ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 23

‘ದೇವರು ಮೊದಲು ನಮ್ಮನ್ನು ಪ್ರೀತಿಸಿದನು’

‘ದೇವರು ಮೊದಲು ನಮ್ಮನ್ನು ಪ್ರೀತಿಸಿದನು’

1-3. ಯೇಸುವಿನ ಮರಣವನ್ನು ಇತಿಹಾಸದಲ್ಲಿನ ಬೇರೆ ಯಾವುದೇ ಮರಣಕ್ಕೆ ಅಸದೃಶವನ್ನಾಗಿ ಮಾಡಿದ ಕೆಲವು ಸಂಗತಿಗಳು ಯಾವುವು?

ಸುಮಾರು 2,000 ವರ್ಷಗಳ ಹಿಂದೆ ವಸಂತಕಾಲದ ಒಂದು ದಿನದಂದು, ಒಬ್ಬ ನಿರ್ದೋಷಿ ಮನುಷ್ಯನನ್ನು ವಿಚಾರಣೆಗೊಳಪಡಿಸಿ, ಅವನೆಂದೂ ಮಾಡಿರದಂಥ ದುಷ್ಕರ್ಮಗಳಿಗಾಗಿ ಅಪರಾಧಿಯೆಂದು ನಿರ್ಣಯಿಸಲಾಯಿತು, ಮತ್ತು ನಂತರ ಚಿತ್ರಹಿಂಸೆಗೊಳಪಡಿಸಿ ಕೊಲ್ಲಲಾಯಿತು. ಈ ಕ್ರೂರ ಮತ್ತು ಅನ್ಯಾಯದ ಮರಣದಂಡನೆಯು ಇತಿಹಾಸದಲ್ಲಿ ಮೊದಲನೆಯದ್ದೂ ಅಲ್ಲ, ಇಲ್ಲವೆ, ದುಃಖಕರವಾಗಿ, ಕೊನೆಯದ್ದೂ ಆಗಿರಲಿಲ್ಲ. ಆದರೂ ಆ ಮರಣವು ಬೇರೆ ಯಾವುದೇ ಮರಣಕ್ಕೆ ಅಸದೃಶವಾಗಿತ್ತು.

2 ಆ ಮನುಷ್ಯನು ತನ್ನ ಕೊನೆಯ, ಯಾತನಾಭರಿತ ತಾಸುಗಳಲ್ಲಿ ನರಳುತ್ತಿದ್ದಾಗ, ಆಕಾಶವು ತಾನೇ ಆ ಘಟನೆಯ ಮಹತ್ವಕ್ಕೆ ಸಾಕ್ಷಿಕೊಟ್ಟಿತ್ತು. ಅದು ನಡುಮಧ್ಯಾಹ್ನದ ಸಮಯವಾಗಿದ್ದರೂ, ಥಟ್ಟನೆ ದೇಶದ ಮೇಲೆಲ್ಲಾ ಕತ್ತಲು ಕವಿಯಿತು. ಒಬ್ಬ ಇತಿಹಾಸಕಾರನು ಬರೆದ ಪ್ರಕಾರ, “ಸೂರ್ಯನು ಕಾಂತಿಗುಂದಿ”ದನು. (ಲೂಕ 23:44, 45) ಆಗ, ಆ ಮನುಷ್ಯನು ತನ್ನ ಕೊನೆಯುಸಿರೆಳೆಯುವ ತುಸು ಮುಂಚೆ, “ಅದು ನೆರವೇರಿತು” (NW) ಎಂಬ ಅವಿಸ್ಮರಣೀಯ ಮಾತುಗಳನ್ನು ನುಡಿದನು. ಹೌದು, ತನ್ನ ಜೀವವನ್ನು ಅರ್ಪಿಸುವ ಮೂಲಕ ಅವನೊಂದು ಅದ್ಭುತ ಕೆಲಸವನ್ನು ಪೂರೈಸಿದ್ದನು. ಅವನ ಯಜ್ಞಾರ್ಪಣೆಯು, ಯಾವನೇ ಮಾನವನಿಂದ ನಡಿಸಲ್ಪಟ್ಟ ಪ್ರೀತಿಯ ಯಾವುದೇ ಕೃತ್ಯಕ್ಕಿಂತ ಅತ್ಯಂತ ಮಹಾನ್‌ ಕೃತ್ಯವಾಗಿತ್ತು.​—ಯೋಹಾನ 15:13; 19:30.

3 ಹೌದು, ಆ ಮನುಷ್ಯನು ಯೇಸು ಕ್ರಿಸ್ತನಾಗಿದ್ದನು. ಸಾ.ಶ. 33, ನೈಸಾನ್‌ 14ರ ಆ ಮಬ್ಬುಗವಿದ ದಿನದಂದು ಅವನು ಅನುಭವಿಸಿದ ಕಷ್ಟಾನುಭವ ಮತ್ತು ಮರಣವು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೂ ಒಂದು ಪ್ರಾಮುಖ್ಯ ನಿಜತ್ವವು ಹೆಚ್ಚಾಗಿ ದುರ್ಲಕ್ಷಿಸಲ್ಪಟ್ಟಿರುತ್ತದೆ. ಯೇಸು ತೀವ್ರ ಯಾತನೆಯನ್ನು ಅನುಭವಿಸುತ್ತಿದ್ದಾಗ, ಇನ್ನೊಬ್ಬ ವ್ಯಕ್ತಿಯು ಅದಕ್ಕಿಂತಲೂ ಹೆಚ್ಚಿನ ಯಾತನೆ ಅನುಭವಿಸಿದನು. ವಾಸ್ತವದಲ್ಲಿ, ಆ ಇನ್ನೊಬ್ಬ ವ್ಯಕ್ತಿಯು ಆ ದಿನ ಇನ್ನೂ ಹೆಚ್ಚು ಮಹತ್ತಾದ ತ್ಯಾಗವನ್ನು, ಇಡೀ ವಿಶ್ವದಲ್ಲಿ ಬೇರೆ ಯಾರಿಂದಲೂ ಎಂದಿಗೂ ಮಾಡಲ್ಪಟ್ಟಿರದಿದ್ದ ಪ್ರೀತಿಯ ಅತ್ಯಂತ ಮಹಾನ್‌ ಕೃತ್ಯವನ್ನು ಮಾಡಿದ್ದನು. ಆ ಕೃತ್ಯವು ಯಾವುದು? ಅದಕ್ಕೆ ಉತ್ತರವು, ವಿಷಯಗಳಲ್ಲೇ ಅತಿ ಮಹತ್ವಪೂರ್ಣವಾದ ಒಂದು ವಿಷಯಕ್ಕೆ ತಕ್ಕದಾದ ಪೀಠಿಕೆಯನ್ನು ಹಾಕುತ್ತದೆ. ಅದೇ ಯೆಹೋವನ ಪ್ರೀತಿ.

ಪ್ರೀತಿಯ ಅತ್ಯಂತ ಮಹಾನ್‌ ಕೃತ್ಯ

4. ಯೇಸು ಒಬ್ಬ ಸಾಧಾರಣ ಮನುಷ್ಯನಲ್ಲವೆಂದು ಒಬ್ಬ ರೋಮನ್‌ ಸೈನಿಕನು ಕಂಡುಕೊಂಡದ್ದು ಹೇಗೆ, ಮತ್ತು ಆ ಸೈನಿಕನು ಯಾವ ತೀರ್ಮಾನಕ್ಕೆ ಬಂದನು?

4 ಯೇಸುವಿನ ಮರಣದಂಡನೆಯ ಉಸ್ತುವಾರಿ ಮಾಡುತ್ತಿದ್ದ ಆ ರೋಮನ್‌ ಶತಾಧಿಪತಿಯು, ಯೇಸುವಿನ ಮರಣಕ್ಕೆ ಮುಂಚೆ ಕವಿದಿದ್ದ ಕತ್ತಲಿನಿಂದ ಮತ್ತು ಅದನ್ನು ಹಿಂಬಾಲಿಸಿ ಬಂದ ಭಯಂಕರ ಭೂಕಂಪದಿಂದ ಚಕಿತನಾದನು. “ನಿಜವಾಗಿ ಈತನು ದೇವಕುಮಾರನಾಗಿದ್ದನು” ಎಂದನವನು. (ಮತ್ತಾಯ 27:54) ಯೇಸುವೇನೂ ಸಾಮಾನ್ಯ ವ್ಯಕ್ತಿಯಾಗಿರಲಿಲ್ಲವೆಂಬುದು ಸ್ಪಷ್ಟ. ಆ ಸೈನಿಕನು ಯಾರನ್ನು ವಧಿಸಲು ನೆರವು ನೀಡಿದನೊ ಅವನು ಮಹೋನ್ನತನಾದ ದೇವರ ಏಕಜಾತ ಪುತ್ರನಾಗಿದ್ದನು! ಆದರೆ ವಾಸ್ತವದಲ್ಲಿ ಈ ಪುತ್ರನು ಅವನ ತಂದೆಗೆ ಎಷ್ಟು ಪ್ರಿಯನಾಗಿದ್ದನು?

5. ಯೆಹೋವನು ಮತ್ತು ಆತನ ಕುಮಾರನು ಪರಲೋಕದಲ್ಲಿ ಒಟ್ಟಾಗಿ ಕಳೆದ ಬಹು ವಿಸ್ತಾರವಾದ ಕಾಲಾವಧಿಯನ್ನು ಹೇಗೆ ಚಿತ್ರಿಸಬಹುದು?

