ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಧಾರ್ಮಿಕ ವೈವಿಧ್ಯತೆ ಒಡ್ಡುವಂತಹ ಸವಾಲು

ಧಾರ್ಮಿಕ ವೈವಿಧ್ಯತೆ ಒಡ್ಡುವಂತಹ ಸವಾಲು

ಒಬ್ಬ ಶಿಕ್ಷಕರೋಪಾದಿ ನೀವು ಧಾರ್ಮಿಕ ವೈವಿಧ್ಯತೆ ಎಂಬ ಒಂದು ಸವಾಲನ್ನು ಎದುರಿಸುತ್ತೀರಿ. ಆದರೆ ಹಿಂದಿನ ಶತಮಾನಗಳಲ್ಲಿದ್ದ ಶಿಕ್ಷಕರು ಅದನ್ನು ತೀರ ಅಪರೂಪವಾಗಿ ಎದುರಿಸಿದರು.

ಮಧ್ಯಯುಗಗಳಾದ್ಯಂತ ಯಾವುದೇ ಒಂದು ದೇಶದ ಎಲ್ಲ ಪ್ರಜೆಗಳೂ ಸಾಮಾನ್ಯವಾಗಿ ಒಂದೇ ಧರ್ಮವನ್ನು ಅನುಸರಿಸುತ್ತಿದ್ದರು. 19 ನೆಯ ಶತಮಾನದ ಅಂತ್ಯದಲ್ಲೂ ಯೂರೋಪ್‌ ಖಂಡಕ್ಕೆ ಕೇವಲ ಈ ಪ್ರಮುಖ ಧರ್ಮಗಳ ಪರಿಚಯವಿತ್ತು: ಪಶ್ಚಿಮದಲ್ಲಿ ಕ್ಯಾಥೊಲಿಕ್‌ ಮತ್ತು ಪ್ರಾಟೆಸ್ಟಂಟ್‌ ಧರ್ಮ, ಪೂರ್ವದಲ್ಲಿ ಈಸ್ಟರ್ನ್‌ ಆರ್ತೊಡಾಕ್ಸ್‌ ಕ್ರೈಸ್ತಮತ, ಇಸ್ಲಾಮ್‌ಮತ, ಮತ್ತು ಯೆಹೂದಿ ಮತ. ಆದರೆ ಇಂದು, ಧರ್ಮದಲ್ಲಿನ ವೈವಿಧ್ಯತೆಯು ಯೂರೋಪಿನಲ್ಲಿ ಮತ್ತು ಲೋಕದಾದ್ಯಂತ ಸರ್ವಸಾಮಾನ್ಯವಾಗಿಬಿಟ್ಟಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಹಿಂದಿನ ಕಾಲದಲ್ಲಿ ಎಂದೂ ಕೇಳಿಸಿಕೊಂಡಿರದಂತಹ ಧರ್ಮಗಳು ಇಂದು ಚೆನ್ನಾಗಿ ತಳವೂರಿಬಿಟ್ಟಿವೆ. ಇದಕ್ಕೆ ಕಾರಣ, ಒಂದೇ ಆ ದೇಶದ ಜನತೆಯೇ ಆ ಧರ್ಮಗಳನ್ನು ಸ್ವೀಕರಿಸಿಕೊಂಡಿದೆ ಇಲ್ಲವೇ ಆ ಧರ್ಮಗಳನ್ನು ವಲಸಿಗರು ಮತ್ತು ನಿರಾಶ್ರಿತರು ಪರಿಚಯಿಸಿದ್ದಾರೆ.

