ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅದನ್ನು ನಿಮಗೆ ಹೇಳಲು ಅವರು ಬಳಸುವ ವಿಧಾನಗಳು

ಅದನ್ನು ನಿಮಗೆ ಹೇಳಲು ಅವರು ಬಳಸುವ ವಿಧಾನಗಳು

ಅದನ್ನು ನಿಮಗೆ ಹೇಳಲು ಅವರು ಬಳಸುವ ವಿಧಾನಗಳು

“ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಲು” ಕ್ರೈಸ್ತರಿಗೆ ಆಜ್ಞಾಪಿಸಲಾಗಿದೆ, ಆದರೆ ಇದರ ಅರ್ಥ ಅವರು ಒತ್ತಡವನ್ನು ಬಳಸಬೇಕು ಯಾ ಬಲಾತ್ಕಾರದಿಂದ ಇತರರನ್ನು ಮತಾಂತರಿಸಬೇಕು ಎಂದಲ್ಲ. ಯೇಸುವಿನ ನಿಯೋಗವು “ಬಡವರಿಗೆ ಶುಭವರ್ತಮಾನವನ್ನು ಸಾರುವುದಕ್ಕೆ,” “ಮನಮುರಿದವರನ್ನು ಕಟ್ಟಿ ವಾಸಿಮಾಡುವುದಕ್ಕೆ,” “ದುಃಖಿತರೆಲ್ಲರನ್ನು ಸಂತೈಸುವದಕ್ಕೆ” ಆಗಿತ್ತು. (ಮತ್ತಾಯ 28:19; ಯೆಶಾಯ 61:1, 2; ಲೂಕ 4:18, 19) ಬೈಬಲಿನಿಂದ ಸುವಾರ್ತೆಯನ್ನು ಘೋಷಿಸುವುದರ ಮೂಲಕ ಯೆಹೋವನ ಸಾಕ್ಷಿಗಳು ಇದನ್ನು ಮಾಡಲು ಪ್ರಯತ್ನಿಸುತ್ತಾರೆ. ಪ್ರಾಚೀನ ಕಾಲದ ಪ್ರವಾದಿ ಯೆಹೆಜ್ಕೇಲನಂತೆ, “ನಡೆಯುವ ಸಮಸ್ತ ಅಸಹ್ಯಕಾರ್ಯಗಳಿಗಾಗಿ ನರಳಿ ಗೋಳಾಡುತ್ತಿರು” ವವರನ್ನು ಹುಡುಕಲು ಇಂದು ಯೆಹೋವನ ಸಾಕ್ಷಿಗಳು ಪ್ರಯತ್ನಿಸುತ್ತಾರೆ.—ಯೆಹೆಜ್ಕೇಲ 9:4.

