ಮಾಹಿತಿ ಇರುವಲ್ಲಿ ಹೋಗಲು

ಹೊಸ ಸಹಸ್ರಮಾನ ಅದು ನಿಮಗಾಗಿ ಯಾವ ಭವಿಷ್ಯತ್ತನ್ನು ಕಾದಿರಿಸಿದೆ?

ಹೊಸ ಸಹಸ್ರಮಾನ ಅದು ನಿಮಗಾಗಿ ಯಾವ ಭವಿಷ್ಯತ್ತನ್ನು ಕಾದಿರಿಸಿದೆ?

ರಾಜ್ಯ ವಾರ್ತೆ ನಂ. 36

ಹೊಸ ಸಹಸ್ರಮಾನ ಅದು ನಿಮಗಾಗಿ ಯಾವ ಭವಿಷ್ಯತ್ತನ್ನು ಕಾದಿರಿಸಿದೆ?

ಹೊಸ ಸಹಸ್ರಮಾನ—ಹೊಸ ಯುಗವೊಂದರ ಉದಯವೋ?

ಇಸವಿ 1999, ಡಿಸೆಂಬರ್‌ 31ರ ಮಧ್ಯರಾತ್ರಿಯಂದು, 20ನೇ ಶತಮಾನವು ಕೊನೆಗೊಂಡಿತು. * ಇದು ಸಾಕಷ್ಟು ಗಲಭೆಯಿಂದ ಕೂಡಿದ್ದ ಒಂದು ಶತಮಾನವಾಗಿತ್ತು. ಆದರೆ ಈ ಶತಮಾನವು, ನವೀನ ತಾಂತ್ರಿಕತೆಗಳು, ಗಮನಸೆಳೆಯುವಂತಹ ವೈದ್ಯಕೀಯ ಪ್ರಗತಿಗಳು, ಮಾಹಿತಿಯ ಮಹಾಪೂರದ ಜೊತೆಗೆ, ಲೋಕದಾದ್ಯಂತ ಕ್ಷಿಪ್ರಗತಿಯ ಆರ್ಥಿಕ ಬೆಳವಣಿಗೆಯನ್ನು ಕಂಡಿತು. ಆದುದರಿಂದ, ಅನೇಕರು ಹೊಸ ಸಹಸ್ರಮಾನವನ್ನು ನಿರೀಕ್ಷೆ ಹಾಗೂ ಬದಲಾವಣೆಯ ಪ್ರತೀಕವಾಗಿ ಸ್ವಾಗತಿಸಿದ್ದಾರೆ. ಆದರೆ ಈ ಯುಗದಲ್ಲಿ ಯುದ್ಧ, ಬಡತನ, ಪರಿಸರೀಯ ಮಾಲಿನ್ಯ ಹಾಗೂ ರೋಗರುಜಿನಗಳು ಇಲ್ಲದೇ ಹೋಗುವವೋ?

ಅನೇಕರು ಇದನ್ನೇ ನಿರೀಕ್ಷಿಸುತ್ತಾರೆ. ಆದರೆ ಈ ಹೊಸ ಸಹಸ್ರಮಾನವು, ನಿಜವಾಗಿಯೂ ಬದಲಾವಣೆಗಳನ್ನು ತರುವುದೋ? ಇದರಿಂದ ನಿಮ್ಮ ಹಾಗೂ ನಿಮ್ಮ ಕುಟುಂಬದವರ ಜೀವನದಲ್ಲಿ ಸುಖಶಾಂತಿ ಸುರಕ್ಷೆಯು ಉಕ್ಕಿಹರಿಯುವ ಸಾಧ್ಯತೆಯಿದೆಯೋ? ನಾವು ಎದುರಿಸುತ್ತಿರುವಂತಹ ಕೆಲವೇ ಸಮಸ್ಯೆಗಳಿಂದ ಉಂಟಾಗುವ ಅಪಾರ ಹಾನಿಯನ್ನು ಪರಿಗಣಿಸಿರಿ.

