ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು ತಮ್ಮ ಮಕ್ಕಳಲ್ಲಿ ನಿಜವಾದ ಕ್ರೈಸ್ತ ಮೌಲ್ಯಗಳನ್ನು ಬೇರೂರಿಸಲು ಪ್ರಯತ್ನಿಸುತ್ತಾರೆ

ಗೌರವಿಸಲ್ಪಡಬೇಕಾದ ನೈತಿಕ ಮೌಲ್ಯಗಳು

ಗೌರವಿಸಲ್ಪಡಬೇಕಾದ ನೈತಿಕ ಮೌಲ್ಯಗಳು

ಇತಿಹಾಸದಾದ್ಯಂತ, ಧೀರ ಸ್ತ್ರೀಪುರುಷರು ತಮ್ಮ ಸಮಯಗಳಲ್ಲಿ ತುಂಬ ಜನಪ್ರಿಯವಾಗಿದ್ದಂತಹ ವಿಚಾರಧಾರೆಗೆ ವಿರುದ್ಧವಾಗಿ ನಿಲುವನ್ನು ತೆಗೆದುಕೊಂಡಿದ್ದಾರೆ. ಅವರು ರಾಜಕೀಯ, ಧಾರ್ಮಿಕ ಮತ್ತು ಜಾತೀಯ ಪೀಡನೆಯನ್ನು ತಾಳಿಕೊಂಡಿದ್ದಾರೆ ಮತ್ತು ಅನೇಕವೇಳೆ ತಮ್ಮ ಜೀವಗಳನ್ನೂ ತೆತ್ತಿದ್ದಾರೆ.

ವಿಶೇಷವಾಗಿ ಆರಂಭದ ಕ್ರೈಸ್ತರು ಧೈರ್ಯಶಾಲಿಗಳಾಗಿದ್ದರು. ಮೊದಲ ಮೂರು ಶತಮಾನಗಳಲ್ಲಿ ನಡೆದ ಕಠಿನವಾದ ಹಿಂಸೆಯ ಸಮಯದಲ್ಲಿ, ವಿಧರ್ಮಿ ರೋಮನರು ಅವರಲ್ಲಿ ಅನೇಕರನ್ನು ಕೊಂದುಹಾಕಿದರು, ಯಾಕೆಂದರೆ ಅವರು ಸಾಮ್ರಾಟನನ್ನು ಆರಾಧಿಸಲು ನಿರಾಕರಿಸಿದರು. ಕೆಲವೊಮ್ಮೆ ಒಂದು ಅಖಾಡದಲ್ಲಿ ಒಂದು ವೇದಿಯನ್ನು ಕಟ್ಟಲಾಗುತ್ತಿತ್ತು. ರೋಮನರ ಕೈಯಿಂದ ಬಿಡುಗಡೆಹೊಂದಲು ಆ ಕ್ರೈಸ್ತರು, ಸಾಮ್ರಾಟನು ಒಬ್ಬ ದೇವರಾಗಿದ್ದಾನೆಂಬುದನ್ನು ತಾವು ಒಪ್ಪಿಕೊಳ್ಳುತ್ತೇವೆಂದು ತೋರಿಸಲು ಕೇವಲ ಒಂದು ಚಿಟಿಕೆಯಷ್ಟು ಧೂಪವನ್ನು ಸುಡಬೇಕಾಗಿತ್ತು, ಅಷ್ಟೇ. ಆದರೆ ಈ ವಿಷಯದಲ್ಲಿ ತೀರ ಕಡಿಮೆ ಮಂದಿ ರಾಜಿಮಾಡಿಕೊಂಡರು. ಹೆಚ್ಚಿನವರು ತಮ್ಮ ನಂಬಿಕೆಯನ್ನು ತೊರೆಯುವ ಬದಲು ಸಾಯಲೂ ಸಿದ್ಧರಿದ್ದರು.

