ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಧ್ಯಾಯ 9

‘ದೇವರ ಶಕ್ತಿ ಆಗಿರುವ ಕ್ರಿಸ್ತನು’

‘ದೇವರ ಶಕ್ತಿ ಆಗಿರುವ ಕ್ರಿಸ್ತನು’

1-3. (ಎ) ಗಲಿಲಾಯ ಸಮುದ್ರದಲ್ಲಿ ಶಿಷ್ಯರಿಗೆ ಯಾವ ಭೀತಿದಾಯಕ ಅನುಭವವಾಯಿತು, ಮತ್ತು ಯೇಸು ಏನು ಮಾಡಿದನು? (ಬಿ) ಯೇಸು ‘ದೇವರ ಶಕ್ತಿ ಆಗಿರುವ ಕ್ರಿಸ್ತನು’ ಎಂದು ಯೋಗ್ಯವಾಗಿ ಕರೆಯಲ್ಪಟ್ಟಿದ್ದಾನೆ ಏಕೆ?

ಶಿಷ್ಯರು ಅತ್ಯಂತ ಭಯಭೀತರಾಗಿದ್ದರು. ಅವರು ಗಲಿಲಾಯ ಸಮುದ್ರದ ಆಚೇದಡಕ್ಕೆ ಪ್ರಯಾಣ ಮಾಡುತ್ತಿರುವಾಗ, ಥಟ್ಟನೆ ಒಂದು ದೊಡ್ಡ ಬಿರುಗಾಳಿ ಎದ್ದಿತು. ಈ ಕೆರೆಯಲ್ಲಿ ಅವರು ಮುಂಚೆಯೂ ಬಿರುಗಾಳಿಗಳನ್ನು ನೋಡಿದ್ದರೆಂಬುದರಲ್ಲಿ ಸಂದೇಹವಿಲ್ಲ, ಏಕೆಂದರೆ ಅವರಲ್ಲಿ ಕೆಲವರು ಅನುಭವಸ್ಥ ಬೆಸ್ತರಾಗಿದ್ದರು. * (ಮತ್ತಾಯ 4:18, 19) ಆದರೆ ಇದು ಪ್ರಚಂಡವಾದ “ದೊಡ್ಡ ಬಿರುಗಾಳಿ”ಯಾದುದರಿಂದ ಕೂಡಲೆ ಸಮುದ್ರವು ಅಲ್ಲೋಲಕಲ್ಲೋಲವಾಗಿ ನೊರೆಗರೆಯಿತು. ಆ ಪುರುಷರು ದೋಣಿಯನ್ನು ನಡೆಸಲು ಬಹಳ ಪರಿಶ್ರಮಿಸಿದರೂ ಬಿರುಗಾಳಿಯ ರಭಸವು ಕಂಗೆಡಿಸುವಂಥದ್ದಾಗಿತ್ತು. ಹೊಯ್ದಾಡುವ ತೆರೆಗಳು “ದೋಣಿಗೆ ಬಡಿದು” ಒಳಗೆ ನುಗ್ಗಿದವು ಮತ್ತು ದೋಣಿಯಲ್ಲಿ ನೀರು ತುಂಬತೊಡಗಿತು. ಈ ಎಲ್ಲಾ ಗದ್ದಲದ ಮಧ್ಯೆಯೂ ಯೇಸು ದೋಣಿಯ ಹಿಂಭಾಗದಲ್ಲಿ ನಿದ್ದೆಮಾಡುತ್ತಿದ್ದನು; ದಿನವಿಡೀ ಜನರ ಗುಂಪಿಗೆ ಉಪದೇಶಮಾಡುತ್ತಾ ಅವನು ಬಹಳವಾಗಿ ದಣಿದಿದ್ದನು. ತಾವು ಸಾಯುವೆವು ಎಂದು ಭಯಪಟ್ಟ ಶಿಷ್ಯರು ಅವನನ್ನು ಎಬ್ಬಿಸಿ, “ಸ್ವಾಮೀ, ಕಾಪಾಡು, ಸಾಯುತ್ತೇವೆ” ಎಂದು ಮೊರೆಯಿಟ್ಟರು.​—ಮಾರ್ಕ 4:35-38; ಮತ್ತಾಯ 8:23-25.

2 ಯೇಸುವಿಗೆ ಹೆದರಿಕೆಯಾಗಲಿಲ್ಲ. ಪೂರ್ಣ ಭರವಸೆಯುಳ್ಳವನಾಗಿ ಅವನು ಗಾಳಿಯನ್ನೂ ಸಮುದ್ರವನ್ನೂ ಗದರಿಸುತ್ತಾ, “ಸುಮ್ಮನಿರು, ಮೊರೆಯಬೇಡ” ಎಂದು ಅಪ್ಪಣೆಕೊಟ್ಟನು. ಆ ಕೂಡಲೆ ಗಾಳಿ ಮತ್ತು ಸಮುದ್ರವು ವಿಧೇಯವಾದವು. ಬಿರುಗಾಳಿ ನಿಂತುಹೋಯಿತು, ತೆರೆಗಳ ಸದ್ದಡಗಿತು ಮತ್ತು “ಎಲ್ಲಾ ಶಾಂತವಾಯಿತು.” ಒಂದು ಅಸಾಮಾನ್ಯ ಭಯವು ಶಿಷ್ಯರನ್ನಾವರಿಸಿತು. “ಈತನು ಯಾರಿರಬಹುದು?” ಎಂದವರು ತಮ್ಮತಮ್ಮೊಳಗೆ ಮಾತಾಡಿಕೊಂಡರು. ಹೌದು, ತುಂಟ ಮಗುವೊಂದನ್ನು ತಿದ್ದುತ್ತಿದ್ದಾನೊ ಎಂಬಂತೆ ಯಾವ ಮನುಷ್ಯನು ತಾನೇ ಗಾಳಿಯನ್ನೂ ಸಮುದ್ರವನ್ನೂ ಗದರಿಸಬಲ್ಲನು?​—ಮಾರ್ಕ 4:39-41; ಮತ್ತಾಯ 8:26, 27.

3 ಆದರೆ ಯೇಸುವಾದರೊ ಒಬ್ಬ ಸಾಮಾನ್ಯ ಮನುಷ್ಯನಾಗಿರಲಿಲ್ಲ. ಯೆಹೋವನ ಶಕ್ತಿಯು ಅವನ ಕಡೆಗೆ ಮತ್ತು ಅವನ ಮೂಲಕವಾಗಿ ಅಸಾಮಾನ್ಯವಾದ ವಿಧಗಳಲ್ಲಿ ಪ್ರದರ್ಶಿಸಲ್ಪಟ್ಟಿತು. ಪ್ರೇರಿತ ಅಪೊಸ್ತಲ ಪೌಲನು ಅವನನ್ನು ‘ದೇವರ ಶಕ್ತಿ ಆಗಿರುವ ಕ್ರಿಸ್ತನು’ ಎಂದು ಯೋಗ್ಯವಾಗಿಯೇ ನಿರ್ದೇಶಿಸಸಾಧ್ಯವಿತ್ತು. (1 ಕೊರಿಂಥ 1:24) ಯಾವ ರೀತಿಯಲ್ಲಿ ದೇವರ ಶಕ್ತಿಯು ಯೇಸುವಿನಲ್ಲಿ ಪ್ರಕಟವಾಯಿತು? ಮತ್ತು ಯೇಸುವಿನ ಶಕ್ತಿಯ ಉಪಯೋಗವು ನಮ್ಮ ಜೀವಿತವನ್ನು ಹೇಗೆ ಪ್ರಭಾವಿಸಬಲ್ಲದು?

ದೇವರ ಏಕಜಾತ ಪುತ್ರನ ಶಕ್ತಿ

4, 5. (ಎ) ತನ್ನ ಏಕಜಾತ ಪುತ್ರನಿಗೆ ಯೆಹೋವನು ಯಾವ ಶಕ್ತಿ ಮತ್ತು ಅಧಿಕಾರವನ್ನು ವಹಿಸಿಕೊಟ್ಟನು? (ಬಿ) ತನ್ನ ತಂದೆಯ ಸೃಷ್ಟಿಕಾರಕ ಉದ್ದೇಶಗಳನ್ನು ಪೂರೈಸಲು ಈ ಪುತ್ರನು ಹೇಗೆ ಸನ್ನದ್ಧಗೊಳಿಸಲ್ಪಟ್ಟಿದ್ದನು?