ಆದ್ದರಿಂದಲೇ ಇಂದು, ಆಸ್ಟ್ರೇಲಿಯ, ಬ್ರಿಟನ್‌, ಫ್ರಾನ್ಸ್‌, ಜರ್ಮನಿ ಮತ್ತು ಅಮೆರಿಕದಂತಹ ದೇಶಗಳಲ್ಲೂ ನಾವು ಅನೇಕ ಮುಸ್ಲಿಮರನ್ನು, ಬೌದ್ಧರನ್ನು ಮತ್ತು ಹಿಂದೂಗಳನ್ನು ನೋಡಬಹುದು. ಅದೇ ಸಮಯದಲ್ಲಿ ಕ್ರೈಸ್ತರಾಗಿರುವ ಯೆಹೋವನ ಸಾಕ್ಷಿಗಳು 230 ಕ್ಕಿಂತಲೂ ಹೆಚ್ಚಿನ ದೇಶಗಳಲ್ಲಿ ಸಕ್ರಿಯವಾಗಿ ತಮ್ಮ ಕೆಲಸವನ್ನು ನಡೆಸುತ್ತಿದ್ದಾರೆ. ಇಟಲಿ ಮತ್ತು ಸ್ಪೆಯ್ನ್‌ ದೇಶಗಳಲ್ಲಿರುವ ದೊಡ್ಡ ಧರ್ಮಗಳಲ್ಲಿ ಅವರು ಎರಡನೆಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. 13 ದೇಶ​ಗಳಲ್ಲಿ, ಅವರ ಸಕ್ರಿಯ ಸದಸ್ಯರ ಸಂಖ್ಯೆಗಳು 1,00,000 ಕ್ಕಿಂತಲೂ ಹೆಚ್ಚಿನದ್ದಾಗಿವೆ.​—“ ಯೆಹೋವನ ಸಾಕ್ಷಿಗಳು ಒಂದು ಜಗದ್ವ್ಯಾಪಕ ಧರ್ಮ” ಚೌಕವನ್ನು ನೋಡಿರಿ.

ಸ್ಥಳಿಕ ಧಾರ್ಮಿಕ ರೂಢಿಗಳಲ್ಲಿನ ವೈವಿಧ್ಯತೆಯು, ಶಿಕ್ಷಕನಿಗೆ ಸವಾಲುಗಳನ್ನೊಡ್ಡಬಹುದು. ಉದಾಹರಣೆಗೆ, ಜನಪ್ರಿಯವಾಗಿರುವ ಆಚರಣೆಗಳ ಕುರಿತು ಏಳಬಹುದಾದ ಕೆಲವೊಂದು ಮಹತ್ವಪೂರ್ಣ ಪ್ರಶ್ನೆಗಳು ಹೀಗಿವೆ: ಒಬ್ಬ ವಿದ್ಯಾರ್ಥಿಯ ಧರ್ಮವು ಯಾವುದೇ ಆಗಿರಲಿ, ಪ್ರತಿಯೊಬ್ಬರೂ ಎಲ್ಲ ಆಚರಣೆಗಳಲ್ಲಿ ಪಾಲ್ಗೊಳ್ಳುವಂತೆ ಅವನನ್ನು ಅಥವಾ ಅವಳನ್ನು ಬಲವಂತಪಡಿಸಬೇಕೊ? ಇಂತಹ ಆಚರಣೆಗಳಲ್ಲಿ ಏನೂ ತಪ್ಪಿಲ್ಲವೆಂದು ಹೆಚ್ಚಿನವರಿಗೆ ಅನಿಸಬಹುದು. ಆದರೆ ಅಲ್ಪಸಂಖ್ಯಾತರ ಗುಂಪಿಗೆ ಸೇರಿರುವ ಕುಟುಂಬಗಳ ಅಭಿಪ್ರಾಯಗಳಿಗೂ ಗೌರವ ನೀಡಲ್ಪಡಬೇಕಲ್ಲವೊ? ಇಲ್ಲಿ ಇನ್ನೊಂದು ಅಂಶವನ್ನೂ ಪರಿಗಣಿಸಬೇಕಾಗಿದೆ: ಎಲ್ಲಿ ಕಾನೂನು ಸರಕಾರದ ವ್ಯವಹಾರದಿಂದ ಧರ್ಮವನ್ನು ಪ್ರತ್ಯೇಕಿಸಿಡುತ್ತದೊ ಮತ್ತು ಎಲ್ಲಿ ಯಾವುದೇ ರೀತಿಯ ಧಾರ್ಮಿಕ ಬೋಧನೆಯು ಶಾಲೆಯ ಪಠ್ಯ​ಕ್ರಮದಲ್ಲಿ ಸೇರಿಸಲ್ಪಡಬಾರದೊ, ಅಂತಹ ದೇಶಗಳಲ್ಲಿ ಇಂತಹ ಆಚರಣೆಗಳನ್ನು ಶಾಲೆಯಲ್ಲಿ ಕಡ್ಡಾಯಗೊಳಿಸುವುದು, ಕಾನೂನಿಗೆ ಹೊಂದಿಕೆಯಲ್ಲಿರದಂತೆ ಕೆಲವರಿಗೆ ತೋರುವುದಲ್ಲವೊ?