5 ಬೈಬಲು ಯೇಸುವನ್ನು ‘ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರನು’ ಎಂದು ಕರೆಯುತ್ತದೆ. (ಕೊಲೊಸ್ಸೆ 1:15) ತುಸು ಯೋಚಿಸಿರಿ​—ಈ ಭೌತಿಕ ವಿಶ್ವವು ಅಸ್ತಿತ್ವಕ್ಕೆ ಬರುವ ಮುಂಚೆಯೇ ಯೆಹೋವನ ಪುತ್ರನು ಅಸ್ತಿತ್ವದಲ್ಲಿದ್ದನು. ಹಾಗಾದರೆ, ತಂದೆಯೂ ಮಗನೂ ಎಷ್ಟು ಕಾಲ ಜೊತೆಯಾಗಿದ್ದರು? ಈ ವಿಶ್ವವು ಸುಮಾರು 1,300 ಕೋಟಿ ವರ್ಷಗಳಷ್ಟು ಪುರಾತನದ್ದೆಂದು ಕೆಲವು ವಿಜ್ಞಾನಿಗಳು ಅಂದಾಜುಮಾಡುತ್ತಾರೆ. ಅಷ್ಟೊಂದು ಕಾಲಾವಧಿಯನ್ನು ನಿಮಗೆ ಊಹಿಸಲಿಕ್ಕಾದರೂ ಸಾಧ್ಯವಿದೆಯೊ? ವಿಜ್ಞಾನಿಗಳಿಂದ ಅಂದಾಜುಮಾಡಲ್ಪಟ್ಟ ವಿಶ್ವದ ವಯಸ್ಸನ್ನು ಜನರು ಗ್ರಹಿಸುವಂತೆ ಸಹಾಯಮಾಡಲು ಒಂದು ಪ್ಲ್ಯಾನಿಟೇರಿಯಮ್‌ನಲ್ಲಿ 110 ಮೀಟರ್‌ ಉದ್ದದ ಒಂದು ಕಾಲಗಣನ ತಖ್ತೆಯನ್ನು ಇಡಲಾಗಿದೆ. ಸಂದರ್ಶಕರು ಆ ಕಾಲಗಣನ ತಖ್ತೆಯ ಉದ್ದಕ್ಕೂ ನಡೆಯುವಾಗ ಇಡುವ ಪ್ರತಿಯೊಂದು ಹೆಜ್ಜೆಯು, ವಿಶ್ವದ ಆಯುಸ್ಸಿನಲ್ಲಿ ಸುಮಾರು 7.5 ಕೋಟಿ ವರ್ಷಗಳನ್ನು ಪ್ರತಿನಿಧಿಸುತ್ತದೆ. ಆ ಕಾಲಗಣನ ತಖ್ತೆಯ ಕೊನೆಯಲ್ಲಿ, ಇಡೀ ಮಾನವ ಇತಿಹಾಸವನ್ನು ಮನುಷ್ಯನ ಒಂದು ಕೂದಲಿನಷ್ಟೇ ದಪ್ಪವಿರುವ ಏಕೈಕ ಗೆರೆಯಿಂದ ಪ್ರತಿನಿಧಿಸಲಾಗಿದೆ! ಒಂದುವೇಳೆ ಈ ಅಂದಾಜು ಸರಿಯಾಗಿದ್ದರೂ ಸಹ, ಆ ಇಡೀ ಕಾಲಗಣನ ತಖ್ತೆಯು ಯೆಹೋವನ ಕುಮಾರನ ಜೀವನಾಯುಸ್ಸನ್ನು ತೋರಿಸಲು ಸಾಕಾಗದು! ಆ ಎಲ್ಲಾ ಯುಗಗಳಾದ್ಯಂತ ಅವನು ಯಾವ ಚಟುವಟಿಕೆಯಲ್ಲಿ ಕಾರ್ಯಮಗ್ನನಾಗಿದ್ದನು?

6. (ಎ) ತನ್ನ ಮಾನವಪೂರ್ವದ ಅಸ್ತಿತ್ವದಲ್ಲಿ ಯೆಹೋವನ ಕುಮಾರನು ಹೇಗೆ ಕಾರ್ಯಮಗ್ನನಾಗಿದ್ದನು? (ಬಿ) ಯೆಹೋವ ಮತ್ತು ಆತನ ಪುತ್ರನ ಮಧ್ಯೆ ಯಾವ ರೀತಿಯ ಬಂಧವು ಇದೆ?

6 ಆ ಮಗನು ಸಂತೋಷದಿಂದ ತನ್ನ ತಂದೆಯ “ನಿಪುಣ ಕೆಲಸಗಾರ”ನಾಗಿ ಸೇವೆಸಲ್ಲಿಸಿದನು. (ಜ್ಞಾನೋಕ್ತಿ 8:​30, ಪರಿಶುದ್ಧ ಬೈಬಲ್‌) ಬೈಬಲನ್ನುವುದು: “ಉಂಟಾಗಿರುವ ವಸ್ತುಗಳಲ್ಲಿ [ಮಗನಿಲ್ಲದೆ] ಒಂದಾದರೂ ಉಂಟಾಗಲಿಲ್ಲ.” (ಯೋಹಾನ 1:3) ಹೀಗೆ ಬೇರೆಲ್ಲಾ ವಸ್ತುಗಳನ್ನು ಉಂಟುಮಾಡುವುದಕ್ಕಾಗಿ ಯೆಹೋವನೂ ಆತನ ಮಗನೂ ಒಟ್ಟಾಗಿ ಕೆಲಸಮಾಡಿದರು. ಅವರೆಷ್ಟು ಸಂಭ್ರಮ ಹಾಗೂ ಸಂತಸದಿಂದ ಸಮಯವನ್ನು ಒಟ್ಟುಗೂಡಿ ಕಳೆದಿದ್ದಿರಬೇಕು! ಹೆತ್ತವರ ಮತ್ತು ಮಗುವಿನ ನಡುವೆ ಇರುವ ಪ್ರೀತಿಯು ವಿಸ್ಮಯಗೊಳಿಸುವಷ್ಟು ಬಲವಾದದ್ದೆಂದು ಅನೇಕರು ಒಪ್ಪುವರು. ಮತ್ತು ಪ್ರೀತಿಯು “ಸಮಸ್ತವನ್ನು ಸಂಪೂರ್ಣಮಾಡುವ ಬಂಧವಾಗಿದೆ.” (ಕೊಲೊಸ್ಸೆ 3:14) ಹೀಗಿರಲಾಗಿ, ಅಷ್ಟೊಂದು ಅಪಾರವಾದ ಕಾಲಾವಧಿಯಲ್ಲಿ ಇದ್ದಂಥ ಒಂದು ಬಂಧವು ಎಷ್ಟು ಬಲವಾದದ್ದೆಂಬುದನ್ನು ಗ್ರಹಿಸಿಕೊಳ್ಳಲು ನಮ್ಮಲ್ಲಿ ಯಾರಿಂದ ಸಾಧ್ಯ? ಯೆಹೋವ ದೇವರು ಮತ್ತು ಆತನ ಪುತ್ರನು, ಬೆಸೆಯಲ್ಪಟ್ಟಿರುವವುಗಳಲ್ಲೇ ಅತ್ಯಂತ ಬಲವಾದ ಪ್ರೀತಿಯ ಬಂಧದಲ್ಲಿ ಐಕ್ಯರಾಗಿದ್ದಾರೆಂಬುದು ಸುವ್ಯಕ್ತ.

7. ಯೇಸು ದೀಕ್ಷಾಸ್ನಾನ ಪಡೆದುಕೊಂಡಾಗ, ಯೆಹೋವನು ತನ್ನ ಪುತ್ರನ ಕುರಿತು ತನಗಿದ್ದ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದು ಹೇಗೆ?