4 ಯೇಸುವಿನ ಮಾನವಪೂರ್ವ ಅಸ್ತಿತ್ವದಲ್ಲಿ ಅವನಿಗಿದ್ದ ಶಕ್ತಿಯನ್ನು ತುಸು ಪರಿಗಣಿಸಿರಿ. ಯೇಸು ಕ್ರಿಸ್ತನಾಗಿ ಪ್ರಸಿದ್ಧನಾಗಲಿಕ್ಕಿದ್ದ ತನ್ನ ಏಕಜಾತ ಪುತ್ರನನ್ನು ಸೃಷ್ಟಿಸಿದಾಗ, ಯೆಹೋವನು ತನ್ನ ಸ್ವಂತ “ನಿತ್ಯಶಕ್ತಿಯನ್ನು” ಉಪಯೋಗಿಸಿದನು. (ರೋಮಾಪುರ 1:20; ಕೊಲೊಸ್ಸೆ 1:15) ತದನಂತರ, ಈ ಕುಮಾರನಿಗೆ ಯೆಹೋವನು ಪ್ರಚಂಡವಾದ ಶಕ್ತಿಯನ್ನೂ ಅಧಿಕಾರವನ್ನೂ ಕೊಟ್ಟು, ತನ್ನ ಸೃಷ್ಟಿಕಾರಕ ಉದ್ದೇಶಗಳನ್ನು ಪೂರೈಸಲು ನೇಮಿಸಿದನು. ಈ ಪುತ್ರನ ಕುರಿತು ದೇವರ ವಾಕ್ಯವು ಹೇಳುವುದು: “ಆತನ ಮೂಲಕವಾಗಿ ಸಮಸ್ತವು ಉಂಟಾಯಿತು; ಉಂಟಾಗಿರುವ ವಸ್ತುಗಳಲ್ಲಿ ಆತನಿಲ್ಲದೆ ಒಂದಾದರೂ ಉಂಟಾಗಲಿಲ್ಲ.”​—ಯೋಹಾನ 1:3.

5 ಆ ನೇಮಕದ ಮಹಾ ಪರಿಮಾಣವನ್ನು ನಮಗೆ ಸರಿಯಾಗಿ ಗ್ರಹಿಸಲೂ ಸಾಧ್ಯವಾಗಲಿಕ್ಕಿಲ್ಲ. ಕೋಟಿಗಟ್ಟಲೆ ಪರಾಕ್ರಮಿ ದೇವದೂತರನ್ನು, ಸಹಸ್ರಕೋಟಿಗಟ್ಟಲೆ ಗ್ಯಾಲಕ್ಸಿಗಳುಳ್ಳ ಈ ವಿಶ್ವವನ್ನು, ಮತ್ತು ಹೇರಳವಾದ ವಿವಿಧ ಜೀವಜಂತುಗಳಿರುವ ಈ ಭೂಮಿಯನ್ನು ಅಸ್ತಿತ್ವಕ್ಕೆ ತರಲು ಬೇಕಾಗಿರುವ ಶಕ್ತಿಯನ್ನು ಊಹಿಸಿಕೊಳ್ಳಿರಿ. ನೇಮಿಸಲ್ಪಟ್ಟ ಆ ಎಲ್ಲಾ ಕೆಲಸಗಳನ್ನು ಮಾಡಿಮುಗಿಸಲು, ವಿಶ್ವದಲ್ಲೆಲ್ಲಾ ಅತಿ ಪ್ರಭಾವಶಾಲಿ ಶಕ್ತಿಯಾದ ದೇವರ ಪವಿತ್ರಾತ್ಮವನ್ನು ಈ ಏಕಜಾತ ಪುತ್ರನಿಗೆ ವಹಿಸಲಾಗಿತ್ತು. ಯಾರನ್ನು ಯೆಹೋವನು ಬೇರೆಲ್ಲಾ ವಸ್ತುಗಳನ್ನು ನಿರ್ಮಿಸಲಿಕ್ಕಾಗಿ ಉಪಯೋಗಿಸಿದನೋ ಆ ನಿಪುಣ ಕೆಲಸಗಾರನಾಗಿರುವುದರಲ್ಲಿ ಈ ಪುತ್ರನು ಮಹಾ ಆನಂದವನ್ನು ಕಂಡುಕೊಂಡನು.​—ಜ್ಞಾನೋಕ್ತಿ 8:22-31.

6. ಭೂಮಿಯ ಮೇಲೆ ಅವನ ಮರಣ ಮತ್ತು ಪುನರುತ್ಥಾನದ ಬಳಿಕ, ಯೇಸುವಿಗೆ ಯಾವ ಶಕ್ತಿ ಮತ್ತು ಅಧಿಕಾರವು ಅನುಗ್ರಹಿಸಲ್ಪಟ್ಟಿತ್ತು?

6 ಈ ಏಕಜಾತ ಪುತ್ರನು ಇದಕ್ಕಿಂತಲೂ ಹೆಚ್ಚು ಶಕ್ತಿ ಮತ್ತು ಅಧಿಕಾರವನ್ನು ಪಡೆದುಕೊಳ್ಳಲಿದ್ದನೊ? ಯೇಸುವಿನ ಮರಣ ಮತ್ತು ಪುನರುತ್ಥಾನದ ಅನಂತರ ಅವನಂದದ್ದು: “ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರವು ನನಗೆ ಕೊಡಲ್ಪಟ್ಟಿದೆ.” (ಮತ್ತಾಯ 28:18) ಹೌದು, ವಿಶ್ವವ್ಯಾಪಕವಾಗಿ ಅಧಿಕಾರ ನಡೆಸುವ ಸಾಮರ್ಥ್ಯ ಮತ್ತು ಹಕ್ಕನ್ನು ಯೇಸುವಿಗೆ ಅನುಗ್ರಹಿಸಲಾಗಿದೆ. “ರಾಜಾಧಿರಾಜನೂ ಕರ್ತರ ಕರ್ತನೂ” ಆಗಿರುವ ಅವನಿಗೆ, ತನ್ನ ತಂದೆಗೆ ವಿರುದ್ಧವಾಗಿ ನಿಂತಿರುವ ಸಕಲ ದೃಶ್ಯಾದೃಶ್ಯ “ದೊರೆತನವನ್ನೂ ಎಲ್ಲಾ ಅಧಿಕಾರವನ್ನೂ ಬಲವನ್ನೂ ನಿವೃತ್ತಿ ಮಾಡುವ” ಅಧಿಕಾರವು ನೀಡಲ್ಪಟ್ಟಿರುತ್ತದೆ. (ಪ್ರಕಟನೆ 19:16; 1 ಕೊರಿಂಥ 15:24-26) ಹೌದು, ಯೆಹೋವನು ತನ್ನನ್ನು ಹೊರತುಪಡಿಸಿ, “ಬೇರೆಲ್ಲವನ್ನು ಅವನ ಪಾದಗಳ ಕೆಳಗೆ ಹಾಕಿ ಅವನಿಗೆ ಅಧೀನ”ಮಾಡಿದ್ದಾನೆ.​—ಇಬ್ರಿಯ 2:8; 1 ಕೊರಿಂಥ 15:27.

7. ಯೆಹೋವನು ಅವನ ಕೈಗೆ ಕೊಟ್ಟ ಅಧಿಕಾರವನ್ನು ಯೇಸು ಎಂದೂ ದುರುಪಯೋಗಿಸನೆಂಬ ಭರವಸೆಯು ನಮಗಿರಬಲ್ಲದೇಕೆ?

7 ಯೇಸು ಒಂದುವೇಳೆ ತನ್ನ ಅಧಿಕಾರ ಶಕ್ತಿಯ ದುರುಪಯೋಗ ಮಾಡಾನೆಂದು ನಾವು ಚಿಂತಿಸುವ ಅಗತ್ಯವಿದೆಯೆ? ಖಂಡಿತವಾಗಿಯೂ ಇಲ್ಲ! ಯೇಸು ನಿಜವಾಗಿ ತನ್ನ ತಂದೆಯನ್ನು ಪ್ರೀತಿಸುತ್ತಾನೆ ಮತ್ತು ಆತನನ್ನು ಅಸಂತೋಷಗೊಳಿಸುವ ಏನನ್ನೂ ಎಂದಿಗೂ ಮಾಡಲಾರನು. (ಯೋಹಾನ 8:29; 14:31) ಯೆಹೋವನೆಂದೂ ತನ್ನ ಸರ್ವಶಕ್ತ ಶಕ್ತಿಯ ದುರುಪಯೋಗ ಮಾಡುವುದಿಲ್ಲವೆಂದು ಯೇಸುವಿಗೆ ಚೆನ್ನಾಗಿ ತಿಳಿದಿದೆ. “ತನ್ನ ಕಡೆಗೆ ಯಥಾರ್ಥಮನಸ್ಸುಳ್ಳವರ ರಕ್ಷಣೆಗಾಗಿ ತನ್ನ ಪ್ರತಾಪವನ್ನು [“ಬಲವನ್ನು,” NW] ತೋರ್ಪಡಿಸಲು” ಯೆಹೋವನು ಸಂದರ್ಭಗಳಿಗಾಗಿ ಹುಡುಕುತ್ತಾನೆಂಬುದನ್ನು ಯೇಸು ತಾನೇ ಅವಲೋಕಿಸಿರುವನು. (2 ಪೂರ್ವಕಾಲವೃತ್ತಾಂತ 16:9) ಮಾನವಕುಲದ ಮೇಲೆ ತನ್ನ ತಂದೆಗಿರುವ ಪ್ರೀತಿಯು ಯೇಸುವಿನಲ್ಲೂ ಇದೆ ನಿಶ್ಚಯ, ಆದುದರಿಂದ ಯೇಸು ತನ್ನ ಶಕ್ತಿಯನ್ನು ಯಾವಾಗಲೂ ಒಳ್ಳೇದಕ್ಕಾಗಿ ಉಪಯೋಗಿಸುವನೆಂಬ ಭರವಸೆಯು ನಮಗಿರಬಲ್ಲದು. (ಯೋಹಾನ 13:1) ಈ ಸಂಬಂಧದಲ್ಲಿ ಯೇಸು ಕುಂದಿಲ್ಲದ ದಾಖಲೆಯನ್ನು ಸ್ಥಾಪಿಸಿದ್ದಾನೆ. ಭೂಮಿಯಲ್ಲಿರುವಾಗ ಅವನಿಗಿದ್ದ ಶಕ್ತಿ ಮತ್ತು ಅದನ್ನು ಉಪಯೋಗಿಸಲು ಅವನು ಪ್ರೇರಿಸಲ್ಪಟ್ಟ ವಿಧವನ್ನು ನಾವೀಗ ಪರಿಗಣಿಸೋಣ.

