ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಹೆತ್ತವರ ಪಾತ್ರ

ಹೆತ್ತವರ ಪಾತ್ರ

ಇಂದಿನ ಸಮಾಜದಲ್ಲಿ ಮಕ್ಕಳನ್ನು ಸಮಚಿತ್ತದ ವಯಸ್ಕರನ್ನಾಗಿ ಬೆಳೆಸುವುದು ಸುಲಭದ ಕೆಲಸವಲ್ಲವೆಂಬುದರಲ್ಲಿ ಕಿಂಚಿತ್ತೂ ಸಂದೇಹವಿಲ್ಲ.

ಯಶಸ್ವೀ ಹೆತ್ತವರೆಂದು ಪರಿಗಣಿಸಲಾಗುತ್ತಿದ್ದವರ ನಡುವೆ ನಡೆಸಲಾದ ಒಂದು ಸಮೀಕ್ಷೆಯ ಫಲಿತಾಂಶಗಳನ್ನು ಅಮೆರಿಕದ ಮಾನಸಿಕ ಆರೋಗ್ಯ ಸಂಸ್ಥೆಯು ಪ್ರಕಾಶಿಸಿತು. ಇಂತಹ ಹೆತ್ತವರ ಮಕ್ಕಳು, 21 ಕ್ಕಿಂತಲೂ ಮೇಲಿನ ವಯಸ್ಸಿನವರಾಗಿದ್ದು, “ಅವರೆಲ್ಲರೂ ನಮ್ಮ ಸಮಾಜಕ್ಕೆ ಚೆನ್ನಾಗಿ ಹೊಂದಿಕೊಂಡು​ಹೋಗುತ್ತಿದ್ದ, ದಕ್ಷ ವಯಸ್ಕರಾಗಿದ್ದರು.” ಆ ಹೆತ್ತವರಿಗೆ ಈ ಪ್ರಶ್ನೆಯನ್ನು ಕೇಳಲಾಯಿತು: ‘ನಿಮ್ಮ ಸ್ವಂತ ಅನುಭವದ ಆಧಾರದ ಮೇಲೆ, ಬೇರೆ ಹೆತ್ತವರಿಗೆ ನೀವು ಯಾವ ಅತ್ಯುತ್ತಮ ಸಲಹೆಯನ್ನು ಕೊಡಬಲ್ಲಿರಿ?’ ಅವರಲ್ಲಿ ಹೆಚ್ಚಿನವರು ಕೊಟ್ಟ ಉತ್ತರಗಳು ಹೀಗಿದ್ದವು: ‘ಪ್ರೀತಿಯ ಮಹಾಪೂರವನ್ನೇ ಹರಿಸಿರಿ,’ ‘ಸಹಾಯವಾಗುವ ರೀತಿಯಲ್ಲಿ ಶಿಸ್ತುನೀಡಿರಿ,’ ‘ಜೊತೆಯಾಗಿ ಸಮಯವನ್ನು ಕಳೆಯಿರಿ,’ ‘ನಿಮ್ಮ ಮಕ್ಕಳಿಗೆ ಸರಿ ಮತ್ತು ತಪ್ಪಿನ ನಡುವಿನ ಭೇದವನ್ನು ಕಲಿಸಿರಿ,’ ‘ಪರಸ್ಪರ ಗೌರವವನ್ನು ​ಬೆಳೆಸಿರಿ,’ ‘ಅವರು ಮಾತಾಡುವಾಗ ಚೆನ್ನಾಗಿ ಕಿವಿಗೊಡಿರಿ,’ ‘ಭಾಷಣ ಬಿಗಿಯುವ ಬದಲಿಗೆ ಮಾರ್ಗದರ್ಶನವನ್ನು ನೀಡಿರಿ,’ ಮತ್ತು ‘ಇದ್ದದ್ದನ್ನು ಇದ್ದಂತೆಯೇ ಕಾಣುವವರಾಗಿರಿ.’