ಆಧುನಿಕ ಸಮಯಗಳಲ್ಲೂ, ಯೆಹೋವನ ಕ್ರೈಸ್ತ ಸಾಕ್ಷಿಗಳು ರಾಜಕೀಯ ತಾಟಸ್ಥ್ಯದ ಸಂಬಂಧದಲ್ಲಿ ಇದೇ ರೀತಿಯ ನಿಲುವನ್ನು ತೆಗೆದುಕೊಳ್ಳುತ್ತಾರೆ. ಉದಾಹರಣೆಗಾಗಿ, ನಾಜಿ ಆಳ್ವಿಕೆಯ ಸಮಯದಲ್ಲಿ ಅವರು ತೆಗೆದುಕೊಂಡ ದೃಢವಾದ ನಿಲುವನ್ನು ಇತಿಹಾಸದ ಪುಟಗಳು ದೃಢೀಕರಿಸುತ್ತವೆ. ಎರಡನೆಯ ವಿಶ್ವ ಯುದ್ಧದ ಮುಂಚೆ ಹಾಗೂ ಅನಂತರ, ಜರ್ಮನಿಯಲ್ಲಿದ್ದ ಸಾಕ್ಷಿಗಳಲ್ಲಿ ಸರಿಸುಮಾರು 25 ಪ್ರತಿಶತ ಮಂದಿ, ಹೆಚ್ಚಾಗಿ ಕೂಟ ಶಿಬಿರಗಳಲ್ಲೇ ಸತ್ತರು. ಅದಕ್ಕೆ ಕಾರಣವಿಷ್ಟೇ, ಅವರು ತಟಸ್ಥರಾಗಿ ಉಳಿದು, “ಹೆಯ್ಲ್‌ ಹಿಟ್ಲರ್‌” (ಹಿಟ್ಲರನಿಗೆ ಜಯವಾಗಲಿ) ಎಂದು ಹೇಳಲು ನಿರಾಕರಿಸಿದ್ದರು. ಇದಕ್ಕಾಗಿ, ಚಿಕ್ಕ ಮಕ್ಕಳನ್ನು ಸಹ ಸಾಕ್ಷಿಗಳಾಗಿದ್ದ ತಮ್ಮ ಹೆತ್ತವರಿಂದ ಬಲವಂತವಾಗಿ ಪ್ರತ್ಯೇಕಿಸಲಾಯಿತು. ಈ ಒತ್ತಡದ ಎದುರಿನಲ್ಲೂ, ಎಳೆಯ ಮಕ್ಕಳು ದೃಢವಾಗಿ ನಿಂತು, ಇತರರು ಅವರ ಮೇಲೆ ಬಲವಂತದಿಂದ ಹೇರಲು ಪ್ರಯತ್ನಿಸಿದ ಅಶಾಸ್ತ್ರೀಯ ಬೋಧನೆಗಳಿಂದ ಕಳಂಕಿತರಾಗಲು ನಿರಾಕರಿಸಿದರು.

ಧ್ವಜವಂದನೆ

ಇಂದು ಯೆಹೋವನ ಸಾಕ್ಷಿಗಳು ಸಾಮಾನ್ಯವಾಗಿ ಇಷ್ಟು ಕಠಿನವಾದ ಹಿಂಸೆಗೆ ಗುರಿಯಾಗುವುದಿಲ್ಲ. ಆದರೂ, ಯುವ ಸಾಕ್ಷಿಗಳು ಧ್ವಜವಂದನೆಯಂತಹ ದೇಶಭಕ್ತಿಯ ಸಮಾರಂಭಗಳಲ್ಲಿ, ತಮ್ಮ ಮನಸ್ಸಾಕ್ಷಿಯ ನಿರ್ಣಯಕ್ಕನುಸಾರ ಭಾಗವಹಿಸದಿರುವಾಗ ತಪ್ಪಭಿಪ್ರಾಯಗಳು ಉಂಟಾಗುತ್ತವೆ.