ಮಾಲಿನ್ಯ

ಔದ್ಯೋಗೀಕೃತ ದೇಶಗಳು, “ಎಲ್ಲೆಲ್ಲಿಯೂ ಪರಿಸರೀಯ ಹಾನಿಯನ್ನು, ಮಾಲಿನ್ಯವನ್ನು ಅಷ್ಟುಮಾತ್ರವಲ್ಲದೆ ಪರಿಸರ ವ್ಯವಸ್ಥೆಗಳಲ್ಲಿ ಏರುಪೇರನ್ನು ಉಂಟುಮಾಡುತ್ತಿವೆ.” ಪರಿಸ್ಥಿತಿಯು ಹೀಗೆಯೇ ಮುಂದುವರಿದರೆ, “ನೈಸರ್ಗಿಕ ಪರಿಸರವು ಬಹಳ ಒತ್ತಡಕ್ಕೊಳಗಾಗುವುದು.”​—⁠“ಭೌಗೋಲಿಕ ಪರಿಸರ ಹೊರನೋಟ​—⁠2000,” ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ.

ಅನಾರೋಗ್ಯ

“2020ನೆಯ ಇಸವಿಯೊಳಗೆ, ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಸಂಭವಿಸುವ ಸುಮಾರು ಹತ್ತು ಸಾವುಗಳಲ್ಲಿ ಏಳು ಸಾವುಗಳು ಸಾಂಕ್ರಾಮಿಕವಲ್ಲದ ರೋಗರುಜಿನಗಳಿಂದ ಉಂಟಾಗುವವು ಎಂದು ನಿರೀಕ್ಷಿಸಲಾಗಿದೆ. ಆದರೆ ಇಂದು ಹತ್ತರಲ್ಲಿ ನಾಲ್ಕಕ್ಕಿಂತಲೂ ಕಡಿಮೆ ಜನರು ಈ ರೀತಿಯಲ್ಲಿ ಸಾವನ್ನಪ್ಪುತ್ತಾರೆ.”​—⁠“ದ ಗ್ಲೋಬಲ್‌ ಬರ್ಡನ್‌ ಆಫ್‌ ಡಿಸೀಸ್‌,” ಹಾರ್ವರ್ಡ್‌ ಯೂನಿವರ್ಸಿಟಿ ಪ್ರೆಸ್‌, 1996.

“2010ನೆಯ ಇಸವಿಯಷ್ಟಕ್ಕೆ, ಈಗ ತೀವ್ರವಾದ [ಏಡ್ಸ್‌] ಸಾಂಕ್ರಾಮಿಕ ರೋಗವಿರುವ 23 ದೇಶಗಳಲ್ಲಿ, ಸುಮಾರು 6 ಕೋಟಿ 60 ಲಕ್ಷ ಜನರು [ಮೃತ್ಯುವಶವಾಗುವರು]” ಎಂದು ಕೆಲವು ಪರಿಣತರು ಪ್ರತಿಪಾದಿಸುತ್ತಾರೆ.​—⁠“ಏಡ್ಸ್‌ನ ವಿರುದ್ಧ ಹೋರಾಟ: ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಂದ ಪುರಾವೆ,” ಯೂರೋಪಿಯನ್‌ ಕಮಿಷನ್‌ ಮತ್ತು ವಿಶ್ವಬ್ಯಾಂಕ್‌ನ ಒಂದು ವರದಿ.

ಬಡತನ

“ಸುಮಾರು 100 ಕೋಟಿ 30 ಲಕ್ಷ ಜನರು ದಿನಕ್ಕೆ ಒಂದು ಡಾಲರಿಗಿಂತಲೂ ಕಡಿಮೆ ಆದಾಯದಲ್ಲಿ ಜೀವಿಸುತ್ತಾರೆ ಮತ್ತು ಸುಮಾರು 100 ಕೋಟಿ ಜನರಿಗೆ ಅನ್ನಕ್ಕೆ ಗತಿಯಿರುವುದಿಲ್ಲ.”​—⁠“ಹ್ಯೂಮನ್‌ ಡೆವಲಪ್‌ಮೆಂಟ್‌ ರಿಪೋರ್ಟ್‌ 1999,” ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ.

