ಯೋಹಾನ 11:1-57

11  ಮರಿಯಳು ಮತ್ತು ಅವಳ ಸಹೋದರಿಯಾದ ಮಾರ್ಥಳ ಊರಾದ ಬೇಥಾನ್ಯದಲ್ಲಿ ಲಾಜರನೆಂಬ ಒಬ್ಬ ಮನು​ಷ್ಯನು ಅಸ್ವಸ್ಥನಾಗಿದ್ದನು.  ವಾಸ್ತವ​ದಲ್ಲಿ, ಕರ್ತನಿಗೆ ಸುಗಂಧ ತೈಲವನ್ನು ಹಚ್ಚಿ ಅವನ ಪಾದಗಳನ್ನು ತನ್ನ ತಲೇ​ಕೂದಲಿನಿಂದ ಒರಸಿದ ಮರಿಯಳ ಸಹೋದರನಾದ ಲಾಜರನೇ ಅಸ್ವಸ್ಥನಾಗಿದ್ದವನು.  ಆದುದರಿಂದ ಅವನ ಸಹೋದರಿಯರು ಅವನಿಗೆ, “ಕರ್ತನೇ, ನಿನಗೆ ಯಾರ ಮೇಲೆ ಮಮತೆಯಿದೆಯೋ ಅವನು ಅಸ್ವಸ್ಥನಾಗಿದ್ದಾನೆ” ಎಂದು ಹೇಳಿ​ಕಳುಹಿಸಿದರು.  ಆದರೆ ಯೇಸು ಇದನ್ನು ಕೇಳಿಸಿಕೊಂಡಾಗ, “ಈ ಕಾಯಿಲೆಯು ​ಮರಣದ ಉದ್ದೇಶದಿಂದ ಬಂದಿಲ್ಲ, ಇದರಿಂದ ದೇವರ ಮಗನು ಮಹಿಮೆಗೊಳಿಸಲ್ಪಡುವಂತೆ ದೇವರ ಮಹಿಮೆಗಾಗಿ ಬಂದಿದೆ” ಎಂದನು.  ಯೇಸುವಿಗೆ ಮಾರ್ಥ, ಅವಳ ಸಹೋದರಿ ಮತ್ತು ಲಾಜರನ ಮೇಲೆ ಪ್ರೀತಿ ಇತ್ತು.  ಆದರೂ ಅವನು ಅಸ್ವಸ್ಥನಾಗಿದ್ದಾನೆ ಎಂದು ಕೇಳಿಸಿಕೊಂಡ ಮೇಲೆ ಯೇಸು ತಾನಿದ್ದ ಸ್ಥಳದಲ್ಲೇ ಎರಡು ದಿನ ಉಳಿದನು.  ಬಳಿಕ ಅವನು ತನ್ನ ಶಿಷ್ಯರಿಗೆ, “ನಾವು ಪುನಃ ​ಯೂದಾಯಕ್ಕೆ ಹೋಗೋಣ” ಎಂದು ​ಹೇಳಿದನು.  ಆಗ ಶಿಷ್ಯರು ಅವನಿಗೆ “ರಬ್ಬೀ, ಯೂದಾಯದವರು ಇತ್ತೀಚೆಗೆ ನಿನ್ನ ಮೇಲೆ ಕಲ್ಲೆಸೆಯಲು ಪ್ರಯತ್ನಿಸಿದ್ದರು; ನೀನು ಪುನಃ ಅಲ್ಲಿಗೆ ಹೋಗುತ್ತೀಯಾ?” ಎಂದು ಕೇಳಿದರು.  ಅದಕ್ಕೆ ಯೇಸು, “ಹಗಲಿನಲ್ಲಿ ಹನ್ನೆರಡು ತಾಸುಗಳಿವೆಯಲ್ಲವೆ? ಯಾವ​ನಾದರೂ ಹಗಲಿನಲ್ಲಿ ನಡೆದರೆ ಅವನು ಈ ಲೋಕದ ಬೆಳಕನ್ನು ನೋಡುವುದರಿಂದ ಯಾವುದರ ಮೇಲೂ ಮುಗ್ಗರಿಸುವುದಿಲ್ಲ. 10  ಆದರೆ ಯಾವನಾದರೂ ರಾತ್ರಿಯಲ್ಲಿ ನಡೆದರೆ ಅವನಲ್ಲಿ ಬೆಳಕು ಇಲ್ಲದಿರುವುದರಿಂದ ಯಾವುದರ ಮೇಲಾದರು ಮುಗ್ಗರಿಸುತ್ತಾನೆ” ಎಂದು ಹೇಳಿದನು. 