ಬೇರೆಯವರು ಧ್ವಜವಂದನೆ ಮಾಡುವಾಗ ಅವರನ್ನು ನಿರುತ್ತೇಜಿಸಬಾರದೆಂದು ಯೆಹೋವನ ಸಾಕ್ಷಿಗಳ ಮಕ್ಕಳಿಗೆ ಕಲಿಸಲಾಗುತ್ತದೆ. ಯಾಕೆಂದರೆ ಅದೊಂದು ವೈಯಕ್ತಿಕ ವಿಷಯವಾಗಿದೆ. ಆದರೆ ಸ್ವತಃ ಸಾಕ್ಷಿಗಳ ನಿಲುವು ದೃಢವಾಗಿದೆ: ಅವರು ಯಾವುದೇ ದೇಶದ ಧ್ವಜವನ್ನು ವಂದಿಸುವುದಿಲ್ಲ. ಅಗೌರವವನ್ನು ತೋರಿಸಲಿಕ್ಕಾಗಿ ಇದನ್ನು ಅವರು ಮಾಡುವುದಿಲ್ಲ. ಅವರು ಯಾವುದೇ ದೇಶದಲ್ಲಿ ವಾಸಿಸುತ್ತಿರಲಿ, ಆ ದೇಶದ ಧ್ವಜವನ್ನು ಅವರು ಖಂಡಿತವಾಗಿಯೂ ಗೌರವಿಸುತ್ತಾರೆ ಮತ್ತು ಆ ದೇಶದ ನಿಯಮಗಳಿಗೆ ವಿಧೇಯರಾಗುವ ಮೂಲಕ ಗೌರವವನ್ನು ತೋರಿಸುತ್ತಾರೆ. ಅವರು ಯಾವುದೇ ರೀತಿಯ ಸರಕಾರ-ವಿರೋಧಿ ಚಟುವಟಿಕೆಯಲ್ಲಿ ಎಂದೂ ಪಾಲ್ಗೊಳ್ಳುವುದಿಲ್ಲ. ವಾಸ್ತವದಲ್ಲಿ, ಸದ್ಯದ ಮಾನವ ಸರಕಾರಗಳು ‘ದೇವರ ಏರ್ಪಾಡಾಗಿವೆ’ ಮತ್ತು ಅವು ಅಸ್ತಿತ್ವದಲ್ಲಿರುವಂತೆ ಆತನೇ ಅನುಮತಿಯನ್ನು ಕೊಟ್ಟಿದ್ದಾನೆಂದು ಅವರು ನಂಬುತ್ತಾರೆ. ಆದುದರಿಂದ, ತೆರಿಗೆಗಳನ್ನು ಸಲ್ಲಿಸುವ ಮತ್ತು ಅಂತಹ “ಮೇಲಧಿಕಾರಿಗಳಿಗೆ” (NW) ಗೌರವವನ್ನು ಕೊಡುವ ದೈವಿಕ ಆಜ್ಞೆಗೆ ತಾವು ಅಧೀನರಾಗಿರಬೇಕೆಂದು ಅವರಿಗನಿಸುತ್ತದೆ. (ರೋಮಾಪುರ 13:​1-7) ಇದು ಯೇಸುವಿನ ಈ ಪ್ರಸಿದ್ಧ ಹೇಳಿಕೆಗೆ ಹೊಂದಿಕೆಯಲ್ಲಿದೆ: “ಕೈಸರನದನ್ನು ಕೈಸರನಿಗೆ ಕೊಡಿರಿ; ದೇವರದನ್ನು ದೇವರಿಗೆ ಕೊಡಿರಿ.”​—ಮತ್ತಾಯ 22:21.

‘ಆದರೆ ಯೆಹೋವನ ಸಾಕ್ಷಿಗಳು ಧ್ವಜ​ವಂದನೆ ಮಾಡುವ ಮೂಲಕ ಅದಕ್ಕೆ ಗೌರವವನ್ನು ತೋರಿಸುವುದಿಲ್ಲವೇಕೆ?’ ಎಂದು ಕೆಲವರು ಕೇಳುತ್ತಾರೆ. ಯಾಕೆಂದರೆ ಧ್ವಜವಂದನೆಯನ್ನು ಅವರು ಒಂದು ಆರಾಧನೆಯ ಕ್ರಿಯೆಯೋಪಾದಿ ದೃಷ್ಟಿಸುತ್ತಾರೆ, ಮತ್ತು ಆರಾಧನೆಯು ಕೇವಲ ದೇವರಿಗೆ ಸಲ್ಲತಕ್ಕದ್ದು. ದೇವರನ್ನು ಬಿಟ್ಟು ಇನ್ನಾವುದೇ ವ್ಯಕ್ತಿ ಅಥವಾ ವಸ್ತುವಿಗೆ ಆರಾಧನೆಯನ್ನು ಕೊಡಲು ಅವರ ಮನಸ್ಸಾಕ್ಷಿಯು ಒಪ್ಪುವುದಿಲ್ಲ. (ಮತ್ತಾಯ 4:10; ಅ. ಕೃತ್ಯಗಳು 5:29) ಆದುದರಿಂದ ಶಿಕ್ಷಕರು ತಮ್ಮ ಈ ನಂಬಿಕೆಯನ್ನು ಗೌರವಿಸಿ, ತಮ್ಮ ನಂಬಿಕೆಗಳಿಗನುಸಾರ ನಡೆಯುವಂತೆ ಅನುಮತಿಸುವಾಗ ಯೆಹೋವನ ಸಾಕ್ಷಿಗಳ ಮಕ್ಕಳು ಅದನ್ನು ತುಂಬ ಗಣ್ಯಮಾಡುತ್ತಾರೆ.