ಯುದ್ಧ

[ಹಲವಾರು ದೇಶಗಳಲ್ಲಿ] ನಡೆಯುತ್ತಿರುವ ಹಿಂಸಾಚಾರವು ಮುಗಿಲುಮುಟ್ಟಸಾಧ್ಯವಿದೆ. ಜನಾಂಗೀಯ, ಕುಲಸಂಬಂಧವಾದ ಹಾಗೂ ಧಾರ್ಮಿಕ [ಭಿನ್ನತೆಗಳಿಂದ] ಉಂಟಾದ . . . ಇಂತಹ ಹಿಂಸಾಚಾರವು . . . ಮುಂದಿನ 25 ವರ್ಷಗಳಲ್ಲಿ ಅತ್ಯಂತ ಸಾಮಾನ್ಯವಾದ ರೀತಿಯ ಘರ್ಷಣೆಯನ್ನು ಉಂಟುಮಾಡುವುದು . . . , ಮತ್ತು ಪ್ರತಿವರ್ಷ ನೂರಾರು ಸಾವಿರ ಜನರ ಹತ್ಯೆಗೆ . . . ಕಾರಣವಾಗುವುದು.”​—⁠“ನೂತನ ಲೋಕದ ಬರೋಣ: 21ನೇ ಶತಮಾನದಲ್ಲಿ ಅಮೆರಿಕದಲ್ಲಿನ ಭದ್ರತೆ,” ರಾಷ್ಟ್ರೀಯ ಭದ್ರತೆಯ ಕುರಿತ ಯು.ಎಸ್‌. ಕಮಿಷನ್‌/21ನೇ ಶತಮಾನ.

ಮಾಲಿನ್ಯ, ಅನಾರೋಗ್ಯ, ಬಡತನ ಹಾಗೂ ಯುದ್ಧವು ಹಿಂದೆಂದಿಗಿಂತಲೂ ಭಯಹುಟ್ಟಿಸುವಂತಹ ಮಟ್ಟದಲ್ಲಿ ಹೆಚ್ಚುತ್ತಿರುವುದಾದರೂ, ಹೊಸ ಸಹಸ್ರಮಾನದ ಆಗಮನದಿಂದ ಉಂಟಾದ ಸಡಗರ ಸಂಭ್ರಮವು ಈ ವಾಸ್ತವಾಂಶವನ್ನು ಅಸ್ಪಷ್ಟಗೊಳಿಸಿದೆ. ಈ ಸಮಸ್ಯೆಗಳಿಗೆ ಲೋಭ, ಅಪನಂಬಿಕೆ, ಹಾಗೂ ಸ್ವಾರ್ಥಭಾವಗಳೇ ಮೂಲಕಾರಣಗಳಾಗಿವೆ. ಕೇವಲ ವೈಜ್ಞಾನಿಕ ಸಂಶೋಧನೆ, ತಾಂತ್ರಿಕತೆ, ಅಥವಾ ರಾಜಕೀಯ ಸಹಾಯದಿಂದ ಈ ದುರ್ಗುಣಗಳನ್ನು ಹೋಗಲಾಡಿಸಸಾಧ್ಯವಿಲ್ಲ.

