ಮತ್ತಾಯ 28:1-20

28  ಸಬ್ಬತ್‌ ದಿನದ ಬಳಿಕ ವಾರದ ಮೊದಲನೆಯ ದಿನ ಹೊತ್ತು​ಮೂಡುವಾಗ ಮಗ್ದಲದ ಮರಿಯಳೂ ಇನ್ನೊಬ್ಬ ಮರಿಯಳೂ ಗೋರಿಯನ್ನು ನೋಡಲು ಬಂದರು.  ಅಲ್ಲಿ ನೋಡಿದಾಗ ಮಹಾ ಭೂಕಂಪವು ಸಂಭವಿಸಿತ್ತು; ಯೆಹೋವನ ದೂತನು ಸ್ವರ್ಗದಿಂದ ಇಳಿದು ಬಂದು ಕಲ್ಲನ್ನು ​ಉರುಳಿಸಿ ಅದರ ಮೇಲೆ ಕುಳಿತುಕೊಂಡಿದ್ದನು.  ಅವನ ಹೊರತೋರಿಕೆಯು ಮಿಂಚಿನಂತಿತ್ತು ಮತ್ತು ಅವನ ಉಡುಪು ಹಿಮದಂತೆ ಬೆಳ್ಳಗಿತ್ತು.  ಹೌದು, ಅವನನ್ನು ನೋಡಿ ಕಾವಲುಗಾರರು ಭಯದಿಂದ ನಡುಗಿ ಸತ್ತವರಂತಾದರು.  ಆದರೆ ದೇವದೂತನು ಆ ಸ್ತ್ರೀಯರಿಗೆ, “ನೀವು ಹೆದರಬೇಡಿ; ಶೂಲಕ್ಕೇರಿಸಲ್ಪಟ್ಟ ಯೇಸುವನ್ನು ನೀವು ಹುಡುಕುತ್ತಿದ್ದೀರಿ ಎಂದು ನನಗೆ ತಿಳಿದಿದೆ.  ಅವನು ಇಲ್ಲಿಲ್ಲ; ತಾನು ಹೇಳಿದಂತೆಯೇ ಅವನು ಎಬ್ಬಿಸಲ್ಪಟ್ಟಿದ್ದಾನೆ. ಬನ್ನಿರಿ ಅವನು ಇಡಲ್ಪಟ್ಟಿದ್ದ ಸ್ಥಳವನ್ನು ನೋಡಿ.  ನೀವು ಬೇಗನೆ ಹೋಗಿ ಅವನು ಸತ್ತವರೊಳಗಿಂದ ಎಬ್ಬಿಸಲ್ಪಟ್ಟಿದ್ದಾನೆ ಎಂದು ಅವನ ಶಿಷ್ಯರಿಗೆ ಹೇಳಿರಿ; ನೋಡಿರಿ, ಅವನು ನಿಮಗಿಂತ ಮುಂದಾಗಿ ಗಲಿಲಾಯಕ್ಕೆ ಹೋಗುತ್ತಿದ್ದಾನೆ; ಅಲ್ಲಿ ನೀವು ಅವನನ್ನು ಕಾಣುವಿರಿ. ನೋಡಿರಿ ನಾನು ಇದನ್ನು ನಿಮಗೆ ತಿಳಿಸಿದ್ದೇನೆ” ಎಂದನು.  ಆಗ ಭಯದಿಂದಲೂ ಮಹಾ ಆನಂದದಿಂದಲೂ ಅವರು ಬೇಗನೆ ಸ್ಮರಣೆಯ ಸಮಾಧಿಯ ಬಳಿಯಿಂದ ಹೊರಟು ಅವನ ಶಿಷ್ಯರಿಗೆ ವರದಿಮಾಡಲು ಓಡಿದರು.  ಆಗ ಯೇಸು ಅವರ ಎದುರಿಗೆ ಬಂದು, “ನಮಸ್ಕಾರ!” ಎಂದನು. ಅವರು ಅವನ ಹತ್ತಿರ ಹೋಗಿ ಅವನ ಪಾದಗಳನ್ನು ಹಿಡಿದು ಅವನಿಗೆ ಪ್ರಣಾಮಮಾಡಿದರು. 10  ಬಳಿಕ ಯೇಸು ಅವರಿಗೆ, “ಭಯಪಡಬೇಡಿ! ಹೋಗಿ, ನನ್ನ ಸಹೋದರರು ಗಲಿಲಾಯಕ್ಕೆ ಹೋಗುವಂತೆ ಅವರಿಗೆ ವರದಿಮಾಡಿರಿ; ಅಲ್ಲಿ ಅವರು ನನ್ನನ್ನು ಕಾಣುವರು” ಎಂದು ಹೇಳಿದನು. 