ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಈ ಬ್ರೋಷರಿನ ಉದ್ದೇಶ

ಈ ಬ್ರೋಷರಿನ ಉದ್ದೇಶ

ಡಚ್‌ ತತ್ವಜ್ಞಾನಿ ಸ್ಪಿನೋಜಾ ಎಂಬುವರು ಹೀಗೆ ಬರೆದರು: “ಮಾನವರ ಕ್ರಿಯೆಗಳನ್ನು ನೋಡಿ ನಾನು ನಗಲು, ಅಳಲು, ಅಥವಾ ಅವುಗಳನ್ನು ದ್ವೇಷಿಸಲು ಅಲ್ಲ, ಬದಲಾಗಿ ಅವುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೇನೆ.” ನೀವು ಒಬ್ಬ ಶಿಕ್ಷಕರಾಗಿರುವುದರಿಂದ, ನಿಮ್ಮ ಕೈಕೆಳಗಿರುವ ವಿದ್ಯಾರ್ಥಿಗಳ ಅಭಿಪ್ರಾಯಗಳು, ಹಿನ್ನೆಲೆಗಳು, ಮತ್ತು ನಂಬಿಕೆಗಳನ್ನು ಅರ್ಥಮಾಡಿಕೊಳ್ಳುವ ಪಂಥಾಹ್ವಾನವು ನಿಮ್ಮ ಮುಂದಿದೆ. ಈ ವಿದ್ಯಾರ್ಥಿಗಳಲ್ಲಿ, ಯೆಹೋವನ ಸಾಕ್ಷಿಗಳ ಮಕ್ಕಳೂ ಸೇರಿದ್ದಾರೆ. ಕೆಲವೊಮ್ಮೆ ಈ ವಿದ್ಯಾರ್ಥಿಗಳು ಕೆಲವೊಂದು ವಿಷಯಗಳ ಕುರಿತು ತೆಗೆದುಕೊಳ್ಳುವ ನಿಲುವು ಅಸಾಮಾನ್ಯವಾಗಿರುವಂತೆ ತೋರಬಹುದು. ಒಬ್ಬ ವಿದ್ಯಾರ್ಥಿಯು ತನ್ನ ಧಾರ್ಮಿಕ ಮತ್ತು ನೈತಿಕ ನಂಬಿಕೆಗಳಿಂದಾಗಿ ಈ ರೀತಿಯ ನಿಲುವನ್ನು ತೆಗೆದುಕೊಳ್ಳುತ್ತಿರುವಾಗ, ನೀವು ಅದಕ್ಕೆ ಗಮನಕೊಡುವುದು ಉಚಿತ. ಈ ಬ್ರೋಷರ್‌ ವಾಚ್‌ಟವರ್‌ ಬೈಬಲ್‌ ಆ್ಯಂಡ್‌ ಟ್ರ್ಯಾಕ್ಟ್‌ ಸೊಸೈಟಿಯಿಂದ (ಯೆಹೋವನ ಸಾಕ್ಷಿಗಳ ಮುದ್ರಣ ಏಜೆನ್ಸಿ) ತಯಾರಿಸಲ್ಪಟ್ಟಿದೆ ಮತ್ತು ಯೆಹೋವನ ಸಾಕ್ಷಿಗಳಾಗಿರುವ ವಿದ್ಯಾರ್ಥಿಗಳನ್ನು ನೀವು ಹೆಚ್ಚು ಉತ್ತಮವಾಗಿ ಅರ್ಥಮಾಡಿಕೊಳ್ಳುವಂತೆ ಸಹಾಯಮಾಡಲು ರಚಿಸಲ್ಪಟ್ಟಿದೆ. ನೀವಿದನ್ನು ಜಾಗರೂಕತೆಯಿಂದ ಓದಲು ಸಮಯ ತೆಗೆದುಕೊಳ್ಳುವಿರೆಂದು ನಾವು ಆಶಿಸುತ್ತೇವೆ.