ಮಾನವಕುಲದ ಮೇಲೆ ಆಶೀರ್ವಾದದ ಸುರಿಮಳೆಗೈಯುವ ಒಂದು ಸಹಸ್ರಮಾನ

ಪುರಾತನ ಕಾಲದ ಒಬ್ಬ ಬರಹಗಾರನು ಒಂದು ಸಂದರ್ಭದಲ್ಲಿ ಹೀಗೆ ಹೇಳಿದನು: “ಮಾನವನ ಮಾರ್ಗವು ಅವನ ಸ್ವಾಧೀನದಲ್ಲಿಲ್ಲವೆಂದು ನನಗೆ ಗೊತ್ತು; ಮನುಷ್ಯನು ನಡೆದಾಡುತ್ತಾ ಸರಿಯಾದ ಕಡೆಗೆ ತನ್ನ ಹೆಜ್ಜೆಯನ್ನಿಡಲಾರನು.” (ಯೆರೆಮೀಯ 10:23) ಮನುಷ್ಯನಲ್ಲಿ ಈ ಭೂಮಿಯನ್ನು ಆಳುವಂತಹ ಸಾಮರ್ಥ್ಯದ ಕೊರತೆಯಿದೆ ಮಾತ್ರವಲ್ಲ, ಅದನ್ನು ಆಳುವ ಹಕ್ಕು ಸಹ ಅವನಿಗಿಲ್ಲ. ನಮ್ಮ ಸೃಷ್ಟಿಕರ್ತನಾದ ಯೆಹೋವ ದೇವರಿಗೆ ಮಾತ್ರ ಆ ಹಕ್ಕು ಇದೆ. ಮತ್ತು ಮಾನವ ಸಮಸ್ಯೆಗಳನ್ನು ಪರಿಹರಿಸುವ ವಿಧವು ಆತನಿಗೆ ಮಾತ್ರ ಗೊತ್ತಿದೆ.​—⁠ರೋಮಾಪುರ 11:​33-36; ಪ್ರಕಟನೆ 4:⁠11.

ಆದರೆ ಯಾವಾಗ? ಹೇಗೆ? ನಾವು “ಕಡೇ ದಿವಸಗಳ” ಅಂತ್ಯಭಾಗದಲ್ಲಿದ್ದೇವೆ ಎಂಬ ಪುರಾವೆಯೇ ನಮಗೆ ಆಶ್ಚರ್ಯವನ್ನು ಉಂಟುಮಾಡುತ್ತದೆ. ನಿಮ್ಮ ಬೈಬಲನ್ನು ದಯವಿಟ್ಟು ತೆರೆದು, 2 ತಿಮೊಥೆಯ 3:​1-5ನ್ನು ಓದಿರಿ. ಈ ‘ಕಠಿನಕಾಲಗಳಲ್ಲಿ’ ಜನರು ತೋರಿಸುವಂತಹ ವ್ಯಕ್ತಿತ್ವಗಳನ್ನು ಇದು ಕಣ್ಣಿಗೆಕಟ್ಟುವಂತಹ ರೀತಿಯಲ್ಲಿ ವರ್ಣಿಸುತ್ತದೆ. ಈ “ಕಡೇ ದಿವಸಗಳ” ಕುರಿತು ಮತ್ತಾಯ 24:​3-14 ಮತ್ತು ಲೂಕ 21:​10, 11 ಸಹ ಬಣ್ಣಿಸುತ್ತವೆ. ಈ ವಚನಗಳು, 1914ರಿಂದ ಸಂಭವಿಸಿರುವ ನೈಸರ್ಗಿಕ ಘಟನೆಗಳ ಮೇಲೆ, ಅಂದರೆ ಭೌಗೋಲಿಕ ಯುದ್ಧ, ಅಂಟುರೋಗಗಳು ಹಾಗೂ ಎಲ್ಲೆಲ್ಲೂ ಇರುವ ಆಹಾರದ ಅಭಾವ, ಇನ್ನು ಮುಂತಾದ ಸಮಸ್ಯೆಗಳ ಮೇಲೆ ಗಮನವನ್ನು ಕೇಂದ್ರೀಕರಿಸುತ್ತವೆ.