ಆದರೆ, ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ಸಮಚಿತ್ತರಾಗಿರುವ ಮತ್ತು ಜೀವನದ ಸಮಸ್ಯೆ​ಗಳನ್ನು ಚೆನ್ನಾಗಿ ನಿಭಾಯಿಸುವ ಯುವ ವಯಸ್ಕರನ್ನು ತಯಾರಿಸುವುದರಲ್ಲಿ ಕೇವಲ ಹೆತ್ತವರು ಮಾತ್ರ ಒಳಗೂಡಿರುವುದಿಲ್ಲ. ಶಿಕ್ಷಕರಿಗೂ ಇದರಲ್ಲಿ ಒಂದು ಮುಖ್ಯ ಪಾತ್ರವಿದೆ. ಒಬ್ಬ ಅನುಭವಸ್ಥ ಶಾಲಾ ಸಲಹೆಗಾರನು ಅಂದದ್ದು: “ಶಾಲಾ ಶಿಕ್ಷಣದ ಪ್ರಮುಖ ಗುರಿಯು, ಬೌದ್ಧಿಕವಾಗಿ, ಶಾರೀರಿಕವಾಗಿ ಮತ್ತು ಭಾವನಾತ್ಮಕವಾಗಿ ಚೆನ್ನಾಗಿ ಬೆಳೆದಿರುವ ಜವಾಬ್ದಾರಿಯುತ ಯುವ ವ್ಯಕ್ತಿಗಳನ್ನು ತಯಾರಿಸುವುದರಲ್ಲಿ ಹೆತ್ತವರನ್ನು ಬೆಂಬಲಿಸುವುದೇ ಆಗಿದೆ.”

ಆದುದರಿಂದ ಹೆತ್ತವರ ಮತ್ತು ಶಿಕ್ಷಕರ ಗುರಿಯು ಒಂದೇ ಆಗಿದೆ: ಜೀವನದ ಆನಂದವನ್ನು ಸವಿಯುವ ಮತ್ತು ತಾವು ಜೀವಿಸುತ್ತಿರುವ ಸಮಾಜದಲ್ಲಿ ನೆಲೆಗೊಳ್ಳಲು ಶಕ್ತರಾಗಿರುವ ಸಮಚಿತ್ತದ, ಪ್ರೌಢ ವಯಸ್ಕರಾಗಿ ಪರಿಣಮಿಸುವ ಯುವ ಜನರನ್ನು ಉತ್ಪಾದಿ​ಸುವುದು.

ಪ್ರತಿಸ್ಪರ್ಧಿಗಳಲ್ಲ, ಜತೆಕೆಲಸಗಾರರು

ಆದರೆ ಹೆತ್ತವರು ಶಿಕ್ಷಕರೊಂದಿಗೆ ಸಹಕರಿಸದೇ ಇರುವಾಗ ಸಮಸ್ಯೆಗಳೇಳುತ್ತವೆ. ಉದಾಹರಣೆಗಾಗಿ ಕೆಲವು ಹೆತ್ತವರು ತಮ್ಮ ಮಕ್ಕಳ ಶಿಕ್ಷಣದ ಕುರಿತಾಗಿ ಯಾವುದೇ ಆಸಕ್ತಿಯನ್ನು ತೋರಿಸುವುದಿಲ್ಲ. ಇದಕ್ಕೆ ವಿರುದ್ಧವಾಗಿ ಇನ್ನಿತರ ಹೆತ್ತವರು ಶಿಕ್ಷಕರೊಂದಿಗೇ ಸ್ಪರ್ಧೆಗಿಳಿಯುತ್ತಾರೆ. ಈ ಪರಿಸ್ಥಿತಿಯನ್ನು ಚರ್ಚಿಸುತ್ತಾ ಒಂದು ಫ್ರೆಂಚ್‌ ಪತ್ರಿಕೆಯು ಹೇಳಿದ್ದು: “ಈಗ ಶಿಕ್ಷಕನು ಏಕೈಕ ಚಾಲಕನಾಗಿರುವುದಿಲ್ಲ. ತಮ್ಮ ಮಕ್ಕಳ ಯಶಸ್ಸಿನ ಕುರಿತು ಗೀಳುಹಿಡಿದಿರುವ ಹೆತ್ತವರು, ಶಾಲಾಪುಸ್ತಕ​ಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಮಕ್ಕಳಿಗೆ ಕಲಿಸಲು ಉಪಯೋಗಿಸಲಾಗುವ ವಿಧಾನಗಳನ್ನು ವಿಮರ್ಶಿಸಿ ಟೀಕಿಸುತ್ತಾರೆ ಮತ್ತು ತಮ್ಮ ಮಕ್ಕಳು ಕಡಿಮೆ ಅಂಕಗಳನ್ನು ಪಡೆಯುವಾಗ ಥಟ್ಟನೆ ಕೋಪಗೊಳ್ಳುತ್ತಾರೆ.” ಈ ಎಲ್ಲ ವರ್ತನೆಗಳಿಂದಾಗಿ ಹೆತ್ತವರು ಶಿಕ್ಷಕರ ವಿಶೇಷವಾದ ಹಕ್ಕುಗಳ ಮೇಲೆ ಆಕ್ರಮಣಮಾಡಿ​ದಂತಾಗುತ್ತದೆ.

