿ ಸಮರ್ಪಿತವಾದ ಒಂದೇ ಒಂದು ಪವಿತ್ರಸ್ಥಾನವು ಅದಾಗಿತ್ತು. ಅನೇಕ ದೇಶಗಳಲ್ಲಿದ್ದ ಯೆಹೂದ್ಯರು ದೂರದೂರದಿಂದ ಪ್ರಯಾಣಿಸಿ ಆರಾಧನೆಗಾಗಿ ಅಲ್ಲಿಗೆ ಬರುತ್ತಿದ್ದರು. ದೇವಭಯವುಳ್ಳ ಅನ್ಯಜನರು ಸಹ ಬಂದು, ಅವರಿಗಾಗಿ ಪ್ರತ್ಯೇಕವಾಗಿರಿಸಲ್ಪಟ್ಟ ಆಲಯದ ಅಂಗಣದೊಳಕ್ಕೆ ಪ್ರವೇಶಿಸುತ್ತಿದ್ದರು. ಆದರೆ ಯೇಸು ತನ್ನ ಶುಶ್ರೂಷೆಯ ಆರಂಭದ ಸಮಯದಲ್ಲಿ ಆಲಯದ ಕ್ಷೇತ್ರವನ್ನು ಪ್ರವೇಶಿಸಿದಾಗ, ಒಂದು ದಿಗಿಲುಹುಟ್ಟಿಸುವ ದೃಶ್ಯವು ಅವನಿಗೆ ಎದುರಾಯಿತು. ಆಲಯವು ಆರಾಧನೆಯ ಸ್ಥಳವಾಗಿರುವ ಬದಲಾಗಿ ಒಂದು ಮಾರುಕಟ್ಟೆಯಾಗಿತ್ತೆಂದು ಹೇಳಬಹುದಿತ್ತು! ಅದು ವ್ಯಾಪಾರಿಗಳಿಂದಲೂ ಚಿನಿವಾರರಿಂದಲೂ ತುಂಬಿಹೋಗಿತ್ತು. ಆದರೆ ಇದರಲ್ಲಿ ಏನು ಅನ್ಯಾಯವಿತ್ತು? ಈ ಪುರುಷರಿಗೆ ದೇವರ ಆಲಯವು ಜನರನ್ನು ಲೂಟಿಮಾಡುವ, ದೋಚಿಕೊಂಡಾದರೂ ಲಾಭಪಡೆಯುವ ಬರಿಯ ಸಂತೆಯಾಗಿ ಪರಿಣಮಿಸಿತ್ತು. ಹೇಗೆ?​—ಯೋಹಾನ 2:14.

3, 4. ಯೆಹೋವನ ಆಲಯದಲ್ಲಿ ದುರಾಶೆಯ ಯಾವ ದೋಚುವಿಕೆಯು ನಡಿಯುತ್ತಿತ್ತು, ಮತ್ತು ಈ ಸ್ಥಿತಿಯನ್ನು ಸರಿಪಡಿಸಲಿಕ್ಕಾಗಿ ಯೇಸು ಯಾವ ಕ್ರಮವನ್ನು ಕೈಕೊಂಡನು?

3 ಆಲಯದ ತೆರಿಗೆಯನ್ನು ಸಲ್ಲಿಸಲು ಒಂದೇ ಒಂದು ವಿಶಿಷ್ಟ ತರದ ನಾಣ್ಯವನ್ನು ಉಪಯೋಗಿಸಬೇಕೆಂದು ಧಾರ್ಮಿಕ ಮುಖಂಡರು ವಿಧಿಸಿದ್ದರು. ಅಂಥ ನಾಣ್ಯಗಳನ್ನು ಪಡೆದುಕೊಳ್ಳಲು ಸಂದರ್ಶಕರು ತಮ್ಮ ಬಳಿ ಇದ್ದ ಹಣವನ್ನು ವಿನಿಮಯ ಮಾಡಿಕೊಳ್ಳಬೇಕಿತ್ತು. ಆದ್ದರಿಂದ ಚಿನಿವಾರರು ಆಲಯದ ಒಳಗೇ ಮೇಜುಗಳನ್ನು ಹಾಕಿಕೊಂಡು ಪ್ರತಿಯೊಂದು ವಹಿವಾಟಿಗೆ ಹಣ ತೆಗೆದುಕೊಳ್ಳುತ್ತಿದ್ದರು. ಪ್ರಾಣಿಗಳನ್ನು ಮಾರುವ ವ್ಯಾಪಾರವೂ ಬಹು ಲಾಭದಾಯಕವಾಗಿತ್ತು. ಯಜ್ಞಗಳನ್ನರ್ಪಿಸಲು ಬಯಸುತ್ತಿದ್ದ ಸಂದರ್ಶಕರು ನಗರದ ಯಾವನೇ ವ್ಯಾಪಾರಿಯಿಂದ ಅದನ್ನು ಕೊಂಡುಕೊಳ್ಳಸಾಧ್ಯವಿತ್ತಾದರೂ, ಆಲಯದ ಅಧಿಕಾರಿಗಳು ಆ ಅರ್ಪಣೆಗಳು ಅಯೋಗ್ಯವೆಂದು ತಿರಸ್ಕರಿಸಿಬಿಡುವ ಸಾಧ್ಯತೆಯಿತ್ತು. ಆದರೆ, ಅಲ್ಲಿಯೇ ಆಲಯದ ಕ್ಷೇತ್ರದಲ್ಲೇ ಖರೀದಿಸಲ್ಪಟ್ಟ ಅರ್ಪಣೆಗಳು ಯಜ್ಞಯೋಗ್ಯವಾಗಿರುತ್ತಿದ್ದದ್ದು ಖಂಡಿತ. ಜನರು ಹೀಗೆ ವ್ಯಾಪಾರಿಗಳ ತಾಳಕ್ಕೆ ತಕ್ಕಂತೆ ಕುಣಿಯಬೇಕಾದದ್ದರಿಂದ, ವ್ಯಾಪಾರಿಗಳು ಕೆಲವೊಮ್ಮೆ ಅತಿರೇಕ ಬೆಲೆಗಳನ್ನು ವಸೂಲುಮಾಡುತ್ತಿದ್ದರು. * ಇದು ಕೀಳುತರದ ನೀಚ ವ್ಯಾಪಾರಬುದ್ಧಿಗಿಂತಲೂ ಕೆಟ್ಟದ್ದಾಗಿತ್ತು. ಅದನ್ನು ಕಳ್ಳತನವೆಂದೇ ಹೇಳಬಹುದಿತ್ತು!

“ಇವುಗಳನ್ನು ಇಲ್ಲಿಂದ ತಕ್ಕೊಂಡುಹೋಗಿರಿ”!

4 ಯೇಸುವಿಗೆ ಅಂಥ ಅನ್ಯಾಯವನ್ನು ಸಹಿಸಲಾಗಲಿಲ್ಲ. ಇದು ಅವನ ಸ್ವಂತ ತಂದೆಯ ಮನೆಯಾಗಿತ್ತಲ್ಲವೇ! ಅವನು ಹಗ್ಗದಿಂದ ಒಂದು ಕೊರಡೆಯನ್ನು ಮಾಡಿ ಅದರಿಂದ ದನಕುರಿಗಳೆಲ್ಲವನ್ನು ಆಲಯದಿಂದ ಹೊರಕ್ಕಟ್ಟಿದನು. ಅನಂತರ ಚಿನಿವಾರರತ್ತ ಧಾವಿಸಿ, ಅವರ ಮೇಜುಗಳನ್ನು ಉರುಳಿಸಿದನು. ಆಗ ಆ ನಾಣ್ಯಗಳೆಲ್ಲವೂ ಶಿಲಾನೆಲದಲ್ಲೆಲ್ಲಾ ಚೆಲ್ಲಾಪಿಲ್ಲಿಯಾಗಿ ಬೀಳುವುದನ್ನು ತುಸು ಊಹಿಸಿಕೊಳ್ಳಿರಿ! ಅಲ್ಲಿದ್ದ ಪಾರಿವಾಳದ ವ್ಯಾಪಾರಿಗಳಿಗೆ, “ಇವುಗಳನ್ನು ಇಲ್ಲಿಂದ ತಕ್ಕೊಂಡುಹೋಗಿರಿ” ಎಂದಾತನು ಕಟು ಆಜ್ಞೆಯನ್ನಿತ್ತನು. (ಯೋಹಾನ 2:15, 16) ಈ ಧೀರ ಪುರುಷನನ್ನು ಎದುರುಹಾಕಿಕೊಳ್ಳಲು ಯಾರಿಗೂ ಧೈರ್ಯವಿರಲಿಲ್ಲವೆಂದು ತೋರುತ್ತದೆ.