‘ಮಾತಿನಲ್ಲಿ ಸಮರ್ಥನು’

8. ಯೇಸು ಅಭಿಷೇಕಿಸಲ್ಪಟ್ಟ ನಂತರ ಅವನಿಗೆ ಏನು ಮಾಡುವ ಶಕ್ತಿಯು ನೀಡಲ್ಪಟ್ಟಿತು, ಮತ್ತು ತನ್ನ ಶಕ್ತಿಯನ್ನು ಅವನು ಹೇಗೆ ಉಪಯೋಗಿಸಿದನು?

8 ನಜರೇತಿನಲ್ಲಿ ಬೆಳೆಯುತ್ತಿದ್ದಾಗ ಯೇಸು ಯಾವ ಅದ್ಭುತಕೃತ್ಯಗಳನ್ನೂ ನಡಿಸಿರಲಿಲ್ಲ. ಆದರೆ ಅವನು ಸುಮಾರು 30 ವರ್ಷ ಪ್ರಾಯದವನಾದಾಗ ಅಂದರೆ ಸಾ.ಶ. 29ರಲ್ಲಿ ದೀಕ್ಷಾಸ್ನಾನ ಪಡೆದುಕೊಂಡ ಬಳಿಕ, ಸ್ಥಿತಿಯು ಬದಲಾಯಿತು. (ಲೂಕ 3:21-23) ಬೈಬಲು ನಮಗನ್ನುವದು: “ದೇವರು ಆತನಿಗೆ ಪವಿತ್ರಾತ್ಮನನ್ನೂ ಶಕ್ತಿಯನ್ನೂ ಕೊಡುವುದರ ಮೂಲಕ ಅಭಿಷೇಕಿಸಿದನು; ಆತನು ಎಲ್ಲಾ ಕಡೆಗಳಲ್ಲೂ ಜನರಿಗೆ ಒಳ್ಳೆಯದನ್ನು ಮಾಡುತ್ತಾ ಸಂಚರಿಸಿದನು. ದೆವ್ವದಿಂದ ಪೀಡಿತರಾಗಿದ್ದವರನ್ನು ಯೇಸು ಗುಣಪಡಿಸಿದನು.” (ಅ. ಕೃತ್ಯಗಳು 10:​38, ಪರಿಶುದ್ಧ ಬೈಬಲ್‌) “ಒಳ್ಳೆಯದನ್ನು ಮಾಡುತ್ತಾ” ಸಂಚರಿಸಿದನೆಂಬ ಮಾತುಗಳು, ಯೇಸು ತನ್ನ ಶಕ್ತಿಯನ್ನು ಒಳ್ಳೇದಕ್ಕಾಗಿಯೇ ಉಪಯೋಗಿಸಿದನೆಂದು ಸೂಚಿಸುತ್ತವೆಯಲ್ಲವೋ? ಅವನು ಅಭಿಷಿಕ್ತನಾದ ಬಳಿಕ, “ಕೃತ್ಯದಲ್ಲಿಯೂ ಮಾತಿನಲ್ಲಿಯೂ ಸಮರ್ಥನಾದ ಪ್ರವಾದಿ”ಯಾದನು​—ಲೂಕ 24:19.

9-11. (ಎ) ಯೇಸು ತನ್ನ ಹೆಚ್ಚಿನ ಕಲಿಸುವಿಕೆಯನ್ನು ಎಲ್ಲಿ ಮಾಡಿದನು, ಮತ್ತು ಅವನಿಗೆ ಯಾವ ಸವಾಲು ಎದುರಾಯಿತು? (ಬಿ) ಯೇಸು ಕಲಿಸಿದ ವಿಧಾನವು ಜನರನ್ನು ಅತ್ಯಾಶ್ಚರ್ಯಗೊಳಿಸಿದ್ದೇಕೆ?

9 ಯೇಸು ಮಾತಿನಲ್ಲಿ ಸಮರ್ಥನಾಗಿದ್ದದ್ದು ಹೇಗೆ? ಅವನು ಅನೇಕವೇಳೆ ಹೊರಗೆ ಬಯಲಲ್ಲಿ, ಕೆರೆಯ ತೀರಗಳಲ್ಲಿ ಮತ್ತು ಗುಡ್ಡಗಳ ಪಕ್ಕಗಳಲ್ಲಿ ಹಾಗೂ ಬೀದಿಗಳಲ್ಲಿ ಮತ್ತು ಪೇಟೆಗಳಲ್ಲಿ ಬಹಿರಂಗವಾಗಿ ಕಲಿಸಿದನು. (ಮಾರ್ಕ 6:53-56; ಲೂಕ 5:1-3; 13:26) ಅವನ ಮಾತುಗಳು ಆಲಿಸುವವರ ಆಸಕ್ತಿಯನ್ನು ಸೆಳೆದು ಹಿಡಿಯದಿರುತ್ತಿದ್ದಲ್ಲಿ, ಅವರು ಸೀದಾ ಎದ್ದು ಹೊರಟುಹೋಗಬಹುದಿತ್ತು. ಮುದ್ರಿತ ಪುಸ್ತಕಗಳು ಇದ್ದಿರದ ಆ ಯುಗದಲ್ಲಿ, ಗಣ್ಯತಾಭಾವವುಳ್ಳ ಆಲಿಸುವವರು ಅವನ ಮಾತುಗಳನ್ನು ತಮ್ಮ ಹೃದಮನಗಳಲ್ಲಿ ಇರಿಸಿಕೊಳ್ಳಬೇಕಾದ ಅಗತ್ಯವಿತ್ತು. ಆದುದರಿಂದಲೇ ಯೇಸುವಿನ ಕಲಿಸುವಿಕೆಯು ಪೂರಾ ರೀತಿಯಲ್ಲಿ ಗಮನವನ್ನು ಸೆರೆಹಿಡಿದಿಡುವ, ಸುಲಭವಾಗಿ ಅರ್ಥವಾಗುವ ಹಾಗೂ ಕಷ್ಟವಿಲ್ಲದೆ ನೆನಪಿನಲ್ಲಿಡುವಂಥದ್ದು ಆಗಿರಬೇಕಿತ್ತು. ಆದರೆ ಈ ಸವಾಲು ಯೇಸುವಿಗೆ ಸಮಸ್ಯೆಯಾಗಿರಲಿಲ್ಲ. ಉದಾಹರಣೆಗಾಗಿ, ಅವನ ಪರ್ವತಪ್ರಸಂಗವನ್ನು ಗಮನಕ್ಕೆ ತನ್ನಿರಿ.