ಇನ್ನೊಬ್ಬ ವ್ಯಕ್ತಿಯ ಧಾರ್ಮಿಕ ನಂಬಿಕೆಗಳು ಏನಾಗಿವೆಯೆಂಬುದನ್ನು ತಿಳಿದುಕೊಳ್ಳುವುದರ ಅರ್ಥ, ನೀವು ಅವುಗಳನ್ನು ಒಪ್ಪಿಕೊಳ್ಳಲೇಬೇಕು ಅಥವಾ ಪಾಲಿಸಲೇಬೇಕು ಎಂದಾಗಿರುವುದಿಲ್ಲ. ಆ ನಂಬಿಕೆಗಳ ಕುರಿತು ನಿಮಗೆ ಮಾಹಿತಿಯನ್ನು ಕೊಡುವ ಮೂಲಕ ನಾವು ನಿಮ್ಮನ್ನು ಮತಾಂತರಿಸುತ್ತಿದ್ದೇವೆಂಬುದು ಸಹ ಇದರ ಅರ್ಥವಲ್ಲ. ಈ ಬ್ರೋಷರ್‌, ಸಾಕ್ಷಿಗಳ ಧಾರ್ಮಿಕ ಅಭಿಪ್ರಾಯಗಳನ್ನು ನಿಮ್ಮ ಮೇಲೆ ಅಥವಾ ನಿಮ್ಮ ವಿದ್ಯಾರ್ಥಿಗಳ ಮೇಲೆ ಒತ್ತಾಯದಿಂದ ಹೇರಲು ಪ್ರಯತ್ನಿಸುವುದಿಲ್ಲ. ನಿಮ್ಮಲ್ಲಿರುವ ಕೆಲವು ವಿದ್ಯಾರ್ಥಿಗಳ ಹೆತ್ತವರು ಅವರಿಗೆ ಕಲಿಸಿಕೊಡುತ್ತಿರುವ ಮೂಲತತ್ವಗಳು ಮತ್ತು ನಂಬಿಕೆಗಳ ಕುರಿತಾಗಿ ನಿಮಗೆ ಕೇವಲ ಮಾಹಿತಿಯನ್ನು ಒದಗಿಸುವುದೇ ನಮ್ಮ ಬಯಕೆ. ಹೀಗೆ, ಸಾಕ್ಷಿಗಳಾಗಿರುವ ಮಕ್ಕಳನ್ನು ಅರ್ಥಮಾಡಿಕೊಳ್ಳಲು ಮತ್ತು ಅವರೊಂದಿಗೆ ಸಹಕರಿಸಲು ನಿಮಗೆ ಹೆಚ್ಚು ಸುಲಭವಾಗುವುದು. ಈ ಮಕ್ಕಳಿಗೆ ಹೆತ್ತವರು ಏನನ್ನು ಕಲಿಸುತ್ತಾರೊ ಮತ್ತು ಈ ಮಕ್ಕಳು ಏನನ್ನು ಮಾಡುತ್ತಾರೊ ಅದು ಯಾವಾಗಲೂ ಹೊಂದಿಕೆಯಲ್ಲಿರಲಿಕ್ಕಿಲ್ಲ. ಇದಕ್ಕೆ ಕಾರಣವೇನೆಂದರೆ, ಪ್ರತಿಯೊಬ್ಬ ಮಗು ತನ್ನ ಸ್ವಂತ ಮನಸ್ಸಾಕ್ಷಿಯನ್ನು ಬೆಳೆಸಿಕೊಳ್ಳಲು ಇನ್ನೂ ಕಲಿಯುತ್ತಾ ಇದ್ದಾನೆ.