“ತಂದೆಯಂತೆ ಮಗ”

5-7. (ಎ) ಯೇಸುವಿನ ಮಾನವಪೂರ್ವ ಅಸ್ತಿತ್ವವು ಅವನ ನ್ಯಾಯಪರತೆಯನ್ನು ಹೇಗೆ ಪ್ರಭಾವಿಸಿತ್ತು, ಮತ್ತು ಅವನ ಮಾದರಿಯನ್ನು ಅಧ್ಯಯನಿಸುವ ಮೂಲಕ ನಾವೇನನ್ನು ಕಲಿಯಬಲ್ಲೆವು? (ಬಿ) ಯೆಹೋವನ ಪರಮಾಧಿಕಾರ ಮತ್ತು ನಾಮವು ಒಳಗೂಡಿರುವ ಅನ್ಯಾಯಗಳ ವಿರುದ್ಧ ಕ್ರಿಸ್ತನು ಹೇಗೆ ಹೋರಾಡಿದ್ದಾನೆ?

5 ಆ ವ್ಯಾಪಾರಿಗಳು ಮತ್ತೆ ಹಿಂದೆ ಬಂದರೆಂಬುದು ನಿಶ್ಚಯ. ಸುಮಾರು ಮೂರು ವರ್ಷಗಳ ನಂತರ, ಯೇಸು ಪುನಃ ಅದೇ ಅನ್ಯಾಯದೊಂದಿಗೆ ವ್ಯವಹರಿಸುತ್ತಾ, ಈ ಸಾರಿ ದೇವರ ಆಲಯವನ್ನು “ಕಳ್ಳರ ಗವಿಯಾಗಿ” ಮಾಡಿದವರನ್ನು ಯೆಹೋವನ ಸ್ವಂತ ಮಾತುಗಳನ್ನು ಉಲ್ಲೇಖಿಸಿ ಖಂಡಿಸಿದನು. (ಮತ್ತಾಯ 21:13; ಯೆರೆಮೀಯ 7:11) ಹೌದು, ಜನರನ್ನು ಸ್ವಾರ್ಥಲಾಭಕ್ಕಾಗಿ ದೋಚಲಾಗುತ್ತಿರುವುದನ್ನು ಮತ್ತು ದೇವರ ಆಲಯವು ಹೊಲೆಮಾಡಲ್ಪಡುತ್ತಿರುವುದನ್ನು ಯೇಸು ನೋಡಿದಾಗ ತಂದೆಯಂತೆ ಅವನಿಗೂ ಅನಿಸಿತು. ಮತ್ತು ಇದೇನೂ ಆಶ್ಚರ್ಯದ ಸಂಗತಿಯಲ್ಲ! ಯಾಕಂದರೆ ಕೋಟ್ಯನುಕೋಟಿ ವರ್ಷಗಳಿಂದ ಯೇಸು ತನ್ನ ಸ್ವರ್ಗೀಯ ತಂದೆಯಿಂದ ಕಲಿಸಲ್ಪಟ್ಟಿದ್ದನು. ಪರಿಣಾಮವಾಗಿ ತಂದೆಯ ನ್ಯಾಯಪರತೆಯು ಮಗನಲ್ಲಿ ಆಳವಾಗಿ ಬೇರೂರಿಸಲ್ಪಟ್ಟಿತ್ತು. “ತಂದೆಯಂತೆ ಮಗ” ಎಂಬ ಹೇಳಿಕೆಯ ಸಜೀವ ದೃಷ್ಟಾಂತ ಅವನಾದನು. ಆದುದರಿಂದ ಯೆಹೋವನ ಗುಣವಾದ ನ್ಯಾಯದ ಸ್ಪಷ್ಟಚಿತ್ರಣವನ್ನು ನಾವು ಪಡೆದುಕೊಳ್ಳಬಯಸುವುದಾದರೆ, ಯೇಸು ಕ್ರಿಸ್ತನ ಮಾದರಿಯ ಕುರಿತು ಮನನ ಮಾಡುವುದಕ್ಕಿಂತ ಉತ್ತಮ ಮಾರ್ಗ ಬೇರೊಂದಿಲ್ಲ.​—ಯೋಹಾನ 14:9, 10.

6 ಯೆಹೋವನ ಈ ಏಕಜಾತ ಪುತ್ರನು, ಸೈತಾನನು ಯೆಹೋವ ದೇವರನ್ನು ಅನ್ಯಾಯವಾಗಿ ಸುಳ್ಳುಗಾರನೆಂದು ಕರೆದಾಗ ಮತ್ತು ಆತನ ಆಳಿಕೆಯ ನೀತಿವಂತಿಕೆಯ ಬಗ್ಗೆ ಸವಾಲೆತ್ತಿದಾಗ ಅಲ್ಲಿ ಉಪಸ್ಥಿತನಿದ್ದನು. ಎಂಥ ನೀಚನಿಂದೆಯು ಅದಾಗಿತ್ತು! ಯಾರೊಬ್ಬನೂ ಯೆಹೋವನನ್ನು ಸ್ವಾರ್ಥಲಾಭವಿಲ್ಲದೆ ಕೇವಲ ಪ್ರೀತಿಯಿಂದ ಸೇವಿಸುವುದಿಲ್ಲವೆಂಬ ಸೈತಾನನ ತದನಂತರದ ಸವಾಲನ್ನೂ ಈ ದೇವಪುತ್ರನು ಕೇಳಿಸಿಕೊಂಡಿದ್ದನು. ಈ ಸುಳ್ಳಾರೋಪಗಳು ನಿಶ್ಚಯವಾಗಿಯೂ ಆ ಪುತ್ರನ ನೀತಿಯುತ ಹೃದಯವನ್ನು ಚುಚ್ಚಿ ನೋಯಿಸಿರಬೇಕು. ಆ ಸುಳ್ಳಾರೋಪವನ್ನು ಸರಿಪಡಿಸುವುದರಲ್ಲಿ ಮುಖ್ಯ ಪಾತ್ರವನ್ನು ತಾನು ವಹಿಸಲಿದ್ದೇನೆಂದು ತಿಳಿದಾಗ ಅವನೆಷ್ಟು ಪುಳಕಿತನಾಗಿದ್ದಿರಬೇಕು! (2 ಕೊರಿಂಥ 1:20) ಆದರೆ ಅವನದನ್ನು ಹೇಗೆ ಮಾಡಲಿದ್ದನು?

7 ನಾವು ಅಧ್ಯಾಯ 14ರಲ್ಲಿ ಕಲಿತಂತೆ, ಯೆಹೋವನ ಸೃಷ್ಟಿಜೀವಿಗಳ ಸಮಗ್ರತೆಯನ್ನು ಖಂಡಿಸುತ್ತಾ ಸೈತಾನನು ಮಾಡಿದ ಆರೋಪಕ್ಕೆ ಕಟ್ಟಕಡೆಯ, ನಿರ್ಣಾಯಕ ಉತ್ತರವನ್ನು ಯೇಸು ಕ್ರಿಸ್ತನು ಕೊಟ್ಟನು. ಆ ಮೂಲಕವಾಗಿ ಯೇಸುವು ಯೆಹೋವನ ಪರಮಾಧಿಕಾರದ ಕೊನೆಯ ನಿರ್ದೋಷೀಕರಣಕ್ಕೆ ಮತ್ತು ಆತನ ನಾಮದ ಪವಿತ್ರೀಕರಣಕ್ಕೆ ಒಂದು ಆಧಾರವನ್ನು ಹಾಕಿದನು. ಯೆಹೋವನ ಮುಖ್ಯ ಕಾರ್ಯಭಾರಿಯೋಪಾದಿ, ಯೇಸು ವಿಶ್ವದಲ್ಲೆಲ್ಲಾ ದೈವಿಕ ನ್ಯಾಯವನ್ನು ಸ್ಥಾಪಿಸುವನು. (ಅ. ಕೃತ್ಯಗಳು 5:​31, NW) ಭೂಮಿಯ ಮೇಲೆ ಅವನ ಜೀವನಕ್ರಮವೂ ದೈವಿಕ ನೀತಿಯನ್ನು ಪ್ರತಿಬಿಂಬಿಸಿತ್ತು. ಯೆಹೋವನು ಅವನ ಬಗ್ಗೆ ಅಂದದ್ದು: “ಈತನಲ್ಲಿ ನನ್ನ ಆತ್ಮವನ್ನು ಇರಿಸುವೆನು; ಈತನು ಅನ್ಯಜನಗಳಿಗೂ ನ್ಯಾಯವಿಧಿಯನ್ನು ಸಾರುವನು [“ನ್ಯಾಯ ಎಂದರೇನೆಂಬುದನ್ನು ಸ್ಪಷ್ಟಪಡಿಸುವನು,” NW].” (ಮತ್ತಾಯ 12:18) ಯೇಸು ಈ ಮಾತುಗಳನ್ನು ಹೇಗೆ ನೆರವೇರಿಸಿದನು?