ಹೆತ್ತವರು ತಮ್ಮ ಮಕ್ಕಳ ಶಿಕ್ಷಣದಲ್ಲಿ ಸಕ್ರಿಯ ಹಾಗೂ ಸಹಾಯಕಾರಿಯಾಗಿರುವಂತಹ ರೀತಿಯಲ್ಲಿ ಆಸಕ್ತಿಯನ್ನು ತೋರಿಸುತ್ತಾ, ಶಿಕ್ಷಕರೊಂದಿಗೆ ಸಹಕರಿಸಿದರೆ ಮಾತ್ರ ತಮ್ಮ ಮಕ್ಕಳಿಗೆ ಹೆಚ್ಚು ಪ್ರಯೋಜನವಾಗುವುದೆಂದು ಯೆಹೋವನ ಸಾಕ್ಷಿಗಳ ಅಭಿಪ್ರಾಯವಾಗಿದೆ. ಅಂತಹ ಸಹಕಾರವು ವಿಶೇಷವಾಗಿ ತುಂಬ ಪ್ರಾಮುಖ್ಯವಾಗಿದೆ, ಏಕೆಂದರೆ ಒಬ್ಬ ಶಿಕ್ಷಕರೋಪಾದಿ ನೀವು ಇಂದು ಮಾಡುವ ಕೆಲಸವು ದಿನ ಕಳೆದಂತೆ ಹೆಚ್ಚು ಕಷ್ಟಕರವಾಗುತ್ತಿದೆ.

ಇಂದಿನ ಶಾಲಾ ಸಮಸ್ಯೆಗಳು

ಶಾಲೆಗಳು ಸಮಾಜದ ಪ್ರತಿಬಿಂಬವಾಗಿರುವುದರಿಂದ, ಸಮಾಜದಲ್ಲಿರುವ ಸಮಸ್ಯೆಗಳೇ ಶಾಲೆಗಳಲ್ಲೂ ಇವೆ. ವರ್ಷಗಳು ದಾಟಿದಂತೆ, ಸಾಮಾಜಿಕ ಸಮಸ್ಯೆಗಳು ಹೆಚ್ಚೆಚ್ಚಾಗುತ್ತಾ ಹೋಗುತ್ತಿವೆ. ಅಮೆರಿಕದ ಒಂದು ಶಾಲೆಯಲ್ಲಿನ ಪರಿಸ್ಥಿತಿಗಳನ್ನು ವರ್ಣಿಸುತ್ತಾ, ದ ನ್ಯೂ ಯಾರ್ಕ್‌ ಟೈಮ್ಸ್‌ ವಾರ್ತಾಪತ್ರಿಕೆಯು ವರದಿಸಿದ್ದು: “ವಿದ್ಯಾರ್ಥಿಗಳು ತರಗತಿಗಳಲ್ಲಿ ನಿದ್ರೆಮಾಡುತ್ತಾರೆ, ಗೀರುಬರಹ ಹಾಗೂ ಚಿತ್ರಗಳಿಂದ ತುಂಬಿರುವ ಪ್ರವೇಶಾಂಗಣಗಳಲ್ಲಿ ಅವರು ಒಬ್ಬರನ್ನೊಬ್ಬರು ಬೆದರಿಸುತ್ತಿರುತ್ತಾರೆ, ಒಳ್ಳೆಯ ವಿದ್ಯಾರ್ಥಿಗಳನ್ನು ಹೀನೈಸುತ್ತಾರೆ. . . . ಬಹುಮಟ್ಟಿಗೆ ಎಲ್ಲ ವಿದ್ಯಾರ್ಥಿಗಳು, ಪುಟ್ಟ ಮಕ್ಕಳ ಆರೈಕೆಮಾಡುವುದು, ಜೈಲಿನಲ್ಲಿರುವ ಹೆತ್ತವರೊಂದಿಗೆ ವ್ಯವಹರಿಸುವುದು ಮತ್ತು ಗೂಂಡಾಗಳ ಹಿಂಸಾಚಾರದಿಂದ ಪಾರಾಗಿ ಉಳಿಯುವಂತಹ ಸಮಸ್ಯೆಗಳನ್ನು ನಿಭಾಯಿಸುತ್ತಾ ಇದ್ದಾರೆ. ಯಾವುದೇ ದಿನ ನೋಡಿದರೂ, ಬಹುಮಟ್ಟಿಗೆ ವಿದ್ಯಾರ್ಥಿಗಳಲ್ಲಿ ಐದರಲ್ಲಿ ಒಬ್ಬನು ಗೈರುಹಾಜರಾಗಿರುತ್ತಾನೆ.”