ಧ್ವಜವಂದನೆಗೆ ಮತ್ತು ಆರಾಧನೆಗೆ ಸಂಬಂಧವಿದೆಯೆಂಬುದನ್ನು ಕೇವಲ ಯೆಹೋವನ ಸಾಕ್ಷಿಗಳಲ್ಲದೆ ಇತರರೂ ನಂಬುತ್ತಾರೆಂಬುದು ಆಶ್ಚರ್ಯದ ಸಂಗತಿಯಲ್ಲ. ಇದನ್ನು ಈ ಮುಂದಿನ ಹೇಳಿಕೆಗಳು ತೋರಿಸುತ್ತವೆ:

“ಆರಂಭದಲ್ಲಿ ಧ್ವಜಗಳು ಬಹುಮಟ್ಟಿಗೆ ಧಾರ್ಮಿಕ ಸ್ವಭಾವದವುಗಳಾಗಿದ್ದವು. . . . ರಾಷ್ಟ್ರೀಯ ಧ್ವಜಗಳಿಗೆ ಪಾವಿತ್ರ್ಯತೆಯನ್ನು ಕೊಡಲು ಯಾವಾಗಲೂ ಧರ್ಮದ ಸಹಾಯವನ್ನು ಪಡೆಯಲಾಗುತ್ತಿತ್ತು.” (ಓರೆಅಕ್ಷರಗಳು ನಮ್ಮವು.)​—ಎನ್‌ಸೈಕ್ಲೊಪೀಡಿಯ ಬ್ರಿಟಾನಿಕ.

“ಕ್ರೂಜೆಯಂತೆ ಧ್ವಜ ಸಹ ಪವಿತ್ರವಾಗಿದೆ. . . . ರಾಷ್ಟ್ರೀಯ ಕುರುಹುಗಳ ಕಡೆಗಿರಬೇಕಾದ ಮಾನವ ಮನೋಭಾವದ ಕುರಿತಾದ ನಿಯಮವಿಧಿಗಳಲ್ಲಿ, ‘ಧ್ವಜ ಸೇವೆ,’ . . . ‘ಧ್ವಜಕ್ಕಾಗಿ ಪೂಜ್ಯಭಾವನೆ,’ ‘ಧ್ವಜಕ್ಕೆ ಭಕ್ತಿ’ ಎಂಬಂತಹ ಬಲವಾದ, ಭಾವ​ಪ್ರದರ್ಶಕ ಪದಗಳನ್ನು ಉಪಯೋಗಿಸಲಾಗಿದೆ.” (ಓರೆಅಕ್ಷರಗಳು ನಮ್ಮವು.)​—ದ ಎನ್‌ಸೈಕ್ಲೊಪೀಡಿಯ ಅಮೆರಿಕಾನಾ.

“ಕ್ರೈಸ್ತರು [ರೋಮನ್‌] . . . ಸಾಮ್ರಾಟನನ್ನು ಒಬ್ಬ ದೇವರೆಂದೆಣಿಸುತ್ತಾ ಅವನಿಗೆ ಬಲಿಯರ್ಪಿಸಲು ನಿರಾಕರಿಸಿದರು. ಇದು ಇಂದು ಸಾಧಾರಣಮಟ್ಟಿಗೆ, ಧ್ವಜವಂದನೆ ಮಾಡಲು ಅಥವಾ ನಿಷ್ಠೆಯ ಶಪಥವನ್ನು ತೆಗೆದುಕೊಳ್ಳಲು ನಿರಾಕರಿಸುವುದಕ್ಕೆ ಸಮಾನವಾಗಿದೆ.”​—ದೊಸ್‌ ಅಬೌಟ್‌ ಟು ಡೈ (1958) ಡ್ಯಾನಿಯಲ್‌ ಪಿ. ಮ್ಯಾನಿಕ್ಸ್‌ ಅವರಿಂದ, ಪುಟ 135.