ಸದ್ಯದ ಪರಿಸ್ಥಿತಿಗಳಿಂದ ಸಂಕಟಪಡುತ್ತಿರುವವರನ್ನು ಕಂಡುಹಿಡಿಯಲು ಅವರು ಬಳಸುವ ಬಹು ಖ್ಯಾತವಾದ ವಿಧಾನವು ಮನೆಯಿಂದ ಮನೆಗೆ ಹೋಗುವ ಮೂಲಕವೇ. ಹೀಗೆ, “ಆತನು ದೇವರ ರಾಜ್ಯದ ಸುವಾರ್ತೆಯನ್ನು ಸಾರುತ್ತಾ ಊರುಗಳಲ್ಲಿಯೂ ಗ್ರಾಮಗಳಲ್ಲಿಯೂ ಸಂಚರಿಸಿ” ದಾಗ ಯೇಸುವು ಮಾಡಿದಂತೆ, ಅವರು ಸಾರ್ವಜನಿಕರನ್ನು ತಲಪಲು ಸಕಾರಾತ್ಮಕ ಪ್ರಯತ್ನಗಳನ್ನು ಮಾಡುತ್ತಾರೆ. ಅವನ ಆರಂಭದ ಶಿಷ್ಯರು ತದ್ರೀತಿಯಲ್ಲಿ ಮಾಡಿದರು. (ಲೂಕ 8:1; 9:1-6; 10:1-9) ಇಂದು, ಎಲ್ಲಿ ಸಾಧ್ಯವೋ ಅಲ್ಲಿ ಯೆಹೋವನ ಸಾಕ್ಷಿಗಳು ವರ್ಷದಲ್ಲಿ ಹಲವಾರು ಬಾರಿ ಪ್ರತಿಯೊಂದು ಮನೆಗೆ ಭೇಟಿಯನ್ನೀಯಲು ಪ್ರಯತ್ನಿಸುತ್ತಾ, ಆಸಕ್ತಿಯ ಯಾ ಸಂಬಂಧಿಸಿದ ಕೆಲವೊಂದು ಸ್ಥಳಿಕ ಯಾ ಲೋಕದ ವಿಚಾರದಲ್ಲಿ ಕೆಲವು ನಿಮಿಷಗಳ ತನಕ ಮನೆಯವನೊಂದಿಗೆ ಸಂಭಾಷಿಸಲು ಪ್ರಯತ್ನಿಸುತ್ತಾರೆ. ಪರಿಗಣನೆಗಾಗಿ ಒಂದೆರಡು ಶಾಸ್ತ್ರವಚನಗಳನ್ನು ತೆಗೆದುಕೊಳ್ಳಬಹುದು, ಮತ್ತು ಮನೆಯವನಿಂದ ಆಸಕ್ತಿಯು ತೋರಿಸಲ್ಪಟ್ಟಲ್ಲಿ, ಹೆಚ್ಚಿನ ಚರ್ಚೆಗಾಗಿ ಒಂದು ಅನುಕೂಲವಾದ ಸಮಯದಲ್ಲಿ ಪುನಃ ಸಂದರ್ಶಿಸಲು ಸಾಕ್ಷಿಗಳು ಏರ್ಪಡಿಸಬಹುದು. ಬೈಬಲುಗಳು ಮತ್ತು ಬೈಬಲನ್ನು ವಿವರಿಸುವ ಸಾಹಿತ್ಯಗಳು ದೊರಕುವಂತೆ ಮಾಡಲಾಗುತ್ತದೆ, ಮತ್ತು ಮನೆಯವನು ಇಚ್ಛಿಸುವುದಾದರೆ, ಯಾವುದೇ ವೆಚ್ಚವಿಲ್ಲದೆ ಒಂದು ಮನೆ ಬೈಬಲ್‌ ಅಧ್ಯಯನವನ್ನು ನಡಿಸಲಾಗುತ್ತದೆ. ಇಸವಿ 1993 ರಲ್ಲಿ ಸರಾಸರಿಯಾಗಿ ಸುಮಾರು 45,00,000 ಅಂತಹ ಬೈಬಲ್‌ ಅಧ್ಯಯನಗಳು ಕ್ರಮವಾಗಿ ಲೋಕವ್ಯಾಪಕವಾಗಿ ನಡಿಸಲ್ಪಟ್ಟವು.

