ಯೋಹಾನ 20:1-31

20  ವಾರದ ಮೊದಲನೆಯ ದಿನ ​ಮಗ್ದಲದ ಮರಿಯಳು ಮುಂಜಾನೆ ಇನ್ನೂ ಕತ್ತಲಿರುವಾಗಲೇ ಸ್ಮರಣೆಯ ಸಮಾಧಿಯ ಬಳಿಗೆ ಬಂದಾಗ ಆಗಲೇ ಸ್ಮರಣೆಯ ಸಮಾಧಿಯಿಂದ ಕಲ್ಲು ತೆಗೆದುಹಾಕ​ಲ್ಪಟ್ಟಿರುವುದನ್ನು ಕಂಡಳು.  ಅವಳು ಸೀಮೋನ ಪೇತ್ರನ ಬಳಿಗೂ ಯೇಸುವಿಗೆ ಪ್ರಿಯನಾಗಿದ್ದ ಆ ಇನ್ನೊಬ್ಬ ಶಿಷ್ಯನ ಬಳಿಗೂ ಓಡಿ ಬಂದು ಅವರಿಗೆ, “ಕರ್ತನನ್ನು ಅವರು ಸ್ಮರಣೆಯ ಸಮಾಧಿಯಿಂದ ತೆಗೆದು​ಕೊಂಡು ಹೋಗಿದ್ದಾರೆ; ಅವನನ್ನು ಎಲ್ಲಿ ಇಟ್ಟಿದ್ದಾರೋ ನಮಗೆ ಗೊತ್ತಿಲ್ಲ” ಎಂದಳು.  ಆಗ ಪೇತ್ರನೂ ಆ ಇನ್ನೊಬ್ಬ ಶಿಷ್ಯನೂ ಹೊರಟು ​ಸ್ಮರಣೆಯ ಸಮಾಧಿಯ ಬಳಿಗೆ ಹೋಗತೊಡಗಿದರು.  ಅವರಿಬ್ಬರೂ ಓಡಲಾರಂಭಿಸಿದರು, ಆದರೆ ಆ ಇನ್ನೊಬ್ಬ ಶಿಷ್ಯನು ಇನ್ನಷ್ಟು ವೇಗವಾಗಿ ಪೇತ್ರನಿಗಿಂತ ಮುಂದೆ ಓಡಿ ಮೊದಲು ಸ್ಮರಣೆಯ ಸಮಾಧಿಯನ್ನು ತಲಪಿದನು.  ಅವನು ಬಗ್ಗಿನೋಡಿದಾಗ ನಾರುಪಟ್ಟಿಗಳು ಬಿದ್ದಿರುವುದನ್ನು ಕಂಡನು, ಆದರೆ ಅವನು ಒಳಗೆ ಹೋಗಲಿಲ್ಲ.  ಸೀಮೋನ ಪೇತ್ರನು ಸಹ ಅವನ ಹಿಂದೆ ಬಂದನು ಮತ್ತು ಅವನು ಸ್ಮರಣೆಯ ಸಮಾಧಿಯನ್ನು ಪ್ರವೇಶಿಸಿದನು. ಅಲ್ಲಿ ನಾರುಪಟ್ಟಿಗಳು ಬಿದ್ದಿರುವುದನ್ನೂ  ಅವನ ತಲೆಯ ಮೇಲಿದ್ದ ಬಟ್ಟೆಯು ಆ ನಾರುಪಟ್ಟಿಗಳೊಂದಿಗೆ ಇರದೆ ಒಂದು ಕಡೆಯಲ್ಲಿ ಪ್ರತ್ಯೇಕವಾಗಿ ಸುತ್ತಿಡಲ್ಪಟ್ಟಿರುವುದನ್ನೂ ಕಂಡನು.  ಆಗ ಸ್ಮರಣೆಯ ಸಮಾಧಿಯ ಬಳಿಗೆ ಮೊದಲು ತಲಪಿದ ಆ ಇನ್ನೊಬ್ಬ ಶಿಷ್ಯನು ಸಹ ಒಳಗೆ ಹೋಗಿ ಅದನ್ನು ನೋಡಿ ನಂಬಿದನು.  