ಈ ‘ಕಡೇ ದಿವಸಗಳು’ ಬಹಳ ಬೇಗನೆ ಅಂತ್ಯಗೊಳ್ಳಲಿವೆ. ಇದರ ಕುರಿತಾಗಿ ದಾನಿಯೇಲ 2:44 ಹೇಳುವುದು: “ಪರಲೋಕದೇವರು ಒಂದು ರಾಜ್ಯವನ್ನು ಸ್ಥಾಪಿಸುವನು; ಅದು ಎಂದಿಗೂ ಅಳಿಯದು. . . . ಆ [ಭೂ]ರಾಜ್ಯಗಳನ್ನೆಲ್ಲಾ ಭಂಗಪಡಿಸಿ ನಿರ್ನಾಮಮಾಡಿ ಶಾಶ್ವತವಾಗಿ ನಿಲ್ಲುವದು.” ಹೀಗೆ, ಈ ಭೂಮಿಯನ್ನು ಆಳಲಿಕ್ಕಾಗಿ ದೇವರು ಒಂದು ರಾಜ್ಯವನ್ನು ಅಥವಾ ಸರಕಾರವನ್ನು ಸ್ಥಾಪಿಸುವನು ಎಂಬುದು ಮುಂತಿಳಿಸಲ್ಪಟ್ಟಿತು. ಪ್ರಕಟನೆ 20:4ಕ್ಕನುಸಾರ, ಈ ಸರಕಾರವು ಒಂದು ಸಾವಿರ ವರ್ಷಗಳ ವರೆಗೆ, ಅಂದರೆ ಒಂದು ಸಹಸ್ರಮಾನದ ವರೆಗೆ ಆಳುವುದು! ಈ ಮಹಿಮಾಭರಿತ ಸಹಸ್ರಮಾನದಲ್ಲಿ ಸರ್ವ ಮಾನವಕುಲದ ಜೀವನ ಪರಿಸ್ಥಿತಿಗಳು ಸುಧಾರಿಸುವ ಕೆಲವೊಂದು ವಿಧಗಳನ್ನು ಪರಿಗಣಿಸಿರಿ:

ಆರ್ಥಿಕತೆ. “ಅಲ್ಲಿನ ಜನರು ತಾವು ಕಟ್ಟಿದ ಮನೆಗಳಲ್ಲಿ ತಾವೇ ವಾಸಿಸುವರು, ತಾವು ಮಾಡಿದ ತೋಟಗಳ ಫಲವನ್ನು ತಾವೇ ಅನುಭವಿಸುವರು. ಒಬ್ಬನು ಕಟ್ಟಿದ ಮನೆಯಲ್ಲಿ ಬೇರೊಬ್ಬನು ವಾಸಿಸನು; ಒಬ್ಬನು ಮಾಡಿದ ತೋಟದ ಫಲವು ಇನ್ನೊಬ್ಬನಿಗೆ ವಶವಾಗದು.”​—⁠ಯೆಶಾಯ 65:21, 22.

ಆರೋಗ್ಯ. “ಆಗ ಕುರುಡರ ಕಣ್ಣು ಕಾಣುವದು, ಕಿವುಡರ ಕಿವಿ ಕೇಳುವದು, ಕುಂಟನು ಜಿಂಕೆಯಂತೆ ಹಾರುವನು, ಮೂಕನ ನಾಲಿಗೆಯು ಹರ್ಷಧ್ವನಿಗೈಯುವದು.” “ಯಾವ ನಿವಾಸಿಯೂ ತಾನು ಅಸ್ವಸ್ಥನು ಎಂದು ಹೇಳನು.”​—ಯೆಶಾಯ 33:24; 35:5, 6.

ಪರಿಸರ. ದೇವರು ‘ಲೋಕನಾಶಕರನ್ನು ನಾಶಮಾಡುವನು.’​—ಪ್ರಕಟನೆ 11:18.

ಮಾನವ ಸಂಬಂಧಗಳು. “ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ ಕೇಡು ಮಾಡುವದಿಲ್ಲ, ಯಾರೂ ಹಾಳುಮಾಡುವದಿಲ್ಲ; ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.”​—ಯೆಶಾಯ 11:9.

ಬೈಬಲಿನ ಈ ವಾಗ್ದಾನಗಳಲ್ಲಿ ಲಕ್ಷಾಂತರ ಮಂದಿ ನಂಬಿಕೆಯನ್ನಿಟ್ಟಿದ್ದಾರೆ ಮತ್ತು ಅವರಿಗೆ ಭವಿಷ್ಯತ್ತಿನ ಕುರಿತು ಆಶಾವಾದದ ಹಾಗೂ ಸಕಾರಾತ್ಮಕವಾದ ನೋಟವಿದೆ. ಇದರಿಂದಾಗಿ, ಜೀವಿತದಲ್ಲಿ ಬರುವ ಒತ್ತಡಗಳು ಹಾಗೂ ಸಮಸ್ಯೆಗಳನ್ನು ನಿಭಾಯಿಸಲು ಇವರು ಹೆಚ್ಚು ಸಮರ್ಥರಾಗಿದ್ದಾರೆ. ನಿಮ್ಮ ಜೀವಿತದಲ್ಲಿ ಬೈಬಲ್‌ ಹೇಗೆ ಒಂದು ಮಾರ್ಗದರ್ಶಕ ಶಕ್ತಿಯಾಗಿ ಪರಿಣಮಿಸಸಾಧ್ಯವಿದೆ?