ಜನ್ಮದಿನಾಚರಣೆಗಳು

ಯಾವುದೇ ರೀತಿಯ ಧಾರ್ಮಿಕ ಸಂಬಂಧಗಳಿರದಂತೆ ತೋರುವ ಆಚರಣೆಗಳ ವಿಷಯದಲ್ಲೂ ತಪ್ಪಭಿಪ್ರಾಯಗಳು ತಲೆದೋರಬಹುದು. ಅನೇಕ ಶಾಲೆ​ಗಳಲ್ಲಿ ಆಚರಿಸಲಾಗುವ ಜನ್ಮದಿನಗಳ ವಿಷಯದಲ್ಲಿ ಈ ಮಾತು ಸತ್ಯವಾಗಿದೆ. ಇತರರಿಗೆ ತಮ್ಮ ಜನ್ಮ​ದಿನವನ್ನು ಆಚರಿಸುವ ಹಕ್ಕಿದೆ ಮತ್ತು ಈ ಹಕ್ಕನ್ನು ಯೆಹೋವನ ಸಾಕ್ಷಿಗಳು ಗೌರವಿಸುತ್ತಾರೆ. ಆದರೆ ಅವರು ಸ್ವತಃ ಅಂತಹ ಆಚರಣೆಗಳಲ್ಲಿ ಪಾಲ್ಗೊಳ್ಳದೇ ಇರುವ ಆಯ್ಕೆಯನ್ನು ಮಾಡುತ್ತಾರೆಂಬುದು ನಿಮಗೆ ಖಂಡಿತವಾಗಿಯೂ ತಿಳಿದಿರಬಹುದು. ಆದರೆ ಅವರು ಮತ್ತು ಅವರ ಮಕ್ಕಳು ಅಂತಹ ಆಚರಣೆಗಳಲ್ಲಿ ಏಕೆ ಪಾಲ್ಗೊಳ್ಳುವುದಿಲ್ಲವೆಂಬ ಕಾರಣಗಳು ನಿಮಗೆ ​ತಿಳಿದಿರಲಿಕ್ಕಿಲ್ಲ.

ಫ್ರಾನ್ಸ್‌ ದೇಶದಲ್ಲಿ ವ್ಯಾಪಕವಾಗಿ ವಿತರಿಸಲ್ಪಟ್ಟಿರುವ ಲೇ ಲಿವ್ರೆ ಡೇಸ್‌ ರಿಲಿಜನ್ಸ್‌ (ಧರ್ಮಗಳ ಪುಸ್ತಕ) ಎಂಬ ವಿಶ್ವಕೋಶವು, ಜನ್ಮದಿನಾಚರಣೆಯನ್ನು ಒಂದು ಸಂಸ್ಕಾರವೆಂದು ಕರೆಯುತ್ತದೆ ಮತ್ತು ಅದನ್ನು “ಐಹಿಕ ಸಂಸ್ಕಾರಗಳ” ಪಟ್ಟಿಯಲ್ಲಿ ಸೇರಿಸುತ್ತದೆ. ಇಂದು ಜನ್ಮದಿನಾಚರಣೆಗಳನ್ನು ಒಂದು ಹಾನಿರಹಿತ ಐಹಿಕ ಪದ್ಧತಿ​ಯೆಂದು ಪರಿಗಣಿಸಲಾಗುತ್ತದಾದರೂ, ವಾಸ್ತವದಲ್ಲಿ ಅದಕ್ಕೆ ವಿಧರ್ಮಿ ಮೂಲಗಳಿವೆ.