ಪುನಃ ಒಮ್ಮೆ ಹೇಳುವುದಾದರೆ, ಯೆಹೋವನ ಸಾಕ್ಷಿಗಳು ಧ್ವಜವಂದನೆಯನ್ನು ಮಾಡಲು ನಿರಾಕರಿಸುವ ಮೂಲಕ ಯಾವುದೇ ಸರಕಾರ ಅಥವಾ ಅದರ ನಾಯಕರುಗಳಿಗೆ ಅಗೌರವವನ್ನು ತೋರಿಸಲು ಉದ್ದೇಶಿಸುವುದಿಲ್ಲ. ಅವರು ಸರಕಾರವನ್ನು ಪ್ರತಿನಿಧಿಸುವ ಒಂದು ವಿಗ್ರಹದ ಮುಂದೆ ಅಡ್ಡಬೀಳಲು ಅಥವಾ ಅದನ್ನು ವಂದಿಸಲು ಆರಾಧನೆಯ ಕ್ರಿಯೆಯನ್ನು ಮಾಡುವುದಿಲ್ಲ ಅಷ್ಟೇ. ಅವರ ಈ ನಿಲುವು, ಬೈಬಲ್‌ ಸಮಯಗಳಲ್ಲಿ ಮೂವರು ಹೀಬ್ರು ಯುವಕರು ತೆಗೆದುಕೊಂಡ ನಿಲುವಿಗೆ ಸಮಾನವಾಗಿದೆಯೆಂಬುದು ಅವರ ಅಭಿಪ್ರಾಯವಾಗಿದೆ. ಈ ಯುವಕರು, ಬಾಬೆಲಿನ ರಾಜನಾದ ನೆಬೂಕದ್ನೆಚ್ಚರನು ದೂರಾ ಬಯಲಿನಲ್ಲಿ ಕಟ್ಟಿಸಿದಂತಹ ವಿಗ್ರಹದ ಮುಂದೆ ಅಡ್ಡ ಬೀಳಲು ನಿರಾಕರಿಸಿದ್ದರು. (ದಾನಿಯೇಲ, ಅಧ್ಯಾಯ 3) ಆದುದರಿಂದ ಬೇರೆಲ್ಲರೂ ಧ್ವಜವಂದನೆ ಮಾಡುವಾಗ ಮತ್ತು ನಿಷ್ಠೆಯ ಶಪಥವನ್ನು ತೆಗೆದುಕೊಳ್ಳುವಾಗ, ಯೆಹೋವನ ಸಾಕ್ಷಿಗಳ ಮಕ್ಕಳು ತಮ್ಮ ಬೈಬಲ್‌ ಶಿಕ್ಷಿತ ಮನಸ್ಸಾಕ್ಷಿಗಳು ಹೇಳುವಂತೆ ನಡೆಯಲು ಕಲಿಸಲ್ಪಟ್ಟಿದ್ದಾರೆ. ಹೀಗಿರುವುದರಿಂದ, ಅವರು ಮೌನರಾಗಿದ್ದು ಗೌರವಪೂರ್ವಕವಾಗಿ ಇದರಲ್ಲಿ ಭಾಗವಹಿಸುವುದಿಲ್ಲ. ರಾಷ್ಟ್ರ ಗೀತೆಗಳು ಹಾಡಲ್ಪಟ್ಟಾಗ ಅಥವಾ ನುಡಿಸಲ್ಪಟ್ಟಾಗಲೂ ಅವರು ಅದರಲ್ಲಿ ಭಾಗವಹಿಸದಿರಲು ಸಹ ಇವೇ ಕಾರಣಗಳಾಗಿವೆ.