ಜೀವಿತಕ್ಕೆ ನಡೆಸುವ ಜ್ಞಾನ!

ವಿಜ್ಞಾನ ಹಾಗೂ ತಾಂತ್ರಿಕತೆಯು ಕೆಲವೊಮ್ಮೆ ಬೆರಗುಗೊಳಿಸುವಂತಹದ್ದು ಆಗಿರಸಾಧ್ಯವಿದೆ! ಆದರೂ, ಮಾನವ ಜ್ಞಾನವು ಹೆಚ್ಚಿನ ಜನರ ಜೀವಿತಕ್ಕೆ ಭದ್ರತೆ ಹಾಗೂ ಸಂತೋಷದ ಹೊನಲನ್ನು ಹರಿಸಿಲ್ಲ. ಇದನ್ನು ಪೂರೈಸಸಾಧ್ಯವಿರುವ ಏಕೈಕ ಜ್ಞಾನವು, ಬೈಬಲಿನಲ್ಲಿ ಯೋಹಾನ 17:3ನೇ ವಚನದಲ್ಲಿ ವರ್ಣಿಸಲ್ಪಟ್ಟಿದೆ. ಅದು ಹೇಳುವುದು: “ಒಬ್ಬನೇ ಸತ್ಯದೇವರಾಗಿರುವ ನಿನ್ನನ್ನೂ ನೀನು ಕಳುಹಿಸಿಕೊಟ್ಟ ಯೇಸು ಕ್ರಿಸ್ತನನ್ನೂ ತಿಳಿಯುವದೇ ನಿತ್ಯಜೀವವು.”

ಇಂತಹ ಜ್ಞಾನವನ್ನು ಬೈಬಲಿನಲ್ಲಿ ಮಾತ್ರ ಕಂಡುಕೊಳ್ಳಸಾಧ್ಯವಿದೆ. ಅನೇಕರು ಈ ಪವಿತ್ರ ಪುಸ್ತಕದ ಬಗ್ಗೆ ಬಲವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರಾದರೂ, ಕೆಲವರು ಮಾತ್ರ ಸ್ವತಃ ಅದನ್ನು ಓದಿ, ಪರಿಶೀಲಿಸಿದ್ದಾರೆ. ನಿಮ್ಮ ಕುರಿತಾಗಿ ಏನು? ಬೈಬಲನ್ನು ಓದುವುದು ಬಹಳಷ್ಟು ಪ್ರಯತ್ನವನ್ನು ಒಳಗೊಳ್ಳುತ್ತದೆ ಎಂಬುದು ಒಪ್ಪತಕ್ಕ ವಿಷಯವೇ. ಆದರೆ ಇದನ್ನು ಓದಲಿಕ್ಕಾಗಿ ಮಾಡುವ ಪ್ರಯತ್ನವು ಸಾರ್ಥಕವಾದದ್ದಾಗಿದೆ. ಬೈಬಲ್‌ ಮಾತ್ರವೇ ‘ದೈವಪ್ರೇರಿತವಾಗಿದ್ದು . . . ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ.’​—⁠2 ತಿಮೊಥೆಯ 3:⁠16.