“ರಾಜ್ಯದ ಸುವಾರ್ತೆ”ಯನ್ನು ಇತರರಿಗೆ ಹೇಳುವ ಇನ್ನೊಂದು ರೀತಿಯು ಸ್ಥಳಿಕ ರಾಜ್ಯ ಸಭಾಗೃಹಗಳಲ್ಲಿ ನಡೆಯುವ ಕೂಟಗಳ ಮೂಲಕವಾಗಿರುತ್ತದೆ. ಅಲ್ಲಿ ಸಾಕ್ಷಿಗಳು ವಾರ ವಾರ ಕೂಟಗಳನ್ನು ನಡೆಸುತ್ತಾರೆ. ಪ್ರಚಲಿತ ಅಭಿರುಚಿಯ ವಿಷಯದ ಮೇಲೆ ಒಂದು ಸಾರ್ವಜನಿಕ ಭಾಷಣವು ಒಂದು ಕೂಟವಾಗಿರುತ್ತದೆ, ಅದನ್ನು ಹಿಂಬಾಲಿಸಿ ಮೂಲ ವಿಷಯವಾಗಿ ಕಾವಲಿನಬುರುಜು ಪತ್ರಿಕೆಯನ್ನು ಬಳಸುತ್ತಾ ಕೆಲವೊಂದು ಬೈಬಲ್‌ ವಿಚಾರ ಯಾ ಪ್ರವಾದನೆಯ ಅಧ್ಯಯನ ಬರುತ್ತದೆ. ಸುವಾರ್ತೆಯ ಉತ್ತಮ ಘೋಷಕರಾಗುವಂತೆ ಸಾಕ್ಷಿಗಳ ತರಬೇತಿಗಾಗಿರುವ ಶಾಲೆಯು ಇನ್ನೊಂದು ಕೂಟವಾಗಿದೆ, ಇದನ್ನು ಹಿಂಬಾಲಿಸಿ ಸ್ಥಳಿಕ ಕಾರ್ಯಕ್ಷೇತ್ರದಲ್ಲಿ ಸಾಕ್ಷಿ ಕಾರ್ಯವನ್ನು ಚರ್ಚಿಸಲು ಮೀಸಲಾಗಿಟ್ಟ ಒಂದು ಭಾಗವು ಇರುತ್ತದೆ. ಅದಲ್ಲದೆ, ವಾರಕ್ಕೊಮ್ಮೆ ಸಾಕ್ಷಿಗಳು ಖಾಸಗಿ ಮನೆಗಳಲ್ಲಿ ಬೈಬಲ್‌ ಅಧ್ಯಯನಗಳಿಗಾಗಿ ಸಣ್ಣ ಗುಂಪುಗಳಾಗಿ ಒಟ್ಟುಗೂಡುತ್ತಾರೆ.

ಈ ಎಲ್ಲಾ ಕೂಟಗಳು ಸಾರ್ವಜನಿಕರಿಗೆ ತೆರೆದಿವೆ. ಯಾವುದೇ ವಂತಿಗೆಯನ್ನು ಎಂದಿಗೂ ತೆಗೆದುಕೊಳ್ಳಲಾಗುವುದಿಲ್ಲ. ಅಂತಹ ಕೂಟಗಳು ಎಲ್ಲರಿಗೂ ಪ್ರಯೋಜನದಾಯಕವಾಗಿರುತ್ತವೆ. ಬೈಬಲು ಹೇಳುವುದು: “ನಮ್ಮಲ್ಲಿ ಪ್ರತಿಯೊಬ್ಬನು ಇತರರನ್ನು ಪ್ರೀತಿ ಮತ್ತು ಸಕ್ರಿಯ ಒಳ್ಳೇತನಕ್ಕೆ ಅತ್ಯುತ್ತಮವಾಗಿ ಹೆಗೆ ಉತ್ತೇಜಿಸಬೇಕೆಂದು ನಾವು ನೋಡಬೇಕು; ಕೆಲವರು ಮಾಡುವಂತೆ, ನಮ್ಮ ಕೂಟಗಳಿಗೆ ಬರದೆ ಇರುವುದಲ್ಲ, ಬದಲಿಗೆ ಆ ದಿನವು ಸಮೀಪಿಸುತ್ತಿರುವುದನ್ನು ನೀವು ನೋಡುವ ಕಾರಣದಿಂದ ಇನ್ನೂ ಹೆಚ್ಚಾಗಿ ಒಬ್ಬರನ್ನೊಬ್ಬರು ಪ್ರೋತ್ಸಾಹಿಸುತ್ತಿರಬೇಕು.” ವೈಯಕ್ತಿಕ ಅಧ್ಯಯನ ಮತ್ತು ಸಂಶೋಧನೆಯು ಆವಶ್ಯಕ, ಆದರೆ ಇತರರೊಂದಿಗೆ ಕೂಟವಾಗಿ ಸೇರುವುದು ಉತ್ತೇಜಕವಾಗಿರುತ್ತದೆ: “ಕಬ್ಬಿಣವು ಕಬ್ಬಿಣವನ್ನು ಹೇಗೋ ಹಾಗೆಯೇ ಒಬ್ಬ ಮನುಷ್ಯನು ಇನ್ನೊಬ್ಬನು ತಿಳಿವಳಿಕೆಯನ್ನು ಹರಿತಮಾಡುತ್ತಾನೆ.”—ಇಬ್ರಿಯ 10:24, 25; ಜ್ಞಾನೋಕ್ತಿ 27:17, ದ ನ್ಯೂ ಇಂಗ್ಲಿಷ್‌ ಬೈಬಲ್‌.