“ನ್ಯಾಯ ಎಂದರೇನೆಂಬುದನ್ನು” ಯೇಸು ಸ್ಪಷ್ಟೀಕರಿಸುತ್ತಾನೆ

8-10. (ಎ) ಯೆಹೂದಿ ಧಾರ್ಮಿಕ ಮುಖಂಡರ ಮೌಖಿಕ ಸಂಪ್ರದಾಯಗಳು, ಯೆಹೂದ್ಯೇತರರು ಮತ್ತು ಸ್ತ್ರೀಯರ ಕಡೆಗೆ ತಿರಸ್ಕಾರವನ್ನು ಹೇಗೆ ಪ್ರವರ್ಧಿಸಿದವು? (ಬಿ) ಮೌಖಿಕ ನಿಯಮಗಳು ಯೆಹೋವನ ಸಬ್ಬತ್‌ ನಿಯಮವನ್ನು ಭಾರವಾದ ಹೊರೆಯನ್ನಾಗಿ ಮಾಡಿದ್ದು ಹೇಗೆ?

8 ಯೇಸು ಯೆಹೋವನ ಧರ್ಮಶಾಸ್ತ್ರವನ್ನು ಪ್ರೀತಿಸಿ ಅದಕ್ಕನುಸಾರವಾಗಿ ಜೀವಿಸಿದನು. ಆದರೆ ಅವನ ದಿನದ ಧಾರ್ಮಿಕ ಮುಖಂಡರಾದರೊ ಆ ಧರ್ಮಶಾಸ್ತ್ರವನ್ನು ವಕ್ರಗೊಳಿಸಿ, ಅದನ್ನು ತಪ್ಪಾದ ರೀತಿಯಲ್ಲಿ ಅನ್ವಯಮಾಡಿಕೊಂಡರು. ಯೇಸು ಅವರಿಗಂದದ್ದು: “ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, . . . ಧರ್ಮಶಾಸ್ತ್ರದಲ್ಲಿ ಗೌರವವಾದದ್ದನ್ನು, ಅಂದರೆ ನ್ಯಾಯವನ್ನೂ ಕರುಣೆಯನ್ನೂ ನಂಬಿಕೆಯನ್ನೂ ಬಿಟ್ಟುಬಿಟ್ಟಿರಿ.” (ಮತ್ತಾಯ 23:23) ನಿಶ್ಚಯವಾಗಿಯೇ ದೇವರ ಧರ್ಮಶಾಸ್ತ್ರದ ಆ ಶಿಕ್ಷಕರು “ನ್ಯಾಯ ಎಂದರೇನೆಂಬುದನ್ನು” ಸ್ಪಷ್ಟಪಡಿಸುತ್ತಿರಲಿಲ್ಲ. ಬದಲಿಗೆ ಅವರು, ದೈವಿಕ ನ್ಯಾಯವನ್ನು ಅಸ್ಪಷ್ಟಗೊಳಿಸುತ್ತಿದ್ದರು. ಅದು ಹೇಗೆ? ಕೆಲವು ಉದಾಹರಣೆಗಳನ್ನು ಗಮನಿಸಿರಿ.

9 ತನ್ನ ಜನರು ಸುತ್ತಮುತ್ತಲಿನ ಅನ್ಯಜನಾಂಗಗಳಿಂದ ತಮ್ಮನ್ನು ಪ್ರತ್ಯೇಕವಾಗಿರಿಸಿಕೊಳ್ಳಬೇಕೆಂದು ಯೆಹೋವನು ನಿರ್ದೇಶಿಸಿದ್ದನು. (1 ಅರಸುಗಳು 11:1, 2) ಆದರೆ ಕೆಲವು ಧರ್ಮಾಂಧ ಧಾರ್ಮಿಕ ಮುಖಂಡರು, ಯೆಹೂದ್ಯೇತರರೆಲ್ಲರನ್ನು ತಿರಸ್ಕಾರದಿಂದ ನೋಡುವಂತೆ ಜನರನ್ನು ಪ್ರೋತ್ಸಾಹಿಸಿದರು. ಮಿಷ್ನಾ ಈ ಆಜ್ಞೆಯನ್ನು ಸಹ ಸೇರಿಸಿತ್ತು: “ದನಕರುಗಳನ್ನು ಅನ್ಯಜನರ ತಂಗುದಾಣಗಳಲ್ಲಿ ಬಿಡಕೂಡದು ಯಾಕಂದರೆ ಅವರು ಪಶುಗಮನಮಾಡುತ್ತಾರೆಂದು ಶಂಕಿಸಲಾಗುತ್ತದೆ.” ಎಲ್ಲಾ ಯೆಹೂದ್ಯೇತರರ ವಿರುದ್ಧವಾಗಿ ಅಂಥ ಪೂರ್ವಾಗ್ರಹವು ಅನ್ಯಾಯವಾಗಿತ್ತು ಮತ್ತು ಮೋಶೆಯ ಧರ್ಮಶಾಸ್ತ್ರದ ಭಾವಕ್ಕೆ ತೀರಾ ವಿರುದ್ಧವಾಗಿತ್ತು. (ಯಾಜಕಕಾಂಡ 19:34) ಇತರ ಮನುಷ್ಯನಿರ್ಮಿತ ಆಜ್ಞೆಗಳು ಸ್ತ್ರೀಯರನ್ನು ಹೀನಾಯಗೊಳಿಸುತ್ತಿದ್ದವು. ಹೆಂಡತಿಯು ತನ್ನ ಗಂಡನ ಹಿಂದೆ ನಡೆಯಬೇಕೇ ಹೊರತು ಪಕ್ಕದಲ್ಲಿ ನಡೆಯಬಾರದೆಂದು ಮೌಖಿಕ ಧರ್ಮಶಾಸ್ತ್ರವು ಹೇಳಿತ್ತು. ಪುರುಷನು ಒಬ್ಬ ಸ್ತ್ರೀಯೊಂದಿಗೆ, ಸ್ವಂತ ಪತ್ನಿಯೊಂದಿಗೆ ಕೂಡ ಸಾರ್ವಜನಿಕವಾಗಿ ಮಾತಾಡಲೇ ಬಾರದೆಂಬ ಎಚ್ಚರಿಕೆ ನೀಡಲ್ಪಟ್ಟಿತ್ತು. ದಾಸರಂತೆಯೇ ಸ್ತ್ರೀಯರಿಗೂ ನ್ಯಾಯಾಲಯದಲ್ಲಿ ಸಾಕ್ಷಿನೀಡಲು ಅನುಮತಿಯಿರಲಿಲ್ಲ. ತಾವು ಸ್ತ್ರೀಯರಾಗಿ ಹುಟ್ಟದಿದ್ದುದಕ್ಕಾಗಿ ಪುರುಷರು ದೇವರಿಗೆ ಉಪಕಾರ ಹೇಳುತ್ತಿದ್ದ ಒಂದು ವಿಧಿವಿಹಿತವಾದ ಪ್ರಾರ್ಥನೆಯು ಸಹ ಇತ್ತು.