ಏಕೆಂದರೆ ಅವನು ಸತ್ತವರೊಳ​ಗಿಂದ ಎಬ್ಬಿಸಲ್ಪಡಬೇಕೆಂಬ ಶಾಸ್ತ್ರವಚನವನ್ನು ಅವರು ಇನ್ನೂ ಗ್ರಹಿಸಿರಲಿಲ್ಲ. 10  ಆದುದರಿಂದ ಆ ಶಿಷ್ಯರು ತಮ್ಮ ಮನೆಗಳಿಗೆ ಹಿಂದಿರುಗಿದರು. 11  ಆದರೆ ಮರಿಯಳು ಹೊರಗೆ ​ಸ್ಮರಣೆಯ ಸಮಾಧಿಯ ಬಳಿ ಅಳುತ್ತಾ ನಿಂತಿದ್ದಳು. ಅವಳು ಅಳುತ್ತಾ ಸ್ಮರಣೆಯ ಸಮಾಧಿಯೊಳಕ್ಕೆ ನೋಡಲು ಬಗ್ಗಿದಾಗ 12  ಯೇಸುವಿನ ದೇಹವನ್ನು ಇಡಲಾಗಿದ್ದ ಸ್ಥಳದಲ್ಲಿ ಬಿಳಿ ವಸ್ತ್ರಧಾರಿಗಳಾಗಿದ್ದ ಇಬ್ಬರು ದೇವದೂತರು, ಒಬ್ಬನು ತಲೆ ಇದ್ದ ಕಡೆಯಲ್ಲಿಯೂ ಇನ್ನೊಬ್ಬನು ಪಾದಗಳಿದ್ದ ಕಡೆಯಲ್ಲಿಯೂ ಕುಳಿತುಕೊಂಡಿರುವುದನ್ನು ಕಂಡಳು. 13  ಅವರು ಅವಳಿಗೆ “ಸ್ತ್ರೀಯೇ, ಏಕೆ ಅಳುತ್ತಿದ್ದೀ?” ಎಂದು ಕೇಳಿದಾಗ ಅವಳು, “ಅವರು ನನ್ನ ಕರ್ತನನ್ನು ತೆಗೆದುಕೊಂಡು ಹೋಗಿದ್ದಾರೆ; ಅವನನ್ನು ಎಲ್ಲಿ ಇಟ್ಟಿದ್ದಾರೋ ನನಗೆ ಗೊತ್ತಿಲ್ಲ” ಎಂದಳು. 14  ಹೀಗೆ ಹೇಳಿ ಅವಳು ತಿರುಗಿದಾಗ ಯೇಸು ನಿಂತಿರುವುದನ್ನು ಕಂಡಳು, ಆದರೆ ಅವನು ಯೇಸುವೆಂದು ಅವಳು ಗ್ರಹಿಸಲಿಲ್ಲ. 15  ಯೇಸು ಅವಳಿಗೆ “ಸ್ತ್ರೀಯೇ, ಏಕೆ ಅಳುತ್ತಿದ್ದೀ? ಯಾರನ್ನು ಹುಡುಕುತ್ತಿದ್ದೀ?” ಎಂದು ಕೇಳಿದನು. ಅವಳು ಅವನನ್ನು ತೋಟಗಾರನೆಂದು ಭಾವಿಸಿ ಅವನಿಗೆ, “ಸ್ವಾಮಿ, ನೀನು ಅವನನ್ನು ಎತ್ತಿಕೊಂಡು ಹೋಗಿರುವುದಾದರೆ ಅವನನ್ನು ಎಲ್ಲಿಟ್ಟಿದ್ದೀ ಎಂದು ನನಗೆ ಹೇಳು. ನಾನು ಅವನನ್ನು ತೆಗೆದುಕೊಂಡು ಹೋಗುವೆನು” ಎಂದಳು. 16  ಆಗ ಯೇಸು ಅವಳಿಗೆ, “ಮರಿಯಳೇ!” ಎಂದು ಕರೆದನು. ಅವಳು ತಿರುಗಿ ಹೀಬ್ರು ಭಾಷೆಯಲ್ಲಿ “ರಬ್ಬೋನಿ!” (ಇದಕ್ಕೆ “ಬೋಧಕನು!” ಎಂದರ್ಥ) ಅಂದಳು. 