11  ಅವನು ಈ ವಿಷಯಗಳನ್ನು ಹೇಳಿದ ಮೇಲೆ ಅವರಿಗೆ, “ನಮ್ಮ ಮಿತ್ರನಾದ ಲಾಜರನು ವಿಶ್ರಾಂತಿ​ಮಾಡುತ್ತಿದ್ದಾನೆ; ಅವನನ್ನು ನಿದ್ರೆಯಿಂದ ಎಬ್ಬಿಸಲಿಕ್ಕಾಗಿ ನಾನು ಅಲ್ಲಿಗೆ ಪ್ರಯಾಣಿಸುತ್ತಿದ್ದೇನೆ” ಎಂದನು. 12  ಅದಕ್ಕೆ ಶಿಷ್ಯರು ಅವನಿಗೆ, “ಕರ್ತನೇ, ಅವನು ವಿಶ್ರಾಂತಿ ಪಡೆಯುತ್ತಿರುವಲ್ಲಿ ಸ್ವಸ್ಥನಾಗುವನು” ಎಂದರು. 13  ಯೇಸು ಅವನ ಮರಣದ ಕುರಿತು ಮಾತಾಡಿದ್ದನು. ಆದರೆ ನಿದ್ರೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುವುದರ ಕುರಿತು ಅವನು ಮಾತಾಡುತ್ತಿದ್ದಾನೆ ಎಂದು ಅವರು ನೆನಸಿದರು. 14  ಆಗ ಯೇಸು ಅವರಿಗೆ ಸ್ಪಷ್ಟವಾಗಿ, “ಲಾಜರನು ಮೃತಪಟ್ಟಿದ್ದಾನೆ; 15  ನೀವು ನಂಬುವಂತಾಗಲು, ನಾನು ಅಲ್ಲಿ ಇಲ್ಲದಿದ್ದುದಕ್ಕಾಗಿ ನಿಮ್ಮ ನಿಮಿತ್ತವಾಗಿ ಹರ್ಷಿಸುತ್ತೇನೆ. ನಾವೀಗ ಅವನ ಬಳಿಗೆ ಹೋಗೋಣ” ಎಂದನು. 16  ಆಗ ಅವಳಿ ಎಂದು ಕರೆಯಲ್ಪಟ್ಟಿದ್ದ ತೋಮನು ತನ್ನ ಜೊತೆ ಶಿಷ್ಯರಿಗೆ, “ಅವನ ಸಂಗಡ ಸಾಯುವಂತೆ ನಾವು ಸಹ ಹೋಗೋಣ” ಎಂದನು. 17  ಯೇಸು ಬಂದಾಗ ಲಾಜರನು ಸ್ಮರಣೆಯ ಸಮಾಧಿಯಲ್ಲಿ ಇಡಲ್ಪಟ್ಟು ಈಗಾಗಲೇ ನಾಲ್ಕು ದಿವಸಗಳು ಕಳೆದಿ​ದ್ದವು ಎಂದು ಅವನಿಗೆ ​ತಿಳಿದುಬಂತು. 18  ಬೇಥಾನ್ಯವು ಯೆರೂಸ​ಲೇಮಿಗೆ ಸಮೀಪವಾಗಿತ್ತು, ಅಂದರೆ ಸುಮಾರು ಮೂರು ಕಿಲೊಮೀಟರುಗಳಷ್ಟು ದೂರದಲ್ಲಿತ್ತು. 19  ಆದುದರಿಂದ ಯೆಹೂದ್ಯರಲ್ಲಿ ಅನೇಕರು ಮಾರ್ಥ ಮತ್ತು ಮರಿಯಳ ಸಹೋದರನ ವಿಷಯದಲ್ಲಿ ಅವರನ್ನು ಸಂತೈಸಲಿಕ್ಕಾಗಿ ಅವರ ಬಳಿಗೆ ಬಂದಿದ್ದರು. 20  ಯೇಸು ಬರುತ್ತಿದ್ದಾನೆ ಎಂಬುದನ್ನು ಕೇಳಿಸಿಕೊಂಡು ಮಾರ್ಥಳು ಹೋಗಿ ಅವನನ್ನು ಸಂಧಿಸಿದಳು; ಆದರೆ ​ಮರಿಯಳು ಮನೆಯಲ್ಲೇ ಕುಳಿತುಕೊಂಡಿದ್ದಳು. 