ಭಾಗ 5
ಸಂಬಂಧಿಕರೊಂದಿಗೆ ಸಮಾಧಾನದಿಂದಿರಿ
“ದಯೆಯನ್ನೂ ದೀನಮನಸ್ಸನ್ನೂ ಸೌಮ್ಯಭಾವವನ್ನೂ ದೀರ್ಘ ಸಹನೆಯನ್ನೂ ಧರಿಸಿಕೊಳ್ಳಿರಿ.”— ಕೊಲೊಸ್ಸೆ 3:12.
ಮದುವೆ ಒಂದು ಹೊಸ ಕುಟುಂಬಕ್ಕೆ ದಾರಿ ಮಾಡಿಕೊಡುತ್ತದೆ. ನೀವು ಯಾವಾಗಲೂ ನಿಮ್ಮ ಹೆತ್ತವರನ್ನು ಪ್ರೀತಿಸುತ್ತೀರಿ, ಗೌರವಿಸುತ್ತೀರಿ ಎನ್ನುವುದು ನಿಜವಾದರೂ ಮದುವೆಯಾದ ಮೇಲೆ ನಿಮ್ಮ ಸಂಗಾತಿಗಿಂತ ಮುಖ್ಯ ವ್ಯಕ್ತಿ ಇಡೀ ಭೂಮಿಯಲ್ಲೇ ಯಾರೂ ಇರುವುದಿಲ್ಲ. ಹೆತ್ತವರಿಗಿದು ನುಂಗಲಾರದ ತುತ್ತಾಗಿರಬಹುದು. ಆದರೆ, ಹೊಸ ಕುಟುಂಬದ ಬಂಧವನ್ನು ಭದ್ರಪಡಿಸಲು ನೀವು ಶ್ರಮಿಸುತ್ತಾ ಅದೇ ಸಮಯದಲ್ಲಿ, ನಿಮ್ಮ ಸಂಬಂಧಿಕರೊಂದಿಗೂ ಸಮಾಧಾನದಿಂದಿರಲು ಬೈಬಲ್ ತತ್ವಗಳು ನಿಮಗೆ ಸಹಾಯ ಮಾಡುತ್ತವೆ.
1 ಸಂಬಂಧಿಕರ ಬಗ್ಗೆ ಸದಭಿಪ್ರಾಯವಿರಲಿ
ಬೈಬಲಿನ ಹಿತವಚನ: “ನಿನ್ನ ತಂದೆತಾಯಿಗಳನ್ನು ಸನ್ಮಾನಿಸು.” (ಎಫೆಸ 6:2) ನಿಮಗೆಷ್ಟೇ ವಯಸ್ಸಾದರೂ ನಿಮ್ಮ ತಂದೆತಾಯಿಯನ್ನು ಯಾವಾಗಲೂ ಸನ್ಮಾನಿಸಬೇಕು ಮತ್ತು ಗೌರವಿಸಬೇಕು. ನಿಮ್ಮ ಹಾಗೆಯೇ ನಿಮ್ಮ ಸಂಗಾತಿಯೂ ಒಬ್ಬ ಮಗ ಅಥವಾ ಮಗಳಾಗಿ ತನ್ನ ಹೆತ್ತವರ ಕಾಳಜಿವಹಿಸಬೇಕು ಎನ್ನುವುದನ್ನು ನೆನಪಿನಲ್ಲಿಡಿ. “ಪ್ರೀತಿಯು ಹೊಟ್ಟೆಕಿಚ್ಚುಪಡುವುದಿಲ್ಲ,” ಆದ್ದರಿಂದ ನಿಮ್ಮ ಸಂಗಾತಿ ನಿಮಗಿಂತ ಅವರ ಮನೆಯವರನ್ನೇ ಹೆಚ್ಚು ಪ್ರೀತಿಸುತ್ತಾರೆ ಅಂತ ಎಂದಿಗೂ ನೆನೆಸಬೇಡಿ.—1 ಕೊರಿಂಥ 13:4; ಗಲಾತ್ಯ 5:26.