7 ಆದಾಗ್ಯೂ ತಂದೆಯು ತನ್ನ ಮಗನನ್ನು ಮಾನವ ಕೂಸಾಗಿ ಹುಟ್ಟುವಂತೆ ಈ ಭೂಮಿಗೆ ಕಳುಹಿಸಿಕೊಟ್ಟನು. ಹಾಗೆ ಮಾಡುವ ಮೂಲಕ ಯೆಹೋವನು ಪರಲೋಕದಲ್ಲಿ ತನ್ನ ಪ್ರಿಯ ಮಗನ ಆಪ್ತ ಸಹವಾಸವನ್ನು ಕೆಲವು ದಶಮಾನಗಳ ತನಕ ಕಳೆದುಕೊಳ್ಳಬೇಕಾಯಿತು. ಯೇಸು ಬೆಳೆಯುತ್ತಾ ದೊಡ್ಡವನಾಗಿ ಪರಿಪೂರ್ಣ ಮನುಷ್ಯನಾಗುವುದನ್ನು ಆತನು ಪರಲೋಕದಿಂದ ತೀವ್ರಾಸಕ್ತಿಯಿಂದ ಗಮನಿಸಿದನು. ಸುಮಾರು 30 ವರ್ಷದವನಾದಾಗ ಯೇಸು ದೀಕ್ಷಾಸ್ನಾನವನ್ನು ಪಡೆದುಕೊಂಡನು. ಅವನ ಕುರಿತು ಯೆಹೋವನಿಗೆ ಹೇಗನಿಸಿದ್ದಿರಬಹುದೆಂಬುದನ್ನು ನಾವು ಯೋಚಿಸಿ ಹೇಳಬೇಕೆಂದಿಲ್ಲ. ಸ್ವತಃ ತಂದೆಯು ವೈಯಕ್ತಿಕವಾಗಿ ಪರಲೋಕದಿಂದ ನುಡಿದನು: “ಈತನು ಪ್ರಿಯನಾಗಿರುವ ನನ್ನ ಮಗನು, ಈತನನ್ನು ನಾನು ಮೆಚ್ಚಿದ್ದೇನೆ.” (ಮತ್ತಾಯ 3:17) ಪ್ರವಾದಿಸಲ್ಪಟ್ಟಿದ್ದ ಎಲ್ಲವನ್ನು, ಅವನಿಂದ ಕೇಳಲ್ಪಟ್ಟ ಎಲ್ಲವನ್ನು ಯೇಸು ನಂಬಿಗಸ್ತಿಕೆಯಿಂದ ಮಾಡಿಮುಗಿಸಿದ್ದನ್ನು ಕಂಡು ಅವನ ತಂದೆಯು ಬಹಳವಾಗಿ ಆನಂದಿಸಿರಬೇಕು!​—ಯೋಹಾನ 5:36; 17:4.

8, 9. (ಎ) ಸಾ.ಶ. 33ನೆಯ ನೈಸಾನ್‌ 14ರಂದು ಯೇಸು ಯಾವ ಕಷ್ಟಾನುಭವಕ್ಕೆ ಗುರಿಮಾಡಲ್ಪಟ್ಟನು, ಮತ್ತು ಅವನ ಸ್ವರ್ಗೀಯ ತಂದೆಯು ಅದರಿಂದ ಹೇಗೆ ಬಾಧಿತನಾದನು? (ಬಿ) ತನ್ನ ಕುಮಾರನು ಕಷ್ಟವನ್ನನುಭವಿಸಿ ಸಾಯುವಂತೆ ಯೆಹೋವನು ಅನುಮತಿಸಿದ್ದೇಕೆ?

8 ಹೀಗಿರಲಾಗಿ ಸಾ.ಶ. 33ರ ನೈಸಾನ್‌ 14ರಂದು ಯೆಹೋವನಿಗೆ ಹೇಗನಿಸಿದ್ದಿರಬೇಕು? ಯೇಸು ಹಿಡುಕೊಡಲ್ಪಟ್ಟಾಗ, ಮತ್ತು ರಾತ್ರಿಯಲ್ಲಿ ಜನರ ಗುಂಪು ಬಂದು ಅವನನ್ನು ಬಂಧಿಸಿದಾಗ, ಅವನ ಸ್ನೇಹಿತರು ಅವನನ್ನು ಬಿಟ್ಟು ಓಡಿಹೋದಾಗ, ಮತ್ತು ಅವನು ನ್ಯಾಯವಿರುದ್ಧವಾದ ವಿಚಾರಣೆಗೆ ಒಳಪಡಿಸಲ್ಪಟ್ಟಾಗ, ಅವನ ಗೇಲಿಮಾಡಲ್ಪಟ್ಟಾಗ, ಮುಖಕ್ಕೆ ಉಗುಳಿ ಗುದ್ದಲ್ಪಟ್ಟಾಗ, ಕೊರಡೆಯಿಂದ ಹೊಡೆಯಲ್ಪಟ್ಟು ಅವನ ಬೆನ್ನು ಛಿದ್ರಛಿದ್ರವಾಗಿ ಸೀಳಿಹೋದಾಗ, ಅವನ ಕೈಕಾಲುಗಳು ಮರದ ಕಂಬಕ್ಕೆ ಜಡಿಯಲ್ಪಡುತ್ತಿದ್ದಾಗ ಮತ್ತು ಅವನು ಆ ಕಂಬದ ಮೇಲೆ ತೂಗಾಡುವಂತೆ ಬಿಡಲ್ಪಟ್ಟ ಸಮಯದಲ್ಲಿ ಜನರು ಅವನಿಗೆ ಕುಚೋದ್ಯ ಮಾಡುತ್ತಿದ್ದಾಗ ಯೆಹೋವನಿಗೆ ಹೇಗನಿಸಿರಬೇಕು? ತನ್ನ ಪ್ರಿಯ ಮಗನು ತೀವ್ರ ಯಾತನೆಯಿಂದ ನರಳುತ್ತಾ ತನಗೆ ಮೊರೆಯಿಟ್ಟಾಗ ಆ ತಂದೆಗೆ ಹೇಗನಿಸಿರಬೇಕು? ಯೇಸು ಕೊನೆಯುಸಿರೆಳೆದಾಗ, ಮತ್ತು ಸಮಸ್ತ ಸೃಷ್ಟಿಯ ಆರಂಭದಿಂದ ತನ್ನೊಂದಿಗಿದ್ದ ಈ ಮುದ್ದಿನ ಮಗನು ಈಗ ಮೊತ್ತಮೊದಲ ಬಾರಿ ಅಸ್ತಿತ್ವದಲ್ಲಿಲ್ಲದೆ ಹೋದಾಗ ಯೆಹೋವನಿಗೆ ಹೇಗನಿಸಿದ್ದಿರಬೇಕು?​—ಮತ್ತಾಯ 26:14-16, 46, 47, 56, 59, 67; 27:38-44, 46; ಯೋಹಾನ 19:1.

“ದೇವರು . . . ತನ್ನ ಒಬ್ಬನೇ ಮಗನನ್ನು ಕೊಟ್ಟನು”

9 ಅದನ್ನು ಹೇಳಲು ಮಾತೇ ಸಿಗದು. ಯೆಹೋವನಿಗೆ ಭಾವನೆಗಳಿರುವುದರಿಂದ, ತನ್ನ ಮಗನ ಮರಣದಿಂದಾಗಿ ಆತನು ಅನುಭವಿಸಿದ ವೇದನೆಯನ್ನು ನಮ್ಮ ಮಾತುಗಳಲ್ಲಿ ವ್ಯಕ್ತಪಡಿಸುವುದು ಅಸಾಧ್ಯ. ಆದರೆ ಒಂದು ವಿಷಯವನ್ನು ನಾವು ಖಂಡಿತವಾಗಿಯೂ ವ್ಯಕ್ತಪಡಿಸಸಾಧ್ಯವಿದೆ. ಅದೇನೆಂದರೆ, ಇದೆಲ್ಲವೂ ಸಂಭವಿಸುವಂತೆ ಯೆಹೋವನು ಅನುಮತಿಸಿದ್ದಕ್ಕಾಗಿ ಆತನಿಗಿದ್ದ ಹೇತುವೇ. ಅಂಥ ಭಾವನೆಗಳಿಗೆ ತಂದೆಯು ತನ್ನನ್ನು ಗುರಿಪಡಿಸಿಕೊಂಡದ್ದೇಕೆ? ಯೋಹಾನ 3:16 ರಲ್ಲಿ ಯೆಹೋವನು ನಮಗೆ ಒಂದು ಅದ್ಭುತವಾದ ವಿಷಯವನ್ನು ಪ್ರಕಟಪಡಿಸುತ್ತಾನೆ. ಈ ಬೈಬಲ್‌ ವಚನವು ಎಷ್ಟು ಪ್ರಾಮುಖ್ಯವಾಗಿದೆಯೆಂದರೆ, ಅದನ್ನು ಸುವಾರ್ತೆ ಪುಸ್ತಕಗಳ ಸೂಕ್ಷ್ಮಾಕಾರ ಎಂದು ಕರೆಯಲಾಗಿದೆ. ಅದು ಹೇಳುವುದು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” ಹಾಗಾದರೆ ಯೆಹೋವನ ಹೇತು ಪ್ರೀತಿಯೇ ಆಗಿತ್ತು. ಯೆಹೋವನ ಈ ಕೊಡುಗೆ, ಅಂದರೆ ನಮಗಾಗಿ ಕಷ್ಟವನ್ನನುಭವಿಸಿ ಸಾಯಲು ತನ್ನ ಮಗನನ್ನು ಆತನು ಕಳುಹಿಸಿಕೊಟ್ಟದ್ದು, ಸರ್ವಕಾಲಕ್ಕೂ ಅತ್ಯಂತ ಮಹಾನ್‌ ಪ್ರೀತಿಯ ಕೃತ್ಯವಾಗಿರುತ್ತದೆ.

ದೈವಿಕ ಪ್ರೀತಿಯ ಅರ್ಥವಿವರಣೆ

10. ಮಾನವರಿಗೆ ಯಾವುದರ ಅಗತ್ಯವಿದೆ, ಮತ್ತು “ಪ್ರೀತಿ” ಎಂಬ ಪದದ ಅರ್ಥಕ್ಕೆ ಏನು ಸಂಭವಿಸಿದೆ?