ಹಾಗಾದರೆ, ನೀವು ಹೇಗೆ ಬೈಬಲಿನ ಕುರಿತು ಚೆನ್ನಾಗಿ ತಿಳಿದುಕೊಳ್ಳಬಲ್ಲಿರಿ? ನೀವು ಯೆಹೋವನ ಸಾಕ್ಷಿಗಳ ಸಹಾಯವನ್ನು ಏಕೆ ಪಡೆದುಕೊಳ್ಳಬಾರದು? ಇವರು ಹಣಕಾಸನ್ನು ತೆಗೆದುಕೊಳ್ಳದೇ, ಲಕ್ಷಾಂತರ ಜನರಿಗೆ ಅವರ ಮನೆಗಳಲ್ಲಿಯೇ ಬೋಧಿಸುತ್ತಾರೆ. ಈ ವಿಷಯದಲ್ಲಿ ನಿಮಗೆ ನೆರವನ್ನು ನೀಡಲಿಕ್ಕಾಗಿ, ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರಿನಂತಹ ಹಲವಾರು ಬೈಬಲ್‌ ಆಧಾರಿತ ಪ್ರಕಾಶನಗಳನ್ನು ಇವರು ಉಪಯೋಗಿಸುತ್ತಾರೆ. ದೇವರು ಯಾರು? ಭೂಮಿಗಾಗಿ ದೇವರ ಉದ್ದೇಶವೇನು? ದೇವರ ರಾಜ್ಯ ಅಂದರೇನು? ನಿಮ್ಮ ಕುಟುಂಬ ಜೀವಿತವನ್ನು ಬೈಬಲ್‌ ಹೇಗೆ ಸುಧಾರಿಸಬಲ್ಲದು? ಎಂಬಂತಹ, ನಿಮಗಿರಬಹುದಾದ ಅನೇಕ ಬೈಬಲ್‌ ಸಂಬಂಧಿತ ಪ್ರಶ್ನೆಗಳಿಗೆ ಇದು ಸಂಕ್ಷಿಪ್ತ ಉತ್ತರಗಳನ್ನು ಕೊಡುವುದು.

ಯೆಹೋವನ ಸಾಕ್ಷಿಗಳಲ್ಲಿ ಒಬ್ಬರು ನಿಮ್ಮ ಮನೆಯನ್ನು ಭೇಟಿಮಾಡುವಂತೆ ನೀವು ಬಯಸುವುದಾದರೆ, ಕೆಳಗೆ ಕೊಡಲ್ಪಟ್ಟಿರುವ ಈ ಕೂಪನ್‌ ಅನ್ನು ದಯವಿಟ್ಟು ತುಂಬಿಸಿರಿ. ದೇವರ ರಾಜ್ಯದ ಮಹಿಮಾಭರಿತ ಸಹಸ್ರವರ್ಷದ ಆಳ್ವಿಕೆಯ ಕುರಿತು ನಿಮಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ನೀಡಲು ಅವರು ಸಂತೋಷಿಸುವರು!

ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರಿನ ಕುರಿತು ಇನ್ನೂ ಹೆಚ್ಚಿನ ವಿಷಯವನ್ನು ತಿಳಿದುಕೊಳ್ಳಲು ನಾನು ಇಷ್ಟಪಡುತ್ತೇನೆ

□ ಉಚಿತ ಗೃಹ ಬೈಬಲ್‌ ಅಭ್ಯಾಸಕ್ಕಾಗಿ ದಯವಿಟ್ಟು ನನ್ನನ್ನು ಸಂಪರ್ಕಿಸಿರಿ

[ಪಾದಟಿಪ್ಪಣಿ]

^ ಪ್ಯಾರ. 4 ಹೊಸ ಸಹಸ್ರಮಾನದ ಕುರಿತು ಪಾಶ್ಚಾತ್ಯ ದೇಶಗಳ ಜನರ ಅಭಿಪ್ರಾಯವೇನಾಗಿದೆಯೋ ಅದನ್ನು ನಾವು ಇಲ್ಲಿ ಉಲ್ಲೇಖಿಸುತ್ತಿದ್ದೇವೆ. ನಿಜ ಹೇಳಬೇಕೆಂದರೆ, ಹೊಸ ಸಹಸ್ರಮಾನವು ಜನವರಿ 1, 2001ರಂದು ಪ್ರಾರಂಭವಾಗುತ್ತದೆ.