ಹೆತ್ತವರ ಹಕ್ಕು

ಈಗಿನಕಾಲದಲ್ಲಿ ಹೆಚ್ಚಿನ ದೇಶಗಳು, ಹೆತ್ತವರು ಮಕ್ಕಳಿಗೆ ತಮ್ಮ ನಂಬಿಕೆಗಳಿಗನುಸಾರ ಧಾರ್ಮಿಕ ಉಪದೇಶವನ್ನು ಕೊಡುವ ಹಕ್ಕನ್ನು ಮಾನ್ಯ​ಮಾಡುತ್ತವೆ. ಎಲ್ಲ ಧರ್ಮಗಳೂ ಈ ಹಕ್ಕನ್ನು ಬೆಂಬಲಿಸುತ್ತವೆ. ಉದಾಹರಣೆಗೆ, ಈಗಲೂ ಕ್ಯಾಥೊಲಿಕ್‌ ಚರ್ಚಿನಲ್ಲಿ ಈ ನ್ಯಾಯ ಜಾರಿಯಲ್ಲಿದೆ: “ಹೆತ್ತವರು ತಮ್ಮ ಮಕ್ಕಳಿಗೆ ಜೀವಕೊಟ್ಟವರಾಗಿರುವುದರಿಂದ, ಅವರನ್ನು ಶಿಕ್ಷಿತರನ್ನಾಗಿಸುವ ಕಟ್ಟುನಿಟ್ಟಾದ ಕರ್ತವ್ಯ ಅವರಿಗಿದೆ ಮಾತ್ರವಲ್ಲ ಹಾಗೆ ಮಾಡುವ ಹಕ್ಕೂ ಇದೆ; ಆದುದರಿಂದ ಚರ್ಚಿನ ಬೋಧನೆಗೆ ಹೊಂದಿಕೆಯಲ್ಲಿರುವ ಕ್ರೈಸ್ತ ಶಿಕ್ಷಣವನ್ನು ಹೆತ್ತವರು ತಮ್ಮ ಮಕ್ಕಳಿಗೆ ಪ್ರಧಾನವಾಗಿ ಒದಗಿಸುವುದು ಯೋಗ್ಯವಾಗಿದೆ.”​—ಕ್ಯಾನನ್‌ 226.

ಯೆಹೋವನ ಸಾಕ್ಷಿಗಳು ಕೂಡ ಇದಕ್ಕಿಂತ ಹೆಚ್ಚೇನನ್ನೂ ಕೇಳಿಕೊಳ್ಳುವುದಿಲ್ಲ. ತಮ್ಮ ಮಕ್ಕಳ ಕುರಿತು ಕಾಳಜಿವಹಿಸುವ ಹೆತ್ತವರೋಪಾದಿ, ಅವರು ತಮ್ಮ ಮಕ್ಕಳಲ್ಲಿ ನಿಜವಾದ ಕ್ರೈಸ್ತ ಮೌಲ್ಯಗಳನ್ನು ಬೇರೂರಿಸಲು ಪ್ರಯತ್ನಿಸುತ್ತಾರೆ ಮತ್ತು ನೆರೆಹೊರೆಯವರಿಗೋಸ್ಕರ ಪ್ರೀತಿ ಹಾಗೂ ಇತರರ ಸ್ವತ್ತುಗಳಿಗಾಗಿ ಗೌರವವನ್ನು ಅವರ ಮನಸ್ಸಿನಲ್ಲಿ ಅಚ್ಚೊತ್ತಿಸುತ್ತಾರೆ. ಎಫೆಸದಲ್ಲಿದ್ದ ಕ್ರೈಸ್ತರಿಗೆ ಅಪೊಸ್ತಲ ಪೌಲನು ಕೊಟ್ಟ ಈ ಸಲಹೆಯನ್ನು ಅನುಸರಿಸಲು ಅವರು ಬಯಸುತ್ತಾರೆ: “ಹೆತ್ತವರೇ ನಿಮ್ಮ ಮಕ್ಕಳಿಗೆ ಕೋಪ ಬರಿಸುವಂತಹ ರೀತಿಯಲ್ಲಿ ಅವರೊಂದಿಗೆ ವ್ಯವಹರಿಸಬೇಡಿರಿ. ಬದಲಿಗೆ, ಕ್ರೈಸ್ತ ಶಿಸ್ತು ಮತ್ತು ಉಪದೇಶವನ್ನು ಕೊಟ್ಟು ಅವರನ್ನು ಬೆಳೆಸಿರಿ.”​—ಎಫೆಸ 6:4, ಟುಡೇಸ್‌ ಇಂಗ್ಲಿಷ್‌ ವರ್ಷನ್‌.