10 “ಪ್ರೀತಿ” ಎಂಬ ಪದದ ಅರ್ಥವೇನು? ಪ್ರೀತಿಯು ಮನುಷ್ಯರಿಗಿರುವ ಅತ್ಯಂತ ಶ್ರೇಷ್ಠ ಅಗತ್ಯ ಎಂಬುದಾಗಿ ವರ್ಣಿಸಲ್ಪಟ್ಟಿದೆ. ಹುಟ್ಟಿನಿಂದ ಸಾವಿನವರೆಗೂ ಜನರು ಪ್ರೀತಿಗಾಗಿ ಹೆಣಗಾಡುತ್ತಾರೆ, ಅದರ ಸುಖೋಷ್ಣದಲ್ಲಿ ನಳನಳಿಸುತ್ತಾರೆ, ಮತ್ತು ಅದಿಲ್ಲದಿರುವಾಗ ಕೊರಗುತ್ತಾ, ಸಾಯುತ್ತಾರೆ ಸಹ. ಹೀಗಿದ್ದರೂ ಅಚ್ಚರಿಯ ಸಂಗತಿಯೇನೆಂದರೆ, ಅದರ ಅರ್ಥವಿವರಣೆಮಾಡುವುದು ಕಷ್ಟಕರ. ಜನರು ಪ್ರೀತಿಯ ಕುರಿತು ಬಹಳಷ್ಟು ಮಾತಾಡುತ್ತಾರೆ ನಿಜ. ಅದರ ಕುರಿತಾಗಿ ಬರೆಯಲ್ಪಟ್ಟಿರುವ ಪುಸ್ತಕಗಳು, ಹಾಡುಗಳು, ಮತ್ತು ಕವಿತೆಗಳಿಗೆ ಲೆಕ್ಕವೇ ಇಲ್ಲ. ಆದರೆ ಅವು ಪ್ರೀತಿಯ ಅರ್ಥವೇನೆಂಬುದನ್ನು ಯಾವಾಗಲೂ ಸ್ಪಷ್ಟಪಡಿಸುವುದಿಲ್ಲ. ವಾಸ್ತವದಲ್ಲಿ ಆ ಶಬ್ದವು ಎಷ್ಟು ವಿಪರೀತವಾಗಿ ಪ್ರಯೋಗಿಸಲ್ಪಟ್ಟಿದೆಯೆಂದರೆ ಅದರ ನಿಜಾರ್ಥವು ಸದಾ ಇನ್ನಷ್ಟು ದೂರ ಸರಿಯುತ್ತಿರುವಂತೆ ತೋರುತ್ತದೆ.

11, 12. (ಎ) ಪ್ರೀತಿಯ ಕುರಿತು ಬಹಳಷ್ಟನ್ನು ನಾವು ಎಲ್ಲಿ ಕಲಿಯಬಲ್ಲೆವು, ಮತ್ತು ಅಲ್ಲಿಯೇ ಏಕೆ? (ಬಿ) ಪುರಾತನ ಗ್ರೀಕ್‌ ಭಾಷೆಯಲ್ಲಿ ಯಾವ ವಿಶಿಷ್ಟ ಪ್ರಕಾರದ ಪ್ರೀತಿಯನ್ನು ವಿವರಿಸಲಾಗಿದೆ, ಮತ್ತು ಕ್ರೈಸ್ತ ಗ್ರೀಕ್‌ ಶಾಸ್ತ್ರಗಳಲ್ಲಿ “ಪ್ರೀತಿ”ಗಾಗಿ ಅತಿ ಹೆಚ್ಚಾಗಿ ಉಪಯೋಗಿಸಲ್ಪಟ್ಟಿರುವ ಪದವು ಯಾವುದು? (ಪಾದಟಿಪ್ಪಣಿಯನ್ನೂ ನೋಡಿ.) (ಸಿ) ಆಘಾಪೀ ಎಂದರೇನು?

11 ಆದರೆ ಬೈಬಲ್‌ ಪ್ರೀತಿಯ ಕುರಿತು ಸ್ಪಷ್ಟವಾಗಿ ಕಲಿಸುತ್ತದೆ. ವೈನ್ಸ್‌ ಎಕ್ಸ್‌ಪೊಸಿಟರಿ ಡಿಕ್ಷನೆರಿ ಆಫ್‌ ನ್ಯೂ ಟೆಸ್ಟ್‌ಮೆಂಟ್‌ ವರ್ಡ್ಸ್‌ ಹೇಳುವುದು: “ಪ್ರೀತಿಯನ್ನು ಅದು ಪ್ರೇರಿಸುವಂಥ ಕ್ರಿಯೆಗಳಿಂದ ಮಾತ್ರವೇ ತಿಳಿದುಕೊಳ್ಳಸಾಧ್ಯವಿದೆ.” ಯೆಹೋವನ ಕ್ರಿಯೆಗಳ ಕುರಿತಾದ ಬೈಬಲ್‌ ದಾಖಲೆಯು ಆತನ ಪ್ರೀತಿಯ ಕುರಿತು​—ಸೃಷ್ಟಿಜೀವಿಗಳಿಗಾಗಿ ಆತನಿಗಿರುವ ದಯಾಪರ ಮಮತೆಯ ಕುರಿತು ಬಹಳಷ್ಟು ವಿಷಯಗಳನ್ನು ನಮಗೆ ಕಲಿಸುತ್ತದೆ. ದೃಷ್ಟಾಂತಕ್ಕಾಗಿ, ಆರಂಭದಲ್ಲಿ ವಿವರಿಸಲಾದಂಥ ಸ್ವತಃ ಯೆಹೋವನ ಪರಮೋಚ್ಚ ಪ್ರೀತಿಯ ಕ್ರಿಯೆಗಿಂತಲೂ ಬೇರಾವ ಸಂಗತಿಯು ಈ ಗುಣದ ಕುರಿತು ಇನ್ನೂ ಹೆಚ್ಚನ್ನು ಪ್ರಕಟಪಡಿಸೀತು? ಕ್ರಿಯೆಯಲ್ಲಿ ಯೆಹೋವನ ಪ್ರೀತಿಯು ತೋರಿಸಲ್ಪಟ್ಟಿರುವ ಇನ್ನೂ ಅನೇಕ ಉದಾಹರಣೆಗಳನ್ನು ಮುಂದಿನ ಅಧ್ಯಾಯಗಳಲ್ಲಿ ನಾವು ನೋಡಲಿದ್ದೇವೆ. ಅಷ್ಟಲ್ಲದೆ, ಬೈಬಲಿನಲ್ಲಿ “ಪ್ರೀತಿ”ಗಾಗಿ ಉಪಯೋಗಿಸಲ್ಪಟ್ಟ ಮೂಲ ಶಬ್ದಗಳಿಂದಲೂ ಸ್ವಲ್ಪ ಒಳನೋಟವನ್ನು ನಾವು ಪಡೆದುಕೊಳ್ಳಬಲ್ಲೆವು. ಪುರಾತನ ಗ್ರೀಕ್‌ ಭಾಷೆಯಲ್ಲಿ “ಪ್ರೀತಿ”ಗಾಗಿ ನಾಲ್ಕು ಪದಗಳು ಪ್ರಯೋಗದಲ್ಲಿದ್ದವು. * ಇವುಗಳಲ್ಲಿ ಕ್ರೈಸ್ತ ಗ್ರೀಕ್‌ ಶಾಸ್ತ್ರಗಳಲ್ಲಿ ಅತಿ ಹೆಚ್ಚಾಗಿ ಪ್ರಯೋಗಿಸಲ್ಪಟ್ಟ ಒಂದು ಪದವು ಆಘಾಪೀ. ಇದು “ಪ್ರೀತಿಗಾಗಿ ಊಹಿಸಸಾಧ್ಯವಿರುವವುಗಳಲ್ಲಿ ಅತ್ಯಂತ ಶಕ್ತಿಶಾಲಿಯಾದ ಪದ” ಎಂಬುದಾಗಿ ಒಂದು ಬೈಬಲ್‌ ಡಿಕ್ಷನೆರಿಯು ಹೇಳುತ್ತದೆ. ಏಕೆ?