11  ಅವರು ಹೋಗುತ್ತಿರುವಾಗ ಕಾವಲು​ಗಾರರಲ್ಲಿ ಕೆಲವರು ಪಟ್ಟಣಕ್ಕೆ ಹೋಗಿ ನಡೆದ ಎಲ್ಲ ವಿಷಯಗಳನ್ನು ಮುಖ್ಯ ಯಾಜಕರಿಗೆ ವರದಿಸಿದರು. 12  ಇವರು ಹಿರೀಪುರುಷರೊಂದಿಗೆ ಒಟ್ಟುಗೂಡಿ ಸಮಾಲೋಚನೆ ನಡೆಸಿದ ಬಳಿಕ ಸೈನಿಕರಿಗೆ ಸಾಕಷ್ಟು ಬೆಳ್ಳಿ ನಾಣ್ಯಗಳನ್ನು ಕೊಟ್ಟು, 13  “ ‘ಅವನ ಶಿಷ್ಯರು ರಾತ್ರಿಯಲ್ಲಿ ಬಂದು ನಾವು ನಿದ್ರೆಮಾಡುತ್ತಿದ್ದಾಗ ಅವನನ್ನು ಕದ್ದುಕೊಂಡು ಹೋದರು’ ಎಂದು ಹೇಳಿರಿ. 14  ಇದು ರಾಜ್ಯಪಾಲನ ಕಿವಿಗೆ ಬಿದ್ದರೆ ನಾವು ಅವನನ್ನು ಒಡಂಬಡಿಸಿ ನಿಮ್ಮ ಚಿಂತೆಯನ್ನು ನಿವಾರಿಸುತ್ತೇವೆ” ಎಂದು ಹೇಳಿದರು. 15  ಹೀಗೆ ಅವರು ಬೆಳ್ಳಿ ನಾಣ್ಯಗಳನ್ನು ತೆಗೆದುಕೊಂಡು ತಮಗೆ ತಿಳಿಸಲ್ಪಟ್ಟಂತೆಯೇ ಮಾಡಿದರು; ಮತ್ತು ಈ ಮಾತು ಇಂದಿನ ವರೆಗೂ ಯೆಹೂದ್ಯರಲ್ಲಿ ವ್ಯಾಪಕವಾಗಿ ಹಬ್ಬಿದೆ. 16  ಆದರೆ ಹನ್ನೊಂದು ಮಂದಿ ಶಿಷ್ಯರು ಗಲಿಲಾಯಕ್ಕೆ ಯೇಸು ತಮಗಾಗಿ ಗೊತ್ತುಮಾಡಿದ್ದ ಬೆಟ್ಟಕ್ಕೆ ಹೋದರು;  17  ಅಲ್ಲಿ ಅವರು ಅವನನ್ನು ಕಂಡಾಗ ಅವನಿಗೆ ಪ್ರಣಾಮಮಾಡಿದರು, ಆದರೆ ಕೆಲವರು ಸಂಶಯಪಟ್ಟರು. 18  ಯೇಸು ಅವರ ಹತ್ತಿರಕ್ಕೆ ಬಂದು, “ಸ್ವರ್ಗದಲ್ಲಿಯೂ ಭೂಮಿಯಲ್ಲಿಯೂ ಎಲ್ಲ ಅಧಿಕಾರವು ನನಗೆ ಕೊಡಲ್ಪಟ್ಟಿದೆ. 19  ಆದುದರಿಂದ ಹೊರಟುಹೋಗಿ ಎಲ್ಲ ಜನಾಂಗಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ ತಂದೆಯ, ಮಗನ ಮತ್ತು ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ, 20  ನಾನು ನಿಮಗೆ ಆಜ್ಞಾಪಿಸಿದ ಎಲ್ಲ ವಿಷಯಗಳನ್ನು ಪಾಲಿಸುವಂತೆ ಅವರಿಗೆ ಬೋಧಿಸಿರಿ. ನೋಡಿರಿ, ನಾನು ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ವರೆಗೂ ಎಲ್ಲ ದಿವಸ ನಿಮ್ಮ ಸಂಗಡ ಇರುತ್ತೇನೆ” ಎಂದು ಹೇಳಿದನು.

ಪಾದಟಿಪ್ಪಣಿ