21  ಮಾರ್ಥಳು ಯೇಸುವಿಗೆ, “ಕರ್ತನೇ, ನೀನು ಇಲ್ಲಿ ಇರುತ್ತಿದ್ದರೆ ನನ್ನ ಸಹೋದರನು ಸಾಯುತ್ತಿರಲಿಲ್ಲ. 22  ಆದರೆ ಈಗಲೂ ದೇವರಿಂದ ನೀನು ಏನೆಲ್ಲ ಬೇಡಿಕೊಳ್ಳುತ್ತೀಯೋ ಅದೆಲ್ಲವನ್ನು ಆತನು ನಿನಗೆ ಕೊಡುವನೆಂದು ಬಲ್ಲೆನು” ಅಂದಳು. 23  ಯೇಸು ಅವಳಿಗೆ, “ನಿನ್ನ ಸಹೋದರನು ಎದ್ದುಬರುವನು” ಎಂದು ಹೇಳಿದನು. 24  ಮಾರ್ಥಳು ಅವನಿಗೆ, “ಕಡೇ ದಿನದಲ್ಲಾಗುವ ಪುನರುತ್ಥಾನದಲ್ಲಿ ಅವನು ಎದ್ದುಬರುವನೆಂದು ನಾನು ಬಲ್ಲೆನು” ಎಂದಳು. 25  ಯೇಸು ಅವಳಿಗೆ, “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ. ನನ್ನಲ್ಲಿ ನಂಬಿಕೆಯಿಡುವವನು ಸತ್ತರೂ ಜೀವಿತನಾಗುವನು; 26  ಮತ್ತು ಬದುಕಿದ್ದು ನನ್ನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬನು ಎಂದಿಗೂ ಸಾಯುವುದೇ ಇಲ್ಲ. ನೀನು ಇದನ್ನು ನಂಬು​ತ್ತೀಯೊ?” ಎಂದು ಕೇಳಿದನು. 27  ಅವಳು ಅವನಿಗೆ, “ಹೌದು ಕರ್ತನೇ, ಲೋಕಕ್ಕೆ ಬರಲಿರುವ ದೇವರ ಮಗನಾದ ಕ್ರಿಸ್ತನು ನೀನೇ ಎಂದು ನಾನು ವಿಶ್ವಾಸವಿಟ್ಟಿದ್ದೇನೆ” ಎಂದು ಹೇಳಿದಳು. 28  ಅವಳು ಇದನ್ನು ಹೇಳಿದ ಬಳಿಕ ಅಲ್ಲಿಂದ ಹೋಗಿ ತನ್ನ ಸಹೋದರಿಯಾದ ಮರಿಯಳನ್ನು ಕರೆದು ಗುಟ್ಟಾಗಿ, “ಬೋಧಕನು ಬಂದಿದ್ದಾನೆ; ನಿನ್ನನ್ನು ಕರೆಯುತ್ತಿದ್ದಾನೆ” ಎಂದು ಹೇಳಿದಳು. 29  ಅವಳು ಇದನ್ನು ಕೇಳಿಸಿಕೊಂಡ ಕೂಡಲೆ ಎದ್ದು ಅವನ ಬಳಿಗೆ ಹೋದಳು. 30  ಯೇಸು ಇನ್ನೂ ಆ ಹಳ್ಳಿಯೊಳಗೆ ಬಂದಿರಲಿಲ್ಲ; ಮಾರ್ಥಳು ಅವನನ್ನು ಸಂಧಿಸಿದ್ದ ಸ್ಥಳದಲ್ಲೇ ಇನ್ನೂ ಇದ್ದನು. 