10 ಧಾರ್ಮಿಕ ಮುಖಂಡರು ದೇವರ ಧರ್ಮಶಾಸ್ತ್ರವನ್ನು ಮಾನವ ನಿರ್ಮಿತ ನೇಮವಿಧಿಗಳ ಒಂದು ದೊಡ್ಡ ರಾಶಿಯ ಅಡಿಯಲ್ಲಿ ಹೂತುಹಾಕಿದರು. ಉದಾಹರಣೆಗೆ, ಸಬ್ಬತ್‌ ನಿಯಮವು ಸಬ್ಬತ್ತಿನಂದು ಕೇವಲ ಕೆಲಸ ಮಾಡುವುದನ್ನು ನಿಷೇಧಿಸಿ ಆ ದಿನವನ್ನು ಆರಾಧನೆಗಾಗಿ, ಆಧ್ಯಾತ್ಮಿಕ ಚೈತನ್ಯಕ್ಕಾಗಿ ಹಾಗೂ ವಿಶ್ರಾಂತಿಗಾಗಿ ಬದಿಗಿಟ್ಟಿತ್ತು. ಆದರೆ ಫರಿಸಾಯರು ಆ ನಿಯಮವನ್ನು ಒಂದು ಭಾರವಾದ ಹೊರೆಯಾಗಿ ಮಾಡಿದರು. ಆ “ಕೆಲಸ”ದಲ್ಲಿ ಏನೆಲ್ಲ ಕೂಡಿರಬೇಕೆಂದು ಅವರು ತಾವಾಗಿಯೆ ನಿರ್ಣಯಗಳನ್ನು ಮಾಡಿಟ್ಟರು. ಕೊಯ್ಯುವಿಕೆ ಮತ್ತು ಬೇಟೆಯಾಡುವಿಕೆಯೇ ಮುಂತಾದ 39 ವಿವಿಧ ಚಟುವಟಿಕೆಗಳನ್ನು ಅವರು “ಕೆಲಸ”ವಾಗಿ ಪ್ರತ್ಯೇಕಿಸಿದರು. ಈ ವರ್ಗೀಕರಣಗಳು ಅಂತ್ಯವಿಲ್ಲದ ಪ್ರಶ್ನೆಗಳನ್ನು ಎಬ್ಬಿಸಿದವು. ಸಬ್ಬತ್‌ ದಿನದಲ್ಲಿ ಒಬ್ಬನು ಸೊಳ್ಳೆಯನ್ನು ಹೊಡೆದುಹಾಕಿದ್ದಲ್ಲಿ, ಅದು ಬೇಟೆಯಾಗಿತ್ತೋ? ಒಬ್ಬನು ನಡೆದಾಡುತ್ತಾ ಹೋಗುವಾಗ ಒಂದು ಹಿಡಿ ಧಾನ್ಯವನ್ನು ಕಿತ್ತು ತಿಂದದ್ದಾದರೆ, ಅದು ಕೊಯ್ಯುವಿಕೆಯೋ? ರೋಗಿಯೊಬ್ಬನನ್ನು ವಾಸಿಮಾಡಿದ್ದಲ್ಲಿ ಅದು ಕೆಲಸವೊ? ಅಂಥ ಪ್ರಶ್ನೆಗಳಿಗೆ ಕಟ್ಟುನಿಟ್ಟಾದ, ಸವಿವರವಾದ ನಿಯಮಗಳಿಂದ ಉತ್ತರವನ್ನು ಕೊಡಲಾಗುತ್ತಿತ್ತು.

11, 12. ಫರಿಸಾಯರ ಅಶಾಸ್ತ್ರೀಯ ಸಂಪ್ರದಾಯಗಳಿಗೆ ಯೇಸು ತನ್ನ ವಿರೋಧವನ್ನು ಹೇಗೆ ವ್ಯಕ್ತಪಡಿಸಿದನು?

11 ಅಂಥ ಒಂದು ಸನ್ನಿವೇಶದಲ್ಲಿ, ಜನರಿಗೆ ನ್ಯಾಯವೇನೆಂದು ತಿಳಿದುಕೊಳ್ಳಲು ಯೇಸು ಹೇಗೆ ಸಹಾಯಮಾಡಲಿದ್ದನು? ತನ್ನ ಬೋಧನೆಗಳಲ್ಲಿ ಮತ್ತು ತನ್ನ ಜೀವನ ಕ್ರಮದಲ್ಲಿ, ಆ ಧಾರ್ಮಿಕ ಮುಖಂಡರ ವಿರುದ್ಧವಾಗಿ ಯೇಸು ದೃಢವಾದ ಧೀರ ನಿಲುವನ್ನು ತೆಗೆದುಕೊಂಡನು. ಮೊದಲಾಗಿ ಅವನ ಬೋಧನೆಗಳಲ್ಲಿ ಕೆಲವನ್ನು ಗಮನಕ್ಕೆ ತನ್ನಿರಿ. ಮನುಷ್ಯ ನಿರ್ಮಿತವಾದ ಅವರ ಅನೇಕಾನೇಕ ನಿಯಮಗಳನ್ನು ಅವನು ನೇರವಾಗಿ ಖಂಡಿಸುತ್ತಾ ಅಂದದ್ದು: “ನೀವು ಕಲಿಸುತ್ತಾ ಬಂದಿರುವ ಸಂಪ್ರದಾಯದಿಂದ ದೇವರ ವಾಕ್ಯವನ್ನು ನಿರರ್ಥಕಮಾಡುತ್ತೀರಿ.”​—ಮಾರ್ಕ 7:13.

12 ಸಬ್ಬತ್‌ ನಿಯಮದ ವಿಷಯದಲ್ಲಿ ಫರಿಸಾಯರು ತಪ್ಪುಗೈದಿದ್ದರು​—ವಾಸ್ತವದಲ್ಲಿ ಆ ನಿಯಮದ ಉದ್ದೇಶವನ್ನೇ ಅಪಾರ್ಥಮಾಡಿದ್ದರೆಂದು ಯೇಸು ಪ್ರಬಲವಾಗಿ ಬೋಧಿಸಿದನು. ಮೆಸ್ಸೀಯನು “ಸಬ್ಬತ್‌ದಿನಕ್ಕೆ ಒಡೆಯನಾಗಿದ್ದಾನೆ” ಎಂದವನು ವಿವರಿಸಿದನು, ಆದುದರಿಂದ ಸಬ್ಬತ್‌ ದಿನದಲ್ಲಿ ಜನರನ್ನು ವಾಸಿಮಾಡಲು ಅವನಿಗೆ ಪೂರ್ಣ ಹಕ್ಕಿದೆಯೆಂದು ಹೇಳಿದನು. (ಮತ್ತಾಯ 12:8) ಈ ಮಾತಿಗೆ ಒತ್ತನ್ನು ನೀಡುವುದಕ್ಕಾಗಿ ಅವನು ಸಬ್ಬತ್‌ ದಿನದಂದು ಬಹಿರಂಗವಾಗಿ ಅದ್ಭುತಕರವಾದ ವಾಸಿಗಳನ್ನು ನಡಿಸಿದನು. (ಲೂಕ 6:7-10) ಅಂಥ ವಾಸಿಗಳು ಅವನ ಸಹಸ್ರ ವರ್ಷದಾಳಿಕೆಯಲ್ಲಿ ಲೋಕದಾದ್ಯಂತ ಅವನು ನಡಿಸಲಿರುವ ವಾಸಿಕಾರಕ ಕ್ರಿಯೆಗಳಿಗೆ ಮುನ್ನೋಟವಾಗಿದ್ದವು. ಆ ಸಹಸ್ರ ವರ್ಷಾವಧಿಯು ತಾನೇ ಅಂತಿಮ ಸಬ್ಬತ್ತಾಗಿದ್ದು, ಪಾಪ ಮತ್ತು ಮರಣದ ಹೊರೆಯ ಕೆಳಗೆ ಶತಮಾನಗಳಿಂದ ಒದ್ದಾಡುತ್ತಿರುವ ನಂಬಿಗಸ್ತ ಮಾನವರಿಗೆ ಕಟ್ಟಕಡೆಗೆ ವಿಶ್ರಾಂತಿಯು ದೊರಕುವುದು.

13. ಕ್ರಿಸ್ತನ ಭೂಶುಶ್ರೂಷೆಯ ಪರಿಣಾಮವಾಗಿ ಯಾವ ನಿಯಮವು ಅಸ್ತಿತ್ವಕ್ಕೆ ಬಂತು, ಮತ್ತು ಇದು ಮುಂಚೆ ಇದ್ದ ಧರ್ಮಶಾಸ್ತ್ರಕ್ಕಿಂತ ಹೇಗೆ ಭಿನ್ನವಾಗಿತ್ತು?