ದ ಎನ್‌ಸೈಕ್ಲೊಪೀಡಿಯ ಅಮೆರಿಕಾನಾ (1991 ಸಂಪುಟ) ತಿಳಿಸುವುದು: “ಪ್ರಾಚೀನಕಾಲದ ಈಜಿಪ್ಟ್‌, ಗ್ರೀಸ್‌, ರೋಮ್‌ ಮತ್ತು ಪರ್ಷಿಯ ದೇಶಗಳಲ್ಲಿ, ದೇವತೆಗಳು, ರಾಜರುಗಳು ಮತ್ತು ಗಣ್ಯವ್ಯಕ್ತಿಗಳ ಜನ್ಮದಿನಗಳನ್ನು ಆಚರಿಸಲಾಗುತ್ತಿತ್ತು.” ಇದರ ಮೂಲಭೂತ ಕಾರಣವನ್ನು ರಾಲ್ಫ್‌ ಮತ್ತು ಆ್ಯಡೆಲಿನ್‌ ಲಿಂಟನ್‌ ಎಂಬ ಲೇಖಕರು ತಿಳಿಸುತ್ತಾರೆ. ಜನ್ಮದಿನಗಳ ಸಂಪ್ರದಾಯ (ಇಂಗ್ಲಿಷ್‌) ಎಂಬ ಅವರ ಪುಸ್ತಕದಲ್ಲಿ ಹೀಗೆ ಬರೆಯುತ್ತಾರೆ: “ಮೆಸಪೊಟೇಮಿಯ ಮತ್ತು ಈಜಿಪ್ಟ್‌ ದೇಶಗಳು ನಾಗರಿಕತೆಯ ತೊಟ್ಟಿಲುಗಳಾಗಿದ್ದವು ಮಾತ್ರವಲ್ಲ, ಜನರು ತಮ್ಮ ಜನ್ಮದಿನಗಳನ್ನು ನೆನಪಿನಲ್ಲಿಟ್ಟುಕೊಂಡು ವಿಶೇಷ ರೀತಿಯಲ್ಲಿ ಸನ್ಮಾನಿಸುತ್ತಿದ್ದ ಪ್ರಥಮ ದೇಶಗಳೂ ಆಗಿದ್ದವು. ಪ್ರಾಚೀನ ಸಮಯಗಳಲ್ಲಿ ಜನ್ಮದಿನಗಳ ದಾಖಲೆಗಳನ್ನಿಡುವುದು ಅತಿ ಪ್ರಾಮುಖ್ಯವಾಗಿತ್ತು. ಇದಕ್ಕೆ ಪ್ರಮುಖ ಕಾರಣವೇನೆಂದರೆ, ಜಾತಕ ಬರೆಯಲು ಜನನ ತಾರೀಖು ಅತ್ಯಾವಶ್ಯಕವಾಗಿತ್ತು.” ಈ ರೀತಿಯಲ್ಲಿ ಜನ್ಮದಿನಗಳಿಗೆ ಜ್ಯೋತಿಶಾಸ್ತ್ರದೊಂದಿಗೆ ಈ ನೇರವಾದ ಸಂಬಂಧವಿರುವುದರಿಂದ, ಜ್ಯೋತಿಶಾಸ್ತ್ರದಿಂದ ದೂರವಿರುವ ಜನರು ಜನ್ಮದಿನಾಚರಣೆಗಳಲ್ಲಿ ಒಳಗೂಡುವುದಿಲ್ಲ. ಯಾಕೆಂದರೆ ಬೈಬಲ್‌ ಜ್ಯೋತಿಶಾಸ್ತ್ರವನ್ನು ಖಂಡಿಸುತ್ತದೆ.​—ಯೆಶಾಯ 47:​13-15.

ಆದುದರಿಂದ, ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲೊಪೀಡಿಯ ವು ಈ ಮುಂದಿನ ವಿಷಯವನ್ನು ತಿಳಿಸುತ್ತಿರುವುದು ಆಶ್ಚರ್ಯಗೊಳಿಸುವ ಸಂಗತಿಯಾಗಿರುವುದಿಲ್ಲ. ಅದೇನೆಂದರೆ, “ಆರಂಭದ ಕ್ರೈಸ್ತರು ಅವನ [ಕ್ರಿಸ್ತನ] ಜನನವನ್ನು ಆಚರಿಸಲಿಲ್ಲ, ಯಾಕೆಂದರೆ ಒಬ್ಬ ವ್ಯಕ್ತಿಯ ಜನ್ಮದಿನವನ್ನು ಆಚರಿಸುವುದನ್ನು ಅವರು ಒಂದು ವಿಧರ್ಮಿ ಪದ್ಧತಿಯಾಗಿ ಪರಿಗಣಿಸುತ್ತಿದ್ದರು.”​—ಸಂಪುಟ 3, ಪುಟ 416.