ವಿಶೇಷವಾಗಿ ಭಯಹುಟ್ಟಿಸುವ ಸಮಸ್ಯೆಯು, ಶಾಲೆಗಳಲ್ಲಿ ಅಂತಾರಾಷ್ಟ್ರೀಯವಾಗಿ ಬೆಳೆಯುತ್ತಿರುವ ಹಿಂಸಾಚಾರ ಆಗಿದೆ. ಆಗೊಮ್ಮೆ ಈಗೊಮ್ಮೆ ನಡೆಯುತ್ತಿದ್ದ ಹೊಡೆದಾಟಗಳ ಬದಲಿಗೆ, ಈಗ ನಿಯಮಿತವಾಗಿ ಬಂದೂಕುಗಳಿಂದ ಗುಂಡುಹೊಡೆಯುವಿಕೆ ಮತ್ತು ಚೂರಿ ತಿವಿಯುವಿಕೆಗಳು ನಡೆಯುತ್ತಿವೆ. ಆಯುಧಗಳು ಸರ್ವಸಾಮಾನ್ಯವಾಗಿಬಿಟ್ಟಿವೆ, ನಡೆಸಲಾಗುವ ಆಕ್ರಮಣಗಳು ಹೆಚ್ಚು ಬಿರುಸಾಗಿಬಿಟ್ಟಿವೆ, ಮತ್ತು ಮಕ್ಕಳು ಬೇಗನೆ ಹಾಗೂ ತೀರ ಎಳೆಯ ಪ್ರಾಯದಲ್ಲೇ ಹಿಂಸಾಚಾರವನ್ನು ಅವಲಂಬಿಸುತ್ತಿದ್ದಾರೆ.

ಪ್ರತಿಯೊಂದು ದೇಶದಲ್ಲಿ ಈ ಘೋರ ಪರಿಸ್ಥಿತಿಯಿರಲಿಕ್ಕಿಲ್ಲವೆಂಬುದು ನಿಜ. ಆದರೂ, ಲೋಕವ್ಯಾಪಕವಾಗಿ ಅನೇಕ ಶಿಕ್ಷಕರು, ಫ್ರೆಂಚ್‌ ಸಾಪ್ತಾಹಿಕ ಲಾ ಪಾಯಿಂಟ್‌ ನಲ್ಲಿ ತಿಳಿಸಲ್ಪಟ್ಟಿರುವ ಈ ಸನ್ನಿವೇಶದಲ್ಲಿದ್ದಾರೆ: “ಇಂದು ಶಿಕ್ಷಕನಿಗೆ ಯಾವುದೇ ಗೌರವ ಸಿಗುವುದಿಲ್ಲ; ಅವನಿಗೆ ಯಾವುದೇ ಅಧಿಕಾರವೂ ಇಲ್ಲ.”

ಅಧಿಕಾರದಲ್ಲಿರುವವರ ಕಡೆಗಿನ ಈ ಅಗೌರವವು ಎಲ್ಲ ಮಕ್ಕಳಿಗೆ ಒಂದು ದೊಡ್ಡ ಅಪಾಯವನ್ನೊಡ್ಡುತ್ತದೆ. ಆದುದರಿಂದ ಯೆಹೋವನ ಸಾಕ್ಷಿಗಳು ತಮ್ಮ ಮಕ್ಕಳಲ್ಲಿ, ಅಧಿಕಾರದಲ್ಲಿರುವವರಿಗಾಗಿ ವಿಧೇಯತೆ ಮತ್ತು ಗೌರವವನ್ನು ತೋರಿಸಬೇಕೆಂಬ ವಿಚಾರವನ್ನು ಬೇರೂರಿಸಲು ಪ್ರಯತ್ನಿಸುತ್ತಾರೆ. ಈ ಗುಣಗಳೇ ಇಂದು ಶಾಲಾ ಜೀವನದಲ್ಲಿ ಅನೇಕವೇಳೆ ಕಣ್ಮರೆಯಾಗಿಬಿಟ್ಟಿವೆ.