10 ಸಾ.ಶ. 31ರ ಪ್ರಾರಂಭದಲ್ಲಿ ಒಂದು ಬೆಳಗ್ಗೆ, ಗಲಿಲಾಯ ಸಮುದ್ರದ ಬಳಿಯಲ್ಲಿದ್ದ ಬೆಟ್ಟದ ಪಕ್ಕದಲ್ಲಿ ಒಂದು ಜನಸಮೂಹವು ಒಟ್ಟುಸೇರಿತ್ತು. ಕೆಲವರು 100ರಿಂದ 110 ಕಿಲೊಮೀಟರ್‌ ದೂರದ ಯೆರೂಸಲೇಮ್‌ ಮತ್ತು ಯೂದಾಯದಿಂದ ಅಲ್ಲಿಗೆ ಬಂದಿದ್ದರು. ಇತರರು ಉತ್ತರ ದಿಕ್ಕಿನಲ್ಲಿದ್ದ ತೂರ್‌ ಮತ್ತು ಸೀದೋನ್‌ ಸೀಮೆಯ ಸಮುದ್ರ ಕರಾವಳಿಯಿಂದ ಬಂದಿದ್ದರು. ರೋಗಿಗಳಾದ ಅನೇಕ ಜನರು ಯೇಸುವಿನ ಬಳಿಬಂದು ಅವನನ್ನು ಮುಟ್ಟಲು ಪ್ರಯತ್ನಿಸಿದರು, ಮತ್ತು ಅವನು ಅವರೆಲ್ಲರನ್ನು ವಾಸಿಮಾಡಿದನು. ಅವರಲ್ಲಿ ಗಂಭೀರವಾಗಿ ಅಸ್ವಸ್ಥರಾಗಿದ್ದ ಪ್ರತಿಯೊಬ್ಬರನ್ನು ಗುಣಪಡಿಸಿಯಾದ ಬಳಿಕವೇ, ಯೇಸು ತನ್ನ ಬೋಧನೆಯನ್ನು ಆರಂಭಿಸಿದನು. (ಲೂಕ 6:17-19) ಸ್ವಲ್ಪ ಸಮಯದ ಅನಂತರ ಅವನು ತನ್ನ ಕಲಿಸುವಿಕೆಯನ್ನು ಮುಗಿಸುವಷ್ಟರಲ್ಲಿ, ತಾವೇನನ್ನು ಕೇಳಿಸಿಕೊಂಡರೊ ಅದರಿಂದ ಎಲ್ಲರೂ ವಿಸ್ಮಿತರಾಗಿದ್ದರು. ಏಕೆ?

11 ಆ ಪ್ರಸಂಗವನ್ನು ಕೇಳಿಸಿಕೊಂಡಾತನಾದ ಒಬ್ಬನು, ವರ್ಷಗಳ ತರುವಾಯ ಬರೆದದ್ದು: “ಆ ಜನರ ಗುಂಪುಗಳು ಆತನ ಉಪದೇಶಕ್ಕೆ ಆತ್ಯಾಶ್ಚರ್ಯಪಟ್ಟವು. ಯಾಕಂದರೆ ಆತನು ಅವರ ಶಾಸ್ತ್ರಿಗಳಂತೆ ಉಪದೇಶ ಮಾಡದೆ ಅಧಿಕಾರವಿದ್ದವನಂತೆ ಅವರಿಗೆ ಉಪದೇಶಮಾಡುತ್ತಿದ್ದನು.” (ಮತ್ತಾಯ 7:28, 29) ಯೇಸುವಿನ ಮಾತುಗಳಲ್ಲಿ ಶಕ್ತಿಯು ಹೊರಸೂಸುವುದನ್ನು ಅವರು ಅನುಭವಿಸಿದ್ದರು. ಅವನು ದೇವರ ಪರವಾಗಿ ಮಾತನಾಡಿದನು ಮತ್ತು ತನ್ನ ಕಲಿಸುವಿಕೆಗೆ ದೇವರ ವಾಕ್ಯದ ಅಧಿಕಾರವನ್ನು ಬೆಂಬಲವಾಗಿಟ್ಟನು. (ಯೋಹಾನ 7:16) ಯೇಸುವಿನ ಹೇಳಿಕೆಗಳು ಸ್ಪಷ್ಟವೂ ಸರಳವೂ ಆಗಿದ್ದವು, ಅವನ ಬುದ್ಧಿವಾದಗಳು ಮನವೊಪ್ಪಿಸುವಂಥವುಗಳಾಗಿದ್ದವು, ಮತ್ತು ಅವನ ವಾದವಿಷಯಗಳು ಅಲ್ಲಗಳೆಯಲಾಗದವುಗಳು ಆಗಿದ್ದವು. ಅವನ ಮಾತುಗಳು ವಾದಾಂಶಗಳ ತಿರುಳನ್ನು ಹಾಗೂ ಆಲಿಸುವವರ ಹೃದಯವನ್ನು ತಲಪಿದವು. ಸಂತೋಷವನ್ನು ಕಂಡುಕೊಳ್ಳುವುದು ಹೇಗೆ, ಪ್ರಾರ್ಥನೆ ಮಾಡುವುದು ಹೇಗೆ, ದೇವರ ರಾಜ್ಯವನ್ನು ಹುಡುಕುವುದು ಹೇಗೆ ಮತ್ತು ಒಂದು ಸುರಕ್ಷಿತ ಭವಿಷ್ಯತ್ತಿಗಾಗಿ ಕಟ್ಟುವುದು ಹೇಗೆಂಬುದನ್ನು ಅವನು ಅವರಿಗೆ ಕಲಿಸಿಕೊಟ್ಟನು. (ಮತ್ತಾಯ 5:3–7:27) ಅವನ ಮಾತುಗಳು, ಸತ್ಯ ಮತ್ತು ನೀತಿಗಾಗಿ ಹಸಿದಿದ್ದವರ ಹೃದಯಗಳನ್ನು ಬಡಿದೆಬ್ಬಿಸಿದವು. ಅಂಥವರು ತಮ್ಮನ್ನು “ನಿರಾಕರಿಸಿ”ಕೊಳ್ಳಲು ಮತ್ತು ಅವನನ್ನು ಹಿಂಬಾಲಿಸುವುದಕ್ಕಾಗಿ ಎಲ್ಲವನ್ನು ಬಿಟ್ಟುಬರಲೂ ಸಿದ್ಧರಾಗಿದ್ದರು. (ಮತ್ತಾಯ 16:24; ಲೂಕ 5:10, 11) ಯೇಸುವಿನ ಮಾತುಗಳಲ್ಲಿದ್ದ ಶಕ್ತಿಗೆ ಇದೆಂಥ ಸಾಕ್ಷ್ಯ!

‘ಕೃತ್ಯದಲ್ಲಿ ಸಮರ್ಥನು’

12, 13. ಯೇಸು ‘ಕೃತ್ಯದಲ್ಲಿ ಸಮರ್ಥ’ನಾಗಿದದ್ದು ಯಾವ ಅರ್ಥದಲ್ಲಿ, ಮತ್ತು ಅವನ ಅದ್ಭುತಕೃತ್ಯಗಳಲ್ಲಿ ಯಾವ ವೈವಿಧ್ಯವಿತ್ತು?

12 ಯೇಸು ‘ಕೃತ್ಯದಲ್ಲಿಯೂ ಸಮರ್ಥ’ನಾಗಿದ್ದನು. (ಲೂಕ 24:19) ಅವನಿಂದ ನಡಿಸಲ್ಪಟ್ಟ ಸುಮಾರು 30ಕ್ಕಿಂತಲೂ ಹೆಚ್ಚು ನಿರ್ದಿಷ್ಟ ಅದ್ಭುತಗಳನ್ನು ಸುವಾರ್ತೆಗಳು ವರದಿಸಿವೆ​—ಈ ಎಲ್ಲಾ ಅದ್ಭುತಗಳೂ ‘ಯೆಹೋವನ ಶಕ್ತಿಯಲ್ಲಿ’ ನಡೆಸಲ್ಪಟ್ಟವು. * (ಲೂಕ 5:​17, NW) ಯೇಸುವಿನ ಅದ್ಭುತಕೃತ್ಯಗಳು ಸಾವಿರಾರು ಜನರ ಜೀವಿತಗಳನ್ನು ಸ್ಪರ್ಶಿಸಿದವು. ಕೇವಲ ಎರಡು ಅದ್ಭುತಗಳಲ್ಲೇ​—“ಹೆಂಗಸರೂ ಮಕ್ಕಳೂ ಅಲ್ಲದೆ” ಒಮ್ಮೆ 5,000 ಗಂಡಸರಿಗೆ ಮತ್ತು ಇನ್ನೊಮ್ಮೆ 4,000 ಗಂಡಸರಿಗೆ ಊಟವನ್ನು ಒದಗಿಸಿದ್ದರಲ್ಲಿ​—ಬಹುಶಃ ಒಟ್ಟಿಗೆ 20,000 ಜನರು ಒಳಗೂಡಿದ್ದರು!​—ಮತ್ತಾಯ 14:13-21; 15:32-38.