31  ಮರಿಯಳೊಂದಿಗೆ ಮನೆಯಲ್ಲಿದ್ದು ಅವಳನ್ನು ಸಂತೈಸುತ್ತಿದ್ದ ಯೆಹೂದ್ಯರು ಅವಳು ಕೂಡಲೆ ಎದ್ದು ಹೊರಗೆ ಹೋದದ್ದನ್ನು ಕಂಡಾಗ, ಅವಳು ಸ್ಮರಣೆಯ ಸಮಾಧಿಯ ಬಳಿಗೆ ಅಳಲಿಕ್ಕಾಗಿ ಹೋಗುತ್ತಿದ್ದಾಳೆಂದು ಭಾವಿಸಿ ಅವಳ ಹಿಂದೆ ಹೋದರು. 32  ಮರಿಯಳು ಯೇಸು ಇದ್ದಲ್ಲಿಗೆ ಬಂದು ಅವನನ್ನು ಕಂಡು ಅವನ ಪಾದಗಳಿಗೆ ಬಿದ್ದು ಅವನಿಗೆ, “ಕರ್ತನೇ, ನೀನು ಇಲ್ಲಿರುತ್ತಿದ್ದರೆ ನನ್ನ ಸಹೋದರನು ಸಾಯುತ್ತಿರಲಿಲ್ಲ” ಎಂದಳು. 33  ಯೇಸು ಅವಳೂ ಅವಳೊಂದಿಗೆ ಬಂದಿದ್ದ ಯೆಹೂದ್ಯರೂ ಅಳುತ್ತಿರುವುದನ್ನು ನೋಡಿ ತನ್ನ ಆಂತರ್ಯ​ದಲ್ಲಿ ನೊಂದುಕೊಂಡು ಕಳವಳ​ಪಟ್ಟನು; 34  ಮತ್ತು “ಅವನನ್ನು ಎಲ್ಲಿ ಇಟ್ಟಿದ್ದೀರಿ?” ಎಂದು ಕೇಳಿದನು. ಅದಕ್ಕೆ ಅವರು, “ಕರ್ತನೇ ಬಂದು ನೋಡು” ಎಂದರು. 35  ಯೇಸು ಕಣ್ಣೀರು ಸುರಿಸಿದನು. 36  ಆದುದರಿಂದ ಯೆಹೂದ್ಯರು, “ನೋಡಿ, ಇವನಿಗೆ ಅವನ ಮೇಲೆ ಎಷ್ಟು ಮಮತೆ ಇತ್ತು!” ಎಂದು ಹೇಳಲಾರಂಭಿಸಿದರು. 37  ಆದರೆ ಅವರಲ್ಲಿ ಕೆಲವರು, “ಆ ಕುರುಡನ ಕಣ್ಣುಗಳನ್ನು ತೆರೆದ ಈ ಮನುಷ್ಯನು ಇವನನ್ನು ಸಾಯದಂತೆ ತಡೆಯಲು ಶಕ್ತನಾಗಿರಲಿಲ್ಲವೆ?” ಎಂದರು. 38  ಯೇಸು ಪುನಃ ತನ್ನೊಳಗೆ ಬಹಳವಾಗಿ ನೊಂದುಕೊಂಡು ಸ್ಮರಣೆಯ ಸಮಾಧಿಯ ಬಳಿಗೆ ಬಂದನು. ವಾಸ್ತವದಲ್ಲಿ ಅದು ಒಂದು ಗವಿಯಾಗಿತ್ತು ಮತ್ತು ಅದರ ಬಾಯಿಗೆ ಒಂದು ಕಲ್ಲನ್ನು ಮುಚ್ಚಲಾಗಿತ್ತು. 39  ಯೇಸು, “ಆ ಕಲ್ಲನ್ನು ತೆಗೆದು​ಹಾಕಿರಿ” ಎಂದನು. ತೀರಿಕೊಂಡಿದ್ದವನ ಸಹೋದರಿಯಾದ ಮಾರ್ಥಳು ಅವನಿಗೆ, “ಕರ್ತನೇ, ಅವನು ಸತ್ತು ನಾಲ್ಕು ದಿನಗಳಾಗಿರುವುದರಿಂದ ಈಗ ಅವನು ನಾರುವುದು ಖಂಡಿತ” ಎಂದಳು. 40  ಯೇಸು ಅವಳಿಗೆ, “ನೀನು ನಂಬುವುದಾದರೆ ದೇವರ ಮಹಿಮೆಯನ್ನು ನೋಡುವಿ ಎಂದು ನಾನು ನಿನಗೆ ಹೇಳಲಿಲ್ಲವೊ?” ಎಂದನು. 