ಕೊಡಲ್ಪಟ್ಟಿರುವ ಈ ಎಲ್ಲ ಮಾಹಿತಿಯನ್ನು ತಿಳಿದವರಾಗಿ, ಯೆಹೋವನ ಸಾಕ್ಷಿಗಳು ಜನ್ಮದಿನದ ಸಂಭ್ರಮಗಳಲ್ಲಿ ಪಾಲ್ಗೊಳ್ಳದಿರುವ ಆಯ್ಕೆಯನ್ನು ಮಾಡುತ್ತಾರೆ. ಹೌದು, ಒಂದು ಮಗುವಿನ ಜನನವು ಖಂಡಿತವಾಗಿಯೂ ಸಂತೋಷದ ಘಟನೆಯಾಗಿದೆ. ತಮ್ಮ ಮಕ್ಕಳು ಪ್ರತಿ ವರ್ಷ ಬೆಳೆಯುತ್ತಿರುವುದನ್ನು ನೋಡಿ ಎಲ್ಲ ಹೆತ್ತವರು ಸ್ವಾಭಾವಿಕವಾಗಿಯೇ ಹರ್ಷಿಸುತ್ತಾರೆ. ಯೆಹೋವನ ಸಾಕ್ಷಿಗಳು ಕೂಡ ತಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಉಡುಗೊರೆಗಳನ್ನು ಕೊಡುವ ಮೂಲಕ ಮತ್ತು ಜೊತೆಯಾಗಿ ಸಮಯವನ್ನು ಕಳೆಯುವ ಮೂಲಕ ಅವರ ಕಡೆಗಿರುವ ತಮ್ಮ ಪ್ರೀತಿಯನ್ನು ಪ್ರದರ್ಶಿಸುತ್ತಾರೆ. ಆದರೆ ಅವರು ಜನ್ಮದಿನವನ್ನು ಬಿಟ್ಟು ವರ್ಷದಾದ್ಯಂತ ಬೇರೆ ಸಮಯಗಳಲ್ಲಿ ಹಾಗೆ ಮಾಡಲು ಇಷ್ಟಪಡುತ್ತಾರೆ, ಯಾಕೆಂದರೆ ಅವರು ಜನ್ಮದಿನಾಚರಣೆಗಳ ವಿಧರ್ಮಿ ಮೂಲವನ್ನು ಮನಸ್ಸಿನಲ್ಲಿಟ್ಟುಕೊಳ್ಳುತ್ತಾರೆ.​—ಲೂಕ 15:​22-25; ಅ. ಕೃತ್ಯಗಳು 20:35.

ಕ್ರಿಸ್‌ಮಸ್‌

ಕ್ರಿಸ್‌ಮಸ್‌ ಹಬ್ಬವನ್ನು ಲೋಕವ್ಯಾಪಕವಾಗಿ, ಮತ್ತು ಅನೇಕ ಕ್ರೈಸ್ತೇತರ ದೇಶಗಳಲ್ಲೂ ಆಚರಿಸಲಾಗುತ್ತದೆ. ಈ ಹಬ್ಬವನ್ನು ಅಧಿಕ ಕ್ರೈಸ್ತಧರ್ಮಗಳು ಆಚರಿಸುತ್ತಿರುವುದರಿಂದ, ಯೆಹೋವನ ಸಾಕ್ಷಿಗಳು ಇದನ್ನು ಆಚರಿಸದೇ ಇರುವುದನ್ನು ನೋಡುವುದು ಸ್ವಲ್ಪ ಆಶ್ಚರ್ಯವನ್ನುಂಟುಮಾಡುತ್ತದೆ. ಅವರು ಅದನ್ನು ಆಚರಿಸದಿರಲು ಕಾರಣವೇನು?

ಯೇಸುವಿನ ಜನ್ಮದಿನವನ್ನು ಒಂದು ರೋಮನ್‌ ವಿಧರ್ಮಿ ಹಬ್ಬದೊಂದಿಗೆ ತಾಳೆಬೀಳುವಂತೆ, ಡಿಸೆಂಬರ್‌ 25 ಎಂದು ಮನಬಂದಂತೆ ನಿಗದಿಪಡಿಸಲಾಯಿತೆಂದು ಅನೇಕ ವಿಶ್ವಕೋಶಗಳು ಸ್ಪಷ್ಟವಾಗಿ ತಿಳಿಸುತ್ತವೆ. ಬೇರೆ ಬೇರೆ ರೆಫರನ್ಸ್‌ ಪುಸ್ತಕಗಳ ಈ ಮುಂದಿನ ಹೇಳಿಕೆಗಳಿಗೆ ಗಮನಕೊಡಿರಿ:

“ಕ್ರಿಸ್ತನ ಜನನದ ತಾರೀಖು ಯಾರಿಗೂ ತಿಳಿದಿಲ್ಲ. ಸುವಾರ್ತಾ ಪುಸ್ತಕಗಳು, ಆ ದಿನವನ್ನಾಗಲಿ ಆ ತಿಂಗಳನ್ನಾಗಲಿ ಸೂಚಿಸುವುದೇ ಇಲ್ಲ.”​—ನ್ಯೂ ಕ್ಯಾಥೊಲಿಕ್‌ ಎನ್‌ಸೈಕ್ಲೊಪೀಡಿಯಾ, ಸಂಪುಟ III, ಪುಟ 656.