ಧಾರ್ಮಿಕವಾಗಿ ವಿಭಜಿತವಾಗಿರುವ ಮನೆತನಗಳು

ಕೆಲವೊಂದು ಕುಟುಂಬಗಳಲ್ಲಿ ತಂದೆ ಅಥವಾ ತಾಯಿ, ಹೀಗೆ ಇಬ್ಬರಲ್ಲಿ ಒಬ್ಬರು ಮಾತ್ರ ಯೆಹೋವನ ಸಾಕ್ಷಿಯಾಗಿರುತ್ತಾರೆ. ಅಂತಹ ಸನ್ನಿವೇಶದಲ್ಲಿ, ಸಾಕ್ಷಿಯಾಗಿರದ ತಂದೆ/ತಾಯಿಗೆ ಸಹ ಮಕ್ಕಳಿಗೆ ತನ್ನ ಧಾರ್ಮಿಕ ನಂಬಿಕೆಗಳ ಕುರಿತು ಕಲಿಸುವ ಹಕ್ಕಿದೆಯೆಂಬುದನ್ನು ಸಾಕ್ಷಿಯಾಗಿರುವ ​ತಂದೆ/ತಾಯಿ ಮಾನ್ಯಮಾಡುವಂತೆ ಉತ್ತೇಜಿಸಲ್ಪಟ್ಟಿದ್ದಾರೆ. ವಿಭಿನ್ನ ಧಾರ್ಮಿಕ ದೃಷ್ಟಿಕೋನಗಳಿಗೆ ಒಡ್ಡಲ್ಪಡುವುದರಿಂದ ಮಕ್ಕಳ ಮೇಲೆ ಯಾವುದೇ ಕೆಟ್ಟ ಪರಿಣಾಮಗಳಾಗುವುದಿಲ್ಲ. * ಯಾಕೆಂದರೆ ವಾಸ್ತವದಲ್ಲಿ, ಎಲ್ಲ ಮಕ್ಕಳು ತಾವು ಯಾವ ಧರ್ಮವನ್ನು ಪಾಲಿಸುವೆವೆಂಬುದನ್ನು ಸ್ವತಃ ನಿರ್ಣಯಿಸಿಕೊಳ್ಳಬೇಕು. ಸಹಜವಾಗಿಯೇ, ಎಲ್ಲ ಯುವ ಜನರು ತಮ್ಮ ಹೆತ್ತವರ ಧಾರ್ಮಿಕ ತತ್ತ್ವಗಳನ್ನೇ ಪಾಲಿಸುವ ಆಯ್ಕೆಯನ್ನು ಮಾಡುವುದಿಲ್ಲ. ಅವರ ಹೆತ್ತವರು ಯೆಹೋವನ ಸಾಕ್ಷಿಗಳಾಗಿರಲಿ, ಇಲ್ಲದಿರಲಿ ಈ ಸಂಗತಿಯು ಸತ್ಯ.

ಮನಸ್ಸಾಕ್ಷಿಯ ಸ್ವಾತಂತ್ರ್ಯ​—ಮಕ್ಕಳ ಹಕ್ಕು

ಕ್ರೈಸ್ತ ಮನಸ್ಸಾಕ್ಷಿಗೆ ಯೆಹೋವನ ಸಾಕ್ಷಿಗಳು ತುಂಬ ಮಹತ್ವವನ್ನು ಕೊಡುತ್ತಾರೆಂದೂ ನಿಮಗೆ ತಿಳಿದಿರಬೇಕು. (ರೋಮಾಪುರ, ಅಧ್ಯಾಯ 14) ಒಬ್ಬ ಮಗುವಿಗೆ “ವಿಚಾರ, ಮನಸ್ಸಾಕ್ಷಿ ಮತ್ತು ಧರ್ಮದ ಸ್ವಾತಂತ್ರ್ಯ” ದ ಹಕ್ಕು ಇದೆ ಮತ್ತು “ತನ್ನ ಅಭಿಪ್ರಾಯವನ್ನು ಮುಚ್ಚುಮರೆಯಿಲ್ಲದೆ ತಿಳಿಸುವ, ಹಾಗೂ ತನ್ನ ಮೇಲೆ ಪ್ರಭಾವಬೀರಲಿರುವ ಯಾವುದೇ ವಿಷಯ ಅಥವಾ ಕಾರ್ಯವಿಧಾನದಲ್ಲಿ ಆ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳುವಂತೆ ಮಾಡುವ” ಹಕ್ಕಿದೆ ಎಂಬುದನ್ನು 1989 ರಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಿಂದ ಅಂಗೀಕೃತವಾಗಿರುವ ಮಕ್ಕಳ ಹಕ್ಕುಗಳ ಒಪ್ಪಂದವು ಅಂಗೀಕರಿಸಿತು.