ಹೆಚ್ಚಿನ ಹೆತ್ತವರಂತೆ, ಯೆಹೋವನ ಸಾಕ್ಷಿಗಳಾಗಿರುವ ಹೆತ್ತವರು ಸಹ ತಮ್ಮ ಮಕ್ಕಳು ಶಾಲೆಯಿಂದ ಸಾಧ್ಯವಾದಷ್ಟು ಹೆಚ್ಚಿನ ಪ್ರಯೋಜನವನ್ನು ಪಡೆಯಬೇಕೆಂದು ಬಯಸುತ್ತಾರೆ. ಈ ಕಾರಣಕ್ಕಾಗಿಯೇ ತಮ್ಮ ಮಕ್ಕಳಿಗೆ ಶಿಕ್ಷಕರೊಂದಿಗೆ ಸಹಕರಿಸುವಂತೆ ಅವರು ಕಲಿಸುತ್ತಾರೆ. ಪ್ರತಿಯಾಗಿ, ಶಿಕ್ಷಕರು ತಮ್ಮನ್ನು ಅರ್ಥಮಾಡಿಕೊಂಡು ಗೌರವದಿಂದ ಉಪಚರಿಸುವಾಗ, ಸಾಕ್ಷಿಗಳಾಗಿರುವ ಹೆತ್ತವರು ಮತ್ತು ಅವರ ಮಕ್ಕಳು ಅದನ್ನು ಗಣ್ಯಮಾಡುತ್ತಾರೆ.

ಯೆಹೋವನ ಸಾಕ್ಷಿಗಳು ಲೋಕವ್ಯಾಪಕವಾಗಿ ಪ್ರಸಿದ್ಧರಾಗಿರುವ ಕ್ರೈಸ್ತರಾಗಿದ್ದಾರೆ. ಆದರೆ ಕೆಲವೊಮ್ಮೆ ಅವರ ಬಗ್ಗೆ ಅಪಾರ್ಥಮಾಡಿಕೊಳ್ಳಲಾಗುತ್ತದೆ. ಆದುದರಿಂದ, ನಿಮ್ಮ ಕೈಕೆಳಗಿರುವ ಸಾಕ್ಷಿ ಮಕ್ಕಳನ್ನು ಹೆಚ್ಚು ಉತ್ತಮವಾಗಿ ಅರ್ಥಮಾಡಿಕೊಳ್ಳುವಂತೆ ಈ ಬ್ರೋಷರ್‌ ನಿಮಗೆ ಸಹಾಯಮಾಡುವುದೆಂಬುದು ನಮ್ಮ ನಿರೀಕ್ಷೆಯಾಗಿದೆ. ನಿರ್ದಿಷ್ಟ ಸಂದರ್ಭಗಳಲ್ಲಿ ಅವರು ಭಿನ್ನರಾಗಿರುವ ತಮ್ಮ ಹಕ್ಕನ್ನು ಏಕೆ ಬಿಟ್ಟುಕೊಡುವುದಿಲ್ಲವೆಂಬ ಕಾರಣವನ್ನು ನೀವು ವಿಶೇಷವಾಗಿ ಅರ್ಥಮಾಡಿಕೊಳ್ಳುವಿರೆಂಬ ಭರವಸೆಯು ನಮಗಿದೆ.

ಬೇರೆ ರೀತಿಯಲ್ಲಿ ಸೂಚಿಸಲ್ಪಡದಿರುವಲ್ಲಿ, ಉಪಯೋಗಿಸಲ್ಪಟ್ಟ ಬೈಬಲ್‌ ಭಾಷಾಂತರವು ‘ಸತ್ಯವೇದ’ ಆಗಿದೆ. NW ಎಂದು ಬರೆದಿರುವಲ್ಲಿ, ಶಾಸ್ತ್ರವಚನದ ಉದ್ಧರಣಗಳು, ಆಧುನಿಕ ಭಾಷೆಯ ನ್ಯೂ ವರ್ಲ್ಡ್‌ ಟ್ರಾನ್ಸ್‌ಲೇಶನ್‌ ಆಫ್‌ ದ ಹೋಲಿ ಸ್ಕ್ರಿಪ್ಚರ್ಸ್‌​—ವಿದ್‌ ರೆಫರೆನ್ಸಸ್‌ ನಿಂದ ತೆಗೆಯಲ್ಪಟ್ಟಿವೆ.