12ಆಘಾಪೀ, ತತ್ತ್ವದಿಂದ ಮಾರ್ಗದರ್ಶಿಸಲ್ಪಡುವ ಪ್ರೀತಿಗೆ ಸೂಚಿಸುತ್ತದೆ. ಆದುದರಿಂದ ಅದು ಕೇವಲ ಇನ್ನೊಬ್ಬ ವ್ಯಕ್ತಿಗೆ ತೋರಿಸಲ್ಪಡುವ ಭಾವನಾತ್ಮಕ ಪ್ರತಿಕ್ರಿಯೆಗಿಂತ ಹೆಚ್ಚಿನದ್ದಾಗಿದೆ. ಅದರ ವ್ಯಾಪ್ತಿಯು ಹೆಚ್ಚು ವಿಶಾಲವಾಗಿರುತ್ತದೆ, ಹೆಚ್ಚು ಭಾವಪೂರ್ಣವೂ ಉದ್ದೇಶಪೂರ್ವಕವೂ ಆಗಿರುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಆಘಾಪೀ ಸಂಪೂರ್ಣವಾಗಿ ನಿಸ್ವಾರ್ಥವಾಗಿದೆ. ದೃಷ್ಟಾಂತಕ್ಕಾಗಿ ಯೋಹಾನ 3:16 ನ್ನು ಪುನಃ ನೋಡಿರಿ. ದೇವರು ಯಾವುದರ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನೋ ಆ “ಲೋಕವು” ಯಾವುದು? ವಿಮೋಚನಸಾಧ್ಯ ಮಾನವಕುಲವೆಂಬ ಲೋಕವೇ ಅದು. ಜೀವನದಲ್ಲಿ ಪಾಪಪೂರ್ಣ ಮಾರ್ಗವನ್ನು ಬೆನ್ನಟ್ಟುತ್ತಿರುವ ಅನೇಕ ಜನರನ್ನು ಅದು ಒಳಗೂಡಿಸುತ್ತದೆ. ಯೆಹೋವನು ಅವರಲ್ಲಿ ಪ್ರತಿಯೊಬ್ಬನನ್ನು, ನಂಬಿಗಸ್ತ ಅಬ್ರಹಾಮನನ್ನು ಆತನು ಪ್ರೀತಿಸಿದ ಪ್ರಕಾರ, ಒಬ್ಬ ವೈಯಕ್ತಿಕ ಸ್ನೇಹಿತನೋಪಾದಿ ಪ್ರೀತಿಸುತ್ತಾನೋ? (ಯಾಕೋಬ 2:23) ಇಲ್ಲ, ಆದರೆ ಯೆಹೋವನು ಪ್ರೀತಿಯಿಂದ ಎಲ್ಲರ ಕಡೆಗೆ ತನ್ನ ಒಳ್ಳೇತನವನ್ನು ವಿಸ್ತರಿಸುತ್ತಾನೆ, ತನಗೆ ಬಹಳಷ್ಟು ನಷ್ಟವನ್ನು ಬರಿಸಿಕೊಂಡರೂ ಸರಿ, ಹಾಗೆ ಮಾಡುತ್ತಾನೆ. ಎಲ್ಲರೂ ಪಶ್ಚಾತ್ತಾಪಪಟ್ಟು ತಮ್ಮ ಮಾರ್ಗಗಳನ್ನು ಬದಲಾಯಿಸಿಕೊಳ್ಳುವಂತೆ ಆತನು ಅಪೇಕ್ಷಿಸುತ್ತಾನೆ. (2 ಪೇತ್ರ 3:9) ಅನೇಕರು ಪಶ್ಚಾತ್ತಾಪಪಡುತ್ತಾರೆ. ಅಂಥವರನ್ನು ಆತನು ಸಂತೋಷದಿಂದ ತನ್ನ ಸ್ನೇಹಿತರಾಗಿ ಸ್ವೀಕರಿಸಿಕೊಳ್ಳುತ್ತಾನೆ.

13, 14. ಆಘಾಪೀಯಲ್ಲಿ ಹೆಚ್ಚಾಗಿ ಹೃತ್ಪೂರ್ವಕವಾದ ಮಮತೆಯು ಸೇರಿರುತ್ತದೆಂದು ಯಾವುದು ತೋರಿಸುತ್ತದೆ?

13 ಕೆಲವರಿಗಾದರೊ ಆಘಾಪೀ ಕುರಿತು ತಪ್ಪಭಿಪ್ರಾಯವಿದೆ. ಅದು ನಿರ್ದಯವಾದ, ಕೇವಲ ತಲೆಯಲ್ಲಿ ಮಾತ್ರ ತುಂಬಿರುವಂಥ ರೀತಿಯ ಪ್ರೀತಿ ಎಂದವರು ಯೋಚಿಸುತ್ತಾರೆ. ನಿಜ ಸಂಗತಿಯೇನಂದರೆ, ಆಘಾಪೀಯಲ್ಲಿ ಅನೇಕವೇಳೆ ಹೃತ್ಪೂರ್ವಕವಾದ ವೈಯಕ್ತಿಕ ಮಮತೆಯು ಒಳಗೂಡಿರುತ್ತದೆ. ದೃಷ್ಟಾಂತಕ್ಕಾಗಿ, ಯೋಹಾನನು ‘ತಂದೆಯು ಮಗನನ್ನು ಪ್ರೀತಿಸುತ್ತಾನೆ’ ಎಂದು ಬರೆದಾಗ, ಆಘಾಪೀಯ ಒಂದು ಪದರೂಪವನ್ನು ಉಪಯೋಗಿಸಿದನು. ಆ ಪ್ರೀತಿಯು ಹೃತ್ಪೂರ್ವಕವಾದ ಮಮತೆರಹಿತ ಪ್ರೀತಿಯೋ? “ತಂದೆಯು ಮಗನ ಮೇಲೆ ಮಮತೆ” ಇಡುತ್ತಾನೆಂದು ಯೇಸು ಹೇಳಿದ್ದನ್ನು ಗಮನಿಸಿರಿ. ಇಲ್ಲಿ ಫೀಲಿಯೊ ಶಬ್ದದ ಒಂದು ರೂಪವು ಉಪಯೋಗಿಸಲ್ಪಟ್ಟಿದೆ. (ಯೋಹಾನ 3:35; 5:20) ಯೆಹೋವನ ಪ್ರೀತಿಯಲ್ಲಿ ಹೆಚ್ಚಾಗಿ ಕೋಮಲವಾದ ಮಮತೆಯು ಸೇರಿರುತ್ತದೆ. ಆದರೆ ಆತನ ಪ್ರೀತಿಯು ಎಂದಿಗೂ ಭಾವುಕತೆಯಿಂದಾಗಿ ಓಲಾಡುವಂಥ ಪ್ರೀತಿಯಾಗಿರುವುದಿಲ್ಲ. ಅದು ಯಾವಾಗಲೂ ಆತನ ವಿವೇಕಯುತವೂ ನ್ಯಾಯವೂ ಆದ ತತ್ತ್ವಗಳಿಂದ ಮಾರ್ಗದರ್ಶಿಸಲ್ಪಡುತ್ತದೆ.

14 ನಾವು ಈವಾಗಲೇ ನೋಡಿರುವ ಪ್ರಕಾರ ಯೆಹೋವನ ಗುಣಗಳೆಲ್ಲವೂ ಅಪ್ಪಟವೂ ಪರಿಪೂರ್ಣವೂ ಚಿತ್ತಾಕರ್ಷಕವೂ ಆಗಿರುತ್ತವೆ. ಆದರೆ ಪ್ರೀತಿಯೇ ಅವುಗಳಲ್ಲಿ ಎಲ್ಲದಕ್ಕಿಂತ ಅತ್ಯಂತ ಹೆಚ್ಚು ಮನಮೋಹಕ ಗುಣವಾಗಿರುತ್ತದೆ. ಬೇರಾವುದೇ ಗುಣವು, ಯೆಹೋವನ ಕಡೆಗೆ ನಮ್ಮನ್ನು ಅಷ್ಟು ಪ್ರಬಲವಾಗಿ ಸೆಳೆಯುವುದಿಲ್ಲ. ಸಂತೋಷಕರವಾಗಿ, ಪ್ರೀತಿಯು ಆತನ ಪ್ರಧಾನ ಗುಣಲಕ್ಷಣವೂ ಹೌದು. ನಮಗದು ತಿಳಿದಿರುವುದು ಹೇಗೆ?

“ದೇವರು ಪ್ರೀತಿಸ್ವರೂಪಿಯು”

15. ಯೆಹೋವನ ಪ್ರೀತಿಯೆಂಬ ಗುಣದ ಕುರಿತು ಯಾವ ಹೇಳಿಕೆಯನ್ನು ಬೈಬಲು ಮಾಡುತ್ತದೆ, ಮತ್ತು ಯಾವ ವಿಧದಲ್ಲಿ ಈ ಹೇಳಿಕೆಯು ಅಸದೃಶವಾಗಿರುತ್ತದೆ? (ಪಾದಟಿಪ್ಪಣಿಯನ್ನೂ ನೋಡಿ.)

15 ಯೆಹೋವನ ಇತರ ಪ್ರಧಾನ ಗುಣಗಳ ಕುರಿತು ಎಂದೂ ಹೇಳದಿರುವ ಒಂದು ವಿಷಯವನ್ನು ಬೈಬಲು ಪ್ರೀತಿಯ ಕುರಿತು ಹೇಳುತ್ತದೆ. ದೇವರು ಶಕ್ತಿಸ್ವರೂಪಿ ಎಂದಾಗಲಿ ದೇವರು ನ್ಯಾಯಸ್ವರೂಪಿ ಎಂದಾಗಲಿ ಅಥವಾ ವಿವೇಕಸ್ವರೂಪಿ ಎಂದಾಗಲಿ ಶಾಸ್ತ್ರಗಳು ಹೇಳುವುದಿಲ್ಲ. ಆತನು ಆ ಗುಣಗಳನ್ನು ಹೊಂದಿರುತ್ತಾನೆ, ಅವುಗಳ ಮೂಲ ಉಗಮವಾಗಿರುತ್ತಾನೆ, ಮತ್ತು ಈ ಮೂರರಲ್ಲೂ ಸರಿಸಾಟಿಯಿಲ್ಲದವನಾಗಿದ್ದಾನೆ. ನಾಲ್ಕನೆಯ ಗುಣದ ಕುರಿತಾದರೊ ಸ್ವಲ್ಪ ಹೆಚ್ಚು ಗಹನವಾದ ವಿಷಯವು ಹೇಳಲ್ಪಟ್ಟಿದೆ: “ದೇವರು ಪ್ರೀತಿಸ್ವರೂಪಿಯು.” * (1 ಯೋಹಾನ 4:8) ಅದರ ಅರ್ಥವೇನು?