17  ಯೇಸು ಅವಳಿಗೆ, “ನನ್ನನ್ನು ಅಪ್ಪಿಕೊಳ್ಳುವುದನ್ನು ನಿಲ್ಲಿಸು. ಏಕೆಂದರೆ ನಾನು ಇನ್ನೂ ತಂದೆಯ ಬಳಿಗೆ ಏರಿಹೋಗಲಿಲ್ಲ. ನೀನು ನನ್ನ ಸಹೋದರರ ಬಳಿಗೆ ಹೋಗಿ ‘ನಾನು ನನ್ನ ತಂದೆಯೂ ನಿಮ್ಮ ತಂದೆಯೂ ನನ್ನ ದೇವರೂ ನಿಮ್ಮ ದೇವರೂ ಆಗಿರುವಾತನ ಬಳಿಗೆ ಏರಿಹೋಗಲಿದ್ದೇನೆ’ ಎಂದು ತಿಳಿಸು” ಅಂದನು. 18  ಮಗ್ದಲದ ​ಮರಿಯಳು ಹೋಗಿ ಶಿಷ್ಯರಿಗೆ, “ನಾನು ಕರ್ತನನ್ನು ನೋಡಿದೆ!” ಮತ್ತು ಅವನು ನನಗೆ ಈ ವಿಷಯಗಳನ್ನು ತಿಳಿಸಿದನು ಎಂದು ಸುದ್ದಿಮುಟ್ಟಿಸಿದಳು. 19  ವಾರದ ಮೊದಲನೆಯ ದಿನವಾಗಿದ್ದ ಅದೇ ದಿನ ಸಾಯಂಕಾಲ ಶಿಷ್ಯರು ಯೆಹೂದ್ಯರ ಭಯದಿಂದ ಬಾಗಿಲುಗಳನ್ನು ಮುಚ್ಚಿಕೊಂಡಿದ್ದರೂ ಯೇಸು ಬಂದು ಅವರ ನಡುವೆ ನಿಂತುಕೊಂಡು ಅವರಿಗೆ, “ನಿಮಗೆ ಶಾಂತಿಯಿರಲಿ” ಎಂದನು. 20  ಇದನ್ನು ಹೇಳಿದ ಬಳಿಕ ಅವನು ಅವರಿಗೆ ತನ್ನ ಕೈಗಳನ್ನೂ ತನ್ನ ಪಕ್ಕೆಯನ್ನೂ ತೋರಿಸಿದನು. ಆಗ ಶಿಷ್ಯರು ಕರ್ತನನ್ನು ನೋಡಿದ್ದರಿಂದ ಆನಂದಿಸಿದರು. 21  ಯೇಸು ಪುನಃ ಅವರಿಗೆ, “ನಿಮಗೆ ಶಾಂತಿಯಿರಲಿ. ತಂದೆಯು ನನ್ನನ್ನು ಕಳುಹಿಸಿರುವಂತೆ ನಾನೂ ನಿಮ್ಮನ್ನು ಕಳುಹಿಸುತ್ತಿದ್ದೇನೆ” ಎಂದು ಹೇಳಿದನು. 22  ಅವನು ಇದನ್ನು ಹೇಳಿದ ಬಳಿಕ ಅವರ ಮೇಲೆ ಊದಿ ಅವರಿಗೆ, “ಪವಿತ್ರಾತ್ಮವನ್ನು ಪಡೆದುಕೊಳ್ಳಿರಿ. 23  ನೀವು ಯಾವುದೇ ವ್ಯಕ್ತಿಗಳ ಪಾಪಗಳನ್ನು ಕ್ಷಮಿಸುವುದಾದರೆ, ಅವು ಅವರಿಗೆ ಕ್ಷಮಿಸಲ್ಪಡುತ್ತವೆ; ನೀವು ಯಾವುದೇ ವ್ಯಕ್ತಿಗಳ ಪಾಪಗಳನ್ನು ಉಳಿಸಿಕೊಳ್ಳುವುದಾದರೆ ಅವು ಉಳಿಸಲ್ಪಡುತ್ತವೆ” ಎಂದನು. 