13 ಯೇಸು ತನ್ನ ಭೂಶುಶ್ರೂಷೆಯನ್ನು ಮುಗಿಸಿದ ಬಳಿಕ ಸ್ಥಾಪಿಸಿದ ಒಂದು ಹೊಸ ನಿಯಮವಾದ “ಕ್ರಿಸ್ತನ ನಿಯಮ”ದ ಮೂಲಕವೂ, ನ್ಯಾಯವೆಂದರೇನೆಂದು ಸ್ಪಷ್ಟಗೊಳಿಸಿದನು. (ಗಲಾತ್ಯ 6:2) ಅದಕ್ಕೆ ಮುಂಚೆ ಇದ್ದ ಮೋಶೆಯ ಧರ್ಮಶಾಸ್ತ್ರಕ್ಕಿಂತ ಈ ಹೊಸ ನಿಯಮವಾದರೋ ಬೇರೆಯಾಗಿತ್ತು. ಲಿಖಿತ ಆಜ್ಞೆಗಳ ಮೇಲೆ ಆಧಾರಿತವಾಗಿರದೆ ಅದು ಮೂಲತತ್ತ್ವಗಳ ಮೇಲೆ ಬಹಳವಾಗಿ ಆತುಕೊಂಡಿತ್ತು. ಆದರೆ ಕೆಲವು ನೇರವಾದ ಆಜ್ಞೆಗಳೂ ಅದರಲ್ಲಿ ಒಳಗೂಡಿದ್ದವು ನಿಜ. ಇವುಗಳಲ್ಲಿ, ಯೇಸು ಯಾವುದನ್ನು “ಹೊಸ ಆಜ್ಞೆ” ಎಂದು ಕರೆದನೊ ಅದು ಒಂದಾಗಿದೆ. ಯೇಸು ತನ್ನೆಲ್ಲಾ ಹಿಂಬಾಲಕರಿಗೆ, ತಾನು ಅವರನ್ನು ಪ್ರೀತಿಸಿದ ಪ್ರಕಾರ ಅವರೂ ಒಬ್ಬರನ್ನೊಬ್ಬರು ಪ್ರೀತಿಸುವಂತೆ ಕಲಿಸಿದನು. (ಯೋಹಾನ 13:34, 35) ಹೌದು, “ಕ್ರಿಸ್ತನ ನಿಯಮ”ಕ್ಕೆ ಅನುಸಾರವಾಗಿ ಜೀವಿಸುವವರೆಲ್ಲರಿಗೆ ಸ್ವತ್ಯಾಗದ ಪ್ರೀತಿಯೇ ಚೊಕ್ಕಮುದ್ರೆಯಾಗಿರಲಿಕ್ಕಿತ್ತು.

ನ್ಯಾಯದ ಸಜೀವ ಮಾದರಿ

14, 15. ತನ್ನ ಸ್ವಂತ ಅಧಿಕಾರದ ಇತಿಮಿತಿಯನ್ನು ಯೇಸು ಅಂಗೀಕರಿಸಿದನೆಂಬುದನ್ನು ಅವನು ತೋರಿಸಿದ್ದು ಹೇಗೆ, ಮತ್ತು ಇದು ಏಕೆ ಪುನರಾಶ್ವಾಸನೀಯವಾಗಿದೆ?

14 ಯೇಸು ಪ್ರೀತಿಯ ಕುರಿತು ಕೇವಲ ಕಲಿಸಿದ್ದು ಮಾತ್ರವಲ್ಲದೆ ಹೆಚ್ಚನ್ನು ಮಾಡಿದ್ದನು. “ಕ್ರಿಸ್ತನ ನಿಯಮವನ್ನು” ಅವನು ಜೀವಿಸಿ ತೋರಿಸಿದನು. ಅವನ ಜೀವನ ಮಾರ್ಗದಲ್ಲಿ ಅದು ಸಾಕಾರರೂಪವನ್ನು ತಾಳಿದಂತೆ ಇತ್ತು. ಯೇಸುವಿನ ಮಾದರಿಯು ನ್ಯಾಯವೆಂದರೇನೆಂದು ಸ್ಪಷ್ಟೀಕರಿಸಿದಂಥ ಮೂರು ವಿಧಾನಗಳನ್ನು ಪರಿಗಣಿಸಿರಿ.

15 ಮೊದಲನೆಯದಾಗಿ, ಸಣ್ಣಪುಟ್ಟ ವಿಷಯಗಳಲ್ಲೂ ಯಾವುದೇ ಅನ್ಯಾಯಗೈಯುವುದರಿಂದ ಯೇಸು ದೂರವಿದ್ದನು. ಅಪರಿಪೂರ್ಣ ಮಾನವರು ದುರಹಂಕಾರಿಗಳಾಗಿ ತಮಗಿರುವ ಅಧಿಕಾರದ ಯೋಗ್ಯ ಸರಹದ್ದಿನಾಚೆಗೆ ಕಾಲಿರಿಸುವಾಗ, ಅನೇಕ ಅನ್ಯಾಯಗಳು ನಡಿಸಲ್ಪಡುವುದನ್ನು ನೀವು ಗಮನಿಸಿದ್ದಿರಬಹುದು. ಯೇಸು ಎಂದೂ ಹಾಗೆ ಮಾಡಿರಲಿಲ್ಲ. ಒಂದು ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಯೇಸುವನ್ನು ಸಮೀಪಿಸಿ ಅಂದದ್ದು: “ಬೋಧಕನೇ, ತಂದೆಯ ಆಸ್ತಿಯನ್ನು ನನಗೆ ಪಾಲುಮಾಡಿಕೊಡುವಂತೆ ನನ್ನ ಅಣ್ಣನಿಗೆ ಹೇಳು.” ಯೇಸುವಿನ ಪ್ರತಿಕ್ರಿಯೆಯು ಏನಾಗಿತ್ತು? “ಎಲಾ ಮನುಷ್ಯ, ನನ್ನನ್ನು ನಿಮಗೆ ನ್ಯಾಯಾಧಿಪತಿಯನ್ನಾಗಿ ಅಥವಾ ಪಾಲುಮಾಡುವವನನ್ನಾಗಿ ನೇಮಿಸಿದವರಾರು”? (ಲೂಕ 12:13, 14) ಅದು ಗಮನಾರ್ಹವಾದ ಸಂಗತಿ ಅಲ್ಲವೇ? ಯೇಸುವಿಗಿದ್ದ ಬುದ್ಧಿಶಕ್ತಿ, ತೀರ್ಮಾನಮಾಡುವ ಸಾಮರ್ಥ್ಯ, ಮತ್ತು ದೇವದತ್ತ ಅಧಿಕಾರದ ಮಟ್ಟವು ಸಹ ಭೂಮಿಯಲ್ಲಿದ್ದ ಯಾವನಿಗಿಂತಲೂ ಅತಿಶಯವಾದದ್ದಾಗಿದ್ದರೂ, ಅವನು ಈ ವಿಷಯದಲ್ಲಿ ತಲೆಹಾಕಲು ನಿರಾಕರಿಸಿದನು ಯಾಕಂದರೆ ಹಾಗೆ ಮಾಡುವ ನಿರ್ದಿಷ್ಟ ಅಧಿಕಾರವು ಅವನಿಗೆ ಕೊಡಲ್ಪಟ್ಟಿರಲಿಲ್ಲ. ಯೇಸು ಈ ರೀತಿಯಲ್ಲಿ ಯಾವಾಗಲೂ, ಸಹಸ್ರಾರು ವರ್ಷಗಳ ತನ್ನ ಮಾನವ ಪೂರ್ವ ಅಸ್ತಿತ್ವದಲ್ಲಿಯೂ ಮಿತವರ್ತಿಯಾಗಿದ್ದನು. (ಯೂದ 9) ಯಾವುದು ನ್ಯಾಯವೋ ಅದನ್ನು ನಿರ್ಧರಿಸಲು ಯೇಸು ನಮ್ರತೆಯಿಂದ ಯೆಹೋವನಲ್ಲಿ ಭರವಸೆಯಿಟ್ಟಿರುವ ನಿಜತ್ವವು ತಾನೇ ಅವನ ಒಂದು ಶ್ಲಾಘನೀಯ ಮತ್ತು ಅಪೇಕ್ಷಣೀಯ ಗುಣವನ್ನು ಪ್ರಕಟಪಡಿಸುತ್ತದೆ.

16, 17. (ಎ) ದೇವರ ರಾಜ್ಯದ ಸುವಾರ್ತೆಯನ್ನು ಸಾರುವುದರಲ್ಲಿ ಯೇಸು ನ್ಯಾಯವನ್ನು ಹೇಗೆ ಪ್ರದರ್ಶಿಸಿದನು? (ಬಿ) ಅವನ ನ್ಯಾಯಪರತೆಯು ಕರುಣಾಭರಿತವಾಗಿತ್ತೆಂದು ಯೇಸು ತೋರಿಸಿದ್ದು ಹೇಗೆ?