16-18. (ಎ) “ದೇವರು ಪ್ರೀತಿಸ್ವರೂಪಿಯು” ಎಂದು ಬೈಬಲು ಹೇಳುವುದೇಕೆ? (ಬಿ) ಭೂಮಿಯ ಮೇಲಿರುವ ಸಮಸ್ತ ಸೃಷ್ಟಿಜೀವಿಗಳಲ್ಲಿ ಮನುಷ್ಯನೇ ಯೆಹೋವನ ಪ್ರೀತಿಯ ತಕ್ಕದಾದ ದ್ಯೋತಕವಾಗಿದ್ದಾನೆ ಏಕೆ?

16 “ದೇವರು ಪ್ರೀತಿಸ್ವರೂಪಿಯು” ಎಂದು ಹೇಳುವಾಗ, ಅದು “ದೇವರು ಪ್ರೀತಿಗೆ ಸಮ” ಎಂಬಂಥ ರೀತಿಯ ಒಂದು ಸರಳ ಸಮೀಕರಣವಲ್ಲ. ನಾವು ಆ ಹೇಳಿಕೆಯನ್ನು ಹಿಂದುಮುಂದು ಮಾಡಿ, “ಪ್ರೀತಿಯೇ ದೇವರು” ಎಂದು ಹೇಳುವುದು ಸರಿಯಾಗಿರದು. ಏಕೆಂದರೆ ಯೆಹೋವನು ಸ್ಪರ್ಶಗೋಚರವಾಗದ ಒಂದು ಗುಣಕ್ಕಿಂತ ಎಷ್ಟೋ ಹೆಚ್ಚಿನವನು. ಪ್ರೀತಿಯಲ್ಲದೆ ಇತರ ಅನೇಕಾನೇಕ ವಿಧದ ಭಾವನೆಗಳೂ ಗುಣಲಕ್ಷಣಗಳೂ ಉಳ್ಳ ವ್ಯಕ್ತಿಯು ಆತನಾಗಿದ್ದಾನೆ. ಆದರೆ ಪ್ರೀತಿಯು ಯೆಹೋವನಲ್ಲಿ ಆಳವಾಗಿ ವ್ಯಾಪಿಸಿರುತ್ತದೆ. ಒಂದು ಪರಾಮರ್ಶನ ಕೃತಿಯು ಈ ವಚನದ ಕುರಿತು ಹೀಗೆ ಹೇಳುತ್ತದೆ: “ದೇವರ ಸಾರ ಅಥವಾ ಸ್ವಭಾವವೇ ಪ್ರೀತಿಯಾಗಿದೆ.” ಸಾಮಾನ್ಯವಾಗಿ ನಾವು ಅದರ ಕುರಿತು ಈ ರೀತಿಯಾಗಿ ನೆನಸಬಹುದು: ಯೆಹೋವನ ಶಕ್ತಿಯು ಆತನು ಕಾರ್ಯವೆಸಗುವಂತೆ ಶಕ್ತಗೊಳಿಸುತ್ತದೆ. ಆತನ ನ್ಯಾಯ ಮತ್ತು ವಿವೇಕವು ಆತನು ಕಾರ್ಯವೆಸಗುವ ವಿಧಾನವನ್ನು ಮಾರ್ಗದರ್ಶಿಸುತ್ತದೆ. ಆದರೆ ಯೆಹೋವನ ಪ್ರೀತಿ ಆತನು ಕಾರ್ಯವೆಸಗುವಂತೆ ಪ್ರೇರಿಸುತ್ತದೆ. ಮತ್ತು ಆತನು ಇತರ ಗುಣಗಳನ್ನು ಉಪಯೋಗಿಸುವ ವಿಧದಲ್ಲಿ ಪ್ರೀತಿಯು ಸದಾ ಇದ್ದೇ ಇರುತ್ತದೆ.

17 ಯೆಹೋವನು ಪ್ರೀತಿಯ ಸಾಕಾರರೂಪವಾಗಿದ್ದಾನೆಂದು ಅನೇಕಬಾರಿ ಹೇಳಲಾಗಿದೆ. ಆದಕಾರಣ, ತತ್ತ್ವಾಧಾರಿತ ಪ್ರೀತಿಯ ಕುರಿತು ನಾವು ಕಲಿಯಬಯಸುವುದಾದರೆ, ನಾವು ಯೆಹೋವನ ಕುರಿತು ಕಲಿಯಬೇಕಾಗಿದೆ. ಈ ಅಂದವಾದ ಗುಣವನ್ನು ನಾವು ಮನುಷ್ಯರಲ್ಲಿ ಸಹ ಕಾಣಬಹುದು ನಿಶ್ಚಯ. ಆದರೆ ಅದು ಅವರಲ್ಲಿರುವುದೇಕೆ? ಸೃಷ್ಟಿಕ್ರಿಯೆಯ ಸಮಯದಲ್ಲಿ ಯೆಹೋವನು ಸುವ್ಯಕ್ತವಾಗಿ ತನ್ನ ಪುತ್ರನಿಗೆ ಹೀಗಂದನು: “ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟುಮಾಡೋಣ.” (ಆದಿಕಾಂಡ 1:26) ಈ ಭೂಮಿಯಲ್ಲಿರುವ ಸಮಸ್ತ ಸೃಷ್ಟಿಜೀವಿಗಳಲ್ಲಿ ಕೇವಲ ಸ್ತ್ರೀಪುರುಷರು ಮಾತ್ರವೇ ಪ್ರೀತಿಯ ಗುಣವನ್ನು ತೋರಿಸಲು ಆಯ್ಕೆಮಾಡಶಕ್ತರು ಮತ್ತು ಹೀಗೆ ತಮ್ಮ ಸ್ವರ್ಗೀಯ ತಂದೆಯನ್ನು ಅನುಕರಿಸಬಲ್ಲರು. ತನ್ನ ಪ್ರಧಾನ ಗುಣಗಳ ಸಂಕೇತವಾಗಿ ಯೆಹೋವನು ವಿವಿಧ ಜೀವಿಗಳನ್ನು ಉಪಯೋಗಿಸಿದನೆಂಬುದನ್ನು ಜ್ಞಾಪಕಕ್ಕೆ ತನ್ನಿರಿ. ಆದರೆ ತನ್ನ ಅತಿ ಪ್ರಮುಖ ಗುಣವಾದ ಪ್ರೀತಿಯ ದ್ಯೋತಕವಾಗಿರಲು ಯೆಹೋವನು ಭೂಮಿಯಲ್ಲಿ ತನ್ನ ಅತ್ಯುಚ್ಚ ಸೃಷ್ಟಿಜೀವಿಯಾದ ಮನುಷ್ಯನನ್ನು ಆರಿಸಿಕೊಂಡನು.​—ಯೆಹೆಜ್ಕೇಲ 1:10.

18 ನಾವು ನಿಸ್ವಾರ್ಥದಿಂದ, ತತ್ತ್ವಾಧಾರಿತ ರೀತಿಯಲ್ಲಿ ಪ್ರೀತಿಯನ್ನು ತೋರಿಸುವಾಗ, ಯೆಹೋವನ ಪ್ರಧಾನ ಗುಣವನ್ನು ಪ್ರತಿಬಿಂಬಿಸುತ್ತೇವೆ. ಇದು ಅಪೊಸ್ತಲ ಯೋಹಾನನು ಬರೆದಂತೆಯೇ ಇದೆ: “ದೇವರು ಮೊದಲು ನಮ್ಮನ್ನು ಪ್ರೀತಿಸಿದ್ದರಿಂದ ನಾವು ಪ್ರೀತಿಸುತ್ತೇವೆ.” (1 ಯೋಹಾನ 4:19) ಆದರೆ ಯೆಹೋವನು ಯಾವ ವಿಧಗಳಲ್ಲಿ ನಮ್ಮನ್ನು ಮೊದಲಾಗಿ ಪ್ರೀತಿಸಿದ್ದಾನೆ?

ಯೆಹೋವನು ಮೊದಲ ಹೆಜ್ಜೆಯನ್ನು ತೆಗೆದುಕೊಂಡನು

19. ಯೆಹೋವನ ಸೃಷ್ಟಿಕಾರಕ ಕಾರ್ಯದಲ್ಲಿ ಪ್ರೀತಿಯು ಮುಖ್ಯ ಪಾತ್ರವನ್ನು ವಹಿಸಿತೆಂದು ಏಕೆ ಹೇಳಬಹುದಾಗಿದೆ?