41  ಆಗ ಅವರು ಆ ಕಲ್ಲನ್ನು ತೆಗೆದುಹಾಕಿದರು. ಯೇಸು ಕಣ್ಣುಗಳನ್ನು ಆಕಾಶದ ಕಡೆಗೆತ್ತಿ, “ತಂದೆಯೇ, ನೀನು ನನ್ನ ಪ್ರಾರ್ಥನೆಯನ್ನು ಕೇಳಿದ್ದಕ್ಕೆ ನಿನಗೆ ಕೃತಜ್ಞತೆ ಸಲ್ಲಿಸುತ್ತೇನೆ. 42  ನೀನು ಯಾವಾಗಲೂ ನನಗೆ ಕಿವಿಗೊಡುತ್ತೀ ಎಂಬುದು ನನಗೆ ತಿಳಿದಿತ್ತು; ನನ್ನ ಸುತ್ತಲೂ ನಿಂತುಕೊಂಡಿರುವ ಜನರು ನೀನೇ ನನ್ನನ್ನು ಕಳುಹಿಸಿದಿ ಎಂಬುದನ್ನು ನಂಬುವಂತೆ ನಾನು ಹೀಗೆ ಮಾತಾಡಿದೆ” ಎಂದನು. 43  ಅವನು ಇದನ್ನು ಹೇಳಿ ಮುಗಿಸಿದ ಬಳಿಕ “ಲಾಜರನೇ, ಹೊರಗೆ ಬಾ” ಎಂದು ಗಟ್ಟಿಯಾದ ಸ್ವರದಿಂದ ಕೂಗಿದನು. 44  ಸತ್ತಿದ್ದ ಆ ಮನುಷ್ಯನು ಹೊರಗೆ ಬಂದನು; ಅವನ ಕೈಕಾಲುಗಳನ್ನು ಹೊದಿಕೆಗಳಿಂದ ಕಟ್ಟಲಾಗಿತ್ತು ಮತ್ತು ಅವನ ಮುಖಕ್ಕೆ ಬಟ್ಟೆಯನ್ನು ಸುತ್ತಲಾಗಿತ್ತು. ಯೇಸು ಅವರಿಗೆ, “ಅವನನ್ನು ಬಿಚ್ಚಿರಿ, ಅವನು ಹೋಗಲಿ” ಎಂದನು. 45  ಮರಿಯಳ ಬಳಿಗೆ ಬಂದಿದ್ದ ಯೆಹೂದ್ಯರಲ್ಲಿ ಅನೇಕರು ಅವನು ಮಾಡಿದ್ದನ್ನು ನೋಡಿ ಅವನಲ್ಲಿ ನಂಬಿಕೆಯಿಟ್ಟರು; 46  ಆದರೆ ಅವರಲ್ಲಿ ಕೆಲವರು ಫರಿಸಾಯರ ಬಳಿಗೆ ಹೋಗಿ ಯೇಸು ಮಾಡಿದ ಸಂಗತಿಗಳನ್ನು ಅವರಿಗೆ ತಿಳಿಸಿದರು. 47  ಆಗ ಮುಖ್ಯ ಯಾಜಕರೂ ಫರಿಸಾಯರೂ ಹಿರೀಸಭೆಯಲ್ಲಿ* ಕೂಡಿಬಂದು, “ಇವನು ಅನೇಕ ಸೂಚಕಕಾರ್ಯಗಳನ್ನು ಮಾಡುತ್ತಿದ್ದಾನಲ್ಲ, ನಾವೇನು ಮಾಡೋಣ? 48  ನಾವು ಅವನನ್ನು ಹೀಗೆಯೇ ಬಿಟ್ಟರೆ ಅವರೆಲ್ಲರು ಅವನಲ್ಲಿ ನಂಬಿಕೆಯಿಡುವರು ಮತ್ತು ರೋಮನರು ಬಂದು ನಮ್ಮ ಸ್ಥಳವನ್ನೂ ನಮ್ಮ ಜನಾಂಗವನ್ನೂ ಸ್ವಾಧೀನಪಡಿಸಿಕೊಳ್ಳುವರು” ಎಂದು ಹೇಳಲಾರಂಭಿಸಿದರು. 