16 ಎರಡನೆಯದಾಗಿ, ದೇವರ ರಾಜ್ಯದ ಸುವಾರ್ತೆಯನ್ನು ಸಾರಿದ ರೀತಿಯಲ್ಲಿ ಯೇಸು ನ್ಯಾಯವನ್ನು ಪ್ರದರ್ಶಿಸಿದನು. ಅವನು ಯಾವುದೇ ರೀತಿಯ ಪಕ್ಷಪಾತವನ್ನು ತೋರಿಸಿರಲಿಲ್ಲ. ಬದಲಿಗೆ, ಶ್ರೀಮಂತರು ಬಡವರೆನ್ನದೆ ಎಲ್ಲಾ ತರದ ಜನರಿಗೆ ಸುವಾರ್ತೆಯನ್ನು ತಲಪಿಸಲು ಶ್ರದ್ಧೆಯಿಂದ ಪರಿಶ್ರಮಿಸಿದನು. ಇದಕ್ಕೆ ವೈದೃಶ್ಯದಲ್ಲಿ, ಫರಿಸಾಯರಾದರೋ ಬಡವರಾದ ಸಾಮಾನ್ಯ ಜನತೆಯನ್ನು ತಿರಸ್ಕಾರದಿಂದ ನೋಡಿ ಅವರನ್ನು ತುಚ್ಛೀಕಾರದ ಪದವಾದ ಆಮ್‌ಹಆರೆಟ್ಸ್‌ ಅಥವಾ “ಜಮೀನಿನ ಜನರು” ಎಂದು ಕರೆದರು. ಈ ಅನ್ಯಾಯವನ್ನು ಯೇಸು ಧೈರ್ಯದಿಂದ ತಿದ್ದಿಸರಿಪಡಿಸಿದನು. ಅವನು ಜನರಿಗೆ ಸುವಾರ್ತೆಯನ್ನು ಕಲಿಸಿದಾಗ ಮಾತ್ರವಲ್ಲದೆ ಅವರೊಂದಿಗೆ ಊಟಮಾಡಿದಾಗ, ಅವರಿಗೆ ಉಣಬಡಿಸಿದಾಗ, ಅವರನ್ನು ವಾಸಿಮಾಡಿದಾಗ ಅಥವಾ ಅವರನ್ನು ಸತ್ತವರೊಳಗಿಂದ ಎಬ್ಬಿಸಿದಾಗಲೂ, “ಎಲ್ಲಾ ಮನುಷ್ಯ”ರನ್ನು ತಲಪಲು ಬಯಸುವ ದೇವರ ನ್ಯಾಯವನ್ನು ಎತ್ತಿಹಿಡಿದನು. *​—1 ತಿಮೊಥೆಯ 2:4.

17 ಮೂರನೆಯದಾಗಿ, ಯೇಸುವಿನ ನ್ಯಾಯಪರತೆಯು ಮಹಾಕರುಣೆಯಿಂದ ಕೂಡಿತ್ತು. ಪಾಪಿಗಳಾದ ಜನರಿಗೆ ಸಹಾಯಮಾಡಲು ಅವನು ಬಹಳ ಪ್ರಯಾಸಪಟ್ಟನು. (ಮತ್ತಾಯ 9:11-13) ತಮ್ಮನ್ನು ಕಾಪಾಡಿಕೊಳ್ಳಲು ಶಕ್ತಿಹೀನರಾದ ಜನರ ಸಹಾಯಕ್ಕಾಗಿ ಅವನು ಸದಾಸಿದ್ಧನಾಗಿದ್ದನು. ಉದಾಹರಣೆಗೆ, ಅನ್ಯಜನರಲ್ಲಿ ಯಾರಲ್ಲೂ ಭರವಸೆಯಿಡಬಾರದೆಂಬ ನಂಬಿಕೆಯನ್ನು ಪ್ರವರ್ಧಿಸುತ್ತಿದ್ದ ಧಾರ್ಮಿಕ ಮುಖಂಡರ ಪಕ್ಷವನ್ನು ಯೇಸು ಹಿಡಿಯಲಿಲ್ಲ. ಅವನ ಪ್ರಧಾನ ಕಾರ್ಯಕ್ಷೇತ್ರ ಯೆಹೂದಿ ಜನರಾಗಿದ್ದರೂ, ಅವನು ಅನ್ಯಜನರಲ್ಲಿ ಕೆಲವರಿಗೆ ಕರುಣೆಯಿಂದ ಸಹಾಯಮಾಡಿ ಕಲಿಸಿದನು. ಒಬ್ಬ ರೋಮನ್‌ ಶತಾಧಿಪತಿಗಾಗಿ ಒಂದು ಅದ್ಭುತಕರವಾದ ವಾಸಿಯನ್ನು ಮಾಡಲು ಒಪ್ಪುತ್ತಾ ಅವನಂದದ್ದು: “ನಾನು ಇಂಥ ದೊಡ್ಡ ನಂಬಿಕೆಯನ್ನು ಇಸ್ರಾಯೇಲ್‌ ಜನರಲ್ಲಿಯೂ ಕಾಣಲಿಲ್ಲ.”​—ಮತ್ತಾಯ 8:5-13.

18, 19. (ಎ) ಯಾವ ವಿಧಗಳಲ್ಲಿ ಯೇಸು ಸ್ತ್ರೀಯರಿಗಾಗಿ ಸನ್ಮಾನವನ್ನು ಪ್ರವರ್ಧಿಸಿದನು? (ಬಿ) ಧೈರ್ಯ ಮತ್ತು ನ್ಯಾಯದ ನಡುವಣ ಸಂಬಂಧವನ್ನು ನೋಡಲು ಯೇಸುವಿನ ಮಾದರಿಯು ನಮಗೆ ಹೇಗೆ ಸಹಾಯಮಾಡುತ್ತದೆ?

18 ತದ್ರೀತಿಯಲ್ಲಿ ಸ್ತ್ರೀಯರ ಕಡೆಗೆ ಆಗ ಇದ್ದಂಥ ಅಭಿಪ್ರಾಯಗಳನ್ನೂ ಯೇಸು ಬೆಂಬಲಿಸಲಿಲ್ಲ. ಬದಲಿಗೆ ಯಾವುದು ನ್ಯಾಯವೋ ಅದನ್ನು ಧೈರ್ಯದಿಂದ ಮಾಡಿದನು. ಸಮಾರ್ಯದ ಸ್ತ್ರೀಯರು ಅನ್ಯಜನರಂತೆಯೇ ಅಶುದ್ಧರೆಂದೆಣಿಸಲ್ಪಡುತ್ತಿದ್ದರು. ಆದರೂ, ಸುಖರೆಂಬ ಊರಿನ ಬಾವಿಯ ಬಳಿಯಲ್ಲಿದ್ದ ಸಮಾರ್ಯದ ಒಬ್ಬ ಸ್ತ್ರೀಗೆ ಸಾರಲು ಯೇಸು ಹಿಂಜರಿಯಲಿಲ್ಲ. ವಾಸ್ತವದಲ್ಲಿ ಯೇಸು, ತಾನೇ ವಾಗ್ದತ್ತ ಮೆಸ್ಸೀಯನೆಂದು ಮೊದಲನೆಯ ಬಾರಿ ಸ್ಪಷ್ಟವಾಗಿ ಪರಿಚಯವನ್ನು ಮಾಡಿಕೊಟ್ಟದ್ದು ಈ ಸ್ತ್ರೀಗೆ. (ಯೋಹಾನ 4:6, 25, 26) ಸ್ತ್ರೀಯರಿಗೆ ದೇವರ ಧರ್ಮಶಾಸ್ತ್ರವನ್ನು ಕಲಿಸಬಾರದೆಂದು ಫರಿಸಾಯರು ಹೇಳುತ್ತಿದ್ದರು, ಆದರೆ ಯೇಸು ಸ್ತ್ರೀಯರಿಗೆ ಕಲಿಸುವುದರಲ್ಲಿ ಬಹಳಷ್ಟು ಸಮಯ ಮತ್ತು ಶಕ್ತಿಯನ್ನು ವಿನಿಯೋಗಿಸಿದನು. (ಲೂಕ 10:38-42) ಸ್ತ್ರೀಯರು ಭರವಸಯೋಗ್ಯ ಸಾಕ್ಷಿಯನ್ನು ಕೊಡಲು ಸಾಧ್ಯವಿಲ್ಲವೆಂದು ಸಂಪ್ರದಾಯವು ವಿಧಿಸಿತ್ತಾದರೂ, ಯೇಸು ತನ್ನ ಪುನರುತ್ಥಾನದ ನಂತರ ತನ್ನನ್ನು ಪ್ರಥಮವಾಗಿ ನೋಡುವ ವಿಶೇಷ ಸಂದರ್ಭವನ್ನು ಹಲವಾರು ಸ್ತ್ರೀಯರಿಗೆ ಕೊಟ್ಟು ಅವರನ್ನು ಸನ್ಮಾನಿಸಿದನು. ಈ ಅತಿ ಪ್ರಾಮುಖ್ಯ ಸಂಗತಿಯನ್ನು ತನ್ನ ಗಂಡುಶಿಷ್ಯರಿಗೆ ಹೋಗಿ ತಿಳಿಸುವಂತೆಯೂ ಅವನು ಅವರಿಗೆ ಹೇಳಿದ್ದನು.​—ಮತ್ತಾಯ 28:1-10.

