ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಶಿಕ್ಷಣದ ಬಗ್ಗೆ ಯೆಹೋವನ ಸಾಕ್ಷಿಗಳಿಗಿರುವ ಅಭಿಪ್ರಾಯ

ಶಿಕ್ಷಣದ ಬಗ್ಗೆ ಯೆಹೋವನ ಸಾಕ್ಷಿಗಳಿಗಿರುವ ಅಭಿಪ್ರಾಯ

ಬೇರೆಲ್ಲ ಹೆತ್ತವರಂತೆ, ಯೆಹೋವನ ಸಾಕ್ಷಿಗಳಾಗಿರುವ ಹೆತ್ತವರು ಸಹ ತಮ್ಮ ಮಕ್ಕಳ ಭವಿಷ್ಯತ್ತಿನ ಕುರಿತಾಗಿ ಆಸಕ್ತರಾಗಿದ್ದಾರೆ. ಈ ಕಾರಣದಿಂದಲೇ ಅವರು ಶಿಕ್ಷಣಕ್ಕೆ ತುಂಬ ಮಹತ್ವವನ್ನು ಕೊಡುತ್ತಾರೆ. “ಶಿಕ್ಷಣವು ಜನರನ್ನು ಸಮಾಜದ ಉಪಯುಕ್ತ ಸದಸ್ಯರನ್ನಾಗಿ ಮಾಡಬೇಕು. ತಮ್ಮ ಸಾಂಸ್ಕೃತಿಕ ಪರಂಪರೆಗಾಗಿ ಗಣ್ಯತೆಯನ್ನು ಬೆಳೆಸಿಕೊಳ್ಳಲು ಮತ್ತು ಹೆಚ್ಚು ತೃಪ್ತಿದಾಯಕ ಜೀವಿತವನ್ನು ನಡೆಸಲಿಕ್ಕಾಗಿಯೂ ಅದು ಸಹಾಯಮಾಡಬೇಕು.”

ಈ ಉದ್ಧರಣೆಯನ್ನು ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲೊಪೀಡಿಯ ದಿಂದ ತೆಗೆಯಲಾಗಿದೆ. ಅದರಲ್ಲಿ ಸೂಚಿಸಲ್ಪಟ್ಟಿರುವಂತೆ, ಶಾಲಾ ಶಿಕ್ಷಣದ ಒಂದು ಮುಖ್ಯ ಗುರಿಯು, ಮಕ್ಕಳನ್ನು ದೈನಂದಿನ ​ಜೀವಿತಕ್ಕಾಗಿ ತರಬೇತಿಗೊಳಿಸುವುದೇ ಆಗಿದೆ. ಈ ತರಬೇತಿ​ಯಲ್ಲಿ, ಮುಂದೆ ಎಂದಾದರೂ ಅವರಿಗೆ ಒಂದು ಕುಟುಂಬವಿರುವಲ್ಲಿ ಅದರ ಅಗತ್ಯಗಳನ್ನು ಪೂರೈಸಲಿಕ್ಕಾಗಿ ದುಡಿಯುವಂತೆ ಅವರನ್ನು ಶಕ್ತಗೊಳಿಸುವುದೂ ಸೇರಿರುತ್ತದೆ. ಇದೊಂದು ಪವಿತ್ರ ಕರ್ತವ್ಯವಾಗಿದೆಯೆಂದು ಯೆಹೋವನ ಸಾಕ್ಷಿಗಳು ನಂಬುತ್ತಾರೆ. ಏಕೆಂದರೆ ಬೈಬಲ್‌ ತಾನೇ ಹೀಗೆ ಹೇಳುತ್ತದೆ: “ಯಾವನಾದರೂ ಸ್ವಂತ ಜನರನ್ನು, ವಿಶೇಷವಾಗಿ ತನ್ನ ಮನೆಯವರನ್ನು ಸಂರಕ್ಷಿಸದೆಹೋದರೆ ಅವನು ಕ್ರಿಸ್ತನಂಬಿಕೆಯನ್ನು ತಿರಸ್ಕರಿಸಿದವನೂ ನಂಬದವನಿಗಿಂತ ಕಡೆಯಾದವನೂ ಆಗಿದ್ದಾನೆ.” (1 ತಿಮೊಥೆಯ 5:8) ಮಕ್ಕಳು ಶಾಲೆಯಲ್ಲಿ ಕಲಿಯುವ ವರ್ಷಗಳಲ್ಲಿ, ಮುಂದೊಂದು ದಿನ ಅವರು ತಮ್ಮ ಜೀವನದಲ್ಲಿ ​ಹೆಗಲಿಗೇರಿಸಲಿರುವ ಜವಾಬ್ದಾರಿಗಳಿಗಾಗಿ ಸಿದ್ಧರಾಗುತ್ತಾರೆ. ಆದುದರಿಂದ, ಶಿಕ್ಷಣವನ್ನು ತುಂಬ ಗಂಭೀರವಾಗಿ ತೆಗೆದು​ಕೊಳ್ಳಬೇಕೆಂದು ಯೆಹೋವನ ಸಾಕ್ಷಿಗಳಿಗೆ ​ಅನಿಸುತ್ತದೆ.