‘ಯೇಸು ಸಮುದ್ರದ ಮೇಲೆ ನಡೆಯುತ್ತಾ ಬರುವದನ್ನು ಅವರು ನೋಡಿದರು’

13 ಯೇಸುವಿನ ಅದ್ಭುತಕೃತ್ಯಗಳಲ್ಲಿ ಮಹಾ ವೈವಿಧ್ಯವಿತ್ತು. ಅವನಿಗೆ ದೆವ್ವಗಳ ಮೇಲೆ ಅಧಿಕಾರವಿದ್ದು, ಸುಲಭವಾಗಿ ಅವುಗಳನ್ನು ಹೊರಡಿಸುತ್ತಿದ್ದನು. (ಲೂಕ 9:37-43) ಪ್ರಾಕೃತಿಕ ಘಟಕಾಂಶಗಳ ಮೇಲೆಯೂ ಅವನಿಗೆ ಶಕ್ತಿಯಿದ್ದು, ಅವನು ನೀರನ್ನು ದ್ರಾಕ್ಷಾರಸವನ್ನಾಗಿ ಮಾರ್ಪಡಿಸಿದ್ದನು. (ಯೋಹಾನ 2:1-11) ಗಾಳಿಯ ಹೊಡೆತಕ್ಕೆ ಸಿಕ್ಕಿದ್ದ ಗಲಿಲಾಯ ಸಮುದ್ರದ ಮೇಲೆ ಅವನು ನಡೆದುಬಂದಾಗ, ಅವನ ಶಿಷ್ಯರು ಬೆಕ್ಕಸಬೆರಗಾಗಿ ನೋಡುತ್ತಾ ನಿಂತರು. (ಯೋಹಾನ 6:18, 19) ವಿವಿಧ ರೋಗಗಳನ್ನೂ ವಾಸಿಮಾಡುವ ಶಕ್ತಿ ಅವನಿಗಿತ್ತು. ಅವನು ಅಂಗ ದೋಷಗಳನ್ನು ವಾಸಿಮಾಡಿದನು, ದೀರ್ಘ ವ್ಯಾಧಿಗಳನ್ನು ಮತ್ತು ಪ್ರಾಣಾಂತಕ ಕಾಯಿಲೆಗಳನ್ನು ಗುಣಪಡಿಸಿದನು. (ಮಾರ್ಕ 3:1-5; ಯೋಹಾನ 4:46-54) ಅಂಥ ವಾಸಿಗಳನ್ನು ಅವನು ವಿವಿಧ ರೀತಿಗಳಲ್ಲಿ ಮಾಡಿದನು. ಕೆಲವರು ದೂರದಿಂದಲೇ ವಾಸಿಯಾದರು, ಬೇರೆಯವರಾದರೊ ವೈಯಕ್ತಿಕವಾಗಿ ಯೇಸುವಿನ ಸ್ಪರ್ಶದಿಂದ ಗುಣಹೊಂದಿದರು. (ಮತ್ತಾಯ 8:2, 3, 5-13) ಕೆಲವರು ಆ ಕೂಡಲೆ ಗುಣಹೊಂದಿದರು, ಇತರರು ಕ್ರಮೇಣ ವಾಸಿಯಾದರು.​—ಮಾರ್ಕ 8:22-25; ಲೂಕ 8:43, 44.

14. ಮರಣದಿಂದ ಬಿಡಿಸುವ ತನ್ನ ಶಕ್ತಿಯನ್ನು ಯೇಸು ಯಾವ ಪರಿಸ್ಥಿತಿಗಳಲ್ಲಿ ಪ್ರದರ್ಶಿಸಿದನು?

14 ಗಮನಾರ್ಹವಾದ ಸಂಗತಿಯೇನೆಂದರೆ, ಮರಣದಿಂದ ಬಿಡಿಸುವ ಮಹತ್ತಾದ ಶಕ್ತಿಯೂ ಯೇಸುವಿಗಿತ್ತು. ದಾಖಲೆಯಾದ ಮೂರು ಸಂದರ್ಭಗಳಲ್ಲಿ ಅವನು ಸತ್ತವರನ್ನು ಎಬ್ಬಿಸಿದ್ದನು. ಒಮ್ಮೆ 12 ವರ್ಷ ಪ್ರಾಯದ ಮಗಳನ್ನು ಅವಳ ಹೆತ್ತವರಿಗೆ ಬದುಕಿಸಿಕೊಟ್ಟನು, ವಿಧವೆಯಾದ ತಾಯಿಗೆ ಅವಳ ಒಬ್ಬನೇ ಮಗನನ್ನು, ಮತ್ತು ಒಬ್ಬ ಪ್ರೀತಿಯ ತಮ್ಮನನ್ನು ಅವನ ಸಹೋದರಿಯರಿಗೆ ಬದುಕಿಸಿಕೊಟ್ಟನು. (ಲೂಕ 7:11-15; 8:49-56; ಯೋಹಾನ 11:38-44) ಯಾವ ಪರಿಸ್ಥಿತಿಯೂ ಅವನಿಗೆ ದುಸ್ಸಾಧ್ಯವಾಗಿರಲಿಲ್ಲ. ಆ 12 ವರ್ಷ ಪ್ರಾಯದ ಹುಡುಗಿಯನ್ನು, ಆಕೆ ಸತ್ತನಂತರ ತುಸು ಸಮಯದಲ್ಲೇ ಮರಣಶಯ್ಯೆಯಿಂದ ಎಬ್ಬಿಸಿದ್ದನು. ಆ ವಿಧವೆಯ ಮಗನನ್ನು ಹೆಣಹೊರುವ ಚಟ್ಟದಿಂದ ಪುನರುತ್ಥಾನ ಮಾಡಿದ್ದು ಅವನು ಸತ್ತ ದಿನದಂದೇ ಎಂಬುದು ನಿಸ್ಸಂದೇಹ, ಮತ್ತು ಲಾಜರನನ್ನು ಅವನು ಎಬ್ಬಿಸಿದ್ದು ಸಮಾಧಿಯೊಳಗಿಂದ, ಅದೂ ಅವನು ಸತ್ತು ನಾಲ್ಕು ದಿನಗಳಾದ ಮೇಲೆ.

ನಿಸ್ವಾರ್ಥತೆ, ಹೊಣೆಗಾರಿಕೆ, ಮತ್ತು ಪರಿಗಣನೆಯಿಂದ ಕೂಡಿರುವ ಶಕ್ತಿ ಪ್ರಯೋಗ

15, 16. ಯೇಸು ತನ್ನ ಶಕ್ತಿಯ ಉಪಯೋಗದಲ್ಲಿ ನಿಸ್ವಾರ್ಥನಾಗಿದ್ದನೆಂಬುದಕ್ಕೆ ಯಾವ ಪುರಾವೆಯಿದೆ?

15 ಯೇಸುವಿಗಿದ್ದಂಥ ಶಕ್ತಿಯು ಒಬ್ಬ ಅಪರಿಪೂರ್ಣ ಧುರೀಣನಲ್ಲಿ ಇದ್ದದ್ದಾದರೆ, ಅದರ ದುರುಪಯೋಗವಾಗುವ ಸಂಭಾವ್ಯತೆ ಎಷ್ಟೆಂಬುದನ್ನು ನೀವು ಊಹಿಸಬಲ್ಲಿರೊ? ಆದರೆ ಯೇಸು ಪಾಪರಹಿತನಾಗಿದ್ದನು. (1 ಪೇತ್ರ 2:22) ಅಪರಿಪೂರ್ಣ ಮಾನವರು, ತಮ್ಮ ಶಕ್ತಿಯನ್ನು ಇತರರ ಹಾನಿಗಾಗಿ ಉಪಯೋಗಿಸುವಂತೆ ಮಾಡುವ ಸ್ವಾರ್ಥಪರತೆ, ಹೆಬ್ಬಯಕೆ, ಮತ್ತು ದುರಾಶೆಯಿಂದ ಕಳಂಕಿತನಾಗಲು ಯೇಸು ನಿರಾಕರಿಸಿದನು.

16 ಯೇಸು ತನ್ನ ಶಕ್ತಿಯ ಉಪಯೋಗದಲ್ಲಿ ನಿಸ್ವಾರ್ಥನಾಗಿದ್ದನು, ಅದನ್ನೆಂದೂ ತನ್ನ ಸ್ವಾರ್ಥ ಲಾಭಕ್ಕಾಗಿ ಪ್ರಯೋಗಿಸಲಿಲ್ಲ. ಅವನು ಹಸಿದಿದ್ದಾಗ, ತನಗಾಗಿ ಕಲ್ಲುಗಳನ್ನು ರೊಟ್ಟಿಗಳನ್ನಾಗಿ ಮಾಡಿಕೊಳ್ಳಲು ನಿರಾಕರಿಸಿದನು. (ಮತ್ತಾಯ 4:1-4) ತನ್ನ ಶಕ್ತಿಯ ಉಪಯೋಗದಿಂದ ಅವನು ಭೌತಿಕ ಲಾಭವನ್ನು ಪಡೆದುಕೊಳ್ಳಲಿಲ್ಲವೆಂಬುದಕ್ಕೆ ಅವನ ಅತ್ಯಲ್ಪ ಸೊತ್ತುಗಳೇ ಪುರಾವೆಯಾಗಿವೆ. (ಮತ್ತಾಯ 8:20) ಅವನ ಮಹತ್ಕಾರ್ಯಗಳು ನಿಸ್ವಾರ್ಥ ಹೇತುಗಳಿಂದ ಮಾಡಲ್ಪಟ್ಟಿದ್ದವೆಂಬುದಕ್ಕೆ ಅಧಿಕ ಪುರಾವೆಯಿದೆ. ಅವನು ಅದ್ಭುತಕೃತ್ಯಗಳನ್ನು ನಡಿಸಿದಾಗ, ತನ್ನ ಶಕ್ತಿಯನ್ನು ಸ್ವತಃ ವ್ಯಯಿಸಿ ಅವನ್ನು ನಡಿಸುತ್ತಿದ್ದನು. ಏಕೆಂದರೆ ಅವನು ರೋಗಿಗಳನ್ನು ವಾಸಿಮಾಡಿದಾಗ, ಅವನಿಂದ ಶಕ್ತಿಯು ಹೊರಹೋಗುತ್ತಿತ್ತು. ಒಂದೇ ಒಂದು ವಾಸಿಯಾಗುವಿಕೆಯ ಸಂದರ್ಭದಲ್ಲೂ, ಶಕ್ತಿಯು ಹೊರಗೆ ಹೊರಡುತ್ತಿದ್ದ ಅರಿವು ಅವನಿಗಿತ್ತು. (ಮಾರ್ಕ 5:25-34) ಆದರೂ ಜನರ ಗುಂಪುಗಳು ತನ್ನನ್ನು ಸ್ಪರ್ಶಿಸುವಂತೆ ಅವನು ಬಿಟ್ಟುಕೊಟ್ಟನು, ಮತ್ತು ಅವರು ವಾಸಿಯಾದರು. (ಲೂಕ 6:19) ಎಂಥ ನಿಸ್ವಾರ್ಥ ಭಾವ ಅವನದ್ದು!