ತಮ್ಮ ದೈನಂದಿನ ಜೀವಿತಗಳಲ್ಲಿ ಇತರ ಜನರೊಡನೆ ಅವರು ಸಂಪರ್ಕಕ್ಕೆ ಬಂದಂತೆಯೇ ಸುವಾರ್ತೆಯ ಕುರಿತು ಮಾತಾಡಲು ಇರುವ ಅವಕಾಶಗಳ ಸದುಪಯೋಗವನ್ನು ಕೂಡ ಸಾಕ್ಷಿಗಳು ಮಾಡುತ್ತಾರೆ. ನೆರೆಯವನೊಂದಿಗೆ ಯಾ ಬಸ್ಸಿನಲ್ಲೋ ಅಥವಾ ವಿಮಾನದಲ್ಲೋ ಪ್ರಯಾಣಿಕನೊಂದಿಗೆ ವಿನಿಮಯಮಾಡಿದ ಕೆಲವೇ ಮಾತುಗಳಾಗಿರಬಹುದು, ಮಿತ್ರನೊಂದಿಗೆ ಯಾ ಸಂಬಂಧಿಕನೊಬ್ಬನೊಂದಿಗೆ ಸ್ವಲ್ಪ ದೀರ್ಘಕಾಲದ ಮಾತುಕತೆ, ಯಾ ಊಟದ ಸಮಯದಲ್ಲಿ ಸಹ ಕಾರ್ಮಿಕನೊಂದಿಗೆ ಮಾಡಿದ ಒಂದು ಚರ್ಚೆ ಅದಾಗಿರಬಹುದು. ಯೇಸುವು ಭೂಮಿಯ ಮೇಲೆ ಇದ್ದಾಗ ನೀಡಿದ ಸಾಕ್ಷಿಯಲ್ಲಿ ಹೆಚ್ಚಿನದ್ದು ಈ ವಿಧದ್ದಾಗಿತ್ತು—ಅವನು ಸಮುದ್ರತೀರದಲ್ಲಿ ನಡೆಯುತ್ತಾ ಹೋದಾಗ, ಬೆಟ್ಟದ ಪಕ್ಕದಲ್ಲಿ ಕುಳಿತುಕೊಂಡಾಗ, ಯಾರಾದರೊಬ್ಬರ ಮನೆಯಲ್ಲಿ ಊಟ ಮಾಡುತ್ತಿದ್ದಾಗ, ಮದುವೆಗೆ ಹಾಜರಾದಾಗ, ಯಾ ಗಲಿಲಾಯ ಸಮುದ್ರದಲ್ಲಿ ಮೀನುಹಿಡಿಯುವ ದೋಣಿಯಲ್ಲಿ ಪಯಣಿಸುತ್ತಿದ್ದಾಗ. ಅವನು ಸಭಾಮಂದಿರಗಳಲ್ಲಿ ಮತ್ತು ಯೆರೂಸಲೇಮಿನ ದೇವಾಲಯದಲ್ಲಿ ಕಲಿಸಿದನು. ಅವನು ಎಲ್ಲಿಯೇ ಇದ್ದರೂ, ದೇವರ ರಾಜ್ಯದ ಕುರಿತು ಮಾತಾಡುವ ಸಂದರ್ಭಗಳನ್ನು ಕಂಡುಕೊಂಡನು. ಈ ಸಂಬಂಧದಲ್ಲಿ ಸಹ ಅವನ ಹೆಜ್ಜೆಜಾಡನ್ನು ಅನುಸರಿಸಲು ಯೆಹೋವನ ಸಾಕ್ಷಿಗಳು ಪ್ರಯತ್ನಿಸುತ್ತಾರೆ.—1 ಪೇತ್ರ 2:21.