“ಶಿಕ್ಷಣವು ಜನರನ್ನು ಸಮಾಜದ ಉಪಯುಕ್ತ ಸದಸ್ಯರನ್ನಾಗಿ ಮಾಡಬೇಕು. ತಮ್ಮ ಸಾಂಸ್ಕೃತಿಕ ಪರಂಪರೆಗಾಗಿ ಗಣ್ಯತೆಯನ್ನು ಬೆಳೆಸಿಕೊಳ್ಳಲು ಮತ್ತು ಹೆಚ್ಚು ತೃಪ್ತಿದಾಯಕ ಜೀವಿತವನ್ನು ನಡೆಸಲಿಕ್ಕಾಗಿಯೂ ಅದು ಸಹಾಯಮಾಡಬೇಕು.”​—ದ ವರ್ಲ್ಡ್‌ ಬುಕ್‌ ಎನ್‌ಸೈಕ್ಲೊಪೀಡಿಯ

“ನೀವು ಯಾವ ಕೆಲಸವನ್ನು ಮಾಡಿದರೂ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೆ ಕರ್ತನಿಗೋಸ್ಕರವೇ ಎಂದು ಮನಃಪೂರ್ವಕವಾಗಿ ಮಾಡಿರಿ” ಎಂಬ ಬೈಬಲ್‌ ಆಜ್ಞೆಯನ್ನು ಪಾಲಿಸಲು ಸಾಕ್ಷಿಗಳು ಪ್ರಯತ್ನಿಸುತ್ತಾರೆ. (ಕೊಲೊಸ್ಸೆ 3:23) ಈ ತತ್ವವು ದೈನಂದಿನ ಜೀವಿತದ ಎಲ್ಲ ಕ್ಷೇತ್ರಗಳಿಗೂ, ಅಂದರೆ ಶಾಲೆಗೂ ಅನ್ವಯಿಸುತ್ತದೆ. ಹೀಗಿರುವುದರಿಂದ, ತಮ್ಮ ಮಕ್ಕಳು ಶ್ರದ್ಧೆಯಿಂದ ಅಭ್ಯಾಸಮಾಡಿ, ತಮಗೆ ಶಾಲೆಯಲ್ಲಿ ಕೊಡಲ್ಪಡುವ ಕೆಲಸಗಳನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಸಾಕ್ಷಿಗಳು ಪ್ರೋತ್ಸಾಹಿಸುತ್ತಾರೆ.

“ನೀವು ಯಾವ ಕೆಲಸವನ್ನು ಮಾಡಿದರೂ ಅದನ್ನು ಮನುಷ್ಯರಿಗೋಸ್ಕರವೆಂದು ಮಾಡದೆ ಕರ್ತನಿಗೋಸ್ಕರವೇ ಎಂದು ಮನಃಪೂರ್ವಕವಾಗಿ ಮಾಡಿರಿ.”​—ಕೊಲೊಸ್ಸೆ 3:23