“ಯೂರೋಪಿನಲ್ಲಿ ಈಗ ಚಾಲ್ತಿಯಲ್ಲಿರುವ ಅಥವಾ ಹಿಂದಿನ ಕಾಲಗಳಲ್ಲಿ ದಾಖಲಿಸಿಡಲ್ಪಟ್ಟಿರುವ ಕ್ರಿಸ್‌ಮಸ್‌ ಪದ್ಧತಿಗಳಲ್ಲಿ ಹೆಚ್ಚಿನವು, ನಿಜವಾಗಿ ಕ್ರೈಸ್ತ ಪದ್ಧತಿಗಳಾಗಿಲ್ಲ. ಅದಕ್ಕೆ ಬದಲು ಅವು, ಚರ್ಚು ತದನಂತರ ಸೇರಿಸಿಕೊಂಡಿರುವ ಅಥವಾ ಸಹಿಸಿಕೊಂಡಿರುವ ವಿಧರ್ಮಿ ಪದ್ಧತಿಗಳಾಗಿವೆ. . . . ಕ್ರಿಸ್‌ಮಸ್‌ ಸಮಯದ ಹೆಚ್ಚಿನ ಉತ್ಸವಭರಿತ ಪದ್ಧತಿಗಳಿಗೆ ಮಾದರಿಯು, ರೋಮಿನ ಸಾಟರ್ನೇಲಿಯ ಹಬ್ಬವಾಗಿತ್ತು.”​—ಎನ್‌ಸೈಕ್ಲೊಪೀಡಿಯಾ ಆಫ್‌ ರಿಲಿಜನ್‌ ಆ್ಯಂಡ್‌ ಎಥಿಕ್ಸ್‌ (ಎಡಿನ್‌ಬರ್ಗ್‌, 1910) ಜೇಮ್ಸ್‌ ಹೇಸ್ಟಿಂಗ್ಸ್‌ ರಿಂದ ಸಂಪಾದಿತ. ಸಂಪುಟ III, ಪುಟಗಳು 608-9.

“ಕ್ರಿಸ್‌ಮಸ್‌ ಹಬ್ಬವು ನಾಲ್ಕನೆಯ ಶತಮಾನದಂದಿನಿಂದ ಎಲ್ಲ ಕ್ರೈಸ್ತ ಚರ್ಚುಗಳಲ್ಲಿ ಡಿಸೆಂಬರ್‌ 25 ರಂದು ಆಚರಿಸಲ್ಪಟ್ಟಿದೆ. ಆ ಶತಮಾನದಲ್ಲಿ, ‘ಸೂರ್ಯ ಜಯಂತಿ (ಲ್ಯಾಟಿನ್‌ ಭಾಷೆಯಲ್ಲಿ, ನತಾಲಾ)’ ಎಂದು ಕರೆಯಲ್ಪಡುತ್ತಿದ್ದ ವಿಧರ್ಮಿಗಳ ಮಕರ ಸಂಕ್ರಾಂತಿ ಹಬ್ಬದ ತಾರೀಖು ಅದಾಗಿತ್ತು. ಏಕೆಂದರೆ ಅಂದಿನಿಂದ ದಿನಗಳು ಹೆಚ್ಚು ದೀರ್ಘವಾಗಲಾರಂಭಿಸಿದಂತೆ, ಸೂರ್ಯನು ಪುನಃ ಹುಟ್ಟಿಬಂದಿರುವಂತೆ ತೋರುತ್ತಿತ್ತು. ರೋಮ್‌ನಲ್ಲಿ ಚರ್ಚು, ಈ ತುಂಬ ಜನಪ್ರಿಯವಾದ ಪದ್ಧತಿಗೆ . . . ಒಂದು ಹೊಸ ಅರ್ಥವನ್ನು ಕೊಡುವ ಮೂಲಕ ಅದನ್ನು ಸ್ವೀಕರಿಸಿ​ಕೊಂಡಿತು.”​—ಎನ್‌ಸೈಕ್ಲೊಪೀಡಿಯ ಯೂನಿವರ್ಸಾಲಿಸ್‌, 1968, (ಫ್ರೆಂಚ್‌) ಸಂಪುಟ 19, ಪುಟ 1375.