ಮಾದರಿಯ ಮೂಲಕ ಸಾರುವುದು

ನಿಮಗೆ ತಿಳಿಸುವ ವ್ಯಕ್ತಿಯು ಸ್ವತಃ ತನಗೆ ಅದನ್ನು ಅನ್ವಯಿಸದಿದ್ದಲ್ಲಿ, ಸುವಾರ್ತೆಯನ್ನು ನಿಮಗೆ ತಿಳಿಸುವ ಇವೆಲ್ಲಾ ವಿಧಾನಗಳು ನಿಮಗೆ ಅರ್ಥವಿಹೀನವಾಗಿರುತ್ತವೆ. ಹೇಳುವುದು ಒಂದು, ಮಾಡುವುದು ಮತ್ತೊಂದು ಕಪಟಾಚಾರವಾಗಿದೆ, ಮತ್ತು ಧಾರ್ಮಿಕ ಕಪಟಾಚಾರವು ಲಕ್ಷಾಂತರ ಮಂದಿಗಳನ್ನು ಬೈಬಲಿನಿಂದ ದೂರಕ್ಕೆ ತೊಲಗಿಸಿದೆ. ಇದಕ್ಕಾಗಿ ಬೈಬಲನ್ನು ಆಪಾದಿಸಿರುವುದು ಯೋಗ್ಯವಲ್ಲ. ಶಾಸ್ತ್ರಿಗಳ ಮತ್ತು ಫರಿಸಾಯರ ಹತ್ತಿರ ಹೀಬ್ರು ಶಾಸ್ತ್ರಗ್ರಂಥಗಳಿದ್ದವು, ಆದರೆ ಯೇಸುವು ಅವರನ್ನು ಕಪಟಿಗಳೆಂದು ಖಂಡಿಸಿದನು. ಮೋಶೆಯ ನಿಯಮಶಾಸ್ತ್ರದಿಂದ ಅವರ ವಾಚನದ ಕುರಿತು ಅವನು ಮಾತಾಡಿದನು, ಅನಂತರ ಅವನ ಶಿಷ್ಯರಿಗೆ ಕೂಡಿಸಿ ಹೇಳಿದ್ದು: “ಆದದರಿಂದ ಅವರು ನಿಮಗೆ ಏನೇನು ಹೇಳುತ್ತಾರೋ ಅದನ್ನೆಲ್ಲಾ ಮಾಡಿರಿ, ಕಾಪಾಡಿಕೊಳ್ಳಿರಿ; ಆದರೆ ಅವರ ನಡತೆಯ ಪ್ರಕಾರ ನಡೆಯಬೇಡಿರಿ; ಅವರು ಹೇಳುತ್ತಾರೇ ಹೊರತು ನಡೆಯುವದಿಲ್ಲ.” (ಮತ್ತಾಯ 23:3) ಕ್ರೈಸ್ತನೊಬ್ಬನ ಯೋಗ್ಯ ಜೀವನದ ಮಾದರಿಯು ಗಂಟೆಗಟ್ಟಲೆ ಪ್ರಸಂಗವನ್ನೀಯುವುದಕ್ಕಿಂತಲೂ ಹೆಚ್ಚಿನದ್ದನ್ನು ಹೇಳುತ್ತದೆ. ಅವಿಶ್ವಾಸಿ ಗಂಡಂದಿರಿರುವ ಕ್ರೈಸ್ತ ಹೆಂಡತಿಯರಿಗೆ ಇದನ್ನು ಸೂಚಿಸಲಾಗಿತ್ತು: “ನೀವು ನಿರ್ಮಲರಾಗಿಯೂ ಭಯಭರಿತರಾಗಿಯೂ ನಡೆದುಕೊಳ್ಳುವದನ್ನು ಅವರು ನೋಡಿ ವಾಕ್ಯೋಪದೇಶವಿಲ್ಲದೆ ತಮ್ಮ ಹೆಂಡತಿಯರಾದ ನಿಮ್ಮ ನಡತೆಯಿಂದಲೇ ಸನ್ಮಾರ್ಗಕ್ಕೆ ಬಂದಾರು.”—1 ಪೇತ್ರ 3:1, 2.