ಒಬ್ಬ ವ್ಯಕ್ತಿಯು ಯಾವ ದೇಶದಲ್ಲಿ ವಾಸಿಸುತ್ತಾನೊ, ಆ ದೇಶದ ನಿಯಮಗಳಿಗೆ ಅಧೀನನಾಗುವಂತೆಯೂ ಬೈಬಲ್‌ ಕಲಿಸುತ್ತದೆ. ಆದುದರಿಂದ ಒಂದು ದೇಶದಲ್ಲಿ, ಇಂತಿಷ್ಟು ವಯಸ್ಸಿನ ವರೆಗಿನ ಶಾಲಾ ಶಿಕ್ಷಣವು ಕಡ್ಡಾಯವಾಗಿರುವಾಗ, ಯೆಹೋವನ ಸಾಕ್ಷಿಗಳು ಆ ನಿಯಮಕ್ಕೆ ವಿಧೇಯರಾಗುತ್ತಾರೆ.​—ರೋಮಾಪುರ 13:1-7.

ದೈನಂದಿನ ಜೀವಿತಕ್ಕಾಗಿ ತರಬೇತಿಯನ್ನು ಪಡೆಯುವ ಮಹತ್ವವನ್ನು ಬೈಬಲ್‌ ಕಡೆಗಣಿಸುವುದಿಲ್ಲ. ಆದರೆ ಅದೇ ಸಮಯದಲ್ಲಿ ಇದು ಮಾತ್ರವೇ ಶಿಕ್ಷಣದ ಏಕಮಾತ್ರ ಗುರಿ ಅಥವಾ ಪ್ರಮುಖ ಗುರಿಯಾಗಿದೆಯೆಂದು ಸಹ ಅದು ಹೇಳುವುದಿಲ್ಲ. ಒಂದು ಯಶಸ್ವೀ ಶಿಕ್ಷಣವು ಮಕ್ಕಳಲ್ಲಿ ಜೀವನೋಲ್ಲಾಸವನ್ನು ಚಿಗುರಿಸಬೇಕು ಮತ್ತು ಸಮಚಿತ್ತದ ವ್ಯಕ್ತಿಗಳೋಪಾದಿ ಸಮಾಜದ ಸದಸ್ಯರಾಗುವಂತೆ ಸಹಾಯಮಾಡಬೇಕು. ಆದುದರಿಂದ, ತರಗತಿಯ ಹೊರಗಿನ ಚಟುವಟಿಕೆಗಳು ಸಹ ತುಂಬ ಪ್ರಾಮುಖ್ಯವಾಗಿವೆಯೆಂದು ಯೆಹೋವನ ಸಾಕ್ಷಿಗಳಿಗನಿಸುತ್ತದೆ. ಹಿತಕರವಾದ ವಿಶ್ರಾಮಾವಧಿಗಳು, ಸಂಗೀತ, ಹವ್ಯಾಸಗಳು, ಶಾರೀರಿಕ ವ್ಯಾಯಾಮ, ಗ್ರಂಥಾಲಯ ಮತ್ತು ಮ್ಯೂಸಿಯಮ್‌ಗಳಿಗೆ ಭೇಟಿಗಳು, ಇವೆಲ್ಲವೂ ಒಂದು ಸಮ​ಪ್ರಮಾಣದ ಶಿಕ್ಷಣವನ್ನು ಪಡೆಯುವುದರಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತವೆಂದು ಅವರು ನಂಬುತ್ತಾರೆ. ಇದರ ಜೊತೆ, ತಮ್ಮ ಮಕ್ಕಳು ವೃದ್ಧ ವ್ಯಕ್ತಿಗಳನ್ನು ಗೌರವಿಸಲು ಮತ್ತು ಅವರಿಗೆ ಸಹಾಯಮಾಡುವ ಅವಕಾಶಗಳಿಗಾಗಿ ಹುಡುಕುವಂತೆಯೂ ಅವರು ಕಲಿಸುತ್ತಾರೆ.

ಸಂಪೂರಕ ಶಿಕ್ಷಣದ ಕುರಿತಾಗಿ ಏನು?