17. ತನ್ನ ಶಕ್ತಿಯ ಉಪಯೋಗದಲ್ಲಿ ಯೇಸು ಹೊಣೆಗಾರಿಕೆಯ ಪ್ರಜ್ಞೆಯುಳ್ಳವನಾಗಿದ್ದನೆಂದು ಅವನು ಹೇಗೆ ಪ್ರದರ್ಶಿಸಿದನು?

17 ಯೇಸು ತನ್ನ ಶಕ್ತಿಯ ಉಪಯೋಗದಲ್ಲಿ ಹೊಣೆಗಾರಿಕೆಯ ಪ್ರಜ್ಞೆಯುಳ್ಳವನೂ ಆಗಿದ್ದನು. ಬರಿಯ ಬಹಿರಾಡಂಬರಕ್ಕಾಗಿ ಇಲ್ಲವೆ ಉದ್ದೇಶರಹಿತ ಪ್ರದರ್ಶನಕ್ಕಾಗಿ ಅವನು ತನ್ನ ಮಹತ್ಕಾರ್ಯಗಳನ್ನೆಂದೂ ನಡಿಸಿರಲಿಲ್ಲ. (ಮತ್ತಾಯ 4:5-7) ಹೆರೋದನ ದುರುದ್ದೇಶದ ಬರೇ ಕುತೂಹಲವನ್ನು ತೃಪ್ತಿಪಡಿಸಲಿಕ್ಕಾಗಿ ಅವನು ಸೂಚಕಕಾರ್ಯಗಳನ್ನು ಮಾಡಲು ಒಪ್ಪಲಿಲ್ಲ. (ಲೂಕ 23:8, 9) ತನ್ನ ಶಕ್ತಿಯ ಬಗ್ಗೆ ಡಂಗುರಬಾರಿಸುವ ಬದಲಾಗಿ, ತಾನು ಯಾರನ್ನು ವಾಸಿಮಾಡಿದನೊ ಅವರು ಅದನ್ನು ಯಾರಿಗೂ ತಿಳಿಸಬಾರದೆಂಬ ಆಜ್ಞೆಯನ್ನು ಯೇಸು ಅನೇಕಸಲ ಕೊಟ್ಟನು. (ಮಾರ್ಕ 5:43; 7:36) ಭಾವೋದ್ರೇಕದ ವರದಿಗಳ ಆಧಾರದ ಮೇಲೆ ಜನರು ತನ್ನ ಕುರಿತಾದ ತೀರ್ಮಾನಕ್ಕೆ ಬರುವುದು ಅವನಿಗೆ ಬೇಡವಾಗಿತ್ತು.​—ಮತ್ತಾಯ 12:15-19.

18-20. (ಎ) ಯೇಸು ತನ್ನ ಶಕ್ತಿಯನ್ನುಪಯೋಗಿಸಿದ ವಿಧವನ್ನು ಯಾವುದು ಪ್ರಭಾವಿಸಿತು? (ಬಿ) ಒಬ್ಬ ಕಿವುಡನನ್ನು ಯೇಸು ವಾಸಿಮಾಡಿದ ವಿಧಾನದ ಕುರಿತು ನಿಮಗೆ ಹೇಗನಿಸುತ್ತದೆ?

18 ಈ ಶಕ್ತಿಶಾಲಿ ಪುರುಷನಾಗಿದ್ದ ಯೇಸು, ಇತರರ ಆವಶ್ಯಕತೆಗಳು ಮತ್ತು ಕಷ್ಟಾನುಭವಗಳನ್ನು ನಿರ್ದಯವಾಗಿ ಕಡೆಗಣಿಸಿ ತಮ್ಮ ಅಧಿಕಾರವನ್ನು ಉಪಯೋಗಿಸಿರುವಂಥ ಧುರೀಣರಿಗಿಂತ ತೀರ ಭಿನ್ನನಾಗಿದ್ದನು. ಯೇಸು ಜನರ ಕುರಿತಾಗಿ ಚಿಂತಿಸಿದನು. ಪೀಡಿತ ಜನರ ನೋಟವೇ ಎಷ್ಟು ಆಳವಾಗಿ ಅವನ ಮನಕಲಕುತ್ತಿತ್ತೆಂದರೆ, ಅವರ ಬೇನೆಯನ್ನು ಪರಿಹರಿಸಿಬಿಡಲು ಅವನು ಪ್ರೇರಿತನಾಗುತ್ತಿದ್ದನು. (ಮತ್ತಾಯ 14:14) ಅವರ ಅನಿಸಿಕೆಗಳು ಮತ್ತು ಅಗತ್ಯಗಳಿಗೆ ಅವನು ಪರಿಗಣನೆ ತೋರಿಸಿದನು, ಮತ್ತು ಈ ಕೋಮಲವಾದ ಚಿಂತೆಯು ಅವನು ತನ್ನ ಶಕ್ತಿಯನ್ನು ಉಪಯೋಗಿಸಿದ ವಿಧಾನದ ಮೇಲೆ ಪ್ರಭಾವಬೀರಿತು. ಒಂದು ಹೃದಯಸ್ಪರ್ಶಿ ಉದಾಹರಣೆಯು ಮಾರ್ಕ 7:​31-37 ರಲ್ಲಿ ಕಂಡುಬರುತ್ತದೆ.

19 ಈ ಸಂದರ್ಭದಲ್ಲಿ, ಜನರ ದೊಡ್ಡ ಗುಂಪು ಯೇಸುವನ್ನು ಕಂಡುಹಿಡಿದು ರೋಗಿಗಳಾದ ಅನೇಕರನ್ನು ಅವನ ಬಳಿಗೆ ಕರತಂದರು ಮತ್ತು ಅವನು ಅವರೆಲ್ಲರನ್ನು ವಾಸಿಮಾಡಿದನು. (ಮತ್ತಾಯ 15:29, 30) ಆದರೆ ಯೇಸು ಒಬ್ಬ ಮನುಷ್ಯನನ್ನು ಆರಿಸಿತೆಗೆದು ಅವನ ಕಡೆಗೆ ವಿಶೇಷ ಗಮನಕೊಟ್ಟನು. ಅವನು ಕಿವುಡನಾಗಿದ್ದನು, ಮತ್ತು ಸರಿಯಾಗಿ ಮಾತಾಡಲೂ ಆಗುತ್ತಿರಲಿಲ್ಲ. ಈ ಮನುಷ್ಯನ ವಿಶಿಷ್ಟ ಸಂಕೋಚ ಅಥವಾ ಇರಿಸುಮುರಿಸನ್ನು ಯೇಸು ಗ್ರಹಿಸಿರಬಹುದು. ಅವನ ಕಷ್ಟವನ್ನು ಅರ್ಥಮಾಡಿಕೊಳ್ಳುತ್ತಾ ಯೇಸು ಅವನನ್ನು ಪಕ್ಕಕ್ಕೆ​—ಜನಸಮೂಹದಿಂದ ಪ್ರತ್ಯೇಕವಾಗಿ​—ಒತ್ತಟ್ಟಿಗೆ ಕರೆದುಕೊಂಡುಹೋದನು. ಅನಂತರ ತಾನೇನು ಮಾಡಲಿದ್ದೇನೆಂದು ಆ ಮನುಷ್ಯನಿಗೆ ತಿಳಿಸಲು ಯೇಸು ಕೆಲವು ಸಂಜ್ಞೆಗಳನ್ನು ಉಪಯೋಗಿಸಿದನು. ಅವನು “ತನ್ನ ಬೆರಳುಗಳನ್ನು ಅವನ ಕಿವಿಗಳಲ್ಲಿ ಇಟ್ಟು ಉಗುಳಿ ಅವನ ನಾಲಗೆಯನ್ನು ಮುಟ್ಟಿ”ದನು. * (ಮಾರ್ಕ 7:​33, 34) ಆಮೇಲೆ, ಯೇಸು ಆಕಾಶದ ಕಡೆಗೆ ನೋಡಿ ಪ್ರಾರ್ಥನಾಪೂರ್ವಕವಾಗಿ ನಿಟ್ಟುಸಿರುಬಿಟ್ಟನು. ಅವನ ಈ ಕ್ರಿಯೆಗಳು ಆ ಮನುಷ್ಯನಿಗೆ​—‘ನಾನೀಗ ನಿನಗಾಗಿ ಮಾಡಲಿರುವಂಥದ್ದು ದೇವರ ಶಕ್ತಿಯಿಂದಲೇ’ ಎಂದು ಸೂಚಿಸುತ್ತಿದ್ದವು. ಕೊನೆಗೆ ಯೇಸು “ತೆರೆಯಲಿ” ಎಂದನು. (ಮಾರ್ಕ 7:34) ಆಗಲೇ ಆ ಮನುಷ್ಯನ ಕಿವಿಗಳು ಕೇಳಿಸತೊಡಗಿದವು, ಮತ್ತು ಅವನು ಸರಿಯಾಗಿ ಮಾತಾಡತೊಡಗಿದನು.