ಆದಕಾರಣ, ಯೆಹೋವನ ಸಾಕ್ಷಿಗಳು ಇತರರಿಗೆ ಸುವಾರ್ತೆಯನ್ನು ಈ ವಿಧಾನದಲ್ಲೂ ಶಿಫಾರಸ್ಸು ಮಾಡಲು ಪ್ರಯತ್ನಿಸುತ್ತಾರೆ: ಇತರರಿಗೆ ಅವರು ಶಿಫಾರಸ್ಸು ಮಾಡುವ ಕ್ರೈಸ್ತ ನಡತೆಯಲ್ಲಿ ಆದರ್ಶಪ್ರಾಯರಾಗಿರುವುದರ ಮೂಲಕ. ‘ಇತರರು ತಮಗೇನು ಮಾಡಲು ಅಪೇಕ್ಷಿಸುತ್ತಾರೋ ಅದನ್ನೇ ಅವರಿಗೆ ಮಾಡಲು’ ಅವರು ಪ್ರಯತ್ನಿಸುತ್ತಾರೆ. (ಮತ್ತಾಯ 7:12) ಕೇವಲ ತಮ್ಮ ಸಹ ಸಾಕ್ಷಿಗಳೊಂದಿಗೆ, ಮಿತ್ರರೊಂದಿಗೆ, ನೆರೆಯವರೊಂದಿಗೆ, ಯಾ ಸಂಬಂಧಿಕರೊಂದಿಗೆ ಮಾತ್ರವೇ ಅಲ್ಲ, ಎಲ್ಲಾ ಮನುಷ್ಯರೊಂದಿಗೆ ಈ ರೀತಿಯಲ್ಲಿರಲು ಅವರು ಪ್ರಯತ್ನಿಸುತ್ತಾರೆ. ಅಪರಿಪೂರ್ಣರಾಗಿರುವುದರಿಂದ, ಅವರು ಯಾವಾಗಲೂ 100 ಪ್ರತಿಶತ ಯಶಸ್ವಿಯಾಗುವುದಿಲ್ಲ. ಆದರೆ ರಾಜ್ಯದ ಸುವಾರ್ತೆಯನ್ನು ಎಲ್ಲಾ ವ್ಯಕ್ತಿಗಳಿಗೆ ಹೇಳುವುದರಿಂದ ಮಾತ್ರವೇ ಅಲ್ಲ, ಬದಲಾಗಿ ಸಾಧ್ಯವಾಗುವಲ್ಲೆಲ್ಲಾ ಒಂದು ನೆರವಿನ ಹಸ್ತವನ್ನು ಚಾಚುವುದರ ಮೂಲಕವೂ ಅವರಿಗೆ ಒಳಿತನ್ನು ಮಾಡುವದು ಅವರ ಹೃದಯದ ಬಯಕೆಯಾಗಿರುತ್ತದೆ.—ಯಾಕೋಬ 2:14-17.

[ಪುಟ 32 ರಲ್ಲಿರುವ ಸಂಕ್ಷಿಪ್ತ ವಿವರಣೆ]

ವಾಕ್ಯೋಪದೇಶವಿಲ್ಲದೆ ಯಶಸ್ವಿ

[ಪುಟ 31 ರಲ್ಲಿರುವ ಚಿತ್ರಗಳು]

ವಿನ್ಯಾಸದಲ್ಲಿ ವ್ಯಾವಹಾರಿಕವಾಗಿದ್ದು, ರಾಜ್ಯ ಸಭಾಗೃಹಗಳು ಬೈಬಲ್‌ ಚರ್ಚೆಗಾಗಿರುವ ಸ್ಥಳಗಳಾಗಿವೆ

[ಪುಟ 33 ರಲ್ಲಿರುವ ಚಿತ್ರಗಳು]

ತಮ್ಮ ಸ್ವಂತ ಕುಟುಂಬ ಜೀವಿತಗಳಲ್ಲಿ ಹಾಗೂ ಇತರ ಜನರೊಂದಿಗಿನ ಸಂಪರ್ಕಗಳಲ್ಲಿ, ಇತರರಿಗೆ ಅವರು ತಿಳಿಸುವ ಸಂಗತಿಗಳನ್ನು ಮಾಡಲು, ಸಾಕ್ಷಿಗಳು ಯಥಾರ್ಥವಾಗಿ ಪ್ರಯತ್ನಿಸುತ್ತಾರೆ