ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಭಾಗ 9

ಕುಟುಂಬವಾಗಿ ಯೆಹೋವನನ್ನು ಆರಾಧಿಸಿ

ಕುಟುಂಬವಾಗಿ ಯೆಹೋವನನ್ನು ಆರಾಧಿಸಿ

“ಸ್ವರ್ಗವನ್ನೂ ಭೂಮಿಯನ್ನೂ . . . ಉಂಟುಮಾಡಿದಾತನನ್ನು ಆರಾಧಿಸಿರಿ.”—ಪ್ರಕಟನೆ 14:7

ನೀವು ಈಗಾಗಲೇ ಈ ಕಿರುಹೊತ್ತಗೆಯಲ್ಲಿ ಕಲಿತಂತೆ, ನಿಮಗೂ ನಿಮ್ಮ ಕುಟುಂಬಕ್ಕೂ ನೆರವಾಗುವ ಅನೇಕ ತತ್ವಗಳು ಬೈಬಲಿನಲ್ಲಿವೆ. ನೀವು ಸಂತೋಷದಿಂದ ಇರಬೇಕೆಂದು ಯೆಹೋವನು ಬಯಸುತ್ತಾನೆ. ಆತನ ಆರಾಧನೆಗೆ ನೀವು ಪ್ರಥಮ ಸ್ಥಾನ ಕೊಡುವುದಾದರೆ “ಎಲ್ಲ ಇತರ ವಸ್ತುಗಳು ನಿಮಗೆ ಕೂಡಿಸಲ್ಪಡುವವು” ಎಂದು ಮಾತು ಕೊಟ್ಟಿದ್ದಾನೆ. (ಮತ್ತಾಯ 6:33) ನೀವು ಆತನ ಸ್ನೇಹಿತರಾಗಬೇಕೆಂದೂ ಬಯಸುತ್ತಾನೆ. ಆದ್ದರಿಂದ ಆತನಿಗೆ ಸ್ನೇಹಿತರಾಗಲು ಸಿಗುವ ಪ್ರತಿಯೊಂದು ಅವಕಾಶವನ್ನು ಸದುಪಯೋಗಿಸಿಕೊಳ್ಳಿ. ಏಕೆಂದರೆ, ಈ ಸ್ನೇಹ ಮಾನವರಿಗೆ ಇರುವುದರಲ್ಲೇ ಅತಿ ದೊಡ್ಡ ಸೌಭಾಗ್ಯವಾಗಿದೆ.—ಮತ್ತಾಯ 22:37, 38.

1 ಯೆಹೋವನೊಂದಿಗಿನ ನಿಮ್ಮ ಬಂಧವನ್ನು ಬಲಗೊಳಿಸಿ

ಬೈಬಲಿನ ಹಿತವಚನ: “‘ನಾನು ನಿಮಗೆ ತಂದೆಯಾಗಿರುವೆನು ಮತ್ತು ನೀವು ನನಗೆ ಪುತ್ರಪುತ್ರಿಯರು ಆಗಿರುವಿರಿ’ ಎಂದು ಸರ್ವಶಕ್ತನಾದ ಯೆಹೋವನು ಹೇಳುತ್ತಾನೆ.” (2 ಕೊರಿಂಥ 6:18) ನೀವು ಆತನ ಆಪ್ತ ಸ್ನೇಹಿತರಾಗಬೇಕೆಂದು ಬಯಸುತ್ತಾನೆ. ಇದಕ್ಕೆ ಪ್ರಾರ್ಥನೆ ಸಹಾಯಕರ. “ಎಡೆಬಿಡದೆ ಪ್ರಾರ್ಥನೆಮಾಡಿರಿ” ಎಂದು ಯೆಹೋವನೇ ಹೇಳಿದ್ದಾನೆ. (1 ಥೆಸಲೊನೀಕ 5:17) ನಿಮ್ಮ ಮನದಾಳದ ಅನಿಸಿಕೆಗಳನ್ನು, ಚಿಂತೆಗಳನ್ನು ಕೇಳಲು ಆತನು ಕಾತುರದಿಂದಿದ್ದಾನೆ. (ಫಿಲಿಪ್ಪಿ 4:6) ನೀವು ಕುಟುಂಬದೊಂದಿಗೆ ಪ್ರಾರ್ಥಿಸುವಾಗ, ನಿಮಗೆ ದೇವರು ಎಷ್ಟು ನೈಜ ವ್ಯಕ್ತಿಯಾಗಿದ್ದಾನೆಂದು ಕುಟುಂಬದವರೆಲ್ಲರೂ ತಿಳಿದುಕೊಳ್ಳುವರು.