24  ಯೇಸು ಬಂದಾಗ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾಗಿದ್ದ ಅವಳಿ ಎಂದು ಕರೆಯಲ್ಪಡುತ್ತಿದ್ದ ತೋಮನು ಅವರೊಂದಿಗೆ ಇರಲಿಲ್ಲ. 25  ಆದುದರಿಂದ ಇತರ ಶಿಷ್ಯರು ಅವನಿಗೆ, “ನಾವು ಕರ್ತನನ್ನು ನೋಡಿದೆವು” ಎಂದು ಹೇಳಿದಾಗ ಅವನು ಅವರಿಗೆ, “ನಾನು ಅವನ ಕೈಗಳಲ್ಲಿ ಮೊಳೆಗಳ ಗಾಯವನ್ನು ನೋಡಿ, ಆ ಮೊಳೆಗಳ ಗಾಯದಲ್ಲಿ ನನ್ನ ಬೆರಳನ್ನು ಹಾಕಿ ಅವನ ಪಕ್ಕೆಯಲ್ಲಿ ನನ್ನ ಕೈಯನ್ನು ಇಟ್ಟ ಹೊರತು ನಂಬುವುದೇ ಇಲ್ಲ” ಎಂದು ಹೇಳಿದನು. 26  ಎಂಟು ದಿನಗಳ ಬಳಿಕ ಅವನ ಶಿಷ್ಯರು ಪುನಃ ಬಾಗಿಲುಗಳನ್ನು ಮುಚ್ಚಿ ಒಳಗಿದ್ದರು ಮತ್ತು ತೋಮನೂ ಅವರೊಂದಿಗಿದ್ದನು. ಆಗ ಬಾಗಿಲುಗಳು ಮುಚ್ಚಿದ್ದರೂ ಯೇಸು ಬಂದು ಅವರ ನಡುವೆ ನಿಂತು​ಕೊಂಡು “ನಿಮಗೆ ಶಾಂತಿಯಿರಲಿ” ಎಂದು ಹೇಳಿದನು. 27  ಆಮೇಲೆ ಅವನು ತೋಮನಿಗೆ, “ನಿನ್ನ ಬೆರಳುಗಳನ್ನು ಇಲ್ಲಿಡು; ನನ್ನ ಕೈಗಳನ್ನು ನೋಡು; ನಿನ್ನ ಕೈಯನ್ನು ನನ್ನ ಪಕ್ಕೆಯಲ್ಲಿ ಇಡು. ನಂಬದವನಾಗಿರುವುದನ್ನು ನಿಲ್ಲಿಸು, ನಂಬುವವನಾಗು” ಎಂದನು. 28  ಅದಕ್ಕೆ ತೋಮನು, “ನನ್ನ ಕರ್ತನೇ, ನನ್ನ ದೇವರೇ!” ಎಂದು ಹೇಳಿದನು. 29  ಆಗ ಯೇಸು ಅವನಿಗೆ, “ನೀನು ನನ್ನನ್ನು ನೋಡಿದ್ದರಿಂದ ನಂಬಿದೆಯೊ? ನೋಡದೆಯೇ ನಂಬುವವರು ಸಂತೋಷಿತರು” ಎಂದನು. 30  ಈ ಸುರುಳಿಯಲ್ಲಿ ಬರೆಯಲ್ಪಟ್ಟಿರದ ಇನ್ನೂ ಅನೇಕ ಸೂಚಕಕಾರ್ಯಗಳನ್ನು ಯೇಸು ಶಿಷ್ಯರ ಮುಂದೆ ನಡೆಸಿದನು ಎಂಬುದು ಖಂಡಿತ. 31  ಆದರೆ ಯೇಸುವೇ ದೇವರ ಮಗನಾದ ಕ್ರಿಸ್ತನೆಂದು ನೀವು ನಂಬುವಂತೆಯೂ ನಂಬುವುದರಿಂದ ಅವನ ಹೆಸರಿನ ಮೂಲಕ ನೀವು ಜೀವವನ್ನು ಪಡೆದುಕೊಳ್ಳುವಂತೆಯೂ ಇವುಗಳು ಬರೆದಿಡಲ್ಪಟ್ಟಿವೆ.

ಪಾದಟಿಪ್ಪಣಿ