“ಸಾಲ್‌ ಇನ್‌ವಿಕ್ಟಸ್‌ (ಮಿತ್ರಾ) ನ ವಿಧರ್ಮಿ ಆಚರಣೆಗಳು ಕ್ರಿಸ್‌ಮಸ್‌ ಹಬ್ಬದ ಬೆಳವಣಿಗೆಯನ್ನು ತುಂಬ ಪ್ರಭಾವಿಸಿದವು. ಆದರೆ ಡಿಸೆಂಬರ್‌ 25 ಮಕರ ಸಂಕ್ರಾಂತಿಯ ದಿನವಾಗಿದ್ದು, ಅದನ್ನು ಕ್ರಿಸ್ತನ ಮೂಲಕ ಜಗತ್ತಿಗೆ ಪಸರಿಸಿದ ಬೆಳಕಿನೊಂದಿಗೆ ಜೋಡಿಸಲಾಯಿತು, ಮತ್ತು ಹೀಗೆ ಸಾಲ್‌ ಇನ್‌ವಿಕ್ಟಸ್‌ ನ ಸಂಕೇತವನ್ನು ಕ್ರಿಸ್ತನಿಗೆ ಕೊಡಲಾಯಿತು.”​—ಬ್ರೋಖಾಸ್‌ ಎನ್‌ಜೈಕ್ಲೊಪೇಡಿ, (ಜರ್ಮನ್‌) ಸಂಪುಟ 20, ಪುಟ 125.

ಕ್ರಿಸ್‌ಮಸ್‌ ಕುರಿತಾದ ಸತ್ಯಾಂಶಗಳನ್ನು ತಿಳಿದು​ಕೊಂಡಾಗ, ಕೆಲವರು ಹೇಗೆ ಪ್ರತಿಕ್ರಿಯಿಸಿದ್ದಾರೆ? ದ ಎನ್‌ಸೈಕ್ಲೊಪೀಡಿಯ ಬ್ರಿಟಾನಿಕ ಗಮನಿಸುವುದು: “ಅದು [ಕ್ರಿಸ್‌ಮಸ್‌] ಒಂದು ವಿಧರ್ಮಿ ಹಬ್ಬವಾಗಿದೆ ಎಂಬ ಕಾರಣಕ್ಕಾಗಿ 1644 ರಲ್ಲಿ ಇಂಗ್ಲೆಂಡಿನ ಪ್ಯೂರಿಟನರು (ಧರ್ಮಶುದ್ಧಿವಾದಿಗಳು) ಪಾರ್ಲಿಮೆಂಟಿನ ಒಂದು ಕಟ್ಟಳೆಯ ಮೂಲಕ ಆ ದಿನದಂದು ಮೋಜುಮಾಡುವಿಕೆ ಅಥವಾ ಧಾರ್ಮಿಕ ಆರಾಧನಾ ಸಂಸ್ಕಾರಗಳನ್ನು ನಿಷೇಧಿಸಿದರು ಮತ್ತು ಆ ದಿನ ಉಪವಾಸ ಮಾಡಬೇಕೆಂದು ಆಜ್ಞೆಹೊರಡಿಸಿದರು. II ನೆಯ ಚಾರ್ಲ್ಸ್‌ ಆ ಉತ್ಸವಗಳನ್ನು ಪುನಃ ಆರಂಭಿಸಿದನು, ಆದರೆ ಸ್ಕಾಟ್‌ಲೆಂಡಿನವರು, ಪ್ಯೂರಿಟನರ ಅಭಿಪ್ರಾಯಕ್ಕೆ ಅಂಟಿಕೊಂಡರು.” ಆರಂಭದ ಕ್ರೈಸ್ತರು ಕ್ರಿಸ್‌ಮಸ್‌ ಹಬ್ಬವನ್ನು ಆಚರಿಸಲಿಲ್ಲ ಮತ್ತು ಇಂದು ಯೆಹೋವನ ಸಾಕ್ಷಿಗಳು ಕೂಡ ಅದನ್ನು ಆಚರಿಸುವುದಿಲ್ಲ ಅಥವಾ ಕ್ರಿಸ್‌ಮಸ್‌ ಹಬ್ಬದೊಂದಿಗೆ ಸಂಬಂಧವಿರುವ ಚಟುವಟಿಕೆಗಳಲ್ಲಿ ಸಹ ಭಾಗವಹಿಸುವುದಿಲ್ಲ.