20 ರೋಗಪೀಡಿತರನ್ನು ವಾಸಿಮಾಡಲು ತನ್ನ ದೇವದತ್ತ ಶಕ್ತಿಯನ್ನು ಉಪಯೋಗಿಸುವಾಗಲೂ ಯೇಸು ಅವರ ಭಾವನೆಗಳಿಗಾಗಿ ಅನುಭೂತಿಯುಳ್ಳ ಚಿಂತನೆಯನ್ನು ತೋರಿಸಿದ ವಿಷಯವು ಅದೆಷ್ಟು ಹೃದಯಸ್ಪರ್ಶಿಯಾಗಿದೆ! ಯೆಹೋವನು ಮೆಸ್ಸೀಯ ರಾಜ್ಯವನ್ನು ಅಂಥ ಕರುಣಾಳುವೂ, ಪರಿಗಣನೆಯುಳ್ಳವನೂ ಆಗಿರುವ ಅರಸನ ಹಸ್ತಗಳಲ್ಲಿ ವಹಿಸಿದ್ದಾನೆಂಬುದು ನಮ್ಮಲ್ಲಿ ಅದೆಷ್ಟು ಧೈರ್ಯವನ್ನು ತುಂಬಿಸುತ್ತದೆ, ಅಲ್ಲವೇ?

ಬರಲಿರುವ ಸಂಗತಿಗಳ ಮುನ್ಸೂಚನೆ

21, 22. (ಎ) ಯೇಸುವಿನ ಅದ್ಭುತಕೃತ್ಯಗಳು ಏನನ್ನು ಮುನ್ಸೂಚಿಸಿದವು? (ಬಿ) ನೈಸರ್ಗಿಕ ಶಕ್ತಿಗಳ ಮೇಲೆ ಯೇಸುವಿಗೆ ನಿಯಂತ್ರಣವಿರುವ ಕಾರಣ, ಅವನ ರಾಜ್ಯಾಡಳಿತದ ಕೆಳಗೆ ನಾವೇನನ್ನು ನಿರೀಕ್ಷಿಸಬಲ್ಲೆವು?

21 ಯೇಸು ಭೂಮಿಯ ಮೇಲೆ ನಡಿಸಿದ ಮಹತ್ಕಾರ್ಯಗಳು, ಅವನ ರಾಜ್ಯಾಡಳಿತದ ಕೆಳಗೆ ಬರಲಿರುವ ಇನ್ನೂ ಹೆಚ್ಚು ಭವ್ಯ ಆಶೀರ್ವಾದಗಳ ಕೇವಲ ಮುನ್ನೋಟಗಳಾಗಿದ್ದವು ಅಷ್ಟೆ. ದೇವರ ನೂತನ ಲೋಕದಲ್ಲಿ ಯೇಸು ಪುನಃ ಒಮ್ಮೆ ಅದ್ಭುತಕೃತ್ಯಗಳನ್ನು ನಡಿಸುವನು​—ಆದರೆ ಭೌಗೋಳಿಕ ಪ್ರಮಾಣದಲ್ಲಿ! ಮುಂದಿರುವ ಕೆಲವು ರೋಮಾಂಚಕ ಪ್ರತೀಕ್ಷೆಗಳನ್ನು ಪರ್ಯಾಲೋಚಿಸಿರಿ.

22 ಯೇಸು ಭೂಮಿಯ ಪರಿಸರ ವ್ಯವಸ್ಥೆಯನ್ನು ಪರಿಪೂರ್ಣ ಸಮತೆಗೆ ಪುನಸ್ಸ್ಥಾಪಿಸುವನು. ಒಂದು ಬಿರುಗಾಳಿಯನ್ನು ಶಾಂತಗೊಳಿಸಿದ ಮೂಲಕ ನೈಸರ್ಗಿಕ ಶಕ್ತಿಗಳ ಮೇಲೆ ತನಗಿರುವ ನಿಯಂತ್ರಣವನ್ನು ಯೇಸು ಪ್ರದರ್ಶಿಸಿದ್ದನ್ನು ನೆನಪಿಗೆ ತನ್ನಿರಿ. ಹೀಗಿರುವಾಗ ಕ್ರಿಸ್ತನ ರಾಜ್ಯಾಡಳಿತದ ಕೆಳಗೆ, ತುಫಾನುಗಳಿಂದ, ಭೂಕಂಪಗಳಿಂದ, ಜ್ವಾಲಾಮುಖಿಗಳಿಂದ ಅಥವಾ ಇತರ ನೈಸರ್ಗಿಕ ವಿಪತ್ತುಗಳಿಂದ ಹಾನಿಗೊಳಗಾಗುವ ಯಾವ ಭಯವೂ ಮಾನವಕುಲಕ್ಕೆ ನಿಶ್ಚಯವಾಗಿಯೂ ಇರಲಾರದು. ಭೂಮಿಯನ್ನೂ ಅದರ ಸಮಸ್ತ ಜೀವಜಾತಿಯನ್ನೂ ನಿರ್ಮಿಸಲು ಯೆಹೋವನು ಉಪಯೋಗಿಸಿದ ನಿಪುಣ ಕೆಲಸಗಾರನು ಯೇಸುವೇ ಆಗಿರುವುದರಿಂದ, ಭೂಮಿಯ ರಚನೆಯನ್ನು ಅವನು ಚೆನ್ನಾಗಿ ಬಲ್ಲವನಾಗಿದ್ದಾನೆ. ಭೂಮಿಯ ಸಂಪನ್ಮೂಲಗಳನ್ನು ಯೋಗ್ಯ ರೀತಿಯಲ್ಲಿ ಬಳಸುವ ವಿಧಾನವು ಅವನಿಗೆ ತಿಳಿದದೆ. ಅವನಾಳಿಕೆಯ ಕೆಳಗೆ ಈ ಇಡೀ ಭೂಮಿಯು ಪರದೈಸಾಗಿ ಮಾರ್ಪಡಲಿರುವುದು.​—ಲೂಕ 23:43.

23. ಅರಸನೋಪಾದಿ ಯೇಸು ಮಾನವಕುಲದ ಆವಶ್ಯಕತೆಗಳನ್ನು ಹೇಗೆ ತೃಪ್ತಿಪಡಿಸುವನು?

23 ಮಾನವಕುಲದ ಆವಶ್ಯಕತೆಗಳ ಕುರಿತಾಗಿ ಏನು? ಇದ್ದ ಕೊಂಚ ವಸ್ತುಗಳನ್ನು ಉಪಯೋಗಿಸಿ ಸಾವಿರಾರು ಜನರಿಗೆ ಸಮೃದ್ಧವಾಗಿ ಊಟವನ್ನು ಒದಗಿಸಲು ಯೇಸುವಿಗಿದ್ದ ಸಾಮರ್ಥ್ಯವು, ಅವನ ಆಡಳಿತವು ಹಸಿವೆಯಿಂದ ಜನತೆಯನ್ನು ಮುಕ್ತಗೊಳಿಸುವುದೆಂಬ ಆಶ್ವಾಸನೆಯನ್ನು ನಮಗೆ ಕೊಡುತ್ತದೆ. ಯಥಾಯೋಗ್ಯವಾಗಿ ವಿತರಣೆ ಮಾಡಲ್ಪಡುವ ಸಮೃದ್ಧ ಆಹಾರವು ನಿಶ್ಚಯವಾಗಿಯೂ ಹಸಿವನ್ನು ಸದಾಕಾಲಕ್ಕೆ ನಿವಾರಣೆಮಾಡುವುದು. (ಕೀರ್ತನೆ 72:16) ಅಸ್ವಸ್ಥತೆ ಮತ್ತು ರೋಗಗಳ ಮೇಲೆ ಅವನಿಗಿದ್ದ ಅಧಿಕಾರವು ಅಸ್ವಸ್ಥರು, ಕುರುಡರು, ಕಿವುಡರು, ಕುಂಟರು, ಮತ್ತು ಅಂಗವಿಕಲರಾದ ಜನರು ಸಂಪೂರ್ಣವಾಗಿ ಹಾಗೂ ಶಾಶ್ವತವಾಗಿ ವಾಸಿಮಾಡಲ್ಪಡುವರೆಂದು ನಮಗೆ ತಿಳಿಸುತ್ತದೆ. (ಯೆಶಾಯ 33:24; 35:5, 6) ಸತ್ತವರನ್ನು ಪುನರುತ್ಥಾನಗೊಳಿಸಲು ಅವನಿಗಿರುವ ಸಾಮರ್ಥ್ಯವು, ಸ್ವರ್ಗೀಯ ರಾಜನೋಪಾದಿ ಅವನಿಗಿರುವ ಮಹಾ ಶಕ್ತಿಯಲ್ಲಿ, ತಂದೆಯು ಜ್ಞಾಪಕದಲ್ಲಿಡಲು ಸಂತೋಷಪಟ್ಟಿರುವ ಲಕ್ಷೋಪಲಕ್ಷ ಜನರನ್ನು ಪುನರುತ್ಥಾನ ಮಾಡುವ ಶಕ್ತಿಯೂ ಸೇರಿದೆ ಎಂಬುದನ್ನು ಖಚಿತಪಡಿಸುತ್ತದೆ.​—ಯೋಹಾನ 5:28, 29.