ಮಕ್ಕಳಲ್ಲಿ ಒಬ್ಬರು ಇನ್ನೊಬ್ಬರಂತಿರುವುದಿಲ್ಲ. ಆದುದರಿಂದ, ಎಳೆಯ ಸಾಕ್ಷಿಗಳು ಅಥವಾ ಇತರ ವಿದ್ಯಾರ್ಥಿಗಳು, ಶಾಲೆಯಲ್ಲಿನ ನಿರ್ದಿಷ್ಟ ಚಟುವಟಿಕೆಗಳು ಮತ್ತು ನೇಮಕಗಳ ಕುರಿತಾಗಿ ಮಾಡುವ ನಿರ್ಣಯಗಳಲ್ಲಿ ಅಲ್ಪಸ್ವಲ್ಪ ವ್ಯತ್ಯಾಸಗಳನ್ನು ನೀವು ನಿರೀಕ್ಷಿಸಸಾಧ್ಯವಿದೆ. ಆದರೆ ನೀವು ಸಹ ಮನಸ್ಸಾಕ್ಷಿಯ ಸ್ವಾತಂತ್ರ್ಯದ ತತ್ತ್ವವನ್ನು ಸಮರ್ಥಿಸುತ್ತೀರೆಂದು ನಾವು ನಂಬುತ್ತೇವೆ.

^ ಪ್ಯಾರ. 18 ಅಂತರ್ಜಾತೀಯ ವಿವಾಹಗಳಲ್ಲಿ ಹುಟ್ಟಿರುವ ಮಕ್ಕಳ ಕುರಿತಾಗಿ, ಆಧುನಿಕ ಜಗತ್ತಿನಲ್ಲಿ ಯೆಹೂದಿ ಮಕ್ಕಳನ್ನು ಬೆಳೆಸುವುದು (ಇಂಗ್ಲಿಷ್‌) ಎಂಬ ತಮ್ಮ ಪುಸ್ತಕದಲ್ಲಿ ಸ್ಟೀವನ್‌ ಕಾರ್‌ ರೂಬನ್‌, ಪಿಎಚ್‌. ಡಿ., ಅವಲೋಕಿಸುವುದು: “ಸ್ವತಃ ಹೆತ್ತವರೇ ತಾವು ಏನಾಗಿದ್ದೇವೊ ಅದನ್ನು ಮುಚ್ಚಿಡುವಾಗ, ಗಲಿಬಿಲಿಗೊಂಡವರಾಗಿರುವಾಗ, ಗೋಪ್ಯಸ್ವಭಾವದವರಾಗಿರುವಾಗ ಮತ್ತು ಧಾರ್ಮಿಕ ವಿಷಯಗಳ ಕುರಿತು ಮಾತಾಡುವುದನ್ನು ತಪ್ಪಿಸಿಕೊಳ್ಳುವಾಗ ಮಕ್ಕಳಲ್ಲೂ ಗಲಿಬಿಲಿಯುಂಟಾಗುತ್ತದೆ. ಆದರೆ ಹೆತ್ತವರು ಮುಚ್ಚುಮರೆಯಿಲ್ಲದವರೂ, ಪ್ರಾಮಾಣಿಕರೂ, ತಮ್ಮ ಸ್ವಂತ ನಂಬಿಕೆಗಳು, ಮೌಲ್ಯಗಳು ಮತ್ತು ಹಬ್ಬಗಳ ಆಚರಣೆಗಳ ಕುರಿತು ಸುಸ್ಪಷ್ಟ ವಿಚಾರವುಳ್ಳವರಾಗಿರುವಾಗ, ಮಕ್ಕಳು ಸಹ ಒಂದು ರೀತಿಯ ಸುರಕ್ಷಿತ ಭಾವನೆಯೊಂದಿಗೆ ಮತ್ತು ಸ್ವಗೌರವದ ಪ್ರಜ್ಞೆಯೊಂದಿಗೆ ಒಂದು ಧಾರ್ಮಿಕ ಪರಿಸರದಲ್ಲಿ ಬೆಳೆಯುತ್ತಾರೆ. ಇದು ಒಟ್ಟಿನಲ್ಲಿ ಅವರ ಸ್ವಗೌರವ ಹಾಗೂ ಜಗತ್ತಿನಲ್ಲಿನ ಅವರ ಸ್ಥಾನದ ಕುರಿತಾದ ಅರಿವಿನ ​ಬೆಳವಣಿಗೆಗೆ ಅತ್ಯಾವಶ್ಯಕವಾಗಿದೆ.”