ಆದರೆ ಉಡುಗೊರೆಗಳನ್ನು ಕೊಡುವುದರ ಕುರಿತು ಅಥವಾ ಬೇರೆ ಸಂದರ್ಭಗಳಲ್ಲಿ ಒಂದು ಒಳ್ಳೆಯ ಊಟಕ್ಕಾಗಿ ಬಂಧುಬಳಗದವರನ್ನು ಆಮಂತ್ರಿಸುವುದರ ಕುರಿತು ಬೈಬಲ್‌ ಒಳ್ಳೆಯ ಅಭಿಪ್ರಾಯವನ್ನು ಕೊಡುತ್ತದೆ. ಮಕ್ಕಳು ಕೇವಲ ಅವರಿಂದ ನಿರೀಕ್ಷಿಸಲ್ಪಟ್ಟಾಗ ಮಾತ್ರ ಉಡುಗೊರೆಗಳನ್ನು ಕೊಡುವುದರ ಬದಲಿಗೆ ನಿಜವಾಗಿ ಉದಾರಭಾವದವರಾಗಿರಲು ಹೆತ್ತವರು ಅವರಿಗೆ ತರಬೇತಿಯನ್ನು ನೀಡುವಂತೆ ಬೈಬಲ್‌ ಉತ್ತೇಜಿಸುತ್ತದೆ. (ಮತ್ತಾಯ 6:​2, 3) ಯೆಹೋವನ ಸಾಕ್ಷಿಗಳ ಮಕ್ಕಳು ಸಹಿಷ್ಣುತೆಯುಳ್ಳವರೂ ಗೌರವವನ್ನು ತೋರಿಸುವವರೂ ಆಗಿರುವಂತೆ ಕಲಿಸಲಾಗುತ್ತದೆ. ಇದರಲ್ಲಿ, ಕ್ರಿಸ್‌ಮಸ್‌ ಹಬ್ಬವನ್ನು ಆಚರಿಸಲು ಇತರರಿಗಿರುವ ಹಕ್ಕನ್ನು ಅವರು ಅಂಗೀಕರಿಸುವುದೂ ಸೇರಿರುತ್ತದೆ. ಮತ್ತು ಅವರು ಕ್ರಿಸ್‌ಮಸ್‌ ಆಚರಣೆಗಳಲ್ಲಿ ಭಾಗವಹಿಸದೇ ಇರಲು ಮಾಡಿರುವ ನಿರ್ಣಯವನ್ನು ಇತರರು ಗೌರವಿಸುವಾಗ, ಅವರದನ್ನು ಗಣ್ಯಮಾಡುತ್ತಾರೆ.

ಬೇರೆ ಆಚರಣೆಗಳು

ಬ್ರಸಿಲ್‌ ದೇಶದಲ್ಲಿ ಜೂನ್‌ ಹಬ್ಬಗಳು, ಫ್ರಾನ್ಸ್‌ ದೇಶದಲ್ಲಿ ಎಫಿಫಾನಿ ಹಬ್ಬ, ಜರ್ಮನಿಯಲ್ಲಿ ಕಾರ್ನಿವಲ್‌ ಹಬ್ಬ, ಜಪಾನ್‌ ದೇಶದಲ್ಲಿ ಸೆಟ್ಸೂಬನ್‌, ಮತ್ತು ಅಮೆರಿಕದಲ್ಲಿ ಹಾಲೊವೀನ್‌ ಹಬ್ಬವನ್ನು ಆಚರಿಸಲಾಗುತ್ತದೆ. ಇಂತಹ ಹಬ್ಬಗಳ ಸಮಯದಲ್ಲಿ, ಅಥವಾ ವಿವಿಧ ದೇಶಗಳಲ್ಲಿ ಶಾಲೆಯಲ್ಲಿ ಆಚರಿಸಲಾಗುವ ಬೇರಾವುದೇ ಧಾರ್ಮಿಕ ಇಲ್ಲವೇ ಸ್ವಲ್ಪವೇ ಧಾರ್ಮಿಕ ಸ್ವರೂಪವುಳ್ಳ ಹಬ್ಬಗಳ ಸಮಯದಲ್ಲಿ ಯೆಹೋವನ ಸಾಕ್ಷಿಗಳ ನಿಲುವು ಒಂದೇ ರೀತಿಯದ್ದಾಗಿರುತ್ತದೆ. ಈ ಹಬ್ಬಗಳು ಮತ್ತು ಇಲ್ಲಿ ಉಲ್ಲೇಖಿಸಲ್ಪಟ್ಟಿರದ ಇನ್ನಿತರ ಆಚರಣೆಗಳ ಸಂಬಂಧದಲ್ಲಿ ನಿಮಗಿರಬಹುದಾದ ಯಾವುದೇ ಪ್ರಶ್ನೆಗಳಿಗೆ, ಸಾಕ್ಷಿಗಳಾಗಿರುವ ಹೆತ್ತವರು ಅಥವಾ ಅವರ ಮಕ್ಕಳು ಉತ್ತರಗಳನ್ನು ಕೊಡಲು ಖಂಡಿತವಾಗಿಯೂ ಸಂತೋಷಪಡುವರು.