49  ಆದರೆ ಅವರಲ್ಲಿ ಒಬ್ಬನಾಗಿದ್ದು ಆ ವರ್ಷಕ್ಕೆ ಮಹಾ ಯಾಜಕ​ನಾಗಿದ್ದ ಕಾಯಫನು ಅವರಿಗೆ, “ನಿಮಗೆ ಏನೂ ಗೊತ್ತಿಲ್ಲ; 50  ಇಡೀ ಜನಾಂಗವೇ ನಾಶವಾಗುವುದಕ್ಕಿಂತ ಒಬ್ಬ ಮನುಷ್ಯನು ಜನರಿಗೋಸ್ಕರ ಸಾಯುವುದು ನಿಮಗೆ ಪ್ರಯೋಜನಕರವಾದದ್ದೆಂದು ನೀವು ಆಲೋಚಿಸುತ್ತಿಲ್ಲ” ಎಂದನು. 51  ಆದರೆ ಇದನ್ನು ಅವನು ಸ್ವಪ್ರೇರಣೆಯಿಂದ ಹೇಳಲಿಲ್ಲ; ಅವನು ಆ ವರ್ಷಕ್ಕೆ ಮಹಾ ಯಾಜಕನಾಗಿ ಆಯ್ಕೆಯಾಗಿದ್ದರಿಂದ, ಯೇಸು ಜನಾಂಗಕ್ಕೋಸ್ಕರ ಸಾಯಲಿಕ್ಕಿದ್ದಾನೆ ಎಂದು ಅವನು ಪ್ರವಾದಿಸಿದನು. 52  ಅವನು ಆ ಜನಾಂಗಕ್ಕೋಸ್ಕರ ಮಾತ್ರವಲ್ಲದೆ ಚದುರಿಹೋಗಿರುವ ದೇವರ ಮಕ್ಕಳನ್ನು ಒಟ್ಟುಗೂಡಿಸಲಿಕ್ಕಾಗಿಯೂ ಸಾಯಲಿದ್ದನು. 53  ಆದುದರಿಂದ ಅವರು ಆ ದಿನದಿಂದ ಅವನನ್ನು ಕೊಲ್ಲಲು ಸಮಾಲೋಚನೆ ನಡೆಸಿದರು. 54  ಹೀಗಾಗಿ ಯೇಸು ಅಂದಿನಿಂದ ಯೆಹೂದ್ಯರ ಮಧ್ಯೆ ಬಹಿರಂಗವಾಗಿ ತಿರುಗಾಡದೆ ಅಲ್ಲಿಂದ ಅರಣ್ಯದ ಬಳಿಯಿದ್ದ ಎಫ್ರಾಯಿಮ್‌ ಎಂಬ ಊರಿಗೆ ಹೋಗಿ ಅಲ್ಲಿ ಶಿಷ್ಯರೊಂದಿಗೆ ಉಳಿದನು. 55  ಯೆಹೂದ್ಯರ ಪಸ್ಕವು ಸಮೀಪಿಸಿತ್ತು ಮತ್ತು ಅನೇಕರು ತಮ್ಮನ್ನು ವಿಧಿಬದ್ಧವಾಗಿ ಶುದ್ಧೀಕರಿಸಿಕೊಳ್ಳಲಿಕ್ಕಾಗಿ ಪಸ್ಕಕ್ಕೆ ಮುಂಚೆ ಹಳ್ಳಿಗಳಿಂದ ಯೆರೂಸಲೇಮಿಗೆ ಹೊರಟರು. 56  ಅವರು ಯೇಸುವನ್ನು ಹುಡುಕುತ್ತಾ ದೇವಾಲಯದಲ್ಲಿ ನಿಂತುಕೊಂಡು, “ನಿಮ್ಮ ಅಭಿಪ್ರಾಯ ಏನು? ಅವನು ಹಬ್ಬಕ್ಕೆ ಬಾರದೇ ಇರುವನೊ?” ಎಂದು ಪರಸ್ಪರ ಮಾತಾಡಿಕೊಳ್ಳುತ್ತಿದ್ದರು. 57  ಹೀಗಿರುವಾಗ ಮುಖ್ಯ ಯಾಜಕರೂ ಫರಿಸಾಯರೂ ಅವನನ್ನು ಹಿಡಿಯಲಿಕ್ಕಾಗಿ ಅವನು ಎಲ್ಲಿದ್ದಾನೆಂಬುದು ಯಾರಿಗಾದರೂ ತಿಳಿದುಬಂದರೆ ಅದನ್ನು ತಮಗೆ ತಿಳಿಸ​ಬೇಕೆಂದು ಅಪ್ಪಣೆಕೊಟ್ಟಿದ್ದರು.

ಪಾದಟಿಪ್ಪಣಿ

ಯೋಹಾ 11:47 ಮತ್ತಾ 26:59ರ ಪಾದಟಿಪ್ಪಣಿಯನ್ನು ನೋಡಿ.