ಹೊಸ ತಂತ್ರಜ್ಞಾನದ ಕಾರಣದಿಂದ, ಉದ್ಯೋಗದ ಮಾರುಕಟ್ಟೆಯ ಸ್ಥಿತಿಯು ಬದಲಾಗುತ್ತಾ ಇದೆ. ಇದರಿಂದಾಗಿ, ಅನೇಕ ಯುವ ಜನರು ತಮಗೆ ನಿರ್ದಿಷ್ಟ ತರಬೇತಿಯಿಲ್ಲದಿರುವ ಕ್ಷೇತ್ರಗಳಲ್ಲಿ ಅಥವಾ ​ಕಸಬುಗಳಲ್ಲೂ ಕೆಲಸಮಾಡಬೇಕಾಗುತ್ತದೆ. ಪರಿಸ್ಥಿತಿಯು ಹೀಗಿರುವುದರಿಂದ, ಅವರ ಕೆಲಸಮಾಡುವ ರೂಢಿಗಳು ಮತ್ತು ವೈಯಕ್ತಿಕ ತರಬೇತಿ, ವಿಶೇಷವಾಗಿ ಪರಿಸ್ಥಿತಿಗನುಸಾರ ಹೊಂದಿಕೊಂಡು ಹೋಗುವ ಅವರ ಸಾಮರ್ಥ್ಯ ಇವೆಲ್ಲವೂ ಅವರಿಗೆ ಇನ್ನೂ ಹೆಚ್ಚು ಅಮೂಲ್ಯವಾಗಿರುವುವು. ಇದಕ್ಕೆ ತಕ್ಕಂತೆ ರಿನೇಸಾನ್ಸ್‌ಕಾಲದ ಪ್ರಬಂಧಕಾರ ಮೊಂಟೇನ್‌ ಹೇಳಿದಂತೆ, ವಿದ್ಯಾರ್ಥಿಗಳು ‘ತಲೆಯಲ್ಲಿ ಜ್ಞಾನವನ್ನು ತುಂಬಿ​ಕೊಂಡಿರುವುದಕ್ಕಿಂತಲೂ ಜ್ಞಾನವನ್ನು ಉಪಯೋಗಿಸು​ವಂತಹ’ ವಯಸ್ಕರಾಗಿ ಬೆಳೆಯುವುದು ಹೆಚ್ಚು ಉತ್ತಮ.

ಶ್ರೀಮಂತ ಹಾಗೂ ಬಡ ರಾಷ್ಟ್ರಗಳನ್ನು ಕಾಡುತ್ತಿರುವ ನಿರುದ್ಯೋಗದ ಸಮಸ್ಯೆಯು, ಸಾಕಷ್ಟು ಮಟ್ಟಿಗೆ ಅರ್ಹತೆಗಳಿಲ್ಲದ ಯುವ ಜನರಿಗೆ ಅನೇಕವೇಳೆ ಬೆದರಿಕೆಯನ್ನೊಡ್ಡುತ್ತದೆ. ಆದುದರಿಂದ ಉದ್ಯೋಗ ಮಾರುಕಟ್ಟೆಯು, ಕಾನೂನು ಕಡ್ಡಾಯಗೊಳಿಸುವ ಕನಿಷ್ಠ​ಪ್ರಮಾಣದ ಶಿಕ್ಷಣಕ್ಕೆ ಕೂಡಿಸಿ ಹೆಚ್ಚಿನ ಶಿಕ್ಷಣವನ್ನು ಅವಶ್ಯಪಡಿಸುವಲ್ಲಿ, ತಮ್ಮ ಮಕ್ಕಳು ಸಂಪೂರಕ ಶಿಕ್ಷಣದ ಕುರಿತಾಗಿ ನಿರ್ಣಯವನ್ನು ಮಾಡಲು ಮಾರ್ಗದರ್ಶನವನ್ನು ಕೊಡುವುದು ಹೆತ್ತವರ ಜವಾಬ್ದಾರಿಯಾಗಿದೆ. ಅಂತಹ ಹೆಚ್ಚಿನ ಶಿಕ್ಷಣವನ್ನು ಪಡೆಯಲು ಮಾಡಬೇಕಾಗಬಹುದಾದ ತ್ಯಾಗಗಳು ಮತ್ತು ಅದರಿಂದ ಸಿಗಬಹುದಾದ ಭಾವೀ ಪ್ರಯೋಜನಗಳನ್ನು ತೂಗಿ ನೋಡಿ ಅನಂತರ ನಿರ್ಣಯವನ್ನು ಮಾಡಸಾಧ್ಯವಿದೆ.