24. ಯೇಸುವಿನ ಶಕ್ತಿಯ ಕುರಿತು ನಾವು ಪರ್ಯಾಲೋಚಿಸುವಾಗ, ನಾವೇನನ್ನು ಮನಸ್ಸಿನಲ್ಲಿಡಬೇಕು, ಮತ್ತು ಏಕೆ?

24 ಯೇಸುವಿನ ಶಕ್ತಿಯ ವಿಷಯದಲ್ಲಿ ನಾವು ಪರ್ಯಾಲೋಚಿಸುವಾಗ, ಈ ಮಗನು ತನ್ನ ತಂದೆಯನ್ನು ಪರಿಪೂರ್ಣವಾಗಿ ಅನುಕರಣೆ ಮಾಡುತ್ತಾನೆಂಬುದನ್ನು ಮನಸ್ಸಿನಲ್ಲಿಡೋಣ. (ಯೋಹಾನ 14:9) ಹೀಗೆ, ಯೇಸು ತನ್ನ ಶಕ್ತಿಯನ್ನುಪಯೋಗಿಸಿದಂಥ ರೀತಿಯು, ಯೆಹೋವನು ತನ್ನ ಶಕ್ತಿಯ ಉಪಯೋಗವನ್ನು ಮಾಡುವ ವಿಧಾನದ ಸ್ಪಷ್ಟ ಚಿತ್ರಣವನ್ನು ನಮಗೆ ಕೊಡುತ್ತದೆ. ದೃಷ್ಟಾಂತಕ್ಕಾಗಿ, ಒಬ್ಬ ಕುಷ್ಠರೋಗಿಯನ್ನು ಯೇಸು ವಾಸಿಮಾಡಿದ ಆ ಕೋಮಲವಾದ ವಿಧಾನವನ್ನು ಗಣನೆಗೆ ತನ್ನಿರಿ. ಕನಿಕರದಿಂದ ಯೇಸು ಅವನನ್ನು ಮುಟ್ಟಿ ಅಂದದ್ದು: “ನನಗೆ ಮನಸ್ಸುಂಟು.” (ಮಾರ್ಕ 1:40-42) ಇಂಥ ವೃತ್ತಾಂತಗಳ ಮೂಲಕ, ಯೆಹೋವನು ಸಾಕ್ಷಾತ್‌, ‘ನನ್ನ ಶಕ್ತಿಯನ್ನು ನಾನು ಅದೇ ರೀತಿ ಉಪಯೋಗಿಸುತ್ತೇನೆ’ ಎಂದು ಹೇಳುತ್ತಿದ್ದಾನೆ! ನಮ್ಮ ಸರ್ವಶಕ್ತ ದೇವರು ತನ್ನ ಶಕ್ತಿಯನ್ನು ಇಂಥ ಪ್ರೀತಿಪೂರ್ವಕ ವಿಧದಲ್ಲಿ ಉಪಯೋಗಿಸುತ್ತಿರುವುದಕ್ಕಾಗಿ, ಆತನನ್ನು ಸ್ತುತಿಸಲು ಮತ್ತು ಆತನಿಗೆ ಉಪಕಾರ ಹೇಳಲು ನೀವು ಪ್ರೇರಿಸಲ್ಪಡುವುದಿಲ್ಲವೇ?

^ ಪ್ಯಾರ. 1 ಥಟ್ಟನೆ ಏಳುವ ಬಿರುಗಾಳಿಗಳು ಗಲಿಲಾಯ ಸಮುದ್ರದಲ್ಲಿ ಸರ್ವಸಾಮಾನ್ಯ. ಈ ಸಮುದ್ರವು ಕೆಳಮಟ್ಟದಲ್ಲಿರುವ (ಸಮುದ್ರ ಮಟ್ಟಕ್ಕಿಂತ 700 ಅಡಿ ಕೆಳಗೆ) ಕಾರಣ ಅಲ್ಲಿನ ಗಾಳಿಯು ಸುತ್ತಲಿನ ಕ್ಷೇತ್ರಕ್ಕಿಂತ ಹೆಚ್ಚು ಬಿಸಿಯಾಗಿದ್ದು, ವಾತಾವರಣದಲ್ಲಿ ಗೊಂದಲವನ್ನು ಉಂಟುಮಾಡುತ್ತದೆ. ಉತ್ತರದಲ್ಲಿ ನೆಲೆಸಿರುವ ಹೆರ್ಮೋನ್‌ ಬೆಟ್ಟದಿಂದ ಬಲವಾದ ಗಾಳಿಗಳು ಕೆಳಗೆ ಯೊರ್ದನ್‌ ಕಣಿವೆಯ ಕಡೆಗೆ ರಭಸದಿಂದ ಬೀಸುತ್ತವೆ. ಇದರಿಂದಾಗಿ ಶಾಂತ ಹವಾಮಾನವು ಒಂದೇ ಕ್ಷಣದಲ್ಲಿ ಥಟ್ಟನೆ ತೀಕ್ಷ್ಣ ಬಿರುಗಾಳಿಯಾಗಿ ಬದಲಾಗಬಹುದು.

^ ಪ್ಯಾರ. 12 ಇದಲ್ಲದೆ ಸುವಾರ್ತೆಗಳು ಕೆಲವೊಮ್ಮೆ, ನಡೆಸಲ್ಪಟ್ಟ ಅನೇಕ ಅದ್ಭುತಕೃತ್ಯಗಳನ್ನು ಒಂದೇ ಸಾಮಾನ್ಯ ವರ್ಣನೆಯ ಕೆಳಗೆ ಕೊಡುತ್ತವೆ. ದೃಷ್ಟಾಂತಕ್ಕಾಗಿ, ಒಂದು ಸಂದರ್ಭದಲ್ಲಿ, “ಊರೆಲ್ಲಾ” ಅವನನ್ನು ನೋಡಲು ಬಂದಿತ್ತು ಮತ್ತು ಅವನು ಅಸ್ವಸ್ಥರಾಗಿದ್ದ “ಬಹು ಜನರನ್ನು” ವಾಸಿಮಾಡಿದನು.​—ಮಾರ್ಕ 1:32-34.

^ ಪ್ಯಾರ. 19 ಯೆಹೂದ್ಯರು ಹಾಗೂ ಅನ್ಯರು ಉಗುಳುವಿಕೆಯನ್ನು, ವಾಸಿಮಾಡುವ ಒಂದು ವಿಧಾನ ಅಥವಾ ಸಂಕೇತವಾಗಿ ಸ್ವೀಕರಿಸಿದ್ದರು, ಮತ್ತು ವಾಸಿಮಾಡುವಿಕೆಯಲ್ಲಿ ಉಗುಳಿನ ಉಪಯೋಗದ ಕುರಿತು ರಬ್ಬಿಗಳ ಬರಹಗಳು ವರದಿಮಾಡಿವೆ. ಅವನೀಗ ವಾಸಿಯಾಗಲಿದ್ದಾನೆಂದು ಆ ಮನುಷ್ಯನಿಗೆ ಕೇವಲ ತಿಳಿಸಲಿಕ್ಕಾಗಿ ಯೇಸು ಉಗುಳಿದ್ದಿರಬಹುದು. ವಿಷಯವು ಹೇಗೆಯೆ ಇರಲಿ, ಯೇಸು ತನ್ನ ಉಗುಳನ್ನು ಒಂದು ನೈಸರ್ಗಿಕ ವಾಸಿಕಾರಕವಾಗಿ ಉಪಯೋಗಿಸಲಿಲ್ಲ.