19 ಪ್ರೀತಿ ಹೊಸ ಸಂಗತಿಯೇನಲ್ಲ. ಸೃಷ್ಟಿಸುವುದನ್ನು ಆರಂಭಿಸಲು ಯೆಹೋವನನ್ನು ಯಾವುದು ಪ್ರೇರಿಸಿತು? ಆತನು ಒಂಟಿಗನಾಗಿದ್ದನು ಮತ್ತು ಆತನಿಗೆ ಸಾಹಚರ್ಯದ ಅಗತ್ಯವಿತ್ತೆಂಬ ಕಾರಣವಲ್ಲ. ಯೆಹೋವನು ಸಂಪೂರ್ಣನು ಮತ್ತು ಸ್ವಯಂಪೂರ್ಣನು, ಅಂದರೆ ಬೇರೊಬ್ಬನು ಒದಗಿಸಿಕೊಡಬೇಕಾದ ಯಾವುದರ ಕೊರತೆಯೂ ಆತನಿಗಿಲ್ಲ. ಆದರೆ, ಒಂದು ಕ್ರಿಯಾಶೀಲ ಗುಣವಾದ ಆತನ ಪ್ರೀತಿಯೇ, ಜೀವನದ ಆನಂದಗಳನ್ನು ಗಣ್ಯಮಾಡಬಲ್ಲ ಬುದ್ಧಿಶಕ್ತಿಯುಳ್ಳ ಜೀವಿಗಳೊಂದಿಗೆ ಜೀವವೆಂಬ ಕೊಡುಗೆಯನ್ನು ಹಂಚಿಕೊಳ್ಳಲು ಬಯಸುವಂತೆ ಆತನನ್ನು ಸಹಜವಾಗಿಯೇ ಪ್ರೇರಿಸಿತು. “ದೇವರ ಸೃಷ್ಟಿಗೆ ಮೂಲನು [“ಆರಂಭ,” NW]” ಆತನ ಏಕಜಾತ ಪುತ್ರನಾಗಿದ್ದನು. (ಪ್ರಕಟನೆ 3:14) ಅನಂತರ ಯೆಹೋವನು ಈ ನಿಪುಣ ಕೆಲಸಗಾರನನ್ನುಪಯೋಗಿಸಿ ಎಲ್ಲವನ್ನೂ ಸೃಷ್ಟಿಸಿದನು, ಮತ್ತು ಇದರಲ್ಲಿ ಮೊದಲಿಗರು ದೇವದೂತರಾಗಿದ್ದರು. (ಯೋಬ 38:4, 7; ಕೊಲೊಸ್ಸೆ 1:16) ಸ್ವಾತಂತ್ರ್ಯ, ಬುದ್ಧಿಶಕ್ತಿ, ಮತ್ತು ಭಾವನೆಗಳಿರುವ ಈ ಬಲಾಢ್ಯ ಆತ್ಮಜೀವಿಗಳಿಗೆ ಒಬ್ಬರೊಂದಿಗೊಬ್ಬರು ಮತ್ತು ವಿಶೇಷವಾಗಿ ಯೆಹೋವ ದೇವರೊಂದಿಗೆ ತಮ್ಮ ಸ್ವಂತ ಪ್ರೀತಿಯ ಬಂಧಗಳನ್ನು ರಚಿಸಿಕೊಳ್ಳುವ ಸುಸಂದರ್ಭವಿತ್ತು. (2 ಕೊರಿಂಥ 3:​17, NW) ಹೀಗೆ, ಅವರು ಪ್ರೀತಿಸಿದರು ಯಾಕಂದರೆ ಮೊದಲು ಅವರಿಗೆ ಪ್ರೀತಿ ತೋರಿಸಲ್ಪಟ್ಟಿತ್ತು.

20, 21. ಯೆಹೋವನು ಅವರನ್ನು ಪ್ರೀತಿಸುತ್ತಿದ್ದನೆಂಬ ಯಾವ ರುಜುವಾತು ಆದಾಮಹವ್ವರಿಗಿತ್ತು, ಆದರೂ ಅವರು ಹೇಗೆ ಪ್ರತಿಕ್ರಿಯೆ ತೋರಿಸಿದರು?

20 ಮಾನವಕುಲದವರೊಂದಿಗೆ ಸಹ ಅದೇ ರೀತಿ ಪ್ರೀತಿ ತೋರಿಸಲ್ಪಟ್ಟಿತು. ಆರಂಭದಿಂದಲೇ ಆದಾಮಹವ್ವರು ಪ್ರೀತಿಯಲ್ಲಿ ಕಾರ್ಯತಃ ತೋಯಿಸಲ್ಪಟ್ಟಿದ್ದರು. ಏದೆನಿನ ಅವರ ಪರದೈಸ್‌ ಮನೆಯಲ್ಲಿ ಎಲ್ಲಿ ನೋಡಿದರೂ ಅವರಿಗಾಗಿ ತಂದೆಯ ಪ್ರೀತಿಯ ರುಜುವಾತು ಕಣ್ಣಿಗೆಬೀಳುತ್ತಿತ್ತು. ಬೈಬಲು ಏನನ್ನುತ್ತದೆಂದು ಗಮನಿಸಿರಿ: “ಯೆಹೋವದೇವರು ಮೂಡಣ ದಿಕ್ಕಿನಲ್ಲಿರುವ ಏದೆನ್‌ ಸೀಮೆಯಲ್ಲಿ ಒಂದು ಉದ್ಯಾನವನವನ್ನು ಮಾಡಿ ತಾನು ರೂಪಿಸಿದ ಮನುಷ್ಯನನ್ನು ಅದರಲ್ಲಿ ಇರಿಸಿದನು.” (ಆದಿಕಾಂಡ 2:8) ನಿಜವಾಗಿಯೂ ಸುಂದರವಾಗಿರುವ ಒಂದು ಹೂತೋಟಕ್ಕೆ ಅಥವಾ ಉದ್ಯಾನವನಕ್ಕೆ ನೀವು ಹೋಗಿದ್ದೀರೊ? ಅಲ್ಲಿ ನಿಮಗೆ ಅತ್ಯಾನಂದವನ್ನು ತಂದಂಥ ವಿಷಯ ಯಾವುದು? ನೆರಳಿರುವ ಒಂದು ಸ್ಥಳದಲ್ಲಿ ಎಲೆಗಳ ಮಧ್ಯದಿಂದ ಇಣುಕುತ್ತಿರುವ ಬೆಳಕಿನ ಕಿರಣಗಳೊ? ವಿರಾಜಿಸುತ್ತಿರುವ ಹೂವುಗಳ ತರತರದ ಬಣ್ಣಗಳೊ? ಗುಳುಗುಳು ಶಬ್ದಮಾಡುತ್ತಾ ಹರಿಯುವ ತೊರೆ, ಚಿಲಿಪಿಲಿ ಹಾಡುತ್ತಿರುವ ಹಕ್ಕಿಗಳು, ಮತ್ತು ಝೇಂಕರಿಸುತ್ತಿರುವ ಕೀಟಗಳೆಲ್ಲ ಸೇರಿ ಹಿನ್ನೆಲೆಯಲ್ಲಿ ಕೇಳಿಬರುತ್ತಿರುವ ಸಂಗೀತವೊ? ವೃಕ್ಷಗಳ, ಹಣ್ಣುಹಂಪಲುಗಳ, ಮತ್ತು ಅರಳುತ್ತಿರುವ ಹೂವುಗಳ ಸುಗಂಧದ ಕುರಿತೇನು? ಏನೇ ಹೇಳಿದರೂ, ಏದೆನಿನಲ್ಲಿದ್ದ ತೋಟಕ್ಕೆ ಇಂದಿನ ಯಾವ ಉದ್ಯಾನವಾದರೂ ತುಲ್ಯವಾಗದು. ಏಕೆ?

21 ಯೆಹೋವನು ತಾನೇ ಆ ತೋಟವನ್ನು ನೆಟ್ಟಿದ್ದನು! ಅದರ ಸೊಬಗು ವರ್ಣನಾತೀತವಾಗಿದ್ದಿರಲೇಬೇಕು. ನೋಟಕ್ಕೆ ರಮ್ಯವಾಗಿರುವ ಹಾಗೂ ತಿನ್ನುವುದಕ್ಕೆ ರುಚಿಕರವಾದ ಹಣ್ಣುಗಳಿರುವ ಪ್ರತಿಯೊಂದು ವೃಕ್ಷವು ಅಲ್ಲಿತ್ತು. ಆ ತೋಟವು ವಿಶಾಲವಾಗಿತ್ತು, ಚೆನ್ನಾಗಿ ನೀರೆರೆಯಲ್ಪಟ್ಟಿತ್ತು, ಮತ್ತು ಮಂತ್ರಮುಗ್ಧಗೊಳಿಸುವ ವಿವಿಧ ಪ್ರಾಣಿಗಳಿಂದ ತುಂಬಿ ಸಜೀವಭರಿತವಾಗಿತ್ತು. ತಮ್ಮ ಜೀವನವನ್ನು ಸಂತೋಷಕರವೂ ಸಮೃದ್ಧವೂ ಆಗಿಮಾಡಲು ಬೇಕಾದ ಎಲ್ಲಾ ವಸ್ತುಗಳೊಂದಿಗೆ, ಸಂತೃಪ್ತಿಕರವಾದ ಕೆಲಸವೂ ಪರಿಪೂರ್ಣ ಸಹವಾಸವೂ ಆದಾಮಹವ್ವರಿಗಿತ್ತು. ಮೊದಲಾಗಿ ಯೆಹೋವನು ಅವರನ್ನು ಪ್ರೀತಿಸಿದನು, ಮತ್ತು ಪ್ರತಿಯಾಗಿ ಆತನನ್ನು ಪ್ರೀತಿಸುವುದಕ್ಕೆ ಅವರಿಗೆ ಬಹಳಷ್ಟು ಕಾರಣಗಳಿದ್ದವು. ಆದರೂ ಅವರು ಹಾಗೆ ಮಾಡಲು ತಪ್ಪಿದರು. ತಮ್ಮ ಸ್ವರ್ಗೀಯ ತಂದೆಗೆ ಪ್ರೀತಿಯಿಂದ ವಿಧೇಯರಾಗುವ ಬದಲಿಗೆ ಅವರು ಸ್ವಾರ್ಥಪರರಾಗಿ ಆತನ ವಿರುದ್ಧ ದಂಗೆಯೆದ್ದರು.​—ಆದಿಕಾಂಡ, ಅಧ್ಯಾಯ 2.