ಆದರೆ ಜೀವನದ ಯಶಸ್ಸು ಕೇವಲ ಭೌತಿಕ ರೀತಿಯ ಸಮೃದ್ಧಿಯ ಮೇಲೆ ಹೊಂದಿಕೊಂಡಿರುವುದಿಲ್ಲ, ಬದಲಾಗಿ ಅದಕ್ಕಿಂತಲೂ ಹೆಚ್ಚಿನದ್ದು ಇದೆ ಎಂಬ ಮಾತನ್ನು ನೀವು ಬಹುಶಃ ಒಪ್ಪಿಕೊಳ್ಳುವಿರಿ. ಇತ್ತೀಚಿನ ಸಮಯಗಳಲ್ಲಿ, ಕೆಲವು ಸ್ತ್ರೀಪುರುಷರು ತಮ್ಮ ವೃತ್ತಿಗಳಲ್ಲಿ ಎಷ್ಟೊಂದು ತಲ್ಲೀನರಾಗಿಬಿಟ್ಟಿದ್ದಾರೆಂದರೆ ತಮ್ಮ ಉದ್ಯೋಗವನ್ನು ಕಳೆದುಕೊಂಡಾಗ, ಸರ್ವಸ್ವವನ್ನೂ ಕಳೆದುಕೊಂಡರು. ತಮ್ಮ ಐಹಿಕ ಕೆಲಸದಲ್ಲಿ ಮುಳುಗಿಬಿಟ್ಟಿರುವ ಕೆಲವು ಹೆತ್ತವರು ತಮ್ಮ ಕುಟುಂಬ ಜೀವನವನ್ನು ಮತ್ತು ತಮ್ಮ ಮಕ್ಕಳೊಂದಿಗೆ ಕಳೆಯಸಾಧ್ಯವಿದ್ದ ಸಮಯವನ್ನು ತ್ಯಾಗಮಾಡಿದ್ದಾರೆ, ಮತ್ತು ಹೀಗೆ ಮಕ್ಕಳು ಬೆಳೆಯುತ್ತಿರುವಾಗ ಅವರಿಗೆ ಸಹಾಯ​ಕೊಡುವ ಅವಕಾಶದಿಂದ ವಂಚಿತರಾಗಿದ್ದಾರೆ.

ಆದುದರಿಂದ, ನಮ್ಮನ್ನು ನಿಜವಾಗಿಯೂ ಸಂತೋಷಗೊಳಿಸಲು ಭೌತಿಕ ಸಮೃದ್ಧಿಗಿಂತಲೂ ಹೆಚ್ಚಿನದ್ದು ಅತ್ಯಗತ್ಯವಾಗಿದೆ ಎಂಬುದನ್ನು ಸಮಪ್ರಮಾಣದ ಶಿಕ್ಷಣವು ಗಣನೆಗೆ ತೆಗೆದುಕೊಳ್ಳಬೇಕು. ಯೇಸು ಕ್ರಿಸ್ತನು ತಿಳಿಸಿದ್ದು: “ಮನುಷ್ಯನು ರೊಟ್ಟಿತಿಂದ ಮಾತ್ರದಿಂದ ಬದುಕುವುದಿಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು ಎಂದು ಬರೆದದೆ.” (ಮತ್ತಾಯ 4:4) ಭೌತಿಕ ಅಗತ್ಯಗಳನ್ನು ಪೂರೈಸಿಕೊಳ್ಳಲು ತಮ್ಮನ್ನು ಸಿದ್ಧಗೊಳಿಸುವುದರೊಂದಿಗೆ, ನೈತಿಕ ಹಾಗೂ ಆತ್ಮಿಕ ಗುಣಗಳನ್ನೂ ಬೆಳೆಸಿಕೊಳ್ಳುವುದು ಪ್ರಾಮುಖ್ಯವಾಗಿದೆ ಎಂಬುದನ್ನು ಕ್ರೈಸ್ತರೋಪಾದಿ ಯೆಹೋವನ ಸಾಕ್ಷಿಗಳು ಗ್ರಹಿಸಿಕೊಳ್ಳುತ್ತಾರೆ.