19 ಹೌದು, ನ್ಯಾಯವೆಂದರೇನೆಂದು ಜನಾಂಗಗಳಿಗೆ ಯೇಸು ಸ್ಪಷ್ಟಪಡಿಸಿದ್ದನು. ಅನೇಕ ಸಂದರ್ಭಗಳಲ್ಲಿ ಸ್ವತಃ ಮಹಾ ಹಾನಿಯನ್ನು ಎದುರಿಸಿಯೂ ಅವನದನ್ನು ಮಾಡಿದನು. ನಿಜ ನ್ಯಾಯವನ್ನು ಎತ್ತಿಹಿಡಿಯಲಿಕ್ಕೆ ಧೈರ್ಯದ ಆವಶ್ಯಕತೆಯಿದೆಯೆಂದು ನೋಡಲು ಯೇಸುವಿನ ಮಾದರಿಯು ನಮಗೆ ಸಹಾಯಮಾಡುತ್ತದೆ. “ಯೂದಾ ಕುಲದಲ್ಲಿ ಜನಿಸಿದ ಸಿಂಹ”ವೆಂದು ಅವನು ಕರೆಯಲ್ಪಟ್ಟಿರುವುದು ಯುಕ್ತವೇ ಸರಿ. (ಪ್ರಕಟನೆ 5:5) ಸಿಂಹವು, ನಿರ್ಭೀತ ನ್ಯಾಯದ ದ್ಯೋತಕವಾಗಿದೆ ಎಂಬುದನ್ನು ಜ್ಞಾಪಿಸಿಕೊಳ್ಳಿರಿ. ಬೇಗನೆ ಭವಿಷ್ಯದಲ್ಲಿ ಯೇಸು ಇನ್ನಷ್ಟು ಮಹತ್ತಾದ ನ್ಯಾಯವನ್ನು ತರಲಿರುವನು. ಹೀಗೆ ಒಂದು ಸಂಪೂರ್ಣವಾದ ಅರ್ಥದಲ್ಲಿ ಅವನು “ಲೋಕದಲ್ಲಿ ಸದ್ಧರ್ಮ [“ನ್ಯಾಯ,” NW]ವನ್ನು” ಸ್ಥಾಪಿಸುವನು.​—ಯೆಶಾಯ 42:4.

ಮೆಸ್ಸೀಯ ರಾಜನು ‘ಲೋಕದಲ್ಲಿ ನ್ಯಾಯವನ್ನು ಸ್ಥಾಪಿಸುತ್ತಾನೆ’

20, 21. ಈಗ ನಮ್ಮ ಸಮಯದಲ್ಲಿ, ಮೆಸ್ಸೀಯ ರಾಜನು ಭೂಮಿಯಲ್ಲೆಲ್ಲಾ ಮತ್ತು ಕ್ರೈಸ್ತ ಸಭೆಯೊಳಗೂ ನ್ಯಾಯವನ್ನು ಹೇಗೆ ಪ್ರವರ್ಧಿಸಿದ್ದಾನೆ?

20 ಯೇಸು 1914ರಲ್ಲಿ ಮೆಸ್ಸೀಯ ರಾಜನಾದ ಸಮಯದಿಂದ, ಲೋಕದಲ್ಲಿ ನ್ಯಾಯವನ್ನು ಪ್ರವರ್ಧಿಸಿದ್ದಾನೆ. ಅದು ಹೇಗೆ? ಮತ್ತಾಯ 24:14 ರಲ್ಲಿ ಕಂಡುಬರುವ ತನ್ನ ಪ್ರವಾದನೆಯು ನೆರವೇರುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಮೂಲಕವೇ. ಭೂಮಿಯಲ್ಲಿರುವ ಯೇಸುವಿನ ಹಿಂಬಾಲಕರು ಎಲ್ಲಾ ದೇಶಗಳ ಜನರಿಗೆ ಯೆಹೋವನ ರಾಜ್ಯದ ಕುರಿತ ಸತ್ಯವನ್ನು ಕಲಿಸಿದ್ದಾರೆ. ಯೇಸುವಿನಂತೆ ಅವರು ನಿಷ್ಪಕ್ಷಪಾತದಿಂದಲೂ ನ್ಯಾಯದಿಂದಲೂ ಸಾರುತ್ತಾ​—ಆಬಾಲವೃದ್ಧರೆನ್ನದೆ, ಬಡವಬಲ್ಲಿದರೆನ್ನದೆ, ಸ್ತ್ರೀಪುರುಷರೆನ್ನದೆ​—ಎಲ್ಲರಿಗೂ ನ್ಯಾಯವಂತ ದೇವರಾದ ಯೆಹೋವನನ್ನು ತಿಳಿಯುವ ಸುಸಂದರ್ಭವನ್ನು ಕೊಟ್ಟಿರುತ್ತಾರೆ.

21 ಕ್ರೈಸ್ತ ಸಭೆಯೊಳಗೂ ಯೇಸು ನ್ಯಾಯವನ್ನು ಪ್ರವರ್ಧಿಸುತ್ತಿದ್ದಾನೆ, ಅವನೇ ಆ ಸಭೆಯ ಶಿರಸ್ಸು. ಪ್ರವಾದಿಸಲ್ಪಟ್ಟ ಪ್ರಕಾರವೇ, ಅವನು ಸಭೆಯಲ್ಲಿ ನಾಯಕತ್ವವನ್ನು ವಹಿಸುವ “ಮನುಷ್ಯರಿಗೆ ದಾನ”ಗಳಾದ ನಂಬಿಗಸ್ತ ಕ್ರೈಸ್ತ ಹಿರಿಯರನ್ನು ಒದಗಿಸುತ್ತಾನೆ. (ಎಫೆಸ 4:8-12) ದೇವರ ಅಮೂಲ್ಯವಾದ ಹಿಂಡಿನ ಕುರಿಪಾಲನೆಯನ್ನು ಮಾಡುವಾಗ, ಈ ಪುರುಷರು ನ್ಯಾಯವನ್ನು ಪ್ರವರ್ಧಿಸುವುದರಲ್ಲಿ ಯೇಸು ಕ್ರಿಸ್ತನ ಮಾದರಿಯನ್ನು ಅನುಸರಿಸುತ್ತಾರೆ. ಅವನ ಕುರಿಗಳೊಂದಿಗೆ​—ಅವರ ಸ್ಥಾನಮಾನ, ಪ್ರಮುಖತೆ ಅಥವಾ ಭೌತಿಕ ಸ್ಥಿತಿಗಳೇನೇ ಆಗಿರಲಿ​—ನ್ಯಾಯದಿಂದ ವ್ಯವಹರಿಸುವಂತೆ ಯೇಸು ಬಯಸುತ್ತಾನೆಂಬುದನ್ನು ಅವರು ಯಾವಾಗಲೂ ಮನಸ್ಸಿನಲ್ಲಿಡುತ್ತಾರೆ.

22. ಇಂದಿನ ಲೋಕದಲ್ಲಿ ತುಂಬಿಹೋಗಿರುವ ಅನ್ಯಾಯಗಳ ಕುರಿತು ಯೆಹೋವನ ಅನಿಸಿಕೆ ಹೇಗಿದೆ, ಮತ್ತು ತನ್ನ ಮಗನು ಆ ಕುರಿತು ಏನು ಮಾಡುವಂತೆ ಆತನು ನೇಮಿಸಿದ್ದಾನೆ?

22 ಭವಿಷ್ಯತ್ತಿನಲ್ಲಾದರೊ ಯೇಸು ಭೂಮಿಯಲ್ಲಿ ಒಂದು ಅಭೂತಪೂರ್ವ ರೀತಿಯಲ್ಲಿ ನ್ಯಾಯವನ್ನು ಸ್ಥಾಪಿಸುವನು. ಈ ಭ್ರಷ್ಟಲೋಕದಲ್ಲಿ ಅನ್ಯಾಯವು ತುಂಬಿಹೋಗಿದೆ. ಹೊಟ್ಟೆಗಿಲ್ಲದೆ ಸಾಯುವ ಪ್ರತಿಯೊಂದು ಮಗುವು ಅಕ್ಷಮ್ಯ ಅನ್ಯಾಯದ ಬಲಿಪಶುವಾಗಿರುತ್ತದೆ. ಇದು, ವಿಶೇಷವಾಗಿ ಯುದ್ಧಶಸ್ತ್ರಗಳ ಉತ್ಪಾದನೆಯಲ್ಲಿ ಮತ್ತು ಸುಖಾಭಿಲಾಷಿಗಳ ಸ್ವಾರ್ಥಪರ ಲೋಲುಪತೆಯಲ್ಲಿ ಪೋಲುಮಾಡಲಾಗುವ ಹಣ ಮತ್ತು ಸಮಯದ ಕುರಿತು ನಾವು ಯೋಚಿಸುವಾಗ ಅನ್ಯಾಯವೇ ಸರಿ. ಪ್ರತಿ ವರ್ಷ ಸಂಭವಿಸುವ ಕೋಟಿಗಟ್ಟಲೆ ಅನಾವಶ್ಯಕ ಮರಣಗಳು ಅನ್ಯಾಯದ ಅನೇಕ ರೂಪಗಳಲ್ಲಿ ಕೇವಲ ಒಂದು. ಅವೆಲ್ಲವು ಯೆಹೋವನ ಧರ್ಮಕ್ರೋಧವನ್ನು ಕೆರಳಿಸುತ್ತವೆ. ಎಲ್ಲಾ ವಿಧದ ಅನ್ಯಾಯವನ್ನು ಶಾಶ್ವತವಾಗಿ ಕೊನೆಗೊಳಿಸಲು, ಈ ದುಷ್ಟ ವಿಷಯಗಳ ವ್ಯವಸ್ಥೆಯ ವಿರುದ್ಧವಾಗಿ ಒಂದು ನೀತಿಯ ಯುದ್ಧವನ್ನು ನಡಿಸಲು ಆತನು ತನ್ನ ಮಗನನ್ನು ನೇಮಿಸಿರುತ್ತಾನೆ.​—ಪ್ರಕಟನೆ 16:14, 16; 19:11-15.