ದೇವರೊಂದಿಗೆ ಮಾತಾಡುವುದರ ಜೊತೆಗೆ ಆತನ ಮಾತುಗಳಿಗೂ ಕಿವಿಗೊಡಬೇಕು. ಆತನ ವಾಕ್ಯವಾದ ಬೈಬಲ್‌ ಮತ್ತು ಬೈಬಲಾಧಾರಿತ ಪ್ರಕಾಶನಗಳ ಅಧ್ಯಯನದ ಮೂಲಕ ಇದನ್ನು ಮಾಡಬಲ್ಲಿರಿ. (ಕೀರ್ತನೆ 1:1, 2) ಅಧ್ಯಯನದ ಮೂಲಕ ಕಲಿತ ವಿಷಯಗಳ ಕುರಿತು ಧ್ಯಾನಿಸಿ. (ಕೀರ್ತನೆ 77:1, 12) ದೇವರ ಮಾತಿಗೆ ಕಿವಿಗೊಡುವುದರಲ್ಲಿ ಕ್ರೈಸ್ತ ಕೂಟಗಳಿಗೆ ತಪ್ಪದೆ ಹಾಜರಾಗುವುದೂ ಸೇರಿದೆ.—ಕೀರ್ತನೆ 122:1-4.

ಯೆಹೋವನೊಂದಿಗಿನ ನಿಮ್ಮ ಬಂಧವನ್ನು ಬಲಗೊಳಿಸುವ ಇನ್ನೊಂದು ಮುಖ್ಯ ವಿಧ, ಆತನ ಕುರಿತು ಇತರರೊಂದಿಗೆ ಮಾತಾಡುವುದೇ ಆಗಿದೆ. ಆತನ ಬಗ್ಗೆ ಎಷ್ಟು ಹೆಚ್ಚು ಮಾತಾಡುತ್ತೀರೋ ನೀವಾತನಿಗೆ ಅಷ್ಟೇ ಹೆಚ್ಚು ಆಪ್ತರಾಗುತ್ತೀರಿ.—ಮತ್ತಾಯ 28:19, 20.

ಹೀಗೆ ಮಾಡಿ:

  • ಪ್ರತಿದಿನ ಬೈಬಲನ್ನು ಓದಲು ಮತ್ತು ಪ್ರಾರ್ಥಿಸಲು ನಿರ್ದಿಷ್ಟ ಸಮಯವನ್ನು ಬದಿಗಿರಿಸಿ

  • ಮನರಂಜನೆ ಮತ್ತು ವಿನೋದ ವಿಹಾರಗಳಿಗಿಂತ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಕುಟುಂಬವಾಗಿ ಮೊದಲ ಸ್ಥಾನ ಕೊಡಿ

2 ನಿಮ್ಮ ಕುಟುಂಬ ಆರಾಧನೆಯನ್ನು ಆನಂದಿಸಿ

ಬೈಬಲಿನ ಹಿತವಚನ: “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು.” (ಯಾಕೋಬ 4:8) ಕುಟುಂಬ ಆರಾಧನೆಗಾಗಿ ಒಂದು ನಿರ್ದಿಷ್ಟ ಸಮಯವನ್ನು ನಿಗದಿಪಡಿಸಿ, ಯಾವ್ಯಾವ ವಿಷಯಗಳನ್ನು ಚರ್ಚಿಸುತ್ತೀರೆಂದು ಮೊದಲೇ ನಿರ್ಣಯಿಸಿರಿ. ಅವುಗಳನ್ನು ಚಾಚೂತಪ್ಪದೆ ಅನುಸರಿಸಿರಿ. (ಆದಿಕಾಂಡ 18:19) ಅಷ್ಟು ಮಾತ್ರ ಸಾಲದು, ನಿಮ್ಮ ಜೀವನದ ಪ್ರತಿಯೊಂದು ವಿಷಯದಲ್ಲೂ ದೇವರಿಗೆ ಪ್ರಥಮ ಸ್ಥಾನ ಕೊಡುವುದು ಸಹ ಪ್ರಾಮುಖ್ಯ. “ಮನೆಯಲ್ಲಿ ಕೂತಿರುವಾಗಲೂ ದಾರಿನಡೆಯುವಾಗಲೂ ಮಲಗುವಾಗಲೂ ಏಳುವಾಗಲೂ” ದೇವರ ಕುರಿತು ಮಾತಾಡುವ ಮೂಲಕ ನಿಮ್ಮ ಕುಟುಂಬ ಆತನಿಗೆ ಆಪ್ತರಾಗಲು ನೆರವಾಗಿ. (ಧರ್ಮೋಪದೇಶಕಾಂಡ 6:6, 7) “ನಾನೂ ನನ್ನ ಮನೆಯವರೂ ಯೆಹೋವನನ್ನೇ ಸೇವಿಸುವೆವು” ಎಂದು ಹೇಳಿದ ಯೆಹೋಶುವನಂತಿರಲು ಪ್ರಯತ್ನಿಸಿ.—ಯೆಹೋಶುವ 24:15.

ಹೀಗೆ ಮಾಡಿ:

  • ನಿಮ್ಮ ಕುಟುಂಬದ ಪ್ರತಿಯೊಬ್ಬ ಸದಸ್ಯನ ಅವಶ್ಯಕತೆಗಳಿಗೆ ತಕ್ಕಂತೆ ತರಬೇತಿ ನೀಡಲು ಯೋಜಿಸಿ