ಹೀಗೆ ಮಾಡಿ:
-
“ನಿಮ್ ಮನೆಯವ್ರು ಯಾವಾಗಲೂ ನನ್ನನ್ನ ಕೀಳಾಗಿ ನೋಡ್ತಾರೆ” ಅಥವಾ “ನಿಮ್ ಅಮ್ಮಂಗೆ ನಾನು ಏನ್ ಮಾಡಿದ್ರೂ ಇಷ್ಟಾನೇ ಆಗಲ್ಲ” ಎಂಬಂಥ ಮಾತುಗಳನ್ನು ಹೇಳಬೇಡಿ
-
ವಿಷಯಗಳನ್ನು ನಿಮ್ಮ ಸಂಗಾತಿಯ ಸ್ಥಾನದಲ್ಲಿ ನಿಂತು ನೋಡಿ
2 ಅಗತ್ಯವಿದ್ದಾಗ ದೃಢವಾಗಿ ಹೇಳಿ
ಬೈಬಲಿನ ಹಿತವಚನ: “ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರು ಒಂದೇ ಶರೀರವಾಗಿರುವರು.” (ಆದಿಕಾಂಡ 2:24) ಮದುವೆ ಆದ ಮೇಲೂ ನಿಮ್ಮ ಜವಾಬ್ದಾರಿ ಅವರ ಮೇಲಿದೆ ಎಂದು ನಿಮ್ಮ ಹೆತ್ತವರು ನೆನೆಸಬಹುದು. ಹಾಗಾಗಿ ಅವರು ಅಗತ್ಯಕ್ಕಿಂತ ಹೆಚ್ಚಾಗಿ ನಿಮ್ಮ ಸಂಸಾರದ ಆಗುಹೋಗುಗಳಲ್ಲಿ ಒಳಗೂಡಬಹುದು.
ಇಂತಹ ಸಂದರ್ಭಗಳಲ್ಲಿ, ಅವರು ಎಷ್ಟರ ಮಟ್ಟಿಗೆ ನಿಮ್ಮ ವೈಯಕ್ತಿಕ ವಿಷಯಗಳಲ್ಲಿ ಒಳಗೂಡಬಹುದೆಂದು ತೀರ್ಮಾನಿಸುವ ಜವಾಬ್ದಾರಿ ನಿಮ್ಮದು ಮತ್ತು ನಿಮ್ಮ ಸಂಗಾತಿಯದ್ದು. ಇದನ್ನು ಅವರಿಗೆ ನೋವಾಗದಂತೆ ಪ್ರೀತಿಯಿಂದ ನೇರವಾಗಿ ಹೇಳಿ. ಆದರೆ ಕಟುವಾಗಿ ಮಾತಾಡಬೇಡಿ. (ಜ್ಞಾನೋಕ್ತಿ 15:1) ದೀನಮನಸ್ಸು, ಸೌಮ್ಯಭಾವ ಮತ್ತು ದೀರ್ಘಸಹನೆಯಂಥ ಗುಣಗಳು ನಿಮ್ಮ ಸಂಬಂಧಿಕರೊಂದಿಗೆ ಒಳ್ಳೆಯ ಬಂಧವನ್ನು ಬೆಳೆಸಿಕೊಳ್ಳಲು ಮತ್ತು ‘ಪ್ರೀತಿಯಲ್ಲಿ ಒಬ್ಬರನ್ನೊಬ್ಬರು ಸಹಿಸಿಕೊಳ್ಳುತ್ತಾ’ ಮುಂದುವರಿಯಲು ಸಹಾಯ ಮಾಡುತ್ತವೆ.—ಎಫೆಸ 4:2.
ಹೀಗೆ ಮಾಡಿ:
-
ಸಂಬಂಧಿಕರು ನಿಮ್ಮ ಸ್ವಂತ ವಿಷಯದಲ್ಲಿ ತಲೆಹಾಕುತ್ತಿದ್ದರೆ, ಮನೆಯಲ್ಲಿ ಪರಿಸ್ಥಿತಿ ಶಾಂತವಾಗಿರುವಾಗ ನಿಮ್ಮ ಸಂಗಾತಿಯೊಂದಿಗೆ ಅದರ ಬಗ್ಗೆ ಮಾತಾಡಿ
-
ಈ ವಿಷಯಗಳನ್ನು ಹೇಗೆ ನಿಭಾಯಿಸುವುದೆಂದು ಇಬ್ಬರೂ ಮಾತಾಡಿ ತೀರ್ಮಾನಕ್ಕೆ ಬನ್ನಿ