23. ಹರ್ಮಗೆದೋನಿನ ಬಳಿಕ, ಕ್ರಿಸ್ತನು ಭೂಮಿಯಲ್ಲೆಲ್ಲಾ ನ್ಯಾಯವನ್ನು ಶಾಶ್ವತವಾಗಿ ಹೇಗೆ ಪ್ರವರ್ಧಿಸುವನು?

23 ಆದರೆ ಯೆಹೋವನ ನ್ಯಾಯವು ಕೇವಲ ದುಷ್ಟರ ನಾಶನಕ್ಕಿಂತ ಹೆಚ್ಚನ್ನು ಅವಶ್ಯಪಡಿಸುತ್ತದೆ. ಆತನು ತನ್ನ ಮಗನನ್ನು “ಶಾಂತಿಯ ಪ್ರಭು”ವಾಗಿ (NW) ಆಳುವಂತೆ ನೇಮಿಸಿದ್ದಾನೆ ಸಹ. ಹರ್ಮಗೆದೋನ್‌ ಯುದ್ಧದ ಬಳಿಕ ಯೇಸುವಿನ ಆಳಿಕೆಯು ಭೂಮಿಯಲ್ಲೆಲ್ಲಾ ಶಾಂತಿಯನ್ನು ಸ್ಥಾಪಿಸುವುದು ಮತ್ತು ಅವನು “ನ್ಯಾಯ”ದಿಂದ ಆಳುವನು. (ಯೆಶಾಯ 9:6, 7) ಇಡೀ ಲೋಕದಲ್ಲಿ ಎಷ್ಟೋ ಕಷ್ಟಸಂಕಟ ಮತ್ತು ದುರವಸ್ಥೆಯನ್ನು ಉಂಟುಮಾಡಿರುವ ಅನ್ಯಾಯಗಳನ್ನೆಲ್ಲಾ ತೊಡೆದುಹಾಕಲು ಯೇಸು ಸಂತೋಷಪಡುವನು. ಅನಂತಕಾಲಕ್ಕೂ ಯೆಹೋವನ ಪರಿಪೂರ್ಣ ನ್ಯಾಯವನ್ನು ಅವನು ನಂಬಿಗಸ್ತಿಕೆಯಿಂದ ಎತ್ತಿಹಿಡಿಯುವನು. ಆದುದರಿಂದ ಯೆಹೋವನ ನ್ಯಾಯವನ್ನು ಅನುಸರಿಸಲು ನಾವು ಈಗಲೇ ಪ್ರಯತ್ನಿಸುವುದು ಅತ್ಯಾವಶ್ಯಕ. ಅದನ್ನು ಹೇಗೆ ಮಾಡಬಹುದೆಂದು ನಾವು ನೋಡೋಣ.

^ ಪ್ಯಾರ. 1 ಧರ್ಮಕ್ರೋಧವನ್ನು ತೋರಿಸಿದ್ದರಲ್ಲಿ ಯೇಸು ಯೆಹೋವನಂತಿದ್ದನು, ಯಾಕಂದರೆ ಯೆಹೋವನು ಎಲ್ಲಾ ತರದ ದುಷ್ಟತನದ ವಿರುದ್ಧ “ದೀರ್ಘರೋಷ”ವುಳ್ಳವನು. (ನಹೂಮ 1:2) ದೃಷ್ಟಾಂತಕ್ಕಾಗಿ, ಮೊಂಡರಾದ ತನ್ನ ಜನರು ತನ್ನ ಆಲಯವನ್ನು “ಕಳ್ಳರ ಗವಿಯಾಗಿ” ಮಾಡಿದ್ದರೆಂದು ಅವರಿಗೆ ಹೇಳಿದ ಬಳಿಕ, ಯೆಹೋವನಂದದ್ದು: “ಆಹಾ, ನನ್ನ ಕೋಪವೆಂಬ ರೋಷಾಗ್ನಿಯು ಈ ಸ್ಥಳದಲ್ಲಿ ಸುರಿಯಲ್ಪಡುವದು.”​—ಯೆರೆಮೀಯ 7:11, 20.

^ ಪ್ಯಾರ. 3 ಮಿಷ್ನಾಕ್ಕೆ ಅನುಸಾರವಾಗಿ, ಆಲಯದಲ್ಲಿ ಮಾರಾಟಮಾಡಲ್ಪಡುತ್ತಿದ್ದ ಪಾರಿವಾಳಗಳ ವಿಪರೀತ ಬೆಲೆಯ ಕುರಿತು ಕೆಲವು ವರ್ಷಗಳ ತರುವಾಯ ಆಕ್ಷೇಪವೆತ್ತಲಾಯಿತು. ಒಡನೆಯೆ ಬೆಲೆಯನ್ನು 99 ಪ್ರತಿಶತ ತಗ್ಗಿಸಲಾಯಿತು! ಈ ಲಾಭಕರ ವ್ಯಾಪಾರದಲ್ಲಿ ಹೆಚ್ಚಿನದ್ದು ಯಾರ ಜೇಬು ಸೇರುತ್ತಿತ್ತು? ಆಲಯದ ವ್ಯಾಪಾರ ಸ್ಥಳಗಳು ಮಹಾಯಾಜಕ ಅನ್ನನ ಮನೆಯವರ ಒಡೆತನದಲ್ಲಿದ್ದು, ಆ ಯಾಜಕ ಕುಟುಂಬದ ಅಪಾರ ಸಂಪತ್ತಿನಲ್ಲಿ ಹೆಚ್ಚಿನದ್ದಕ್ಕೆ ಇದೇ ಕಾರಣವಾಗಿತ್ತೆಂದು ಕೆಲವು ಇತಿಹಾಸಕಾರರು ಸೂಚಿಸುತ್ತಾರೆ.​—ಯೋಹಾನ 18:​12ಬಿ, 13.

^ ಪ್ಯಾರ. 16 ಧರ್ಮಶಾಸ್ತ್ರವನ್ನು ಅರಿಯದವರಾಗಿದ್ದ ದೀನರಾದ ಜನರನ್ನು ಫರಿಸಾಯರು “ಶಾಪಗ್ರಸ್ತ”ರೆಂದು ಕರೆದರು. (ಯೋಹಾನ 7:49) ಅಂಥ ಜನರಿಗೆ ಯಾರೂ ಕಲಿಸಲೂಬಾರದು, ಅವರೊಂದಿಗೆ ವ್ಯಾಪಾರವನ್ನಾಗಲಿ ಊಟವನ್ನಾಗಲಿ ಮಾಡಬಾರದು, ಪ್ರಾರ್ಥಿಸಲೂ ಬಾರದೆಂದು ಅವರು ವಿಧಿಸಿದ್ದರು. ಒಬ್ಬನು ತನ್ನ ಮಗಳನ್ನು ಅವರಲ್ಲೊಬ್ಬನಿಗೆ ಮದುವೆಮಾಡಿಕೊಡುವುದು ಅವಳನ್ನು ಕ್ರೂರಮೃಗಗಳ ಬಾಯಿಗೆ ಹಾಕುವುದಕ್ಕಿಂತಲೂ ಅತಿಕೆಟ್ಟದ್ದಾಗಿತ್ತು. ಅಂಥ ಕೀಳು ಸ್ಥಿತಿಯ ಜನರಿಗೆ ಪುನರುತ್ಥಾನದ ನಿರೀಕ್ಷೆಯಿಲ್ಲವೆಂದೂ ಅವರು ನೆನಸಿದ್ದರು.