22. ಏದೆನಿನಲ್ಲಾದ ದಂಗೆಗೆ ಯೆಹೋವನ ಪ್ರತಿಕ್ರಿಯೆಯು ಆತನ ಪ್ರೀತಿಯು ನಿಷ್ಠಾಭರಿತವಾಗಿದೆ ಎಂಬುದನ್ನು ಹೇಗೆ ತೋರಿಸಿತು?

22 ಯೆಹೋವನ ಮನಸ್ಸಿಗೆ ಅದೆಷ್ಟು ನೋವನ್ನುಂಟುಮಾಡಿರಬೇಕು! ಆದರೆ ಆ ದಂಗೆಯು ಆತನ ಪ್ರೀತಿಯುತ ಹೃದಯವನ್ನು ಕಹಿಗೊಳಿಸಿತೊ? ಇಲ್ಲ! “ಆತನ ಕೃಪೆಯು [ಅಥವಾ “ನಿಷ್ಠಾವಂತ ಪ್ರೀತಿಯು,” NW ಪಾದಟಿಪ್ಪಣಿ] ಶಾಶ್ವತವಾದದ್ದು.” (ಕೀರ್ತನೆ 136:1) ಹೀಗಿರುವುದರಿಂದ, ಆತನು ಆದಾಮಹವ್ವರ ಸಂತತಿಯಲ್ಲಿ ಯೋಗ್ಯ ಪ್ರವೃತ್ತಿಯುಳ್ಳ ಯಾವನೇ ವ್ಯಕ್ತಿಯನ್ನು ವಿಮೋಚಿಸಲು ಆ ಕೂಡಲೆ ಪ್ರೀತಿಪೂರ್ವಕ ಏರ್ಪಾಡುಗಳನ್ನು ಮಾಡಲು ಉದ್ದೇಶಿಸಿದನು. ನಾವು ನೋಡಿರುವ ನೋಡಿರುವ, ತಂದೆಯು ಭಾರೀ ಬೆಲೆಯನ್ನು ತೆರಬೇಕಾದ ಆತನ ಪ್ರಿಯ ಕುಮಾರನ ಈಡು ಯಜ್ಞವೂ ಸೇರಿತ್ತು.​—1 ಯೋಹಾನ 4:10.

23. ಯೆಹೋವನು “ಸಂತೋಷಭರಿತ ದೇವರು” ಆಗಿರುವ ಕಾರಣಗಳಲ್ಲಿ ಒಂದು ಯಾವುದು, ಮತ್ತು ಮುಂದಿನ ಅಧ್ಯಾಯದಲ್ಲಿ ಯಾವ ಪ್ರಾಮುಖ್ಯ ಪ್ರಶ್ನೆಯು ಚರ್ಚಿಸಲ್ಪಡುವುದು?

23 ಹೌದು, ಮಾನವಕುಲಕ್ಕೆ ಪ್ರೀತಿಯನ್ನು ತೋರಿಸುವುದರಲ್ಲಿ ಯೆಹೋವನು ಆರಂಭದಿಂದಲೇ ಮೊದಲ ಹೆಜ್ಜೆಯನ್ನು ತೆಗೆದುಕೊಂಡಿದ್ದಾನೆ. ಅಸಂಖ್ಯಾತ ವಿಧಗಳಲ್ಲಿ ‘ದೇವರು ಮೊದಲು ನಮ್ಮನ್ನು ಪ್ರೀತಿಸಿದನು.’ ಮತ್ತು ಪ್ರೀತಿಯು ಸಾಮರಸ್ಯ ಹಾಗೂ ಆನಂದಕ್ಕೆ ಇಂಬುಕೊಡುವುದರಿಂದ ಯೆಹೋವನು “ಸಂತೋಷಭರಿತ ದೇವರು” ಎಂದು ವರ್ಣಿಸಲ್ಪಟ್ಟಿರುವುದು ಆಶ್ಚರ್ಯದ ಸಂಗತಿಯಲ್ಲ. (1 ತಿಮೊಥೆಯ 1:​11, NW) ಆದರೂ ಒಂದು ಪ್ರಾಮುಖ್ಯ ಪ್ರಶ್ನೆಯು ಏಳುತ್ತದೆ. ಯೆಹೋವನು ನಿಜವಾಗಿ ನಮ್ಮಲ್ಲಿ ಒಬ್ಬೊಬ್ಬರನ್ನೂ ಪ್ರೀತಿಸುತ್ತಾನೋ? ಮುಂದಿನ ಅಧ್ಯಾಯವು ಆ ವಿಷಯವನ್ನು ಚರ್ಚಿಸುವುದು.

^ ಪ್ಯಾರ. 11 ಕ್ರೈಸ್ತ ಗ್ರೀಕ್‌ ಶಾಸ್ತ್ರಗಳಲ್ಲಿ “(ಒಬ್ಬ ಆಪ್ತಮಿತ್ರ ಅಥವಾ ಸಹೋದರನ ಬಗ್ಗೆ ಇರುವಂತೆ) ಮಮತೆಯಿರುವುದು, ಒಲುಮೆಯಿರುವುದು, ಇಲ್ಲವೆ ಇಷ್ಟಪಡುವುದು” ಎಂಬ ಅರ್ಥವುಳ್ಳ ಕ್ರಿಯಾಪದವಾದ ಫೀಲಿಯಾವನ್ನು ಅನೇಕವೇಳೆ ಉಪಯೋಗಿಸಲಾಗುತ್ತದೆ. ಆಪ್ತ ಕೌಟುಂಬಿಕ ಪ್ರೀತಿ ಅಥವಾ ಸ್ಟಾರ್ಘೀ ಎಂಬ ಪದದ ಒಂದು ರೂಪವು 2 ತಿಮೊಥೆಯ 3:3 ರಲ್ಲಿ ಉಪಯೋಗಿಸಲ್ಪಟ್ಟಿದ್ದು, ಕಡೇ ದಿವಸಗಳಲ್ಲಿ ಈ ರೀತಿಯ ಪ್ರೀತಿಯ ಕೊರತೆ ಬಹಳಷ್ಟಿರುವುದೆಂಬುದನ್ನು ಅದು ತೋರಿಸುತ್ತದೆ. ಈರಾಸ್‌ ಅಥವಾ ಗಂಡುಹೆಣ್ಣಿನ ನಡುವಣ ಪ್ರಣಯಪ್ರೇಮದ ಪದವು ಕ್ರೈಸ್ತ ಗ್ರೀಕ್‌ ಶಾಸ್ತ್ರಗಳಲ್ಲಿ ಉಪಯೋಗಿಸಲ್ಪಟ್ಟಿಲ್ಲವಾದರೂ, ಆ ರೀತಿಯ ಪ್ರೇಮವು ಬೈಬಲಿನಲ್ಲಿ ಚರ್ಚಿಸಲ್ಪಟ್ಟಿದೆ.​—ಜ್ಞಾನೋಕ್ತಿ 5:15-20.

^ ಪ್ಯಾರ. 15 ಇತರ ಶಾಸ್ತ್ರೀಯ ಹೇಳಿಕೆಗಳಲ್ಲಿಯೂ ಇದಕ್ಕೆ ಹೋಲುವಂಥ ಪದರಚನೆಯಿದೆ. ಉದಾಹರಣೆಗೆ, “ದೇವರು ಬೆಳಕಾಗಿದ್ದಾನೆ” ಮತ್ತು “ದೇವರು . . . ದಹಿಸುವ ಅಗ್ನಿಯಾಗಿದ್ದಾನೆ.” (1 ಯೋಹಾನ 1:5; ಇಬ್ರಿಯ 12:29) ಆದರೆ ಇವನ್ನು ರೂಪಕಾಲಂಕಾರಗಳಾಗಿ ಅರ್ಥಮಾಡಿಕೊಳ್ಳಬೇಕು, ಯಾಕಂದರೆ ಅವು ಯೆಹೋವನನ್ನು ಭೌತಿಕ ವಸ್ತುಗಳಿಗೆ ಹೋಲಿಸುತ್ತವೆ. ಯೆಹೋವನು ಬೆಳಕಿನ ಹಾಗೆ ಇದ್ದಾನೆ ಯಾಕೆಂದರೆ ಆತನು ಪವಿತ್ರನೂ ಶುದ್ಧನೂ ಆಗಿದ್ದಾನೆ. ಆತನಲ್ಲಿ ಯಾವ “ಕತ್ತಲೆ” ಅಥವಾ ಅಶುದ್ಧತೆಯೂ ಇಲ್ಲ. ಮತ್ತು ಆತನು ನಾಶಕಾರಕ ಶಕ್ತಿಯನ್ನು ಉಪಯೋಗಿಸುವುದರಿಂದ ಆತನನ್ನು ಅಗ್ನಿಗೆ ಹೋಲಿಸಬಹುದಾಗಿದೆ.